ನಮ್ಮ ನಂಬಿಕೆಗೆ ಆಧಾರವಿಲ್ಲದಿದ್ದರೂ ದೇವರನ್ನು ತಿರಸ್ಕರಿಸುವ ಧಾರ್ಷ್ಟ್ಯ ತೋರುವುದು ಎಷ್ಟು ಕಷ್ಟ. ದೇವರಿಗಿಂತಲೂ ದೇವರ ಹೆಸರಲ್ಲಿ ನಾವೇ ಮಾಡಿಕೊಂಡ ಸಂಪ್ರದಾಯಗಳು, ಆಚರಣೆಗಳೇ ನಿಜಕ್ಕೂ ಅಪಾಯಕಾರಿ. ಯಾವ ದೇವರು ತನಗೆ ಬೆತ್ತಲೆ ಸೇವೆ ಆಗಬೇಕು, ಅದೂ ಹೆಣ್ಣಿನಿಂದಲೇ ಅಂತ ಕೇಳಿರುತ್ತಾನೆ? ಯಾವ ದೇವರು ಹೆಣ್ಣನ್ನು ನನ್ನ ಹೆಸರಿನಲ್ಲಿ ವೇಷ್ಯೆಯನ್ನಾಗಿಸಿ ಎಂದು ಕೇಳಿರುತ್ತಾನೆ…? ಆದರೆ ಇವೆಲ್ಲ ಸಂಪ್ರದಾಯ ಆಚರಣೆಗಳೆನ್ನುವ ಹೆಸರಿನಲ್ಲಿ ಒಂದಿಡೀ ಸಮುದಾಯಕ್ಕೆ ತಪ್ಪು ಮಾಡಲು ಪರವಾನಗಿ ಕೊಟ್ಟುಬಿಡುತ್ತವೆ. ತನ್ಮೂಲಕ ಅವರೊಳಗಿನ ಅಸುರನಿಗೆ ದೈತ್ಯನಾಗಲು ಅವಕಾಶ ಕೊಟ್ಟುಬಿಡುತ್ತವೆ. ಈಗ ಸೊಟ್ಟಗಾದ ತುಟಿಗಳು ಕುಹಕದ ನಗೆಯನ್ನು ಸುಖವಾಗಿ ಚೆಲ್ಲಬಲ್ಲವು.
ಆಶಾ ಜಗದೀಶ್ ಅಂಕಣ

 

ಯಾವುದು ನಮ್ಮನ್ನು ಹೆಚ್ಚು ಕಾಡುತ್ತದೋ ಅದನ್ನೇ ಬರೆಯಲು ಸಾಧ್ಯ. ಅಥವಾ ಪರಿಣಾಮಕಾರಿ ಬರಹ ಎನ್ನುವುದು ವಿಪರೀತ ಎನ್ನುವಷ್ಟು ಕಾಡಿದ ನಂತರವೇ ಹುಟ್ಟುತ್ತದೇನೋ. ನಿಜಕ್ಕೂ ಈ ಪುಸ್ತಕ ನನ್ನನ್ನು ಅಷ್ಟೇ ಕಾಡಿತ್ತು…

ಬಹುಶಃ ಈಗ್ಗೆ ಹತ್ತು ವರ್ಷಗಳ ಕೆಳಗೆ ನಾನು ಮೊಟ್ಟ ಮೊದಲ ಬಾರಿಗೆ ಬಾನು ಮುಷ್ತಾಕ್ ರ “ಬೆಂಕಿಮಳೆ” ಎನ್ನುವ ಕಥಾಸಂಕಲನವನ್ನು ಓದಿದ್ದು ಅನಿಸುತ್ತದೆ. ಅದೆಷ್ಟು ಕಾಡಿತ್ತು ಈ ಪುಸ್ತಕ ಎಂದರೆ ಒಂದೊಂದು ಕತೆಯನ್ನೂ ಓದಿಯಾದ ಮೇಲೆ ಕೊಂಚ ನಿಂತು, ತಡೆದು, ಸಾವರಿಸಿಕೊಂಡು ಮುಂದಕ್ಕೆ ಹೋಗುತ್ತಿದ್ದೆ. ಯಾಕೆ ಹೀಗಾಗಿರಬೇಕು? ಅದು ನಾ ನೋಡಿಲ್ಲದ ಪ್ರಪಂಚವಾಗಿತ್ತು. ಅವು ನಾನು ಹತ್ತಿರದಿಂದಲೂ ನೋಡಿರದ ದಾರುಣ ಘಟನೆಗಳಾಗಿದ್ದವು. ಪ್ರತಿ ಕತೆಯನ್ನು ಓದುವಾಗಲೂ ಉರಿಉರಿ ಕೆಂಡವನ್ನು ಅಷ್ಟೇ ಹಸಿಹಸಿಯಾಗಿ ಕೈಯಲ್ಲಿ ಹಿಡಿದಂತಾ ಅನುಭವವಾಗುತ್ತಿತ್ತು. ನಾನಾದರೂ ಹಿಂದು ಸಂಸ್ಕೃತಿಯಲ್ಲಿ ಹುಟ್ಟಿಬೆಳೆದವಳಾಗಿ ಮುಸ್ಲಿಮ್ ಆಚರಣೆಗಳನ್ನು ಗ್ರಹಿಸುವಾಗ ದೇವರು ಧರ್ಮಗಳು ಹೆಣ್ಣಿನ ಶೋಷಣೆಯಲ್ಲಿ ಒಂದೇ ತೆರನಾಗಿ ಬಳಕೆಯಾಗುತ್ತಿದೆ ಅನಿಸುತ್ತಿತ್ತು. ಆಸ್ತಿಕಳಾದ ನನ್ನಲ್ಲಿ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದ್ದವು.

ಇಲ್ಲಿ ಬಾನು ಮುಷ್ತಾಕರು ತಾವೇ ಹೇಳಿಕೊಳ್ಳುವಂತೆ ಮುಸ್ಲಿಂ ಸಮುದಾಯದ ಆಚರಣೆ, ನಂಬಿಕೆ ಮತ್ತು ಸಂಪ್ರದಾಯಗಳನ್ನು ಅನಾವರಣಗೊಳಿಸುತ್ತಲೇ ವ್ಯವಸ್ಥೆಯ ಕರಾಳ ಮುಖದ ಚಿತ್ರಣವನ್ನೂ ಬಯಲಿಗಿಟ್ಟಿದ್ದಾರೆ.

(ಬಾನು ಮುಷ್ತಾಕ್)

ಸಭ್ಯ, ಸಂಪ್ರದಾಯ, ಸೌಮ್ಯ, ನಮ್ಯ ಅಂದುಕೊಳ್ಳುವಂತೆ ಮಾಡುವ ಆಚರಣೆಗಳ ಸೆರಗಾದರೂ ಎಷ್ಟು ಸುಡುತ್ತದೆ! ಮತ್ತೆ ಅಷ್ಟೆಲ್ಲ ಹಿಂಸೆ ನಡೆಯುವಾಗ ನಾವೆಲ್ಲ ಸರ್ವಶಕ್ತನೆಂದು ವಿಜೃಂಭಿಸುವ ದೇವನಾದರೂ ಯಾವ ಫಾರಿನ್ ಟ್ರಿಪ್ಪಿನಲ್ಲಿ ವ್ಯಸ್ಥನಾಗಿರುತ್ತಾನೋ ಅಥವಾ ಲಂಚ ತಗೆದುಕೊಂಡು ಮತ್ಯಾರದೋ ಸಮಸ್ಯೆ ಬಗೆಹರಿಸುತ್ತಿರುವನೋ… ಯಾವ ಕಳ್ಳ ಮಾರ್ಗ ಗೊತ್ತಿಲ್ಲದ ನಮ್ಮಂಥವರಿಗೆ ಅವ ಕಾಣುವ ಹೊತ್ತಿಗೆ ನಾವೇ ಕಣ್ಮರೆಯಾಗಿಬಿಟ್ಟಿರುತ್ತೇವಾ… ಇಂತಹ ಮಾತುಗಳನ್ನು ಅಶಕ್ತರಿಂದ, ವಯಸ್ಸಾದವರಿಂದ, ನಿರ್ಗತಿಕರ ಬಾಯಿಂದ ಕೇಳುವಾಗ ನಿಜಕ್ಕೂ ಖೇದವೆನಿಸುತ್ತದೆ. ಆದರೂ ಕಾಡುವವನನ್ನೇ ದೇವರೆಂದು, ಕಾಡಿದರೂ ಎಲ್ಲೋ ಒಂದು ಸಣ್ಣ ಕರುಣೆ ಅವನಲ್ಲೂ ಹುಟ್ಟಬಹುದು ಎಂದು ಕಾಯುತ್ತಾ, ಕಾಡುವವನೂ ಕಾಯಬಹುದು ಎಂದು ನಂಬುತ್ತಾ ಬದುಕಿಗೆ ಬೇಕಿರುವ ಆ ನಂಬಿಕೆಯನ್ನಿಟ್ಟುಕೊಂಡು ನಾಳೆಗೆ ಎದುರು ನೋಡುವ ನಮ್ಮ ನಂಬಿಕೆಯಲ್ಲಿ ದೇವರು ಇದ್ದಾನಷ್ಟೇ ಎಂದು ಅನಿಸಿಬಿಡುತ್ತದೆ.

ಎಂತಹ ವೈರುಧ್ಯಗಳು ಅಲ್ಲವಾ… ನಮ್ಮ ನಂಬಿಕೆಗೆ ಆಧಾರವಿಲ್ಲದಿದ್ದರೂ ದೇವರನ್ನು ತಿರಸ್ಕರಿಸುವ ಧಾರ್ಷ್ಟ್ಯ ತೋರುವುದು ಎಷ್ಟು ಕಷ್ಟ. ದೇವರಿಗಿಂತಲೂ ದೇವರ ಹೆಸರಲ್ಲಿ ನಾವೇ ಮಾಡಿಕೊಂಡ ಸಂಪ್ರದಾಯಗಳು, ಆಚರಣೆಗಳೇ ನಿಜಕ್ಕೂ ಅಪಾಯಕಾರಿ. ಯಾವ ದೇವರು ತನಗೆ ಬೆತ್ತಲೆ ಸೇವೆ ಆಗಬೇಕು, ಅದೂ ಹೆಣ್ಣಿನಿಂದಲೇ ಅಂತ ಕೇಳಿರುತ್ತಾನೆ? ಯಾವ ದೇವರು ಹೆಣ್ಣನ್ನು ನನ್ನ ಹೆಸರಿನಲ್ಲಿ ವೇಷ್ಯೆಯನ್ನಾಗಿಸಿ ಎಂದು ಕೇಳಿರುತ್ತಾನೆ…? ಆದರೆ ಇವೆಲ್ಲ ಸಂಪ್ರದಾಯ ಆಚರಣೆಗಳೆನ್ನುವ ಹೆಸರಿನಲ್ಲಿ ಒಂದಿಡೀ ಸಮುದಾಯಕ್ಕೆ ತಪ್ಪು ಮಾಡಲು ಪರವಾನಗಿ ಕೊಟ್ಟುಬಿಡುತ್ತವೆ. ತನ್ಮೂಲಕ ಅವರೊಳಗಿನ ಅಸುರನಿಗೆ ದೈತ್ಯನಾಗಲು ಅವಕಾಶ ಕೊಟ್ಟುಬಿಡುತ್ತವೆ. ಈಗ ಸೊಟ್ಟಗಾದ ತುಟಿಗಳು ಕುಹಕದ ನಗೆಯನ್ನು ಸುಖವಾಗಿ ಚೆಲ್ಲಬಲ್ಲವು. ಕಣ್ಣು ಕಿರಿದಾಗುತ್ತವೆ. ಮನಸ್ಸು ತನ್ನ ಪುಟ್ಟ ಕೋಣೆಯ ತುಂಬಾ ನಗೆಯ ಅಲೆಯುಸುರನ್ನು ತುಂಬಿಟ್ಟುಕೊಳ್ಳುತ್ತದೆ. ಒಂದೆರೆಡು ಸಾರಿ ಹಿಂದು ಮುಂದು ಜಗ್ಗಾಟಗಳಿದ್ದರೂ ನಂತರ ಪಾಪಪ್ರಜ್ಞೆ ಎನ್ನುವ ಪ್ರಶ್ನಿಸುವ ಕಣ್ಣು, ದೃಷ್ಟಿ ಕಳೆದುಕೊಂಡು ಕುರುಡಾಗಿಬಿಡಿತ್ತದೆ. ಇನ್ನು ತಪ್ಪನ್ನು ಸರಿಮಾಡಿಕೊಳ್ಳುವುದು, ಬ್ಲ್ಯಾಕ್ ಮನಿಯನ್ನು ವೈಟ್ ಮಾಡಿಕೊಂಡಷ್ಟೇ ಸುಲಭ ನಮಗೆ.

ಆದರೆ ನಿಜಕ್ಕೂ ಬೇಯುವುದು ಎಂದರೆ ಸುಟ್ಟು ಕರಕಲಾಗುವುದಲ್ಲ, ಬೇಯುವುದು ಎಂದರೆ ಒಂದೊಂದೇ ಜೀವಕೋಶ ಹಿತವಾಗಿ ಬಿಸಿಯಾಗಿ ಪಕ್ವಗೊಳ್ಳುವುದು. ಘಂ ಎಂದು ಸುವಾಸನೆ ಬೀರುವ, ನಾಲಿಗೆಯ ಮೇಲಿನ ಸ್ವಾದವಾಗುಳಿವ ಹದಕ್ಕೆ ತಲುಪುವುದು. ಆದರೆ ಋಣಾತ್ಮಕವಾಗಿಯೇ ಗ್ರಹಿಸಬೇಕೆನ್ನುವ ವಿಕೃತ ಮನಸ್ಥಿತಿಗೆ ಎಲ್ಲಿಯ ಸಮಾಧಾನ…

ಹೆಣ್ಣು ಅಡಿಯಿಂದ ಮುಡಿಯವರೆಗೂ ಕೋಮಲವಾಗಿದ್ದಾಳೆ ನಿಜ. ಅದು ಅವಳ ದೈಹಿಕ ಸ್ಥಿತಿ. ಆದರೆ ಮಾನಸಿಕವಾಗಿಯೂ ಅವಳು ಹಾಗೇ ಇರಬೇಕೆನ್ನುವ ನಿರೀಕ್ಷೆ ಏಕೆ? ಗಂಡಿನೊಳಗಿನ ಹೆಣ್ತನ, ಹೆಣ್ಣಿನೊಳಗಿನ ಗಂಡ್ತನದ ಬಗೆಗಿನ ಚರ್ಚೆ ಇಂದು ನಿನ್ನೆಯದಲ್ಲ. ನಮ್ಮ ಅರ್ಧನಾರೀಶ್ವರ ತತ್ವವೂ ಇದನ್ನೇ ಹೇಳುತ್ತದೆ. ಹೆಣ್ಣಿಗೆ ಸಿಗುವ ಸಂಸ್ಕಾರದಲ್ಲೂ ದೋಷವಿದೆ. ಗಂಡಿನ ತಪ್ಪುಗಳಿಗೆ ಸಮರ್ಥನೆಗಳು ಸಿಗುವಷ್ಟು ಸುಲಭವಾಗಿ ಹೆಣ್ಣಿನ ಸಣ್ಣಪಣ್ಣ ತಪ್ಪುಗಳಿಗೆ ಸಮರ್ಥನೆಗಳಿರಲಿ ಒಂದು ಸಣ್ಣ ಸಮಝಾಯಿಷಿಯೂ ಸಿಗಲಾರದು. ಮಾಡಿದ ಒಂದೇ ಒಂದು ತಪ್ಪಿಗೂ ಕೆಲವೊಮ್ಮೆ ನೇಣೇ ಸಿಕ್ಕಿಬಿಡುತ್ತದೆ.

ಅದು ನಾ ನೋಡಿಲ್ಲದ ಪ್ರಪಂಚವಾಗಿತ್ತು. ಅವು ನಾನು ಹತ್ತಿರದಿಂದಲೂ ನೋಡಿರದ ದಾರುಣ ಘಟನೆಗಳಾಗಿದ್ದವು. ಪ್ರತಿ ಕತೆಯನ್ನು ಓದುವಾಗಲೂ ಉರಿಉರಿ ಕೆಂಡವನ್ನು ಅಷ್ಟೇ ಹಸಿಹಸಿಯಾಗಿ ಕೈಯಲ್ಲಿ ಹಿಡಿದಂತಾ ಅನುಭವವಾಗುತ್ತಿತ್ತು. ನಾನಾದರೂ ಹಿಂದು ಸಂಸ್ಕೃತಿಯಲ್ಲಿ ಹುಟ್ಟಿಬೆಳೆದವಳಾಗಿ ಮುಸ್ಲಿಮ್ ಆಚರಣೆಗಳನ್ನು ಗ್ರಹಿಸುವಾಗ ದೇವರು ಧರ್ಮಗಳು ಹೆಣ್ಣಿನ ಶೋಷಣೆಯಲ್ಲಿ ಒಂದೇ ತೆರನಾಗಿ ಬಳಕೆಯಾಗುತ್ತಿದೆ ಅನಿಸುತ್ತಿತ್ತು.

ಈ ಸಂಕಲನದಲ್ಲಿ ಬಾನು ಮುಷ್ತಾಕರು ನೇರವಾಗಿ ಹೇಳುತ್ತಾರೆ, “ಮಹಿಳೆ ನನ್ನ ಮುಖ್ಯ ಕಾಳಜಿ. ಹೀಗಾಗಿ ನನ್ನ ಎಲ್ಲಾ ಕಥೆಗಳಲ್ಲೂ ಅವಳು ವಿರಾಜಿಸಿದ್ದಾಳೆ” ಎಂದು. ಹಾಗಾಗಿ ಮಹಿಳಾ ಸಂವೇದನೆಯೋ ವೇದನೆಯೋ ಆಗಲೆಂಬ ಆಶಯವಿಲ್ಲಿಲ್ಲ. ಮಹಿಳೆಯಾಗಿ ಮಹಿಳೆಯ ಅಂತಃಕರಣವನ್ನು ನಮಗಿಂತಲೂ ಚನ್ನಾಗಿ ಯಾರಾದರೂ ಹೇಗೆ ಬರೆಯಲು ಸಾಧ್ಯ. ನಮ್ಮ ಜೈವಿಕ ಮತ್ತು ಭಾವನಾತ್ಮಕ ರಚನೆಯೇ ಅಷ್ಟೊಂದು ಸಂಕೀರ್ಣವಾಗಿರುವಾಗ ಅದರ ಬಗ್ಗೆ ನಾವಲ್ಲದೆ ಇನ್ಯಾರು ತಾನೇ ಮಾತಾಡಬೇಕು ಎನ್ನುವ ಹಾಗಿವೆ “ಬೆಂಕಿ ಮಳೆ”ಯ ಎಲ್ಲಾ ಕಥೆಗಳು.

ಈ ಹಿನ್ನಲೆಯಲ್ಲಿ ಇಲ್ಲಿನ ಪ್ರತಿ ಕಥೆಗಳೂ ವಿಶಿಷ್ಟ ಮತ್ತು ಏನೋ ಒಂದನ್ನು ಹೇಳುತ್ತಲೇ ಹೋಗುತ್ತವೆ. “ಕರಿ ನಾಗರಗಳ” ಅಶ್ರಫ್, “ಹೃದಯದ ತೀರ್ಪು” ಕಥೆಯ ಯೂಸುಫ್, “ದೇವರು ಮತ್ತು ಅಪಘಾತ”ದ ಮರಿಯಮ್, “ಹುಟ್ಟು” ಕಥೆಯ ಸೀಮಾ, “ಕೆಂಪು ಪುಂಗಿಯ” ರಝಿಯಾ ಎಲ್ಲರೂ ಬಹಳ ಬಹಳ ಕಾಡುತ್ತಾರೆ.

“ಬೆಂಕಿಮಳೆ” ಎನ್ನುವ ಮೊದಲ ಮತ್ತು ಶೀರ್ಷಿಕೆಯ ಕಥೆಯಲ್ಲಿ ಪ್ರಬಲವಾಗಿ ಕಾಣಿಸಿಕೊಳ್ಳುವ ಗಂಡು ಪಾತ್ರಗಳ ನಡುವೆ ಸಣ್ಣಗೆ ಅಲ್ಲಿಲ್ಲಿ ಇಣುಕುವ ಒಂದೆರಡೇ ಮಾತಾಡುವ ಹೆಣ್ಣು ಪಾತ್ರಗಳಾದರೂ ಮನಸ್ಸಿನಲ್ಲಿ ಅಚ್ಚೊತ್ತಿಬಿಡುತ್ತವೆ. ತಾನು ಗಂಡಸು ಎನ್ನುವ ಅಹಮ್ಮಿನಲ್ಲಿ ಹೆಣ್ಣೆನ್ನುವವಳಿಗೇ ಸ್ವಂತಿಕೆಯಾಗಲೀ ಗಂಡಸರು ಎದುರು ನಿಂತು ಮಾತಾಡುವ ಹಕ್ಕಾಗಲೀ, ಆಸ್ತಿಯಲ್ಲಿ ಪಾಲು ಕೇಳುವಷ್ಟು ಧೈರ್ಯವಾಗಲಿಲ್ಲ, ಇರಲೇ ಕೂಡದೆನ್ನುವಂತೆ ನಡೆದುಕೊಳ್ಳುವ ಮುತವಲ್ಲಿ ಸಾಹೇಬರ ಮುಂದೆ ನಾದಿನಿಯರೊಂದಿಗೆ ಅಂತಃಕರಣದಿಂದ ನಡೆದುಕೊಳ್ಳುವ ಆರೀಫಾ(ಮುತವಲ್ಲಿ ಸಾಹೇಬರ ಹೆಂಡತಿ), ಗಂಡನ ಬಲವಂತಕ್ಕೆ ಆಸ್ತಿ ಕೇಳಲು ಕಟ್ಟುಬಿದ್ದೂ ಅಣ್ಣನ ಬಗ್ಗೆ ಸಣ್ಣದೊಂದು ಭಯ ಮತ್ತು ಪ್ರೀತಿಯನ್ನು ಇಟ್ಟುಕೊಂಡಿರುವ ಜಮೀಲಾ(ಮುತವಲ್ಲಿ ಸಾಹೇಬರ ಕೊನೆ ತಂಗಿ), ಸ್ವಾಭಿಮಾನಿ ಸಕೀನಾ(ಮುತವಲ್ಲಿ ಸಾಹೇಬರ ಮತ್ತೊಬ್ಬ ತಂಗಿ) ಮನಸಿನಲ್ಲುಳಿದುಬಿಡುತ್ತಾರೆ.

ಮನುಷ್ಯನೊಬ್ಬ ಹೊರಗಿನ ಜಗತ್ತಿಗೆ ಗೊತ್ತಿರುವುದಕ್ಕೂ ಒಳಗೆ ಅವನಾಗಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ ಎನ್ನುವುದಕ್ಕೆ ಮುತವಲ್ಲಿ ಸಾಹೇಬರೇ ಒಂದು ಉತ್ತಮ ಉದಾಹರಣೆ. ಸಂಬಂಧಗಳ ಬಗ್ಗೆಯಾಗಲೀ ಬಾಂಧವ್ಯದ ಬಗ್ಗೆಯಾಗಲೀ ಕೊನೆ ಪಕ್ಷ ತನಗೆ ಹುಟ್ಟಿದ ಮಕ್ಕಳ ಬಗ್ಗೆಯಾಗಲೀ ಕಿಂಚಿತ್ ಕಾಳಜಿ ಇರದ ಡೋಂಗಿ ಮನುಷ್ಯನೊಬ್ಬ ಸಮಾಜ ಸೇವಕನಂತೆ ಬಿಂಬಿಸಲ್ಪಟ್ಟುಕೊಳ್ಳುವುದು ತೀರಾ ಹಾಸ್ಯಾಸ್ಪದ. ಒಂದು ಹಂತದಲ್ಲಿ ಆ ಮನುಷ್ಯನ ಬಗ್ಗೆ ಜಿಗುಪ್ಸೆ ಹುಟ್ಟಿಬಿಡುತ್ತದೆ.

ಬಾನು ಮುಷ್ತಾಕರು ಅದೆಷ್ಟು ಚಂದ ಕತೆಯನ್ನು ನಿರೂಪಿಸುತ್ತಾ ಹೋಗುತ್ತಾರೆಂದರೆ, ಹೇಳುವ ಪ್ರತಿ ಘಟನೆಗಳೂ ಕಣ್ಣೆದುರೇ ನಡೆದು ಹೋಗಿಬಿಡುತ್ತವೆ. ಹೆಣ್ಣು ಅವರ ಕಾಳಜಿ ಆಗಿದ್ದರೂ ಎಲ್ಲೂ ಹೆಣ್ಣು ಪಾತ್ರಗಳ ಅನವಶ್ಯಕ ವಿಜೃಂಭಣೆಯಿಲ್ಲ. ಅವೆಲ್ಲ ತಮ್ಮ ಕರ್ತವ್ಯವೆನಿಸುವಷ್ಟೇ ಕಾಣಿಸಿಕೊಂಡು ಮಾಯವಾಗುವ ಸೂಕ್ಷ್ಮ ಪಾತ್ರಗಳು. ಹಾಗಾಗಿಯೇ ಬಹಳ ಸುಲಭವಾಗಿ ಮನೋಗತವಾಗಿಬಿಡುತ್ತವೆ.

“ಕರಿ ನಾಗರಗಳು” ಕಥೆಯ ಜುಲೇಖಾ ಬೇಗಂ ಳ ಮಾತೊಂದು ಅದೆಷ್ಟೋ ಹೆಣ್ಣು ಮಕ್ಕಳ ಮುಗ್ಧತೆಯ ಪೊರೆಹರಿಯುವಂತಿದೆ.

“ಹೆಣ್ಣು ಮಕ್ಕಳ ಮೇಲೆ ಬರೀ ಕಟ್ಟಳೆ ಮಾಡೋಕೆ ಬರುವ ವಿದ್ವಾಂಸರು ಅವರಿಗೆ ಇರೋ ಅವಕಾಶಗಳನ್ನು ಯಾಕೆ ಎತ್ತಿ ಹೇಳಲ್ಲ? ಇಡೀ ಪ್ರಪಂಚಾನೇ ಹೆಣ್ಮಕ್ಕಳ ಬಗ್ಗೆ ಏನಾದ್ರು ಒಂದ್ ಒಳ್ಳೇದು ಮಾಡ್ಬೇಕೂಂತ ಹೇಳೋ ಮಟ್ಟಿಗಾದ್ರೂ ಬಂದಿದೆ. ಇವು ಕುರಾನನ್ನು ಹದೀಸನ್ನು ಗುತ್ತಿಗೆಗೆ ತಗೊಂಡಿರೋರು.. ಅದರ ಆದೇಶ ಪ್ರಕಾರಾನೇ ನಡ್ಕೊಳ್ಲಿ ಸಾಕು.. ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸ್ಲಿ… ಬರೀ ಮದ್ರಸದ ವಿದ್ಯೆ ಮಾತ್ರವಲ್ಲ… ಸ್ಕೂಲು ಕಾಲೇಜಿನದು ಕೂಡ. ಗಂಡನ ಆಯ್ಕೆಯ ಹಕ್ಕು ಅವಳದ್ದು.. ಅದೂ ಕೊಡ್ಲಿ. ಈ ಷಂಡರೆಲ್ಲಾ ವರದಕ್ಷಿಣೆಯ ಎಂಜಲನ್ನು ನೆಕ್ಕದೆ ಮದ್ವೆಯಾಗ್ಲಿ… ತವರಿನವರು ಅವಳ ಹಕ್ಕಿನ ಆಸ್ತಿಯನ್ನು ಅವಳಿಗೆ ಕೊಡ್ಲಿ… ಗಂಡ ಹೆಂಡಿರಲ್ಲಿ ಸರಿ ಹೋಗದಿದ್ದಲ್ಲಿ ವಿಚ್ಛೇದನ ಕೊಡುವ ಅವಳ ಹಕ್ಕನ್ನು ಮಾನ್ಯ ಮಾಡಲಿ, ಅವಳು ವಿಚ್ಛೇದಿತಳಾದರೆ ಅವಳಿಗೆ ಬದುಕು ಕೊಡಲು ಇನ್ನೊಬ್ಬ ಮುಂದೆ ಬರುವಂತಾಗಲಿ. ವಿಧವೆಯಾದಲ್ಲಿ ಅವಳಿಗೆ ಬಾಳು ಕೊಡುವ ಸಂಗಾತಿ ಸಿಗುವಂತಾಗಲಿ..”

ಎನ್ನುವ ಈ ಮಾತು ಎಲ್ಲ ಮುಗ್ಧ ಹೆಣ್ಣುಮಕ್ಕಳ ಬದುಕಿಗೆ ಬೆಳಕನ್ನು ತುಂಬುವ ಆಶಯದಂತೆ ಪ್ರತಿಧ್ವನಿಸುತ್ತದೆ. ಇಂತಹ ಅದೆಷ್ಟೋ ಮಾತುಗಳು ಇಲ್ಲಿನ ಎಲ್ಲಾ ಕಥೆಗಳುದ್ದಕ್ಕೂ ಹರಡಿಕೊಂಡಿವೆ. ಇಲ್ಲಿ ಬರುವ ಪ್ರತಿ ಹೆಣ್ಣು ಪಾತ್ರಗಳೂ ನಮ್ಮೊಳಗಿನ ಆತ್ಮದ ಪ್ರತಿರೂಪದಂತಿವೆ.