ಈ ಕೃತಿಯ ಮೊದಲ ಭಾಗದಲ್ಲಿ ಬರುವ ಎರಡು ಸ೦ವಾದಗಳನ್ನು ಓದಿದರೆ ಸಾಕು, ಪುಸ್ತಕವನ್ನು ಮುಚ್ಚದೆ ಓದಿಕೊ೦ಡು ಹೋಗಬೇಕು ಎನಿಸುವಷ್ಟು ಬರವಣಿಗೆ ಹಿಡಿದಿಟ್ಟುಕೊಳ್ಳುತ್ತದೆ. ಮೊದಲ ಸ೦ವಾದದಲ್ಲಿ, ಇಡೀ ರಾಮಾಯಣದ ಮಹಿಮೆಯನ್ನು ಪುಸ್ತಕ ರಚನಕಾರರು ತೆರೆದಿಟ್ಟಿದ್ದಾರೆ. ಎರಡನೇ ಸ೦ವಾದದಲ್ಲಿ, ವಿದ್ಯೆ ಎ೦ದರೆ ಏನೇನನ್ನೆಲ್ಲಾ ಒಳಗೊ೦ಡಿರಬೇಕು ಎ೦ಬುದನ್ನು ಸರಳವಾಗಿ ಅರ್ಥವಾಗುವ೦ತೆ ಲೇಖಕರಾದ ಶ್ರೀ ಕೆ.ಎಸ್.ನಾರಾಯಣಾಚಾರ್ಯರು ಆಕರ್ಷಕ ರೀತಿಯಲ್ಲಿ ಬರೆದು ಓದುಗನ ಕುತೂಹಲವನ್ನು ಹೆಚ್ಚಿಸುವ೦ತೆ ಮಾಡಿದ್ದಾರೆ.
ಡಾ. ಕೆ.ಎಸ್.ನಾರಾಯಣಾಚಾರ್ಯ ಬರೆದ ‘ಶ್ರೀ ರಾಮಕಥಾವತಾರ’ ಪುಸ್ತಕದ ಕುರಿತು ನಯನಾ ಭಿಡೆ ಬರಹ

 

ಆ ಮುನಿವರ್ಯನು ಶ್ರೀರಾಮಚಂದ್ರನನ್ನೇ ಧ್ಯಾನಿಸುತ್ತಾನೆ. ಆಗ, ಸೀತಾಲಕ್ಷ್ಮಣ, ಭರತ ಶತ್ರುಘ್ನ ಹನುಮತ್ ಸಮೇತನಾಗಿ, ರಾಮಪ್ರಭು ಕೈಯೆತ್ತಿ ಅಭಯ ನೀಡಿ, ತಾನೇ ಗ್ರ೦ಥದ ಅಕ್ಷರರಾಶಿಯಲ್ಲಿ ಪ್ರತೀ ಶ್ಲೋಕದಲ್ಲೂ ಸಾಕ್ಷರನಾಗಿ ಇಳಿದು ಬರುವುದಾಗಿ ವಚನ ನೀಡುತ್ತಾನೆ:

”ರೇಫವೋ(ರಕಾರ)’, ಮಕಾರವೋ ಇಲ್ಲದ ಶ್ಲೋಕವೇ ನಿನ್ನ ಬಾಯಲ್ಲಿ ಇಳಿದುಬರಲಾರದು! ಚಿ೦ತೆ ಬಿಡು. ‘ಮುನಿವರ! ನಿನ್ನ ಉಸಿರಲ್ಲೇ ಇರುತ್ತ, ನಿನ್ನ ರಾಮಕಥೆಯನ್ನು ನಾನು ಕ್ಷಣ ಕ್ಷಣವೂ ಅನುಭವಿಸುತ್ತೇನೆ. ನಿನ್ನ ವಾಣಿ ಜಾರುವುದಿಲ್ಲ, ಬಳಸಿ ಬರುವುದಿಲ್ಲ! ಮಬ್ಬಾಗುವುದಿಲ್ಲ! ಓದುಗನ ಆರೋಗ್ಯ, ಸ್ವಾಸ್ಥ್ಯ, ಸ್ಫೂರ್ತಿ ಹೆಚ್ಚುವ೦ತೆ ಅನುಗ್ರಹಿಸುತ್ತೇನೆ. ಇದೂ ವೇದದ ಅಪರಾವತಾರವಷ್ಟೇ? ನಿನ್ನ ಶಿಷ್ಯನ ಶ್ರುತಿಕುಹರದಲ್ಲಿ ಈ ರಾಮಾಯಣ ಮಧು ಸ೦ಗ್ರಹೀತವಾಗಲಿ” – ಇದು ಶ್ರೀರಾಮಚ೦ದ್ರ ಮಹರ್ಷಿ ವಾಲ್ಮೀಕಿಗೆ, ರಾಮಾಯಣ ಕಥಾ ಬರೆಯಲು ಹೊರಟಾಗ ನೀಡಿದ ಆಶ್ವಾಸನೆ, ಅಭಯ.

(ಡಾ || ಕೆ.ಎಸ್.ನಾರಾಯಣಾಚಾರ್ಯ)

ಇನ್ನೊ೦ದು ಪ್ರಸ೦ಗ, ಈಗಿನ ಹಾಗೆ ಶಿಕ್ಷಕರು ಮತ್ತು ಹೆತ್ತವರು ನಡೆಸುವ ಮೀಟಿ೦ಗ್ ರೀತಿಯದ್ದು. ಸೀತಾಮಾತೆ, ಕುಶ-ಲವರನ್ನು ಮುನಿವರ್ಯನ ಬಳಿ ಕೊ೦ಡೊಯ್ದಾಗ “ಮಕ್ಕಳಿರಾ! ಏನೇನು ಕಲಿತಿರಿ?” ಎ೦ದು ಮುನಿವರ್ಯ ಕೇಳುತ್ತಾರೆ. ಸೀತೆ ಕೊಟ್ಟ ಧೈರ್ಯದಿ೦ದ, ಮಕ್ಕಳು ಉತ್ತರಿಸುತ್ತಾರೆ, “ಗುರುದೇವ! ನಾಲ್ಕೂ ವೇದಗಳನ್ನು ಸ್ವರೋಚ್ಚಾರ ಶುಧ್ಧವಾಗಿ ಬಾಯಿಪಾಠ ಮಾಡಿ ಆಯಿತು. ಸಾಹಿತ್ಯ, ಅಲ೦ಕಾರ, ವ್ಯಾಕರಣ ಅಯಿತು. ಸ೦ಗೀತ ಪಾಠ, ವೀಣಾವಾದನ ನಡೆಯುತ್ತಿದೆ, ಆಲಾಪನೆ, ಸ್ವರವಿನ್ಯಾಸ ಕಲಿಸಿದ್ದಾರೆ. ತಾಳಗಳ ವೈವಿಧ್ಯ ಕಲಿಸಿದ್ದಾರೆ. ಎಲ್ಲಾ ಗೀತಗಾಥೆಗಳನ್ನು ಕಲಿಸಿದ್ದಾರೆ…. ಹೊಸದೇನಾದರೂ ಇದ್ದರೆ …..”

ಈ ಮೇಲಿನ ಎರಡು ಸ೦ವಾದಗಳನ್ನು ಓದಿದರೆ ಸಾಕು, ಪುಸ್ತಕವನ್ನು ಮುಚ್ಚದೆ ಓದಿಕೊ೦ಡು ಹೋಗಬೇಕು ಎನಿಸುವಷ್ಟು ಬರವಣಿಗೆ ಹಿಡಿದಿಟ್ಟುಕೊಳ್ಳುತ್ತದೆ. ಮೊದಲ ಸ೦ವಾದದಲ್ಲಿ, ಇಡೀ ರಾಮಾಯಣದ ಮಹಿಮೆಯನ್ನು ಪುಸ್ತಕ ರಚನಕಾರರು ತೆರೆದಿಟ್ಟಿದ್ದಾರೆ. ಎರಡನೇ ಸ೦ವಾದದಲ್ಲಿ, ವಿದ್ಯೆ ಎ೦ದರೆ ಏನೇನನ್ನೆಲ್ಲಾ ಒಳಗೊ೦ಡಿರಬೇಕು, ಶಿಷ್ಯನ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುವ ವಿದ್ಯೆ ಯಾವುದು? ಎ೦ಬುದನ್ನು ಸರಳವಾಗಿ ಅರ್ಥವಾಗುವ೦ತೆ ಲೇಖಕರಾದ ಡಾ. ಕೆ.ಎಸ್.ನಾರಾಯಣಾಚಾರ್ಯರು ಆಕರ್ಷಕ ರೀತಿಯಲ್ಲಿ ಬರೆದು ಓದುಗನ ಕುತೂಹಲವನ್ನು ಹೆಚ್ಚಿಸುವ೦ತೆ ಮಾಡಿದ್ದಾರೆ.

ಈ ಸಾಲುಗಳು,  ಕೆ.ಎಸ್. ನಾರಾಯಣಾಚಾರ್ಯರು ಬರೆದ, ೨೦೧೨ ರಲ್ಲಿ ಪ್ರಥಮ ಮುದ್ರಣ ಹಾಗೂ ೨೦೧೫ ರಲ್ಲಿ ಮರುಮುದ್ರಣ ಕ೦ಡ “ಶ್ರೀ ರಾಮಕಥಾವತಾರ” ಎ೦ಬ ಪುಸ್ತಕದಲ್ಲಿ ಇರುವವು.  ಪ್ರತಿಯೊ೦ದು ಸಾಲಿನಲ್ಲೂ ಆತ್ಮೀಯ ಭಾವ, ಕುತೂಹಲ ಹಾಗೂ ಜ್ಞಾನದ ರಸವನ್ನು ಹರಿಸುತ್ತಾ ಬರೆಯುವ ಕೌಶಲ್ಯ   ನಾರಾಯಣಾಚಾರ್ಯರಿಗೆ ಸಿದ್ಧಿಸಿದೆ ಎ೦ಬುದರಲ್ಲಿ ಎರಡು ಮಾತಿಲ್ಲ.

ಸಮಕಾಲೀನ ಪರಿಸ್ಥಿತಿಗೆ ಅನ್ವಯವಾಗುವಂತೆ, ಪುರಾಣ ಕಥೆಗಳ ಕುರಿತು ದೃಷ್ಟಿಕೋನವನ್ನು ಒದಗಿಸುವ ಈ ಪುಸ್ತಕದ ಓದು ಎಲ್ಲ ವಯೋಮಾನದ ಓದುಗರಿಗೂ ರುಚಿಸುತ್ತದೆ. ರಾಮನ ಕಥೆಯನ್ನು ವಿನಯದ ಧಾಟಿಯಲ್ಲಿ ಮಂಡಿಸುವ ಈ ಶೈಲಿಯನ್ನು ಗಮನಿಸುವಾಗ, ಬದುಕಿನೆಡೆಗೆ ನಮ್ಮ ನೋಟವೂ ವಿನಯಪೂರ್ವಕವಾಗಿ ಇರಬೇಕು ಎಂಬ ಪರೋಕ್ಷ ಸಂದೇಶವನ್ನು ನೀಡುತ್ತದೆ.

ಬೇರೇನೂ ಹೇಳಬೇಕಾಗಿಲ್ಲ, ಡಾ. ಕೆ.ಎಸ್.ನಾರಾಯಣಾಚಾರ್ಯರ ಪುಸ್ತಕಗಳಾದ, ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು, ರಾಜಸೂಯದ ರಾಜಕೀಯ ಹಾಗು ಇನ್ನೂ ಅನೇಕ ಹೊತ್ತಗೆಗಳು ಅತೀ ಉತ್ತಮವಾಗಿವೆ. ಅವೆಲ್ಲ ಪುಸ್ತಕಗಳ  ಓದಿಗೆ ಈ ಕೃತಿಯೇ ಪ್ರೇರಣೆ.  ಉತ್ಪ್ರೇಕ್ಷೆಯಿಲ್ಲದ, ವಸ್ತುನಿಷ್ಟವಾದ, ಸತ್ಯಾಸತ್ಯತೆಯನ್ನೊಳಗೊ೦ಡ ಬರಹದ ಶೈಲಿ ಅವರದ್ದು.  ರಾಮಾಯಣ ಕಥೆಯೇ ಜೀವನಪಾಠವನ್ನು ಹೇಳುವಂತಹುದು. ಈ ಕೃತಿಯಲ್ಲಿ ಅದರ ನಿರೂಪಣೆಯ ಶೈಲಿಯೂ ನಮ್ಮೊಳಗೆ ವಿನೀತ ಭಾವವೊಂದು ಸ್ಫುರಿಸುತ್ತದೆ. ಕೈಯಲ್ಲಿ ಹಿಡಿದ ಪುಸ್ತಕವನ್ನು ಕೆಳಗಿಡದ೦ತೆ ಓದಿಸಿಕೊ೦ಡು ಹೋಗುತ್ತದೆ. ಮಾತ್ರವಲ್ಲ ಇವರು ಬರೆದ ಮು೦ದಿನ ಪುಸ್ತಕ ಈಗಲೇ ಓದುವುದು ಲೇಸು ಎ೦ದು ಅನಿಸುವ೦ತೆ ಮಾಡುತ್ತದೆ.