ಹರಿಕಾಹರಿ ಪ್ರೇಮಲಹರಿ

೧. ಮರದಿಂದ ಬಿದ್ದ ಮಳೆಹನಿ

ಹರಿಕಾ ಮಂದಾರವಲ್ಲಿ
ಯ ಸ್ಟೇಟಸ್ ನೋಡಿ
ಪ್ರತಿಕ್ರಿಯಿಸುತ್ತಾನೆ
ಹರಿ ಶಿವನಳ್ಳಿ
‘ಮಿರಿ ಮಿರಿ ಮಿಂಚುತ್ತಾ ತಯಾರಾಗಿ
ಹೊರಟ ಹಾಗಿದೆ ಎಲ್ಲೋ ಮೇಡಮ್?’

ಬ್ಲೂ ಟಿಕ್ ಬೀಳುವುದೇ ತಡ ಎಂಬಂತೆ
ಬರುತ್ತದೆ ಮಾರುತ್ತರ
‘ನನ್ನಜ್ಜಿ ಮಾಡಿ ದೂರದರ್ಶನಕ್ಕೆ ಪೂಜೆ
ನೋಡುತ್ತಿದ್ದಳು ರಾಮಾಯಣ
ಮೊಮ್ಮಗಳು
ಚಿತ್ತಚೋರನಿಗೆ ಸಂದೇಶ ಕಳಿಸಲು
ಅಷ್ಟಾದರೂ ಬೇಡವೇ ಸಂಭ್ರಮ?’

ಒಂದಿಷ್ಟು ಮೌನ.
ಪುನರಾರಂಭಿಸುತ್ತಾಳೆ ಆಕೆಯೇ
‘ಹಳೆಯ ನೈಟಿ ಮೂಡಿತ್ತೇ ಮನದಲಿ?
ಇರಲಿ ಬಿಡಿ, ಇತ್ತ ಕಡೆ ಬಂದಾಗ ಬನ್ನಿ
ನಮ್ಮಮ್ಮನಿಗೆ ಅವರೂರ ಕಡೆಯವರೆಂದರೆ
ರಾಶಿ ಪ್ರೀತಿ’

ಸುಳಿವ ಸುಳಿಯಲಿ ಹರಿಯ ಯೋಚನಾಲಹರಿ
ಪ್ಲೆಟಾನಿಕ್ ಪ್ರೀತಿಯೆಂದರೆ
ಸಂದೇಶ ವಿನಿಮಯವಷ್ಟೆಯೇ?
ಮಾತನಾಡಬಹುದು, ನೋಡಬಹುದು
ಸ್ಪರ್ಶರಾಹಿತ್ಯ! ಮಾತ್ರ.
‘ಸರಿ, ಬರೀ ನೀರು ಕುಡಿಯೋದು’

‘ನೀರು ನೀಡೋದು ಲೋಟದಲ್ಲಿ
ಹಿಡಿಕೆಯಿಲ್ಲ ಲೋಟಕ್ಕೆ’
ಹರಿಕಾ ಓದುತ್ತಾಳ ಮನವನ್ನ!
‘ಕಾಫೀ ಕುಡಿತೀನಿ ಆಗಾಗ
ನಿಮಗ್ಯಾಕೆ ತೊಂದರೆ ಅಂತ… ಅಷ್ಟೇ…’
ತಡವರಿಸುತ್ತಾನೆ ಹರಿ

ಮುಟ್ಟಿದ ಮಾತಿಗೆ
ಪಟ್ಟು ಸಡಿಲಿಸದ ಹರಿಕಾ
‘ಕೆಂಡಬಿಸಿಯಿದ್ದರೂ ತುಂಬುಗೈಯಲ್ಲೇ
ಕೊಡುತ್ತೇನೆ ಕಾಫಿ ಕಪ್’

‘ಆಯ್ತು, ನೇರ ತುಟಿಯಲ್ಲೇ ಹೀರುತ್ತೇನೆ’
ತಾನು ಪ್ರತಿಕ್ರಿಯಿಸಿದ ಪರಿಗೆ
ತಾನೇ ಬೆಚ್ಚಿ ಬಿದ್ದ ಹರಿ
‘ಅಲ್ದೆ…ಅಲ್ದೇ…ಲವ್ ಹ್ಯಾಂಡಲ್ ಗಂಡಸರಿಗಿಷ್ಟ’
ಮರುಕ್ಷಣವೇ ಡಾಟಾ ಆಫ್ ಮಾಡಿ
ಬಯಸುತ್ತಾನೆ ನಿತ್ಯದ ಚಟುವಟಿಕೆಗೆ ಮರಳಲು
ನಿಲ್ಲುವುದಿಲ್ಲ ಚಡಪಡಿಕೆ
ಮಳೆ ನಿಂತ ನಂತರ ಮರದಿಂದ
ಬೀಳುವ ಹನಿಯಂತೆ!

***

೨. ಕಿಚ್ಚು ಸೋಕಿದ ಬೋಗುಣಿ

ಕಳೆದಿವೆ ದಿನಗಳೆರಡೋ ಮೂರೋ
ಅಧರಕ್ಕೆ ಕಪ್ಪಿನಂಚನು ತಾಕಿಸಿ
ನಾಲಿಗೆಯಡಿಯಿಂದ ಸುರುಳಿಯಾಗಿಸಿ
ಸೊರ್ರನೇ ಚಹಾ ಹೀರುವ ಮಾತಾಗಿ
ಹರಿಕಾಳ ಸಂದೇಶವಿಲ್ಲ ಮತ್ತೆ
ಕ್ಷಣಗಳು ದೀರ್ಘ. ನಿರೀಕ್ಷೆ ತಪ್ಪೆ
ತಾನೇ ಮೆಸೇಜಿಸಬಹುದು ಅನಿಸುತ್ತೆ

ಹರಿ ಕಳೆದಿದ್ದಾನೆ ಹೀಗೇ
ಟೈಪಿಸಿ ಅಳಿಸಿ ಸಮಯ ಸರಿದಿದೆ
ಆಕೆಗೂ ಕಾಣುತ್ತಿರಬಹುದೇ?
‘ಹರಿ ಟೈಪಿಂಗ್ ಮೂರು ಡಾಟು’
ಇಷ್ಟಕ್ಕೂ ಹೆಸರು ಸೇವ್ ಮಾಡಿರುವುದು ಡೌಟು
ಚಿತ್ರ ವಿಚಿತ್ರ ಕಲ್ಪನೆ
ಏನಾಗಿದೆ ಮನಕೆ

‘ಏನಾಗಿದೆ ಮಗನೇ?’
ಕೇಳುತ್ತಾನೆ ಅಪ್ಪ, ಅಮ್ಮನಂಥವನು
ಇಬ್ಬನಿ ಮುಸುಕಿದ ಮುಂಜಾವ
ಚಳಿಯಲ್ಲಿ ಬೆಚ್ಚುವ ಬೆವರುವ
ಬಿಸಿಲಿನ ಝಳಕ್ಕೆ ನಡುಗುವ
ಹೊಸ ಪರಿಯ ಹರಿಯ ಕಂಡು

ಪರಿವೆ ಇಲ್ಲದೆ ಸವರಿದ್ದಾನೆ ಹುಲ್ಲು
ತನ್ನ ಬೇಣದಗುಂಟ ಪಕ್ಕದವರದು
ಆರಿಸಿದ್ದರೆ ಗಡಿಕಾಲುವೆ ದಾಟಿ
ಅಡಿಕೆ ಹೀಗೆಯೇ
ಅಂಟುತ್ತಿತ್ತು ಕಳವಿನ ಕಳಂಕ
ಏನೋ ಆಗಿದೆ ಹರಿಗೆ
ಹಳ್ಳ ದಾಟಿ ತಿರುಗಿ ನೋಡುತ್ತ, ದಿಬ್ಬಕ್ಕೆ
ಒಡಾಯ್ದು ಬಿದ್ದ ಶಂಭು ಶೇರುಗಾರ
‘ಒಡೇರಿಗೆ ಒಮ್ಮೆ ನ್ವಾಟ ನೋಡಿಸಲು
ಹೇಳಬೇಕು’ ಕೊಡವಿಕೊಳ್ಳುತ್ತಾನೆ ಧೂಳು.

***

೩. ನವಿಲಗರಿಯ ಬೆನ್ನ ಸವರಿ

ಹೆಸರಿಗೆ ಪಟ್ಟಣವಷ್ಟೆ
ನಗರದ ಸೆರಗಿನಂಚಿನಲಿ ಪುಟ್ಟ ವಸತಿ
ಅಮ್ಮ ಮಾಡಿ ಕಷಾಯದ ಪುಡಿ, ಚಕ್ಕುಲಿ
ಅಪ್ಪನ ಸೈಕಲ್ಲಿನ ಎಡ ಹ್ಯಾಂಡಲಿನ ಬ್ಯಾಗಲಿ
ಇಡುವಳು ಸುತ್ತಿ ಕವರಿನಲಿ
ಹಂಚುವ ಪೇಪರು ಬಲಬದಿಯು ಚೀಲದಲಿ

ಒಂದೆರಡು ದೂರದ ಮನೆಗಳು
ತಡವಾಗಿ ಹೋಗುತ್ತೆ ವಾರಪತ್ರಿಕೆಗಳು
ಗಳಿಗೆ ಮುರಿಯದ ಸೀರೆಯಂತೆ ಜೋಪಾನಮಾಡಿ
ಓದಿ ಇಡುತ್ತಾಳೆ ಹರಿಕಾ ಚೀಲದಲಿ
ಪ್ರೇಮ ಕವಿತೆಯ ಕೂಸು
ಮಿಸುಕಾಡುತ್ತದೆ ಹೊಕ್ಕುಳಲಿ

ಹಾಗೊಂದು ಗಳಿಗೆಯಲಿ
ಹರಿಯ ಪರಿಚಯ ಫೇಸ್ಬುಕ್ಕಿನಲಿ
ಅಷ್ಟಿಷ್ಟು ಮಾತಾಗಿ ಸಲುಗೆ ಹಾಯಾಗಿ
ತುಟಿ ತಲುಪಿದಾಗ ನಾಚಿದನೆ ಬೆದರಿದನೆ
ದೂರ ಸರಿದನೆ ಅಸಹ್ಯಪಟ್ಟನೆ
ಸುಮಾರು ದಿನಗಳಿಂದ ಪತ್ತೆಯಿಲ್ಲ
ಪ್ರಶ್ನೆಗಳು ತೆರೆಯಂತೆ ಅಪ್ಪಳಿಸಿ
ಕಲಕುತ್ತದೆ ಹೃದಯ ಸಮುದ್ರ

ಹೇಳುವುದಾದರೆ ಅಮ್ಮನ ಭಾಷೆಯಲ್ಲೇ
ಕುಟ್ಟುವಾಗ
ಹರಿಕಾ ಮೊಬೈಲು ಫೋನು
ಹರಿ ಶಿವನಳ್ಳಿ ಹೆಸರಿಗೆ ತಟ್ಟುತ್ತಾಳೆ ಮೃದುವಾಗಿ
ಎಲ್ಲಿ ಪೆಟ್ಟಾಗುತ್ತದೋ ಎಂಬಂತೆ
ಪ್ರ್ರೊಫೈಲು ಪಟ ಝೂಮು ಮಾಡಿ ನಕ್ಕು
ಸ್ಕ್ರೋಲು ಮಾಡುತ್ತಾಳೆ
ಮತ್ತೊಂದು ಹರಿವದನ ಮುಂದಿನ ನಿಲ್ದಾಣ

ಆಗಾಗ ವಾಟ್ಸಾಪು ತೆರೆದು
ಹರಿಯ ನೆನೆದು
ಜೀವ ಕಾದು ಉಕ್ಕುವಾಗ
ಹಾರಿ ಬಂದ ನವಿಲುಗರಿಯು
ಬೆನ್ನ ಸವರಿ ಹೋಗುವಾಗ
ಅವನ ಉಸಿರ ಸ್ಪರ್ಶದ ರೋಮಾಂಚನ
ಸ್ಪರ್ಶವೇ ರೂಪತಳೆದು ರಸ ಗಂಧ ಕಂಪನ
-ವಾಗಿ ಆವರಿಸಿ ಅವನದೇ ಧ್ಯಾನ

***

೪. ಜಲನಭಗಳ ತೆಕ್ಕೆಯಲ್ಲಿ

ಅಂಬರದಲಿ ಮೋಡವನು ಕಡೆದು
ಆಗಸದಗಲಕ್ಕೆ ಹರಿಕಾಳ ಮೂಡಿಸಿದ
ಜಗದ ಚಿತ್ರಕಾರನ ವಿಸ್ಮಯವನು
ದಿಟ್ಟಿಸಿ ನೋಡುತ್ತಾ ಮೈಮರೆತು
ಹರಿ ನೀರಿಗಿಳಿವನು- ಚಳಿ
ಮೇಘಗಳು ರವಿಯನಾವರಿಸುತಿವೆ
ಮುನ್ಸೂಚನೆ ವರ್ಷದ್ದು ಇತ್ತೆಂಬಂತೆ
ತೊರೆಯಲಿರೆ ದಿಗಿಲಿಲ್ಲ ಹರಿಗೆ

ಉಸಿರು ಬಿಗಿ ಹಿಡಿದು ನೀರಲೊಂದು
ಮುಳುಗು ಹಾಕಿದವನ ಧಮನಿಗಳಲಿ
ಭರಪೂರ ನೆತ್ತರ ಪ್ರವಾಹ
ಮೂಲಾಧಾರದಿಂದ ಚಿಮ್ಮಿದ ತರಂಗ
ಸಹಸ್ರಾರವ ಮುಟ್ಟಿ ನೆತ್ತಿ ಅಗ್ನಿಪರ್ವತ
ಪುಟಕಿಟ್ಟ ಬಂಗಾರ ನಿರ್ಧಾರ

ಅನಿಸಿದ್ದನ್ನು ಅಂತರಾಳದಲಿ ಭರಿಸಲಾಗುತ್ತಿಲ್ಲ
ಹರಿಕಾ ಯುಗಗಳಾಗಿವೆ ಈ ದಿನಗಳು
ಬೆಂದು ಕರಕಲಾಗುವ ಮುನ್ನ ಬಿನ್ನವಿಸಬೇಕಿದೆ
ಅಂತರಂಗದಲಿ ಹರಳುಗಟ್ಟಿದ ಭಾವನೆಗಳ
ನಿರಾಕರಣೆಯ ಭಯವಿಲ್ಲ
ಒಪ್ಪದೇ ಹೋಗಿಯಾಳೆಲ್ಲೆಂಬ ಹಮ್ಮಿಲ್ಲ
ಅನುಕಂಪ ಗಿಟ್ಟಿಸುವ ಹಂಬಲವಿಲ್ಲ

ಇದೋ ಮೊಣಕಾಲೂರಿ ನಿನ್ನೆದುರು
ಕಣ್ಮುಚ್ಚಿ ಕೈಚಾಚಿ
ಕೆಂಗುಲಾಬಿ ಹೂ ಹಿಡಿದು ನಿಂತಿದ್ದೇನೆ
ಇದು ನನ್ನ ಪ್ರೇಮ ನಿವೇದನೆ

ಸಂದೇಶ ಕಳುಹಿಸಿ ನಿರಾಳನಾಗಿ
ಹರಿ ಝರಿಯತ್ತ ಓಡಿದ ತಿರುಗಿ
ಧುಮುಕಿದ ರಭಸಕ್ಕೆ ಎದ್ದವು
ತೆರೆಗಳು ರಿಂಗುರಿಂಗಾಗಿ

****

೫. ಪ್ರೀತಿವೀಣೆಯ ನುಡಿಸಿ

ಕುಳಿತಿಹಳು ಹರಿಕಾ ಹಿರಿಯಕ್ಕ ಕೊಟ್ಟ
ಗಾಢ ಅರಿಶಿಣದ ರೇಶಿಮೆ ಸೀರೆಯುಟ್ಟು
ಬಾನಿನಲಿ ರವಿ ಕಿತ್ತಳೆಯಾದ ಹೊತ್ತು
ದಣಿದಿಹಳು ಕುಣಿದು ಮಕ್ಕಳು ಕುತ್ತಿಗೆಗೆ ಜೋತು

ನೀಲಿ ಲಿನೆನ್ ಡ್ರೆಸ್ಸು ಸಂಜೆ ಧರಿಸುವ ಪುಳಕ
ಕಿರಿಯಕ್ಕನ ಕಾಣಿಕೆ ಮಮತೆಯ ದ್ಯೋತಕ
ಚಿಕ್ಕಮ್ಮ ಚಿಕ್ಕಮ್ಮ ಚಿಕ್ಕಮ್ಮ
ಬೆಳಗಿನಿಂದ ಪುಟಾಣಿಗಳ ಸಂಭ್ರಮ

ಕೈಲಿಲ್ಲ ಮೊಬೈಲು ಬಂದಾಗಿನಿಂದ ಮಕ್ಕಳು
‘ಏ ಕೊಡಿಲ್ಲಿ’ ಕೇಳುವವರಾರು?
ಬೆಳಿಗ್ಗೆ ಒಮ್ಮೆ ತೆರೆದು ನೋಡಿದ್ದೇ ಸೈ
ಪುನಃ ಎಡತಾಕಿಲ್ಲ ಇವಳ ಬದಿಗೆ
‘ಕೊಟ್ಟೆ ಕೊಟ್ಟೆ’ ಕ್ಲ್ಯಾಶ್ ಆಫ್ ಕ್ಲ್ಯಾನ್ಸ್ ಆಡುತ್ತಾ
ಓಡುತ್ತಾನೆ ಪೋರ

ಬಂದಿಲ್ಲ ಮುಂಜಾನೆ ನಿರುಕಿಸುತ್ತಿದ್ದ ಸಂದೇಶ
ಡಾಟಾ ಢಮಾರಾದ ಮೇಲೆ ಕೊಟ್ಟುಹೋದ ಕಿಲಾಡಿ
ಅಜ್ಜನದ್ದೊಂದು ಬಿಟ್ಟಿರಬಹುದು
ಹಾಟ್ ಸ್ಪಾಟ್ ಹಾಯಿಸಿಕೊಳ್ಳುತ್ತಾಳೆ ಅಪ್ಪನದು

ಸರಂಜಾಮು ತುಂಬಿದ ಚೀಲವೊಂದ ಸುರುವಿದಂತೆ
ಬಂದುಬಿದ್ದಿವೆ ಹರಿಕಾಳ ಫೋನಿಗೆ ಸಂದೇಶಗಳ ಕಂತೆ
ಇದೆಯೊಂದು ಹರಿಯ ನೋಟಿಫಿಕೇಶನ್
ಕಂಜೂಸು ಮೆಸೇಜಿಗೂ ಸಿಗಲೊಮ್ಮೆ ಕೈಗೆ

ಮತ್ತೆ ಮತ್ತೆ ಓದುವಳು ಆ ಸಾಲುಗಳ
ಎದೆಗೊತ್ತಿಕೊಳ್ಳುವಳು
ಹಣೆಗೆ ಮುಟ್ಟಿಸಿಕೊಳ್ಳುವಳು
ಅತ್ತಿತ್ತ ನೋಡಿ ಸಟಕ್ಕನೆ ಚುಂಬಿಸುವಳು
ಹೃದಯದಲಿ ನುಡಿವ ವೀಣೆ ಆಲಿಸುತಿಹಳು

ಒಂದು ದೀರ್ಘ ಉಸಿರಾಟ
ತಹಬಂದಿಗೆ ಮನವು
ಬಲಗಾಲ ಹೆಬ್ಬೆರಳ ನೆಲಕಾಡಿಸಿ
ನಿರ್ಧಾರ ಬಲವಾಗಿಸಿ
ಹರಿಯ ಹೆಸರಿಗೆ ತೋರ್ಬೆರಳ ಸವರಿ
ಮಾಡುತ್ತಾಳೆ ಎಡಿಟ್ಟು
ನಿಲ್ಲಿಸುತ್ತಾಳೆ- ರಿ ಅಷ್ಟೇ ಅಳಿಸಿ
ಸೇವ್ ಕೊಡುತ್ತಾಳೆ- ನೀ ಸೇರಿಸಿ
‘ಸೇವ್ ಹನೀ?’
ಯೆಸ್ ಒತ್ತಿ ಹರಿಕಾ ಮಂದಾರ
ಮಕರಂದವಾಗುತ್ತಾಳೆ.

****

೬. ಮನದ ಭಿತ್ತಿಯಲಿ ಹೊನ್ನ ಅಕ್ಷರವ ಕೆತ್ತಿ

ನೇಸರ ಕಂತು ಹಿಮಕರ ಬಲೆ ಹರಡಿ
ಅಂಬುಧಿ ಕ್ಷೀರವಾಗುವ ಹೊತ್ತು
ಮಗ್ಗುಲು ಬದಲಿಸಿ ಮರುಸಂದೇಶವ
ಅಂತಃಕರಣದ ಬನಿಯಾಗಿಸಿ
ಲಿಪಿಗಿಳಿಸುವ ಹರಸಾಹಸದಲಿ ಮಗ್ನೆ ಹರಿಕಾ

ನೀಲಿ ಕಂಗಳು ನೀಲ ಕಾಯ
ಆಸರೆ ನೀಡುವ ಅಗಾಧ ಹರಹಿನೆದೆಯ
ಶ್ವೇತಾಶ್ವರೋಹಿ ರಾಜಕುವರನೇ
ಅಂಕೆ ತಪ್ಪಿದ ಪ್ರಜ್ಞೆಗೆ ಅಂಕುಶವ ಹಾಕಲು
ಆಗದೇ ಅನುಭವಿಸಿದೆ ಪಡಿಪಾಟಲು

ಬರೆದು ಕಳುಹಿಸಿ ನಾಲ್ಕಾರು ಸಾಲುಗಳ
ಭರತವುಂಟು ಮಾಡಿದ ಹರಿಯೇ ಕೇಳಿಲ್ಲಿ
ಹೇಳುವುದ ಹರಿಕಾ ಮಂದಾರವಲ್ಲಿ
ಹೆಣ್ಣಿಗೆ ಪ್ರೀತಿಯ ತೀರ ಸಂಸಾರ
ಇರುವಷ್ಟು ದೂರ ದೂರ ಕಾವು ಅಪಾರ
ಹುಟ್ಟದಿರಲಿ ಆವರಣ ಅಂತರ

ನಿವೇದನೆ ಎಂಬ ಪದವಿದು ಭಾರ
ಸಂಚಾರ ಮೂಡಿಸಿ ಪ್ರೀತಿ ಇಂಚರ
ಪ್ರೇಮದಲಿ ಸೋಲುವುದೇ ಗೆಲುವು
ಕಡೆಯುಸಿರಿನ ತನಕ ಇರಲಿ ನಿನ್ನೊಲವು
ಬೇಕಿಲ್ಲ ಮೃಷ್ಟಾನ್ನ, ಚಿನ್ನದಾಭರಣ
ನಗುತಾ ಬಾಳುವುದೇ ರಸದೌತಣ

ಪ್ರೀತಿ ಮೇಣದ ಬತ್ತಿ
ಕರಗಿ ಹೋದರೂ ದೇಹ
ನಿನ್ನೊಳು ಲೀನವೀ ಜ್ಯೋತಿ
ಒಪ್ಪಿಸಿಕೋ ಈ ಪದ್ಮಪತ್ರವ
ಮನದ ಭಿತ್ತಿಯಲಿ ಹೊನ್ನ ಅಕ್ಷರವ ಕೆತ್ತಿ
ತೇಲಿ ಬಿಟ್ಟಿಹೆನು ನಿನ್ನೆಡೆಗೆ ಆತ್ಮಬುಟ್ಟಿ

ಡಾ. ಅಜಿತ್ ಹರೀಶಿ ಪ್ರಸ್ತುತ ಹರೀಶಿಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು; ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು. ಆರೋಗ್ಯದ ಅರಿವು (ವೈದ್ಯಕೀಯ ಸಾಹಿತ್ಯ) ಕೃತಿಕರ್ಷ (ವಿಮರ್ಶಾ ಕೃತಿ) ಕಥಾಭರಣ (ಸಂಪಾದಿತ ಕಥಾಸಂಕಲನ) ಪ್ರಕಟಗೊಂಡಿವೆ.