ರೆಹಮಾನಿ ಅವರು ಉಕ್ರೇನ್‍ ನಲ್ಲಿ ನೆಲೆಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಒಂದು ವರ್ಷವೂ ಭರ್ತಿಯಾಗಿದೆಯೋ, ಇಲ್ಲವೋ, ಅಲ್ಲಿ ಯುದ್ಧದ ಬಿಸಿಯೇರುತ್ತಿರುವುದು ಕಾಣಿಸಿತು. ತಾವು ಬಯಸಿದ ಬದುಕು ಅಲ್ಲಿಯೂ ಸಿಗುತ್ತಿಲ್ಲ ಎಂದು ಗೊತ್ತಾದ ಕೂಡಲೇ ಮತ್ತೆ ಅಲ್ಲಿಂದ ಹೊರಡಲೇಬೇಕಾಯಿತು. ರಷ್ಯಾ ಪಡೆಗಳು ಸ್ಫೋಟಿಸುತ್ತಿದ್ದ ಬಾಂಬುಗಳ ಸದ್ದಿನ ನಡುವೆಯೇ ಅವರು ಆ ದೇಶವನ್ನು ತೊರೆದರು. ಯಾರದೋ ಯುದ್ಧ ದಾಹಕ್ಕಾಗಿ ಬದುಕು ಕಳೆದುಕೊಳ್ಳುತ್ತಿರುವವರ ಕತೆಗಳಿಗೆ ದನಿಯೆಲ್ಲಿದೆ.
ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ಇಂದಿನ ಓದಿಗಾಗಿ

ಯಾರೊಂದಿಗಾದರೂ ಭಾರೀ ಜಗಳವಾಡುವಾಗ, ಮನಸ್ಸಿಗೆ ತುಂಬ ಬೇಸರವಾದಾಗ ಹೇಳುವ ಮಾತಿದು, ‘ಜಗತ್ತು ವಿಶಾಲವಾಗಿದೆ, ಎಲ್ಲಾದರೂ ಬದುಕುವುದಕ್ಕೆ ಒಂದಿಷ್ಟು ಜಾಗ ದೊರೆತೀತು..’ ಸಂಸಾರದ ಎಲ್ಲಾ ಜಂಜಾಟಗಳನ್ನು ಬಂಧನಗಳನ್ನು ತೊರೆದು ಎಲ್ಲಾದರೂ ಅನಾಮಿಕವಾಗಿ ಬದುಕುವ ಅವಕಾಶವೊಂದನ್ನುಬಹುಶಃ ಎಲ್ಲರೂ ಒಂದಲ್ಲ ಒಂದು ಬಾರಿ ಯೋಚಿಸಿರುತ್ತಾರೆ. ಆದರೆ ಯುದ್ಧದ ಭಯವು ಕವಿಯುತ್ತಿರುವ ಹೊತ್ತಿನಲ್ಲಿ ಬದುಕಿಗಾಗಿ ಒಂದೂರಿನಿಂದ ಒಂದೂರಿಗೆ ಓಡುತ್ತಿರುವವರನ್ನು ಕಂಡು, ಜಗತ್ತು ವಿಶಾಲವಾಗಿದೆ ಎಂಬುದು ಬಹಳ ಸದರದ ಮಾತು ಅನಿಸುತ್ತಿದೆ.

ಕಳೆದ ಒಂದೆರಡು ವರ್ಷಗಳಲ್ಲಿ ಕೋವಿಡ್‍ ಮಹಾಮಾರಿಯಿಂದಾಗಿ ಎಲ್ಲರೂ ಮನೆಯೊಳಗೇ ಅವಿತಿರಬೇಕಾಗಿತ್ತು. ಇಷ್ಟು ವಿಶಾಲವಾದ ಜಗತ್ತನ್ನು ಸೋಂಕಿನ ಅಣುಗಳು ಆಕ್ರಮಿಸಿಕೊಂಡು, ಮನುಷ್ಯನನ್ನು ಮನೆಯೊಳಗೇ ಬಂಧಿಸಿದವಲ್ಲ ಎಂದು ಅಚ್ಚರಿ ಪಡುತ್ತಿದ್ದೆವು. ಸೋಂಕಿನ ಭಯವು ಕಡಿಮೆಯಾಗುತ್ತಿದ್ದ ಹಾಗೆಯೇ ಸಾಮಾಜಿಕ ಸಮಾರಂಭಗಳು, ಪ್ರಯಾಣ, ಪಟ್ಟಾಂಗ ಎಲ್ಲವೂ ಎಷ್ಟೊಂದು ಮಹತ್ವದ್ದು ಎಂದು ಅರಿವಾಗತೊಡಗಿತು. ಅದಕ್ಕಿಂತಲೂ ಮುಖ್ಯವಾಗಿ ದುಡಿಮೆಯ ಸ್ವರೂಪವು ಬದಲಾಗುತ್ತಿದ್ದಂತೆಯೇ, ಹೊಸ ಬದಲಾವಣೆಗಳನ್ನು ಒಪ್ಪಿಕೊಳ್ಳುವುದಕ್ಕೆ ಕಷ್ಟವೆನಿಸಿತು.

ಒಡನಾಟ, ಸ್ನೇಹ, ಸತ್ಕಾರಗಳ ಸಂತೋಷದಲ್ಲಿ ಕ್ಷಣಗಳನ್ನು ಬಹಳ ಜೋಪಾನವಾಗಿ ಖರ್ಚು ಮಾಡಬೇಕು ಎಂದುಕೊಳ್ಳುತ್ತಿದ್ದವರಿಗೆ, ಯುದ್ಧವೆಂಬ ಮತ್ತೊಂದು ಸುದ್ದಿ ಬಂದೆರಗಿದೆ. ಕೋವಿಡ್‍ ಸೋಂಕನ್ನು ಮಣಿಸಿದ ಬಳಿಕ, ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳುವ ಖುಷಿಯಲ್ಲಿದ್ದವರಿಗೆ, ಇದು ಯಾರಿಗಾಗಿ ನಡೆಯುತ್ತಿರುವ ಯುದ್ಧ ಮತ್ತು ಯಾಕಾಗಿ ನಡೆಯುತ್ತಿರುವ ಯುದ್ಧ ಎಂದು ಅರಿವಾಗದೇ ತಬ್ಬಿಬ್ಬಾಗಿದ್ದಾರೆ.

ಹಾಗೆ ನೋಡಿದರೆ, ಅಫ್ಘಾನಿಸ್ಥಾನದಲ್ಲಿ ನಡೆದ ವಿದ್ಯಮಾನವನ್ನು ಗಮನಿಸಿ, ಬುದ್ಧಿ ಮಾತುಗಳನ್ನು ಹೇಳಿದವರೆಲ್ಲ ಇಂದು, ಬಂದೂಕು ಹಿಡಿದು ನಿಂತಿದ್ದಾರೆ. ಕಳೆದ ವರ್ಷವಷ್ಟೇ ಎಲ್ಲರೂ ಅಫ್ಘಾನಿಸ್ತಾನದ ಕುರಿತು ಮರುಕ ವ್ಯಕ್ತಪಡಿಸುತ್ತ, ಅಲ್ಲಿ ಯಾರು ಸರಿ, ಯಾರು ತಪ್ಪು ಎಂದು ಅಭಿಪ್ರಾಯಗಳನ್ನು ಬಿಡುಬೀಸಾಗಿ ಹೇಳುತ್ತಿದ್ದೆವು. ಈಗ ನೋಡಿದರೆ ಅಫ್ಘಾನಿಸ್ತಾನದ ಸುದ್ದಿ ಮರೆಗೆ ಸಂದಿದೆ. ಅಲ್ಲಿ ಎಲ್ಲವೂ ಸಹಜವಾಗಿಲ್ಲ ಎಂಬುದನ್ನು ಹೇಳುತ್ತ ಹೇಳುತ್ತ ದಣಿದ ನಾವೆಲ್ಲ, ಅದುವೇ ಅಲ್ಲಿನ ಸಹಜತೆ ಎಂಬಂತೆ ಮೌನವಾಗುತ್ತ ಹೊಸವರ್ಷವನ್ನು ಆಚರಿಸುತ್ತಿದ್ದೆವು. ಈಗ ಮತ್ತೊಂದು ದೇಶದಲ್ಲಿ ಬದುಕು ದುಸ್ತರವಾಗಿದೆ.

ಉಕ್ರೇನ್‍ ನಲ್ಲಿ ನೆಲೆಸಿದ ಭಾರತೀಯರು ವಾಪಸ್ಸು ಮರಳುತ್ತಿದ್ದ ಸುದ್ದಿಯ ನಡುವೆಯೇ ಮತ್ತೊಂದು ಸುದ್ದಿಯೂ ಗಮನ ಸೆಳೆಯಿತು. ಅದು ಅಜ್ಮಲ್ ರೆಹಮಾನಿ ಎಂಬ ಗೃಹಸ್ಥನ ಕುರಿತ ವರದಿ.

ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿದ್ದ ಅಜ್ಮಲ್ ರೆಹಮಾನಿ ಅಲ್ಲಿಂದ ಒಮ್ಮೆ ಹೊರ ಹೋದರೆ ಸಾಕು ಎಂದುಕೊಂಡಿದ್ದರು. ತಾಲಿಬಾನಿ ಸೇನೆ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ‍್ಳಲು ತಯಾರಿ ಶುರು ಮಾಡಿದಾಗಲೇ ಅವರಿಗೆ, ತಮ್ಮೆಲ್ಲರ ಬದುಕು ಸಂಕಟದಲ್ಲಿದೆ ಎಂಬುದು ಅರಿವಾಗಿತ್ತು. ಮಕ್ಕಳ ಶಿಕ್ಷಣ, ಮುಕ್ತವಾದ ವಾತಾವರಣದಲ್ಲಿ ಜೀವಿಸುವ ಅವಕಾಶಗಳಿಗೆ ಸಂಚಕಾರ ಎದುರಾಗುತ್ತಿದೆ ಎಂದು ಗ್ರಹಿಸಿದರು. ಇದ್ದಬದ್ದ ಸಾಮಾನು ಸರಂಜಾಮುಗಳನ್ನು ಗಂಟುಕಟ್ಟಿಕೊಂಡು ಅವರು ಅಫ್ಘಾನಿಸ್ಥಾನದಿಂದ ಹೊರಟಿದ್ದರು. ಆ ಸಂದರ್ಭದಲ್ಲಿ ಅವರಿಗೆ ಉಕ್ರೇನ್‍ ಸುರಕ್ಷಿತ ಜಾಗವೆಂದು ಅನಿಸಿತ್ತು. ಉದ್ಯೋಗ, ಶಿಕ್ಷಣ ಮತ್ತು ನೆಮ್ಮದಿಯ ಮನೆಯೊಂದನ್ನು ಮಾಡಿಕೊಂಡು ಜೀವಿಸಲು ಅಡ್ಡಿಯಿಲ್ಲ ಎಂಬ ಭರವಸೆ ಮನದಲ್ಲಿ ಮೂಡಿತ್ತು. ಹಾಗೆ ವಲಸೆ ಹೋದ ಅವರು ಅಲ್ಲೊಂದು ಮನೆ ಮಾಡಿ ನೆಮ್ಮದಿಯ ಜೀವನ ನಡೆಸಲಾರಂಭಿಸಿದರು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದುಕೊಂಡರೆ ಹಾಗೇನೂ ಆಗಲಿಲ್ಲ.

ಕೋವಿಡ್‍ ಸೋಂಕನ್ನು ಮಣಿಸಿದ ಬಳಿಕ, ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳುವ ಖುಷಿಯಲ್ಲಿದ್ದವರಿಗೆ, ಇದು ಯಾರಿಗಾಗಿ ನಡೆಯುತ್ತಿರುವ ಯುದ್ಧ ಮತ್ತು ಯಾಕಾಗಿ ನಡೆಯುತ್ತಿರುವ ಯುದ್ಧ ಎಂದು ಅರಿವಾಗದೇ ತಬ್ಬಿಬ್ಬಾಗಿದ್ದಾರೆ.

ಅವರು ನೆಮ್ಮದಿಯ ನಿಟ್ಟುಸಿರು ಬಿಟ್ಟು ಒಂದು ವರ್ಷವೂ ಭರ್ತಿಯಾಗಿದೆಯೋ, ಇಲ್ಲವೋ, ಉಕ್ರೇನ್‍ ನಲ್ಲಿ ಯುದ್ಧದ ಬಿಸಿಯೇರುತ್ತಿರುವುದು ಕಾಣಿಸಿತು. ತಾವು ಬಯಸಿದ ಬದುಕು ಅಲ್ಲಿಯೂ ಸಿಗುತ್ತಿಲ್ಲ ಎಂದು ಗೊತ್ತಾದ ಕೂಡಲೇ ಅವರು ಮತ್ತೆ ಅಲ್ಲಿಂದ ಹೊರಡಲೇಬೇಕಾಯಿತು. ರಷ್ಯಾ ಪಡೆಗಳು ಸ್ಫೋಟಿಸುತ್ತಿದ್ದ ಬಾಂಬುಗಳ ಸದ್ದಿನ ನಡುವೆಯೇ ಅವರು ಆ ದೇಶವನ್ನು ತೊರೆದರು. ಈ ಬಾರಿ ಅವರು ಹೋಗಿ ತಲುಪಿದ್ದು ಪೋಲೆಂಡ್‍ ದೇಶವನ್ನು. ಏಳು ವರ್ಷದ ತಮ್ಮ ಪುಟ್ಟ ಕಂದ ಮಾರ್ವಾ ಟೆಡ್ಡಿ ಬೊಂಬೆಯೊಂದನ್ನು ಎದೆಗವಚಿಕೊಂಡು, ಅಪ್ಪನ ಜರ್ಕಿನ್ ಹಿಡಿದು ನಿಂತಿದ್ದಳು. ಅಪ್ಪನ ಮಾತುಗಳು ಅವಳ ಕಿವಿಗೆ ಬೀಳುತ್ತಿದ್ದವು : ‘ನಾನು ಒಂದು ಯುದ್ಧದ ನಾಡಿನಿಂದ ಓಡಿಬಂದದ್ದು ಮತ್ತೊಂದು ಯುದ್ಧದ ನಾಡಿಗೆ ಎಂದು ಗೊತ್ತಿರಲಿಲ್ಲ.. ನಂದು ಬರೀ ದುರದೃಷ್ಟದ ಪ್ರಯಾಣವಿದು..’ ಎಂದು ಸುದ್ದಿ ಮಾಧ್ಯಮಗಳ ಜೊತೆ ಅಪ್ಪ ಹೇಳುತ್ತಿದ್ದರು. ಜೊತೆಗೆ ಮಗ ಒಮರ್ ಮತ್ತು ಹೆಂಡತಿ ಮಿನಾ ಇದ್ದರು. ಉಕ್ರೇನ್‍ ನಿಂದ ಅವರು ನಾಲ್ವರು ಗಡಿ ಭಾಗಕ್ಕೆ ತೆರಳುವ ಬಸ್ಸು ಹಿಡಿಯಲು 19 ಕಿಲೋಮೀರ್ ನಡೆದು ದಣಿದಿದ್ದರು. ಅವರೊಡನೆ ಸಾವಿರಾರು ಜನರು ಹೀಗೆ ನಡೆದು ದಣಿದಿದ್ದರು. ಎಲ್ಲರ ಬಳಿಯೂ ವಿಭಿನ್ನವಾದ ಕತೆಯಿದೆ. ಯಾರ ಕತೆಯನ್ನೂ ಯಾರೂ ಕೇಳುವ ವ್ಯವಧಾನ ಹೊಂದಿಲ್ಲ. ಕತೆಗಳನ್ನೆಲ್ಲ ನುಂಗಿಕೊಂಡು, ಉಸಿರೊಂದನ್ನೇ ಕೈಯ್ಯಲ್ಲಿ ಹಿಡಿದುಕೊಂಡು ಓಡುವ ಓಟವದು. ಉಕ್ರೇನ್‍ ನಿಂತ ಹೊರಟ ಹೆಚ್ಚಿನವರು ಪಕ್ಕದ ಪೋಲೆಂಡ್, ಹಂಗೇರಿ, ರೊಮೇನಿಯಾಗಳಿಗೆ ತೆರಳಲೆಂದು ಈ ನಡಿಗೆ ಶುರು ಮಾಡಿದ್ದರು. ದೀರ್ಘವಾದ ನಡಿಗೆಯಲ್ಲಿ ಸುಖದುಃಖ ಮಾತನಾಡುವುದಕ್ಕೆ ವ್ಯವಧಾನವಿಲ್ಲ. ದಿನವೊಂದನ್ನು ಕಳೆದರೆ ಸಾಕೆಂಬಂತೆ ಹಾಕುವ ಹೆಜ್ಜೆಗಳವು. ಯುದ್ಧಪೀಡಿತ ಪ್ರದೇಶದ ಗಡಿ ದಾಟಿದ ಮೇಲೆ ಅವರಿಗೆ ಬಸ್ಸಿನ ವ್ಯವಸ್ಥೆ ಲಭ್ಯವಿತ್ತು. ಅವರೆಲ್ಲರ ಕತೆಗಳ ಪ್ರಾತಿನಿಧಿಕ ಕತೆ ರೆಹಮಾನಿ ಅವರದಾಗಿರಬಹುದೇನೋ.

ಅಫ್ಘಾನಿಸ್ಥಾನದಲ್ಲಿ ರೆಹಮಾನಿ ಅವರು ನ್ಯಾಟೋ ಪಡೆಗಳ ಪರವಾಗಿ 18 ವರ್ಷಗಳ ಕಾಲ ಕಾಬೂಲ್‍ ನ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡಿದ್ದರು. ಆ ಬೆಟ್ಟಗುಡ್ಡಗಳ ನಾಡು ತನ್ನ ಊರು ಎಂಬ ಪ್ರೀತಿ ಮೊಳೆತಿತ್ತು. ಆದರೆ ಅಮೆರಿಕದ ಪಡೆಗಳು ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದಾಗ ರೆಹಮಾನಿ ಅವರಿಗೆ ಬೆದರಿಕೆ ಕರೆಗಳು ಬರಲಾರಂಭಿಸಿದವು. ತಾಲಿಬಾನ್ ಆಕ್ರಮಣ ಮಾಡಿದರೆ, ತಮ್ಮ ಮಕ್ಕಳ ಶಿಕ್ಷಣಕ್ಕೆ ಸಂಚಕಾರ ಬರಲಿದೆ ಎಂಬುದು ಅವರಿಗೆ ಅರಿವಾಗಿತ್ತು. ಹಾಗಾಗಿ ಅಪಾಯವನ್ನು ಅರಿತ ಅವರು ಉಕ್ರೇನ್‍ ಗೆ ಹೋಗಿ ನೆಲೆಸಿದ್ದರು. ‘ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಖಾಸಗಿ ಬದುಕು ಉತ್ತಮವಾಗಿತ್ತು. ಒಳ್ಳೆ ಮನೆ ಕಟ್ಟಿಸಿಕೊಂಡಿದ್ದೆ. ಸಂಬಳ, ಕಾರು, ಸೌಕರ್ಯ ಎಲ್ಲವೂ ಚೆನ್ನಾಗಿತ್ತು. ಆದರೆ ಅಲ್ಲಿಂದ ಹೊರಡುವಾಗ ಎಲ್ಲವನ್ನೂ ಮಾರಬೇಕಾಯಿತು. ಈಗ ನೋಡಿದರೆ, ಇಲ್ಲಿ ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ…’ ಎನ್ನುವಾಗ, 40 ವರ್ಷದ ಅವರು ಬಹಳ ದಣಿದಿದ್ದರು. ‘ಆದರೆ ನನ್ನ ಕುಟುಂಬ ಮತ್ತು ನನ್ನ ಪ್ರೀತಿಗಿಂತ ಮುಖ್ಯವಾದುದು ಈ ಜಗತ್ತಿನಲ್ಲಿ ಮತ್ತೇನೂ ಇಲ್ಲ..’ ಎಂದು ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳುತ್ತಿದ್ದರು. ಅವರು ಆ ಸ್ಥಿತಿಯಲ್ಲಿ ಅಫ್ಘಾನಿಸ್ತಾನದಿಂದ ಉಕ್ರೇನ್‍ ಗೆ ಮಾತ್ರ ಹೋಗಿ ನೆಲೆಸುವುದು ಸಾಧ್ಯವಿತ್ತು. ಆದ್ದರಿಂದ ಆ ದೇಶವನ್ನು ಅವರು ಆಯ್ಕೆ ಮಾಡಿಕೊಂಡಿದ್ದರು. ಈಗ ಉಕ್ರೇನ್‍ ನಿಂದ ಲಕ್ಷಗಟ್ಟಲೆ ಜನರ ಜೊತೆಗೆ ಅವರು ವಿಸಾ ಇಲ್ಲದೆಯೇ, ಪೋಲೆಂಡ್‍ಗೆ ತೆರಳುತ್ತಿದ್ದರು. ನಿರಾಶ್ರಿತರಾಗಿ ನೋಂದಣಿ ಮಾಡಿಕೊಳ್ಳಲು ಅವರಿಗೆ 15 ದಿನಗಳ ಅವಧಿ ನೀಡಲಾಗಿತ್ತು. ಪೋಲೆಂಡ್ ದೇಶದ ನಿಯಮಗಳನ್ನು ಅರಿತು, ವರ್ತಿಸಬೇಕಿತ್ತು. ವಲಸಿಗರನ್ನು ಬರಮಾಡಿಕೊಳ್ಳುತ್ತಿದ್ದ ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆಗಳ ಸದಸ್ಯರೇ ಅವರ ಬದುಕಿನಲ್ಲಿ ಸದ್ಯದ ಭರವಸೆಯ ಕಿರಣಗಳಾಗಿದ್ದಾರೆ.

ಅತ್ತ ಉಕ್ರೇನ್‍ ನಲ್ಲಿ ಯುದ್ಧದ ಮುನ್ಸೂಚನೆಗಳು ಗೋಚರಿಸುತ್ತಿರುವಾಗ ಇಲ್ಲಿ ಶಿವಮೊಗ್ಗದ ಬೀದಿಗಳು ಖಾಲಿಯಾಗಿದ್ದ ಚಿತ್ರಗಳನ್ನು ನಾವು ನೋಡುತ್ತಿದ್ದೆವು. ಅಲ್ಲಿಂದ ಮರಳಿದ ವಿದ್ಯಾರ್ಥಿಗಳು ಮತ್ತು ಇತರ ನಿವಾಸಿಗಳು ಈ ಖಾಲಿ ಬೀದಿಗಳನ್ನು ನೋಡಿ ಏನೆಂದುಕೊಳ್ಳಬಹುದು, ಅವರಲ್ಲಿ ನಿಜಕ್ಕೂ ನೆಮ್ಮದಿಯ ಪರಿಪೂರ್ಣ ಭಾವನೆ ನೆಲೆಯಾಗುವುದೇ ಎಂದು ಆಗಾಗ ಅನಿಸುತ್ತಿತ್ತು.

ನೆಲೆ ಕಳೆದುಕೊಳ್ಳುವುದು ಎಂದರೆ ಅದು ಕೇವಲ ಯುದ್ಧದ ದೆಸೆಯಿಂದಾಗಿ ಮಾತ್ರವಲ್ಲ. ಒಬ್ಬರ ದಾಹವು ಮಿತಿ ಮೀರಿದಾಗ ಮತ್ತೊಬ್ಬರ ನೆಲೆಯು ಕುಸಿದು ಹೋಗುವುದು. ಅಭಿವೃದ್ಧಿಯೆಂಬ ದಾಹವು ಹೀಗೆ ಎಷ್ಟೊಂದು ಜನರು ನೆಲೆ ಕಳೆದುಕೊಳ್ಳುವಂತೆ ಮಾಡಿದೆ. ಅದನ್ನೆಲ್ಲ ಅನಿವಾರ್ಯ ಎಂದು ಒಪ್ಪಬೇಕಾಗಿದೆ. ಮರು ಅವಲೋಕನ ಮಾಡುವ ಯಾವುದೇ ಮಾತುಗಳಿಗೆ ಇಂದು ಜಾಗವಿಲ್ಲವಾಗಿದೆ. ಒಂದೂರಿನಿಂದ ಒಂದೂರಿಗೆ ಅಲೆಯುತ್ತಲೇ ಇರುವ ದೊಡ್ಡದೊಂದು ಸಮುದಾಯ ಪ್ರತಿಕ್ಷಣವೂ ನೆಲೆಗಾಗಿ ಓಡುತ್ತಲೇ ಇದೆ.

ಹೀಗೆ ಯುದ್ಧಗಳಾದಾಗ ಸುರಕ್ಷಿತ ಜಾಗವನ್ನು ಅರಿಸಿ ಓಡುವುದು ಒಂದು ವಿಚಾರವಾದರೆ, ನೆಲೆ ಕಳೆದುಕೊಂಡು ಓಡುವವರ ಕತೆಗಳು ಮತ್ತೊಂದೆಡೆ ಧ‍್ವನಿಯಿಲ್ಲದೇ ಅವಸಾನವಾಗುತ್ತಿವೆ. ಬೆಳೆ ಹಾನಿಯೆಂದು ಉದ್ಯೋಗಕ್ಕಾಗಿ ಉತ್ತರದಿಂದ ದಕ್ಷಿಣಕ್ಕೆ ಪಯಣಿಸುವ ಕಾರ್ಮಿಕರು, ಜನಾಂಗೀಯ ಹಿಂಸೆಯನ್ನು ತಾಳದೆ ಓಡುತ್ತಲೇ ಇರುವ ಶೋಷಿತರು, ಅಷ್ಟೇ ಏಕೆ, ಕುಡಿಯಲು ನೀರು ಸಿಗದೇ ಗಂಟುಮೂಟೆ ಕಟ್ಟಿಕೊಂಡು ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳುವವರು. ಈ ಮಹಾ ಓಟವೊಂದರ ಹಿಂದೆ ಅಪ್ಪಚ್ಚಿಯಾಗುವ ಬದುಕುಗಳು ಕೋಟ್ಯಂತರ. ಕಣ್ಣೀರು, ಬಾಲ್ಯದ ಕಾಣದ ಮಕ್ಕಳ ಕತೆಗಳು ಯಾರದ್ದೊ ದಾಹದಲ್ಲಿ ಇಂಗಿ ಹೋಗಿರುತ್ತವೆ.

ಈ ಭೂಮಿಯನ್ನು, ನಿಸರ್ಗವನ್ನು ನಾವು ನಾಳಿನ ಮಕ್ಕಳಿಂದ ಸಾಲ ಪಡೆದಿರುತ್ತೇವೆ ಎಂಬ ಮಾತೊಂದಿದೆ. ಆದರೆ ಸಾಲಪಡೆದಿದ್ದೇವೆ ಎಂಬ ಋಣಭಾವ ಮರೆತಂತಿದೆ.