ಪ್ರಧಾನ ಗರ್ಭಗುಡಿಯ ಹೊರಗೆ ನವರಂಗದ ಎರಡು ಬದಿಗಳಲ್ಲಿ ಗಣೇಶ ಹಾಗೂ ಮಹಿಷಾಸುರ ಮರ್ದಿನಿಯರ ಸೊಗಸಾದ ವಿಗ್ರಹಗಳಿವೆ.. ಪಾಶಾಂಕುಶಧಾರಿಯಾಗಿ ಸರ್ವಾಲಂಕೃತನಾದ ಗಣೇಶನ ವಿಗ್ರಹ ಮುದ್ದಾಗಿದೆ. ಕುಸಿದ ಮಹಿಷನ ದೇಹದಿಂದ ಹೊರಬಂದ ರಕ್ಕಸನನ್ನು ಮೆಟ್ಟಿ ಗೋಣ್ಮುರಿಯುತ್ತಿರುವ ದುರ್ಗೆಯ ಶಿಲ್ಪವೂ ಮಾದರಿಯ ಇತರ ಹೊಯ್ಸಳ ಶಿಲ್ಪಗಳಂತೆ ಅಧ್ಯಯನ ದೃಷ್ಟಿಯಿಂದಲೂ ಗಮನಾರ್ಹವಾಗಿದೆ. ನವರಂಗದಲ್ಲಿ ರಾಮಾನುಜರೇ ಮೊದಲಾದ ಶ್ರೀವೈಷ್ಣವ ಗುರುಗಳ ವಿಗ್ರಹಗಳೂ ಇವೆ. ಬಲಭಾಗದ ಗರ್ಭಗುಡಿಯಲ್ಲಿ ವರದರಾಜನೆಂದು ಹೆಸರುಪಡೆದ ವಿಷ್ಣು ಚಕ್ರ, ಶಂಖ, ಗದೆಗಳನ್ನು ಧರಿಸಿ ವರದಹಸ್ತನಾಗಿ ನಿಂತ ವಿಗ್ರಹರೂಪವನ್ನು ಕಾಣಬಹುದು.
ಟಿ.ಎಸ್.‌ ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಎಪ್ಪತ್ತೆರಡನೆಯ ಕಂತು

 

ಹದಿಮೂರನೆಯ ಶತಮಾನ. ಆಗ ಹೊಯ್ಸಳ ಅರಸನಾಗಿದ್ದ ಮೂರನೆಯ ಸೋಮೇಶ್ವರನ ಆಳ್ವಿಕೆಯ ಕಾಲ. ಮಲ್ಲಿತಂಮನಂತಹ ನುರಿತ ಶಿಲ್ಪಿಯ ನೇತೃತ್ವದಲ್ಲಿ ನುಗ್ಗೇಹಳ್ಳಿ, ಜಾವಗಲ್ಲು ಮುಂತಾದೆಡೆ ಅನೇಕ ಗುಡಿಗಳ ನಿರ್ಮಾಣ ನಡೆದಿತ್ತು. ಈ ಚಟುವಟಿಕೆ ಇತರ ಅನೇಕ ಗುಡಿಗಳ ನಿರ್ಮಾಣಕ್ಕೂ ಪ್ರೇರಣೆ ನೀಡಿತು. ಹೆಚ್ಚಿನ ಶಿಲ್ಪಕಲಾಪ್ರಾವೀಣ್ಯವನ್ನು ತೋರ್ಪಡಿಸದಿದ್ದರೂ ಸಾಂಸ್ಕೃತಿಕವಾಗಿ ಮಹತ್ವಪಡೆದ ಅಂತಹ ನಿರ್ಮಾಣಗಳಲ್ಲಿ ಮಂಡ್ಯ ಜಿಲ್ಲೆಯ ಬೆಳ್ಳೂರಿನ ಆದಿಮಾಧವನ ಗುಡಿಯೂ ಒಂದು.

ಬೆಳ್ಳೂರು-ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿಗೆ ಸೇರಿದ ಊರು. ಬೆಂಗಳೂರು-ಹಾಸನ ಹೆದ್ದಾರಿಯಲ್ಲಿ ಬೆಳ್ಳೂರು ಕ್ರಾಸ್ ಮೂಲಕ ತಲುಪಬಹುದಾದ ಸುಲಭಗಮ್ಯ ಸ್ಥಳ. ಪ್ರಸಿದ್ಧಕ್ಷೇತ್ರ ಆದಿಚುಂಚನಗಿರಿಯ ಸನಿಹದಲ್ಲೇ ಇರುವ ಬೆಳ್ಳೂರಿನಲ್ಲಿ ಇರುವ ಆದಿಮಾಧವ ದೇವಾಲಯವನ್ನು ಕ್ರಿ.ಶ. 1284ರಲ್ಲಿ ನಿರ್ಮಿಸಲಾಯಿತು.


ಇದೊಂದು ತ್ರಿಕೂಟಾಚಲ ದೇವಾಲಯ. ನಕ್ಷತ್ರಾಕಾರದ ಜಗತಿಯ ಮೇಲೆ ನಿಂತ ಕಟ್ಟಡ. ಅಲ್ಲಲ್ಲಿ ಕಿರುಗೋಪುರಗಳಂಥ ರಚನೆಗಳಿರುವ ಗೋಡೆಯ ಮೇಲೆ ಶಿಲ್ಪಗಳಿಲ್ಲದೆ ಸಪಾಟಾಗಿದ್ದರೂ ಸರಳಸೌಂದರ್ಯದಿಂದ ಆಕರ್ಷಿಸುವಂತಿದೆ. ನಾಲ್ಕು ಅಂತಸ್ತುಗಳ ಶಿಖರದ ಮೇಲೆ ಇತ್ತೀಚೆಗೆ ಕಟ್ಟಿರುವ ಕಿರು ವಿಮಾನಗೋಪುರ. ಶಿಖರದ ಮೇಲೂ ಗೋಡೆಯ ಮೇಲಂಚಿನಲ್ಲೂ ಅಲ್ಲಲ್ಲಿ ಶಿಲ್ಪಗಳನ್ನು ಬಿಡಿಸುವುದಕ್ಕಾಗಿ ಶಿಲಾಫಲಕಗಳನ್ನಿಟ್ಟು ಅವಕಾಶ ಕಲ್ಪಿಸಿದ್ದರೂ ಯಾವುದೇ ಶಿಲ್ಪಗಳಿಲ್ಲ. ಒಳದೇಗುಲದ ಮೂರು ಗರ್ಭಗುಡಿಗಳಿಗೆ ಪ್ರವೇಶ ಕಲ್ಪಿಸುವ ನವರಂಗ ವಿಶಾಲವಾಗಿದೆ, ಒಳಛಾವಣಿ ಎಂದರೆ ಭುವನೇಶ್ವರಿಯ ಚಿತ್ತಾರಗಳು ಸುಂದರವಾಗಿವೆ.

ಎಡಭಾಗದ ಗುಡಿಯಲ್ಲಿ ಉನ್ನತವಾದ ಪೀಠದ ಮೇಲೆ ಇರಿಸಿದ ವೇಣುಗೋಪಾಲಸ್ವಾಮಿಯ ವಿಗ್ರಹ ಐದು ಅಡಿಗಳಷ್ಟು ಎತ್ತರವಿದ್ದು ಆಕರ್ಷಕವಾಗಿದೆ. ನಡುವಣ ಎಂದರೆ ಪ್ರಧಾನವಾದ ಗರ್ಭಗುಡಿಯಲ್ಲಿರುವ ವಿಷ್ಣು ಆದಿಮಾಧವನೆಂದು ಪೂಜಿತನಾಗಿದ್ದಾನೆ. ಮಹಾವಿಷ್ಣುವಿನ ಚತುರ್ಭುಜಗಳಲ್ಲಿ ಧರಿಸಿದ ಶಂಖ-ಚಕ್ರ-ಗದಾ-ಪದ್ಮಗಳ ಅನುಕ್ರಮವನ್ನು ಆಧರಿಸಿ ಒಟ್ಟು ಇಪ್ಪತ್ನಾಲ್ಕು ರೂಪಗಳನ್ನು ಗುರುತಿಸಲಾಗುತ್ತದೆ. ಅದರಂತೆ, ಬಲ ಮುಂಗೈಯಲ್ಲಿ ಗದೆ, ಬಲ ಮೇಲುಗೈಯಲ್ಲಿ ಚಕ್ರ, ಎಡ ಮೇಲುಗೈಯಲ್ಲಿ ಶಂಖ ಹಾಗೂ ಎಡಗೈಯಲ್ಲಿ ಪದ್ಮಗಳನ್ನು ಹಿಡಿದ ಮಾಧವನ ರೂಪವನ್ನು ಬೆಳ್ಳೂರಿನ ಈ ಗುಡಿಯಲ್ಲಿ ನೀವು ನೋಡಬಹುದು.

ಪ್ರಧಾನ ಗರ್ಭಗುಡಿಯ ಹೊರಗೆ ನವರಂಗದ ಎರಡು ಬದಿಗಳಲ್ಲಿ ಗಣೇಶ ಹಾಗೂ ಮಹಿಷಾಸುರ ಮರ್ದಿನಿಯರ ಸೊಗಸಾದ ವಿಗ್ರಹಗಳಿವೆ.. ಪಾಶಾಂಕುಶಧಾರಿಯಾಗಿ ಸರ್ವಾಲಂಕೃತನಾದ ಗಣೇಶನ ವಿಗ್ರಹ ಮುದ್ದಾಗಿದೆ. ಕುಸಿದ ಮಹಿಷನ ದೇಹದಿಂದ ಹೊರಬಂದ ರಕ್ಕಸನನ್ನು ಮೆಟ್ಟಿ ಗೋಣ್ಮುರಿಯುತ್ತಿರುವ ದುರ್ಗೆಯ ಶಿಲ್ಪವೂ ಈ ಮಾದರಿಯ ಇತರ ಹೊಯ್ಸಳ ಶಿಲ್ಪಗಳಂತೆ ಅಧ್ಯಯನ ದೃಷ್ಟಿಯಿಂದಲೂ ಗಮನಾರ್ಹವಾಗಿದೆ. ನವರಂಗದಲ್ಲಿ ರಾಮಾನುಜರೇ ಮೊದಲಾದ ಶ್ರೀವೈಷ್ಣವ ಗುರುಗಳ ವಿಗ್ರಹಗಳೂ ಇವೆ. ಬಲಭಾಗದ ಗರ್ಭಗುಡಿಯಲ್ಲಿ ವರದರಾಜನೆಂದು ಹೆಸರುಪಡೆದ ವಿಷ್ಣು ಚಕ್ರ, ಶಂಖ, ಗದೆಗಳನ್ನು ಧರಿಸಿ ವರದಹಸ್ತನಾಗಿ ನಿಂತ ವಿಗ್ರಹರೂಪವನ್ನು ಕಾಣಬಹುದು.

ನವರಂಗದಿಂದ ಹೊರಭಾಗಕ್ಕೆ ಗರುಡಗಂಬದವರೆಗೆ ಚಾಚಿಕೊಂಡಿರುವ ದೇವಾಲಯದ ಮುಖಮಂಟಪವನ್ನು ವಿಜಯನಗರ ಇಲ್ಲವೇ ಮುಂದಿನ ಕಾಲದಲ್ಲಿ ನಿರ್ಮಾಣಮಾಡಿರಬಹುದು. ಈ ಮಂಟಪದಲ್ಲಿ ಒಳಗುಡಿಗೆ ಹೊಂದಿಕೊಂಡಂತೆ ಇರುವ ಎರಡು ಕೋಣೆಗಳಲ್ಲಿ ಇರಿಸಿರುವ ವಿಗ್ರಹಗಳನ್ನು ನೋಡಲು ಮರೆಯದಿರಿ. ಬೆಳ್ಳೂರಿನಲ್ಲೇ ಇರುವ ಮೂಲೆ ಸಿಂಗೇಶ್ವರ ಎಂಬ ಹೆಸರಿನ ಇನ್ನೊಂದು ಗುಡಿಯಲ್ಲಿ ಇದ್ದ ವೇಣುಗೋಪಾಲ ಹಾಗೂ ಲಕ್ಷ್ಮೀನಾರಾಯಣರ ವಿಗ್ರಹಗಳನ್ನು ಇದೀಗ ಸುರಕ್ಷತೆಯ ದೃಷ್ಟಿಯಿಂದಲೋ ಏನೋ ಮಾಧವನ ಗುಡಿಯ ಈ ಕೋಣೆಗಳಲ್ಲಿ ಇರಿಸಲಾಗಿದೆ. ಎರಡೂ ವಿಗ್ರಹಗಳ ಶಿಲ್ಪಸೌಂದರ್ಯ ಮನೋಹರವಾಗಿದೆ. ಎಡಗಾಲನ್ನು ನೆಲಕ್ಕೂರಿ ಬಲಗಾಲನ್ನು ಎಡಕ್ಕೆ ಹೊರಳಿಸಿ ಪಾದದ ಬೆರಳುಗಳನ್ನು ನೆಲಕ್ಕೆ ತಾಗಿಸಿ ತ್ರಿಭಂಗಿಯಲ್ಲಿ ನಿಂತ ಪರಿ ಮೋಹಕ. ಕೃಷ್ಣನ ಎಡಬಲಗಳಲ್ಲಿ ಗೊಲ್ಲರೂ ಗೋವುಗಳೂ ಗೋಪಿಕಾಸ್ತ್ರೀಯರೂ ನಿಂತು ವೇಣುಗಾನಕ್ಕೆ ಪರವಶರಾಗಿರುವ ಪರಿಯೂ ಸೊಗಸಾಗಿ ಚಿತ್ರಿತವಾಗಿದೆ.

(ಫೋಟೋಗಳು: ಲೇಖಕರವು)

ಪಾಣಿಪೀಠದಲ್ಲಿ ಗರುಡನೂ ಇದ್ದಾನೆ. ಹೊಯ್ಸಳಶೈಲಿಯ ವೇಣುಗೋಪಾಲನ ಮೂರುತಿಯ ಸೊಬಗಿನ ಮಾದರಿಗಳಲ್ಲಿ ಇದೂ ಒಂದು. ಇನ್ನೊಂದು ಕೋಣೆಯಲ್ಲಿರುವ ಲಕ್ಷ್ಮೀನಾರಾಯಣನ ಶಿಲ್ಪವೂ ಇಷ್ಟೇ ಸೊಗಸಿನದು. ಮೇಲುಗೈಗಳಲ್ಲಿ ಪದ್ಮಗದೆಗಳನ್ನೂ ಬಲಗೈಯಲ್ಲಿ ಶಂಖವನ್ನೂ ಧರಿಸಿರುವ ನಾರಾಯಣನ ತೊಡೆಯ ಮೇಲೆ ಲಕ್ಷ್ಮೀದೇವಿ ಆಸೀನಳಾಗಿದ್ದಾಳೆ. ಚಕ್ರ ಹಿಡಿದ ನಾರಾಯಣನ ಎಡಗೈ ಲಕ್ಷ್ಮಿಯನ್ನು ಬಳಸಿದೆ. ಅಲ್ಲಲ್ಲಿ ಕಿಂಚಿತ್ ಭಗ್ನವಾಗಿರುವಂತೆ ತೋರಿದರೂ ವಿಗ್ರಹವು ತನ್ನ ಸುಸ್ವರೂಪವನ್ನು ಉಳಿಸಿಕೊಂಡಿದ್ದು ನೋಡುಗರ ಮನಸೆಳೆಯುವಂತಿದೆ. ಮಾಧವನ ಗುಡಿಯ ಪಕ್ಕದಲ್ಲೇ ಪ್ರತ್ಯೇಕವಾಗಿ ಲಕ್ಷ್ಮಿಯ ಗುಡಿಯೂ ಇದೆ. ನಿತ್ಯಪೂಜೆಯಲ್ಲದೆ ವಾರ್ಷಿಕ ರಥೋತ್ಸವಾದಿಗಳು ಸಾಂಗವಾಗಿ ನಡೆಯುತ್ತವೆ.

ಬೆಳ್ಳೂರಿನ ಸಮೀಪದಲ್ಲಿ ಸುಪ್ರಸಿದ್ಧ ಆದಿಚುಂಚನಗಿರಿಕ್ಷೇತ್ರವೂ ಇದ್ದು ಇವೆರಡೂ ಸ್ಥಳಗಳಿಗೆ ಭೇಟಿನೀಡಲು ಸಾಧ್ಯವಾಗುವಂತೆ ಪ್ರವಾಸವನ್ನು ಸೂಕ್ತವಾಗಿ ಹೊಂದಿಸಿಕೊಂಡು ಬರುವುದು ಒಳ್ಳೆಯದು.