ಆನ್‌ಳ ಆರೋಗ್ಯ ಹೆಚ್ಚು ಸೂಕ್ಷ್ಮವಾಗುವ ಹಂತ ಬೇಗನೇ ತಲುಪಿಬಿಡುತ್ತದೆ. ಚಿತ್ರದ ಬಹುಪಾಲು ಜಾರ್ಜ್‌ ಆನ್‌ಗೆ ಮಾಡುವ ಸೇವಾಕ್ರಿಯೆಗಳನ್ನು ವಿಸ್ತಾರವಾಗಿ ದಾಖಲಿಸುವುದನ್ನು ಮಾತ್ರ ಕಾಣುತ್ತೇವೆ. ತಿನಿಸುವುದು, ಕುಡಿಸುವುದು, ಹಾಸಿಗೆ, ಹೊದಿಕೆ ಸರಿಪಡಿಸುವುದು, ಡೈಪರ್‌ಗಳನ್ನು ಬದಲು ಮಾಡುವುದು, ಕಮೋಡ್‌ ಬಳಿಗೆ ಕರೆದೊಯ್ಯುವುದು ಮುಂತಾದವು. ಜಾರ್ಜ್ ಅವಳಿಗೆ ಆಹಾರ ತಿನ್ನಿಸುವ ಅಥವಾ ಕಮೋಡ್ ನಲ್ಲಿ ಕುಳಿತವಳನ್ನು ಎಬ್ಬಿಸಿ ತರುವುದೂ ಸೇರುತ್ತದೆ. ಆನ್ ಪಡುತ್ತಿರುವ ನೋವು‌, ವೇದನೆ ಮತ್ತು ಅದನ್ನು ಅದು ನಿವಾರಿಸುವುದಕ್ಕೆ ಜಾರ್ಜ್ ಪಡುತ್ತಿರುವ ಶ್ರಮ ಪ್ರೇಕ್ಷಕರನ್ನು ತಟ್ಟುತ್ತದೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಆಸ್ಟ್ರಿಯಾದ ʻಅಮೋರ್ʼ ಚಿತ್ರದ ವಿಶ್ಲೇಷಣೆ

 

ಅದು ಕಾನ್‌ನಲ್ಲಿ ೨೦೧೨ರಲ್ಲಿ ನಡೆದ ಚಿತ್ರೋತ್ಸವ‌. ಅತ್ಯುತ್ತಮ ವಿದೇಶಿ ಚಿತ್ರ ಪ್ರಶಸ್ತಿಗೆ ಸಾಲುಗಟ್ಟಿ ಚಿತ್ರಗಳಿದ್ದವು. ಅದರಲ್ಲಿದ್ದ ಮೈಖೇಲ್‌ ಹೆನಕೆಯ ʻಅಮೋರ್‌ʼಗೆ ಪ್ರಶಸ್ತಿ ಲಭಿಸಿದಾಗ ಬಹಳಷ್ಟು ಜನರ ಬೆರಳು ಮೂಗಿನ ಮೇಲೆ. ಇದು ಅವನನ್ನು ಒಂದಕ್ಕಿಂತ ಹೆಚ್ಚು ಬಾರಿ ಕಾನ್‌ ಪ್ರಶಸ್ತಿ ಗಳಿಸಿದವರ ಸಾಲಿಗೆ ಸೇರಿಸಲು ಕಾರಣವಾಯಿತು. ಈ ಮೊದಲು ಅವನ ʻವೈಟ್‌ ರಿಬ್ಬನ್‌ʼ ಚಿತ್ರಕ್ಕೆ ಈ ಮನ್ನಣೆ ಒದಗಿತ್ತು. ಪ್ರತಿಭಾವಂತನಾದ ಹೆನಕೆಯ ವೃತ್ತಿ ಜೀವನಕ್ಕೆ ಚಲನಚಿತ್ರ ಕ್ಷೇತ್ರ ಮೊದಲನೆಯದಲ್ಲ. ಇದನ್ನು ಪ್ರವೇಶಿಸುವ ಮೊದಲು ರಂಗಭೂಮಿಯಲ್ಲಿ ನಾಟಕಕಾರನಾಗಿ ವೃತ್ತಿಯನ್ನು ಪ್ರಾರಂಭಿಸಿದ್ದ. ಈ ಎರಡಕ್ಕೂ ಸಂಬಂಧವಿಲ್ಲದ ತತ್ವಶಾಸ್ತ್ರ ಮತ್ತು ಮನಃಶಾಸ್ತ್ರವನ್ನು ಕಲಿಯುವ ದಿನಗಳಲ್ಲಿ ಅಭ್ಯಸಿಸಿದ್ದ. ಟೀವಿಯಲ್ಲಿ ದೃಶ್ಯ ಮಾಧ್ಯಮದ ಸಂಗ ಬೆಳೆಸಿಕೊಂಡವನು ತನ್ನಲ್ಲಿ ಆ ಮಾಧ್ಯಮದ ಬಗ್ಗೆ ಸಹಜ ಒಲವು ಮತ್ತು ಸಾಮರ್ಥ್ಯವಿದೆ ಎನ್ನುವ ಭರವಸೆಯಿಂದ ಅದರ ಕಡೆ ಹೊರಳಿದ. ʻಅಮೋರ್‌ʼ ಚಿತ್ರದ ನಿರ್ಮಾಣಕ್ಕೆ ತೆಗೆದುಕೊಂಡ ಅವಧಿ ಸಾಮಾನ್ಯ ಅವಧಿಗಿಂತ ಬಹಳ ಅಧಿಕ. ನಾಲ್ಕು ವರ್ಷಗಳಷ್ಟು ಮತ್ತು ಚಿತ್ರದಲ್ಲಿ ಅಭಿನಯಿಸಿರುವವರು ಪ್ರತಿಭಾಶಾಲಿಗಳೆಂದು ಮಾನ್ಯವಾಗಿದ್ದ ಎಂಭತ್ತರಲ್ಲಿರುವವರು. ಅವರೇ ʻದ ಕನ್‌ಫರ್ಮಿಸ್ಟ್‌ʼ(1970) ಮತ್ತು ʻಎ ಮ್ಯಾನ್‌ ಅಂಡ್‌ ಎ ವುಮನ್‌’ (1966)ಚಿತ್ರಗಳ ನಟ ಟ್ರಿಂಟಿಗ್ನೆಂಟ್‌ ಮತ್ತು ʻಹಿರೋಶಿಮಾ ಮಾನ್‌ ಅಮೋರ್‌ʼ(1959) ಮತ್ತು ʻತೆರೆಸೆʼ(1962) ಚಿತ್ರಗಳಲ್ಲಿ ಅವಿಸ್ಮರಣೀಯ ಅಭಿನಯ ಮಾಡಿದ ಅಭಿನೇತ್ರಿ ಇಮ್ಯಾನ್ಯುಯಲ್‌ ರೀವಾ. ಇಷ್ಟೆಲ್ಲ ಪ್ರತಿಭಾವಂತರ ಸಂಗಮದ ಚಿತ್ರ ವೀಕ್ಷಿಸಲು ಕುಳಿತವರ ಭಾವ ಸಂಚಲನಗಳನ್ನು ಸುಮ್ಮನೆ ಊಹಿಸಬೇಕಷ್ಟೆ.

(ಮೈಖೇಲ್‌ ಹೆನಕೆ)

ಅಮೋರ್‌ ಎಂದರೆ ಪ್ರೇಮ. ಮನುಷ್ಯನ ಮೂಲಭೂತ ಗುಣಗಳಲ್ಲಿ ಒಂದಾದ ʻಪ್ರೇಮʼ ಎನ್ನುವುದನ್ನು ಚಿತ್ರದಲ್ಲಿ ವೃದ್ಧ ದಂಪತಿಗಳಲ್ಲಿ ಅದರ ಗಂಭೀರ ಸ್ವರೂಪದಲ್ಲಿ ಪರಿಕಲ್ಪಿಸಿರುವುದು ವಿಶೇಷ. ಬಾಳ ಸಂಜೆಯಲ್ಲಿರುವ ದಂಪತಿಗಳಲ್ಲಿ ಒಬ್ಬರಿಗೆ ಆರೋಗ್ಯ ಮಿತಿ ಮೀರಿ ಹದಗೆಡುತ್ತಿರುವ ಸಂದರ್ಭದಲ್ಲಿ ಇನ್ನೊಬ್ಬರು ಯಾವ ಮಟ್ಟದ ಕ್ರಮ ಕೈಗೊಳ್ಳಬಹುದು ಎನ್ನುವುದೇ ಈ ʻಅಮೋರ್‌ʼ ನ ಕಥಾವಸ್ತು. ಚಿತ್ರಕ್ಕೆ ರಚಿಸಿದ ಕಥಾಹಂದರವನ್ನು ನಿರೂಪಿಸುವ ನಿರ್ದೇಶಕ ಮೈಖೇಲ್‌ ಹೆನಕೆ ಅದರ ಅಂತ್ಯದಿಂದಲೇ ಪ್ರಾರಂಭಿಸುತ್ತಾನೆ. ಚಿತ್ರದ ಶೀರ್ಷಿಕೆಗಳಿಗಿಂತ ಮುಂಚೆಯೇ ಅದರ ಅಂತ್ಯವನ್ನು ಬಿಚ್ಚಿಡುತ್ತಾನೆ.

ಅದೊಂದು ಭವ್ಯಾಕಾರದ ಮನೆ. ಹೊರಗೆ ಸುತ್ತುವರಿದಿರುವ ಅಗ್ನಿಶಾಮಕ ದಳದವರು ಮತ್ತು ಇಡೀ ವಾತಾವರಣವನ್ನು ಆವರಿಸಿರುವ ದುರ್ವಾಸನೆ. ಅದನ್ನು ಅನಿವಾರ್ಯವಾಗಿ ಸಹಿಸಿಕೊಳ್ಳುತ್ತಲೇ ಮನೆಯ ಬಾಗಿಲುಗಳನ್ನು ಒಡೆಯುತ್ತಾರೆ. ಒಳಗೆ ಹೋಗಿ ನೋಡಿದರೆ ಕಂಡದ್ದೇನು? ಮಂಚದ ಮೇಲೆ ಸತ್ತು ಬಿದ್ದಿರುವ ವಯೋ ವೃದ್ಧ ದಂಪತಿ! ಸತ್ತ ಹೆಂಗಸಿನ ದೇಹದ ಸುತ್ತ ಹರಡಿರುವ ಹೂಗಳು! ಇದರಿಂದ ಚಿತ್ರದ ಕೊನೆಯನ್ನು ಕುರಿತಂತೆ ಗೋಪ್ಯ ಹಾಗೂ ಕುತೂಹಲ ಇತ್ಯಾದಿ ಅಂಶಗಳು ಅಲ್ಲಿಯೇ ಕರಗಿಹೋಗುತ್ತವೆ.

ಸಹಜವಾಗಿಯೇ ಅಲ್ಲಿಂದ ಮುಂದುವರಿಯುವ ನಿರೂಪಣೆ ಅದಕ್ಕೆ ಬೆಂಬಲವಾದ ಚಿತ್ರಕಥೆ, ನಟರ ಅಭಿನಯ, ಛಾಯಾಗ್ರಾಹಕನ ಸಾಮರ್ಥ್ಯ, ಹಿನ್ನೆಲೆ ಸಂಗೀತ, ನಿರ್ದೇಶಕನ ಆಶಯವನ್ನು ಪೂರೈಸುವ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕೆಂದೇ ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯಪಾತ್ರಗಳಿಗೆ ಸಂಪೂರ್ಣ ಹೊಂದಿಕೆಯಾಗುವ ಬಾಳ ಸಂಜೆಯಲ್ಲಿರುವ ಪಾತ್ರಧಾರಿಗಳು ನಿರ್ದೇಶಕರ ಆಶಯವನ್ನು ಪೂರೈಸಲು ಸಹಾಯ ಒದಗಿಸಿದ್ದಾರೆ. ಇದರಿಂದ ಚಿತ್ರ ಹುಟ್ಟಿಸಿದ ನಿರೀಕ್ಷೆಯನ್ನು ಸಮರ್ಥವಾಗಿ ತಲುಪಲು ಸಾಧ್ಯವಾಗಿದೆ.

ಕಥಾಹಂದರ ಚಿತ್ರದಲ್ಲಿ ತೆರೆದುಕೊಳ್ಳುವ ಬಗೆ ತೀರಾ ಸಾಮಾನ್ಯ ರೀತಿಯಲ್ಲಿ. ಎಂಭತ್ತು ದಾಟಿದಂತೆ ಕಾಣುವ ಜಾರ್ಜ್ ಮತ್ತು ಆನ್ ದಂಪತಿ ಆನ್‌ಳ ಶಿಷ್ಯನೊಬ್ಬನ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗಿರುತ್ತಾರೆ. ಸಭಾಂಗಣದಲ್ಲಿ ಕುಳಿತ ಅವರನ್ನು ಮಾತ್ರ ಕಾಣುತ್ತೇವೆ. ಪಿಯಾನೋ ವಾದನವಷ್ಟೇ ಕೇಳಿಸುತ್ತದೆ. ಅವರು ವೇದಿಕೆಯ ಕಡೆ ದೃಷ್ಟಿ ಇರಿಸಿ ವಾದ್ಯ ಸಂಗೀತ ಅನುಭವಿಸುತ್ತಿರುವುದನ್ನು ಕಾಣುತ್ತೇವೆ. ಇದರಿಂದ ನಿರ್ದೇಶಕನಿಗೆ ನಮ್ಮ ಗಮನವೆಲ್ಲ ಅವರಿಬ್ಬರ ಮೇಲಿರುವುದು ಮಾತ್ರ ಮುಖ್ಯವಾಗುತ್ತದೆ. ಕಾರ್ಯಕ್ರಮ ಮುಗಿದ ಮೇಲೆ ಹರ್ಷಚಿತ್ತರಾಗಿ ಪ್ಯಾರಿಸ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟಿಗೆ ಬಂದಾಗಲೇ ಅವರು ಅನಿರೀಕ್ಷಿತದೆದುರು ನಿಂತಿರುತ್ತಾರೆ. ಯಾರೋ ಬೀಗ ಒಡೆಯಲು ಪ್ರಯತ್ನಿಸಿರುವುದನ್ನು ಅವರು ಗಮನಿಸುತ್ತಾರೆ. ಇದು ಅತಿ ಶೀಘ್ರದಲ್ಲಿಯೇ ಅವರ ಜೀವನದಲ್ಲಿ ಬಂದೊದಗುವ ಅತಿ ಹೆಚ್ಚಿನ ಅನಿರೀಕ್ಷಿತವೊಂದರ ಮುನ್ಸೂಚನೆಯಾಗುತ್ತದೆ. ಅನಂತರದ ಕೆಲವೇ ನಿಮಿಷಗಳಲ್ಲಿ ನಿರ್ದೇಶಕ ಚಿತ್ರದ ಮುಖ್ಯ ಸನ್ನಿವೇಶವನ್ನು ತೆರೆದಿಡುತ್ತಾನೆ. ಅನಿರೀಕ್ಷಿತವಾಗಿ ಆನ್ನಾಳ ಆರೋಗ್ಯ ಇದ್ದಕ್ಕಿದ್ದ ಹಾಗೆ ಹದಗೆಟ್ಟು ಬಲಭಾಗದ ಪಾರ್ಶ್ವವಾಯು ಉಂಟಾಗುತ್ತದೆ. ದಂಪತಿಗೆ ದಿಢೀರ್‌ ಆಘಾತ. ಭಾವದುಬ್ಬರಗಳಿಗೆ ಎಣೆಯಿಲ್ಲ. ಪರಿಸ್ಥಿತಿಯನ್ನು ಎದುರಿಸಲೇ ಬೇಕಾದ ಒತ್ತಡ. ಬೇರೆ ದಾರಿಯಿಲ್ಲ, ಅನಿವಾರ್ಯ.

ಆನ್‌ಳ ಶುಶ್ರೂಷೆಗೆ ನರ್ಸ್ ಗಳ ನೇಮಕ ಮಾಡಿಕೊಂಡರೂ ಸಮಾಧಾನ ಸೊನ್ನೆ. ಹಾಗಾಗಿ ಆನ್‌ಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಸ್ವತಃ ಜಾರ್ಜ್ ಕೈಗೊಳ್ಳುತ್ತಾರೆ ಮತ್ತು ಎಡೆಬಿಡದೆ ಅದನ್ನು ಚಾಚೂ ತಪ್ಪದೆ ನಿರ್ವಹಿಸುತ್ತಾರೆ. ಅವರಿಗೊಬ್ಬಳು ಮಗಳು ಜೀವಾ. ಅವಳ ಸಂಸಾರ ಮತ್ತು ಜೀವನದ ದಾರಿ ಬೇರೆ. ಅಮ್ಮನ ಪರಿಸ್ಥಿತಿಯನ್ನು ತಿಳಿದುಕೊಳ್ಳುವುದಕ್ಕೆ ಬರುತ್ತಾಳೆ, ನಿಜ. ಆದರೆ ಅವಳಲ್ಲಿ ಕಾತರ, ಕಳವಳ ಇತ್ಯಾದಿ ಭಾವನೆಗಳು ಹುಟ್ಟುವುದೇ ಇಲ್ಲ. ಎಲ್ಲವೂ ಔಪಚಾರಿಕ. ಈ ವಿಶೇಷತೆಯನ್ನು ಪೂರಕ ಅಭಿನಯ, ಹಿನ್ನೆಲೆಯ ನಿಶ್ಯಬ್ದ ಸಮರ್ಥವಾಗಿ ಮನಗಾಣಿಸುತ್ತದೆ. ಇದೊಂದು ಬಗೆಯಾದರೆ ಅವರಿಂದ ಶಿಕ್ಷಣ ಪಡೆದ ಅಲೆಕ್ಸಾಂಡರ್‌ನದು ಇನ್ನೊಂದು. ಅವನು ಇಡೀ ವಾತಾರಣವನ್ನು ಹಗುರಾಗಿಸಿ, ಮುಖ್ಯವಾಗಿ ಆನ್‌ಳ ಮನಸ್ಸಿಗೆ ಕೊಂಚ ಸಂತೋಷ ಉಂಟುಮಾಡುವನೆಂದು ಜಾರ್ಜರ ನಿರೀಕ್ಷೆ. ಆದರೆ ಅದೂ ಠುಸ್. ಸಂಬಂಧಗಳಿಗೆ ವಿಶ್ವಾಸ, ಪ್ರೇಮದ ಅರ್ಥಪೂರ್ಣ ಬುನಾದಿಯ ಅಭಾವದಿಂದ ಭಾವಸಂಚಲನಗಳಿಗೆ ಅಲ್ಲಿ ಸ್ಥಾನ ಇಲ್ಲ. ಎಲ್ಲವೂ ಬೌಂಡರಿಯಾಚೆ. ಆನ್ ಳಿಗೆ ಯಾವ ಸಹಾಯವೂ ಒದಗುವುದಿಲ್ಲ.

ಚಿತ್ರಕ್ಕೆ ರಚಿಸಿದ ಕಥಾಹಂದರವನ್ನು ನಿರೂಪಿಸುವ ನಿರ್ದೇಶಕ ಮೈಖೇಲ್‌ ಹೆನಕೆ ಅದರ ಅಂತ್ಯದಿಂದಲೇ ಪ್ರಾರಂಭಿಸುತ್ತಾನೆ. ಚಿತ್ರದ ಶೀರ್ಷಿಕೆಗಳಿಗಿಂತ ಮುಂಚೆಯೇ ಅದರ ಅಂತ್ಯವನ್ನು ಬಿಚ್ಚಿಡುತ್ತಾನೆ.

ಅದೊಂದು ದೃಶ್ಯ. ಜಾರ್ಜ್ ಎಷ್ಟೇ ಪ್ರಯತ್ನಿಸಿದರೂ ಹಠಮಾರಿ ಮಗುವಿನಂತೆ ಕುಡಿಯಲು ನೀರು ನಿರಾಕರಿಸುವ ಆಕೆಯ ಮುಖದ ಸಮೀಪ ಚಿತ್ರಿಕೆಗಳು(ಕ್ಲೋಸ್‌ ಶಾಟ್ಸ್‌) ಸಾಕಷ್ಟು ದೀರ್ಘ. ಇದರಲ್ಲಿ ಮುಚ್ಚಿಕೊಂಡಿದ್ದರೂ ಕೊಂಚ ಬಲಕ್ಕೆ ತಿರುಗಿರುವ ಆಕೆ ಬಾಯಿ, ಮುಖದ ನೆರಿಗೆಗಳು ಮತ್ತು ನೀರಿನ ಪೈಪ್ ಒತ್ತುತ್ತಿದ್ದರೂ ತುಟಿಯನ್ನು ತೆರೆಯಲು ಪ್ರಯತ್ನಿಸುವುದು, ಆಕೆಯ ದೊಡ್ಡ ಕಣ್ಣುಗಳು ನಮ್ಮೆದುರಿರುತ್ತವೆ. ಮೊದಲ ಪ್ರಯತ್ನ ಸೋಲು. ಅಷ್ಟೇ ಅಲ್ಲ ಪುನಃ ಸೋಲು. ಜಾರ್ಜ್ ಮತ್ತೆ ಮತ್ತೆ ಪ್ರಯತ್ನಿಸುತ್ತಾನೆ. ಕೊನೆಯಲ್ಲಿ ಬಲವಂತದಿಂದ ಅವನು ಕುಡಿಸಿದ್ದನ್ನು ಆಕೆ ಹೊರಗೆ ಉಗುಳುವ ವರ್ತನೆಯಿಂದ ಬೇಸತ್ತು ಜಾರ್ಜ್ ತಾಳ್ಮೆ ಕಳೆದುಕೊಂಡವನಂತೆ ವರ್ತಿಸುತ್ತಾನೆ. ಜಾರ್ಜ್‌ನಲ್ಲಿ ಮಡುಗಟ್ಟುವ ಕಾಳಜಿ ಮತ್ತು ಹತಾಶ ಭಾವನೆ ಪುಟಿಯುತ್ತದೆ. ಇದರ ಜೊತೆ ನಿಶ್ಯಬ್ದದ ಹಿನ್ನೆಲೆ. ಇವೆಲ್ಲ ನಿರೂಪಿತವಾಗುವ ಕ್ಷಣಗಳು ತೀವ್ರ ಸ್ವರೂಪ ಪಡೆದು ಪ್ರೇಕ್ಷಕರ ಮನಸ್ಸು ಕೊಂಚ ಬಿಗಿತಕ್ಕೆ ಒಳಗಾದರೆ ಆಶ್ಚರ್ಯವಿಲ್ಲ.

ಇಡೀ ಚಿತ್ರದಲ್ಲಿ ಮೊದಲು ಜಾರ್ಜ್ ದಂಪತಿ ಮನೆಯಿಂದ ಹೊರಗೆ ಹೋಗುವುದನ್ನು ತೋರಿಸುವ ಹೊರಗಿನ ದೃಶ್ಯ ಬಿಟ್ಟರೆ ಇನ್ನು ಇರುವುದೆಲ್ಲ ಸುಸಜ್ಜಿತವಾಗಿರುವ ಅವರ ಮನೆಯ ಒಳಗಿನ ದೃಶ್ಯಗಳಷ್ಟೆ. ಆನ್ ತನ್ನ ಸಮಸ್ಯೆಗೆ ಸಂಬಂಧಪಟ್ಟಂತೆ ಒಮ್ಮೆ ಆಸ್ಪತ್ರೆಗೆ ಹೋಗಿ ಬಂದ ನಂತರ ಮತ್ತೆ ತನ್ನನ್ನು ಅಲ್ಲಿಗೆ ಕಳಿಸಬಾರದೆಂದು ಬಯಸುತ್ತಾಳೆ. ಕಾರಣ, ಬದುಕಿಗಿಂತ ಸಾವಿನ ಸಮೀಪವಿರುವಂತೆ ತೋರಿದ ಆಸ್ಪತ್ರೆಯ ವಾತಾವರಣ ಮತ್ತು ಸದಾ ಕಾಲ ಗಂಡ ಜಾರ್ಜ್‌ ತನ್ನ ಜೊತೆ ಹೆಚ್ಚಿಗೆ ಇರಲಾಗದ ಸಂಕಟ ಮತ್ತು ತಮ್ಮ ಮನೆಯಲ್ಲಿಯೇ ಇರಬಹುದೆನ್ನುವ ಇರಾದೆ.

ಆನ್‌ಳ ಆರೋಗ್ಯ ಹೆಚ್ಚು ಸೂಕ್ಷ್ಮವಾಗುವ ಹಂತ ಬೇಗನೇ ತಲುಪಿಬಿಡುತ್ತದೆ. ಚಿತ್ರದ ಬಹುಪಾಲು ಜಾರ್ಜ್‌ ಆನ್‌ಗೆ ಮಾಡುವ ಸೇವಾಕ್ರಿಯೆಗಳನ್ನು ವಿಸ್ತಾರವಾಗಿ ದಾಖಲಿಸುವುದನ್ನು ಮಾತ್ರ ಕಾಣುತ್ತೇವೆ. ತಿನಿಸುವುದು, ಕುಡಿಸುವುದು, ಹಾಸಿಗೆ, ಹೊದಿಕೆ ಸರಿಪಡಿಸುವುದು, ಡೈಪರ್‌ಗಳನ್ನು ಬದಲು ಮಾಡುವುದು, ಕಮೋಡ್‌ ಬಳಿಗೆ ಕರೆದೊಯ್ಯುವುದು ಮುಂತಾದವು. ಜಾರ್ಜ್ ಅವಳಿಗೆ ಆಹಾರ ತಿನ್ನಿಸುವ ಅಥವಾ ಕಮೋಡ್ ನಲ್ಲಿ ಕುಳಿತವಳನ್ನು ಎಬ್ಬಿಸಿ ತರುವುದೂ ಸೇರುತ್ತದೆ. ಆನ್ ಪಡುತ್ತಿರುವ ನೋವು‌, ವೇದನೆ ಮತ್ತು ಅದನ್ನು ಅದು ನಿವಾರಿಸುವುದಕ್ಕೆ ಜಾರ್ಜ್ ಪಡುತ್ತಿರುವ ಶ್ರಮ ಪ್ರೇಕ್ಷಕರನ್ನು ತಟ್ಟುತ್ತದೆ. ಇದರ ಪೂರೈಕೆಗೆ ಪಾತ್ರಗಳ ಅಭಿನಯ ಅದರಲ್ಲಿಯೂ ಬಹಳಷ್ಟು ಬಾರಿ ಸಮೀಪದಲ್ಲಿ ಚಿತ್ರಿಸಿದ ಆಕೆಯ ಅಭಿನಯ ಉದ್ದೇಶಿತ ಭಾವತೀವ್ರತೆಯನ್ನು ಉಂಟುಮಾಡುತ್ತದೆ. ಇದಕ್ಕೆ ಛಾಯಾಗ್ರಾಹಕ ಡಾರಿಸ್ ಕೋನ್ಜಿಯ ಕೊಡುಗೆ ಸಂಪೂರ್ಣ ಸಹಕಾರಿ.. ಕಾಲ ನೂಕಲು ಅವರು ಹುಡುಕಿಕೊಳ್ಳುವ ರೀತಿಯೂ ಚೇತೋಹಾರಿಯಾಗಿವೆ.

ಆನ್ ಗೆ ಸ್ವತಂತ್ರಳಾಗಿರುವ ಅವಕಾಶವೇ ಇಲ್ಲ. ಸುಮ್ಮನೆ ಮಲಗಿರುವುದು. ಇಲ್ಲವೇ ಮೋಟಾರು ಚಾಲಿತ ವೀಲ್ ಚೇರ್ ನಲ್ಲಿ ಕುಳಿತಿರುವುದು. ಕೆಲವೊಮ್ಮೆ ಅದರಲ್ಲಿ ಚಲಿಸುತ್ತಾಳೆ. ವಿಸ್ತಾರವಾದ ಅವರ ಮನೆಯಲ್ಲಿ ಚಲಿಸುವಾಗ ಉದ್ದಗಲದ ಒಳಾಂಗಣ, ಬಾಗಿಲು ಇತ್ಯಾದಿಗಳನ್ನು ಭಾವಸೂಚಕಗಳಂತೆ ಬಳಸುತ್ತಾನೆ ನಿರ್ದೇಶಕ ಹೆನಕೆ.

ಜಾರ್ಜ್ ಹಿಂಬದಿಯ ಪ್ರಖರ ಬೆಳಕಿನಲ್ಲಿ ಸಿಗರೇಟ್ ಸೇದುವುದು. ಆನ್‌ಗೆ ಗೆಲುವಾಗಲೆಂದು ಪಿಯಾನೋ ವಾದ್ಯದ ಮುದ್ರಿಕೆಯನ್ನು ಹಾಕುವುದು ಮುಂತಾದ ಕ್ರಿಯೆಗಳಲ್ಲಿ ತೊಡಗುತ್ತಾನೆ. ಅವುಗಳು ಬಿಂಬಿಸುವ ಭಾವಕ್ಕೆ ಹೊಂದಿಕೊಂಡಂತೆ, ಮಬ್ಬು ಬೆಳಕಿನಲ್ಲಿ ವಿಸ್ತೃತವಾದ ಆಲೋಚನಾ ಭಾವ ಸ್ಫುರಿಸುವ ಜಾರ್ಜ್ ಮತ್ತು ಆನ್‌ರ ಅತಿಸಮೀಪದ ಚಿತ್ರಿಕೆಗಳಿವೆ. ಅನೇಕ ಕಡೆ ನಿಶ್ಯಬ್ದ ಉದ್ದೇಶಿತ ಭಾವವನ್ನು ಪ್ರಕಟಿಸುತ್ತದೆ. ಇವು ಸೂಚಿಸುವುದು ಭವಿಷ್ಯದ ಭಾರಕ್ಕೆ ಒಳಗಾದ ಅವರ ಅಂತರಂಗದ ತಲ್ಲಣವನ್ನು. ಇವೆಲ್ಲವೂ ನಾವು ನಿರೀಕ್ಷಿಸುವುದಕ್ಕೆ ಅನುಸಾರವಾಗಿ ಕರ್ತವ್ಯ ಪೂರೈಸುತ್ತವೆ. ಇದರಿಂದಾಗಿಯೆ ಚಿತ್ರ ಅತ್ಯಂತ ಗಂಭೀರ ಪರಿಗಣನೆಗೆ ಒತ್ತಾಯಿಸುತ್ತದೆ.
ಆನ್ ಳನ್ನು ನೋಡಿಕೊಳ್ಳುವುದಕ್ಕೆ ಎಂದು ಜಾರ್ಜ್ ಮಾಡುವ ದೈನಂದಿನ ಅಗತ್ಯದ ಕೆಲಸಗಳು ಮುಂದುವರಿಯುತ್ತವೆ. ಅವರಿಬ್ಬರ ನಡುವಿನ ಪ್ರೇಮದಾಳವನ್ನು, ವರ್ತಮಾನದ ಪ್ರೇಮಭರಿತ ಬವಣೆಯನ್ನೇ ಮತ್ತೆ ಮತ್ತೆ ವಿಸ್ತೃತ ಬಗೆಯಲ್ಲಿ ನಿರೂಪಿಸಲಾಗಿದೆ. ಅವರ ಅಭಿನಯದಿಂದ ಭಾವನೆಗಳು ಮತ್ತು ಪ್ರೇಕ್ಷಕರಲ್ಲಿ ಯಥಾವತ್ತಾಗಿ ಪ್ರತಿಫಲಿಸುವಂತೆ ಚಿತ್ರಿಕೆಗಳ ಮತ್ತು ಸಂಕಲನ ಒಂದುಗೂಡಿದ ನಿರೂಪಣೆಯಿದೆ. ಇದಲ್ಲದೆ ಬೇರೆ ಯಾವುದೇ ರೀತಿಯ ಕರುಣೆ, ಅನುಕಂಪ ಇತ್ಯಾದಿಗಳು ಸ್ಫುರಿಸುವ ತಂತ್ರ ಎಳ್ಳಷ್ಟೂ ಇಲ್ಲ. ಆ ಬಗೆಯ ಘಟನೆ ಯಾವುದೂ ಸಂಭವಿಸುವುದಿಲ್ಲ.

ಅವಳ ಪರಿಸ್ಥಿತಿ ಮತ್ತಷ್ಟು ಕ್ಷೀಣಿಸುತ್ತದೆ. ಅನುಭವಿಸುವ ವೇದನೆ ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ ಆಕೆಗೆ ಬಿಡುಗಡೆ ಒದಗಿಸುವುದಕ್ಕೆ ಜಾರ್ಜ್ ತಮ್ಮಿಬ್ಬರಿಗೂ ಅನ್ವಯವಾಗುವ ತೀವ್ರ ಸ್ವರೂಪದ ಕಾರ್ಯ ಕೈಗೊಳ್ಳುತ್ತಾರೆ. ಇಡೀ ದೃಶ್ಯದಲ್ಲಿ ಭಾವಾತಿರೇಕವಿಲ್ಲದೆ ಜಾರ್ಜ್ ಗೆ ಅಗತ್ಯವಾದ ಆತಂಕ ಉದ್ವೇಗ ಅಥವಾನಿರ್ಭಾವ ತೀರ ಸಹಜ ಗತಿಯಲ್ಲಿ ವ್ಯಕ್ತವಾಗಿದೆ.

ಜಾರ್ಜ್ ದಿಂಬನ್ನು ಆನ್‌ ಳ ಮುಖದ ಮೇಲಿಟ್ಟು ಒತ್ತಿ ಉಸಿರುಗಟ್ಟಿಸಿ ಸಾಯಿಸುವ ದೃಶ್ಯ ಯಾರಿಗಾದರೂ ಉಸಿರು ಬಿಗಿ ಹಿಡಿಯುವಂತೆ ಮಾಡುತ್ತದೆ. ಆದರೆ ಆ ನಿರ್ಧಾರಕ್ಕೆ ಅವನಲ್ಲಿ ಉಂಟಾಗುವ ಉತ್ಕಟತೆ, ಭಾವತೀವ್ರತೆ ಕನಿಷ್ಠ ಪ್ರಮಾಣದಲ್ಲಿದೆ. ಇದು ಎರಡು ಅಂಶಗಳನ್ನು ಬಿಂಬಿಸುತ್ತದೆ. ಆನ್‌ ಬಗ್ಗೆ ಜಾರ್ಜ್‌ನ ಉತ್ಕಟ ಪ್ರೇಮ ಮತ್ತು ಆನ್‌ಳ ಎಲ್ಲೆ ಮೀರಿದ ವೇದನೆ.

ಚಿತ್ರದಲ್ಲಿ ಎರಡು ಬಾರಿ ಪಾರಿವಾಳವನ್ನು ಒಳಗೊಂಡಂತೆ ದೃಶ್ಯಗಳಿವೆ. ಈ ದೃಶ್ಯಗಳು ಅವನ ಮನಃಸ್ಥಿತಿಯನ್ನು ಬಿಂಬಿಸುವ ರೂಪಕಗಳಾಗುತ್ತವೆ. ಮೊದಲ ಸಲ ತೆರೆದ ಕಿಟಕಿಯ ಉಜ್ವಲ ಬೆಳಕಿನ ಹಿನ್ನೆಲೆಯಲ್ಲಿ ಹಾರಿ ಇಳಿದು, ಕಾರಿಡಾರ್ ನಲ್ಲಿ ಸುತ್ತಾಡುವ ಅದರ ಹಿಂದೆಯೇ ಹೋಗುವಾಗ, ಅದು ಕಿಟಕಿಯಾಚೆ ಹಾರಿ ಹೋಗುವಂತೆ ಮಾಡುವ ಪ್ರಯತ್ನದಲ್ಲಿ ಸಫಲನಾಗುತ್ತಾನೆ ಜಾರ್ಜ್. ಇದು ಅವನಲ್ಲಿ ಅಥವಾ ದಂಪತಿಯಲ್ಲಿ ಉಳಿದಿರುವ ಜೀವನಾಸಕ್ತಿಯನ್ನು ಬಿಂಬಿಸುತ್ತದೆ. ನಂತರ ಎರಡನೆಯ ಬಾರಿ ಮಂದ ಬೆಳಕಿನಲ್ಲಿ ಕಾಣಿಸಿಕೊಳ್ಳುವ ಪಾರಿವಾಳವನ್ನು ಹಿಂಬಾಲಿಸುವ ಕ್ರಿಯೆಯಲ್ಲಿ ಕಿಟಕಿಯನ್ನು ಅದು ಹಾರಿ ಹೋಗದಂತೆ ಮುಚ್ಚಿ, ಹೊದಿಕೆಯಿಂದ ಅದನ್ನು ಆಕ್ರಮಿಸಿ ಕೊನೆಗೊಳಿಸುವಂತೆ ವರ್ತಿಸಿ, ಜೀವನಾಸಕ್ತಿ, ಸಂಪೂರ್ಣ ಕಳೆದುಕೊಂಡವನ ಹಾಗೆ ಕಾಣುತ್ತಾನೆ. ಜೊತೆಗೆ ಇದು ಅವನು ತಮ್ಮ ಜೀವನದ ಬಗ್ಗೆ ತೆಗೆದುಕೊಂಡ ನಿರ್ಧಾರವನ್ನು ಕೂಡ ಪ್ರಕಟಿಸುತ್ತದೆ.

ಯಾವುದೇ ಬಗೆಯ ಪ್ರಮುಖ ಘಟನೆ ಹಾಗೂ ತಿರುವುಗಳಿಲ್ಲದೆ ಅತ್ಯಂತ ಬಿಗಿಬಂಧದ ಸಂಪೂರ್ಣ ಸಫಲ ಚಿತ್ರವನ್ನು ಪ್ರಸ್ತುತಪಡಿಸಿರುವುದಕ್ಕೆ ಮೈಖೇಲ್‌ ಹೆನಕೆಗೆ ಸಂದಿರುವ ಮನ್ನಣೆ ನಿಜಕ್ಕೂ ಅರ್ಥಪೂರ್ಣ.