ಹೀಗೆ ಪ್ರಶ್ನೆ ಹಾಕಿಕೊಂಡು ಹಿಂಸೆಮಾಡಿಕೊಳ್ಳುತ್ತಾ ಇದ್ದ. ಆಗುವ ಹಿಂಸೆಯಲ್ಲಿ ಒಂದು ಥರ ಸಂತೋಷವನ್ನೂ ಪಡುತ್ತಿದ್ದ. ಯಾವ ಪ್ರಶ್ನೆಗಳೂ ಹೊಸವಲ್ಲ. ತಕ್ಷಣಕ್ಕೆ ಹುಟ್ಟಿದವೂ ಅಲ್ಲ. ಪ್ರಶ್ನೆಗಳೆಲ್ಲ ಹಳೆಯ ನೋವಿನ ಹಾಗೆ ಹಿಂಸೆ ಕೊಟ್ಟು ಕೊಟ್ಟು ಮನಸ್ಸನ್ನು ನವೆಸಿಬಿಟ್ಟಿದ್ದವು. ನೋವು ಬಹಳ ಬಹಳ ಹಿಂದೆಯೇ ಹುಟ್ಟಿತ್ತು, ಬೆಳೆದಿತ್ತು, ಇತ್ತಿಚೆಗಷ್ಟೇ ಮಾಗಿತ್ತು, ದಟ್ಟೈಸಿತ್ತು; ಭಯಂಕರ ಮೃಗದ ಹಾಗೆ ಮೊರೆಯುತ್ತ ತಕ್ಷಣವೇ ಪರಿಹಾರ ಹುಡುಕು ಎಂದು ಒತ್ತಾಯಿಸುತ್ತಿತ್ತು. ತಾಯಿಯ ಪತ್ರ ಈಗ ಸಿಡಿಲಿನ ಹಾಗೆ ಎರಗಿತ್ತು.
ಪ್ರೊ
. .ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ʼಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ನಾಲ್ಕನೆಯ ಅಧ್ಯಾಯ

 

ಅಮ್ಮನ ಕಾಗದ ಓದಿ ಹಿಂಸೆಯಾಗಿತ್ತು. ಓದುತ್ತಿರುವಾಗಲೆ ಅವನ ಮನಸಿನಲ್ಲಿ ನಿರ್ಧಾರ ಗಟ್ಟಿಯಾಗಿತ್ತು. ‘ನನ್ನ ಜೀವ ಇರುವವರೆಗೆ ಈ ಮದುವೆ ನಡೆಯಲ್ಲ. ಪೆಟ್ರೊವಿಚ್‍ ನನ್ನು ದೆವ್ವ ಹಿಡಿಯಲಿ!’ ಎಂದು ಗೊಣಗಿಕೊಂಡ.

ಅಂದುಕೊಂಡದ್ದೇ ಆಗುತ್ತೆಂಬ ನಿರೀಕ್ಷೆಯಲ್ಲಿ ಮುಖದ ಮೇಲೆ ವಕ್ರವಾದ ನಗು ಮೂಡಿತು. ‘ನನಗೆ ಎಲ್ಲಾ ಗೊತ್ತಾಗತ್ತೆ ಅಮ್ಮಾ! ಇಲ್ಲಾ ದುನ್ಯಾ. ನೀವು ನನಗೆ ಮೋಸ ಮಾಡಕ್ಕೆ ಆಗಲ್ಲ! ನನ್ನ ಕೇಳದೆ ವಿಷಯ ತೀರ್ಮಾನ ಮಾಡಿದಾರೆ, ತಪ್ಪು ತಿಳಿಯಬೇಡ ಅನ್ನತಾರೆ! ಅನ್ನಲಿ! ಮಾಡಿದ ತೀರ್ಮಾನ ತಪ್ಪಿಸುವುದಕ್ಕೆ ಆಗಲ್ಲ ಅಂದುಕೊಂಡಿದ್ದಾರೆ! ಯಾಕೆ ಆಗಲ್ಲ, ನೋಡೋಣ! ಎಂತೆಂಥಾ ನೆಪ ಹೇಳುತಾರಲ್ಲಾ! ಪೀಟರ್ ಪೆಟ್ರೋವಿಚ್ ತುಂಬ ಬ್ಯುಸಿ. ಮದುವೆ ಕೂಡ ಎಕ್ಸ್ಪ್ರೆಸ್ ರೈಲಿನಲ್ಲೇ ಆಗುವಷ್ಟು ಬ್ಯುಸಿ ಅಂತೆ. ಇಲ್ಲಾ ದುನ್ಯಾ! ನೀನು ನನ್ನ ಜೊತೆ ಏನು ಮಾತಾಡಬೇಕು ಅಂತ ಇದೀಯ ಅದೆಲ್ಲಾ ನನಗೆ ಗೊತ್ತು. ಅಮ್ಮನ ರೂಮಿನಲ್ಲಿ ರಾತ್ರಿ ಅತ್ತ ಇತ್ತ ಓಡಾಡುತ್ತಾ ಮೂಲೆಯಲ್ಲಿರುವ ಕಾಜಾನ್ ಮದರ್ ಆಫ್ ಗಾಡ್ ವಿಗ್ರಹದ ಮುಂದೆ ಏನು ಪ್ರಾರ್ಥನೆ ಮಾಡಿದೆ ಅದೂ ಕೂಡ ನನಗೆ ಗೊತ್ತು. ಕ್ರಿಸ್ತನ ಥರ ತ್ಯಾಗ ಮಾಡುವುದು ಅಂದರೆ ಗೊಲ್ಗೊಥಾ ಬೆಟ್ಟ ಹತ್ತಿದಷ್ಟೇ ಕಷ್ಟ. ಹ್ಞೂಂ. ಕೊನೆಗೂ ತೀರ್ಮಾನ ಮಾಡಿದಿರಿ. ಸ್ವಂತ ವ್ಯವಹಾರ ಇರುವವನನ್ನ, ಲೌಕಿಕ ವಿಚಾರದಲ್ಲಿ ನುರಿತವನನ್ನ, ಅಮ್ಮ ಹೇಳುವ ಹಾಗೆ ಹೊಸ ತಲೆಮಾರಿನ ನಂಬಿಕೆಗಳು ಇರುವವನನ್ನ, ವ್ಯವಹಾರದ ಜೊತೆ ಅಧಿಕಾರಸ್ಥನೂ ಆಗಿರುವವನನ್ನ, ಕರುಣೆ ಇರುವವನ ಹಾಗೆ ಕಾಣುವವನನ್ನ ಮದುವೆಯಾಗಲು ತೀರ್ಮಾನ ಮಾಡಿದೆಯಲ್ಲಾ ದೂನ್ಯಾ! ಅದ್ಭುತ, ಅದ್ಭುತ! ಕಂಡದ್ದಲ್ಲ ನಿಜ ಅಂತ ಮದುವೆಯಾಗುತ್ತಿದ್ದಾಳಲ್ಲಾ, ಅದ್ಭುತ, ಅದ್ಭುತ!’

ಯೋಚನೆ ಮುಂದುವರೆಯಿತು. ‘ಅಮ್ಮ ಯಾಕೆ ಈಗಿನ ತಲೆಮಾರಿನ ಬಗ್ಗೆ ಬರೆದಳು? ಸುಮ್ಮನೆ ಅವನು ಇಂಥವನು ಎಂದು ಹೇಳುವುದಕ್ಕೋ ಅವನ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಹುಟ್ಟಲಿ ಅಂತಲೋ? ಎಂಥಾ ಜಾಣರು ನೀವು! ಅಲ್ಲಾ, ಅವನು ಬಂದು ಹೋದ ಮೇಲೆ ಇಲ್ಲೀವರೆಗೂ ಯಾವತ್ತಾದರೂ ನೀವಿಬ್ಬರೂ ಮನಸು ಬಿಚ್ಚಿ ಮಾತಾಡಿಕೊಂಡಿದ್ದೀರಾ? ಅಥವಾ ನಿಮ್ಮಿಬ್ಬರ ಮನಸ್ಸಿನಲ್ಲೂ ಅದೇ ಇದೆ, ಬಾಯಿ ಬಿಟ್ಟು ಹೇಳುವುದು ಯಾಕೆ ಅಂದುಕೊಂಡಿರೋ? ಕಾಗದ ಓದುವಾಗಲೇ ಅರ್ಥವಾಯಿತು. ಅವನು ಸ್ವಲ್ಪ ಮುಂಗೋಪಿ ಅಂತ ಅಮ್ಮನಿಗೆ ಆಮೇಲೆ ಅನ್ನಿಸಿದೆ. ತನಗನ್ನಿಸಿದ್ದನ್ನು ದುನ್ಯಾಗೆ ಹೇಳಿದಳು. ದುನ್ಯಾ ರೇಗಿದಳು. ರೇಗಬೇಕಾದದ್ದೇ! ಕೇಳುವುದಕ್ಕೂ ಹೇಳುವುದಕ್ಕೂ ಏನೂ ಇಲ್ಲ ಅಂತ ಮನಸ್ಸು ಗಟ್ಟಿಮಾಡಿಕೊಂಡಿರುವಾಗ ಇನ್ನೇನು ಮಾಡಬೇಕು? ಅಲ್ಲಾ ಅಮ್ಮ ಯಾಕೆ ‘ನೀನೂ ಅವಳನ್ನ ಪ್ರೀತಿ ಮಾಡು, ಅವಳಿಗೆ ಅವಳ ಮೇಲೇ ಇರುವುದಕ್ಕಿಂತ ನಿನ್ನ ಮೇಲೆ ಹೆಚ್ಚಿನ ಪ್ರೀತಿ ಇದೆ’ ಅಂತ ಬರೆದಿದ್ದಾಳಲ್ಲಾ? ಮಗನ ಒಳ್ಳೆಯದಕ್ಕೆ ಮಗಳ ಕೈ ಬಿಟ್ಟೆ ಅಂತ ಅಮ್ಮನಿಗೆ ಒಳಗೇ ದುಃಖ ಇದೆಯಾ? ‘ನೀನು ನಮ್ಮ ಪಾಲಿಗೆ ಎಲ್ಲವೂ ರೋದ್ಯಾ. ನಮ್ಮ ಆಸೆ, ನಮ್ಮ ದಿಕ್ಕು ದೆಸೆ ಎಲ್ಲ ನೀನೇ,’ ಅನ್ನುತಾಳೆ. ʼಅಯ್ಯೋ ಅಮ್ಮಾ…ʼ ಅವನ ಮನಸ್ಸಿನಲ್ಲಿ ಕೋಪ ಕುದಿಯಿತು. ಪೀಟರ್ ಪೆಟ್ರೊವಿಚ್ ಏನಾದರೂ ಸಿಕ್ಕರೆ ಅವನನ್ನು ಕೊಂದೇ ಬಿಡುತ್ತೇನೆ ಅಂದುಕೊಂಡ!

ಅವನ ತಲೆಯಲ್ಲಿ ಆಲೋಚನೆಗಳ ಸುಂಟರಗಾಳಿ ಎದ್ದಿತ್ತು. ‘ಒಬ್ಬ ಮನುಷ್ಯ ಚೆನ್ನಾಗಿ ಅರ್ಥವಾಗಬೇಕಾದರೆ ಅವನ ಪರಿಚಯ ಮಾಡಿಕೊಂಡು ನಿಧಾನವಾಗಿ ಸ್ವಚ್ಛ ಮನಸ್ಸಿನಿಂದ ನೋಡಬೇಕು. ನಿಜ. ಪೆಟ್ರೊವಿಚ್ ಚೆನ್ನಾಗಿ ಅರ್ಥವಾಗಿದ್ದಾನೆ. ಅವನು ‘ಲೆಕ್ಕಾಚಾರದ ಮನುಷ್ಯ, ಆದರೂ ಉದಾರಿ’ ಅನ್ನಿಸಿದೆ ಅಮ್ಮನಿಗೆ. ತಮಾಷೆಯಲ್ಲ, ಲಗೇಜು ಸಾಗಿಸುವ ಜವಾಬ್ದಾರಿ ತಾನೇ ಹೊತ್ತುಕೊಂಡ! ಕರುಣಾಮಯಿ! ಮದುವೆಯ ಹೆಣ್ಣು ಮತ್ತವಳ ತಾಯಿ, ರೈತರ ಗಾಡಿಯಲ್ಲಿ, ಹುಲ್ಲಿನ ಚಾಪೆ ಮೇಲೆ ಕೂತು, ಬಾಡಿಗೆ ಕೊಟ್ಟು ಬಂದರೂ (ನಾನೂ ಹಾಗೇ ಬಂದಿದೇನೆ). ಪರವಾಗಿಲ್ಲವಂತೆ! ಬರೀ ಅರುವತ್ತು ಮೈಲಿಯಂತೆ! ಆಮೇಲೆ ಇನ್ನೂ ಆರುನೂರು ಮೈಲಿ ಥರ್ಡ್ ಕ್ಲಾಸಿನಲ್ಲಿ ಬರುವ ನಿರ್ಧಾರ ಮಾಡಿದ್ದೇವೆ ಅನ್ನುತ್ತಾಳೆ. ಸರಿಯೇ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಆದರೆ, ಶ್ರೀಮಾನ್ ಪೆಟ್ರೊವಿಚ್, ನಿನ್ನ ವಿಚಾರ ಏನು? ಅವಳು ನಿನ್ನ ಕೈ ಹಿಡಿಯುವವಳು… ಅವಳ ಅಮ್ಮ ಪಿಂಚಣಿ ಹಣ ಅಡವಿಟ್ಟು ಸಾಲ ತಗೊಳ್ಳುತ್ತಿದ್ದಾಳೆ ಅನ್ನುವುದು ನಿನಗೆ ಗೊತ್ತಿಲ್ಲವೋ? ನಿನಗೆ ಇದೊಂದು ಪಾಲುದಾರಿಕೆ ವ್ಯಾಪಾರ, ಇಬ್ಬರೂ ಬಂಡವಾಳ ಹಾಕಬೇಕು ಇಬ್ಬರಿಗೂ ಲಾಭ ಆಗಬೇಕು, ಖರ್ಚು ಕೂಡ ಸಮ ಸಮ ಹಂಚಿಕೊಳ್ಳಬೇಕು. ಊಟ, ತಿಂಡಿ ಖರ್ಚು ಹಂಚಿಕೊಳ್ಳೋಣ, ಸಿಗರೇಟಿಗೆ ದುಡ್ಡು ನೀನೇ ಕೊಡಬೇಕು ಅಂದಹಾಗೆ. ಇಲ್ಲೂ ವ್ಯಾಪಾರಸ್ಥ ಅವರ ಕಣ್ಣಿಗೆ ಮಣ್ಣು ತೂರಿದ್ದಾನೆ. ಇಬ್ಬರ ಪ್ರಯಾಣದ ವೆಚ್ಚಕ್ಕಿಂತ ಲಗೇಜು ಸಾಗಿಸುವ ಖರ್ಚು ಕಡಮೆ, ಬಿಟ್ಟಿಯಾಗೂ ಬಂದೀತು. ಅವರಿಗೆ ಅರ್ಥ ಆಗಲ್ಲವಾ ಅಥವಾ ಗೊತ್ತಿದ್ದೂ ಉದಾಸೀನ ಮಾಡತಾ ಇದಾರಾ? ಬಹಳ ಸಂತೋಷವಾಗಿದೆ ಅನ್ನತಾರೆ. ಸಂತೋಷ! ಇದಿನ್ನೂ ಮೊಳಕೆ, ಹಣ್ಣು ಬಿಟ್ಟಾಗ ರುಚಿ ತಿಳಿಯತ್ತೆ!

ಅವನ ಜಿಪುಣತನ ಮುಖ್ಯ ಅಲ್ಲ, ಮುಖ್ಯವಾದದ್ದು ಅವನ ಮಾತಿನ ದನಿ. ಮದುವೆ ಆದಮೇಲೆ ಅದೇ ದನಿ ದೊಡ್ಡದಾಗಿ ಕೇಳತ್ತೆ. ಇದು ಶಕುನ ಅಷ್ಟೆ. ಅಲ್ಲಾ, ಅಮ್ಮ ಯಾಕೆ ಹೀಗೆ ಖರ್ಚು ಮಾಡುತ್ತಿದ್ದಾಳೆ? ಇಲ್ಲಿಗೆ ಬಂದಾಗ ಅವಳ ಹತ್ತಿರ ಏನಿರತ್ತೆ? ಮೂರು ರೂಬಲ್ಲು, ಅಥವಾ ಆ ಮುದುಕಿ ಹೇಳುವ ಹಾಗೆ ಎರಡು ಚಿಕ್ಕ ನೋಟು. ಹ್ಞೂಂ! ಇಲ್ಲಿ ಊಟ ತಿಂಡಿಗೆ ಏನು ಮಾಡತಾಳಂತೆ? ಆಗಲೇ ಅವಳಿಗೆ ಗೊತ್ತಾಗಿದೆ, ಮದುವೆ ಆದಮೇಲೆ ದುನ್ಯಾ ಜೊತೆಯಲ್ಲಿ ಇರುವುದಕ್ಕೆ ಆಗಲ್ಲ ಅಂತ. ಮದುವೆ ಆದ ಹೊಸದರಲ್ಲೂ ಆಗಲ್ಲ. ಸಭ್ಯಸ್ಥ ವರನ ಬಾಯಿಂದ ಅಂಥ ಮಾತು ಜಾರಿರಬೇಕು. ಅಮ್ಮನೇನೋ ಅಂಥದೇನೂ ಇಲ್ಲ, ನಾನೇ ಒಲ್ಲೆ ಅನ್ನತಾಳೆ. ಯಾವ ನಂಬಿಕೆ ಮೇಲೆ ಇರತಾಳೆ? ಅಫಾನ್ಸೆ ಇವಾನೊವಿಚ್‌ ಗೆ ತೀರಿಸುವ ಸಾಲ ಕಳೆದು ನೂರಿಪ್ಪತ್ತು ರೂಬಲ್‌ ನಲ್ಲಿ ಉಳಿಯುವ ಪೆನ್ಶನ್ನು? ಮುದಿ ಕಣ್ಣು ಇನ್ನೂ ಹಾಳು ಮಾಡಿಕೊಂಡು ಸ್ವೆಟರು ಹಾಕತಾಳೆ, ಕಸೂತಿ ಕೆಲಸ ಮಾಡತಾಳೆ. ಇದರಿಂದೆಲ್ಲ ವರ್ಷಕ್ಕೆ ಇನ್ನೊಂದು ಇಪ್ಪತ್ತು ರೂಬಲ್ ಸಿಕ್ಕೀತು, ಅಷ್ಟೇ. ನನಗೆ ಗೊತ್ತು. ಅಮ್ಮ, ತಂಗಿ ಇಬ್ಬರೂ ಪೆಟ್ರೊವಿಚ್‍ ನ ದಾನ ಬುದ್ಧಿಯನ್ನ ನಂಬಿಕೊಂಡಿದಾರೆ, ಅವನೇ ಮುಂದೆ ಬಂದು ಸಹಾಯ ಮಾಡತಾನೆ, ಅಥವಾ ಸಹಾಯ ಒಪ್ಪಿಕೊಳ್ಳಿ ಅಂತ ಬಲವಂತ ಮಾಡತಾನೆ ಅಂದುಕೊಂಡಿದಾರೆ. ದೇವರು ಒಳ್ಳೆಯದು ಮಾಡಲಿ. ರಮ್ಯ ಕವಿ ಶಿಲರ್ ಥರ ಇರುವ ಜನರೇ ಹೀಗೆ. ಕೊನೆಯ ಕ್ಷಣದವರೆಗೂ ಕಾಗೇನೂ ಹಂಸದ ಹಾಗೇ ಕಾಣತ್ತೆ ಅವರಿಗೆ. ಕೊನೆ ಕ್ಷಣದವರೆಗೂ ಎಲ್ಲಾ ಒಳ್ಳೆಯದೇ ಅಂದುಕೊಳ್ಳತಾ ಇರತಾರೆಯೇ ಹೊರತು ಹಣ್ಣು ಇನ್ನೊಂದು ಪಕ್ಕದಲ್ಲಿ ಕೊಳೆತಿರಬಹುದು ಅನ್ನುವ ಯೋಚನೆಯೂ ಇರಲ್ಲ, ಎಲ್ಲಾ ಮುಗಿಯಿತು ಅನ್ನುವವರೆಗೆ ಸತ್ಯವನ್ನ ನೋಡುವ ಮಾತೇ ಇಲ್ಲ. ಸತ್ಯವನ್ನು ಕಾಣಬೇಕು ಅಂದುಕೊಂಡರೇನೇ ಅವರ ಮೈ ನಡಗತ್ತೆ. ಎರಡೂ ಕೈಯಲ್ಲಿ ಸತ್ಯವನ್ನ ಗುಡಿಸಿ ಹಾಕತಾರೆ, ಹಂಸ ಅಂದುಕೊಂಡಿದ್ದ ಕಾಗೆ ನೆತ್ತಿಯ ಮೇಲೆ ಕುಕ್ಕುವವರೆಗೂ ಹಾಗೇನೇ. ಪೆಟ್ರೊವಿಚ್‍ ಗೆ ಏನಾದರೂ ಬಿರುದು ಬಾವಲಿ ಬಂದಿವೆಯೋ ಹೇಗೆ? ಅವನ ಎದೆಗೆ ಸೇಂಟ್ ಆನ್ ಪದಕ ಸಿಕ್ಕಿಸಿರಬೇಕು ನಮ್ಮ ಝಾರ್. ಕಂಟ್ರಾಕ್ಟರು, ವ್ಯಾಪಾರಿಗಳ ಜೊತೆ ಊಟಕ್ಕೆ ಹೋಗುವಾಗ ಎದೆಗೆ ಸಿಕ್ಕಿಸಿಕೊಂಡು ಹೋಗತಾನೆ ಅಂತ ಕಾಣತ್ತೆ. ಮದುವೆಗೂ ಅದನ್ನ ಹಾಕಿಕೊಂಡು ಬರಬಹುದು! ದೆವ್ವ ಹಿಡಿಯಲಿ ಅವನನ್ನ!…

‘…ಅಮ್ಮ, ಇರುವುದೇ ಹಾಗೆ, ಸರಿ. ಈ ದುನ್ಯಾಗೆ ಏನಾಗಿದೆ? ನಿನ್ನ ಹೋದ ಸಾರಿ ನೋಡಿದಾಗ ಇಪ್ಪತ್ತು ತುಂಬಿತ್ತು ನಿನಗೆ. ನೀನು ಎಂಥವಳು, ಆಗಲೇ ಗೊತ್ತಾಗಿತ್ತು ತಂಗೀ. ‘ದುನ್ಯಾ ಎಷ್ಟಾದರೂ ಕಷ್ಟ ಸಹಿಸತಾಳೆ’ ಅಂತ ಅಮ್ಮ ಬರೀತಾಳೆ. ಎರಡೂವರೆ ವರ್ಷದ ಹಿಂದೆಯೇ ಗೊತ್ತಾಗಿತ್ತು ನನಗೆ. ಆವತ್ತಿನಿಂದ ಯೋಚನೆ ಮಾಡತಾನೇ ಇದೇನೆ. ಅವಳು ಸ್ವಿಡ್ರಿಗೈಲೋವ್ ಕೊಟ್ಟ ಕಷ್ಟಾನೇ ಸಹಿಸಿದಳು ಅಂತಾದರೆ ಖಂಡಿತ ಏನು ಬೇಕಾದರೂ ಸಹಿಸತಾಳೆ. ಈಗ ಪೆಟ್ರೊವಿಚ್‍ ನ ಕೂಡ ಸಹಿಸಬಹುದು ಅಂತ ಅಮ್ಮಾನೂ ಅಂದುಕೊಂಡಿದಾಳೆ. ‘ಬಡತನದಿಂದ ಪಾರು ಮಾಡಿದ್ದಕ್ಕೆ ಹೆಂಡತಿಯಾದವಳು ಗಂಡನಿಗೆ ಋಣಿಯಾಗಿರಬೇಕು’ ಅನ್ನುವ ತತ್ವವನ್ನ ಮೊದಲ ಭೇಟಿಯಲ್ಲೇ ಹೇಳುವಂಥವನು ಅವನು. ಬುದ್ಧಿಜೀವಿ! ಬಾಯಿ ತಪ್ಪಿ ಅಂಥ ಮಾತು ಬಂದಿರಬಹುದು. ಬುದ್ಧಿಜೀವಿ ಅಂದರೆ ಬಾಯಿ ತಪ್ಪಿ ಬಂದದ್ದಲ್ಲ, ನಿಜಾನೇ ಹೇಳಿರಬೇಕು.

ದುನ್ಯಾ, ದುನ್ಯಾ ಗತಿ ಏನು? ಅವನ ಜೊತೆ ಬದುಕಬೇಕಲ್ಲ. ಒಣಕಲು ಬ್ರೆಡ್ಡು ತಿಂದು, ನೀರು ಕುಡಿದು ಇದ್ದಾಳು. ಇಡೀ ರಾಜ್ಯ ಕೊಡತೇನೆ ಅಂದರೂ ಅವಳ ಸ್ವಾತಂತ್ರವನ್ನ, ನೀತಿಯನ್ನ, ಸುಖಕ್ಕೋಸ್ಕರ ಮಾರಿಕೊಳ್ಳುವವಳಲ್ಲ ಅವಳು. ಈಗಲೂ ಹಾಗೇ ಇದಾಳೆ. ಹೇಳಕ್ಕೆ ಏನಿದೆ? ಸ್ವಿಡ್ರಿಲಗೋವ್ ಥರದವರ ಜೊತೆ ಏಗುವುದು ಕಷ್ಟ. ಅದೂ ಬರಿಯ ಇನ್ನೂರು ರೂಬಲ್‌ ಗೆ ಯಾವುದೋ ಹಳ್ಳಿಯ ಜಮೀನ್ದಾರನ ಮನೆಗೆ ಹೋಗುವುದು! ನನ್ನ ತಂಗಿ ಎಸ್ಟೇಟಿನಲ್ಲಿ ಗುಲಾಮಳಾಗಿ ಕೆಲಸ ಮಾಡಿಯಾಳೇ ಹೊರತು ಮನಸ್ಸಿನಲ್ಲಿ ಒಂದಿಷ್ಟೂ ಗೌರವ ಇಲ್ಲದ ಪೆಟ್ರೊವಿಚ್‍ ಜೊತೆ ಸ್ವಂತದ ಲಾಭಕ್ಕೆ ಬದುಕುವವಳಲ್ಲ. ಪೆಟ್ರೊವಿಚ್ ಅಪ್ಪಟ ಅಪರಂಜಿಯೋ ಅಮೂಲ್ಯ ವಜ್ರವೋ ಆಗಿದ್ದರೂ ಅವನ ಜೊತೆ ಮದುವೆಯಾದ ಸೂಳೆ ಥರ ಇರುವವಳಲ್ಲ ನನ್ನ ತಂಗಿ. ಹಾಗಾದರೆ, ಯಾಕೆ ಒಪ್ಪಿಕೊಂಡಳು? ಏನಿದರ ರಹಸ್ಯ? ಸತ್ತರೂ ಸರಿ, ಸ್ವಂತದ ಸುಖಕ್ಕೆಂದು ಹೀಗೆ ತನ್ನನ್ನ ಮಾರಿಕೊಳ್ಳುವವಳಲ್ಲ. ಬೇರೆ ಯಾರಿಗಾಗಿಯೋ ಹೀಗೆ ಮಾರಾಟವಾಗುವುದಕ್ಕೆ ಒಪ್ಪಿದ್ದಾಳೆ. ತನಗೆ ಬೇಕಾದವರಿಗಾಗಿ ತನ್ನನ್ನೆ ಮಾರಿಕೊಳ್ಳುವಂಥವಳು. ತನ್ನ ಅಣ್ಣ, ಅಮ್ಮ ಚೆನ್ನಾಗಿರಲೆಂದು ತನ್ನನ್ನೇ ಮಾರಿಕೊಳ್ಳಬಲ್ಲಳು! ತನ್ನವರಿಗೆ ಒಳ್ಳೆಯದಾಗುತ್ತದೆ ಅಂದರೆ ನೀತಿ, ಭಾವನೆ, ಸ್ವಾತಂತ್ರ, ನೆಮ್ಮದಿ, ಆತ್ಮಸಾಕ್ಷಿ ಎಲ್ಲಾನೂ ಸಂತೆಯಲ್ಲಿ ಸೀದುಬಿಡುತ್ತಾಳೆ. ನನ್ನ ಜೀವ ಹೋದರೆ ಹೋಗಲಿ, ನನ್ನವರು ಸುಖವಾಗಿರಲಿ ಅನ್ನುವವಳು. ನಾವು ಮಾಡುತ್ತಿರುವ ಕೆಲಸ ಒಳ್ಳೆಯದು, ಮಾಡಲೇಬೇಕಾದದ್ದು ಅಂತ ನಮ್ಮನ್ನೇ ನಂಬಿಸಿಕೊಳ್ಳುವುದಕ್ಕೆ ಇರುವ, ಇಲ್ಲದಿರುವ ಕಾರಣ ಹುಡುಕಿಕೊಳ್ಳತೇವೆ. ಇಡೀ ವ್ಯವಹಾರದ ಕೇಂದ್ರದಲ್ಲಿ ಇರುವವನು ಇದೇ ಈ ನಾನು, ರೋಡಿಯಾನ್ ರೊಮಾನೊವಿಚ್ ರಾಸ್ಕೋಲ್ನಿಕೋವ್… ಈ ಮದುವೆ ನಡೆದರೆ ಇವನನ್ನ ಖುಷಿಯಾಗಿಡಬಹುದು, ಕಾಲೇಜಿಗೆ ಕಳಿಸಬಹುದು, ವ್ಯಾಪಾರದಲ್ಲಿ ಪಾಲುದಾರನ್ನ ಮಾಡಬಹುದು, ಇವನ ಇಡೀ ಭವಿಷ್ಯಕ್ಕೆ ಅಡಿಪಾಯ ಹಾಕಬಹುದು, ಇವನು ಸಾಹುಕಾರ ಆಗತಾನೆ, ಗೌರವಸ್ಥ ಆಗತಾನೆ, ಪ್ರಸಿದ್ಧನೂ ಆಗಬಹುದು ಅಂದುಕೊಂಡಿದಾರೆ!

ಮತ್ತೆ ಅಮ್ಮ? ಅಯ್ಯೋ ನಮ್ಮ ರೋದ್ಯಾ, ಮುದ್ದು ರೋದ್ಯಾ, ಚೊಚ್ಚಲ ಮಗು ರೋದ್ಯಾ! ಈ ಹಿರಿಯ ಮಗನಿಗಾಗಿ ಮಗಳನ್ನು ತ್ಯಾಗಮಾಡದೆ ಇರಲು ಆಗುತ್ತದಾ? ಆಹಾ, ಅನ್ಯಾಯವೇ. ಇನ್ನೂ ಬೇಕಂದರೆ ಸೋನ್ಯಾ ಇದಾಳಲ್ಲಾ, ಮಾರ್ಮೆಲಡೋವ್ ಮಗಳು, ಅವಳಿಗೆ ಬಂದ ಗತಿ ದುನ್ಯಾಗೂ ಬರಲಿ ಅನ್ನುವುದಕ್ಕೂ ತಯಾರು! ಸೋನ್ಯಾ ಥರದವರು ಈ ಜಗತ್ತು ಇರುವ ತನಕ ಬಲಿ ಆಗತಾನೇ ಇರತಾರೆ. ನೀವು ಕೊಡತಾ ಇರುವ ಬಲಿ, ನೀವು ಮಾಡತಾ ಇರುವ ತ್ಯಾಗ ಎಂಥದ್ದು? ಸರಿಯಾ? ತ್ಯಾಗಕ್ಕೆ ಶಕ್ತಿ ಇದೆಯಾ? ಉಪಯೋಗ ಇದೆಯಾ? ನ್ಯಾಯವಾ? ನಿನಗೆ ಗೊತ್ತಾ ದುನ್ಯಾ ಆ ಪೆಟ್ರೊವಿಚ್‍ ನ ಮದುವೆಯಾಗುವುದೂ ಒಂದೇ ಸೋನ್ಯಾ ಥರ ಬದುಕುವುದೂ ಒಂದೇ. ‘ಅವರ ಮಧ್ಯ ಪ್ರೀತಿ ಇರಲಾರದು’ ಅಂತ ಅಮ್ಮ ಬರೆಯುತ್ತಾಳೆ. ಪ್ರೀತಿ ಮಾತ್ರ ಅಲ್ಲ, ಗೌರವ ಕೂಡ ಇರದಿದ್ದರೆ? ಬರೀ ಅಸಹ್ಯ, ತಿರಸ್ಕಾರ ಮಾತ್ರ ಇದ್ದರೆ? ಏನು ಗತಿ? ಸೋನ್ಯಾ ಅಪ್ಪ ಹೇಳಿದನಲ್ಲ, ‘ಸ್ವಚ್ಛವಾಗಿರಬೇಕು, ಶುದ್ಧವಾಗಿರಬೇಕು,’ ಅಂತ. ನಿಜ, ಅಲ್ಲವಾ? ಈ ಸ್ವಚ್ಛ ಅನ್ನುವುದರ ಅರ್ಥ ಗೊತ್ತಾ? ಪೆಟ್ರೊವಿಚ್‍ ನ ಸ್ವಚ್ಛಕ್ಕೂ ಸೋನ್ಯಾಳ ಸ್ವಚ್ಛಕ್ಕೂ ವ್ಯತ್ಯಾಸ ಇಲ್ಲ. ಹಾಗೆ ನೋಡಿದರೆ ಇವನ ಸ್ವಚ್ಛ ಇನ್ನೂ ಕೀಳು, ಕೊಳಕ, ನೀಚ. ಯಾಕೆಂದರೆ ನೀನು ಇದನ್ನ ಮಾಡಿದರೆ ಒಂದಿಷ್ಟಾದರೂ ಸುಖ ಸಿಕ್ಕೀತು, ಅವನಿಗೆ ಇರುವುದು ಮುದಿ ಹಸಿವು. ನಿನ್ನ ಜಾಣತನಕ್ಕೆ ಬೆಲೆ ತೆರಬೇಕು ಸೋನ್ಯಾ. ತುಂಬ ದೊಡ್ಡ ಬೆಲೆ. ನಿನಗೆ ಯಾವತ್ತಾದರೂ ಪಶ್ಚಾತ್ತಾಪವಾದರೆ? ದುಃಖ, ನೋವು, ಶಾಪ, ಕಣ್ಣೀರು, ಎಲ್ಲಾರಿಂದ ಮುಖ ಮರೆಸಿಕೊಂಡು ಬದುಕುವುದು—ಇದೆಲ್ಲ ಯೋಚನೆ ಮಾಡಿದೀಯಾ? ನೀನು ಸ್ವಿದ್ರಿಗೈಲೋವ್‍ ನ ಹೆಂಡತಿ, ನಿನ್ನ ಪರವಾಗಿ ಮನೆಮನೆಗೆ ಹೋಗಿ ಮಾತಾಡಿದ ಮಾರ್ಫಾ ಪೆಟ್ರೋವ್ನಾ ಥರ ಅಲ್ಲ! ಮತ್ತೆ ಈಗಲೇ ಕಷ್ಟಪಡುತ್ತಾ, ಹಿಂಸೆಪಡುತ್ತಾ ಇರುವ ಅಮ್ಮನಿಗೇನಾಗತ್ತೆ ಆಗ? ಮತ್ತೆ ನಾನು? ನನ್ನ ಏನಂದುಕೊಂಡಿದೀಯಾ ದುನ್ಯಾ? ನನಗೆ ನಿನ್ನ ತ್ಯಾಗ ಬೇಡಮ್ಮಾ. ಬೇಡ. ನಾನು ಬದುಕಿರುವವರೆಗೂ ಇದು ಆಗಲ್ಲ, ಇದು ಆಗಲ್ಲ, ಇದು ಆಗಲ್ಲ, ಒಪ್ಪಲ್ಲ!’

ಇದ್ದಕಿದ್ದ ಹಾಗೆ ಎಚ್ಚರಗೊಂಡ. ನಿಂತ. ಮನಸ್ಸು ಕೇಳಿತು-
‘ಆಗಲ್ಲವಾ? ಅದು ಹೇಗೆ ತಡೆಯುತೀಯಾ? ಬೇಡಾ ಅನ್ನುತೀಯಾ? ಯಾವ ಹಕ್ಕು ಇದೆ ನಿನಗೆ? ಅವರೇ ಅಂಥ ಹಕ್ಕು ನಿನಗೆ ಕೊಟ್ಟರೆ ನಿನ್ನಿಂದ ಅವರಿಗೇನು ಸಿಗತ್ತೆ? ಓದು ಮುಗಿಸಿ ಕೆಲಸ ಸಿಕ್ಕ ಮೇಲೆ, ಆಮೇಲೆ, ನಿನ್ನ ಇಡೀ ಬದುಕು ಅವರಿಗಾಗಿ ಮೀಸಲು ಇಡುತೀಯಾ? ಇದು ಕಣ್ಣು ಕಟ್ಟಿಕೊಂಡು ಇಸ್ಪೀಟು ಆಡಿದ ಹಾಗೆ. ಇವತ್ತಿನ ಕಥೆ ಏನು? ಈಗಲೇ ಏನಾದರೂ ಮಾಡಬೇಕು, ಗೊತ್ತಾಯಿತಾ? ನೀನು ಈಗ ಮಾಡತಿರೋದೇನು? ಅವರ ರಕ್ತ ಹೀರತಾ ಇದೀಯ. ನೂರು ರೂಬಲ್ ಪೆನ್‌ಶನ್ ಒತ್ತೆ ಇಟ್ಟು ಸಾಲ ತಗೊಳ್ಳುತ್ತಾರೆ, ನಿನಗೆ ಕೊಡೋದಕ್ಕೆ, ಅಥವಾ ಸ್ವಿಡ್ರಿಗೈಲೋವ್ ಥರದವರಿಂದ ಸಾಲ ತಗೊಳ್ಳತಾರೆ! ಸ್ವಿಡ್ರಿಗೈಲೋವ್ ಥರದವರಿಂದ ಅವರನ್ನ ಹ್ಯಾಗೆ ಕಾಪಾಡುತ್ತೀ, ಅಂಗಡಿ ಸಾಹುಕಾರನ ಥರದವರಿಂದ ಹೇಗೆ ಕಾಪಾಡುತ್ತೀ? ಮುಂದೆ ಯಾವತ್ತೋ ಲಕ್ಷಾಧಿಪತಿ ಆಗುವ ನೀನು ದೇವರ ಥರ ಅವರ ಹಣೆಬರಹ ಬರೀತೀಯಾ? ಇನ್ನೊಂದು ಹತ್ತು ವರ್ಷ ಬೇಕಾದೀತಾ? ಹತ್ತು ವರ್ಷದಲ್ಲಿ ಅಮ್ಮ ಕಸೂತಿ ಹಾಕಿ ಹಾಕಿ ಕುರುಡಿಯಾಗಿರತಾಳೆ. ಅತ್ತೂ ಅತ್ತೂ. ನವೆದುಹೋಗಿರತಾಳೆ. ಮತ್ತೆ ತಂಗಿ? ಹತ್ತುವರ್ಷದಲ್ಲಿ ಏನಾಗಬಹುದು ಅವಳ ಗತಿ, ಊಹೆ ಮಾಡಿದೀಯಾ?’

ಹೀಗೆ ಪ್ರಶ್ನೆ ಹಾಕಿಕೊಂಡು ಹಿಂಸೆಮಾಡಿಕೊಳ್ಳುತ್ತಾ ಇದ್ದ. ಆಗುವ ಹಿಂಸೆಯಲ್ಲಿ ಒಂದು ಥರ ಸಂತೋಷವನ್ನೂ ಪಡುತ್ತಿದ್ದ. ಈ ಯಾವ ಪ್ರಶ್ನೆಗಳೂ ಹೊಸವಲ್ಲ. ಆ ತಕ್ಷಣಕ್ಕೆ ಹುಟ್ಟಿದವೂ ಅಲ್ಲ. ಈ ಪ್ರಶ್ನೆಗಳೆಲ್ಲ ಹಳೆಯ ನೋವಿನ ಹಾಗೆ ಹಿಂಸೆ ಕೊಟ್ಟು ಕೊಟ್ಟು ಮನಸ್ಸನ್ನು ನವೆಸಿಬಿಟ್ಟಿದ್ದವು. ಈ ನೋವು ಬಹಳ ಬಹಳ ಹಿಂದೆಯೇ ಹುಟ್ಟಿತ್ತು, ಬೆಳೆದಿತ್ತು, ಇತ್ತಿಚೆಗಷ್ಟೇ ಮಾಗಿತ್ತು, ದಟ್ಟೈಸಿತ್ತು; ಭಯಂಕರ ಮೃಗದ ಹಾಗೆ ಮೊರೆಯುತ್ತ ತಕ್ಷಣವೇ ಪರಿಹಾರ ಹುಡುಕು ಎಂದು ಒತ್ತಾಯಿಸುತ್ತಿತ್ತು. ತಾಯಿಯ ಪತ್ರ ಈಗ ಸಿಡಿಲಿನ ಹಾಗೆ ಎರಗಿತ್ತು. ನೋವುಪಟ್ಟುಕೊಂಡು ಸುಮ್ಮನೆ ನರಳುವುದರಲ್ಲಿ, ಪರಿಹಾರವಿಲ್ಲದ ಪ್ರಶ್ನೆಗಳಿಗೆ ವಿವರಣೆ ನೀಡುತ್ತ ಇರುವುದರಲ್ಲಿ ಅರ್ಥವಿರಲಿಲ್ಲ ತಕ್ಷಣವೇ ಈಗಲೇ ಏನಾದರೂ ಮಾಡಬೇಕಾಗಿತ್ತು, ಆಗಿದ್ದು ಆಗಲೆಂದು ನಿರ್ಧಾರ ಮಾಡಬೇಕಾಗಿತ್ತು… ಇಲ್ಲದಿದ್ದರೆ…

‘ಜೀವ ಬಿಡಬೇಕು!’ ಹುಚ್ಚನ ಹಾಗೆ ಕೂಗಿದ. ‘ಹಣೆಬರಹ ಅಂತ ಒಪ್ಪಿಕೊಂಡು, ಏನೂ ಮಾಡದೆ, ಬದುಕದೆ, ಪ್ರಿತಿ ಮಾಡದೆ, ಹೀಗೇ ಸಾಯಬೇಕು, ಇಲ್ಲಾ ಏನಾದರೂ ಮಾಡಬೇಕು,’ ಅಂದುಕೊಂಡ.

ನಿನ್ನೆ ತಾನೇ ಮಾರ್ಮೆಲಡೋವ್ ಕೇಳಿದ್ದ, ‘ಗೊತ್ತಾ ಸಾರ್, ಗೊತ್ತಾ ಸಾರ್, ಹೋಗುವುದಕ್ಕೆ ಒಂದು ಜಾಗ ಇಲ್ಲದಿದ್ದರೆ ಹೇಗಿರುತ್ತೆ?’ ಅಂತ. ಆಮೇಲೆ, ‘ಪ್ರತಿಯೊಬ್ಬನಿಗೂ ಅವನದೇ ಅಂತ ಒಂದು ಜಾಗ ಇರಬೇಕು,’ ಅಂದಿದ್ದ. ರಾಸ್ಕೋಲ್ನಿಕೋವ್ ತಟ್ಟನೆ ಬೆದರಿದ. ಯಾವುದೋ ಯೋಚನೆ, ನಿನ್ನೆಯಿಂದ ಆಗಾಗ ಬರುತ್ತಾ ಇದ್ದದ್ದು ಈಗ ಮತ್ತೆ ತಲೆಗೆ ನುಗ್ಗಿತ್ತು. ಹಾಗೆ ನುಗ್ಗಿದ್ದಕ್ಕಲ್ಲ ಅವನು ಬೆದರಿದ್ದು. ಆ ಯೋಚನೆ ನುಗ್ಗಿ ಬಂದೇ ಬರುತ್ತದೆಂದು ನಿರೀಕ್ಷಿಸಿದ್ದ. ಇದು ನಿನ್ನೆಯ ಯೋಚನೆಯಲ್ಲ. ವ್ಯತ್ಯಾಸವೇನೆಂದರೆ, ತಿಂಗಳ ಹಿಂದೆ, ನಿನ್ನೆ ಕೂಡ, ಆ ಯೋಚನೆ ಬರಿಯ ಕಲ್ಪನೆಯಾಗಿತ್ತು. ಈಗ, ಅದು ಕಲ್ಪನೆಯಲ್ಲ, ಹೊಸದಾದ, ಬೆದರಿಸುವ ಅಪರಿಚಿತ ರೂಪ ತಳೆದು… ಓಹೋ, ಇದೇ ಯೋಚನೆ ಅದು ಅನ್ನುವ ಎಚ್ಚರ ಮೂಡಿಸಿ ಅಪ್ಪಳಿಸಿತ್ತು. ಅವನ ಕಣ್ಣು ಕತ್ತಲಿಟ್ಟಿತ್ತು.

ಧಾವಂತಪಡುತ್ತಾ ಸುತ್ತಲೂ ನೋಡಿದ. ಏನೋ ಹುಡುಕುತ್ತಿದ್ದ. ಕೂರಬೇಕು ಅನ್ನಿಸಿತ್ತು. ಬೆಂಚು ಇದೆಯೋ ನೋಡುತ್ತಿದ್ದ. ಆಗ ಅವನು ಕೆ-ಬೂಲೆವಾರ್ಡ್ವನಲ್ಲಿದ್ದ. ಮುಂದೆ, ನೂರು ಹೆಜ್ಜೆ ದೂರದಲ್ಲಿ ಬೆಂಚು ಕಾಣಿಸಿತು. ಅತ್ತ ಕಡೆಗೆ ದೊಡ್ಡ ಹೆಜ್ಜೆ ಹಾಕಿದ. ಅಷ್ಟರಲ್ಲಿ ಅವನ ಗಮನವನ್ನು ಕೆಲವು ನಿಮಿಷದ ಮಟ್ಟಿಗೆ ಪೂರಾ ಸೆಳೆಯುವಂಥ ಸಂಗತಿ ನಡೆಯಿತು.

ಬೆಂಚು ಹುಡುಕುತ್ತಿರುವಾಗ ತನಗಿಂತ ಇಪ್ಪತ್ತು ಹೆಜ್ಜೆ ಮುಂದೆ ಹೆಂಗಸೊಬ್ಬಳು ಹೋಗುತ್ತಿರುವುದನ್ನು ಅವನು ಗಮನಿಸಿದ್ದ. ಕಣ್ಣೆದುರಿಗೆ ಇದ್ದ ಎಷ್ಟೋ ಸಂಗತಿಗಳ ಹಾಗೆ ಅವಳಿಗೂ ಅವನು ಅಷ್ಟು ಗಮನ ಕೊಡಲಿಲ್ಲ. ಇತ್ತೀಚೆಗೆ ಅವನು ಮನೆಗೆ ತಲುಪಿದ ಮೇಲೆ ತಾನು ಯಾವ ದಾರಿ ಹಿಡಿದು ಬಂದೆ ಅನ್ನುವ ನೆನಪೇ ಇರುತ್ತಿರಲಿಲ್ಲ. ಹೀಗೆ ಎಚ್ಚರವಿರದೆ ಸುತ್ತಾಡಿ ಅಭ್ಯಾಸವಾಗಿಬಿಟ್ಟಿತ್ತು. ಆದರೂ ಮುಂದೆ ಹೋಗುತ್ತಿದ್ದ ಹೆಂಗಸಿನ ನಡಿಗೆಯಲ್ಲಿ ಅವನ ಗಮನ ಸೆಳೆಯುವಂಥ ಅಸಹಜವಾದದ್ದೇನೋ ಇತ್ತು. ಗಮನವಿಟ್ಟು ನೋಡಿದ.

ಮೊದಮೊದಲು ಹಿಂಜರಿಯುತ್ತ, ಆಮೇಲೆ ಮುಜುಗರಪಟ್ಟುಕೊಂಡು ನೋಡಿದ. ‘ಯಾಕೆ ಇವಳು ಹೀಗೆ?’ ಅಂದುಕೊಂಡ. ತೀರ ಎಳೆಯ ಪ್ರಾಯದ ಹುಡುಗಿ. ಅಂಥ ಬಿಸಿಲಲ್ಲೂ ಬರಿತಲೆಯಲ್ಲಿದ್ದಳು. ಛತ್ರಿಯಾಗಲೀ, ಕೈಗೆ ಗ್ಲೌಸಾಗಲೀ ಇರಲಿಲ್ಲ. ತಮಾಷೆ ಅನ್ನಿಸುವ ಹಾಗೆ ಕೈ ಬೀಸಿ ನಡೆಯುತ್ತಿದ್ದಳು. ಹಗುರವಾದ, ಸಿಲ್ಕಿನಂಥ ಉಡುಪು ತೊಟ್ಟಿದ್ದಳು, ಅದೂ ಹೇಗೆ ಹೇಗೋ ಇತ್ತು. ಗುಂಡಿ ಸರಿಯಾಗಿ ಹಾಕಿರಲಿಲ್ಲ, ಸ್ಕರ್ಟು ಹಿಂಬದಿಯಲ್ಲಿ, ಸೊಂಟದ ಹತ್ತಿರ ಹರಿದು ಜೋತಾಡುತ್ತಿತ್ತು, ಕೊರಳಿಗೆ ಪುಟ್ಟದೊಂದು ಕರ್ಚೀಫು ಸುತ್ತಿದ್ದಳು. ಅದೂ ಒಂದು ಪಕ್ಕಕ್ಕೆ ಸರಿದು ಮುದ್ದೆಯಾಗಿ ಕೂತಿತ್ತು. ತಡವರಿಸಿ ತಟ್ಟಾಡಿಕೊಂಡು ಅತ್ತ ಇತ್ತ ವಾಲುತ್ತ ನಡೆಯುತ್ತಿದ್ದಳು. ಈಗ ರಾಸ್ಕೋಲ್ನಿಕೋವ್‌ ನ ಪೂರಾ ಗಮನ ಅವಳ ಮೇಲಿತ್ತು. ಬೆಂಚಿನ ಹತ್ತಿರ ಬರುವ ಹೊತ್ತಿಗೆ ಅವಳ ಸಮೀಪಕ್ಕೆ ಬಂದಿದ್ದ. ಅವಳು ಬೆಂಚಿನ ತುದಿಯಲ್ಲಿ ದೊಪ್ಪನೆ ಕುಸಿದು, ಬೆನ್ನು ಹಿಂದಕ್ಕೊರಗಿಸಿ, ಕಣ್ಣು ಮುಚ್ಚಿದಳು. ತೀರ ತೀರ ದಣಿದಿದ್ದಳು.

ಸಮೀಪದಿಂದ ಅವಳನ್ನು ಕಂಡ ತಕ್ಷಣ ಕುಡಿದಿದ್ದಾಳೆ ಅನ್ನುವುದು ಗೊತ್ತಾಯಿತು. ‘ವಿಚಿತ್ರವಾಗಿದೆ, ಅಸಭ್ಯವಾಗಿದೆ. ಇಂಥದು ಅಪರೂಪ. ನಾನೇ ತಪ್ಪು ತಿಳಿದೆನೋ?’ ಅಂದುಕೊಂಡ. ಅವನಿಗೆ ಕಂಡದ್ದು ತೀರ ಎಳೆಯ, ಹದಿನಾರು ವರ್ಷದ, ಹದಿನೈದೇ ಇರಬಹುದಾದ, ಹುಡುಗಿಯ ಪುಟ್ಟ, ಮುದ್ದಾದ, ಊದಿದೆ ಅನ್ನಿಸುವಷ್ಟು ಕೆಂಪಾದ ಮುಖ. ಮೈಮೇಲೆ ಎಚ್ಚರ ಇರಲಿಲ್ಲ. ಅಸಭ್ಯವೆನ್ನಿಸುವ ಹಾಗೆ ಕಾಲಮೇಲೆ ಕಾಲು ಹಾಕಿ ಕೂತಳು. ಬೀದಿಯಲ್ಲಿದ್ದೇನೆ ಅನ್ನುವ ಅರಿವೇ ಇರಲಿಲ್ಲ ಅವಳಿಗೆ.

ರಾಸ್ಕೋಲ್ನಿಕೋವ್ ತಟ್ಟನೆ ಬೆದರಿದ. ಯಾವುದೋ ಯೋಚನೆ, ನಿನ್ನೆಯಿಂದ ಆಗಾಗ ಬರುತ್ತಾ ಇದ್ದದ್ದು ಈಗ ಮತ್ತೆ ತಲೆಗೆ ನುಗ್ಗಿತ್ತು. ಹಾಗೆ ನುಗ್ಗಿದ್ದಕ್ಕಲ್ಲ ಅವನು ಬೆದರಿದ್ದು. ಆ ಯೋಚನೆ ನುಗ್ಗಿ ಬಂದೇ ಬರುತ್ತದೆಂದು ನಿರೀಕ್ಷಿಸಿದ್ದ.

ರಾಸ್ಕೋಲ್ನಿಕೋವ್ ಕೂರಲಿಲ್ಲ, ಅಲ್ಲಿಂದ ಹೋಗಲೂ ಇಲ್ಲ. ಗೊಂದಲಪಡುತ್ತಾ ಅವಳೆದುರು ನಿಂತಿದ್ದ. ಬೂಲೆವಾರ್ಡ್‍ ನಲ್ಲಿ ಸಾಮಾನ್ಯವಾಗಿ ಜನ ಕಡಮೆ, ಅದರಲ್ಲೂ ಮಧ್ಯಾಹ್ನ ಒಂದು ಗಂಟೆಯ ಹೊತ್ತಿನಲ್ಲಿ, ಇಂಥ ಬಿಸಿಲಿನಲ್ಲಿ ಜನ ಇರಲೇ ಇಲ್ಲ. ಆದರೂ ಹದಿನೈದು ಹೆಜ್ಜೆ ದೂರದಲ್ಲಿ, ಬೂಲೆವಾರ್ಡ್‍ ಅಂಚಿನಲ್ಲಿ, ಯಾರೋ ಒಬ್ಬಾತ ಇದ್ದ; ನೋಡಿದರೆ ಅವನಿಗೂ ಹುಡುಗಿಯ ಹತ್ತಿರ ಬರುವ ಮನಸಿದೆ ಅನ್ನಿಸುತ್ತಿತ್ತು. ಅವಳನ್ನು ಬಹಳ ದೂರದಿಂದ ಹಿಂಬಾಲಿಸಿ ಬಂದಿದ್ದಾನೆ ಅನಿಸಿತು. ಈಗ ರಾಸ್ಕೋಲ್ನಿಕೋವ್ ಅವನಿಗೆ ಅಡ್ಡಿಯಾಗಿ ಬಂದಿದ್ದ. ‘ಇವನು ಬೇಗ ತೊಲಗಿ ನನಗೆ ಚಾನ್ಸು ಸಿಗಲಿ,’ ಅನ್ನುವ ಅವನು ಹಾಗೆ ರಾಕೋಲ್ನಿಕೋವ್‌ ನನ್ನು ಸಿಟ್ಟಿನಿಂದ ನೋಡುತ್ತಿದ್ದ. ಹಾಗೆ ನೋಡುತ್ತಿರುವುದು ರಾಸ್ಕೋಲ್ನಿಕೋವ್‌ ಗೆ ತಿಳಿಯಬಾರದು ಅನ್ನುವ ಎಚ್ಚರವನ್ನೂ ಇಟ್ಟುಕೊಂಡಿದ್ದ. ಅವನ ಉದ್ದೇಶ ಸ್ಪಷ್ಟವಾಗಿತ್ತು. ಅವನು ಮೂವತ್ತು ವಯಸ್ಸಿನವನು, ದಷ್ಟಪುಷ್ಟವಾಗಿದ್ದ. ಹೊಸ ಫ್ಯಾಶನ್ ಉಡುಪು ತೊಟ್ಟು, ಸಣ್ಣ ಮೀಸೆ ಬಿಟ್ಟು ಶಿಸ್ತುಗಾರನ ಹಾಗೆ ಕಾಣುತ್ತಿದ್ದ. ರಾಸ್ಕೋಲ್ನಿಕೋವ್‌ ಗೆ ಸಿಟ್ಟು ಬಂದಿತ್ತು. ಇವನಿಗೆ ಅವಮಾನ ಮಾಡಿ ಬುದ್ಧಿ ಕಲಿಸಬೇಕು ಅನ್ನಿಸಿತು. ಪುಟ್ಟ ಹುಡುಗಿಯನ್ನು ಅಲ್ಲಿಯೇ ಬಿಟ್ಟು ಆ ಮನುಷ್ಯನ ಹತ್ತಿರ ಹೋದ.

‘ಹೇಯ್, ಸ್ವಿದ್ರಿಗೈಲೋವ್! ಏನು ಬೇಕು ನಿನಗೆ?’ ಎಂದು ಕೂಗುತ್ತ, ಹಲ್ಲು ಕಡಿದ, ಲೇವಡಿ ಮಾಡುವ ಹಾಗೆ ನಕ್ಕ,

‘ಏನಂದೇ?’ ಶಿಸ್ತುಗಾರ. ಗುರುಗುಡುತ್ತ ಸಿಟ್ಟಿನಲ್ಲಿ

‘ತೊಲಗು ಇಲ್ಲಿಂದ! ಎಷ್ಟೋ ಧೈರ್ಯ ಬೇಕೂಫಾ…!’ ಅನ್ನುತ್ತ ಕೈಯಲ್ಲಿದ್ದ ವಾಕಿಂಗ್ ಸ್ಟಿಕ್ಕು ಎತ್ತಿದ. ರಾಸ್ಕೋಲ್ನಿಕೋವ್ ಎರಡೂ ಕೈ ಮುಷ್ಠಿ ಬಿಗಿದು ಅವನ ಮೇಲೆ ಏರಿ ಹೋದ. ಈ ದಷ್ಟಪುಷ್ಟ ಧಾಂಡಿಗ ನನ್ನಂಥ ಇಬ್ಬರನ್ನು ಒಟ್ಟಿಗೆ ಎದುರಿಸಬಲ್ಲ ಅನ್ನುವುದು ಅವನಿಗೆ ಹೊಳೆಯಲೇ ಇಲ್ಲ. ಆ ಹೊತ್ತಿಗೆ ಯಾರೋ ಹಿಂದಿನಿಂದ ಅವನನ್ನು ಬಲವಾಗಿ ಹಿಡಿದರು; ಪೋಲೀಸನೊಬ್ಬ ಅವನನ್ನು ಪಕ್ಕಕ್ಕೆ ಸರಿಸಿ ಇಬ್ಬರ ಮಧ್ಯೆ ನಿಂತ.

‘ಸಾಕು, ಪಬ್ಲಿಕ್ ಪ್ಲೇಸಿನಲ್ಲಿ ಹೀಗೆಲ್ಲ ಹೊಡೆದಾಡಬಾರದು. ಏನು ಬೇಕು, ಯಾರು ನೀನು?’ ರಾಸ್ಕೋಲ್ನಿಕೋವ್‌ ನ ಚಿಂದಿ ಬಟ್ಟೆ ನೋಡಿ ಕಠಿಣವಾದ ದನಿಯಲ್ಲಿ ಕೇಳಿದ.

ರಾಸ್ಕೋಲ್ನಿಕೋವ್‌ ಅವನ ಮುಖ ಗಮನವಿಟ್ಟು ನೋಡಿದ. ಅದು ಸೈನಿಕ ಮುಖ, ಬಿಳಿಯ ಮೀಸೆ ಇತ್ತು, ಕಣ್ಣಿನಲ್ಲಿ ಲೋಕ ಬಲ್ಲವನ ನೋಟವಿತ್ತು.

ಪೋಲೀಸನ ತೋಳು ಹಿಡಿದು, ‘ನೀವೇ ನನಗೆ ಬೇಕಾಗಿದ್ದದ್ದು. ನಾನು ವಿದ್ಯಾರ್ಥಿ, ರಾಸ್ಕೋಲ್ನಿಕೋವ್‌…’ ಶಿಸ್ತುಗಾರನತ್ತ ತಿರುಗಿ ‘ನೀನೂ ಕೇಳಿಸಿಕೋ’ ಅಂದು, ಪೋಲೀಸನತ್ತ ತಿರುಗಿ, ‘ನೀವು ನನ್ನ ಜೊತೆ ಬನ್ನಿ. ನಿಮಗೆ ಏನೋ ತೋರಿಸತೇನೆ,’ ಅಂದ.
ಪೋಲೀಸನ ತೋಳು ಹಿಡಿದು ಬೆಂಚಿನತ್ತ ಎಳೆದುಕೊಂಡು ಹೋದ.

‘ಇಲ್ಲಿ ನೋಡಿ, ಇವಳು ಪೂರಾ ಕುಡಿದಿದ್ದಾಳೆ. ಈಗ ಬೂಲೆವಾರ್ಡ್‍ ನಲ್ಲಿ ನಡೆದುಕೊಂಡು ಬರುತ್ತಾ ಇದ್ದಳು. ಅವಳು ಯಾರೋ ಏನೋ ಯಾರಿಗೆ ಗೊತ್ತು. ಇವಳು ಕಸುಬಿನವಳಲ್ಲ. ಎಲ್ಲೋ ಯಾರೋ ಮೋಸ ಮಾಡಿ ಅವಳಿಗೆ ಕುಡಿಸಿದ್ದಾರೆ… ಇದೇ ಮೊದಲ ಸಾರಿ ಅನ್ನಿಸತ್ತೆ… ಗೊತ್ತಾಯಿತಾ?… ಆಮೇಲೆ ಬೀದಿಯಲ್ಲಿ ಬಿಟ್ಟರು… ನೋಡಿ, ಇವಳ ಬಟ್ಟೆ ಹರಿದಿದೆ. ಈ ಬಟ್ಟೆ ಹೇಗೆ ತೊಡಿಸಿದ್ದಾರೆ ನೋಡಿ. ಬಟ್ಟೆ ಇವಳೇ ಹಾಕಿಕೊಂಡದ್ದಲ್ಲ, ಯಾರೋ ಗಂಡಸರು ಹೀಗೆ ಒಡ್ಡೊಡ್ಡಾಗಿ ಬಟ್ಟೆ ಹಾಕಿದ್ದಾರೆ. ನೋಡಿದರೇ ತಿಳಿಯತ್ತೆ.

ಮತ್ತೆ ಇಲ್ಲಿ ನೋಡಿ. ನಾನು ಜಗಳವಾಡುತ್ತಿದ್ದ ಶಿಸ್ತುಗಾರ ನನಗೆ ಪರಿಚಯವಿಲ್ಲದವನು. ಯಾವತ್ತೂ ಅವನನ್ನ ನೋಡಿಲ್ಲ ನಾನು. ಇವಳು ಕುಡಿದಿರುವುದು, ಮೈ ಮೇಲೆ ಎಚ್ಚರ ಇಲ್ಲದಿರುವುದು ನೋಡಿದ್ದಾನೆ, ಹತ್ತಿರ ಬರುವುದಕ್ಕೆ ಹೊಂಚು ಹಾಕುತ್ತಿದ್ದ. ಹೇಗೂ ಎಚ್ಚರ ಇಲ್ಲ, ಎಲ್ಲಾದರೂ ಕರಕೊಂಡು ಹೋಗಣ ಅಂದುಕೊಂಡಿದ್ದ… ಖಂಡಿತ, ನನ್ನ ಮಾತು ನಂಬಿ. ಅವಳನ್ನ ಗಮನಿಸುತ್ತಾ ಹಿಂಬಾಲಿಸಿ ಬರುತ್ತಿದ್ದ. ನಾನು ಅಡ್ಡಿ ಮಾಡಿದೆ. ಈಗ ನಾನು ಹೋದರೆ ಸಾಕು ಅಂತ ಕಾಯುತ್ತಿದ್ದಾನೆ. ನೋಡಿ, ಸಿಗರೇಟು ಹಚ್ಚಿಕೊಳ್ಳುವವನ ಹಾಗೆ ದೂರ ಹೋಗಿದಾನೆ… ಈ ಹುಡುಗಿಯನ್ನ ಹೇಗೆ ಕಾಪಾಡುವುದು? ಪ್ಲೀಸ್, ನೀವೇ ಹೇಳಿ!’

ಪೋಲೀಸಿನವನಿಗೆ ಒಂದೇ ಕ್ಷಣದಲ್ಲಿ ಅರ್ಥವಾಯಿತು. ಅಂಥ ಶಿಸ್ತುಗಾರರನ್ನ ಬಹಳ ಜನರನ್ನ ನೋಡಿದ್ದ, ಅವನಲ್ಲಿ ವಿಶೇಷವಿರಲಿಲ್ಲ. ಇನ್ನು ಉಳಿದವಳು ಹುಡುಗಿ. ಮಾಜೀ ಸೈನಿಕನಾಗಿದ್ದ ಪೋಲೀಸಿನವನು ಬಗ್ಗಿ ಅವಳ ಮುಖ ಸರಿಯಾಗಿ ನೋಡಿದ. ಅವನ ಮುಖದಲ್ಲಿ ಮರುಕ ಕಾಣಿಸಿತು.

‘ಪಾಪ! ಇನ್ನೂ ಮಗು!’ ಅನ್ನುತ್ತ ತಲೆಯಾಡಿಸಿದ. ‘ಯಾರೋ ಮೋಸ ಮಾಡಿದಾರೆ,’ ಅನ್ನುತ್ತಾ, ‘ನೋಡಮ್ಮಾ, ಎಲ್ಲಿ ನಿಮ್ಮ ಮನೆ?’ ಹುಡುಗಿಯನ್ನು ಕೇಳಿದ. ಕೆಂಪು ತಿರುಗಿದ್ದ, ದಣಿದ ಕಣ್ಣು ತೆರೆದು ಸುಮ್ಮನೆ ಮಂಕಾಗಿ ನೋಡುತ್ತ ದೂರಕ್ಕೆ ತೋರುವ ಹಾಗೆ ಕೈ ಆಡಿಸಿದಳು ಹುಡುಗಿ.

‘ಇಲ್ಲಿ ನೋಡಿ,’ ಅನ್ನುತ್ತ ರಾಸ್ಕೋಲ್ನಿಕೋವ್‌ ಜೇಬು ತಡಕಿ, ಕೈಗೆ ಸಿಕ್ಕಿದ ಇಪ್ಪತ್ತು ಕೊಪೆಕ್ ಪೋಲೀಸನಿಗೆ ಕೊಟ್ಟು, ‘ದಯವಿಟ್ಟು ಬಾಡಿಗೆ ಗಾಡಿ ಗೊತ್ತು ಮಾಡಿ ಇವಳನ್ನ ಮನೆಗೆ ತಲುಪಿಸಿಬಿಡಿ, ಇವಳ ಮನೆಯ ವಿಳಾಸ ಗೊತ್ತಿದ್ದರೆ ಎಷ್ಟು ಚೆನ್ನಾಗಿತ್ತು,’ ಅಂದ.
ಪೋಲೀಸಿನವನು ದುಡ್ಡು ತೆಗೆದುಕೊಳ್ಳುತ್ತಾ, ‘ಏನಮ್ಮಾ, ಏಳು. ಗಾಡಿ ತಂದು ನಿನ್ನನ್ನ ಮನೆಗೆ ಮುಟ್ಟಿಸತೇನೆ. ಎಲ್ಲಿದೆ ನಿಮ್ಮ ಮನೆ?’ ಎಂದು ಹುಡುಗಿಯನ್ನು ಕೇಳಿದ.

‘ಥೂ!.. ಕಾಟ…’ ಹುಡುಗಿ ಗೊಣಗಿ, ಕೈ ಬೀಸಿದಳು.
‘ಓಹೋ, ಹಾಗನ್ನಬಾರದೂ! ಎಂಥಾ ನಾಚಿಕೆಗೇಡಮ್ಮಾ, ನಾಚಿಕೆಗೇಡು!’ ಛೇಡಿಸುತ್ತ, ಕನಿಕರಿಸುತ್ತ, ಸಿಟ್ಟುಮಾಡುತ್ತ ತಲೆ ಆಡಿಸಿದ ಪೋಲೀಸಿನವನು. ‘ದೊಡ್ಡ ಪ್ರಾಬ್ಲಂ ಇದು,’ ಅನ್ನುತ್ತ ರಾಸ್ಕೋಲ್ನಿಕೋವ್‌ ನನ್ನು ಚುರುಕಾಗಿ ಗಮನಿಸಿದ. ಅವನೂ ವಿಚಿತ್ರವಾಗಿಯೇ ಕಂಡಿರಬೇಕು—ಅಂಥ ಚಿಂದಿ ತೊಟ್ಟಿದ್ದರೂ ಜೇಬಿನಿಂದ ದುಡ್ಡು ತೆಗೆದುಕೊಟ್ಟಿದ್ದ!

‘ಇವಳನ್ನ ಎಲ್ಲಿ ನೋಡಿದ್ದು?’ ಕೇಳಿದ.

‘ಹೇಳಿದೆನಲ್ಲ, ನನ್ನ ಮುಂದೆ ಹೋಗತಾ ಇದ್ದಳು. ತಟ್ಟಾಡತಾ ಇದ್ದಳು. ಇದೇ ಬುಲೆವಾರ್ಡ್‍ ನಲ್ಲಿ. ಈ ಬೆಂಚಿನ ಹತ್ತಿರ ಬರುತ್ತಿದ್ದ ಹಾಗೇ ಕುಸಿದಳು.;

‘ಯಾವ ಗತಿ ಬಂತಪ್ಪಾ ದೇವರೇ! ಇಂಥಾ ಪುಟ್ಟ ಹುಡುಗಿ, ಆಗಲೇ ಕುಡಿದಿದಾಳೆ! ಯಾರೋ ಮೋಸ ಮಾಡಿದಾರೆ, ಗ್ಯಾರಂಟಿ! ನೋಡು, ಅವಳ ಬಟ್ಟೆ ಹರಿದಿದೆ… ಕಾಲ ಕೆಟ್ಟು ಹೋಯಿತು, ಮನುಷ್ಯರು ಕೆಟ್ಟು ಹೋದರು. ಯಾರೋ ಮರ್ಯಾದಸ್ಥರ ಹುಡುಗಿ… ಬಡವರು… ಸಾಹುಕಾರರ ಮನೆಯಲ್ಲಿ ಹುಡುಗಿಯನ್ನು ಮುದ್ದು ಮಾಡುವ ಹಾಗೆ ಇವಳನ್ನೂ ಮುದ್ದು ಮಾಡಿ ಹಾಳುಮಾಡಿದಾರೆ. ಇಂಥಾವರು ಬಹಳ ಜನ ಆಗಿದಾರೆ ಈಗ…’

ಅವನ ಹೆಣ್ಣುಮಕ್ಕಳೂ ಹಾಗೆ ಬೆಳೆಯುತ್ತಿದ್ದರೇನೋ, ‘ಮುದ್ದು ಮಾಡಿಸಿಕೊಂಡು ಹಾಳಾಗಿ,’ ದೊಡ್ಡವರ ಮನೆಯ ಹುಡುಗಿ ಹಾಗೆ ಆಡತಾ…

‘ಮುಖ್ಯ ಏನಪ್ಪಾ ಅಂದರೆ, ಆ ಮನುಷ್ಯ ಇವಳ ಹತ್ತಿರ ಬರುವುದಕ್ಕೆ ಬಿಡಬಾರದು! ಅವನೂ ಇವಳ ಮೇಲೆ ಕೈ ಹಾಕಬಾರದು! ನೋಡಿ ಅವನನ್ನ, ಅಲ್ಲೇ ಠಳಾಯಿಸತಾ ಇದಾನೆ!’

ನೇರವಾಗಿ ಅವನನ್ನ ತೋರಿಸುತ್ತ ರಾಸ್ಕೋಲ್ನಿಕೋವ್ ಜೋರಾಗಿಯೇ ಹೇಳಿದ. ಆ ಮನುಷ್ಯ ಅದನ್ನು ಕೇಳಿಸಿಕೊಂಡ. ಮತ್ತೆ ಸಿಟ್ಟು ಮಾಡುವುದರಲ್ಲಿದ್ದ. ತಡೆದುಕೊಂಡು ದುರುಗುಟ್ಟಿ ನೋಡಿದ. ನಿಧಾನವಾಗಿ ಹತ್ತು ಹೆಜ್ಜೆ ಹಾಕಿ ಮತ್ತೆ ನಿಂತ.

‘ಅವನನ್ನ ನಾನು ನೋಡಿಕೊಳ್ಳತೇನೆ, ಈ ಹುಡುಗಿಯನ್ನ ಎಲ್ಲಿ ಬಿಡಬೇಕು ಅಂತ ಹೇಳಿದರೆ ಸಾಕು… ಏನಮ್ಮಾ…’ ಅನ್ನುತ್ತಾ ಮತ್ತೆ ಅವಳತ್ತ ಬಗ್ಗಿದ.

ಹುಡುಗಿ ತಟ್ಟನೆ ಕಣ್ಣು ತೆರೆದು, ಗಮನವಿಟ್ಟು ನೋಡಿ, ಏನೋ ಅರ್ಥಮಾಡಿಕೊಂಡವಳ ಹಾಗೆ ಬೆಂಚಿನಿಂದ ಎದ್ದು ತಾನು ಬಂದ ದಿಕ್ಕಿಗೇ ವಾಪಸ್ಸು ಹೊರಟಳು.

‘ಥೂ! ನಾಚಿಕೆ ಇಲ್ಲದವು… ಕಾಟ ಕೊಡುತ್ತಾವೆ!’ ಅನ್ನುತ್ತ ಕೈ ಬೀಸಿದಳು. ಜೋರಾಗಿ ಹೆಜ್ಜೆ ಹಾಕಿದಳು. ಮೊದಲಿನ ಹಾಗೇ ತಟ್ಟಾಡುತ್ತಿದ್ದಳು. ಶಿಸ್ತುಗಾರ ಅವಳನ್ನೇ ಇನ್ನೊಂದು ಫುಟ್‍ಪಾತಿನ ಮೇಲೆ ಹಿಂಬಾಲಿಸಿದ. ಅವಳ ಮೇಲೇ ಕಣ್ಣಿಟ್ಟಿದ್ದ.

‘ಯೋಚನೆ ಮಾಡಬೇಡ, ಅವನನ್ನ ಬಿಡಲ್ಲ,’ ಅನ್ನುತ್ತ ಮೀಸೆಯ ಪೋಲೀಸಿನವನು ದೃಢವಾದ ದನಿಯಲ್ಲಿ ಹೇಳಿ ಅವನ ಹಿಂದೆ ಹೊರಟ. ‘ಎಂಥ ಕೆಟ್ಟ ಕಾಲ ಬಂತು!’ ಎಂದು ನಿಟ್ಟುಸಿರುಬಿಡುತ್ತ ನಡೆದ.

ಆ ಹೊತ್ತಿಗೆ ರಾಸ್ಕೋಲ್ನಿಕೋವ್ ಮನಸ್ಸಿನಲ್ಲಿ ಏನೋ ಕುಟುಕಿತು. ಒಂದೇ ಕ್ಷಣದಲ್ಲಿ ಬದಲಾಗಿದ್ದ.

‘ಹೇಯ್, ತಾಳೀ ಸಾರ್!’ ಮೀಸೆ ಪೋಲೀಸನನ್ನು ಕೂಗಿದ.
ಪೋಲೀಸಿನವನು ತಿರುಗಿ ನೋಡಿದ.

‘ಬಿಟ್ಟುಬಿಡಿ! ನಿಮಗೇನಾಗಬೇಕು? ಅವಳ ಪಾಡಿಗೆ ಅವಳನ್ನ ಬಿಡಿ! ಅವನೂ ಖುಷಿಪಡಲಿ. ನಿಮಗೇನಾಗಬೇಕು ಅದರಿಂದ?’ ಅಂದ.

ಪೋಲೀಸಿನವನಿಗೆ ಏನೂ ಅರ್ಥವಾಗದೆ ದುರುದುರು ನೋಡಿದ. ರಾಸ್ಕೋಲ್ನಿಕೋವ್‍ ನಕ್ಕ.

‘ಹಚಾ!’ ಅನ್ನುತ್ತ ಆ ಒಳ್ಳೆಯ ಪೋಲೀಸಿನವನು ಕೈ ಬೀಸಿ, ಹುಡುಗಿಯ ಹಿಂದೆ ಹೋಗುತ್ತಿದ್ದ ಶಿಸ್ತುಗಾರನನ್ನು ಹಿಂಬಾಲಿಸಿದ. ರಾಸ್ಕೋಲ್ನಿಕೋವ್‍ ಯಾರೋ ಹುಚ್ಚ, ಅಥವಾ ಹುಚ್ಚನಿಗಿಂತ ಅತ್ತತ್ತ ಅಂದುಕೊಂಡ.

‘ನನ್ನ ಇಪ್ಪತ್ತು ಕೊಪೆಕ್ ಜೇಬಿಗೆ ಸೇರಿಸಿದ,’ ತಾನೊಬ್ಬನೇ ಆದಾಗ ರಾಸ್ಕೋಲ್ನಿಕೋವ್ ಸಿಡುಕಿದ. ‘ತಗೊಳ್ಳಲಿ. ಆ ಪೋಲಿ ಹತ್ತಿರ ಕೂಡ ದುಡ್ಡು ಇಸಕೊಳ್ಳತಾನೆ, ಹುಡುಗಿನ ಕರಕೊಂಡು ಹೋಗಕ್ಕೆ ಬಿಡತಾನೆ. ಅಲ್ಲಿಗೆ ಮುಗೀತು… ನಾನು ಯಾಕೆ ಮೂಗು ತೂರಿಸಿದೆ? ಸಹಾಯ ಮಾಡಕ್ಕೆ ನಾನು ಯಾರು? ನನಗೇನು ಹಕ್ಕಿದೆ? ಒಬ್ಬರನ್ನ ಒಬ್ಬರು ಹುರಿದು ಮುಕ್ಕಲಿ. ನನಗೇನಾಗಬೇಕು? ಇಪ್ಪತ್ತು ಕೊಪೆಕ್ ಯಾಕೆ ಕೊಟ್ಟೆ? ನನ್ನದಾ ಆ ದುಡ್ಡು?’

ಆದರೂ ಮನಸ್ಸು ನೊಂದಿತ್ತು. ಖಾಲಿ ಬೆಂಚಿನ ಮೇಲೆ ಕೂತ. ಯೋಚನೆಗಳು ಚೆದುರಿದ್ದವು… ಮರೆತುಬಿಡಬೇಕು, ನನ್ನನ್ನೂ, ಎಲ್ಲಾನೂ ಮರೆಯಬೇಕು, ಆಮೇಲೆ ಎದ್ದು ಎಲ್ಲಾ ಹೊಸದಾಗಿ… ನಾನೂ ಹೊಸಬನಾಗಿ ಎಚ್ಚರವಾಗಬೇಕು ಎಂದು ಅನ್ನಿಸುತ್ತಿತ್ತು.

‘ಪಾಪದ ಹುಡುಗಿ!’ ಬೆಂಚಿನ ಇನ್ನೊಂದು ಖಾಲಿ ತುದಿ ನೋಡುತ್ತ ಅಂದುಕೊಂಡ. ‘ಮೈ ಮೇಲೆ ಎಚ್ಚರ ಬರತ್ತೆ. ಸ್ವಲ್ಪ ಅಳತಾಳೆ. ಆಮೇಲೆ ಅಮ್ಮನಿಗೆ ಗೊತ್ತಾಗತ್ತೆ. ಮೊದಲು ಹೊಡೀತಾಳೆ. ಆಮೇಲೆ ಚಾಟಿ ತಗೊಂಡು ಬಾರಿಸತಾಳೆ, ಕತ್ತು ಹಿಡಿದು ಮನೆಯಿಂದಾಚೆಗೆ ದಬ್ಬತಾಳೆ… ದಬ್ಬದೇ ಇದ್ದರೂ ದಾರ್ಯಾ ಫ್ರಾಂಟಸೆವ್ನಾ ಥರ ತಲೆಹಿಡುಕಿಯರು ಇರುತಾರೆ, ಅವರು ಹೇಗೋ ವಾಸನೆ ಹಿಡೀತಾರೆ, ಈ ನಮ್ಮ ಹುಡುಗಿ ಅಲ್ಲಿ ಇಲ್ಲಿ ಕದ್ದು ಹೋಗತಾಳೆ… ಆಮೇಲೆ ಸೀದಾ ಆಸ್ಪತ್ರೆಗೆ…(ಮರ್ಯಾದಸ್ಥ ಅಮ್ಮಂದಿರ ಜೊತೆ ಇದ್ದುಕೊಂಡು ಗುಟ್ಟು ಕಾಪಾಡಿಕೊಂಡರೆ ಯಾವಾಗಲೂ ಹೀಗೇ ಆಗತದೆ) ಆಮೇಲೆ, ಸರಿ, ಮತ್ತೆ ಆಸ್ಪತ್ರೆ, ಹೆಂಡದಂಗಡಿ… ಆಸ್ಪತ್ರೆ… ಎರಡು ಮೂರು ವರ್ಷದಲ್ಲಿ ಇವಳಿಗೆ ಹತ್ತೊಂಬತ್ತೋ ಹದಿನೆಂಟೋ ಆಗುವುದರೊಳಗೆ ಖರಾಬಾಗಿರತಾಳೆ… ಇಂಥವಳನ್ನ ನೋಡಿಲ್ಲವಾ? ಹೀಗೇ ಬೀದಿಗೆ ಬಿದ್ದವರು ಅಲ್ಲವಾ? ‘ಸರಿ! ಅದಕ್ಕೇನೀಗ! ಇರಬೇಕಾದದ್ದೇ ಹೀಗೆ.’ ಅನ್ನತಾರೆ ಜನ.

ಪ್ರತೀವರ್ಷ, ಶೇಕಡಾ ಇಂತಿಷ್ಟು ಜನ ಹೋಗಲೇ ಬೇಕು.. ದೆವ್ವದ ತುತ್ತು ಆಗಬೇಕು, ಮಿಕ್ಕವರು ಸರಿಯಾಗಿ ತಾಜಾ ಆಗಿರಬೇಕಾದರೆ ಹೀಗೆ ಆಗಲೇಬೇಕು, ಅದಕ್ಕೆ ಅಡ್ಡಿ ಮಾಡಬಾರದು ಅನ್ನತಾರೆ ನೈತಿಕ ಸಂಖ್ಯಾಶಾಸ್ತ್ರಿಗಳು. ‘ಶೇಕಡಾ!’—ಪದದಷ್ಟು ಭರವಸೆ ಹುಟ್ಟಿಸುವ, ನೆಮ್ಮದಿಕೊಡುವ, ವೈಜ್ಞಾನಿಕ ಪದ ಇನ್ನೊಂದಿಲ್ಲ. ‘ಇಷ್ಟು ಶೇಕಡಾ,’ ಅನ್ನತಾರೆ ಅಂದರೆ ಚಿಂತೆಮಾಡಬೇಕಾಗಿಲ್ಲ ಅಂತಲೇ ಅರ್ಥ. ಬೇರೆ ಇನ್ನೇನು ಹೇಳಿದರೂ ತಲೆ ಕೆಡುತ್ತದೆ… ನಮ್ಮ ದುನ್ಯಾ ಕೂಡ ಆ ಶೇಕಡಾ ಅನ್ನುವುದಕ್ಕೆ ಸೇರುವ ಅಂಕಿಯಾದರೆ! ಅವಳಲ್ಲದಿದ್ದರೆ ಇನ್ನೊಬ್ಬಳು?…

‘ಎಲ್ಲಿಗೆ ಹೋಗತಾ ಇದ್ದೆ ನಾನು?’ ತಟ್ಟನೆ ಪ್ರಶ್ನೆ ಹುಟ್ಟಿತು. ‘ವಿಚಿತ್ರ. ಯಾಕೋ ಹೊರಟಿದ್ದೆ. ಕಾಗದ ಓದಿದೆ. ಹೊರಟೆ… ವಾಸಿಲಿಯೆವ್ಸ್ಕಿ ಐಲಾಂಡಿಗೆ. ಅಲ್ಲಿಗೇ ಹೊರಟಿದ್ದು. ಈಗ ಜ್ಞಾಪಕ ಬಂತು. ಯಾಕೆ? ರಝುಮಿಖಿನ್‌ ನ ನೋಡಬೇಕು ಅನ್ನುವ ಯೋಚನೆ ಯಾಕೆ ಈ ಕ್ಷಣದಲ್ಲಿ ಸರಿಯಾಗಿ ನನ್ನ ತಲೆಗೆ ಬಂತು? ವಿಚಿತ್ರ,’ ಅಂದುಕೊಳ್ಳುತ್ತ ಆಶ್ಚರ್ಯಪಟ್ಟ.
ರಝುಮಿಖಿನ್ ಅವನ ಜೊತೆಯಲ್ಲಿ ಓದುತ್ತಿದ್ದವನು. ಕಾಲೇಜಿನಲ್ಲಿ ರಾಸ್ಕೋಲ್ನಿಕೋವ್‌ಗೆ ಯಾರೂ ಸ್ನೇಹಿತರು ಇರಲಿಲ್ಲ. ಎಲ್ಲರಿಂದ ದೂರ ಇರುತ್ತಿದ್ದ, ಯಾರನ್ನೂ ಕಾಣಲು ಹೋಗುತ್ತಿರಲಿಲ್ಲ, ಯಾರನ್ನೂ ತನ್ನ ಕೋಣೆಗೆ ಕರೆಯುತ್ತಿರಲಲಿಲ್ಲ. ಸ್ವಲ್ಪ ದಿನದಲ್ಲೇ ಎಲ್ಲರೂ ಅವನಿಂದ ದೂರ ಸರಿದರು. ಒಟ್ಟಾಗಿ ಸೇರುವುದು, ಮಾತು ಕಥೆ, ಖುಷಿ ಇಂಥ ಯಾವುದರಲ್ಲೂ ರಾಸ್ಲೋಲ್ನಿಕೋವ್ ಸೇರುತ್ತಿರಲಿಲ್ಲ. ನಿಷ್ಠಾವಂತ ವಿದ್ಯಾರ್ಥಿ. ಕಷ್ಟಪಟ್ಟು ಅಭ್ಯಾಸಮಾಡುತ್ತಿದ್ದ. ಅದಕ್ಕಾಗಿ ಅವನ ಬಗ್ಗೆ ಗೌರವ ಇತ್ತು, ಪ್ರೀತಿ ಮಾತ್ರ ಯಾರಲ್ಲೂ ಇರಲಿಲ್ಲ.

ತೀರ ಬಡವನಾದರೂ ಉದ್ಧಟ ಅನ್ನಿಸುವಷ್ಟು ಅಭಿಮಾನ ತೋರುತ್ತ ಯಾರಜೊತೆಗೂ ಬೆರೆಯದೆ ತನ್ನೊಳಗೇ ಏನೋ ಬಚ್ಚಿಟ್ಟುಕೊಂಡವನ ಹಾಗೆ ಇರುತ್ತಿದ್ದ. ಅವನ ಕೆಲವು ಗೆಳೆಯರಿಗೆ ಅವನು ತಮ್ಮನ್ನೆಲ್ಲ ಮಕ್ಕಳನ್ನು ಕಂಡ ಹಾಗೆ ಕಾಣುತ್ತಾನೆ, ತಾನು ಮಾತ್ರ ಜ್ಞಾನದಲ್ಲಿ, ನಂಬಿಕೆ ವಿಶ್ವಾಸಗಳಲ್ಲಿ ಬೆಳೆದಿರುವವನ ಹಾಗೆ, ಮಿಕ್ಕವರ ಆಸಕ್ತಿ, ವಿಚಾರಗಳು ಎಲ್ಲಾ ತೀರ ಸಾಮಾನ್ಯ ಅನ್ನುವ ಹಾಗೆ ನಡೆದುಕೊಳ್ಳುತ್ತಾನೆ ಅನ್ನಿಸುತ್ತಿತ್ತು.

ಆದರೂ ರಾಸ್ಕೋಲ್ನಿಕೋವ್ ಯಾವ ಕಾರಣಕ್ಕೋ ರಝುಮಿಖಿನ್‌ ಗೆ ಆಪ್ತನಾದ. ಅಂದರೆ ತೀರ ಆಪ್ತ ಅಂತಲ್ಲ, ಹೆಚ್ಚು ಬೆರೆಯುತ್ತಿದ್ದ, ಅವನ ಹತ್ತಿರ ಸ್ವಲ್ಪ ಮನಸ್ಸು ಬಿಚ್ಚಿ ಮಾತಾಡುತ್ತಿದ್ದ. ರಝುಮಿಖಿನ್‌ ನ ಜೊತೆಗೆ ಹಾಗಲ್ಲದೆ ಬೇರೆ ಥರ ಇರುವುದು ಸಾಧ್ಯವೇ ಇರಲಿಲ್ಲ. ತೀರ ಖುಷಿಯ ಸ್ನೇಹಪರ ಮನುಷ್ಯ. ಸರಳಾತಿಸರಳ ಅನ್ನಿಸುತ್ತಿತ್ತು. ಆ ಸರಳತೆಯ ಹಿಂದೆ ಗಹನತೆ ಇತ್ತು, ಗಾಂಭೀರ್ಯ ಇತ್ತು. ಅವನ ಗೆಳೆಯರಿಗೆ ಅದು ಗೊತ್ತಿತ್ತು. ಎಲ್ಲರೂ ಅವನಿಗೆ ಪ್ರೀತಿ ತೋರುತ್ತಿದ್ದರು. ಒಂದೊಂದು ಸಾರಿ ದಡ್ಡನ ಹಾಗೆ ಕಂಡರೂ ಜಾಣನಾಗಿದ್ದ. ಎದ್ದು ಕಾಣುವ ಹಾಗಿದ್ದ. ಎತ್ತರವಾಗಿ ತೆಳ್ಳಗೆ ಇದ್ದ. ತಲೆಯ ತುಂಬ ಕಪ್ಪು ಕೂದಲಿತ್ತು. ಯಾವತ್ತೂ ಸರಿಯಾಗಿ ಕ್ಷೌರ ಮಾಡಿಕೊಂಡವನಲ್ಲ. ಆಗಾಗ ತೀರ ವ್ಯಗ್ರನಾಗುತ್ತಿದ್ದ. ತೀರ ಬಲಶಾಲಿ ಅನ್ನುವ ಕೀರ್ತಿ ಇತ್ತು. ಒಂದು ಸಾರಿ ಆರೂವರೆ ಅಡಿ ಎತ್ತರದ ಮನುಷ್ಯನನ್ನು ಒಂದೇ ಏಟಿಗೆ ನೆಲಕಚ್ಚುವ ಹಾಗೆ ಹೊಡೆದಿದ್ದ. ಕೊನೆಯೇ ಇರದೆ ಕುಡಿಯುತ್ತಿದ್ದ, ಅಥವಾ ಕುಡಿಯುತ್ತಲೇ ಇರಲಿಲ್ಲ. ತಡೆಯಲಾಗದಷ್ಟು ತುಂಟತನ ಮಾಡುತ್ತಿದ್ದ, ಅಥವ ತಿರ ಗಂಭೀರವಾಗಿ ಇರುತ್ತಿದ್ದ.

ಎಂಥ ಸಂದರ್ಭ ಎದುರಾದರೂ ರಝುಮಿಖಿನ್ ತಲೆಕೆಡಿಸಿಕೊಳ್ಳುತ್ತಿರಲಿಲ್ಲ, ಪರಿಸ್ಥಿತಿ ಎಷ್ಟೇ ಹದಗೆಟ್ಟರೂ ಎದೆಗುಂದುತ್ತಿರಲಿಲ್ಲ. ಮನೆಯ ಚಾವಣಿಯ ಮೇಲೆ ಬೇಕಾದರೂ ವಾಸಮಾಡಬಲ್ಲ, ತೀರ ಚಳಿ, ತೀರ ಹಸಿವು ತಡೆದುಕೊಳ್ಳಬಲ್ಲ. ಬಹಳ ಬಡವ, ಆದರೂ ಒಂದಲ್ಲ ಒಂದು ಕೆಲಸ ಹುಡುಕಿಕೊಂಡು ತನ್ನ ಪಾಡು ನೋಡಿಕೊಳ್ಳುತ್ತಿದ್ದ. ದುಡ್ಡು ಉಳಿಸುವುದಕ್ಕೆ ಏನೇನೋ ದಾರಿ ಗೊತ್ತಿದ್ದವು ಅವನಿಗೆ.

ಒಂದು ಸಾರಿ ಚಳಿಗಾಲದಲ್ಲಿ ತನ್ನ ಕೋಣೆಯಲ್ಲಿ ಅಗ್ಗಿಷ್ಟಿಕೆ ಇಲ್ಲದೆ ಹಾಗೇ ಇದ್ದ. ಹೀಗೇ ಇರುವುದಕ್ಕೆ ಇಷ್ಟ, ಚಳಿ ಇದ್ದರೆ ಚೆನ್ನಾಗಿ ನಿದ್ರೆ ಬರುತ್ತದೆ ಅನ್ನುತ್ತಿದ್ದ. ಈಗ ಅವನೂ ಕಾಲೇಜು ಬಿಡಬೇಕಾಗಿತ್ತು. ಸದ್ಯದಲ್ಲೇ ಮತ್ತೆ ಕಾಲೇಜಿಗೆ ಸೇರುತ್ತೇನೆ ಅನ್ನುತ್ತಿದ್ದ. ರಾಸ್ಕೋಲ್ನಿಕೋವ್ ಅವನನ್ನು ನಾಲ್ಕು ತಿಂಗಳಿಂದ ನೋಡಿರಲಿಲ್ಲ. ರಾಸ್ಕೋಲ್ನಿಕೋವ್‌ ನ ವಿಳಾಸ ರಝುಮಿಖಿನ್‌ ಗೆ ಗೊತ್ತಿರಲಿಲ್ಲ. ಸುಮಾರು ಎರಡು ತಿಂಗಳ ಹಿಂದೆ ಇಬ್ಬರೂ ರಸ್ತೆಯಲ್ಲಿ ಕಂಡಿದ್ದರು. ರಾಸ್ಕೋಲ್ನಿಕೋವ್ ಅವನನ್ನು ನೋಡಲಿಲ್ಲ ಅನ್ನುವ ಹಾಗೆ ಮುಖ ತಿರುಗಿಸಿಕೊಂಡು ರಸ್ತೆಯ ಇನ್ನೊಂದು ಬದಿಯಲ್ಲಿ ಹೊರಟು ಹೋಗಿದ್ದ. ರಝುಮಿಖಿನ್ ನೋಡಿದರೂ ಗೆಳೆಯನಿಗೆ ತೊಂದರೆ ಕೊಡಲು ಇಷ್ಟಪಟ್ಟಿರಲಿಲ್ಲ.