ಇಲ್ಲಿ, ಮಧ್ಯಮ ವರ್ಗದ ಕುಟುಂಬಗಳಲ್ಲಿನ ಹೆಣ್ಣು ಮಕ್ಕಳನ್ನು ಪ್ರತಿನಿಧಿಸುವ ಮತ್ತು ಬದುಕಿನ ಬಗ್ಗೆ ಭವ್ಯ ಕನಸುಗಳನ್ನು ಕಟ್ಟಿಕೊಂಡಿರುವ ‘ಪೂರ್ವಿ’ ಎಂಬ ಮಗುವಿನ ತಾಯಿಯಾದ ನಳಿನಿಯು, ತನ್ನ ಗಂಡ ಅರವಿಂದನ ದೇಹ ಬಯಕೆಯನ್ನು ಈಡೇರಿಸಲು ಪ್ರತಿ ರಾತ್ರಿಯೂ ಹಿಂದೇಟು ಹಾಕುವುದಕ್ಕೆ ಅವರ ಬದುಕನ್ನು ಮುತ್ತಿಕೊಂಡಿರುವ ಆರ್ಥಿಕ ಸಮಸ್ಯೆಗಳೇ ಕಾರಣವಾಗಿರುವುದು ಪರಿಸ್ಥಿತಿಯ ವ್ಯಂಗ್ಯದಂತಿದೆ. ಆದರೆ ಕಡೆಗೂ ನಳಿನಿಯು ಆತನ ದೇಹ ಬಯಕೆಯನ್ನು ಈಡೇರಿಸಲು ಮುಂದಾಗುವ ಸಂದರ್ಭದಲ್ಲಿ ಎದುರಿಸುವ ಸಂದಿಗ್ಧಗಳೇ ಆಕೆ ಗುಲ್ ಮೊಹರ್ ಹುಡುಗನ ಕರಾಳ ಬದುಕಿನೊಂದಿಗೆ ಮುಖಾಮುಖಿಯಾಗುವುದಕ್ಕೆ ಕಾರಣವಾಗುತ್ತದೆ!
ಕಥೆಗಾರ ಅನಿಲ್‌ ಗುನ್ನಾಪೂರ ಬರೆದ “ಕಲ್ಲು ಹೂವಿನ ನೆರಳು” ಕಥಾ ಸಂಕಲನದ ಕುರಿತು ಕಲ್ಲೇಶ್ ಕುಂಬಾರ್ ಬರಹ

ಕಥೆ ಕಟ್ಟುವಲ್ಲಿ ಹೊಸ ಬಗೆಯ ಆಲೋಚನಾಕ್ರಮವನ್ನು ಅಳವಡಿಸಿಕೊಂಡಿರುವ ಅನಿಲ್ ಗುನ್ನಾಪೂರ ಅವರು ಸೂಕ್ಷ್ಮ ಸಂವೇದನೆಗಳ ಯುವ ಕಥೆಗಾರ. ಸದಾ ತಮ್ಮೊಳಗೊಂದು ಏಕಾಂತವನ್ನು ಸೃಷ್ಟಿಸಿಕೊಂಡು, ಈ ಲೋಕದ ವಿದ್ಯಮಾನಗಳೊಂದಿಗೆ ಮುಖಾಮುಖಿಯಾಗುತ್ತಲೇ ಧ್ಯಾನಸ್ಥ ಸ್ಥಿತಿ ತಲುಪಿ, ಆ ಮೂಲಕವೇ ಕಥೆಗಳನ್ನು ರಚಿಸುವ ಕಲೆಯನ್ನು ಮೈಗೂಡಿಸಿಕೊಂಡವರು. ಅಂತೆಯೇ ಅವರ ಕಥೆಗಳು ವಾಸ್ತವದಲ್ಲಿ ನಮ್ಮ ಅನುಭವಕ್ಕೆ ಬಂದರೂ ನಿರ್ಲಕ್ಷ್ಯಕ್ಕೊಳಪಡುವ ಅನೇಕ ಸಂಗತಿಗಳನ್ನು ಓದುಗನ ಅರಿವಿಗೆ ತಂದುಕೊಟ್ಟು ಅಚ್ಚರಿಯನ್ನುಂಟು ಮಾಡುತ್ತವೆ ಎನ್ನಬೇಕು. ಈ ಮಾತಿಗೆ ಸಾಕ್ಷಿಯಾಗಿ ನಮ್ಮ ಮುಂದೆ ಅವರ ‘ಕಲ್ಲು ಹೂವಿನ ನೆರಳು’ ಕಥಾಸಂಕಲನವಿದೆ. ಈ ಸಂಕಲನದಲ್ಲಿನ ಬಹುತೇಕ ಕಥೆಗಳು ವಸ್ತು, ಭಾಷೆ ಮತ್ತು ತಂತ್ರದ ಕಾರಣವಾಗಿ ವಿಶಿಷ್ಟವೆನಿಸುತ್ತವೆ.

ಹಾಗೆ ನೋಡಿದರೆ ಕಥೆಗಾರ ಅನಿಲ್ ಅವರು ಇಲ್ಲಿನ ಕಥೆಗಳಲ್ಲಿ ಕಟ್ಟಿಕೊಟ್ಟಿರುವ ದುಡಿಯುವ ಕೆಳ ಮಧ್ಯಮ ವರ್ಗದ ಸ್ತ್ರೀ ಪ್ರಪಂಚದ ಅತೀ ಘೋರ ಸಂಗತಿಗಳು ಓದುಗನ ಎದೆಯೊಳಗೆ ವಿಷಾದ ಭಾವವನ್ನು ಮೂಡಿಸುತ್ತವೆ. ಪುರುಷ ಪ್ರಧಾನವಾದ ನಮ್ಮ ವ್ಯವಸ್ಥೆ ಆಕೆಯ ವಿಚಾರದಲ್ಲಿ ತಳೆದಿರುವ ಮನೋಧೋರಣೆಗೆ ಧಿಕ್ಕಾರ ಕೂಗಬೇಕೆನಿಸುತ್ತದೆ. ಈ ನಿಟ್ಟಿನಲ್ಲಿ ಈ ಸಂಕಲನದ ‘ಪರಿಮಳ’ ಎಂಬ ಮೊದಲ ಕಥೆಯನ್ನು ಗಮನಿಸಬಹುದು.

(ಅನಿಲ್‌ ಗುನ್ನಾಪೂರ)

‘ಪರಿಮಳ’ ಕಥೆ, ಭಾವನಾತ್ಮಕ ನೆಲೆಯ ಮೇಲಿನ ಕಲ್ಪನೆಯೊಳಗಿನ ಲೋಕದೊಂದಿಗೆ ವಾಸ್ತವವಾದ ಮನುಷ್ಯ ಬದುಕಿನ ದ್ವಂದ್ವಗಳನ್ನು ಸಮೀಕರಿಸಿ ಹೇಳುತ್ತದೆ. ದುಡಿಯುವ ವರ್ಗದ ವಿಘಟಿತ ಕುಟುಂಬವೊಂದರ, ಗಂಡ ಬಿಟ್ಟು ಹೋದ ಅಸಹಾಯಕ ಹೆಣ್ಣಿನ ಮನೋಸಂಕಟವು ಆಕೆಯ ಮಗಳು ‘ಪಮ್ಮಿ’ಯು ಕಟ್ಟಿಕೊಂಡ ಮುಗ್ಧ ಪ್ರಪಂಚದ ಮೂಲಕವೇ ಅನಾವರಣಗೊಳ್ಳುತ್ತ ಹೋಗುವುದು ಈ ಕಥೆಯ ವಿಶೇಷ. ಆ ಮೂಲಕ ಆಕೆಯ ತಾಯಿಯ ಸಂಸಾರಿಕ ಬದುಕಿನಲ್ಲಿನ ಕಣ್ಣೀರಿಗೆ ಸಾಕ್ಷಿಯಾಗಿ ನಿಲ್ಲುತ್ತದೆ.

ಇಲ್ಲಿ, ‘ಪಮ್ಮಿ’ಯು ತನ್ನ ಭಾವ ಪ್ರಪಂಚದಲ್ಲಿ ಕಾಣುವ ಸುಂದರ ಲೋಕವು ಆಗಾಗ ನುಗ್ಗಿ ಬರುವ ಇಲ್ಲದ ತನ್ನ ತಂದೆಯ ನೆನಪುಗಳ ಕಾರಣವಾಗಿ ಪದೆ ಪದೆ ನಾಶವಾಗುತ್ತಲೇ ಹೋಗುವುದು ಒಂದು ರೀತಿಯಲ್ಲಿ ದುಡಿಯುವ ವರ್ಗದ ಕುಟುಂಬಗಳು ಕಟ್ಟಿಕೊಳ್ಳುವ ಇಂಥದ್ದೇ ಭಾವ ಪ್ರಫಂಚವು ಗಂಡಸಿನ ವಿಚ್ಛಿದ್ರಕಾರಿ ಮನಸ್ಥಿತಿಯಿಂದಾಗಿ ಹೇಗೆಲ್ಲ ಸರ್ವನಾಶವಾಗುತ್ತ ಹೋಗುತ್ತದೆ ಎಂಬುದಕ್ಕೆ ರೂಪಕದಂತಿದೆ. ಹೀಗೆ, ‘ಪಮ್ಮಿ’ಯ ಭಾವ ಪ್ರಪಂಚದಲ್ಲಿ ಸಂಭವಿಸುವ ಘಟನೆಗಳು ಆಕೆಯ ತಾಯಿಯ ಹತಾಶೆಯ ಬದುಕಿನ ಕಾರಣವಾಗಿ ಇಲ್ಲವಾಗುತ್ತಲೇ ಹೋಗುವುದು ದುರಂತವೇ ಸರಿ. ಹಾಗೆಯೇ, ಕಥೆಯ ಅಂತ್ಯದಲ್ಲಿ ‘ಪಮ್ಮಿ’ಯ ತಾಯಿಯು, ತನ್ನ ಮೇಲೆ ಪುಟ್ಟ್ಯಾನ ಅಪ್ಪ ನಡೆಸಲು ಪ್ರಯತ್ನಿಸುವ ದೈಹಿಕ ದೌರ್ಜನ್ಯವನ್ನು ಕಟುವಾದ ಮಾತುಗಳಿಂದ ವಿರೋಧಿಸುವುದಿದೆಯಲ್ಲ… ಅದು, ಇಡಿಯಾಗಿ ಹೆಣ್ಣು ಕುಲದ ಮೇಲೆ ಗಂಡಸು ನಡೆಸುವ ದೌರ್ಜ್ಯನ್ಯಕ್ಕೆ ಧಿಕ್ಕಾರ ಕೂಗುವಂತಿದೆ. ಇಡಿಯಾಗಿ ಕಥೆಯನ್ನು ಆವರಿಸಿಕೊಂಡಿರುವ ಗ್ರಾಮಲೋಕದ ಮನಷ್ಯ ಬದುಕಿನ ಜೀವಂತ ಚಿತ್ರಣ, ಆ ಬದುಕಿನೊಂದಿಗೆ ಬೆಸೆದುಕೊಂಡಿರುವ ಕರುಳ ಸಂಬಂಧಿ ಭಾಷೆ ಮತ್ತು ಆ ನೆಲದ ಮಣ್ಣ ವಾಸನೆ- ಇವೆಲ್ಲವೂ ಕಥೆಯ ಜೀವಂತಿಕೆಗೆ ಸಾಕ್ಷಿಯಾಗಿ ನಿಲ್ಲುತ್ತವೆ.

ಕಥೆಗಾರ ಅನಿಲ್ ಅವರು ತಮ್ಮ ಕಥೆಗಳಲ್ಲಿ ಮಧ್ಯಮ ವರ್ಗದ ಜನರ ಸಮಸ್ಯೆಗಳನ್ನು ಆಪ್ತವಾಗಿ ಕಟ್ಟಿಕೊಡುತ್ತಾರೆ. ಈ ಮಾತಿಗೆ ಸಾಕ್ಷಿಯಾಗಿ ಇಲ್ಲಿ ‘ಗುಲ್ ಮೊಹರ್ ಹುಡುಗ’ ಎಂಬ ಕಥೆ ಇದೆ. ಈ ವ್ಯವಸ್ಥೆಯಲ್ಲಿನ ಮಧ್ಯಮ ವರ್ಗದ ಕುಟುಂಬವೊಂದರ ಎಂದೆಂದೂ ನೀಗಲಾಗದ ಸಮಸ್ಯೆಗಳು ನೈಸರ್ಗಿಕವಾಗಿ ಈಡೇರಿಸಿಕೊಳ್ಳಬಹುದಾದ ಗಂಡು ಹೆಣ್ಣಿನ ದೇಹ ಬಯಕೆಯನ್ನು ಸಹ ಕಾಲಾನುಕ್ರಮದಲ್ಲಿ ಹೇಗೆಲ್ಲ ನಿಯಂತ್ರಿಸುತ್ತ ಹೋಗುತ್ತವೆ ಎಂಬ ವಿಚಾರವನ್ನು ಈ ಕಥೆ ಕಟ್ಟಿಕೊಡುತ್ತದೆ ಎಂದೆನಿಸಿದರೂ ಸಹ ಅವರವರ ಸಮಸ್ಯೆಗಳೇ ಅವರವರ ಬದುಕನ್ನು ಹೇಗೇಗೋ ಮುನ್ನಡೆಸಿಕೊಂಡು ಹೋಗುತ್ತಿರುತ್ತವೆ ಎಂಬ ಮಾತಿಗೂ ಸಹ ಈ ಕಥೆ ಸಾಕ್ಷಿಯಾಗಿ ನಿಲ್ಲುತ್ತದೆ.

ಇಲ್ಲಿ, ಮಧ್ಯಮ ವರ್ಗದ ಕುಟುಂಬಗಳಲ್ಲಿನ ಹೆಣ್ಣು ಮಕ್ಕಳನ್ನು ಪ್ರತಿನಿಧಿಸುವ ಮತ್ತು ಬದುಕಿನ ಬಗ್ಗೆ ಭವ್ಯ ಕನಸುಗಳನ್ನು ಕಟ್ಟಿಕೊಂಡಿರುವ ‘ಪೂರ್ವಿ’ ಎಂಬ ಮಗುವಿನ ತಾಯಿಯಾದ ನಳಿನಿಯು, ತನ್ನ ಗಂಡ ಅರವಿಂದನ ದೇಹ ಬಯಕೆಯನ್ನು ಈಡೇರಿಸಲು ಪ್ರತಿ ರಾತ್ರಿಯೂ ಹಿಂದೇಟು ಹಾಕುವುದಕ್ಕೆ ಅವರ ಬದುಕನ್ನು ಮುತ್ತಿಕೊಂಡಿರುವ ಆರ್ಥಿಕ ಸಮಸ್ಯೆಗಳೇ ಕಾರಣವಾಗಿರುವುದು ಪರಿಸ್ಥಿತಿಯ ವ್ಯಂಗ್ಯದಂತಿದೆ. ಆದರೆ ಕಡೆಗೂ ನಳಿನಿಯು ಆತನ ದೇಹ ಬಯಕೆಯನ್ನು ಈಡೇರಿಸಲು ಮುಂದಾಗುವ ಸಂದರ್ಭದಲ್ಲಿ ಎದುರಿಸುವ ಸಂದಿಗ್ಧಗಳೇ ಆಕೆ ಗುಲ್ ಮೊಹರ್ ಹುಡುಗನ ಕರಾಳ ಬದುಕಿನೊಂದಿಗೆ ಮುಖಾಮುಖಿಯಾಗುವುದಕ್ಕೆ ಕಾರಣವಾಗುತ್ತದೆ!

ತಂದೆಯನ್ನು ಕಳೆದುಕೊಂಡು ಅನಾಥನಾಗಿದ್ದ ಆ ಹುಡುಗನ ದಯನೀಯ ಬದುಕಿನ ಮುಂದೆ ತನ್ನ ಸಮಸ್ಯೆಗಳು ಏನೂ ಅಲ್ಲ ಎಂಬುದರ ಅರಿವಾದಾಗ ನಳಿನಿಯು ಸಂಪೂರ್ಣ ಬದಲಾಗುತ್ತಾಳೆ. ಆಗ, ಗುಲ್ ಮೊಹರ್ ಹುಡುಗ ಎದುರಿಸುತ್ತಿದ್ದ ಅಸಹನೀಯ ಸಂಕಟಗಳೇ ಆತನ ಬದುಕನ್ನು ಮುನ್ನಡೆಸುತ್ತಿರುತ್ತದೆ; ಆ ಹೀನಾಯ ಬದುಕೇ ಆತನನ್ನು ತನ್ನವರೆಗೂ ತಂದು ಬಿಟ್ಟಿದೆ ಎಂಬ ಸತ್ಯದ ಅರಿವಾದಾಗ ಬದುಕಿನ ಕುರಿತಾಗಿ ನಳಿನಿಗೆ ಇದ್ದ ದೃಷ್ಟಿಕೋನವೇ ಬದಲಾಗುತ್ತದೆ. ಕಡೆಗೂ ಆಕೆ ಅರವಿಂದನ ಬಯಕೆಗೆ ಸಕಾರಾತ್ಮಕವಾಗಿ ಸ್ಪಂದಿಸುವಲ್ಲಿಗೆ ಕಥೆ ತನ್ನ ಸಾರ್ಥಕತೆಯನ್ನು ಮೆರೆಯುತ್ತದೆ.

ಅವರ ಕಥೆಗಳು ವಾಸ್ತವದಲ್ಲಿ ನಮ್ಮ ಅನುಭವಕ್ಕೆ ಬಂದರೂ ನಿರ್ಲಕ್ಷ್ಯಕ್ಕೊಳಪಡುವ ಅನೇಕ ಸಂಗತಿಗಳನ್ನು ಓದುಗನ ಅರಿವಿಗೆ ತಂದುಕೊಟ್ಟು ಅಚ್ಚರಿಯನ್ನುಂಟು ಮಾಡುತ್ತವೆ ಎನ್ನಬೇಕು. ಈ ಮಾತಿಗೆ ಸಾಕ್ಷಿಯಾಗಿ ನಮ್ಮ ಮುಂದೆ ಅವರ ‘ಕಲ್ಲು ಹೂವಿನ ನೆರಳು’ ಕಥಾಸಂಕಲನವಿದೆ.

‘ಹುಚ್ಚಯ್ಯನ ಲೀಲೆ’- ಈ ಸಂಕಲನದ ಇನ್ನೊಂದು ಬಹು ಮುಖ್ಯವಾದ ಕಥೆ. ಅನುಭಾವದ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಈ ಕಥೆ, ಲೌಕಿಕ ಬದುಕಿನ ಆಶೆ ಆಮಿಷಗಳ ಪರೀಧಿಯಿಂದ ಮುಕ್ತನಾಗಿ, ಪಾರಮಾರ್ಥಿಕ ಬದುಕಿನ ಸುಖವನ್ನು ಅರಸಿ ಹೊರಟ ಮಹಾಜಿಪುಣ ವ್ಯಕ್ತಿಯೊಬ್ಬನ ಬದುಕಿನಲ್ಲುಂಟಾದ ದಿಢೀರ್ ಆದ ಪಲ್ಲಟಗಳ ಹಿಂದಿನ ಕಾರಣಗಳನ್ನು ಶೋಧಿಸುತ್ತದೆ. ಇಲ್ಲಿ, ಜಿಪುಣತನಕ್ಕೆ ಹೆಸರಾದ ಕಥೆಯ ಮುಖ್ಯಪಾತ್ರ ಚೆನ್ನಪ್ಪ ಸಾವ್ಕಾರನ ಹರೆಯದ ಕಾಲದಲ್ಲಿನ ಲೀಲಾ ವಿನೋದಗಳನ್ನು ಅನಾವರಣಗೊಳಿಸುತ್ತಲೇ ಶರಣ ಬಸವೇಶ್ವರ ಜಾತ್ರೆಯಲ್ಲಿ ಆಡಿದ ನಾಟಕದಲ್ಲಿ ದೈವಾಂಶ ಸಂಭೂತ ಹುಚ್ಚಯ್ಯನ ಪಾತ್ರವನ್ನು ಅಭಿನಯಿಸಿದ ನಂತರದಲ್ಲಿ ಚೆನ್ನಪ್ಪ ಸಾವ್ಕಾರನು ವಿಚಿತ್ರವೆಂಬಂತೆ ವಾಸ್ತವದಲ್ಲಿ ಆ ಪಾತ್ರದ ಗುಣಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಕ್ರಮೇಣವಾಗಿ ಸಂಸಾರಿಕ ಬದುಕಿನಲ್ಲಿ ವಿರಕ್ತಿ ಹೊಂದುತ್ತ ಹೋಗುತ್ತಾನೆ! ಮೇಲ್ನೋಟಕ್ಕೆ ಇದೆಲ್ಲ ಅಸಹಜವೆನಿಸಿದರೂ ಸಹ ಮನುಷ್ಯ ಬದುಕಿನಲ್ಲಿ ಎಲ್ಲ ಆಶೆಗಳು ತೀರಿದ ಬಳಿಕ, ವೈರಾಗ್ಯ ಮೂಡಲಾರಂಭಿಸುವುದು ಸಹಜ ಎಂಬ ಮಾತಿಗೆ ಈ ಘಟನೆ ಸಾಕ್ಷಿಯಾಗಿ ನಿಲ್ಲುತ್ತದೆ.

ಈ ಕಥೆಯ ಅಂತ್ಯದಲ್ಲಿ ಬಳಸಿರುವ ಫ್ಯಾಂಟಸಿ ತಂತ್ರ ನಿಜಕ್ಕೂ ಅಚ್ಚರಿಯನ್ನುಂಟು ಮಾಡುತ್ತದೆ. ಎಲ್ಲವೂ ಮುಗಿದ ಅಂತ್ಯದಲ್ಲಿ ಉಡುಚಾಣದ ಹುಚ್ಚಯ್ಯ ದೇವರ ದರುಶನಕ್ಕೆಂದು ಬರುವ ಚೆನ್ನಪ್ಪ ಸಾವ್ಕಾರನು ಭೀಮಾ ನದಿಯಲ್ಲಿ ಈಜಿಕೊಂಡು ಹೋಗಿ, ಹುಚ್ಚಯ್ಯನನ್ನು ಕೂಡಿಕೊಳ್ಳುವ ಸಂದರ್ಭದಲ್ಲಿ ನೀರಿನ ರಭಸದೊಂದಿಗೆ ತಾನೂ ಸಹ ತೇಲಿ ಹೋಗುವುದು ಒಂದು ತೆರದಲಿ ಪಾರಮಾರ್ಥಿಕ ಬದುಕಿನ ಸುಖವನ್ನು ಶಾಶ್ವತವಾಗಿ ಹೊಂದಲು ಹೊರಟಿರುವನೇನೋ ಎಂದೆನಿಸುತ್ತದೆ. ಈ ದೃಶ್ಯವೊಂದರಿಂದಲೇ ಸಂಸಾರಿಕ ಬದುಕು ಮತ್ತು ಪಾರಮಾರ್ಥಿಕ ಬದುಕಿನ ಸುಖದ ನಡುವಿನ ಅಂತರವನ್ನು ಕಥೆಗಾರ ಅನಿಲ್ ಅವರು ಓದುಗನ ಅರಿವಿಗೆ ತಂದುಕೊಡುತ್ತಾರೆ.

ಈ ಸಂಕಲನದಲ್ಲಿ, ಕಥೆಗಾರ ಅನಿಲ್ ಅವರ ವಿಭಿನ್ನವಾದ ಆಲೋಚನಾ ಕ್ರಮಕ್ಕೆ ಕನ್ನಡಿ ಹಿಡಿಯಬಲ್ಲ ಕಥೆಯೆಂದರೆ, ‘ಚುಕ್ಕಿ ಕೇಳಿದ ಕಥೆ’. ಈ ಕಥೆಯನ್ನು ಓದುತ್ತ ಹೋದಂತೆ ಓದುಗನ ಎದೆಯೊಳಗೆ ತಣ್ಣನೆಯ ವಿಷಾದಭಾವವೊಂದನ್ನು ತುಂಬಿಸಿ ಬಿಡುತ್ತದೆ! ತನ್ನ ತಾಯಿ ಹೇಳುವ ಕಥೆಯಲ್ಲಿ ಬರುವ ಕುರುಡ ಮತ್ತು ನಾಲಗೆಯನ್ನು ಕತ್ತರಿಸಲ್ಪಟ್ಟ ಸೇವಕ ನಕ್ಷತ್ರನನ್ನು ಅಜ್ಜನ ಊರಲ್ಲಿ ತಾನು ನೋಡಿದ್ದೇನೆ ಎಂದು ಚುಕ್ಕಿ ಹೇಳುವುದರ ಮೂಲಕ ತನ್ನ ತಾಯಿಯ ಕುರಿತಾಗಿ ಕಾಲನೊಳಗೆ ಹೂತು ಹೋದ ಘೋರ ಸತ್ಯವೊಂದನ್ನು ಓದುಗನಿಗೆ ಸೂಚ್ಯವಾಗಿ ದಾಟಿಸುವಲ್ಲಿ ಯಶಸ್ವಿಯಾಗುತ್ತಾಳೆ! ಸೂಕ್ಷ್ಮ ಓದಿಗೆ ದಕ್ಕಬಹುದಾದ ಈ ಕಥೆ, ಚುಕ್ಕಿಯ ತಾಯಿಯ ವಿಚಾರದಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತ ಹೋಗುತ್ತದೆ! ಚುಕ್ಕಿಯ ತಾಯಿ ಕಾಲು ಜಾರಿದಳೆ..!?; ಅದರ ಫಲವೇ ಈ ಚುಕ್ಕಿಯೆ..!?; ಈ ಕಾರಣವಾಗಿಯೇ ಸಿರಿ ಜನಿಸಿದ ಮೇಲೆ ಚುಕ್ಕಿ ತಾಯಿಯ ಅನಾದರಕ್ಕೆ ಒಳಗಾದಳೆ..!?, ಅವರಿಬ್ಬರ ನಡುವೆ ಕಥೆಯಲ್ಲಿರುವಂತೆ ಮಾತನಾಡುವ ಗಿಳಿಯೊಂದು ಇದ್ದಿದ್ದರೆ..!?- ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತ ಹೋಗುತ್ತದೆ, ಈ ಕಥೆ. ಕಥೆ ಮುಗಿದ ಮೇಲೂ ಓದುಗನ ಮನದೊಳಗೆ ಹೇಗೆಲ್ಲ ಬೆಳೆಯುತ್ತ ಹೋಗುತ್ತದೆ ಎಂಬುದಕ್ಕೆ ‘ಚುಕ್ಕಿ ಕೇಳಿದ ಕಥೆ’ ಸಾಕ್ಷಿಯಾಗಿದೆ. ಇದೇ ಈ ಕಥೆಯ ಯಶಸ್ಸು ಎಂದು ಹೇಳಬಹುದು.

ಹಾಗೆಯೇ, ‘ಶಾರಿಯ ಗಲ್ಲಾ ಡೆಬ್ಬಿ’ ಕಥೆ, ಹೆಣ್ಣಿನ ವಿಚಾರದಲ್ಲಿ ಪುರುಷ ಮೆರೆಯುವ ರಾಕ್ಷಸಿ ಪ್ರವೃತ್ತಿಯ ಕಾರಣವಾಗಿ ಶಾರವ್ವ ಎಂಬ ಅಮಾಯಕ ಹೆಣ್ಣಿನ ಕನಸುಗಳೆಲ್ಲ ಹೇಗೆ ನುಚ್ಚು ನೂರಾಗಿ, ಆಕೆಯ ಸಾವಿನಲ್ಲಿ ಪರ್ಯಾವಸನಗೊಳ್ಳುತ್ತವೆ ಎಂಬ ಕಟು ಸತ್ಯವನ್ನು ಅನಾವರಣ ಮಾಡಿದರೆ, ‘ಕಮಲಜ್ಜಿ’ ಎಂಬ ಕಥೆ, ನಗರೀಕರಣ ಪ್ರಕ್ರಿಯೆಯು ಸೃಷ್ಟಿಸಿರುವ ಆಧುನಿಕ ಭೋಗ ಜಗತ್ತಿನ ವ್ಯಾಮೋಹಕ್ಕೆ ಒಳಗಾಗಿರುವ ಮನುಷ್ಯ, ಗ್ರಾಮ ಜಗತ್ತು ಅಳವಡಿಸಿಕೊಂಡಿರುವ ಸಾಂಪ್ರದಾಯಿಕವಾದ ಬದುಕಿನಲ್ಲಿನ ಸುಖ, ನೆಮ್ಮದಿ, ಮಾನವೀಯ ಸಂಬಂಧಗಳ ತಂತುಗಳನ್ನು ಕಡಿದುಕೊಂಡು ನಗರವನ್ನು ಸೇರಿ, ಅಲ್ಲಿ ಅನುಭವಿಸುವ ಯಾತನಾಮಯ ಬದುಕನ್ನು ಕಾಣಿಸುತ್ತದೆ. ಈ ಕಥೆಗಳನ್ನು ಹೊರತುಪಡಿಸಿ ಈ ಸಂಕಲನದಲ್ಲಿ ‘ಚಿನ್ಮಯ ನಿಲಯ’ ಮತ್ತು ‘ಅವನಿ’ ಎಂಬ ಎರಡು ಕಥೆಗಳಿದ್ದು ವಸ್ತು, ತಂತ್ರ ಮತ್ತು ನಿರೂಪಣೆಯಿಂದಾಗಿ ಗಮನ ಸೆಳೆಯುತ್ತವೆ.

ಒಟ್ಟು ಕಥೆಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಅನಿಲ್ ಕಥೆಗೆ ಬಳಸುವ ನುಡಿಯ ಬಗ್ಗೆ ಎಚ್ಚರ ವಹಿಸುವುದು ಅನಿವಾರ್ಯವಾಗಿದೆ. ಏಕೆಂದರೆ ಕಥೆಯ ವಸ್ತು, ಪಾತ್ರ, ಸನ್ನಿವೇಶ- ಘಟನೆಗಳನ್ನು ಚಿತ್ರಿಸುವಾಗ ಅವುಗಳ ಒಡಲಿನಿಂದ ನುಡಿ ಸೃಜಿಸಬೇಕು. ಇದು ಕಥೆ ಕಟ್ಟುವಲ್ಲಿ ಕಥೆಗಾರ ಆ ವಸ್ತು, ಪಾತ್ರ, ಘಟನೆ- ಸನ್ನಿವೇಶಗಳನ್ನು ಗಾಢವಾಗಿ ಒಳಗೊಳ್ಳುವುದರಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಈ ಸಂಕಲನದಲ್ಲಿನ ‘ಗುಲ್ ಮೊಹರ್ ಹುಡುಗ’, ‘ಕಮಲಜ್ಜಿ’ ಕಥೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಂಡು ಬಹುದಿತ್ತು! ಹೀಗಾಗಿ, ಕಥೆ ಬರೆಯಲು ಕೇವಲ ಉಮ್ಮೇದಿ ಇದ್ದರೆ ಸಾಲದು. ತಾನು ಗ್ರಹಿಸಿದ ಸಂಗತಿಯ ವಿಚಾರದಲ್ಲಿ ನಿರಂತರವಾದ ಆಲೋಚನೆ, ಆ ಆಲೋಚನೆಗೆ ಒದುಗುವಂತಿರುವ ತಾಳ್ಮೆ ಮತ್ತು ಸಂಯಮ ಕಥೆಗಾರನಿಗೆ ಇರಬೇಕಾಗಿರುವುದು ಅನಿವಾರ್ಯವಾಗಿದೆ. ಕಥೆಗಾರ ಅನಿಲ್ ಅವರು ಭವಿಷ್ಯದಲ್ಲಿ ಈ ಅಂಶಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂದುಕೊಳ್ಳುತ್ತೇನೆ.

(ಕೃತಿ: ಕಲ್ಲು ಹೂವಿನ ನೆರಳು (ಕಥಾಸಂಕಲನ), ಲೇಖಕರು: ಅನಿಲ್ ಗುನ್ನಾಪೂರ, ಪ್ರಕಾಶ: ವೈಷ್ಣವಿ ಪ್ರಕಾಶನ, ಕೆ. ಗುಡದಿನ್ನಿ (ರಾಯಚೂರು), ಪುಟಗಳು: 96, ಬೆಲೆ: 120/-)