ಕೇವಲ ನಲವತ್ತು ವರುಶದ ಹಿಂದೆ ಬೇಸಿಗೆಯಲ್ಲೂ ನೀರ ಸುರುವಿನಲ್ಲಿ ಕಣ್ ತಣಿಸುತ್ತಿದ್ದ ಜಲಪಾತವನ್ನು ನಾವು ನೋಡಿ ಬಂದಿದ್ದೆವು. ಈಗೊಮ್ಮೆ ಜನವರಿ ತಿಂಗಳಿನಲ್ಲಿ ಹೋದಾಗ ಗಬ್ಬೆದ್ದ ಹಳ್ಳಕೊಳ್ಳದಂತೆ ಭಾಸವಾಗಿತ್ತು. ಭೂಮ್ತಾಯಿಯೇ ಎದ್ದು ಬಾಯಿಬಡಿದುಕೊಳ್ಳುವಂತೆ ಒಡಲು ಬರಿದಾಗಿತ್ತು. ಮನುಷ್ಯ ನಡೆದಾಡಿದ ದಾರಿಯಲ್ಲಿ ಹುಲ್ಲೂ ಹುಟ್ಟಲಾರದು ಎಂಬುದು ಜಾನಪದರ ನಂಬಿಕೆ. ಎತ್ತರದ ಜಾಗದಲ್ಲಿ ನಾವು ನಿಂತು ಭೂಮಿಯನ್ನು ನೋಡಿದಾಗ ಮನುಷ್ಯನ ಈ ಆಟಗಳ ಸಣ್ಣತನ ತೋರುತ್ತದೆ. ಸಜ್ಜಾಗುತ್ತಿರುವ ಬೇರೆ ಬೇರೆ ಬಣ್ಣದ ದೋಣಿಗಳನ್ನು ನೋಡಿ ನಗುವೂ ಬಂತು. ಇದನ್ನು ಕಂಡಾಗ ಈ ಅಗಾಧತೆಗೆ ಒಂದು ಕಪ್ಪು ಚುಕ್ಕಿ ಇಟ್ಟಂತನ್ನಿಸುತ್ತದೆ.
ಸುಜಾತಾ ತಿರುಗಾಟ ಕಥನ

 

ಉತ್ತರ ಅಮೆರಿಕದ ಈರೀ ಸರೋವರದಲ್ಲಿ ಹುಟ್ಟಿ ಸ್ಥೂಲವಾಗಿ ಉತ್ತರಾಭಿಮುಖವಾಗಿ ಹರಿದು ಆಂಟೆರಿಯೋ ಸರೋವರವನ್ನು ಸೇರುವ, ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡ ದೇಶಗಳ ನಡುವೆ ಸ್ವಲ್ಪ ದೂರದ ಗಡಿಯಾಗಿರುವ ನದಿಯ ಜಲಪಾತವೇ ನಯಾಗರ. ನದಿಯ ಉದ್ದ 56 ಕಿಮೀ. ಇದು ಅಮೆರಿಕ ಸಂಯುಕ್ತ ಸಂಸ್ಥಾನಗಳ ನ್ಯೂಯಾರ್ಕ್ ರಾಜ್ಯವನ್ನು ಕೆನಡದ ಆಂಟೆರಿಯೋ ಪ್ರಾಂತ್ಯದಿಂದ ಪ್ರತ್ಯೇಕಿಸುತ್ತದೆ.

ಪಂಚ ಮಹಾಸರೋವರಗಳ ಪೈಕಿ ನಾಲ್ಕಕ್ಕೆ-ಸುಪೀರಿಯರ್, ಮಿಷಿಗನ್, ಹ್ಯುರಾನ್, ಈರೀ ಇವಕ್ಕೆ- ಹೊರ ಹರಿವಿನ ತೂಬಿನಂತಿರುವ ಈ ನದಿ ಈರೀ ಸರೋವರವನ್ನು ಬಿಟ್ಟು ಸುಮಾರು 8 ಕಿಮೀ. ದೂರ ಹರಿದು ಎರಡು ಕವಲುಗಳಾಗಿ ಒಡೆಯುತ್ತದೆ. ಈ ಕವಲುಗಳ ನಡುವೆ ಇರುವ ದ್ವೀಪಗಳು ಸ್ಟ್ರಾಬೆರಿ ಮತ್ತು ಗ್ರ್ಯಾಂಡ್ ಐಲೆಂಡ್. ಪೂರ್ವದ ಕವಲು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 24 ಕಿಮೀ. ದೂರವೂ ಪಶ್ಚಿಮದ ಕವಲು ಕೆನಡದಲ್ಲಿ ಸುಮಾರು 19 ಕಿಮೀ. ದೂರವೂ ಹರಿದು ಗ್ರ್ಯಾಂಡ್ ಐಲೆಂಡ್ ದ್ವೀಪದ ಕೆಳಭಾಗದಲ್ಲಿ ಹಾಗೂ ನಯಾಗರ ಜಲಪಾತಕ್ಕೆ ಸುಮಾರು 5 ಕಿಮೀ. ದೂರದಲ್ಲಿ ಒಂದಾಗುತ್ತದೆ.

ನಯಾಗರ ನದಿ ಕ್ರಮಿಸುವ ದೂರದಲ್ಲಿ ಸುಮಾರು ಅರ್ಧದಷ್ಟು ಸಾಗಿದ ಮೇಲೆ ಅದು ಸುಮಾರು 51 ಮೀ. ಕೆಳಕ್ಕೆ ಧುಮುಕುತ್ತದೆ. ಇದೇ ಜಗತ್ ಪ್ರಸಿದ್ಧವಾದ ನಯಾಗರ ಜಲಪಾತ. ಇದಕ್ಕಿಂತ ಎತ್ತರದ ಜಲಪಾತಗಳು ಪ್ರಪಂಚದಲ್ಲಿ ಇವೆಯಾದರೂ ಇದರ ಅಗಲ ಹಾಗೂ ಅಗಾಧ ಜಲರಾಶಿಯಿಂದಾಗಿ ಇದು ಅದ್ಭುತವೂ ಸುಂದರವೂ ಆದ ಜಲಪಾತವಾಗಿ ಪರಿಣಮಿಸಿದೆ.

ಈರೀ ಸರೋವರದಿಂದ ಇಳಿಜಾರಿನ ಹರಿವಿನವರೆಗೆ ನದಿ ಜಲಯಾನಕ್ಕೆ ಅನುಕೂಲವಾಗಿದೆ. ಹಿಮಗಾಲದಲ್ಲಿ ಈರೀ ಸರೋವರದ ನೀರು ಗಡ್ಡೆಗಟ್ಟಿ ನಯಾಗರ ನದಿಯೊಳಕ್ಕೆ ಮಂಜುಗಡ್ಡೆಗಳು ತೇಲಿಬರುವುದರಿಂದ ನದಿಯ ಹರಿವಿಗೆ ಅಡಚಣೆಯಾಗುತ್ತದೆ. ಇದನ್ನು ನಿವಾರಿಸಲು ನದಿಯ ದ್ವಾರಕ್ಕೆ ಅಡ್ಡಲಾಗಿ ಡಿಸೆಂಬರ್ನ ನಿಂದ ಏಪ್ರಿಲ್ ವರೆಗೆ ತೇಲು ದಿಮ್ಮಿಗಳನ್ನು ಹಾಕುತ್ತಾರೆ.

ನಯಾಗರದ ರೂಪುರೇಷೆ

ಜಲಪಾತಗಳ ಸಮೂಹವಾಗಿ ಕುದುರೆ ಲಾಳದಾಕಾರದಲ್ಲಿ ರಭಸದಿಂದ ಕೆಳಗೆ ಧುಮ್ಮಿಕ್ಕುವ ನಯಾಗರದ ನೀರು ಹಾಲಿನ ಕಡಲಿನಂತೆ ವಿಶಾಲವಾಗಿ, ಅಪಾರ ಜಲರಾಶಿ ನಿರಂತರವಾಗಿ ಭೋರ್ಗರೆಯುತ್ತಾ ಹಾರಿ ವೇಗವಾಗಿ ಕಿವಿ ಕಿವುಡಾಗುವಂತೆ ಶಬ್ದಮಾಡುತ್ತಾ ನೆಗೆದು, ತಡವರಿಸುತ್ತಾ-ಎದ್ದು-ಬಿದ್ದು ಓಡಿಹೋಗುವ ನಿರಂತರ ನೋಟ, ಅನಾದಿ ಕಾಲದಿಂದಲೂ ಎಲ್ಲರನ್ನೂ ಚಕಿತಗೊಳಿಸುತ್ತಲೇ ಇದೆ. ಪರ್ಯಟನೆಯ ದೃಷ್ಟಿಯಿಂದ ಇದನ್ನು ಮೂರು ವಿಭಾಗಗಳಾಗಿ ವಿಂಗಡಿಸುತ್ತಾರೆ. ಗೋಟ್ ಐಲ್ಯಾಂಡ್, ಹಾರ್ಸ್ ಶೂ ಫಾಲ್ಸ್ ಹಾಗೂ ಬ್ರೈಡಲ್ ವೇಲ್.

ನಯಾಗರ ಜಲದ ಹರಿವಲ್ಲಿ ಮೂರು ಟಿಸಿಲು ಸೇರಿವೆ. ಹಾರ್ಸ್ ಶೂ ಫಾಲ್ಸ್ (Horseshoe Falls), ದಿ ಅಮೆರಿಕನ್ ಫಾಲ್ಸ್ (the American Falls) ಮತ್ತು ಬ್ರೈಡಲ್ ವೇಲ್ ಫಾಲ್ಸ್ (the Bridal Veil Falls). ಹಾರ್ಸ್ ಶೂ ಫಾಲ್ಸ್ ಇರೋದು ಯುನೈಟೆಡ್ ಸ್ಟೇಟ್ಸ್ ಹಾಗೂ ಕೆನಡಾದ ಅಮೆರಿಕನ್ ಫಾಲ್ಸ್ ನ ಅಂಚಿನಲ್ಲಿ. ಇದನ್ನು ಬೇರೆ ಮಾಡಿರುವುದು ಹಾಗೂ ಹರಿದು ಬರುವುದು ಯು.ಎಸ್. ನ ಗೋಟ್ ಐಲ್ಯಾಂಡ್ ಮೂಲಕವೇ. ತೆಳುವಾದ ಬ್ರೈಡಲ್ ವೇಲ್ ಫಾಲ್ಸ್ ಕೂಡ ಯುನೈಟೆಡ್ ಸ್ಟೇಟ್ಸ್ ಕಡೆಯಿದ್ದು ಲುನಾ ಐಲ್ಯಾಂಡ್ ನಿಂದ ಬೇರ್ಪಡುತ್ತದೆ. ಇದರ ಅಗಲದ ವಿಸ್ತಾರ 2600 ಫೀಟ್.

ಅಮೆರಿಕನ್ ಜಲಪಾತ, (ಚಿಕ್ಕದು), ಬ್ರೈಡಲ್ ಜಲಪಾತ, (ಅತಿ ಚಿಕ್ಕದು) ಕೆನಡಿಯನ್, ಅಥವಾ ಕುದುರೆ ಲಾಳಿಯನ್ನು ಹೋಲುವ ಜಲಪಾತ. (ಗಾತ್ರದಲ್ಲಿ ದೊಡ್ಡದು)

ನಯಾಗರ ಜಲಪಾತಕ್ಕೆ ಎರಡು ಕವಲುಗಳಿವೆ. ಇವೆರಡರ ನಡುವೆ ಇರುವ ನೆಲ ಗೋಟ್ ಐಲ್ಯಾಂಡ್. ಕೆನಡದ ಕಡೆಯದು ಎಡ ಕವಲು. ಇದು ದೊಡ್ಡದು. ಇದಕ್ಕೆ ಹಾರ್ಸ್ ಷೂ ಜಲಪಾತ ಎನ್ನುತ್ತಾರೆ. ಇದರ ಎತ್ತರ ಸುಮಾರು 49 ಮೀ. ಬಲ ಕವಲು ಅಮೆರಿಕದ ಕಡೆಯದು. ಇದರ ಎತ್ತರ 51 ಮೀ. ಜಲಪಾತದ ತಳಭಾಗದಲ್ಲಿ ಸುಮಾರು 11 ಕಿಮೀ ಉದ್ದದ ಕಮರಿಯಿದೆ. ಜಲಪಾತದ ನೀರು ತಿಳಿಯಾಗಿದೆ. ನೀರಿನಲ್ಲಿ ಗಷ್ಟು ಕಂಡುಬರುವುದಿಲ್ಲ. ಈ ಪರಿಶುದ್ಧತೆಯಿಂದಾಗಿಯೂ ಜಲಪಾತಕ್ಕೊಂದು ಸೊಬಗಿದೆ. ಜಲಪಾತಕ್ಕಿರುವ ಪ್ರಾಮುಖ್ಯವನ್ನು ಗ್ರಹಿಸಿ ಕೆನಡದಲ್ಲೂ ಅಮೆರಿಕದಲ್ಲೂ ಜಲಪಾತದ ಅಂಚಿನ ಭೂಮಿಗಳಲ್ಲಿ ಸಾರ್ವಜನಿಕ ಪಾರ್ಕುಗಳನ್ನು ನಿರ್ಮಿಸಲಾಗಿದೆ.

ಕೆನಡ ಭಾಗದ ಕ್ವೀನ್ ವಿಕ್ಟೋರಿಯ ಪಾರ್ಕ್, ಅಮೆರಿಕದ ಕಡೆಯ ಪ್ರಾಸ್ಟೆಕ್ಟ್ ಪಾಯಿಂಟ್, ಜಲಪಾತದ ಎದುರಿಗೆ ಕಮರಿಗೆ ಅಡ್ಡಲಾಗಿ ಕಟ್ಟಿರುವ ರೇನ್ ಬೋ ಬ್ರಿಡ್ಜ್- ಈ ಸ್ಥಳಗಳಿಂದ ಜಲಪಾತದ ನೋಟ ಅತ್ಯಂತ ಮನೋಹಕ. ಜಲಪಾತವನ್ನು ನೋಡಲು ಬಂದವರು ಅಮೆರಿಕಕ್ಕೆ ಸೇರಿದ ನದಿಯ ದಂಡೆಯಿಂದ ಗೋಟ್ ಐಲೆಂಡ್ ದ್ವೀಪಕ್ಕೆ ನಡೆಸೇತುವೆಯ ಮೂಲಕ ಬಂದು, ಅಲ್ಲಿಂದ ಜಲಪಾತದ ತಳಕ್ಕೆ ಎಲಿವೇಟರ್ ಮೂಲಕ ಸಾಗಿ, ಜಲಪಾತದಿಂದ ಕಮರಿಗೆ ಬೀಳುವ ನೀರಿನ ಪದರದ ಹಿಂದಿರುವ ಕೇವ್ ಆಫ್ ದಿ ವಿಂಡ್ ಗುಹೆಯನ್ನು ನೋಡಲು ಹೋಗುತ್ತಾರೆ.

ಸುರಿವ ನೀರ ಹಿಡಕಟ್ಟು

ರಾತ್ರಿ ನಾವು ಬಂದಿಳಿದಾಗ ಬಣ್ಣದ ಹೊನಲು ಬೆಳಕಲ್ಲಿ ಕಂಡು ಹೋದ ನೀರ ಸುರಿವು, ಬೆಳಗೆದ್ದು ನಮ್ಮನ್ನು ಇಲ್ಲಿಗೆ ಪಟಪಟನೆ ಓಡಿ ಬರುವಂತೆ ಮಾಡಿತು. ನೆಲಮಟ್ಟದ ಕಲ್ಲುಗಳ ಮೇಲೆ ಕುಪ್ಪಳಿಸಿ ಕೆರೆದಡ ಆಟವಾಡಿಕೊಂಡು ಬರುವ ನದಿಯ ನೀರ ತೆರೆ ಬಿಸಿಲಿಗೆ ಕಣ್ಬಿಟ್ಟು ಹೊಳೆವ ವಜ್ರವೇ ನೀರಾಗಿ ಹರಿವಂತೆ ಬಂಡೆಯ ಮೇಲೆ ತಾಳ ಕುಟ್ಟುತ್ತ ಹುಟ್ಟುವ ಎಲ್ಲ ಜೀವಿಗಳ ಕಿವಿಗೆ ಎಂದೆಂದೂ ಮುಗಿಯದ ಜೋಗುಳವೊಂದನ್ನು ಸುರಿಯುತ್ತ ನಯಾಗರದ ನೀರತೊಟ್ಟಿಲನ್ನು ತೂಗಿ ಬಿಡುವ ಆ ಕಾಣದ ಕೈಗಳನ್ನು ಮುಚ್ಚಿಟ್ಟಿತ್ತು.

ನಾವು ಹೋಗಿ ಟಿಕೆಟ್ ಕೊಂಡು ಅತ್ತ ಇತ್ತ ನೋಡುವ ಕೆಲವು ನೋಟ ಮುಗಿಸಿ ಬರುವಾಗ ಇರುವೆ ಸಾಲಂತೆ ಪ್ರಯಾಣಿಕರ ದಂಡು ಒಳ ಹೋಗುತ್ತಿತ್ತು. ನಾವು ಆ ಸಾಲನ್ನು ಹೊಕ್ಕೆವು. ಮುಂದೆ ಹೋದೊಡನೆ ದೊಡ್ದ ಹಾಲಿನಲ್ಲಿ ನಮ್ಮ ಟಿಕೇಟ್ ತೋರಿದ್ದೆ ಅವರು ಕೊಟ್ಟ ಪ್ಲಾಸ್ಟಿಕ್ಕಿನ ನೀಲಿ ರೈನ್ ಕೋಟು ಹಾಗೂ ನೂರು ರೂಪಾಯಿಯ ಜಾರದ ಅಗ್ಗದ ಕಟ್ಟು ಚಪ್ಪಲಿಯನ್ನು ಧರಿಸಿ ಲೈನಿಗೆ ಹೋಗಿ ನಿಂತರೆ ಕರಿಯ ಅಮೇರಿಕನ್ನಳು ಗಟ್ಟಿ ದನಿಯಲ್ಲಿ ಮೂಲೆಯ ಕಂಬದ ನಿಲುವಿನೆತ್ತರದಲ್ಲಿ ಕುಂತು ನಮ್ಮನ್ನು ನಿಯಂತ್ರಿಸುತ್ತಿದ್ದಳು.

ಮೇಡ್ ಆಫ್ ದ ಮಿಸ್ಟ್ ರೈಡ್

ಮೇ ತಿಂಗಳ ಮಧ್ಯಭಾಗದಲ್ಲಿ ಈ ಜಲಪಾತ ಬಹಳ ಹೆಸರುವಾಸಿಯಾದದ್ದು. ಉತ್ತರ ಅಮೆರಿಕಾ ಮತ್ತು ಕೆನಡಾ ರಾಷ್ಟ್ರಗಳ ಕಡೆಯಿಂದ ಈ ಜಲಪಾತವನ್ನು ಚೆನ್ನಾಗಿ ವೀಕ್ಷಿಸಬಹುದು.

ಟನಲ್ ನ ಬಾಗಿಲಿಗೆ ಬಂದು ನಿಂತರೆ ಜಿನುಗುತ್ತ, ಹರಿಯುತ್ತಿದ್ದ ತೆಳ್ಳನೆ ನೀರು ನಮ್ಮೂರ ಬಾಬಾ ಬುಡನ್ ಗಿರಿಯನ್ನು ನೆನಪಿಸಿತು. ಸಾಲನ್ನು ಅಡ್ಡಗಟ್ಟಿದ್ದ ಗೇಟಿನ ಮುಂದೆ ಕಾಯುವಾಗಲೇ ದೊಡ್ಡ ಪ್ರಮಾಣದ ಡಬಲ ಡೆಕ್ಕರ್ ದೋಣಿಯೊಂದು ನೋಟ ಕಟ್ಟಲು ಹೋಗಿದ್ದ ಪ್ರಯಾಣಿಕರನ್ನು ಹೊತ್ತು, ತಿರುಗಿ ಬಂದು ನಿಂತಿತು. ಮೆಟ್ಟಿಲಿಳಿದು ನೀರಂಚಿಗೆ ಬಂದೆವು. ನೀರು ಅಲ್ಲಿ ಪ್ರಶಾಂತವಾಗಿತ್ತು. ಎಲ್ಲರೂ ಮೇಲಿನ ಡೆಕ್ ಕಡೆಗೆ ಹತ್ತುವಾಗ ನಾವೂ ಹತ್ತಿದೆವು. ನಡುವಲ್ಲಿ ನಮ್ಮ ಜಾಗ ಹಿಡಿದು ನಿಂತೆವು.

ನೆಲಮಟ್ಟದ ಕಲ್ಲುಗಳ ಮೇಲೆ ಕುಪ್ಪಳಿಸಿ ಕೆರೆದಡ ಆಟವಾಡಿಕೊಂಡು ಬರುವ ನದಿಯ ನೀರ ತೆರೆ ಬಿಸಿಲಿಗೆ ಕಣ್ಬಿಟ್ಟು ಹೊಳೆವ ವಜ್ರವೇ ನೀರಾಗಿ ಹರಿವಂತೆ ಬಂಡೆಯ ಮೇಲೆ ತಾಳ ಕುಟ್ಟುತ್ತ ಹುಟ್ಟುವ ಎಲ್ಲ ಜೀವಿಗಳ ಕಿವಿಗೆ ಎಂದೆಂದೂ ಮುಗಿಯದ ಜೋಗುಳವೊಂದನ್ನು ಸುರಿಯುತ್ತ ನಯಾಗರದ ನೀರತೊಟ್ಟಿಲನ್ನು ತೂಗಿ ಬಿಡುವ ಆ ಕಾಣದ ಕೈಗಳನ್ನು ಮುಚ್ಚಿಟ್ಟಿತ್ತು.

‘ನೀಲಿಬಣ್ಣದ ರೇನ್ ಕೋಟ್’ ಧರಿಸಿ ಗುಂಪುಗುಂಪಾಗಿ ಹೊರಟ ಪರ್ಯಟಕರು ‘ಬೋಟ್ ಯಾನ’ ಮಾಡುತ್ತಾ ಆ ರುದ್ರ ಜಲಪಾತದ ಬುಡದವರೆಗೂ ಹೋಗಿಬರಲು ಸಾಧ್ಯವಿದೆ ಎಂಬುವುದು ನಮ್ಮನ್ನು ವಿಸ್ಮಯಗೊಳಿಸುತ್ತದೆ. ಅಲ್ಲಿ ಮೈಗೆ ಮುತ್ತುವ ತುಂತುರು ಹನಿಗಳ, ಹಿಮಮಣಿಗಳ ಅದ್ಭುತ ಅನುಭವಗಳನ್ನು ಮೈತುಂಬಿಸಿಕೊಂಡು ಬರುವ ಚಂದವೋ… ಹೃದಯದ ಬಡಿತ ನಿಲ್ಲುವಷ್ಟು, ಇಲ್ಲವೆ ಡವಡವಗುಟ್ಟಿಸುವಷ್ಟು ರೋಮಾಂಚಕಾರಿ ಎನ್ನುವುದನ್ನು ಓದಿದ್ದ ನಮಗೆ ಬಂದು ಇಳಿಯುತ್ತಿರುವವರನ್ನು ನೋಡುವಾಗ ಅರ್ಥವಾಗುತಿತ್ತು. ಸುತ್ತಲೂ ಹರಡಿದ ನೀರು ನಮ್ಮ ನೋಟವನ್ನು ಕಟ್ಟುತ್ತ ಒಳ ಆನಂದದ ಜಗತ್ತನ್ನು ಎಚ್ಚರಗೊಳಿಸತೊಡಗಿತು.

ಮುದ್ದಾಡುವ ಯಾವುದೋ ಜೋಡಿಯನ್ನು ನೋಡಿ ‘ಮಧುಚಂದ್ರ’ಕ್ಕೆ ಇದು ಹೇಳಿಮಾಡಿಸಿದ ತಾಣ ಅನ್ನಿಸಿತು. ಇಲ್ಲಿಗೆ ಮದುವೆಯಾಗುವ ನೆವದಿಂದಲೇ ಬರುವವರ ಸಂಖ್ಯೆಯೂ ಅಪಾರ. ಯಾವ ಖರ್ಚುವೆಚ್ಚವಿಲ್ಲದೆ ಎರಡು ಹಾರ, ಇಲ್ಲವೇ ‘ಪುಷ್ಪ ಗುಚ್ಛಗಳ ವಿನಿಮಯ’ದೊಂದಿಗೆ ಈಡೇರುವ ಮದುವೆಗಳು ಸರ್ವೇ ಸಾಮಾನ್ಯವಾಗಿ ಇಲ್ಲಿ ಕಾಣಸಿಗುತ್ತವೆ’ ಎಂದು ಜನ ಮಾತಾಡಿಕೊಳ್ಳುತ್ತಿದ್ದರು.

ಪ್ರಳಯ ಜಗತ್ತಿನ ರುದ್ರ ನರ್ತನ

ಈಗ ನಮ್ಮ ಸರದಿ ಬಂತು. ದೋಣಿ ಜನರಿಂದ ತುಂಬಿ ಚಲಿಸತೊಡಗಿತು. ನಮ್ಮ ಜೊತೆಗೇ ಕಡಲಕ್ಕಿಗಳು ಅತ್ಯಂತ ಆರೋಗ್ಯಕರವಾಗಿ ಈಜುತ್ತಿದ್ದವು. ನೀರಿನ ಪಾರದರ್ಶಕತೆಯಲ್ಲಿ ಅವುಗಳ ಕಾಲಿನ ಚಲನೆ ನಮಗೆ ಸ್ಪಷ್ಟವಾಗಿ ಕಾಣುತಿತ್ತು. ನೀರ ಮೇಲೆ ತೇಲುವ ಹಕ್ಕಿಯ ದೇಹದ ಚಲನೆಯೊಂದನ್ನೇ ಇದುವರೆಗೂ ಕಂಡಿದ್ದ ನನಗೆ ಅದರ ಕಾಲುಗಳು ಕಂಡದ್ದೇ… ತೆಳುವಾದ ತಾವರೆ ಬಳ್ಳಿಯೊಂದು ನೀರಲೆಯಲ್ಲಿ ತೇಲುವ ಸುಳುಹಿನಂತೆ ಕಾಣುತಿತ್ತು. ಹೊ…ಹೋ…. ನೀರು ಸುರಿವ ಸದ್ದು ಹತ್ತಿರವಾಗತೊಡಗಿತು. ಮೂಜಗವು ನೀರಲ್ಲಿ ಒಂದಾದಂತೆ ನಮಗೆ ತುಂತುರು ಸಿಡಿಯತೊಡಗಿತು.

ದೋಣಿ ಹತ್ತಿದಾಗಿಂದ ವಾಪಾಸ್ ಬರುವ ಕಾಲ ಕೇವಲ ಮೂವತ್ತು ನಿಮಿಷ ಇರಬಹುದು. ಆದರೆ ಆ ಗಾಳಿ, ಆ ನೀರು, ಆ ಸೌಂದರ್ಯ ಜಗತ್ತಿನ ಅದ್ಭುತವೊಂದನ್ನು ನಮ್ಮ ಮುಂದೆ ತಂದು ನಿಲ್ಲಿಸಿತ್ತು. ಕುದುರೆ ಲಾಳಾಕಾರದ ನೀರ ಸುರುವು 180 ಡಿಗ್ರಿಯ ಕಣ್ಣೆದುರಿಗಿನ ನೋಟವನ್ನು ಕಟ್ಟಿಕೊಟ್ಟರೆ, ಮನುಷ್ಯನ ಅಳತೆಗೂ ಮೀರಿದ, ಖಂಡ ತುಂಡಗಳಿಂದಾಚೆಗೂ ಹರಿಯುವ ನೀರಿನ ಅಸೀಮ ಓಟವೊಂದನ್ನು ನೋಟವೊಂದನ್ನು ದೇಶ ಕಾಲ ಕೋಶವನ್ನು ಮೀರಿ ಒಳ ಕಣ್ಣಿಗೆ ಮತ್ತೇ ಅದು ಏನನ್ನೋ ಹೊಳೆಯಿಸುತ್ತ ಕಟ್ಟಿಕೊಡುತ್ತ ನಮ್ಮ ಇರುವನ್ನು ಮರೆಸಿತ್ತು.

ಇದೇಥರ ಜಗತ್ತು? ನೀರೇ? ನಿಜವೇ? ನೆಲವೆಲ್ಲಿ? ಆಗಸವೆಲ್ಲಿ? ಇದು ಚೆಲುವೇ? ಒಲವೇ? ಶಿವಶಿವೆಯರ ಬದುಕೇ? ಅಲ್ಲಿ ಕಾಣುತ್ತಿರುವುದೇನು? ಬೆಳ್ನೊರೆಯೇ…. ಅಸೀಮ ಸಂಪತ್ತಿನ ಹಾಲ್ನೊರೆ ಉಕ್ಕಿಸುತ್ತಿರುವ ಆ ತಾಯ ಮೊಗವೆಲ್ಲಿ? ಈ ಚೆಲುವ ಬೆಳದಿಂಗಳನ್ನು ಕಡೆದು ಬೆಣ್ಣೆ ತೆಗೆಯುತ್ತಿರುವ ಆ ತಾಯ ಕಡಗೋಲೆಲ್ಲಿ? ಆಗಸದಲ್ಲಿ ಹೊಳೆವ ಸೂರ್ಯನ ಕಣ್ಣಿಗೆ ಬೆಳ್ನೊರೆಯಲ್ಲೊಂದು ಮೂಡಿದ ಕಾಮನಬಿಲ್ಲಲೂ ಹುಟ್ಟಿದ ಆ ತಂಪು ಎಲ್ಲಿತ್ತು? ಇದೆಲ್ಲ ಎಲ್ಲಿತ್ತು? ನಮ್ಮ ನೋಟಕ್ಕೆ ಹೇಗೆ ಒದಗಿ ಬಂತು?

ರುದ್ರ ರಮಣೀಯವಾಗಿ ಜಟೆಯಿಳಿಸಿ ತನ್ನನ್ನು ತನ್ನ ಹೆಣ್ಣಿನೊಡನೆ ಮೀಯಿಸಿಕೊಳ್ಳುವಾಗ ಪಾರ್ವತಿಯ ನಾಚಿಕೆಯ ತೆಳು ಹೊದಿಕೆಯೊಂದು ಹಾರಿ ಅಲ್ಲಿ ನೀರತೆರೆಯಾಗಿ ಇಳಿಯುತ್ತಿರುವುದೇನು? ಅದಕ್ಕೆ ಅಲ್ಲವೇ? ಅಮೆರಿಕನ್ನರು ಅದನ್ನು ಬ್ರೈಡಲ್ ಫಾಲ್ ಅಂತ ಹೆಸರಿಟ್ಟಿರುವುದು. ಶಿವ ಶಿವೆಯರ ಈ ಒಡನಾಟಕ್ಕೆ ಆಕಾಶವೆಷ್ಟು ಶುಭ್ರ!

ನೀರು, ನೀರು, ನೀರು. ಸುರಿವ ನೀರು ಮೈ ಪರಿವಿಯಿಲ್ಲದೆ ದೇವರ ಮೈತೊಳೆಯುವಾಗ ನೆಂದು ಹೋಗುವ ತಾಯಂತೆ ನೀರು ಹಾರಿಹಾರಿ ನಮ್ಮ ಮೈಮನವನ್ನೂ ತೋಯಿಸಿತ್ತು. ನಾವಿಕ್ಕಿದ ಬಟ್ಟೆಗಾಗಲಿ, ಮೈಗಾಗಲಿ ನೀರನ್ನು ತಡೆಯುವ ಶಕ್ತಿ ಇರಲಿಲ್ಲ. ಕಣ್ಣು ತೆಗೆಯಲೂ ಕೂಡ ಕಷ್ಟವಾಗಿ, ಕ್ಯಾಮೆರಾವನ್ನು ಆಚೆಗೆ ಹಿಡಿಯಲು ಸಾಧ್ಯವೇ ಇಲ್ಲದಂತೆ ನೀರೆರಚು. ಶಬ್ದದ ಕಿವಿಗಚ್ಚು. ಏನಿದು? ಯಾವ ಕಾಲದಿಂದ ಹರಿಯುತ್ತಿರುವುದೋ ಏನೋ? ಹೇಗೆ?
‘ಯಾವ ಕಾಲಕ್ಕೂ ಭೂಮಿ ಉಕ್ಕುವ ಚಿಲುಮೆಯೇ ಸೈ’ ಎನ್ನುವಂತೆ ಈ ನೀರಿನ ಸುರುವು. ಈ ಬೃಹತ್ ನೀರಿನ ಆಲದ ಮರದಿಂದ ಬಿಟ್ಟ ನೀರ ಬಿಳಲುಗಳು ಇಡೀ ಪ್ರಪಂಚವನ್ನೇ ಸಾಕಬಲ್ಲುವೇನೋ ಅನ್ನಿಸಿತು. ಏನಾದರಾಗಲಿ? ಇದಕ್ಕೂ ಮನುಷ್ಯ ಎದೆಕೊಟ್ಟು ಅದರ ಮುಂದೆ ಹಾದು ‘ನಿನ್ನ ರೂಪಕ್ಕೆ ನಾ ಮರಳು ತಾಯೇ’ ಎನ್ನುತ್ತಾ ಹಿಗ್ಗಿ ಮೈದುಂಬಿಕೊಳ್ಳುವ ಸಾಹಸವನ್ನು ಕೈ ಬಿಡುವುದೇ ಇಲ್ಲವಲ್ಲ ಅನ್ನಿಸಿತು. ಜನರ ಅಚ್ಚರಿ, ಗಾಬರಿಗಳ ಕೂಗು ಈಗ ಮೂಕವಾಗಿ ತೋಯುತ್ತಲೇ ಕೈ ಅಡ್ದ ಇಟ್ಟು ಕಿರಿದು ಮಾಡಿದ ಕಣ್ಣಿಟ್ಟು, ಉಕ್ಕಿ ಹರಿವ ಹಾಲ್ಗಡಲ ಚಂದಕ್ಕೆ ಕಣ್ ಕಣ್ ಬಿಡುತಿತ್ತು. ಬಾಯ್ ಬಾಯ್ ಬಿಡುತಿತ್ತು.

ಇಂಥ ರುದ್ರ ಜಲಪಾತದಲ್ಲೂ ಸಹ ಮರದ ಪೀಪಾಯಿಯಲ್ಲಿ ತನ್ನ ಬೆಕ್ಕಿನೊಡನೆ ಕೂತು ಹಾರಿ ಜಲಪಾತದ ಜೊತೆಯಲ್ಲೇ ಕೆಳಗಿಳಿದ ವಿಧವೆಯೊಬ್ಬಳು, ಜಲಪಾತದ ಮೇಲಿನಿಂದ ಕೆಳಗೆ ಸಾಗಿ ಬದುಕಿ ಬಂದ ಬಗ್ಗೆ ವಿವರಣೆ ಸಿಗುತ್ತದೆ. ಇವಳು ಮೃತ ಯೋಧನೊಬ್ಬನ ಪತ್ನಿಯಾಗಿದ್ದು ಕೊನೆವರೆಗೂ ಇಲ್ಲೇ ಸ್ಕೂಲ್ ಮಾಸ್ತರಣಿಯೂ ಆಗಿದ್ದಳು ಎಂಬ ವಿವರ ಸಿಗುತ್ತದೆ. ಬಹುಶಃ ಆಕೆಯ ಹೆದರಿಕೆಯನ್ನು ನಮ್ಮ ಸಮಾಜವೇ ಕಳೆದು ಹಾಕಿತ್ತೇನೋ….

ಭಯವೇ ಇಲ್ಲದ ಆ ಹೆಣ್ಣುಮಗಳ ಬಗ್ಗೆ ಮಾಹಿತಿಯಿದೆ. ಹಾಗೇ ಹಗ್ಗವನ್ನು ಅಡ್ಡಗಟ್ಟಿ ನಡೆವವರು, ಸಾಹಸಿಗರ ಕಥೆಗಳೂ ಇವೆ. ಇದಲ್ಲದೆ ಸಾಹಸಕ್ಕೆ ಬಂದು ಜೀವ ತೆರುವವರೂ ಇದ್ದಾರೆ. ಮನುಷ್ಯ ಪ್ರಕೃತಿಯ ಶಿಶು. ಯಾವಾಗಲೂ ಅದರೆಡೆಗೆ ಕುತೂಹಲದ ಕಣ್ಣಿಟ್ಟಿರುತ್ತಾನೆ ಎಂಬುದು ನಿಜವೇ ಆಗಿದೆ.

ಬೆಟ್ಟಕ್ಕಿಟ್ಟ ಅಟ್ಟಣಿಗೆಯನು ಹತ್ತಿ….

ಜಲಪಾತದ ಅಗಾಧತೆಯನ್ನು ಕೆಳಗೆ ಪಾತಾಳದಲ್ಲಿಳಿದು… ಆ ನೀರ ತಿಳಿಯನ್ನು ನೋಡಿ ಬಂದ ಮೇಲೆ ನೀಲಿ ಉಡುಪನ್ನು ತೆಗೆದು ಡಸ್ಟ್ ಬಿನ್ ಗೆ ಹಾಕಿ ಹಳದಿ ರೇನ್ ಕೋಟನ್ನು ತಿರುಗಿ ತೊಟ್ಟು ಮತ್ತೆ ಕ್ಯೂ ದಾಟಿ ಬೆಟ್ಟಕ್ಕೆ ಇಟ್ಟ ಮರದ ಅಟ್ಟಣಿಗೆಯನ್ನು ಹತ್ತುತ್ತಾ… ಹತ್ತುತ್ತಾ… ನಾಕು ಮಾರು ದೂರದಿಂದ ಮೂರು ತಿರುವಿನ ಹಂತ ದಾಟಿ ಬೆಟ್ಟದ ಹತ್ತಿರಕ್ಕೆ ಅಂತರ ಕಡಿಮೆ ಮಾಡಿಕೊಳ್ಳುತ್ತ ಬಂದೆವು.

ಜನ ನೆಂದು ಆ ತುಂತುರಿನ ಹಾಡಿಗೆ ಹುಯಿಲೆಬ್ಬಿಸುತ್ತಿದ್ದರು. ಬರುಬರುತ್ತ ಅದು ಹತ್ತಿರವಾಗುತ್ತ ರಪರಪನೆ ಎರಚಲು ಹೊಡೆವ ಮಳೆಯಂತಾಯಿತು. ಆ ನಂತರಕ್ಕೆ ತೀರಾ ಹತ್ತಿರಕ್ಕೆ ಬಂದ ಅದು ಜಡಿಮಳೆಯಂತೆ ಮುಖ ಮೈಗೆ ಬಾರಿಸತೊಡಗಿತು. ಹತ್ತಿರದಲ್ಲಿ ನಿಲ್ಲಲೂ ಆಗದ, ದೂರ ನಿಲ್ಲಲೂ ಆಗದ ಸ್ಥಿತಿ. ತಲೆಯೆತ್ತದಂತೆ ನೀರ ಹೊಡೆತ. ಆದರೂ ಅಪ್ಯಾಯಮಾನ. ಯುವಕರು ಎದೆಯೊಡ್ಡುತ್ತಿದ್ದರು. ಆದರೆ ನಾವು ಗಟ್ಟಿ ಕೈಬಿಡದೆ ಮರದ ಅಟ್ಟಣಿಗೆಯನ್ನು ಹಿಡಿದಿದ್ದೆವು.

ನೀರು ಎದೆಗೆ ತಾಕುವಂತೆ ನಿಂತಿದ್ದೆವು. ಆದರೆ ಹಾವಸೆ ಬಂದ ಮರದ ಕಟ್ಟುಗಳು ಹಿಂದೆ ನಾವೂ ಜೀವಂತ ಇದ್ದೆವು ಎನ್ನುವುದನ್ನು ಸಾರುತ್ತಿದ್ದವು. ಅದರ ಮೈ ಮೇಲೆ ಜಾರು ಹಾವಸೆಯೋ ಹಾವಸೆ ಹಬ್ಬಿ, ಬೆಟ್ಟದ ತಪ್ಪಲಿನ ಮರದಲ್ಲೂ ಜೋತು ಬಿದ್ದಿತ್ತು. ನೆಲದ ಮೇಲಿರುವ ಯಾವುದೂ ಜಡವಲ್ಲ. ನಿರಂತರ ಪ್ರಕ್ರಿಯೆಯಂತೆ ಕಾಣುವ ಅದನ್ನು ಇನ್ನಷ್ಟು ಸಣ್ಣ ವಯಸ್ಸಿನಲ್ಲಿ ನಾವು ನೋಡಿದ್ದರೆ…. ಅದರ ಸವಿಗೆ ನಾವು ಇನ್ನೂ ಉತ್ಸಾಹದಲ್ಲಿ ತೆರೆದುಕೊಳ್ಳಬಹುದಿತ್ತೇನೋ ಎನ್ನುವುದು ಸುಳ್ಳಾಗಿರಲಿಲ್ಲ.

ಪ್ರಕೃತಿ ಚಿರಯೌವ್ವನೆ. ಎಷ್ಟೇ ಬಾಡಿಸಿದರೂ ತನ್ನ ಮೈ ವದರಿ ನಿತ್ಯ ತನ್ನ ಹೊಸ ಹುಟ್ಟನ್ನು ಪಡೆಯುವ ಛಲದವಳು. ನಾವು ಅವಳನ್ನು ಕಂಡು…. ನಮಗೆ ಸ್ಮೃತಿ ಇರುವ ಒಂದೇ ಜನ್ಮದಲ್ಲಿ ಸಾರ್ಥಕತೆಯನ್ನು ಅನುಭವಿಸುವವರು. ಹೊಸ ಅನುಭವದಿಂದಷ್ಟೇ ನಮ್ಮ ಚೈತನ್ಯವನ್ನು ಕಾಪಾಡಿಕೊಳ್ಳಬೇಕಾದವರು. ಅಗಾಧತೆಗೂ… ಅಲ್ಪತೆಗೂ…. ಇರುವ ಬಾಂಧವ್ಯವನ್ನು ಕಾಪಿಟ್ಟುಕೊಳ್ಳೋಣ. ಆಗದು, ಆಗದು, ಅಲ್ಲಗಳೆಯಲಾಗದು. ಮಾನವ ಜನ್ಮ ದೊಡ್ಡದು! ಅಂತಲೂ ಅನ್ನೋಣ.

ದೇಶ ದೇಶದ ನಡುವೆ ನಾವು ಕಂಡದ್ದು

ಯು. ಎಸ್. ಕಡೆಯ ಅಂಚಿನಲ್ಲಿ ಮೇಲೆ ನಿಂತು ನೋಡಿದರೆ ಒಂದೆಡೆ ಚಲಿಸುವ ನೀಲಿ ಉಡುಪಿನ ದೋಣಿ ಇತ್ತ ಕಡೆಯಿಂದ ಸಾಗುತ್ತಿದ್ದವು. ಇನ್ನೂ ಕೆಳಗೆ ಬಗ್ಗಿ ನೋಡಿದಾಗ ಕೆನಡಾದ ಆ ಅಂಚಿನಲ್ಲಿ ಕೆಂಪು ಉಡುಪನ್ನು ತೊಟ್ಟ ಜನರಿಂದ ತುಂಬಿದ ದೋಣಿ ಸಜ್ಜಾಗುತಿತ್ತು. ಎರಡೂ ದೇಶಗಳು ಈ ತಾಯ ದೇಹವನ್ನು ಹರಿದು ಹಂಚಿಕೊಂಡ ಮಕ್ಕಳಂತೆ ಅವರವರ ಗಡಿಗಳಲ್ಲಿ ದುಡಿಯಲು ಸಜ್ಜಾಗುತಿದ್ದರು. ನೆಲ ಜಲಕ್ಕೆ ಕಟ್ಟಿದ ಬೆಲೆಯೇ ಇಂದು ಎಲ್ಲೆಡೆ ಭೂಮಿಯನ್ನು ಬರಡು ಮಾಡಿಕೊಳ್ಳುತ್ತಿದೆ.

ದಢದಢನೆ ಸುರಿವ ಆ ನೀರ ಮೈಗೂ ಕಪ್ಪ ಕಾಣಿಕೆ ವಿಧಿಸಿ ಅವಳನ್ನು ಸುಸ್ತು ಮಾಡಿಬಿಡುತ್ತಾರೇನೋ ಅನ್ನಿಸಿತು. ನಮ್ಮ ಜೋಗದ ಸ್ಥಿತಿ ನೆನೆಸಿಕೊಂಡೆ. ಕೇವಲ ನಲವತ್ತು ವರುಶದ ಹಿಂದೆ ಬೇಸಿಗೆಯಲ್ಲೂ ನೀರ ಸುರುವಿನಲ್ಲಿ ಕಣ್ ತಣಿಸುತ್ತಿದ್ದ ಜಲಪಾತವನ್ನು ನಾವು ನೋಡಿ ಬಂದಿದ್ದೆವು. ಈಗೊಮ್ಮೆ ಜನವರಿ ತಿಂಗಳಿನಲ್ಲಿ ಹೋದಾಗ ಗಬ್ಬೆದ್ದ ಹಳ್ಳಕೊಳ್ಳದಂತೆ ಭಾಸವಾಗಿತ್ತು. ಭೂಮ್ತಾಯಿಯೇ ಎದ್ದು ಬಾಯಿಬಡಿದುಕೊಳ್ಳುವಂತೆ ಒಡಲು ಬರಿದಾಗಿತ್ತು. ಮನುಷ್ಯ ನಡೆದಾಡಿದ ದಾರಿಯಲ್ಲಿ ಹುಲ್ಲೂ ಹುಟ್ಟಲಾರದು ಎಂಬುದು ಜಾನಪದರ ನಂಬಿಕೆ. ಎತ್ತರದ ಜಾಗದಲ್ಲಿ ನಾವು ನಿಂತು ಭೂಮಿಯನ್ನು ನೋಡಿದಾಗ ಮನುಷ್ಯನ ಈ ಆಟಗಳ ಸಣ್ಣತನ ತೋರುತ್ತದೆ. ಸಜ್ಜಾಗುತ್ತಿರುವ ಬೇರೆ ಬೇರೆ ಬಣ್ಣದ ದೋಣಿಗಳನ್ನು ನೋಡಿ ನಗುವೂ ಬಂತು. ಇದನ್ನು ಕಂಡಾಗ ಈ ಅಗಾಧತೆಗೆ ಒಂದು ಕಪ್ಪು ಚುಕ್ಕಿ ಇಟ್ಟಂತನ್ನಿಸುತ್ತದೆ.

ನೀರೇ ತನ್ನ ಮೈಮೇಲೆ ಸೀಮಾ ರೇಖೆಗಳನ್ನು ಎಳೆದುಕೊಂಡು ಕಾಡು ಕಣಿವೆಗಳನ್ನು ಬೆಟ್ಟಗುಡ್ಡಗಳನ್ನು ತನಗೆ ಬೇಕಾದ ಹಾಗೆ ಹದ ಮಾಡಿಕೊಂಡು ವಿಂಗಡಣೆ ಮಾಡಿಕೊಂಡಿರುವಾಗ…. ನಂದೊಂದಿರಲಿ ಎನ್ನುವ ನಮ್ಮ ತಲೆಹರಟೆಗಳು ದುರಂತಕ್ಕೆ ಎಡೆ ಮಾಡುತ್ತವೆ. ಎಚ್ಚರಿಕೆ! ಯಾರಿಗೆ ಹೇಳುವುದು? ಯಾಕೆಂದರೆ, ಗೋಟ್ ಐಲ್ಯಾಂಡಿನಲ್ಲಿ ಪ್ರಯಾಣಿಕರ ಹಿಂದೆ ಹಿಂದೆಯೇ ಅವರ ತಿಂಡಿ ಪೊಟ್ಟಣಕ್ಕೆ ಹಾರಿ ಹಾರಿ ಅಲೆಯುವ ನೀರಹಕ್ಕಿಗಳನ್ನು ನೋಡಿದಾಗ ಖೇದವಾಗುತ್ತದೆ. ನಾವು ಜಲಪಾತದ ನೀರ ರಭಸಕ್ಕೆ ಕಣ್ ಬಿಡಲಾರದೆ ಜಲಪಾತದ ವಿಸ್ಮಯಕ್ಕೆ ತೆರೆದುಕೊಳ್ಳುವಾಗ ಈ ಹಕ್ಕಿಗಳು ಅನತಿ ದೂರದಲ್ಲೇ ಆ ನಿರ್ಮಲ ನೀರ ತೆರೆಯಲ್ಲಿ ಈಜುವ ಚಂದವನ್ನು ನೋಡಬೇಕಿತ್ತು. ಅದೊಂದು ಜಗತ್ ಅಚ್ಚರಿಯಂತೆ! ಅದರ ಮುಂದೆಯೇ… ಹಾರಿಹೋಗುವುದೂ ಅಷ್ಟೇ… ಆ ನೀರ ತುಂತುರು ರೆಕ್ಕೆ ಅಗಲಿಸಿ ಅದರ ಹತ್ತಿರದಿಂದ ಗಾಳಿಗೆ ತೆರೆಯೊಡೆದಂತೆ.

ಪ್ರಕೃತಿ ಚಿರಯೌವ್ವನೆ. ಎಷ್ಟೇ ಬಾಡಿಸಿದರೂ ತನ್ನ ಮೈ ವದರಿ ನಿತ್ಯ ತನ್ನ ಹೊಸ ಹುಟ್ಟನ್ನು ಪಡೆಯುವ ಛಲದವಳು. ನಾವು ಅವಳನ್ನು ಕಂಡು…. ನಮಗೆ ಸ್ಮೃತಿ ಇರುವ ಒಂದೇ ಜನ್ಮದಲ್ಲಿ ಸಾರ್ಥಕತೆಯನ್ನು ಅನುಭವಿಸುವವರು. ಹೊಸ ಅನುಭವದಿಂದಷ್ಟೇ ನಮ್ಮ ಚೈತನ್ಯವನ್ನು ಕಾಪಾಡಿಕೊಳ್ಳಬೇಕಾದವರು.

ಮೂಲತಃ ಹುಟ್ಟನ್ನು ಪಡೆದ ಒಂದೊಂದು ಜೀವಿಯೂ ತಮ್ಮ ನೆಲೆಯನ್ನು ಕಂಡುಕೊಳ್ಳುವ ಅಗಾಧ ಶಕ್ತಿಯೇ ಆಗಿವೆ. ಆದರೆ, ಮನುಷ್ಯನ ಬುದ್ಧಿಮತ್ತೆಯಿಂದ ಬುದ್ಧಿಯ ಉಪಯೋಗವಷ್ಟೇ ಬಳಕೆಯಾಗಿ ನಮಗೆ ಸುಲಭ ಸಾಧ್ಯತೆಗಳು ದಕ್ಕಿವೆ. ಆದರೆ, ಇದು ಪ್ರಕೃತಿ ವೈರುಧ್ಯದ ನಡೆ ಎಂದರೆ ತಪಾಗಲಾರದು. ಗಾಂಧೀಜಿ ಹೇಳಿದಂತೆ ‘ಕೈಕಾಲುಗಳಿಗೆ ಕೆಲಸಕೊಡಿ’ ಎನ್ನುವ ಒಂದು ವಾಕ್ಯ ಘೋಷಣೆಯಾಗುತ್ತ…. ಕುಂತುಣ್ಣುವ…. ಇನ್ನೊಬ್ಬರ ಮೇಲೆ ಒರಗಿ ಕಾಲ ಹಾಕುವ ಕಲೆ ನಮಗೆ ಸಿದ್ಧಿಸತೊಡಗಿದೆ. ಈ ಲಾಲಸೆಯನ್ನು ನಾವು ನಮ್ಮ ಸುತ್ತ ಇರುವ ಪ್ರಾಣಿಪಕ್ಷಿಗಳಿಗೂ ಹಂಚುತ್ತಿದ್ದೇವೆ.

ಇಷ್ಟೆಲ್ಲದರ ನಡುವೆ ನಮ್ಮ ದೋಣಿಗಳು ಜಲಪಾತದ ಬುಡದಲ್ಲಿ ಮಿಂದು ಬರುವಾಗ ಜೀವ ಪುನೀತವಾದ ಆ ಗಳಿಗೆಯಲ್ಲಿ ಎರಡೂ ದೇಶದ ಪ್ರಯಾಣಿಕರು ಕೈಬೀಸಿ ತಮ್ಮ ಸಂತೋಷವನ್ನು ಹಂಚಿಕೊಳ್ಳುವ ನಿರ್ಮಲತೆಯನ್ನು ಆ ನೀರ ಸುರಿವು ಎಲ್ಲರಿಗೂ ದಯಪಾಲಿಸಿತ್ತು. ಕಾಲ, ದೇಶ ಕೋಶ ಮರೆತ, ಭಿನ್ನ ಭೇದ ಮರೆತ ಆ ಮುಗುಳ್ನಗೆ ಎಲ್ಲ ಜೀವಿಗಳ ಮುಖದಲ್ಲಿ ಹಾಗೇ ತೇಲುತ್ತಿರಲಿ. ನಮ್ಮನ್ನು ನಾವು ಮರೆವ ಇಂಥ ಗಳಿಗೆಗಳು ಎಲ್ಲರಿಗೂ ಸಿಗಲಿ ಅನ್ನಿಸಿದ್ದು ಅಂದಿನ ವಿಶೇಷ. ಪ್ರಕೃತಿಯೊಂದಿಗಿನ ಒಡನಾಟ ಎಲ್ಲರಿಗೂ ದೊರಕಲಿ. ಮನದ ಗೋಡೆಗಳು ಕಳಚಿಬೀಳುವಂತೆ.

ದೇಶಗಳ ವಾದವಿವಾದ

೧೮೧೯ ರಲ್ಲಿ ಅಂತಾರಾಷ್ಟ್ರೀಯ ಸೀಮಾರೇಖೆಯನ್ನು ಮೊದಲು ‘ಹಾರ್ಸ್ ಶೂ ಫಾಲ್ಸ್’ ಕಡೆಯಿಂದ ಎಳೆದು ನಿರ್ಧಾರಮಾಡಿದ ಜಾಗಗಳನ್ನು ಈಗಲೂ ಎರಡೂ ಕಡೆಯವರು ಒಪ್ಪಿಕೊಳ್ಳುತ್ತಿಲ್ಲ. ಸ್ವಾಭಾವಿಕ ಭೂಕುಸಿತ ಮತ್ತು ನೀರಿನ ಕೊರೆತಗಳಿಂದ ಕೊಚ್ಚಿಹೋದ ಭೂಮಿಯ ಬಗ್ಗೆ ಮತ್ತು ಕಟ್ಟಡನಿರ್ಮಾಣದಿಂದ ಆಗಿರುವ ಆಕ್ರಮಣಗಳಿಂದ ಅಲ್ಲಿನ ಜನಕ್ಕೆ ಸಮಾಧಾನ ಸಿಕ್ಕದೆ, ಆ ಜಾಗ ವಿವಾದದಲ್ಲಿದೆ.

ನಯಾಗರ ಜಲಪಾತದ ಸೌಂದರ್ಯವನ್ನು ರಕ್ಷಿಸುವ ಉದ್ದೇಶದಿಂದ ಸಾಕಷ್ಟು ಪರಿಮಾಣದ ನೀರನ್ನು ಜಲಪಾತದಲ್ಲಿ ಹರಿಸಲು ಕೆನಡ ಮತ್ತು ಅಮೆರಿಕ ದೇಶಗಳು 1950ರಲ್ಲಿ ಒಪ್ಪಂದ ಮಾಡಿಕೊಂಡಿವೆ. ನಿಗದಿಯಾದ ಪರಿಮಾಣದಲ್ಲಿ ಜಲಪಾತಕ್ಕೆ ಬಿಡಬೇಕಾದ್ದಲ್ಲದೆ ಉಳಿದ ನೀರನ್ನು ಜಲವಿದ್ಯುಚ್ಛಕ್ತಿಯ ಉತ್ಪಾದನೆಗೆ ಅಮೆರಿಕ ಮತ್ತು ಕೆನಡ ದೇಶಗಳೆರಡೂ ಸಮವಾಗಿ ಹಂಚಿಕೊಂಡಿವೆ. ನಯಾಗರ ನದಿಯಿಂದ ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯ ಒಟ್ಟು ಪರಿಮಾಣ ಸುಮಾರು 40,00,000 ಕಿ.ವಾ. ಇಲ್ಲಿ ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯ ಬಹುಭಾಗವನ್ನು ಸಮೀಪದ ನಗರಗಳ ಕೈಗಾರಿಕೆಗಳಿಗೆ ಬಳಸುತ್ತಿದ್ದಾರೆ.

ನಯಾಗರ ಫಾಲ್ಸ್ ತನ್ನ ಪ್ರಾಕೃತಿಕ ಅಂದಕ್ಕೆ ಚೆಲುವಿಗೆ ಮಾತ್ರವಲ್ಲದೆ ಹೈಡ್ರೋ ಎಲೆಕ್ಟ್ರಿಕ್ ಪವರ್ ನಲ್ಲೂ ಮುಂದಿದೆ. ಇಲ್ಲಿ ಸ್ಥಾಪಿಸಲ್ಪಟ್ಟಿರುವ ಜಲವಿದ್ಯುತ್ ನಿರ್ಮಾಣ ಸ್ಥಾವರ, ಜನರಿಗೆ ಮನರಂಜನೆ ಒದಗಿಸುವ ಜೊತೆಗೆ ವಾಣಿಜ್ಯ ಮತ್ತು ಔದ್ಯೋಗಿಕ ಸ್ಥಾವರಗಳಿಗೆ, ಕಾರ್ಖಾನೆಗಳಿಗೆ, ನಿಯಮಿತವಾಗಿ ವಿದ್ಯುತ್ ಸರಬರಾಜಿನ ಆವಶ್ಯಕತೆಗಳನ್ನು ಸಮರ್ಥವಾಗಿ ೧೯ನೇ ಶತಮಾನದಿಂದ ನಿರ್ವಹಿಸುತ್ತಿದೆ. ಏಕಕಾಲದಲ್ಲಿ ಎಷ್ಟೋ ಅಶ್ವಗಳನ್ನು ಒಟ್ಟಿಗೆ ಬಿಡುವಷ್ಟು ವೇಗದ ಹೈಡ್ರೋಎಲೆಕ್ಟ್ರಿಕ್ ಪವರನ್ನು ಅದು ಉತ್ಪಾದಿಸಬಲ್ಲದು.

ಬಹುತೇಕ ನೀರು ಕಾಲುವೆ ಮತ್ತು ಪೈಪ್ ಗಳ ಮುಖಾಂತರ ಹತ್ತಿರದ ‘ಜಲವಿದ್ಯುತ್ ಸ್ಥಾವರ’ಕ್ಕೆ ಹಾಯಿಸಲಾಗುತ್ತದೆ. ವಿಶ್ವದ ಶೇಕಡಾ ೨೦% ರಷ್ಟು ಸಿಹಿನೀರನ್ನು ಈ ಪ್ರದೇಶದ ಮೇಲೆ ಹರಿದು ಬರುವ ನದಿಗಳು ಜಲಪಾತಕ್ಕೆ ಒದಗಿಸುತ್ತವೆ. ಜಲಪಾತದ ಅತಿ ಅಗಲವಾದ ಹರಿವು ನಿಮಿಷಕ್ಕೆ ೬ ಮಿಲಿಯನ್ ಘನ ಅಡಿಯಷ್ಟು ನೀರು ಒಂದೇಸಮನೆ ಭೋರ್ಗರೆಯುತ್ತಾ ಕೆಳಗೆ ಧುಮ್ಮಿಕ್ಕಿ ಓಡುತ್ತದೆ. ಈ ವೇಗದಿಂದಲೇ ವಿದ್ಯುತ್ ಸ್ಥಾವರದ ಜೊತೆಗೆ, ಔದ್ಯೋಗಿಕ ಮತ್ತು ಕೈಗಾರಿಕ ಕೇಂದ್ರವೆಂದು ಇದು ಹೆಸರುಪಡೆದಿದೆ.

ಚಳಿಗಾಲದ ಪೇಂಟಿಂಗ್

ಅಮೆರಿಕದಲ್ಲಿ ಚಳಿಗಾಲ ಆರಂಭವಾಗಿದೆಯೆಂದರೆ ಆ ಚಳಿ ಅಂತಿಂಥದ್ದಲ್ಲ. ನದಿ ನೀರೇ ಹೆಪ್ಪುಗಟ್ಟುವಷ್ಟರ ಮಟ್ಟಿಗೆ ವಾತಾವರಣ ಮೈನಸ್ ಡಿಗ್ರಿಗಿಳಿದುಬಿಡುತ್ತದೆ. ಇಂತಹ ವಾತಾವರಣ ಬಂತೆಂದರೆ ಸಾಕು ನಯಾಗರ ಜಲಪಾತದಲ್ಲಿ ಧುಮಿಕ್ಕುತ್ತಿದ್ದ ನೀರು ಹಾಗೆಯೇ ಮಂಜುಗಡ್ಡೆಯಾಗಿಬಿಟ್ಟಿರುತ್ತದೆ. ಅಂಥ ಮನಮೋಹಕ ಅಪೂರ್ವ ದೃಶ್ಯಕ್ಕೆ ನಯಾಗರ ಸಾಕ್ಷಿಯಾಗಿಬಿಡುತ್ತದೆ. ಪ್ರಕೃತಿಯೇ ತನ್ನೆದೆಯ ಮೇಲೆ ಬಿಡಿಸಿಕೊಂಡ ಪೇಂಟಿಂಗ್ ನಂತೆ ಭಾಸವಾಗುತ್ತದೆ ಎಂದು ಜನ ನೋಡಲು ಹೀಗೆ ಮುಕ್ಕಿರಿಯುತ್ತಾರೆ ಎಂದು ನಮ್ಮ ಸ್ನೇಹಿತರಾದ ರೆಡ್ಡಿಯವರು ಹೇಳುತಿದ್ದರು.

125 ಅಡಿ ಎತ್ತರದಿಂದ ಧುಮಿಕ್ಕುವ ನೀರಲ್ಲದೆ, ನದಿಯಲ್ಲೂ ಕೂಡ ನೀರುಹರಿಯದೆ ಹೆಪ್ಪುಗಟ್ಟಿದ್ದನ್ನು, ಕೆನಡಾ ಮತ್ತು ಅಮೆರಿಕ ದೇಶಗಳ ನಡುವಿರುವ ಈ ಸ್ತಬ್ಧ ಜಲಪಾತದ ಚಿತ್ರವನ್ನು ನೋಡಲು ವಿಶ್ವದ ನಾನಾ ಮೂಲೆಗಳಿಂದ ನಯಾಗರ ಕಡೆಗೆ ಹೊರಡುತ್ತಾರೆ. ಅಂದಹಾಗೆ ಅಲ್ಲಿ ಆಗಿನ ವಾತಾವರಣ ಏನಿಲ್ಲವೆಂದರೂ ಮೈನಸ್ ೧೩ ಡಿಗ್ರಿಗಿಳಿಯುತ್ತದೆಯಂತೆ.


ಹೀಗೆ ಹಿಂದೆ ಯಾವ ಕಾಲದಲ್ಲೋ…. ಪದರ ಕಟ್ಟಿದ ಹಿಮದ ಮೇಲೆ ನಡೆದು ಬಂದವರು ಹಿಮ ಕರಗಿದ ಮೇಲಿನ ಈ ವೈಭವವನ್ನು ಕಂಡು ಬೆಕ್ಕಸಬೆರಗಾದರು. ಜಗತ್ತಿಗೆ ನಯಾಗರವನ್ನು ಪರಿಚಯಿಸಿದರು ಎನ್ನುವ ಮಾಹಿತಿಯಿದೆ. ಅಂತೂ ನಯಾಗರ ನೋಡಲೇಬೇಕಾದ ಕಣ್ತುಂಬಿಕೊಳ್ಳುವ ಜಲಪಾತ. ಇಂಥ ಕಾಣದ ವಿಸ್ಮಯಗಳು ನಮ್ಮ ಕಣ್ಣಿಗೆ ಮರೆಮಾಚಿ ಎಷ್ಟಿವೆಯೋ? ಪ್ರಪಂಚವೇ ಒಂದು ಮಾಯಕದ ಗೋಳ. ಅಸೀಮ ವಿಶ್ವ ಪಥದಲ್ಲಿ ಇಂಥ ಬೆರಗೆಷ್ಟೋ…. ?