ಬೆಂಗಳೂರಿನಿಂದ ಪ್ರತಿ ವರ್ಷ ಕೆಲವು ಯುವಕರು ಸಮುದ್ರ ನೋಡಲು ಮಂಗಳೂರಿಗೆ ಬರುತ್ತಾರೆ. ಅವರಲ್ಲಿ ಕೆಲವರು ಸಮುದ್ರದ ಪಾಲಾಗುತ್ತಾರೆ. ಕೆಲವರು ನೇತ್ರಾವತಿ ತುಂಬಿ ಹರಿಯುವ ಮಳೆಗಾಲದ ಮಳೆಯ ದಿನಗಳಲ್ಲಿ ನದಿಯನ್ನು ನೋಡಲು ಬರುತ್ತಾರೆ. ಅವರಲ್ಲಿ ಕೂಡ ಕೆಲವರು ನದಿ ನೀರಿನಲ್ಲಿ ಕೊಚ್ಚಿ ಹೋಗುವುದುಂಟು. ಪತ್ರಿಕೆಗಳ ವರದಿಗಳನ್ನು ಗಮನಿಸಿದರೆ, ಈ ಯುವಕರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಖ್ಯೆಯೇ ದೊಡ್ಡದು. ವಿಹಾರಾರ್ಥವಾಗಿ ಬರುವ ಇವರಲ್ಲಿ ಹೆಚ್ಚಿನವರು ಸಮುದ್ರವನ್ನು ಅಥವಾ ನೆರೆಯ ದಿನ ಉಕ್ಕಿ ಹರಿಯುವ ನದಿಯನ್ನು ಮೊದಲ ಬಾರಿಗೆ ನೋಡುವವರು. ಕೆಲವರು ಈಜು ಬಲ್ಲವರಾದರೂ ಅವರಿಗಿರುವುದು ಕೇವಲ ಕೊಳದಲ್ಲಿ ಈಜಿದ ಅನುಭವ! ಇವರಿಗೆ ಸಮುದ್ರದ ತೆರೆಗಳ ರೀತಿ ಗೊತ್ತಿಲ್ಲ. ಅವು ಹೇಗೆ ಉಂಟಾಗುತ್ತವೆ, ಅವುಗಳ ಶಕ್ತಿ ಏನು ಎಂದು ಗೊತ್ತಿಲ್ಲ. ಕಣ್ಣಿಗೆ ಕಾಣಿಸುವ ನೀರಿನ ತೆರೆಗಳ ಅಡಿಯಲ್ಲಿ ಅತ್ತ ಇತ್ತ ಸೆಳೆಯುವ ಒಳ ಅಲೆಗಳಿರುತ್ತವೆ ಎನ್ನುವ ಮಾಹಿತಿ ಇರುವುದಿಲ್ಲ. ಸಮುದ್ರಕ್ಕಿಳಿದರೆ ಏನು ಅಪಾಯ ಎಂದು ತಿಳಿದುಕೊಂಡಿರುವುದಿಲ್ಲ. ಸಮುದ್ರದ ಕಿನಾರೆಯಲ್ಲಿ ಎಲ್ಲಾ ಕಡೆ ‘ಬೀಚ್’ ಎನ್ನುವುದಿಲ್ಲ ಎನ್ನುವ ವಿಚಾರ ಕೂಡ ಹೆಚ್ಚಿನವರಿಗೆ ತಿಳಿಯದು. ನೀರಿಗೆ, ಗಾಳಿಗೆ ಮತ್ತು ಬೆಂಕಿಗೆ ಎಷ್ಟು ಶಕ್ತಿ ಇದೆ, ಎಂಥ ಶಕ್ತಿ ಇದೆ ಎಂದು ತಿಳಿಸದ ಶಿಕ್ಷಣ ಎಂಥ ಶಿಕ್ಷಣ? ಕೇವಲ ಪುಸ್ತಕದ ಇಂಜಿನಿಯರಿಂಗ್ ಯಾವ ಇಂಜಿನಿಯರಿಂಗ್? ಲ್ಯಾಬರೇಟರಿಯಲ್ಲಷ್ಟೇ ಕಂಡುಕೊಂಡದ್ದು ಎಷ್ಟರ ಮಟ್ಟಿಗೆ ವಿಶೇಷ ಜ್ಞಾನ?

ಕಡಲನ್ನು ಮತ್ತು ನದಿಯನ್ನು ಪ್ರೀತಿಸುವ ಸುಲಭ ವಿಧಾನ ಎಂದರೆ ದೂರ ಕುಳಿತು, ನೋಡಿ ಆನಂದಿಸುವುದು. ಸಾಧ್ಯವಾದಷ್ಟು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು. ನೌಕರಿ ದೊರಕಿಸಿಕೊಡಲಿಕ್ಕಾಗಿಯೇ ಕೊಡುವ ಸೈನ್ಸ್ ಮತ್ತು ಇಂಜಿನಿಯರಿಂಗ್ ಬೇರೆ, ಬದುಕಿಗೆ ಬೇಕಾಗಿರುವ ಸೈನ್ಸ್ ಮತ್ತು ಇಂಜಿನಿಯರಿಂಗ್ ಬೇರೆ. ನೌಕರಿಗೆ ಪುಸ್ತಕದ ಮೂಲಕ ಪಡೆದ ಏಕ ವಿಷಯ ಪ್ರಭುತ್ವ ಸಾಕಾಗಬಹುದು. ಬದುಕಿಗೆ ಸಾಕಾಗುವುದಿಲ್ಲ.

ಬಹಳ ಮಂದಿ ನಗರ ವಾಸಿಗಳಿಗೆ ಹಳ್ಳಿ ಅಂದರೆ ದೂರದ ಹಸಿರು ಬೆಟ್ಟ; ದೂರದ ತಂಪು ಕಾಡು; ವಿಸ್ತಾರವಾದ ಬಯಲು; ದೂರದ ಮನೋಹರ ಜಲಪಾತ. ಚಿಮ್ಮುವ ಝರಿಗಳಲ್ಲಿ, ನದಿ ಕಾಡು ಬೆಟ್ಟಗಳಲ್ಲಿ, ಹಿಮಾಚ್ಛಾದಿತ ಪರ್ವತ ಶ್ರೇಣಿಗಳ ಕಣಿವೆಗಳಲ್ಲಿ ನಾಯಕ ನಾಯಕಿಯರನ್ನು ಓಡಾಡಿಸಿ ಹಾಡಿಸಿ ಕುಣಿಸಿದರೆ ಕತೆಯೆಂಬುದಿಲ್ಲದ ಸಿನಿಮಾ ಹಿಟ್ಟಾಗುವುದು ಹಾಗೆ! ಹಾಗೆಂದು, ಇದು ನಗರಿಗರು ಮಾತ್ರ ನಿಸರ್ಗವನ್ನು ನೋಡುವ ರೀತಿಯೇನಲ್ಲ. ಸಕಲರೂ ಸಿನಿಮಾ ಪರದೆ ಅಥವಾ ಟೀವಿಯ ಮೇಲೆ ನಿಸರ್ಗವನ್ನು ನೋಡಿ ಆನಂದಿಸುವ ವಿಧಾನ ಇದೇ ಆಗಿದೆ. ಯಾಕೆಂದರೆ, ಟೀವಿ ಅಥವಾ ಸಿನಿಮಾ ಪರದೆಯಲ್ಲಿ ವಾಸ್ತವದಲ್ಲಿ ಕಾಣುವುದಕ್ಕಿಂತ ಹೆಚ್ಚು ಚೆನ್ನಾಗಿ ಕಾಣಿಸುತ್ತದೆ. ನಿಜದಲ್ಲಿ ನಮ್ಮ ಕಣ್ಣುಗಳಿಂದಲೇ ನೋಡುತ್ತೇವೆ. ಸಿನಿಮಾ ಮತ್ತು ಟೀವಿ ಪರದೆಯ ಮೇಲೆ ಕೆಮರಾ ತೋರಿಸಿದ್ದನ್ನು, ಕೆಮರಾ ನೋಡಿದ ರೀತಿಯಲ್ಲಿ ನೋಡುತ್ತೇವೆ. ನಿಜವಾಗಿ ಅದು ನಮ್ಮ ನೋಟವೇ ಅಲ್ಲ! ಅಷ್ಟರಿಂದ ನಿಸರ್ಗದ ಮೇಲೆ ಪ್ರೀತಿ ಉಂಟಾಗಲಿಕ್ಕಿಲ್ಲ. ಆಕರ್ಷಣೆ ಉಂಟಾಗಬಹುದೇನೊ. ಆದರೆ ಕೇವಲ ಆಕರ್ಷಣೆ ಪ್ರೀತಿ ಅಲ್ಲವಲ್ಲ?

ನಿಜವಾದ ನಿಸರ್ಗದ ಸೌಂದರ್ಯವನ್ನು ಸವಿಯುವುದು ಸುಲಭವಲ್ಲ. ಕಾಡಿನಲ್ಲಿ ಬೆಟ್ಟದಲ್ಲಿ ಏರು ತಗ್ಗು ಇದೆ, ಕಲ್ಲು ಮುಳ್ಳುಗಳಿವೆ. ಹತ್ತಿರದಿಂದ  ನೋಡಲು ಹೋದರೆ ಕಣ್ಣಳತೆಗೆ ಸಿಗುವ ದೃಶ್ಯ ವಿಸ್ತಾರ ಕ್ಯಾಮರಾದ ಜೂಮ್ ಲೆನ್ಸಿಗೆ ಸಿಗುವುದಕ್ಕಿಂತ ಬಹಳ ಕಡಿಮೆ. ಝರಿಯನ್ನು ಅಪ್ಪಿಕೊಂಡು ನಿಂತರೆ ಝರಿಯೇ ಇಲ್ಲ. ಎಸಳು ಮಾತ್ರ ಕಾಣುವಷ್ಟು ಹತ್ತಿರ ದೃಷ್ಟಿ ಹೋದರೆ ಹೂವು ಇಲ್ಲ. ದೂರ ಸನಿಹಕ್ಕಿಂತ ಹೆಚ್ಚು ಸುಂದರ, ಆಕರ್ಷಕ. ಇದು ನಿಸರ್ಗ ಸೌಂದರ್ಯದ ವಿಚಾರದಲ್ಲಿ ಮಾತ್ರವಲ್ಲ, ಎಲ್ಲಾ ವಿಚಾರದಲ್ಲಿಯೂ. ಆದರೆ ದೂರದಿಂದ ಕಂಡದ್ದು ಹೆಚ್ಚು ದಿನ ಉಳಿಯುವುದಿಲ್ಲ. ಹತ್ತಿರದಿಂದ ಕಂಡು ನಮ್ಮದಾಗಿ ಮಾಡಿಕೊಂಡ ಸೌಂದರ್ಯ ನಮ್ಮೊಳಗಿಳಿದು ಶಾಶ್ವತವಾಗಿ ಉಳಿಯುತ್ತದೆ. ಅದರ ಇನ್ನೊಂದು ಹೆಸರೇ ಪ್ರೀತಿ.

ನುಣುಪಾದ ಬೆಟ್ಟದ ಮಡಿಲಿಗೆ ಹೋಗಿ ನೋಡಿದರೆ ಕಾಣಿಸುವುದು ಬರೀ ಕಲ್ಲು ಹುಲ್ಲು, ಪೊದೆ ಪೊದರು. ಅಲ್ಲಿ ಇಲ್ಲಿ ಹಾವುಗಳು, ಕೀಟಗಳು ಕೂಡ ಇರಬಹುದು. ಮಲೇರಿಯಾ, ಚಿಕುನ್‌ಗುನ್ಯಾ ಅಥವಾ ಇನ್ಯಾವುದೋ ಅನಾಮಧೇಯ ರೋಗವನ್ನು ತರುವ ಸೊಳ್ಳೆ ಇರಬಹುದು. ಯಾವುದೋ ಗಿಡವನ್ನು ಮುಟ್ಟಿದರೆ ಅಲರ್ಜಿಯಾಗುವ ಸಂಭವವಿದೆ. ಚೇರೆ ಗಿಡ ಮುಟ್ಟಿದರೆ ಅಥವಾ ಅದರ ಹಣ್ಣು ಕಿತ್ತರೆ, ನೀವು ಯಾರೇ ಆಗಿರಲಿ, ಅಪಾಯ ಕಟ್ಟಿಟ್ಟದ್ದು. ಜ್ವರ ಬಂದು ನಿಮ್ಮ ಇಡೀ ಮೈ ಕೆಂಪಗಾಗಿ ಊದಿಕೊಂಡು ದಿನಗಟ್ಟಳೆ ನರಳುವುದು ಖಚಿತ. ಅದಕ್ಕೆ ಒಂದೋ ಪ್ರತಿ ವಿಷವಾಗಿರುವ ನಾಟಿ ಮದ್ದು ಸೇವಿಸಬೇಕು ಅಥವಾ ಡಾಕ್ಟರಿಗೆ ಸಾವಿರಾರು ರುಪಾಯಿ ಸುರಿಯಬೇಕು!

ನಮ್ಮ ತಾಯಂದಿರಿಗೆ ಇದೇ ಚೇರೆ ಮರದ ಚಿಗುರನ್ನು ಜಾಗ್ರತೆಯಿಂದ ಸಂಗ್ರಹಿಸಿ ಬೇಯಿಸಿ ತುಪ್ಪದಲ್ಲಿ ಹುರಿದು ಚಟ್ನಿ ಮಾಡಲು ಗೊತ್ತಿದೆ. ಆ ಚಟ್ನಿಯನ್ನು ನಾವೆಲ್ಲ ಎಷ್ಟೋ ಬಾರಿ ತಿಂದಿದ್ದೇವೆ. ಹೀಗೆಯೇ ವಿಷವೂ ಅಮೃತವೂ ಆಗಿರುವ ಹಲವು ಸಸ್ಯಗಳ ಚಿಗುರುಗಳ ಚಟ್ನಿಯನ್ನು, ತಂಬುಳಿಯನ್ನು ನಾವು ಮೆದ್ದಿದ್ದೇವೆ. ವಿಷ ಸದೃಶ ಚೇರೆ ಹಣ್ಣನ್ನು ಒಂದಾದ ಬಳಿಕ ಒಂದರಂತೆ ಏಳು ಸರಳಿಯೆಲೆಗಳಲ್ಲಿ ಹಾಕಿ ಅತ್ತಿತ್ತ ಉರುಳಿಸಿದ ಬಳಿಕ ಬಾಯಿಗೆ ಹಾಕಿಕೊಂಡು ಸವಿದಿದ್ದೇವೆ. ಅತ್ತಿ ಮರದ ಬೇರಿನಿಂದ ಒಸರುವ ನೀರನ್ನು ಲೀಟರುಗಟ್ಟಳೆ ಕುಡಿದಿದ್ದೇವೆ. ಯಥೇಚ್ಛವಾಗಿ ಅತ್ತಿ ಹಣ್ಣು, ರೆಂಚೆ ಹಣ್ಣು, ಅಂಟು ಹಣ್ಣು, ಏಕನಾಯಕ ಮರದ ಹಣ್ಣು, ಮುಳ್ಳು ಹಣ್ಣು, ಬೆಕ್ಕಿನ ಕಣ್ಣು, ಬೆಣ್ಣೆ ಹಣ್ಣು, ಕಾರೆ ಹಣ್ಣು, ಬೋರೆ ಹಣ್ಣು, ನೇರಳೆ ಹಣ್ಣು ಮತ್ತು ಕಾಡಿನಲ್ಲಿ ಸಿಗುವ ಇನ್ನೂ ಹಲವು ಬಗೆಯ ಹಣ್ಣುಗಳನ್ನು ಕಿತ್ತು ತಿಂದು, ಗವಿ ಗುಹೆಗಳನ್ನು ಹೊಕ್ಕು ಹೊರಬಂದು, ಕೋಡುಗಲ್ಲಿಂದ ಕೋಡುಗಲ್ಲಿಗೆ ಹಾರಿ, ಮರದ ಕೊಂಬೆಯ ಮೇಲಿಂದಲೇ ಕಂದಕಗಳನ್ನು ದಾಟಿದ್ದೇವೆ. ನಾವು ನಿಸರ್ಗವನ್ನು ಪ್ರೀತಿಸುವಷ್ಟೇ ನಿಸರ್ಗ ಕೂಡ ನಮ್ಮನ್ನು ಪ್ರೀತಿಸುತ್ತದೆ ಎಂದೆಷ್ಟೋ ಬಾರಿ ಅನಿಸಿದ್ದಿದೆ. ಆದರೆ ನಿಸರ್ಗದ ಜೊತೆಗಿನ ನಮ್ಮೆಲ್ಲ ಹೊಸ ಹೊಸ ಅನುಭವ ಮತ್ತು ಸಾಹಸಗಳ ಜೊತೆಯಲ್ಲಿ ನಮ್ಮ ಹಿರಿಯರು ಕೊಟ್ಟ ಅರಿವಿನ ಬೆಳಕು ಮತ್ತು ಪ್ರೀತಿ ಇರುತ್ತಿತ್ತು. ಆದ್ದರಿಂದ ಬದುಕಿ ಉಳಿದಿದ್ದೇವೆ.

ನಮ್ಮ ದೇಶದ ಮುಕ್ಕಾಲು ಪಾಲು ಮಂದಿ ಹಾವುಗಳು, ಸರೀಸೃಪಗಳ ನಡುವೆ, ನವಿಲು, ಮೊಲ, ಕಾಡುಹಂದಿ, ಕೋತಿ ಕಾಟದ ನಡುವೆ, ಔಷಧಿ ಮತ್ತು ವಿಷ ಎರಡೂ ಆಗಿರುವ ಗಿಡ ಮರಗಳ ನಡುವೆ ಬದುಕುತ್ತಾರೆ. ಇದು ಬಹುಶಃ ನಗರಿಗರಿಗೆ ಏನೇನೂ ಗೊತ್ತಿಲ್ಲದ ಒಂದು ಜಗತ್ತು. ನಮ್ಮ ಹಳ್ಳಿಗಳ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ನಗರದಲ್ಲಿರುವುದಾದರೋ ಒಂದು ಸಣ್ಣ ಸಂಖ್ಯೆಯ ಮಂದಿ.

ವಿಚಿತ್ರವೆಂದರೆ, ನಗರಿಗರು ಅದರಲ್ಲೂ ಮುಖ್ಯವಾಗಿ ಓದಿದವರು, ತಮಗೆ ಹೆಚ್ಚು ಗೊತ್ತಿದೆ ಎಂದು ಭಾವಿಸಿಕೊಳ್ಳುವುದು! ಫೋನು ಎಂದರೆ ಏನು, ಅದರಲ್ಲಿ ಮಾತಾಡುವುದು ಹೇಗೆ ಎಂದು ಹಳ್ಳಿಗರು ಚೋದ್ಯಂಬಡುವ ಕಾಲವೊಂದಿತ್ತು. ಇಂಗ್ಲಿಷ್ ಒಂದು ಅದ್ಭುತ ಎಂದು ಭಾವಿಸುವ ಕಾಲವೊಂದಿತ್ತು. ಈಗ ಸೆಲ್ ಫೋನು, ಕಂಪ್ಯೂಟರ್ ಇತ್ಯಾದಿಗಳ ಬಳಕೆಯ ವಿಚಾರದಲ್ಲಿ ನಗರವಾಸಿಗಳಿಗೂ ಹಳ್ಳಿಗಳಲ್ಲಿ ವಾಸಿಸುವವರಿಗೂ ವ್ಯತ್ಯಾಸವಿಲ್ಲ. ಅಲ್ಲಿರುವುದೆಲ್ಲ ಇಲ್ಲೂ ಇದೆ. ಇಂಗ್ಲಿಷ್ ಮಾಧ್ಯಮ ಶಾಲೆಗಳು, ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳು ಕೂಡ! ಹಾಗಿರುವಾಗ ಹಳ್ಳಿಗರಿಗಿಂತ ನಗರಿಗರಿಗೆ ಹೆಚ್ಚು ಗೊತ್ತಿರುವುದು ಏನು? ನಿಸರ್ಗವೊಂದನ್ನು ಹೊರತುಪಡಿಸಿ, ಹಳ್ಳಿಗಳೆಲ್ಲ ಇವತ್ತು ನಗರಗಳ ಬ್ರಾಂಚುಗಳೇ ಆಗಿವೆ, ಆಗುತ್ತಿವೆ.

ನಮ್ಮ ಮನೆಯ ಅಂಗಳದಲ್ಲಿ ನಾಗರ ಹಾವು ಓಡಾಡುತ್ತದೆ, ಮನೆಯೊಳಗೆ ಕೇರೆ ಹಾವು ಬರುತ್ತದೆ ಎಂಬ ವಿಚಾರ ತಿಳಿದ ನಂತರ ಮೈಸೂರುವಾಸಿಯಾದ ನಮ್ಮೊಬ್ಬರು ಸ್ನೇಹಿತರು ನಮ್ಮಲ್ಲಿಗೆ ಬರುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ! ಕಡಲಿನ ನೀರಿನ ಬಳಿ ಹೋಗಬೇಕಾದ್ದು ಕಡಲನ್ನು ಬಲ್ಲವರ ಜೊತೆಯಲ್ಲಿ. ಕಾಡನ್ನು ನೋಡಲು ಹೋಗಬೇಕಾದ್ದು ಗಿಡ ಮರಗಳ ಗುಣ ಧರ್ಮಗಳನ್ನು ಬಲ್ಲವರ ಜೊತೆಯಲ್ಲಿ. ಹಳ್ಳಿಗರ ಮನೆಯ ಚೆಂದ ಇರುವುದು ಅದರ ವಿನ್ಯಾಸದಲ್ಲಿ ಅಲ್ಲ. ಅವರು ಹೇಗೆ ನಿಮ್ಮನ್ನು ಆದರಿಸುತ್ತಾರೆ ಎನ್ನುವುದರಲ್ಲಿ. ಗುಡ್ಡಗಳ ತುಂಬ ಇರುವ ದೊಡ್ಡ ದೊಡ್ಡ ಪೊದರುಗಳ ಬಗ್ಗೆ ಹೇಳಬೇಕೆಂದರೆ, ಅದೊಂದು ಸಸ್ಯ ವಿಶ್ವ. ಕೆಲವು ದೊಡ್ಡ ಪೊದರುಗಳಲ್ಲಿ ಸುಮಾರು ಮೂವತ್ತು ನಲ್ವತ್ತು ಬಗೆಯ ಸಸ್ಯಗಳಿರುತ್ತವೆ. ಪ್ರತಿಯೊಂದಕ್ಕೂ ಒಂದಲ್ಲ ಒಂದು ಬಗೆಯ ಔಷಧೀಯ ಗುಣವಿದೆ. ನಮ್ಮ ಪಶ್ಚಿಮ ಘಟ್ಟದ ಕಾಡುಬೆಟ್ಟಗಳಲ್ಲಿ ಸಾವಿರಾರು ಬಗೆಯ ಗಿಡ ಮರಗಳಿವೆ. ಕಾಡು ಬೆಟ್ಟಗಳಿಂದೀಚೆ ಊರಲ್ಲಿಯೂ ಇದೆ. ಗಂಧ, ಬೀಟೆ, ಸಾಗುವಾನಿ ಮಾತ್ರವಲ್ಲ, ಜತ್ರೋಪ, ನೋನಿ, ಕತ್ತಾಳೆ, ಉಮ್ಮತ್ತ, ಆಡುಸೋಗೆ, ಹೊನ್ನೆ, ಸುರಹೊನ್ನೆ ಇದೆ. ಮೊಸ್ಕಿಟೊ ಕಾಯಿಲಿನ ತಾಯಿಯಾದ ನೆಕ್ಕಿ ಗಿಡವಿದೆ. ನೋವು ನಿವಾರಕ ಗುಗ್ಗುಳ ಇದೆ. ನೊರೆಕಾಯಿ(ಸೋಪ್‌ನಟ್) ಇದೆ. ಕೆಲವರು ಇದೇ ಚಕ್ಕೆ ಮರ ಎನ್ನುವ ಇಜಿನ್‌ಮರವಿದೆ. ನೇರವಾಗಿ ವನಸ್ಪತಿ ತುಪ್ಪ (ಡಾಲ್ಡಾ) ಕೊಡುವ ತಂದೊಲಿಗೆ (ಗಣಪತಿಕಾಯಿ ಮರ) ಇದೆ. ಕಾಲಿಟ್ಟಲ್ಲಿ ಒಂದಲ್ಲ ಒಂದು ಬಗೆಯ ಔಷಧಿ ಸಸ್ಯವಿದೆ. ಅವುಗಳಲ್ಲಿ ಎಂಥ ಗುಣ ಇದೆ, ಅವು ಹೇಗೆ ಕಾಯಿಲೆಯನ್ನು ವಾಸಿ ಮಾಡುತ್ತವೆ ಎನ್ನುವುದನ್ನು ಇನ್ನೂ ಯಾರೂ ಕಂಡುಕೊಂಡಿಲ್ಲ. ಸರ್ಪಗಂಧಿ, ನೋನಿ, ಜತ್ರೋಪ, ಸಂಜೀವಿನಿ-ಹೀಗೆ ಯಾವಾಗಲೋ ಯಾವುದಾದರೊಂದು ಸಣ್ಣ ಗಿಡ ದೊಡ್ಡ ಸುದ್ದಿ ಮಾಡುವುದುಂಟು. ಎಲ್ಲ ಗಿಡಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ಒಂದು ಶತಮಾನ ಸಾಲದು. ಬಹಳ ದೊಡ್ಡ ಸುದ್ದಿಯಾದ ಗಿಡ ಬೇರು ಸಹಿತ ನಾಶವಾಗುವ ಅಪಾಯ ಬೇರೆ ಇದೆ.

ನಕ್ಸ್ ವೋಮಿಕ ಎಂಬುದು ಹೋಮಿಯೋಪತಿಯಲ್ಲಿ ವಾಂತಿ ಭೇದಿಗೆ ಒಂದು ಔಷಧಿ. ಅದನ್ನು ಕೊಡುವ ಕಾಸರಕನ ಮರವಿದೆ. ಇದರ ಕ್ರಿಕೆಟು ಚೆಂಡಿನಂಥ ಹಣ್ಣಿನ ಒಳಗೆ ಹೊಳೆಯುವ ಚಪ್ಪಟೆ ಬೀಜಗಳಿವೆ. ಇದನ್ನು ಜಗಿದು ನುಂಗಿದರೆ, ಪ್ರಜ್ಞೆ ತಪ್ಪಿ ಬೀಳುವುದು ಖಚಿತ. ಲಿವರ್ ಹಾನಿಗೀಡಾಗಿ ಸಾವು ಬರಬಹುದು. ಚೆಂದದ ಹಳದಿ ಹೂವನ್ನು ಬಿಡುವ ಕರವೀರದ ಕಾಯಿಯೊಳಗಿನ ತಿರುಳನ್ನು ತಿಂದು ಮಕ್ಕಳು ಸತ್ತದ್ದಿದೆ. ಜತ್ರೋಪದ ಕಾಯಿಯ ತಿರುಳು ತಿಂದು ಕೂಡ ಮಕ್ಕಳು ಅಸು ನೀಗಿದ್ದಿದೆ. ಈಗ ಅದ್ಭುತ ಔಷಧಿ ಎಂದು ತಿಳಿಯಲಾಗುವ ನೋನಿ (ಚಾಯದ ಮರ) ತೊಗಟೆಯನ್ನು ಹಳ್ಳಿಗರು ಔಷಧಿಯಾಗಿ ಬಳಸುತ್ತಿದ್ದರು. ಬೆಳೆದ ಲಡ್ಡನ್ನು ಹೋಲುವ ಅದರ ಹಳದಿ ಬಣ್ಣದ ಕಾಯಿಗಳನ್ನು ಹೊಳೆಯಲ್ಲಿ ಮೀನು ಹಿಡಿಯಲು ಬಳಸುತ್ತಿದ್ದರು. ಒಂದಷ್ಟು ಕಾಯಿಗಳನ್ನು ಗುದ್ದಿ ನೀರು ಕಡಿಮೆಯಾದ ಕಾಲದಲ್ಲಿ ಹೊಳೆಯಲ್ಲಿ ಅಲ್ಲಲ್ಲಿ ಕೊಳಗಳಂತೆ ಉಳಿಯುವ ನೀರಿನಲ್ಲಿ ಹಾಕಿದರೆ ಮೀನುಗಳು ಪ್ರಜ್ಞಾಹೀನವಾಗಿ ತೇಲುತ್ತವೆ. ಆ ಮೀನಿನಲ್ಲಿ ವಿಷಾಂಶ ಇಲ್ಲ. ಕರ್ಕಾಟಕ ಅಮವಾಸ್ಯೆಯಂದು ಹಾಲೆ ಮರದ ಕೆತ್ತೆಯೆಂದು ತಪ್ಪಿ ಹಾಲೆ ಮರದ ಕೆತ್ತೆಯ ರಸ ಕುಡಿದು ಮನೆಮಂದಿ ಸತ್ತದ್ದಿದೆ. ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಬೇಕಾದ ಕಾಯಿಗಳು ಬೇರುಗಳು ಇವೆ. ಹಾಗೆಯೇ ಹಾಗೆಯೇ ಜೀವ ಉಳಿಸುವ ಕೆಲವು ಕಾಯಿಗಳು ಕೂಡ ಇವೆ.

ಲ್ಯಾಬೊರೇಟರಿಯಲ್ಲಿ ಶೋಧಿಸಿ ನೋಡಿದರೆ, ಆಯುರ್ವೇದಿಕ್, ಅಲೋಪತಿಕ್ ಮತ್ತು ಹೋಮಿಯೋಪತಿಕ್ ಔಷಧಗಳಲ್ಲಿ ಬಳಕೆಯಾಗುವ ಬಹುತೇಕ ಎಲ್ಲಾ ಔಷಧಗಳ ರಾಸಾಯನಿಕಗಳು ನಮ್ಮ ಸುತ್ತ ಇರುವ ಮತ್ತು ನಾವು ತಿನ್ನುವ ಸಸ್ಯಗಳಲ್ಲಿ ಇವೆ ಎಂದು ಕಂಡುಕೊಳ್ಳಬಹುದು. ಈ ಅರಿವು ಬಹಳ ಪ್ರಯೋಜನಕಾರಿ. ಯಾಕೆಂದರೆ, ಯಾವುದು ಔಷಧ ಯಾವುದು ಆಹಾರ ಎಂಬ ವಿಚಾರ, ಯಾವುದನ್ನು ಎಷ್ಟು ತಿಂದರೆ ಆಹಾರ ಎಷ್ಟು ತಿಂದರೆ ವಿಷ ಎಂಬ ವಿಚಾರ, ಯಾವ ಕಾಯಿಲೆಯವರು ಏನನ್ನು ತಿನ್ನಬಹುದು ಏನನ್ನು ತಿನ್ನಬಾರದು ಎಂಬ ವಿಚಾರ ತಿಳಿಯುತ್ತದೆ. ಹಳ್ಳಿಯಲ್ಲಿ ಜನರಿಗಿದು ಅನುಭವದಿಂದ ಗೊತ್ತಿದೆ. ಈ ಅನುಭವಕ್ಕೆ ಕೆಲವು ಶತಮಾನಗಳ ಹುಟ್ಟು ಸಾವುಗಳ ಜಾತಕ ಇದೆ ಎನ್ನುವುದನ್ನು ಮರೆಯಲಾಗದು.

ನಗರದಿಂದ ಬಂದವರಿಗೆ ಗೇರುಹಣ್ಣಿನ ಹೊರಗಡೆ ಅದರ ಬೀಜ ನೇತಾಡುವುದು ನೋಡಿ ಎಲ್ಲಿಲ್ಲದ ಅಚ್ಚರಿ. ಅನಾನಸು ಹಣ್ಣಿನ ಮೇಲಿರುವ ಜುಟ್ಟು ಕೂಡ ಅದರ ಗಿಡವೇ ಎಂದರೆ ವಿಸ್ಮಯ. ಯಾವ ಧಾನ್ಯ ಎಲ್ಲಿ ಬೆಳೆಯುತ್ತದೆ, ಹೇಗೆ ಬೆಳೆಯುತ್ತದೆ, ಯಾವ ಹಣ್ಣು ತರಕಾರಿ ಗಿಡದಲ್ಲಿ ಬೆಳೆಯುತ್ತದೆ ಯಾವುದು ಬಳ್ಳಿಯಲ್ಲಿ ಬೆಳೆಯುತ್ತದೆ, ಹುಲ್ಲಿನ ಬೀಜ ಯಾವುದು ಹೂವಿನ ಬೀಜ ಯಾವುದು, ಔಷಧಿ ಯಾವುದು ವಿಷ  ಯಾವುದು, ಯಾವುದು ಯಾವುದರ ಜ್ಯೂಸ್, ಯಾವ ಎಸ್ಸೆನ್ಸ್ ಯಾವ ಹಣ್ಣಿನದು? ಇದೆಲ್ಲ ಯಾವ ಗಿಡದ ಮೇಲೂ ಬರೆದಿರುವುದಿಲ್ಲ. ಇವತ್ತು ಅಂಗಡಿಯಲ್ಲಿ ಎಲ್ಲವೂ ಬಾಟಲಿಯಲ್ಲಿ ಲಭ್ಯ. ಅದರ ಮೇಲೆ ಎಲ್ಲ ಹೆಸರುಗಳು ಇರುತ್ತವೆ. ಆದನ್ನು ಕಂಠಪಾಠ ಮಾಡಿಕೊಂಡು ಯಾವುದರಲ್ಲಿ ಏನು ಇದೆ ಎಂದು ಹೇಳಬಹುದು. ಅದರ ಮೇಲೆ ಅದರ ಅದ್ಭುತ ಗುಣಗಳನ್ನು ಕೂಡ ಅಲ್ಲೇ ಬರೆದಿರಬಹುದು. ಆದರೆ ಅದು ಅರಿವು ಎನಿಸಿಕೊಳ್ಳುತ್ತದೆಯೆ?

ಇವತ್ತು ಶಾಲೆಗಳಲ್ಲಿ ಓದುತ್ತಿರುವ ನಮ್ಮ ಮಕ್ಕಳಿಗೆ ಅರಿವು ಅಥವಾ ಜ್ಞಾನ ಎಂಬುದಾಗಿ ತಿಳಿದಿರುವುದು ಏನು, ಎಷ್ಟು? ಅವರು ತಿಳಿದುಕೊಳ್ಳಬೇಕಾದ್ದನ್ನೆಲ್ಲ ಶಿಕ್ಷಣ ಅವರಿಗೆ ನೀಡುತ್ತಿದೆಯೆ? ನಾವು ಉಣ್ಣುವ ಅನ್ನ, ತಿನ್ನುವ ಕಾಯಿಪಲ್ಲೆ ಮುಂತಾದ್ದೆಲ್ಲ ಎಲ್ಲಿಂದ ಬರುತ್ತದೆ, ಅದು ಬೆಳೆಯುವುದು ಹೇಗೆ, ಅದನ್ನು ಬೆಳೆಯುವವರು ಯಾರು, ಅವರು ಹೇಗೆ ಜೀವಿಸುತ್ತಾರೆ ಎಂದು ತಿಳಿದಿರಬೇಕಾದ ‘ಅಗತ್ಯ’ ನಮಗೆ ಇಲ್ಲ. ನಮ್ಮ ಇಂಜಿನಿಯರಾಗುವ ಹುಡುಗನಿಗೂ ಇಲ್ಲ. ಆದರೆ ಅವನು ಸಮುದ್ರ ನೋಡಲು ಹೋಗುತ್ತೇನೆ ಎಂದಾಗ ನಮಗೆ ಅವನ ಬಗ್ಗೆ ಚಿಂತೆ ಉಂಟಾಗುತ್ತದೆ. ಯಾಕೆಂದರೆ, ಅದು ಅವನ ಜೀವಕ್ಕೆ ಸಂಬಂಧಿಸಿದ್ದು. ನಮಗೆ ನಮ್ಮ ಬದುಕಿಗೆ ಯಾವುದರೊಡನೆಲ್ಲ ಸಂಬಂಧ ಇದೆಯೋ ಅವೆಲ್ಲದರ ಬಗ್ಗೆ ಏನೂ ತಿಳಿದುಕೊಳ್ಳದೆ ಬದುಕಲು ಸಾಧ್ಯ ಇದೆ. ಆದರೆ ಅದರ ಬಗ್ಗೆ ತಿಳಿದುಕೊಳ್ಳುವುದರ ಮೂಲಕ ನಾವು ಹೆಚ್ಚು ಮನುಷ್ಯರಾಗುತ್ತೇವೆ. ಅದನ್ನು ಪ್ರೀತಿಸುವ ಸುಖಕ್ಕೆ ಭಾಜನರಾಗುತ್ತೇವೆ. ನಮಗೆ ಈಗ ನಾವು ಕುಡಿಯುವ ನೀರಿನ ಕುರಿತಾದ ಚಿಂತೆ ಹತ್ತಿದೆ. ಉಸಿರಾಡುವ ಗಾಳಿಯ ಕುರಿತಾದ ಚಿಂತೆ ಹತ್ತಿದೆ. ನಾವು ತಿನ್ನುತ್ತಿರುವುದು ಏನು ಎನ್ನುವ ಚಿಂತೆ ಕೂಡ ಹತ್ತಿದೆ. ನಮಗೆ ‘ಅಗತ್ಯ’ ಇರುವುದರ ಬಗ್ಗೆ, ನಾವು ವಿಚಾರ ಮಾಡಬೇಕಾದ ‘ಅಗತ್ಯ’ ಉಂಟಾಗುತ್ತದೆ. ಇನ್ನೊಂದರ್ಥದಲ್ಲಿ ನಿಸರ್ಗದ ಬಗ್ಗೆ ತಿಳಿದುಕೊಳ್ಳುವುದು, ನಿಸರ್ಗವನ್ನು ಪ್ರೀತಿಸಬೇಕಾದ್ದು ನಿಸರ್ಗದ ಭಾಗವೇ ಆಗಿರುವ ಮನುಷ್ಯನಿಗೆ ಅನಿವಾರ್ಯವಾಗುತ್ತದೆ.

ನಿಸರ್ಗವನ್ನು ಪ್ರೀತಿಸುವುದು ಎಂದರೆ ನಿಸರ್ಗವನ್ನು ಅರ್ಥ ಮಾಡಿಕೊಳ್ಳುವುದು. ಮನುಷ್ಯನನ್ನು ಪ್ರೀತಿಸುವುದು ಎಂದರೆ ಮನುಷ್ಯನನ್ನು ಅರ್ಥ ಮಾಡಿಕೊಳ್ಳುವುದು. ಯಾವುದನ್ನೂ ಪೂರ್ತಿ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ‘ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು’ ಎನ್ನುವುದು ಹೆಚ್ಚು ಸಮಂಜಸ. ನಿಸರ್ಗ ನಗರದಿಂದ ಬಹಳ ದೂರದಲ್ಲಿದೆ ಎನ್ನುವುದು ತಪ್ಪು ಭಾವನೆ. ಅದು ನಗರದ ಹೊರಗಡೆ ಇದೆ ಅಷ್ಟೆ. ಅದನ್ನು ಕಾಣುವ ಕಣ್ಣುಗಳು ಅರ್ಥಾತ್ ಪ್ರೀತಿ ಬೇಕು. ನಿಜವಾದ ಶಿಕ್ಷಣ ನಿಸರ್ಗಕ್ಕೆ ಹತ್ತಿರವಾಗಿರಬೇಕು. ವಾಸ್ತವದಲ್ಲಿ, ಶಿಕ್ಷಣ ಅಲ್ಲಿಂದ ಆರಂಭವಾಗಬೇಕು. ಕಟ್ಟಡದೊಳಗಿಂದ ಅಲ್ಲ.