”ಕನ್ನಡ ನಾಡಿಗೆ ಬರುವ ಪರಭಾಷೆಯವರನ್ನೆಲ್ಲ ಅವರ ಭಾಷೆಯಲ್ಲಿಯೇ ಮಾತನಾಡಿಸುತ್ತ ಅವರಿಗೆ ಕನ್ನಡ ಕಲಿಯಲು ಅವಕಾಶವನ್ನೇ ಕೊಡದ ಹಲವು ಕನ್ನಡಿಗರು ಇಲ್ಲಿಯೂ ಅದೇ ಚಾಳಿಯನ್ನು ಮುಂದುವರೆಸಿದ್ದಾರೆ.ಬ್ರಿಟಿಷರ ಮೇಲೆ ಬಿದ್ದು ನಾವು ನಿಮ್ಮಂತೆಯೇ ಎಂದು ರುಜುವಾತು ಪಡಿಸುವ ಭರದಲ್ಲಿ ಅವರಿಗೆ ಮುದವನ್ನೂ, ಮನರಂಜನೆಯನ್ನೂ ಒದಗಿಸಿಕೊಟ್ಟು ತಮ್ಮತನವನ್ನು ಮಾರಾಟ ಮಾಡಿಕೊಂಡು ಎಲ್ಲಿಯೂ ಸೇರಲಾಗದ ಎಡಬಿಡಂಗಿಗಳಾಗಿ ಹೋಗಿದ್ದಾರೆ.ಇಂತವರು ಬ್ರಿಟಿಷರ ಬಾಲ ಬಡುಕರಾಗಿ, ಭಾರತವನ್ನು ವಾಚಾಮಗೋಚರ ಬಯ್ದುಕೊಳ್ಳುವುದನ್ನು ಸಹಿಸುವುದು ಕಷ್ಟ.”
ಡಾ.ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ.

 

“ಬ್ರಿಟಿಷರು ಭಾರೀ ರೇಸಿಸ್ಟ್ ಗಳಂತೆ, ಹೌದಾ? ..” ಎನ್ನುವ ಪ್ರಶ್ನೆಯನ್ನು ಬಹಳಷ್ಟು ಜನ ನನ್ನನ್ನು ಕೇಳಿದ್ದಾರೆ. ಅದರಲ್ಲೂ ಬ್ರಿಟನ್ನಿನ ವಿಚಾರ ಬಂದಾಗ ಇಡೀ ಜಗತ್ತಿಗೇ ಈ ಸಂದೇಹ ಬಂದರೆ ಅದರಲ್ಲಿ ತಪ್ಪೂ ಇಲ್ಲ. ಯಾಕೆಂದರೆ ಬ್ರಿಟಿಷರ ಚರಿತ್ರೆಯ ಕರಾಳ ಮುಖಗಳು ಹಲವು.

ಜಗತ್ತಿನ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ತಮ್ಮ ಕಬಂಧ ಬಾಹುಗಳನ್ನು ಹರಡಿ ಆಯಾ ಪ್ರಾಂತೀಯ ಜನರನ್ನು ಶೋಷಿಸಿದ ಬ್ರಿಟಿಷರ ಕುಖ್ಯಾತಿ ಎಲ್ಲರಿಗೂ ತಿಳಿದ ವಿಚಾರವೇ. ಆಫ್ರಿಕಾದ ಜನರನ್ನು ದಾಸ್ಯ ಪದ್ಧತಿಯಿಂದ ದಮನಿಸಿದರೆ, ನೆರೆ ಹೊರೆಯ ಸ್ಕಾಟರನ್ನು, ಐರಿಷರನ್ನು ಅಸ್ಪ್ರೃಶ್ಯರಂತೆ ನಡೆಸಿಕೊಂಡವರು ಅವರು. ದೂರದ ವಸಾಹತುಶಾಹಿ ನೆಲಗಳಲ್ಲಿ ಜನರನ್ನು ಬೂಟುಗಾಲಿನಲ್ಲಿ ಮಾತನಾಡಿಸಿದ, ಅವರ ನ್ಯಾಯಯುತ ಪ್ರಶ್ನೆಗಳಿಗೆ ಗುಂಡುಗಳ ಮೂಲಕ ಉತ್ತರಿಸುತ್ತಿದ್ದ ಬ್ರಿಟಿಷರ ಪದ್ಧತಿಗಳು ಇತಿಹಾಸದ ಪುಟಗಳಲ್ಲಿ ಕಡು ಕಪ್ಪು ಕಲೆಗಳಾಗಿ ನಿಂತಿವೆ. ಆದರೆ ತನ್ನದೇ ಸಾಮಾಜಿಕ, ರಾಜಕೀಯ ವೈಚಾರಿಕತೆ ಬದಲಾದಂತೆಲ್ಲ ಈ ನೆಲವೂ, ಜನರೂ ಬದಲಾಗಿದ್ದಾರೆ. ಹಾಗಾಗಿ ಇದೀಗ ಬ್ರಿಟನ್ನಿನಲ್ಲಿ ಹಿಂದಿದ್ದಕ್ಕಿಂತ ಬದಲಾದ ಪರಿಸರವಿದೆ. ಅತ್ಯಂತ ಮೃದು ಎನ್ನಬಹುದಾದ ನೀತಿಗಳಿವೆ. ರೇಸಿಸಂ ಇಲ್ಲದ ದೇಶಗಳ್ಯಾವು ಇಲ್ಲದ ಈ ಕಾಲದಲ್ಲಿ ಬ್ರಿಟನ್ನಿನ ನಮ್ಮ ಬದುಕು ಅತ್ಯಂತ ಕಡಿಮೆ ರೇಸಿಸಂನ್ನು ನೋಡಿದೆ ಎಂದು ಹೇಳಬಹುದು.

ಒಂದಂತೂ ನಿಜ. ನಾವು ಯಾವುದೇ ದೇಶಕ್ಕೆ ಹೋದರೂ, ವಿದೇಶಿಯರು ಎಂದ ಮೇಲೆ ನಾವು ಎರಡನೇ ದರ್ಜೆಯ ಪ್ರಜೆಗಳೇ ಸರಿ. ಅದು ಇಂಗ್ಲೆಂಡಿಗೂ ನಿಜ. ಆದರೆ ಭಾರತೀಯರಾಗಿದ್ದುಕೊಂಡೇ ಭಾರತದಲ್ಲಿ ದುಡ್ಡಿಲ್ಲದಿದ್ದರೆ, ವಶೀಲಿಯಿಲ್ಲದಿದ್ದರೆ ನಾವು ಮೂರನೆಯ ದರ್ಜೆಯ ಪ್ರಜೆಗಳು ತಾನೇ? ಈ ಅರಿವಿದ್ದರಂತೂ ಮಿಕ್ಕಿದ್ದೆಲ್ಲ ಗೌಣವೇ ಸರಿ. ಯು.ಕೆ.ಯಲ್ಲಿ ಭಾರತೀಯರು, ಸ್ಪೇನಿನವರು, ಪಾಕಿಸ್ತಾನಿಗಳು, ಚೀನೀಯರು, ಆಫ್ರಿಕನ್ನರು, ಪೋಲಿಶ್ ಗಳು, ರೊಮೇನಿಯಾದವರು, ಲಿತುವೇನಿಯಾ, ಮೆಕ್ಸಿಕೋ, ಬ್ರೆಝಿಲ್, ಕೊರಿಯಾ, ಕೊಲ್ಲಿ ದೇಶದವರು, ಸಿರಿಯಾ, ಈಜಿಪ್ಟ, ಟರ್ಕಿ ಇನ್ನೂ ಹತ್ತು ಹಲವು ದೇಶಗಳ ಜನರಿದ್ದಾರೆ. ಇವರೆಲ್ಲರನ್ನು ಸಹಿಸಿಕೊಳ್ಳಬೇಕಾದ ಸಾಮಾನ್ಯ ಬ್ರಿಟನ್ನಿಗನ ಮನಸ್ಸಿನ ವೈಶಾಲ್ಯವೋ, ಕಾನೂನುಗಳ ಹಿಡಿತವೋ ಅಂತೂ ಗೌರವದಿಂದ ನಡೆದುಕೊಳ್ಳುವ ಈ ಜನರ ಬಗ್ಗೆ ಎಂದೂ ಬೇಸರವಿಲ್ಲ. ನಮ್ಮ ವರ್ತನೆಯಿಂದಲೋ, ಬಣ್ಣ ಅಲಂಕಾರದಿಂದಲೋ ನಾವು ಇವರಿಂದ ಬಹು ಭಿನ್ನವಾಗಿ ಕಂಡರೂ ಇವರುಗಳು ನಮ್ಮನ್ನು ಕೆಕ್ಕರಿಸಿ ನೋಡುವುದಿಲ್ಲ. ಚುಡಾಯಿಸುವುದಿಲ್ಲ. ಹಂಗಿಸುವುದಿಲ್ಲ. ಅಕಸ್ಮಾತ್ ಅಲ್ಲಿನ ಮಕ್ಕಳು ಕಣ್ಣರಳಿಸಿ ನಮ್ಮ ಕುಂಕುಮವನ್ನೋ, ಬಟ್ಟೆಯನ್ನೋ ನೋಡಿದರೆ ಅದಕ್ಕಿಂತ ಹೆಚ್ಚಿಲ್ಲ. ಆದರೆ ಟರ್ಬನ್ ಸುತ್ತಿ, ಬಣ್ಣ ಬಣ್ಣದ ಲುಂಗಿಯ ಉಡುಗೆಯಲ್ಲಿ ಆಫ್ರಿಕನ್ನಳೊಬ್ಬಳು ಬಂದರೆ ಇವರಿಗಿನ್ನ ಹೆಚ್ಚಾಗಿ ನಾವುಗಳು ಅವರನ್ನು ದುರುಗುಟ್ಟಿ ನೋಡುವುದನ್ನು ಬಿಟ್ಟಿಲ್ಲ! ಅವಳು ಎತ್ತರ, ಇವಳು ಕುಳ್ಳಿ, ಅಂವ ದಪ್ಪ, ಇವರ ಬಳಿ ದುಡ್ಡಿಲ್ಲ ಎನ್ನುವುದನ್ನು, ಅವರು ದೊಡ್ಡ ಮನುಷ್ಯರು, ಇವರು ಕಿಮ್ಮತ್ತಿಲ್ಲದವರು ಎಂದು ಎತ್ತಿ ಆಡುವವರು ನಾವೇ.

ಬಿಹಾರದಿಂದ ಬೆಂಗಳೂರಿಗೆ ಜನ ವಲಸೆ ಬಂದರೆ ಸಹಿಸದ ನಾವುಗಳು ಸಹಿಷ್ಣುತೆಯ ಬಗ್ಗೆ ಮಾತನಾಡಲು ಸಭ್ಯರೇ? ಆ ಜಾತಿಯವರು ಅಂತ, ಈ ಕುಲದವರು ಅಂತ, ವಯಸ್ಸಿನಲ್ಲಿ ಸಣ್ಣವಳು, ರೂಪಿನಲ್ಲಿ ದೊಡ್ಡವಳು, ದುಡ್ಡಿದ್ದರೆ ಹತ್ತು ತಲೆಯ ಮಿದುಳಿದೆ ಎಂದೆಲ್ಲ ನಮ್ಮ ಸಮಾಜವೇ ನಮ್ಮನ್ನು ಕಾಯಿಸಿ, ಗೋಳು ಹುಯ್ದುಕೊಂಡು, ಅತ್ಯಾಚಾರವೆಸಗುವ ಕಾರಣ ಭಾರತೀಯರಾದ ನಾವು ಸಣ್ಣ- ಪುಟ್ಟ ವಿಚಾರಗಳನ್ನೆಲ್ಲ ಕುಂಡೆಯ ಕೆಳಗೆ ಇಟ್ಟುಕೊಂಡು ನಿರುಮ್ಮಳವಾಗಿ ಇದ್ದು ಬಿಡುತ್ತೇವೆ. ಅಷ್ಟಾದರೆ ಪರವಾಗಿಲ್ಲ.

ನನ್ನ ಒಬ್ಬ ಸಹೋದ್ಯೋಗಿಯೊಬ್ಬಳು ರೊಮೇನಿಯಾದಿಂದ ಬಂದವಳು. ಇಪ್ಪತ್ತು ವರ್ಷಗಳಿಂದ ಇಲ್ಲಿಯೇ ಬದುಕಿರುವ ಅವಳಲ್ಲಿ ತಾನು ರೊಮೇನಿಯಾದವಳು ಎನ್ನುವ ಕೀಳರಿಮೆ ಅದೆಷ್ಟಿತ್ತೆಂದರೆ ಯಾವಾಗಲೂ “ನಾನು ಬಿಳಿಯರಿಗಿಂತ ಬಿಳಿಯಳು ಗೊತ್ತಾ?” ಎಂದುಕೊಂಡೇ ಬ್ರಿಟಿಷರಿಗೆ ಸದಾ ಬೆನ್ನು ಬಾಗಿಸಿ ಓಡಾಡಿಕೊಂಡಿದ್ದವಳು. ಹೀಗೇಕೆ ಎಂದು ಬ್ರಿಟನ್ನಿಗರೇ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳಬೇಕಾದ ಸ್ಥಿತಿ. ಕನ್ನಡ ನಾಡಿಗೆ ಬರುವ ಪರಭಾಷೆಯವರನ್ನೆಲ್ಲ ಅವರ ಭಾಷೆಯಲ್ಲಿಯೇ ಮಾತನಾಡಿಸುತ್ತ ಅವರಿಗೆ ಕನ್ನಡ ಕಲಿಯಲು ಅವಕಾಶವನ್ನೇ ಕೊಡದ ಹಲವು ಕನ್ನಡಿಗರು ಇಲ್ಲಿಯೂ ಅದೇ ಚಾಳಿಯನ್ನು ಮುಂದುವರೆಸಿದ್ದಾರೆ. ಬ್ರಿಟಿಷರ ಮೇಲೆ ಬಿದ್ದು ನಾವು ನಿಮ್ಮಂತೆಯೇ ಎಂದು ರುಜುವಾತು ಪಡಿಸುವ ಭರದಲ್ಲಿ ಅವರಿಗೆ ಮುದವನ್ನೂ, ಮನರಂಜನೆಯನ್ನೂ ಒದಗಿಸಿಕೊಟ್ಟು ತಮ್ಮತನವನ್ನು ಮಾರಾಟ ಮಾಡಿಕೊಂಡು ಎಲ್ಲಿಯೂ ಸೇರಲಾಗದ ಎಡಬಿಡಂಗಿಗಳಾಗಿ ಹೋಗಿದ್ದಾರೆ. ನಮ್ಮ ದೇಶದ ಒಳ್ಳೆಯತನದ ಬಗ್ಗೆ ಕೆಲವು ಭಾರತೀಯರಲ್ಲಿ ಸ್ವಲ್ಪವೂ ಅರಿವಿಲ್ಲ. ಅವರ ಪದವಿ, ಹಣ, ಹುದ್ದೆಗಳು ಅವನ್ನು ಅವರಿಗೆ ಈ ಅರಿವನ್ನು ನೀಡುವುದಿಲ್ಲ. ಇಂತವರು ಬ್ರಿಟಿಷರ ಬಾಲ ಬಡುಕರಾಗಿ, ಭಾರತವನ್ನು ವಾಚಾಮಗೋಚರ ಬಯ್ದುಕೊಳ್ಳುವುದನ್ನು ಸಹಿಸುವುದು ಕಷ್ಟ.

ನಮ್ಮ ವರ್ತನೆಯಿಂದಲೋ, ಬಣ್ಣ ಅಲಂಕಾರದಿಂದಲೋ ನಾವು ಇವರಿಂದ ಬಹು ಭಿನ್ನವಾಗಿ ಕಂಡರೂ ಇವರುಗಳು ನಮ್ಮನ್ನು ಕೆಕ್ಕರಿಸಿ ನೋಡುವುದಿಲ್ಲ. ಚುಡಾಯಿಸುವುದಿಲ್ಲ. ಹಂಗಿಸುವುದಿಲ್ಲ. ಅಕಸ್ಮಾತ್ ಅಲ್ಲಿನ ಮಕ್ಕಳು ಕಣ್ಣರಳಿಸಿ ನಮ್ಮ ಕುಂಕುಮವನ್ನೋ, ಬಟ್ಟೆಯನ್ನೋ ನೋಡಿದರೆ ಅದಕ್ಕಿಂತ ಹೆಚ್ಚಿಲ್ಲ.

ಹಾಗೇ ಬ್ರಿಟಿಷರೆಲ್ಲ ಕೆಟ್ಟವರು ಎಂಬ ಅಜ್ಞಾನವಿರುವ ವಿದೇಶೀಯ ಜನರೂ ಇಲ್ಲಿದ್ದಾರೆ. ಇಂಥ ಭಾವ ಕೂಡ ಒಳ್ಳೆಯದಲ್ಲ. ಇಂತವರು ಯಾವತ್ತಿಗೂ ಅರ್ಧ ದಾರಿ ಕ್ರಮಿಸಿ ಇಲ್ಲಿನ ಜನರೊಂದಿಗೆ ಬೆರೆಯದೆ ತಮ್ಮದೇ ವರ್ತುಲಗಳಲ್ಲಿ ಬದುಕಿ ಸಾಯುತ್ತಾರೆ. ಬ್ರಿಟನ್ನಿಗೆ ತಾವಾಗೇ ಮೇಲೆ ಬಿದ್ದು ಬಂದು ಇಲ್ಲಿಯ ತತ್ವ, ಭಾಷೆ, ಸಂಸ್ಕೃತಿಯನ್ನು, ಸಾಮಾಜಿಕ ನಡಾವಳಿಗಳನ್ನು ಧಿಕ್ಕರಿಸುತ್ತ, ಜರಿಯುತ್ತ ಬದುಕಿ ಬ್ರಿಟಿಷರ ಪಾಲಿಗೆ ಮುಳ್ಳಾಗಿದ್ದಾರೆ. ಇವರು ಬ್ರಿಟಿಷರ ಒಳ್ಳೆಯತನವನ್ನು, ಸಹಿಷ್ಣುತೆಯನ್ನು ಒಂದಿನಿತೂ ಗುರುತಿಸದೆ, ಬ್ರಿಟನ್ ಮತ್ತೆ ಶಿಲಾಯುಗಕ್ಕೆ ಹೋಗಬೇಕೆಂದು ಬಯಸಿ ಇನ್ನಿತರ ಹಲವು ವಿದೇಶಿಯರ ಗೌರವಕ್ಕೂ ಚ್ಯುತಿ ತರುತ್ತಾರೆ!

ಇದೇ ತತ್ವವನ್ನು ಬ್ರಿಟಿಷರಿಗೂ ಅನ್ವಯಿಸಬಹುದು. ಅವರಲ್ಲೂ ಪ್ರಬುದ್ಧ ಜನರಿಗೆ ವಿದೇಶಿ ಕೆಲಸಗಾರರು ಯಾಕೆ ತಮ್ಮ ದೇಶದಲ್ಲಿದ್ದಾರೆ ಎಂಬ ಅರಿವಿದೆ. ಗೌರವವೂ ಇದೆ. ಮಿದುಳಿನ ತುಂಬ ವಿದೇಶಿಯರಿಂದ ತಮ್ಮ ದೇಶಕ್ಕೆ ಸಿಕ್ಕಿರುವ ಅನುಕೂಲಗಳ ಬಗ್ಗೆ ಇವರಲ್ಲಿ ಆಳವಾದ ಅರಿವಿದ್ದು, ಹೊಂದಿಕೊಂಡು ಹೋಗುತ್ತಾರೆ. ಇದೇ ವಿಚಾರದ ಬಗ್ಗೆ ಇನಿತೂ ಅರಿವಿಲ್ಲದವರು ವರ್ಣೀಯತೆಯ ಆಧಾರದ ಮೇಲೆ ವಿದೇಶಿಗರ ಕೊಲೆಯನ್ನೂ ಮಾಡಿಬಿಡುತ್ತಾರೆ. ಒಟ್ಟಾರೆ ಸಮಾಜದಲ್ಲಿ ಎಲ್ಲ ಬಗೆಯ ಜನರಿದ್ದಾರೆ. ಇತ್ತೀಚೆಗಿನ ಗಲಭೆ, ಯುದ್ಧದ ವಿದ್ಯಮಾನಗಳು ಈ ವಿಚಾರವನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಿವೆ. ಲಿಬಿಯಾ, ಸಿರಿಯ, ಆಫ್ಘಾನಿಸ್ತಾನ, ಇರಾನ್, ಇರಾಕ್, ಹಲವು ಆಫ್ರಿಕಾ ದೇಶದ ಜನರು ತಮ್ಮ ದೇಶಗಳ ಆಂತರಿಕ ಯುದ್ಧ, ಗಲಭೆ, ಕೊಲೆ, ಸುಲಿಗೆಗಳಿಂದ ಪಾರಾಗಲು ಯೂರೋಪಿನ ಕಡೆ ವಲಸೆ ಬಂದು ಎಲ್ಲ ದೇಶಗಳೂ ತತ್ತರಿಸುವಂತೆ ಮಾಡಿದ್ದಾರೆ. ಇವರೆಲ್ಲರ ಕನಸೆಂದರೆ ಇಂಗ್ಲೆಂಡಿಗೆ ಬರುವುದು. ಇಂಗ್ಲೆಂಡಿನ ಇಂದಿನ ಉದಾರ ನೀತಿಗಳ ಪ್ರಯೋಜನ ಪಡೆದುಕೊಳ್ಳುವುದೇ ಇಂತಹ ವಲಸೆಗಾರರ, ನಿರಾಶ್ರಿತರ ಗುರಿಯೂ ಆಗಿದೆ. ಇಂಗ್ಲೆಂಡಿನಲ್ಲಿ ರೇಸಿಸಂ ಅಷ್ಟೊಂದು ಇದ್ದಿದ್ದರೆ ಇವರೆಲ್ಲ ಬೇರೊಂದು ದೇಶವನ್ನು ಅರಸಿಕೊಂಡು ಹೋಗುತ್ತಿದ್ದರೇನೋ?

ಪ್ರಾಣ ಬಿಟ್ಟಾದರೂ ಯು.ಕೆ.ಗೆ ಬರಬೇಕೆನ್ನುವ ಇಂತಹ ನಿರಾಶ್ರಿತ ಜನರೊಡನೆ ಪೂರ್ವ ಯೂರೋಪಿನ ಜನರು ಕೂಡ ಪೈಪೋಟಿಯ ಮೇಲೆ ಕೆಲಸ ಮತ್ತು ಅವಕಾಶಗಳನ್ನರಸಿ ಇಲ್ಲಿಗೆ ಲಗ್ಗೆಯಿಡತೊಡಗಿದ ವರ್ಷಗಳಲ್ಲಿ ಸರಕಾರ, ಸಮಾಜ ಎರಡೂ ತತ್ತರಿಸಿದ್ದು ಸುಳ್ಳಲ್ಲ. ಈ ರೀತಿಯ ವಲಸೆಯಿಂದಾಗಿ ಇಲ್ಲಿಯ ಶಾಲೆಗಳಲ್ಲಿ ಮಕ್ಕಳಿಗೆ ಸೀಟು ದೊರಕುವುದು ದುರ್ಲಭವಾಯಿತು. ಒಂದು ಚಿಕಿತ್ಸೆಗಾಗಿ ಕಾಯುವ ಕಾಲ ಹದಿನಾರು ಪಟ್ಟು ಹೆಚ್ಚಿತು. ಒಂದು ಕೆಲಸಕ್ಕೆ 40 ಅರ್ಜಿಗಳ ಬದಲಾಗಿ ಐನೂರು ಅರ್ಜಿಗಳು ದಾಖಲಾದವು. ಇಲ್ಲಿಯ ಜನರ ಹಾಹಾಕಾರವೂ ಹೆಚ್ಚಾಯಿತು. ನಿಯಂತ್ರಣವೇ ಇಲ್ಲದ ಈ ವಲಸೆಯ ನಿಯಮದಿಂದ ಎತ್ತಲೂ ಹಿಗ್ಗಲಾಗದ ಈ ಸಿರಿವಂತ ಪುಟ್ಟ ದ್ವೀಪ ನಲುಗಿಹೋಗಿದೆ. ಕೋಮುದ್ವೇಷಗಳು ಜನರ ಮನಸ್ಸಿನಲ್ಲಿ ಹೊಗೆಯಾಡಿದ್ದು ನಿಜ. ಕೆಲವು ರಸ್ತೆಬದಿಯ ಜಾಗದಲ್ಲಿ ‘ನಮ್ಮ ದೇಶ ಬಿಟ್ಟು ತೊಲಗಿ’ ಎನ್ನುವ ದೊಡ್ಡ ದೊಡ್ಡ ಫಲಕಗಳು ಕಾಣಿಸಿದ್ದೂ ಉಂಟು. ‘ಇದಕ್ಕೆ ಮಣಿದ ಸರ್ಕಾರ ಜನರ ಪ್ರಶ್ನೆಗಳಿಗೆ ಸ್ಪಂದಿಸಿ ಅವರೇ ಓಟು ಹಾಕುವಂತೆ ಮಾಡಿ ಬ್ರಿಟನ್ನನ್ನು ‘ಬ್ರೆಕ್ಸಿಟ್’ ಜಂಜಾಟದಲ್ಲಿ ದೂಕಿತು. ಪ್ರಧಾನಿ ರಾಜೀನಾಮೆ ನೀಡಬೇಕಾಯಿತು. ಇಡೀ ದೇಶ ಯೂರೋಪಿಯನ್ ಯೂನಿಯನ್ನಿನ ಹಿಡಿತದಿಂದ ಹೊರಬರಲು ಯೋಜನೆಗಳನ್ನು ತರಲು ಸತತ ಎರಡು ವರ್ಷಗಳಿಂದ ದುಡಿಯುತ್ತಿದೆ. ಪೌಂಡಿನ ಬೆಲೆಯೂ ಕುಸಿದಿದೆ. ಇಷ್ಟೆಲ್ಲ ಆಗಿಯೂ ದೇಶದಲ್ಲಿ ಇನ್ನೂ ಶಾಂತಿ ಉಳಿದಿದೆ. ರೇಸಿಸಂ ಗೆ ಸಂಬಂಧ ಪಟ್ಟ ಘಟನೆಗಳು ಬೆರಳೆಣಿಕೆಗಿಂತ ಕಡಿಮೆಯೆನ್ನಬಹುದು.

ನಾವು ಇಲ್ಲಿಗೆ ಬಂದಾಗ ವೈದ್ಯರಿಗೆ ಭಾರೀ ಬೇಡಿಕೆಯಿತ್ತು. ಈ ದೇಶದಿಂದ, ಒ.ಬಿ.ಇ. ಪಟ್ಟ ಗಳಿಸಿದ್ದ ಭಾರತೀಯ ಮೂಲದ ಡಾ. ರಾಜ ರಾಜನ್ ರಾಯನ್ ಭಾರತಕ್ಕೆ ಬಂದು ದಂತ ವೈದ್ಯರು ಬ್ರಿಟನ್ನಿಗೆ ಬೇಕೆಂದು ರಸ್ತೆ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಹೋಗಿದ್ದ ಕಾಲದಲ್ಲಿಯೇ ನಾವು ಈ ದೇಶಕ್ಕೆ ಬಂದದ್ದು. ಹಾಗಾಗಿ ನನ್ನ ಮೊದಲ ವರ್ಷದ ವೃತ್ತಿಯ ಬಹಳಷ್ಟು ತಯಾರಿಗೆ ಸರ್ಕಾರವೇ ಬಿಟ್ಟಿ ಅವಕಾಶವನ್ನು, ತರಬೇತಿಯನ್ನು ಕಲ್ಪಿಸಿತ್ತು. ಇಂತಹ ಅಗತ್ಯಗಳ ಬಗ್ಗೆ, ಸರ್ಕಾರದ ಬದ್ಧತೆಗಳ ಬಗ್ಗೆ ಅರಿವಿಲ್ಲದ ಜನರು ಇವರು ಹೊಟ್ಟೆಹೊರೆಯಲು ಬಂದ ವಿದೇಶೀ ಬಡಜನರು ಎಂಬ ದೋರಣೆಯನ್ನೂ ತೋರಿಸುವುದು ಬಹಳ ನಿಜ. ಒಂದೊಮ್ಮೆ ನಾನೊಂದು ಸಣ್ಣ ಬಟ್ಟೆಯ ಅಂಗಡಿಯಲ್ಲಿ ಯಾವುದೋ ಐಟಂ ಎಲ್ಲಿದೆ ಎಂದು ಸೇಲ್ಸ್ ಸಹಾಯಕಿಯನ್ನು ಕೇಳಿದೆ. ಅಲಂಕಾರವಿಲ್ಲದ, ಸಾಧಾರಣ ಬಟ್ಟೆಯಲ್ಲಿದ್ದ ನನಗೆ ಆಕೆ ಅದೆಲ್ಲಿದೆ ಎಂದು ತೋರಿಸಿ ಜೊತೆಯಲ್ಲೇ ಮುಂದೆ ಸ್ವಲ್ಪ ದೂರದಲ್ಲಿ ದರ್ಮಾರ್ಥ (ಚಾರಿಟಿಯ) ದ ಅಂಗಡಿಯಲ್ಲಿ ಇದು ಅಗ್ಗವಾಗಿ ಸಿಗುತ್ತದೆ ಎಂದು ಹೇಳಿದಳು. ಅವಳು ಹೇಳಿದ್ದರಲ್ಲಿ ಬಡವಿಯೊಬ್ಬಳಿಗೆ ಸಹಾಯ ಮಾಡುವ ಉದ್ದೇಶವೂ ಜೊತೆಗೆ ಬಡದೇಶದ ಜನರೆಂಬ ಪೂರ್ವಾಗ್ರಹಗಳೂ ಇದ್ದುದು ನಿಜ. ಹಾಗಂತ ಇದನ್ನು ‘ರೇಸಿಸಂ’ ಎಂದು ನಾನು ಭಾವಿಸುವುದಿಲ್ಲ.

ವರ್ಣಬೇಧ ನೀತಿ ಸುಲಭ ಸಾದ್ಯಕ್ಕೆ ಹೋಗುವಂತದ್ದಲ್ಲ. ಮುಂದೆ ಹಾ..ಹೀ… ಎಂದು ಮಾತಾಡಿಕೊಂಡರೂ ಸಾಮಾನ್ಯ ಜನರ ಮನಸ್ಸಿನಲ್ಲಿ ತಾರತಮ್ಯ ಇದ್ದೇ ಇರುತ್ತದೆ. ಕಡಿಮೆ ತಿಳುವಳಿಕೆ, ಶಿಕ್ಷಣಗಳಿರುವ ಜನರ ಮನಸ್ಸಿನಲ್ಲಿ ಈ ತೆರನಾದ ಭಾವನೆ ಇನ್ನೂ ದಟ್ಟವಾಗಿರುತ್ತದೆ. ನಮ್ಮಲ್ಲಿನ ಜಾತ್ಯಾತೀತಯೇ ಮರೆಯಾಗಿರದ ಈ ಕಾಲದಲ್ಲಿ ವರ್ಣೀಯತೆ, ವಿದೇಶಿಗರೆಂಬ ಭೇದ ಇವರಲ್ಲಿ ಇಲ್ಲದಿರುವುದು ಸಾಧ್ಯವಿಲ್ಲ. ಕಾನೂನಿನ ರಕ್ಷಣೆ, ಕೆಲಸದಲ್ಲಿನ ಸಮಾನತೆಯ ನಿಯಮ, ಬ್ರಿಟಿಷರ ಸಂಭಾವಿತ ತೋರು ನಡವಳಿಕೆಗಳ ನಡುವೆ ಬದುಕು ಸಾಗಿಸಿದರೂ ನಮ್ಮ ನಿಜವಾದ ಸ್ನೇಹಗಳು- ಸಂಬಂಧಗಳು ನಮ್ಮ ನಮ್ಮ ಜನರ ನಡುವೆಯೇ. ಇದು ಬ್ರಿಟನ್ನಿನಲ್ಲೂ ಮತ್ತು ಇತರೆ ದೇಶಗಳಲ್ಲೂ ಆಗುವಂಥದ್ದೇ. ಆದರೆ ಇದಕ್ಕೆ ಹೊರತಾಗಿಯೂ ಎಲ್ಲರನ್ನೂ ಸಮಾನವಾಗಿ ಕಾಣುವ ಹಲವು ಜನರೂ ಇದ್ದಾರೆ ಎನ್ನುವುದು ಖುಷಿಯ ಸಂಗತಿ.

ಪಾಶ್ಚಿಮಾತ್ಯ ದೇಶಗಳಿಗೆ ಬರುವ ಭಾರತೀಯರು ದೊಡ್ಡ ಹುದ್ದೆಗಳಿಗೆ, ಇಂಜಿನಿಯರು, ವೈದ್ಯರುಗಳ ಪದವಿಗಳಿಗೆ ಭರ್ತಿಯಾಗುವ ಕಾರಣ ಜನಸಾಮಾನ್ಯರ ಕಿಡಿಗಳಿಗೆ ಅಷ್ಟಾಗಿ ತುತ್ತಾಗುವುದಿಲ್ಲ ಎನ್ನಬಹುದು. ನಾವು ಕೆಲಸದಲ್ಲಿ ಅತಿ ನಿಷ್ಠವಾಗಿ, ಪ್ರಾಮಾಣಿಕವಾಗಿ ದುಡಿಯುತ್ತೇವೆ. ಇವರಿಗೆ ಬೇಡವಾದ ಜಾಗಗಳಿಗೆ, ಹುದ್ದೆಗಳಿಗೆ ಮುಗಿಬಿದ್ದು ನಮ್ಮ ಅನ್ನವನ್ನು ದುಡಿಯುವ ಅವಕಾಶಗಳನ್ನು ಬೇಡುತ್ತೇವೆ. ‘ಸರ್ವೈವಲ್’ ಎನ್ನುವ ಘಟ್ಟದಿಂದ ಶುರುಮಾಡಿ, ಕೂಡಿಟ್ಟು ಅಡಕವಾಗಿ ಬದುಕಿ ನಮ್ಮ ಮಕ್ಕಳ ಭವಿಷ್ಯಕ್ಕೆ ಉತ್ತಮ ಬುನಾದಿ ಹಾಕುತ್ತೇವೆ. ಹಲವು ಬಾರಿ ‘ರೇಸಿಸಂ’ ನ ವಾಸನೆ ದಟ್ಟವಾಗಿ ಬಂದರೂ ಅದನ್ನು ಸಹಿಸಿಕೊಂಡು ಬದುಕದೆ ಬೇರೆ ದಾರಿಯಿರುವುದಿಲ್ಲ. ನಮ್ಮ ದೇಶದಲ್ಲಿ ಇದೇ ಆದರೆ ನಾವೇನು ಮಾಡಬಲ್ಲೆವು ಎನ್ನುವ ವಾಸ್ತವಕ್ಕೆ ಯಾವ ಉತ್ತರವೋ ಅದನ್ನು ನೆನೆದು ಇಲ್ಲಿಯೂ ನಮಗೆ ಅದೇ ಆಗುತ್ತಿಲ್ಲವೇ ಎಂಬ ಉದಾಸೀನ, ಸಹನೆ ಮತ್ತು ತುಲನೆಗಳು ನಮ್ಮನ್ನು ಕಾಯುತ್ತವೆ. ನಾವಿಲ್ಲಿ ಮೈನಾರಿಟಿಯ ಜನ, ನಮ್ಮ ಬದುಕು ಸಂಸ್ಕೃತಿಗಳಲ್ಲಿ ಹಾಸುಹೊಕ್ಕಾಗಿ ಬರುವ ತತ್ವಜ್ಞಾನ ನಮ್ಮನ್ನು ನಡೆಸುತ್ತದೆ. ಹಾಗಿದ್ದೂ ಅನ್ಯಾಯ ಆದಲ್ಲಿ ಅದಕ್ಕೆ ನ್ಯಾಯ ಸಿಗುವ ಸಾಧ್ಯತೆ ಭಾರತಕ್ಕಿಂತ ಬ್ರಿಟನ್ನಿನಲ್ಲೇ ಹೆಚ್ಚು ಎನ್ನುವ ವಿಪರ್ಯಾಸದಲ್ಲೇ ನಮ್ಮ ಸೋಲಿದೆ!

ನಿಯಂತ್ರಣವೇ ಇಲ್ಲದ ಈ ವಲಸೆಯ ನಿಯಮದಿಂದ ಎತ್ತಲೂ ಹಿಗ್ಗಲಾಗದ ಈ ಸಿರಿವಂತ ಪುಟ್ಟ ದ್ವೀಪ ನಲುಗಿಹೋಗಿದೆ. ಕೋಮುದ್ವೇಷಗಳು ಜನರ ಮನಸ್ಸಿನಲ್ಲಿ ಹೊಗೆಯಾಡಿದ್ದು ನಿಜ. ಕೆಲವು ರಸ್ತೆಬದಿಯ ಜಾಗದಲ್ಲಿ ‘ನಮ್ಮ ದೇಶ ಬಿಟ್ಟು ತೊಲಗಿ’ ಎನ್ನುವ ದೊಡ್ಡ ದೊಡ್ಡ ಫಲಕಗಳು ಕಾಣಿಸಿದ್ದೂ ಉಂಟು.

ಒಂದು ಹೊಸ ಕೆಲಸಕ್ಕೆ ಸೇರಿದ್ದ ಸಮಯವದು. ಆ ಪ್ರಾಕ್ಟೀಸಿನ ಒಡೆಯನಿಗೆ 65 ವರ್ಷ. ಹೊಸ ಕಟ್ಟಡಕ್ಕೆ ಆತನ ದಂತವೈದ್ಯಾಲಯ ಸ್ಥಳಾಂತರವಾಗಿತ್ತು. ನನಗೆ ಕೆಂಪು ಕಾರ್ಪೆಟ್ಟು ಹಾಸಿ ಕೆಲಸ ಕೊಟ್ಟಿದ್ದರು. ಉದ್ಘಾಟನಾ ಸಮಾರಂಭಕ್ಕೆ ಈತನ 90 ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನ ಆತನ ಅಮ್ಮ ಬಂದಿದ್ದಳು. ನಾನು ಭಾರತದಿಂದ ಬಂದವಳೆಂದು ತಿಳಿಯುತ್ತಲೇ ನಾವೂ ಕರ್ನಾಟಕ ನೋಡಿದ್ದೇವೆ, ಮೈಸೂರು ಮಹಾರಾಜ ನಮ್ಮ ಮನೆಗೆ ಅತಿಥಿಯಾಗಿ ಬರುತ್ತಿದ್ದ ಎಂದು ನೆನೆಸಿಕೊಂಡ ಈಕೆ “ಭಾರತ ಈಗಲೂ ಹಾಗೇ ಇದೆಯೇ?” ಎನ್ನುವ ಅವಹೇಳನಕಾರೀ ಪ್ರಶ್ನೆಯನ್ನು ನನ್ನತ್ತ ಎಸೆದಳು. ಆ ಪ್ರಶ್ನೆಯ ಧಾಟಿಯಲ್ಲಿ ಆಕೆಯ ಭಾವವೆಲ್ಲ ವ್ಯಕ್ತವಾಗಿತ್ತು. ಈತನ ಮುಖದಲ್ಲಿ ನಾನು ಏನೆಂದುಕೊಳ್ಳುತ್ತೇನೋ ಎನ್ನುವ ಗಾಬರಿ. ಆದರೆ ನಾನು ಅದನ್ನು ಪ್ರತಿಭಟಿಸದೇ ನಗುತ್ತಲೇ “ಭಾರತ ಚೆನ್ನಾಗಿದೆ, ಕಾಲ ಬದಲಾಗಿದೆ” ಎನ್ನುವ ಉತ್ತರ ಕೊಟ್ಟೆ. ಅದರಲ್ಲಿ ಆಕೆಗೆ ಬೇಕಾದ ಸಂದೇಶ ಸಿಕ್ಕಿತ್ತು. ಮತ್ತೇನೂ ಮಾತಾಡದೇ ಸುಮ್ಮನಾದಳು.

ಹಳೆಯ ಕಾಲದ ಜನರ ಮನಸ್ಸಿನಲ್ಲಿ ಸ್ವತಂತ್ರ ಪೂರ್ವ ಭಾರತದ ಚಿತ್ರಣ ಬೇರೆಯೇ ಇದೆ. ಇವರ ಮನಸ್ಸಿನಲ್ಲಿ ದಾಸ್ಯದ ಭಾರತ ಇನ್ನೂ ಹಸಿರಾಗಿರಬಹುದು. ಆಗಿನ ಕಾಲದಲ್ಲಿ ಭಾರತದಲ್ಲಿ ಕೆಲಸಮಾಡುತ್ತಿದ್ದ ಬ್ರಿಟಿಷರು ಬಹಳ ಉನ್ನತ ಹುದ್ದೆಯಲ್ಲಿದ್ದವರು. ಸಿರಿವಂತರು. ಅಂತೆಯೇ ಅಂದಿನ ಭಾರತದ ನಮ್ಮ ಪರಿಸ್ಥಿತಿಗಳು ಬಹಳ ದಯನೀಯವಾಗಿಯೂ ಇದ್ದವು ಎನ್ನುವುದು ಸುಳ್ಳಲ್ಲ. ಸ್ವತಂತ್ರ್ಯಾನಂತರದ 70 ವರ್ಷಗಳಲ್ಲಿ ನಾವು ಬ್ರಿಟಿಷರಂತೆ ಆಗಲು ಸಾಧ್ಯವೂ ಆಗಿಲ್ಲ. ಆಗಬೇಕೆನ್ನುವುದೇ ಒಂದು ಕನಸಾಗಿರುವುದು ಇಂದಿನ ಬ್ರಿಟನ್ನಿನ ಗೆಲುವೇ ಆಗಬಹುದೇ?

ನಮ್ಮ ದೈನಂದಿನ ಕೆಲಸದಲ್ಲಿ ನೀನು ಯಾವ ದೇಶದಿಂದ ಎಂದು ಕೇಳುವ ರೋಗಿಗಳು ಬಹಳ. ಭಾರತದಿಂದಲೇ, ಶ್ರೀಲಂಕಾದಿಂದಲೆ ಎಂದೆಲ್ಲ ಪ್ರಶ್ನೆ ಕೇಳಲು ಶುರು ಮಾಡಿದರೆ ಅವರಿಗೂ ಯಾವುದೋ ಕಥೆ ಹೇಳುವ ತವಕ ಇದೆ ಎನ್ನುವುದನ್ನು ಅನುಭವದಿಂದ ಊಹಿಸಬಲ್ಲೆ.

ತೀರ ಇತ್ತೀಚೆಗೆ 55 ವರ್ಷದ ಆಸುಪಾಸಿನ ವ್ಯಕ್ತಿಯೊಬ್ಬ ಒಂದು ನೆನಪನ್ನು ಹಂಚಿಕೊಂಡ. ಆತ 12 ವರ್ಷದವನಿದ್ದಾಗ ಅವರ ನೆರೆ ಮನೆಯ ಸಂಸಾರ ಭಾರತೀಯರದ್ದಾಗಿತ್ತಂತೆ. ಐದು ಮಕ್ಕಳ ಆ ಸಂಸಾರದಲ್ಲಿ ಹದಿನಾಲ್ಕು ವರ್ಷದ ಹುಡುಗಿಯೇ ದೊಡ್ಡವಳಂತೆ. ಈತನಿಗೆ ಆ ಹುಡುಗಿ ಹೇಗೆ ಪ್ರಪಂಚದಲ್ಲೇ ಅತಿ ಸುಂದರಿಯಾದ ಯುವತಿಯಂತೆ ಕಾಣಿಸುತ್ತಿದ್ದಳೆಂದೂ, ಇವತ್ತಿಗೂ ಆ ನೆನಪುಗಳು ಕಾಡುತ್ತವೆಂದೂ ಹೇಳಿಕೊಳ್ಳುವಾಗ ಆತ ನಿಜ ಹೇಳುತ್ತಿದ್ದನೆಂಬ ಬಗ್ಗೆ ನನ್ನಲ್ಲಿ ಯಾವುದೇ ಸಂಶಯವಿರಲಿಲ್ಲ. ಪ್ರೀತಿ, ಗೌರವ, ಮಾನವೀಯ ಸಂಬಂಧಗಳು ಎಲ್ಲ ರೇಸಿಸಂ ಅನ್ನೂ ಮೀರಿ ಬೆಳೆವ ಉದಾಹರಣೆಗಳು ಬಹಳ. ಈತನದು ಅರೆಪ್ರೌಢಾವಸ್ಥೆಯ ಮೊದಲ ಪ್ರೀತಿಯೂ ಆಗಿದ್ದಿರಬಹುದು.

ಮೊದಲೆಲ್ಲ ಬರುತ್ತಿದ್ದ ಭಾರತೀಯ ಯುವಕರು ಒಂಟಿತನಕ್ಕೋ, ಇಲ್ಲಿನವರೊಡನೆ ಸಮಾನತೆಯನ್ನು ಬಯಸಿಯೋ, ಇಲ್ಲಿಯೇ ಉಳಿಯುವ ಉಪಾಯವಾಗಿಯೋ, ಪ್ರೀತಿಗೋ ಇಲ್ಲಿನ ಬಿಳಿಯ ಸುಂದರಿಯರನ್ನು ಮದುವೆಯಾಗಿ ಈಗಲೂ ಜೊತೆಯಲ್ಲಿ ಬದುಕುತ್ತಿದ್ದಾರೆ. ಗಂಡಸರನ್ನು ಮದುವೆಯಾದ ಹೆಂಗಸರೂ ಇದ್ದಾರೆ. ಇವರ ನಡುವೆ ಸಂಸ್ಕೃತಿಗಳ ತಿಕ್ಕಾಟವಿದೆಯೇ ಹೊರತು ರೇಸಿಸಂ ನ ಗಂಧ ಇಲ್ಲ.

ಸ್ಕಾಟ್ಲ್ಯಾಂಡಿನ ಆಸ್ಪತ್ರೆಯನ್ನು ಬಿಟ್ಟು ಖಾಸಗಿ ಅಂದರೆ ಸರ್ಕಾರೀ ಕಾಂಟ್ರಾಕ್ಟ್ ಇರುವ ಒಂದು ಉನ್ನತ ತರಬೇತಿ ಹುದ್ದೆಗೆ ನಾನು ಅರ್ಜಿ ಸಲ್ಲಿಸಿದ್ದೆ. ಬ್ರಿಟಿಷರಿಗಿಂತ ಸ್ವಲ್ಪ ನೇರವಾಗಿ ಮಾತಾಡುವ ವಿಶ್ವ ವಿದ್ಯಾಲಯದ ಸ್ಕಾಟ್ಟಿಷ್ ಡೀನ್ ಒಬ್ಬ ನನಗೆ ನೇರವಾಗಿ ಹೀಗೆ ಹೇಳಿದ್ದ. “ನೀನು ಅನರ್ಹಳು ಅಂತಲ್ಲ, ಆದರೆ ನಮ್ಮದೇ ಕಾಲೇಜುಗಳಿಂದ ಹೊರಬರುತ್ತಿರುವ ಹೊಸ ಪದವೀಧರರಿಗೆ ಈ ಹುದ್ದೆಗಳನ್ನು ನಾವು ಮೀಸಲಿಟ್ಟಿದ್ದೇವೆ. ನೀನು ಅರ್ಜಿ ಸಲ್ಲಿಸಿದ್ದರೂ ನಾವು ನಿನಗೆ ಆ ತರಬೇತಿಯ ಹುದ್ದೆಯನ್ನು ಕೊಡುವುದಿಲ್ಲ”. ಆತನ ಮಾತಿನಲ್ಲಿದ್ದ ಪ್ರಾಮಾಂಇಕತೆಯನ್ನು ನಾನು ಸಮಾನ ಮನಸ್ಸಿನಿಂದ ಸ್ವೀಕರಿಸಿದೆ. ಅದನ್ನು ಯಾರಾದರೂ ‘ರೇಸಿಸಂ’ ಅಂತ ಕರೆದರೆ ನಾನು ಒಪ್ಪುವುದಿಲ್ಲ.

ಒಟ್ಟಾರೆ ಹೇಳಬೇಕೆಂದರೆ, ಇಲ್ಲಿಯೂ ರೇಸಿಸಂ ಇದೆ. ಆದರೆ ಇಲ್ಲಿನ ರೇಸಿಸಂ ಪ್ರಪಂಚದ ಇತರೆ ಭಾಗಗಳಿಗಿಂತ ಕಡಿಮೆ. ಇವರಿಗೆ ನಾವು ಮತ್ತು ಭಯೋತ್ಪಾದಕರು ಇಬ್ಬರೂ ನೋಡಲು (ಮುಖ ಚಹರೆಯಲ್ಲಿ) ಒಂದೇ ರೀತಿ ಕಾಣುತ್ತೇವೆ. ಆ ವಿಚಾರಕ್ಕೆ ಅಂತಹ ಘಟನೆಗಳು ನಡೆದಾಗ ಯಾವುದೋ ರಸ್ತೆಯಲ್ಲಿ ನಡೆಯುವಾಗ ನೊಂದ ಉದ್ವಿಗ್ನ ಜನರ ಕೋಪಕ್ಕೆ ಎಲ್ಲಿ ತುತ್ತಾಗುತ್ತೇವೆಯೋ ಎಂಬ ಭಯ ಅಲ್ಪ ಕಾಲದ ಮಟ್ಟಿಗಾದರೂ ಆಗುವುದು ಖಂಡಿತ ನಿಜ.

ಹೀಗಿದ್ದೂ ನಮ್ಮ ವೃತ್ತಿಯ ನಾಲ್ಕು ಗೋಡೆಗಳಾಚೆ ನಾವು ಪರದೇಶದಿಂದ ಹೊಟ್ಟೆಹೊರೆಯಲು ಬಂದಿರುವ ಜನರೆಂಬ ಸಾಮಾಜಿಕ ಧೋರಣೆಗಳಿಂದ ನಾವು ಮುಕ್ತರೇನಲ್ಲ. ಅಂತಹ ವಿಚಾರಗಳನ್ನು ನಾವು ಕಿತ್ತೊಗೆದರೂ ಬ್ರಿಟಿಷ್ ಸಮಾಜದ ಸಾಮಾನ್ಯ ಜನರಲ್ಲಿ ಆ ಧೋರಣೆ ಹೋಗುವುದೂ ಇಲ್ಲ. ಅದರಲ್ಲಿ ಅತಿಶಯೋಕ್ತಿಗಳಿರದ ಕಾರಣ, ಒಂದರ್ಥಕ್ಕೆ ಅದು ನಿಜವಾದರೂ ಇನ್ನೊಂದರ್ಥದಲ್ಲಿ ಅದು ಎಲ್ಲರಿಗೂ ಅನ್ವಯಿಸುವ ಮಾತೂ ಅಲ್ಲ. ಆದರೆ ಒಂದಂತೂ ನಿಜ. ಭಾರತದಲ್ಲಿ ಸಿಗದ ಯಾವುದೋ ಮರೀಚಿಕೆಯನ್ನು ಹುಡುಕಿ, “ವಿದೇಶ ಪ್ರಯಾಣ, ಕೈತುಂಬ ಕಾಂಚಾಣ” ವನ್ನು ಗಳಿಸುವ ಕನಸಿರದೆ ಬಹುತೇಕ ಭಾರತೀಯರು ಪರದೇಶದ ನೆಲ ಮುಟ್ಟುವುದಿಲ್ಲ.

ತರಬೇತಿಯೋ, ದೇಶಗಳನ್ನು ಸುತ್ತುವ ಇರಾದೆಯೋ, ಪ್ರತಿಷ್ಠೆಯ ಕಾರಣಕ್ಕೋ ಬಂದವರು ಇದ್ದಾರಾದರೂ ಅಂಥವರ ಸಂಖ್ಯೆ ಕಡಿಮೆಯೇ. ಮಕ್ಕಳ ಕಾರಣಕ್ಕೋ, ಮರಳಿ ಹೋಗಿ ನೆಲ ಕಚ್ಚುವ ಕಷ್ಟಗಳಿಗೋ ಹೆದರಿ ವಿದೇಶಗಳಲ್ಲಿಯೇ ಉಳಿದವರು ಪೂರ್ಣ ಬ್ರಿಟಿಷರಾಗಲೂ ಸಾಧ್ಯವಾಗದೆ, ಇತ್ತ ಭಾರತೀಯತೆಯನ್ನೂ ಪೂರ್ಣವಾಗಿ ಅನುಭವಿಸಲಾಗದೆ ಇಬ್ಬಂದಿಗೆತನದಲ್ಲಿ ಸಿಲುಕಿ ಗಾಳಿಬೀಸಿದೆಡೆ ಕಾಲನ ಪರಿವರ್ತನೆಗೆ ಸಾಧ್ಯವಾದಷ್ಟು ಒಗ್ಗುತ್ತ ನಡೆಯುತ್ತಾರೆ. ಒಟ್ಟಾರೆ ಹೇಳಬೇಕೆಂದರೆ ಇಲ್ಲಿನ ರೇಸಿಸಂ ಬಹಳ ಕಡಿಮೆ ಪ್ರಮಾಣದ್ದು.

(ಮುಂದುವರೆಯುವುದು)