ಅವತ್ತು ಮಾರ್ಫಾ ಅವರಿಬ್ಬರನ್ನೂ ತೋಟದಲ್ಲಿ ನೋಡುವ ಬಹಳ ಮೊದಲೇ ದುನ್ಯಾ ಅವನಿಗೆ ಬರೆಯಬೇಕಾಗಿ ಬಂದಿದ್ದ ಪತ್ರ ತೋರಿಸಿದ. ಅವನ ವಾಗ್ದಾನಗಳನ್ನೆಲ್ಲ ನಿರಾಕರಿಸಿ ಅವನು ಹೇಳಿದ ಹಾಗೆ ಗುಟ್ಟಾಗಿ ಭೇಟಿ ಮಾಡಲು ಸಾಧ್ಯವಿಲ್ಲ ಎಂದು ಬರೆದಿದ್ದಳು. ಅಲ್ಲದೆ ಅವನು ಮಾರ್ಫಾಗೆ ಅನ್ಯಾಯ ಮಾಡುತ್ತಿದ್ದಾನೆ, ಮಕ್ಕಳ ತಂದೆಯಾಗಿ, ಸಂಸಾರಸ್ಥನಾಗಿ ನಾಚಿಕೆಗೇಡಿನ ಕೆಲಸ ಮಾಡುತ್ತಿದ್ದಾನೆ ಎಂದು ಬರೆದಿದ್ದಳು. ತನ್ನಂಥ ಅಸಹಾಯಕ ಹುಡುಗಿಗೆ ತೊಂದರೆ ಕೊಡುವುದು ಸರಿಯಲ್ಲವೆಂದು ಹೇಳಿದ್ದಳು. ಒಂದೇ ಮಾತಿನಲ್ಲಿ ಹೇಳುವುದಾದರೆ, ಆ ಕಾಗದ ಮನಸ್ಸು ಕರಗಿಸುವ ಹಾಗಿತ್ತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ʼಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಅಧ್ಯಾಯ

 

ರಾಸ್ಕೋಲ್ನಿಕೋವ್ ಮಾರನೆಯ ದಿನ ತಡವಾಗಿ ಎದ್ದ. ನಿದ್ರೆ ಅರೆಬರೆಯಾಗಿದ್ದರಿಂದ ಲವಲವಿಕೆ ಇಲ್ಲದೆ ತಳಮಳಪಡುತ್ತ ಸಿಡುಕಿಕೊಂಡೇ ಎದ್ದ. ಆ ಇಕ್ಕಟ್ಟು ರೂಮನ್ನು ಅಸಹ್ಯಪಡುತ್ತ ನೋಡಿದ. ಹತ್ತು ಹೆಜ್ಜೆಗೆ ರೂಮಿನ ಇನ್ನೊಂದು ತುದಿ ಮುಟ್ಟಬಹುದು. ಮಾಮೂಲಿಗಿಂತ ಸ್ವಲ್ಪ ಎತ್ತರವಿರುವ ಮನುಷ್ಯ ಪೂರಾ ತಲೆ ಎತ್ತಿದರೆ ಚಾವಣಿ ತಲೆಗೆ ಬಡಿಯುತ್ತಿತ್ತು. ಧೂಳು ಮೆತ್ತಿದ್ದ ಹಳದಿಯ ವಾಲ್ ಪೇಪರು ಎಲ್ಲಾ ಕಡೆಯೂ ಕಿತ್ತು ಬಂದಿತ್ತು. ಅದಕ್ಕೆ ತಕ್ಕ ಹಾಗೆ ಪೀಠೋಪಕರಣ—ಮೂರು ಮುರುಕಲು ಕುರ್ಚಿ, ಮೂಲೆಯಲ್ಲೊಂದು ಬಣ್ಣ ಬಳಿದುಕೊಂಡ ಟೇಬಲ್ಲು, ಅದರ ಮೇಲೆ ಒಂದಷ್ಟು ಪುಸ್ತಕ, ನೋಟುಬುಕ್ಕುಗಳಿದ್ದವು. ಪುಸ್ತಕಗಳ ಮೇಲೆ ಧೂಳು ಕೂತಿದ್ದು ನೋಡಿದರೆ ಬಹಳ ದಿನದಿಂದ ಅವನ್ನು ಮುಟ್ಟಿಲ್ಲ ಅನ್ನಿಸುತ್ತಿತ್ತು.

ಇಡೀ ಒಂದು ಬದಿಯ ಗೋಡೆಯನ್ನೂ ರೂಮಿನ ಅರ್ಧ ಜಾಗವನ್ನೂ ಆಕ್ರಮಿಸಿದ್ದ ಸೋಫಾ ಇತ್ತು. ಯಾವುದೋ ಕಾಲದಲ್ಲಿ ಅದಕ್ಕೆ ಹಾಕಿದ್ದ ಹತ್ತಿ ಬಟ್ಟೆಯ ಕವರ್ ಈಗ ಚಿಂದಿ ಎದ್ದಿತ್ತು. ಸೋಫಾ ಈಗ ರಾಸ್ಕೋಲ್ನಿಕೋವ್‍ ನ ಮಂಚವಾಗಿ ಬಳಕೆಯಾಗುತ್ತಿತ್ತು. ಅದರ ಮೇಲೆ ಏನೂ ಹಾಸಿಕೊಳ್ಳದೆ, ತನ್ನ ಬಟ್ಟೆಯನ್ನೂ ಬದಲಾಯಿಸದೆ ಹಾಗೇ ಮಲಗಿ ಯೂನಿಫಾರಂ ಕೋಟನ್ನೇ ಹೊದೆಯುತ್ತಿದ್ದ. ತಲೆಯ ಕೆಳಕ್ಕೆ ಪುಟ್ಟದೊಂದು ದಿಂಬು ಇಟ್ಟುಕೊಳ್ಳುತಿದ್ದ. ಅದು ಎತ್ತರವಾಗಲೆಂದು ಒಗೆದ, ಒಗೆಯದ, ಕೈಗೆ ಸಿಕ್ಕ ಎಲ್ಲಾ ಬಟ್ಟೆ ತುರುಕುತ್ತಿದ್ದ. ಸೋಫಾದ ಮುಂದೆ ಪುಟ್ಟದೊಂದು ಮೇಜು ಇತ್ತು.

ಇದಕ್ಕಿಂತಲೂ ಹೀನವಾದ, ಅಸ್ತವ್ಯಸ್ತವಾದ ಸ್ಥಿತಿಯನ್ನು ಕಲ್ಪಿಸಿಕೊಳ್ಳುವುದೂ ಕಷ್ಟವಾಗಿತ್ತು. ಅವನ ಈಗಿದ್ದ ಮನಸ್ಥಿತಿಗೆ ಈ ಅಸ್ತವ್ಯಸ್ತ ಕೋಣೆ ಹೊಂದಿಕೆಯಾಗುತ್ತಿತ್ತು. ಅವನೀಗ ಎಲ್ಲರಿಂದಲೂ ದೂರ ಸರಿದು ಚಿಪ್ಪಿನೊಳಗೆ ಸೇರಿಕೊಂಡ ಆಮೆಯ ಹಾಗಿದ್ದ. ಆಗಾಗ ಬಂದು ರೂಮನ್ನು ಸ್ವಚ್ಛ ಮಾಡಿ ಹೋಗುತ್ತಿದ್ದ ಕೆಲಸದವಳು ಇಣುಕಿ ನೋಡಿದರೂ ಅವನ ಹೊಟ್ಟೆ ತೊಳಸಿ ಮೈ ಅದುರುತ್ತಿತ್ತು. ಯಾವುದಾದರೂ ಒಂದೇ ಸಂಗತಿಯನ್ನು ಮನಸ್ಸಿಗೆ ಹಚ್ಚಿಕೊಂಡು ಅದರಲ್ಲೇ ಮಗ್ನವಾಗಿರುವ ಮಾನೋಮ್ಯಾನಿಯಾಕ್‍ ಗಳಿಗೆ ಕೆಲವೊಮ್ಮೆ ಹೀಗಾಗುತ್ತದೆ. ಅವನ ರೂಮಿನ ಓನರು ಊಟ ಕಳಿಸುವುದು ನಿಲ್ಲಿಸಿ ಎರಡು ವಾರವಾಗಿತ್ತು. ಊಟವಿಲ್ಲದಿದ್ದರೂ ಅವಳ ಹತ್ತಿರ ಹೋಗಿ ಮಾತನಾಡಬೇಕು ಎಂದು ಅವನಿಗಿನ್ನೂ ಅನ್ನಿಸಿರಲಿಲ್ಲ. ಅವನ ಮನಸ್ಥಿತಿ ಹಾಗಿರುವುದು ಓನರಮ್ಮನ ಮನೆಯ ಆಳು ನಾಸ್ತಾಸ್ಯಾಗೆ ಸಂತೋಷ ತಂದಿತ್ತು. ಅವನ ಕೋಣೆಗೆ ಹೋಗಿ ಕಸಗುಡಿಸುವ, ಒರೆಸುವ ಕೆಲಸ ನಿಲ್ಲಿಸಿಬಿಟ್ಟಿದ್ದಳು. ವಾರಕ್ಕೆ ಒಂದು ಸಾರಿ, ಅದೂ ಅಕಸ್ಮಾತ್ತು ಅನ್ನುವ ಹಾಗೆ, ಪೊರಕೆ ಹಿಡಿದು ಅವನ ರೂಮಿಗೆ ಬರುತ್ತಿದ್ದಳು. ಈಗ ಅವಳೇ ಬಂದು ಎಬ್ಬಿಸುತ್ತಿದ್ದಳು.

‘ನಿದ್ದೆ ಮಾಡಿದ್ದು ಸಾಕು! ಏಳು! ಒಂಬತ್ತು ಗಂಟೆ ಆಯಿತು. ಟೀ ಬೇಕಾ? ತರತೇನೆ. ನಿನ್ನ ಹೊಟ್ಟೆಗೆ ಏನೂ ಬಿದ್ದಿಲ್ಲ!’
ಬಾಡಿಗೆದಾರ ಕಣ್ಣು ಬಿಟ್ಟ. ಮೆಟ್ಟಿಬಿದ್ದ. ನಾಸ್ತಾಸ್ಯಾಳ ಗುರುತು ಹಿಡಿದ.

‘ಓನರಮ್ಮ ಕಳಿಸಿದ್ದಾ?’ ಅನ್ನುತ್ತಾ ಸೋಫಾದ ಮೇಲೆ ನಿಧಾನವಾಗಿ ಎದ್ದು ಕೂತ.

‘ಹ್ಞಾ! ಕಳಿಸತಾಳೆ ನೋಡು ನಿನಗೆ?!’

ತಂಗಳು ಟೀ ತುಂಬಿದ ಬಿರುಕು ಬಿಟ್ಟ ಟೀ ಕೆಟಲು, ಎರಡು ಹಳದಿ ಸಕ್ಕರೆ ಅಚ್ಚು ಅವನೆದುರಿಗೆ ಇಟ್ಟಳು.

‘ತಗೋ ನಸ್ತಾಸ್ಯಾ,’ ಅನ್ನುತ್ತಾ ಎಲ್ಲ ಜೇಬು ಹುಡುಕಿ ಒಂದಷ್ಟು ದುಡ್ಡು ಅವಳ ಕೈಗೆ ಹಾಕುತ್ತಾ ‘ಈಗ ಹೋಗಿ ಬ್ರೆಡ್ಡು, ಕಡಮೆ ರೇಟಿನ ಸಾಸೇಜು ತೆಗೊಂಡು ಬಾ,’ ಅಂದ.

‘ಬ್ರೆಡ್ಡು ಈಗಲೇ ತರತೇನೆ. ಸಾಸೇಜು ಬದಲಾಗಿ ಕೋಸಿನ ಸೂಪು ಆಗಬಹುದಾ? ಚೆನ್ನಾಗಿದೆ. ನಿನ್ನೆ ಮಾಡಿದ್ದು. ನಿನಗೆ ಅಂತ ಎತ್ತಿಟ್ಟಿದ್ದೆ. ನೀನು ಎಷ್ಟು ಹೊತ್ತಾದರೂ ಬರಲೇ ಇಲ್ಲವಲ್ಲಾ! ಇಗೋ ತಂದೆ!’

ಅವಳು ಸೂಪು ತಂದ ತಕ್ಷಣ ಕುಡಿಯುವುದಕ್ಕೆ ಶುರು ಮಾಡಿದ. ನಾಸ್ತಾಸ್ಯಾ ಸೋಫಾದ ಮೇಲೆ ಅವನ ಪಕ್ಕದಲ್ಲಿ ಕೂತು ಹರಟೆ ಹೊಡೆದಳು. ಅವಳು ಹಳ್ಳಿಯ ಹೆಂಗಸು, ಮಾತು ಹೆಚ್ಚು.

‘ಗೊತ್ತಾ, ಓನರಮ್ಮ, ಪ್ರಾಸ್ಕೋವ್ಯಾ ಪಾವ್ಲೋವ್ನಾ, ನಿನ್ನ ಮೇಲೆ ಪೋಲೀಸಿನವರಿಗೆ ಕಂಪ್ಲೇಂಟು ಕೊಡಬೇಕು ಅಂತಿದ್ದಾಳೆ,’ ಅಂದಳು.

ಮುಖ ಗಂಟಿಕ್ಕಿ ಸಿಡುಕಿದ.
‘ಪೋಲೀಸಿನವರಿಗೆ? ಅವಳಿಗೇನು ಬೇಕಂತೆ?’

‘ನೀನು ಅವಳಿಗೆ ದುಡ್ಡು ಕೊಟ್ಟಿಲ್ಲ, ರೂಮೂ ಖಾಲಿ ಮಾಡಿಲ್ಲ. ಕಂಪ್ಲೇಂಟು ಕೊಡುವುದಕ್ಕೆ ಸಾಲದಾ ಇಷ್ಟು?’

‘ಅಯ್ಯೋ ದೆವ್ವಾ, ಈಗಲೇ ಬೇಕಾಗಿತ್ತಾ ಇದು,’ ಅನ್ನುತ್ತ ಹಲ್ಲು ಕಚ್ಚಿ ಗೊಣಗಿದ. ‘ಬುದ್ಧಿ ಇಲ್ಲ ಅವಳಿಗೆ, ಪೆದ್ದಿ. ಇವತ್ತೇ ಹೋಗಿ ಮಾತಾಡತೇನೆ,’ ಅಂದ.

‘ಅವಳೂ ಪೆದ್ದಿ, ನಾನೂ ಪೆದ್ದಿ, ನೀನು ಮಾತ್ರ ಭಾಳಾ ಜಾಣ ನೋಡು! ಮೂಲೆಯಲ್ಲಿ ಬಿಸಾಕಿದ ಗೋಣಿ ಚೀಲದ ಥರಾ ಬಿದ್ದಿರತೀಯ! ಮೊದಲು ಮಕ್ಕಳಿಗೆ ಪಾಠ ಹೇಳತೀನಿ ಅನ್ನುತಿದ್ದೆ. ಈಗ ಅದೂ ಇಲ್ಲ. ಬೇರೆ ಏನಾದರೂ ಯಾಕೆ ಮಾಡಬಾರದೂ?’

‘ಮಾಡತೇನೆ…,’ ಮನಸ್ಸಿಲ್ಲದವನ ಹಾಗೆ ನಿ‍ಷ್ಠುರವಾಗಿ ಹೇಳಿದ ರಾಸ್ಕೋಲ್ನಿಕೋವ್.

‘ಏನು ಮಾಡತೀಯ?’

‘ಕೆಲಸ…’

‘ಏನು ಕೆಲಸ?’
ಸ್ವಲ್ಪ ಹೊತ್ತು ಸುಮ್ಮನೆ ಇದ್ದು ಗಂಭೀರವಾಗಿ ಹೇಳಿದ, ‘ಯೋಚನೆ ಮಾಡತೀನಿ’.

ನಾಸ್ತಾಸ್ಯಾ ನಗುವಿನಲ್ಲಿ ಅದ್ದಿಕೊಂಡು ಕರಗಿಹೋದಳು. ಹೆಚ್ಚಾಗಿ ನಗುವ ಸ್ವಭಾವ ಅವಳದ್ದು. ನಗುವಂಥಾದ್ದು ಏನಾದರೂ ನಡೆದರೆ ಮೈಯೆಲ್ಲ ಕುಲುಕಿಸಿಕೊಂಡು ಸದ್ದಿಲ್ಲದೆ ನಗುತ್ತಿದ್ದಳು. ನಕ್ಕು ನಕ್ಕು ದಣಿದು ಕಣ್ಣಲ್ಲಿ ನೀರು ಬರುತ್ತಿತ್ತು.

ಕಷ್ಟಪಟ್ಟು ನಗು ನಿಲ್ಲಿಸಿ, ‘ಯೋಚನೆ ಮಾಡಿ ತುಂಬ ದುಡ್ಡು ಮಾಡಿರಬೇಕು ಅಲ್ಲವಾ ನೀನು?’ ಅಂದಳು.

‘ಬೂಟು ಇಲ್ಲದೆ ಹೇಗೆ ಹೋಗಿ ಮಕ್ಕಳಿಗೆ ಪಾಠ ಹೇಳಲಿ. ದರಿದ್ರ ಕೆಲಸ, ಥೂ.’

‘ಕುಡಿಯುವ ನೀರಿನ ಬಾವಿಗೆ, ಅನ್ನ ಕೊಡುವ ಕೆಲಸಕ್ಕೆ ಛೀ ಥೂ ಅನ್ನಬಾರದು.’

‘ಪಾಠ ಹೇಳಿದರೆ ಪುಡಿ ಕಾಸು ಕೊಡತಾರೆ. ಚಿಲ್ಲರೆ ಕಾಸು ಇಟ್ಟುಕೊಂಡು ಏನು ಮಾಡಬೇಕು?’ ತನಗೇ ಮಾತಾಡಿಕೊಳ್ಳುವವನ ಹಾಗೆ ಗೊಣಗಿದ.

‘ಒಂದೇ ಸಾರಿಗೆ ಖಜಾನೆ ಸಿಗಬೇಕು ಅನ್ನತೀಯಾ?’

ಅವಳನ್ನ ವಿಚಿತ್ರವಾಗಿ ನೋಡಿದ.
ಸ್ವಲ್ಪ ಹೊತ್ತು ಸುಮ್ಮನಿದ್ದು, ‘ಹ್ಞೂಂ, ಇಡೀ ಖಜಾನೆ ಬೇಕು,’ ಅಂದ.

‘ಸ್ವಲ್ಪ ಸಮಾಧಾನ ಇರಲಿ. ನನಗೆ ಭಯ ಜಾಸ್ತಿ. ಹೆದರಿಸಬೇಡ ನನ್ನ. ಹೋಗಿ ಬ್ರೆಡ್ಡು ತರಲಾ?’

‘ಹ್ಞೂಂ.’

‘ಅಯ್ಯೋ, ಮರೆತಿದ್ದೆ! ನಿನ್ನೆ ನಿನಗೊಂದು ಕಾಗದ ಬಂತು. ನೀನು ಎಲ್ಲೋ ಹೋಗಿದ್ದೆಯಲ್ಲ ಆವಾಗ.’

‘ಕಾಗದ! ನನಗೇ? ಯಾರು ಬರೆದಿದ್ದಾರೆ?’

‘ಗೊತ್ತಿಲ್ಲ. ಪೋಸ್ಟಿನವನಿಗೆ ಮೂರು ಕೊಪೆಕ್ ಕೊಟ್ಟು ಬಿಡಿಸಿಕೊಂಡೆ. ದುಡ್ಡು ಕೊಡತೀಯ ಅಲ್ಲವಾ?’

‘ತಗೊಂಡು ಬಾ. ದೇವರೇ! ತಗೊಂಡು ಬಾ!’ ಉತ್ಸಾಹ ಹುಟ್ಟಿ, ‘ದೇವರೇ, ದೇವರೇ!’ ಅಂದ.

ಕಾಗದ ತಂದುಕೊಟ್ಟಳು. ರಯಝಾನ್‍ ನಲ್ಲಿದ್ದ ಅವನ ಅಮ್ಮ ಕಾಗದ ಬರೆದಿದ್ದಳು. ಅಮ್ಮನಿಂದ ಕಾಗದ ಬಂದು ಬಹಳ ಕಾಲವಾಗಿತ್ತು. ಅದನ್ನು ನೋಡುತ್ತಿದ್ದ ಹಾಗೆ ಅವನ ಮುಖದ ಬಣ್ಣ ಕೆಟ್ಟಿತು. ಈಗ ಬೇರೆ ಇನ್ನೇನೋ ವಿಷಯ ಮನಸಿಗೆ ಬಂದು ಮಂಕಾದ..

‘ನಾಸ್ತಾಸ್ಯಾ, ಇಗೋ ನಿನ್ನ ಮೂರು ಕೊಪೆಕ್. ತಗೊ. ದಯವಿಟ್ಟು ಹೊರಡು. ದಮ್ಮಯ್ಯ ಅನ್ನತೇನಿ, ಹೋಗು,’ ಅಂದ.

ರಾಸ್ಕೋಲ್ನಿಕೋವ್ ಕೈಯಲ್ಲಿದ್ದ ಕಾಗದ ಕಂಪಿಸಿತು. ಅವಳ ಎದುರಿಗೆ ಕಾಗದವನ್ನು ಓದುವ ಮನಸ್ಸಿರಲಿಲ್ಲ. ಆ ಪತ್ರದ ಜೊತೆಗೆ ಒಬ್ಬನೇ ಇರಬೇಕು ಅನ್ನಿಸಿತ್ತು. ನಾಸ್ತಾಸ್ಯಾ ಹೋದ ಮೇಲೆ ತಟ್ಟನೆ ಕಾಗದಕ್ಕೆ ಮುತ್ತಿಟ್ಟ. ವಿಳಾಸ ಬರೆದಿದ್ದ ಅಕ್ಷರಗಳನ್ನೇ ಬಹಳ ಹೊತ್ತು ದಿಟ್ಟಿಸಿ ನೋಡಿದ. ಪರಿಚಿತವಾದ, ಪ್ರಿಯವಾದ ಅಕ್ಷರ ಅವು. ಚಿಕ್ಕ ಗಾತ್ರದ ಓರೆಯಾಗಿ ಬರೆದಿದ್ದ ಅಕ್ಷರ ಅವನಿಗೆ ಹಿಂದೊಮ್ಮೆ ಓದು ಬರಹ ಕಲಿಸಿದ್ದ ಅಮ್ಮನ ಅಕ್ಷರ. ಕವರ್ ಒಡೆಯುವುದಕ್ಕೆ ತಡಮಾಡಿದ. ಏನೋ ಭಯ ಅನ್ನಿಸುತ್ತಿತ್ತು. ಕೊನೆಗೂ ಕಾಗದ ಹೊರಕ್ಕೆ ತೆಗೆದ. ಸಣ್ಣ ಅಕ್ಷರದಲ್ಲಿ ಎರಡು ದೊಡ್ಡ ಹಾಳೆಗಳ ತುಂಬ ಬರೆದಿದ್ದಳು ಅಮ್ಮ :

‘ನನ್ನ ಪ್ರೀತಿಯ ರೋದ್ಯಾ,
ಪತ್ರದ ಮೂಲಕ ನಿನ್ನ ಜೊತೆಯಲ್ಲಿ ಮಾತನಾಡಿ ಆಗಲೇ ಎರಡು ತಿಂಗಳು ಕಳೆದು ಹೋಗಿವೆ. ಅದಕ್ಕಾಗಿ ಮನಸ್ಸು ನೋವು ಮಾಡಿಕೊಂಡು ಎಷ್ಟೋ ರಾತ್ರಿ ನಿದ್ರೆ ಇಲ್ಲದೆ ಕಳೆದಿದ್ದೇನೆ. ಇಷ್ಟು ಕಾಲ ಮೌನವಾಗಿದ್ದೆ ಅನ್ನುವ ಕಾರಣಕ್ಕೆ ನೀನು ನನ್ನನ್ನು ಬೈಯುವುದಿಲ್ಲ ಅಂದುಕೊಂಡಿದ್ದೇನೆ. ನಿನ್ನ ಮೇಲೆ ನನಗೆಷ್ಟು ಪ್ರೀತಿ, ದುನ್ಯಾಗೆ ಎಷ್ಟು ಪ್ರೀತಿ ನಿನಗೆ ಗೊತ್ತಿದೆ. ನಮ್ಮ ಪಾಲಿಗೆ ನೀನೇ ಎಲ್ಲಾ. ನೀನು ಕೆಲವು ತಿಂಗಳ ಹಿಂದೆ ಯೂನಿವರ್ಸಿಟಿ ಬಿಟ್ಟೆ, ದುಡ್ಡು ತರುತ್ತಿದ್ದ ಮನೆಪಾಠ ತಪ್ಪಿತು, ನಿನ್ನ ಖರ್ಚಿಗೆ ಕಾಸಿಲ್ಲ ಅನ್ನುವುದು ತಿಳಿಯಿತು. ನಾನೇನು ಮಾಡಲಿ? ನನಗೆ ಬರುವುದು ವರ್ಷಕ್ಕೆ ನೂರಿಪ್ಪತ್ತು ರೂಬಲ್ ಪಿಂಚಣಿ. ನಾಲ್ಕು ತಿಂಗಳ ಹಿಂದೆ ನಿನಗೆ ಕಳಿಸಿದ ಹದಿನೈದು ರೂಬಲ್ ನಾನು ಸಾಲ ಮಾಡಿದ ಹಣ. ನನ್ನ ಪಿಂಚಣಿ ಅಡ ಇಟ್ಟು ನಮ್ಮೂರಿನ ವ್ಯಾಪಾರಸ್ಥ ಅಫಾನ್ಸೇ ಇವಾನೊವಿಚ್ ವಕ್ರೂಶಿನ್ ಹತ್ತಿರ ಸಾಲ ತೆಗೆದುಕೊಂಡಿದ್ದೆ. ಅವನು ನಿಮ್ಮಪ್ಪನ ಸ್ನೇಹಿತ, ಒಳ್ಳೆಯವನು. ನನ್ನ ಪರವಾಗಿ ಪಿಂಚಣಿ ಪಡೆದುಕೊಳ್ಳುವ ಅಧಿಕಾರ ಅವನಿಗೆ ಬರೆದುಕೊಟ್ಟದ್ದರಿಂದ ಸಾಲ ಪೂರಾ ತೀರುವವರೆಗೆ ಕಾಯಬೇಕಾಗಿತ್ತು. ಈಗ ಸಾಲ ತೀರಿತು. ಹಾಗಾಗಿ ಇಷ್ಟು ದಿನ ನಿನಗೆ ದುಡ್ಡು ಕಳಿಸಲಿಲ್ಲ. ದೇವರು ದೊಡ್ಡವನು. ಈಗ ದುಡ್ಡು ಕಳಿಸಬಹುದು. ನಾವು ಅದೃಷ್ಟವಂತರು ಅಂತ ಜಂಬ ಕೊಚ್ಚಿಕೊಳ್ಳಬಹುದು. ಅದೇ ವಿಷಯ ಈಗ ನಿನಗೆ ಹೇಳುವುದಕ್ಕೆ ಬಂದೆ.

ಮೊದಲನೆಯದಾಗಿ, ನಿನಗೆ ಗೊತ್ತಾ ರೋದ್ಯಾ ನಿನ್ನ ತಂಗಿ ಒಂದೂವರೆ ತಿಂಗಳಿಂದ ನನ್ನ ಜೊತೆ ಮನೆಯಲ್ಲೇ ಇದ್ದಾಳೆ. ಇನ್ನು ಮುಂದೆ ನಾವು ಬೇರೆಯಾಗುವ ಮಾತೇ ಇಲ್ಲ. ದೇವರು ದೊಡ್ಡವನು. ಅವಳ ಕಷ್ಟ ಕಾಲ ಮುಗಿಯಿತು. ಇಷ್ಟು ದಿನ ನಿನ್ನಿಂದ ಬಚ್ಚಿಟ್ಟ ವಿಷಯವನ್ನೆಲ್ಲಾ ಈಗ ನಿನಗೆ ಕ್ರಮವಾಗಿ ಹೇಳುತ್ತೇನೆ.

ಎರಡು ತಿಂಗಳ ಹಿಂದೆ ನೀನು ಬರೆದ ಕಾಗದದಲ್ಲಿ ಕೇಳಿದ್ದೆ—‘ಯಾರೋ ಹೇಳಿದರು, ಸ್ವಿದ್ರಿಗೈಲೋವ್ ಮನೆಯಲ್ಲಿ ದುನ್ಯಾ ಕಷ್ಟಪಡತಿದ್ದಾಳಂತೆ, ಏನು ವಿಚಾರ,’ ಅಂತ. ನಾನೇನಾದರೂ ಸತ್ಯ ಬರೆದಿದ್ದರೆ ನೀನು ಎಲ್ಲಾ ಕೆಲಸ ಹಾಗೇ ಬಿಟ್ಟು ಅಲ್ಲಿಂದ ನಡೆದುಕೊಂಡೇ ಊರಿಗೆ ಬಂದುಬಿಡುತ್ತಿದ್ದೆ. ನಿನ್ನ ಸ್ವಭಾವ ಗೊತ್ತು. ನಿನ್ನ ತಂಗಿಯ ಮೇಲೆ ನಿನಗೆಷ್ಟು ಪ್ರೀತಿಯಿದೆ, ಅವಳಿಗೆ ಅವಮಾನವಾದರೆ ನೀನು ಸಹಿಸಲ್ಲ ಅನ್ನುವುದೂ ಗೊತ್ತು. ಏನು ಮಾಡಲಿ? ದಿಕ್ಕು ತೋಚಲಿಲ್ಲ. ನನಗೂ ಪೂರಾ ವಿಚಾರ ಗೊತ್ತಿರಲಿಲ್ಲ.

ಏನೆಂದರೆ ಹೋದ ವರ್ಷ ದುನ್ಯಾ ಗೌರ್ನೆಸ್ ಆಗಿ ಕೆಲಸಕ್ಕೆ ಸೇರಿದಾಗ ವರ್ಷದ ಸಂಬಳ ನೂರು ರೂಬಲ್ ಪೂರ್ತಿ ಮುಂಗಡ ತೆಗೆದುಕೊಂಡು, ಸಂಬಳದಲ್ಲಿ ಹಿಡಿದುಕೊಳ್ಳಿ ಅಂದಿದ್ದಳು. ಅದಕ್ಕೇ ಅವಳು ಸಾಲ ತೀರುವವರೆಗೂ ಆ ಕೆಲಸ ಬಿಟ್ಟು ಬರುವ ಹಾಗಿರಲಿಲ್ಲ. ಈಗ ನಿನಗೆ ಹೇಳತಾ ಇದ್ದೇನೆ ರೋದ್ಯಾ, ಅವಳು ಸಂಬಳ ಮುಂಗಡ ತೆಗೆದುಕೊಂಡಿದ್ದು ಹೋದ ವರ್ಷ ನಿನಗೆ ತುರ್ತಾಗಿ ಬೇಕಾಗಿದ್ದ ಅರುವತ್ತು ರೂಬಲ್ ಕಳಿಸುವುದಕ್ಕೆ ಅಂತಲೇನೇ. ಅದು ದುನ್ಯಾ ಉಳಿಸಿದ್ದ ಹಣ ಅಂತ ಆಗ ಸುಳ್ಳು ಹೇಳಿದ್ದೆವು. ಈಗ ನಿಜ ಹೇಳಿದ್ದೇನೆ. ದೇವರು ದೊಡ್ಡವನು, ಎಲ್ಲಾ ಒಳ್ಳೆಯದಾಗಿದೆ. ದುನ್ಯಾಗೆ ನಿನ್ನ ಮೇಲೆ ಪ್ರೀತಿ ಜಾಸ್ತಿ. ಎಂಥಾ ದೊಡ್ಡ ಮನಸ್ಸು ಅವಳದ್ದು. ಸ್ವಿದ್ರಿಗೈಲೋವ್ ಅವಳನ್ನ ತುಂಬ ಕೆಟ್ಟದಾಗಿ ನಡೆಸಿಕೊಂಡ. ಊಟಕ್ಕೆ ಕೂತಾಗ ಅವಮಾನ ಮಾಡುತ್ತಿದ್ದ. ಅಣಕಿಸುತ್ತಿದ್ದ. ಅದೆಲ್ಲಾ ಹೇಳಿದರೆ ನಿನ್ನ ಮನಸ್ಸು ನೋಯತ್ತೆ. ಹೇಗೂ ಎಲ್ಲಾ ಮುಗಿದಿದೆ, ಆ ವಿಚಾರ ಬೇಡ.

ಸ್ವಿದ್ರಿಗೈಲೋವ್‍ ನ ಹೆಂಡತಿ ಮಾರ್ಫಾ ಒಳ್ಳೆಯವಳು, ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಮನೆಯಲ್ಲಿದ್ದ ಮಿಕ್ಕವರು ಹಾಗಿರಲಿಲ್ಲ. ಅದರಲ್ಲೂ ಸ್ವಿದ್ರಿಗೈಲೋವ್, ಸೈನ್ಯದಲ್ಲಿದ್ದವನು. ಕುಡಿತದದ ಅಭ್ಯಾಸ. ಕುಡಿದು ಮೈ ಮರೆತಾಗ ತುಂಬ ಕೆಟ್ಟದಾಗಿ ನಡೆದುಕೊಳ್ಳುತಿದ್ದ. ಆ ಹುಚ್ಚ ಬಹಳ ಕಾಲದಿಂದ ದುನ್ಯಾ ಬಗ್ಗೆ ತಲೆಕೆಡಿಸಿಕೊಂಡಿದ್ದ. ಅವಳ ಜೊತೆಯಲ್ಲಿ ಒರಟಾಗಿ ನಡಕೊಳ್ಳತಾ ಇದ್ದದ್ದು, ಕೋಪ, ತಿರಸ್ಕಾರ ತೋರಿಸತಾ ಇದ್ದದ್ದು ಅವೆಲ್ಲ ಬರೀ ಮುಖವಾಡ. ಅವನ ಆಸೆ ಬಚ್ಚಿಟ್ಟುಕೊಂಡಿದ್ದ. ವಯಸ್ಸಾದವನು, ಮಕ್ಕಳ ತಂದೆ, ಮನೆಯ ಮುಖ್ಯಸ್ಥ, ತನಗೆ ಈ ಹುಡುಗಿ ಬಗ್ಗೆ ಇಂಥಾ ಆಸೆ ಇದೆಯಲ್ಲಾ ಅಂತ ನಾಚಿಕೊಂಡು ದುನ್ಯಾ ಬಗ್ಗೆ ಕೋಪ ಮಾಡಿಕೊಳ್ಳುತ್ತಿದ್ದನೇನೋ. ಮನಸ್ಸಿನಲ್ಲಿರುವುದು ಬೇರೆಯವರಿಗೆ ಗೊತ್ತಾಗದಿರಲಿ ಅಂತ ಹಾಗೆ ಮಾಡುತ್ತಿದ್ದರೂ ಇರಬಹುದು. ಕೊನೆಗೆ ತಡೆದುಕೊಳ್ಳಲಾಗದೆ ನನ್ನ ಮದುವೆಯಾಗು ಅಂತ ದುನ್ಯಾಳನ್ನ ಕೇಳಿದ. ಏನೇನೋ ಕೊಡತೇನೆ, ಬೇಕಾದರೆ ಈ ಊರು ಬಿಟ್ಟು ಓಡಿ ಹೋಗಣ, ಬೇರೆ ದೇಶಕ್ಕೆ ಹೋಗಣ ಅಂತೆಲ್ಲ ಹೇಳಿದ. ಅವಳು ಎಷ್ಟು ಕಷ್ಟಪಟ್ಟಿರಬಹುದು, ನೀನೇ ಊಹೆ ಮಾಡಿಕೋ!

ಅವಳು ತಕ್ಷಣ ಕೆಲಸ ಬಿಡುವ ಹಾಗಿರಲಿಲ್ಲ. ಸಾಲ ಇದ್ದಿದ್ದು ಒಂದು ಕಾರಣ, ತಕ್ಷಣ ಬಿಟ್ಟರೆ ಸ್ವಿಡ್ರಿಗೈಲೋವನ ಹೆಂಡತಿ ಮಾರ್ಫಾಗೆ ಅನುಮಾನ ಬರುತ್ತದೆ, ಅವರ ಸಂಸಾರದ ನೆಮ್ಮದಿ ಕೆಡುತ್ತದೆ, ಅದು ಇನ್ನೊಂದು ಕಾರಣ. ಅಲ್ಲದೆ ದುನ್ಯಾ ವಿಚಾರದಲ್ಲೂ ಸುಮ್ಮನೆ ಗುಲ್ಲಾಗುತ್ತಿತ್ತು. ಇನ್ನೂ ಒಂದೂವರೆ ತಿಂಗಳು ಅಲ್ಲೇ ಕಷ್ಟ ಅನುಭವಿಸಿಕೊಂಡು ಇರುವುದಕ್ಕೆ ಬೇರೆ ಕಾರಣಗಳೂ ಇದ್ದವು. ದುನ್ಯಾ ನಿನಗೆ ಗೊತ್ತಲ್ಲ, ಜಾಣೆ, ಸಹನೆ ಜಾಸ್ತಿ ಏನಾದರೂ ಮನಸ್ಸಿನ ಸ್ತಿಮಿತ ಕಳಕೊಳ್ಳಲ್ಲ. ನನಗೆ ಆಗಾಗ ಸುದ್ದಿ ಕಳಿಸುತ್ತಾ ಇದ್ದರೂ ನನಗೆ ಬೇಜಾರಾಗುತ್ತದೆ ಅಂತ ಇದನ್ನೆಲ್ಲ ಅವಳು ಹೇಳಿರಲೇ ಇಲ್ಲ.

ಅವತ್ತೊಂದು ದಿನ ದುನ್ಯಾ ಹತ್ತಿರ ತನ್ನ ಗಂಡ ತೋಟದಲ್ಲಿ ಗೋಗರೆಯುತ್ತಾ ಇದ್ದದ್ದನ್ನು ಮಾರ್ಫಾ ಅಕಸ್ಮಾತ್ ಕೇಳಿಸಿಕೊಂಡಳು. ದುನ್ಯಾ ಬಗ್ಗೆ ತಪ್ಪು ತಿಳಿದುಕೊಂಡು ಎಲ್ಲಾ ಅವಳದೇ ತಪ್ಪು ಅಂದಳು. ಭಯಂಕರ ಜಗಳ ನಡೆಯಿತು. ಅಲ್ಲೇ ತೋಟದಲ್ಲೇ ದುನ್ಯಾಳನ್ನ ಹಿಡಿದು ಹೊಡೆದಳು ಮಾರ್ಫಾ. ದುನ್ಯಾ ಮಾತು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಒಂದು ಗಂಟೆ ಹೊತ್ತು ಕೂಗಾಡಿದಳು. ಆ ಕ್ಷಣವೇ ಊರು ಬಿಟ್ಟು ಹೋಗಬೇಕು ಎಂದು ಹೇಳಿ ಅವಳ ಬಟ್ಟೆ ಬರೆ ಸಾಮಗ್ರಿಗಳನ್ನೆಲ್ಲ ಪೆಟ್ಟಿಗೆಗೂ ಹಾಕದೆ ಹಾಗೆ ಹಾಗೇ ಬೋಳು ಗಾಡಿಗೆ ಎಸೆದು ಕಳಿಸಿಬಿಟ್ಟಳು. ಮಳೆ ಬೇರೆ ಶುರುವಾಯಿತು. ದುನ್ಯಾಗೆ ಅವಮಾನವಾಗಿತ್ತು ರೈತರ ಬೋಳು ಗಾಡಿಯಲ್ಲಿ ಕೂತು ಹತ್ತು ಮೈಲಿ ಬರಬೇಕಾಯಿತು.

ಈಗ ಹೇಳು, ಎರಡು ತಿಂಗಳ ಹಿಂದೆ ನೀನು ಬರೆದ ಕಾಗದಕ್ಕೆ ನಾನೇನು ಉತ್ತರ ಬರೆಯಬೇಕಾಗಿತ್ತು? ನನಗೇ ದುಃಖವಾಗಿತ್ತು. ನೀನು ತಾನೇ ಏನು ಮಾಡುತ್ತಿದ್ದೆ? ನಿನಗೆ ಸತ್ಯ ಬರೆಯುವ ಧೈರ್ಯವಾಗಲಿಲ್ಲ. ಬರೆದಿದ್ದರೆ ನೀನೂ ಬೇಜಾರಾಗಿ, ಮನಸ್ಸು ಕೆಡಿಸಿಕೊಂಡು, ಸಿಟ್ಟು ಮಾಡಿಕೊಳ್ಳುತ್ತಿದ್ದೆ.. ಇದೆಲ್ಲ ನಿನಗೆ ಬರೆಯಬೇಡ ಅಂತ ದುನ್ಯಾ ಬೇರೆ ಒತ್ತಾಯ ಮಾಡುತ್ತಿದ್ದಳು. ಮನಸ್ಸಿನಲ್ಲಿ ಅಷ್ಟೊಂದು ದುಃಖ ಇಟ್ಟುಕೊಂಡು ಸುಮ್ಮಸುಮ್ಮನೆ ಏನೇನೋ ಬರೆದು ಕಾಗದ ತುಂಬಿಸುವುದಕ್ಕೆ ಮನಸ್ಸು ಬರಲಿಲ್ಲ.

ಅವನ ಮನಸ್ಥಿತಿ ಹಾಗಿರುವುದು ಓನರಮ್ಮನ ಮನೆಯ ಆಳು ನಾಸ್ತಾಸ್ಯಾಗೆ ಸಂತೋಷ ತಂದಿತ್ತು. ಅವನ ಕೋಣೆಗೆ ಹೋಗಿ ಕಸಗುಡಿಸುವ, ಒರೆಸುವ ಕೆಲಸ ನಿಲ್ಲಿಸಿಬಿಟ್ಟಿದ್ದಳು. ವಾರಕ್ಕೆ ಒಂದು ಸಾರಿ, ಅದೂ ಅಕಸ್ಮಾತ್ತು ಅನ್ನುವ ಹಾಗೆ, ಪೊರಕೆ ಹಿಡಿದು ಅವನ ರೂಮಿಗೆ ಬರುತ್ತಿದ್ದಳು.

ಒಂದು ತಿಂಗಳು ಊರಲ್ಲೆಲ್ಲ ಇದೇ ಮಾತು. ನಾವು ಚರ್ಚಿಗೆ ಹೋಗುವುದೂ ಕಷ್ಟವಾಯಿತು. ಜನ ನಮ್ಮನ್ನು ವಿಚಿತ್ರವಾಗಿ ನೋಡಿ ನಮಗೆ ಕೇಳುವ ಹಾಗೇ ಆಡಿಕೊಳ್ಳುತ್ತಿದ್ದರು. ಪರಿಚಯದವರು ಕೂಡ ನಮ್ಮನ್ನ ಮಾತಾಡಿಸುತ್ತಿರಲಿಲ್ಲ. ಅಂಗಡಿ ಹುಡುಗರು, ಆಫೀಸು ಜವಾನರು ಎಲ್ಲ ಸೇರಿಕೊಂಡು ನಮ್ಮ ಮನೆಯ ಬಾಗಿಲಿಗೆ ಡಾಂಬರು ಬಳಿಯುವ ಯೋಚನೆ ಮಾಡಿದ್ದಾರೆ ಅನ್ನುವದು ಗೊತ್ತಾಯಿತು. ಮನೆಯ ಓನರು ಮನೆ ಖಾಲಿ ಮಾಡಿ ಅನ್ನುವುದಕ್ಕೆ ಶುರು ಮಾಡಿದ.

ಇದಕ್ಕೆಲ್ಲ ಮಾರ್ಫಾ ಕಾರಣ. ಸಿಕ್ಕ ಸಿಕ್ಕವರ ಹತ್ತಿರವೆಲ್ಲ ದುನ್ಯಾ ಬಗ್ಗೆ ಕೆಟ್ಟ ಮಾತು ಹೇಳುತ್ತಿದ್ದಳು. ನಮ್ಮೂರಿವನರೆಲ್ಲ ಅವಳಿಗೆ ಗೊತ್ತು. ಒಂದು ತಿಂಗಳು ನಮ್ಮೂರಿಗೆ ಆಗಾಗ ಬರುತ್ತಿದ್ದಳು. ತನ್ನ ಮನೆಯ ವಿಚಾರ ದೂರು ಹೇಳಿಕೊಂಡು ಗಂಡನನ್ನು ಬೈಯುವ ಕೆಟ್ಟ ಗುಣ ಅವಳದು. ಎಲ್ಲಾ ಕಡೆ ದುನ್ಯಾ ಕಥೆ ಹರಡಿತು. ಇಡೀ ಜಿಲ್ಲೆಗೇ ಗೊತ್ತಾಯಿತು. ನಾನು ಹುಷಾರು ತಪ್ಪಿದೆ. ದುನ್ಯಾ ಗಟ್ಟಿ ಮನಸ್ಸಿನವಳು. ಅವಳು ಇದನ್ನೆಲ್ಲ ಹೇಗೆ ಎದುರಿಸಿದಳು ಅಂತ ನೀನು ನೋಡಬೇಕಾಗಿತ್ತು. ನನಗೇ ಸಮಾಧಾನ ಹೇಳಿ ಧೈರ್ಯ ತುಂಬುತ್ತಾ ಇದ್ದಳು. ದೇವತೆ ನನ್ನ ಮಗಳು. ಸದ್ಯ, ದೇವರು ದೊಡ್ಡವನು. ನಮ್ಮ ಕಷ್ಟಕ್ಕೆಲ್ಲ ಬೇಗ ಕೊನೆ ಬಂದಿತು. ಸ್ವಿಡ್ರಿಗೈಲೋವ್ ಪಶ್ಚಾತ್ತಾಪ ಪಟ್ಟ. ದುನ್ಯಾ ಬಗ್ಗೆ ಅಯ್ಯೋ ಪಾಪ ಅನ್ನಿಸಿ ತನ್ನ ಹೆಂಡತಿ ಮಾರ್ಫಾಗೆ ಎಲ್ಲ ಥರದ ಪುರಾವೆ ಕೊಟ್ಟು ದುನ್ಯಾ ಮುಗ್ಧಳು ಅಂತ ಹೇಳಿದ.

ಅವತ್ತು ಮಾರ್ಫಾ ಅವರಿಬ್ಬರನ್ನೂ ತೋಟದಲ್ಲಿ ನೋಡುವ ಬಹಳ ಮೊದಲೇ ದುನ್ಯಾ ಅವನಿಗೆ ಬರೆಯಬೇಕಾಗಿ ಬಂದಿದ್ದ ಪತ್ರ ತೋರಿಸಿದ. ಅವನ ವಾಗ್ದಾನಗಳನ್ನೆಲ್ಲ ನಿರಾಕರಿಸಿ ಅವನು ಹೇಳಿದ ಹಾಗೆ ಗುಟ್ಟಾಗಿ ಭೇಟಿ ಮಾಡಲು ಸಾಧ್ಯವಿಲ್ಲ ಎಂದು ಬರೆದಿದ್ದಳು. ಅಲ್ಲದೆ ಅವನು ಮಾರ್ಫಾಗೆ ಅನ್ಯಾಯ ಮಾಡುತ್ತಿದ್ದಾನೆ, ಮಕ್ಕಳ ತಂದೆಯಾಗಿ, ಸಂಸಾರಸ್ಥನಾಗಿ ನಾಚಿಕೆಗೇಡಿನ ಕೆಲಸ ಮಾಡುತ್ತಿದ್ದಾನೆ ಎಂದು ಬರೆದಿದ್ದಳು. ತನ್ನಂಥ ಅಸಹಾಯಕ ಹುಡುಗಿಗೆ ತೊಂದರೆ ಕೊಡುವುದು ಸರಿಯಲ್ಲವೆಂದು ಹೇಳಿದ್ದಳು. ಒಂದೇ ಮಾತಿನಲ್ಲಿ ಹೇಳುವುದಾದರೆ, ಆ ಕಾಗದ ಮನಸ್ಸು ಕರಗಿಸುವ ಹಾಗಿತ್ತು. ಇವತ್ತೂ ಅದನ್ನು ಓದಿದರೆ ನನಗೇ ಕಣ್ಣೀರು ಬರುತ್ತದೆ. ಜೊತೆಗೇ ಮನೆಯ ಆಳುಕಾಳುಗಳು ದುನ್ಯಾಳದು ಏನೂ ತಪ್ಪಿಲ್ಲವೆಂದು ಹೇಳಿದರು.

ಮನೆಯ ಆಳುಗಳಿಗೆ ಯಾವಾಗಲೂ ಇಂಥ ವಿಚಾರ ಪೂರ್ತಿಯಾಗಿ ಗೊತ್ತಿರತ್ತೆ. ಮಾರ್ಫಾಗೆ ಆಶ್ಚರ್ಯವಾಯಿತು, ಮನಸ್ಸು ಕದಡಿ ಹೋಯಿತು. ದುನ್ಯಾಶಾ ಮುಗ್ಧೆ ಅನ್ನುವುದು ಗೊತ್ತಾದ ತಕ್ಷಣ ನೇರವಾಗಿ ಚರ್ಚಿಗೆ ಹೋಗಿ, ಮೊಳಕಾಲೂರಿ ಕೂತು ಕಣ್ಣಲ್ಲಿ ನೀರು ತುಂಬಿಕೊಂಡು ನನ್ನ ಕರ್ತವ್ಯ ಮಾಡುವುದಕ್ಕೆ ಶಕ್ತಿ ಕೊಡು ಎಂದು ದೇವರನ್ನು ಬೇಡಿಕೊಂಡಳು. ಚರ್ಚಿನಿಂದ ಎಲ್ಲೂ ಹೋಗದೆ ನೇರವಾಗಿ ನಮ್ಮ ಮನೆಗೆ ಬಂದಳು. ನಮಗೆ ಎಲ್ಲಾ ಹೇಳಿದಳು, ಬಿಕ್ಕಿ ಬಿಕ್ಕಿ ಅತ್ತಳು. ಪಶ್ಚಾತ್ತಾಪಪಟ್ಟು ದುನ್ಯಾಳನ್ನು ಆಲಂಗಿಸಿಕೊಂಡಳು. ಕ್ಷಮೆ ಕೇಳಿದಳು. ಅವತ್ತೇ ಬೆಳಗ್ಗೆ ಒಂದಿಷ್ಟೂ ತಡಮಾಡದೆ ನಮ್ಮೂರಿನ ಎಲ್ಲ ಮನೆಗೂ ಹೋಗಿ ದುನ್ಯಾ ಮುಗ್ಧಳು, ಒಳ್ಳೆಯ ನಡತೆಯವಳು ಎಂದು ಹೇಳಿಕೊಂಡು ಕಣ್ಣೀರಿಟ್ಟು ಬಂದಳು.

ದುನ್ಯಾ ಬರೆದ ಕಾಗದ ಎಲ್ಲರಿಗೂ ತೋರಿಸಿದಳು, ಜೋರಾಗಿ ಓದಿದಳು, ಅದನ್ನು ಪ್ರತಿಮಾಡಿಕೊಳ್ಳುವುದಕ್ಕೂ ಬಿಟ್ಟಳು. (ಇದು ಅನಗತ್ಯವಾಗಿತ್ತೆಂದು ನನ್ನ ಭಾವನೆ.).ಎಲ್ಲರ ಮನೆಗೂ ಹೋಗುವುದಕ್ಕೆ ಕೆಲವು ದಿನ ಬೇಕಾದವು. ಅವರ ಮನೆಗೆ ಹೋದಿರಿ ನಮ್ಮ ಮನೆಗೆ ಬರಲಿಲ್ಲ ಎಂದು ಕೆಲವರು ಬೇಸರ ಮಾಡಿಕೊಂಡದ್ದರಿಂದ ದಿನ ನಿಗದಿಮಾಡಿಕೊಂಡು ಎಲ್ಲರ ಮನೆಗೂ ಹೋದಳು. ಹಾಗಾಗಿ ಯಾರ ಮನೆಗೆ ಯಾವತ್ತು ಹೋಗುತ್ತಾಳೆ, ಯಾರ ಮನೆಯಲ್ಲಿ ಪತ್ರ ಓದುತ್ತಾಳೆ ಎಲ್ಲರಿಗೂ ಗೊತ್ತಾಗಿತ್ತು. ಆಗಲೇ ಹಲವು ಬಾರಿ ಪತ್ರ ವಾಚನ ಕೇಳಿಸಿಕೊಂಡಿದ್ದವರೂ ಮತ್ತೆ ಗೆಳೆಯರ ಮನೆಗೆ ಬಂದು ಕೇಳಿಸಿಕೊಂಡರು. ನನ್ನ ಕೇಳಿದರೆ ಇದೆಲ್ಲ ಅತಿಯಾಯಿತು. ಆದರೂ ಮಾರ್ಫಾ ಇರುವುದೇ ಹಾಗೆ. ಏನಾದರೂ ಆಗಲಿ, ದುನ್ಯಾ ಹೆಸರಿಗೆ ಹತ್ತಿದ್ದ ಮಸಿ ಒರೆಸಿಬಿಟ್ಟಳು. ಈ ಪ್ರಸಂಗದಲ್ಲಿ ಕೆಟ್ಟತನದ ಕಳಂಕ ಅವಳ ಗಂಡನಿಗೆ ಮತ್ತಿಕೊಂಡಿತು. ಅವನನ್ನು ನೆನೆದರೂ ಅಯ್ಯೋ ಪಾಪ ಅನ್ನಿಸುತ್ತದೆ. ಎಷ್ಟೋ ಮನೆಗಳವರು ಮಕ್ಕಳಿಗೆ ಪಾಠ ಹೇಳಿಕೊಡು ಬಾ ಎಂದು ದುನ್ಯಾಳನ್ನು ಕರೆದರು. ಆದರೆ ಅವಳು ಒಪ್ಪಲಿಲ್ಲ. ಜನ ಅವಳಿಗೆ ವಿಶೇಷ ಗೌರವ ಕೊಡುವುದಕ್ಕೆ ಶುರುಮಾಡಿದರು.

ಹೀಗೆಲ್ಲ ಆಗಿದ್ದರಿಂದಲೇನೋ ಏನೋ ನಮ್ಮ ಅದೃಷ್ಟ ಬದಲಾಗುವಂಥ ಘಟನೆ ನಡೆಯಿತು. ಏನೆಂದರೆ, ರೋದ್ಯಾ, ಒಳ್ಳೆಯ ವರ ಬಂದಿತ್ತು. ದುನ್ಯಾ ಒಪ್ಪಿಕೊಂಡಳು. ಗಂಡಿನ ಕಡೆಯವರಿಗೆ ಬೇಗ ಒಪ್ಪಿಗೆ ತಿಳಿಸಬೇಕಾಗಿತ್ತು. ದಯವಿಟ್ಟು ನಿನ್ನ ತಂಗಿಯನ್ನಾಗಲೀ ನನ್ನನಾಗಲೀ ತಪ್ಪು ತಿಳಿಯಬೇಡ. ನಿನಗೆ ವಿಷಯ ತಿಳಿಸಿ, ನಿನ್ನ ಒಪ್ಪಿಗೆ ಬರುವವರೆಗೆ ಕಾಯುವುದು ಸಾಧ್ಯವಿರಲಿಲ್ಲ. ವರ ಆಗಲೇ ಕೋರ್ಟ್ ಕೌನ್ಸಿಲರ್ ಆಗಿದ್ದಾನೆ. ಲೂಶಿನ್ ಪೀಟರ್ ಪೆಟ್ರೊವಿಚ್ ಅಂತ ಅವನ ಹೆಸರು. ಅವನು ಮಾರ್ಫಾಗೆ ದೂರದ ಸಂಬಂಧಿ. ಈ ಸಂಬಂದ ಕುದುರುವುದಕ್ಕೆ ಅವಳು ಸಹಾಯಮಾಡಿದಳು. ಅವನು ಮಾರ್ಫಾ ಮೂಲಕ ಹೇಳಿಕಳಿಸಿದ. ಮನೆಗೆ ಕರೆದೆವು. ಬಂದ, ಕಾಫಿ ಕುಡಿದ. ಮಾರನೆಯದಿನವೇ ಹುಡುಗಿ ಒಪ್ಪಿದ್ದೇನೆ ಅನ್ನುವ ಪತ್ರ ಕಳಿಸಿದ. ಬೇಗ ನಮ್ಮ ಉತ್ತರ ತಿಳಿಸುವಂತೆ ಬಲವಂತ ಮಾಡಿದ್ದ. ವ್ಯವಹಾರಸ್ಥ, ತುಂಬ ಕೆಲಸ ಇರುತ್ತದೆ. ಈಗ ಪೀಟರ್ಸ್‍ಬರ್ಗ್‍ ಗೆ ಹೊರಟಿದ್ದಾನೆ. ಹಾಗಾಗಿ ಒಂದೊಂದು ನಿಮಿಷವೂ ಮುಖ್ಯವಾಗಿತ್ತು.

ಯಾರೂ ಊಹೆ ಮಾಡದೆ ಇರುವ ಥರ ಎಲ್ಲಾನೂ ಇಷ್ಟು ಬೇಗ ಬೇಗ ನಡೆದದ್ದು ನೋಡಿ ನಮಗೇ ಆಶ್ಚರ್ಯ. ನಾನು, ನಿನ್ನ ತಂಗಿ ಇಡೀ ರಾತ್ರಿ ವಿಚಾರ ಮಾಡಿದೆವು. ಅವನು ಗೌರವಸ್ಥ, ಸ್ವಂತ ವ್ಯವಹಾರವೂ ಇದೆ, ಕೌನ್ಸಿಲರೂ ಆಗಿದ್ದಾನೆ. ನಿಜ, ಅವನಿಗೆ ನಲವತ್ತೈದು ವರ್ಷ ಆಗಿದೆ. ಆದರೂ ಯಾವ ಹುಡುಗಿ ನೋಡಿದರೂ ಮೆಚ್ಚಿಕೊಳ್ಳುವ ಹಾಗಿದ್ದಾನೆ. ಸಭ್ಯಸ್ಥ. ಸ್ವಲ್ಪ ಮುಂಗೋಪ, ಅಹಂಕಾರ ಅನಿಸುತ್ತದೆ. ಆದರೂ ಮೊದಲು ನೋಡಿದಾಗ ಹಾಗನ್ನಿಸುತ್ತದೆ, ಅಷ್ಟೆ. ಸದ್ಯದಲ್ಲೇ ಪೀಟರ್ಸ್‍ಬರ್ಗ್‍ ನಲ್ಲಿ ಅವನನ್ನು ಭೇಟಿ ಮಾಡುತ್ತೀಯಲ್ಲ ನಿನಗೂ ಖಂಡಿತ ಇಷ್ಟವಾಗುತ್ತಾನೆ, ಸುಮ್ಮನೆ ದುಡುಕಿ ತಪ್ಪಿ ನಿರ್ಧಾರ ಮಾಡಬೇಡ, ನಿನಗೆ ಆತುರ ಜಾಸ್ತಿ ಅಂತ ಈ ಎಚ್ಚರಿಕೆ ಮಾತು ಹೇಳುತ್ತಿದ್ದೇನೆ ಅಷ್ಟೆ. ಒಬ್ಬ ಮನುಷ್ಯ ಚೆನ್ನಾಗಿ ಅರ್ಥವಾಗಬೇಕಾದರೆ ಅವನ ಪರಿಚಯ ಮಾಡಿಕೊಂಡು ನಿಧಾನವಾಗಿ ಸ್ವಚ್ಛ ಮನಸ್ಸಿನಿಂದ ನೋಡಬೇಕು. ಮೊದಲೇ ತಪ್ಪು ತಿಳಿದರೆ ಆಮೇಲೆ ಮನಸ್ಸು ಸರಿಮಾಡಿಕೊಳ್ಳುವುದು ಕಷ್ಟ.

ಪೀಟರ್ ಪೆಟ್ರೋವಿಚ್ ತುಂಬ ಮರ್ಯಾದಸ್ಥನಾದರೂ, ಈಗಿನ ತಲೆಮಾರಿನ ಎಷ್ಟೋ ವಿಚಾರ ಒಪ್ಪುತ್ತೇನೆ ಅಂತ ಹೇಳಿದ. ಇನ್ನೂ ಏನೇನೋ ಹೇಳಿದ. ಸ್ವಲ್ಪ ಜಂಬ, ಎಲ್ಲರೂ ತನ್ನ ಮಾತು ಕೇಳಬೇಕು ಅನ್ನುವ ಸ್ವಭಾವದವನು ಅನ್ನಿಸಿತು. ಅದೇನೂ ಅಂಥಾ ಕೆಟ್ಟಗುಣ ಅಲ್ಲ. ಅವನು ಹೇಳಿದ ಬಹಳ ವಿಷಯ ನನಗೆ ತಿಳಿಯಲಿಲ್ಲ. ಅವನು ಹೆಚ್ಚು ಓದಿಲ್ಲವಾದರೂ ಜಾಣ, ಒಳ್ಳೆಯವನು ಅಂತ ದುನ್ಯಾ ಹೇಳಿದಳು. ನಿನ್ನ ತಂಗಿಯ ಗುಣ ನಿನಗೆ ಗೊತ್ತಲ್ಲ, ರೋದ್ಯಾ. ಅವಳದು ಗಟ್ಟಿ ಮನಸ್ಸು, ವಿಚಾರ ಮಾಡತಾಳೆ, ತಾಳ್ಮೆ, ಉದಾರವಾದ ಬುದ್ಧಿ ಇವೆ. ಪ್ರೀತಿ ತುಂಬಿದ ಮನಸ್ಸು ಅವಳದ್ದು.

ಅಂದಹಾಗೆ, ಇವಳ ಮೇಲೆ ಅವನಿಗೆ, ಅವನ ಮೇಲೆ ಇವಳಿಗೆ ವಿಶೇಷ ಪ್ರೀತಿ ಅಂತೇನೂ ಇಲ್ಲ. ದುನ್ಯಾ ಜಾಣೆ. ದೇವತೆಯಂಥವಳು. ಗಂಡನ ಸುಖ ನೋಡಿಕೊಳ್ಳುವುದು ನನ್ನ ಕರ್ತವ್ಯ, ಆಗ ನನ್ನ ಸುಖ ಅವನು ನೋಡಿಕೊಳ್ಳುತ್ತಾನೆ ಅನ್ನುವುದು ಅವಳಿಗೆ ಗೊತ್ತು. ಈ ವಿಚಾರದಲ್ಲಿ ನಮಗೆ ಅನುಮಾನವಿಲ್ಲ. ಆದರೂ ಯಾಕೋ ಎಲ್ಲವೂ ತೀರ ಬೇಗ ಬೇಗ ತೀರ್ಮಾನವಾಯಿತು ಅನ್ನಿಸುತ್ತದೆ. ಅವನು ಲೆಕ್ಕಾಚಾರದ ಮನುಷ್ಯ. ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡರೆ ಸಂಸಾರ ಸುಖವಾಗಿರುತ್ತದೆ ಅನ್ನುವುದು ಅವನಿಗೂ ಗೊತ್ತು. ಸ್ವಲ್ಪ ವಿಚಿತ್ರವಾಗಿರುವುದು, ಹಳೆಯ ಅಭ್ಯಾಸಗಳು, ಭಿನ್ನಾಭಿಪ್ರಾಯ (ಇವೆಲ್ಲ ಅತ್ಯಂತ ಸುಖವಾದ ಸಂಸಾರದಲ್ಲೂ ಇಲ್ಲ ಅನ್ನುವ ಹಾಗಿಲ್ಲ), ಇವೆಲ್ಲ ಇರುತ್ತವೆ, ನಿಭಾಯಿಸುವ ವಿಶ್ವಾಸವಿದೆ, ಯೋಚನೆ ಮಾಡಬೇಡ ಅನ್ನುತ್ತಾಳೆ ದುನ್ಯಾ.

ಗಂಡನ ಜೊತೆ ಸಂಬಂಧ ಒಂದು ನೆಟ್ಟಗಿದ್ದರೆ ಎಷ್ಟು ಕಷ್ಟವಾದರೂ ಸಹಿಸತಾಳೆ ನಮ್ಮ ದುನ್ಯಾ. ಮೊದಲು ಅವನನ್ನು ಕಂಡಾಗ ತಟಕ್ಕನೆ ನಿರ್ಧಾರ ಮಾಡುವವನು ಅನ್ನಿಸಿತು. ಅವನು ನೇರವಾಗಿ ವ್ಯವಹಾರ ಮಾಡುವವನು ಅನ್ನುವುದು ಇದಕ್ಕೆ ಕಾರಣವಿರಬಹುದು. ಉದಾಹರಣೆಗೆ, ಅವಳು ಒಪ್ಪಿಗೆ ಕೊಟ್ಟಮೇಲೆ ಅವನು ಎರಡನೆಯ ಸಾರಿ ನಮ್ಮ ಮನೆಗೆ ಬಂದಾಗ ಮಾತಾಡುತ್ತಾ ದುನ್ಯಾಳನ್ನು ನೋಡುವ ಮೊದಲೇ ಪ್ರಾಮಾಣಿಕವಾದ ಹುಡುಗಿಯೊಬ್ಬಳನ್ನು ವರದಕ್ಷಿಣೆ ಇಲ್ಲದೆ ಮದುವೆಯಾಗುವ ನಿರ್ಧಾರ ಮಾಡಿದ್ದೆ ಎಂದು ಹೇಳಿದ. ಅಂದರೆ ಅವನು ಕಷ್ಟಸುಖ ನೋಡಿದವನ ಹಾಗೆ ಕಾಣುತ್ತದೆ.. ಗಂಡನಾದವನು ಹೆಂಡತಿಗೆ ಋಣ ಇಟ್ಟುಕೊಳ್ಳಬಾರದು, ಹೆಂಡತಿಯಾದವಳು ಗಂಡನಿಂದ ತಾನು ಉದ್ಧಾರವಾದೆ ಅಂದುಕೊಳ್ಳಬೇಕು ಎಂದ. ಈಗ ನಾನು ಬರೆದಿರುವುದಕ್ಕಿಂತ ಸೂಕ್ಷ್ಮವಾಗಿ ಹೇಳಿದ. ಅವನು ಆಡಿದ ಮಾತು ಮರೆತು ಹೋಗಿವೆ, ಭಾವ ಮಾತ್ರ ಮನಸ್ಸಿನಲ್ಲಿ ಉಳಿದಿದೆ. ಈ ಮಾತು ಅವನು ಉದ್ದೇಶಪಟ್ಟು ಹೇಳಿದ್ದಲ್ಲ, ಮಾತಿನ ಮಧ್ಯೆ ಹಾಗೇ ಬಂದದ್ದು. ಆಮೇಲೆ ಮಾತನ್ನು ಸ್ವಲ್ಪ ರಿಪೇರಿ ಮಾಡಲು ನೋಡಿದ. ಏನೇ ಆದರೂ ಎಲ್ಲಾ ತಟ್ಟನೆ ನಡೆದು ಹೋಯಿತು ಅನ್ನಿಸುತ್ತದೆ.

ಆಮೇಲೆ ದುನ್ಯಾಗೆ ಅದನ್ನೇ ಹೇಳಿದೆ. ಅವಳಿಗೂ ಸ್ವಲ್ಪ ಗೊಂದಲವಾಗಿದ್ದರೂ ಬರೀ ಮಾತು ತಾನೇ, ಅವನು ಹಾಗೇನೂ ನಡೆದುಕೊಳ್ಳಲಿಲ್ಲವಲ್ಲ ಅಂದಳು. ಅದು ನಿಜ. ದುನ್ಯಾ ರಾತ್ರಿ ಇಡೀ ನಿದ್ದೆಯನ್ನೇ ಮಾಡಲಿಲ್ಲ. ನಾನು ನಿದ್ರೆ ಮಾಡುತ್ತಿದ್ದೇನೆ ಅಂದುಕೊಂಡು ಹಾಸಿಗೆಯಿಂದ ಎದ್ದು ರೂಮಿನಲ್ಲಿ ಅತ್ತ ಇತ್ತ ಓಡಾಡುತ್ತಾ ಇದ್ದಳು. ಕೊನೆಗೆ ದೇವರ ವಿಗ್ರಹದ ಮುಂದೆ ಮೊಳಕಾಲೂರಿ ಬಹಳ ಹೊತ್ತು ಪ್ರಾರ್ಥನೆ ಮಾಡಿದಳು, ಬೆಳಗ್ಗೆ ಆದಮೇಲೆ ಮದುವೆಗೆ ಒಪ್ಪಿದ್ದೇನೆ ಅನ್ನುವ ತೀರ್ಮಾನ ಹೇಳಿದಳು.

‘ಪೀಟರ್ ಪೆಟ್ರೋವಿಚ್ ಪೀಟರ್ಸ್‍ಬರ್ಗ್‍ ಗೆ ಹೊರಟಿದ್ದಾನೆ. ಅವನು ಅಲ್ಲಿ ಖಾಸಗಿಯಾಗಿ ವಕೀಲಿ ಕಛೇರಿ ತೆಗೆಯುತ್ತಿದ್ದಾನೆ. ಬಹಳ ಕೇಸುಗಳನ್ನು ನಡೆಸುತ್ತಾ ಇದ್ದ. ಮೊನ್ನೆ ಮೊನ್ನೆ ದೊಡ್ಡ ಕೇಸು ಗೆದ್ದ. ಈಗ ಬಹಳ ಮುಖ್ಯವಾದ ವಿಚಾರದ ಬಗ್ಗೆ ಪೀಟರ್ಸ್‍ಬರ್ಗಿನಲ್ಲಿ ಸೆನೇಟಿನ ಮುಂದೆ ವಾದ ಮಾಡಬೇಕಾಗಿದೆ. ನೋಡು ಮುದ್ದು ರೋದ್ಯಾ, ಮುಂದೆ, ಎಲ್ಲ ವಿಚಾರದಲ್ಲೂ ಅವನಿಂದ ನಿನಗೆ ಬಹಳ ಉಪಯೋಗವಾಗಬಹುದು. ದೇವರು ಕಣ್ಣೆತ್ತಿ ನೋಡಿದ, ಇವತ್ತಿನಿಂದ ನಿನ್ನ ಏಳಿಗೆಯ ಬಾಗಿಲು ತೆರೆಯಿತು. ದುನ್ಯಾ ಕೂಡ ಹಾಗೇ ಅಂದುಕೊಂಡಿದಾಳೆ. ಈ ವಿಚಾರ ಪೀಟರ್ ಜೊತೆ ಸ್ವಲ್ಪ ಮಾತಾಡಿದೆವು. ಅವನೂ ನನಗೊಬ್ಬ ಸೆಕ್ರೆಟರಿ ಬೇಕು, ಯಾರೋ ಗೊತ್ತಿಲ್ಲದವರಿಗೆ ಸಂಬಳ ಕೊಟ್ಟು ಇಟ್ಟುಕೊಳ್ಳುವುದಕ್ಕಿಂತ ಸಂಬಂಧಿಕರೇ ಆದರೆ ವಾಸಿ, ಕೆಲಸಕ್ಕೆ ತಕ್ಕವರಾಗಿರಬೇಕು (ನಿನಗೆ ಯೋಗ್ಯತೆ ಇಲ್ಲವೇನೋ ಅನ್ನುವ ಹಾಗೆ!), ಅಲ್ಲದೆ ಕಾಲೇಜಿಗೆ ಹೋಗಿ ಓದುತ್ತಾ ಆಫೀಸು ಕೆಲಸಕ್ಕೆ ಸಮಯ ಸಿಗುತ್ತದೋ ಇಲ್ಲವೋ ಅಂತ ಹೇಳಿದ.

ಈ ಮಾತು ಸದ್ಯ ಅಲ್ಲಿಗೆ ನಿಂತಿದೆ. ದುನ್ಯಾ ಮಾತ್ರ ಯಾವಾಗಲೂ ಇದನ್ನೇ ಯೋಚನೆ ಮಾಡುತ್ತಾಳೆ. ಕಳೆದ ಕೆಲವು ದಿನದಲ್ಲಿ ಅವಳು ಜ್ವರ ಬಂದವರ ಹಾಗೆ ನಿನ್ನದೇ ಕನಸು ಕಾಣುತ್ತಾಳೆ. ನೀನು ಪೀಟರನ ಸಹಾಯಕನಾದ ಹಾಗೆ, ಕೊನೆಗೆ ಪೀಟರನ ಕೆಲಸದಲ್ಲಿ ಪಾರ್ಟನರ್ ಆದ ಹಾಗೆ, ನಿನಗೆ ನ್ಯಾಯದ ಇಲಾಖೆಯಲ್ಲಿ ಕೆಲಸ ಸಿಕ್ಕಿದ ಹಾಗೆ ಕನಸು ಕಾಣುತ್ತಾಳೆ. ಅವಳ ಕನಸೆಲ್ಲ ನಿಜವಾಗುತ್ತದೆ ಅನ್ನಿಸಿ ನಾನೂ ಅದೇ ಕನಸು ಕಾಣುತ್ತೇನೆ.

ನಿನ್ನ ಪರಿಚಯ ಅವನಿಗೆ ಇಲ್ಲವಾದ್ದರಿಂದ ಪೀಟರ್ ಸದ್ಯಕ್ಕೆ ನುಣುಚಿಕೊಳ್ಳುವ ಹಾಗೆ ಮಾತಾಡತಾನೆ ಅನಿಸತ್ತೆ. ಸದ್ಯ ದುನ್ಯಾ ಮಾತ್ರ ತನ್ನ ಭಾವೀ ಗಂಡನ ಮೇಲೆ ಪ್ರಭಾವ ಬೀರಿ ಕೆಲಸ ಸಾಧಿಸುತ್ತೇನೆ ಅನ್ನುವ ವಿಶ್ವಾಸದಲ್ಲಿದ್ದಾಳೆ. ನೀನು ಅವನ ಪಾರ್ಟನರ್ ಆಗಬೇಕು ಅನ್ನುವ ನಮ್ಮ ಕನಸನ್ನು ಅವನಿಗೆ ನಾವು ಹೇಳಿಲ್ಲ. ಹೇಳಿದರೂ ಇದೆಲ್ಲ ಬರಿಯ ಕನಸು ಅಂದುಕೊಳ್ಳುತ್ತಾನೆ. ಹಾಗೆಯೇ ನೀನು ಕಾಲೇಜಿನಲ್ಲಿರುವಾಗ ದುಡ್ಡು ಬೇಕಾದರೆ ಅವನು ಸಹಾಯ ಮಾಡುತ್ತಾನೆ ಅಂದುಕೊಂಡಿರುವುದು ಕೂಡ ಹೇಳಿಲ್ಲ. ಯಾಕೆ ಹೇಳಲಿಲ್ಲ ಅಂದರೆ, ಮೊದಲನೆಯದಾಗಿ, ಈ ವಿಚಾರ ತನ್ನಷ್ಟಕ್ಕೇ ಗೊತ್ತಾಗುತ್ತದೆ. ಎರಡನೆಯದಾಗಿ ದುನ್ಯಾ ಮಾತು ತೆಗೆದುಹಾಕಲಾರದೆ ಅವನು ನಿನಗೆ ಬೇಕಾದ್ದೆಲ್ಲ ಕೊಡುತ್ತಾನೆ, ನೀನು ಅವನ ಬಲಗೈಯಾದಾಗ ನೀನು ಮಾಡಿದ ಸಹಾಯಕ್ಕೆ ಸಂಬಳ ಅನ್ನುವ ಹಾಗೆ ಎಲ್ಲ ಸಿಗುತ್ತದೆಯೇ ಹೊರತು ದಾನವಾಗಿ ಅಲ್ಲ. ಹೀಗೆ ವ್ಯವಸ್ಥೆ ಮಾಡಬೇಕು ಅನ್ನುವುದು ದುನ್ಯಾ ಆಸೆ. ನನಗೂ ಇದು ಒಪ್ಪಿಗೆ.

ಅಲ್ಲದೆ ನೀನು ಅವನನ್ನು ಮೊದಲು ಭೇಟಿಯಾಗುವಾಗ ಸರಿಸಮ ಮನುಷ್ಯನ ಹಾಗೆ ಇರಬೇಕು ಅನ್ನುವ ಕಾರಣವೂ ಇದೆ. ದುನ್ಯಾ ನಿನ್ನ ಬಗ್ಗೆ ಮೈ ಮರೆತು ಮಾತಾಡಿದಾಗ ಅವನು- ‘ಯಾರ ಬಗ್ಗೆಯಾದರೂ ತೀರ್ಮಾನ ಮಾಡುವುದಕ್ಕೆ ಮೊದಲು ಅವರನ್ನ ಮುಖತಃ ಭೇಟಿಯಾಗಬೇಕು, ಗಮನವಿಟ್ಟು ನೋಡಿ ವಿಚಾರಮಾಡಬೇಕು, ನಿಮ್ಮಣ್ಣನ ಪರಿಚಯವಾದಮೇಲೆ ನಾನೇ ತೀರ್ಮಾನ ಮಾಡುತ್ತೇನೆ,’ ಅಂತ ಹೇಳಿದ. ಪ್ರಿಯ ರೋದ್ಯಾ, ಪೀಟರ್ ಗೆ ಸಂಬಂಧಪಟ್ಟಿರದ, ಆದರೆ ನನ್ನ ಹೆಣ್ಣು ಬುದ್ಧಿಗೆ ಹೊಳೆದಿರುವ ಒಂದು ವಿಚಾರವೆಂದರೆ ಇದು: ದುನ್ಯಾ ಮದುವೆಯಾದಮೇಲೆ ನಾನು ಅವಳ ಮನೆಗೆ ಹೋಗದೆ ಈಗ ಇರುವ ಹಾಗೇ ಪ್ರತ್ಯೇಕವಾಗಿ ಇರಬೇಕೆಂದು ತೀರ್ಮಾನ ಮಾಡಿದ್ದೇನೆ. ಮಗಳನ್ನು ಬಿಟ್ಟು ಬದುಕುವುದು ಬೇಡ, ನಮ್ಮ ಜೊತೆ ಬಂದುಬಿಡಿ ಎಂದು ಹೇಳುವಷ್ಟು ದೊಡ್ಡತನ ಪೀಟರ್‍ ಗೆ ಇದೆ ಎಂದು ಬಲ್ಲೆ. ಇದು ನಡೆದೇ ನಡೆಯುತ್ತದೆ ಎಂದು ಗೊತ್ತಿರುವುದರಿಂದ ಅವನು ಈವರೆಗೂ ಇಂಥ ಯಾವ ಮಾತೂ ಹೇಳಿಲ್ಲ. ಅವನು ನಮ್ಮ ಮನೆಗೇ ಬನ್ನಿ ಅಂತ ಕರೆದರೂ ಒಲ್ಲೆ ಎನ್ನುತ್ತೇನೆ.

ಅಳಿಯಂದಿರು ಅತ್ತೆಯರ ಜೊತೆಗೆ ಎಂದೂ ಹೊಂದಿಕೊಂಡು ಇರುವುದಿಲ್ಲ ಅನ್ನುವುದು ಗಮನಿಸಿದ್ದೇನೆ. ನಾನು ಯಾರಿಗೂ ಕಿಂಚಿತ್ತೂ ಭಾರವಾಗದೆ ಸ್ವತಂತ್ರವಾಗಿ ನನ್ನ ಪಾಡಿಗೆ ಇರಬೇಕು ಅನ್ನುವುದು ನನ್ನ ಆಸೆ. ನನ್ನ ಅನ್ನ ನನಗೆ ಸಿಗುವಾಗ, ನಿನ್ನಂಥ ಮಗ, ದುನ್ಯಾಳಂಥ ಮಗಳು ಇರುವಾಗ ಬೇರೆ ಇನ್ನೇನು ಬೇಕು ನನಗೆ?. ಸಾಧ್ಯವಾದರೆ ನಾನು ನಿಮ್ಮಿಬ್ಬರಿಗೂ ಹತ್ತಿರವಾಗೇ ಇದ್ದರೆ ಅದಕ್ಕಿಂತ ಬೇರೆ ಸಂತೋಷ ಇಲ್ಲ, ರೋದ್ಯಾ. ಪತ್ರದ ಕೊನೆಗೆ ಈ ಮಾತು ಉಳಿಸಿಕೊಂಡಿದ್ದೇನೆ.

ಮಗಾ, ಮೂರು ವರ್ಷ ಬೇರೆಯಾಗಿದ್ದ ಮೇಲೆ ಈಗ ನಾವೆಲ್ಲರೂ ಒಟ್ಟಿಗೆ ಇರುವ ಕಾಲ ಸದ್ಯದಲ್ಲೇ ಬರುತ್ತದೆ ಅನ್ನಿಸುತ್ತಿದೆ. ದುನ್ಯಾ ಜೊತೆಗೆ ನಾನು ಕೂಡ ಪೀಟರ್ಸ್‍ಬರ್ಗ್‍ ಗೆ ಹೊರಡುವ ತೀರ್ಮಾನ ಮಾಡಿ ಆಗಿದೆ. ಯಾವಾಗ ಅನ್ನುವುದು ಗೊತ್ತಿಲ್ಲ ಅಷ್ಟೆ. ಬೇಗ, ಇನ್ನೊಂದು ವಾರದಲ್ಲಿ ಹೊರಡಬಹುದು ಅನ್ನಿಸಿದೆ. ಪೀಟರ್ ಮಾತಿಗೆ ಕಾಯುತ್ತಿದ್ದೇವೆ. ಪೀಟರ್ಸ್‍ಬರ್ಗ್‍ ನಲ್ಲಿ ಎಲ್ಲಾ ಒಂದು ಸುತ್ತು ನೋಡಿಕೊಂಡು ಬರುತ್ತೇನೆ ಅಂದಿದ್ದಾನೆ. ಬಂದ ತಕ್ಷಣ ತಿಳಿಸುತ್ತಾನೆ.

ಮದುವೆ ಬೇಗ ನಡೆಯಬೇಕು, ಸಾಧ್ಯವಾದರೆ ಉಪವಾಸದ ಹಬ್ಬದ ಮೊದಲು, ಆಗದಿದ್ದರೆ ಅವರ್ ಲೇಡೀಸ್ ಫೀಸ್ಟಿಗೆ ಮೊದಲು ಮದುವೆಯ ದಿನ ನಿಶ್ಚಯವಾಗಬಹುದು. ನಿನ್ನ ತಬ್ಬಿಕೊಳ್ಳಬೇಕು ಅಂತ ಆಸೆ ಮಗಾ. ನಿನ್ನ ನೋಡುತ್ತೇನೆ ಅಂತ ದುನ್ಯಾಗೂ ಖುಷಿ ಆಗಿದೆ. ನಿನ್ನ ನೋಡುವ ಅವಕಾಶ ಸಿಗುತ್ತದೆ ಅನ್ನುವ ಒಂದೇ ಕಾರಣಕ್ಕೆ ಈ ಮದುವೆಯಾಗುತ್ತಿದ್ದೇನೆ ಅಂತ ಒಂದು ಸಾರಿ ತಮಾಷೆಯಾಗಿ ಹೇಳಿದ್ದಳು. ದೇವತೆ ಅವಳು! ಈ ಕಾಗದಕ್ಕೆ ಅವಳು ಏನೂ ಸೇರಿಸುವುದು ಇಲ್ಲವಂತೆ, ನಿನಗೆ ಹೇಳಬೇಕಾದ ವಿಚಾರ ಬಹಳ ಇದೆ ಅನ್ನುತ್ತಾಳೆ. ಅದನ್ನೆಲ್ಲ ಪೆನ್ನು ಹಿಡಿದು ಬರೆಯುವುದಕ್ಕೆ ಆಗಲ್ಲ, ಎರಡು ಸಾಲು ಬರೆಯುವ ಹೊತ್ತಿಗೆ ಮನಸ್ಸು ಕದಡಿ ಹೋಗತ್ತೆ ಅನ್ನುತ್ತಾಳೆ. ನಿನಗೆ ತನ್ನ ಪ್ರೀತಿಯ ಮುತ್ತುಗಳನ್ನು ತಿಳಿಸುವಂತೆ ಹೇಳಿದ್ದಾಳೆ.

ಸದ್ಯದಲ್ಲೇ ನಾವೆಲ್ಲ ಒಟ್ಟಿಗೆ ಸೇರುತ್ತೇವಾದರೂ ಇನ್ನೊಂದೆರಡು ದಿನದಲ್ಲಿ ಕೈಯಲ್ಲಾದಷ್ಟು ಹಣ ನಿನಗೆ ಕಳಿಸುತ್ತೇನೆ. ದುನ್ಯಾ ಮದುವೆ ಪೀಟರ್ ಜೊತೆ ನಡೆಯುತ್ತದೆ ಅನ್ನುವುದು ಗೊತ್ತಾಗುತ್ತಿದ್ದ ಹಾಗೆ ನಮಗೆಲ್ಲ ಹೆಚ್ಚು ಮರ್ಯಾದೆ ಸಿಗುತ್ತಿದೆ. ಅಂಗಡಿಯ ಅಫಾಸ್ಸೆ ಇವಾನೊವಿಚ್ ಈಗ ನನ್ನ ನಂಬುತ್ತಾನೆ, ಪೆನ್ಶನ್ ಆಧಾರದ ಮೇಲೆ ಎಪ್ಪತ್ತೈದು ರೂಬಲ್ ನಷ್ಟು ಸಾಲ ಕೊಡುವುದಕ್ಕೆ ಒಪ್ಪಿದ್ದಾನೆ. ಹಾಗಾಗಿ ನಿನಗೆ ಇಪ್ಪತ್ತೈದು, ಅಲ್ಲಾ ಮೂವತ್ತು ರೂಬಲ್ ಕಳಿಸುತ್ತೇನೆ. ಇನ್ನೂ ಜಾಸ್ತಿ ಕಳಿಸಬಹುದಾಗಿತ್ತು, ಆದರೆ ಪ್ರಯಾಣದ ಖರ್ಚಿದೆ. ಪೀಟರ್ಸ್‍ಬರ್ಗ್‍ ಗೆ ಬರುವ ನಮ್ಮ ಖರ್ಚಿನ ಸ್ವಲ್ಪ ಭಾಗ ವಹಿಸಿಕೊಳ್ಳುವುದಾಗಿ ಪೀಟರ್ ಹೇಳಿದ್ದಾನೆ. ಅಂದರೆ ನಮ್ಮ ದೊಡ್ಡ ಟ್ರಂಕು, ಲಗೇಜು ಇವನ್ನೆಲ್ಲ ಹೇಗೋ ಅವನ ಪರಿಚಯದವರ ಮೂಲಕ ಸಾಗಿಸುವ ಏರ್ಪಾಟು ಮಾಡಿದ್ದಾನೆ. ಆದರೂ ನಮ್ಮ ಕೈಯಲ್ಲಿ ಒಂದೂ ಕೊಪೆಕ್ ಇಲ್ಲದೆ ಊರಿಗೆ ಬರುವುದಕ್ಕೆ ಆಗಲ್ಲವಲ್ಲ. ದುನ್ಯಾ ಮತ್ತೆ ನಾನು ಕೂತು ಎಲ್ಲಾ ಅಚ್ಚುಟ್ಟಾಗಿ ಲೆಕ್ಕ ಹಾಕಿದ್ದೇವೆ. ದಾರಿ ಖರ್ಚಿಗೆ ಹೆಚ್ಚು ದುಡ್ಡು ಬೇಡ. ರೈಲು ಸ್ಟೇಶನ್ನಿಗೆ ನಮ್ಮ ಊರಿನಿಂದ ಅರುವತ್ತು ಮೈಲು ಅಷ್ಟೇ. ನಮಗೆ ಪರಿಚಯದ ರೈತನೊಬ್ಬ ಗಾಡಿ ಕಟ್ಟಿಸುವುದಾಗಿ ಹೇಳಿದ್ದಾನೆ. ರೈಲಿನಲ್ಲಿ ನಾವು ಥರ್ಡ್‍ ಕ್ಲಾಸಿನಲ್ಲಿ ಬರುವುದು ಅಂದುಕೊಂಡಿದ್ದೇವೆ. ಹಾಗಾಗಿ ನಿನಗೆ ಇಪ್ಪತ್ತೈದಲ್ಲ ಮೂವತ್ತು ರೂಬೆಲ್ ಕಳಿಸುತ್ತೇನೆ. ಸಾಕು.

ಆಗಲೇ ಎರಡು ಹಾಳೆ ತುಂಬಾ ಬರೆದಿದ್ದೇನೆ. ಇನ್ನು ಹೆಚ್ಚು ಜಾಗವೂ ಇಲ್ಲ. ಹೇಳಬೇಕಾದ ಕಥೆ ಇನ್ನೂ ಬಹಳ ಇದೆ. ಮುದ್ದು ರೋದ್ಯಾ, ನಿನ್ನನ್ನು ಮತ್ತೆ ಕಾಣುವವರೆಗೆ ಅಮ್ಮನ ಆಶೀರ್ವಾದ, ಅಪ್ಪುಗೆ, ಮುತ್ತುಗಳು. ದುನ್ಯಾನ ಚೆನ್ನಾಗಿ ನೊಡಿಕೋ ರೋದ್ಯಾ. ಅವಳು ನಿನ್ನ ಪ್ರೀತಿ ಮಾಡುವಷ್ಟೇ ನೀನೂ ಅವಳನ್ನ ಪ್ರೀತಿ ಮಾಡು. ಅವಳ ಪ್ರೀತಿಗೆ ಮಿತಿ ಇಲ್ಲ. ಅವಳಿಗೆ ಅವಳ ಮೇಲೇ ಇರುವುದಕ್ಕಿಂತ ನಿನ್ನ ಮೇಲೆ ಹೆಚ್ಚಿನ ಪ್ರೀತಿ ಇದೆ. ಅವಳು ದೇವತೆ, ರೋದ್ಯಾ. ನಮ್ಮ ಪಾಲಿಗೆ ಎಲ್ಲವೂ ನೀನೇ ರೋದ್ಯಾ. ನಮ್ಮ ಆಸೆ, ನಮ್ಮ ವಿಶ್ವಾಸ ಎಲ್ಲವೂ ನೀನೇ. ನೀನು ಸಂತೋಷವಾಗಿದ್ದರೆ ಸಾಕು, ನಾವೂ ಸಂತೋಷವಾಗಿರುತ್ತೇವೆ.

ಮೊದಲು ಮಾಡುತ್ತಿದ್ದ ಹಾಗೆ ಈಗಲೂ ದೇವರ ಪ್ರಾರ್ಥನೆ ಮಾಡುತ್ತೀಯಾ ರೋದ್ಯ? ಸೃಷ್ಟಿಕರ್ತನಲ್ಲಿ ನಂಬಿಕೆ ಇದೆಯಾ? ಯಾಕೋ ನೀನು ಅಪನಂಬಿಕೆಯ ಹೊಸ ಫ್ಯಾಶನ್ನು ಬೆಳೆಸಿಕೊಂಡಿದ್ದೀಯ ಅನ್ನಿಸುತ್ತದೆ. ಹಾಗಿದ್ದರೆ, ದಯವಿಟ್ಟು ಜ್ಞಾಪಿಸಿಕೋ ಮಗೂ. ನೀನು ಚಿಕ್ಕವನಾಗಿದ್ದಾಗ, ನಿಮ್ಮಪ್ಪ ಇನ್ನೂ ಬದುಕಿದ್ದಾಗ, ನೀನು ನನ್ನ ತೊಡೆಯ ಮೇಲೆ ಕೂತು ತೊದಲು ಮಾತಿನಲ್ಲಿ ಪ್ರಾರ್ಥನೆ ಹೇಳುತ್ತಿದ್ದೆ. ನಾವೆಲ್ಲ ಆಗ ಎಷ್ಟು ಖುಷಿಯಾಗಿದ್ದೆವು! ದೇವರು ಒಳ್ಳೆಯದು ಮಾಡಲಿ. ಸದ್ಯದಲ್ಲೇ ನೋಡುತ್ತೇವಲ್ಲ! ಕೊನೆಯಿರದಷ್ಟು ಪ್ರೀತಿಯ ಮುತ್ತು.

ಕೊನೆಯ ಉಸಿರಿನವರೆಗೂ ನಿನ್ನ ಪ್ರೀತಿಯ ಅಮ್ಮ,
ಪುಲ್ಚೇರಿಯ ರಾಸ್ಕೋಲ್ನಿಕೋವ್

ಕಾಗದ ಓದುತ್ತಿರುವಷ್ಟೂ ಹೊತ್ತು ಕಣ್ಣೀರು ಅವನ ಮುಖವನ್ನು ತೋಯಿಸುತ್ತಿತ್ತು. ಕಾಗದದ ಕೊನೆಗೆ ಬರುವಷ್ಟು ಹೊತ್ತಿಗೆ ಮುಖ ಬಿಳಿಚಿತ್ತು. ಭಾರವಾದ, ವಕ್ರವಾದ, ಕಹಿಯಾದ ನಗು ಅವನ ತುಟಿಯ ಮೇಲೆ ಇತ್ತು. ಚಿಂದಿ ಎದ್ದಿದ್ದ ಕೊಳಕು ದಿಂಬಿನ ಮೇಲೆ ತಲೆ ಇಟ್ಟು ಬಹಳ ಹೊತ್ತು ಯೋಚನೆ ಮಾಡಿದ. ಅವನೆದೆ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಆಲೋಚನೆಗಳು ರಭಸವಾಗಿ ನುಗ್ಗಿ ಬರುತ್ತಿದ್ದವು. ಸಂದೂಕದ ಹಾಗೆ ಇಕ್ಕಟ್ಟಾಗಿದ್ದ ರೂಮಿನಲ್ಲಿ ಉಸಿರಾಡಿದರೂ ಉಬ್ಬಸ ಬರುತ್ತಿತ್ತು. ಅವನ ಕಣ್ಣು, ಅವನ ಮನಸ್ಸು ವಿಶಾಲವಾದ ಜಾಗ ಬೇಕೆಂದು ಬಯಸುತ್ತಿದ್ದವು. ಹ್ಯಾಟು ಎತ್ತಿಕೊಂಡು ಹೊರಕ್ಕೆ ಹೊರಟ. ಮೆಟ್ಟಿಲ ಮೇಲೆ ಯಾರನ್ನಾದರೂ ಕಂಡೇನು ಅನ್ನುವ ಭಯ ಈಗ ಇರಲಿಲ್ಲವಲ್ಲ. ಭಯವನ್ನು ಮರೆತುಬಿಟ್ಟಿದ್ದ. ವೋಝೆನೆಸ್ಕಿ ಮಾರ್ಗದಲ್ಲಿ ವಾಸಿಲೆಯವ್ಸ್ಕಿ ದ್ವೀಪದತ್ತ ಹೆಜ್ಜೆ ಹಾಕಿದ. ಎಂದಿನಂತೆ ಏನೂ ಗಮನಿಸದೆ, ತನ್ನಷ್ಟಕ್ಕೇ ಗೊಣಗುತ್ತಾ, ಕಂಡವರಿಗೆ ಆಶ್ಚರ್ಯವಾಗುವ ಹಾಗೆ ಒಬ್ಬನೇ ಮಾತಾಡಿಕೊಳ್ಳುತ್ತ ನಡೆದ. ಅವನು ಕುಡಿದಿರಬೇಕು ಎಂದು ಎಷ್ಟೋ ಜನ ಅಂದುಕೊಂಡರು.

(ಸಾರಾಂಶ: ಅಮ್ಮನ ಕಾಗದ, ತಂಗಿ ದುನ್ಯಾಳ ಕಥೆ)

ಮಾರನೆಯ ದಿನ ಕೆಲಸದಾಳು ನಸ್ತಾಸ್ಯ ಅಂಚೆಯಲ್ಲಿ ಬಂದ ಕಾಗದವನ್ನು ರಾಸ್ಕೋಲ್ನಿಕೋವ್‍ಗೆ ಕೊಡುತ್ತಾಳೆ. ಅವನ ತಾಯಿ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಬರೆದಿದ್ದ ಕಾಗದ. ರಾಸ್ಕೋಲ್ನಿಕೋವ್‍ನ ತಂಗಿ ದುನ್ಯಾ ಪಕ್ಕದ ಹಳ್ಳಿಯ ಶ್ರೀಮಂತ ಸ್ವಿಡ್ರಿಗೈಲೋವ್‍ ಮನೆಯಲ್ಲಿ ಮಕ್ಕಳ ಪಾಠ ಹೇಳುವ ಕೆಲಸ ಮಾಡುತ್ತಿದ್ದದ್ದು, ಅವನು ಅವಳ ಮೇಲೆ ಕಣ್ಣು ಹಾಕಿದ್ದು, ಸ್ವಿಡ್ರಿಗೈಲೋವ್‍ನ ಹೆಂಡತಿ ಮಾರ್ಫಾ ದುನ್ಯಾಳನ್ನು ನಿಂದಿಸಿ ಮನೆಯಿಂದ ಹೊರ ಹಾಕಿದ್ದು, ಅವಳ ತಪ್ಪು ಇಲ್ಲವೆಂದು ತಿಳಿದ ಮೇಲೆ ಊರವರಿಗೆಲ್ಲ ದುನ್ಯಾ ಒಳ್ಳೆಯವಳೆಂದು ಹೇಳಿದ್ದು, ಆಕೆಗಾಗಿ ಪೆಟ್ರೊವಿಚ್ ಎಂಬ ವ್ಯಾಪಾರಿಯನ್ನು ವರನನ್ನಾಗಿ ಹುಡುಕಿದ್ದು ಇವನ್ನೆಲ್ಲ ಹೇಳಿರುತ್ತಾಳೆ. ಪೆಟ್ರೋವಿಚ್‍ನ ಜೊತೆಯಲ್ಲಿ ತಾನು ಮತ್ತು ದುನ್ಯಾ ಪೀಟರ್ಸ್‍ಬರ್ಗ್ ನಗರಕ್ಕೆ ಬರುತ್ತಿರುವುದಾಗಿ, ಮಗನಿಗೆಂದು ಹಣ ಕಳಿಸಿರುವುದಾಗಿ ಹೇಳಿರುತ್ತಾಳೆ. ಪೆಟ್ರೊವಿಚ್‍ನನ್ನು ಮದುವೆಯಾದರೆ ತಂಗಿಯ ಬಾಳು ಹಾಳಾಗುತ್ತದೆಂದು, ಆ ಮದುವೆಯನ್ನು ತಪ್ಪಿಸುವ ನಿರ್ಧಾರ ಮಾಡುತ್ತಾನೆ ರಾಸ್ಕೋಲ್ನಿಕೋವ್.