ಸಾವೆಂಬುದು ನಿರಾಳ ಮೌನಕವಿತೆಯಲ್ಲಿ ಒಬ್ಬ ವ್ಯಕ್ತಿಯ ಸಾವಿನ ನಂತರದ ನೆನಪುಗಳು ಹೇಗೆಲ್ಲ ನಮ್ಮನ್ನು ಕಾಡುತ್ತವೆ, ಇಲ್ಲಿಯ ತದ್ರೂಪ ಚಿತ್ರಣಗಳು ನಮ್ಮ ಮನಸ್ಸನ್ನು ತಟ್ಟುತ್ತವೆ, ಎಚ್ಚರಿಸುತ್ತವೆ. ತಾತ್ತ್ವಿಕತೆಯನ್ನು ಬೋಧಿಸುತ್ತವೆ, ನಶ್ವರತೆಯ ಸಂದೇಶವನ್ನು ಸಾರುತ್ತಾ ನೆನಪೊಂದೇ ಉಳಿಯುವುದು ಎಂಬ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಶ್ರೀಧರರು ರಚಿಸಿದ್ದಾರೆ. `ನಗುವಿನ ಬೀಜಗಳು ಮಾರಾಟಕ್ಕಿವೆ’-ಇತ್ತೀಚೆಗೆ ನಗು ಮಾಯವಾಗುತ್ತಿರುವುದು, ನಕ್ಕರೂ ತಮ್ಮನ್ನು ಅನಾಗರಿಕರೆಂಬರೋ ಎಂಬ ಅಂಜಿಕೆಯಿಂದ ನಗದಿರುವುದು ಒಂದು ಪ್ರತಿಷ್ಠೆಯ ರೀತಿಯಂತೆ ತಿಳಿದಿರುವರು.
ಫಕೀರ ಅವರ “ಬಿತ್ತಿದ ಬೆಂಕಿ” ಕಾವ್ಯ ಸಂಕಲನಕ್ಕೆ ಡಾ.ಮಲರ್ ವಿಳಿ ಬರೆದ ಮುನ್ನುಡಿ

 

ಶ್ರೀಧರ ಬನವಾಸಿ ಸರಳ ಸಜ್ಜನಿಕೆಯ ಸದ್ವಿನಯದಿಂದ ಕೂಡಿದ ಪ್ರತಿಭಾವಂತ ಯುವಕವಿ. ಇವರ ಕಾವ್ಯನಾಮ ಫಕೀರ. ಇವರು ಕವಿಯಾಗಿ, ನಾಟಕಕಾರರಾಗಿ, ಕಥೆಗಾರರಾಗಿ, ಕಾದಂಬರಿಕಾರರಾಗಿ, ಸಂಪಾದಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಜರ್ನಲಿಸಂ ಅಂಡ್ ಮಾಸ್ ಕಮ್ಯೂನಿಕೇಷನ್ಸ್ ವ್ಯಾಸಂಗ ಮಾಡಿದ್ದಾರೆ. ಇವರು ಸಾಹಿತ್ಯ, ಕಲೆ, ದೃಶ್ಯ ಮಾಧ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಅಮ್ಮನ ಆಟೋಗ್ರಾಫ್, ದೇವರ ಜೋಳಿಗೆ, ಬ್ರಿಟಿಷ್ ಬಂಗ್ಲೆ ಕಥಾ ಸಂಕಲನ. ಬೇರು ಕಾದಂಬರಿ, ತಿಗರಿಯ ಹೂಗಳು ಕವನ ಸಂಕಲನ ರಚಿಸಿದ್ದಾರೆ. ಪ್ರಸ್ತುತ ‘ಬಿತ್ತಿದ ಬೆಂಕಿ’ ಎಂಬ ತಮ್ಮ ಎರಡನೇಯ ಕವನ ಸಂಕಲನವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ. ಒಂದು ಗಿಡ ಅಥವಾ ಮರದ ಬೇರು ಕಾಂಡ, ಎಲೆ, ಹೂವು, ಹಣ್ಣುಗಳ ಬೆಳವಣಿಗೆಗಾಗಿ ಸತ್ತ್ವ ನೀಡುತ್ತದೆ. ಆದರೆ ಸಾಮಾನ್ಯವಾಗಿ ಬೇರಿನ ಬಗ್ಗೆ ನಾವು ಯೋಚಿಸುವುದಿಲ್ಲ. ಸಂತಸದ ಸಂಗತಿ ಎಂದರೆ ಇವರ `ಬೇರು’ ಕಾದಂಬರಿಗೆ ಕೇಂದ್ರ-ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸೇರಿದಂತೆ ಕೃತಿಯ ಸತ್ತ್ವವನ್ನು ಅರಸಿ ಒಂಬತ್ತು ಪ್ರಶಸ್ತಿಗಳ ಸುರಿಮಳೆಗರೆದಿರುವುದು ಇವರ ಪ್ರತಿಭೆಗೆ ಸಿಕ್ಕ ಯಶಸ್ಸು ಎಂದರೆ ತಪ್ಪಾಗಲಾರದು.

ಬೆಲೆಯಿಂದ ಅಕ್ಕುಮೇ ಕೃತಿ ಗಾ-
ವಿಲ ಭುವನದ ಭಾಗ್ಯದಿಂದ ಅಕ್ಕುಂ: ನೋಳ್ಪಂ
ಬೆಲೆಗೊಟ್ಟು ತಾರ ಮಧುವಂ
ಮಲಯಾನಿಲನಂ ಮನೋಜನಂ ಕೌಮುದಿಯಂ?

(ಫಕೀರ)

ಈ ಮೇಲಿನ ಸಾಲುಗಳು ನೇಮಿಚಂದ್ರ ವಿರಚಿತ ನೇಮಿನಾಥ ಪುರಾಣದಲ್ಲಿ ಬರುತ್ತದೆ. ಇದು ಸಾರ್ವಕಾಲಿಕ ಸತ್ಯವಲ್ಲವೇ? ನಿಜವಾದ ಕಾವ್ಯ ಸುಮ್ಮನೆ ಸಂಭವಿಸುವುದಿಲ್ಲ. ಆ ನಾಡಿನ ಭಾಗ್ಯವೂ ಸಹ ಇರಬೇಕು. ಹಾಗೆ ಮಧುಮಾಸವನ್ನು, ಮಲಯ ಮಾರುತವನ್ನು, ಮನ್ಮಥ (ಪ್ರೇಮ) ನನ್ನು ಬೆಳದಿಂಗಳನ್ನು ಬೆಲೆಕೊಟ್ಟು ತರಲಾಗದು.

ಕನ್ನಡ ಸಾಹಿತ್ಯದಲ್ಲಿ ಆದಿಕವಿ ಪಂಪನಿಗೆ ಪ್ರಿಯವಾದ ಆತನ ಹುಟ್ಟೂರಾದ ಬನವಾಸಿಯ ನೆಲದಲ್ಲಿ ಹುಟ್ಟಿದ ಯುವಕವಿ ಶ್ರೀಧರ ಬನವಾಸಿ ಎಂಜಿನಿಯರಿಂಗ್ ಓದಿದ್ದರೂ ಆ ಮಣ್ಣಿನ ಸತ್ತ್ವ ಅವರನ್ನು ಸಾಹಿತ್ಯ ಕ್ಷೇತ್ರಕ್ಕೆ ಕರೆದುಕೊಂಡು ಬಂದಿದೆಯೋ ಎಂಬ ಭಾವನೆ ಮೂಡುತ್ತದೆ.

ಈ ಸಂಕಲನದ ಕವಿತೆಗಳನ್ನು ಓದುತ್ತಾ ಹೋದ ಹಾಗೆ ಹಲವು ವಿಚಾರಗಳು ನನ್ನ ಮನದಲ್ಲಿ ಮೂಡಿದವು. ಪ್ರೇಮದ ವಸ್ತುವನ್ನು ಕುರಿತು ರಚಿತಗೊಂಡ ಒಂದು ಹಿಡಿ ಮಣ್ಣು, ಒಲುಮೆಯ ಲೆಕ್ಕಾಚಾರ, ಯೌವ್ವನದ ಸಂಧ್ಯೆಯಲ್ಲಿ, ಸೂರಿಲ್ಲದ ನೆನಪುಗಳು, ಬಯಕೆಯೆಂಬ ಹೊನ್ನ ಕಳಶವು, ಭಾರವಾದ ಹೆಜ್ಜೆಗಳು, ಕಥೆಯಾಗದಿರು ಮುಂತಾದ ಕವಿತೆಗಳಲ್ಲಿನ ಶೃಂಗಾರ, ಪ್ರೇಮ ಪ್ರಸಂಗ, ವಿರಹ ವೇದನೆ, ಕಾತುರ, ನಿರೀಕ್ಷೆ ಇತ್ಯಾದಿಗಳನ್ನು ಓದಿದಾಗ ನನಗೆ ತಮಿಳಿನ ಸಂಗಂ ಸಾಹಿತ್ಯದ ನೆನಪು ಬರುತ್ತದೆ. ಕಾರಣ ಎಲ್ಲ ಕಾಲದ ಕವಿ ಮನಸ್ಸೂ ಹೆಚ್ಚೂ ಕಡಿಮೆ ಒಂದೇ ಬಗೆಯಲ್ಲಿರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಯೌವನದ ಸಂಧ್ಯೆಯಲಿ ಎಂಬ ಕವನದ ಸಾಲುಗಳನ್ನುಉದಾಹರಿಸಬಹುದು.

ಕರಿಮೋಡ ಕರಗುತಲಿತ್ತು
ಮಳೆಯಾಗಿ ಇಳೆ ಸೇರಲು
ಬಿದ್ದ ಮಳೆ ಹನಿ ಮಣ್ಣ ಚುಂಬಿಸಿ
ಅಪ್ಪಿದಂತೆ.

ಸಂಗಂ ಸಾಹಿತ್ಯದ ಹದಿನೆಂಟು ಕೃತಿಗಳಲ್ಲಿ ‘ಕುರುಂದೊಗೈ’ ಎಂಬುದು ಒಂದು ಕೃತಿ. ಆ ಕೃತಿಯ 40ನೇ ಹಾಡು, ಅಪರಿಚಿತ ಹೆಣ್ಣು ಗಂಡಿನ ಒಗ್ಗೂಡುವಿಕೆಯನ್ನು ತಿಳಿಸುತ್ತದೆ. ನಲ್ಲೆಯ ಜೊತೆ ನಲ್ಲನು ರಹಸ್ಯ ಪ್ರಣಯದಲ್ಲಿ ತೊಡಗಿದ್ದವನು. ನಂತರ ತನ್ನನ್ನು ಎಲ್ಲಿ ಬಿಟ್ಟು ಅಗಲಿ ಹೋಗುವನೋ ಎಂಬ ಆತಂಕದಲ್ಲಿ ಮರುಕಪಡುವ ಆಕೆಯನ್ನು ಕಂಡು ನಲ್ಲನು ಹೇಳಿದ ಸಾಂತ್ವನದ ಹಾಡು ಈ ರೀತಿಯಾಗಿದೆ.

“ಯಾಯುಂ ಜ್ಞಾಯುಂ ಯಾರಾಗಿಯರೊ
ಎಂದೈಯುಂ ನುಂದೈಯುಂ ಎಮ್ಮುರೈ ಕೇಳೀರ್
ಯಾನುಂ ನೀಯುಂ ಎವ್ವಳಿ ಅರಿದುಂ
ಸೆಂಬುಲಪ್ಪೆಯ ನೀರ್ ಪೋಲ
ಅನ್ಬುಡೈ ನೆಂಜಂ ತಾಂ ಕಲಂದನವೇ?”

ಅರ್ಥ- ನನ್ನ ತಾಯಿ ಮತ್ತು ನಿನ್ನ ತಾಯಿ ಯಾರೋ? ನನ್ನ ತಂದೆ ಹಾಗೂ ನಿನ್ನ ತಂದೆ ಯಾವ ಬಗೆಯಲಿ ನೆಂಟರೋ? ನಾನೂ ನೀನೂ ಯಾವ ಬಗೆಯಲಿ ಪರಿಚಯವಾದೆವು, ಕೆನ್ನೆಲದಿ ಸುರಿದ ಮಳೆಯ ನೀರು ಬೆರೆತು ಒಂದಾದಂತೆ ಒಲವಿನ ಮನಗಳೆರಡೂ ಬೆರೆತವು. ಮಳೆಯ ನೀರನ್ನು, ಮಣ್ಣನ್ನು ಬೇರ್ಪಡಿಸಲಾಗದ ಕೆನ್ನೀರಾದಂತೆ ಎಲ್ಲೋ ಹುಟ್ಟಿ ಬೆಳೆದ ಎರಡು ಜೀವಗಳು ಪ್ರೇಮ ಬಂಧನಕ್ಕೊಳಗಾಗುವರು ಎಂಬ ಮಾತು. ಈ ಪ್ರಪಂಚ ಸೃಷ್ಟಿಯಾದಾಗಿನಿಂದ ಎಲ್ಲರೂ ಪ್ರೇಮ ಪ್ರಣಯ ಮೋಹಕ್ಕೆ ಸಿಕ್ಕಿ ಹಾಕಿಕೊಳ್ಳುವವರೇ ಹೆಚ್ಚು. ಅದರಿಂದ ಬಿಡಿಸಿಕೊಂಡು ಬರುವುದು ಅಷ್ಟು ಸುಲಭದ ಮಾತಲ್ಲ ಎಂಬುದು ವೇದ್ಯವಾಗುತ್ತದೆ.

ಇಲ್ಲಿಯ ಅನೇಕ ಕವನಗಳಲ್ಲಿ ಪ್ರೇಮ-ಪ್ರಣಯ, ಪ್ರಕೃತಿ, ಕಲೆ, ಪರಿಸರ, ಮಾನವೀಯತೆ, ಮನಸ್ಸು, ಬದುಕಿನ ಬವಣೆ, ಭಗ್ನ ಪ್ರೇಮ, ಭರವಸೆ, ವಿಶ್ವಾಸ, ನೆನಪಿನ ಸುರುಳಿಗಳು, ಸ್ನೇಹ, ಜನರ ಕಪಟತನ, ಸುಳ್ಳು-ಮೋಸ-ವಂಚನೆ, ಪ್ರಾಮಾಣಿಕತನ, ಸಾವು ಮುಂತಾದ ಜೀವನದ ಕಟುವಾಸ್ತವ ಪ್ರಸಂಗಗಳು ಚಿತ್ರಿತವಾಗಿವೆ.

`ಬಿತ್ತಿದ ಬೆಂಕಿ’ ಕವನ ಸಂಕಲನದಲ್ಲಿನ ‘ಕೊನೆ ಎಂದಿಗೋ’ ಎಂಬ ಕವಿತೆ ಇಡೀ ಮನುಕುಲದ ಆತ್ಮ ವಿಡಂಬನೆಯ ಹಾಗೆ ಮೂಡಿಬಂದಿದೆ. ಮನುಷ್ಯನ ಸ್ವಭಾವ, ಮಾನಸಿಕ ತೊಳಲಾಟಗಳು, ನಾವು ಮೋಸಕ್ಕೆ ಗುರಿಯಾಗುವುದು, ನಾವೂ ಸಹ ಕೆಲವೊಮ್ಮೆ ನಂಬಿಕೆ ದ್ರೋಹ ಮಾಡುವುದು, ಆ ಪಾಪಪ್ರಜ್ಞೆ ನಮ್ಮನ್ನು ಸದಾ ಎಚ್ಚರಿಸುವಿಕೆ… ಇತ್ಯಾದಿ.

ಒಬ್ಬ ವ್ಯಕ್ತಿ ಒಂದು ಮಾತು ಮಾತನಾಡಿದರೆ ವಿವೇಚನೆಯಿಂದ ಮಾತನಾಡಬೇಕು. ಒಮ್ಮೊಮ್ಮೆ ವಿವೇಚನೆಯಿಲ್ಲದೆ ಬೆಂಕಿಯಂತೆ ಉಗುಳಿಬಿಡುತ್ತೇವೆ. ಆಡಿದ ಮಾತು, ಬಿಟ್ಟ ಬಾಣ, ಬಿದ್ದ ಮಳೆ, ಕಳೆದ ಸಮಯ ಎಂದಿಗೂ ತಿರುಗಿ ಬರಲಾರದು ಎಂಬ ಕಟುವಾಸ್ತವ ಚಿತ್ರಣದ ಮೂಲಕ ಪ್ರತಿಯೊಬ್ಬ ಮಾನವನ ಮನಸ್ಸನ್ನು ಪಾರದರ್ಶಕವಾಗಿ ತೆರೆದಿಡುತ್ತದೆ. ವಯೋಸಹಜ ಬಯಕೆಗಳಿಂದ ಆಗುವ ಅವಘಡಗಳು, ಈ ಬದುಕಿನ ನಶ್ವರತೆ, ‘ಗುಟ್ಟು’ ಕಾಣದು ‘ಒಳಗಣ್ಣು ತೆರೆಯಬೇಕು’ ಎಂಬ ಆಶಯಗಳನ್ನು ಒಳಗೊಂಡಿದೆ.

‘ನೀ ಬಂಧಿಯಲ್ಲ’ ಕವಿತೆಯಲ್ಲಿ ಶೋಷಣೆ ಮಾಡುವ ವರ್ಗವು ಶೋಷಿತ ವರ್ಗಕ್ಕೆ ಮತ್ತು ಸೋಮಾರಿ ವರ್ಗ, ಶ್ರಮಜೀವಿ ವರ್ಗಕ್ಕೆ ದೌರ್ಜನ್ಯವನ್ನುಂಟು ಮಾಡುತ್ತಿರುವುದನ್ನು ಬಿಂಬಿಸಿದ್ದಾರೆ.

“ಕಟುಕನ ಕತ್ತಿಗೆ ದೇಹ ಯಾವುದಾದರೇನು?
ಎಷ್ಟು ರುಚಿಯಿದ್ದರೇನು? ಕತ್ತಿ ಅನುಭವಿಸಿತೇ? – ಈ ಸಾಲುಗಳು ಸಮಾಜದಲ್ಲಿನ ಶೋಷಿತ ವರ್ಗದವರ ನೋವು ಶ್ರೀಮಂತರಿಗೆ ಅರಿವಾಗÀದು ಎಂಬ ಒಳದನಿಯನ್ನು ತಿಳಿಸುತ್ತವೆ.

`ಸೂರ್ಯನ ಸುತ್ತಲೂ ಕತ್ತಲು’- ಎಂಬ ಕವಿತೆಯಲ್ಲಿ ಮನಸ್ಸಿನ ಮಾಲಿನ್ಯವನ್ನು, ರಾಜಕಾರಣಿಗಳ ದುಷ್ಟತನ ಹಾಗೂ ರೈತರ ಬವಣೆಯನ್ನು, ಸುತ್ತಲಿನ ಲೌಕಿಕ ಜಗತ್ತನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.

“ಹುಲ್ಲಿನಡಿಯಲಿ ಅವಿತು ಕುಳಿತು ತೆವಳುತ್ತಿದ್ದ
ಮಿಡತೆಯ ನೋವಿನ ಸ್ವಗತವು
ಪೊರೆಯ ಬಿಚ್ಚಿ ಮರೆತ ಉರಗಕ್ಕೆ
ಹುತ್ತ ಎಲ್ಲಿ ನೆನಪಾಗುವುದೋ?”
“ರಕ್ತ ಚಿಮ್ಮುವ ಹೃದಯದಲ್ಲಿ/
ಯಾವ ವ್ಯಾಘ್ರವು ಅಡಗಿಹುದೋ?”

ಎಂಬ ವರ್ಣನೆ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. `ಸೂರ್ಯನ ಸುತ್ತಲೂ ಕತ್ತಲು’ ಕವಿತೆಯ ಶೀರ್ಷಿಕೆಯಲ್ಲೇ ಅತ್ಯಂತ ಮೊನಚಾದ ವ್ಯಂಗ್ಯವಿದೆ.

‘ಧರ್ಮದ ಬತ್ತಳಿಕೆ’ ಎಂಬ ಕವಿತೆಯ ಕೆಲವು ಸಾಲುಗಳು ದ.ರಾ. ಬೇಂದ್ರೆ ಅವರ ‘ಚಿಗರಿಕಂಗಳ ಚೆಲುವಿ’ ಕವಿತೆಯ ನೆನಪನ್ನು ತರುತ್ತವೆ. `ಲೋಹದ ಹಕ್ಕಿ’ ಕವಿತೆ ವರ್ಣನೆ ಉಪಮೆ, ರೂಪಕಗಳಿಂದ ಕೂಡಿ ವಿಸ್ಮಯ ಅಚ್ಚರಿಯನ್ನುಂಟು ಮಾಡುತ್ತದೆ. ಕವಿಯು ವಿಮಾನದಲ್ಲಿ ಪಯಣಿಸಿದಾಗ ಉಂಟಾದ ಅನುಭವ ಮನೋಜ್ಞವಾಗಿ ಮೂಡಿಬಂದಿದೆ.

“ಜಗದ ಗಗನ ಕುಸುಮವೆಂಬಂತೆ
ಮುಗಿಲ ಲೋಹದ ಹಕ್ಕಿಯು ಹಾರುತ್ತಿತ್ತು”
-ಹೀಗೆ ಕೆಲವು ಸಾಲುಗಳನ್ನು ಓದಿದಾಗ ನೇಮಿಚಂದ್ರನ ಲೀಲಾವತಿ ಪ್ರಬಂಧಂ ನೆನಪಿಗೆ ಬರುತ್ತದೆ.

“ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿ ಸಂತತಿ
ಇದೇನಳವಗ್ಗಳಮೋ ಕವೀಂದ್ರರಾ”

`ಲೋಹದ ಹಕ್ಕಿ’ ಕವಿತೆಯಲ್ಲೂ ವಿಮಾನವು ಗಗನ ಕುಸುಮವೋ ಅಲ್ಲವೋ… ಎಂಬುದು ತರ್ಕವೆಂಬಂತೆ ಕಂಡರೂ ಕವಿ ಮಾತ್ರ ತನ್ನ ಪ್ರತಿಭೆಯಿಂದ ಅದು ಹೌದು ಎಂಬಂತೆ ಸಾಧ್ಯವಾಗಿಸಿದ್ದಾರೆ. ಈ ಕವಿತೆಯಲ್ಲಿ ವಿವಿಧ ರೀತಿಯ ಹಲವು ವರ್ಣನೆಗಳನ್ನು ರೂಪಕಗಳನ್ನು ಕಾಣಬಹುದಾಗಿದೆ. ಕವಿಯ ವರ್ಣನಾ ಪ್ರತಿಭೆಗೆ ಸಾಕ್ಷಿಯಾಗಿದೆ ಈ ಕವಿತೆ.

ಪ್ರೇಮದ ವಸ್ತುವನ್ನು ಕುರಿತು ರಚಿತಗೊಂಡ ಒಂದು ಹಿಡಿ ಮಣ್ಣು, ಒಲುಮೆಯ ಲೆಕ್ಕಾಚಾರ, ಯೌವ್ವನದ ಸಂಧ್ಯೆಯಲ್ಲಿ, ಸೂರಿಲ್ಲದ ನೆನಪುಗಳು, ಬಯಕೆಯೆಂಬ ಹೊನ್ನ ಕಳಶವು, ಭಾರವಾದ ಹೆಜ್ಜೆಗಳು, ಕಥೆಯಾಗದಿರು ಮುಂತಾದ ಕವಿತೆಗಳಲ್ಲಿನ ಶೃಂಗಾರ, ಪ್ರೇಮ ಪ್ರಸಂಗ, ವಿರಹ ವೇದನೆ, ಕಾತುರ, ನಿರೀಕ್ಷೆ ಇತ್ಯಾದಿಗಳನ್ನು ಓದಿದಾಗ ನನಗೆ ತಮಿಳಿನ ಸಂಗಂ ಸಾಹಿತ್ಯದ ನೆನಪು ಬರುತ್ತದೆ. 

‘ಸಾವೆಂಬುದು ನಿರಾಳ ಮೌನ’ ಕವಿತೆಯಲ್ಲಿ ಒಬ್ಬ ವ್ಯಕ್ತಿಯ ಸಾವಿನ ನಂತರದ ನೆನಪುಗಳು ಹೇಗೆಲ್ಲ ನಮ್ಮನ್ನು ಕಾಡುತ್ತವೆ, ಇಲ್ಲಿಯ ತದ್ರೂಪ ಚಿತ್ರಣಗಳು ನಮ್ಮ ಮನಸ್ಸನ್ನು ತಟ್ಟುತ್ತವೆ, ಎಚ್ಚರಿಸುತ್ತವೆ. ತಾತ್ತ್ವಿಕತೆಯನ್ನು ಬೋಧಿಸುತ್ತವೆ, ನಶ್ವರತೆಯ ಸಂದೇಶವನ್ನು ಸಾರುತ್ತಾ ನೆನಪೊಂದೇ ಉಳಿಯುವುದು ಎಂಬ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಶ್ರೀಧರರು ರಚಿಸಿದ್ದಾರೆ.

`ನಗುವಿನ ಬೀಜಗಳು ಮಾರಾಟಕ್ಕಿವೆ’-ಇತ್ತೀಚೆಗೆ ನಗು ಮಾಯವಾಗುತ್ತಿರುವುದು, ನಕ್ಕರೂ ತಮ್ಮನ್ನು ಅನಾಗರಿಕರೆಂಬರೋ ಎಂಬ ಅಂಜಿಕೆಯಿಂದ ನಗದಿರುವುದು ಒಂದು ಪ್ರತಿಷ್ಠೆಯ ರೀತಿಯಂತೆ ತಿಳಿದಿರುವರು. ಆದರೆ ಸಹಜ ನಗುವನ್ನು ಮತ್ತೊಬ್ಬರನ್ನು ಅವಮಾನಿಸಲು ಅಪಹಾಸ್ಯ ಮಾಡಲು ಬಳಸಬಾರದು, ಹಿತಮಿತವಾಗಿ ಬಳಸಬೇಕು ಎಂಬುದೂ ಸಹ ವೇದ್ಯವಾಗುತ್ತದೆ. ನಮ್ಮ ಸ್ವಭಾವ, ಸಂಸ್ಕøತಿ ದೇಸಿತನವನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ತಿಳಿಸುತ್ತದೆ.

‘ಕನ್ನಡ ಕುಮಾರ ಮತ್ತು ತಮಿಳು ಸೆಲ್ವಿಯ ಕತೆಯು’ ಒಂದು ವಿಶಿಷ್ಟ ಕವಿತೆಯಾಗಿ ಮಿರುಗುತ್ತದೆ. ಕಥೆಗಾರನ ಪಾತ್ರವಾಗಿ ಬಂದ ಅತಿಥಿಗಳಿಗೆ ಗೌರವವನ್ನು ನೀಡುತ್ತಾ ಹೊಸ ಪಾತ್ರಗಳ ಅವತರಣವಾಗುವಿಕೆಗೆ ನಿರೀಕ್ಷಿಸುತ್ತಿರುವ ಕವಿ ಮನಸ್ಸು ಒಳಗಿನ ತೊಳಲಾಟಗಳನ್ನು ಹೇಳಿಕೊಳ್ಳಲಾಗದೇ ತಾನೇ ಸೃಷ್ಟಿಸಿದ ಪಾತ್ರಗಳ ಜೊತೆ ಮುಖಾಮುಖಿಯಾಗುವ ಸಂದರ್ಭವನ್ನು ಎದುರಿಸುತ್ತದೆ. ಈ ಒಂದು ಕವಿತೆಯು ಡಾ. ಚಂದ್ರಶೇಖರ ಕಂಬಾರರು ರಚಿಸಿರುವ `ನನ್ನ ಪಾತ್ರ’ ಎಂಬ ಕವಿತೆಯನ್ನು ನೆನಪಿಸುತ್ತದೆ.

“ಆಕಳು ತಾನಾಗೇ ಹಾಲು ಕೊಟ್ಟರೆ ಕುಡಿದವರಿಗೆ ಅಮೃತ
ಹಿಂಡಿಸಿಕೊಳ್ಳದೆ ಹಾಗೇ ಇಟ್ಟುಕೊಂಡರೆ ಅದಕೆ ವಿಷ.”

ಈ ಮೇಲಿನ ಸಾಲು ಅಗಾಧ, ಅನನ್ಯ ಅರ್ಥವನ್ನು ಹೊಳೆಯಿಸುವಂತಹದ್ದು. ಕಾವ್ಯದ ಕೊನೆಯಲ್ಲಿನ ಮಾರ್ಮಿಕ ಸಂದೇಶವೇನೆಂದರೆ ಓತಪ್ರೋತವಾಗಿ ಬರುವ ಸತ್ವಶಾಲಿ ಕಥೆ ಕವನಗಳನ್ನು ಮೆಚ್ಚಿ ಪ್ರೋತ್ಸಾಹಿಸಬೇಕೇ ಹೊರತು ತೆಗಳಿ ಎಳೆ ಪ್ರತಿಭೆಯನ್ನು ಚಿವುಟಿ ಹಾಕಬಾರದು ಎಂಬ ಸಂದೇಶವನ್ನು ತಿಳಿಸುವಂತಿದೆ.

‘ರಕ್ತ ಕಹಳೆಯ ಕತೆಯು’ ಎಂಬ ಕವನದಲ್ಲಿ ಜೀವನವೆಂಬುದೇ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಅದು ಸಾವಿನ ವಿಕಟಚಕ್ರದಲ್ಲಿ ತೊಳಲಾಡುತ್ತಿದೆ. ಕೊನೆಯ ಪಂಕ್ತಿಗಳಂತೂ ಹಿಂಸೆಯನ್ನು ವಿರೋಧಿಸುತ್ತಾ ಮೂಢನಂಬಿಕೆಯನ್ನು ಅಪಹಾಸ್ಯ ಮಾಡಿ ಸಮಾಜವನ್ನು ಎಚ್ಚರಿಸುವ ನಿಟ್ಟಿನಲ್ಲಿ ಸಾಗುತ್ತಾ ಮಾಸ್ತಿಯವರ `ಕಲ್ಮಾಡಿಯ ಕೋಣ’ ಕಥೆಯ ನೆನಪನ್ನು ತಾರದಿರದು.

‘ಗೆಳತಿಗೆ ಪೋಣಿಸಿದ ಮುತ್ತುಗಳು’ ಶೀರ್ಷಿಕೆಯಲ್ಲಿ ಬಂದಂತಹ ಪುಟ್ಟ ಪುಟ್ಟ ಕವಿತೆಗಳು ಶೃಂಗಾರ, ಜಿಜ್ಞಾಸೆ, ಅಸಮಾಧಾನ, ಸದಾಶೆ, ಜೀವನ ಪ್ರೀತಿಯ ಕಾವ್ಯರೂಪಕದಂತೆ ಕಾಣುತ್ತವೆ. ಅತ್ಯಂತ ಮನೋಜ್ಞವಾಗಿವೆ. ಈ ಕವಿತೆಯ ಮೊದಲ ಪಂಕ್ತಿಯೇ ಆಶಾವಾದ ಹಾಗೂ ಸ್ವಾಭಿಮಾನದ ಉತ್ತುಂಗವನ್ನು ಸಾರುತ್ತಾ ಉತ್ಕøಷ್ಟಕವಿ ಎಂಬುದಕ್ಕೆ ದ್ಯೋತಕವಾಗಿ ಪರಿಣಮಿಸಿದೆ.

“ಗೆಳತಿ
ಹೆಬ್ಬಂಡೆಯ ಮೇಲೆ ಹುಟ್ಟಿದವನು
ಬಾಯಾರಿಕೆಗೆ ಹೆದರುವನೇ …”

ಈ ಸಾಲುಗಳನ್ನು ಓದಿದಾಗ ತಮಿಳಿನ ಕವಿ ವೈರಮುತ್ತುರವರು ತಮ್ಮ ಸಂದರ್ಶನದಲ್ಲಿ ಒಂದು ಮಾತನ್ನು ಹೇಳಿದ್ದು ನೆನಪಿಗೆ ಬರುತ್ತಿದೆ. ಅವರ ಬಾಲ್ಯಾವಸ್ಥೆ ಹೇಗಿತ್ತು? ಹೇಗೆ ಈ ಮಹತ್ತರ ಬೆಳವಣಿಗೆಯನ್ನು ಸಾಧಿಸಿದಿರಿ ಎಂಬ ಸಂದರ್ಶಕರ ಪ್ರಶ್ನೆಗೆ ಬಂಡೆಯನ್ನು ಸೀಳಿಕೊಂಡು ಮೊಳಕೆಯೊಡೆದ ಬೀಜದಂತೆ ಕಷ್ಟಪಟ್ಟು ಮುಂದೆ ಬಂದೆ ಎಂದು ನುಡಿದ ನುಡಿ ನೆನಪಿಗೆ ತರುತ್ತದೆ.

`ಮಸಣದ ದಾರಿಯು’-ಮನುಷ್ಯನಿಗೆ ಆಸೆ ಇರಬೇಕು ನಿಜ. ಆತನ ದುರಾಸೆಯ ಚಿತ್ರಣವನ್ನು ಕವಿ ಇಲ್ಲಿ ನೀಡುತ್ತಾ ಹುಟ್ಟು- ಮಸಣದ ನಡುವೆ ನಾವು ಹಣದ ದಾಹಕ್ಕೆ ಮಾರುಹೋಗಿ ಭ್ರಷ್ಟಾಚಾರದಲ್ಲಿ ತೊಡಗಿ ಅಮಾಯಕ ಜನತೆಯನ್ನು ಶೋಷಿಸಿ ದೌರ್ಜನ್ಯವನ್ನುಂಟು ಮಾಡಿದರೂ ಸಹ ಯಾರೂ ಇಲ್ಲಿ ಶಾಶ್ವತವಾಗಿ ಉಳಿಯಲಾರೆವು, ಎಲ್ಲರೂ ಮಸಣದ ಬಳಿಗೇ ಹೋಗಬೇಕು ಎಂಬುದನ್ನು ಪುಟ್ಟ ಕವಿತೆಯ ಮೂಲಕ ಮನದಟ್ಟು ಮಾಡಿದ್ದಾರೆ.

ಪರಿಸರದ ಬಗೆಗಿನ ಕಾಳಜಿಯ ಕುರಿತು ‘ಗಣಿ ರಕ್ತದ ಮಡಿಲು’ ಕವಿತೆ ತಿಳಿಸುತ್ತದೆ. ‘ಬಿತ್ತಿ ಬೆಳೆದವರು’ ಕವಿತೆಯಲ್ಲಿ ನಗರೀಕರಣ ಕೈಗಾರಿಕೀಕರಣ, ಜಾಗತೀಕರಣ ನಾಗಾಲೋಟದಿಂದ ಬೆಳೆಯುವ ಈ ನಗರದ ಬೆಳವಣಿಗೆಯು, ಬೆಳೆಯುತ್ತಿದ್ದ ಹೊಲಗದ್ದೆಗಳನ್ನೆಲ್ಲ ಕಾಂಕ್ರೀಟ್ ಕಾಡುಗಳನ್ನಾಗಿ ಮಾಡಿದ ಮನುಷ್ಯ ಮತ್ತೆ ಹಳ್ಳಿಯ ಜೀವನದ ಕಡೆಗಿನ ಬಯಕೆಯನ್ನು ಉಳಿಸಿಕೊಳ್ಳಬೇಕು ಎಂಬ ಆತಂಕ ಹಾಗೂ ಕವಿಯ ಮನೋಭಿಲಾಷೆಯನ್ನು ತಿಳಿಸುತ್ತದೆ.
“ಬಿತ್ತಿದ ಮಣ್ಣು ನೇಗಿಲಯೋಗಿಗಾಗಿ ಕಾಯುತ್ತಿರಲು” ಎಂಬುದರಲ್ಲಿ ವ್ಯಕ್ತವಾಗುತ್ತದೆ.

‘ಮನಸು ಮಾಯಾರೂಪ’ ಒಗಟಿನ ಕವಿತೆಯಾಗಿ ರೂಪು ತಾಳಿದೆ.

‘ಮೂಕಸಾಕ್ಷಿ’ ವಿವಿಧ ಸ್ವಭಾವಗಳ ಜನರ ನಡುವಿನ ಅನುಭವ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಇರುತ್ತದೆ. ಕಾದಂಬರಿಯಲ್ಲಿ ಕೆಲವು ಪಾತ್ರಗಳ ಮನೋಭಿಲಾಷೆಯನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ.

‘ಕಾರಣವು ಬೇಕಿಲ್ಲ’ ಎಂಬ ಕವಿತೆಯಲ್ಲಿ ಮನುಷ್ಯನ ಅಸಹಾಯಕತೆ ನೋವು ಸಂಕಟ, ಸೋಲು, ಅವಮಾನ, ಮನದ ಬೇಗುದಿ, ತಳಮಳ ಬಯಕೆ, ಸಾಧನೆಯ ಮಾರ್ಗ, ವಿಶ್ವಾಸ, ನಂಬಿಕೆ, ಭರವಸೆ, ಗುರಿ ಇವೆಲ್ಲದರ ಯಥಾವತ್ತಾದ ಚಿತ್ರಣವಿದೆ.

ಪ್ರತಿಯೊಬ್ಬರಿಗೂ ಹುಟ್ಟಿನಿಂದಲೇ ಹೋರಾಟದ ಬದುಕಾದರೂ ಸಹ ದುಃಖ ನದಿಯಂತೆ ಹರಿಯುತ್ತಿರುತ್ತದೆ. ನಂಬಿಕೆ, ಭರವಸೆ ಹಾದಿಯ ನಾಳೆಗಳೆಂಬ ಸಿಹಿ ಸಾಗರವ ಸೇರುವ ಕ್ಷಣದವರೆಗೂ…

‘ಹೆಣ್ಣೊಬ್ಬಳು’ ಕವಿತೆಯಲ್ಲಿ ಹೆಣ್ಣು ತಾಯಿಯಾಗಿ, ಭೂತಾಯಿಯಾಗಿ, ದೈವತ್ವದ ರೂಪಕವಾಗಿ ಕಾಣುವುದಲ್ಲದೇ, ಅದರ ಅರ್ಥ ಇನ್ನೂ ವಿಸ್ತಾರವಾಗುತ್ತಾ ಹೆಣ್ಣಿನ ಬಗೆಗಿನ ವಿಸ್ಮಯತೆಯು ಇನ್ನಷ್ಟು ಅರ್ಥವನ್ನು ಪಡೆಯುತ್ತಾ ಹೋಗುತ್ತದೆ. ಹೆಣ್ಣು ಎಂಬುವವಳು ಬರೀ ಹೆಣ್ಣಲ್ಲ; ಆಕೆ ಇನ್ನೂ ಬೇರೆನೋ ಆಗಿದ್ದಾಳೆ ಎಂಬ ಅಧ್ಯಾತ್ಮದ ಒಳಸುಳಿಯನ್ನು ಕವಿತೆಯು ತಿಳಿಸುತ್ತದೆ.

‘ದೀಪ ಹಚ್ಚಿದವರಾರು?’ ಕವಿತೆಯಲ್ಲಿ ಯಾವುದೋ ಒಂದು ಕಾಣದ ಶಕ್ತಿ ಉಂಟು. ಆ ಶಕ್ತಿಯೇ ನಮ್ಮೆಲ್ಲರನ್ನೂ ಮುನ್ನಡೆಸುತ್ತಿದೆ. ಒಳಗಿನ ಅಂತಃಶಕ್ತಿಯನ್ನು ಅರಿಯುವ ಮರ್ಮವ ಕುರಿತಾದ ಕವಿತೆಯಾಗಿದೆ.

ವ್ಯಕ್ತಿಚಿತ್ರವನ್ನು ತಿಳಿಸುವ ಕವಿತೆಗಳಾದ ‘ತ್ಯಾಗ ಮತ್ತು ವೈರಾಗ್ಯ’, ಶತಾಯುಷಿ ಶಿವಕುಮಾರ ಸ್ವಾಮೀಜಿ ಅವರ ಕುರಿತಾದ `ಸಿದ್ಧಗಂಗೆಯ ಯುಗಪುರುಷ’, ಸ್ವಾಮಿ ವಿವೇಕಾನಂದರ ಕುರಿತಾದ `ವೀರವೇದಾಂತಿಯು’, ಮೀರಾ ಮತ್ತು ಕೃಷ್ಣನ ಭಕ್ತಿ ಕಾವ್ಯವು ಯೇಸುವಿನ ಬದುಕು ಕಾವ್ಯವು, ವೃಕ್ಷಮಾತೆ ಕವಿತೆಯಲ್ಲಿ ಸಾಲುಮರದ ತಿಮ್ಮಕ್ಕನ ಜೀವನ- ಹೀಗೆ ಇಂತಹ ಹಲವು ವಿಶಿಷ್ಟ ಕವಿತೆಗಳು ಬೇರೆಯದ್ದೇ ಹಾದಿಯಲ್ಲಿ ಆದರ್ಶ ಹಾಗೂ ದೈವಿಕ ನೆಲೆಯನ್ನು ಕಟ್ಟಿಕೊಡುವಂತಹ ಕವಿತೆಗಳಾಗಿವೆ.

‘ಮುಳ್ಳಿನ ಬಲೆ’-ಇಡೀ ಕವನವು ಕಾವಿಯ ಒಳಗೆ ಬಂಧಿಸುವ ಒಂಬತ್ತು ಮಂದಿಗಳಿಂದ ಒಬ್ಬ ಸಂನ್ಯಾಸಿ ಮಾಡುವ ತಪ್ಪು, ಅದರಿಂದಾಗುವ ಅವಘಡ, ಅದನ್ನು ಆತ ಎದುರಿಸುವ ಬಗೆ. ಹೀಗೆ ಅವನ ಬದುಕಿನಲ್ಲಿ ಅನೇಕ ಊಹಾಪೋಹಗಳಿದ್ದರೂ ಸಹ ಸತ್ಯ ಅಡಗಿರುವುದು ಎಲ್ಲಿ? ಎಂಬ ಪ್ರಶ್ನೆ ಬಂದಾಗ, ಸತ್ಯ ಗೊತ್ತಿರುವುದು ಸನ್ಯಾಸಿಯ ಏಕಾಂತಕೋಣೆ ಮತ್ತು ಉಟ್ಟ ಕಾವಿಬಟ್ಟೆಗೆ ಮಾತ್ರ ಎಂಬ ಮಾತಿನಲ್ಲಿ ಕವಿತೆಯ ಸತ್ತ್ವ ಅಡಗಿದೆ.

‘ಕಲಾಕುಂಜದ ಸಂತೆಯಲ್ಲಿ’ ಎಂಬ ಕವನವು ನಾವೇ ಸ್ವತಃ ಚಿತ್ರಸಂತೆಗೆ ಹೋದಾಗ ಉಂಟಾದ ಅನಿಸಿಕೆ, ಅನುಭವ ಈ ಕವಿಗೆ ಹೇಗೆ ಗೊತ್ತು? ಎಂಬ ಅಚ್ಚರಿ ಮೂಡುವಂತಹ ಚಿತ್ರಣ ಹಾಗೂ ಅದರಲ್ಲಿ ಲೌಕಿಕ ಜಗತ್ತಿನ ಎಲ್ಲ ಮನದ ವ್ಯಾಪಾರವನ್ನು ಆಗು-ಹೋಗುಗಳನ್ನು ತಿಳಿಸುತ್ತಾ ಜನಪ್ರಿಯ ಕಲಾವಿದರನ್ನು ಗೌರವಿಸುವ ಹಾಗೂ ಎಲೆಮರೆಯ ಕಾಯಿಯಂತಿರುವ ಪ್ರತಿಭಾವಂತರನ್ನು ನಿರ್ಲಕ್ಷಿಸುವ ಬಗೆ-‘ಕಲಾವಿದನ ಕಣ್ಣೀರು ಬಣ್ಣದಲಿ ಸೇರಿಕೊಂಡಿದೆ’/ ‘ಅಳಿದುಳಿದ ಚಿತ್ರಗಳು ಸೋತಂತೆ ಕಾಣಲಿಲ್ಲ / ಇನ್ನೊಮ್ಮೆ ಕಲಾರಸಿಕರ ಎದೆಯೊಳಗೆ ನುಗ್ಗುವ ತವಕದಲ್ಲಿದ್ದಂತೆ’ ನಿರ್ಜೀವ ಚಿತ್ರಗಳು ಸಹ ಬದುಕುಳಿಯಲು ತಾಳ್ಮೆಯಿಂದ ಮರಳಿ ಪ್ರಯತ್ನಿಸುವ ರೀತಿ ನೋಡಿದರೆ ಕವಿ ತನ್ನ ಕಾವ್ಯ ಪ್ರತಿಭೆಯ ಉತ್ತುಂಗವನ್ನು ಮುಟ್ಟಿದ್ದಾರೆ ಎಂದು ಅನಿಸುತ್ತದೆ. ಈ ಕವಿತೆಯ ಕೆಲವು ಸಾಲುಗಳು ಕೆಳಕಂಡಂತೆ;

(ಡಾ.ಮಲರ್ ವಿಳಿ)

“ಸಂತೆಯಲಿ ಎಲ್ಲಾ ಚಿತ್ರಗಳು ಕಣ್ಣಿಗೆ ಬೀಳುವವು
ಕೆಲವು ಜಾಗ ಸಿಗದೆ ಸಂದಿಗೊಂದಿಯಲಿ
ಅವಿತು ಕಣ್ಣರಳಿಸಿ ಜನರತ್ತ ನೋಡುವಂತೆ
ಸೆರೆಮನೆಯ ಸರಳಿನಲ್ಲಿ ಕದ್ದು ನೋಡುವಂತೆ
ಚಿತ್ರಪ್ರಿಯರಿಗೆ ಭಾಸವಾಗುವಂತೆ”

ಸಂಕಲನದ ಕೊನೆಯಲ್ಲಿ ಬರುವ ಕವಿತೆಗಳಾದ ಬಡವನ ನೊಗದಾಗ ನೂರೆಂಟು ಭಾರ ಮತ್ತು ಮುತ್ತೈದೆಯ ಮೂಗುತಿ ಜನಪದೀಯ ಶೈಲಿಯ ರಚನೆಯ ಕವನಗಳಾಗಿವೆ.

ಕೊನೆಯದಾಗಿ, ಈ ಸಂಕಲನದ ಎಲ್ಲ ಕವಿತೆಗಳನ್ನು ಓದಿದ ಮೇಲೆ, `ಫಕೀರ’ ಅಂಕಿತನಾಮದ ಶ್ರೀಧರ ಬನವಾಸಿ ಅವರ ಬರವಣಿಗೆಯಲ್ಲಿ ವಸ್ತುನಿಷ್ಠ ಚಿಂತನೆಯನ್ನು ಕಾಣಬಹುದು. ಕಾವ್ಯಪ್ರೀತಿಯೊಂದಿಗೆ ಸಾಮ ಮಾರ್ಗದ ಮೂಲಕ ಮನುಷ್ಯ ಬದುಕಿಗೂ ಸಮಾಜಕ್ಕೂ ಸ್ವಾಸ್ಥ್ಯ ತರುವ ವಿವೇಕ ತುಂಬಿದ್ದರೂ ಎಲ್ಲಿಯೂ ಕ್ರಾಂತಿಕಾರಕ ನುಡಿಗಳಿಲ್ಲದ ರೀತಿಯನ್ನು ಕಾಣಬಹುದು. ಅಂತಹ ಸಹಜತೆಯನ್ನು ಅವರು ಉಳಿಸಿಕೊಂಡಿದ್ದಾರೆ.

`ಬಿತ್ತಿದ ಬೆಂಕಿ’ ಕವನ ಸಂಕಲನದಲ್ಲಿ ಮನುಷ್ಯನ ಸ್ವಾರ್ಥ, ಮೋಸ-ವಂಚನೆ, ಭ್ರಷ್ಟಾಚಾರ ಇತ್ಯಾದಿಗಳ ಬಗೆಗಿನ ಅಸಹನೆಯನ್ನು ಪ್ರಿಯಸತ್ಯ ನುಡಿಗಳ ಶೈಲಿಯಲ್ಲಿ ನಿರೂಪಿಸುತ್ತದೆ. ಮನುಷ್ಯರು ನಿಜದ ನೆಲೆಯತ್ತ ಸಾಗಬೇಕೆಂಬ ಆಶಯವೇ ಈ ಕವಿಯ ಮಹದಾಸೆಯಾಗಿದೆ.

ಇಲ್ಲಿ ಕವಿ ತನ್ನ ಸುತ್ತಲಿನ ವಿದ್ಯಮಾನಗಳನ್ನು ಅವಲೋಕಿಸುವ ರೀತಿ ಅದರ ಬಗ್ಗೆ ತಾಳುವ ನಿಲುವು, ಅಂತರ್ದೃಷ್ಟಿ, ವಿಶಿಷ್ಟ ಆಲೋಚನಾಕ್ರಮ ಢಾಳಾಗಿ ಕಾಣುತ್ತದೆ ಹಾಗೂ ಕಾವ್ಯ ರಸಿಕರಿಗೆ ಚಿಂತಿಸಲು ಪ್ರೇರೇಪಿಸುತ್ತದೆ. ಅವು ಸಹೃದಯರ ಹೃದಯವನ್ನು ತಟ್ಟುತ್ತವೆ. ಅರಿತಿರುವ ಅಧ್ಯಾತ್ಮವು ಕವಿತೆಗಳಲ್ಲಿ ಬಹುಮುಖ್ಯವಾಗಿ ಕಾಣುತ್ತದೆ.

ಶ್ರೀಧರ ಬನವಾಸಿಯವರ ಅನೇಕ ಕವನಗಳು ಅದು ಪ್ರೇಮವಿರಲಿ, ಪರಿಸರ ಪ್ರಜ್ಞೆಯಾಗಲಿ, ರಾಜಕೀಯವಾಗಲಿ ಸಮಾಜದ ಒಳಿತಿಗಾಗಿ ಪ್ರಾಮಾಣಿಕತನ ಸತ್ಯ, ಪ್ರೀತಿ ಹಾಗೂ ಒಳಿತಿನ ದಾರಿಯಲ್ಲಿ ಸಾಗಬೇಕು ಎಂಬುದನ್ನು ಸಾರುತ್ತವೆ.

ಓದುಗರ ಮನದ ಒಳದನಿಯಾಗಿ ಇವರ ಕವಿತೆಗಳು ಪುಟಿದೇಳುತ್ತವೆ. ದೈನಂದಿನ ಬದುಕನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಿ ಸಾಮಾಜಿಕ ಕಾಳಜಿಯಿಂದಲೇ ಬರೆದಿರುವುದು ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಭವಿಷ್ಯದಲ್ಲಿ ಉತ್ತಮೋತ್ತಮ ಕವನ ಸಂಕಲನಗಳನ್ನು ಕನ್ನಡ ಕಾವ್ಯ ಕ್ಷೇತ್ರಕ್ಕೆ ನೀಡಲಿ ಎಂದು ಶುಭ ಹಾರೈಸುತ್ತೇನೆ.