“ನೀನು ಬೆಳಗನ್ನು ನೋಡು. ಅದೆಷ್ಟು ನಿಧಾನವಾಗಿ ಕತ್ತಲೆಯನ್ನು ಕರಗಿಸಿ ಬೆಳಗು ಹರಿಯುತ್ತದೆ. ಎಷ್ಟೊಂದು ದೊಡ್ಡ ಬದಲಾವಣೆಯಾದರೂ ಎಷ್ಟು ನಿಧಾನಗತಿಯಲ್ಲಿ ಸಂಭವಿಸುತ್ತಿದೆ.” ಮೊಗ್ಗು ಸಹಜವಾಗಿ ಬಿರಿದಾಗಲೇ ಹೂವಾಗುವುದು. ಬಗೆಬಗೆಯ ಸಸ್ಯವರ್ಗಗಳು ಸೇರಿಯೇ ಕಾಡಾಗುವುದು, ಮರಕ್ಕೆ ಭೂಮಿಯಾಸರೆ, ಮರವು ಬಳ್ಳಿಗಾಸರೆಯಾದರೆ ಹೂ, ಕಾಯಿ, ಹಣ್ಣುಗಳು ಸಕಲ ಜೀವಿಗಳಿಗಾಸರೆಯಾಗಿ ಪೊರೆಯುತ್ತವೆ. ಇಲ್ಲಿ ಎರೆಹುಳುವಿನಿಂದ ಹಿಡಿದು ಚಿಟ್ಟೆಗೂ, ಹುಲಿಗೂ, ಹುಲ್ಲಿಗೂ ಅದರದೇ ಆದ ಕೆಲಸಗಳಿವೆ. ಯಾವುದೂ ಮುಖ್ಯವಲ್ಲ; ಯಾವುದೂ ಅಮುಖ್ಯವಲ್ಲ. ಮನುಷ್ಯನ ಕೆಲಸಕ್ಕೂ, ಕಾಯಕಕ್ಕೂ ಅನ್ವಯಿಸಿಕೊಳ್ಳಬೇಕಾದ ಮಾತುಗಳಿವು. ಹೆಚ್ಚಾದರೆ ಆಹಾರ ಮಾತ್ರವಲ್ಲ, ಎಲ್ಲವೂ ಅಜೀರ್ಣವೆ.
ಬದುಕನ್ನು ನೋಡುವ ಭಿನ್ನ ದೃಷ್ಟಿಯ ಕುರಿತು ಸುಧಾ ಆಡುಕಳ ಬರಹ ನಿಮ್ಮ ಓದಿಗೆ

“ನಾನು ನನಗೆ ತೋಚಿದ ಹಾಗೆ ಬದುಕಿದ್ದೇನೆ. ಬೇರೆ, ಬೇರೆ ಕ್ಷೇತ್ರಗಳಲ್ಲಿ ನನ್ನ ಸಾಮರ್ಥ್ಯ, ತಿಳುವಳಿಕೆಗೆ ಅನುಗುಣವಾಗಿ ದುಡಿದಿದ್ದೇನೆ. ಪರಿಸರ, ಯಕ್ಷಗಾನ, ಸಾಹಿತ್ಯ ಹೀಗೆ ಯಾವುದೇ ಇರಲಿ, ಎಲ್ಲಕ್ಕೂ ಒಬ್ಬ ಮನುಷ್ಯನಾಗಿ ಸ್ಪಂದಿಸಿದ್ದೇನೆ. ಈ ಸಮಾಜಕ್ಕೆ ನನ್ನ ಪಾತ್ರದ ಅಗತ್ಯ ಎಷ್ಟೋ ಅಷ್ಟನ್ನು ಪೂರೈಸಿದ್ದೇನೆ ಎನ್ನುವ ನಂಬಿಕೆ ನನಗಿದೆ. ನನ್ನ ಎಲ್ಲ ಕೆಲಸಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ. ಇಷ್ಟರವರೆಗಿನ ನನ್ನ ಬದುಕು ನನಗೆ ತೃಪ್ತಿ ತಂದಿದೆ.” ಸಾಹಿತಿ ಕೋಟ ಶಿವರಾಮ ಕಾರಂತರು ತಮ್ಮ ಬದುಕಿನ ಬಗೆಗೆ ಹೇಳಿರುವ ಮಾತುಗಳಿವು, ಎಲ್ಲರ ಬಾಳ್ವೆಗೂ ಬೆಳಕಾಗುವಂಥವು. ಬದುಕೆಂದರೆ ಗೆಲ್ಲಬೇಕಾದ ಓಟವೆಂದು ಬಗೆದು ಸುತ್ತಮುತ್ತಲ ಪರಿವೆಯಿಲ್ಲದಂತೆ ಓಡುತ್ತಿರುವುದೇ ಹಲವು ಸಲ ನಮ್ಮ ಎಲ್ಲ ಅಶಾಂತಿಯ ಮೂಲವಾಗಿರುತ್ತದೆ. ನಿನಗೆ ಪ್ರಶ್ನೆಗಳು ಬಂದಾಗ ಸುತ್ತಲ ಪರಿಸರವನ್ನು ನೋಡು, ಅವುಗಳಿಂದ ದೊರೆಯುವ ಪಾಠಕ್ಕಿಂತ ಮಿಗಿಲಾದ ಅರಿವು ಇನ್ನೆಲ್ಲೂ ಸಿಗಲಾರದು ಎನ್ನುತ್ತವೆ ನಮ್ಮ ಅನುಭಾವ ಪರಂಪರೆಗಳು. ಪರಿಸರದೊಂದಿಗೆ ಸದಾ ಮಿಳಿತವಾಗಿರುವ ಸಹಜತೆ ಮತ್ತು ಸರಳತೆಯೆಂಬ ಪಾಠವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅದೆಷ್ಟೋ ದುಗುಡಗಳನ್ನು ದಾಟಿಬಿಡಬಹುದು.

ನಾನು ಭಾಗವಹಿಸಿದ ತರಬೇತಿ ಶಿಬಿರವೊಂದರಲ್ಲಿ ಸಂಪನ್ಮೂಲ ವ್ಯಕ್ತಿಯೊಬ್ಬರು ಒಂದು ಪ್ರಶ್ನೆಯನ್ನು ಕೇಳಿದರು, “ಯಾರು ಚಂದ?” ಎಂದು. ತಕ್ಷಣ ಅಲ್ಲಿದ್ದ ಬಿಳಿಯ, ಸಪೂರದ, ಚಂದಗೆ ಡ್ರೆಸ್ ಮಾಡಿದವರ ಕಡೆಗೆಲ್ಲಾ ಕಣ್ಣುಗಳು ಹರಿಯತೊಡಗಿದವು. ಕೆಲವರ ಮೊಗದಲ್ಲಿ ಹೇಳಿಕೊಳ್ಳಲಾಗದ ದುಗುಡ ತುಂಬಿತು. ಅವರು ಮುಂದುವರೆಸುತ್ತಾ, “ಇದು ನಾನು ಕೇಳಿದ ಪ್ರಶ್ನೆಯಲ್ಲ, ದೊರೆಯೊಬ್ಬ ತನ್ನ ಚಂದದ ಮಗುವನ್ನು ಕಾಲಮೇಲೆ ಕುಳ್ಳಿರಿಸಿಕೊಂಡು ಸಭಾಸದರಿಗೆ ಕೇಳಿದ ಪ್ರಶ್ನೆ. ಎಲ್ಲರೂ ದೊರೆಯ ಮನದಿಂಗಿತವನ್ನು ಅರಿತು ನಿಮ್ಮ ಮಗುವಲ್ಲದೇ ಇನ್ಯಾರು ಚಂದ? ಎಂದು ಉತ್ತರಿಸಿದರೆ ಅಲ್ಲಿದ್ದ ಬೀರಬಲ್ಲ ಮಾತ್ರ, “ಚಂದದ ಮಗುವನ್ನು ನಾನು ತೋರಿಸಬಲ್ಲೆ” ಎಂದು ಉತ್ತರಿಸಿದ. ದೊರೆಯ ಕೋಪಕ್ಕೆ ಉತ್ತರವೆಂಬಂತೆ ಅವನನ್ನು ರಾಜಧಾನಿಯಾಚೆಗಿನ ರೈತರ ಗುಡಿಸಲಿಗೆ ಕರೆದುಕೊಂಡು ಹೋದ. ಅಲ್ಲಿ ಕೆಸರು ನೀರಿನಲ್ಲಿ, ಕೂದಲು ಕೆದರಿಕೊಂಡು ಆಟವಾಡುತ್ತಿದ್ದ ಮಗುವನ್ನು ತೋರಿಸಿ, “ಇದುವೇ ಚಂದದ ಮಗು” ಎಂದು ಸಾರಿದ. ಕೋಪಗೊಂಡ ದೊರೆ, “ನಿನ್ನನ್ನು ಹೊರತುಪಡಿಸಿ ಇನ್ನೊಬ್ಬರು ಈ ಮಗು ಚಂದ ಎಂದರೂ ನಿನ್ನ ಮಾತನ್ನು ನಾನು ನಂಬುವೆ” ಎಂದು ಸಿಡುಕಿದಾಗ ಆ ಮಗುವಿನ ತಾಯಿಯನ್ನು ಗುಡಿಸಲಿನೊಳಗಿಂದ ಕರೆದು, “ಜಗತ್ತಿನ ಅತಿಸುಂದರ ಮಗು ಯಾವುದು?” ಎಂದು ಪ್ರಶ್ನಿಸಿದ. ಆಗವಳು ಅಲ್ಲಿಯೇ ಆಟವಾಡುತ್ತಿದ್ದ ತನ್ನ ಮಗುವನ್ನು ತೋರಿಸಿ, “ಅದಲ್ಲದೇ ಇನ್ಯಾರು?” ಎಂದು ಮರುಪ್ರಶ್ನೆಯನ್ನು ಹಾಕಿದಳು.” ಹೀಗೆಂದು ಅವರು ಕತೆಯನ್ನು ಮುಗಿಸಿದ ಮೇಲೆ ನಾವು ಚಂದವೆಂದರೇನು? ಚಂದ ನೋಡುವ ವಸ್ತುವಿನಲ್ಲಿದೆಯೋ ಅಥವಾ ನೋಟದಲ್ಲಿದೆಯೋ? ಚಂದವೆಂದರೆ ಬಾಹ್ಯರೂಪು ಮಾತ್ರವೆ ಅಥವಾ ಅಂತರಂಗದ ಹೊಳಪೂ ಹೌದೊ? ಹೀಗೆಲ್ಲ ಚರ್ಚಿಸುತ್ತಾ ಸೌಂದರ್ಯದ ಬಹು ಆಯಾಮವನ್ನು ಸ್ಪರ್ಶಿಸಿ ಬಂದೆವು. ಸತ್ಯಕ್ಕೆ ವಿವಿಧ ಆಯಾಮಗಳಿರುತ್ತವೆ ಎಂಬುದನ್ನು ತಿಳಿದುಕೊಳ್ಳಲು ಇದರಿಂದ ಸಾಧ್ಯವಾಯಿತು.

ಸೌಂದರ್ಯದ ಬಗ್ಗೆ ಜಗತ್ತಿನ ಬೇರೆ, ಬೇರೆ ಪ್ರದೇಶಗಳಲ್ಲಿ ಭಿನ್ನ ವ್ಯಾಖ್ಯಾನಗಳಿರುತ್ತವೆ. ಆದರೆ ಇಂದು ವಿಶ್ವಾದ್ಯಂತ ಹರಡಿಕೊಂಡ ಮಾರುಕಟ್ಟೆಯ ಜಾಲ ತನಗೆ ಬೇಕಾದಂತೆ ಸೌಂದರ್ಯದ ಮಾದರಿಯನ್ನು ನಮ್ಮ ಕಣ್ಣ ಮುಂದೆ ಇಡುತ್ತಾ ಜನರ ದಾರಿ ತಪ್ಪಿಸುತ್ತಿದೆ. ಒಂದು ಸಣ್ಣ ಉದಾಹರಣೆಯನ್ನು ನೋಡುವುದಾದರೆ ನಮ್ಮ ದೇಶದಲ್ಲಿ ಮೊದಲೆಲ್ಲ ಹೆಂಗಸರು ಮೈಕೈ ತುಂಬಿಕೊಂಡು ಕಳೆಕಳೆಯಾಗಿದ್ದರೆ, “ನೋಡೇ, ಸಾಕ್ಷಾತ್ ಗೌರಿಯಂತಿದ್ದಾಳೆ.” ಎನ್ನುತ್ತಿದ್ದರು. ಆದರೀಗ ‘ಝೀರೋ ಸೈಜ್’ ಎನ್ನುವುದು ಸೌಂದರ್ಯದ ಕುರುಹಾಗಿದೆ. ತೆಳ್ಳಗೆ ಬಳುಕುವ ಬಳ್ಳಿಯಂತಿರುವ ಅಮ್ಮಂದಿರು ಮಕ್ಕಳ ಕಣ್ಣಲ್ಲಿ ‘ಸೂಪರ್ ಮದರ್’ ಅನಿಸಿಕೊಳ್ಳುತ್ತಿದ್ದಾರೆ. ನಮ್ಮ ಆಹಾರ ಪದ್ಧತಿ ಮತ್ತು ವಾತಾವರಣದಲ್ಲಿ ಹಾಗಿರುವುದು ಬಹಳ ಪ್ರಯಾಸಕರವಾಗಿದೆ; ಅದಕ್ಕಾಗಿಯೇ ರೂಪಿಸಲ್ಪಟ್ಟ ಮಾರುಕಟ್ಟೆಯ ಸರಕುಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಬಣ್ಣದ ವಿಷಯದಲ್ಲಂತೂ ಇದು ಎಷ್ಟೊಂದು ಸತ್ಯ! ಸಮಭಾಜಕವೃತ್ತ ಪ್ರದೇಶದ ಆಚೀಚೆಗೆ ಹರಡಿರುವ ನಮ್ಮ ದೇಶದ ಜನರ ಬಣ್ಣ ನಸುಗಪ್ಪು ಇರಲೇಬೇಕು. ರೈತಾಪಿ ಕೆಲಸಗಳೇ ಪ್ರಧಾನವಾಗಿರುವ ಜನರ ಚರ್ಮ ಕಪ್ಪುಗಟ್ಟದಿದ್ದರೆ ಸುಡುಬಿಸಿಲನ್ನು ತಡೆದುಕೊಳ್ಳುವುದಾದರೂ ಹೇಗೆ? ಚರ್ಮಕ್ಕೆ ಗಾಢ ಬಣ್ಣ ನೀಡುವ ಮೆಲಾನಿನ್ ಸಹಜವಾಗಿಯೇ ನಮ್ಮಲ್ಲಿ ಹೆಚ್ಚಿದೆ. ಆದರೆ ಜಾಹೀರಾತುಗಳು ಗೌರವರ್ಣವನ್ನು ಮಾತ್ರವೇ ಸೌಂದರ್ಯ ಎಂದು ಪದೇ, ಪದೇ ಸಾರುತ್ತ ನಮ್ಮನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿವೆ. ಅದನ್ನು ಪಡಕೊಳ್ಳುವ ಸಲುವಾಗಿ ರೂಪಿಸಲ್ಪಟ್ಟ ಸೌಂದರ್ಯವರ್ಧಕಗಳ ಮಾರುಕಟ್ಟೆ ಮಿಲಿಯನ್ ಕೋಟಿಯಷ್ಟು ವ್ಯಾಪ್ತಿಯದ್ದು. ಚಂದಕ್ಕೆ ಮೊದಲಿನಿಂದಲೂ ರೂಪದರ್ಶಿಗಳಾದ ನಮ್ಮ ಮಣ್ಣಿನ ಗೌರಿ, ದ್ರೌಪದಿ, ದೇವಿ, ಶಿಲಾಬಾಲಿಕೆಯರೇ ಮೊದಲಾದವರು ಈ ಉಪದ್ವಾಪಗಳನ್ನೆಲ್ಲ ನೋಡಿ ಮುಸಿಮುಸಿ ನಗುತ್ತಿರಬಹುದು! ಯಾವುದನ್ನು ಸಹಜವಾಗಿ ಬದಲಾಯಿಸಲಾಗದೋ, ಅದನ್ನೇ ಮಾರುಕಟ್ಟೆಯ ಸರಕಾಗಿ ರೂಪಿಸುವುದು ಇಂದಿನ ಟ್ರೆಂಡ್ ಆಗಿಬಿಟ್ಟಿದೆಯೆಂದರೂ ತಪ್ಪಾಗಲಾರದು.

ನಿಮಗೆಲ್ಲಾ ನೆನಪಿರಬಹುದು, ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ಮಗುವೊಂದು ಹುಟ್ಟಿದಾಗ, “ಆಹಾ! ಎಷ್ಟು ಚಂದದ ಗುಂಗುರು ಕೂದಲು! ಕಪ್ಪಾಗಿ, ದಟ್ಟಾಗಿ ತಲೆತುಂಬಾ ಹರಡಿದೆ.” ಎಂದು ಹೇಳಿ ದೃಷ್ಟಿ ತೆಗೆಯುತ್ತಿದ್ದರು. ಅಪರೂಪಕ್ಕೆ ಕೆಂಚುಕೂದಲನ್ನು ಹೊಂದಿದವರು ಇರುತ್ತಿದ್ದರಾದರೂ ಅವರು ತಮ್ಮ ಕೂದಲು ಕಪ್ಪಾಗಲೆಂದು ದಿನಾ ತೆಂಗಿನೆಣ್ಣೆಯನ್ನು ಹಚ್ಚುತ್ತಿದ್ದರು. ಎರಡು ದಶಕಗಳಲ್ಲಿ ಎಲ್ಲವೂ ತದ್ವಿರುದ್ಧ! ರೇಷ್ಮೆಯಂತೆ ಜಾರುವ ಅರೆಗೆಂಪು ಕೂದಲು ಇಂದು ಸೌಂದರ್ಯದ ಮಾಪಕವಾಗಿದೆ. ಬಟ್ಟೆಗೆ ಹಾಕಿದಂತೆ ಕೂದಲಿಗೂ ತಿಂಗಳಿಗೊಮ್ಮೆ ಇಸ್ತ್ರಿ ಹಾಕಿ ಸುರುಳಿ ಸುತ್ತಿದಂತೆ ಮಾಡಲಾಗುತ್ತದೆ. ವೈಜ್ಞಾನಿಕವಾಗಿ ನೋಡುವುದಾದರೆ ಸುರುಳಿಯಾಗಿರುವ ಕಪ್ಪು ಕೂದಲು ಮತ್ತು ನೇರವಾಗಿರುವ ಕೆಂಚು ಕೂದಲಿನ ಜೀನ್‌ಗಳಲ್ಲಿ ಮೊದಲನೆಯದು ಸದಾ ಪ್ರಬಲ (ಡೊಮಿನೆಂಟ್) ಆಗಿರುತ್ತದೆ. ಆದ್ದರಿಂದ ನಮ್ಮ ಜನಾಂಗದ ಹೆಚ್ಚಿನವರ ಕೂದಲು ಇರುವುದೇ ಹಾಗೆ. ಅದನ್ನು ಚಂದವಲ್ಲ ಎಂಬ ಭಾವನೆಯನ್ನು ಬಿತ್ತಿದರೆ ತಮಗೆ ಸಮೃದ್ಧ ಹಣದ ಫಸಲು ಎಂಬುದು ಮಾರಾಟ ಜಾಲಕ್ಕೆ ಗೊತ್ತು!

ಚಂದವೆಂದರೇನು? ಚಂದ ನೋಡುವ ವಸ್ತುವಿನಲ್ಲಿದೆಯೋ ಅಥವಾ ನೋಟದಲ್ಲಿದೆಯೋ? ಚಂದವೆಂದರೆ ಬಾಹ್ಯರೂಪು ಮಾತ್ರವೆ ಅಥವಾ ಅಂತರಂಗದ ಹೊಳಪೂ ಹೌದೊ? ಹೀಗೆಲ್ಲ ಚರ್ಚಿಸುತ್ತಾ ಸೌಂದರ್ಯದ ಬಹು ಆಯಾಮವನ್ನು ಸ್ಪರ್ಶಿಸಿ ಬಂದೆವು. ಸತ್ಯಕ್ಕೆ ವಿವಿಧ ಆಯಾಮಗಳಿರುತ್ತವೆ ಎಂಬುದನ್ನು ತಿಳಿದುಕೊಳ್ಳಲು ಇದರಿಂದ ಸಾಧ್ಯವಾಯಿತು.

ಮೇಲಿನ ಉದಾಹರಣೆಗಳನ್ನು ಸಾಂದರ್ಭಿಕವಾಗಿ ಹೇಳಿದ್ದಷ್ಟೆ. ಆಹಾರ ಮತ್ತು ಆರೋಗ್ಯದ ವಿಷಯಕ್ಕೆ ಬಂದರೆ ಇಂತಹ ನೂರಾರು ಜಾಹೀರಾತುಗಳು ನಮ್ಮ ಕಣ್ಮುಂದೆ ದಿನವೂ ಸುಳಿಯುತ್ತವೆ. ಶಿಕ್ಷಣ ಕ್ಷೇತ್ರದಲ್ಲಿಯಂತೂ ಇಂತಹ ಸರಣಿ ಅಪಘಾತಗಳು ದಿನವೂ ನಡೆಯುತ್ತಿರುತ್ತದೆ. ನಿಜವಾಗಿ ನೋಡಿದರೆ ಕಲಿಕೆಯೆಂಬುದು ಕೇವಲ ಮಾಹಿತಿಗಳ ವರ್ಗಾವಣೆಯಲ್ಲ. ಅದರ ಅವಶ್ಯಕತೆಯೂ ಇರುವುದಿಲ್ಲ. ಒಮ್ಮೆ ವಿಷಯವನ್ನು ಅರ್ಥೈಸುವ ಸಾಮರ್ಥ್ಯ ಬಂತೆಂದರೆ ಮಾಹಿತಿಗಳ ಉಗ್ರಾಣಗಳಿಗೆ ನಮ್ಮಲ್ಲಿ ಕೊರತೆಯೇನಿಲ್ಲ. ಇಂದಂತೂ ಅಂಗೈಯ್ಯಲ್ಲಿರುವ ಮೊಬೈಲ್ ಎಂಬ ಪುಟ್ಟ ಮಾಯಾಪೆಟ್ಟಿಗೆ ಜಗತ್ತಿನ ಅತ್ಯುತ್ತಮ ಉಪನ್ಯಾಸಗಳನ್ನು ನಮ್ಮ ಹಳ್ಳಿಮನೆಯ ಜಗುಲಿಗೇ ತಂದು ತೋರಿಸುತ್ತದೆ. ಆದರೆ ಹುಟ್ಟುವ ಮಗುವಿಗೆ ಮಾತು ಬರುವ ಮೊದಲೇ ಇಲ್ಲಿ ಶಾಲೆಯ ಬೇಟೆ ನಡೆಯುತ್ತದೆ. ಮುಂದೆಂದೋ ನನ್ನ ಮಗು ಡಾಕ್ಟರ್ ಅಥವಾ ಎಂಜಿನೀಯರ್ ಆಗಲೇಬೇಕೆಂದು ತೊಟ್ಟಿಲಿನಿಂದಲೇ ತರಬೇತಿ ಪ್ರಾರಂಭವಾಗುತ್ತದೆ. ಜಾಗತೀರಕಣವು ಇಂದು ಅದೆಷ್ಟೋ ಮಾದರಿಯ ಉದ್ಯೋಗಗಳನ್ನು ನಮ್ಮ ಮುಂದೆ ತೆರೆದಿಟ್ಟಿರುವಾಗಲೂ, ಬದುಕಲು ಬೇಕಾದಷ್ಟು ದೊರಕಿದ ಮೇಲೆ ಉಳಿದದ್ದೆಲ್ಲವೂ ವಿಷವೆಂದು ಗೊತ್ತಿದ್ದಾಗಲೂ ಇವೆರಡೇ ಸೀಟುಗಳನ್ನು ಕನಸುವ ಪಾಲಕರ ಮನಸ್ಸಿನಲ್ಲಿ ಈ ಕನಸನ್ನು ಬಿತ್ತಿದ್ದು ಮತ್ತದೇ ಶೈಕ್ಷಣಿಕ ವ್ಯಾಪಾರವೆಂಬ ಉದ್ಯಮ. ಮಗುವಿನ ಬೆಳವಣಿಗೆಯ ಹಂತದಲ್ಲಿ ಮನೆ ಮತ್ತು ಮನೆಯ ಸದಸ್ಯರು ನೀಡುವ ಸುರಕ್ಷತಾ ಭಾವನೆಯ ಪಾತ್ರ ಕಡಿಮೆಯೇನಲ್ಲ. ಹಾಗೆಯೇ ಮಗುವಿನ ಬೆಳವಣಿಗೆಯ ವಿವಿಧ ಹಂತಗಳನ್ನು ನೋಡಿ, ಅನುಭವಿಸುವ ಸುಖವೂ ಸಣ್ಣದಲ್ಲ. ಇವೆಲ್ಲವೂ ಬೇಡವೆಂದಾದರೆ ಮಗುವನ್ನು ಹುಟ್ಟಿಸುವುದಕ್ಕೂ ಅರ್ಥವಿರುವುದಿಲ್ಲ. ಆದರೆ ವಿಪರ್ಯಾಸವನ್ನು ನೋಡಿ, ಒಂದನೇ ತರಗತಿಗಿಂತ ಮುಂಚೆಯೇ ಅಂದರೆ ಬಾಲಭಾಷೆಯಿನ್ನೂ ಹೋಗಿರದ ಮಕ್ಕಳನ್ನು ಸೇರಿಸಿಕೊಳ್ಳುವ ವಸತಿ ಸಹಿತ ಶಾಲೆಗಳು ಹಳ್ಳಿಗಳಲ್ಲಿಯೂ ಇಂದು ಖಾಲಿಯಾಗುಳಿದಿಲ್ಲ! ರಜೆಯೆಂಬ ಎರಡೋ, ಒಂದೋ ತಿಂಗಳಿನಲ್ಲಿ ಮನೆಗೆಲಸದ ಸಜೆಯನ್ನು ಒಂದಿಷ್ಟು ದಿನಗಳಲ್ಲಿ ಮುಗಿಸಿ, ತಿರುಗಾಟವೆಂಬ ಮೋಜನ್ನು, ಖರೀದಿಯೆಂಬ ದುಂದುವೆಚ್ಚವನ್ನೂ ನಿಭಾಯಿಸಿದರೆ ಹೆತ್ತವರ ಕರ್ತವ್ಯ ಮುಗಿಯಿತೆಂದು ಭಾವಿಸುವವರೇ ಹೆಚ್ಚಾಗಿದ್ದಾರೆ.

ನಮ್ಮ ಬಂಧುಗಳು ಯಾರು? ಯಾವೆಲ್ಲ ಹಬ್ಬಗಳನ್ನು ಹೇಗೆ ಆಚರಿಸುತ್ತೇವೆ? ನಮ್ಮೂರಿನ ಉತ್ಸವಗಳು ಯಾವುವು? ಊರಿನಲ್ಲಿ ಯಾವ ರೀತಿಯ ಜನರೆಲ್ಲ ವಾಸಿಸುತ್ತಾರೆ? ಅವರ ಕಷ್ಟ ಸುಖಗಳು ಹೇಗಿವೆ? ಸಮುದಾಯವಾಗಿ ಬಾಳಲು ಅವರು ವಿಧಿಸಿಕೊಂಡ ನಿರ್ಬಂಧಗಳೇನು? ನಮ್ಮ ಮನೆಯಲ್ಲಿ ಸಾಕುವ ಪ್ರಾಣಿಗಳು ಹೇಗೆ ವರ್ತಿಸುತ್ತವೆ? ನಮ್ಮೂರಿನ ಸುತ್ತಲೂ ಇರುವ ಸಸ್ಯವರ್ಗಗಳ್ಯಾವುವು? ಕಾಡುಪ್ರಾಣಿಗಳು ಸಹಜವಾಗಿ ಹೇಗಿರುತ್ತವೆ? ಮಳೆ ಬಂದು ಮರವನ್ನು ತೋಯಿಸುವಾಗ ಹೇಗಿರುತ್ತದೆ? ನಮ್ಮ ತಂದೆ-ತಾಯಿಯರ ದಿನನಿತ್ಯದ ಬವಣೆಗಳು ಹೇಗಿರುತ್ತವೆ? ಮನೆಯ ಕೆಲಸಗಳನ್ನು ಮಾಡುವುದು ಹೇಗೆ? ಇವೆಲ್ಲವನ್ನೂ ಒಳಗೊಳ್ಳದ ಬರಿಯ ಪುಸ್ತಕದ ಶಿಕ್ಷಣ ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುವುದಾದರೂ ಹೇಗೆ? ಶಿಕ್ಷಣದಲ್ಲಿ ಭಾಷೆಯ ಕಲಿಕೆಯ ಬಗ್ಗೆ ತೋರುವ ನಿರ್ಲಕ್ಷವೇ ಬಹುತ್ಯೆಗಳಿಗೆ ಕಾರಣವಾಗಿದೆ. ಹೇಗೆ ನಮ್ಮ ಮಾತುಗಳು ಗಾಳಿಯೆಂಬ ಮಾಧ್ಯಮ ಇಲ್ಲದಿರುವಾಗ ಇನ್ನೊಬ್ಬರಿಗೆ ಕೇಳಿಸಲು ಸಾಧ್ಯವಿಲ್ಲವೋ, ಹಾಗೆಯೇ ವಿಷಯವನ್ನು ಅರ್ಥೈಸಿಕೊಳ್ಳಲು ಬೇಕಾದ ಭಾಷಾ ಬಳಕೆಯ ವಿವಿಧ ಆಯಾಮಗಳ ಪರಿಚಯವಿಲ್ಲದೇ ಯಾವ ವಿಷಯಗಳನ್ನೂ ಕಲಿಯಲು ಸಾಧ್ಯವಿಲ್ಲ. ಮಗುವಿಗೆ ಶಬ್ದಸಂಪತ್ತನ್ನು ಮತ್ತು ಬಳಕೆಯ ವಿವಿಧ ಆಯಾಮಗಳನ್ನು ಧಾರಾಳವಾಗಿ ಕೊಡುವ ಭಾಷೆಯೆಂಬ ನಾವೆಯನ್ನು ಒದಗಿಸಿಬಿಟ್ಟರೆ ಅದರ ಜ್ಞಾನಸಮುದ್ರದ ಯಾನ ಸರಾಗವಾಗಿ ನಡೆಯುತ್ತದೆ. ಮತ್ತೆ ಪಾಲಕರು ಒದಗಿಸಬೇಕಾದದ್ದು ಅದರ ಕಲಿಕೆಗೆ ಪೂರಕವಾದ ಪುಸ್ತಕಗಳ ಆಕರವನ್ನು ಮಾತ್ರ.

ಇವು ಕೇವಲ ಒಂದು ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳೇನಲ್ಲ. ಸ್ಪರ್ಧೆಯ ನಾಗಾಲೋಟ ಇಂದಿನ ಯುವಜನಾಂಗವನ್ನು ಅಸ್ವಸ್ಥಗೊಳಿಸಿರುವ ಪ್ರಮಾಣ ಕಡಿಮೆಯೇನಲ್ಲ. ಪ್ರತಿಯೊಂದನ್ನೂ ಬೇರೆಯವರೊಂದಿಗೆ ಹೋಲಿಸಿಕೊಳ್ಳುವ ಸ್ವಭಾವವೂ ಸುಲಲಿತವಾದ ಜೀವನಕ್ಕೆ ಒಂದು ದೊಡ್ಡ ತಡೆಯಾಗಿದೆ. ಕುಳಿತು, ಆಲೋಚಿಸಿ, ನಿರೀಕ್ಷಿಸಿ ಬದುಕನ್ನು ಅರಿತುಕೊಳ್ಳಬೇಕಾದ ಕಾಲಾವಕಾಶವನ್ನು ಅವಸರದ ಬದುಕು ನೀಡುತ್ತಲೇ ಇಲ್ಲ. ಒಳ್ಳೆಯ ಶಾಲೆಗೆ ಸೇರಿಕೋ, ಎಲ್ಲ ಸ್ಪರ್ಧೆಗಳಲ್ಲಿ ಬಹುಮಾನವನ್ನು ಬಾಚಿಕೋ, ಎಲ್ಲ ಪರೀಕ್ಷೆಗಳಲ್ಲೂ ಮೊದಲಿಗನಾಗು, ಬೇಕಾದ ಕಾಲೇಜಿನಲ್ಲಿ ಸೀಟು ಪಡೆದುಕೋ, ಲಕ್ಷಗಟ್ಟಲೆ ಸಂಬಳದ ನೌಕರಿಯನ್ನು ಸೇರು, ತಕ್ಷಣವೇ ಹೊಸಮನೆಯೊಂದನ್ನು ಮಾಡು, ಮದುವೆಯಾಗು, ಮತ್ತಿಷ್ಟು ಸಂಪತ್ತನ್ನು ಪೇರಿಸು…. ಮುಂದೆ?

ಬದುಕೆಂದರೆ ವ್ಯವಹಾರ ಮಾತ್ರವೇ ಅಲ್ಲವಲ್ಲ. ನಮಗೆ ಖುಶಿಪಡಲು ಗೊತ್ತಿರಬೇಕು, ಭಾವನಾತ್ಮಕವಾಗಿ ಸ್ಪಂದಿಸಲು ತಿಳಿದಿರಬೇಕು, ಬಡವರ, ನೊಂದವರ ನೋವು ಅರ್ಥವಾಗಬೇಕು, ಸಮಾಜದ ಓರೆಕೋರೆಗಳ ಪರಿಚಯ ಬೇಕು, ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇವೆಲ್ಲವೂ ಕಲಿಕೆಯ ಭಾಗವಾಗಬೇಕಲ್ಲವೆ? ಇದರ ಇನ್ನೊಂದು ಮಗ್ಗಲಿನಲ್ಲಿ ಮತ್ತೊಂದು ಲೋಕವೂ ಇದೆ. ಅವರಿಗೆ ಶಿಕ್ಷಣವೆಂದರೆ ಏನೆಂದು ತಿಳಿಯದು, ಸಾಧನೆಯ ಮಾರ್ಗಗಳ ಅರಿವಿರದು. ನಿತ್ಯದ ಊಟಕ್ಕೆ ಪರದಾಡುವ ಲೋಕದ ಮಕ್ಕಳವರು. ಅದೇನೋ ಕಲಿತು ಉದ್ಧರಿಸುವರೆಂದು ಉಪವಾಸವಿದ್ದು ಹಣಕೂಡಿಸಿ ಮೊಬೈಲನ್ನು ಅವರ ಕೈಗಿಡಲಾಗಿದೆ. ಅದರಲ್ಲಿ ಬೇಡವೆಂದರೂ ನೀಲಿ, ಕೆಂಪು, ಬಿಳಿ, ಕಪ್ಪು ಎಲ್ಲ ಬಗೆಯ ಚಿತ್ರಗಳು, ವೀಡಿಯೋಗಳು ತೇಲಿ, ತೇಲಿ ಬರುತ್ತವೆ. ತರಗತಿಯಲ್ಲಿ ಬೋರಾಗುವ ಪಾಠಗಳಿಗಿಂತ ರಂಗುರಂಗಾಗಿ ತೋರಿಸುತ್ತವೆ. ನಿಗೂಢ ಲೋಕವನ್ನು ಕಣ್ಣೆದುರು ತಂದು ಮೈಮರೆಸುತ್ತವೆ. ಹದಿವಯಸ್ಸಿನ ಮಕ್ಕಳ ಮನಸ್ಸನ್ನು ರಾಡಿಯಾಗಿಸುವ ಇವೆಲ್ಲವನ್ನು ಬಳಸದಂತೆ ತಡೆಯಲು ಹೋದಾಗ ಹಿಂಸಾರೂಪವನ್ನು ಪಡೆಯುತ್ತವೆ. ಬದುಕನ್ನು ಎದುರಿಸುವ ಕಸುವನ್ನು ಕಸಿದುಕೊಳ್ಳುವ ಮಾಯಾಜಾಲಗಳು ಆತ್ಮಹತ್ಯೆಯಂತಹ ಮಾರ್ಗಗಳಿಗೆ ದೂಡುತ್ತವೆ. ಇತ್ತೀಚೆಗಂತೂ ವಿಫುಲವಾಗಿರುವ ವಾಟ್ಸಾಪ್ ಯುನಿವರ್ಸಿಟಿಗಳು ಅಮಲು ಪದಾರ್ಥಗಳಿಗಿಂತಲೂ ರೋಚಕವಾಗಿ ದ್ವೇಷದ ನಶೆಯನ್ನು ಹಂಚುತ್ತಿವೆ. ಇವುಗಳನ್ನೆಲ್ಲ ಗಮನಿಸಲು ಯಾರಿಗೂ ಬಿಡುವೇ ಇಲ್ಲದಂತಾಗಿದೆ.

ಬದುಕು ಪ್ರಕೃತಿಯಂತೆ ಸಹಜವಾಗಿ ಅರಳಬೇಕು. ಋತುಮಾನಗಳಿಗೆ ತಕ್ಕಂತೆ ಬದಲಾವಣೆಗಳನ್ನು ಮೈತುಂಬಾ ಹೊದ್ದುಕೊಂಡು ರಂಗಾಗಬೇಕು. ಕವಿಯೊಬ್ಬರು ಹೇಳಿದ ಸಾಲುಗಳು ನೆನಪಾಗುತ್ತಿವೆ, “ನೀನು ಬೆಳಗನ್ನು ನೋಡು. ಅದೆಷ್ಟು ನಿಧಾನವಾಗಿ ಕತ್ತಲೆಯನ್ನು ಕರಗಿಸಿ ಬೆಳಗು ಹರಿಯುತ್ತದೆ. ಎಷ್ಟೊಂದು ದೊಡ್ಡ ಬದಲಾವಣೆಯಾದರೂ ಎಷ್ಟು ನಿಧಾನಗತಿಯಲ್ಲಿ ಸಂಭವಿಸುತ್ತಿದೆ.” ಮೊಗ್ಗು ಸಹಜವಾಗಿ ಬಿರಿದಾಗಲೇ ಹೂವಾಗುವುದು. ಬಗೆಬಗೆಯ ಸಸ್ಯವರ್ಗಗಳು ಸೇರಿಯೇ ಕಾಡಾಗುವುದು, ಮರಕ್ಕೆ ಭೂಮಿಯಾಸರೆ, ಮರವು ಬಳ್ಳಿಗಾಸರೆಯಾದರೆ ಹೂ, ಕಾಯಿ, ಹಣ್ಣುಗಳು ಸಕಲ ಜೀವಿಗಳಿಗಾಸರೆಯಾಗಿ ಪೊರೆಯುತ್ತವೆ. ಇಲ್ಲಿ ಎರೆಹುಳುವಿನಿಂದ ಹಿಡಿದು ಚಿಟ್ಟೆಗೂ, ಹುಲಿಗೂ, ಹುಲ್ಲಿಗೂ ಅದರದೇ ಆದ ಕೆಲಸಗಳಿವೆ. ಯಾವುದೂ ಮುಖ್ಯವಲ್ಲ; ಯಾವುದೂ ಅಮುಖ್ಯವಲ್ಲ. ಮನುಷ್ಯನ ಕೆಲಸಕ್ಕೂ, ಕಾಯಕಕ್ಕೂ ಅನ್ವಯಿಸಿಕೊಳ್ಳಬೇಕಾದ ಮಾತುಗಳಿವು. ಹೆಚ್ಚಾದರೆ ಆಹಾರ ಮಾತ್ರವಲ್ಲ, ಎಲ್ಲವೂ ಅಜೀರ್ಣವೆ. ಅಜೀರ್ಣದ ದೇಹ ರೋಗಗಳ ಆಗರವಾಗುವಂತೆ ಅತಿಬಯಕೆಯು ಸಮಾಜವನ್ನು ಅನಾರೋಗ್ಯಗೊಳಿಸುತ್ತದೆ. ತಾವು ಮಾಡುವ ಕೆಲಸದಲ್ಲಿ ತೋರುವ ಬದ್ಧತೆಯಿಂದಾಗಿ ಗೌರವಕ್ಕೆ ಪಾತ್ರರಾಗುವ ಯಾವುದೇ ವ್ಯಕ್ತಿ ನಮಗೆ ಆದರ್ಶವಾಗಬೇಕು. ಅಂತಿಮ ಗುರಿಯಷ್ಟೇ ನಡೆಯುವ ದಾರಿಯೂ ಮುಖ್ಯವಾದಾಗ ಮಾತ್ರವೇ ಸಮಾಜವು ಆರೋಗ್ಯವಂತವೆನಿಸುವುದು.