ಈ ಹಿಂದಿನಿಂದಲೂ ಕಾವ್ಯ ಬರೆಯಿರಿ ಎಂದು ಪೀಡಿಸುತ್ತದ್ದ ನನಗೆ ಕರೋನಾ ಸಂದರ್ಭದಲ್ಲಿ ಕರೆ ಮಾಡಿ ಭೇಟಿ ಮಾಡುವಂತೆ ತಿಳಿಸಿದರು ಅಂತೂ ಖುಷಿಪಟ್ಟು ಅವರನ್ನು ರಾಮಕೃಷ್ಣ ನಗರದ ಪಾರ್ಕೊಂದರಲ್ಲಿ ಭೇಟಿಯಾದೆ. ಒಂದು ಟೈಪಿಸಿದ ಹಾಳೆಗಳ ಗುಚ್ಚವನ್ನು ನೀಡುತ್ತಾ “ನೋಡಪ್ಪ ಇವು ಕವಿತೆ ಎನಿಸಿದರೆ ಪ್ರಕಟಿಸೋಣ, ಇಲ್ಲವೆಂದರೆ ಬೇಡ” ಎಂದು ಮೌನವಾದರು. ಈಗಾಗಲೇ ‘ಅವ್ವ’ ಕವನ ಬೆರೆದಿದ್ದ ಬಸವರಾಜು ಅವರ ಕವನಗಳೆಲ್ಲವನ್ನು ಒಂದೇ ಓದಿನಲ್ಲಿ ಓದಿ ರಾತ್ರಿಯೇ ಫೋನಾಯಿಸಿದೆ.
ನೆನ್ನೆ ಕತೆಗಾರ ಬಸವರಾಜು ಕುಕ್ಕರಹಳ್ಳಿ ನಿಧನರಾದರು. ಅವರೊಂದಿಗೆ ಒಡನಾಡಿದ ಒಂದಷ್ಟು ನೆನಪುಗಳನ್ನು ಅಭಿಷೇಕ್‌ ವೈ.ಎಸ್. ಇಲ್ಲಿ ಹಂಚಿಕೊಂಡಿದ್ದಾರೆ.

ಎರಡು ಸಾವಿರದ ಒಂಭತ್ತನೆಯ ಇಸವಿ ಇರಬೇಕು ಆಗ, ನಾನು ಪಿ.ಯು.ಸಿಗೆಂದು ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಗೆ ಸೇರಿದಾಗ ಗ್ರಂಥಾಲಯದಲ್ಲಿ ಒಳಭಾಗದ ಗಾಜಿನ ಚೇಂಬರಿನೊಳಗೆ ಕೂತು ಮೂಗಿನ ತುದಿಯಲ್ಲಿ ಇನ್ನೇನು ಜಾರಿಬೀಳಬಹುದಾದ ಕನ್ನಡಕದೊಳಗಿನಿಂದ ಏನನ್ನೋ ತಿದ್ದುತ್ತಾ ಕೂತಿರುತ್ತಿದ್ದರು. ಕಂಪ್ಯೂಟರ್ ಲ್ಯಾಬಿಗೆ ಹೋಗುವಾಗ ಇವರ ಚೇಂಬರಿನ ಮುಂದೆಯೇ ಹಾದುಹೋಗಬೇಕಾಗಿದ್ದರಿಂದ ನಿತ್ಯ ಅವರನ್ನು ನೋಡಿಯೇ ಹೋಗುತ್ತಿದ್ದೆ. ಹೀಗೆ ಒಂದುದಿನ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಎರವಲು ಪಡೆಯಲು ಹುಡುಕುತ್ತಿದ್ದಾಗ ‘ಮೊಕಾರ’ ಎಂಬ ಪುಸ್ತಕವು ಸಿಕ್ಕಿತು. ಹಸುವಿನ ಮುಖವನ್ನು ಹೋಲುವ ಅಸ್ಪಷ್ಟ ಚಿತ್ರದ ಮುಖಪುಟದಿಂದಲೇ ಆ ಕೃತಿ ಗಮನ ಸೆಳೆಯಿತು. ಅದರ ಮೇಲೆ ೧೯೯೬ರ ಸಾಲಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ಎಂದು ಅಚ್ಚಾಗಿತ್ತು. ಆ ಪುಸ್ತಕವನ್ನು ಎರವಲು ಪಡೆಯುವಾಗಲೇ ಗೊತ್ತಾದದದ್ದು ಈ ಪುಸ್ತಕದ ಕೃತಿಕಾರರಾದ ಬಸವರಾಜು ಕುಕ್ಕರಳ್ಳಿ ಅವರೇ ಈ ಗ್ರಂಥಪಾಲಕರು ಎಂದು ಗೊತ್ತಾಯಿತು. ಅಂದಿನಿಂದ ನಮ್ಮ ಒಡನಾಟ ಪ್ರಾರಂಭವಾಯಿತೆನ್ನಬಹುದು. ಅಷ್ಟರಲ್ಲಾಗಲೇ ‘ಪುನುಗ’ ಮತ್ತು ‘ಜೀವಾಳ’ ಕಥಾಸಂಕಲನಗಳನ್ನು ಪ್ರಕಟಿಸಿದ್ದರು. ಸಮಯವಿದ್ದಾಗ ನಾನೂ ನನ್ನ ಗೆಳೆಯ ಗಜೇಂದ್ರ ಇಬ್ಬರೂ ಅದೇ ಅವರ ಗಾಜಿನ ಚೇಂಬರಿಗೆ ಹೋಗಿ ಅವರ ಕಾಲದ ಕಥೆಗಳನ್ನು ಕೇಳುತ್ತಿದ್ದೆವು.

ಕೆಲವೊಮ್ಮೆ ತರಗತಿಗಳು ಆರಂಭವಾಗಿದ್ದರೂ ಇವರ ಮಾತುಗಳನ್ನು ಕೇಳುತ್ತಲೇ ನಿಂತುಬಿಡುತ್ತಿದ್ದೆವು. ತರಗತಿಗೆ ತಡವಾಗಿಯೂ ಹೋಗಿ ಎಷ್ಟೋ ಬಾರಿ ಸಬೂಬುಗಳನ್ನು ಹೇಳಿ ಉಪನ್ಯಾಸಕರಿಂದ ತಪ್ಪಿಸಿಕೊಳ್ಳುತ್ತಿದ್ದವು. ಅಷ್ಟರಲ್ಲಾಗಲೇ ಅವರ ಕಥೆಗಳನ್ನು ಓದಿದ್ದ ನಮಗೆ ಕಥೆಗಾರನನ್ನು ಇಷ್ಟು ಹತ್ತಿರದಲ್ಲೇ ನೋಡುತ್ತಿದ್ದ ನಮ್ಮ ಖುಷಿಗೆ ಪಾರವೇ ಇರಲಿಲ್ಲ. ಕುಕ್ಕರಹಳ್ಳಿಯ ಬೀದಿ ಬೀದಿಯನ್ನೂ ತಿರುಗಿದ್ದ ಬಸವರಾಜು ಅವರು ಅಲ್ಲಿಯೇ ಹುಟ್ಟಿ ಅಲ್ಲಿನ ಜೀವನಕ್ರಮ, ಬದುಕಿನ ಬವಣೆಗಳನ್ನು ಕಥೆಗಳಲ್ಲಿ ಬರೆದು ಕಥೆಗಾರನಾಗಿ ಬೆಳೆದದ್ದು ಒಂದು ರೀತಿಯ ವಿಸ್ಮಯವೇ ಸರಿ. ಬೆರಗುಗಣ್ಣುಗಳಿಂದ ಜೀವನಾನುಭವಗಳನ್ನು ಅನುಭವಿಸಿದ, ಬಡತನದಲ್ಲೇ ಬಾಳುವ ಅನಿವಾರ್ಯತೆಯನ್ನು ರೂಢಿಸಿಕೊಂಡಿದ್ದ ಬಸವರಾಜು ಕುಕ್ಕರಹಳ್ಳಿಯವರು ಹಸಿದು ಮಲಗಿದ್ದು ಎಷ್ಟೋಸಲ.

ಮಹಾರಾಜ ಕಾಲೇಜಿಗೆ ಸೇರಿದ ಹೊಸತು, ಬಹುಭಾಷಾ ಕವಿಗೋಷ್ಠಿಗೆ ಮುಖ್ಯ ಅತಿಥಿಗಳನ್ನು ಕರೆಸುವ ಜವಾಬ್ದಾರಿಯನ್ನು ನನಗೆ ಮತ್ತು ಗಜೇಂದ್ರನಿಗೆ ವಹಿಸಲಾಗಿತ್ತು. ಆಗ ಸಹಪ್ರಾಧ್ಯಾಪಕರಾಗಿದ್ದ ತಿಮ್ಮಯ್ಯನವರಿಗೆ ನಮ್ಮ ಮೇಲೆ ವಿಶ್ವಾಸವಿತ್ತು. ಬಸವರಾಜು ಕುಕ್ಕರಹಳ್ಳಿಯವರನ್ನು ಒಪ್ಪಿಸಿ ಕೆರದುಕೊಂಡು ಬರುತ್ತೇವೆಂದು ತಿಳಿಸಿದಾಗ ಅನುಮತಿಕೊಟ್ಟರು. ಆಗ ಬಸವರಾಜು ಕುಕ್ಕರಹಳ್ಳಿಯವರ ಕುರಿತು ಕೆಲವರು ಕೊಂಕು ನುಡಿದರು. ವಾಸ್ತವವಾಗಿ ಕುಕ್ಕರಹಳ್ಳಿಯವರ ಕಥೆಗಳನ್ನು ಓದಿರದಿದ್ದವರು ಹೀಗೆ ನಮ್ಮ ಉತ್ಸಾಹವನ್ನು ಕುಂದುವಂತೆ ಮಾತನಾಡಿದ್ದರು.

ನಾವು ಮರಿಮಲ್ಲಪ್ಪ ಸಂಸ್ಥೆಗೆ ಹೋಗಿ ಬಸವರಾಜು ಅವರನ್ನು ಬಹುಭಾಷಾ ಕವಿಗೋಷ್ಠಿಗೆ ತಾವು ಮುಖ್ಯ ಅತಿಥಿಯಾಗಿ ಬರಬೇಕೆಂದು ಹೇಳಿದಾಗ ಅವರು “ಅಯ್ಯೋ ನಾನ್ ಯಾವ್ ಕವಿ ಅಭಿ? ಮೈಸೂರಲ್ಲಿ ಇನ್ನೂ ಎಷ್ಟ್ ದೊಡ್ಡದೊಡ್ ಕವಿಗಳಿದ್ದಾರೆ ನಾನ್ಯಾಕೆ? ದಯಮಾಡಿ ಬಿಟ್ಟು ಬಿಡ್ರಪ್ಪ” ಎಂದರು. ಸಂಕೋಚದ ಸ್ವಭಾವದವರಾಗಿದ್ದ ಬಸವರಾಜು ಅವರನ್ನು ನಾನೂ ನನ್ನ ಗೆಳೆಯನೂ ದುಂಬಾಲುಬಿದ್ದು ಒಪ್ಪಿಸಿದೆವು. ನಮ್ಮ ಮೇಲಿನ ‘ವಿಶ್ವಾಸ’ ಮತ್ತು ‘ಪ್ರೀತಿ’ಗೆ ಅವರು ಸೋತಿದ್ದರು. ಬಹುಭಾಷಾ ಕವಿಗೋಷ್ಠಿಯ ದಿನ ಬಂದೇ ಬಿಟ್ಟಿತ್ತು. ಹೇಳಿದ ಸಮಯಕ್ಕೆ ಮುಂಚಿತವಾಗಿಯೇ ಕನ್ನಡ ವಿಭಾಗಕ್ಕೆ ಬಂದರು. ಪ್ರಾಂಶುಪಾಲರಾಗಿದ್ದ ಸ.ನ ಗಾಯತ್ರಿಯವರು, ಸಹಪ್ರಾಧ್ಯಾಪಕರಾಗಿದ್ದ ತಿಮ್ಮಯ್ಯನವರು, ಉಳಿದ ಅಧ್ಯಾಪಕರು ಅವರನ್ನು ಸ್ವಾಗತಿಸಿದರು. ಕನ್ನಡ ಮತ್ತು ಜಾನಪದ ಸಂಘದ ಯಾವ ಕಾರ್ಯಕ್ರಮಕ್ಕೆ ಬಂದರೂ ಅತಿಥಿಗಳನ್ನು ಕನ್ನಡ ವಿಭಾಗದಲ್ಲೇ ಸತ್ಕರಿಸುವುದು ಹಿಂದಿನಿಂದಲೂ ನಡೆದುಬಂದಿತ್ತು. ರಾಷ್ಟ್ರಕವಿ ಜಿ.ಎಸ್.ಎಸ್ ಅವರೂ ಮೊದಲು ನೇರವಾಗಿ ಕನ್ನಡ ವಿಭಾಗಕ್ಕೇ ಬರುತ್ತಿದ್ದರು. ಬಸವರಾಜು ಅವರಿಗೆ ಚಹಾ, ಬಿಸ್ಕೆಟ್ಗಳನ್ನು ನೀಡಿ ಕಾರ್ಯಕ್ರಮ ಆಯೋಜನೆಯಾಗಿದ್ದ ಸ್ಥಳ ಜೂನಿಯರ್ ಬಿ.ಎ. ಹಾಲಿಗೆ ಕರೆತಂದವು. ಹೊಸದಾಗಿ ಕವಿತೆ ಬರೆಯುತ್ತಿದ್ದ ಹುಡುಗರೂ ಉತ್ಸಾಹದಿಂದ ಕವಿಗೋಷ್ಠಿಗೆ ಬಂದಿದ್ದರು. ಜ್ಯೂನಿಯರ್ ಬಿ.ಎ. ಹಾಲ್ ತುಂಬಿತ್ತು. ವಿಶಿಷ್ಟವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಲು ಮುಂಚೆಯೇ ನಾವೆಲ್ಲರೂ ಸೇರಿ ಯೋಜನೆಯನ್ನು ಮಾಡಿದ್ದೆವು. ಕುಕ್ಕರಹಳ್ಳಿಯವರು ತಮ್ಮ ಕವಿತೆಯಸಾಲುಗಳನ್ನು ಬರೆಯುವ ಮೂಲಕ ಕವಿಗೋಷ್ಠಿಗೆ ಚಾಲನೆ ನೀಡಲಾಯಿತು.

“ಹಿಟ್ಟು ಮಿದಿಕೆ
ಮುದ್ದು ಮುದ್ದೆಗಾತ್ರ
ಹಸಿವ ಮರೆಸಲು ಹಾಡು ಕಥೆ ಪುರಾಣ
ತಟ್ಟಿ ಮಲಗಿಸುತ್ತಿದ್ದವು ನನ್ನ”
-ಬಸವರಾಜು ಕುಕ್ಕರಹಳ್ಳಿ

ಹೀಗೆ ಅವರು ಬರೆದ ಸಾಲುಗಳನ್ನು ನೋಡಿ ಸಭಾಂಗಣದಲ್ಲಿದ್ದವರೆಲ್ಲ ಕರತಾಡನಗಳಿಂದ ಸಭಾಂಗಣವನ್ನು ತುಂಬಿಸಿದ್ದರು. ಬಹುಭಾಷಾ ಕವಿಗೋಷ್ಠಿಯೆಂದು ಶೀರ್ಷಿಕೆ ಇದ್ದರೂ ಕನ್ನಡದ ಕವಿತೆಗಳನ್ನೇ ಹೆಚ್ಚು ವಾಚಿಸಲಾಯಿತು. ಇಂಗ್ಲಿಷ್, ಹಿಂದಿ ಭಾಷೆಯ ಕವಿತೆಗಳೂ ಕೆಲವು ವಾಚಿಸಲಪ್ಪಟ್ಟವು. ಆಗ ಕವಿತೆ ಬರೆಯಲು ಆರಂಭಿಸಿದ ನಾನೂ ಒಂದು ಕವಿತೆಯನ್ನು ವಾಚಿಸಿದೆನು. ಎಲ್ಲರೂ ಕಾಯುತ್ತಿದ್ದ ಮುಖ್ಯ ಅತಿಥಿಗಳ ಭಾಷಣ ಆರಂಭವಾಯಿತು. “ಇದೇ ರೂಮಿನಲ್ಲಿ ನಾನು ಕುಳಿತು ಪಾಠ ಕೇಳಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸೀಟು ತಗೋಬೇಕು ಅಂತ ಹೇಳಿದ್ರೆ ತುಂಬಾ ಕಷ್ಟ ಇರ್ತಿತ್ತು. ಒಳ್ಳೆ ಮಾರ್ಕ್ ಅನ್ನು ಪಡೆದಿದ್ರೆ ಮಾತ್ರ ಸೀಟ್ ಸಿಗುತ್ತೆ, ಅದ್ರಲ್ಲೂ ಆರ್ಟ್ ಸೀಟ್ ತಗೋಬೇಕು ಅಂದ್ರೆ ತುಂಬಾ ಕಷ್ಟ ಇರ್ತಿತ್ತು. ಅಂತಹ ಸಂದರ್ಭದಲ್ಲಿ ಮಹಾರಾಜ ಕಾಲೇಜಲ್ಲಿ ನಾವು ಓದ್ಬೇಕಂತ ಕನಸು ಕಟ್ತಾ ಇದ್ವಿ” ಎಂದು ಅಂದಿನ ಕಾಲದ ಸ್ಥಿತಿಯನ್ನು ನೆನಪಿಸಿಕೊಂಡರು. ಬಸವರಾಜು ಅವರು ಮಹಾರಾಜ ಸೇರಿದಾಗ ಕಾಲೇಜಿನ ಭವ್ಯ ಗ್ರಂಥಾಲಯವನ್ನು ಮೊದಲ ಬಾರಿ ನೋಡಿದಾಗ ಅವರಿಗೆ ಪ್ರಾಮಾಣಿಕವಾಗಿ ಹೀಗನ್ನಿಸುತ್ತದೆ. “ನಾನು ಹಳ್ಳಿಯ ಗುಡಿಸಲಿನಿಂದ ಕಾಲೇಜು ಓದಲು ಪಟ್ಟಣಕ್ಕೆ ಬಂದೆ. ಅಲ್ಲಿ ಗ್ರಂಥಾಲಯವೆಂಬ ಭವ್ಯ ಕಟ್ಟಡವನ್ನು ಕಂಡು ಬೆರಗಾದೆ. ಬರೀ ಪುಸ್ತಕಗಳನ್ನಿಡಲು ಇಷ್ಟು ದೊಡ್ಡ ಬಂಗಲೆಯೆ? ಇದು ನಮಗಾದರೂ ಸಿಕ್ಕಿದ್ದರೆ ಊರಿನವರೆಲ್ಲ ದನಕರುಗಳನ್ನು ಕಟ್ಟಿಕೊಂಡು ಗಾಳಿ ಮಳೆಯಿಂದ ರಕ್ಷಿಸಿಕೊಂಡು ಬೆಚ್ಚಗೆ ವಾಸಿಸುತ್ತಿದ್ದೆವಲ್ಲ ಎಂಥ ಅನ್ಯಾಯ ಎಂದುಕೊಂಡು ಒಳಕ್ಕೋದೆ. ಒಳಕ್ಕೋದರೆ ಅಲ್ಲಿ ಸಾವಿರ ಸಾವಿರವಲ್ಲ ಲಕ್ಷಾಂತರ ಜನರು ವಾಸವಿದ್ದರು. ಅವರೆಲ್ಲ ಸಾಮಾನ್ಯರಲ್ಲ ಅಸಮಾನ್ಯರು ಜಗತ್ತಿನ ಮೇಧಾವಿಗಳು, ಸಾಹಿತಿಗಳು, ಸಮಾಜೋದ್ಧಾರಕರು, ಇತಿಹಾಸಕಾರರು, ವಿಜ್ಞಾನಿಗಳು, ಕಲಾಕಾರರು, ಸಂಗೀತಗಾರರು, ಶಿಲ್ಪಿಗಳು , ತತ್ವಜ್ಞಾನಿಗಳು. ಅವರೆಲ್ಲರೂ ಪುಸ್ತಕರೂಪ ತಾಳಿ ನನಗಾಗಿ ಕಾಯುತ್ತಿದ್ದರು.” ಮತ್ತೆ ಸಭಾಂಗಣವೆಲ್ಲವೂ ಜೋರಾದ ಚಪ್ಪಾಳೆಗಳಿಂದ ತುಂಬಿಹೋಯಿತು. ಬಸವರಾಜು ಅವರು ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾಗ ಗೋಹತ್ಯೆಗೆ ಸಂಬಂಧಿಸಿದ ಚಳುವಳಿಯಲ್ಲಿ ವಿದ್ಯಾರ್ಥಿಗಳು ಸಾಂಕೇತಿಕವಾಗಿ ಗೋಮಾಂಸವನ್ನು ಬೇಯಿಸಿ ಕೊಟ್ಟಾಗ ಸ್ವತಃ ಅಧ್ಯಾಪಕರೇ ತಿಂದು ಪ್ರತಿಭಟಿಸಿದ ಘಟನೆಯನ್ನು ನೆನಪಿಸಿಕೊಂಡ ಮಾತುಗಳು ಇನ್ನೂ ಕಿವಿಯಲ್ಲಿ ಅನುರಣಿಸುತ್ತದೆ. ಬೇಂದ್ರೆಯವರ ‘ಮೂಡಲ ಮನೆಯ ಮುತ್ತಿನ ನೀರಿನ’ ಕವಿತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಕೊನೆಯಲ್ಲಿ ತಮ್ಮ ‘ಅವ್ವ’ ಕವಿತೆಯನ್ನು ವಾಚಿಸಿ ಮುಗಿಸುವಾಗ ವೇದಿಕೆಯಲ್ಲಿದ್ದವರ ಸಹಿತ ಎಲ್ಲರ ಕಣ್ಣಾಲಿಗಳೂ ತುಂಬಿದ್ದವು. ಕುಕ್ಕರಹಳ್ಳಿಯವರನ್ನು ಮುಖ್ಯ ಅಥಿತಿಯಾಗಿ ಕರೆಸಲು ಹೆಸರು ಪ್ರಸ್ತಾಪವಾದಾಗ ಕೊಂಕು ನುಡಿದ್ದವರೂ ನಮ್ಮನ್ನು ಕರೆದು ಪ್ರಶಂಸಿದ್ದು ಈಗ ಇತಿಹಾಸ.

‘ಬಾಳಾಟ’ ಕಥಾ ಸಂಕಲನವು ನಾನು ಎಂ.ಎ. ವಿದ್ಯಾರ್ಥಿಯಾಗಿದ್ದಾಗ ಬಾಬು ಜಗಜೀವನರಾಂ ಸಭಾಂಗಣದಲ್ಲಿ ಬಿಡುಗಡೆಯಾಯಿತು. ಹಿಂದಿನ ಮೂರೂ ಸಂಕಲನಗಳಿಗಿಂತ ಭಿನ್ನವಾದ ಕಥೆಗಳು ಹೆಚ್ಚು ಜನರನ್ನು ತಲುಪಿದವು. ಈ ಸಂಕಲನದ ‘ಗೇಟು’ ಕಥೆಯು ಇವರಿಗೆ ಪ್ರಸಿದ್ಧಿ ತಂದುಕೊಟ್ಟಿತು. ಇವರ ನೀಳ್ಗತೆಗಳ ಸಂಕಲನ ‘ಕಾಲನೊದ್ದವರು’ ಬಿಡುಗಡೆಯ ಸಮಾರಂಭಕ್ಕೆ ಗಂಗಾಧರ ಚಿತ್ತಾಲರ ‘ಹರಿವ ನೀರಿದು’ ಕವನ ಓದಿಸುವ ಮೂಲಕ ನನ್ನಿಂದ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಮುಂದೆ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ನೀಲಗಿರಿ ತಳವಾರ್ ಅವರ ಸಂಪಾದಕತ್ವದ ‘ಬಸವರಾಜು ಕುಕ್ಕರಹಳ್ಳಿ ಕಥಾಲೋಕ’ ಎಂಬ ವಿಮರ್ಶಾ ಕೃತಿಯನ್ನು ಪ್ರಕಟಿಸಿದರು.

ಈ ಹಿಂದಿನಿಂದಲೂ ಕಾವ್ಯ ಬರೆಯಿರಿ ಎಂದು ಪೀಡಿಸುತ್ತದ್ದ ನನಗೆ ಕರೋನಾ ಸಂದರ್ಭದಲ್ಲಿ ಕರೆ ಮಾಡಿ ಭೇಟಿ ಮಾಡುವಂತೆ ತಿಳಿಸಿದರು ಅಂತೂ ಖುಷಿಪಟ್ಟು ಅವರನ್ನು ರಾಮಕೃಷ್ಣ ನಗರದ ಪಾರ್ಕೊಂದರಲ್ಲಿ ಭೇಟಿಯಾದೆ. ಒಂದು ಟೈಪಿಸಿದ ಹಾಳೆಗಳ ಗುಚ್ಚವನ್ನು ನೀಡುತ್ತಾ “ನೋಡಪ್ಪ ಇವು ಕವಿತೆ ಎನಿಸಿದರೆ ಪ್ರಕಟಿಸೋಣ, ಇಲ್ಲವೆಂದರೆ ಬೇಡ” ಎಂದು ಮೌನವಾದರು. ಈಗಾಗಲೇ ‘ಅವ್ವ’ ಕವನ ಬೆರೆದಿದ್ದ ಬಸವರಾಜು ಅವರ ಕವನಗಳೆಲ್ಲವನ್ನು ಒಂದೇ ಓದಿನಲ್ಲಿ ಓದಿ ರಾತ್ರಿಯೇ ಫೋನಾಯಿಸಿದೆ. ಕವನಗಳನ್ನು ಕುರಿತು ಮಾತನಾಡಿದಾಗ “ಹಾಗಾದ್ರೆ ಪ್ರಕಟಿಸ್ಬೋದಪ್ಪ? ನನ್ ಗೆಳೆಯ ಕೆ.ಜಿ. ದೇವದಾಸನಿಗೂ ಕೊಟ್ಟಿದ್ದೆ ಅವ್ನೂ ಖುಷಿಪಟ್ಟ ಕಣಪ್ಪ. ಹಾಗಾದ್ರೆ ಒಂದಿಷ್ಟು ಏನಾದ್ರೂ ಬರ‍್ಕೊಡು” ಎಂದರು. ಒಂದೆರಡು ದಿನದಲ್ಲೇ ಕವನಸಂಕಲನದ ಕುರಿತು ನನ್ನ ಮಿತಿಯಲ್ಲೇ ಐದಾರು ಪುಟ ವಿಮರ್ಶೆಯನ್ನು ಬರೆದೆ. ಮತ್ತೆ ಅದೇ ಪಾರ್ಕು, ಚರ್ಚೆ. ನನ್ನ ವಿಮರ್ಶೆಯ ಬರಹದಲ್ಲಿ ಒಂದಿಷ್ಟು ಸಾಲುಗಳನ್ನೂ, ದೇವದಾಸರವರ ಒಂದೆರಡು ಸಾಲುಗಳನ್ನು ಬೆನ್ನುಡಿಯಲ್ಲಿ ಅಚ್ಚುಮಾಡಿಸಿ, ಮುನ್ನುಡಿಯಿಲ್ಲದೆಯೇ ತಮ್ಮ ಮಾತುಗಳನ್ನು ‘ಕಾವು ಕೂತ ಕೋಳಿಯ ಧ್ಯಾನ’ ಹೆಸರಿನಲ್ಲಿ ಬರೆದು ಕವನ ಸಂಕಲನಕ್ಕೆ ‘ಅತೀತತರು’ ಎಂದು ಹೆಸರಿಟ್ಟಿದ್ದರು. ನಂತರ ಅವರೇ ಎಚ್. ಗೋವಿಂದಯ್ಯನವರ ಸಲಹೆಯಂತೆ ‘ಅವ್ವ ಬರಲೇ ಇಲ್ಲ’ ಎಂದು ಬದಲಾಯಿಸಿದರು. ನೃಪತುಂಗ ಕನ್ನಡ ಶಾಲೆಯಲ್ಲಿ ಸಾವಯುವ ರೈತ ‘ಆಲೂರು ಮೂರ್ತಿ’ಯವರು ಬಿಡುಗಡೆಗೊಳಿಸಿದರು. ಎಚ್. ಗೋವಿಂದಯ್ಯನವರು ಕೃತಿಕುರಿತು ಸಮರ್ಥವಾಗಿ ಮಾತುಗಳನ್ನಾಡಿದರು. ಆಗಲೂ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ನನಗೆ ವಹಿಸಿದ್ದರು. “ಹೊಸಬ್ರು ಮುಂದ್ ಬರ‍್ಬೇಕು ಅಭಿ ತಗೋ ನಿನ್ ಗೆಳೆಯರಿಗೆ ಕೊಡು” ಎಂದು ಒಂದಿಷ್ಟು ಪುಸ್ತಕಗಳನ್ನು ಕೊಟ್ಟಿದ್ದರು.

ಆತ್ಮಕಥೆ ಬರೀರಿ ಸರ್ ಎನ್ನುತ್ತಿದ್ದ ನನಗೆ ಯಾವ್ ದೊಡ್ ಸಾಹಿತಿ ನಾನು ಬಿಡು ಅಭಿ, ಸದ್ಯಕ್ಕೆ ಒಂದಿಷ್ಟ್ ಕಥೆ ಬರೀತಿದ್ದೀನಿ, ಮನೆ ರಿನೋವೇಷನ್ ಆಗ್ತಿದೆ, ಮುಂದಿನ ಬರವಣಿಗೆ ಮೊದಲ ಓದುಗ ನೀನೇ ಕಣಪ್ಪ ಎಂದಿದ್ದರು. ಪ್ರತಿ ವಾರವೂ ಕರೆಮಾಡುತ್ತಿದ್ದ ಬಸವರಾಜು ಸರ್ ಮತ್ತು ನನ್ನ ಮಾತುಗಳು ಗಂಟೆಗಟ್ಟಳೆ ಸಾಗುತ್ತಿದ್ದವು. ಅಪರೂಪದ ಕಥೆಗಳನ್ನು ಬರೆಯುತ್ತಿದ್ದ ಕಥೆಗಾರನಿಗೆ ಸಿಕ್ಕ ಮನ್ನಣೆ ಚಿಕ್ಕದಾದರೂ ಅವರಿಗೆ ಅದಾವುದರ ಅವಶ್ಯಕತೆಗಳಾಗಲಿ ಕೊರಗಾಗಲಿ ಇಲ್ಲದಿರುವುದು ಅವರ ಮಾತುಗಳಿಂದಲೇ ಸ್ಪಷ್ಟವಾಗುತ್ತಿತ್ತು. ದಲಿತರಲ್ಲೇ ಎಡ-ಬಲ ಬಣಗಳ ಕಿತ್ತಾಟಗಳನ್ನು ಪ್ರಸ್ತಾಪಿಸುತ್ತಾ ಎಷ್ಟೋಬಾರಿ ನೊಂದುಕೊಳ್ಳುತ್ತಿದ್ದರು. ವಿಮರ್ಶಕರ ತಾರತಮ್ಯ ನೀತಿಗಳಿಗೂ ವಿಷಾದ ವ್ಯಕ್ತಪಡಿಸುತ್ತಿದ್ದರು. ಬದುಕಿನುದ್ದಕ್ಕೂ ಸಂಕೋಚಪಟ್ಟುಕೊಂಡೇ ಹಿಂದೆ ಉಳಿಯುತ್ತಿದ್ದ ಬಸವರಾಜು ಅವರ ಇತ್ತೀಚಿನ ಭಾವಚಿತ್ರಗಳನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿದಿದ್ದೆ. ನೋಡಿ ಖುಷಿಪಟ್ಟು ‘ಅವ್ವ ಬರಲೇ ಇಲ್ಲ’ ಸಂಕಲನದ ಬೆನ್ನುಡಿಯಲ್ಲಿ ಅಚ್ಚು ಹಾಕಿಸಿದ್ದರು. ತಿಂಗಳ ಹಿಂದೆ “ಸಾವಯುವ ಕೃಷಿ ಸಂತೆಗೆ ಬಾಪ್ಪ ಅಭಿ” ಎಂದು ಕರೆ ಮಾಡಿದ್ದರು. ಆಗಲೂ ಅವರೊಂದಿಗೆ ಒಂದಿಷ್ಟು ಚರ್ಚೆ, ಮಾತುಗಳಾಗಿದ್ದವು. ಮತ್ತೆ ಸಾವಯುವ ಬದುಕಿನ ಕಡೆ ಮರಳಬೇಕಾದದ್ದು ಅನಿವಾರ್ಯ ಎಂದಿದ್ದು, ಬರಹದಲ್ಲೂ ಈ “ಸಾವಯುವ ಗುಣ” ಇರಬೇಕೆಂಬ ಅವರ ಹೊಸ ಪರಿಕಲ್ಪನೆ ನನ್ನನ್ನು ಇನ್ನೂ ಚಿಂತನೆಗೀಡು ಮಾಡಿದೆ. ಕುಕ್ಕರಹಳ್ಳಿಯವರ ಈವರೆಗಿನ ಕಥೆಗಳು ಎಂಬ ನನ್ನ ಕನಸಿನ ಪುಸ್ತಕ ಮುಂದೊಂದು ದಿನ ಸಮಗ್ರ ಕಥೆಗಳು ಎಂಬ ಶೀರ್ಷಿಕೆಯಲ್ಲಿ ಬರಬಹುದು. ಕುಕ್ಕರಹಳ್ಳಿಯವರ ಹುಟ್ಟುಹಬ್ಬದ ದಿನ ಅವರಿಗೆ ಶುಭಾಶಯ ತಿಳಿಸಿದ್ದು, ಅವರು ಉತ್ತರಿಸಿದ್ದು, ಚಾಟ್ ಮಾಡಿದ್ದು, ಮಾತನಾಡಿದ್ದ ಕೆಲವು ವಾಯ್ಸ್ ರೆಕಾರ್ಡಿಂಗ್‌ಗಳು ಎಲ್ಲವೂ ಇದೆ. ಆದರೆ ಇಂದು ಕುಕ್ಕರಹಳ್ಳಿಯವರು ನಮ್ಮೊಂದಿಗಿಲ್ಲ. ಅಣ್ಣನ ಮದುವೆಯ ಆಮಂತ್ರಣ ಪತ್ರಿಕೆಯನ್ನು ವಾಟ್ಸಾಪ್‌ನಲ್ಲಿ ಕಳುಹಿಸಿ ಬನ್ನಿ ಸರ್ ಎಂದು ಕಳಿಸಿದ್ದ ಸಂದೇಶ ನೋಡಿ ಕರೆ ಮಾಡಿದ ಅವರು “ಕಣ್ಣಿನ ಆಪರೇಷನ್ ಆಗಿದೆ, ಟ್ರೀಟ್‌ಮೆಂಟ್ ತಗೋತಿದ್ದೀನಿ ಕಣಪ್ಪ, ಗಾಡಿ ಓಡ್ಸಕ್ಕಾಗಲ್ಲ, ಬರಲ್ಲ ಅಂತ ಬೇಜಾರಾಗ್ಬೇಡ ಕಣಪ್ಪ ನಿನ್ ಮದ್ವೆಗೆ ತೆವಳ್ಕೊಂಡಾದ್ರೂ ಬತ್ತಿನಿ ಕಣಪ್ಪ.. ನಮ್ ಅಭಿ ಮದ್ವೆಗೆ ಮಿಸ್ ಮಾಡಕ್ಕಾಗುತ್ತಾ” ಎಂದು ಅಂದವ್ರು ನೀವೇನಾ ಸರ್? ಮೋಸ ಮಾಡಿ ಇಷ್ಟ್ ಬೇಗ ಹೋಗ್ಬಾರ‍್ದಿತ್ತು.. ಮಿಸ್ ಯೂ ಸರ್…!