ಬಡವರು ಎಷ್ಟೇ ಮೂಢನಂಬಿಕೆಯವರಿದ್ದರೂ ತಮ್ಮ ಶಕ್ತಿಯನ್ನು ಅವಲಂಬಿಸಿಯೆ ಬದುಕುವುದು ಅವರ ಜಾಯಮಾನವಾಗಿದೆ. ಬದುಕೆಂಬುದು ಅವರಿಗೆ ಹೋರಾಟದ ಅಖಾಡಾ ಆಗಿದೆ. ಆಹಾರ, ಬಟ್ಟೆ, ಆಶ್ರಯ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಅವರು ನಿರಂತರವಾಗಿ ಹೋರಾಡುತ್ತಲೇ ಇರುತ್ತಾರೆ. ಆದರೆ ಈ ಹೋರಾಟ ಮಾರ್ಕ್ಸ್ ಹೇಳುವ ವರ್ಗ ಹೋರಾಟವಾಗಿರುವುದಿಲ್ಲ. ಅವರ ಶೋಷಣೆ ಮಾಡುವವರು ಅವರಿಗೆ ಅನ್ನದಾತರು ಎಂದು ಕಾಣುತ್ತಿದ್ದರೇ ಹೊರತು ಶೋಷಕರಾಗಿ ಕಾಣುತ್ತಿರಲಿಲ್ಲ.  ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 33ನೆಯ ಕಂತು ಇಲ್ಲಿದೆ. 

ನಾನು ಜನಿಸಿದ್ದು ವಿಜಾಪುರ ನಗರದ ಅಂದಿನ ಮದ್ದುಸುಡುವ ಖಣಿಯ ಆಚೆ ದಂಡೆಗೆ ಇರುವ ವಡ್ಡರ ಓಣಿಯ ಪಕ್ಕದ ಸದಿ ಓಣಿಯಲ್ಲಿ ಎಂದು ನನ್ನ ತಾಯಿ ಹೇಳಿದ್ದಳು. ನನಗಿದು ಬಹಳ ಹೆಮ್ಮೆಯ ವಿಚಾರ. ಏಕೆಂದರೆ ಸದಿ ಓಣಿ ಎಂದರೆ ಎಲ್ಲ ರೀತಿಯ ಕಾಯಕ ಮಾಡುವ ಕೂಲಿಕಾರರ ಓಣಿ. ನಮ್ಮಲ್ಲಿ ಸುಣಗಾರ ಓಣಿ, ಬಣಗಾರ ಓಣಿ, ಕೊಟ್ಟಣದವರ ಓಣಿ, ವಡ್ಡರ ಓಣಿ, ಕುರುಬರ ಓಣಿ, ಕುಂಬಾರ ಓಣಿ, ಸಮಗಾರ ಓಣಿ, ಡೋರ್ ಓಣಿ, ಬಡಿಗರ ಓಣಿ, ಕಬ್ಬಲಿಗರ ಓಣಿ ಹೀಗೆ ವಿವಿಧ ಕಾಯಕ ಜೀವಿಗಳ ಓಣಿಗಳು ಬೇರೆಬೇರೆಯಾಗಿದ್ದವು. ಹೀಗೆ ಎಲ್ಲ ಜಾತಿ ಮತ್ತು ಧರ್ಮಗಳ ಕೂಲಿಕಾರರು ಒಂದೆಡೆ ಕೂಡಿ ಬದುಕುವುದೇ ‘ಸದಿ ಓಣಿ’, ಇದನ್ನು ಭಾವನಾತ್ಮಕವಾಗಿ ಶರಣಸಂಕುಲಕ್ಕೆ ಹೋಲಿಸಬಹುದು ಅಥವಾ ವಾಸ್ತವವಾಗಿ ಸ್ಲಂ ಎನ್ನಬಹುದು. (ಎಲ್ಲ ತೆರನಾದ ಕಾಯಕಜೀವಿಗಳು ಬಸವಣ್ಣನವರ ಮಾರ್ಗದರ್ಶನದಲ್ಲಿ ಜಾತಿ, ವರ್ಣ ಮತ್ತು ವರ್ಗಭೇದಗಳಿಲ್ಲದ ಶರಣಸಂಕುಲವೆಂಬ ನವಸಮಾಜದ ನಿರ್ಮಾಣ ಮಾಡಿದ್ದರು. ಎಲ್ಲ ಕಾಯಕಜೀವಿಗಳು ಒಂದು ವರ್ಗವಾಗಿ ಹೀಗೆ ನವಸಮಾಜ ನಿರ್ಮಿಸಿದ್ದು ವಿಶ್ವದಲ್ಲೇ ಮೊದಲು.) ಮದ್ದು ಸುಡುವ ಖಣಿಯ ಆಚೆ ಕಡೆಯ ಸದಿ ಓಣಿಯಿಂದ ಈಚೆ ಕಡೆಯ ಓಣಿ ಮತ್ತು ಅದರ ಪಕ್ಕದ ಕೊರವರ ಓಣಿ, ನಂತರ ನಾವಿಗಲ್ಲಿ ಹಾಗೂ ಕೊನೆಗೆ ಗಣೇಶನಗರ ಸ್ಲಂ ನಮ್ಮ ಕುಟುಂಬದ ವಾಸಸ್ಥಾನಗಳಾದವು.
ವಿಜಾಪುರ ನಗರದ ಈ ಎಲ್ಲ ಸ್ಥಳಗಳಲ್ಲಿ ಬಡವರೇ ಹೆಚ್ಚಾಗಿದ್ದರು. ಇವರೆಲ್ಲ ವಿವಿಧ ಪ್ರದೇಶ, ಜಾತಿ, ಧರ್ಮ ಮತ್ತು ಭಾಷೆಗಳಿಗೆ ಸೇರಿದ್ದರಿಂದ ಬದುಕಿನ ವಿವಿಧ ಮಗ್ಗಲುಗಳ ಪರಿಚಯಕ್ಕೆ ಇವೆಲ್ಲ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಾದವು. ಎಲ್ಲ ಭೇದಗಳ ಮಧ್ಯೆ ಕೂಡ ಮನುಷ್ಯ ಒಂದೇ ಎಂಬುದರ ಅರಿವು ನನಗೆ ಬಾಲ್ಯದಲ್ಲೇ ಆಯಿತು. ಮನುಷ್ಯ ಸಹಜವಾಗಿ ಅತ್ಯುತ್ತಮವಾಗಿದ್ದಾನೆ. ಆದರೆ ಜಾತಿ, ಧಾರ್ಮಿಕತೆ ಮತ್ತು ಸಂಪತ್ತಿನ ಪ್ರಜ್ಞೆಯಲ್ಲಿ ಅಸಹಜನಾಗುವುದರ ಮೂಲಕ ಸಣ್ಣವನಾಗುತ್ತಾನೆ.

ಅದೇನೇ ಇದ್ದರೂ ಎಲ್ಲ ಕಡೆಗಳ ಬಡವರೇ ನಿಜವಾದ ಧೈರ್ಯಶಾಲಿಗಳು. ಅವರು ಬದುಕನ್ನು ಎದುರಿಸುವ ರೀತಿ ನನ್ನ ಮೇಲೆ ಆಳವಾದ ಪರಿಣಾಮ ಬೀರಿದೆ. ಮಧ್ಯಮವರ್ಗದವರು ಸದಾ ತಂತಿಯ ಮೇಲೆ ನಡೆಯುವ ಬದುಕನ್ನು ಹೊಂದಿರುತ್ತಾರೆ. ಕಷ್ಟವನ್ನು ಎದುರಿಸುವ ದಿನಗಳು ಬರಬಾರದೆಂಬ ಎಚ್ಚರಿಕೆಯಿಂದಲೇ ಸದಾ ಕಷ್ಟವನ್ನು ಎದುರಿಸುತ್ತಿರುತ್ತಾರೆ! ಶ್ರೀಮಂತರಂತೂ ದುರ್ಬಲ ಮನಸ್ಸಿನವರಾಗಿದ್ದು ತಾವು ಹೂಡಿದ ಬಂಡವಾಳಕ್ಕೆ ಯಾವಾಗ ಕುತ್ತು ಬರುವುದೊ ಎಂಬ ದುಗುಡವನ್ನು ಹೊಂದಿರುತ್ತಾರೆ. ಭವಿಷ್ಯ ಹೇಳುವುದರಲ್ಲಿ ಪ್ರಸಿದ್ಧರಾದ ಮೋಸಗಾರರಲ್ಲಿ ಶ್ರೀಮಂತರ ಹಿಂಡೇ ತುಂಬಿರುತ್ತದೆ. ರಾಜಕಾರಣಿಗಳು, ಸಿನಿಮಾ ಮಂದಿ, ದೊಡ್ಡ ಉದ್ಯಮಿಗಳು ಮತ್ತು ವ್ಯಾಪಾರಿಗಳೇ ತುಂಬಿರುತ್ತಾರೆ.

ಬಡವರು ಕೂಡ ಎಲ್ಲರಂತೆ ಮೂಢ ನಂಬಿಕೆಗೆ ಬಲಿಯಾಗುತ್ತಾರೆ. ಆದರೆ ಅವರ ಮೂಢನಂಬಿಕೆಯ ಕಾರಣಗಳು ಮನ ಮಿಡಿಯುತ್ತವೆ. ವಿಜಾಪುರದ ತಾಜ ಬಾವಡಿ ಹತ್ತಿರ ಮಾಲಿಂಗಯ್ಯ ಎಂಬ ಹೆಸರಿನ ಭವಿಷ್ಯ ಹೇಳುವವನಿದ್ದ. ಆತ ತಾಯ್ತ ಕೂಡ ಕಟ್ಟುತ್ತಿದ್ದ. ಪಾಪ ಅವನದು ನಾಲ್ಕು ದುಡ್ಡಿನ ಭವಿಷ್ಯ. ಅವರ ಮನೆಯ ಮುಂದೆ ಹೆಚ್ಚಾಗಿ ಬಡವರು ಕ್ಯೂ ನಿಲ್ಲುತ್ತಿದ್ದರು. ‘ಮಗ ಮನೆ ಬಿಟ್ಟು ಹೋಗಿದ್ದಾನೆ. ಯಾವ ದಿಕ್ಕಿಗೆ ಹೋಗಿ ಹುಡುಕಿದರೆ ಸಿಗುತ್ತಾನೆ? ‘ಎಮ್ಮೆ ಕಳೆದಿದೆ, ಆಕಳು ಕಳೆದಿದೆ, ಕೋಳಿ ಕಳೆದಿದೆ. ಯಾವ ಕಡೆಯವರು ಕದ್ದಿರಬಹದು?’, ‘ಸೊಸೆಗೆ ಮಕ್ಕಳಾಗಲಿಲ್ಲ, ಯಾವ ದೇವರಿಗೆ ಬೇಡಿಕೊಳ್ಳಬೇಕು?’, ‘ಮೇಲಿಂದ ಮೇಲೆ ಮಗ ಬೇನೆ ಬೀಳುತ್ತಾನೆ. ಯಾರು ಮಾಟ ಮಾಡಿಸಿರಬಹುದು?’, ‘ಮನೆಯಲ್ಲಿ ಕಳ್ಳತನವಾಗಿದೆ, ಕಳ್ಳರು ಹೊರಗಿನವರೋ ಅಥವಾ ಮನೆಗೆ ಬರುವವರೋ’, ‘ಮಗನಿಗೆ ಹೆಣ್ಣು ನೋಡುತ್ತಿದ್ದೇವೆ. ಆ ಕನ್ನೆಯಿಂದ ನಮ್ಮ ಮನೆ ಉದ್ಧಾರವಾಗುವುದೊ ಅಥವಾ ತೊಂದರೆಗೊಳಗಾಗುವುದೊ?’ ಎಂದು ಮುಂತಾದ ಪ್ರಶ್ನೆಗಳು ಅವರನ್ನು ಮಾಲಿಂಗಯ್ಯನ ಬಳಿ ಒಯ್ಯುತ್ತಿದ್ದವು. ದರ್ಗಾಗಳಲ್ಲಿ ಕೂಡ ಹರಕೆ ಹೊರುವುದು ಸ್ವಾಭಾವಿಕವಾಗಿದೆ. ಇವನ್ನೆಲ್ಲ ಎಲ್ಲ ಜಾತಿ ಧರ್ಮಗಳವರು ಮಾಡುತ್ತಾರೆ. ನಮ್ಮ ದೇಶದ ಜನರನ್ನು ಮೂಢನಂಬಿಕೆ ಆಳುತ್ತಿದೆ. ಇದಕ್ಕೆ ಅಪವಾದವಾದವರು ಬಹಳ ಕಡಿಮೆ.

ಬಡವರು ಎಷ್ಟೇ ಮೂಢನಂಬಿಕೆಯವರಿದ್ದರೂ ತಮ್ಮ ಶಕ್ತಿಯನ್ನು ಅವಲಂಬಿಸಿಯೆ ಬದುಕುವುದು ಅವರ ಜಾಯಮಾನವಾಗಿದೆ. ಬದುಕೆಂಬುದು ಅವರಿಗೆ ಹೋರಾಟದ ಅಖಾಡಾ ಆಗಿದೆ. ಆಹಾರ, ಬಟ್ಟೆ, ಆಶ್ರಯ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಅವರು ನಿರಂತರವಾಗಿ ಹೋರಾಡುತ್ತಲೇ ಇರುತ್ತಾರೆ. ಆದರೆ ಈ ಹೋರಾಟ ಮಾರ್ಕ್ಸ್ ಹೇಳುವ ವರ್ಗ ಹೋರಾಟವಾಗಿರುವುದಿಲ್ಲ. ಅವರ ಶೋಷಣೆ ಮಾಡುವವರು ಅವರಿಗೆ ಅನ್ನದಾತರು ಎಂದು ಕಾಣುತ್ತಿದ್ದರೇ ಹೊರತು ಶೋಷಕರಾಗಿ ಕಾಣುತ್ತಿರಲಿಲ್ಲ. ತಮ್ಮ ಬದುಕಿಗೆ ತಮ್ಮ ಹಿಂದಿನ ಜನ್ಮದ ಪಾಪವೇ ಕಾರಣ ಎಂಬುದು ಅವರ ಅನಿಸಿಕೆಯಾಗಿತ್ತು. ದೈವಭಕ್ತಿಯಿಂದಲೇ ಪಾಪ ಪರಿಹಾರ ಎಂಬ ಭಾವನೆಯನ್ನು ಅವರು ಹೊಂದಿದ್ದರು.
ಸಮಸ್ಯೆಗಳನ್ನು ಎದುರಿಸುವುದೇ ಅವರ ಹೋರಾಟವಾಗಿತ್ತು. ಸಮಸ್ಯೆಗಳ ಪರಿಹಾರಕ್ಕಾಗಿ ದುಡಿಮೆಯೊಂದೇ ಗುರಿಯಾಗಿತ್ತು. ಅವರೆಲ್ಲ ಸಹಜವಾಗಿ ತಮ್ಮ ಬದುಕಿನಲ್ಲಿ ವೈಯಕ್ತಿಕವಾದ ಬದಲಾವಣೆಯ ಕನಸು ಕಾಣುತ್ತಿದ್ದರು. ಸಾಮೂಹಿಕ ಪ್ರಜ್ಞೆ ಮೂಡಿರಲಿಲ್ಲ. ದೇವರಿಗೆ ಹರಕೆ ಹೊರುತ್ತಿದ್ದರು. ದುಡಿಮೆಯಿಂದ ಗಳಿಸಿದ್ದರಲ್ಲಿ ಉಳಿದದ್ದನ್ನು ಮೂಢನಂಬಿಕೆಯಿಂದ ಖರ್ಚು ಮಾಡುತ್ತಿದ್ದರು. ಸಮಾಜವು ಅವರಿಗೆ ದೈವವಾಗಿತ್ತು. ಈ ದೈವವನ್ನು ಸಂಪ್ರೀತಗೊಳಿಸುವುದಕ್ಕಾಗಿ ಹಬ್ಬ ಹರಿದಿನ ಜಾತ್ರೆ ಧಾರ್ಮಿಕ ಮತ್ತು ಸಾಂಪ್ರದಾಯಿಕ ಕಾರ್ಯಗಳನ್ನು ಏರ್ಪಡಿಸುತ್ತಿದ್ದರು. ಅವರಿಗೆ ಊಟೋಪಚಾರ ಮಾಡುವ ಮೂಲಕ ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದರು.

ಈ ಬಡವರ ಸಿಟ್ಟು, ಜಗಳ, ಗಾಳಿಮಾತು ಮುಂತಾದವುಗಳ ಆಯುಷ್ಯ ಬಹಳ ಕಡಿಮೆ ಇತ್ತು. ನೂರೆಂಟು ದೇವ ದೇವತೆಗಳಿಗೆ ಹರಕೆ ಹೊರುತ್ತ, ಪೂಜಿಸುತ್ತ ಸಾಮಾಜಿಕವಾಗಿ ಬದುಕುವುದೇ ಅವರ ಗುರಿಯಾಗಿತ್ತು. ಕಳ್ಳರು, ಸುಳ್ಳರು, ಜಗಳಗಂಟರು, ಸ್ವಾಭಿಮಾನಿಗಳು, ಅಂತಃಕರಣದವರು ಹೀಗೆ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಸಮಾಜದ ಭಾಗವಾಗಿ ಬದುಕುವ ಆಶಯವನ್ನು ಹೊಂದಿದ್ದರು. ದುಡಿದು ತಿನ್ನುವುದರಲ್ಲೇ ಬದುಕನ್ನು ಸವೆಸುವ ಅವರಿಗೆ ಮಕ್ಕಳ ಶಿಕ್ಷಣದ ಬಗ್ಗೆ ಕೂಡ ಹೆಚ್ಚಿನ ಕಾಳಜಿ ಇರಲಿಲ್ಲ. ನನ್ನ ತಂದೆಯ ಜೊತೆ ಹಮಾಲಿ ಮಾಡುವವರು, ನಾವಿಗಲ್ಲಿಯ ಇತರೆ ಬಡವರು, ತಮ್ಮ ಮಕ್ಕಳನ್ನು ಶಾಲೆಗೆ ಹಾಕಿದರೂ ಓದಿಸುವುದರ ಕಡೆಗೆ ಹೆಚ್ಚಿನ ಗಮನ ಕೊಡುತ್ತಿರಲಿಲ್ಲ. ನಮ್ಮ ಗಲ್ಲಿಯ ಯಾವೊಬ್ಬ ಹುಡುಗನೂ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗಲಿಲ್ಲ. ಬಡ ಹುಡುಗರು ಕೂಡ ಕಲಿಯುವ ಛಲವನ್ನು ಹೊಂದಿರಲಿಲ್ಲ. ಹೀಗಾಗಿ ನನ್ನ ತಮ್ಮಂದಿರರು ಕೂಡ ಹಟದಿಂದ ಕಲಿಯಲಿಲ್ಲ.

(ಸಿಂಗಾಪುರದಲ್ಲಿ ಹಮಾಲರ ಮೂರ್ತಿ)

ನನ್ನ ತಂದೆಯ ಜೊತೆ ಹಮಾಲಿ ಮಾಡುವವರು, ನಾವಿಗಲ್ಲಿಯ ಇತರೆ ಬಡವರು, ತಮ್ಮ ಮಕ್ಕಳನ್ನು ಶಾಲೆಗೆ ಹಾಕಿದರೂ ಓದಿಸುವುದರ ಕಡೆಗೆ ಹೆಚ್ಚಿನ ಗಮನ ಕೊಡುತ್ತಿರಲಿಲ್ಲ. ನಮ್ಮ ಗಲ್ಲಿಯ ಯಾವೊಬ್ಬ ಹುಡುಗನೂ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗಲಿಲ್ಲ.

ನಮ್ಮ ಮನೆ ಬಳಿಯ ಹರಿಜನ ಬೋರ್ಡಿಂಗಲ್ಲಿ ಕಲಿಯುತ್ತಿದ್ದ ಹುಡುಗರು ಮಾತ್ರ ಕಾಲೇಜು ಕಟ್ಟಿ ಹತ್ತುವವರಲ್ಲಿ ಹೆಚ್ಚಾಗಿದ್ದರು. ನಾನು ಹೈಸ್ಕೂಲು ಮತ್ತು ಕಾಲೇಜಿಗೆ ಬರುವುದರೊಳಗಾಗಿ ದಲಿತರು, ಹಿಂದುಳಿದವರು ಮುಂತಾದವರಿಗೆ ಒಂದಿಷ್ಟು ಮೀಸಲಾತಿ ಸೌಲಭ್ಯಗಳು ಸಿಗತೊಡಗಿದ್ದವು. ಮುಸ್ಲಿಮರಿಗೆ ಅಂಥ ಸೌಲಭ್ಯಗಳು ಇದ್ದಿದ್ದಿಲ್ಲ. ಆದರೆ ಒಟ್ಟಾರೆ ಬಡ ಹುಡುಗರಿಗೆ ಸಿಗುವ ಕೆಲ ಶೈಕ್ಷಣಿಕ ಶುಲ್ಕದ ಸೌಲಭ್ಯಗಳು ಸಿಗುತ್ತಿದ್ದವು.
ಬಡ ಮಕ್ಕಳು ಫೇಲಾಗಿ ಶಾಲೆ ಹೈಸ್ಕೂಲುಗಳಿಂದ ಹೊರಬಂದ ನಂತರ ತಮ್ಮ ಮನೆತನದ ವೃತ್ತಿ ಮತ್ತು ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗುವುದು ಸ್ವಾಭಾವಿಕವಾಗಿತ್ತು. ಆದರೆ ಅವರು ಹೇಗೋ ಬದುಕುತ್ತಿದ್ದರು. ಕೆಲವರು ಮೈಗಳ್ಳರಾಗಿ ತಂದೆ ತಾಯಿಗಳಿಗೆ ಭಾರವಾಗುತ್ತಿದ್ದರು. ಸಣ್ಣಪುಟ್ಟ ಕಳ್ಳತನ ಮಾಡಿ ಓಡಿಹೋಗುತ್ತಿದ್ದರು. ಹೀಗೆ ಬಡವರು ಮಕ್ಕಳ ಭವಿಷ್ಯಕ್ಕಾಗಿ ಮರುಗುತ್ತಿದ್ದರು. ಅಲ್ಲದೆ ಬದುಕಿನ ಎಲ್ಲ ನೋವುಗಳನ್ನು ನುಂಗುತ್ತ ಸಾಗುತ್ತಿದ್ದರು. ಅವರಿಗೆ ಬೇರೆ ದಾರಿಯೇ ಇರಲಿಲ್ಲ. ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗುವ ಸಾಧ್ಯತೆಯೇ ಇರಲಿಲ್ಲ. ಮೇಲಾಗಿ ಮೂಢನಂಬಿಕೆಗಳು ಅವರ ಜೀವನವನ್ನು ಹಿಂಡಿ ಹಿಪ್ಪಿ ಮಾಡುತ್ತಿದ್ದವು.

ನಾನು ಇಂಥ ವಾತಾವರಣದಲ್ಲೇ ಮ್ಯಾಟ್ರಿಕ್ ವರೆಗೆ ಹಾಗೂ ಹೀಗೂ ಓದಿದೆ. ಪ್ರಾಥಮಿಕ ಶಾಲೆಯಲ್ಲಿ ನನ್ನ ಭಾಷಾ ಮತ್ತು ಗಣಿತ ಜ್ಞಾನ ಹಾಗೂ ಕಲಿಯಬೇಕೆಂಬ ಛಲ ನನ್ನನ್ನು ಮುಂದೆ ಸಾಗುವಂತೆ ಮಾಡಿದವು. ನನ್ನ ಗೆಳಯರ ಮನೆಗಳಲ್ಲಿ ನನಗೆ ಸದಾ ಆಹ್ವಾನವಿರುತ್ತಿತ್ತು. ಅವರ ತಾಯಂದಿರು ನನಗಾಗಿ ಕಾಯುತ್ತಿದ್ದರು. ಗಣಿತ ಜ್ಞಾನದ ಜೊತಗೆ ನನ್ನ ಸೌಮ್ಯ ಸ್ವಭಾವ, ಪ್ರಾಮಾಣಿಕತೆ ಮತ್ತು ‘ಗೆಳೆಯರು ಕೂಡ ಚೆನ್ನಾಗಿ ಗಣಿತ ಕಲಿಯಬೇಕು’ ಎಂಬ ಕಾಳಜಿಯಿಂದಾಗಿ ಅವರು ನನ್ನನ್ನು ತಮ್ಮ ಮಕ್ಕಳಂತೆ ಕಾಣುತ್ತಿದ್ದರು. ಹೀಗಾಗಿ ಬಹಳಷ್ಟು ಸಲ ಯಾವುದೋ ಗೆಳೆಯನ ಮನೆಯಲ್ಲಿ ಮಲಗುವುದು ಯಾವುದೋ ಗೆಳೆಯನ ಮನೆಯಲ್ಲಿ ಊಟ ಮಾಡುವುದು ನಡೆದೇ ಇತ್ತು. ಹೀಗೇ ಹೀಗೇ ಮುಂದೆ ಸಾಗಿದೆ. ಅದನ್ನೆಲ್ಲ ಬರೆಯುವ ಮೊದಲು ಮೊನ್ನೆಯ ಘಟನೆಯೊಂದರ ಕುರಿತು ಹೇಳಬೇಕೆನಿಸುತ್ತದೆ.

ಸಿ.ಐ.ಟಿ.ಯು ಕಾರ್ಮಿಕ ಸಂಘದ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಸಂಗಾತಿಗಳು ಇದೇ ಜೂನ್ 4 ಮತ್ತು 5ರಂದು ಚಳ್ಳಕೆರೆಯಲ್ಲಿ ರಾಜ್ಯ ಹಮಾಲಿ ಕಾರ್ಮಿಕರ 5ನೇ ರಾಜ್ಯ ಸಮ್ಮೇಳನ ಏರ್ಪಡಿಸಿದ್ದರು. ನಾನು ಹಮಾಲನ ಮಗನಾದ ಕಾರಣ ಫೆಡರೇಷನ್ ಅಧ್ಯಕ್ಷ ಕೆ. ಮಹಾಂತೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ನನ್ನನ್ನು ಉದ್ಘಾಟನೆಗೆ ಆಹ್ವಾನಿಸಿದರು. ನನ್ನ ಬದುಕಿನ ಅಪೂರ್ವ ಸಂದರ್ಭ ಇದಾಗುವುದೆಂದು ಖುಷಿಯಿಂದ ಒಪ್ಪಿದೆ.

ಹಮಾಲರ ಬದುಕಿನ ಬವಣೆಗಳೆಲ್ಲ ನನ್ನ ಬದುಕಿನ ಭಾಗವೇ ಆಗಿದ್ದವು. ಆ ಕಾಲದಲ್ಲಿ ಅಂದರೆ 60 ವರ್ಷಗಳಿಗೂ ಹಿಂದೆ ಎ.ಪಿ.ಎಂ.ಸಿ. ಯಾರ್ಡ್ಗಳು ಕೂಡ ಇರಲಿಲ್ಲ. ವಿಜಾಪುರ ನಗರ ಮಧ್ಯೆಯೆ ಅಡತಿ ಅಂಗಡಿಗಳಿದ್ದವು. ಹಮಾಲರಿಗೆ ಯಾವುದೇ ರೀತಿಯ ಸೌಲಭ್ಯಗಳು ಇರಲಿಲ್ಲ. ಲೋಡ್, ಅನ್ ಲೋಡ್ ಮಾಡುವುದರ ಕೂಲಿ ಬಹಳ ಕಡಿಮೆ ಇತ್ತು. 64 ಸೊಲಿಗೆ ಅಂದರೆ ಒಂದು ಕಿಂಟಲ್ ಧಾನ್ಯದ ಚೀಲವನ್ನು ಲಾರಿಯಿಂದ ಇಳಿಸಿ ಅಡತಿ ಅಂಗಡಿಯ ಹಿಂದಿರುವ ವಖಾರಗೆ ಒಯ್ದು ಹಚ್ಚಲು ಕೂಲಿ ಒಂದು ದುಡ್ಡು ಇತ್ತು. 64 ದುಡ್ಡು ಕೂಡಿದರೆ ಒಂದು ರೂಪಾಯಿ ಆಗತ್ತಿತ್ತು. ಅಂದರೆ ಒಂದು ರೂಪಾಯಿ ಗಳಿಸಲು ಒಟ್ಟು 64 ಕ್ವಿಂಟಲ್ ಧಾನ್ಯ ಲಾರಿಯಿಂದ ಇಳಿಸಿ ಹೊತ್ತು ವಖಾರಲ್ಲಿ ಚೀಲಗಳನ್ನು ಪೇರಿಸಿ ಇಡಬೇಕಿತ್ತು. ಇದು ಬಹಳ ದಿನಗಳಿಂದ ನಡೆದುಕೊಂಡೇ ಬಂದಿತ್ತು.


ಒಂದು ದಿನ ಹಮಾಲರು ಸ್ವಯಂಪ್ರೇರಿತರಾಗಿ ಚೀಲವೊಂದಕ್ಕೆ ಒಂದೂವರೆ ದುಡ್ಡು ಕೂಲಿ ಕೊಡಬೇಕೆಂದು ಬೇಡಿಕೆ ಇಟ್ಟರು. ಎಲ್ಲ ಅಡತಿ ಅಂಗಡಿಗಳ ನೂರಾರು ಹಮಾಲರು ಒಂದಾಗಿ ಸೌಮ್ಯದಿಂದ ತಮ್ಮ ಕಷ್ಟಗಳಿಗೆ ಸ್ಪಂದಿಸಬೇಕೆಂದು ಮನವಿ ಮಾಡುತ್ತಿದ್ದರು. ನಾನು ಆಕಸ್ಮಿಕವಾಗಿ ನನ್ನ ತಂದೆಯ ಭೇಟಿಗೆ ಹೋಗಿದ್ದೆ. (ಬಹುಶಃ ನೋಟಬುಕ್ ಕೊಳ್ಳಲು ಒಂದಿಷ್ಟು ಹಣ ಬೇಕಿತ್ತೆಂದು ಕಾಣುತ್ತದೆ.) ಆಗ ಹಮಾಲರೆಲ್ಲ ಗುಂಪುಗೂಡಿದ್ದನ್ನು ನೋಡಿದೆ. ಅದಾಗಲೆ ನನಗೆ ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕ ಪ್ರಕಾಶ ಹಿಟ್ನಳ್ಳಿ ಅವರ ಪರಿಚಯವಾಗಿತ್ತು. ಅವರ ಬಳಿ ಓಡಿ ಹೋಗಿ ವಿಷಯ ತಿಳಿಸಿದೆ. ಅವರು ತಮ್ಮ ನೆಹರು ಶರ್ಟಿನ ಕಿಸೆಯಿಂದ ಕೆಂಬಾವುಟವನ್ನು ತೆಗೆದರು. ಆ ಕೆಂಬಾವುಟ ನೋಡಿ ಅದಾವುದೋ ಧೈರ್ಯ ಮೈ ತುಂಬಿಕೊಂಡಿತು. ಅದು ವಿಜಯ ತರುವ ಭವಿಷ್ಯದ ಹಾಗೆ ಆಕರ್ಷಕವಾಗಿ ಕಾಣತೊಡಗಿತು. ಧ್ವಜ ಸಿಗಿಸಲು ಒಂದು ಛಡಿ ಬೇಕಲ್ಲಾ ಎಂದು ಕಾಮ್ರೇಡ್ ಪ್ರಕಾಶ್ ಹೇಳಿದರು. ನಾನು ಓಡಿಹೋಗಿ ರಸ್ತೆ ಬದಿಯ ಗಿಡವೊಂದರ ಉದ್ದನೆಯ ರೆಂಬೆಯೊಂದನ್ನು ತೆಗೆದುಕೊಂಡು ಬಂದೆ. ಇಬ್ಬರೂ ಕೂಡಿ ಹಮಾಲರ ಗುಂಪಿನ ಕಡೆಗೆ ಹೋದೆವು. ಪ್ರಕಾಶ ಅವರು ಧ್ವಜವನ್ನು ಛಡಿಗೆ ಕಟ್ಟಿ “ಇಂಕ್ವಿಲಾಬ್ ಜಿಂದಾಬಾದ್” ಎಂದರು. ಹಮಾಲರು ಹೊಸ ಹುರುಪಿನಿಂದ ಘೋಷಣೆ ಹಾಕಿದರು. ಆ ಕೆಂಪುಧ್ವಜ ಹಮಾಲರ ಬದುಕನ್ನೇ ಬದಲಿಸಿತು. ಎಲ್ಲರ ಹಮಾಲರನ್ನು ಸೇರಿಸಿ ಬಜಾರಲ್ಲೇ ಇರುವ ಆದಿಲಶಾಹಿ ರಾಜಮನೆತನದ ಕೊನೆಯ ರಾಜ ಸಿಕಂದರನ ಸಮಾಧಿ ಇರುವ ಗಾರ್ಡನ್‌ನಲ್ಲಿ ಬಂದೆವು. ಅಲ್ಲಿ ಪ್ರಕಾಶ ಹಮಾಲರ ಹಕ್ಕುಗಳ ಬಗ್ಗೆ ಮಾತನಾಡುತ್ತ ಅವರನ್ನು ಹುರಿದುಂಬಿಸಿದರು. ನಾನೂ ಗಟ್ಟಿಯಾಗಿ ಧ್ವನಿಗೂಡಿಸಿದೆ. ಅದು ನನ್ನ ಜೀವನದ ಮೊದಲ ಸಾರ್ವಜನಿಕ ಭಾಷಣವಾಗಿತ್ತು. ಅಂದು ನಾನು ಎಲ್ಲ ಹಮಾಲರ ಕಣ್ಣಲ್ಲಿ ಹೀರೊ ಆದೆ.

ಹಮಾಲರ ಮಕ್ಕಳೂ ಮಾತನಾಡಬಹುದು, ಪ್ರಶ್ನಿಸಬಹುದು ಎಂದು ಅವರಿಗೆ ಅನಿಸಿತು. ಶಬ್ಭಾಷ್ ಎಂದು ಕೆಲವರು ಬೆನ್ನು ತಟ್ಟಿದರು. ಆ ಹಮಾಲರ ಹೋರಾಟ ವಿಜಯ ಸಾಧಿಸಿತು. ಅದು ರಾಜ್ಯದಲ್ಲಿ ಹಮಾಲರ ಮೊದಲ ಹೋರಾಟ ಮತ್ತು ವಿಜಯವಾಗಿತ್ತು. 53 ವರ್ಷಗಳಷ್ಟು ಹಿಂದಿನ ಆ ಘಟನೆ ಹಮಾಲಿ ಕಾರ್ಮಿಕರ ಇತಿಹಾಸದಲ್ಲಿ ಸ್ಥಾನ ಪಡೆಯಲಿಲ್ಲ. ಏಕೆಂದರೆ ಆಗ ಈಗಿನಂಥ ಹಮಾಲರ ಸಂಘಟನೆ ಹುಟ್ಟಿರಲಿಲ್ಲ.

ಉದ್ಘಾಟನಾ ಸಮಾರಂಭದ ಹಿಂದಿನ ರಾತ್ರಿ ಚಳ್ಳಕೆರೆಗೆ ಹೋದೆ. ರಾತ್ರಿಯೆಲ್ಲ ಬಾಲ್ಯದ ನೆನಪುಗಳು ಕಾಡತೊಡಗಿದವು. ಆ ನೋವು ಅಸಹಾಯಕತೆಗಳೆಲ್ಲ ನೆನಪಿನಲ್ಲಿ ಸುಳಿದು ಹೋದವು. ಬಾಲ್ಯದ ನನ್ನ ನಾವಿಗಲ್ಲಿಯ ಗೆಳೆಯರೆಲ್ಲ ನೆನಪಾದರು. ಒಬ್ಬರೂ ಓದಿ ಮುಂದೆ ಬರಲಿಲ್ಲ. ಹಮಾಲರ ಮಕ್ಕಳು ಕೂಡ ಹಮಾಲರೇ ಆದರು. ಮತ್ತೆ ಏನೇನೊ ಮಾಡುತ್ತ ಅಲ್ಲೇ ಉಳಿದರು. ಅವರಿಂದೆಲ್ಲ ನಾನು ದೂರಾಗಿರುವ ಒಂಟಿತನವನ್ನೂ ಅನುಭವಿಸಿದೆ. ನನ್ನ ಆ ಬಾಲ್ಯದ ಅನುಭವಗಳನ್ನು ಹಂಚಿಕೊಳ್ಳಲು ಒಬ್ಬರೂ ಇಲ್ಲವಲ್ಲ ಎಂದು ದುಃಖವಾಯಿತು.

ಮರುದಿನ ಸಮ್ಮೇಳನದ ಉದ್ಘಾಟನೆಗೆ ಕರೆದುಕೊಂಡು ಹೋದರು. ಅದಕ್ಕೂ ಮೊದಲು ಸಮ್ಮೇಳನದ ಮೆರೆವಣಿಗೆ ನಡೆಯಿತು. ಅದೊಂದು ಆಕರ್ಷಕ ಮೆರವಣಿಗೆಯಾಗಿತ್ತು. ಗಾಡಿ ಹಮಾಲರು ತಮ್ಮ ಎತ್ತು ಗಾಡಿಗಳೊಂದಿಗೆ ಮರೆವಣಿಗೆ ಭಾಗವಹಿಸಿದ್ದು ಆಕರ್ಷಕವಾಗಿತ್ತು. ಅಡತಿ ಅಂಗಡಿಗಳಲ್ಲಿ ತಳ ಮಾಡುವ ಹೆಣ್ಣುಮಕ್ಕಳು ಹುರುಪಿನಿಂದ ಭಾಗವಹಿಸಿದ್ದರು. ಬುದ್ಧ, ಮಹಾವೀರ, ಬಸವಣ್ಣ, ಕಾರ್ಲ್ ಮಾರ್ಕ್ಸ್, ಲೆನಿನ್, ಮಹಾತ್ಮಾ ಗಾಂಧಿ, ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ಕಿತ್ತೂರ ಚೆನ್ನಮ್ಮ, ನಾಯಕನಹಟ್ಟಿ ತಿಪ್ಪೇಸ್ವಾಮಿ ಮುಂತಾದವರ ಭಾವಚಿತ್ರಗಳಿಂದ ಮೆರವಣಿಗೆ ಶೋಭಿಸುತ್ತಿತ್ತು. ನೂರಾರು ಕಾರ್ಮಿಕರು ಪಟಾಕಿ ಸಿಡಿಸುತ್ತ, ತಮಟೆ ನಾದಕ್ಕೆ ಹೆಜ್ಜೆ ಹಾಕುತ್ತಿದ್ದರು.

ನಂತರ ಎಪಿಎಂಸಿ ಆವರಣದಲ್ಲಿ ಸಮ್ಮೇಳನ ಪ್ರಾರಂಭವಾಯಿತು. ವೇದಿಕೆಯಲ್ಲಿ ಕುಳಿತಾಗ ಸಾವಿರಾರು ಹಮಾಲರು ಮತ್ತು ತಳ ಮಾಡುವ ಹೆಣ್ಣುಮಕ್ಕಳು (ಚೀಲಗಳನ್ನು ಏರಿಸುವಾಗ, ಇಳಿಸುವಾಗ ಮತ್ತು ಚೀಲದಲ್ಲಿನ ಕಸಕಡ್ಡಿಗಳನ್ನು ಛಾಣಿಸಿ ಚೀಲತುಂಬುವಾಗ ಬೀಳುವ ಕಾಳುಕಡಿಗಳನ್ನು ಆರಿಸಿಕೊಂಡು ಹೋಗುವ ಹೆಣ್ಣುಮಕ್ಕಳು. ಅವರಿಗೆ ಅಡತಿ ಅಂಗಡಿಯವರು ಕೂಲಿ ಕೊಡುತ್ತಿರಲಿಲ್ಲ. ಆದರೆ ಆವರು ಹಾಗೆ ಕೂಡಿಸಿದ ಕಾಳುಗಳನ್ನು ತುಂಬಿಕೊಂಡು ಮನೆಗೆ ಒಯ್ದು ಬೇರ್ಪಡಿಸಿ ಚುಂಗಡಿ ಅಂಗಡಿಗಳಲ್ಲಿ ಮಾರಿ ಜೀವನ ಸಾಗಿಸುತ್ತಿದ್ದರು. ಅವರಿಗೆ ನಮ್ಮ ಕಡೆ ತಳ ಮಾಡುವವರು ಎಂದು ಕರೆಯುತ್ತಾರೆ.) ಹೀಗೆ ಸಮ್ಮೇಳನದಲ್ಲಿ ಉತ್ಸಾಹದಿಂದ ಕುಳಿತಿದ್ದರು. ಇದೆಲ್ಲ ನೋಡಿ ನಾನು ಬಹಳ ಭಾವುಕನಾದೆ. ಹಳೆಯದೆಲ್ಲ ನೆನಪಾಗುತ್ತಲೇ ಇತ್ತು. ಕಣ್ಣೀರು ತುಳುಕುವದನ್ನು ನಿಲ್ಲಿಸಲು ಪದೆ ಪದೆ ನೀರು ಕುಡಿದೆ. ಹಾಗೂ ಹೀಗೂ ಉದ್ಘಾಟನಾ ಭಾಷಣದ ವರೆಗೆ ತಡೆದುಕೊಂಡೆ.

ಪಾರಿವಾಳಗಳನ್ನು ಹಾರಿಸುವ ಮೂಲಕ ಉದ್ಘಾಟನೆ ಮಾಡಿದೆ. ಉದ್ಘಾಟನಾ ಭಾಷಣದಲ್ಲಿ ಹಮಾಲರಿಗೆ ಸರ್ಕಾರ ಮಾಡುತ್ತಿರವ ಅನ್ಯಾಯದ ಬಗ್ಗೆ ವಿವರಿಸಿದೆ. ಮುಕ್ತ ಮಾರುಕಟ್ಟೆ ವ್ಯವಸ್ಥೆಯಿಂದ ಹಮಾಲರಿಗೆ ಯಾವರೀತಿ ಅನ್ಯಾಯವಾಗುವುದೆಂದು ವಿವರಿಸಿದೆ. ರೈತರ ನಿರಂತರ ಹೋರಾಟದಿಂದಾಗಿ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂತೆದುಕೊಂಡರೂ ರಾಜ್ಯ ಸರ್ಕಾರ ತೆಗೆದುಕೊಳ್ಳದೆ ಇರುವುದರಿಂದ ಮುಕ್ತ ಮಾರುಕಟ್ಟೆ ಮುಂದುವರಿದು ಹಮಾಲರಷ್ಟೇ ಅಲ್ಲ, ಇಡೀ ಎಪಿಎಂಸಿ ವ್ಯವಸ್ಥೆಯೆ ಹಾಳಾಗಿ ಹೋಗುತ್ತದೆ. ದಲಾಲರೂ ಬೀದಿ ಪಾಲಾಗುತ್ತಾರೆ. ಆದ್ದರಿಂದ ಇವರೆಲ್ಲ ಹಮಾಲರಿಗೆ ಬೆಂಬಲಿಸುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದೆ.

ನನ್ನ ತಂದೆ ಎಂಥ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಎಂಥ ಸತ್ಯಸಂಧರಾಗಿದ್ದರು. ಅವರು ಚಹಾ ಕೂಡ ಕುಡಿಯಲಿಲ್ಲ. ಇಡೀ ಜೀವನ ಯಾವೊಂದು ಚಟಗಳಿಲ್ಲದೆ ಹೇಗೆ ಬದುಕಿದರು ಎಂದು ಮುಂತಾಗಿ ವಿವರಿಸಿದೆ. ಕಾರ್ಮಿಕ ವರ್ಗದ ಬಹುಪಾಲ ಜನರು ತಮ್ಮ ಆದಾಯದ ಬಹುಪಾಲನ್ನು ಮೂಢನಂಬಿಕೆಯ ಜೊತೆ ಕುಡಿತಕ್ಕೂ ಹಾಕುತ್ತಾರೆ. ಅವರು ಹಾಗೆ ಆಗಬಾರದು ಎಂಬ ಉದ್ದೇಶದಿಂದ ಹೀಗೆಲ್ಲ ಸತ್ಯವನ್ನು ಹೇಳಿದೆ.

ನಾನು ಹೇಗೆ ಶಿಕ್ಷಣ ಪಡೆದೆ ಎಂಬುದನ್ನು ತಿಳಿಸಿದೆ. ಆ ಸಭೆಯಲ್ಲಿ ನನ್ನ ಬಗ್ಗೆ ಹೇಳುವುದು ಅನಿವಾರ್ಯವೆನಿಸಿತು. ನನ್ನ ಹಮಾಲ ಬಂಧುಗಳು ತಮ್ಮ ಮಕ್ಕಳನ್ನು ಹೀಗೆ ಬೆಳೆಸಲು ಪ್ರೇರಣೆಯಾಗಬಹುದೆಂಬ ಆಸೆಯಿಂದ ಹೇಳತೊಡಗಿದೆ. ನಡು ನಡುವೆ ದುಃಖ ಉಮ್ಮಳಿಸಿ ಬರುತ್ತಿತ್ತು. ನಾನು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಭಾಷಾವಿಜ್ಞಾನ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ.ಎಂ.ಎಂ. ಪದವಿ ಪಡೆದದ್ದನ್ನು ತಿಳಿಸಿದೆ. ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಮಾಸಪತ್ರಿಕೆಯಾದ ಕೃಷಿಪೇಟೆಯ ಮೊದಲ ಉಪ ಸಂಪಾದಕನಾಗಿ 6 ವರ್ಷ ಕರ್ತವ್ಯ ನಿರ್ವಹಿಸಿದ್ದು ಆಗ ರಾಜ್ಯದಲ್ಲಿ ಇದ್ದ 120 ಮಾರುಕಟ್ಟೆ ಸಮಿತಿಗಳಿಗೂ ಭೇಟಿ ನೀಡಿದ್ದು. ಮಾರಾಟ ಮಂಡಳಿಯಿಂದ ಡೆಪ್ಯೂಟೇಶನ್ ಮೂಲಕ ಮೈಸೂರಿನ ಐಡಿಎಸ್ (ಇನ್‌ಸ್ಟಿಟ್ಯೂಟ್ ಆಫ್ ಡವಲಪ್‌ಮೆಂಟ್ ಸ್ಟಡೀಜ್) ನಲ್ಲಿ ಪದವಿ ಪಡೆದದ್ದು (ಅಮೆರಿಕದ ರಾಕ್‌ಫೆಲರ್ ಫೌಂಡೇಷನ್ ಸಹಾಯದೊಂದಿಗೆ ಪ್ರಾರಂಭವಾದ ಐಡಿಎಸ್ ಇಡೀ ದಕ್ಷಿಣ ಏಷ್ಯಾದ ಮೊದಲ ಸಂಸ್ಥೆಯಾಗಿತ್ತು. ಅಲ್ಲಿ ಎಂಎಎಂಎಂ ಅಂದರೆ ಮಾಸ್ಟರ್ ಆಫ್ ಅಗಿಕಲ್ಚರಲ್ ಮಾರ್ಕೆಟಿಂಗ್ ಮ್ಯಾನೇಜ್ ಮೆಂಟ್ ಪದವಿ ಪಡೆಯವ ಅವಕಾಶ ದೊರೆಯಿತು.) ತಿಳಿಸಿದೆ.

25 ಪುಸ್ತಕಗಳ ರಚನೆ ಮಾಡಿದ್ದಾಗಿ ಹೇಳಿದೆ. ನನ್ನ ಲೇಖನ, ಕವನ, ಪುಸ್ತಕ ಮುಂತಾದವು ಕೇಂದ್ರೀಯ ವಿಶ್ವವಿದ್ಯಾಲಯವೂ ಸೇರಿದಂತೆ ಕರ್ನಾಟಕದ 10 ವಿಶ್ವವಿದ್ಯಾಲಯಗಳ ಪಠ್ಯದಲ್ಲಿ ಸೇರಿದ್ದು. 15 ದೇಶಗಳಲ್ಲಿ ಶಾಂತಿ, ಸಂಸ್ಕೃತಿ ಹಾಗೂ ಬಸವತತ್ತ್ವದ ಕುರಿತು ಉಪನ್ಯಾಸ ನೀಡಿದ್ದರ ಕುರಿತು ವಿವರಿಸಿದೆ. ಗುಲಬರ್ಗಾ ಮತ್ತು ಮದ್ರಾಸ್ ವಿಶ್ವವಿದ್ಯಾಲಯಗಳಿಂದ ಇಬ್ಬರು ವಿದ್ಯಾರ್ಥಿಗಳು ನನ್ನ ಬದುಕು ಬರಹ ಕುರಿತು ಸಂಶೋಧನೆ ಮಾಡಿ ಪಿಎಚ್.ಡಿ ಪಡೆದದ್ದರ ಕುರಿತು ಇನ್ನಿಬ್ಬರು ಎಂ.ಫಿಲ್ ಪದವಿ ಪಡೆದದ್ದರ ಕುರಿತು ತಿಳಿಸಿದೆ.


ರಾಷ್ಟ್ರೀಯ ಬಸವ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿಯ ಗೌರವ ಪ್ರಶಸ್ತಿ ಸೇರಿದಂತೆ ದೇಶ ವಿದೇಶಗಳಿಂದ 50 ಪ್ರಶಸ್ತಿ ದೊರೆತದ್ದರ ಕುರಿತು ಹೇಳಿದೆ. ಪ್ರಧಾನಿ ಮತ್ತು ಮುಖ್ಯಮಂತ್ರಿಯಾಗಿದ್ದವರ ಥಿಂಕ್ ಟ್ಯಾಂಕ್ ಸದಸ್ಯನಾಗಿದ್ದರ ಕುರಿತು ತಿಳಿಸಿದೆ. ನಾಲ್ವತ್ತರಷ್ಟು ವಿವಿಧ ಸಂಘಟನೆಗಳಲ್ಲಿ ಅಧ್ಯಕ್ಷ, ಸಂಚಾಲಕ, ಕಾರ್ಯಕಾರಿ ಸಮಿತಿ ಸದಸ್ಯ, ಸಲಹಾ ಸಮಿತಿ ಸದಸ್ಯ ಮುಂತಾದ ಸ್ಥಾನಗಳಲ್ಲಿದ್ದು ಸೇವೆ ಸಲ್ಲಿಸಿದ್ದರ ಕುರಿತೂ ಹೇಳಿದೆ. ಇಂದಿನ ಹಮಾಲರ ಮಕ್ಕಳು ಇದಕ್ಕಿಂತ ಹೆಚ್ಚಿನದನ್ನು ಸಾಧಿಸುವ ಅವಕಾಶಗಳಿವೆ ಎಂದು ಹೇಳುತ್ತ ಅವರ ಮಕ್ಕಳ ಭವಿಷ್ಯದ ಕಡೆಗೆ ಅವರ ಮನಸ್ಸನ್ನು ಸೆಳೆದೆ. ಬಡವರ ಶಕ್ತಿ ಅದಮ್ಯ ಎಂಬುದನ್ನು ಮನವರಿಕೆ ಮಾಡಿದೆ.

ಚಿತ್ರಗಳು: ಸುನೀಲಕುಮಾರ ಸುಧಾಕರ