ಒಮ್ಮೆ ದೊಡ್ಡಮ್ಮನಿಗೆ ಅಪರಾತ್ರಿಯಲ್ಲಿ ಎಚ್ಚರ ತಪ್ಪಿಬಿಟ್ಟಿತ್ತು. ಮನೆಯಿಡೀ ಗದ್ದಲ… ದೊಡ್ಡಪ್ಪನ ಜೋರು ಅಳು… ಮನೆಮಂದಿಯೂ ಚಡಪಡಿಸುತ್ತಿದ್ದಾರೆ. ಐದಾರು ವರ್ಷದ ನನಗೆ ಏನು ಮಾಡಲೂ ತಿಳಿಯುತ್ತಿಲ್ಲ. ಕಾಲುಗಳು ನಡುಗುತ್ತಿವೆ. ಹೊಟ್ಟೆ ಚುಳ್ ಎನ್ನುತ್ತಿದೆ. ಅಳು ಗಂಟಲಲ್ಲೆ ಸಿಕ್ಕಿ ಹಾಕಿಕೊಂಡಂಥ ಅನುಭವ. ವಿಪರೀತ ಭಯದಿಂದ ಒಳಕ್ಕೆ ಹೊರಕ್ಕೆ ಕುಣಿಯುತ್ತಾ ಕೊನೆಗೆ ಗಣಿಗೆಯ ಸಂದಿಯಲ್ಲಿ ಹೋಗಿ ನಿಂತಿದ್ದೆ. ಎಷ್ಟು ಹೊತ್ತು ನಿಂತಿದ್ದೆನೋ.. ಮುಂದೆ ಏನಾಯಿತೋ.. ಒಂದೂ ನೆನಪಿಲ್ಲ. ಅಂದು ಕೆಂಪು ಫ್ರಾಕ್ ತೊಟ್ಟಿದ್ದೆ. ಎಲ್ಲ ಅಸ್ಪಷ್ಟ ನೆನಪುಗಳು.
ಇತ್ತೀಚೆಗೆ ಬಿಡುಗಡೆಯಾದ ಆಶಾ ಜಗದೀಶ್‌ ಅವರ “ಕಾಣೆಯಾದವರು” ಲಲಿತ ಪ್ರಬಂಧಗಳ ಸಂಕಲನದ ಒಂದು ಪ್ರಬಂಧ ನಿಮ್ಮ ಓದಿಗೆ

ಬಾಲ್ಯದಲ್ಲಿ ಅಜ್ಜನ ಊರು ಮತ್ತು ಅಜ್ಜನ ಮನೆ ಎನ್ನುವ ಆ ಜಾಗ ಎಷ್ಟೊಂದು ಆಸ್ಥೆಯ ಆಕರ್ಷಣೆಯ ಜಾಗವಾಗಿತ್ತು… ಅದೆಷ್ಟು ಖುಷಿಯಿಂದ ಅಜ್ಜನ ಮನೆಗೆ ಬರುತ್ತಿದ್ದೆವು… ಅಜ್ಜನ ಮನೆಯ ಮಾಳಿಗೆ, ಪಡಸಾಲೆ, ನೆಲಾಗಾಣೆ, ಅಟ್ಟ, ಗಣಿಗೆ, ಬಾದಾಳ, ಸಗಣಿ ನೆಲ, ಮಣ ಗಾತ್ರದ ಒಂಟಿ ತಲೆ ಬಾಗಿಲು, ಪಡಸಾಲೆಯ ನಾಲ್ಕು ಕಂಬಗಳು, ಅಡುಗೆ ಮನೆಯ ಮಜ್ಜಿಗೆ ಕಡೆಯುವ ಕಂಬ, ದನಾಕ್ಕೆ, ತಿಪ್ಪೆ, ಬಾರುಕೋಲುಗೇವಿನ, ಸಗಣಿ, ಗಂಜಲ…. ಇನ್ನೂ ಅಸಂಖ್ಯ ಯಾವುದನ್ನೂ ಮರೆಯಲು ಸಾಧ್ಯವಾಗದೆ ಇನ್ನು ಮರೆತು ಹೋಗಿಬಿಟ್ಟರೆ?! ಎಂದು ಮನಸ್ಸು ಅತ್ತಿಂದಿತ್ತ ತೊನೆಯುತ್ತಿದ್ದಾಗ ಮತ್ತೆ ಮತ್ತೆ ಅಜ್ಜನೂರನ್ನು ಕಣ್ತುಂಬಿಕೊಳ್ಳಲು ಹೊರಟದ್ದಿದೆ.

ಅಜ್ಜನ ಮನೆಯಲ್ಲಿ ನಾನು ಹುಟ್ಟಿದಾಗ ಮನೆಯಲ್ಲಿ ಮೂರು ಮೂರು ಬಾಣಂತನಗಳಂತೆ. ನನ್ನ ಅತ್ತೆಯ ಮಗ, ದೊಡ್ಡಪ್ಪನ ಮಗ ಮತ್ತು ನಾನು ಒಟ್ಟಿಗೆ ಒಂದೇ ಮನೆಯಲ್ಲಿ ಒಂದೇ ತಿಂಗಳಲ್ಲಿ ಹುಟ್ಟಿದ್ದೆವಂತೆ. ಪಡಸಾಲೆಯ ನಾಲ್ಕು ಕಂಬಗಳನ್ನು ಬಳಸಿ ಮೂರು ಜೋಲಿ ಕಟ್ಟಿದ್ದರಂತೆ. ಪರದೆಗಳನ್ನು ಇಳಿ ಬಿಟ್ಟು ಮೂರು ಬಾಣಂತಿ ಕೋಣೆಗಳನ್ನು ನಿರ್ಮಿಸಿದ್ದರಂತೆ. ಅತ್ತೆಯ ಮಗ ಮತ್ತು ದೊಡ್ಡಪ್ಪನ ಮಗ ಬೆಳ್ಳ ಬೆಳ್ಳಗೆ ಗುಂಡು ಗುಂಡಗೆ ಮುದ್ದು ಮುದ್ದಾಗಿದ್ದರಂತೆ. ಆದರೆ ನಾನು ಕಪ್ಪಗೆ, ತೆಳ್ಳಗೆ ಇಷ್ಟೇ ಇಷ್ಟು ಇದ್ದೆನಂತೆ. ಮನೆಗೆ ಯಾರೇ ಬರಲಿ ಅವರಿಬ್ಬರನ್ನೇ ಹೆಚ್ಚು ಮುದ್ದು ಮಾಡುತ್ತಿದ್ದರಂತೆ. ನನ್ನನ್ನು ಯಾರೂ ಎತ್ತಿಕೊಳ್ಳುತ್ತಿರಲಿಲ್ಲವಂತೆ. ನಾನು ನನ್ನಮ್ಮನಿಗೆ ಮೊದಲ ಮಗು. ಮೇಲಾಗಿ ಅಮ್ಮ ಹದಿನೈದಕ್ಕೆ ಹಸೆ ಏರಿದವರು, ಹದಿನೇಳಕ್ಕೆ ನನ್ನನ್ನು ಹೆತ್ತವರು. ಅವರಿಗೆ ಅದೇನೇನು ಕನಸುಗಳಿತ್ತೋ… ನನ್ನಿಂದಾಗಿ ಅದೆಷ್ಟು ನಿರಾಸೆಯಾಗಿತ್ತೋ ಅವರಿಗೆ… ಯಾರಾದರೂ ಮಗುವನ್ನು ಜರಿದರೆ ಸಾಕು ನನ್ನ ಮಗು ಹೀಗಿದೆಯಲ್ಲ ಎಂದು ಅಳುತ್ತಿದ್ದರಂತೆ. ಈಗಲೂ ಒಮ್ಮೊಮ್ಮೆ ನನಗೆ ಆ ಮನೆಯ ಜಂತೆಗಳು ಬಿಕ್ಕಳಿಸಿದಂತೆ ತೋರುತ್ತದೆ.

ನಾನು ನಾಲ್ಕೂವರೆ ವರ್ಷದವಳಿದ್ದಾಗ ನನ್ನ ತಮ್ಮ ಹುಟ್ಟಿದ. ಅಜ್ಜನ ಮನೆಯಲ್ಲಿಯೇ ಅಮ್ಮನ ಹೆರಿಗೆಯಾದದ್ದು. ಆ ದಿನದ ಅಮ್ಮನ ನೋವು, ರಕ್ತಸ್ರಾವ, ನೆಲದ ಮೇಲೆ ಚೆಲ್ಲಿದ್ದ ರಕ್ತ, ತಮ್ಮ ಹುಟ್ಟಿದ ಸಂಭ್ರಮ ಎಲ್ಲವೂ ಇನ್ನೂ ನೆನಪಿದೆ ನನಗೆ. ಆಗ ಇಡೀ ಊರಿಗೇ ತತ್ತಕ್ಷಣದ ಸೂಲಗಿತ್ತಿ, ದಾದಿ, ಹೆರಿಗೆ ಮಾಡಿಸುವ ವೈದ್ಯೆ ಎಂದರೆ ಅದು ಕುಂಬಾರಜ್ಜಿ ಮಾತ್ರ. ಅವಳ ಹಸ್ತಗುಣದ ಮೇಲೆ ಇಡೀ ಊರಿಗೇ ನಂಬಿಕೆ ಇತ್ತು. ಮೇಲಾಗಿ ಯಾವ ದಿಕ್ಕಿನಿಂದ ಹೊರಟರು ಮುಖ್ಯ ರಸ್ತೆ ಸೇರಿಕೊಳ್ಳಲು ಎರೆಡು ಮೂರು ಕಿಲೋಮೀಟರ್ ನಡೆಯಬೇಕಿದ್ದ ಆ ಕುಗ್ರಾಮದ ಜನರಿಗೆ ಹೀಗೆ ಆಕೆಯನ್ನು ಅವಲಂಬಿಸದೆ ವಿಧಿಯೂ ಇರಲಿಲ್ಲ. ಅಂದೂ ಸಹ ಕುಂಬಾರಜ್ಜಿ ಬಂದು ಅಮ್ಮನ ನೋವಿನಲ್ಲಿ ಭಾಗಿಯಾಗಿದ್ದಳು. ಪಡಸಾಲೆಗೆ ಪಡಾಸಾಲೆಯೇ ನೋವಿನಿಂದ ಅನುರಣಿಸುತ್ತಿತ್ತು. ರಕ್ತಸ್ರಾವದ ನಡುವೆಯೇ ಅಮ್ಮನ ಉಪಚಾರ ಮಾಡುತ್ತಾ ಸಮಾಧಾನಿಸುತ್ತಾ ಮಗು ಹೊರಬರುವ ದಾರಿಯನ್ನು ಸಲೀಸುಗೊಳಿಸಲು ಕುಂಬಾರಜ್ಜಿ ತೊಡಗಿದ್ದಳು. ಆದರೆ ಯಾರ ನೋವನ್ನು ಯಾರೂ ಕಡ ಪಡೆಯಲು ಸಾಧ್ಯವಿಲ್ಲವಲ್ಲ. ಇದೆಲ್ಲವನ್ನೂ ಅಚ್ಚರಿಯಿಂದ ನೋಡುತ್ತಿದ್ದ ನನಗೆ ಅಮ್ಮನ ಅಳುವನ್ನು ಮಾತ್ರ ಸಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಮತ್ತೆ ಸರಹೊತ್ತಿನ ನಿದ್ದೆ ತಡೆಯಲಾಗದೆ ಮಲಗಿಬಿಟ್ಟಿದ್ದೆ. ಅಂತೂ ಇಂತೂ ರಾತ್ರಿ ಪೂರಾ ತ್ರಾಸು ಕೊಟ್ಟು ಬೆಳಗಿನ ಏಳರ ಹೊತ್ತಿಗೆ ಮಗು ಭೂಮಿಗೆ ಬಿದ್ದಿತ್ತು. ಆ ಮುದ್ದು ಮಗು ನನ್ನ ತಮ್ಮನಾಗಿದ್ದ.

ಒಮ್ಮೆ ದೊಡ್ಡಮ್ಮನಿಗೆ ಅಪರಾತ್ರಿಯಲ್ಲಿ ಎಚ್ಚರ ತಪ್ಪಿಬಿಟ್ಟಿತ್ತು. ಮನೆಯಿಡೀ ಗದ್ದಲ… ದೊಡ್ಡಪ್ಪನ ಜೋರು ಅಳು… ಮನೆಮಂದಿಯೂ ಚಡಪಡಿಸುತ್ತಿದ್ದಾರೆ. ಐದಾರು ವರ್ಷದ ನನಗೆ ಏನು ಮಾಡಲೂ ತಿಳಿಯುತ್ತಿಲ್ಲ. ಕಾಲುಗಳು ನಡುಗುತ್ತಿವೆ. ಹೊಟ್ಟೆ ಚುಳ್ ಎನ್ನುತ್ತಿದೆ. ಅಳು ಗಂಟಲಲ್ಲೆ ಸಿಕ್ಕಿ ಹಾಕಿಕೊಂಡಂಥ ಅನುಭವ. ವಿಪರೀತ ಭಯದಿಂದ ಒಳಕ್ಕೆ ಹೊರಕ್ಕೆ ಕುಣಿಯುತ್ತಾ ಕೊನೆಗೆ ಗಣಿಗೆಯ ಸಂದಿಯಲ್ಲಿ ಹೋಗಿ ನಿಂತಿದ್ದೆ. ಎಷ್ಟು ಹೊತ್ತು ನಿಂತಿದ್ದೆನೋ.. ಮುಂದೆ ಏನಾಯಿತೋ.. ಒಂದೂ ನೆನಪಿಲ್ಲ. ಅಂದು ಕೆಂಪು ಫ್ರಾಕ್ ತೊಟ್ಟಿದ್ದೆ. ಎಲ್ಲ ಅಸ್ಪಷ್ಟ ನೆನಪುಗಳು. ಈಗ ಕೇಳಿದರೆ ನಿಜವೋ ಸುಳ್ಳೋ ಎನ್ನುವ ಗೊಂದಲವೇ ಹೆಚ್ಚು ಕಾಡುತ್ತದೆಯೇನೋ ಮತ್ತು ನಿಜವೆಂದು ಹೇಳಲಾರೆನೇನೋ…

ಅಜ್ಜನ ಮನೆ ಅರಮನೆಯಂತದ್ದಲ್ಲದಿದ್ದರೂ ತೀರಾ ಚಿಕ್ಕದ್ದೇನೂ ಆಗಿರಲಿಲ್ಲ. ತಾನು ಮದುವೆಯಾಗಿ ಬೇರೆ ಸಂಸಾರವಂತ ಹೂಡಿಕೊಂಡು ಬಂದಾಗ ಅಜ್ಜಯ್ಯನಲ್ಲಿ ಸ್ವಂತ ಮನೆಯಾಗಲೀ ಎತ್ತಾಗಲೀ ಬಿತ್ತಿ ಬೆಳೆಯುವ ಅಂಗೈ ಅಗಲ ಭೂಮಿಯಾಗಲೀ ಇರಲಿಲ್ಲವಂತೆ. ಆದರೆ ಕಷ್ಟದಾರಿ ಅಜ್ಜಯ್ಯ ತನ್ನ ಸ್ವಂತ ಸಾಮರ್ಥ್ಯದಿಂದ ಮನೆ, ಜೋಡೆತ್ತು, ಹಸು, ದನ, ಕರ, ಮೂವತ್ತೆರೆಡು ಎಕರೆ ಹೊಲ ಅಂತ ಸಂಪಾದಿಸಿಕೊಂಡಿದ್ದ ಮತ್ತು ಅನುವು ಆಪತ್ತಿಗಿರಲೆಂದು ಒಂದಷ್ಟು ಹಣವನ್ನೂ ಕೂಡಿಟ್ಟುಕೊಂಡಿದ್ದನಂತೆ. ಅದನ್ನೇ ಅವನು ಸತ್ತಾಗ ಮೊಮ್ಮೊಕ್ಕಳ ಮದುವೆಗೆಂದು ವಿನಿಯೋಗಿಸಿದ್ದರು ಅಪ್ಪ, ದೊಡ್ಡಪ್ಪ.

ಪೂರ್ವದಿಕ್ಕಿನ ಅಜ್ಜಯ್ಯನ ಆ ಮನೆಯೂ ಅಜ್ಜಯ್ಯನಂತೆಯೇ ಬೆಳಗ್ಗೆ ಐದರ ನಂತರ ಯಾರನ್ನೂ ಮಲಗಲು ಬಿಡುತ್ತಿರಲಿಲ್ಲ. ಬೆಳ್ಳಂಬೆಳಗಿನ ಎಲ್ಲ ಪ್ರಖರ ಪ್ರಭೆಯೂ ಮನೆ ಹೊಕ್ಕುತ್ತಿತ್ತು. ಅಜ್ಜನಿಗಂತೂ ನಾಲ್ಕರ ನಂತರ ಮಲಗಿ ಅಭ್ಯಾಸವೇ ಇರಲಿಲ್ಲ. ಮತ್ತೆ ಮನೆ ಮಂದಿಯೂ ಸಹ ಐದರ ನಂತರ ಮಲಗುವಂತಿರಲಿಲ್ಲ. ರಜೆಗೆ ಹೋದಾಗ ಹೊತ್ತು ಆರಾದರೂ ಕುಂಬಕರ್ಣರಂತೆ ಮಲಗಿರುತ್ತಿದ್ದ ನಮ್ಮನ್ನು ಬೈದು ಎಬ್ಬಿಸುತ್ತಿದ್ದ ಅಜ್ಜನ ಆಜ್ಞೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಬೇರೆ ಚಿಕ್ಕಪ್ಪ ದೊಡ್ಡಪ್ಪಂದಿರ ಮನೆಗಳನ್ನು ಹುಡುಕಿ ಹೋಗುತ್ತಿದ್ದದ್ದು ಇನ್ನು ಚೆನ್ನಾಗಿ ನೆನಪಿದೆ. ಆಗಲೂ ಕಳ್ಳಬೀಳುತ್ತಿದ್ದೇವೆಂದು ಅಜ್ಜ ಬೈಯ್ಯುತ್ತಿದ್ದರು ಅದು ಬೇರೆ ಮಾತು.

ಚಿಕ್ಕವಳಿದ್ದಾಗ ನನಗೆ ಎಷ್ಟೋ ಬಾರಿ ಅಜ್ಜನ ಮನೆಯ ಪಡಸಾಲೆಯ ಕಂಬಗಳನ್ನು ನೋಡುತ್ತಾ ಇದರ ಮೇಲಿರುವ ಬೆವರಿನಂಟು, ಎಣ್ಣೆಯ ಕಮಟು, ಎಂಥದೋ ಜಿಡ್ಡು ಯಾರ್ಯಾರದಿರಬಹುದು… ವಾಸನೆಯಿಂದೇನಾದರೂ ಅವರ ಗುರುತು ಹತ್ತುತ್ತದಾ? ಯಾರ ಸ್ಪರ್ಷದ ವಾಸನೆ ಇಲ್ಲಿದೆ…. ಎಂದೆಲ್ಲ ಅನಿಸಿ ಹೊಟ್ಟೆ ಚುಳ್ ಎನ್ನುತ್ತಿತ್ತು. ನನ್ನಜ್ಜ ಅವುಗಳಲ್ಲೆ ಒಂದು ಕಂಬಕ್ಕೆ ತನ್ನ ಜಂಪರ್ ನೇತು ಹಾಕುತ್ತಿದ್ದರು. ಅದೇ ಕಂಬದ ಮೇಲ್ಭಾಗದಲ್ಲಿ ರೇಡಿಯೋ ಪೆಟ್ಟಿಗೆಯೊಂದನ್ನು ಇಡಲಾಗಿತ್ತು. ಬೆಳ್ಳಂ ಬೆಳಗ್ಗೆ ಅದು ಹೊರಡಿಸುತ್ತಿದ್ದ “ಟ್ಯೂ ಟ್ಯುಡುಡುಡೂ.. ಟ್ಯುಡುಡುಡೂ… ಟ್ಯುಡೂ…” ಎಂಬ ನಾದವೇ ನಮಗೆಲ್ಲ ಬೆಳಗಿನ ಸುಪ್ರಭಾತ. ಅಡುಗೆ ಮನೆಯ ಪುಟ್ಟ ಕಂಬಕ್ಕೆ ಹಗ್ಗ ಕಟ್ಟಿ ಅಜ್ಜಿ ಮಜ್ಜಿಗೆ ಕಡೆಯುತ್ತಿದ್ದರು. ಹೊರಗಿನ ಹಾಲಿನಲ್ಲಿದ್ದ ಕತ್ರಿ ಗೂಟ ಎನ್ನುವ ಕಂಬದಲ್ಲಿ ಜಾನುವಾರುಗಳಿಗಾಗಿ ಜೋಳದ ಸೊಪ್ಪೆ ಕತ್ತರಿಸಲಾಗುತ್ತಿತ್ತು.

ಪಡಸಾಲೆಯ ಕಂಬಗಳನ್ನು ಬಳಸಿ ನಾವೆಲ್ಲ ಮನೆ ಮಕ್ಕಳು ಉಪ್ಪಿನಾಟ ಆಡಲು ಪ್ರಯತ್ನಿಸುತ್ತಿದ್ದೆವು. ಅಜ್ಜನ ಮನೆಯ ಕಂಬಗಳ ಮೇಲ್ಭಾಗದಲ್ಲಿ ನವಿಲಿನ ಚಿತ್ರಗಳಿದ್ದವು. ನವಿಲು ಹೆಣ್ಣೊಬ್ಬಳ ಅಂತರಂಗದ ಪ್ರತಿರೂಪವಾಗಿ ಕಾಣುತ್ತಲೇ ಅವಳ ಸ್ವಚ್ಛಂದತೆಯ ಸಂಕೇತವೂ ಆಗುತ್ತದೆ. ಅದೇ ವೇಳೆಗೆ ಮಿಥ್ಯಾಕರ್ಷಣೆಯ ಕೇಂದ್ರವೂ ಆಗಿಬಿಡುವುದೂ ದುರಂತವೇ. ಆದರೆ ಅಜ್ಜ ಮನೆಯೊಳಗೆ ಉಪ್ಪಿನಾಟ ಆಡಲು ಬಿಡುತ್ತಿರಲಿಲ್ಲ. ಮನೆಯೊಳಗೆ ಉಪ್ಪಿನಾಟ ಆಡಿದರೆ ಸಾಲ ಹೆಚ್ಚಾಗುತ್ತದೆ ಎನ್ನುತ್ತಿದ್ದರು ಅಜ್ಜ. ಹಾಗಾಗಿ ಮನೆಯ ಪಕ್ಕದಲ್ಲಿ ಮನೆಗೆ ಆತುಕೊಂಡಂತೆ ಇದ್ದ ಬಸವಣ್ಣನ ಗುಡಿಯಲ್ಲಿ ನಾವೆಲ್ಲ ಉಪ್ಪಿನಾಟ ಆಡುತ್ತಿದ್ದೆವು.

ಉಪ್ಪಿನಾಟ ಎಂದರೆ ಆಟವಾಡಲು ಎಷ್ಟು ಜನ ಆಟಗಾರರಿತ್ತೇವೋ ಅಷ್ಟು ಜನ ಒಂದೊಂದು ಕಂಬ ಹಿಡಿದಿಟ್ಟುಕೊಳ್ಳಬೇಕು. ಒಬ್ಬರು “ಉಪ್ಪಮ್ಮೊ ಉಪ್ಪು…..” ಎಂದು ರಾಗವಾಗಿ ಹಾಡುತ್ತಾ ಉಪ್ಪು ಮಾರುತ್ತಾ ಬರಬೇಕು. ರಾಗವಾಗಿ ಹಾಡಬೇಕೆನ್ನುವ ನಿಯಮವೇನೂ ಇಲ್ಲ. ಆದರೆ ಆಡುತ್ತಿದ್ದವರೆಲ್ಲರೂ ಹುಡುಗಿಯರೇ ಹೆಚ್ಚಾಗಿರುತ್ತಿದ್ದರಿಂದ ಅದು ಹಾಡಿನ ಒನಪು ವಯ್ಯಾರವನ್ನು ಪಡೆದುಕೊಳ್ಳುತ್ತಿದ್ದಿರಬೇಕು. ಉಪ್ಪಿನವಳು ಮುಂದೆ ಹೋದ ತಕ್ಷಣ ಕಂಬ ಹಿಡಿದುಕೊಂಡಿದ್ದ ಆಟಗಾರ್ತಿಯರು ಉಪ್ಪಿನವಳ ಹಿಂದೆ ಅದಲು ಬದಲಾಗಬೇಕು. ಹೀಗೆ ಅದಲು ಬದಲಾಗುವಾಗ ಅಚಾನಕ್ ಉಪ್ಪಿನವಳು ಕಂಬವನ್ನು ಆಕ್ರಮಿಸಿಕೊಂಡುಬಿಟ್ಟರೆ ಕಂಬವನ್ನು ಕಳೆದುಕೊಂಡವಳು ಔಟ್ ಎಂದು ಅರ್ಥ. ಈಗ ಅವಳು ಉಪ್ಪು ಮಾರುತ್ತಾ ಹೊರಡಬೇಕು. ಹೀಗೆ ಆಟ ಮುಂದುವರಿಯುತ್ತದೆ.

ಬಸವಣ್ಣನ ಗುಡಿಯಲ್ಲಿ ನಾವೆಲ್ಲ ಸಮಯದ ಪರಿವೆಯಿಲ್ಲದೇ ಉಪ್ಪಾಟ ಆಡಿದ್ದಿದೆ. ಆದರೀಗ ಆ ಮರದ ಕಂಬಗಳು ಮತ್ತು ಮಣ್ಣಿನಿಂದ ನಿರ್ಮಿಸಿದ್ದ ಗುಡಿಯನ್ನು ಕೆಡವಿ ಹೊಸ ಕಾಂಕ್ರೀಟ್ ಕಟ್ಟಡವನ್ನು ಕಟ್ಟಲಾಗಿದೆ. ಕಂಬಗಳೆಲ್ಲ ಎಲ್ಲೋ ಮಾಯವಾಗಿವೆ. ಅಸಲಿಗೆ ಅದೊಂದು ಗುಡಿ ಅಂತಲೇ ಅನಿಸುತ್ತಿಲ್ಲ. ಹಿಂದೆಲ್ಲಾ ಗುಡಿಯಲ್ಲಿ ಸಣ್ಣ ಗೌರಿ ಮತ್ತು ದೊಡ್ಡ ಗೌರಿ ಹಬ್ಬಕ್ಕೆ ಗೌರಿ ಮಣ್ಣನ್ನು ತಂದು ಹಾಕಲಾಗುತ್ತಿತ್ತು. ಗುಡಿಯ ಪಕ್ಕದಲ್ಲಿದ್ದ ಬಡ್ಡೆ ಕಲ್ಲೂ ಸಹ ಗೌರಿ ಮಣ್ಣಿನೊಟ್ಟಿಗೆ ಕಾಡು ಹೂಗಳ ಪೂಜೆ ಪಡೆಯುತ್ತಿದ್ದ. ಆದರೀಗ ಗುಡಿಯೇ ಅನ್ನಿಸದ ನೆನಪುಗಳ ಸಮಾಧಿ ದಿಬ್ಬದ ಮೇಲೆ ಗೌರಿಯ ಗದ್ದುಗೆಯನ್ನು ಮಾಡಿ ಕೂರಿಸುತ್ತಾರೆ ಹೇಗೆ… ಅವಳನ್ನು ದೇವತೆ ಎಂದು ಕಲ್ಪಿಸಿಕೊಳ್ಳುತ್ತಾರೆ ಹೇಗೆ… ಎಂದು ಕಳವಳವಾಗುತ್ತದೆ. ಹಿಂದೆ ಆಚರಿಸಿದ್ದ ಗೌರಿ ಹಬ್ಬಗಳು, ದೀಪ ಹಿಡಿದು ಓಡಾಡಿದ್ದ ಹೆಜ್ಜೆ ಗುರುತುಗಳು, ಜೋಕಾಲಿ ಕಟ್ಟಿ ಜೀಕಿದ ಎಲ್ಲ ನೆನಪುಗಳೂ ಸುಮ್ಮನೇ ಕಾಡುತ್ತವೆ.

ಬಿಳಿ ಪಂಚೆಯ ಕಚ್ಚೆ ಹಾಕಿ, ಮೇಲೊಂದು ತಾನೇ ಹೊಲೆಸಿಕೊಂಡಿರುತಿದ್ದ ದೊಡ್ಡ ಬೊಕ್ಕುಣದ ಜಂಪರ್ ತೊಟ್ಟು ಪೂರ್ಣ ಕತ್ತಲು ಕಳೆದು ಬೆಳ್ಳಗಾಗುವುದರೊಳಗೆ ತನ್ನ ಜೋಡೆತ್ತುಗಳನ್ನು ಬಿಟ್ಟುಕೊಂಡು ಹೊರಟು ಬಿಡುತ್ತಿದ್ದ ನನ್ನಜ್ಜ.

ಯಾರ ನೋವನ್ನು ಯಾರೂ ಕಡ ಪಡೆಯಲು ಸಾಧ್ಯವಿಲ್ಲವಲ್ಲ. ಇದೆಲ್ಲವನ್ನೂ ಅಚ್ಚರಿಯಿಂದ ನೋಡುತ್ತಿದ್ದ ನನಗೆ ಅಮ್ಮನ ಅಳುವನ್ನು ಮಾತ್ರ ಸಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಮತ್ತೆ ಸರಹೊತ್ತಿನ ನಿದ್ದೆ ತಡೆಯಲಾಗದೆ ಮಲಗಿಬಿಟ್ಟಿದ್ದೆ. ಅಂತೂ ಇಂತೂ ರಾತ್ರಿ ಪೂರಾ ತ್ರಾಸು ಕೊಟ್ಟು ಬೆಳಗಿನ ಏಳರ ಹೊತ್ತಿಗೆ ಮಗು ಭೂಮಿಗೆ ಬಿದ್ದಿತ್ತು. ಆ ಮುದ್ದು ಮಗು ನನ್ನ ತಮ್ಮನಾಗಿದ್ದ.

ಅಜ್ಜಯ್ಯನೇ ಹಾಗೆ. ಬಲು ಶಿಸ್ತಿನವನು. ಮನೆಯಲ್ಲಿ ಯಾರೊಬ್ಬರೂ ಅವನ ಮುಂದೆ ಸುಮ್ಮನೆ ಕಾಲಾಯಾಪನೆ ಮಾಡುವುದು ಸಾಧ್ಯವಿರಲಿಲ್ಲ. ಅಸಲಿಗೆ ಅವನಾದರೂ ಎಲ್ಲರಿಗೂ ಮಾದರಿಯಂತಿರುತ್ತಿದ್ದ. ಎಂದೂ ಮೈಮುರಿದು ದುಡಿಯದೆ ಕೂತು ಉಂಡವನಲ್ಲ. ಭಾವುಕತೆಯನ್ನು ಕಳೆದುಕೊಂಡವನಂತೆ ವರ್ತಿಸುತ್ತಿದ್ದ ಅಜ್ಜಯ್ಯ, ಇಂದಿಗೂ ನಮ್ಮ ಮನಸ್ಸಿನಲ್ಲಿ ಹೇಗಿಷ್ಟು ಆಳದ ಬೇರಿನಂತೆ ನಾಟಿಕೊಂಡುಳಿದನೆಂಬುದು ನಿಜಕ್ಕೂ ಅಚ್ಚರಿಯೇ.

ಜಾತಿಯ ವಿಷಯದಲ್ಲಿ ಅಜ್ಜನದೊಂದು ರೀತಿ ಸಂಪ್ರದಾಯದ ಪಾಲನೆ…. ಆದರೆ ಜಾತಿಯನ್ನು ಮುಂದಿಟ್ಟುಕೊಂಡು ಯಾರನ್ನಾದರೂ ಅವಮಾನಿಸಿದ್ದಾಗಲೀ ಅಲಕ್ಷಿಸಿದ್ದಾಗಲೀ ಇರಲಿಲ್ಲ. ಆದರೆ ಒಂದಷ್ಟು ಮಡಿ ಎನ್ನುವಂತಹ ಆಚರಣೆಗಳನ್ನು ತಾನೂ ಮತ್ತು ಮನೆಯವರಿಂದಲೂ ಮಾಡಿಸುತ್ತಿದ್ದ. ಮನೆಯ ಹಜಾರದ ಚಪ್ಪರದಲ್ಲಿ ಸದಾ ಒಂದು ಸಿಲ್ವರ್ ತಟ್ಟೆ, ಲೋಟ ಖಾಯಂ ಇರುತ್ತಿದ್ದವು. ಮತ್ತದನ್ನು ಮನೆ ಮಂದಿ ಯಾರೂ ಮುಟ್ಟುವಂತಿರಲಿಲ್ಲ. ಮಾದರ ಮಲ್ಲಣ್ಣನ ಖಾಸಾ ಸ್ವತ್ತಾಗಿದ್ದವವು… ಆದರೆ ಮಲ್ಲಣ್ಣನ ಪ್ರತಿಯೊಂದು ಕಷ್ಟ ಸುಖದಲ್ಲಿ ಅಜ್ಜನಿರುತ್ತಿದ್ದ… ಯಾವ ಹೊತ್ತಲ್ಲಾದರೂ ಅವನು ಮನೆಗೆ ಬರಬಹುದಿತ್ತು, ಹಸಿದಾಗ ಉಣ್ಣಬಹುದಿತ್ತು, ಕಷ್ಟ ಅಂತ ಹೇಳಿ ಸಹಾಯ ಯಾಚಿಸಬಹುದಿತ್ತು. ಮಲ್ಲಣ್ಣನಿಗೆಂದರೆ ತುತ್ತು ಅನ್ನ ಹೆಚ್ಚೇ…. ಹತ್ತು ಕೊಡುವ ಕಡೆ ಇಪ್ಪತ್ತು ಬೇಕಾದರೂ ಕೊಡುತ್ತಿದ್ದ. ಅಜ್ಜಯ್ಯನ ಶೀಲವಂತಿಕೆಗಿಂತ ಅವನ ಅಂತಃಕರಣ ದೊಡ್ಡದು. ಮನೆಗೆ ಬಂದ ಯಾರೇ ಆಗಿರಲಿ ಯಾವ ಜಾತಿಯವನೇ ಇರಲಿ ಅಜ್ಜಯ್ಯ ಉಣಿಸದೆ ಕಳಿಸುತ್ತಿರಲಿಲ್ಲ. ಹಸಿದವರು ನೇರಾ ಅಜ್ಜಯ್ಯನ ನಂಬಿ ಮನೆಗೆ ಬಂದುಬಿಡಬಹುದಿತ್ತು.

ಚಿಕ್ಕಂದಿನಲ್ಲಿ ನಾ ನೋಡಿದಂತೆ ಅಜ್ಜಯ್ಯನ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯಲಿ ಕೊನೆಯದೊಂದು ಪಂಕ್ತಿಗೆ ಹಳ್ಳಿಯ ಎಲ್ಲ ಇತರೆ ಕೋಮಿನವರು ಬಂದು ಸಂತೃಪ್ತಿಯಿಂದ ಉಂಡು ಹೋಗಲೇಬೇಕಿತ್ತು. ನಾವೇ ಮನೆ ಮಕ್ಕಳು ಅದೆಷ್ಟೋ ಬಾರಿ ಅವರಿಗೆಲ್ಲ ಕೈಯಾರೆ ಬಡಿಸಿರುವುದುಂಟು…. ಅದು ಅಜ್ಜಯ್ಯನ ವ್ರತ…. ಮತ್ತೆ ಅಡುಗೆ ಉಳಿದಿದ್ದರೆ ತಾನೇ ಮನೆಮನೆಗು ಕಳಿಸಿಕೊಡುತ್ತಿದ್ದ. ಇತರೆ ಕೋಮಿನವರಾದರೂ ನಮ್ಮ ಕುಟುಂಬದೊಂದಿಗೆ ಅವರದು ಅವಿನಾಭಾವ ಸಂಬಂಧ. ಹಿಂದಿನಿಂದಲೂ ಅಜ್ಜಯ್ಯನನ್ನು ಅಪ್ಪಯ್ಯನಂತಲೂ, ಅಪ್ಪ ದೊಡ್ಡಪ್ಪ, ಅತ್ತೆದಿರನ್ನು ಅಣ್ಣ ತಮ್ಮ ಅಕ್ಕ ತಂಗಿಯರಂತಲೂ ನಾವೆಲ್ಲ ಮಕ್ಕಳನ್ನು ಅವರ ಮಕ್ಕಳ ಅಕ್ಕ ತಂಗಿ ಅಣ್ಣ ತಮ್ಮಂದಿರಂತೆ ನಡೆದುಕೊಂಡು ಬಂದಿದ್ದರು. ಅಜ್ಜಯ್ಯ ಸತ್ತು ಇಷ್ಟು ವರ್ಷವಾದರೂ ಈಗಲೂ ಕೆಲವರು ಮನೆಗೆ ಬಂದು ನನ್ನ ಅಪ್ಪನನ್ನು ಅಣ್ಣಾ ಅಂತ ಮಾತನಾಡಿಸುವಾಗ ಅಜ್ಜಯ್ಯ ಹಾಕಿಕೊಟ್ಟ ಸಂಪ್ರದಾಯದ ಬುನಾದಿಯ ಆಳ ಮತ್ತು ಗಟ್ಟಿತನದ ಬಗ್ಗೆ ಸೋಜಿಗವೆನಿಸುತ್ತದೆ.

ಅಜ್ಜಯ್ಯ ದಿನದಿಪತ್ನಾಲ್ಕು ತಾಸೂ ಕೃಷಿಯಲ್ಲೇ ಮುಳುಗಿರುವವನೆನಿಸಿದರೂ ಅವನ ಧಾರ್ಮಿಕ ಸ್ವಭಾವದ ಬಗ್ಗೆ ಅಪ್ಪ ಅತ್ತೆಯರಿಂದ ಸಾಕಷ್ಟು ಅರಿತಿದ್ದೆ. ಕೃಷಿಕನಾದರೂ ಅಕ್ಷರಸ್ತನಾಗಿದ್ದ ಅಜ್ಜಯ್ಯ ರಾಮಾಯಣವನ್ನು, ಶನಿ ಮಹಾತ್ಮೆ ಕಥನವನ್ನ ಬಹಳ ಇಷ್ಟ ಪಟ್ಟು ಓದುತ್ತಿದ್ದನಂತೆ. ತನ್ನ ಅಕ್ಷರ ಪ್ರೀತಿಯಿಂದಾಗಿಯೇ ಅಪ್ಪ ದೊಡ್ಡಪ್ಪಂದಿರನ್ನು ಅಕ್ಷರವಂತರನ್ನಾಗಿ ಮಾಡಿ ನೌಕರಿಗೆ ಸೇರುವಂತೆ ಮಾಡಿದ್ದ. ಅಜ್ಜಯ್ಯ ಸತ್ತಾಗ ನಾನು ಮಾಡಿದ ಮೊದಲ ಕೆಲಸವೇ ಅವನ ಖಾಸಗಿ ಪೆಟ್ಟಿಗೆಯನ್ನು ತೆರೆದು ನೋಡಿದ್ದು. ಅಲ್ಲಿಯವರೆಗೂ ಅದನ್ನು ಕಿರುಬೆರಳಿಂದ ಮುಟ್ಟಲೂ ಭಯಪಡುತ್ತಿದ್ದೆ. ಕಾರಣ ಅಜ್ಜಯ್ಯ ಎಂದೂ ಆ ಪೆಟ್ಟಿಗೆಯನ್ನು ಜನರಿರುವಾಗ ತೆರೆಯುತ್ತಿರಲಿಲ್ಲ. ಮತ್ತೆ ಯಾರಿಗೂ ಅದನ್ನು ಮುಟ್ಟಲೂ ಬಿಡುತ್ತಿರಲಿಲ್ಲ. ಯಾರಾದರೂ ಅಪ್ಪಿ ತಪ್ಪಿ ಮುಟ್ಟಲು ಪ್ರಯತ್ನಿಸಿಬಿಟ್ಟರೆ ಗುಡುಗಿಬಿಡುತ್ತಿದ್ದ. ಅದಕ್ಕೆ ಹೆದರಿ ನಾವೆಂದೂ ಅದರ ತಂಟೆಗೆ ಹೋಗುತ್ತಿರಲಿಲ್ಲ. ಬಹಳ ಗುಪ್ತವಾಗಿಟ್ಟುಕೊಂಡಿದ್ದ ಅದನ್ನು ಅವನ ಪ್ರಾಣವೆಂಬಂತೆ….

ಎಷ್ಟೊಂದು ಕುತೂಹಲ ಅದನ್ನು ನೋಡುವಾಗ. ಅದರೊಳಗೆ ಏನೇನೋ ಚಿತ್ರ ವಿಚಿತ್ರ ವಸ್ತುಗಳು, ಯಾವುದೋ ಬೀಗದ ಕೈಗಳು, ಒಂದಷ್ಟು ದೇವರ ಪಟಗಳು, ಶಿಥಿಲಾವಸ್ಥೆಯಲ್ಲಿದ್ದ ಪರ್ಸುಗಳು, ಜೊತೆಗೆ ಶನಿ ಮಹಾತ್ಮೆ, ರಾಮಾಯಣ, ಮಹಾಭಾರತದ ಅತ್ಯಂತ ಪುರಾತನ, ಬಣ್ಣ ಮಾಸಿದ, ಬ್ಯಾಗಡಿ ಕವರಿನ ಬೈಂಡ್ ಹಾಕಲಾಗಿದ್ದ ಪುಸ್ತಕಗಳು. ಧೂಳಿನ ಘಮದೊಟ್ಟಿಗೆ ಅಜ್ಜಯ್ಯನ ಬೆವರಿನ ಗಮಲು ಬೆರತಿದ್ದಿರಬೇಕು. ಎಂಥದೋ ಮಧುರಾನುಭೂತಿ. ನಾನು ಆ ಪುಸ್ತಕಗಳನ್ನು ಮನೆಗೆ ತಂದಿಟ್ಟುಕೊಂಡಿದ್ದೆ. ಅಜ್ಜಯ್ಯನ ಮೇಲಿನ ಪ್ರೀತಿಯಿಂದಾಗಿ. ಈಗಲೂ ಆ ಪುಸ್ತಕಗಳು ಅಜ್ಜಯ್ಯನನ್ನು ನೆನಪಿಸುತ್ತ ನನ್ನ ಬಳಿ ಇವೆ.

ಅಜ್ಜ ಸತ್ತಾಗ ನಾವು ಬಹಳ ದೂರದಿಂದ ಮಣ್ಣಿಗೆ ಬಂದಿದ್ದೆವು. ಊರನ್ನು ಪ್ರವೇಶಿಸಲು ಎಂಥದೋ ಹಿಂಜರಿಕೆ. ಅಜ್ಜನನ್ನು ಆ ಸ್ಥಿತಿಯಲ್ಲಿ ನೋಡುವುದು ನನ್ನಿಂದ ಸಾಧ್ಯವಾ ಎನಿಸಿತ್ತು. ಮನೆ ಹತ್ತಿರವಾದಂತೆ ಮನೆ ಮುಂದಿನ ಹೊಗೆ, ಒಳಗಿನ ಅಳು, ಸುತ್ತುಗಟ್ಟಿದ್ದ ಜನ ನನ್ನನ್ನು ಅಧೀರಳಾಗಿಸಿದ್ದವು. ನಾನೀಗ ಬಾಗಿಲಿಗೆ ಬಂದು ನಿಂತಿದ್ದೆ. ಅಜ್ಜನನ್ನು ಅವನು ಸದಾ ಮಲಗುತ್ತಿದ್ದ ಕಟ್ಟೆಯ ಮೇಲೆ ಇಂಟು ಮಾರ್ಕಿನ ರೀತಿಯಲ್ಲಿ ಕೋಲುಗಳ ಆಧಾರ ಕೊಟ್ಟು ಕೂರಿಸಲಾಗಿತ್ತು. ಹಣೆ ತುಂಬ ಮೂರು ಪಟ್ಟೆ ವಿಭೂತಿ, ಕತ್ತಲ್ಲಿ ದೊಡ್ಡ ಕರಡಿಗೆ, ಅವನ ಇಷ್ಟದ ಬಿಳಿ ಪಂಚೆ ಮತ್ತು ಹೊಚ್ಚ ಹೊಸ ಬಿಳಿ ಜುಬ್ಬ… ಈ ಎಲ್ಲ ಪೋಷಾಕಿನಲ್ಲಿ ಅವ ಈಗಿನ್ನು ಸ್ನಾನ ಮಾಡಿ ಸಂತೆಗೆ ಹೊರಟವನಂತೆ ಕಾಣುತ್ತಿದ್ದ. ಅಜ್ಜ ಯಾವಾಗಲೂ ಸಂತೆಯಿಂದ ಬರುವಾಗ ಮೊಮ್ಮೊಕ್ಕಳಿಗಾಗಿ ಬಿಕ್ಕೆ ಹಣ್ಣು ಮತ್ತು ಬ್ರೆಡ್ಡನ್ನು ಮರೆಯದೆ ತರುತ್ತಿದ್ದ. ಅಜ್ಜ ಊರೊಳಗಿನ ಬೈತಲೆಯಂತಾ ರಸ್ತೆಯಲ್ಲಿ ಇನ್ನೂ ಅಷ್ಟು ದೂರದಲ್ಲಿ ಕಂಡಾಕ್ಷಣವೇ ನಮ್ಮೆಲ್ಲರ ನಾಲಗೆ ಮೇಲಿನ ರುಚಿಮೊಗ್ಗುಗಳು ಎದ್ದು ನಿಲ್ಲುತ್ತಿದ್ದವು. ಅವ ಮನೆ ತಲುಪುವಷ್ಟರಲ್ಲೇ ತಡೆಯಲಾರದಷ್ಟು ಹಸಿದ ಹದ್ದುಗಳಂತಾಗಿರುತ್ತಿದ್ದೆವು. ಆದರೆ ಅಜ್ಜನ ಗತ್ತು ಗಾಂಭೀರ್ಯ ಚೀಲಕ್ಕೆ ಕೈ ಹಾಕುವಷ್ಟು ಸಲುಗೆಯನ್ನು ಮಾಡಿಕೊಡುತ್ತಿರಲಿಲ್ಲ. ಆದರೆ ಅಜ್ಜಿಯ ಕೈಗೆ ಮಕ್ಕಳಿಗೆಲ್ಲ ಕೊಡು ಎಂದು ಹೇಳುತ್ತಿದ್ದ ಮುಚ್ಚಟೆ ಮಾತು ಈಗಲೂ ನೆನಪಿದೆ. ಆದರೀಗ ಹೊಸಬಟ್ಟೆ ತೊಟ್ಟು ಅಲುಗಾಡದೆ ಕುಂತುಬಿಟ್ಟಿದ್ದಾನೆ. ಹೊಲಿದಂತೆ ಅಂಟಿ ಹೋಗಿದ್ದ ತುಟಿ, ಕಂಗಳು, ಬೂದು ಬಣ್ಣಕ್ಕೆ ತಿರುಗುತ್ತಿದ್ದ ತ್ವಚೆ, ಏರಿಳಿಯದ ಮೂಗು, ಮೂಗನ್ನು ಮುಚ್ಚಿದ್ದ ಹತ್ತಿ…. ಇನ್ನು ನನ್ನಜ್ಜ ಮಾತನಾಡಲಾರ, ನಗಲಾರ, ತಮಾಷೆ ಮಾಡಲಾರ, ಮುದ್ದು ಮಾಡಲಾರ, ಬೈಯಲಾರ… ಕಣ್ಣು ತುಂಬಿದ್ದವು. ಅವನ ಅಂತ್ಯಕ್ರಿಯೆಯ ಎಲ್ಲ ವಿಧಿಗಳನ್ನೂ ಮೌನವಾಗಿ ನೋಡಿದ್ದೆ.

ಈಗಲೂ ಅಪ್ಪ ತನ್ನ ಮನೆಯ ನಡುಮನೆಯಲ್ಲಿ ಅಜ್ಜಯ್ಯನ ಕಪ್ಪು ಬಿಳುಪಿನ ಛಾಯಾಚಿತ್ರವೊಂದನ್ನು ತೂಗುಹಾಕಿಕೊಂಡಿದ್ದಾರೆ. ಅದರಲ್ಲವನು ತನ್ನ ಎಂದಿನ ದೊಡ್ಡ ಬೊಕ್ಕುಣದ ಬಿಳಿ ಅಂಗಿ ತೊಟ್ಟಿದ್ದಾನೆ. ತಲೆಗೆ ಟವೆಲ್ಲನ್ನು ರುಮಾಲಿನಂತೆ ಸುತ್ತಿಕೊಂಡಿದ್ದಾನೆ. ಗಡ್ಡ ಮೀಸೆಗಳಿರದ ಅವನ ಕೆನ್ನೆಗಳ ನಡುವೆ ಕಂಡೂ ಕಾಣದ ಗುಳಿಗಳು ಅಚ್ಚೊತ್ತಿಕೊಂಡಿವೆ. ಅವ ಅಲ್ಲಿ ಸಣ್ಣಗೆ ನಗುತ್ತಿರುವಂತೆ ಕಾಣಿಸುತ್ತಾನೆ. ಅವನ ನಗುವಿನ ತುಂಬ ಮೋಸ ಕಪಟವರಿಯದ ಮುಗ್ಧತೆ, ಸಣ್ಣತನವಿಲ್ಲದ ಹೃದಯ ವೈಶಾಲ್ಯತೆ, ಒಳ್ಳೆಯತನ, ನ್ಯಾಯ ನೀತಿ ಎಂಬ ಅವನ ತತ್ವಗಳು ಮುದ್ರೆಯಂತೆ ಒತ್ತಿಕೊಂಡಿವೆ.

ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ…. ಎನ್ನುವ ಹಾಗೆ ಅಜ್ಜನ ಹಿಂದೆಯೇ ಅಜ್ಜನ ಮನೆಯ ಎಲ್ಲ ಸೊಬಗೂ ಹೋಯಿತೆನಿಸುತ್ತದೆ. ಹಿಂದೆ ಅಜ್ಜ ಇದ್ದಾಗ ನಾವೆಲ್ಲ ದೊಡ್ಡಪ್ಪ ಮತ್ತು ಅವರ ಮಕ್ಕಳು, ಅತ್ತೆ ಮಾವ ಮತ್ತವರ ಮಕ್ಕಳು, ನಾನು ತಮ್ಮ ಅಪ್ಪ ಅಮ್ಮ… ಎಲ್ಲರೂ ಪ್ರತಿ ರಜೆಯಲ್ಲಿಯೂ ಒಟ್ಟಾಗಿ ಸೇರುತ್ತಿದ್ದೆವು. ಆದರೆ ಅಜ್ಜನಾನಂತರ ಎಲ್ಲವೂ ಕಡೆಮೆಯಾಗತೊಡಗಿತು. ಈಗಂತೂ ಎಲ್ಲರೂ ಒಂದೊಂದು ದಿಕ್ಕು. ಯಾರೂ ಯಾರ ಮುಖವನ್ನೂ ನೋಡಲಾಗುತ್ತಿಲ್ಲ. ಒಂದು ನಮೂನಿ ದಿಕ್ಕಾಪಾಲಾಗಿದ್ದೇವೆ. ಬಿಡಿ ಹೂಗಳನ್ನು ಬೆಸೆದಿದ್ದ ದಾರವೇ ಮಾಯವಾದಂತಾಗಿಬಿಟ್ಟಿದೆ.

ಈಗೀಗಲಂತೂ ಊರಿಗೆ ಹೋಗಲು ಮನಸೇ ಬರುವುದಿಲ್ಲ. ಬದಲಾಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಹೈರಾಣಾಗಿರುವ ಮುದುಕನಂತೆ ಕಾಣುವ ಊರು ಕರುಳು ಹಿಂಡುತ್ತದೆ. ಇದು ನನ್ನ ಗುಡಿಯೇ ಅಲ್ಲ ಅನಿಸುವ ಗುಡಿ, ಜೋರು ಮಳೆ ಬಂದರೆ ಬಿದ್ದೇ ಹೋಗುತ್ತದೆನ್ನಿಸುವ ಅಜ್ಜನ ಮನೆ, ನೆಲಕಚ್ಚಿರುವ ಕಣ, ಮರ ಮುಟ್ಟುಗಳಾಗಿರುವ ಮರಗಳು, ಸರಿಯಾಗಿ ಫಲ ನೀಡದ, ಸರಿಯಾದ ಬೇಸಾಯ ಕಾಣದ, ಶುಷ್ಕ ಖುಷ್ಕಿ ಭೂಮಿ, ಕಸಾಯಿಖಾನೆ ಪಾಲಾಗಿರುವ ಎತ್ತು ಹಸುಗಳು, ಬಾಂಧವ್ಯದ ಜೀವಂತಿಕೆ ಕಳೆದುಕೊಂಡು ಅಂಧಾನುಕರಣೆಯನ್ನೇ ಜೀವಿಸುತ್ತಿರುವ ಜನ…. ಎಲ್ಲವೂ ವಿಚಿತ್ರ ವಿಷಣ್ಣತೆಯನ್ನು ಅನುಭವಿಸುವಂತೆ ಮಾಡುತ್ತವೆ.

ಆದರೆ ನೆಮ್ಮದಿ ಎನ್ನುವ ವಸ್ತುವೊಂದು ಅಜ್ಜನ ಬೊಕ್ಕುಣದಲ್ಲಿಯೇ ಉಳಿದು ಹೋಗಿಬಿಟ್ಟಿದೆ.

ಬೇಗ ಹೋಗಿ ತಂದು ಬಿಡಲೇ….?

(ಕೃತಿ: ಕಾಣೆಯಾದವರು (ಲಲಿತ ಪ್ರಬಂಧಗಳ ಸಂಕಲನ)‌, ಲೇಖಕರು: ಆಶಾ ಜಗದೀಶ್, ಪ್ರಕಾಶನ: ಪಲ್ಲವ ಪ್ರಕಾಶನ, ಬೆಲೆ: 110/-)