ಈ ಕಾಲದಲ್ಲಿ ಎಲ್ಲರೂ ಎದುರಿಸುತ್ತಿರುವ ಕೊರೊನದಂತಹ ದೊಡ್ಡ ಸಂದಿಗ್ಧತೆಯ ಒಂದು ಸಣ್ಣ ಅಡ್ಡ ಪರಿಣಾಮವಾದ ಪರೀಕ್ಷೆ ಇಲ್ಲದ ಮಾಪನ ಕ್ರಮದ ವಿವಾದದ ತುರ್ತಾಗಿ ಪರಿಹಾರ ಆಗುವಂತೆ ಕಾಣುತ್ತಿಲ್ಲ. ಆಯಾ ಕಾಲೇಜು ತನ್ನ ಮಕ್ಕಳಿಗೆ ತುಸು ಉದಾರಿಯಾಗಿಯೇ ನೀಡಿರಬಹುದಾದ ಅಂದಾಜು ಗ್ರೇಡ್ ಗಳು ಪರೀಕ್ಷೆಯೊಂದು ನಡೆದು ಅದರ ನಿಷ್ಪಕ್ಷಪಾತ ಮೌಲ್ಯಮಾಪನದಲ್ಲಿ ನಿರ್ಧಾರವಾಗುವ ದರ್ಜೆಗಿಂತ ಹೆಚ್ಚಿರುವ ಸಾಧ್ಯತೆ ಇರುವುದು ಈ ಬಾರಿ ಹೆಚ್ಚು ವಿದ್ಯಾರ್ಥಿಗಳು ಅಧಿಕ ದರ್ಜೆಯನ್ನು ಪಡೆಯುವುದಕ್ಕೆ ಆಸ್ಪದ ನೀಡಿದಂತಾಗಿದೆ. ಮತ್ತೆ ಅದೇ ಕಾರಣಕ್ಕೆ ಕೆಲವು ವಿಶ್ವವಿದ್ಯಾಲಯಗಳಲ್ಲಿ ಲಭ್ಯ ಇರುವ ಸೀಟುಗಳಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬೇಕಾದ ಸವಾಲು ಈಗ ಉದ್ಭವವಾಗಿದೆ.
ಯೋಗೀಂದ್ರ ಮರವಂತೆ ಬರೆಯುವ ‘ಇಂಗ್ಲೆಂಡ್ ಲೆಟರ್’

 

ಇಂತಿಂತಹದು ಇಷ್ಟಿಷ್ಟೊತ್ತಿಗೆ ಹೀಗೀಗೇ ನಡೆಯಬೇಕು ಅಥವಾ ನಡೆಯಬಹುದು ಅಂತ ಅಂದುಕೊಳ್ಳವುದು ನಾವು ಹುಟ್ಟಿನಿಂದ ಪಡೆದ ನೈಸರ್ಗಿಕ ಗುಣವೋ, ಬೆಳೆಯುತ್ತ ಕಲಿತ ಯೋಚನಾ ವಿಧಾನವೋ ಅಥವಾ ಎಲ್ಲರಲ್ಲೂ ಇರುವ ಸಾಮಾನ್ಯವಾದ ದೌರ್ಬಲ್ಯವೋ, ಗೊತ್ತಿಲ್ಲ. ಆಶಯ ಆಶಾವಾದಗಳು ನಿರೀಕ್ಷೆಯ ಮಹಲನ್ನು ನಮ್ಮೆದುರು ಕ್ಷಣಕ್ಷಣಕ್ಕೂ ನಿರಾಯಾಸವಾಗಿ ಕಟ್ಟಿ ನಿಲ್ಲಿಸುತ್ತಲೇ ಇರುತ್ತವೆ. ಮತ್ತೆ ಕೆಲವೊಮ್ಮೆ ಇವೇ, ಜೋಡಿ ದೀಪಗಳಂತೆ ಕತ್ತಲ ನಡಿಗೆಯಲ್ಲಿಯೂ ನಂಬಿಕೆ ಹುಟ್ಟಿಸಿ ನಮ್ಮನ್ನು ಮುನ್ನಡೆಸುತ್ತವೆ. ಆಶಯಗಳು ನಿರೀಕ್ಷೆಗಳು ಯಾಕೆ ಇಷ್ಟು ಸುಲಲಿತವಾಗಿ ನಮ್ಮ ಮನಸ್ಸನ್ನು ತುಂಬಿರುತ್ತವೆ ಎನ್ನುವುದನ್ನು ವಿಜ್ಞಾನವೊ ಆಧ್ಯಾತ್ಮವೊ ಮನಃಶಾಸ್ತ್ರವೊ ತಮ್ಮ ತಮ್ಮ ಸ್ವತಂತ್ರ ನೆಲೆಯಲ್ಲಿ ಅಲ್ಲದಿದ್ದರೆ ಹೊಂದಾಣಿಕೆಯಲ್ಲಿ ವಿಶದೀಕರಿಸಬಹುದೋ ಏನೋ.

ಬೆಳಗಿನಿಂದ ರಾತ್ರಿಯ ತನಕವೂ ಹೀಗಾಗಬೇಕು ಹೀಗಾಗಬಹುದು ಎನ್ನುವ ನಿರೀಕ್ಷೆಗಳ ಸಂಸರ್ಗದಲ್ಲೇ ಜೀವಿಸುವವರು ನಾವು. ಹೇಗೆ ಎಷ್ಟೊತ್ತಿಗೆ ಏನು ಆಗಬೇಕು ಎಂದು ಬಯಸುವುದು ಉಸಿರಾಟದಷ್ಟೇ ಸಹಜ. ಹಲವು ಸಂದರ್ಭಗಳಲ್ಲಿ ನಮ್ಮ ಬಯಕೆಯೋ ಆಶಾವಾದವೋ ನಿರಾಸೆಯ ಗೋಡೆಯನ್ನು ಮುಟ್ಟಿ ಅಂತ್ಯವನ್ನು ಕಂಡಿದ್ದರೂ ಮುಂದೆ ಮತ್ತೊಂದು ಸಂದರ್ಭದಲ್ಲಿ ನಿರೀಕ್ಷಿಸುವುದು ನಿಲ್ಲುವುದಿಲ್ಲ. ಸಮುದ್ರ ದಂಡೆಯ ಒದ್ದೆ ಉಸುಕಿನಲ್ಲಿ ಮಕ್ಕಳು ಕಾಲು ಮುಳುಗಿಸಿ ಗೂಡು ಕಟ್ಟುಲು, ಕಟ್ಟಿದ್ದನ್ನು ಎರಗುವ ತೆರೆಗಳಿಂದ ಉಳಿಸಿಕೊಳ್ಳಲು ಮತ್ತೆ ಮತ್ತೆ ಯತ್ನಿಸುವಂತೆಯೇ ನಾವೂ.

ನಿತ್ಯವೂ ಕೆಲ ಹೊಚ್ಚ ಹೊಸ ಅಪರಿಚಿತ ನಿರೀಕ್ಷೆಗಳು ಮತ್ತೊಂದಿಷ್ಟು ಈ ಹಿಂದೆ ಆಯಾ ಕಾಲಕ್ಕೆ ನಮಗೋ ಇನ್ನೊಬ್ಬರಿಗೋ ಆದ ಅನುಭವಗಳಿಂದ ಮುಂದೆ ನಡೆಯುವ ಘಟನೆಗಳಲ್ಲಿ ಕೂಡ ತಮಗೆ ಹೀಗೇ ಆಗಬಹುದು ಎನ್ನುವ ತೀರ ಪರಿಚಯಸ್ಥ ಬಗೆಯವು. ನಮ್ಮನ್ನು ಖಾಯಂ ಕಾಡುವ ಬಯಕೆ ನಿರೀಕ್ಷೆ ಅಪೇಕ್ಷೆಗಳಂತಹ ವಿಷಯಗಳ ಬೆನ್ನು ಹಿಡಿದವರಿಗೆ ಬದುಕಿನಲ್ಲಿ ಕ್ಲೇಶಗಳು ತಪ್ಪಿದ್ದಲ್ಲ ಅಂತ ಸಿದ್ಧಿ ಪಡೆದವರು ಸಂತರು ಆಧ್ಯಾತ್ಮಿಗಳು ಕಾಲಕಾಲಕ್ಕೆ ಹೇಳಿದ್ದಿದೆ. ಇವೆಲ್ಲವೂ ಲೌಕಿಕದ ಬಂಧನದ ಲಕ್ಷಣಗಳು, ಇವುಗಳಿಂದ ಬಿಡಿಸಿಕೊಳ್ಳುವ ಸೂತ್ರಗಳು ಇಂತಹವು ಎಂದು ಉಪದೇಶಿಸಿದ್ದಿದೆ. ನಿರೀಕ್ಷೆಗಳನ್ನು ನಿಭಾಯಿಸುವುದು ಹೇಗೆ ಎನ್ನುವ ಬಗೆಗೆ ನಿರರ್ಗಳವಾಗಿ ಉಸುರುವ ಭಾಷಣಕಾರರೂ ತಮ್ಮ ಜ್ಞಾನದ ಭಂಡಾರವನ್ನು ಹಾಳೆಗಳಲ್ಲಿ ಬರೆದು ತುಂಬಿಸಿ ಪುಸ್ತಕವಾಗಿಸಿದವರೂ ಇದ್ದಾರೆ. ಆದರೆ ಎಂತಹ ಪ್ರಚೋದನೆ ಬೋಧನೆ ಓದು ಕಲಿಕೆ ಉದಾಹರಣೆಗಳು ಲಭ್ಯ ಇದ್ದರೂ ಮನುಷ್ಯರು ಮೂಲತಃ ಆಶಾವಾದಿಗಳು, ಕಣ್ಣೆದುರು ಇರುವ ಲೌಕಿಕ ಸಾಗರದಲ್ಲಿ ಬೇಕಾಗಿಯೋ ಬೇಡವಾಗಿಯೋ “ಈಸುವವರು” ಮತ್ತೆ ತಮ್ಮ ಪ್ರತಿ ನಡೆಯಲ್ಲೂ ನಿರೀಕ್ಷೆ ತುಂಬಿಕೊಂಡಿರುವವರು.

ಆಸೆ ಆಶಾವಾದ ಅಪೇಕ್ಷೆ ಇತ್ಯಾದಿಗಳ ಸಖ್ಯ ಎಂತಹ ಸಂದಿಗ್ಧತೆ ಬಂದರೂ ಅಚಲವಾಗಿ ಸ್ಥಿರವಾಗಿ ನಮ್ಮೊಡನೆಯೇ ಇರುವಂತಹದ್ದು. ನಮ್ಮ ನಮ್ಮ ಆಶಯ ನಿರೀಕ್ಷೆಗಳು ಎಷ್ಟೇ ಇದ್ದರೂ ಸದ್ಯದ ಕಾಲದಲ್ಲಿ ಆಶಾದಾಯಕ ವಾತಾವರಣ ನಿರಾಶೆಯ ಮಸುಕಿನಲ್ಲೂ, ನಿರೀಕ್ಷೆಯ ಹಾದಿ ಅನಿರೀಕ್ಷಿತ ತಿರುವುಗಳಲ್ಲೂ ಸೆಣಸಾಡುತ್ತಿವೆ.

ಈ ಕಾಲದಲ್ಲಿ ಬಯಸಿದಂತೆ ನಡೆಯದ ಸಂಗತಿಗಳು ಯಾವುವು ಎಂದು ಯಾರಾದರೂ ಕೇಳಿದರೆ ಅಂತಹ ವಿಷಯಗಳ ಉದ್ದದ ಪಟ್ಟಿ ಎಲ್ಲರ ಬಳಿಯಲ್ಲೂ ಇದೆ. ಎಲ್ಲರ ಆಸುಪಾಸಲ್ಲೂ ಅಚಾನಕ್ ಅನಪೇಕ್ಷಿತ ಪ್ರಕರಣಗಳ ಸರಣಿಗಳಿವೆ. ಮಕ್ಕಳು ಯೌವ್ವನಸ್ಥರು ವೃದ್ಧರು ಒಂಟಿ ಜೀವಿಗಳು ಸಂಸಾರಸ್ಥರು ದುಡಿಯುವವರು ಉದ್ಯೋಗ ಕಳೆದುಕೊಂಡವರು ಜೀವ ಇರುವ ಎಲ್ಲರೂ ಈ ಕಾಲದ ನಿರಾಸೆಯ ಫಲಾನುಭವಿಗಳೇ ಮತ್ತೆ ಈ ಸಮಯ ಎಂದು ಸರಿದೀತೋ ಎನ್ನುವ ಪ್ರತೀಕ್ಷೆಯಲ್ಲಿ ಇರುವವರೇ. ಒಂದು ವೇಳೆ ಈ ಕಾಲದ ಜಗತ್ತಿನ ಎಲ್ಲ ಅನಿರೀಕ್ಷಿತ ಘಟನೆಗಳ ಅನುಭವಗಳ ಪುಸ್ತಕ ಸಂಕಲಿಸಿದರೆ ಅದರಲ್ಲಿ ಕೋಟಿ ಹಾಳೆಗಳಿರಬಹುದು. ಮತ್ತೆ ಆ ದಪ್ಪದ ಭಾರದ ಹೊತ್ತಿಗೆಯ ತೀರಾ ಇತ್ತೀಚಿನ ಪುಟ ಜೋಡಣೆಯಲ್ಲಿ ಬ್ರಿಟನ್ನಿನ ವಿದ್ಯಾರ್ಥಿಗಳ ಆಶಾಭಂಗ ಪ್ರಸಂಗವೂ ಓದಸಿಗಬಹುದು.

ಜಗತ್ತಿನ ಬೇರೆ ಕೆಲವು ಕಡೆಗಳಂತೆ ಮಾರ್ಚ್ ಕೊನೆಯ ವಾರದಲ್ಲಿ ಇಲ್ಲೂ ಶಾಲೆ ಕಾಲೇಜುಗಳು ಅನಿವಾರ್ಯವಾಗಿ ಅನಿರ್ದಿಷ್ಟ ಅವಧಿಗೆ ಮುಚ್ಚಲ್ಪಟ್ಟವು. ಈ ದೇಶದ ಶೈಕ್ಷಣಿಕ ವ್ಯವಸ್ಥೆಯ ಪ್ರಾಥಮಿಕ ಹಂತಗಳನ್ನು ಮಕ್ಕಳು ಆಡಿಕೊಂಡು ಹಾಡಿಕೊಂಡು ಹಗುರವಾದ ಸ್ಕೂಲ್ ಬ್ಯಾಗನ್ನು ಓಲಾಡಿಸುತ್ತ ಕಳೆಯುವ ಪ್ರಸಿದ್ಧಿ ಇದೆಯಾದರೂ ಅವರು ಪ್ರೌಢ ಶಿಕ್ಷಣ ವ್ಯವಸ್ಥೆಯನ್ನು ತಲುಪಿದ ಮೇಲೆ ಮುಂದೆ ಪದವಿಪೂರ್ವ ಹಂತ ಮುಗಿಯುವವರೆಗೂ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಬಿಗಿ ಆತಂಕ ಒತ್ತಡಗಳನ್ನು ಎದುರಿಸುತ್ತಾರೆ. ಹಾಗಾಗಿ ಹಠಾತ್ತನೆವಿದ್ಯಾಸಂಸ್ಥೆಗಳು ಬಾಗಿಲು ಹಾಕಿದ್ದು ಆ ಹಂತದ ವಿದ್ಯಾರ್ಥಿಗಳಲ್ಲಿ ಅವರ ಹೆತ್ತವರಲ್ಲಿ ಕಳವಳ ಹುಟ್ಟಿಸಿತ್ತು.

ಇಲ್ಲಿನ ಮಟ್ಟಿಗೆ ವಿದ್ಯಾಭ್ಯಾಸದ ಮಹತ್ವದ ಘಟ್ಟ ಎಂದು ಪರಿಗಣಿಸಲ್ಪಡುವ ಜಿಸಿಎಸ್ಸಿ(ಎಸ್ ಎಸ್ ಎಲ್ ಸಿ ಗೆ ಸಮನಾದದ್ದು), ಮತ್ತೆ ವಿಶ್ವವಿದ್ಯಾಲಯವನ್ನು ನಿರ್ಣಯಿಸಿ ಸೀಟು ತೆಗೆದುಕೊಳ್ಳಬೇಕಾದ “ಎ ಲೆವೆಲ್” (ದ್ವಿತೀಯ ಪಿ ಯು ಸಿ ಗೆ ಸಮನಾದದ್ದು) ಗಳಲ್ಲಿ ಇರುವವರ ತಲ್ಲಣಕ್ಕೆ ಕಾರಣವಾಗಿತ್ತು. ಭಾರತದ ಹತ್ತನೆಯ ತರಗತಿಯ ಪರೀಕ್ಷೆಗೆ ಸಮನಾದ “ಜಿ ಸಿ ಎಸ್ ಸಿ” ಈ ದೇಶದ ಅತ್ಯಂತ ಒತ್ತಡದ ಪರೀಕ್ಷೆ ಎನ್ನುವ ಖ್ಯಾತಿ ಅಪಖ್ಯಾತಿಗಳನ್ನೂ ಪಡೆದಿದೆ. ಶಿಕ್ಷಣದಲ್ಲಿರುವ ಹೇರಿಕೆ ಒತ್ತಾಯಗಳ ವಿಚಾರ ಆಂಗ್ಲ ಪತ್ರಿಕೆಗಳಲ್ಲೂ ಲಂಡನ್ನಿನ ಸಂಸತ್ತಿನಲ್ಲೂ ಬಂದು ಹೋಗುವಾಗ ಈ ಹಂತದ ಪಠ್ಯ ಹಾಗು ಮೌಲ್ಯಮಾಪನಗಳನ್ನು ಪರಿಷ್ಕರಿಸುವ ಬಗೆಗಿನ ಮಾತುಗಳು ಬರುತ್ತವೆ. ಇಂತಹ ಒಂದು ಪರೀಕ್ಷೆಯನ್ನು ಪೂರ್ತಿ ತೆಗೆದರೆ ಹೇಗೆ ಎನ್ನುವ ಚರ್ಚೆಗಳೂ ಆಗುತ್ತವೆ. ಹತ್ತೋ ಹನ್ನೊಂದೋ ವಿಷಯಗಳನ್ನು ಕಡ್ಡಾಯವಾಗಿ ಅಭ್ಯಸಿಸಬೇಕಾದ ಈ ಹಂತದ ನಿರ್ವಹಣೆ, “ಎ ಲೆವೆಲ್” ನ ವಿಷಯಗಳ ಆಯ್ಕೆಯಲ್ಲಿ ಮಾತ್ರವಲ್ಲದೆ ಯೂನಿವರ್ಸಿಟಿಯಲ್ಲಿ ಸೀಟು ಪಡೆಯುವಾಗಲೂ ಪರಿಗಣಿಸಲ್ಪಡುತ್ತದೆ.

“ಜಿಸಿಎಸ್ಸಿ” ಹಂತದ ಭಾಗವಾಗಿದ್ದ ಹತ್ತೋ ಹನ್ನೊಂದೋ ವಿಷಯಗಳಲ್ಲೂ ಯಾವ ಗ್ರೇಡ್ ಅಥವಾ ಶ್ರೇಣಿಯನ್ನು ಪಡೆದಿದ್ದಾರೆ ಎನ್ನುವುದರ ಮೇಲೆಯೂ ಯಾವ ವಿಶ್ವವಿದ್ಯಾಲಯಲ್ಲಿ ಸ್ಥಾನ ದೊರೆಯಬಹುದು ಎಂದು ನಿರ್ಧರಿತವಾಗುತ್ತದೆ. ಇಂತಹ ಪಂಥದ “ಜಿಸಿಎಸ್ಸಿ” ಹಂತದ ನಂತರದ ಎರಡು ವರ್ಷಗಳಾದ “ಎ ಲೆವೆಲ್” ಅಲ್ಲಿ ಮೂರು ಅಥವಾ ನಾಲ್ಕು ವಿಷಯಗಳನ್ನು ಆಯ್ದುಕೊಂಡು ಆಳವಾಗಿ ವಿಸ್ತಾರವಾಗಿ ಅಭ್ಯಸಿಸಬೇಕು ಹಾಗು ತಮಗೆ ಬೇಕಾದ ವಿದ್ಯಾಲಯಗಳಲ್ಲಿ ಬೇಕಾದ ಕೋರ್ಸ್ ಪಡೆಯಬೇಕಿದ್ದರೆ ಮತ್ತೆ ಇಲ್ಲೂ ಉತ್ತಮ ದರ್ಜೆಯನ್ನು ಪಡೆಯಬೇಕು.

“ಎ ಲೆವೆಲ್” ಹಂತದ ಕೊನೆಯ ಪರೀಕ್ಷೆ ಮುಗಿಯುವ ಮೊದಲೇ ಯುನಿವರ್ಸಿಟಿಗಳಿಗೆ ಅರ್ಜಿ ಸಲ್ಲಿಸಬೇಕಾದ ಕಾರಣ ಪ್ರತಿ ಕಾಲೇಜೂ ತನ್ನ ವಿದ್ಯಾರ್ಥಿಗಳಿಗೆ ಒಂದು ಅಂದಾಜು ಗ್ರೇಡ್ ಅನ್ನು ನೀಡಿರುತ್ತದೆ. “ಜಿ ಸಿ ಎಸ್ ಸಿ” ಹಂತದಲ್ಲಿ ದೊರೆತ ಗ್ರೇಡ್ ಹಾಗು “ಎ ಲೆವೆಲ್” ಅಲ್ಲಿ ಅಧ್ಯಾಪಕರಿಂದ ದೊರೆತ ಮುನ್ಸೂಚನೆಯ ಅಥವಾಅಂದಾಜಿನ ಗ್ರೇಡ್ ಗಳ ಆಧಾರದ ಮೇಲೆ ವಿದ್ಯಾರ್ಥಿಗಳು ತಮಗೆ ಬೇಕಾದ ಯುನಿವರ್ಸಿಟಿಗಳ ಹಾಗು ಕೋರ್ಸುಗಳ ಆಯ್ಕೆ, ಸೀಟುಗಳ ವಿಲೇವಾರಿ ನಡೆಯುತ್ತದೆ. ಮತ್ತೆ “ಎ ಲೆವೆಲ್” ಪರೀಕ್ಷೆಯ ನಂತರ ಬಂದ ಫಲಿತಾಂಶ ಒಂದು ವೇಳೆ ಊಹಿಸಿದ ಶ್ರೇಣಿಗಿಂತ ಕಡಿಮೆ ಬಂದರೆ ಈಗಾಗಲೇ ದೊರೆತ ಸೀಟನ್ನು ಕಳೆದುಕೊಳ್ಳಬೇಕಾಗಲೂಬಹುದು.

ಒಂದು ವೇಳೆ ಈ ಕಾಲದ ಜಗತ್ತಿನ ಎಲ್ಲ ಅನಿರೀಕ್ಷಿತ ಘಟನೆಗಳ ಅನುಭವಗಳ ಪುಸ್ತಕ ಸಂಕಲಿಸಿದರೆ ಅದರಲ್ಲಿ ಕೋಟಿ ಹಾಳೆಗಳಿರಬಹುದು. ಮತ್ತೆ ಆ ದಪ್ಪದ ಭಾರದ ಹೊತ್ತಿಗೆಯ ತೀರಾ ಇತ್ತೀಚಿನ ಪುಟ ಜೋಡಣೆಯಲ್ಲಿ ಬ್ರಿಟನ್ನಿನ ವಿದ್ಯಾರ್ಥಿಗಳ ಆಶಾಭಂಗ ಪ್ರಸಂಗವೂ ಓದಸಿಗಬಹುದು.

ಐದರಿಂದ ಹದಿನೆಂಟು ವರ್ಷಗಳ ತನಕದ ಕಡ್ಡಾಯ ಶಿಕ್ಷಣ, “ಎ ಲೆವೆಲ್” ತನಕವೂ ಉಚಿತ ವಿದ್ಯಾಭ್ಯಾಸದ ಸವಲತ್ತು, ಸಮಾಜದ ಬೇರೆ ಬೇರೆ ವರ್ಗಗಳ ಮಕ್ಕಳು ಒಟ್ಟಿಗೆ ಬೆರೆತು ಓದಬಹುದಾದ ದೇಶದ ಬಹುತೇಕ ಮಕ್ಕಳು ಹೋಗುವ ಸರಕಾರಿ ಶಾಲೆ ಕಾಲೇಜುಗಳು ಹೀಗೆ ಸಮಾನತೆಯ ಸಮತೋಲನದ ಮಾದರಿ ಕಲಿಕಾಕ್ರಮ ಇಲ್ಲಿದೆಯಾದರೂ ಮುಂದೆ ಉದ್ಯೋಗಕ್ಕಾಗಿ ಇರುವ ಪೈಪೋಟಿಯಿಂದಾಗಿ, ಇಲ್ಲಿನ ದುಬಾರಿ ಜೀವನ ವೆಚ್ಚಗಳಿಂದಾಗಿ ಶಿಕ್ಷಣವು ಪ್ರಾಥಮಿಕ ಹಂತದ ನಂತರ ಗಂಭೀರ ತಿರುವನ್ನೂ ಸ್ಪರ್ಧಾತ್ಮಕ ಆಯಾಮವನ್ನೂ ಪಡೆಯುತ್ತದೆ. ಯಾವ ವಿಶ್ವವಿದ್ಯಾಲಯ ಯಾವ ಕೋರ್ಸ್ ಎನ್ನುವ ಆಯ್ಕೆಗಳ ಹಿನ್ನೆಲೆಯಲ್ಲಿ “ಎ ಲೆವೆಲ್”, “ಜಿಸಿಎಸ್ಸಿ” ವಿದ್ಯಾಭ್ಯಾಸ ಹಾಗು ಅವುಗಳ ಪರೀಕ್ಷೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.

ಹೀಗೆ ವಿದ್ಯಾರ್ಥಿಗಳಿಗೆ ಮಹತ್ವಪೂರ್ಣ ಎನಿಸುವ ಎರಡು ಘಟ್ಟಗಳ ಪರೀಕ್ಷೆಗಳನ್ನು ನಡೆಸುವುದು, ಫಲಿತಾಂಶ ನೀಡುವುದು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯ ಇಲ್ಲದಾದಾಗ ಕೆಲವು ಮಾನದಂಡಗಳನ್ನು ಒಳಗೊಂಡ “ಆಲ್ಗಾರಿತಮ್” ಆಧಾರಿತ ಗ್ರೇಡ್ ಅಥವಾ ಶ್ರೇಣಿಯನ್ನು ನೀಡುವುದಾಗಿ ನಿರ್ಧರಿಸಲಾಯಿತು. ಆಯಾ ತರಗತಿಯಲ್ಲಿ ಇತರ ಮಕ್ಕಳೊಡನೆ ಹೋಲಿಸಿ ನಿರ್ಧರಿತವಾದ ಕಲಿಕೆಯ ಸ್ಥಾನ, ಅಧ್ಯಾಪಕರ ಅಂದಾಜು ಹಾಗು ಕಳೆದ ಮೂರು ವರ್ಷಗಳಲ್ಲಿ ಆಯಾ ಶಾಲೆ ಒಂದೊಂದು ವಿಷಯದಲ್ಲಿ ಶೈಕ್ಷಣಿಕವಾಗಿ ಹೇಗೆ ನಿರ್ವಹಣೆ ನೀಡಿದೆ ಎನ್ನವ ಅಂಶಗಳನ್ನು ಒಳಗೊಂಡು ಲೆಕ್ಕಾಚಾರ ಮಾಡುವ ಗಣಿತಾಧಾರಿತ ಕ್ರಮವಿಧಿಯನ್ನು ಬಳಸಲಾಯಿತು. ಮತ್ತೆ ಕಳೆದ ವಾರ ಬ್ರಿಟನ್ನಿನ ಪ್ರಾಂತ್ಯಗಳಾದ ಇಂಗ್ಲೆಂಡ್ ವೇಲ್ಸ್ ಸ್ಕಾಟ್ ಲ್ಯಾಂಡ್ ಗಳಲ್ಲಿ “ಎ ಲೆವೆಲ್” ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಅದರಲ್ಲಿ ಸುಮಾರು ನಲವತ್ತು ಪ್ರತಿಶತಃ ಮಕ್ಕಳು ಅಧ್ಯಾಪಕರಿಂದ ದೊರೆತ ತಮ್ಮ ಅಂದಾಜು ಶ್ರೇಣಿಗಿಂತ ಕಡಿಮೆ ಅಂಕ ಪಡೆದುದು ವರದಿಯಾಯಿತು. ಶ್ರೇಣಿ ನಿರ್ಧರಿಸುವ ಆಲ್ಗಾರಿತಮ್ ಅಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸುವ ಅಂಶ, “ಆಯಾ ಶಾಲೆ ಕಳೆದ ಮೂರು ವರ್ಷಗಳಲ್ಲಿ ಪ್ರತಿ ವಿಷಯದಲ್ಲಿ ಹೇಗೆ ನಿರ್ವಹಿಸಿದೆ” ಎನ್ನುವುದು ಅನಿರೀಕ್ಷಿತ ಫಲಿತಾಂಶಕ್ಕೆ ಕಾರಣವೆಂದು ದೂರಲಾಯಿತು. ಈಗಾಗಲೇ ಅಂದಾಜಿನ ನಿರೀಕ್ಷಿತ ಶ್ರೇಣಿಯ ಆಧಾರದ ಮೇಲೆ ಪದವಿ ವಿದ್ಯಾಲಯಗಳಲ್ಲಿ ಸೀಟು ಪಡೆದ ವಿದ್ಯಾರ್ಥಿಗಳು, ಅವರ ಬಗೆಗೆ ಸಹಾನುಭೂತಿ ಇರುವವರು ಆಲ್ಗಾರಿತಮ್ ಆಧಾರಿತ ಫಲಿತಾಂಶದ ಮೂಲಕ ಕಡಿಮೆ ಶ್ರೇಣಿ ಬಂದದ್ದಕ್ಕೆ ಒಟ್ಟಾರೆ ನಿಭಾಯಿಸುವಿಕೆಯ ಅವ್ಯವಸ್ಥೆ ಬಗೆಗೆ ಪ್ರತಿಭಟನೆಯಲ್ಲಿ ತೊಡಗಿದರು. ಇದು ವಿದ್ಯಾರ್ಥಿಗಳ ಮೌಲ್ಯಮಾಪನವಾಗದೇ ಕಾಲೇಜಿನ ಮಾಪನವಾಗಿದೆ ಎಂದು ಹೇಳಿದರು.

ಪ್ರತಿವರ್ಷವೂ ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳುವ ಅನುಕೂಲ ಇರುವ ಸಣ್ಣ ಸಂಖ್ಯೆಯ ಖಾಸಗಿ ಶಾಲೆಗಳನ್ನು ಹಾಗು ಸರಕಾರದ ಆಸ್ಥೆಯಲ್ಲಿ ಪೋಷಿಸಲ್ಪಡುವ ಗ್ರಾಮರ್ ಸ್ಕೂಲ್ ಗಳನ್ನು ಬಿಟ್ಟು ಬಹುಸಂಖ್ಯೆಯಲ್ಲಿರುವ ಮಾಮೂಲಿ ಸರಕಾರಿ ಶಾಲೆ ಕಾಲೇಜುಗಳಿಗೆ ಪ್ರತಿಕೂಲಕರವಾಗಿ ಅಲ್ಗಾರಿತಮ್ ಕಾರ್ಯನಿರ್ವಹಿಸುತ್ತದೆ ಎಂದು ಆಪಾದಿಸಲಾಯಿತು. ಒಂದು ಕಾಲೇಜು ಕಳೆದ ಕೆಲವು ವರ್ಷಗಳಿಂದ ಶೈಕ್ಷಣಿಕವಾಗಿ ಹೇಗೆ ನಿರ್ವಹಿಸುತ್ತಿದೆ ಎನ್ನುವ ದತ್ತಾಂಶದ ಮೇಲೆ ಕೆಲಸ ಮಾಡುವ ಆಲ್ಗಾರಿತಮ್ ವಿದ್ಯಾರ್ಥಿಗಳ ವೈಯಕ್ತಿಕ ನಿರ್ವಹಣೆಯ ನಿಟ್ಟಿನಲ್ಲಿ ಅಸಮರ್ಪಕ ಫಲಿತಾಂಶಗಳನ್ನು ಒದಗಿಸಿರುವುದು ತೀವ್ರ ಆಕ್ರೋಶಕ್ಕೂ ಅಸಮಾಧಾನಕ್ಕೂ ಕಾರಣ ಆಯಿತು.

ಕೆಲವು ವರ್ಷಗಳಿಂದ ಕಡಿಮೆ ಅಂಕಗಳನ್ನು ಗಳಿಸಿದ ಮಕ್ಕಳನ್ನು ಹೊಂದಿದ ಸಂಸ್ಥೆಯಲ್ಲಿ ಈ ವರ್ಷ ಹೆಚ್ಚು ಅಂಕ ಪಡೆಯಬಹುದಾದ ವಿದ್ಯಾರ್ಥಿಗಳು ಇದ್ದರೆ ಅವರಿರುವ ಸಂಸ್ಥೆಯ ಕಾರಣಕ್ಕೆ ಅಂದಾಜಿಗಿಂತ ಕಡಿಮೆ ಶ್ರೇಣಿ ಪಡೆಯುವ ಸಾಧ್ಯತೆಯ ಬಗೆಗೆ ವ್ಯಾಪಕ ಟೀಕೆಗಳು ವ್ಯಕ್ತವಾದವು. ಆಂಗ್ಲರ ವಿವರಣೆಯಲ್ಲಿ “ಅನ್ ಫೇರ್ “(unfair) ಎಂದು ಕರೆಸಿಕೊಳ್ಳುವ ಇಂತಹ ಗ್ರೇಡಿಂಗ್ ವ್ಯವಸ್ಥೆಯನ್ನು ವಿದ್ಯಾರ್ಥಿಗಳ ಪ್ರತಿಭಟನೆ, ಕಾಲೇಜು ಅಧ್ಯಾಪಕರ ಅಸಮಾಧಾನ, ಶಿಕ್ಷಣ ತಜ್ಞರ ಟೀಕೆ ಜೊತೆಗೆ ಆಡಳಿತ ಪಕ್ಷದ ಒಳಗೆ ಈ ಬಗ್ಗೆ ಭಿನ್ನಮತ ಇರುವವರ ಹಾಗು ವಿರೋಧ ಪಕ್ಷಗಳ ಬೆಂಬಲಗಳೂ ಸೇರಿ ವಿರೋಧಿಸಿ0ದವು. ಪರಿಣಾಮವಾಗಿ ಶಿಕ್ಷಣ ಸಚಿವಾಲಯ ವಿದ್ಯಾರ್ಥಿಗಳ ಕ್ಷಮೆ ಕೇಳಿ ಅಲ್ಗಾರಿತಮ್ ಆಧಾರಿತ ಫಲಿತಾಂಶಗಳನ್ನು ಹಿಂತೆಗೆದುಕೊಂಡು ಪ್ರತಿಭಟಿಸುತ್ತಿರುವವರ ಬೇಡಿಕೆಯಂತೆ ಆಯಾ ಕಾಲೇಜುಗಳು ಮೊದಲು ನೀಡಿದ್ದ ಅಂದಾಜು ಶ್ರೇಣಿಯನ್ನು ಮಾನ್ಯ ಮಾಡಿತು.

ಆದರೂ ಈ ಕಾಲದಲ್ಲಿ ಎಲ್ಲರೂ ಎದುರಿಸುತ್ತಿರುವ ಕೊರೊನದಂತಹ ದೊಡ್ಡ ಸಂದಿಗ್ಧತೆಯ ಒಂದು ಸಣ್ಣ ಅಡ್ಡ ಪರಿಣಾಮವಾದ ಪರೀಕ್ಷೆ ಇಲ್ಲದ ಮಾಪನ ಕ್ರಮದ ವಿವಾದದ ತುರ್ತಾಗಿ ಪರಿಹಾರ ಆಗುವಂತೆ ಕಾಣುತ್ತಿಲ್ಲ. ಆಯಾ ಕಾಲೇಜು ತನ್ನ ಮಕ್ಕಳಿಗೆ ತುಸು ಉದಾರಿಯಾಗಿಯೇ ನೀಡಿರಬಹುದಾದ ಅಂದಾಜು ಗ್ರೇಡ್ ಗಳು ಪರೀಕ್ಷೆಯೊಂದು ನಡೆದು ಅದರ ನಿಷ್ಪಕ್ಷಪಾತ ಮೌಲ್ಯಮಾಪನದಲ್ಲಿ ನಿರ್ಧಾರವಾಗುವ ದರ್ಜೆಗಿಂತ ಹೆಚ್ಚಿರುವ ಸಾಧ್ಯತೆ ಇರುವುದು ಈ ಬಾರಿ ಹೆಚ್ಚು ವಿದ್ಯಾರ್ಥಿಗಳು ಅಧಿಕ ದರ್ಜೆಯನ್ನು ಪಡೆಯುವುದಕ್ಕೆ ಆಸ್ಪದ ನೀಡಿದಂತಾಗಿದೆ. ಮತ್ತೆ ಅದೇ ಕಾರಣಕ್ಕೆ ಕೆಲವು ವಿಶ್ವವಿದ್ಯಾಲಯಗಳಲ್ಲಿ ಲಭ್ಯ ಇರುವ ಸೀಟುಗಳಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬೇಕಾದ ಸವಾಲು ಈಗ ಉದ್ಭವವಾಗಿದೆ. ವಿಶ್ವವಿದ್ಯಾಲಯವೊಂದರ ತರಗತಿಗಳು ಶಿಕ್ಷಕರು ಸಂಪನ್ಮೂಲಗಳು ಮತ್ತು ಇತರ ವ್ಯವಸ್ಥೆಗಳು ಇಂತಿಷ್ಟೇ ವಿದ್ಯಾರ್ಥಿಗಳಿಗೆ ಹೊಂದುವಂತಿರುವುದು ಮತ್ತೆ ಈ ಸಲ ಹೆಚ್ಚು ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ಒತ್ತಡ ಬಂದಿರುವುದು ಅಂತಹ ವಿದ್ಯಾಲಯಗಳ ಸದ್ಯದ ಸವಾಲಾಗಿದೆ.

ಅಂತಹ ಒಂದು ಯುನಿವರ್ಸಿಟಿ ತನ್ನನ್ನು ಅರ್ಹವಾಗಿ ಆಯ್ಕೆ ಮಾಡಿಕೊಂಡ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಒಂದು ವರ್ಷ ಕಾಯಲು ಹೇಳಿ, ಕಾಯುವಿಕೆಯ ಪರಿಹಾರಾರ್ಥವಾಗಿ ಸ್ವಲ್ಪ ಹಣಕಾಸು ಸಹಾಯ ನೀಡುವುದಾಗಿಯೂ ಹೇಳಿದೆ. ಶೈಕ್ಷಣಿಕ ದರ್ಜೆಯ ಪ್ರಕರಣ ವಿದ್ಯಾರ್ಥಿಗಳಿಗೆ ಮೊದಲಿಗೆ ಸಂಕಟವನ್ನು ನಿರಾಸೆಯನ್ನು ನೀಡಿ ಮತ್ತೆ ನೆಮ್ಮದಿಯಲ್ಲಿ ಕೊನೆಗೊಳ್ಳುತ್ತಿರುವಂತೆ ಕಂಡರೂ ಫಲಿತಾಂಶದ ಮುಂದಿನ ಹಂತವಾದ ಯುನಿವರ್ಸಿಟಿಗಳಲ್ಲಿ ಸೀಟು ಪಡೆಯುವ ಪ್ರಕ್ರಿಯೆ ಸಲೀಸಾಗಿ ಅಂತ್ಯವನ್ನು ಕಾಣಲಿಕ್ಕಿಲ್ಲ ಎಂದೂ ಅನಿಸುತ್ತಿದೆ.

ಇನ್ನು ಪರೀಕ್ಷೆಯೇ ಇಲ್ಲದೆ ವಾದ ವಿವಾದ ಪ್ರತಿಭಟನೆಗಳ ನಡುವೆ ಗೊಂದಲದ ವ್ಯವಸ್ಥೆಯ ಮೂಲಕ ಫಲಿತಾಂಶವನ್ನು ಪಡೆದುಕೊಂಡು ಲಕ್ಷಗಟ್ಟಲೆ ವಿದ್ಯಾರ್ಥಿಗಳು ತಮ್ಮ ಈ ಬಗೆಯ ಗ್ರೇಡುಗಳನ್ನು ಭವಿಷ್ಯದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳೂ ಉದ್ಯೋಗ ನೀಡುವ ಕಂಪೆನಿಗಳೂ ಅಥವಾ ಗಂಭೀರವಾಗಿ ಪರಿಗಣಿಸಬೇಕಾದ ಇನ್ಯಾರೋ ಗೌರವದಿಂದ ಸ್ವೀಕರಿಸಿಯಾರೇ ಅಥವಾ ಸಂಶಯದಲ್ಲಿ ನೋಡಿಯಾರೇ ಎನ್ನುವ ತಳಮಳದಲ್ಲೂ ಇದ್ದಾರೆ.

ವಿದ್ಯಾರ್ಥಿ ಲೋಕದ ಅನಿರೀಕ್ಷಿತ ಬೆಳವಣಿಗೆಗಳು ನಿರೀಕ್ಷಿತ ಮಾದರಿಯಲ್ಲಿ ಮುಂದುವರಿಯುತ್ತಿವೆ ಎಂದೂ ತಮ್ಮ ಸ್ಥಿತಿಯ ಬಗೆಗೆ ತಾವೇ ವ್ಯಂಗ್ಯ ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ನಿರಾಸೆ, ಹತಾಶೆಗಳು ಈ ಸಮಯದ ಅತಿ ದೊಡ್ಡ ಸಂದಿಗ್ಧವೊ ಸಂಕಷ್ಟವೊ ಆಗಿರದಿರಬಹುದು, ವೈರಾಣುವಿನ ನೇರ ಶಿಕಾರಿಯ ಆಸುಪಾಸಿನವರು ಅನುಭವಿಸುವ ಹಾನಿಯ ಹೋಲಿಕೆಯೂ ಇದಲ್ಲದಿರಬಹುದು. ಆದರೆ ದಶಕಗಳ ಶತಮಾನಗಳ ಇತಿಹಾಸ ಇರುವ ವ್ಯವಸ್ಥೆಗಳು ಸಧೃಡ ಎನಿಸಿಕೊಂಡ ಸಾಮಾಜಿಕ ರಚನೆಗಳು ಈ ಸಮಯದ “ಸೈಡ್ ಎಫೆಕ್ಟ್”ಗಳಿಗೆ ವಿಚಲಿತವಾಗಿ ಅದರ ಭಾಗವಾಗಿರುವವರಿಗೆ ಅನಿರೀಕ್ಷಿತ ಸಂಕಟವನ್ನೂ ದೀರ್ಘಕಾಲೀನ ಪರಿಣಾಮವನ್ನೂ ಉಂಟುಮಾಡುತ್ತಿವೆ. ಆಶಯ ಆಶಾವಾದ ನಿರೀಕ್ಷೆಗಳನ್ನು ಪಣಕ್ಕೆ ಒಡ್ಡುವ ಅಹಿತಕರ ಪ್ರಸಂಗಗಳಾಗಿ ದಾಖಲಾಗುತ್ತಿವೆ.