ಪಕ್ಕಾ ಮಾಸ್ ಎಂಟರ್ಟೇನರ್ ನಾಟಕಗಳಲ್ಲಿ ನಟಿಸುತ್ತಿದ್ದವರು ‘ಜನಕಜಾತೆ ಸೀತೆ’ ಎಂಬ ಪ್ರಯೋಗಾತ್ಮಕ ನಾಟಕದಲ್ಲಿ ನಟಿಸುತ್ತಾರೆ ಮತ್ತು ದಾಖಲೆ ಮಾಡುತ್ತಾರೆ. ತಾವೇ ಒಂದು ಹವ್ಯಾಸಿ ರಂಗತಂಡ ಕಟ್ಟಿ ತಮ್ಮ ಕಲೆಕ್ಷನ್ ಡ್ರಾಮಗಳನ್ನ ಬಿಟ್ಟು ಶುದ್ಧ ಪ್ರಯೋಗಗಳಿಗೆ ನಿಲ್ಲುತ್ತಾರೆ. ಮಂಗಳಮುಖಿಯರನ್ನ ಕಲೆಹಾಕಿಕೊಂಡು ನಾಟಕ ಮಾಡಿಸಿ ಹೊಸ ನೋಟಕ್ರಮ ಹುಟ್ಟುಹಾಕುತ್ತಾರೆ. ‘ಖಾನಾವಳಿ ಚೆನ್ನಿ’ಯಲ್ಲಿನ ಹೆಲೆನ್ ‘ಮತ್ತೊಬ್ಬ ರಾಧೆ’ ಯಂಥ ನಾಟಕ ಮಾಡಲು ಸಾಧ್ಯವೇ ಎಂದು ಯೋಚಿಸುವ ಹಾಗೆ ಮಾಡಿದ್ದಾರೆ.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರʼ ಅಂಕಣ

 

‘ಹೆಲೆನ್ ಅವರ ಇಂಟರ್ ವ್ಯೂ ಸರಣಿ ಆರಂಭ ಆಗಿದೆ ನೋಡು ಗುರುವೇ..’ ಎಂದು ಗೆಳೆಯ ತಾಕೀತು ಮಾಡಿದ. ‘ಯಾವ ಹೆಲೆನ್..?’ ಎಂದೆ ನಾನು. ‘ ಚೆನ್ನಾಯ್ತು. ಹೆಲೆನ್ ಮೈಸೂರ್.. ಹಾಗೇ ಹೆಲೆನ್ ಹುಬ್ಬಳ್ಳಿ..’ ಅಂದ. ಆಗಲೂ ನನಗೆ ನೆನಪಾಗಲಿಲ್ಲ. ಹೆಲೆನ್ ಅಂದಕೂಡಲೆ ನನ್ನ ಮನಸ್ಸು ಗ್ರೀಕ್ ಮತ್ತು ಗ್ರೀಕ್ ನಾಟಕದ ಪಾತ್ರಗಳ ಕಡೆಗೆ ಹಾರಿತು. ಆದರೆ ಗ್ರೀಕ್ ನಾಟಕದ ಪಾತ್ರಕ್ಕೂ ಮೈಸೂರಿಗೂ, ಹುಬ್ಬಳ್ಳಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೆ. ನನ್ನ ಮೌನ ಅರ್ಥ ಮಾಡಿಕೊಂಡ ಗೆಳೆಯ ನಕ್ಕು ಒಂದು ಸಂಗತಿ ನೆನಪಿಸಿದ. ‘ನೆನಪಿಸಿಕೊ ಗುರುವೇ. ಅವತ್ತು ನಾವು ಎರಡು ಪ್ಲಾನ್ ಹಾಕಿಕೊಂಡಿದ್ವಿ. ಮೊದಲನೆಯದು ಮೆಜೆಸ್ಟಿಕ್‌ನಲ್ಲಿರೊ ಮುದ್ದೆ ಮಾದಪ್ಪ ಮೆಸ್ ಗೆ ಹೋಗಿ ಮುದ್ದೆ ಮುರೀಬೇಕು. ಎರಡನೆಯದು ನಿನ್ನ ಬಹುಕಾಲದ ಇಚ್ಛೆಯಂತೆ ಅದೇ ಮೆಜೆಸ್ಟಿಕ್ ನಲ್ಲಿರುವ ಗುಬ್ಬಿ ವೀರಣ್ಣ ರಂಗಮಂದಿರಕ್ಕೆ ಹೋಗಿ ವೃತ್ತಿ ಕಂಪನಿ ನಾಟಕ ನೋಡಬೇಕು. ಅದರಂತೆ ನಾವು ಮಾದಪ್ಪನವರ ಮೆಸ್‌ನಲ್ಲಿ ಮುದ್ದೆ ಮುರಿದು ರಂಗಮಂದಿರ ಹೊಕ್ಕು ಒಂದು ನಾಟಕ ನೋಡಿದ್ವಲ್ಲ.. ಯಾವುದದು..? ‘ಕಿವುಡ ಮಾಡಿದ ಕಿತಾಪತಿ.. ರೈಟ್..’ ಎಂದು ನಕ್ಕ.

ನನಗೆ ನೆನಪಾಯಿತು. ‘ಅವತ್ತಿನ ನಿನ್ನ ಮುಜುಗರದ ಮುಖ ನೋಡೋಕೇ ಒಂದು ಚೆಂದ ಇತ್ತು. ನಾಟಕದಲ್ಲಿ ಡಬಲ್ ಮೀನಿಂಗ್ ಡೈಲಾಗ್ ಬಂದಾಗಲೆಲ್ಲ ಯಾರಾದರೂ ನಿನ್ನ ಕಡೆಗೆ ನೋಡ್ತಿದ್ದಾರೇನೊ ಅಂತ ನೀನು ಸುತ್ತ ನೋಡ್ತಿದ್ದೆ. ಕಡೆಗೆ ಕ್ಲಬ್ ಡಾನ್ಸ್ ಥರದ್ದು ಶುರುವಾದಾಗ ನನ್ನ ಎಬ್ಬಿಸಿಕೊಂಡು ಬಂದೆಯಲ್ಲ..’ ಅಂತ ನೆನಪಿಸುತ್ತಲೇ ಮತ್ತೆ ನಕ್ಕ.

(ಹೆಲೆನ್)

ನಿಜ, ಅಂದು ನಾನು ಬುದ್ಧಿಜೀವಿಗಳ ನಾಟಕಗಳನ್ನ ನೋಡುವಂತೆಯೇ ಆ ನಾಟಕವನ್ನೂ ಉಸಿರುಕಟ್ಟಿಕೊಂಡು ನೋಡಲು ಆರಂಭಿಸಿದ್ದೆ. ಡಬಲ್ ಮೀನಿಂಗ್ ಡೈಲಾಗಿಗೆ ಇಡೀ ಜನಸ್ತೋಮ ನಕ್ಕಾಗ, ಶಿಳ್ಳೆ ಹೊಡೆದಾಗ ಮತ್ತು ಚಪ್ಪಾಳೆ ತಟ್ಟಿದಾಗ ನಾನೂ ಆ ಸಂದರ್ಭದಲ್ಲಿ ಹಲ್ಲು ಕಾಣಿಸಿದರೆ ಎಲ್ಲಿ ಅವರುಗಳು ನನ್ನನ್ನೂ ಅವರ ಕೆಟಗರಿಗೆ ಸೇರಿಸಿಕೊಂಡು ಬಿಡುತ್ತಾರೋ ಎಂದು ನಲುಗುತ್ತಾ ಕೂತಿದದ್ದು ನೆನಪಾಯಿತು.

‘ನೆನಪಿದೆ. ಅದ್ಯಾಕೀಗ..?’ ಎಂದು ಕೇಳಿದೆ. “ಅವತ್ತಿನ ನಿನ್ನ ಕಮೆಂಟ್ ನೆನಪಿಸಿಕೊ. ಆ ನಾಟಕದಲ್ಲಿ ಒಬ್ಬರು ಲೇಡಿ. ಅವರ ಬಗ್ಗೆ ನೀನು ‘ಜೋಕ್ಸ್ ಅಪಾರ್ಟ್ ಶಿ ಈಸ್ ಎಕ್ಸಲೆಂಟ್. ವೃತ್ತಿ ಕಂಪನಿ ನಾಟಕಗಳವರು ನಮ್ಮ ಹಾಗೆ ಬ್ಲಾಕಿಂಗ್ ಮಾಡ್ಕೊಳ್ಳೋದಿಲ್ಲ. ಮೈಕ್ ಮುಂದೆ ಬಂದು ಮಾತಾಡಬೇಕು. ಅದೇ ಅವರಿಗೆ ಬ್ಲಾಕಿಂಗ್. ಡಬಲ್ ಮೀನಿಂಗ್ ಮತ್ತು ಸಲ್ಲದ ಸಿನಿಮಾ ಹಾಡುಗಳು ಬಿಟ್ಟರೆ ಆಕೆಯ ಕರೇಜ್, ಡೈಲಾಗ್ ಹೇಳುವ ರೀತಿ, ವಾಯ್ಸ್ ಮಾಡ್ಯುಲೇಷನ್ ಎಲ್ಲ ಎಕ್ಸಲೆಂಟ್. ನಮ್ಮ ಹವ್ಯಾಸಿಗಳು ತುಂಬ ಕಾನ್ಶಿಯಸ್ಸಾಗಿ ಆ್ಯಕ್ಟ್ ಮಾಡುತ್ತಾರೆ. ಮಾತು ಮರೆಯುವ ಭಯದಲ್ಲೇ ಉದ್ದಕ್ಕೂ ನಟನೆ ಮಾಡ್ತಿರತಾರೆ. ಆದರೆ ಆಕೆಯಲ್ಲಿ ಅದೊಂದೂ ಕಾಣ್ತಿಲ್ಲ. ಸ್ಟಿಲ್… ಆ ಡಬಲ್ ಮೀನಿಂಗ್ ಜೋಕ್ಸ್ ಹಾರಿಬಲ್.. ʼಅಂದಿದ್ದೆ. ಆಕೇನೇ ಹೆಲೆನ್…” ಅಂದ.

ನನಗೆ ಶಾಕ್ ಆಯಿತು. ಆಕೆ ಹೆಲೆನ್! ವೃತ್ತಿ ನಾಟಕ ಕಂಪನಿಗಳ ಬಗೆಗೆ ಅಲ್ಲಲ್ಲಿ ಓದಿ ಮೆಚ್ಚುಗೆಯಿಂದಿದ್ದ ನನಗೆ ಆ ನಾಟಕಗಳು ಅಸಲಿಗೆ ಹೀಗಿರಬಹುದೆಂಬ ಕಲ್ಪನೆಯೂ ಇರಲಿಲ್ಲ. ಇದೊಂದು ನಾಟಕ ಮಾತ್ರ ಹೀಗೆಯೋ ಅಥವಾ ಬಹುತೇಕ ನಾಟಕಗಳು ಹೀಗೇ ಇವೆಯೋ ಎಂದು ಯೂಟೂಬ್ ಹುಡುಕಾಡಿದಾಗ ಇದೇ ಹೆಲೆನ್ ಅವರ ಸಾಲುಸಾಲು ನಾಟಕಗಳು ತೆರದುಕೊಂಡಿದ್ದವು. ‘ಖಾನಾವಳಿ ಚೆನ್ನಿ..’ ‘ಮಸ್ತ್ ಮಾಸ್ತರಜೀ…’ ಇತ್ಯಾದಿ. ಆಗಲೂ ನನಗೆ ಅವರು ಹೆಲೆನ್ ಎಂದು ಗೊತ್ತಿರಲಿಲ್ಲ. ಆದರೂ ನಾಟಕಗಳನ್ನ ನೋಡಿದ್ದೆ. ಇದೇ ಹೆಲೆನ್ ಅವರು ಡಬಲ್ ಮೀನಿಂಗ್ ಜೋಕ್ಸ್ ಗಳನ್ನ ಬೀಡುಬೀಸಾಗಿ ಹೇಳುತ್ತಿದ್ದಂತೆ ನಾಟಕ ನೋಡುವುದನ್ನ ಬಂದ್ ಮಾಡುತ್ತಿದ್ದೆ. ಆಮೇಲೆ ಇವೆಲ್ಲ ನಮಗಲ್ಲ ಅಂದುಕೊಂಡು ಮರೆತೂಬಿಟ್ಟಿದ್ದೆ. ನಟಿ ನೆನಪಿದ್ದರೇ ಹೊರತು ಹೆಸರು ತಿಳಿದಿರಲಿಲ್ಲ. ತಿಳಿದುಕೊಳ್ಳುವ ಗೋಜಿಗೂ ನಾನು ಹೋಗಿರಲಿಲ್ಲ. ಯಾಕೆಂದರೆ ನಾಟಕದಲ್ಲಿನ ಡಬಲ್ ಮೀನಿಂಗ್ ಜೋಕ್ಸ್ ಅಷ್ಟು ಹಾರಿಬಲ್ ಆಗಿದ್ದವು.

ಇದೆಲ್ಲ ಆಗಿ ಸರಿಸುಮಾರು ವರ್ಷಗಳು ಕಳೆದಿದ್ದವು. ಈಗ ಹೆಲೆನ್ ಅಂದರೆ ಹೇಗೆ ನೆನಪಾಗಬೇಕು..? ಅದೂ ಅಲ್ಲದೆ ಅವರ ಇಂಟರ್ವ್ಯೂ ನೋಡಬೇಕೆ ಎಂಬ ಪ್ರಶ್ನೆ ನನ್ನೊಳಗೆ ತಂತಾನೇ ಎದ್ದಿತು. ನೋಡ್ತೇನೆ ಅಥವಾ ನೋಡಲ್ಲ ಎಂದು ಗೆಳೆಯನಿಗೆ ಏನೂ ಹೇಳದೆ ಸುಮ್ಮನೆ ನಕ್ಕು ಅಂದಿನ ಮುದ್ದೆ ಮತ್ತು ಉಪ್ಸಾರು, ಅದಕ್ಕೆ ಪ್ರತ್ಯೇಕವಾಗಿ ಕೊಟ್ಟಿದ್ದ ಖಾರ ನೆನಪಾಗಿ ಅದರ ಬಗ್ಗೆ ಪ್ರಸ್ತಾಪಿಸಿ ನಕ್ಕು ಮಾತು ಮುಗಿಸಿದೆ.

ಹೆಲೆನ್ ಮತ್ತೆ ನನ್ನಲ್ಲಿ ಮರೆವಿಗೆ ಸಂದರು. ನಾಟಕದಲ್ಲಿ ಆ ಪರಿ ಡಬಲ್ ಮೀನಿಂಗ್ ಡೈಲಾಗ್ ಹೇಳುವವರು ಇನ್ನೇನು ಮಾತಾಡಿದ್ದಾರು ಎಂಬ ಉಡಾಫೆ ನನ್ನಲ್ಲಿ ಬೆಳೆದಿತ್ತು. ಅದೂ ಅಲ್ಲದೆ ಈಚೀಚೆಗೆ ಸಂದರ್ಶನ ಕೊಡಲು ಕೂರುವವರು ಮತ್ತು ಸಂದರ್ಶಿಸುವ ಕೆಲವರ ಬಗ್ಗೆ ನನ್ನಲ್ಲಿ ತೀವ್ರತರ ಅಸಮಾಧಾನವಿತ್ತು. ಚೂರಾದರೂ ಸಿದ್ಧತೆ, ವಸ್ತುನಿಷ್ಠ ಗ್ರಹಿಕೆ, ತಮ್ಮ ಕೆಲಸಗಳ ಬಗ್ಗೆ ಆತ್ಮಾವಲೋಕನ ಮತ್ತು ಅದು ಹೇಗೆ ಅನನ್ಯ ಅಂತಲೂ ಕಂಡುಕೊಂಡಿರದವರೆಲ್ಲ ಮಾತಿಗೆ ಕೂರುವ ಧೈರ್ಯ ಮಾಡುತ್ತಿದ್ದಾಗ ನಾನು ಚಕಾರ ತೆಗೆದು ವಿರೋಧ ಕಟ್ಟಿಕೊಂಡಿದ್ದೆ ಮತ್ತು ಸಾಂಸ್ಕೃತಿಕ ವಲಯದಲ್ಲಿ ಬೆದರಿಕೆ ಕೂಡ ಹಾಕಿಸಿಕೊಂಡಿದ್ದೆ. ನೋಡುವುದು ಯಾಕೆ ಮತ್ತು ಚಕಾರ ತೆಗೆಯುವುದು ಯಾಕೆ ಅಂತ ಸುಮ್ಮನಿದ್ದ ವೇಳೆ ಯೂಟೂಬಿನ ಕರ್ಸರ್ ಸುಮ್ಮನೆ ತಿರುಗಿಸುತ್ತಿದ್ದಾಗ ಹೆಲೆನ್ ಕಂಡರು! ಸ್ಟೇಜ್ ಮೇಲಿನ ಮಾತಿಗೂ ಇಲ್ಲಿ ಮಾತಾಡುವುದಕ್ಕೂ ಏನು ಡಿಫರೆನ್ಸ್ ಇದೆ ನೋಡುವ ಅನ್ನುವ ಸಣ್ಣ ಕುತೂಹಲ ಹುಟ್ಟಿ ಸಂದರ್ಶನಕ್ಕೆ ಕಣ್ಣು ಕಿವಿಯಾಗಲು ಶುರುಮಾಡಿದೆ.

ಹೆಲೆನ್ ಅವರ ಮಾತು ಆರಂಭವಾಯಿತು. ಸಾಮಾನ್ಯವಾಗಿ ರಂಗಭೂಮಿ ಕಲಾವಿದರ ಬದುಕು ಒಂದಿಲ್ಲೊಂದು ಬಗೆಯಲ್ಲಿ ಕಷ್ಟದಿಂದಲೇ ಕೂಡಿರುತ್ತದೆ. ಕಷ್ಟ ಅನುಭವಿಸಲಿಕ್ಕೆ ಇವರುಗಳು ರಂಗಕ್ಕೆ ಬರುತ್ತಾರೋ ಅಥವಾ ರಂಗದ ಬದುಕೇ ಕಷ್ಟವೋ ನಿರ್ಧರಿಸುವುದು ಕಷ್ಟದ ಸಂಗತಿ ಎನ್ನುವಂತಿರುತ್ತದೆ ಅವರ ಬದುಕು. ಸಹಜವಾಗಿ ಹೆಲೆನ್ ಅವರ ಬದುಕಿನಲ್ಲೂ ಕಷ್ಟವಿತ್ತು. ಆ್ಯಕ್ಟಿಂಗ್ ಎನ್ನುವುದು ಇವತ್ತು ಕೆಲವರಿಗೆ ಫ್ಯಾಷನ್ ಆಗಿದೆ. ಆದರೆ ಆಗಿನ ಬಹುತೇಕರು ರಂಗಭೂಮಿಗೆ ಬಂದಿರುವುದು ಹೊಟ್ಟೆಪಾಡಿಗೆ. ಹಾಗಾಗಿ ಹೊಟ್ಟೆಪಾಡಿನ ಹಿಂದಿನ ಕಥೆಗಳನ್ನ ಹೆಲೆನ್ ಅವರು ಹೇಳುತ್ತಾ ಹೋದರು. ಚೂರು ಕ್ಲೀಷೆ, ನಾಟಕೀಯ ಮಾತುಗಾರಿಕೆ ಆರಂಭಿಸಿದರೆ ಸಂದರ್ಶನ ನೋಡುವುದು ಬಂದ್ ಮಾಡಿಬಿಡೋಣ ಎಂದು ನಿರ್ಧರಿಸಿಕೊಂಡೇ ನೋಡುತ್ತಿದ್ದೆ.

ಆದರೆ ಹೆಲೆನ್ ಅವರ ಮಾತುಗಾರಿಕೆ ಬೇರೆ ರೀತಿ ಇತ್ತು. ರಂಗದ ಮೇಲೆ ಪಾತ್ರವಾಗಿ ತುಂಬ ಚೆಲ್ಲುಚೆಲ್ಲಾಗಿ ಮಾತಾಡುವ ಹೆಲೆನ್ ರಿಗೆ ಬದುಕೆನ್ನುವುದು ಕಲಿಸಿ ಅರ್ಥ ಮಾಡಿಸಿರುವುದು ಅಪಾರ ಅನಿಸಿತು. ಅವರ ರಂಗದ ಬದುಕು ಕಷ್ಟಗಳ ಸರಮಾಲೆ. ಈ ಕಷ್ಟ ಅವರನ್ನ ಮಾಗಿಸಿದೆ. ಈ ಮಾಗುವಿಕೆ ಇದ್ದಾಗ ರಂಗದ ಮೇಲೆ ಬೇರೆತರದ ನಾಟಕ ಮತ್ತು ಪಾತ್ರ ಯಾಕೆ ಮಾಡಬಾರದು ಅನಿಸಿತು. ಡಿಫರೆನ್ಸ್ ಇರುವುದು ಮತ್ತು ಪ್ಯೂರ್ ವಾಸ್ತವ ಅರ್ಥವಾಗುವುದು ಇಲ್ಲೇ.

ಹವ್ಯಾಸಿಗಳಲ್ಲಿ ಅವರಿಗೆ ಅನ್ಯವೃತ್ತಿ ಅನ್ನುವುದೊಂದಿರುತ್ತದೆ. ನಾಟಕ ಮತ್ತು ನಟನೆ ಅವರಿಗೆ ಫ್ಯಾಷನ್. ಅನ್ನ ಅದರಿಂದಲೇ ಹೊಂದಿಸಿಕೊಳ್ಳುವ ಪ್ರಮೇಯವಿರುವುದಿಲ್ಲ. ಆದರೆ ನಾಟಕವನ್ನೇ ವೃತ್ತಿಯಾಗಿಸಿಕೊಂಡವರಿಗೆ, ಇಲ್ಲ ಸರ್ಕಾರದ ಅನುದಾನ ಕಾಪಾಡಬೇಕು ಅಥವಾ ಜನ ಬರುವ ನಾಟಕಗಳನ್ನ ಆಡಬೇಕು. ‘ಹೆಲೆನ್ ರನ್ನ ಕರೆಸಿದರೆ ಕಲೆಕ್ಷನ್ ಹೆಚ್ಚಾಗ್ತದೆ’ ಎಂದು ಲೆಕ್ಕಾಚಾರ ಹಾಕುವಾಗ ಬದುಕಿನ ವಾಸ್ತವ ಸತ್ಯ ಮರೆತು ಅನ್ನದ ದಾರಿ ಹಿಡಿಯುವ ಅನಿವಾರ್ಯತೆ ಸೃಷ್ಟಿಸುತ್ತದೆ. ಇದು ಈ ರಂಗದ ವೈಶಿಷ್ಟ್ಯ ಮತ್ತು ವಿಪರ್ಯಾಸ.

ಹೆಲೆನ್ ರ ಬದುಕಿನ ಸಂಕಷ್ಟಗಳನ್ನ ಬದಿಗಿಡೋಣ. ಆದರೆ ಅವರ ನಿರ್ಧಾರದ ನಡೆ ನನ್ನನ್ನು ಅಚ್ಚರಿಗೆ ದೂಡಿತು. ಅವರ ರಂಗ ಪಯಣದ ಚಿತ್ರ ಆರಂಭವಾಗುವುದು ಬಾಲಕೃಷ್ಣನಾಗಿ. ನಂತರ ಮಕರಂದನಾಗಿ. ನಂತರ ಅದೇ ಸಾಲಿನಲ್ಲಿ ಸಾಲುಸಾಲು ಬೇರೆಬೇರೆ ಪಾತ್ರಗಳು. ಆದರೆ ಅವರಿಗೆ ಸೆಲೆಬ್ರಿಟಿ ಪಟ್ಟ ತಂದುಕೊಟ್ಟದ್ದು ಡಬಲ್ ಮೀನಿಂಗ್ ಪಾತ್ರಗಳ ನಟನೆ. ಒಂದು ನಾಟಕಕ್ಕೆ ಮುನ್ನೂರು ರೂಪಾಯಿ ಸಂಭಾವನೆ ಇದ್ದರೆ ಟಿಪ್ಸ್ ಆಗಿಯೇ ಅವರಿಗೆ ಎರಡು ಸಾವಿರ ಸಿಗುತ್ತಿತ್ತಂತೆ.

ಇಂಥ ಹೆಲೆನ್ ತನಗೆ ಬದುಕು ಕಟ್ಟಿಕೊಟ್ಟ ಹುಬ್ಬಳ್ಳಿ ಬಿಟ್ಟು ಬೆಂಗಳೂರಿಗೆ ಬರುತ್ತಾರೆ. ಇಲ್ಲಿ ಭಾಷಾವಾರು ಪ್ರಾಂತದ ಸುಪ್ತ ಮೂದಕಲಿಕೆಗೆ ಗುರಿಯೂ ಆಗುತ್ತಾರೆ. ಬದುಕು ಕಟ್ಟಿಕೊಳ್ಳುವುದಾದರೆ ನಾಟಕದಿಂದಲೇ ಅಂತಾದ ಮೇಲೆ ಡಬಲ್ ಮೀನಿಂಗ್ ಡೈಲಾಗಿನ ನಾಟಕಗಳನ್ನ ಮುಂದುವರೆಸಿದ್ದರೆ ಚೆಂದ ಇರುತ್ತಿತ್ತು. ಮತ್ತು ಅದು ಸಹಜವೂ ಆಗಿರುತ್ತಿತ್ತು. ಆದರೆ ಹೆಲೆನ್ ರಂಗದ ಮೇಲೆ ಅಷ್ಟೆಲ್ಲ ದ್ವಂದಾರ್ಥದ ಸಂಭಾಷಣೆ ಹೇಳಿ ರಂಜಿಸಿದ್ದರೂ ಅವರಿಗೆ ಕೆ.ವೈ ನಾರಾಯಣ ಸ್ವಾಮಿ ಸರ್ ಅವರ ‘ಚಕ್ರರತ್ನ’ ನಾಟಕ ಇಷ್ಟವಾಗುತ್ತದೆ ಎನ್ನುವುದು ಅಚ್ಚರಿಯ ಸಂಗತಿ. ಮತ್ತು ಅವರ ಈ ನಡೆಯನ್ನ ಗಂಭೀರವಾಗಿ ಅವಲೋಕಿಸಬೇಕಿರುವುದು ಅನಿವಾರ್ಯ ಅನಿಸಿತು.

ಪಕ್ಕಾ ಮಾಸ್ ಎಂಟರ್ಟೇನರ್ ನಾಟಕಗಳಲ್ಲಿ ನಟಿಸುತ್ತಿದ್ದವರು ‘ಜನಕಜಾತೆ ಸೀತೆ’ ಎಂಬ ಪ್ರಯೋಗಾತ್ಮಕ ನಾಟಕದಲ್ಲಿ ನಟಿಸುತ್ತಾರೆ ಮತ್ತು ದಾಖಲೆ ಮಾಡುತ್ತಾರೆ. ತಾವೇ ಒಂದು ಹವ್ಯಾಸಿ ರಂಗತಂಡ ಕಟ್ಟಿ ತಮ್ಮ ಕಲೆಕ್ಷನ್ ಡ್ರಾಮಗಳನ್ನ ಬಿಟ್ಟು ಶುದ್ಧ ಪ್ರಯೋಗಗಳಿಗೆ ನಿಲ್ಲುತ್ತಾರೆ. ಮಂಗಳಮುಖಿಯರನ್ನ ಕಲೆಹಾಕಿಕೊಂಡು ನಾಟಕ ಮಾಡಿಸಿ ಹೊಸ ನೋಟಕ್ರಮ ಹುಟ್ಟುಹಾಕುತ್ತಾರೆ. ‘ಖಾನಾವಳಿ ಚೆನ್ನಿ’ಯಲ್ಲಿನ ಹೆಲೆನ್ ‘ಮತ್ತೊಬ್ಬ ರಾಧೆ’ ಯಂಥ ನಾಟಕ ಮಾಡಲು ಸಾಧ್ಯವೇ ಎಂದು ಯೋಚಿಸುವ ಹಾಗೆ ಮಾಡಿದ್ದಾರೆ. ಈ ಶಿಪ್ಟ್ ತುಂಬ ಅಪಾಯಕಾರಿಯಾದದ್ದು ಮತ್ತು ಅಚ್ಚರಿ ತರಿಸುವಂಥದ್ದು.

ನಾನು ಸಂದರ್ಶನ ನೋಡಿದ್ದೀನೋ ಇಲ್ಲವೋ ತಿಳಿಯಲು ಮತ್ತು ನನ್ನನ್ನ ಕೆದಕಿ ನಗಲು ಗೆಳೆಯ ಮತ್ತೆ ಫೋನ್ ಮಾಡಿದಾಗ ನಾನು ಹೆಲೆನ್ ಅವರ ಅಪಾಯಕಾರಿ ಶಿಪ್ಟ್ ಬಗ್ಗೆ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದೆ. ‘ಜನಕಜಾತೆ ಸೀತೆ’ ನಾಟಕ ಒನ್ ವುಮನ್ ಶೋ. ಇಡೀ ರಾಮಾಯಣವನ್ನ ಒಬ್ಬಾಕೆ ಹೇಳುವ ಕಥನವಂತೆ. ನೂರಾ ಹದಿಮೂರು ಪಾತ್ರಗಳನ್ನ ಒಬ್ಬಳೇ ನಟಿ ಅಭಿನಯಿಸಿ ಕಾಣಿಸಬೇಕಿರುವ ಪಾತ್ರವಂತೆ. ಇದನ್ನ ಹೆಲೆನ್ ಮಾಡಿದ್ದಾರೆ ಅಂತ ತಿಳಿದಾಗ ನನಗೆ ಮತ್ತೂ ಆಶ್ಚರ್ಯವಾಯಿತು. ನಾನು ಆ ನಾಟಕ ನೋಡಿರಲಿಲ್ಲ. ಗೆಳೆಯನಲ್ಲಿ ಈ ಬಗ್ಗೆ ಕೇಳಿದೆ. ಅವನೂ ನೋಡಿರಲಿಲ್ಲ. ನೋಡದೆಯೂ ಹೇಳಬಲ್ಲ ಇಂಟಲೆಕ್ಚುವಲ್ ಆದ ನನ್ನ ಗೆಳೆಯ ‘ಇನ್ನೇನಿದ್ದೀತು..? ರಾಮಾಯಣ ಅಂದರೆ ಒಂದು ಬಗೆಯ ಬೇಯುವಿಕೆ. ರಾಮ ಸ್ಥಿತಪ್ರಜ್ಞ ಇರಬಹುದು. ನಾಟಕ ಸೀತೆ ಬಗ್ಗೆ ಇರೋದರಿಂದ ಆಕೆಯ ಬೇಯುವಿಕೆ ಬಗ್ಗೆ ಪ್ರಧಾನವಾಗಿ ಇರುತ್ತದೆ’ ಅಂದ. ನಾನು ನಕ್ಕೆ.

ಆದರೆ ರಾಮಾಯಣದ ಕುರಿತ ಅವನು ಕಟ್ಟಿಕೊಟ್ಟ ಪ್ರತಿಮೆ ಚೆನ್ನಾಗಿತ್ತು. ರಾಮಾಯಣ ಅಂದರೆ ಬೇಯುವಿಕೆ ಅನ್ನುವುದು ನಿಜ. ರಾಮ ಒಂದು ರೀತೀಲಿ ಬೇಯುತ್ತಾನೆ. ದಶರಥ ಮತ್ತೊಂದು ರೀತಿಯಲ್ಲಿ. ಲಕ್ಷ್ಮಣ ಹಾಗೂ ಊರ್ಮಿಳೆಯದು ಇನ್ನೊಂದು ಬಗೆ. ಸೀತೆಯದು ಆಂತರ್ಯದ ಬೇಗುದಿ ಮಾತ್ರ ಅಲ್ಲ ನೇರ ಅಗ್ನಿ ಪ್ರವೇಶಿಸುವ ಬಗೆ. ಹಾಗಾಗಿ ‘ಬೇಯುವಿಕೆ’ ಮೆಟಫರ್ ಮೆಚ್ಚಬಹುದು ಎಂದು ನಗುತ್ತ ಹೇಳಿದೆ.

ಈ ಬೇಯುವಿಕೆಯ ಇಮೇಜ್ ನನ್ನ ತಲೆಯಲ್ಲಿ ಹಾಗೇ ಸುಳಿತಿರುಗುತ್ತಿದ್ದ ವೇಳೆ ಹೆಲೆನ್ ರ ಸಂದರ್ಶನ, ಅದರಲ್ಲಿ ನಿರೂಪಣೆಗೊಂಡಿರುವ ಅವರ ಬೇಯುವಿಕೆ ನೆನಪಾಗುತ್ತಿದ್ದಂತೆ ಮತ್ತೊಂದು ಪಾತ್ರ ನನ್ನ ಕಣ್ಮುಂದೆ ಕಟ್ಟಿಕೊಳ್ಳಲು ಆರಂಭಿಸಿತು. ಆ ಪಾತ್ರದ ಹೆಸರು ಮರಿಯ ಕಲಸ್. ಹೆಲೆನ್ ಹೆಸರು ನನಗೆ ಗ್ರೀಸ್ ದೇಶ ನೆನಪಿಸಿದಂತೆ ಮತ್ತು ಗ್ರೀಕಿನ ದುರಂತ ನಾಟಕಗಳನ್ನು ನೆನಪಿಗೆ ತಂದಂತೆ ಅದರ ಜೊತೆಗೆ ಬೇಯುವಿಕೆಗೆ ಪರ್ಯಾಯ ರೂಪದಲ್ಲಿ ನೆನಪಿಗೆ ನಿಲುಕಿದವಳ ಹೆಸರು ಮರಿಯ ಕಲಸ್.

ಇದೇ ಹೆಲೆನ್ ಅವರು ಡಬಲ್ ಮೀನಿಂಗ್ ಜೋಕ್ಸ್ ಗಳನ್ನ ಬೀಡುಬೀಸಾಗಿ ಹೇಳುತ್ತಿದ್ದಂತೆ ನಾಟಕ ನೋಡುವುದನ್ನ ಬಂದ್ ಮಾಡುತ್ತಿದ್ದೆ. ಆಮೇಲೆ ಇವೆಲ್ಲ ನಮಗಲ್ಲ ಅಂದುಕೊಂಡು ಮರೆತೂಬಿಟ್ಟಿದ್ದೆ.

ಇದಕ್ಕೆ ಕಾರಣ ಇದೆ. ಅಗಸ್ಟನ ಕಾಲೇಜಿನಲ್ಲಿ ಥಿಯೇಟರ್ ಆರ್ಟ್ಸ್ ವಿಭಾಗದಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿರುವ ಶೆಲ್ಲಿ ಕಾಪರ್ ಈಚೆಗೆ ಕಳೆದ ಮಾರ್ಚ್ 26 ಹಾಗೂ 28 ರಂದು ಇದೇ ಮರಿಯ ಕಲಸ್ ಬಗ್ಗೆ ‘ಒನ್ ವುಮನ್ ಶೋ’ ಮಾಡುವುದಾಗಿ ಘೋಷಿಸಿದ್ದರು. ನಾಟಕದ ಹೆಸರು: ‘ಲಾ ಡಿವಿನ: ದಿ ಲಾಸ್ಟ್ ಇಂಟರ್ ವ್ಯೂ ಆಫ್ ಮರಿಯ ಕಲಸ್’. ಲಾ ಡಿವಿನ ಅಂದರೆ ದೈವಿಕವಾದದ್ದು ಎಂದು ಅರ್ಥ. ಮೋಲಿನ್ಸ್ ಬ್ಲ್ಯಾಕ್ ಬಾಕ್ಸ್ ಥಿಯೇಟರ್ ನವರು ಈ ಪ್ರಯೋಗ ಆಯೋಜಿಸಿದ್ದಾರೆ ಎಂದು ಓದಿದ್ದ ನೆನಪು.

ಹಲವರಿಗೆ ಮರಿಯಾ ಕಲಸ್ ಬಗ್ಗೆ ತಿಳಿದಿರುತ್ತದೆ. ಈಕೆ ಜಗತ್ತು ಕಂಡ ಶ್ರೇಷ್ಠ ಒಪೆರಾ ಗಾಯಕಿ. ಹುಟ್ಟಿದ್ದು 1923ರಲ್ಲಿ. ಕ್ಯಾಲಿಫೋರ್ನಿಯಾದಲ್ಲಿ. ಆದರೆ ಈಕೆಯ ತಂದೆ ತಾಯಿ ಗ್ರೀಕ್ ಮೂಲದವರು. ಈ ಇಬ್ಬರು ದಂಪತಿಗಳ ದಾಂಪತ್ಯ ಮೊದಲಿನಿಂದ ಅಷ್ಟು ಚೆನ್ನಾಗಿರಲಿಲ್ಲ. ಸದಾ ಜಗಳ ಮತ್ತು ಮನಸ್ತಾಪ. ತಂದೆಯ ಹೆಸರು ಜಾರ್ಜ್, ತಾಯಿ ಹೆಸರು ಲಿಸ್ಟ. ಜಾರ್ಜ್ ಇಟ್ಟಿದ್ದ ಫಾರ್ಮಸಿಟ್ಯುಕಲ್ಸ್ ಅಂಗಡಿ ಲಾಸ್ ಆಗುತ್ತದೆ. ಮುಂದೆ ಅವನು ಕೆಲಸ ಮಾಡುವುದಿಲ್ಲ. ಅವನು ಅಷ್ಟು ಮಹತ್ವಾಕಾಂಕ್ಷಿಯೂ ಅಲ್ಲ. ಲಿಸ್ಟ ಹಾಗಲ್ಲ. ಗಂಡ ಕುಟುಂಬಕ್ಕೆ ನೆರವಾಗದಿರುವುದಕ್ಕೆ ಬೇಸರ ಇದೆ. ಇದೇ ಕಾರಣಕ್ಕೆ ಮುಂದೆ ಬೇರೆ ಆಗುತ್ತಾರೆ. ಲಿಸ್ಟಾಗೆ ಮೊದಲಿನ ಮಗು ಹೆಣ್ಣಾಗಿದೆ. ನಂತರ ಗಂಡು ಮಗುವಾಗಿ ತೀರಿಹೋಗುತ್ತದೆ. ನಂತರದಲ್ಲಿ ತನಗೆ ಗಂಡು ಮಗುವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಲಿಸ್ಟಾಗೆ ಹುಟ್ಟುವ ಮಗುವೇ ಮರಿಯಾ ಕಲಸ್. ಹೆಣ್ಣು ಮಗು ಹುಟ್ಟಿತು ಎಂಬ ಕಾರಣಕ್ಕೆ ಲಿಸ್ಟ ಮಗುವಿನ ಕಡೆ ನಾಲ್ಕು ದಿನ ದೃಷ್ಟಿ ಹಾಯಿಸಿರುವುದಿಲ್ಲ. ಹುಟ್ಟಿದಾಗಿನಿಂದ ಒಂದು ಬಗೆಯ ತಿರಸ್ಕಾರ. ‘ಬೇಯುವಿಕೆ’ ಅಲ್ಲಿಂದಲೇ ಆರಂಭವಾಗುತ್ತದೆ. ಸೀತೆ ನಮ್ಮ ಮಹಾಕಾವ್ಯದ ಪಾತ್ರ. ಮರಿಯ ಕಲಸ್ ನಮ್ಮ ಶತಮಾನದಲ್ಲಿ ನಲುಗಿದ ಪಾತ್ರ. ಇಬ್ಬರ ಬೇಯುವಿಕೆ ಹೇಗೆ ಎಂದು ಯೋಚಿಸುತ್ತಾ ಹೋದೆ.

ಲಿಸ್ಟ ಗಂಡನಿಂದ ಬೇರ್ಪಟ್ಟ ಮೇಲೆ 1937ರಲ್ಲಿ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಅಥೆನ್ಸ್ ಗೆ ಹಿಂದಿರುಗುತ್ತಾಳೆ. ಮರಿಯಾ ಕಲಸ್ ಗೆ ಹಾಡುವ ತುಡಿತ. ಗುನುಗುವುದಕ್ಕೆ ಆರಂಭಿಸಿರುವುದನ್ನ ಕಂಡು ಲಿಸ್ಟಾ ಕಲಸ್ ಳನ್ನ ಸಂಗೀತದ ಶಾಲೆಗೆ ಸೇರಿಸುತ್ತಾಳೆ. ಆಗ ಕಲಸ್ ಗೆ ಇನ್ನೂ ಐದು ವರ್ಷ. ಲಿಸ್ಟಾಗೆ ಮೊದಲ ಮಗಳ ಮೇಲೆ ಪ್ರೀತಿ. ಕಲಸ್ ಮೇಲೆ ಪ್ರೀತಿ ಇಲ್ಲ. ಹಾಡು ಕಲಿ ಎಂದು ಪೀಡಿಸಲು ಆರಂಭಿಸುತ್ತಾಳೆ. ಯಾಕೆಂದರೆ ಅದರಿಂದ ಮುಂದೆ ಒಂದಿಷ್ಟು ದುಡ್ಡು ಸಂಪಾದನೆ ಮಾಡಬಹುದು ಎನ್ನುವುದು ಅವಳ ಲೆಕ್ಕಾಚಾರ. ಇದು ಕಲಸ್ ಳನ್ನ ದಣಿವಿಗೆ ಗುರಿಮಾಡುತ್ತದೆ. ‘ನನ್ನ ಬಾಲ್ಯ ಕಿತ್ತುಕೊಂಡ ನನ್ನ ಅಮ್ಮನನ್ನ ನಾನು ಎಂದಿಗೂ ಕ್ಷಮಿಸಲಾರೆ. ಯಾವಾಗಲೂ ಹಾಡು ಅಂದರೆ ಹೇಗೆ? ನಾನು ಹಾಡುತ್ತಿದ್ದೆ, ಸಂಪಾದಿಸುತ್ತಿದ್ದೆ. ನಾನು ಅವರಿಗೆ ಒಳಿತು ಮಾಡುತ್ತಿದ್ದರೆ ಅಮ್ಮ ನನಗೆ ನಿತ್ಯ ಕೆಟ್ಟದ್ದೇ ಮಾಡುತ್ತಿದ್ದಳು.

ಬೆಳೆಬೆಳೆಯುತ್ತ ಚಿತ್ರ ಮತ್ತಷ್ಟು ಬಿಗಡಾಯಿಸುತ್ತದೆ. ತಾಯಿ ಒಂದು ರೀತಿಯಲ್ಲಿ ಜೀವನ ನಿರ್ವಹಣೆಗೆ ವೇಶ್ಯಾವಾಟಿಕೆಗೆ ಇಳಿದಿರುತ್ತಾಳೆ. ಮತ್ತು ಮಗಳು ಕಲಸ್ ಗೆ ಕೂಡ ಎರಡನೆ ಮಹಾಯುದ್ಧದ ವೇಳೆ ಗ್ರೀಸಿನ ಆಕ್ಸಿಸ್ ಆಕ್ಯುಪೇಷನ್ ವೇಳೆ ಬೇರೆಬೇರೆ ಗಂಡಸರ ಜೊತೆ – ಮುಖ್ಯವಾಗಿ ಇಟಾಲಿಯನ್ ಹಾಗೂ ಜರ್ಮನ್ ಸೈನಿಕರ ಜೊತೆ ಹೊರಗೆ ಹೋಗಿ ಅವರನ್ನ ತಣಿಸಿ ಮನೆಗೆ ಒಂದಿಷ್ಟು ಹಣ ತೆಗೆದುಕೊಂಡು ಬಾ ಎಂದು ತಾಕೀತು ಮಾಡುತ್ತಾಳೆ. ಕಲಸ್ ಇದಕ್ಕೆ ಮಣಿಯುವುದಿಲ್ಲ. ಅಮ್ಮನನ್ನ ತಿರಸ್ಕರಿಸುತ್ತಾಳೆ ಮತ್ತು ತನ್ನ ಇಷ್ಟದ ಮತ್ತು ಅತೀ ಕಷ್ಟದ ಸಂಗೀತ ಕಲಿಯಲು ಆರಂಭಿಸುತ್ತಾಳೆ. ಒಪೆರಾಗೆ ಹಾಡುವುದು ಅಂದರೆ ಸುಮ್ಮನೆ ಮಾತಲ್ಲ. ಟ್ರಿವೆಲ್ಲ ಎನ್ನುವ ಸಂಗೀತ ಶಿಕ್ಷಕಿ ಬಳಿ ಕಲಿಯುವ ಕಲಸ್ ತನ್ನ ಕಲಿಕೆ ಬಗ್ಗೆ ಹೇಳಿಕೊಂಡಿರುವ ಮಾತು ಹೀಗಿದೆ: “Trivella had a French method, which was placing the voice in the nose, rather nasals and I had the problem of having low chest tones which is essential in bell canto. And that’s where I learned my chest tones…”

ಹೀಗೆ ಕಲಿಕೆ ಆರಂಭಿಸಿದ ಕಲಸ್ ಮುಂದೆ ಒಪೆರಾದಲ್ಲಿ ಹಲವು ಪಾತ್ರಗಳಲ್ಲಿ ನೆನಪಿನಲ್ಲಿ ಉಳಿಯುತ್ತಾಳೆ. ಅದರಲ್ಲೂ ಮುಖ್ಯವಾಗಿ ‘Madama Butterfly’ ನಲ್ಲಿ. ವಾಯ್ಸ್ ಮಾಡ್ಯುಲೇಷನ್ ನ ಬಗೆ ಕಂಡುಕೊಳ್ಳಬೇಕಿದ್ದರೆ ಮಡಮಾ ಬಟರ್ ಫ್ಲೈ ಕೇಳಬೇಕು. ಒಪೆರಾಗಳಲ್ಲಿ ಆಕೆ ಜೀವಿಸಿದ ಬಗೆಯನ್ನು ಆಕೆಯ ಮಾತುಗಳಲ್ಲೇ ಕೇಳಬೇಕು: “An Opera begins long before the curtain goes up and ends long after it has come down. It starts in my imagination. It becomes my life, and it stays part of my long life after I have left the opera house…’

ಇದೇ ಕಾರಣಕ್ಕಾಗಿಯೇ ಜಗದ್ವಿಖ್ಯಾತ ಸಂಗೀತ ಸಂಯೋಜಕ ಲಿಯೋನಾರ್ಡ್ ಬೆರ್ನಿಸ್ಟೈನ್ ಮರಿಯಾ ಕಲಸ್ ಳನ್ನ ‘ಬೈಬಲ್ ಆಫ್ ಒಪೆರಾ’ ಅಂತ ಕರೆದಿದ್ದಾನೆ.

ಈ ಹಂತಕ್ಕೆ ಹೋದರೂ ಕಲಸ್ ಬೇಯುವುದು ತಪ್ಪಲಿಲ್ಲ. ತಾನು ಹೇಳಿದಂತೆ ಅನ್ಯಗಂಡಸರ ಜೊತೆ ಹೋಗಿ ಹಣ ಸಂಪಾದಿಸಲಿಲ್ಲ ಎನ್ನುವ ಕಾರಣಕ್ಕೆ ತಾಯಿ ಕಲಸ್ ವಿರುದ್ಧ ಅಪಪ್ರಚಾರ ಆರಂಭಿಸುತ್ತಾಳೆ. ತನ್ನ ಬಗ್ಗೆ ಮಾತಾಡದಿರುವಂತೆ ಬ್ಲಾಕ್ ಮೇಲ್ ಆರಂಭಿಸುತ್ತಾಳೆ. ಒಂದು ಪತ್ರದಲ್ಲಿ ಆಕೆ ಮಗಳು ಕಲಸ್ ಗೆ “You know what cinema artists of humble origins do as soon as they become rich? In first month they spend their money to make a home for their parents and spoil them with their luxuries. What have you got to say Maria..?’’ ಎಂದಿದ್ದಾಳೆ.

(ಮರಿಯಾ ಕಲಸ್)

ಮತ್ತೊಂದು ಕಡೆ ಅಪ್ಪ ತಾನು ಆಸ್ಪತ್ರೆಯಲ್ಲಿ ಸಾಯುವ ಸ್ಥಿತಿಯಲ್ಲಿದ್ದೇನೆ ಎಂದು ಸುಳ್ಳು ಪತ್ರ ಬರೆದು ಮಗಳು ಕಲಸ್ ಳಿಂದ ಹಣ ಪೀಕುತ್ತಾನೆ. ಹಾಗೆ ನೋಡಿದರೆ ಅವನಿಗೆ ಏನೂ ಆಗಿರುವುದಿಲ್ಲ. ಚಿಕ್ಕ ಪೆಟ್ಟಾಗಿರುತ್ತದೆ ಅಷ್ಟೇ.

ಮತ್ತೆ ಕಲಸ್ ಕೆಲಸ ಮಾಡುವ ಕಡೆ ಒಬ್ಬ ಪ್ರೇಮಿಸುತ್ತಾನೆ. ಅದು ಕಲಸ್ ಗೆ ಒಪ್ಪಿಗೆ ಆಗುವುದಿಲ್ಲ. ಈ ಕಾರಣಕ್ಕೆ ಅವನು ಸಿಬ್ಬಂದಿಯನ್ನ ಕಲಸ್ ವಿರುದ್ಧ ಎತ್ತಿಕಟ್ಟುತ್ತಾನೆ. ಕಲಸ್ ನೋಯಲು ಆರಂಭಿಸುತ್ತಾಳೆ.

ನಂತರ ಕಲಸ್ ಮೆನೆಗಿನಿ ಎಂಬಾತನನ್ನ ಮದುವೆ ಆಗುತ್ತಾಳೆ. ಆತ ಕಲಸ್ ಳ ದುಡ್ಡನ್ನ ದೋಚಿ ತನ್ನದನ್ನಾಗಿ ಮಾಡಿಕೊಳ್ಳಲು ಆರಂಭಿಸುತ್ತಾನೆ. ರೋಸಿ ಹೋಗುವ ಕಲಸ್ ಮೆನೆಗಿನಿಯನ್ನ ‘ತಲೆಗೆ ಹೊಕ್ಕಿಕೊಂಡಿರುವ ಹೇನು’ ಎಂದು ಬೈದು ಮದುವೆ ಮುರಿದುಕೊಳ್ಳುತ್ತಾಳೆ.

ಎಲ್ಲ ಮರೆಯಲು ವೃತ್ತಿ ಬದುಕಿನ ಕಡೆ ಗಮನ ಹರಿಸೋಣ ಅಂದುಕೊಂಡರೆ ಕಲಸ್ ಗೆ ರೆನೆಟಾ ಟೆಬಾಲ್ಡಿ ಎಂಬ ಖಳನಾಯಕಿ ಹುಟ್ಟಿಕೊಳ್ಳುತ್ತಾಳೆ. ಅವಳನ್ನ ಸಂಭಾಳಿಸುವುದರಲ್ಲೇ ಕಲಸ್ ದಣಿಯುತ್ತಾಳೆ. ತನ್ನ ದನಿಯೇ ಚೆಂದ ಎಂದು ಹೇಳಿಕೊಳ್ಳುವ ಭರದಲ್ಲಿ ‘ತನ್ನ ದನಿ cognac ಎನ್ನುತ್ತಾಳೆ. ಪ್ರೆಸ್ ನವರು ಅದನ್ನು ತಪ್ಪಾಗಿ ಆಕೆಯ ದನಿ ‘ಶಾಂಪೇನ್ ಮತ್ತು ಕೊಕೊಕೋಲಾ’ ಇದ್ದಂಗೆ ಅಂತೆ’ ಎಂದು ಬರೆಯುತ್ತಾರೆ. ಇದನ್ನ ಕೇಳಿಸಿಕೊಂಡ ಟೆಬಾಲ್ಡಿ ‘ಕಲಸ್ ಗೆ ಚೂರೂ ಹೃದಯವಂತಿಕೆ ಇಲ್ಲ’ ಎಂದು ಛೇಡಿಸುತ್ತಾಳೆ. ಶೀತಲ ಸಮರ ಮುಂದುವರೆಯುತ್ತದೆ.

ಇದರಿಂದ ಮುಕ್ತಿ ಕಂಡುಕೊಳ್ಳಬೇಕು ಎನಿಸಿ ಕಲಸ್ ಗ್ರೀಸಿನ ಶಿಪ್ಪಿಂಗ್ ಟೈಕೂನ್ ಆರಿಸ್ಟಾಟಲ್ ಒನಾಸಿಸ್ ಎಂಬ 57ರ ಹರೆಯದವನ ಜೊತೆ ಲವ್ ಅಫೇರ್ ಆರಂಭಿಸುತ್ತಾಳೆ. ಒನಾಸಿಸ್ ಕಲಸ್ ಳ ಜೊತೆ ಲೈಂಗಿಕ ತೃಪ್ತಿ ಕಂಡುಕೊಳ್ಳಲು ಆಕೆಗೆ ಡ್ರಗ್ಸ್ ಅಭ್ಯಾಸ ಮಾಡಿಸುತ್ತಾನೆ. ಇವನ ಸಂಸರ್ಗದಲ್ಲಿ ಒಂದು ಪ್ರಿಮೆಚ್ಯೂರ್ ಮಗು ಹುಟ್ಟಿ ಎರಡೇ ದಿನಕ್ಕೆ ತೀರಿಹೋಗುತ್ತದೆ. ಸಿಸೇರಿಯನ್ ಆದ ಕಾರಣ ಕಲಸ್ ಳ ಹೊಟ್ಟೆ ಮಾಂಸಖಂಡಗಳೆಲ್ಲ ಸಡಿಲವಾಗುತ್ತದೆ ಮತ್ತು ಆಕೆ ತನ್ನ ದನಿಯನ್ನ ಕ್ರಮೇಣ ಕಳೆದುಕೊಳ್ಳಲು ಆರಂಭಿಸುತ್ತಾಳೆ. ಒಪೆರಾ ಗಾಯಕಿಗೆ ದನಿ ಇಲ್ಲದ ಮೇಲೆ ಇನ್ನೇನು..? ಒನಾಸಿಸ್ ಕಲಸ್ ಳನ್ನ ತಿರಸ್ಕರಿಸಿ ಜಾಕಿ ಕೆನಡಿಯನ್ನ ಮದುವೆ ಆಗುತ್ತಾನೆ. ಕಲಸ್ ಪ್ಯಾರಿಸ್ ನ ಒಂದು ಅಪಾರ್ಟ್ ಮೆಂಟ್ ನಲ್ಲಿ ಒಂಟಿಯಾಗಿ ನಲುಗುತ್ತಾ ಕೊನೆಯುಸಿರೆಳೆಯುತ್ತಾಳೆ. “ನಾನು ನನ್ನ ಶತ್ರುಗಳನ್ನ ಕೊಲ್ಲುವುದಿಲ್ಲ. ಆದರೆ ಅವರುಗಳು ಮಂಡಿಯೂರಿ ನನ್ನ ಮುಂದೆ ಕೂರಬೇಕು ಹಾಗೆ ಮಾಡುತ್ತೇನೆ, ಮಾಡಲು ನನಗೆ ಬರುತ್ತದೆ, ಮತ್ತು ನಾನು ಅಗತ್ಯವಾಗಿ ಮಾಡಲೇಬೇಕು..” ಎಂದಿದ್ದ ಕಲಸ್ ಬೇಯುವುದರಲ್ಲೇ ಕಾಲದೂಡಿದ ಗಾಯಕಿ.

ಲಿಂಡ್ಸೆ ಸ್ಪೆನ್ಸ್ ಎನ್ನುವಾಕೆ ಈಚೆಗೆ ಕಲಸ್ ರ ಖಾಸಗಿ ಪತ್ರಗಳನ್ನ ಸಂಗ್ರಹಿಸಿ ಆಕೆಯ ಜೀವನದ ಭಯಾನಕ ನೋವಿನ ಸಂಗತಿಗಳನ್ನ ಕಲೆಹಾಕಿ ಒಂದು ಪುಸ್ತಕ ಪ್ರಕಟಿಸಿದರು. ಈಗ ಕಲಸ್ ಗೆ ಸಂಬಂಧಿಸಿದಂತೆ ಆಕೆಯ ಕಡೆಯ ಸಂದರ್ಶನ ಆಧರಿಸಿ ಒಂದು ನಾಟಕ ಪ್ರಯೋಗವಾಗಿದೆ. ಇದಕ್ಕೂ ಮೊದಲು ಟೆರೆನ್ಸ್ ಮೆಕ್ನಲಿ ಎಂಬ ಅಮೆರಿಕನ್ ನಾಟಕಕಾರ ಮರಿಯಾ ಕಲಸ್ ಜೀವನ ಕುರಿತ ‘ಮಾಸ್ಟರ್ ಕ್ಲಾಸ್’ ಎಂಬ ನಾಟಕ ಬರೆದು ಅದು ಹಲವು ಪ್ರದರ್ಶನಗಳನ್ನ ಕಂಡಿತ್ತು. ಆತನ ಪ್ರಕಾರ ಮರಿಯಾ ಕಲಸ್ ಪರಿಪಕ್ವತೆಗೆ ದೂರ… 1950ರ ದಶಕದಲ್ಲಿ ಒಪೆರಾ ಪ್ರೇಮಿಗಳು ಮರಿಯಾ ಕಲಸ್ ಳ ಮೇಲೆ ತರಕಾರಿಗಳನ್ನ ತೂರುತ್ತಿದ್ದರು. ಈ ಹೊತ್ತು ಮಾತ್ರ ಆಕೆಯ ಬಗ್ಗೆ ವಿಶೇಷಣಗಳನ್ನ ತೂರಿಬಿಡ್ತಿದ್ದಾರೆ’ ಎನ್ನುತ್ತಾನೆ.


ಕಾಲ ಎಂಥದ್ದನ್ನೂ ಮರೆಮಾಚಿಸುತ್ತದೆ, ಸಮಯ ಬಂದಾಗ ದಾಖಲೆಗಳು ಸಿಗುವಂತೆ ಮಾಡಿ ಸತ್ಯಗಳೆಂದು ಪ್ರಕಟಪಡಿಸುತ್ತದೆ ಮತ್ತು ಮತ್ತೆ ಅವುಗಳನ್ನ ನೆನೆಗುದಿಗೆ ಬೀಳುವಂತೆ ಮಾಡುತ್ತದೆ. ಈ ಆಟದ ವಿಚಿತ್ರದಲ್ಲಿ ನಾವು ಯಾರ್ಯಾರನ್ನು ಹೇಗೆ ಅರಿಯಬೇಕು ಎಂಬುದನ್ನು ವರ್ತಮಾನ ನಿರ್ಧರಿಸುತ್ತಿರುತ್ತದೆ. ಮತ್ತು ಈ ವರ್ತಮಾನಕ್ಕೆ ಭೂತದ ಬೆಂಬಲವಿದ್ದೇ ಇರುತ್ತದೆ. ಪೋಲಿ ಮಾತು ಮತ್ತು ಜೋಕುಗಳ ಕಲೆಕ್ಷನ್ ನಾಟಕಗಳನ್ನು ಬಿಟ್ಟು ಬೇರೆ ಮಗ್ಗುಲಿಗೆ ಹೊರಳಿರುವ ಹೆಲೆನ್ ರ ನಡೆ ಮತ್ತು ತನ್ನ ಜೀವನವನ್ನ ಉದ್ದಕ್ಕೂ ಬಾಧಿಸಿದ ನೋವನ್ನು ಕಂಠಕ್ಕೆ ವರ್ಗಾಯಿಸದೆ ಹೋರಾಡಿಕೊಂಡು ಬಂದ ಮರಿಯಾ ಕಲಸ್ ಳ ಬದುಕನ್ನು ಭೂತದ ಹಿನ್ನೆಲೆಯಲ್ಲಿ ವರ್ತಮಾನದಲ್ಲಿ ಮತ್ತಷ್ಟು ಅರಿಯುವ ಪ್ರಯತ್ನಮಾಡಬೇಕು. ಇದನ್ನು ಹೇಳುತ್ತಲೇ ಕಲಸ್ ಳ ‘ಮಡಮ್ ಬಟರ್ ಫ್ಲೈ’ ಒಪೆರಾ ಗೀತೆಗೆ ಕಿವಿಯಾಗಲು ಅಣಿಯಾಗುತ್ತಿದ್ದೇನೆ…