ರಂಗಭೂಮಿ ದಣಿದಿಲ್ಲ, ಬದಲಾಗಿ ತುಂಬ ಆ್ಯಕ್ಟಿವ್ ಆಗಿದೆ. ಈ ಕ್ಷೇತ್ರದಲ್ಲಿ ‘ಕೊಬ್ಬು’ ಖಂಡಿತ ಇದೆ ನಿಜ; ಆದರೆ ಅದೇ ಕೊಬ್ಬು ವಾಸ್ತವ ಮರೆಯುವಂತೆ ಮಾಡುತ್ತಿದೆ. ವಿಚಿತ್ರ ಅಂದರೆ ಇದು ರಂಗಭೂಮಿಯಲ್ಲಿ ತೊಡಗಿಸಿಕೊಂಡವರನ್ನು ದಣಿಸುವ ಬದಲು ತುಂಬ ಆ್ಯಕ್ಟಿವ್ ಮಾಡುತ್ತಿದೆ. ಯಾವ ಬಗೆಯ ಆ್ಯಕ್ಟಿವ್‌ನೆಸ್ ಅದು ಎಂದು ನಾವು ಗ್ರಹಿಸಬೇಕು.  ತಮ್ಮ ಪ್ರಯೋಗಗಳ ಮೂಲಕ ಜನರ ಎದುರು ಸೋಲುತ್ತಿರುವ ಪ್ರಕ್ರಿಯೆಯೇ ಅವರನ್ನು ವಿಚಿತ್ರ ರೀತಿಯಲ್ಲಿ ಆ್ಯಕ್ಟಿವ್ ಮಾಡುತ್ತಿದೆ.  -ರಂಗವಠಾರ ಅಂಕಣದಲ್ಲಿ ಎನ್. ಸಿ. ಮಹೇಶ್ ಅವರು ಡಾ. ಶ್ರೀಪಾದ ಭಟ್ ಅವರ ಲೇಖನಕ್ಕೆ ಪ್ರತಿಕ್ರಿಯೆ ದಾಖಲಿಸಿದ್ದಾರೆ.

 

ಪ್ರೀತಿಯ ಶ್ರೀಪಾದ ಭಟ್ ಸರ್,

ನಿಮ್ಮನ್ನು ಈವರೆಗೆ ಮುಖತಃ ಕಂಡಿಲ್ಲ. ಆದರೆ ನಿಮ್ಮ ಮಾತು, ರಂಗದ ಕುರಿತ ಚಿಂತನೆೆಗಳಿಗೆ ಇಂದಿಗೂ ತುಂಬ ಆಸ್ಥೆಯಿಂದ ಕಿವಿಗೊಡುತ್ತೇನೆ. ನೀವು ಬರೆದದ್ದರಲ್ಲಿ ಹೊಳಹುಗಳು, ಒಳನೋಟಗಳು ಇರುತ್ತವೆ ಎನ್ನುವ ಕಾರಣಕ್ಕಾಗಿಯೇ ತಪ್ಪದೆ ಓದುತ್ತೇನೆ. ನಿಮ್ಮಂತೆ ನಾನೂ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದೇನೆ; ಆದರೆ ನಮ್ಮಿಬ್ಬರ ಸ್ತರಗಳು ಬೇರೆಬೇರೆ ಎನ್ನುವ ಅರಿವು ನನ್ನಲ್ಲಿ ಇದೆ. ನೀವು ನಿರ್ದೇಶಿಸಿದ ನಾಟಕಗಳನ್ನು ನೋಡುವಾಗಲೆಲ್ಲ ನೀವು ಮುಗಿಲಿನ ಕಡೆಗೇ ಕಣ್ಣುನೆಟ್ಟಿದ್ದೀರಿ ಎಂದೇ ನನಗೆ ಅನಿಸಿತ್ತು. ಹಾಗೇ ನಾನು ನೆಲ ನೋಡುತ್ತ ನಿಂತವ ಎಂದು ನನಗೆ ಗೊತ್ತೇ ಇತ್ತು. ನಾನು ಸ್ತರಗಳು ಎಂದದ್ದು ಈ ನೆಲೆಯಲ್ಲಿ.

ಆದರೆ ಈಚೆಗೆ ಇದೇ ಕೆಂಡಸಪಿಗೆಯಲ್ಲಿ ಪ್ರಕಟವಾದ ಬರಹ ‘ರಂಗಭೂಮಿಯಲ್ಲಿ ಮರುಚಿಂತನೆ ಮತ್ತು ಗಾಂಧಿ ನಡಿಗೆ’ ಎಂಬ ಲೇಖನದಲ್ಲಿ  ಕಲೆಯ ವಿಚಾರಗಳಿಗೆ ಸಂಬಂಧಿಸಿದಂತೆ ಗಾಂಧಿಯವರ ಮಾತುಗಳ ಹಿನ್ನೆಲೆಯಲ್ಲಿ ನೀವು ಪ್ರಸ್ತುತ ರಂಗಭೂಮಿಯನ್ನು ನಿಕಷಕ್ಕೆ ಒಡ್ಡಿದ ರೀತಿ ಕಂಡು ಖುಷಿಯಾಯಿತು. ಸರಳ ಮತ್ತು ಸತ್ಯದ ನೆಲೆಗಳನ್ನು ನೀವು ಒಟ್ಟು ರಂಗಭೂಮಿಯ ಹಿನ್ನೆಲೆಯಲ್ಲಿ ಅದು ತನ್ನನ್ನು ತಾನು ಮಾರ್ಪಡಿಸಿಕೊಳ್ಳಬೇಕಾದ, ಚಲನೆ ತಂದುಕೊಳ್ಳಬೇಕಾದ ರೀತಿಯ ಕುರಿತು ಬರೆದಿದ್ದಿರಿ. ನಿಮ್ಮ ಲೇಖನದಲ್ಲಿ ಹಲವು ವಿಚಾರಗಳ ಪ್ರಸ್ತಾಪ ಇದ್ದವು. ಮತ್ತು ಅವೆಲ್ಲವೂ ವಾಸ್ತವದ ಬದುಕಿನ ಕಡೆಗೆ ಮುಖ ಮಾಡಿಕೊಂಡಿದ್ದರಿಂದ ತುಂಬ ಇಂಟರೆಸ್ಟಿಂಗ್ ಅನಿಸಿತು. ಬಹುತೇಕ ಎಲ್ಲವೂ ನನಗೆ ಒಪ್ಪಿತವೇ. ಆದರೆ ಕೆಲವು ವಿಚಾರಗಳ ಬಗೆಗೆ ಭಿನ್ನಾಭಿಪ್ರಾಯಗಳಿವೆ ಎಂಬುದನ್ನು ನಿಮಗೆ ತಿಳಿಸಬೇಕಿದೆ. ನಿಮ್ಮೊಂದಿಗೆ ಮಾತಿಗೆ ಕೂರುವುದೇ ಗೌರವದ ಸಂಗತಿ ಎಂದು ನಾನು ಭಾವಿಸಿರುವುದರಿಂದ ಇದು ನನಗೆ ಇಷ್ಟದ ಕೆಲಸ. ಹಾಗಾಗಿ ನನ್ನ ವಿಚಾರ ಮಂಡಿಸಲು ನಿಮ್ಮ ಲೇಖನ ಮೂರ್ನಾಲ್ಕು ಬಾರಿ ಓದಿ ವಿಭಜಿಸಿಕೊಂಡು ಕೂತಿದ್ದೇನೆ.

ನೀವು ಕಟ್ಟಿದ ನಾಟಕಗಳನ್ನು ನೋಡುವಾಗಲೆಲ್ಲ ‘ಸಿಕ್ಕಾಪಟ್ಟೆ ಕ್ಲಾಸಿಸಂ’ ಎಂದು ನನಗೆ ಅನಿಸಿದ್ದು ಇದೆ. ಆದರೆ ಕೊರೋನಾದ ಕಾಲಘಟ್ಟ ನಿಮ್ಮಲ್ಲಿ ಹುಟ್ಟಿಸಿರುವ ಚಿಂತನೆ ಹಲವು ರಂಗಕರ್ಮಿಗಳಿಗೆ ದಕ್ಕಿದ್ದಾದರೆ ಹೊಸದೇನನ್ನೋ ಇಲ್ಲಿ ನಿರೀಕ್ಷಿಸಬಹುದು. ಆದರೆ ಹಾಗೆ ದಕ್ಕದಿದ್ದರೆ ನೀವು ಮತ್ತೆಮತ್ತೆ ಬಳಸಿರುವ ಪದಪ್ರಯೋಗ ‘ಕೊಬ್ಬು’ ಎಂದುಕೊಂಡು ಸುಮ್ಮನಾಗಬಹುದು.

ನಿಮ್ಮ ಇಡೀ ಲೇಖನ ಓದಿದಾಗ ನನ್ನ ಮುಖದ ಮೇಲೊಂದು ಮಂದಹಾಸ ಸುಳಿಯಿತು. ಯಾಕೆಂದರೆ ನೀವು ‘ ಕೊಬ್ಬು’ ಎಂದು ಪದ ಪ್ರಯೋಗಿಸಿಯೂ ಲೇಖನಕ್ಕೆ ಮೆಚ್ಚುಗೆ ಪಡೆದಿದ್ದೀರಿ. ನಾನೂ ಬೇರೆಬೇರೆ ಸಂದರ್ಭಗಳಲ್ಲಿ ಇದೇ ಪದ ಬಳಸಿ ವಿಪರೀತ ಬೈಸಿಕೊಂಡಿದ್ದೇನೆ. ವಿಚಾರ ಮಂಡನೆಯ ಕ್ರಮದಲ್ಲಿ ನಿಮಗೆ ದಕ್ಕಿರುವ ಹದ ನನಗೆ ದಕ್ಕದೆ ಬೈಸಿಕೊಳ್ಳುತ್ತ ಈಚೀಚೆಗೆ ಸುಮ್ಮನಾಗುವ ಬಗೆಯನ್ನು ಕಲಿಯಲು ಆರಂಭಿಸಿದ್ದೇನೆ. ಮತ್ತು ಅದೇ ವೇಳೆ ನಕ್ಕು ಸುಮ್ಮನಾಗುವುದನ್ನು ರೂಢಿಸಿಕೊಂಡಿದ್ದೇನೆ. ನಾನು ಏಕಾಂಗಿಯಾಗಿಬಿಟ್ಟೆನೆ ಎಂದುಕೊಳ್ಳುವ ಹೊತ್ತಿಗೆ ನೀವು ‘ಕೊಬ್ಬು’ ಎಂದು ದನಿ ತೆಗೆದಿದ್ದೀರಿ. ಇದು ನನ್ನಲ್ಲಿ ಕೊಂಚ ಧೈರ್ಯ ತುಂಬಿತು. ಹಾಗಾಗಿ ನಿಮ್ಮ ಜೊತೆ ಮಾತಿಗೆ ಕೂರೋಣ ಅನಿಸಿದೆ.

ಮೊದಲಿಗೆ ನೀವು ‘ ರಂಗಭೂಮಿ ದಣಿದಿದೆಯೇ? ನಿಜ ನಾವು ಸುಸ್ತಾಗಿದ್ದೇವೆ. ಈ ಸುಸ್ತಿಗೆ ಮುಖ್ಯಕಾರಣ ನಮ್ಮೊಳಗೆ ಸೇರಿಕೊಂಡಿರುವ ಕೊಬ್ಬು..’ ಎಂದಿದ್ದೀರಿ.
ನಂತರ ನೀವು ‘ ಸದ್ಯದ ಕಾಲದ ನಿರ್ವಚನೆಗೆ ಬೇಕಾದ ಪರಿಕರಗಳು ಇಂದು ನಮಗೆ ರಂಗಭೂಮಿಯಲ್ಲಿ ಸಿಗುತ್ತಿಲ್ಲ. ಏಕೆಂದರೆ ರಂಗಭೂಮಿ ಒಳಗೆ ಸುಸ್ತು, ದಣಿವು ಕಾಣಿಸಿಕೊಳ್ಳತೊಡಗಿದೆ. ವಿಚಿತ್ರ ಅಹಂಕಾರ ಅದನ್ನು ಆಳುತ್ತಿದೆ. ಅದು ಮಧ್ಯಮವರ್ಗದ ಲೋಲುಪತೆಯಿಂದ ಬಂದ ಕೊಬ್ಬು’. ಎಂದಿದ್ದೀರಿ.

ಮುಂದುವರೆದು ತಾವು ‘ ದುರಂತವೆಂದರೆ ಯಾರನ್ನು ಗ್ರಹಿಸಿ ನಾವು ಆಟ ಕಟ್ಟುತ್ತಿದ್ದೇವೆಯೋ ಆ ವಲಯಕ್ಕೆ ರಂಗಭೂಮಿ ತುಂಬಾ ಅನಿವಾರ್ಯವಲ್ಲ. ಅವರಿಗೆ ಅವರ ಹಲವು ಚಟುವಟಿಕೆಗಳ ಜೊತೆಗೆ ರಂಗಭೂಮಿಯೂ ಒಂದು ಫ್ಯಾಶನ್. ಹಾಗಾಗಿ ರಂಗಭೂಮಿಯ ಸ್ಥಗಿತತೆ ಅವರಿಗೆ ಯಾವ ಕೊರತೆಯನ್ನೂ ಉಂಟುಮಾಡುತ್ತಿಲ್ಲ. ಕೊರೋನಾ ಸಮಯದಲ್ಲಿ ರಂಗಭೂಮಿಯ ಚಟುವಟಿಕೆಗಳು ನಿಂತುಹೋದಾಗ ಬೇಸರಪಟ್ಟವರು ನಾವು ರಂಗಕರ್ಮಿಗಳು ಮಾತ್ರ. ಪ್ರೇಕ್ಷಕ ವಲಯ ದುಃಖಪಟ್ಟದ್ದನ್ನ ನಾವು ಕಾಣಲಿಲ್ಲ. ಸಮಾಜ ‘ ಇದು ಬೇಕಿತ್ತಲ್ಲ’ ಎಂದು ದುಃಖಪಟ್ಟಿದ್ದನ್ನ ನಾವು ನೋಡಿಲ್ಲ. ಯಾಕೆಂದರೆ ನಾವು ಬಹುಜನ ಸಮಾಜದ ಜೊತೆಗೆ ಇರಲಿಲ್ಲ. ಜನರು ಮರುಕಪಟ್ಟಿದ್ದಾರೆ, ರಂಗಭೂಮಿಯವರು ಹಸಿವಿನಿಂದ ಇದ್ದಾರೆ ಎಂದು ಅನುಕಂಪ ತೋರಿಸಿದ್ದಾರೆ. ಇಲ್ಲವೆಂದಲ್ಲ. ಆದರೆ ರಂಗಚಟುವಟಿಕೆ ಸಮಾಜದ ಅಗತ್ಯ ಅಂತ ಅವರಿಗೆ ಯಾವತ್ತೂ ಅನಿಸಿಲ್ಲ…’ ಎಂದಿದ್ದೀರಿ.

ಮೇಲಿನ ನಿಮ್ಮ ಮಾತುಗಳಿಗೆ ನನ್ನ ಅಭಿಪ್ರಾಯಗಳನ್ನು ದಾಖಲಿಸಿ ನಂತರ ಮತ್ತೆ ನಿಮ್ಮ ಬೇರೆ ವಿಚಾರಗಳಿಗೆ ಮುಖಾಮುಖಿಯಾಗುತ್ತೇನೆ ಸರ್.  ಮೊದಲಿಗೆ ರಂಗಭೂಮಿ ದಣಿದಿದೆಯೇ ಎನ್ನುವ ಪ್ರಶ್ನೆ. ನಿಮ್ಮ ಪ್ರಕಾರ ಅದರ ಸುಸ್ತಿಗೆ ಕಾರಣ ಕೊಬ್ಬು.
ನನ್ನ ಪ್ರಕಾರ ರಂಗಭೂಮಿ ದಣಿದಿಲ್ಲ ಸರ್. ತುಂಬ ಆ್ಯಕ್ಟಿವ್ ಆಗಿದೆ. ಕೊಬ್ಬೇನೋ ಖಂಡಿತ ಇದೆ ನಿಜ; ಆದರೆ ಅದೇ ಕೊಬ್ಬು ವಾಸ್ತವ ಮರೆಯುವಂತೆ ಮಾಡುತ್ತಿದೆ. ವಿಚಿತ್ರ ಅಂದರೆ ಇದು ಇವರನ್ನು ದಣಿಸುವ ಬದಲು ತುಂಬ ಆ್ಯಕ್ಟಿವ್ ಮಾಡುತ್ತಿದೆ. ಯಾವ ಬಗೆಯ ಆ್ಯಕ್ಟಿವ್‌ನೆಸ್ ಅದು ಎಂದು ನಾವು ಗ್ರಹಿಸಬೇಕು. ಅದು ಅವರು ತಮ್ಮ ಪ್ರಯೋಗಗಳ ಮೂಲಕ ಜನರ ಎದುರು ಸೋಲುತ್ತಿರುವುದು ಅವರನ್ನು ವಿಚಿತ್ರ ರೀತಿಯಲ್ಲಿ ಆ್ಯಕ್ಟಿವ್ ಮಾಡುತ್ತಿದೆ. ತಮ್ಮ ಪ್ರಯೋಗದ ನಾಟಕಗಳಲ್ಲಿ ಸದ್ಯದ ಕಾಲದ ನಿರ್ವಚನೆ ಇಲ್ಲ ಎನ್ನುವುದನ್ನು ಅವರು ಒಪ್ಪುತ್ತಿಲ್ಲ. ತಾವು ಮಾಡುವ ನಾಟಕಗಳಲ್ಲಿ ಅದು ಇದೆ ಎಂದು ಹಠಕ್ಕೆ ಬೀಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ತುಂಬ ಆ್ಯಕ್ಟಿವ್ ಆಗಿದ್ದಾರೆ. ಯಾಕೆಂದರೆ ಅವರಿಗೆಲ್ಲ ಒಂದು ಹಿನ್ನೆಲೆ ಇರುತ್ತದೆ. ಕ್ಲಾಸಿಸಂ ಬಗ್ಗೆ ಪಾಠ ಮಾಡುವವರು ಇರುತ್ತಾರೆ.
ಹಾಗೆಂದ ಮಾತ್ರಕ್ಕೆ ನಾನು ಕ್ಲಾಸಿಸಂ ವಿರೋಧಿ ಅಲ್ಲ. ಯಾವುದು ಕ್ಲಾಸಿಕ್ ಹಾಗಾದರೆ? ಕಾಲ ದೇಶ ಮೀರಿ ಎಲ್ಲ ಕಾಲಕ್ಕೂ ಸಲ್ಲುವಂಥದ್ದು ಕ್ಲಾಸಿಕ್ ಎಂದು ನಿರ್ವಚಿಸಿಕೊಳ್ಳಬಹುದು. ಇಂಥದ್ದನ್ನು ತನ್ನ ಒಡಲಲ್ಲಿ ತುಂಬಿಸಿಕೊಂಡಿರುವ ಸಾಕಷ್ಟು ಕೃತಿಗಳಿವೆ. ಆದರೆ ಎಲ್ಲ ಕ್ಲಾಸಿಕ್‌ಗಳಲ್ಲಿ ವಾಸ್ತವ ಅಂತನ್ನುವುದು ಇದ್ದೇ ಇರುತ್ತದೆ. ಅದು ಮೈಮುದುರಿ ಅಡಗಿ ಕೂತಿರುತ್ತದೆ ಅಷ್ಟೇ.

ನಿರ್ದೇಶಕನಾದವನು ವಾಸ್ತವ ಮತ್ತು ನೀವು ಹೇಳುವ ಹಾಗೆ ‘ಸದ್ಯದ ಕಾಲದ ನಿರ್ವಚನೆ…’ ಕಾಣುವ ಹಾಗೆ ಪ್ರಯೋಗ ಅಣಿಮಾಡಬೇಕು. ಇದು ಕ್ರಾಪ್ಟ್. ಇದು ಕಲೆ. ಶೇಕ್ ಸ್ಪಿಯರ್   ನಾಟಕಗಳೂ ಕ್ಲಾಸಿಕ್‌ಗಳೇ; ಬೆಕೆಟ್‌ನ ನಾಟಕಗಳೂ ಕ್ಲಾಸಿಕ್‌ಗಳೇ. ಶೇಕ್ ಸ್ಪಿಯರ್ ಬರೆದ ಕಾಲ, ಅವನ ಚಿತ್ರಣ ಯಾವುದೇ ಇರಲಿ ಮನುಷ್ಯನ ಅಂತರಂಗ ತುಡಿತಗಳು, ತಲ್ಲಣಗಳು, ಕುತ್ಸಿತ, ಸ್ವಗತಗಳು ಎಲ್ಲ ಕಾಲದ ಮನುಷ್ಯರಿಗೆ ತಾಕುವಂತೆ ಬರೆದಿರುವುದರಿಂದಲೇ ಅವನು ಇಂದಿಗೂ ಸಲ್ಲುತ್ತಿರುವುದು. ಶೇಕ್ ಸ್ಪಿಯರ್  ನಾಟಕಗಳನ್ನು ನೋಡುವಾಗ ನಮ್ಮ ಕಣ್ಣುಗಳು ಬೇರೆ ಕಾಲದ ಚಿತ್ರವನ್ನು ಚಿತ್ರಿಸಿಕೊಳ್ಳುತ್ತಿದ್ದರೂ ಪಾತ್ರದ ಮಾತುಗಳ ಧ್ವನಿತ ಅಂದಂದಿನದೇ ಆಗಿರುತ್ತದೆ.

ಯಾವುದು ಕ್ಲಾಸಿಕ್ ಹಾಗಾದರೆ? ಕಾಲ ದೇಶ ಮೀರಿ ಎಲ್ಲ ಕಾಲಕ್ಕೂ ಸಲ್ಲುವಂಥದ್ದು ಕ್ಲಾಸಿಕ್ ಎಂದು ನಿರ್ವಚಿಸಿಕೊಳ್ಳಬಹುದು. ಇಂಥದ್ದನ್ನು ತನ್ನ ಒಡಲಲ್ಲಿ ತುಂಬಿಸಿಕೊಂಡಿರುವ ಸಾಕಷ್ಟು ಕೃತಿಗಳಿವೆ. ಆದರೆ ಎಲ್ಲ ಕ್ಲಾಸಿಕ್‌ಗಳಲ್ಲಿ ವಾಸ್ತವ ಅಂತನ್ನುವುದು ಇದ್ದೇ ಇರುತ್ತದೆ. ಅದು ಮೈಮುದುರಿ ಅಡಗಿ ಕೂತಿರುತ್ತದೆ ಅಷ್ಟೇ.

ಬೆಕೆಟ್‌ನ ‘ ವೇಟಿಂಗ್ ಫಾರ್ ದಿ ಗಾಡೋ’ ಕೂಡ ಅದ್ಭುತ ನಾಟಕ. ಅದರಲ್ಲೂ ಇಂದಿನ ಬದುಕಿನ ಚಿತ್ರಗಳಿವೆ. ಆದರೆ ಪ್ರಯಾಸದಿಂದ ಹೆಕ್ಕಿ ತೆಗೆದು ಅರ್ಥಮಾಡಿಕೊಳ್ಳಬೇಕು. ಇದಕ್ಕೆ ನಿರ್ದೇಶಕ ಸೇತುವಾಗಿ ನಿಂತುಕೊಳ್ಳಬೇಕು. ಆಗ ಏನಾದರೂ ದಕ್ಕೀತು. ಆದರೆ ಇಂದಿನವರು ಈ ಕೆಲಸ ಮಾಡುವುದಕ್ಕಿಂತ ಹೆಚ್ಚಿಗೆ ಬಾಡಿ  ಲಾಂಗ್ವೇಜ್, ಅಭಿನಯದ ಪದರಗಳು, ವಿನ್ಯಾಸ ಇತ್ಯಾದಿಯ ಕಡೆಗೆ ಹೆಚ್ಚು ಒತ್ತುಕೊಟ್ಟು ತಮ್ಮನ್ನು ಬಿಂಬಿಸಿಕೊಳ್ಳುವ ಕಡೆಗೆ ವಾಲುತ್ತಿದ್ದಾರೆ ಅನಿಸುತ್ತದೆ.

ಶೇಕ್ ಸ್ಪಿಯರ್ ನಾಟಕಗಳಲ್ಲಿ ಮಾತು ಪ್ರಧಾನ. ಅವುಗಳನ್ನು ಗ್ರಹಿಸಲು ಅನುವಾಗುವಂತೆ ಪ್ರಯೋಗ ಕಟ್ಟಬೇಕು. ಅದುಬಿಟ್ಟು ಬಾಡಿ ಲಾಂಗ್ವೇಜ್ ಉಮೇದಿನಲ್ಲಿ ಸರ್ಕಸ್ ಬಫೂನ್‌ನಂತೆ ಆಡಿಸಿದರೆ ನೋಡುವಿಕೆಯ ಮೂಲಕ ಕೇಳುವಿಕೆ ಡೈವರ್ಟ್ ಆಗುತ್ತದೆ. ಇದು ಹೀಗಾಗುತ್ತಿರುವುದಕ್ಕೆ ಮಧ್ಯಮ ವರ್ಗವನ್ನು ಲೋಲುಪ ಎಂದು ದೂಷಿಸಬೇಕಾಗಿಲ್ಲ ಎಂದು ನನ್ನ ಅನಿಸಿಕೆ. ಇದು ನಿರ್ದೇಶಕರ ಸಮಸ್ಯೆಯೇ ಹೊರತು ಮಧ್ಯಮ ವರ್ಗದ್ದಲ್ಲ.

ಎರಡನೆಯ ಸಂಗತಿ- ನಾವು ಯಾರಿಗೆ ನಾಟಕ ಕಟ್ಟುತ್ತಿದ್ದೇವೆಯೋ ರಂಗಭೂಮಿ ಅವರಿಗೆ ಅನಿವಾರ್ಯವಾಗಬೇಕೆಂದೇನೂ ಇಲ್ಲ. ನಮಗೆ ಪ್ರೇಕ್ಷಕರು ಅನಿವಾರ್ಯ. ಕಟ್ಟುತ್ತಿದ್ದೇವೆ. ಅವರಿಗೂ ನಾವು ಅನಿವಾರ್ಯವಾಗಬೇಕು ಎಂದು ನಿರೀಕ್ಷಿಸುವುದೇ ತಪ್ಪು. ರಂಗಭೂಮಿ ಅವರಿಗೆ ಫ್ಯಾಶನ್ ಅನಿಸಿದ್ದರೆ ಫೈನ್. ಅವರುಗಳನ್ನು ನಮ್ಮ ಕಡೆಗೆ ತಿರುಗಿಸಿಕೊಳ್ಳಲು ಸಾಧ್ಯವೆ ಅಥವಾ ಇಲ್ಲವೇ ಎನ್ನುವುದು ನಮ್ಮ ಕ್ರಿಯೇಟಿವಿಟಿಯ ಸಾಮರ್ಥ್ಯ ಆಧರಿಸಿರುತ್ತದೆ ಅಷ್ಟೇ.

ಕೊರೋನಾ ರಂಗಕರ್ಮಿಗಳನ್ನು ಮಾತ್ರ ನಲುಗಿಸಲಿಲ್ಲ. ಒಟ್ಟು ಮನುಕುಲವನ್ನೇ ತತ್ತರಿಸುವಂತೆ ಮಾಡಿತು. ನಮ್ಮ ಬದುಕು ಹೇಗೋ ಹಾಗೇ ಅವರುಗಳದು. ‘ ರಂಗಭೂಮಿಯ ಚಟುವಟಿಕೆಗಳು ನಿಂತುಹೋದಾಗ ಬೇಸರಪಟ್ಟವರು ನಾವು ರಂಗಕರ್ಮಿಗಳು ಮಾತ್ರ. ಪ್ರೇಕ್ಷಕ ವಲಯ ದುಃಖಪಟ್ಟಿದ್ದನ್ನ ನಾವು ಕಾಣಲಿಲ್ಲ’ ಎನ್ನುವುದು ಸರಿಯಲ್ಲ. ಯಾಕೆಂದರೆ ಕಲೆಗಿಂತ ಬದುಕು ಮತ್ತು ಉಸಿರು ದೊಡ್ಡದು. ಕಲೆಗೆ ಬದುಕು ಸರಕು ಒದಗಿಸುತ್ತದೆ. ಅಂಥ ಬದುಕೇ ಅಸ್ತವ್ಯಸ್ತವಾಗುತ್ತಿದ್ದ ವೇಳೆ ಕಲೆ ಮತ್ತು ಅದರ ಅನಿವಾರ್ಯತೆಯ ಬಗೆಗೆ ಯಾರು ಚಿಂತಿಸುತ್ತಾರೆ ಹೇಳಿ?

ಈ ಎಲ್ಲದರ ಮುಂದುವರಿಕೆಯಾಗಿ ಕಡೆಗೆ ನಿಮ್ಮ ಮಾತು ಏನೆಂದರೆ – ‘ ರಂಗ ಚಟುವಟಿಕೆ ಸಮಾಜದ ಅಗತ್ಯ ಅಂತ ಅವರಿಗೆ ಯಾವತ್ತೂ ಅನಿಸಿಲ್ಲ..’ ಎಂದಿದ್ದೀರಿ.
ಆದರೆ ನಾನು ಗಮನಿಸಿದ ಹಾಗೆ ನಮ್ಮಲ್ಲಿ ಒಂದು ಬಗೆಯ ಜಿಗುಟುತನ ಇದೆ. ‘ ಸದ್ಯದ ಕಾಲದ ನಿರ್ವಚನೆಗೆ ಬೇಕಾಗುವ ಪರಿಕರಗಳು ಇಂದು ನಮಗೆ ರಂಗಭೂಮಿಯಲ್ಲಿ ಸಿಗುತ್ತಿಲ್ಲ’ ಎಂದಿದ್ದೀರಿ. ಆದರೆ ಅದು ಸಿಗುತ್ತಿದ್ದ ಸಂದರ್ಭದಲ್ಲಿ ಕೊಂಕು ತೆಗೆದವರೂ ಇದ್ದಾರಲ್ಲ ಸರ್. ಉದಾಹರಣೆಗೆ ಅಜ್ಜ ಮಾಸ್ಟರ್ ಹಿರಣ್ಣಯ್ಯನವರ ನಾಟಕಗಳಲ್ಲಿ ‘ ಸದ್ಯದ ಕಾಲದ ನಿರ್ವಚನೆ’ ಇರುತ್ತಿತ್ತಲ್ಲ. ದಿನದಿನಕ್ಕೂ ಅಪ್‌ಡೇಟ್ ಆಗುತ್ತಲೇ ಇತ್ತಲ್ಲ. ಕೇವಲ ರಾಜಕೀಯ ಮಾತ್ರ ಅಲ್ಲ, ಸಾಮಾಜಿಕ ಮತ್ತು ಧಾರ್ಮಿಕ ವಿಡಂಬನೆಯೂ ನಡೆಯುತ್ತಿತ್ತಲ್ಲ. ಜನ ಬಂದು ನೋಡುತ್ತಿದ್ದರಲ್ಲ. ಕಲಾಕ್ಷೇತ್ರದ ಬಳಿ ಟಿಕೆಟ್‌ಗೆ ಲಾಠಿ ಚಾರ್ಜ್ ಆದದ್ದು ಇದೆ ಎಂದು ನೆನಪಿಸಿಕೊಂಡು ಹೇಳುವ ಹೋಟಲಿನ ಕಾರಂತರು ಇದ್ದಾರೆ. ಹೀಗಿದ್ದರೂ ‘ ಮಾಸ್ಟರ್ ಹಿರಣ್ಣಯ್ಯಂದು ನಾಟಕಗಳೇ ಅಲ್ಲ. ಬರೀ ಮಾತು ಅವಂದು. ವಿನ್ಯಾಸ ಗಿನ್ಯಾಸ ಏನೂ ಇರಲ್ಲ..’ ಎಂದವರ ಸಂಖ್ಯೆಯೇನೂ ಕಡಿಮೆ ಇಲ್ಲವಲ್ಲ.

ಆದರೆ ಹೀಗೆ ಅಂದವರು ಯಾರು? ರಂಗಭೂಮಿಯವರೇ ಹೊರತು ನಾವು ದೂಷಿಸುವ ಮಧ್ಯಮ ವರ್ಗದ ಲೋಲುಪ್ತ ಜನ ಅಲ್ಲ. ಅವರು ಕೊಂಕಾಡಿದ್ದನ್ನ ನಾನು ಕೇಳಿಲ್ಲ. ಹಾಗೆ ನೋಡಿದರೆ ಅಂದಂದಿನ ರಾಜಕೀಯದ ಅತಂತ್ರತೆ, ರಾಜಕಾರಣಿಗಳ ಭೋಳೆತನದ ವಿಚಾರ ಬಂದಾಗಲೆಲ್ಲ ಜನ ಮಾಸ್ಟರ್ ಹಿರಣ್ಣಯ್ಯನವರನ್ನು ನೆನಪಿಸಿಕೊಳ್ಳುವುದನ್ನು ಕೇಳಿದ್ದೇನೆ. ‘ಸದ್ಯದ ಕಾಲದ ನಿರ್ವಚನೆಗೆ ಬೇಕಾದ ಪರಿಕರ’ ಒದಗಿಸಿದರೆ ಅದರಲ್ಲಿ ವಿನ್ಯಾಸ ಇಲ್ಲ ಅನ್ನುವವರು ಒಂದು ಕಡೆ. ವಾಚಾಳಿತನ ಅನ್ನುವವರು ಮತ್ತೊಂದು ಕಡೆ. ಬೆಕೆಟ್ ನಾಟಕ ಅರ್ಥವಾಗದಿದ್ದರೂ ಆತ್ಮಾಭಿಮಾನದ ಸೋಗಿನಲ್ಲಿ ತೆಪ್ಪಗೆ ಕೂತು ನಾಟಕ ನೋಡುವ ಮಂದಿ ಮತ್ತೊಂದು ಕಡೆ. ಈ ಎಲ್ಲವನ್ನು ನಿರ್ಣಯಿಸುವುದು ಹೇಗೆ?

ನೀವು ಹೇಳುತ್ತೀರಿ- ‘ರಂಗಭೂಮಿಯಿಂದ ಧಾರಣ ಸಾಮರ್ಥ್ಯ ಬರುತ್ತದೆ ಎಂದು ಸಮಾಜಕ್ಕೆ ಅನಿಸದೇ ಇರುವ ಕಾರಣದಿಂದಾಗಿ ನಾವಿಂದು ಅಪ್ರಸ್ತುತರಾಗುತ್ತಿದ್ದೇವೆ…’ ಎಂದು.
ನಿಜ ಸರ್. ಇದು ನನಗೆ ಮತ್ತು ನಿಮಗೆ ಅನಿಸುತ್ತಿದೆ. ಆದರೆ ಬಹುತೇಕರಿಗೆ ಅನಿಸುತ್ತಿಲ್ಲ. ಇದಕ್ಕೆ ನೀವು ‘ ಕೊಬ್ಬು’ ಎಂದೇ ಕರೆದಿದ್ದೀರಿ. ಮತ್ತು ನನಗೆ ಈ ಪದ ಕೇಳಿ ಸಂತೋಷವಾಗಿದೆ. ಯಾಕೆಂದರೆ ನಾನೂ ಇಂಥ ಮಂದಿಯನ್ನು ಎದುರುಗೊಂಡಿದ್ದೇನೆ.

ಆದರೆ ನಿಮ್ಮ ದೊಡ್ಡ ಗುಣವೆಂದರೆ ‘ ಕೊಬ್ಬು’ ಎಂದು ಬಳಸಬೇಕಾದ ಕಡೆಯೆಲ್ಲ ‘ ನಮ್ಮ ಕೊಬ್ಬಿನ ಕಾರಣದಿಂದ’ ಎಂದೇ ಬರೆದಿದ್ದೀರಿ. ಇದು ಸಮಸ್ಯೆಯನ್ನು ಒಮ್ಮೆಗೇ ಡಿಸಾಲ್ವ್ ಮಾಡಿಬಿಡುತ್ತದೆ. ಆದರೆ ನನ್ನ ವಿಚಾರದಲ್ಲಿ ಇದು ಪೂರಾ ಉಲ್ಟ ಸರ್. ನನ್ನ ನಡೆ ಸರಿ ಎಂದು ನನಗೆ ಖಚಿತವಿರುತ್ತದೆ. ಹಾಗಾಗಿ ಬೇರೆಯವರ ನಡೆಯ ಬಗ್ಗೆ ಚಕಾರವನ್ನ ನಾನು ತೆಗೆಯುತ್ತೇನೆ. ಆಗ ಅವರಿಗೆ ನನ್ನ ನಡೆ ಕೊಬ್ಬಿನದು ಅನಿಸುತ್ತದೆ. ಮತ್ತು ನನಗೆ ಅವರ ಧಿಮಾಕು ಹಿಡಿಸುವುದಿಲ್ಲ. ಹಾಗಾಗಿ ಕೊಬ್ಬು ಅನಿಸುತ್ತಿರುತ್ತದೆ. ನನ್ನನ್ನು ಈ ರಂಗದಲ್ಲಿ ಬೆಂಬಲಿಸುವವರು ಇರುವಂತೆ ನನ್ನನ್ನು ವಿರೋಧಿಸುವವರು ಇದ್ದಾರೆ. ವಿರೋಧಿಗಳೇ ಹೆಚ್ಚಿಗೆ ಇದ್ದಾರೆ ಎನ್ನುವುದು ಸರಿ.

ಯಾಕೆ ಹೀಗಾಗ್ತಿದೆ ಎಂದು ನನ್ನನ್ನು ಈಚೆಗೆ ಒಬ್ಬರು ಕೇಳಿದರು. ಇವರುಗಳ ಈ ತಿಕ್ಕಾಟ ಮತ್ತು ಸಂಘರ್ಷ ಚಿತ್ರಿಸಿಕೊಳ್ಳುವಾಗ ನನ್ನಲ್ಲಿ ಒಂದು ಥಾಟ್ ಬಂತು. ಇದು ಹೊಸದೂ ಅಲ್ಲ, ಹಳೆಯದೂ ಅಲ್ಲ. ಕಾಲದ ಹರಿವಿನಲ್ಲಿ ಇದು ಇದ್ದದ್ದೇ.

‘ನನ್ನ ವಿಚಾರದಲ್ಲಿ ಇದು ಪೂರಾ ಉಲ್ಟ ಸರ್. ನನ್ನ ನಡೆ ಸರಿ ಎಂದು ನನಗೆ ಖಚಿತವಿರುತ್ತದೆ. ಹಾಗಾಗಿ ಬೇರೆಯವರ ನಡೆಯ ಬಗ್ಗೆ ಚಕಾರವನ್ನ ನಾನು ತೆಗೆಯುತ್ತೇನೆ. ಆಗ ಅವರಿಗೆ ನನ್ನ ನಡೆ ಕೊಬ್ಬಿನದು ಅನಿಸುತ್ತದೆ.’

ಒಂದು ಕಾಲಘಟ್ಟ ಇತ್ತು. ಕನ್ನಡದ ದಿಗ್ಗಜ ಕವಿಗಳು ಕಾವ್ಯ ರಚನೆ ಮಾಡಿದ ಕಾಲ. ಸಂಸ್ಕೃತಭೂಯಿಷ್ಟದ ರೀತಿಯಲ್ಲಿ ಮತ್ತು ಆ ಬಂಧದಲ್ಲಿ ಕಾವ್ಯ ರಚಿಸಿದರೆ ಮಾತ್ರ ಅದು ಕಾವ್ಯ ಎಂದು ನಂಬಿ ಬರೆಯುತ್ತಿದ್ದ ಕಾಲ. ಪಾಂಡಿತ್ಯಕ್ಕೆ ಹೆಚ್ಚಿನ ಮನ್ನಣೆ ಬಯಸುತ್ತಿದ್ದ ಕಾಲ. ಅದರಂತೆ ಕಾವ್ಯಗಳು ಪಾಂಡಿತ್ಯಪೂರ್ಣವಾಗಿರುತ್ತಿದ್ದವು. ಸಾಮಾನ್ಯ ಜನ ಓದಲು ಮತ್ತು ಅರ್ಥೈಸಿಕೊಳ್ಳಲು ಕಷ್ಟವಾಗುತ್ತಿತ್ತು. ಆ ಕಾವ್ಯಗಳಲ್ಲಿ ಉದಾತ್ತ ವಿಚಾರಗಳಿರುತ್ತಿದ್ದವು ನಿಜ; ಆದರೆ ಮಂಡನೆ ಕ್ರಮ? ಅದನ್ನು ಪ್ರಶ್ನಿಸುವಂತಿಲ್ಲ. ಅದು ಅವರಿಗೆ ಸರಿ.

ಅತ್ತ ಎರಡು ಶತಮಾನ ಕಳೆಯುತ್ತಿದ್ದಂತೆ ಒಬ್ಬ ಶಕಪುರುಷ ಹುಟ್ಟಿಕೊಂಡ. ‘ಆನು ಒಲಿದಂತೆ ಹಾಡುವೆ’ ಅಂದ. ರಾಜಾಶ್ರಯದಲ್ಲಿದ್ದರೂ ಅದರಿಂದ ಹೊರಗುಳಿಯುತ್ತಲೇ ತನ್ನ ನೋಟಕ್ರಮ ಮತ್ತು ಅಭಿವ್ಯಕ್ತಿಯನ್ನ ಸಾಮಾನ್ಯ ಜನರ ಬಳಿಗೆ ತಂದ. ಬೆರೆತ.  ಸ್ಟ್ರಕ್ಚರ್ ಹೊರತುಪಡಿಸಿದರೆ ಯಾವ ಮಹಾನ್ ಕಾವ್ಯಗಳಿಗೂ ಕಡಿಮೆ ಇಲ್ಲದ ವಿಚಾರಗಳು ಅವುಗಳಲ್ಲಿ ಇದ್ದವು. ಬಯಸಿದ್ದರೆ ಅವನೂ ಪಾಂಡಿತ್ಯಕ್ಕೆ ಜೋತುಬೀಳಬಹುದಿತ್ತು. ಆದರೆ ಅವನು ಜನರ ಬಳಿಗೆ ಬಂದ. ಮಾತಾಡಿದ. ಮಾತಾಡಿಸಿದ. ‘ಅಣ್ಣ’ ಆದ.

ನನ್ನ ಪ್ರಕಾರ ಇಂದಿನ ರಂಗಭೂಮಿಯದ್ದೂ ಇದೇ ಕಥೆ ಆಗಿದೆ. ಪಾಂಡಿತ್ಯಪೂರ್ಣವಾಗಿ ಬರೆದರಷ್ಟೇ ನಾಟಕ ಎಂದುಕೊಂಡು ಕೆಲವರು ತಾವು ಸಂಕೀರ್ಣವಾಗಿ ಬರೆಯುವುದಲ್ಲದೆ ಇರುವ ನಾಟಕ ಕೃತಿಗಳನ್ನು ಕಟ್ಟುವ ನಿಟ್ಟಿನಲ್ಲೂ ಸಂಕೀರ್ಣ ಮಾಡುತ್ತಿದ್ದಾರೆ. ನೀವು ಹೇಳಿರುವ ಹಾಗೆ ‘ ಸರಳತೆ ಎನ್ನುವುದೇ ನಿಜವಾದ ಸಂಕೀರ್ಣ’ ಎನ್ನುವ ಹಾಗೆ ಬರೆದರೆ ಅದನ್ನು ಒಂದೇ ಮಾತಿಗೆ ‘ ಕಾಮಿಡಿ’ ಎಂದು ಲೇಬಲ್ ಹಚ್ಚಿ ತಳ್ಳಿಹಾಕಿಬಿಡುತ್ತಾರೆ. ನಕ್ಕರೆ ಗಾಂಭೀರ್ಯಕ್ಕೆ ಕುಂದು ಎನ್ನುವುದು ಮನಸ್ಸಿನಲ್ಲಿ ಕೂತುಬಿಟ್ಟಿದೆ. ಪಾಂಡಿತ್ಯ ಮತ್ತು ಜನಸಾಮಾನ್ಯರ ನಗುವಿನ ಭಾಷೆ ಇಂದು ಸಂಘರ್ಷಕ್ಕೆ ಇಳಿದುಬಿಟ್ಟಿದೆ.
ಪಾಂಡಿತ್ಯದವರು ಹಾಗೇ ಪಾಂಡಿತ್ಯ ಪ್ರದರ್ಶಿಸುತ್ತ ಇರುತ್ತಾರೆ ಮತ್ತು ಅಣ್ಣನಂಥವರು ನಲುಗುತ್ತಲೇ ಇರುತ್ತಾರೆ.

ನೀವು ಹೇಳಿರುವ ‘ ಪ್ರಾಯೋಜನೆ’ ಹಿಂದಿನ ಕಾಲದ ರಾಜಾಶ್ರಯವಿದ್ದಂತೆ.  ಅದು ಸಿಗುತ್ತದೆ ಎಂದಾದಾಗ ಕಾವ್ಯಗಳು ರಚನೆಗೊಂಡಿರುವ ಶೈಲಿ ಮತ್ತು ಬಗೆ ನಿಮಗೆ ಗೊತ್ತೇ ಇದೆ. ಅದರ ಹಂಗು ಬೇಡ ಎನ್ನುವವರು ಎಲ್ಲ ಮಾರ್ಗಗಳಿಂದಲೂ ವಿರೋಧ ಕಟ್ಟಿಕೊಳ್ಳುತ್ತಲೇ ಇರಬೇಕಾಗುತ್ತದೆ. ‘ ಬರೆದಿರೋದು ನಾಟಕವೇ ಅಲ್ಲ. ಸಾಮಾನ್ಯ ಜನರನ್ನ ನಗಿಸಲಿಕ್ಕೆ ರಂಜಿಸಲಿಕ್ಕೆ ಏನೋ ಮಾಡ್ತಿದ್ದಾನೆ..’ ಇತ್ಯಾದಿ ಮಾತು ಕೇಳಿಸಿಕೊಂಡು ಮುನ್ನಡೆಯಬೇಕಾಗುತ್ತದೆ. ಇದಕ್ಕೆ ಧಾರಣ ಶಕ್ತಿ ಬೇಕು.

ಇಷ್ಟರ ನಡುವೆ ನೀವು ‘ ಪ್ರಾಯೋಜನೆ ಸಿಗುವಾಗ ನಮಗೊಂದು ಅಹಂಕಾರವಿತ್ತು. ನಾಟಕ ಕುರಿತು ಯಾರಿಗೆ ಆಸಕ್ತಿ ಇದೆಯೋ ಅವರು ಬಂದು ನೋಡಲಿ ಎಂದು. ಆದರೆ ಇಂದು? ಹಾಗೆ ಹೇಳುವ ಸಾಧ್ಯತೆ ಇದೆಯೇ? ಮರುಪರಿಶೀಲನೆ ಮಾಡಿಕೊಂಡು ನಮ್ಮಲ್ಲಿ ತುಂಬಿರುವ ಕೊಬ್ಬನ್ನು ಇಳಿಸಿಕೊಳ್ಳಬೇಕಿದೆ’ ಎಂದಿದ್ದೀರಿ.


ಇದು ಸಾಧ್ಯವಾಗಬೇಕಾದರೆ ಅಣ್ಣನಂಥವರು ರಂಗಭೂಮಿಯಲ್ಲಿ ಮೈದಾಳಬೇಕು. ಆಗ ಬದಲಾವಣೆ ಸಾಧ್ಯ. ಆಗ ನೀವು ಹೇಳುವಂತೆ ‘ ನಮ್ಮ ರಂಗಚಟುವಟಿಕೆಗಳು ಗಲ್ಲಿಗಳಲ್ಲಿ ನುಸುಳುವ, ಬೀದಿಗಳಲ್ಲಿ ಹರಿದಾಡುವ, ವರಾಂಡಗಳಲ್ಲಿ ಮೈಚಾಚುವ ವಿನ್ಯಾಸ ಪಡೆದುಕೊಳ್ಳಬೇಕಿದೆ’ ಎನ್ನುವುದೆಲ್ಲ ಸಾಧಿತವಾಗುತ್ತದೆ. ಅಣ್ಣನಂಥವರು ಹತ್ತಾಗಿ ನೂರಾದರೆ ಆಗ ಹೊಸ ಶಕೆ ಆರಂಭವಾಗುತ್ತದೆ. ಇಲ್ಲದಿದ್ದರೆ ಹಿಂದಿನ ಮರುಕಳಿಕೆಯಂತೆ ತಾವು ಆಡಿದ್ದೇ ನಾಟಕ, ಬರೆದದ್ದೇ ನಾಟಕ ಎನ್ನುವ ಪಡೆ ಹುಟ್ಟಿಕೊಳ್ಳುತ್ತಲೇ ಇರುತ್ತದೆ. ನೀವು ಪಥ ಬದಲಿಸಬೇಕಾದ ಮಾತಾಡಿದ್ದೀರಿ. ಅದೇ ಸಂತೋಷ ನನಗೆ.
ಒಮ್ಮೆ ಕೂತು ಮತ್ತಷ್ಟು ಮಾತಾಡೋಣ ಸರ್…

(ಚಿತ್ರಗಳು : ಸಾಂದರ್ಭಿಕ)

(‘ರಂಗಭೂಮಿಯಲ್ಲಿ ಮರುಚಿಂತನೆಯ ಅಗತ್ಯ’ ಕುರಿತು ಸಂವಾದ ವಿಸ್ತರಿಸುವ ಉದ್ದೇಶದಿಂದ ಬರಹಗಳನ್ನು ಕಳಹಿಸಬಹುದು.)