ನಮ್ಮದೇ ನೀರು ಇದ್ದರೆ ಚೆನ್ನ ಅಂತ ಕಡೆಗೊಮ್ಮೆ ಬೋರ್ ಕೊರೆಸುವ ಮನಸ್ಸು ಮಾಡಿದೆವು. ನೀರಿನ ಸೆಲೆಯನ್ನು ಕಂಡು ಹಿಡಿಯುವುದು ಅತ್ಯಂತ ಕ್ಲಿಷ್ಟವಾದ ಕೆಲಸ. ಮೇಲೆ ನಿಂತುಕೊಂಡು ಭೂಮಿಯಲ್ಲಿ ಇಷ್ಟು ಆಳದಲ್ಲಿ ಇಷ್ಟು ನೀರು ಸಿಗುತ್ತದೆ ಅಂತ ಹೇಳುವುದು ಅಷ್ಟು ಸುಲಭ ಅಲ್ಲ. ಆದರೆ ಹಾಗೆ ಹೇಳುತ್ತೇವೆ ಅಂತ ತೆಂಗಿನಕಾಯಿ ಸರ್ಕಸ್ ಮಾಡಿ ಜನರನ್ನು ಯಾಮಾರಿಸುವ ತುಂಬಾ ಜನರು ಹುಟ್ಟಿಕೊಂಡಿದ್ದಾರೆ. ತೆಂಗಿನಕಾಯಿ ಅಲುಗಾಡಿಸಿ ಒಂದು ಪಾಯಿಂಟ್ ತೋರಿಸಿ ಅಲ್ಲಿ ನೀರು ಬರದಿದ್ದರೆ ಅರ್ಧ ದುಡ್ಡು ವಾಪಸ್ಸು ಅಂತ ಹೇಳುವವರೂ ಇದ್ದಾರೆ. ಹತ್ತಿದರೆ ಅವರಿಗೆ ಲಾಟರಿ. ಇಲ್ಲದಿದ್ದರೆ ಅವರಿಗೆ ಅರ್ಧ ದುಡ್ಡು. ಒಟ್ಟಿನಲ್ಲಿ ಕೊಟ್ಟವನು ಕೊಡಂಗಿಯೇ!
ಗುರುಪ್ರಸಾದ ಕುರ್ತಕೋಟಿ ಬರೆಯುವ ‘ಗ್ರಾಮ ಡ್ರಾಮಾಯಣ’ ಅಂಕಣ

ಗೌಡರಿಂದ ತಪ್ಪಿಸಿಕೊಂಡು ನಾಗಣ್ಣ ಅವರನ್ನು ಹುಡುಕತೊಡಗಿದೆ. ಅವರು ಆಗಲೇ ಹೊಲದ ಇನ್ನೊಂದು ತುದಿಗೆ ಹೋಗಿ ಬೋರ್‌ವೆಲ್ ಬಳಿ ಇದ್ದರು. ಹಾಗೆ ಸುಮ್ಮನೆ ನಿಲ್ಲುವ ಮನುಷ್ಯನೇ ಅಲ್ಲ ಅವರು. ಅಲ್ಲೇ ಇದ್ದ ಕಳೆಯನ್ನು ಕೊಚ್ಚಿ ಕೊಚ್ಚಿ ಎಸೆಯುತ್ತ, ಬೆವರು ಹರಿಸುತ್ತಿದ್ದರು.

“ನಾಗಣ್ಣ, ಹೀಗೆ ಕೆಲಸ ಮಾಡಿದರೆ ಕೆಲವೇ ದಿನಗಳಲ್ಲಿ ನೀವು ಬಳಕುವ ಬಳ್ಳಿ ಆಗುವುದು ಖಂಡಿತ” ಅಂತ ಕಾಲೆಳೆದೆ..

“ಹಹ್ಹಾ ಇಲ್ಲ ಸರ್.. ನನ್ನ ಹೊಟ್ಟೆ ಕರಗಬೇಕು ಅಂದ್ರೆ ಎರಡು ವರ್ಷಾನಾದ್ರೂ ಬೇಕು. ಅಷ್ಟು ಆಸ್ತಿ ಮಾಡಿದೀನಿ” ಅಂತ ತಮ್ಮ ಹೊಟ್ಟೆಯನ್ನು ಹೆಮ್ಮೆಯಿಂದ ಚಪ್ಪಸಿದರು! ಮುಂದುವರಿದು
“ಟ್ರಾಕ್ಟರ್ ಬೇಡಾ ಯಾವ ಆಳೂ ಬೇಡ.. ನಾವೇ ಎಲ್ಲ ಮಾಡೋಣ” ಅಂತ ಉಮೇದಿ ತೋರಿಸಿ ಮತ್ತೆ ಕಳೆಯನ್ನು ಕೊಚ್ಚ ತೊಡಗಿದರು.

“ನಾಗಣ್ಣ, ನಮ್ಮ ಮೈಗೆ ಅಷ್ಟೆಲ್ಲ ಶ್ರಮ ಪಟ್ಟು ರೂಢಿ ಇಲ್ಲ. ತಡೀರಿ ನೋಡೋಣ ಏನೇನು ಮಾಡೋಕಾಗುತ್ತೆ ಅಂತ” ಅವರನ್ನು ಸ್ವಲ್ಪ ನಿಧಾನಿಸುವ ಪ್ರಯತ್ನ ಮಾಡಿದೆ. ಬೋರಿನ ಪಂಪ್ ಶುರು ಮಾಡಿ ಎಷ್ಟೋ ದಿನಗಳಾಗಿದ್ದವು. ಅದು ಉಪಯೋಗಿಸುತ್ತಾ ಇದ್ದರೆ ಸುಸ್ಥಿತಿಯಲ್ಲಿ ಇರುತ್ತದೆ. ಹೀಗಾಗಿ ಅದನ್ನೊಮ್ಮೆ ಶುರು ಮಾಡೋಣ ಅಂತ ಹೋದೆ. ಆದರೆ ಕರೆಂಟ್ ಇರಲಿಲ್ಲ. ನಮ್ಮದೇ ಆದರೂ, ನೀರನ್ನು ಬಳಸಲು ಕೂಡ ಯೋಗ ಬೇಕು…!

*****

ಹಲವು ವರ್ಷಗಳ ಹಿಂದೆ ನನ್ನ ಹೊಲ ಖರೀದಿಸಿದಾಗ ಅಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ. ಭೂಮಿಯ ಒಳಗೆ ಅಂತರ್ಜಲ ಇದ್ದೆ ಇರುತ್ತೆ ಎಂಬ ನಂಬಿಕೆ ಇತ್ತಾದರೂ ಅದೊಂದು ಹುಂಬ ನಿರ್ಧಾರವೇ ಆಗಿತ್ತು. ನೀರಿನ ವ್ಯವಸ್ಥೆ ಇಲ್ಲದೆ ಮಳೆಯನ್ನೇ ಆಶ್ರಯಿಸಿ ಬೆಳೆ ತೆಗೆಯಬಹುದೇ ಎಂಬ ಯಾವುದೇ ವಿಚಾರವೂ ನನಗೆ ಆಗ ತಿಳಿದಿರಲಿಲ್ಲ. ನನಗಿದ್ದ ಒಂದೇ ಆಸೆ ಎಂದರೆ ಸ್ವಂತಕ್ಕೊಂದು ಹೊಲ ತೆಗೆದುಕೊಳ್ಳುವುದು. ಮುಂದೊಮ್ಮೆ ಏನೋ ಮಾಡಿದರಾಯ್ತು ಎಂಬುದಷ್ಟೇ ಆಗ ನನಗಿದ್ದ ವಿಚಾರ.

ಹೊಲವನ್ನು ಕೊಂಡಾದ ಮೇಲೆ ನೀರಿಗೇನು ಮಾಡುವುದು ಅಂತ ನನ್ನ ಸಂಬಂಧಿಯೊಬ್ಬರಿಗೆ ಕೇಳಿದಾಗ, ಬೋರ್ ಹೊಡೆಸು.. ನೀರು ಬಿದ್ದರೆ ನಿನ್ನ ನಸೀಬು ಅಂತ ಹೇಳಿ ನನ್ನ ನಾಲಿಗೆಯಲ್ಲಿದ್ದ ನೀರು ಆರುವಂತೆ ಮಾಡಿದ್ದರು! ಆಗಲೇ ನನಗೆ ನೀರಿನ ವ್ಯವಸ್ಥೆ ಇಲ್ಲದ ಜಮೀನು ತೆಗೆದುಕೊಂಡು ತಪ್ಪು ಮಾಡಿಬಿಟ್ಟೆನೇನೋ ಅಂತ ಅನಿಸಿದ್ದು ಹೌದು. ಮಳೆಯಾಶ್ರಿತ ವ್ಯವಸಾಯ ಮಾಡಬಹುದಾದರೂ ನೀರಿನ ವ್ಯವಸ್ಥೆ ಇದ್ದರೆ ಬೆಳೆಯಲು ಹೆಚ್ಚಿನ ಆಯ್ಕೆಗಳು ಇರುವುದಂತೂ ಹೌದು. ಹೊಸದಾಗಿ ಹೊಲ ಕೊಳ್ಳುವವರು ಬರಿಯ ಕಾಗದ ಪತ್ರಗಳನ್ನು ನೋಡಿದರೆ ಸಾಲದು ಜೊತೆಗೆ ಇವೆಲ್ಲ ಇತರ ಸಂಗತಿಗಳ ಬಗ್ಗೆ ಕೂಡ ಗಮನಹರಿಸಬೇಕು.

೧. ನೀರಿನ ವ್ಯವಸ್ಥೆ ಇದೆಯೇ? ಇದ್ದರೆ ಎಷ್ಟು ಇಂಚು ನೀರು ಬರುತ್ತದೆ?

೨. ಹೊಲಕ್ಕೆ ದಾರಿ ಇದೆಯೇ? ಅದು ಬೇರೆಯವರ ಹೊಲದ ಮೂಲಕ ಹೋಗುವುದಿದ್ದರೆ ಸ್ವಲ್ಪ ಹುಷಾರಾಗಿರಬೇಕು. ಎಷ್ಟೋ ಜನರು ತಮ್ಮ ಹೊಲಕ್ಕೆ ಹೋಗುವುದಕ್ಕೆ ಬೇರೆಯವರನ್ನು ಅವಲಂಬಿಸಿ ಪಡಬಾರದ ಕಷ್ಟ ಪಟ್ಟಿದ್ದಾರೆ. ಆದರೆ ನನ್ನ ವಿಷಯದಲ್ಲಿ ನನಗೆ ಜಮೀನು ಕೊಟ್ಟವರು ತಾವೇ ದಾರಿ ಬಿಡುತ್ತೇವೆ ಅಂತ ಹೇಳಿ ಕೊನೆಗೆ ಕೈ ಎತ್ತಿಬಿಟ್ಟರು.ನಾನು ದಾರಿಯ ಬಗ್ಗೆ ಅಷ್ಟೊಂದು ಲಕ್ಷ್ಯ ವಹಿಸಲಿಲ್ಲ. ಯಾಕೆಂದರೆ ಬೆಂಗಳೂರಿನಲ್ಲಿ ನನ್ನ ಕೆಲಸದಲ್ಲಿ ತಲ್ಲೀನನಾಗಿದ್ದೆ.

೩. ಬೇರೆಯವರನ್ನು ನಂಬಿಕೊಂಡು ಹೊಲ ತೆಗೆದುಕೊಳ್ಳಬಾರದು. ಅವರು ಅಲ್ಲೇ ಹತ್ತಿರದಲ್ಲೇ ಇದ್ದರೂ ಕೂಡ ತಮ್ಮ ಕೆಲಸವನ್ನು ಬಿಟ್ಟು ನಿಮ್ಮ ಹೊಲ ನೋಡಿಕೊಳ್ಳಲು ಅವರಿಗೆ ದೇವರಾಣೆಗೂ ಸಾಧ್ಯ ಆಗದು. ಅಂತಹ ಭ್ರಮೆಯಲ್ಲಿ ಖಂಡಿತ ಇರಬೇಡಿ.

ಬೋರಿನ ಪಂಪ್ ಶುರು ಮಾಡಿ ಎಷ್ಟೋ ದಿನಗಳಾಗಿದ್ದವು. ಅದು ಉಪಯೋಗಿಸುತ್ತಾ ಇದ್ದರೆ ಸುಸ್ಥಿತಿಯಲ್ಲಿ ಇರುತ್ತದೆ. ಹೀಗಾಗಿ ಅದನ್ನೊಮ್ಮೆ ಶುರು ಮಾಡೋಣ ಅಂತ ಹೋದೆ. ಆದರೆ ಕರೆಂಟ್ ಇರಲಿಲ್ಲ. ನಮ್ಮದೇ ಆದರೂ, ನೀರನ್ನು ಬಳಸಲು ಕೂಡ ಯೋಗ ಬೇಕು…!

ನಮ್ಮದೇ ನೀರು ಇದ್ದರೆ ಚೆನ್ನ ಅಂತ ಕಡೆಗೊಮ್ಮೆ ಬೋರ್ ಕೊರೆಸುವ ಮನಸ್ಸು ಮಾಡಿದೆವು. ನೀರಿನ ಸೆಲೆಯನ್ನು ಕಂಡು ಹಿಡಿಯುವುದು ಅತ್ಯಂತ ಕ್ಲಿಷ್ಟವಾದ ಕೆಲಸ. ಮೇಲೆ ನಿಂತುಕೊಂಡು ಭೂಮಿಯಲ್ಲಿ ಇಷ್ಟು ಆಳದಲ್ಲಿ ಇಷ್ಟು ನೀರು ಸಿಗುತ್ತದೆ ಅಂತ ಹೇಳುವುದು ಅಷ್ಟು ಸುಲಭ ಅಲ್ಲ. ಆದರೆ ಹಾಗೆ ಹೇಳುತ್ತೇವೆ ಅಂತ ತೆಂಗಿನಕಾಯಿ ಸರ್ಕಸ್ ಮಾಡಿ ಜನರನ್ನು ಯಾಮಾರಿಸುವ ತುಂಬಾ ಜನರು ಹುಟ್ಟಿಕೊಂಡಿದ್ದಾರೆ. ತೆಂಗಿನಕಾಯಿ ಅಲುಗಾಡಿಸಿ ಒಂದು ಪಾಯಿಂಟ್ ತೋರಿಸಿ ಅಲ್ಲಿ ನೀರು ಬರದಿದ್ದರೆ ಅರ್ಧ ದುಡ್ಡು ವಾಪಸ್ಸು ಅಂತ ಹೇಳುವವರೂ ಇದ್ದಾರೆ. ಹತ್ತಿದರೆ ಅವರಿಗೆ ಲಾಟರಿ. ಇಲ್ಲದಿದ್ದರೆ ಅವರಿಗೆ ಅರ್ಧ ದುಡ್ಡು. ಒಟ್ಟಿನಲ್ಲಿ ಕೊಟ್ಟವನು ಕೊಡಂಗಿಯೇ! ಹಾಗೆಯೇ ನನ್ನ ಸಂಬಂಧಿಯೊಬ್ಬರು ಯಾರೋ ಒಬ್ಬರ ಬಳಿ ಕಾಯಿ ಹಿಡಿಸಿ ನನ್ನ ಹೊಲದಲ್ಲಿ ಒಂದು ಪಾಯಿಂಟ್ ತೋರಿಸಿದ್ದರು. ಅಲ್ಲಿ ಭೂಮಿಯನ್ನು ಬಗೆದರೆ ಒಂದು ಹನಿ ನೀರು ಕೂಡ ಸಿಗಲಿಲ್ಲ. ನನಗೆ ತುಂಬಾ ಬೇಜಾರಾಗಿತ್ತು. ನೀರು ಇಲ್ಲದೆ ಎಂತ ಮಾಡುವುದು ಅಂತ ತಲೆಯ ಮೇಲೆ ಕೈ ಹೊತ್ತು ಕೂತಿದ್ದೆ. ಇನ್ನೊಂದು ಕಡೆ ಹೊಡೆದು ನೋಡಿ ಅಂತ ಒಬ್ಬರು ಸಲಹೆ ಕೊಟ್ಟರು. ಆಗ ನಾನು ಈ ತೆಂಗಿನಕಾಯಿ ಮನುಷ್ಯರ ಸಹವಾಸಕ್ಕೆ ಹೋಗಲಿಲ್ಲ. ನನ್ನ ಹೊಲದಲ್ಲಿ ಎರಡು ಕಡೆ ಗೆದ್ದಲಿನ ಹುತ್ತಗಳು ಇದ್ದವು. ಬೋರಿನ ಗಾಡಿಯ ಜೊತೆಗೆ ಬಂದ ಒಬ್ಬರು ಗೆದ್ದಲು ಹುತ್ತ ಕಟ್ಟಿದಲ್ಲಿ ಬೋರ್ ಹೊಡೆದರೆ ನೀರಿನ ಸೆಲೆ ಖಂಡಿತ ಇರುತ್ತೆ ಅಂತ ಹೇಳಿದರು. ನಮ್ಮ ಅದೃಷ್ಟ ನೋಡಿಯೇ ಬಿಡುವ ಅಂತ ನನ್ನ ಅಪ್ಪನ ಬಳಿ ಎರಡು ಹುತ್ತಗಳಲ್ಲಿ ಯಾವ ಕಡೆ ಹೊಡೆಯೋಣ ಅಂತ ಕೇಳಿದೆ. ಅಪ್ಪ ಒಂದನ್ನು ಬೆರಳಿಟ್ಟು ತೋರಿಸಿದರು. ಅಲ್ಲಿ ಹೊಡೆಯಲು ಶುರು ಮಾಡಿ ಒಂದೆರಡು ಗಂಟೆಗಳಲ್ಲಿಯೇ ಒಳ್ಳೆಯ ನೀರು ಬಂತು. ನಮಗೆಲ್ಲ ತುಂಬಾ ಖುಷಿಯಾಯ್ತು.

ನೀರು ಹತ್ತಿದೆ ಅಂತ ತಿಳಿದ ಕೂಡಲೇ ಹಳ್ಳಿಯ ಸುಮಾರು ಜೀವಗಳು ಇರುವೆಯ ತರಹ ನನ್ನ ಬಳಿ ಬಂದು ಮುಕುರಿದವು. ಅಲ್ಲಿಯತನಕ, ನೀರು ಇಲ್ಲಂದ್ರ ಏನೂ ಮಾಡಾಕ ಆಗಂಗಿಲ್ಲ ಬಿಡ್ರಿ ಅಂದ ಹುಸ್ಸೇನ್ ಸಾಬ್, ನಿಮ್ಮ ಹೊಲ ನಾನ ಮಾಡ್ತೀನಿ ತೊಗೋರಿ ಬೇಕಾದ್ರ.. ಅಂತ ನನಗೆ ಉಪಕಾರ ಮಾಡುವವನಂತೆ ಬಂದಿದ್ದ. ಬಹು ಮುಖ್ಯವಾಗಿ ಅವನಿಗೆ ಬೇಕಾಗಿದ್ದದ್ದು ನನ್ನ ಬೋರಿನ ನೀರು! ಆಗ ನನಗೂ ಅಲ್ಲಿಗೆ ಬಂದು ಏನು ಮಾಡಲೂ ಸಾಧ್ಯ ಇರಲಿಲ್ಲವಾದ್ದರಿಂದ ಹೊಲವನ್ನು ಅವನಿಗೆ ವಹಿಸಿಕೊಟ್ಟಿದ್ದೆ. ಅವನು ಒಳಗೆ ತನ್ನದೇ ಪಂಪು ಬಿಟ್ಟುಕೊಂಡು ಎಲ್ಲವನ್ನು ವ್ಯವಸ್ಥೆ ಮಾಡಿಕೊಂಡ. ನನ್ನ ಬೋರ್ ಬಿದ್ದಿದ್ದು ಅವನಿಗೇ ತುಂಬಾ ಅನುಕೂಲ ಆಗಿತ್ತು. ಅವನ ಅಂತರ್ಜಲ ಖಾಲಿಯಾಗಿತ್ತು. ಹೀಗಾಗಿ ನನ್ನ ನೀರಿನಿಂದ ಪಕ್ಕದಲ್ಲೇ ಇದ್ದ ತನ್ನ ಹೊಲಕ್ಕೂ ನೀರು ಬಿಟ್ಟುಕೊಳ್ಳುತ್ತಿದ್ದ.

ಕೆಲವು ರೈತರು ನೀರಿನ ದುರುಪಯೋಗ ಎಷ್ಟು ಮಾಡುತ್ತಾರೆಂದರೆ ಕರಳು ಕಿವುಚುತ್ತದೆ. ನೀರಿನ ಮಹತ್ವ ಗೊತ್ತೇ ಇಲ್ಲ ಅವರಿಗೆ. ಪಂಪ್ ಸೆಟ್‌ಗೆ ಒಂದು ಟೈಮರ್ ಹಾಕಿಬಿಡುತ್ತಾರೆ. ಯಾವಾಗ್ಯಾವಾಗ ವಿದ್ಯುತ್ ಇರುತ್ತದೋ ಆಗೆಲ್ಲ ನೀರು ಹರಿಯುತ್ತಿರುತ್ತದೆ. ಗಿಡಗಳಿಗೆ ನೀರಿನ ಅವಶ್ಯಕತೆ ಇರಲಿ ಬಿಡಲಿ ನೀರುಣಿಸಿ ಉಣಿಸಿ ಗಿಡಗಳನ್ನು ಹಾಳು ಮಾಡುತ್ತಾರೆ. ನೀರಿನ ಬಗ್ಗೆ ಅಸಡ್ಡೆ ತೋರುವ ಅಂತಹವರಿಗೆ ನಾನು “ನೀರ”ಕ್ಷರಿಗಳು ಅಂತಲೆ ಕರೆಯೋದು.

ಅವನೂ ಕೂಡ ಅಂಥವನೆ. ಪುಗಸಟ್ಟೆ ಸಿಕ್ಕ ನೀರನ್ನು ಸಿಕ್ಕಾಪಟ್ಟೆ ಹರಿಸಿ ಹಾಳು ಮಾಡುವುದರಲ್ಲಿ ಎತ್ತಿದ ಕೈ.
ಅದೆಲ್ಲ ಗೊತ್ತಾಗಿ ಅವನಿಗೆ ಎಷ್ಟೋ ಸರ್ತಿ ಬೈದಿದ್ದೆನಾದರೂ ಅದು ಕೋಣನ ಮುಂದೆ ಕಿನ್ನರಿ ಬಾರಿಸಿದ ತರಹ ನನ್ನ ಮಾತುಗಳು ಅವನ ಈ ಕಿವಿಯಿಂದ ಆ ಕಿವಿಯ ಮೂಲಕ ಹೊರಗೆ ಬಂದಿದ್ದವು. ಅದೇ ಕಾರಣಕ್ಕೆ ಈಗ ನೀರನ್ನು ಅವನಿಗೆ ನಿಯಂತ್ರಿಸುವ ಉದ್ದೇಶದಿಂದ ನನ್ನ ಪಂಪ್ ಸೆಟ್‌ಗೆ ಒಂದು ಲಾಕ್ ಮಾಡಿಸಿದ್ದೆ. ಅದರ ಕೀಲಿ ಈಗ ನನ್ನ ಬಳಿ ಇತ್ತು. ಹುಸ್ಸೇನ್ ಸಾಬ್‌ಗೆ ನೀರು ಬೇಕೆಂದರೆ ನನ್ನನ್ನು ಕೇಳಬೇಕಿತ್ತು.

ನನ್ನ ಬೋರ್ ವೆಲ್‌ನ ನೀರನ್ನು ಹುಸ್ಸೇನ್ ಸಾಬ್ ಒಬ್ಬನೇ ಅಲ್ಲ ಅಕ್ಕ ಪಕ್ಕದ ಹಲವಾರು ರೈತರು ಬಳಸುತ್ತಿದ್ದರು. ಬಳಸಿದರೆ ಬೇಜಾರಿಲ್ಲ, ಆದರೆ ದುರ್ಬಳಕೆ ನನಗೆ ಹಿಡಿಸುತ್ತಿರಲಿಲ್ಲ. ನನಗೆ ಹೇಳದೆ ಕೇಳದೆ ಬಳಸುವುದೂ ನನಗೆ ಇಷ್ಟವಾಗುತ್ತಿರಲಿಲ್ಲ. ಇವೆಲ್ಲ ಕಾರಣಗಳಿಂದ ನಾನು ಅದಕ್ಕೊಂದು ಕೀಲಿ ಹಾಕಿದ್ದೆ. ಅದು ಅಲ್ಲಿನವರಿಗೆ ಕಷ್ಟವಾಗಿತ್ತು. ಇವೆಲ್ಲ ಕಾರಣಗಳಿಂದ ಅಲ್ಲಿನವರಿಗೆ ನಾನು ಅಲ್ಲಿ ಬಂದು ಬೇರು ಬಿಡುವುದು ಇಷ್ಟವಿರಲಿಲ್ಲ. ಆದಷ್ಟು ನಾನು ಸೋತು ಸುಣ್ಣವಾಗಿ ಅಲ್ಲಿಂದ ಓಡಿ ಹೋಗಬೇಕು ಅಂತ ಅವರು ಬಯಸಿದ್ದರು.

*****

ನಾವು ತಂದಿದ್ದ ಸಸಿಗಳನ್ನು ನೆಡಬೇಕಿತ್ತು. ಆದರೆ ನೆಟ್ಟ ಮೇಲೆ ಅವುಗಳಿಗೆ ಸ್ವಲ್ಪವಾದರು ನೀರು ಉಣಿಸಬೇಕೆಂದರೆ ಕರೆಂಟ್ ಇರಲಿಲ್ಲ. ನನ್ನ ಚಿಂತೆಗೆ ನಾಗಣ್ಣ ಒಂದು ಪರಿಹಾರ ಸೂಚಿಸಿದರು.

“ಸರ್.. ಪರವಾಗಿಲ್ಲ ಬಿಡಿ, ಇವೆರಡು ಸಸಿ ನೆಟ್ಟು ನಮ್ಮ ಕುಡ್ಯೋ ನೀರನ್ನೇ ಅವುಗಳಿಗೆ ಹಾಕೋಣ..” ಅಂದರು. ನಾವು ಒಂದೆರಡು ಬಾಟಲಿಗಳಲ್ಲಿ ನೀರು ತಂದಿದ್ದೇವಲ್ಲ. ಸರಿ ಹಾಗೆ ಮಾಡೋಣ ಅಂದೆ..

ಅವರದು ಪ್ರಾಣಿಗಳು ಹಾಗೂ ಗಿಡಗಳ ಬಗ್ಗೆ ಮಾತೃ ಹೃದಯ, ತುಂಬಾ ಕರುಣೆ. ಗಿಡಗಳನ್ನು ನಮ್ಮ ಮಕ್ಕಳು ಅಂತ ಕರೆಯೋರು. ಅಂತೂ ಬೆಂಗಳೂರಿನಿಂದ ತಂದಿದ್ದ ಎರಡು ಸಸಿಗಳನ್ನು ನೆಟ್ಟಿದ್ದು ಅವತ್ತಿನ ಸಾಧನೆ. ಆದರೂ ಹೊಲದ ತುಂಬ ಎದೆಯೆತ್ತರಕ್ಕೆ ಬೆಳೆದಿದ್ದ ಹುಲ್ಲು, ಕಂಟಿ, ಮುಳ್ಳಿನ ಪೊದೆಗಳು ನನ್ನನ್ನು ಅಧೀರನನ್ನಾಗಿಸಿತ್ತು. ಅವುಗಳನ್ನು ಹಾಗೆಯೇ ಇಟ್ಟು ನಡು ನಡುವೆ ಗಿಡ ಬೆಳೆಸಿಕೊಂಡು ಹೋಗೋಣ ಕಾಡಿನ ರೀತಿಯಲ್ಲಿ ಅಂತ ಅಂದೆನಾದರೂ ಅನಿಯಂತ್ರಿತ ಕಳೆಯೂ ತುಂಬಾ ಸಮಸ್ಯೆ ಉಂಟು ಮಾಡಬಹುದು ಅಂತ ಅನಿಸಿತ್ತು.

“ಟ್ರ್ಯಾಕ್ಟರ್ ಹೊಡಸ್ರೀ, ಹೊಲ ಚೊಕ್ಕ ಇರಬೇಕು ನೋಡ್ರಿ” ಅಂತ ಪಕ್ಕದ ಹೊಲದ ಗೌಡರು ಹೇಳಿದ್ದು ಇನ್ನೂ ತಲೆಯಲ್ಲಿ ಕೊರೆಯುತ್ತಿತ್ತು.

ಹೊಲವನ್ನು ಚೊಕ್ಕ ಮಾಡುವ ಭರದಲ್ಲಿ ಪದೆ ಪದೆ ಟ್ರಾಕ್ಟರ್‌ನಲ್ಲಿ ಉಳುಮೆ ಮಾಡಿ, ಕಳೆ ನಾಶಕ ಎಂಬ ವಿಷವನ್ನು ಭೂಮಿಗೆ ಉಣಿಸಿ ತೆಗೆಯುವ ಬೆಳೆಯಲ್ಲಿ ಏನಿರುತ್ತದೆ? ಬರಿಯ ವಿಷವೇ! ಸಾಕಷ್ಟು ರೈತರು ಅದನ್ನೇ ರೂಢಿಸಿಕೊಂಡಿದ್ದಾರೆ. ಕಾರಣಗಳು ಏನೇ ಇರಬಹುದಾದರೂ ಎಲ್ಲರಂತೆ ತಪ್ಪು ಮಾಡುವುದು ನನಗೆ ಇಷ್ಟವಿರಲಿಲ್ಲ. ಹಾಗೆ ಮಾಡಬಾರದು ಅಂತ ಅಲ್ಲಿನವರಿಗೆ ಹೇಳುತ್ತಿದ್ದೆ. ಅವರು ನನ್ನ ಮಾತು ಕೇಳಿ ನಗುತ್ತಿದ್ದರು.

ಈಗ ನಗ್ತೀರಲ್ಲ, ನಗ್ರಿ ಮುಂದ ಒಂದು ದಿನ ನೀವೆಲ್ಲ ನಾನು ಮಾಡಿದ್ದs ಮಾಡ್ತೀರಿ ಅಂತ ಹೇಳುತ್ತಿದ್ದೆ. ಮಾಡ್ರಿ ಮಾಡ್ರಿ ಏನೇನ್ ಮಾಡ್ತೀರಿ ನೋಡೋಣ ಅಂತ ಮತ್ತಷ್ಟು ನನ್ನನ್ನು ತಮಾಷೆ ಮಾಡುತ್ತಿದ್ದರು. ಹೀಗಾಗಿ ಮುಂದೆ ಹಾಗೆ ಮಾತಾಡುವುದನ್ನು ಕಡಿಮೆ ಮಾಡಿದೆ. ಆಡದೆ ಮಾಡುವವನು ಉತ್ತಮನು… ಅಲ್ಲವೇ?