ಚಿತ್ರಕ್ಕೆ ನಮ್ಮ ಪ್ರವೇಶ, ಗಡಿಯಾರವನ್ನು ತಲೆಯ ಮೇಲಿಟ್ಟುಕೊಂಡಿದ್ದ ಮರದ ಮುಖದ ಅಷ್ಟಾವಕ್ರ ಪ್ರಾಣಿ ಬಾಯಿ ತೆರೆದು ಉಂಟಾದ ಕತ್ತಲೆಯಲ್ಲಿ ಕ್ಯಾಮೆರಾ ಜೂ಼ಮ್-ಇನ್ ಮಾಡುವ ಮೂಲಕ. ಆಗ ಎದುರಾಗುತ್ತದೆ ಒಂದಕ್ಕೊಂದು ಸಂಬಂಧ ಮತ್ತು ಸಾತತ್ಯವಿರದ ಪ್ರಶ್ನೆ ಮತ್ತು ಉತ್ತರಗಳನ್ನು ಹುಡುಕಾಡುವುದೇ ಮನುಷ್ಯನ ಬದುಕು ಎನ್ನುವುದನ್ನು ಟಿ. ಎಸ್. ಎಲಿಯಟ್ ಮತ್ತು ಹೆರ್‌ಬರ್ಗರ್ ಅವರಿಂದ ಉದ್ಧರಿಸಿದ ಸಾಲುಗಳು ಮೂಡಿ, ಅಡ್ಡಾದಿಡ್ಡಿ ಓಡೋಡುತ್ತಲಿರುವ ಜನಜಂಗುಳಿ ಮರೆಯಾಗುತ್ತಿದ್ದಂತೆ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ, ಟೆಲಿಫೋನ್ ಬೂತಿನಲ್ಲಿ ಮಾನಿ ಲೋಲಾಗೆ ಮಾತಾಡುವ ದೃಶ್ಯದಲ್ಲಿ ಘಟನೆಯ ಮೂಲಕ್ಕೆ ಪರಿಚಿತಗೊಳ್ಳುತ್ತೇವೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಜರ್ಮನಿಯ ʻರನ್ ಲೋಲಾ ರನ್ʼ ಸಿನಿಮಾದ ವಿಶ್ಲೇಷಣೆ

ಯಾವುದಾದರೊಂದು ತಾತ್ವಿಕ ಅಂಶವನ್ನು ಸೃಜನಾತ್ಮಕವಾಗಿ ಇತರರಿಗೆ ಮನಗಾಣಿಸಲು ಭಾಷಾ ಮಾಧ್ಯಮವನ್ನು ಯಶಸ್ವಿಯಾಗಿ ಬಳಸಿಕೊಂಡಿರುವ ರೀತಿ ಸಾಮಾನ್ಯವಾದದ್ದೆ ಮತ್ತು ಎಲ್ಲರಿಗೂ ತಿಳಿದಿರುವಂಥಾದ್ದೆ. ಅದರಷ್ಟು ದೀರ್ಘ ಇತಿಹಾಸವಿರದ ದೃಶ್ಯ ಮಾಧ್ಯಮದಲ್ಲಿಯೂ ಅನೇಕ ದಿಗ್ಗಜರಿಂದ ಸಾರ್ಥಕ ಪ್ರಯತ್ನಗಳು ನಡೆಯುತ್ತಲೇ ಇವೆ. ಇಡೀ ಚಿತ್ರದಲ್ಲಿ ಮುಖ್ಯವಾಗಿ ಸುಸಂಬದ್ಧವಾದ ಕಾಲ ಮತ್ತು ಪಾತ್ರಗಳನ್ನು ಒಳಗೊಂಡ ಒಂದು ಕಥಾ ಹಂದರದ ಮೂಲಕ ಇವರುಗಳು ತಮ್ಮ ನಿಲುವನ್ನು ಪ್ರಸ್ತುತಪಡಿಸಿದ್ದಾರೆ. ಇದನ್ನು ಚಿತ್ರರಂಗದ ಪರಿಭಾಷೆಯಲ್ಲಿ `ಲೀನಿಯರ್’ ಎಂದು ಹೆಸರಿಸಲಾಗಿದೆ ಮತ್ತು ಈ ವಿಧಾನವೇ ಪಾರಂಪರಿಕವಾದದ್ದು ಹಾಗೂ ಪ್ರಧಾನವಾದದ್ದು. ಮುಖ್ಯವಾಗಿ ಸುಸಂಬದ್ಧವಾದ ಕಥೆಯಿರದ ಮತ್ತು ಚಿತ್ರದಲ್ಲಿ ಕಾಲ, ಪಾತ್ರ ಹಾಗೂ ಇತರ ಅಂಶಗಳನ್ನು ಅದರ ಆಶಯಕ್ಕೆ ತಕ್ಕ ಹಾಗೆ ವಿಭಜಿಸಿರುವ ಚಿತ್ರಗಳನ್ನು `ನಾನ್ ಲೀನಿಯರ್’ ಎಂದು ಕರೆಯಲ್ಪಟ್ಟಿವೆ. ದೃಶ್ಯ ಮಾಧ್ಯಮವೂ ಸೃಷ್ಟಿಕ್ರಿಯೆಯ ಒಂದು ರೂಪವಾದದ್ದರಿಂದ ಅಭಿವ್ಯಕ್ತಿಯ ನೆಲೆಯಲ್ಲಿ ನಾವೀನ್ಯತೆ ಮತ್ತು ಮನುಷ್ಯನ ಅಂತರಾಳದ ಹಾಗೂ ಭಾವದ ಪದರುಗಳಗೆ ಘನೀರೂಪ ಕೊಡುವ ಪ್ರಯತ್ನ ಹಲವು ದಶಕಗಳಿಂದ ನಡೆಯುತ್ತಿದೆ.

(ಟಾಮ್ ಟಿಕ್ವರ್)

ವ್ಯಕ್ತಿಯ ಜೀವನದಲ್ಲಿ ಯಾವುದೇ ಘಟನೆಗೆ ಆಯಾ ನಿರ್ದಿಷ್ಟ ಕಾಲದಂತರದಲ್ಲಿಯೇ ಸಮಾನಾಂತರ ಘಟನೆಗಳು ಸಂಭವಿಸಲು ಸಾಧ್ಯ. ಇದನ್ನು ಕುರಿತ ಚಿತ್ರ 91 ನಿಮಿಷಗಳ ರನ್ ಲೋಲಾ ರನ್. ಚಿತ್ರದಲ್ಲಿ ಜರ್ಮನಿಯ ಟಾಮ್ ಟಿಕ್ವರ್ ನಿರೂಪಿಸುತ್ತಾನೆ. ಇದರಲ್ಲಿ ಘಟನೆಯೊಂದರ ಮೂರು ಸಾಧ್ಯತೆಗಳ ಮುಖಾಂತರ ಸಂಗತಿಯೊಂದನ್ನು ವಿಶದೀಕರಿಸುವ ಸಫಲ ಪ್ರಯತ್ನವಿದೆ. 1998ರಲ್ಲಿ ನಿರ್ಮಿತವಾದ ಈ ಚಿತ್ರ ಬಾಫ್‌ತಾ ಅಂತಾರಾಷ್ಟ್ರೀಯ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದಲ್ಲದೆ ಇತರ 25 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿರುವುದು ಅದರ ಹಿರಿಮೆಯನ್ನು ಸಾರುತ್ತದೆ. ಮನುಷ್ಯನ ಬದುಕಿಗೆ ನಿರ್ದಿಷ್ಟ ಕೊಂಡಿಗಳಿರದ ಸಾಧ್ಯತೆಯ ತಾತ್ವಿಕ ನಿಲುವನ್ನು ಒಂದೇ ಘಟನೆಯ ಮೂರು ಸಾಧ್ಯತೆಗಳನ್ನು ಅವೇ ಪಾತ್ರಗಳನ್ನು ಬಳಸಿಕೊಂಡು ನಿರ್ದೇಶಕ ಟಾಮ್ ಟಿಕ್ವರ್ ಪ್ರಸ್ತುತಪಡಿಸುತ್ತಾನೆ.

1965ರಲ್ಲಿ ಹುಟ್ಟಿದ ಟಾಮ್ ಟಿಕ್ವರ್ ಚಲನಚಿತ್ರದಲ್ಲಿ ತೀವ್ರಾಸಕ್ತಿ ಹೊಂದಿದ್ದು ಪೀಟರ್ ಪ್ಯಾನ್ ಮತ್ತು ಮರಕಲ್ ಇನ್ ಮ್ಯಾನ್ ಚಿತ್ರಗಳನ್ನು ನೋಡಿದ ನಂತರ. ಅವನು ಅವುಗಳಲ್ಲಿನ ಮಾಂತ್ರಿಕ ಮತ್ತು ಅದ್ಭುತರಮ್ಯ ಗುಣಗಳಿಂದ ಪ್ರಭಾವಿತನಾದ ಮತ್ತು ಸಮಾನಾಂತರ ಪ್ರಪಂಚವೊಂದನ್ನು ಸೃಷ್ಟಿಸಲು ಆ ರೀತಿಯನ್ನೇ ತನ್ನ ಚಿತ್ರಗಳ ನಿರೂಪಣಾ ಕ್ರಮದಲ್ಲಿ ಅಳವಡಿಸಿದ. ಅವನು 1990ರಲ್ಲಿ ತಯಾರಿಸಿದ ಕಿರು ಚಿತ್ರ ʻಬಿಕಾಸ್‌ʼನ ಮೂಲ ವಸ್ತುವಿಗೇ ಆಳ – ವಿಸ್ತಾರಗಳನ್ನು ಅಳವಡಿಸಿ `ರನ್ ಲೋಲಾ ರನ್’ ಚಿತ್ರ ನಿರ್ಮಿಸಿದ. ತನ್ನ ಗೆಳತಿಯ ಸಹಯೋಗದಿಂದ ನಿರ್ಮಿಸಿದ ʻದ ಪ್ರಿನ್ಸೆಸ್ ಅಂಡ್ ದ ವಾರಿಯರ್ʼ ಚಿತ್ರ ವೆನಿಸ್ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಅವನ ಆತ್ಮ ವಿಶ್ವಾಸವನ್ನು ಹೆಚ್ಚಿಸಿತು. ಅಲ್ಲದೆ ಆ ಚಿತ್ರ ಇತರ ಮೂವತ್ತು ದೇಶಗಳಲ್ಲಿ ಪ್ರದರ್ಶಿತಗೊಂಡಿದ್ದು ಅವನಿಗೆ ವಿಶೇಷವೆನಿಸಿತು. ಅನಂತರ ಸಮಾನ ಆಸಕ್ತಿ ಮತ್ತು ಅಭಿರುಚಿಯ ಗೆಳೆಯನ ಜೊತೆಗೂಡಿ ಚಲನಚಿತ್ರ ನಿರ್ಮಾಣ ಸಂಸ್ಥೆಯೊಂದನ್ನು ಪ್ರಾರಂಭಿಸಿ 1990ರಿಂದ ಇಲ್ಲಿಯ ತನಕ ಹನ್ನೊಂದು ಚಿತ್ರಗಳನ್ನು ನಿರ್ಮಿಸಿದ್ದಾನೆ. ಅನೇಕ ಅಂತಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಅವನ ಚಿತ್ರಗಳಲ್ಲಿ ʻಹೆವೆನ್ʼ, ʻಪರ್‌ಫ್ಯೂಮ್ ಮತ್ತು ವಿಂಟರ್ ಸ್ಲೀರಸ್ʼ ಮಾನ್ಯತೆ ಪಡೆದಿವೆ. ಸಂಗೀತದಲ್ಲಿಯೂ ಆಸಕ್ತಿ ಇರುವ ಅವನು ಇನ್ನಿಬ್ಬರು ಗೆಳೆಯರೊಡನೆ ಅದಕ್ಕೆಂದೇ ಇನ್ನೊಂದು ಸಂಸ್ಥೆಯನ್ನು ಪ್ರಾರಂಭಿಸಿದ್ದಾನೆ.

ʻರನ್‌ ಲೋಲಾ ರನ್‌ʼ ಚಿತ್ರದಲ್ಲಿ ಜರುಗುವ ಘಟನೆಯ ಚೌಕಟ್ಟು ಇಷ್ಟು ಮಾತ್ರ. ಆಕಸ್ಮಿಕವಾಗಿ ಕಳೆದುಕೊಂಡ ಭಾರಿ ಮೊತ್ತದ ಹಣವನ್ನು ನಿರ್ದಿಷ್ಟ ಸಮಯದಲ್ಲಿ ಒಗ್ಗೂಡಿಸದಿದ್ದರೆ ತಾನು ಅಂಗಡಿಯೊಂದರ ಲೂಟಿ ಮಾಡಿ ಅಪಾಯದಿಂದ ಪಾರಾಗಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಮಾನಿ ಗೆಳತಿ ಲೋಲಾಳ ಸಹಾಯವನ್ನು ಅಪೇಕ್ಷಿಸುತ್ತಾನೆ. ಅದನ್ನು ಒಪ್ಪಿಕೊಂಡು ಪ್ರಯತ್ನಿಸುವ ಲೋಲಾಳ ಕಾರ್ಯಸಾಧ್ಯತೆಯ ಮೂರು ರೀತಿಗಳು ತೆರೆದುಕೊಳ್ಳುತ್ತವೆ. ಒಂದರಲ್ಲಿ ಲೋಲಾಳ ಸಾವು, ಇನ್ನೊಂದರಲ್ಲಿ ಮಾನಿಯ ಸಾವು ಮತ್ತು ಮತ್ತೊಂದರಲ್ಲಿ ಇಬ್ಬರಿಗೂ ಹಿತವೆನಿಸಿ ಸಮಸ್ಯೆಯ ಪರಿಹಾರ ಒದಗುತ್ತದೆ.

ಚಿತ್ರಕ್ಕೆ ನಮ್ಮ ಪ್ರವೇಶ, ಗಡಿಯಾರವನ್ನು ತಲೆಯ ಮೇಲಿಟ್ಟುಕೊಂಡಿದ್ದ ಮರದ ಮುಖದ ಅಷ್ಟಾವಕ್ರ ಪ್ರಾಣಿ ಬಾಯಿ ತೆರೆದು ಉಂಟಾದ ಕತ್ತಲೆಯಲ್ಲಿ ಕ್ಯಾಮೆರಾ ಜೂ಼ಮ್-ಇನ್ ಮಾಡುವ ಮೂಲಕ. ಆಗ ಎದುರಾಗುತ್ತದೆ ಒಂದಕ್ಕೊಂದು ಸಂಬಂಧ ಮತ್ತು ಸಾತತ್ಯವಿರದ ಪ್ರಶ್ನೆ ಮತ್ತು ಉತ್ತರಗಳನ್ನು ಹುಡುಕಾಡುವುದೇ ಮನುಷ್ಯನ ಬದುಕು ಎನ್ನುವುದನ್ನು ಟಿ. ಎಸ್. ಎಲಿಯಟ್ ಮತ್ತು ಹೆರ್‌ಬರ್ಗರ್ ಅವರಿಂದ ಉದ್ಧರಿಸಿದ ಸಾಲುಗಳು ಮೂಡಿ, ಅಡ್ಡಾದಿಡ್ಡಿ ಓಡೋಡುತ್ತಲಿರುವ ಜನಜಂಗುಳಿ ಮರೆಯಾಗುತ್ತಿದ್ದಂತೆ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ, ಟೆಲಿಫೋನ್ ಬೂತಿನಲ್ಲಿ ಮಾನಿ ಲೋಲಾಗೆ ಮಾತಾಡುವ ದೃಶ್ಯದಲ್ಲಿ ಘಟನೆಯ ಮೂಲಕ್ಕೆ ಪರಿಚಿತಗೊಳ್ಳುತ್ತೇವೆ. ಇಡೀ ಚಿತ್ರದ ಟೋನ್ ಮತ್ತು ಅದರ ನೆಲೆಯ ಸ್ವರೂಪವನ್ನು ಬಿಂಬಿಸುವ ಎಲ್ಲ ಅಂಶಗಳನ್ನು ಈ ದೃಶ್ಯದಲ್ಲೇ ಕಾಣುತ್ತೇವೆ. ಮಾನಿ ತಾನು ಒಂದು ಲಕ್ಷ ಮಾರ್ಕ್ಸ್ ಹಣವನ್ನು ಟ್ರೇನ್‌ನಲ್ಲಿ ಆಕಸ್ಮಿಕವಾಗಿ ಕಳೆದುಕೊಂಡು ಇನ್ನು ಇಪ್ಪತ್ತು ನಿಮಿಷಗಳಲ್ಲಿ ಅದನ್ನು ಹೇಗಾದರೂ ಸರಿಯೆ ತಲುಪಿಸದಿದ್ದರೆ ತನಗುಂಟಾಗಲಿರುವ ಅಪಾಯದಿಂದ ಪಾರಾಗಲು ಅಂಗಡಿಯನ್ನು ಲೂಟಿ ಮಾಡುವ ಅನಿವಾರ್ಯ ಪರಿಸ್ಥಿತಿಯನ್ನು ವಿವರಿಸಿದ್ದಕ್ಕೆ ಲೋಲಾ ತಾನು ಬರುವ ತನಕ ಕಾಯಬೇಕೆಂದು ತಿಳಿಸುತ್ತಲೇ ಆಕಸ್ಮಿಕವಾಗಿ ತನ್ನ ಮೊಪೆಡ್ ಕಳೆದುಕೊಂಡಿರುವುದನ್ನೂ ಹೇಳುತ್ತಾಳೆ. ಅವಳು ಅಂಗಡಿಯೊಂದರಲ್ಲಿ ಏನನ್ನೋ ಕೊಳ್ಳುವುದರಲ್ಲಿದ್ದಾಗ ದಾರಿಹೋಕನೊಬ್ಬನಿಂದ ಅವಳ ಮೊಪೆಡ್ ಕಳವಾಗುವುದರ ಫ್ಲಾಶ್ ಬ್ಯಾಕನ್ನು ಕಪ್ಪು-ಬಿಳುಪು ಚಿತ್ರೀಕರಣದ ದೃಶ್ಯಗಳಲ್ಲಿ ಕಾಣುತ್ತೇವೆ. ಇಬ್ಬರಲ್ಲೂ ಭಾವತೀವ್ರತೆ ಹಂತ ಹಂತವಾಗಿ ಮೇಲೇರುವ ಪರಿಯನ್ನು ಇಡೀ ಚಿತ್ರದ ಯೋಜನೆ ಎನ್ನುವಂತೆ ಹೆಚ್ಚಿನ ಹತ್ತಿರದಿಂದ ಮತ್ತು ಮೇಲಿನಿಂದ ನಿರ್ದೇಶಕ ಟಾಮ್ ಟಿಕ್ವರ್ ಚಿತ್ರಿಸಿದ್ದಾನೆ.

ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತ ಪರಿಸ್ಥಿತಿ ಮತ್ತು ಭಾವದೊತ್ತಡಕ್ಕೆ ಸಿಲುಕಿ ಹಠಾತ್ತನೆ ತಾನು ನಿಭಾಯಿಸಲು ಪ್ರಯತ್ನಿಸುವುದಾಗಿ ಅರಚುತ್ತಾಳೆ. ಅದರ ಅಬ್ಬರದ ಏರುಮಟ್ಟಕ್ಕೆ ಟೇಬಲ್ ಮೇಲಿನ ಗ್ಲಾಸುಗಳು ಪುಡಿಪುಡಿಯಾಗುತ್ತವೆ. ಇದನ್ನು ಉದ್ದೇಶಿತ ಪರಿಣಾಮಕ್ಕಾಗಿ ಉಪಯೋಗಿಸಿದ ಅತಿವಾಸ್ತವರೂಪ ಎನ್ನಬಹುದಾದರೆ ಸಂಭಾಷಣೆ ಮುಗಿದ ನಂತರ ಅವಳಿಗಿರುವ ಸಮಯದ ಮಿತಿಯನ್ನು ಸೂಚಿಸುವಂತೆ ಟೆಲಿಫೋನ್ ರಿಸೀವರ್ ಅದರ ಸ್ಥಳದಲ್ಲಿಡದೆ ಮೇಲಕ್ಕೆಸೆಯುವ ರೀತಿ ಮತ್ತು ನಿಧಾನ ಗತಿಯಲ್ಲಿ ಅದು ಸ್ವಸ್ಥಾನ ತಲುಪುವ ವಿಧಾನದಿಂದ ನಿರ್ದೇಶಕ ಶೈಲೀಕೃತಗೊಳಿಸಿದ್ದು ಕಂಡು ಬರುತ್ತದೆ. ತಕ್ಷಣ ಅವಳು ಅವಸರದಿಂದ ಹಜಾರ ದಾಟಿ ಮುಂದೆ ಹೋಗುತ್ತಿದ್ದಂತೆ ಕೆಳಗಿಳಿದು ಮುಂದಿನ ಗೇಟು ತಲುಪುವ ತನಕ ಹಾಜಾರದಲ್ಲಿದ್ದ ಟೀವಿಯಲ್ಲಿ ಅವಳೇ ಕಾರ್ಟೂನ್ ಆಗಿ ಪರಿವರ್ತಿತಗೊಂಡು ಧಾವಿಸುವುದನ್ನು ಕಾಣುತ್ತೇವೆ. ಇಲ್ಲಿ ಚಿತ್ರೀಕರಣ ಮತ್ತೆ ಶೈಲೀಕೃತವಾಗಿದೆ. ಅನಂತರ ಅವಳು ಗೇಟು ದಾಟಿ ಓಡುತ್ತ ಓಡುತ್ತ ಹೋಗುತ್ತಾಳೆ. ಚಿತ್ರದ ಇಲ್ಲಿಯ ತನಕದ ಭಾಗ ಮುಂದುವರಿಸುವ ಒಂದೇ ಘಟನೆಯ ಮೂರು ರೀತಿಗಳಿಗೂ ಸಮಾನ. ಹಣಕ್ಕಾಗಿ ಅಪ್ಪನ ಬಳಿಗೆ ಹೋಗಬೇಕು ಎಂದು ನಿರ್ಧರಿಸಿ ಓಡುತ್ತಾಳೆ.

ಅವಳು ಓಡುತ್ತಿರುತ್ತಾಳೆ: ಫುಟ್‌ಪಾತಿನಷ್ಟು ಇಕ್ಕಟ್ಟಾದ ಸ್ಥಳದಲ್ಲಿ, ಕಾರುಗಳೋಡುವ ರಸ್ತೆಗಳನ್ನು ದಾಟಿ, ಜನರಿರುವಲ್ಲಿ- ಇಲ್ಲದಿರುವಲ್ಲಿ ಹೀಗೆ. ಈ ಹೆಚ್ಚಿನ ಭಾಗ ಲೋಲಾಳ ಓಟವನ್ನು ಪಕ್ಕದಿಂದ ಚಿತ್ರಿಸಲಾಗಿದೆ. ಮೊದಲನೆ ರೀತಿಯಲ್ಲಿ ಲೋಲಾ ಇಕ್ಕಟ್ಟಾದ ಫುಟ್‌ಪಾತ್‌ನಲ್ಲಿ ಓಡುತ್ತಿರುವಾಗ ಮಾನಿಯ ಹಣದ ಬ್ಯಾಗ್ ಹಿಡಿದುಕೊಂಡಿದ್ದ ಮನುಷ್ಯನನ್ನು ದಾಟಿ ಹೋಗುತ್ತಾಳೆ. ಅಲ್ಲಿಂದ ಮುಂದೆ ಮಗುವಿರುವ ತಳ್ಳುಗಾಡಿ ನೂಕಿಕೊಂಡು ಹೋಗುತ್ತಿರುವ ಹೆಂಗಸೊಬ್ಬಳಿಗೆ ಲೋಲಾ ಡಿಕ್ಕಿ ಹೊಡೆದು ಆಕೆ ಸಿಟ್ಟಿನಿಂದ ಕೂಗುತ್ತಿದ್ದಂತೆ ಮುಂದೆ ಓಡುತ್ತಾಳೆ. ಅನಿರೀಕ್ಷಿತಕ್ಕೆ ಒಳಗಾದ ಆಕೆ ಮುಂದಿನ ಕೆಲವು ನಿಮಿಷಗಳಲ್ಲಿ ಈ ಘಟನೆ ಉಂಟುಮಾಡಬಹುದಾದ ಬೆಳವಣಿಗೆಯನ್ನು ಕುರಿತ ಭವಿಷ್ಯವನ್ನು ಕಲ್ಪಿಸಿಕೊಳ್ಳುತ್ತಾಳೆ. ಅವಳು ಕಲ್ಪಿಸಿಕೊಳ್ಳುವುದು ಮಾತಿಲ್ಲದ ಸ್ಥಿರ ಚಿತ್ರಗಳ ರೂಪದಲ್ಲಿದೆ. ಮೊದಲನೆಯ ರೀತಿಯಲ್ಲಿ ಮನೆಯವರೊಂದಿಗೆ ಹೇಳುವುದು ಮುಗಿದ ನಂತರ ಅವಳು ಸತ್ತು ಹೋಗುತ್ತಾಳೆ. ಮುಂದುವರಿದು ಫುಟ್ ಪಾತ್‌ನಲ್ಲಿ ಅವಳು ಓಡುತ್ತಿರುವಾಗ ರಸ್ತೆಯ ಬದಿಯಲ್ಲೇ ಒಬ್ಬ ಸೈಕಲ್ ತುಳಿಯುತ್ತ ಹತ್ತಿರ ಬರುತ್ತಾನೆ. ಪರಸ್ಪರ ನೋಟದ ನಂತರ ಅಗ್ಗದ ಬೆಲೆಗೆ ಸೈಕಲ್ ಬೇಕೇ ಎಂದು ಕೇಳುತ್ತಾನೆ. ಲೋಲಾ ಬೇಡವೆಂದು ಪಕ್ಕಕ್ಕೆ ತಿರುಗಿ ಹೋದ ನಂತರ ಎತ್ತಲೋ ನೋಡುತ್ತ ಸೈಕಲ್ ಹುಡುಗ ಹುಡುಗಿಯೊಬ್ಬಳಿಗೆ ಡಿಕ್ಕಿ ಹೊಡೆಯುತ್ತಾನೆ ಮತ್ತು ಮರುಕ್ಷಣದಲ್ಲಿಯೇ ಇದು ಉಂಟುಮಾಡಬಹುದಾದ ಭವಿಷ್ಯವನ್ನು ಕಲ್ಪಿಸಿಕೊಳ್ಳುತ್ತಾನೆ. ಮತ್ತೆ ಸ್ಥಿರ ಚಿತ್ರಗಳ ಮಾಲಿಕೆಯಲ್ಲಿ ಆ ಹುಡುಗಿ ತನ್ನನ್ನು ಮದುವೆಯಾದಂತೆ ಕನಸುತ್ತಾನೆ.

ಆಕಸ್ಮಿಕವಾಗಿ ಕಳೆದುಕೊಂಡ ಭಾರಿ ಮೊತ್ತದ ಹಣವನ್ನು ನಿರ್ದಿಷ್ಟ ಸಮಯದಲ್ಲಿ ಒಗ್ಗೂಡಿಸದಿದ್ದರೆ ತಾನು ಅಂಗಡಿಯೊಂದರ ಲೂಟಿ ಮಾಡಿ ಅಪಾಯದಿಂದ ಪಾರಾಗಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಮಾನಿ ಗೆಳತಿ ಲೋಲಾಳ ಸಹಾಯವನ್ನು ಅಪೇಕ್ಷಿಸುತ್ತಾನೆ. ಅದನ್ನು ಒಪ್ಪಿಕೊಂಡು ಪ್ರಯತ್ನಿಸುವ ಲೋಲಾಳ ಕಾರ್ಯಸಾಧ್ಯತೆಯ ಮೂರು ರೀತಿಗಳು ತೆರೆದುಕೊಳ್ಳುತ್ತವೆ.

ಈಗ ದೃಶ್ಯ ಮಾನಿ ಕಡೆ ಹೊರಳಿ ಇನ್ನೊಂದು ಸ್ಥಳದಲ್ಲಿ ಯಾರಿಗೋ ಫೋನ್ ಮಾಡಿ ಬಾಗಿಲು ತೆಗೆದು ಹೊರಗೆ ಬಂದು ಹೊರಗೆ ನಿಂತಿದ್ದ ಕುರುಡಿಗೆ ಫೋನ್ ಕಾರ್ಡ್ ಕೊಡಲು ಕೈ ಚಾಚುತ್ತಾನೆ. ಆದರೆ ಅವಳು ಕೇಳಿಸಿಕೊಳ್ಳದಂತೆ ಹೋದದ್ದು ಮುಖಭಾವದಿಂದ ನಮಗೆ ತಿಳಿಯುತ್ತದೆ. ಮುಂದೆ ಓಡುವ ಲೋಲಾ ತನ್ನ ತಂದೆ ಕೆಲಸ ಮಾಡುವ ಬ್ಯಾಂಕ್‌ಗೆ ಏದುಸಿರಿನಿಂದ ಬರುತ್ತಾಳೆ. ಅಲ್ಲಿ ಲಿಫ್ಟ್ಟ್ ಆಪರೇಟರ್ ವಿಶ್ವಾಸದಿಂದ ಮಾತನಾಡಿಸುತ್ತಾನೆ. ಕಾರಿಡಾರಿನಲ್ಲಿ ಮತ್ತೊಬ್ಬಳಿಗೆ ಡಿಕ್ಕಿ ಹೊಡೆದರೆ ಆಕೆ ತಾನು ಸತ್ತು ಹೋಗಿ ತನ್ನನ್ನು ಸ್ಮಶಾನದಲ್ಲಿ ಹುಗಿಯುತ್ತಿರುವ ಭವಿಷ್ಯವನ್ನು ಕಲ್ಪಿಕೊಳ್ಳುತ್ತಾಳೆ. ದಾರಿಯಲ್ಲಿ ಮತ್ತು ಕಾರಿಡಾರಿನಲ್ಲಿ ಡಿಕ್ಕಿ ಹೊಡೆದವರಿಬ್ಬರಿಗೂ ಸಾವಿನ ಕಲ್ಪನೆ ಬಂದದ್ದರ ಮೂಲಕ ಅದು ಮುಂದೆ ಲೋಲಾಳಿಗೂ ಅನ್ವಯಿಸುವುದನ್ನು ಸೂಚಿಸಿರುವುದು ಅನನ್ಯವಾಗಿದೆ. ಇದರಿಂದಾಗಿ ಅವು ಕೇವಲ ಆಕಸ್ಮಿಕಗಳಾಗುವುದಿಲ್ಲ. ಅವಳ ಅಪ್ಪ ತನ್ನ ಛೇಂಬರಿನಲ್ಲಿ ಆಫೀಸಿನ ಹೆಂಗಸೊಬ್ಬಳ ಜೊತೆ ಮದುವೆಯಾಗುವ ನಿರ್ಧಾರದ ಬಗ್ಗೆ ಮಾತನಾಡುತ್ತಿರುತ್ತಾನೆ. ಬಾಗಿಲು ಬಡಿಯದೆ ಒಳಗೆ ಬಂದ ಲೋಲಾ ಅವನ ಮಗಳೆಂದು ಆಕೆಗೆ ತಿಳಿಯುತ್ತದೆ. ಲೋಲಾಳ ಅಪ್ಪನಿಗೆ ಮಗಳ ಪ್ರೇಮಿಯ ಬಗ್ಗೆ ಮೊಟ್ಟಮೊದಲಿಗೆ ತಿಳಿದು ಹಣದ ತುರ್ತಿನ ಬಗ್ಗೆ ನಿರ್ಲಕ್ಷ್ಯ ತೋರುತ್ತಾನೆ. ಆಗ ಹತ್ತಿರದಲ್ಲಿ ಕಾಣುವ ಲೋಲಾ ಭಾವಾವೇಶಗೊಂಡು ಅಬ್ಬರಿಸಿದಾಗ ಕಿಟಕಿಯ ಗಾಜು ಪುಡಿಪುಡಿಯಾಗುತ್ತದೆ. ಅಲ್ಲಿಂದ ಮುಂದೆ ಲೋಲಾ ಓಡುತ್ತಿರುತ್ತಾಳೆ. ಅಲ್ಲೊಂದು ಕಡೆ ಕೆಂಪು ಬಣ್ಣದ ವ್ಯಾನೊಂದು ರಸ್ತೆಯಲ್ಲಿ ಅಗಾಧ ಗಾತ್ರದ ಗಾಜನ್ನು ತೆಗೆದುಕೊಂಡು ಹೋಗುತ್ತಿರುವವರು ಅಡ್ಡ ಬಂದದ್ದರಿಂದ ನಿಲ್ಲುತ್ತದೆ. ಅವರಿಗೆ ತೀರ ಹತ್ತಿರವಾಗಿ ಲೋಲಾ ರಸ್ತೆ ದಾಟುತ್ತಾಳೆ.

ಮತ್ತೆ ದೃಶ್ಯ ಮಾನಿಯ ಕಡೆ ಹೊರಳಿದಾಗ ತವಕದಿಂದ ಕಾಯುತ್ತಿರುವ ಅವನು ಗಡಿಯಾರದ ಮುಳ್ಳು ಹನ್ನೆರಡಕ್ಕೆ ಬಂದಾಗ ಟೆಲಿಫೋನ್ ಬೂತಿನಿಂದ ಹೊರಗೆ ಬಂದು ಲೂಟಿ ಮಾಡುವುದಕ್ಕೆ ಎದುರಿನ ಸೂಪರ್ ಮಾರ್ಕೆಟ್‌ಗೆ ಹೋಗುತ್ತಾನೆ. ಅಷ್ಟು ದೂರದಲ್ಲಿ ಬೇಡ, ಬೇಡವೆಂದು ಲೋಲಾ ಆತಂಕದಿಂದ ಹೇಳುತ್ತ ಓಡಿ ಬರುತ್ತಾಳೆ. ಆದರೆ ಒಳಗೆ ಹೋದ ಮಾನಿ ತಕ್ಷಣ ಕಾರ್ಯ ಪ್ರವೃತ್ತನಾಗುತ್ತಾನೆ. ಆ ವೇಳೆಗೆ ಅಲ್ಲಿಗೆ ಬರುವ ಲೋಲಾ ಹೆಚ್ಚು ಸಮಯ ತೆಗೆದುಕೊಳ್ಳದೆ ಲೂಟಿಯಲ್ಲಿ ಸಹಾಯ ಮಾಡುತ್ತಾಳೆ. ಹಣವಿರುವ ಬ್ಯಾಗ್ ಹಿಡಿದು ಹೊರಗೆ ಬಂದ ಕೂಡಲೆ ಓಡಿ ಹೋಗಲು ಸಾಧ್ಯವಾಗದ ಹಾಗೆ ಅಷ್ಟು ದೂರದಲ್ಲಿ ಎರಡೂ ದಿಕ್ಕಿನಲ್ಲಿ ಪೋಲೀಸರು ಅಡ್ಡಗಟ್ಟಿರುವುದನ್ನು ಕಂಡು ಮಾನಿ, ಲೋಲಾರಿಗೆ ನಿರಾಸೆ ಮಡುಗಟ್ಟುತ್ತದೆ. ಈಗ ಹಿನ್ನೆಲೆ ಸಂಗೀತ ಸ್ಥಬ್ದವಾಗುತ್ತದೆ. ಬೇರೆ ದಾರಿ ಕಾಣದೆ ಮಾನಿ ಹಣವಿರುವ ಬ್ಯಾಗನ್ನು ಮೇಲಕ್ಕೆ ತೂರಿ ಎಸೆಯುತ್ತಾನೆ. ಮರುಕ್ಷಣದಲ್ಲಿ ಪೋಲೀಸರ ಗುಂಡೇಟಿನಿಂದ ಲೋಲಾ ಕುಸಿಯುತ್ತಾಳೆ. ಸಾಯುವ ಮುಂಚಿನ ಅವಳ ಭಾವನೆಗಳನ್ನು ಬಿಂಬಿಸುವಂತೆ ಕೆಂಪು ಛಾಯೆಯ ದೃಶ್ಯದಲ್ಲಿ ಅವರಿಬ್ಬರ ಆಪ್ತ ಗಳಿಗೆಯಲ್ಲಿ ಅವನಿಗೆ ತನ್ನನ್ನು ಕುರಿತು ಇರುವ ಪ್ರೇಮಭಾವದ ಬಗ್ಗೆ ತಿಳಿದುಕೊಳ್ಳುತ್ತಾಳೆ.
ಇದೇ ಘಟನೆಯ ಇನ್ನೊಂದು ರೂಪದಲ್ಲಿ ಲೋಲಾ ಓಡುವುದಕ್ಕೆ ಪ್ರಾರಂಭಿಸುವ ತನಕ ಸಣ್ಣ ವ್ಯತ್ಯಾಸಗಳೊಂದಿಗೆ ಎಲ್ಲವೂ ಮೊದಲಿನಂತೆಯೇ ಜರುಗುತ್ತದೆ.

ದೃಶ್ಯಗಳ ಚಿತ್ರೀಕರಣದಲ್ಲಿ ಸರಿಸುಮಾರಾಗಿ ಮೊದಲಿನ ರೀತಿಯಲ್ಲಿಯೇ ಇರುವುದು ಕಂಡುಬರುತ್ತದೆ. ಮಗುವಿನ ಜೊತೆಗಿದ್ದಾಕೆಗೆ ಡಿಕ್ಕಿ ಹೊಡೆದ ನಂತರ ಆಕೆ ತಾನು ಲಾಟರಿಯಲ್ಲಿ ಬಹುಮಾನ ಗಳಿಸಿದ್ದಾಗಿ ಕನಸುತ್ತಾಳೆ. ಸೈಕಲ್ ಹುಡುಗನಿಗೆ ಅದು ಕದ್ದದ್ದಾಗಿರಬೇಕು ಎನ್ನುತ್ತಾಳೆ. ಅವನು ದಿಕ್ಕಿಲ್ಲದ ಪರದೇಶಿಯಂತೆ ಗಡ್ಡ ಬಿಟ್ಟಿಕೊಂಡು ಎಲ್ಲೋ ಬಿದ್ದುಕೊಂಡಂತೆ ತನ್ನನ್ನೇ ತಾನು ಕಾಣುತ್ತಾನೆ. ದಾರಿಯಲ್ಲಿ ಲೋಲಾ ಮಾನಿಯ ದುಡ್ಡಿನ ಬ್ಯಾಗ್‌ನ್ನು ಹೊಂದಿದ್ದ ಮನುಷ್ಯನಿಗೆ ಡಿಕ್ಕಿ ಹೊಡೆಯುತ್ತಾಳೆ. ತಂದೆಯ ಬ್ಯಾಂಕ್ ಆಫೀಸಿನ ಲಿಫ್ಟ್ ಆಪರೇಟರ್‌ನ ಮಾತು ಇನ್ನಷ್ಟು ವಾತ್ಸಲ್ಯಪೂರ್ಣವಾಗಿರುತ್ತದೆ. ತಂದೆಯ ಛೇಂಬರಿನಲ್ಲಿ ಕಂಡ ಹೆಂಗಸು ಯಾರೆಂದು ಕೇಳಿದಾಗ ಅವನಿಗೆ ಸಿಟ್ಟು ಬಂದು ಹಣ ಕೊಡುವ ವಿಷಯದಲ್ಲಿ ತಾನೇನೂ ಮಾಡಲಾರೆ ಎನ್ನುತ್ತಾನೆ. ಅವಳಿಗೆ ರೋಷ ಹೆಚ್ಚುವುದಕ್ಕೆ ತಾನೇನೂ ಅವಳ ನಿಜವಾದ ತಂದೆಯಲ್ಲ ಎಂದು ಹೇಳುವುದೂ ಕಾರಣವಾಗುತ್ತದೆ. ಹೊರಗೆ ಬಂದ ಅವಳು ಸಹಾನುಭೂತಿ ತೋರಿಸುವ ಲಿಫ್ಟ್ ಆಪರೇಟರ್‌ನ ಪಿಸ್ತೂಲನ್ನು ಎಗರಿಸಿಕೊಂಡು ಪುನಃ ತಂದೆಯ ಬಳಿ ಹೋಗಿ ಅದರಿಂದ ಬೆದರಿಸಿ ಹಣವನ್ನು ಕೊಡುವುದಕ್ಕೆ ಒತ್ತಾಯಿಸುತ್ತಾಳೆ. ಹಣದ ಬ್ಯಾಗ್ ತೆಗೆದುಕೊಂಡು ಹೊರಗೆ ಬರುವ ಅವಳಿಗೆ ಆ ವೇಳೆಗಾಗಲೇ ಅಲ್ಲಿ ಪೋಲಿಸರು ಬಂದಿರುವುದು ಬೇರೊಬ್ಬನ ಸಲುವಾಗಿ ಎಂದು ಅರಿವಾಗುತ್ತದೆ. ಅವಳು ರಸ್ತೆಯನ್ನು ದಾಟುವುದಕ್ಕೆಂದು ನಿಂತಾಗ ಸಾಗಿಸುತ್ತಿದ್ದ ಗಾಜಿನ ಶೀಟ್‌ಗೆ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದು ಪುಡಿಪುಡಿಯಾಗುತ್ತದೆ. ಸೂಪರ್ ಮಾರ್ಕೆಟ್ ಕಡೆ ಹೆಜ್ಜೆ ಹಾಕಲು ಸಿದ್ಧನಾದ ಮಾನಿ ಲೋಲಾಳ ಕೂಗು ಕೇಳಿ ಅವಳ ಕಡೆ ಹೋಗಲು ರಸ್ತೆ ದಾಟುವಾಗ ಅದೇ ಆಂಬ್ಯುಲೆನ್ಸ್ ಡಿಕ್ಕಿ ಹೊಡೆಯುತ್ತದೆ. ಸಾಯುವ ಮುಂಚಿನ ಕ್ಷಣಗಳಲ್ಲಿ ಲೋಲಾಳೊಂದಿಗೆ ನಡೆಯುವ ಸಂಭಾಷಣೆಯಲ್ಲಿ ತಾನು ಸತ್ತರೆ ಬೇರೊಬ್ಬನ ಜೊತೆ ಇರುತ್ತೀಯ ಎಂದು ಕೇಳಿದ್ದಕ್ಕೆ ಅವಳು ನೀನಿನ್ನೂ ಸತ್ತಿಲ್ಲವಲ್ಲ ಎಂದು ಹೇಳುವುದರೊಂದಿಗೆ ಮುಗಿಯುತ್ತದೆ.

ಈ ಘಟನೆಯ ಮತ್ತೊಂದು ರೂಪದಲ್ಲಿ ಮುಂಚಿನಂತೆಯೇ ಜರುಗಿ ಮಗುವಿನಾಕೆಗೆ ಡಿಕ್ಕಿ ಹೊಡೆದ ನಂತರ ಆಕೆ ಮಗುವಿಗಾಗಿ ಶೋಕಿಸುತ್ತಾಳೆ, ಚರ್ಚ್‌ನಲ್ಲಿ ಪ್ರಾರ್ಥಿಸುತ್ತಾಳೆ. ಲೋಲಾ ತಂದೆಯ ಆಫೀಸು ತಲುಪುತ್ತಿದ್ದಂತೆಯೇ ಅವನು ಸ್ನೇಹಿತನ ಜೊತೆ ಕಾರಿನಲ್ಲಿ ಹೋಗುವುದನ್ನು ನೋಡುತ್ತಾಳೆ. ಸೈಕಲ್ ಬೇಕೇ ಎಂದು ಕೇಳಿದವನಿಗೆ ಸ್ನಾಕ್ ಬಾರ್‌ನಲ್ಲಿ ಮಾನಿಯ ಬ್ಯಾಗ್ ದೊರಕಿದ್ದ ವ್ಯಕ್ತಿ ಸಿಕ್ಕು ಅವನಿಗೆ ಮಾರುತ್ತಾನೆ. ನಿರಾಸೆಯಿಂದ ಆಂಬ್ಯುಲೆನ್ಸ್ ಹತ್ತುವ ಲೋಲಾಗೆ ಲಿಫ್ಟ್ ಆಪರೇಟರ್ ತೀವ್ರ ಅನಾರೋಗ್ಯದಲ್ಲಿರುವುದು ಕಾಣುತ್ತದೆ. ಸಹಾನುಭೂತಿ ವ್ಯಕ್ತಪಡಿಸುವಂತೆ ಅವನ ಕೈ ಹಿಡಿದದ್ದು ಪರಿಣಾಮ ಬೀರಿ ಅವನು ಉತ್ತಮಗೊಂಡಿದ್ದನ್ನು ಕಂಡು ಶುಶ್ರೂಷೆ ಮಾಡುತ್ತಿದ್ದವರು ಬೆರಗಾಗುತ್ತಾರೆ. ಅವರಿಬ್ಬರ ಸಂಬಂಧಕ್ಕೆ ಅವನೇ ಅವಳ ನಿಜವಾದ ತಂದೆ ಎನ್ನಬಹುದಾದ ಸಾಧ್ಯತೆ ಉಂಟಾಗುತ್ತದೆ. ಆಂಬ್ಯುಲೆನ್ಸ್‌ನಿಂದ ಕೆಳಗಿಳಿದು ಜೂಜು ಕಟ್ಟೆಗೆ ಹೋಗುತ್ತಾಳೆ. ತನ್ನಲ್ಲಿದ್ದ ಕನಿಷ್ಠ ಹಣವನ್ನೇ ಬಳಸಿ ಕೇವಲ ಪ್ರೀತಿ ಪ್ರೇರಿತ ಸಂಕಲ್ಪದಿಂದ ತನಗೆ ಅಗತ್ಯವಾದ ಹಣ ಸಂಪಾದಿಸುತ್ತಾಳೆ. ಜೂಜಾಟದ ಅಂತಿಮ ಹಂತದಲ್ಲಿ ಉಕ್ಕೇರಿದ ಒತ್ತಡದಿಂದ ಅವಳು ಅಬ್ಬರಿಸಿದಾಗ ಗಾಜುಗಳು ಪುಡಿಪುಡಿಯಾಗುತ್ತವೆ. ಫೋನ್ ಬೂತಿನಲ್ಲಿ ಫೋನ್ ತೆಗೆದುಕೊಳ್ಳದ ಕುರುಡಿ ಮಾನಿಗೆ ಪಕ್ಕಕ್ಕೆ ಗಮನ ಹರಿಸುವಂತೆ ಮಾಡುತ್ತಾಳೆ. ಸೈಕಲ್ ಮೇಲೆ ಹೋಗುತ್ತಿದ್ದ ತನ್ನ ಹಣದ ಬ್ಯಾಗ್ ತೆಗೆದುಕೊಂಡವನನ್ನು ಗುರುತಿಸಿದ ಮಾನಿ ಸುಲಭವಾಗಿ ಅದನ್ನು ಹಿಂದಕ್ಕೆ ಪಡೆಯುತ್ತಾನೆ. ಅನಂತರ ತನಗಾಗಿ ಕಾಯುತ್ತಿದ್ದ ಲೋಲಾಳನ್ನು ಭೇಟಿಯಾಗುತ್ತಾನೆ. ಪ್ರೇಮಿಗಳ ಮುಖದಲ್ಲಿ ನಸುನಗು ತೇಲುತ್ತಿದ್ದಂತೆ ಇಂಥದೊಂದು ಅನುಭವವನ್ನು ದೊರಕಿಸಿಕೊಟ್ಟ ಚಿತ್ರದಿಂದ ನಮ್ಮ ಮುಖದಲ್ಲೂ ನಸುನಗು ಮೂಡುವುದು ನಿಸ್ಸಂದೇಹ.