ಯಾಕೋ ಇಂದು ಬೆಳ್ಳಂಬೆಳಗ್ಗೆ ಹ್ಯೂ ಎನ್ ಸ್ಯಾಂಗನ ಸಿಲ್ಕ್ ರೋಡಿನ ನೆನಪು ಬಂತು…. “ಸಿಲ್ಕ್ ರೋಡ್” ಗೂಗಲಿಸಿ ನೋಡಿದೆ. ಮ್ಯಾಪ್  ಸಿಕ್ಕೇಬಿಟ್ಟಿತು.ಜೀವದ ಹಂಗು ತೊರೆದು ಆ ಸಿಲ್ಕ್ ರೋಡ್ ಅಥವಾ ಸಿಲ್ಕ್ ರೂಟಿನಲ್ಲಿ ಸಾಗುತ್ತಿದ್ದ ಅಂದಿನ ಸಾಹಸಿಗಳ ಕ್ಯಾರವಾನ್‍ಗಳ ಚಿತ್ರ ನನ್ನ ಕಣ್ಣಮುಂದೆ ನಿಂತಿತು.ನನಗೆ “ಸಾತ್ವಿಕ ಚರಿತ್ರಕಾರ ಮತ್ತು ಪ್ರವಾಸೀ ವಿದ್ವಾಂಸರಾದ ಹ್ಯೂ ಎನ್ ಸ್ಯಾಂಗ್” ಅವರ ಕಠಿಣತಮ ಪ್ರವಾಸದ ನೆನಪಿನ ದಂತ ಕಥೆಯೊಂದರ ನೆನಪು ಕಾಡಿತು. ಭಾರತಲ್ಲಿನ ತನ್ನ ಸ್ನಾತಕೋತ್ತರ ವಿದ್ಯಾಭ್ಯಾಸ ಮುಗಿಸಿ ಸಮಗ್ರ ಭಾರತದ ಪರ್ಯಟನ ಮಾಡಿ ತಾಯ್ನಾಡಿಗೆ ಹೊರಟಿದ್ದರು ಹ್ಯೂ ಎನ್ ಸ್ಯಾಂಗ್.

ಹ್ಯೂ ಎನ್ ಸ್ಯಾಂಗ್ ಅವರು ತಮ್ಮ ಅಮೂಲ್ಯ ಗ್ರಂಥಗಳು ಮತ್ತು ತಮಗೆ ಪಾರಿತೋಷಕವಾಗಿ ಭಾರತದಲ್ಲಿ ಒದಗಿಬಂದ ಅಪಾರ ಸಂಪತ್ತಿನ ಸಂದೂಕಗಳ ಸಮೇತ ತನ್ನ ಕ್ಯಾರವಾನ್‍ನಲ್ಲಿ ತಾಯ್ನಾಡಿಗೆ ಈ ಸಿಲ್ಕ್ ರೂಟಿನಲ್ಲಿ ಮರಳುತ್ತಿದ್ದರು. ಅವರ ಸಂಗ್ರಹದ ಅಮೂಲ್ಯ ಗ್ರಂಥಗಳ ಹೇರು ಹೊತ್ತ ಒಂಟೆಗಳು, ಬೆಲೆಬಾಳುವ ವಸ್ತುಗಳ ಹೇರು ಹೊತ್ತ ಹೇಸರಕತ್ತೆಗಳು, ಕುದುರೆಗಳು, ರಕ್ಷಣೆಯ ಸೈನಿಕರ ಪಡೆ ಮತ್ತು ಅನೇಕ  ಮಂದಿ ಸೇವಕರು ಅವರ ಜತೆ ಇದ್ದರು.

ದುರದೃಷ್ಟವಷಾತ್ ದರೋಡೆಕೋರರಿಂದ ಅವರ ಕ್ಯಾರವಾನ್ ಸಂಪೂರ್ಣವಾಗಿ ದೋಚಲ್ಪಟ್ಟಿತು. ಅಳಿದುಳಿದ ವಸ್ತುಗಳಿಗೆ  ದರೋಡೆಕೋರರು ಬೆಂಕಿ ಹಚ್ಚಿದ್ದರು. ಹ್ಯೂ ಎನ್ ಸ್ಯಾಂಗ್ ಅವರ ಪ್ರಾಣ ಹಾಗೂ ಮೈಮೇಲಿನ ಬಟ್ಟೆಗಳನ್ನು ಮಾತ್ರ ದರೋಡೆಕೋರರು ಅಂದಿನ ಧಾಳಿಯಲ್ಲಿ ಅವರಿಗೆ ಉಳಿಸಿಹೋಗಿದ್ದರು!

1284362297.pjpeg (250×353)

ವಿಧಿಯ ಆಟ ವಿಚಿತ್ರ! ಹ್ಯೂ ಎನ್ ಸ್ಯಾಂಗ್ ಅವರು ತಮ್ಮ ಅತ್ಯಮೂಲ್ಯವಾದ ಗ್ರಂಥಗಳನ್ನು ಮತ್ತು ತಮ್ಮ ಸಕಲ ಭೌತಿಕ ಐಶ್ವರ್ಯಗಳನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಕಳೆದುಕೊಂಡು ಬಟ್ಟ ಬಯಲಿನಲ್ಲಿ ಒಬ್ಬಂಟಿಯಾಗಿ ಭಿಕಾರಿಯಂತೆ ನಿಂತಿದ್ದರು.

ವಿಧಿಯ ಆಟ ಹಾಗಿತ್ತು! ಹ್ಯೂ ಎನ್ ಸ್ಯಾಂಗ್ ಅವರಿಗೆ ಒಮ್ಮೆಗೇ ಭ್ರಮನಿರಸನ ಆದಂತೆ ಅನಿಸಿತಂತೆ! ತನ್ನ ಪ್ರೀತಿಯ ಬೌದ್ಧಧರ್ಮದ ಗ್ರಂಥಗಳು ತನ್ನ ಕಣ್ಣೆದುರಿಗೇ  ಭಸ್ಮವಾದದ್ದನ್ನು ಕಂಡು ಅವರಿಗೆ ಇನ್ನು ಈ ಜೀವನವೇ ಬೇಡ, ಅಂತ ಅನ್ನಿಸಿತಂತೆ.

ಹತಾಶ ಭಾವನೆಯಿಂದ ಇದೇ ಕೊನೆಯ ಬಾರಿಗೆ ಎಂಬಂತೆ ಅವರು ಪ್ರಾರ್ಥನೆಗೆ ಕುಳಿತರಂತೆ. ಏಕಾಗ್ರತೆಯಿಂದ ಪ್ರಾರ್ಥಿಸಿದಾಗ ಅವರ ಮನಸ್ಸಿಗೆ ಒಂದು ರೀತಿಯ ಸಮಾಧಾನ ಸಿಕ್ಕಿತಂತೆ. ಪ್ರಾರ್ಥನೆಯ ಉತ್ತರಭಾಗದಲ್ಲಿ ಅವರು ಈ ರೀತಿಯಾಗಿ ವಿಧಾತನನ್ನು ಬೇಡಿಕೊಂಡರಂತೆ.

“ವಿಧಾತಾ, ಇಂದು ನಾನು ನನ್ನ ಸಕಲ ಲೌಕಿಕ ಸಂಪಾದನೆಗಳನ್ನು ಕಳೆದುಕೊಂಡೆ. ಆದರೆ, ಈಗ ನನ್ನಲ್ಲಿ ಉಳಿದಿರುವುದು ಈ ಅತ್ಯಮೂಲ್ಯವಾದ ಶರೀರ ಮತ್ತು ಜೀವ; ಇವೆರಡು ಮಾತ್ರ! ಇವನ್ನು ಉಳಿಸಿದುದಕ್ಕೆ ನಾನು ನಿನಗೆ ಆಭಾರಿ. ಇಂದಿನ ಘಟನೆಯ ಹಿಂದೆ ನಿನ್ನ ಒಂದು ಉದ್ದೇಶವೇ ಇರಬಹುದು. ಆದ್ದರಿಂದ, ಈ  ಕ್ಷಣದಿಂದಲೇ ನಾನು ಹತಾಶೆಯನ್ನು ಬಿಟ್ಟು ಕಾರ್ಯಪ್ರವೃತ್ತನಾಗುತ್ತೇನೆ. ದೂರದ ತಾಯ್ನಾಡಿನಕಡೆ ಹೆಜ್ಜೆ ಹಾಕುತ್ತೇನೆ. ನಾನು ನಿನ್ನ ದಯದಿಂದ ಅಲ್ಲಿಗೆ ತಲುಪಿದರೆ, ನೀನು ನನಗೆ ದಯಪಾಲಿಸಿದ ನೆನಪು ಶಕ್ತಿಯನ್ನು ಉಪಯೋಗಿಸಿ ಕಳೆದುಹೋದ ಆ ಗ್ರಂಥಗಳ ಪುನರ್ ರಚನೆಯನ್ನು ಮಾಡಲು ಸಂಕಲ್ಪಿಸಿದ್ದೇನೆ. ನೀನು ನನಗೆ ಸಹಾಯ ಮಾಡು” ಎಂದು ಪ್ರಾರ್ಥಿಸಿದರಂತೆ.

ವಿಧಾತನು ಅವರ ಪ್ರಾರ್ಥನೆಯನ್ನು ಒಪ್ಪಿಕೊಂಡಂತೆ ಅವರಿಗೆ ಅನ್ನಿಸಿತು. ಅವರ ದೇಹ ಹಾಗೂ ಮನದಲ್ಲಿ ಹೊಸ ಚೈತನ್ಯ ಮೂಡಿದಂತೆ ಅವರಿಗೆ ಭಾಸವಾಯಿತು. ಅಪಾರ ದೈಹಿಕ ಕಷ್ಟಗಳನ್ನು ಅನುಭವಿಸುತ್ತಾ ತಿಂಗಳುಗಟ್ಟಲೆ ಹೆಜ್ಜೆಹಾಕಿ ಮುಂದೊಂದು ದಿನ ಹ್ಯೂ ಎನ್ ಸ್ಯಾಂಗ್ ಅವರು ತನ್ನ ತಾಯ್ನಾಡನ್ನು ತಲುಪಿದರು.

ಅವರ ಸಂಕಲ್ಪ ಪ್ರಕಾರ, ಅವರು ಏಕಾಗ್ರತೆಯಿಂದ ಬರೆಯಲು ಕುಳಿತರು. ಹಲವು ವರ್ಷಗಳ ಸತತ ಪ್ರಯತ್ನದಿಂದ ತಾನು ಕಳೆದುಕೊಂಡಿದ್ದ ಬೌದ್ಧ ಧರ್ಮಗ್ರಂಥಗಳನ್ನು ತನ್ನ ನೆನಪಿನಿಂದಲೇ ಪುನರ್ ರಚಿಸಿದರು. ಈ ಗ್ರಂಥಗಳೇ ಮುಂದಕ್ಕೆ ನಮ್ಮ ಏಷಿಯಾ ಖಂಡದಲ್ಲಿ ಬೌದ್ಧ ಧರ್ಮ ಬೆಳೆಯಲು ಸಹಾಯಕ ಆದುವು. ಇಂದು ಅಂದರೆ ಇಪ್ಪತ್ತೊಂದನೆಯ ಶತಮಾನದಲ್ಲಿ ಸಿಲ್ಕ್ ರೋಡಿನ ಮ್ಯಾಪ್ ಕೈಯ್ಯಲ್ಲಿ ಹಿಡಿದು ಬೈಕ್ ಅಥವಾ ಜೀಪ್ ಏರಿ ಈ ಸಿಲ್ಕ್ ರೂಟಿನಲ್ಲಿ ಪ್ರವಾಸ ಮಾಡುವುದು ಅದೆಷ್ಟು ರೋಚಕ ಆಗಿದ್ದೀತು? ಇಂದು ಇಂತಹ ಸಾಹಸ ಪ್ರವಾಸಗಳಿಗೆ ಅವಕಾಶಗಳಿವೆ. (ಈ ಬಗ್ಗೆ  ತಿಳಿಯ ಬೇಕಿದ್ದವರು ಗೂಗಲಿಸಿ ನೋಡಬಹುದು). ಈ ಸಿಲ್ಕ್ ರೂಟಿನ ದಾರಿಯಲ್ಲಿ ಚಾರಿತ್ರಿಕ ನೆನಪುಗಳನ್ನು ಹೊತ್ತು ಸಾಗುವ ಈ ಶತಮಾನದ ಸಾಹಸಿಗರಿಗೆ ನನ್ನ ಅಭಿಮಾನದ ವಂದನೆಗಳು.