ರೂಡಿ ಯಾರು, ಏನು, ಎತ್ತ ಎಂಬುವುದು ಗೊತ್ತೇ ಇರದಿದ್ದರೂ ಯಾವುದೋ ಅಸಹಾಯಕತೆಯೊಂದು ಅವನನ್ನು ಇನ್ನಿಲ್ಲದಂತೆ ಕಾಡುತ್ತಿದೆ ಎಂದು ಅವಳಿಗೆ ಆಗಾಗ ಅನ್ನಿಸುತ್ತಿತ್ತು. ಪ್ರತಿ ಬೆಳಗೂ ‘ಈವತ್ತು ಹೇಗಾದರೂ ಸರಿ, ಅವನನ್ನು ಕೇಳಲೇಬೇಕು’ ಎಂಬ ಪ್ರತಿಜ್ಞೆಯೊಂದಿಗೆ ಹಾಸಿಗೆಯಿಂದ ಏಳುತ್ತಿದ್ದಳು. ಆದರೆ ಹಾಗೆ ಕೇಳಬೇಕೆಂದು ಹೊರಟಾಗೆಲ್ಲಾ ಗಂಟಲಲ್ಲಿ ಒಂದು ಮುಳ್ಳು ಸಿಕ್ಕಿಹಾಕಿಕೊಂಡಂತಾಗಿ ಕೇಳಲಾಗದೆ ಇದ್ದುಬಿಡುತ್ತಿದ್ದಳು. ಹೋಗಲಿ, ತಾನು‌ ನಲವತ್ತರ ಹೊಸ್ತಿಲು ದಾಟಿದವಳು, ಹದಿನಾರು ವರ್ಷದ ಮಗ ತನಗಿದ್ದಾನೆ ಎಂದು ಹೇಳಿಕೊಳ್ಳಬೇಕು ಅಂದುಕೊಂಡಾಗಲೂ ಇದೇ‌ ಮುಳ್ಳು ಗಂಟಲಿನಲ್ಲಿ ಮತ್ತೆ ಬಂದು‌ ಕುಳಿತುಕೊಂಡಂತಾಗುತ್ತಿತ್ತು.
ಫಾತಿಮಾ ರಲಿಯಾ ಬರೆದ ಕತೆ “ರೂಡಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

“ರೂಡಿ ವೇವ್‌ಡ್ ಅಟ್ ಯು”
ಮೊಬೈಲ್ ಪರದೆಯ ಮೇಲೆ ಮೂಡಿದ ನೋಟಿಫಿಕೇಶನ್ ನೋಡಿ ನಯನಾಳ ಕಣ್ಣು ಮಿಂಚಿದಂತಾಯಿತು. ಇನ್ನೊಂದರ್ಧ ಗಂಟೆ ಮೊಬೈಲ್ ನೋಡುವುದಿಲ್ಲ ಎಂದು ನಿರ್ಧಾರ ಮಾಡಿದವಳು ಕ್ಷಣಾರ್ಧದಲ್ಲಿ ನಿರ್ಧಾರ ಬದಲಿಸಿ ಕ್ಲಬ್‌ಹೌಸ್ ತೆರೆದು ಒಂದು‌ ಹೊಸ ರೂಂ ಓಪನ್ ಮಾಡಿ ಪಟಪಟ ಮಾತು ಶುರು ಹಚ್ಚಿಕೊಂಡಳು.

ಮೊದ ಮೊದಲು ಹವ್ಯಾಸದಂತೆ, ಬಿಡುವಿನ ವೇಳೆ ಕಳೆಯುವ ಸಾಧನದಂತೆ ಆರಂಭವಾದ ಕ್ಲಬ್‌ಹೌಸ್ ಸಖ್ಯ ಈಗೀಗ ಅದಕ್ಕಾಗೆ ಬಿಡುವು ಮಾಡಿಕೊಂಡಂತೆ, ಅರ್ಧ ಗಂಟೆ ಮಾತಾಡಲು ಒಂದು ಗಂಟೆ ಸಿದ್ಧತೆ ಮಾಡಿಕೊಳ್ಳುವಂತೆ ಅವಳ ಬೆನ್ನು ಹತ್ತಿತ್ತು. ಆಫೀಸಲ್ಲಿ, ಬೆಡ್‌ರೂಮಲ್ಲಿ ಕೊನೆಗೆ ಬಾತ್‌ರೂಮಲ್ಲಿ‌ ಸಹಾ ಅವಳ ಫೋನಲ್ಲಿ ಯಾರೋ ಮಾತಾಡುವುದು ಕೇಳಿ ಬರುತ್ತಿತ್ತು. ನಲವತ್ತರ ನಡು ವಯಸ್ಸಿನ ಸಹಜ ತುಮುಲಗಳ‌ ಮೀರಲು, ಸುಮ್ಮನೆ ಕೂತಿರುವಾಗ ಕಿವಿಯ ಹತ್ತಿರ ಬಂದು ಗುಂಯ್‌ಗುಡುವ ಸೊಳ್ಳೆಯನ್ನು ಪಟ್ಟಂತೆ ಒಡೆದು ಹಾಕಲು ಸದಾ ಪ್ರಯತ್ನಿಸುತ್ತಿರುವ ಹೆಣ್ಣುಮಗಳಂತೆ ಕಾಣುತ್ತಿದ್ದ ನಯನಾ ಕ್ಲಬ್‌ಹೌಸ್ ಸೇರಿಕೊಂಡ ನಂತರ ಹೊಸ ಮನುಷ್ಯಳಾಗಿದ್ದಳು. ಸದಾ ಇಯರ್ ಫೋನ್ ಸಿಕ್ಕಿಸಿಕೊಂಡಿರುವ ಕಿವಿ, ಶತಮಾನಗಳಿಂದಲೂ ಚಲಿಸುತ್ತಲೇ ಇವೆಯೇನೋ ಎಂಬಂತಿರುವ ತುಟಿಗಳು, ರಾತ್ರಿ ನಿದ್ರೆಗೆಟ್ಟಿದ್ದರ ಕುರುಹು ಉಳಿಸಿಕೊಂಡಿರುವ ಕಣ್ಣುಗಳು… ನಯನಾ ಅದ್ಯಾವುದೋ ಲೋಕದಲ್ಲಿದ್ದವಳಂತೆ ನಡೆಯುತ್ತಿದ್ದರೆ ಮನೆ ಬಿಡಿ ಆಫೀಸಿನವರೂ ‘ಇವಳು ಯಾವುದೋ ಚಟ ಹತ್ತಿಸಿಕೊಂಡಿದ್ದಾಳೆ’ ಎಂದು ನಿರಾಯಾಸವಾಗಿ ಹೇಳಬಹುದಿತ್ತು.

ಹೊರಗಿನ ವ್ಯಥೆಯನ್ನು ಮೀರಲೆಂದು ಅವಳು ಕ್ಲಬ್‌ಹೌಸ್ ಮೊರೆಹೊಕ್ಕಳಾ ಅಥವಾ ಅವಳೊಳಗಿನ ವ್ಯಥೆಗಳ ಮೀರಲಾರದೆ ಮೊರೆಹೊಕ್ಕಳಾ ಅವಳಿಗೇ ಗೊತ್ತಿಲ್ಲ. ಹದಿನಾರು ವರ್ಷದ ‘ಬುದ್ಧಿವಂತ’ ಮಗ ಸಂಜಯ್, ದೊಡ್ಡ ಬ್ಯುಸಿನೆಸ್ ಮ್ಯಾನ್ ಗಂಡ, ಬೆಂಗಳೂರಿನಲ್ಲಿ ಇರಲೊಂದು ಸ್ವಂತ ಮನೆ, ಸಾಲದ್ದಕ್ಕೆ ಕೈ ತುಂಬಾ ಸಂಬಳ ಬರುವ ಕೆಲಸ… ಜಗತ್ತು‌ ಸುಖಿ ಎಂದು ಪರಿಗಣಿಸಲು ಬೇಕಿರುವ ಸವಲತ್ತುಗಳೆಲ್ಲಾ ಅವಳ ಬಳಿ ದಂಡಿ ಬಿದ್ದಿದ್ದವು. ಆದರೆ ಅವಳೊಳಗಿನ‌ ದುಗುಡ?

ಅದು ಪ್ರತಿ ಬಾರಿ ಹೊರಬರಲು ಪ್ರಯತ್ನಿಸಿ ಮತ್ತೆ ಮತ್ತೆ ಅವಳೊಳಗೇ ಹುದುಗಿಬಿಡುತ್ತಿತ್ತು. ಈಗೀಗ ಮುಟ್ಟು ಎರಡೇ ಎರಡು ದಿನ ತಡವಾದರೂ ಮೆನೋಪಾಸ್ ಬಂದೇ ಬಿಡ್ತೇನೋ ಎಂಬಂತೆ ದಿಗಿಲಿಗೆ ಬೀಳುತ್ತಿದ್ದಳು. ಆ ದಿನಗಳಲ್ಲಿ ಆಕೆ ವಿನಾಕಾರಣ ಎಲ್ಲರ ಮೇಲೂ ರೇಗುತ್ತಿದ್ದಳು. ಮನೆಯಲ್ಲಿ ಮಗನ ಮೇಲೆ, ಆಫೀಸಲ್ಲಿ ಕೈ ಕೆಳಗೆ ಕೆಲಸ ಮಾಡುವವರ ಮೇಲೆ… ಅವಳೊಳಗೊಂದು ನಿರ್ವಾತ ಹುಟ್ಟಿ ಅವಳಿಗೇ ಗೊತ್ತಿಲ್ಲದಂತೆ ಅವಳ‌ ಸುತ್ತಲಿದ್ದವರನ್ನೆಲ್ಲಾ ಕಾಡಿಬಿಡುತ್ತಿತ್ತು. ಅವಳು ಎಷ್ಟೋ ಬಾರಿ ಆ ನಿರ್ವಾತದೊಂದಿಗೆ ಕೂತು ಮಾತಾಡಲು ಪ್ರಯತ್ನಿಸಿದ್ದಳು, ಆದರೆ ಅವಳಿದ್ದ ಶಬ್ಧ ಸಂತೆಯೊಳಗೆ ಅದು ಮಾತಿಗೆ ಸಿಗಲೂ ಇಲ್ಲ, ಬಗ್ಗಲೂ‌ ಇಲ್ಲ.

ಹೀಗಿರುವಾಗಲೇ ಅವಳ ಬದುಕಿನೊಳಕ್ಕೆ ಕ್ಲಬ್‌ಹೌಸ್ ಬಂದಿತ್ತು. ಮೊದಲು ‘ಭ್ರಮರ’ ಎಂಬ ಹೆಸರಲ್ಲಿ ಲಾಗಿನ್ ಆಗಿದ್ದವಳು ಆಮೇಲೆ ನೂರು ಬಾರಿ ಹೆಸರು ಬದಲಿಸಿ ಕೊನೆಗೆ ಭ್ರಮರದಲ್ಲೇ ಕಳೆದ ಒಂದು ತಿಂಗಳಿಂದ ನೆಲೆ ನಿಂತಿದ್ದಳು. ಇಡೀ ದಿನ ಮಾತು, ಮಾತು ಮತ್ತು ಮಾತು. ಆ ಮಾತುಗಳಲ್ಲಿ ಅವಳ ತುಮುಲಗಳಿಗೆ ಸ್ವಾಂತನ ಸಿಕ್ಕಿತೋ ಗೊತ್ತಿಲ್ಲ, ಆದರೆ ಚೀರಾಟ, ಕಿರುಚುವಿಕೆ ಕಮ್ಮಿಯಾಗಿತ್ತು. ಕೆಲವೊಮ್ಮೆ ಅವಳಿಗೇ ತಾನು ಬಲವಂತದ ಮೌನ ಧರಿಸಿ ಕೂತಿದ್ದೇನೆ ಅನ್ನಿಸುತ್ತಿತ್ತು. ಒಳಗಿನ‌ ನಿರ್ವಾತಕ್ಕೆ ಉಸಿರು ಬಿಡಲು ಒಂದು ಸ್ಪೇಸ್ ಸಿಕ್ಕಿತ್ತು. ಭ್ರಮೆಯೋ, ಬದುಕೋ ಒಟ್ಟಿನಲ್ಲಿ ಒಂದು ವಿಚಿತ್ರ ಹುಮ್ಮಸ್ಸು ಪ್ರವಹಿಸಿದಂತೆ ಅನ್ನಿಸುತ್ತಿತ್ತು.

ಒಂದು ಅಪರಿಚಿತತೆಯನ್ನು ಹೊತ್ತುಕೊಂಡೇ ಕ್ಲಬ್‌ಹೌಸ್ ಪ್ರವೇಶಿಸಿದ್ದ ವಸುಧಾಗೆ ಮೊದಮೊದಲು ಅಲ್ಲಿ ಡಿಸ್ಪ್ಲೇ ಆಗುತ್ತಿದ್ದ ಹೆಸರು ನೋಡಿ ನಗು ಮತ್ತು ಒಂದು ವಿಚಿತ್ರ ಅನುಭೂತಿ ಒಟ್ಟಿಗೆ ಉಂಟಾಗುತ್ತಿತ್ತು.‌ ಆಡಿಯೆನ್ಸ್ ಪ್ಯಾನೆಲ್‌ಲ್ಲಿ ಕೂತು ಚರ್ಚೆ ಮಾತ್ರ ಕೇಳಿಸಿಕೊಳ್ಳುತ್ತಿದ್ದವಳು ನಿಧಾನವಾಗಿ ಸ್ಪೀಕರ್ ಆಗಿ ಭಡ್ತಿ ಪಡೆದುಕೊಂಡಿದ್ದಳು. ‘ರೀ ಕಿಲ್ಲರ್ ಮೇಲೆ ಬನ್ನಿ’, ‘ಡಿಂಗ ನೀವು ಮಾತಾಡ್ತೀರಾ’ , ‘ಡ್ರಗ್ಗರ್ ಮಾತಾಡ್ರೀ’, ‘ಕಿತ್ತೂರ ರಾಣಿಯವರೇ ನಿಮಗೇನಾದ್ರೂ ಅಭಿಪ್ರಾಯ ಹೇಳೋಕಿತ್ತಾ?’, ‘ನಾಯಿ ಗುತ್ತಿ ಸರ್ ಏನ್ ಹೇಳ್ತೀರಾ?’ಗಳಿಗೆ ಎಷ್ಟು ಒಗ್ಗಿಹೋಗಿದ್ದಳೆಂದರೆ ಅವೆಲ್ಲಾ ನಿಜ ಬದುಕಿನ ಪಾತ್ರಗಳೇ ಅನ್ನಿಸಿ ಬಿಡಲು ಶುರುವಾಗಿತ್ತು. ಈಗೀಗ ನಯನಾ ಇರುತ್ತಿದ್ದ ರೂಮಿಗೆ ಆಡಿಯೆನ್ಸ್ ಕೊರತೆಯೇ ಕಾಡುತ್ತಿರಲಿಲ್ಲ. ಎಡ, ಬಲ, ನಡು ಹೀಗೆ ಯಾವ ಪಂಥವೇ ಇರಲಿ, ಧರ್ಮಿಷ್ಠರು, ನಾಸ್ತಿಕರು ಯಾವ ಯಾವ ಸಿದ್ಧಾಂತವೇ ಆಗಿರಲಿ ಅವಳ ಮಾತು ಕೇಳಲು ನೂರು ಜನರಾದರೂ ಬಂದು ಕೂರುತ್ತಿದ್ದರು. ಅವಳಿಗೇ ಗೊತ್ತಿಲ್ಲದ ಹಾಗೆ ಕ್ಲಬ್‌ಹೌಸ್‌ನಲ್ಲಿ ಒಂದು ಫ್ಯಾನ್‌ಡಮ್ ಸೃಷ್ಟಿಯಾಗಿತ್ತು. ನೋಡ ನೋಡುತ್ತಿದ್ದಂತೆಯೇ ಎಲ್ಲ ಅಪರಿಚಿತತೆಯನ್ನು ಕಳಚಿಕೊಂಡು ಅವಳು ನಾಲ್ಕುಸಾವಿರ ಮುನ್ನೂರ ಐದು ಫಾಲೋವರ್ಸ್‌ಗಳನ್ನು ಪಡೆದುಕೊಂಡು ಕ್ಲಬ್‌ಹೌಸ್‌ನ ಸೆಲೆಬ್ರಿಟಿಯಾಗಿಬಿಟ್ಟಿದ್ದಳು.

ಈ ನಡುವೆ ಅವಳನ್ನು ವಿರೋಧಿಸುವವರ ಸಂಖ್ಯೆಯೂ ಅಷ್ಟೇ ವೇಗವಾಗಿ ಬೆಳೆದಿತ್ತು. ಅವಳದೇ ಹೆಸರಲ್ಲಿ ರೂಂ ಕ್ರಿಯೇಟ್ ಮಾಡಿ ತೇಜೋವಧೆ ಮಾಡುವ, ಅವಳ ಡಿಪಿ‌ ಕದ್ದು ಅಸಹ್ಯಕರವಾಗಿ ಫೊಟೋಶಾಪ್ ಮಾಡುವ ಪ್ರಯತ್ನವೂ ನಡೆದಿತ್ತು. ಆದರೆ ಅವೆಲ್ಲವನ್ನೂ ಎದುರಿಸುವ ಚಾಣಾಕ್ಷತೆ ಅವಳಿಗಿತ್ತು.‌ ಆಗೆಲ್ಲಾ ಅವಳು ಅಧೀರಳಾಗದಂತೆ ಕಾಯಲು, ಜೊತೆ ನಿಲ್ಲಲು ರೂಡಿ ಇದ್ದೇ ಇದ್ದ. ಮೊದಲು ಒಂದು ಪರಿಚಿತ ನೆಲೆಯಲ್ಲಷ್ಟೇ ಇದ್ದ ಅವರಿಬ್ಬರ ಮಾತು ಕಥೆಗಳು ಈಗ ಒಬ್ಬರಿಗೊಬ್ಬರು ಬೇರಾಗದಷ್ಟು ಬಲವಾಗಿ ಕಚ್ಚಿಕೊಳ್ಳುವಲ್ಲಿಗೆ ಬಂದು ನಿಂತಿತ್ತು.

ರೂಡಿ ಮೋಡಿಗಾರ ಕವಿ. ತಾನೇ ಬರೆದ ಕವಿತೆಗಳನ್ನು ಆರ್ದ್ರವಾಗಿ ಓದುತ್ತಿದ್ದ. ಅವನ ಕವಿತೆಗೆ, ವಾಚನಕ್ಕೆ ತಲೆದೂಗದವರು ಬಹುಶಃ ಕ್ಲಬ್‌ಹೌಸ್‌ನಲ್ಲಿ ಇರಲೇ ಇಲ್ಲ. ಒಂದು ಕಾವ್ಯ ಸಂಜೆಯಲ್ಲಿ ಅವನೇ ನಯನಾಳನ್ನು ಮಾತಿಗೆಳೆದಿದ್ದ. ಮಾತು ಮುಗಿಯುವಷ್ಟರಲ್ಲಿ ಬ್ಯಾಕ್‌ಚಾನೆಲ್‌ನಲ್ಲಿ ಮೆಸೇಜ್ ರವಾನೆಯಾಗಿತ್ತು.
“ನಿಮ್ಮ ಧ್ವನಿಯೇ ಸಂಗೀತಮಯವಾಗಿದೆ, ಹಾಡುಗಾರರಾ ನೀವು?”
“ಹಾಡಿಗೂ ನನಗೂ ಆಗಿ ಬರಲ್ಲ ರೂಡಿ, ನಾನು ಹಾಡಿನ ಅಭಿಮಾನಿಯಷ್ಟೆ” ಅಂದಿದ್ದಳು ನಯನಾ.

ಆವತ್ತಿಗೆ ಸಂವಹನ ಅಲ್ಲೇ ನಿಂತಿತ್ತು. ಮರುದಿನ ಮತ್ತೆ ಹೊಸ ರೂಂ, ಹೊಸ ಟಾಪಿಕ್. ಭ್ರಮರ ಆಗಿದ್ದ ನಯನಾ ಮತ್ತು ರೂಡಿ ಬ್ಯಾಕ್ ‌ಚಾನೆಲ್ಲಿನಲ್ಲಿ ಓತಪ್ರೋತವಾಗಿ ಮಾತಾಡಿಕೊಳ್ಳುತ್ತಿದ್ದರು. ರೂಡಿ ಮೊದಲೇ ಕವಿ, ಸುತ್ತಿ ಬಳಸಿ ಅವಳನ್ನು ಹೊಗಳುತ್ತಿದ್ದರೆ ವಸುಧಾ ನಿಂತಲ್ಲೇ ಮತ್ತಷ್ಟು ಹುಡುಗಿಯಾಗುತ್ತಿದ್ದಳು.

ಒಂದಿನ ಅವನು “ಇಷ್ಟು ಚಂದ ಮಾತಾಡುವ ಭ್ರಮಾ ಏಕೆ ಬರೆಯಬಾರದು?” ಕೇಳಿದ್ದ. “ನಾನು ಬರೆಯುವುದೇ? ಸಾಧ್ಯವೇ ಇಲ್ಲ” ಎಂದಿದ್ದಳು ನಯನಾ.
“ಯಾಕಾಗದು? ಒಮ್ಮೆ ಪ್ರಯತ್ನಿಸಿ‌ ನೋಡು, ಮಾತುಗಾರರೆಲ್ಲಾ ಮೂಲತಃ ಕವಿಗಳೇ”.

” ಊಹೂಂ, ರೂಡಿ, ಸಾಧ್ಯವೇ ಇಲ್ಲ”

“ಬರಹವೇ ಗೊತ್ತಿಲ್ಲದ ಕಾಳಿದಾಸನೇ ಅಷ್ಟುದ್ದ ಕಾವ್ಯ ಬರೆದಿದ್ದಾನೆ, ಇನ್ನು ನೀನು, ಕಾವ್ಯಾಸಕ್ತೆ, ಜಾಣೆ. ಪ್ರಯತ್ನ ಪಟ್ಟರೆ ಖಂಡಿತಾ ಬರೆಯುತ್ತೀ, ಒಮ್ಮೆ ಪ್ರಯತ್ನಿಸಬಾರದೇ ಭ್ರಮಾ?” ಯಾಚನೆಯಿತ್ತು ಅವನ ಪ್ರಶ್ನೆಯಲಿ. ಕ್ಷಣ ಹೊತ್ತಿನ ಮೌನದ ನಂತರ “ಹುಂ” ಎಂದಷ್ಟೇ ಉತ್ತರಿಸಿ ಸುಮ್ಮನಾದಳು. ತುಸು ಹೊತ್ತು ಅವನೂ ಮೌನವಾದ. ಆಮೇಲೆ ಮತ್ತೆ ” ನೀನು ಉರಿವ ಪ್ರಣತಿ ಭ್ರಮಾ, ನಿನ್ನ ಬೆಳಕ ಗರ್ಭದಲ್ಲಿ ಕವಿತೆಯೇಕೆ ಮಹಾಕಾವ್ಯವೇ ಹುಟ್ಟೀತು, ಚೂರು ಪ್ರಯತ್ನಿಸಬಾರದೇ?” ಕೇಳಿದ್ದ. “ನಾನು ಪ್ರಣತಿಯಾದರೆ ನೀನು ಸುಟ್ಟು ಕರಕಲಾಗುವ ಪತಂಗವಾಗುತ್ತೀಯಾ?” ಚೂರು ತಮಾಷೆ ಬೆರೆತ ದಾರ್ಷ್ಟ್ಯದಿಂದ ಕೇಳಿದ್ದಳು. “ಹುಂ, ಆಗೋಣ ಅದಕ್ಕೇನಂತೆ. ನಿನ್ನೆದೆಯೊಳಗೆ ಹುಟ್ಟುವ ಅಕ್ಷರಗಳಿಗಾಗಿ ಕಾದು ಕುಳಿತವ ನಾನು. ಈಗೀಗ ನನ್ನ‌ ಕಾಯುವಿಕೆಗೆ ಯುಗಗಳೇ ಸಂಧಿತೇನೋ‌ ಅನ್ನಿಸುತ್ತದೆ. ಅಂಥದ್ದರಲ್ಲಿ‌ ಸುಟ್ಟು ಹೋಗೋದೇನು ಮಹಾ?” ಅಕ್ಷರಶಃ ಟೀನೇಜಿನ‌ ಹುಡುಗನಂತೆ ಪ್ರತಿಕ್ರಿಯಿಸಿದ್ದ. ವಸುಧಾಳ ಎದೆಯೊಳಗೆ ಹುಟ್ಟಿದ ನವಿರು ಭಾವವೊಂದು ಸುಮ್ಮನೆ ಹರಿದು ಗಾಳಿಯಲ್ಲಿ ಲೀನವಾಯಿತು. ಅಲ್ಲಿಯವರೆಗೆ ಉದಾಸವಾಗಿ ಬಿದ್ದಂತಿದ್ದ ಸಂಜೆ ತಣ್ಣಗೆ ಮೈ ಕೊಡವಿ ಎದ್ದು ಕೂತಿತು.

ಆ ಸಂಜೆ ಆಫೀಸಿನಿಂದ ಎಂದಿಗಿಂತ ಬೇಗ ಬಂದಿದ್ದಳು ವಸುಧಾ. ಮನೆಕೆಲಸದವಳಿಗೆ ಬೇಗ ಹೋಗೆಂದು ರಜಾ ಕೊಟ್ಟು ತಾನೇ ಅಡುಗೆ ಮಾಡಲು ನಿಂತಿದ್ದಳು. ಸಂಜಯ್‌ಗೆ ಇಷ್ಟ ಎಂದು ಸಂಜೆ ಕಾಫಿಗೆ ಫ್ರೆಂಚ್ ಫ್ರೈಸ್ ರೆಡಿ ಮಾಡಿ, ಅವನು ಸ್ಕೂಲಿನಿಂದ ಬಂದಂತೆ ತಾನೇ ಪಕ್ಕ ಕೂತು ಅಕ್ಕರೆಯಿಂದ ತಿನ್ನಿಸಿದ್ದಳು. ರಾತ್ರಿ ಊಟಕ್ಕೂ ತಾನೇ ಚಪಾತಿ,ಚಿಕನ್ ಕರಿ ಮಾಡಿ ಗಂಡ,ಮಗ ಇಬ್ಬರಿಗೂ‌ ಪ್ರೀತಿಯಿಂದ ಬಡಿಸಿದ್ದಳು, ಜೊತೆಗೊಂದು ಸಿಹಿ ಕೂಡ. ಆ ದಿನ ರಾತ್ರಿ ಎಂದಿಗಿಂತ ಜಾಸ್ತಿಯೇ ಗಂಡನನ್ನು ಅಪ್ಪಿ ಮಲಗಿದ್ದಳು, ಯಾವುದೋ‌‌ ಒಂದು‌ ಪಾಪಕ್ಕೆ‌ ಪೂರ್ವತಯಾರಿ ಮಾಡಿಕೊಳ್ಳುವಂತೆ.

ರೂಡಿ ಯಾರು, ಏನು, ಎತ್ತ ಎಂಬುವುದು ಗೊತ್ತೇ ಇರದಿದ್ದರೂ ಯಾವುದೋ ಅಸಹಾಯಕತೆಯೊಂದು ಅವನನ್ನು ಇನ್ನಿಲ್ಲದಂತೆ ಕಾಡುತ್ತಿದೆ ಎಂದು ಅವಳಿಗೆ ಆಗಾಗ ಅನ್ನಿಸುತ್ತಿತ್ತು. ಪ್ರತಿ ಬೆಳಗೂ ‘ಈವತ್ತು ಹೇಗಾದರೂ ಸರಿ, ಅವನನ್ನು ಕೇಳಲೇಬೇಕು’ ಎಂಬ ಪ್ರತಿಜ್ಞೆಯೊಂದಿಗೆ ಹಾಸಿಗೆಯಿಂದ ಏಳುತ್ತಿದ್ದಳು. ಆದರೆ ಹಾಗೆ ಕೇಳಬೇಕೆಂದು ಹೊರಟಾಗೆಲ್ಲಾ ಗಂಟಲಲ್ಲಿ ಒಂದು ಮುಳ್ಳು ಸಿಕ್ಕಿಹಾಕಿಕೊಂಡಂತಾಗಿ ಕೇಳಲಾಗದೆ ಇದ್ದುಬಿಡುತ್ತಿದ್ದಳು. ಹೋಗಲಿ, ತಾನು‌ ನಲವತ್ತರ ಹೊಸ್ತಿಲು ದಾಟಿದವಳು, ಹದಿನಾರು ವರ್ಷದ ಮಗ ತನಗಿದ್ದಾನೆ ಎಂದು ಹೇಳಿಕೊಳ್ಳಬೇಕು ಅಂದುಕೊಂಡಾಗಲೂ ಇದೇ‌ ಮುಳ್ಳು ಗಂಟಲಿನಲ್ಲಿ ಮತ್ತೆ ಬಂದು‌ ಕುಳಿತುಕೊಂಡಂತಾಗುತ್ತಿತ್ತು.

ನಾನು ವಿವಾಹಿತೆ ಎಂದು ಗೊತ್ತಾದರೆ ಅಂವ ಚಾಟ್ ಮಾಡೋದನ್ನೇ ನಿಲ್ಲಿಸಿಬಿಟ್ಟರೆ….? ನಾನು‌ ಮೋಸ ಮಾಡಿದೆ ಅಂದುಕೊಂಡರೆ…? ಹೀಗೊಂದು ಯೋಚನೆ ಕಾಡಿದಾಗೆಲ್ಲಾ ಬವಳಿ ಬಂದು ಬಿದ್ದಂತಾಗುತ್ತಿತ್ತು ಅವಳಿಗೆ. ಅಥವಾ ನನ್ನಂತೆಯೇ ಅವನ ಸಣ್ಣ ವಯಸ್ಸಿನವನು ಅಲ್ಲದೇ‌ ಇರುವುದಕ್ಕೆ, ಅದ್ಯಾವುದಾದರೂ ಮೂಲದಿಂದ ನನ್ನ ಹಿನ್ನೆಲೆ ತಿಳಿದುಕೊಂಡೇ ಆತ್ಮೀಯತೆ ಬೆಳೆಸಿದ್ದಾನಾ? ಯೋಚಿಸಿದಂತೆಲ್ಲಾ ಅವಳ ತಲೆ ಕೆಡುತ್ತಿತ್ತೇ ವಿನಃ ಉತ್ತರಗಳೊಂದೂ ಸಿಗುತ್ತಿರಲಿಲ್ಲ. ಆಗೆಲ್ಲಾ ಬಂದಾಗ ಬಂದಂತೆ ಎದುರಿಸಿ ಬಿಡುವುದು ಅಂದುಕೊಂಡು ಸುಮ್ಮನಾಗುತ್ತಿದ್ದಳು. ಆದರೆ ಅದೂ ಅಷ್ಟೇ, ಅವನ ಬಗೆಗಿನ ಉಳಿದ ನಿರ್ಧಾರಗಳಂತೆಯೇ, ರಾತ್ರಿ ಕಣ್ಣಿಗೆ ನಿದ್ರೆ ಹತ್ತುವ ಕಡೇ ಘಳಿಗೆಯ ನಿರ್ಧಾರವಾಗಿದ್ದು ಬೆಳಗಾಗುವಷ್ಟರಲ್ಲಿ ಮರೆತೇ ಹೋಗುತ್ತಿತ್ತು.

(ಕಲೆ: ರೂಪಶ್ರೀ ವಿಪಿನ್)

ಈ ನಡುವೆ ಅವಳನ್ನು ವಿರೋಧಿಸುವವರ ಸಂಖ್ಯೆಯೂ ಅಷ್ಟೇ ವೇಗವಾಗಿ ಬೆಳೆದಿತ್ತು. ಅವಳದೇ ಹೆಸರಲ್ಲಿ ರೂಂ ಕ್ರಿಯೇಟ್ ಮಾಡಿ ತೇಜೋವಧೆ ಮಾಡುವ, ಅವಳ ಡಿಪಿ‌ ಕದ್ದು ಅಸಹ್ಯಕರವಾಗಿ ಫೊಟೋಶಾಪ್ ಮಾಡುವ ಪ್ರಯತ್ನವೂ ನಡೆದಿತ್ತು. ಆದರೆ ಅವೆಲ್ಲವನ್ನೂ ಎದುರಿಸುವ ಚಾಣಾಕ್ಷತೆ ಅವಳಿಗಿತ್ತು.‌ ಆಗೆಲ್ಲಾ ಅವಳು ಅಧೀರಳಾಗದಂತೆ ಕಾಯಲು, ಜೊತೆ ನಿಲ್ಲಲು ರೂಡಿ ಇದ್ದೇ ಇದ್ದ.

ನಡು ನಡುವೆ ತಾನು ಅವನ‌ ಧ್ಯಾನದಲ್ಲಿ ಕಳೆದುಹೋಗುತ್ತಿದ್ದೇನೆ ಎಂದು ಅನ್ನಿಸಿದಾಗೆಲ್ಲಾ ಯಾವುದೋ ಪಾಪಪ್ರಜ್ಞೆ ಕಾಡಿದಂತಾಗಿ ಗಂಡ, ಮಗನಿಗೆ ಇನ್ನಿಲ್ಲದ ಆಸ್ಥೆ, ಅಕ್ಕರೆ ತೋರುತ್ತಿದ್ದಳು. ತಾನು ಹೀಗೆಲ್ಲಾ ಮಾಡುತ್ತಿರುವುದು ತಪ್ಪು, ಹೇಗೂ ನನ್ನ ವಿಳಾಸ ಫೋನ್ ನಂಬರ್ ಕೊಟ್ಟಿಲ್ಲ ಈ ಸಂಬಂಧವೇ ಅಲ್ಲದ ಸಂಬಂಧದಿಂದ ಕಳಚಿಕೊಂಡು ಬಿಡೋಣ ಅನ್ನಿಸಿ ಕ್ಲಬ್‌ಹೌಸ್ ಡಿಲೀಟ್ ಮಾಡಿಬಿಡುತ್ತಿದ್ದಳು. ಆಗೆಲ್ಲಾ ಅವಳಿಗೆ ತನಗೇ ಯಾಕೆ ಈ ಗೆರೆ ದಾಟುವ ಖಯಾಲಿ ಹುಟ್ಟಿಕೊಂಡಿತು? ಕಡಲಿನ ಮತ್ತೊಂದು‌ ತೀರವನ್ನು‌ ಸೋಕುವ ವಾಂಛೆ ಉಂಟಾಯಿತು? ಅಥವಾ ತನ್ನದಾಗಿರುವ ಬದುಕು ಎಂಬ ವಾಸ್ತವದಿಂದ ತಪ್ಪಿಸಿಕೊಳ್ಳುವ ಪಲಾಯನವಾದವೇ ಇದು? ಎಂಬ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗದೆ ಕಂಗಾಲಾಗುತ್ತಿದ್ದಳು.

ಇಂಥದ್ದೇ ಒಂದು ದಿಗ್ಭ್ರಾಂತ ಸಂಜೆಯಲ್ಲಿ ವಾಸ್ತವ ಮತ್ತು ಭ್ರಮೆಯ ನಡುವೆ ಜೀಕುತ್ತಿದ್ದೇನೆ ಎಂದು ದಟ್ಟವಾಗಿ ಅನ್ನಿಸುತ್ತಿರುವಾಗಲೇ ಮಗ ಸಂಜಯ್ “ಏನಾಗ್ತಿದೆ ಮಮ್ ನಿಂಗೆ? ಹುಶಾರಿಲ್ವಾ?” ಎಂದು ಕೇಳಿದ್ದ. ಅವನ ಧ್ವನಿಯಲ್ಲಿದ್ದ ಕಕ್ಕುಲಾತಿಗೆ ಕರಗಿ ನೀರಾಗಿದ್ದಳು ನಯನಾ. ಈ ಹೊತ್ತಲ್ಲಿ ಬೇಡದ ಆಪ್ತತೆಯೊಂದು ಸುಮ್ಮನೆ ಹೆಗಲು ಹತ್ತಿ ಕೂತಂತೆ ಚಡಪಡಿಸಿದ್ದಳು. ಆದರೆ ಇವೆಲ್ಲದರಿಂದ ತಪ್ಪಿಸಿಕೊಳ್ಳುವುದು ಹೇಗೆ? ಅರ್ಥವಾಗಲಿಲ್ಲ.

ಅವಳೊಳಗೆ ನಿರಂತರವಾಗಿ ನಡೆಯುತ್ತಿದ್ದ ಈ ಯುದ್ಧ ರೂಡಿಯ ಅರಿವಿಗೆ ಬಂದಿತ್ತೋ ಇಲ್ಲವೋ ಗೊತ್ತಿಲ್ಲ, ಆದ್ರೆ ಒಂದಿನ ಅವನೇ “ಭ್ರಮಾ ನಿನನ್ನು ಭೇಟಿಯಾಗಬೇಕೆನಿಸುತ್ತದೆ. ಈ ಕ್ಲಬ್‌ಹೌಸ್, ಬ್ಯಾಕ್‌ಚಾನೆಲ್ ಮೆಸೇಜ್ ಎಲ್ಲಾ ಸಾಕೆನಿಸುತ್ತಿದೆ. ನಿನ್ನ ಜೊತೆಗೊಂದು ಏಕಾಂತ, ಅರ್ಧ ಕಪ್ ಕಾಫಿ, ಮತ್ತೊಂದು ಆತ್ಮೀಯ ಸ್ಪರ್ಶಕ್ಕೆ ಮನಸ್ಸು ಹಾತೊರೆಯುತ್ತಿದೆ. ಬರುತ್ತೀಯಾ?” ಕೇಳಿದ್ದ. ನಯನಾ ಏನೊಂದೂ ಉತ್ತರಿಸಲಿಲ್ಲ. “ನಾ ಉಸಿರು ಚೆಲ್ಲಲು ನಿನ್ನ ಮೌನವೊಂದೇ ಸಾಕು, ಬೇಡವೆನಿಸಿದರೆ ಬೇಡ ಬಿಡು, ಆದರೆ ಮಾತಾಡು ಪ್ಲೀಸ್” ಅವನ ಅಕ್ಷರಗಳು ಎದೆಗೆ ತಾಕುವಷ್ಟು ಹತ್ತಿರದಲ್ಲಿ ನಿರಾಶೆಯನ್ನು ಹೊತ್ತಿದೆ ಅನ್ನಿಸಿತು ನಯನಾಗೆ.

“ರೂಡಿ ನೀನಂದುಕೊಂಡಂತೆ ನಾನಿಲ್ಲದೇ ಹೋದರೆ? ನಿಂಗೊತ್ತಾ ನಾನು ನಲವತ್ತರ ಆಸುಪಾಸಿನಲ್ಲಿರುವ ಮಹಿಳೆ, ಹದಿನಾರು ವರ್ಷದ ಮಗನೂ ಇದ್ದಾನೆ” ಎದೆ ಬಸಿದು ಸತ್ಯ ಹೇಳಿದ್ದಳು. “ಸರಿ ಭ್ರಮಾ , ಆದರೆ ಅದರಿಂದಾಗುವ ವ್ಯತ್ಯಾಸವೇನು? ನಿನ್ನ ಮಾತಿನ ಮುಂದೆ ವಯಸ್ಸು, ಸಂಸಾರ ಗೌಣವಾಗುತ್ತದೆ. ಬಹುಶಃ ನೀನಂದುಕೊಂಡಂತೆ ನಾನೂ ಇರಲಿಕ್ಕಿಲ್ಲ. ನನ್ನ ನೋಡಿದ ಕೂಡಲೇ ನಿನಗೆ ಅಸಹ್ಯ ಹುಟ್ಟಲೂಬಹುದು” ಎಂದ. ನಯನಾ ಹಾಗೆ ಹೇಳಕೂಡದು ಎಂಬಂತೆ ಅವಳಿಗೇ ಗೊತ್ತಾಗದಂತೆ ತುಟಿಯ ಮೇಲೆ ಬೆರಳಿಟ್ಟುಕೊಂಡು “ಇಲ್ಲ ಕಣೋ, ನೀನು ಬಂದ ಮೇಲೆಯೇ ಈ ಬದುಕು ಬದಲಾದ್ದು. ನಿನ್ನ ಮೇಲೆ ಅಸಹ್ಯ ಪಟ್ಟುಕೊಳ್ಳುವುದೇ? ಸಾಧ್ಯವೇ ಇಲ್ಲ” ಅಂದಳು. “ಅದೆಲ್ಲಾ ಆಮೇಲೆ ನಿರ್ಧರಿಸೋಣ, ಈಗ ಭೇಟಿಯಾಗಲು ಬರುತ್ತೀಯಾ?” ಮೆತ್ತಗೆ ನಡು ಬಳಸಿ ಹೆಗಲಿಗೆ ತಲೆಯಾನಿಸಿ ಕೇಳಿದಂತಾಯಿತು ವಸುಧಾಗೆ. “ಹೂಂ” ಎಂದಳು ಅವಳು.

ಮರುದಿನ ಬೆಳಗ್ಗೆ ಏಳುವಷ್ಟರಲ್ಲಿ “ಮೈಸೂರಲ್ಲಿ ಕಾಜಾಣದ ಹೆಸರಿನ ಒಂದು ಕೆಫೆಗೆ ಬಾ, ಅಲ್ಲಿ ಎರಡನೇ ಟೇಬಲ್ ಬುಕ್ ಮಾಡ್ತೀನಿ, ಸಂಜೆ ಸಿಗೋಣ ಪ್ಲೀಸ್” ಎಂದು ಮೆಸೇಜ್ ಮಾಡಿದ್ದ.

“ಹೆಂಗೋ ಬರ್ಲಿ?”

“ಡ್ರೈವ್ ಮಾಡ್ಕೊಂಡು ಕಣೇ ಜಾಣೆ, ನಿನ್ನ ವಾಟ್ಸಾಪ್ ನಂಬರ್ ಕಳ್ಸು, ಅಲ್ಲಿ ಹೋದ್ಲೇಲೆ ಲೋಕೇಶನ್ ಕಳಿಸ್ತೀನಿ, ಆದ್ರೆ ಪ್ಲೀಸ್ ಒಬ್ಳೇ ಬಾ” ಎಂದ. ನಯನಾ ತಲೆಯಾಡಿಸಿದಳು. ತುಸು ಹೊತ್ತು ಕಳೆದು “ಯಾವ ಕಲರ್ ಶರ್ಟ್ ಹಾಕ್ಕೊಂಡು ಬರ್ತೀಯಾ ರೂಡಿ?” ಕೇಳಿದಳು. “ಭ್ರಮಾ ಪ್ಲೀಸ್, ಅದನ್ನೆಲ್ಲಾ ಈಗ ಚರ್ಚೆ ಮಾಡೋದು ಬೇಡ. ಸಂಜೆಯ ಹೊತ್ತಿಗೆ ನಿನ್ನನ್ನು ಭೇಟಿಯಾಗುತ್ತೇನೆ ಎನ್ನುವ ಕಲ್ಪನೆ ಎಷ್ಟು ಖುಶಿ ಕೊಡುತ್ತಿದೆ ಗೊತ್ತಾ? ಅಲ್ಲಿಯವರೆಗೆ ನಮ್ಮಿಬ್ಬರ ನಡುವೆ ಯಾವ ಮಾತುಕತೆಯೂ ನಡೆಯುವುದಿಲ್ಲ. ಯಾಕೆಂದರೆ ಈಗ ನನಗೊಂದು ಹಿತವಾದ ಮೌನ ಬೇಕು, ಆ ಮೌನದಲ್ಲಿ ನಾನು ನಿನ್ನನ್ನೇ ಧ್ಯಾನಿಸುತ್ತಿರಬೇಕು” ಅಂದ.

ಎಂದೂ ಇಲ್ಲದ ಮುತುವರ್ಜಿಯಿಂದ ಆವತ್ತು ನಯನಾ ಕನ್ನಡಿಯ ಮುಂದೆ ನಿಂತಿದ್ದಳು. ‘ನನ್ನನ್ನು ಒಮ್ಮೆ ನೋಡಿದ ಮೇಲೆ ಅಂವ ಮಾತೇ ಬಿಟ್ಟರೆ?’ ಮತ್ತೆ ಯೋಚನೆಗೆ ಬಿದ್ದಳು. ‘ನನಗೇನಾಗಿದೆ? ಇನ್ನೂ ಚೆನ್ನಾಗೇ ಇದ್ದೇನೆ. ಸೊಂಟದ ಮೇಲೊಂದು ಮಡಿಕೆ ಬಿದ್ದಿದೆ ಅನ್ನೋದು ಬಿಟ್ಟರೆ ನಾನು ಮೊದಲಿನಂತೆ ಇದ್ದೇನೆ ಅಂದುಕೊಳ್ಳುತ್ತಲೇ ಕಿವಿಯ ಹಿಂದೆ ಸಿಕ್ಕಿದ್ದ ಕೂದಲನ್ನು ಕೆನ್ನೆಯ ಮೇಲೆ ಇಳಿಬಿಟ್ಟಳು. ಎಡಗಣ್ಣಿನ ರೆಪ್ಪೆಗೆ ತಾಗುವಂತಿದ್ದ ಮಚ್ಚೆ ಸುಮ್ಮನೆ ನಕ್ಕಂತಾಯಿತು. ನಸು ನಾಚಿಕೆಯ ಎಳೆಯೊಂದು ಕನ್ನಡಿಯನ್ನು ಹಾದು ಬಂದು ಅವಳ ಕದಪುಗಳನ್ನು ಬಿಸಿಯಾಗಿಸಿತು.

ಎಂದೂ ಹೋಗದವಳು ಅಂದು ಪಾರ್ಲರ್ ಹುಡುಕಿಕೊಂಡು ಹೊರಟು ಅಲ್ಲಿ ಕೂತು ಎರಡು ಗಂಟೆ ತನ್ನನ್ನೇ ತಿದ್ದಿ ತೀಡಿ ಅಲ್ಲಿಂದ ನೇರವಾಗಿ ಮೈಸೂರಿಗೆ ಹೊರಟಳು. ನಡುವೆ ಮನೆಗೆ ಹೋದರೆ ಗಂಡ ಮಗನನ್ನು ಎದುರಿಸುವ ಸಂಕಟಕ್ಕೆ ಈಡಾಗಬಾರದೆಂದು ಈ ಪ್ಲ್ಯಾನ್ ಮಾಡಿದ್ದಳು ಅವಳು. ಮೈಸೂರಿನ‌ ಗಡಿ ದಾಟುತ್ತಿದ್ದಂತೆ ರೂಡಿ ಲೋಕೇಶನ್ ಕಳುಹಿಸಿದ್ದ. ಸೀದಾ ಅಲ್ಲಿಗೆ ಡ್ರೈವ್ ಮಾಡಿಕೊಂಡು ಹೋದ ನಯನಾ ಕಾರಿಂದ ಇಳಿಯುವ ಮನ್ನ ಮತ್ತೊಮ್ಮೆ ತನ್ನನ್ನು ಕನ್ನಡಿಯಲ್ಲಿ ನೋಡಿಕೊಂಡಳು. ಅವನಿಗೋಸ್ಕರ ಕೊಂಡ ಎರಡೇ ಎರಡು ಪೆನ್ನು ನಿಲ್ಲಬಲ್ಲ ಪೆನ್‌ಸ್ಟಾಂಡನ್ನು ತನ್ನ ಹ್ಯಾಂಡ್‌ಬ್ಯಾಗ್‌ನೊಳಗೆ ಸೇರಿಸಿ ಕಾರಿಂದ ಮೆಲ್ಲ ಹೊರಗಡಿಯಿಟ್ಟಳು.

ಒಮ್ಮೆ ಸುತ್ತ ನೋಡಿದಳು. ಮೈಸೂರಿನ ತಣ್ಣನೆಯ ಹವೆಯಲಿ ಮಂದ್ರ ಬೆಳಕನ್ನು ಹೊತ್ತ ‘ಡೊಂಗ್ರೋಸ್ ಕೆಫೆ’ ಚದುರಿಬಿದ್ದಿರುವ ನೂರಾರು ರೇಖೆಗಳನ್ನು ಒಂದು ಬಿಂದುವಿನಲ್ಲಿ ವಿಲೀನಗೊಳಿಸುವ ಅನಂತ ಆಕಾಶದಂತೆ ತೋರುತ್ತಿತ್ತು. ಉಟ್ಟಿರುವ ತಿಳಿ ಹಸಿರು ಬಣ್ಣದ ಸೀರೆಯನ್ನು ಚೂರೇಚೂರು ಮೇಲಕ್ಕೆತ್ತಿ ಒಳಗಡಿಯಿಟ್ಟಳು. ತಣ್ಣನೆಯ ಸ್ವರದಲ್ಲಿ ಒಳಗಿಂದ ಅಲೆಅಲೆಯಾಗಿ ಹಾಡು ಕೇಳಿ ಬರುತ್ತಿತ್ತು. ಕೆಫೆಯ ಬಲಗಡೆಯ ಗೋಡೆಯಲ್ಲಿ ಸಂಜೆಯೊಂದು ಹೊಸ್ತಿಲಿನಾಚೆ ನಿಂತು ಮಧ್ಯಾಹ್ನದ ಇಳಿಹೊತ್ತನ್ನು ‘ಒಳಬರಲೇ?’ ಎಂದು ಕೇಳುವಂತಿದ್ದ ಚಿತ್ರವನ್ನು ಚಿತ್ರಿಸಲಾಗಿತ್ತು. ಮೊಬೈಲ್ ಬೀಪ್ ಅಂದಿತು. ತೆರೆದು ನೋಡಿದರೆ “ಎರಡನೇ ಸೀಟಲ್ಲಿರ್ತೀನಿ” ರೂಡಿಯ ಮೆಸೇಜ್ ಅರ್ಧ ಗಂಟೆ ಮೊದಲೇ ಬಂದಿತ್ತು. ಇಡೀ ಕೆಫೆಯನ್ನೊಮ್ಮೆ ನೋಡಿದಳು. ತನ್ನನ್ನು ಬಿಟ್ಟರೆ ಮೂರೋ ನಾಲ್ಕೋ ಜನರಿದ್ದರು ಅಷ್ಟೇ.

ಎರಡನೇ ಸೀಟು? ಹಿಂದಿಂದವೇ ಮುಂದಿಂದವೇ? ಅನುಮಾನ ಆಯ್ತು. ಮುಂದಿನಿಂದ ಎರಡನೇ ಸೀಟಲ್ಲಿ ಒಂದು ಜೋಡಿ ಈಗಾಗಲೇ ಕಾಫಿ ಕುಡಿಯುತ್ತಿದೆ. ಮತ್ತೊಂದು ಬದಿಯ ಎರಡನೇ ಸೀಟ್ ಬಳಿ ಹೋದಳು. ಬಾಬ್ ಕಟ್ ಮಾಡಿರುವ, ತಿಳಿ ನೀಲಿ ಶರ್ಟ್, ಅದಕ್ಕೊಪ್ಪುವ ಜೀನ್ಸ್, ಕೈಯಲ್ಲಿ ಇಷ್ಟುದ್ದದ ಗರುಡನ ಚಿತ್ರವಿರುವ ಟ್ಯಾಟೂ ಹಾಕಿಸಿಕೊಂಡ ಹುಡುಗಿ ಕಣ್ಣಿಗೆ ಕೂಲಿಂಗ್ ಗ್ಲಾಸ್ ಏರಿಸಿಕೊಂಡು ಕೂತಿದ್ದಳು. ಹೇಳಲೋ ಬೇಡವೋ ಎಂಬ ದ್ವಂದ್ವದಲ್ಲೇ ನಯನಾ “ಎಕ್ಸ್‌ಕ್ಯೂಸ್ ಮಿ ಮೇಡಂ, ಈ ಟೇಬಲ್ ಆಗ್ಲೇ ಬುಕ್ ಆಗಿದೆ” ಎಂದಳು.

ಎದುರಿಗಿದ್ದವಳು ಇವಳನ್ನು ಎದುರಿಸಲಾಗದೆ ಒಮ್ಮೆ ಕೂತಲ್ಲಿಂದ ಎದ್ದು ಮತ್ತೆ ಕೂತಳು. ಮಾತು ವಿನಾಕಾರಣ ತೊದಲುತ್ತಿತ್ತು. ಅವಳ ಕಣ್ಣುಗಳಲ್ಲಿದ್ದ ಭೀತಿ ಯಾವುದೋ ಕಥೆ ಹೇಳುತ್ತಿದೆ ಅನ್ನಿಸುತ್ತಿತ್ತು , ಬೆವರುತ್ತಿದ್ದ ಹಣೆ, ಸಣ್ಣಗೆ ಅದುರುತ್ತಿದ್ದ ಅಂಗೈ ನೋಡಿ ಪಾಪ ಅನ್ನಿಸಿತು ನಯನಾಗೆ. ಯಾವ ನೋವನ್ನು ಎದೆಯೊಳಗೆ ಹೊತ್ತಿದ್ದಾಳೋ ಹುಡುಗಿ ಎಂದು ನಿಟ್ಟುಸಿರಿಟ್ಟಳು. ಮರುಕ್ಷಣ ರೂಡಿ ನೆನಪಾದ, ಅಂವ ಬರುವ ಹೊತ್ತಾಯಿತು, ಇವಳಿನ್ನೂ ಇಲ್ಲೇ ಇದ್ದಾಳಲ್ಲ ಅನ್ನೋದು ಕಾಡಿ ನಿಟ್ಟುಸಿರಿನ ನೆರಳ ಹಿಂದೆಯೇ ಅಸಹನೆಯೊಂದು ಹುಟ್ಟಿಕೊಂಡಿತು. ಸೀರೆಯ ನೆರಿಗೆಯನ್ನು ಹಿಡಿದುಕೊಂಡು ಪುಟ್ಟದಾಗಿ ಕೆಮ್ಮಿ ಮ್ಯಾನೇಜರ್ ಕಡೆ ನೋಡಿದಳು.

“ಬಾ ಭ್ರಮಾ ಕುಳಿತುಕೋ” ಎರಡನೇ ಟೇಬಲ್ಲಿನಿಂದ ಕ್ಲಬ್‌ಹೌಸ್‌ನಲ್ಲಿ ಕೇಳುತ್ತಿದ್ದ ಅದೇ ಧ್ವನಿ, ಅದೇ ಏರಿಳಿತ, ಅದೇ ಟೋನ್‌ನಲ್ಲಿ ಮಾತು ತೂರಿ ಬಂದಿತ್ತು. ಅಪ್ರತಿಭಳಾದ ಭ್ರಮಾ ಅಲ್ಲಿದ್ದ ಖುರ್ಚಿಯ ಮೇಲೆ ಕುಸಿದಂತೆ ಕುಳಿತಳು. ತಾನು ಕೇಳಿದ್ದನ್ನು, ನೋಡಿದ್ದನ್ನು ಮತ್ತೆ ಮತ್ತೆ ಖಚಿತಪಡಿಸಿಕೊಳ್ಳುವಂತೆ “ರೂಡಿ….” ತೊದಲಿದಳು. “ನಾನೇ ಭ್ರಮಾ, ಅನುಮಾನ ಬೇಡ” ಸ್ಪಷ್ಟ ಧ್ವನಿಯಲ್ಲಿ ಹೇಳಿದಳು.

ನಯನಾಗೆ ನಿಂತ ನೆಲ ಇಡೀ ಜಗತ್ತಿಗೆ ಒಂದು ಸುತ್ತು ಬಂದು ಮತ್ತೆ ಸ್ವಸ್ಥಾನದಲ್ಲಿ ನಿಂತಂತಾಯಿತು. ಎದುರಿದ್ದ ರೂಡಿ ಒಂದು ಗ್ಲಾಸ್‌ ನೀರು ಅವಳ ಕೈಗಿತ್ತ, ಅಲ್ಲಲ್ಲ ಕೈಗಿತ್ತಳು. ಒಂದೇ ಗುಟುಕಿಗೆ ಅಷ್ಟೂ ನೀರನ್ನು ಕುಡಿದ ನಯನಾ ತನಗೊಂದೂ ಅರ್ಥವಾಗುತ್ತಿಲ್ಲ ಎಂಬಂತೆ ಅವಳತ್ತ ನೋಡಿದಳು.

“ಭ್ರಮಾ ನೀನು ಮೊದಲ ಬಾರಿ ಮಾತಾಡಿದಾಗಲೇ ತುಂಬ ಅಕ್ಕರೆಯ ಧ್ವನಿ ನಿನ್ನದು ಅನ್ನಿಸಿತು. ನನ್ನ ಭಾವತೀರವನ್ನು ತಲುಪಬಲ್ಲವಳು ನೀನೊಬ್ಬಳೇ ಅನಿಸಿತು. ಆದರೆ ಎಲ್ಲವನ್ನೂ ಹೇಳುವ ಧೈರ್ಯವಿರಲಿಲ್ಲ. ಹಾಗಾಗಿಯೇ ನನಗೆ ತೀರಾ ಸಹಜವಾಗಿ ಒಲಿದಿರುವ ಗಂಡಿನ ಧ್ವನಿಯಲ್ಲಿ ಮೊದಲು ಮಾತಾಡಿದೆ, ನಿಧಾನಕ್ಕೆ ಸ್ನೇಹ ಬೆಳೆಸಿಕೊಂಡ ಮೇಲೆ ಎಲ್ಲಾ ಬಿಡಿಸಿ ಹೇಳೋಣ ಅಂದುಕೊಂಡೆ. ಆದರೆ ಭ್ರಮಾ ನೀನೆಲ್ಲಿ ನನ್ನ ನಿರಾಕರಿಸಿ ಬಿಡುತ್ತೀಯಾ ಎನ್ನುವ ಭಯದಲ್ಲಿ ಈ ಕ್ಷಣದವರೆಗೂ ಏನನ್ನೂ ಹೇಳಲಾಗಿಲ್ಲ”.

” ಒಂದು ಹೆಣ್ಣು ಮತ್ತೊಂದು ಹೆಣ್ಣಿನ ಸ್ನೇಹ ಬಯಸುವುದಕ್ಕೆ ಗಂಡಿನ‌ ಧ್ವನಿಯೇಕೆ ಬೇಕು ಮಿಸ್?” ನಯನಾದೀಗ ಅಪ್ಪಟ ಕಾರ್ಪೊರೇಟ್ ಧ್ವನಿ.
“ಯಾಕೆಂದರೆ ನನಗೆ ಹುಡುಗಿಯರ ಸಖ್ಯವೇ ಇಷ್ಟ”

“ಮದುವೆ ಆಗಿ, ಒಂದು ಮಗುವಿರುವ ಹೆಣ್ಣಿನ‌ ಜೊತೆ ಈ ರೀತಿ ಮಾತಾಡುತ್ತೀರಲ್ಲಾ? ಮೈಮೇಲೆ ಪ್ರಜ್ಞೆ ಇದೆಯೇ ನಿಮಗೆ?”

“ಭ್ರಮಾ ಪ್ಲೀಸ್, ನಿನ್ನನ್ನು ಬಲವಂತಪಡಿಸುತ್ತಿಲ್ಲ ನಾನು. ನೀನೆಂದರೆ ನನಗಿಷ್ಟ ಅಷ್ಟೇ. ಬೇಕಿದ್ದರೆ ಇನ್ನಷ್ಟು ಕಾಲ ಈ ಕಣ್ಣಾಮುಚ್ಚಾಲೆ ಆಟ ನನಗೆ ಮುಂದುವರೆಸಬಹುದಿತ್ತು. ಆದರೆ ನಾನು ಹಾಗೆ ಮಾಡಿಲ್ಲ.”.

“ಶಟಪ್…. ಮಾಡಿರೋದೇ ಮೋಸ. ಮತ್ತೆ ಸಮಜಾಯಿಷಿ ಕೊಟ್ಟುಕೊಳ್ಳುತ್ತೀರಲ್ಲಾ? ನಾಚಿಕೆ ಆಗೋದಿಲ್ವಾ? ” ಉರಿದು ಬಿದ್ದಳು ನಯನಾ.

“ಮೆತ್ತಗೆ ಭ್ರಮಾ, ಎಲ್ಲಾ ನಮ್ಮನ್ನೇ ಗಮನಿಸುತ್ತಿದ್ದಾರೆ. ನಾನು ಮೊದಲೇ ಎಲ್ಲಾ ಹೇಳಿಕೊಳ್ಳಬೇಕಿತ್ತು ನಿಜ. ಆದರೆ ಹಾಗೆ ಹೇಳಿಕೊಂಡರೆ ‘ಐ ಆ್ಯಮ್ ನಾಟ್ ಇಂಟ್ರೆಸ್ಟೆಡ್’ ಎಂದು ಎದ್ದು ಹೋಗುತ್ತಿದ್ದಿರಿ. ಸರಿ, ನಿಮಗೆ ಹಾಗೆ ಎದ್ದು ಹೋಗುವ ಹಕ್ಕು ಖಂಡಿತಾ ಇದೆ. ಆಗ ಅಂತಲ್ಲ ಈಗಲೂ ಇದೆ. ಆದರೆ ಒಮ್ಮೆ ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ, ಈಗ ನಿಮ್ಮ ಈ ನೈತಿಕತೆಯ ಸವಾಲು ಎದ್ದಿರುವುದು ನಾನು ಗಂಡಲ್ಲ ಹೆಣ್ಣು ಎಂದು ಗೊತ್ತಾದ ಮೇಲೆ, ಒಂದು ವೇಳೆ ಗಂಡೇ ಆಗಿದ್ದರೆ ಎಲ್ಲಾ ಎಲ್ಲೆಗಳನ್ನೂ ನೀವು ಮೀರುತ್ತಿರಲಿಲ್ಲವೇ? ನನ್ನ ಒಳದನಿಯನ್ನು ನೇರವಾಗಿ ನಿಮಗೆ ಹೇಳದೇ ಇದ್ದುದು ತಪ್ಪೇ, ಆದರೆ ನಿಮ್ಮ ತಪ್ಪಿಗೆ ಯಾವ ಸಮಜಾಯಿಷಿ ಕೊಟ್ಟುಕೊಳ್ಳುತ್ತೀರಿ ಭ್ರಮಾ?” ಮಾತು ಬಹುವಚನಕ್ಕೆ ತಿರುಗಿತ್ತು. “ನಿಮ್ಮೊಳಗೆ ನಡೆಯುತ್ತಿದ್ದ ಸಂಘರ್ಷ ನಾನು‌ ಊಹಿಸಿಕೊಳ್ಳಬಲ್ಲೆ. ಸಂಸಾರದಿಂದಲೇ ನಿಮ್ಮನ್ನು ವಿಮುಖಿಯಾಗಿಸಿದ್ದು ನಾನು ಎನ್ನುವ ಸಿಟ್ಟು ನಿಮಗಿರುವುದೂ ತಪ್ಪಲ್ಲ. ಆದರೆ ನೀವೂ ತೀರಾ ಸಲೀಸಾಗಿ ಕಳಚಿಕೊಳ್ಳಬಲ್ಲ ಸಂಬಂಧವೊಂದರಿಂದ ತಪ್ಪಿಸಿಕೊಳ್ಳುವ ಬದಲು ಮತ್ತಷ್ಟು ಅಂಟಿಕೊಂಡಿರಿ. ನಿಮಗೆ ಇದರಿಂದ ಹೊರಬರುವ ಎಲ್ಲಾ ಅವಕಾಶಗಳೂ ಇದ್ದವು, ಆದರೆ ನಾನು ಮತ್ತು ನನ್ನಂಥವರು ಹಾಗಲ್ಲ, ಬೇಕು ಬೇಕೆಂದು ಈ ಲೋಕ ಪ್ರವೇಶಿಸಿದವರಲ್ಲ. ನಮ್ಮ ಬದುಕು, ಭಾವನೆಯ ಮೇಲೆ ನಿಸರ್ಗ ಹೇರಿರುವ ಒತ್ತಡ ಇದು. ಭ್ರಮಾ, ನನಗೆ ನೀವಿಷ್ಟ. ಇಷ್ಟು ವರ್ಷಗಳ ನಿರಂತರ ಹುಡುಕಾಟ, ಹೊಂದಾಣಿಕೆ, ಬ್ರೇಕಪ್‌ಗಳ ನಂತರ ಸಿಕ್ಕವರು ನೀವು. ನನಗೆ ಅನ್ನಿಸಿದ ಹಾಗೆ ನಿಮಗೂ ಅನ್ನಿಸಬೇಕು ಅಂತಿಲ್ಲ. ಇಷ್ಟ ಇದ್ದರೆ ಜೊತೆಗಿರಿ ಪ್ಲೀಸ್” ಎಂದು ಅವಳತ್ತ ಕೈ ಚಾಚಿದಳು. ನಯನಾ ಅವಳ ಯಾವ ಪ್ರಶ್ನೆಗೂ ಉತ್ತರವಿಲ್ಲವೆಂಬಂತೆ, ಯಾವ ಮಾತಿಗೂ ಉತ್ತರಿಸಲು ಸಾಧ್ಯವಿಲ್ಲವೆಂಬಂತೆ ಗೋಡೆಯ ಮೇಲಿನ‌ ಪೈಂಟಿಂಗ್ ನೋಡುತ್ತಾ ಕೂತಳು.