ಇತ್ತೀಚೆಗೆ ಇತ್ತ ನಾಟಕವೂ ಅಲ್ಲದ, ಅತ್ತ ಸರಳ ಓದುವಿಕೆಯೂ ಅಲ್ಲದ ಮಧ್ಯಮಾರ್ಗದಲ್ಲಿ ನಿಂತ ಆಡಿಯೋ ಪುಸ್ತಕಗಳ ಭರಾಟೆಯೂ ಹೆಚ್ಚಿದೆ. ಕೆಲಸ ಮಾಡುತ್ತಲೇ ಕೇಳಿಸಿಕೊಳ್ಳಬಹುದು. ವಿಚಾರ ತಿಳಿಯಬಹುದು ಎಂಬ ಸಕಾರಾತ್ಮಕ ಅಂಶಗಳ ಬೆಂಬಲವಿದ್ದರೂ, ಏಕಾಂತದಲ್ಲಿ ಈ ಜಗದ ಪರಿವೆ ಇಲ್ಲದೆ, ಮನೋಲೋಕದಲ್ಲಿ ಪಾತ್ರವೇ ನಾವಾಗಿ ವಿಹರಿಸುವ ‘ಓದಿ’ನ ಆನಂದವನ್ನು ಎಂದಿಗೂ ಅವು ನೀಡಲಾರವು. ನಮ್ಮ ಕಲ್ಪನೆಯಲ್ಲಿ ಪಾತ್ರಗಳಿಗೆ ರೂಪ, ಬಣ್ಣ, ನಿಲುವು ಸಿಕ್ಕಂತೆಯೇ ಅವುಗಳಿಗೆ ಧ್ವನಿಯೂ ಲಭಿಸಿರುತ್ತದೆ. ಓದಿದವರ ಧ್ವನಿ ನಮ್ಮ ಊಹೆಗೆ ತಕ್ಕದಾಗಿ ಇರಬೇಕೆಂದಿಲ್ಲವಲ್ಲ. ವೈಯಕ್ತಿಕ ಇಷ್ಟ ಕಷ್ಟದಂತೆಯೇ ಕಲ್ಪನೆಯ ಸ್ವರೂಪವೂ ಅನನ್ಯ.
ಎಸ್. ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ

ಸಂಕ್ರಾಂತಿ ಹತ್ತಿರ ಬರುತ್ತಿದೆ. ನವೆಂಬರ್ ಡಿಸೆಂಬರಿನ ಚಳಿಗಾಲದ ಸೋಮಾರಿತನ ಕಿತ್ತೊಗೆದು, ಚುರುಕು ಬಿಸಿಲಿಗೆ ಮೈಮನವೊಡ್ಡಿ ಉತ್ಸಾಹಿಗಳಾಗುವ ಸಮಯ. ಈ ವರ್ಷವಾದರೂ ಹೆಚ್ಚು ಓದಬೇಕು, ಕಡಿಮೆ ಮೊಬೈಲ್ ನೋಡಬೇಕು, ಜಂಕ್ ತಿನ್ನಬಾರದು, ಹಣ ಉಳಿಸಬೇಕು, ಮನೆ ಅಚ್ಚುಗಟ್ಟಾಗಿಡಬೇಕು, ಬಡ್ತಿ ಸಿಗಲಿ, ಪ್ರವಾಸ ಕುದುರಲಿ…. ಹೀಗೆ ಅವರವರ ಆಸಕ್ತಿ, ಮನಸ್ಥಿತಿಗೆ ಅನುಗುಣವಾಗಿ ಕನಸುಗಳನ್ನು, ಯೋಜನೆಗಳನ್ನು ಹೊಸೆಯುವ ಹೊತ್ತು. ಅದೇ ಭೂಮಿ. ಅದೇ ಬಾನು. ಅದೇ ಕತ್ತಲು. ಅದೇ ಬೆಳಗು. ಎಂದು ನಿರಾಶೆ ಹೊದ್ದು ಬದುಕುವವರ ಮಾತು ಬಿಡಿ. ಪ್ರತಿದಿನವೂ ಹೊಸದೊಂದು ಅವಕಾಶ ಎನ್ನುವವರಿಗೂ ಕೆಲವು ಸಲ ಖಾಲಿತನ ಆವರಿಸುವುದಿದೆ. ಆ ಖಾಲಿಯೆನಿಸಿದ ಜಾಗದಲ್ಲಿ ಹೊಸದೊಂದು ಆಸೆಯ ಬೀಜ ನೆಟ್ಟು ಚಿಗುರಿಸುವ ಆಸೆ ಟಿಸಿಲೊಡೆಯುವುದು ನಾವಂದುಕೊಂಡ ಹೊಸವರ್ಷದಲ್ಲಿ. ಮನಸ್ಸು ಮಾಡಿದರೆ ಈ ಅಂಕಿ ಸಂಖ್ಯೆ, ಪಂಚಾಂಗದ ಅವಲಂಬನೆ ಇಲ್ಲದೆಯೂ ಬದಲಾವಣೆಯನ್ನು ಮೈಗೂಡಿಸಿಕೊಳ್ಳಬಹುದು. ಆದರೆ ಹೊಸ ಕ್ಯಾಲೆಂಡರ್, ಹೊಸ ಪಂಚಾಂಗ ಸ್ವಲ್ಪವಾದರೂ ಮಗ್ಗುಲು ಬದಲಿಸಲು ಸೂಚಿಸುತ್ತದೆಂಬ ಭರವಸೆ.

ಹಾಗೆ ಈ ಬಾರಿ ಮಗ್ಗುಲು ಬದಲಿಸಬೇಕೆನ್ನಿಸಿದ್ದು ಪುಸ್ತಕಗಳ ವಿಚಾರದಲ್ಲಿ. ನಮಗೆ ನಾವು ಕೊಂಡು ಬಳಸದೆ ಬಿಟ್ಟ ಯಾವ ವಸ್ತುವೂ ತಿವಿಯದಷ್ಟು ಬಗೆಯಲ್ಲಿ ತಂದಿಟ್ಟುಕೊಂಡು ಓದದೆ ಬಿಟ್ಟ ಪುಸ್ತಕ ತಿವಿಯುತ್ತದೆ. ಪ್ರಖ್ಯಾತರ ವಿಮರ್ಶೆ ನಂಬಿ, ಸಹ ಓದುಗರ ಮೆಚ್ಚುಗೆಗೆ ಮರುಳಾಗಿ, ಬಿಡುಗಡೆಗೂ ಮುಂಚೆ ಕೊಟ್ಟ ಭರ್ಜರಿ ಬಿಲ್ಡಪ್ಪುಗಳಿಗೆ ಬಿದ್ದು ಕೊಂಡ ಪುಸ್ತಕ ಸಪ್ಪೆಯೆನಿಸುವುದಿರಲಿ. ಓದಿಸಿಕೊಳ್ಳದೆ ಪೀಡಿಸುವಾಗ ಉಂಟಾಗುವ ಕಿರಿಕಿರಿ ಅನುಭವಿಸಿದವರಿಗೆ ಮಾತ್ರ ತಿಳಿಯುತ್ತದೆ. ಪೊರಕೆ, ಹಣ್ಣು, ತರಕಾರಿಯಿಂದ ಹಿಡಿದು ಐಷಾರಾಮಿ ವಸ್ತುಗಳವರೆಗೂ ಸಕಲವನ್ನೂ ಆನ್ ಲೈನಲ್ಲಿ ಖರೀದಿಸಿ, ಸಮಯ ಉಳಿಯಿತೆನ್ನುವ ನನ್ನ ಪೀಳಿಗೆಯವರಿಗೆ ಇತ್ತೀಚೆಗೆ ಆದ ಜ್ಞಾನೋದಯವೆಂದರೆ, ಪುಸ್ತಕಗಳನ್ನು ಮಾತ್ರ ಆನ್‌ಲೈನಲ್ಲಿ ಖರೀದಿಸಿ ಮೂರ್ಖರಾಗಬಾರದೆನ್ನುವುದು. ಅದರಲ್ಲೂ ಲೇಖಕರ, ಅವರ ಬರಹದ ಗಂಧಗಾಳಿ ತಿಳಿಯದ ಪಕ್ಷದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರದಲ್ಲಿ ಕೊಚ್ಚಿಹೋಗುತ್ತಿರುವ ಅವರ ಪುಸ್ತಕಗಳ ಬಗ್ಗೆ ಎಷ್ಟು ಜಾಗ್ರತೆ ವಹಿಸಿದರೆ ಅಷ್ಟು ನಿಮ್ಮ ನೆಮ್ಮದಿ ಗಟ್ಟಿಯಾಗುತ್ತದೆ.

ಈ ಮಧ್ಯೆ, ಹೊಟ್ಟೆಗೆ, ಬಟ್ಟೆಗೆ ದುಡ್ಡು ಸುರಿಯುವಾಗ ಇಲ್ಲದ ಜಿಪುಣತನ ಪುಸ್ತಕದ ವಿಷಯದಲ್ಲಿ ಜಾಗೃತವಾಗುವುದು ಹೇಗೆಂಬ ಪ್ರಶ್ನೆಯೂ ಕಾಡಿತ್ತು. ಅಡುಗೆಯಾಗಲಿ. ಉಡುಗೆಯಾಗಲಿ. ಸರಿಯಾಗಲಿಲ್ಲವೆನಿಸಿದರೆ ಸರಿದೂಗಿಸಿಕೊಳ್ಳುವ ಅವಕಾಶವನ್ನು ಬಗಲಿನಲ್ಲಿ ಹೊತ್ತು ತಂದಿರುತ್ತದೆ. ಪುಸ್ತಕವನ್ನು ನಮ್ಮ ಅಭಿರುಚಿಗೆ ತಕ್ಕಂತೆ ಮಾರ್ಪಾಡು ಮಾಡಲಾಗುವುದಿಲ್ಲ. ಅದು ಇರುವಂತೆಯೇ ಒಪ್ಪಿ, ಪ್ರೀತಿಸಿ, ಎದೆಗವುಚಿಕೊಳ್ಳಬೇಕಾದ ಕೂಸು. ಅಕ್ಷರಗಳು ಅಂತರಂಗದ ಮೇಲೆ ಮೂಡಿಸುವ ಶಾಶ್ವತ ಕುರುಹು ಕಾರಣವಿರಬಹುದು. ಓದಿದಂತೆ ನಟಿಸಿ, ಇಷ್ಟಪಟ್ಟಂತೆ ನಟಿಸಿ, ನಮ್ಮನ್ನು ನಾವು ನಂಬಿಸಿಕೊಳ್ಳಲಾಗದ ಕ್ಷೇತ್ರವಿದು. ಒಂದು ಸಮಯದಲ್ಲಿ ಹುಚ್ಚುಹಿಡಿದು ಓದಿಸಿಕೊಳ್ಳುತ್ತಿದ್ದ ಲೇಖಕರೂ, ಪುಸ್ತಕವೂ ಕಾಲಾನುಕ್ರಮದಲ್ಲಿ ಆಕಳಿಕೆ ತರಿಸುವ ವೈರುಧ್ಯಗಳಿಗೂ ಇಲ್ಲಿ ಜಾಗವಿದೆ. ಮೊದಲ ಓದಿನಲ್ಲಿ ಸೆಳೆಯದ ಬರಹಗಾರರಿಗೆ, ಮತ್ತೊಮ್ಮೆ ಅವಕಾಶ ಕೊಡಲು ಅಂಜುವ ಕೃಪಣತೆಗೂ.

ವರ್ಷದ ಕೊನೆಗೆ ಓದಿದ ಪುಸ್ತಕಗಳ ಪಟ್ಟಿ ಹಾಕುವವರಿದ್ದಂತೆ, ಲೆಕ್ಕವಿಡದೆ ಕೈಗೆ ಸಿಕ್ಕಿದ್ದೆಲ್ಲಾ ಓದುವವರಿದ್ದಾರೆ. ಓದನ್ನು ಗಂಭೀರವಾಗಿ ಪರಿಗಣಿಸಿದವರು, ಎಲ್ಲ ಹವ್ಯಾಸಗಳಂತೆ ಇದೊಂದು ರಂಜನೆಯೆಂದವರು, ನಾನು ಓದಿದ್ದು ಮಾತ್ರ ಶ್ರೇಷ್ಠವೆನ್ನುವ ಮಹಾಪುರುಷರೂ, ಆಯಾ ನೆಲೆಯಲ್ಲಿ ಅನುಭವಿಸಿ ಜೀವಿಸುವ ಸಹೃದಯರು, ಆಗಷ್ಟೇ ಅಕ್ಷರಲೋಕಕ್ಕೆ ಅಡಿಯಿಟ್ಟವರು…. ಎಲ್ಲರನ್ನೂ ಪೊರೆಯುತ್ತವೆ ಪುಸ್ತಕಗಳು.

ಇತ್ತೀಚೆಗೆ ಇತ್ತ ನಾಟಕವೂ ಅಲ್ಲದ, ಅತ್ತ ಸರಳ ಓದುವಿಕೆಯೂ ಅಲ್ಲದ ಮಧ್ಯಮಾರ್ಗದಲ್ಲಿ ನಿಂತ ಆಡಿಯೋ ಪುಸ್ತಕಗಳ ಭರಾಟೆಯೂ ಹೆಚ್ಚಿದೆ. ಕೆಲಸ ಮಾಡುತ್ತಲೇ ಕೇಳಿಸಿಕೊಳ್ಳಬಹುದು. ವಿಚಾರ ತಿಳಿಯಬಹುದು ಎಂಬ ಸಕಾರಾತ್ಮಕ ಅಂಶಗಳ ಬೆಂಬಲವಿದ್ದರೂ, ಏಕಾಂತದಲ್ಲಿ ಈ ಜಗದ ಪರಿವೆ ಇಲ್ಲದೆ, ಮನೋಲೋಕದಲ್ಲಿ ಪಾತ್ರವೇ ನಾವಾಗಿ ವಿಹರಿಸುವ ‘ಓದಿ’ನ ಆನಂದವನ್ನು ಎಂದಿಗೂ ಅವು ನೀಡಲಾರವು. ನಮ್ಮ ಕಲ್ಪನೆಯಲ್ಲಿ ಪಾತ್ರಗಳಿಗೆ ರೂಪ, ಬಣ್ಣ, ನಿಲುವು ಸಿಕ್ಕಂತೆಯೇ ಅವುಗಳಿಗೆ ಧ್ವನಿಯೂ ಲಭಿಸಿರುತ್ತದೆ. ಓದಿದವರ ಧ್ವನಿ ನಮ್ಮ ಊಹೆಗೆ ತಕ್ಕದಾಗಿ ಇರಬೇಕೆಂದಿಲ್ಲವಲ್ಲ. ವೈಯಕ್ತಿಕ ಇಷ್ಟ ಕಷ್ಟದಂತೆಯೇ ಕಲ್ಪನೆಯ ಸ್ವರೂಪವೂ ಅನನ್ಯ. ಹಾಗಾಗಿ ಸೂಕ್ಷ್ಮ ಗ್ರಹಿಕೆಯ ಓದುಗರಿಗೆ ಕೇಳು ಪುಸ್ತಕಗಳೆಂದೂ ಆತ್ಮೀಯವೆನಿಸಿಲ್ಲ. ಅಷ್ಟಕ್ಕೂ ಓದುಗರಿಗೂ, ಕೇಳುಗರಿಗೂ ಬಹಳ ವ್ಯತ್ಯಾಸವಿದೆ.

ಇನ್ನು, ಪುಸ್ತಕ ಕೊಳ್ಳುವವರಿಲ್ಲ. ಪುಸ್ತಕ ಪ್ರಕಟಿಸಿ ಕೈಸುಟ್ಟುಕೊಳ್ಳುವುದು ಬೇಡ… ಎಂಬ ವಾದಗಳಲ್ಲಿ ಹುರುಳಿಲ್ಲವೆನ್ನಿಸುವಷ್ಟು ಹೊಸ ಪುಸ್ತಕಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಬರಹಗಳನ್ನೇ ಪುಸ್ತಕವಾಗಿಸಿದರೂ, ಕೊಳ್ಳುವ ಮೆಚ್ಚುವ ಓದುಗ ವರ್ಗವಿದೆ. ಇಪ್ಪತ್ತು ಸಾವಿರ ಕೈಲಿಟ್ಟುಕೊಂಡರೆ ಸ್ವತಃ ಪ್ರಕಟಿಸಬಹುದು. ಹತ್ತಾರು ಪ್ರಶಸ್ತಿಗಳು. ನೂರಾರು ವೇದಿಕೆಗಳು. ಇತ್ತೀಚೆಗೆ ಪ್ರಪಂಚವೇ ಪುಸ್ತಕಗಳ ಸುತ್ತ ಸುತ್ತುತ್ತಿದೆಯೇನೋ ಎನ್ನಿಸುವಷ್ಟು ಎಲ್ಲೆಲ್ಲೂ ಅದರದ್ದೇ ಮಾತು. ಹಾಗಿದ್ದೂ ಹೊಸಬರ ಪುಸ್ತಕ ಬಂದಾಗ, ಗಾಡ್ ಫಾದರ್‌ಗಳಿಲ್ಲದೆ ಹೆಚ್ಚು ಜನರನ್ನು ತಲುಪಲಾಗದೆಂಬುದು ಮತ್ತೆ ಮತ್ತೆ ಸಾಬೀತಾಗುತ್ತದೆ. ಸಾಮಾನ್ಯ ಪುಸ್ತಕವನ್ನು ಹಾಡಿ ಹೊಗಳುವ, ಓದದಿದ್ದರೆ ಜನುಮವೇ ದಂಡವೆನ್ನುವ ಪ್ರಖ್ಯಾತರು, ಉತ್ತಮ ಪುಸ್ತಕಗಳ ಬಗ್ಗೆ ದಿವ್ಯ ಮೌನವಹಿಸುತ್ತಾರೆ. ನಾಲ್ಕಕ್ಷರ ಬರೆದರೆ ಲೇಖನಿ ಸವೆಯುತ್ತದೆನ್ನುವ ಹಾಗೆ ಬಾಯಿಮಾತಲ್ಲೇ ಮೆಚ್ಚುಗೆ ಸೂಚಿಸಿ ಜಾಣತನ ಮೆರೆಯುತ್ತಾರೆ. ಆದರೆ, ನಿಜವಾದ ಬರವಣಿಗೆಯ ತುಡಿತವಿದ್ದವರು ಮಾತ್ರ ಜನಪ್ರಿಯತೆ, ಪ್ರಶಸ್ತಿಗಳ ಕಣ್ಣುಕೋರೈಸುವ ಬೆಳಕಲ್ಲಿ ಮಂಕಾಗದೆ, ಒಳಗಣ್ಣು ತೆರೆದು ಸಾಹಿತ್ಯಕೃಷಿ ಮುಂದುವರೆಸುತ್ತಾರೆ ಎಂಬ ಸಾರ್ವತ್ರಿಕ ಚಿಂತನೆಯಿದೆ.

ಅಗಾಧ ಕಡಲಿನಲ್ಲಿ, ಬೊಗಸೆ ನೀರು ಮೊಗೆದು ನಿರುಕಿಸಿದಂತೆ ಈ ಚಿತ್ರಗಳು ಭಿತ್ತಿಯಲ್ಲಿ ಮೂಡುತ್ತಿವೆ. ಹಾಗಾಗಿ ಹೊಸವರ್ಷದಲ್ಲಿ, ಪುಸ್ತಕವನ್ನು ತಿರುವಿ, ಸ್ವಲ್ಪ ಓದಿ ಸಮಾಧಾನವೆನ್ನಿಸಿದರೆ ಮಾತ್ರ ಕೊಳ್ಳುವ, ಹೊಸ ಲೇಖಕರನ್ನು ಮುಕ್ತವಾಗಿ ಓದಿ ಮೆಚ್ಚುವ, ಒಂದೊಳ್ಳೆಯ ಮಾತು ಗಂಟಲಲ್ಲಿ ಸಿಕ್ಕಿಕೊಳ್ಳದಂತೆ ಸರಾಗ ಹೇಳಿ, ಬರೆದು ಸಂತೋಷ ಹಂಚುವ ಆಲೋಚನೆ ಜೊತೆಯಾಗಿದೆ. ಸಾಮಾನ್ಯರ ಮಾತಿಗೂ ಕಿವಿಯಾಗುವ ಜನರಿದ್ದಾರೆ. ಬದಲಾವಣೆ ತರಲು ಜನಪ್ರಿಯರೇ ಆಗಬೇಕಿಲ್ಲ…. ಎಂಬ ಆಶಾವಾದ ಬಲಕೊಟ್ಟಿದೆ.