ಹರಿದಾಸರು ಹೀಗೆ ಅಲೆದದ್ದು ಸುಮಾರು ಎಂಟು ವರ್ಷಗಳ ಕಾಲ. ಆ ದುರ್ದಿನಗಳು ಕಳೆದ ಮೇಲೆ ಹರಿದಾಸರು ಸುಮಾರು 1905 ರಲ್ಲಿ ಊರಿಗೆ ಮರಳಿದರು. ಬಂದವರು ಮತ್ತೆ ಕಾರ್ಕಳ ವೆಂಕಟರಮಣನ ಸನ್ನಿಧಿಯಲ್ಲಿ ಎಂಟು ತಿಂಗಳುಗಳ ಕಾಲ ಇದ್ದರು. ಹಿಂದೆ ಅವರು ತಾನೇ ಶನಿವಾರ ಶನಿವಾರ ತಿರುಪತಿಗೆಂದು ಕಾಣಿಕೆ ಹಾಕುತ್ತ ಕಟ್ಟಿಟ್ಟ ಮುಡಿಪನ್ನೇ ಬಡತನದ ಕಾರಣ ತೆಗೆದು ಖರ್ಚು ಮಾಡುವ ಪ್ರಸಂಗವೂ ಅವರಿಗೆ ಎದುರಾಗಿತ್ತು, ಶನಿವಾರ ಒಂದುಹೊತ್ತು ಊಟದ ವ್ರತವೂ ಕೆಟ್ಟಿತು.
‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯನವರ ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್.

 

ವಾರಣವದನ | ತ್ರೈಲೋಕ್ಯಸುಮೋಹನ
ವಾರಣ ವದನ|| ಪಲ್ಲವಿ||
ವಾರಿಜಾಕ್ಷ ವರಗುಣಾಕರ|
ವಾರಿಜಾಕ್ಷಿ ವರದಾಯಕ ಸನ್ನುತ|
ನಾರದಾದಿ ಮುನಿವಂದಿತ ಪದಯುಗ|| ಅನುಪಲ್ಲವಿ||

ಸುಂದರಾಂಗ ಸುಕಲಾನ್ವಿತ ನಿಭಚರಣ| ಕಟಿಶೋಭಿತವ್ಯಾಳಸ|
ಬಂಧನಾಬ್ಧಿ ಶತಕೋಟಿಸದೃಶ ಕಿರಣ||
ಚಂದನಾಂಗಾರ್ಚಿತ ಸುಮನೋಹರ!
ಮಂದಹಾಸ ಮಹಿಮಾಂಬುಧಿಚಂದಿರ || || 1 ||

ಕಂಬುಗ್ರೀವ ಕಮನೀಯ ಕರಾಂಬುರುಹ| ಪಾಶಾಂಕುಶಧರವರ|
ಶಂಬರಾರಿಜಿತುತನಯ ಮಧುರಗೇಹ||
ಜಂಭಭೇದಿವಂದಿತ ತ್ರಿವಂದಿತ|
ಲಂಬೋದರ ವಿಘ್ನಾಂಬುಧಿ ಕುಂಭಜ || || 2 ||

ಚಾರು ಬಾರಕನ್ಯಾಪುರವರ ನಿಲಯ| ಮೃಕಂಡುಜ ಮುನಿವರ|
ಸಾರ ಮಂತ್ರಸ್ಥಾಪಿತ ಮಂಗಲ ಕೆತೆಯ||
ವರಕಪಿತ್ಥಫಲೋರಸಭುಂಜಿತ|
ಧೀರ ಲಕ್ಷ್ಮೀನಾರಾಯಣ ಸಖಸುತ || || 3 ||

ಬಹಳ ಪ್ರಸಿದ್ಧವಾಗಿರುವ, ಹೆಚ್ಚಿನ ಯಕ್ಷಗಾನ ಪ್ರಸಂಗಗಳ ಪ್ರಾರಂಭದಲ್ಲಿ ಬಳಸುವ ಮೇಲಿನ ಗಣಪತಿ ಸ್ತುತಿಯನ್ನು ರಚಿಸಿದವರು ಯಾರೆನ್ನುವುದನ್ನು ಬಹುತೇಕರು ಅರಿಯರು. ಈ ಕೀರ್ತನೆಯನ್ನು ರಚಿಸಿದವರು ದಕ್ಷಿಣ ಕನ್ನಡದ ಹರಿದಾಸ ಪರಂಪರೆಯ ಇಪ್ಪತ್ತನೆಯ ಶತಮಾನದ ಶ್ರೇಷ್ಠ ಆಶುಕವಿ ಹರಿದಾಸ ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ (1854-1924). ಅವರು ಕೇವಲ ಭಕ್ತಕವಿಯಷ್ಟೇ ಅಲ್ಲ, ಸಾಮಾಜಿಕ ಜಾಗೃತಿಗೆ, ಸಾಂದರ್ಭಿಕ ಪ್ರತಿಕ್ರಿಯೆಗಳಿಗೆ, ಆಚರಣಾತ್ಮಕ ಉದ್ದೇಶಗಳಿಗೆ ಮತ್ತು ರಸಿಕತೆಯ ಅಭಿವ್ಯಕ್ತಿಗಾಗಿಯೂ ಕವಿತೆಗಳನ್ನು ಬರೆದ ಸವ್ಯಸಾಚಿ; ನಾಲ್ಕು ಭಾಷೆಗಳಲ್ಲಿ ಹಾಡು ಕಟ್ಟುತ್ತಿದ್ದ ಚತುರ್ಭಾಷಾ ಕವಿ ಮತ್ತು ಜತೆಜತೆಗೆ ಸಂಸಾರಿಯೂ-ಅವಧೂತನೂ ಆಗಿದ್ದ ವಿಶಿಷ್ಟ ವ್ಯಕ್ತಿತ್ವದ ಅನುಭಾವಿ.

ಅವರು ಈ ಎಲ್ಲ ರಚನೆಗಳನ್ನು ಸನ್ನಿವೇಶದ ಅಗತ್ಯಕ್ಕೆ ತಕ್ಕಂತೆ ಆಗಿಂದಾಗ್ಗೆ ಮನಸ್ಸಿನಲ್ಲಿಯೇ ರಚಿಸಿ, ರಾಗವಾಗಿ ಹಾಡಿ ಸಮಾಜದ ಮೌಖಿಕ ಪರಂಪರೆಗೆ ಒಪ್ಪಿಸಿ ಹೋಗಿಬಿಡುತ್ತಿದ್ದರು. ಅವುಗಳನ್ನೆಲ್ಲ ಅವರ ಸಮಕಾಲೀನರೂ, ಆಮೇಲಿನ ಆಸಕ್ತ ಸಂಪಾದಕ – ಸಂಶೋಧಕರೂ ಜಾನಪದ ಮೂಲಗಳಿಂದ ಸಂಗ್ರಹಿಸಿ ಪುಸ್ತಕ ರೂಪಗಳಲ್ಲಿ ಪ್ರಕಟಿಸಿರುವುದರಿಂದ ಈಗ ಸಾಕಷ್ಟು ಕವಿತೆಗಳು ಉಳಿದಿವೆ.

ಮೂರು ಮಾರ್ಗಗಳು

ಕರಾವಳಿಯ ಕವಿರಾಜ ಮಾರ್ಗವನ್ನು ಪರಿಚಯಿಸುವಾಗ ನಾವು ಪ್ರತ್ಯೇಕ ಮೂರು ಪರಂಪರೆಗಳನ್ನು ಗಮನಿಸಬೇಕು. ಅವುಗಳಲ್ಲಿ ಮೊದಲನೆಯದು – ಪಂಜೆ ಮಂಗೇಶ ರಾಯರು ಮತ್ತು ಮಂಜೇಶ್ವರ ಗೋವಿಂದ ಪೈಗಳು ಪ್ರಾರಂಭಿಸಿ ಬೆಳೆಸಿದ ಪಾಶ್ಚಾತ್ಯ ಆಧುನಿಕ ಕಾವ್ಯದ ದಾರಿಯನ್ನು ಹಿಡಿದ ಪ್ರಸ್ಥಾನ. ಪೇಜಾವರ ಸದಾಶಿವರಾಯರು ಬಂದದ್ದು ಈ ಪರಂಪರೆಯಲ್ಲಿಯೇ. ಪಾ. ವೆಂ. ಆಚಾರ್ಯರನ್ನೂ ಇದೇ ಪರಂಪರೆಗೆ ಸೇರಿಸಬಹುದು.

ಎರಡನೆಯದು – ಹರಿದಾಸ ಪರಂಪರೆ. ಭಕ್ತಿ ಮಾರ್ಗದ ಕೀರ್ತನೆಗಳು ಮತ್ತು ಇತರ ಧಾರ್ಮಿಕ – ಸಾಮಾಜಿಕ ಉದ್ದೇಶದ ಪದ್ಯ ಕೃತಿಗಳನ್ನು ರಚಿಸಿದವರ ಒಂದು ಪರಂಪರೆ ಜಿಲ್ಲೆಯಲ್ಲಿತ್ತು. ಈ ಪರಂಪರೆಯ ಪ್ರತಿನಿಧಿಯಾಗಿ ಹರಿದಾಸ ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ ಅವರನ್ನು ಇಲ್ಲಿ ಪರಿಚಯಿಸಲಾಗಿದೆ. ಮುಳಿಯ ಮೂಕಾಂಬಿಕಾ ಅಮ್ಮ (1870-1942), ಮೂಕಜ್ಜಿ (ಉಳ್ಳೂರು ಮೂಕಾಂಬಿಕಾ ಅಮ್ಮ, 1908-1998), ನೆಲ್ಲಿಕಾರು `ಜೈನಮಹಿಳೆ’ (ರಾಧಾಮತಿ ಅಮ್ಮ – 1899-1970), ಬೆಳ್ಳೆ ಸೀತಾರತ್ನಮ್ಮ (1910-1995) ಮುಂತಾದವರು ನಂತರ ಈ ಪರಂಪರೆಯಲ್ಲಿ ಬಂದರು. ಪಾವಂಜೆ ಹರಿದಾಸರಿಗಿಂತ ಹಿಂದೆ ಉಡುಪಿ ಪೆರಂಪಳ್ಳಿಯ ಹರಿದಾಸ ನೆಕ್ಕಾರು ಕೃಷ್ಣದಾಸರು (ಕಾಲ ನಿರ್ಣಯ ಆಗಿಲ್ಲ; 1750 ರ ಆಸುಪಾಸು – ಅದರ ನಂತರ ಎಂದು ಹಾವನೂರರು ಊಹಿಸಿದ್ದಾರೆ) ಮೋಗ್ಲಿಂಗ್, ಕಿಟೆಲ್ ಮುಂತಾದವರಿಂದ ಪುರಂದರದಾಸ ಮತ್ತು ಕನಕದಾಸರ ಜತೆಗೆ ಗುರುತಿಸಲ್ಪಟ್ಟ ಗಣ್ಯ ದಾಸ ಕವಿಯಾಗಿದ್ದರು. ಅವರ ಅಂಕಿತ ‘ವರಾಹ ತಿಮ್ಮಪ್ಪ’.

ಮೂರನೆಯದು – ಮುಳಿಯ ಪರಂಪರೆ. ನವೋದಯದ ಒಂದು ಮುಖ್ಯ ಲಕ್ಷಣ-ವಿಸ್ಮೃತಿಯನ್ನು ತೊಡೆದು ಹಾಕಿ, ನಮ್ಮ ಪರಂಪರೆಯ ಸತ್ವವನ್ನು ತೋರಿಸಿಕೊಟ್ಟು ಜನರಲ್ಲಿ ಆತ್ಮಾಭಿಮಾನವನ್ನು ಹುಟ್ಟಿಸುವುದು. ಹೊಸಗನ್ನಡದ ನವೋದಯ ಕಾಲದಲ್ಲಿ ಮುಳಿಯ ತಿಮ್ಮಪ್ಪಯ್ಯ, ಕಡೆಂಗೋಡ್ಲು ಶಂಕರ ಭಟ್ಟರು ಮತ್ತು ಸೇಡಿಯಾಪು ಕೃಷ್ಣ ಭಟ್ಟರು ಮುಖ್ಯರಾಗಿದ್ದ ಈ ಪರಂಪರೆಯ ಕವಿಗಳು ಈ ಬಗೆಯ ಸಾಹಿತ್ಯ ಪ್ರಜ್ಞೆಯನ್ನು ತೋರಿಸಿದರು. ಇವರೆಲ್ಲರೂ ಸಂಸ್ಕೃತ ಮತ್ತು ಕನ್ನಡ ಭಾಷೆ, ಸಾಹಿತ್ಯಗಳ ಆಳವಾದ ಪರಿಚಯವಿದ್ದವರು ಮತ್ತು ಆಧುನಿಕತೆಗೆ ಹೊಂದಿಕೊಳ್ಳುವ ಸಣ್ಣ ಕಾವ್ಯಗಳು ಮತ್ತು ಕಿರುಗವನಗಳ ಸ್ವರೂಪವನ್ನು ಸ್ವೀಕರಿಸಿದರೂ ಇಂಗ್ಲಿಷಿನ ಅನುಕರಣೆ ಮಾಡದವರೂ ಆಗಿದ್ದರು.

ಮುಳಿಯ ಪರಂಪರೆಯಲ್ಲಿ ಕಡೆಂಗೋಡ್ಲು ಶಂಕರ ಭಟ್ಟರು ಪ್ರಧಾನ ಕವಿಗಳಾಗಿದ್ದಾರೆ. ಅ. ಗೌ. ಕಿನ್ನಿಗೋಳಿ, ಕಯ್ಯಾರ ಕಿಂಞಣ್ಣ ರೈಗಳು, ಎಸ್. ವೆಂಕಟರಾಜರು ಮುಂತಾದವರು ಇದೇ ಪರಂಪರೆಯಲ್ಲಿ ಹೊಸತನವನ್ನು ಮತ್ತು ಸ್ವಂತಿಕೆಯನ್ನು ಕಂಡುಕೊಂಡು ಮುನ್ನಡೆಸಿದವರು.

ಪಾವಂಜೆ ಹರಿದಾಸರ ಮಹತ್ವ

ಈ ಹಿನ್ನೆಲೆಯಲ್ಲಿ ಪಾವಂಜೆ ಹರಿದಾಸರ ಕವಿತ್ವವನ್ನು ಪರಿಚಯಿಸಿಕೊಳ್ಳುವುದೆಂದರೆ ಸಮಾಜದಲ್ಲಿ ಪದ್ಯಗಳಿಗೆ ಇದ್ದ ಸಾಂಸ್ಕೃತಿಕ ಮಹತ್ವ, ಅವುಗಳು ಸಮಾಜದಲ್ಲಿ ನಿರ್ವಹಿಸಿದ ಕರ್ತವ್ಯದ (function) ಸ್ವರೂಪ ಏನು ಎನ್ನುವುದನ್ನು ಕುರಿತು ಚಿಂತಿಸುವ ಅವಕಾಶವೂ ಹೌದು. ರೂಪನಿಷ್ಠ ವಿಮರ್ಶಕರು ಕವಿತೆಯೊಂದನ್ನು ಸಾವಯವ ಸಮಗ್ರೀಕರಣವುಳ್ಳ ರಚನೆ ಎಂದು ಕರೆಯುತ್ತಾರೆ. ಒಂದು ಉತ್ತಮ ಕವಿತೆಯನ್ನು ಒಮ್ಮೆ ರಚನೆ ಮಾಡಿ ಸಮಾಜದಲ್ಲಿ ಬಿಟ್ಟ ಮೇಲೆ ಅದು ಒಂದು ಸ್ವಾಯತ್ತ ಘಟಕವಾಗಿ ಸಮಾಜದಲ್ಲಿ ಇರುತ್ತದೆ. ಉದಾಹರಣೆಗೆ, ಹರಿದಾಸರು ಹರಿಕಥೆ ನಡೆಸುತ್ತಿರುವಾಗ ಸಭೆಯಲ್ಲಿ ಕುಳಿತಿದ್ದ ಇಬ್ಬರು ಶ್ರೀಮಂತರು ಗಟ್ಟಿಯಾಗಿ ಹರಟೆ ಹೊಡೆಯುತ್ತಾ ರಸಭಂಗ ಮಾಡುತ್ತಿದ್ದರು; ಆಗ ಪಾವಂಜೆಯವರು ಒಂದು ಪದ್ಯವನ್ನು ಕಟ್ಟಿ, ಅವರನ್ನು ಖಂಡಿಸಿ ಹರಿಕಥೆಯನ್ನು ನಿಲ್ಲಿಸುತ್ತಾರೆ. (ಈ ಪದ್ಯವನ್ನು ಮುಂದೆ ಉಲ್ಲೇಖಿಸಲಾಗಿದೆ). ಅವರು ಇಂತಹ ಪದ್ಯವೊಂದನ್ನು ರಚಿಸದೆಯೆ ಸುಮ್ಮನೆ ಕುಳಿತುಬಿಡಬಹುದಾಗಿತ್ತು. ಪದ್ಯ ರಚಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಅವರು ತಮ್ಮ ಬೌದ್ಧಿಕ ಮತ್ತು ಭಾವನಾತ್ಮಕ ಸ್ಪಂದನವನ್ನೂ, ಭಾಷಾಜ್ಞಾನವನ್ನೂ, ಲೋಕಜ್ಞಾನವನ್ನೂ ಬಳಸಿಕೊಳ್ಳಬೇಕು. ಹೀಗೆ ಮಾಡಿ ಅವರು ಸೃಷ್ಟಿಸಿದ ರೂಪವೇ ಆ ಕವಿತೆ. ಅದನ್ನು ಅವರು ಮಾಡದಿದ್ದರೆ (ಸುಮ್ಮನೆ ಹರಿಕಥೆಯನ್ನು ನಿಲ್ಲಿಸಿ ಹೊರಟುಹೋಗಿದ್ದರೆ) ಈ ಘಟನೆಯು ನಮ್ಮ ಕಾಲದವರೆಗೆ ತಲುಪುತ್ತಿರಲಿಲ್ಲ. ಈ ಕವಿತೆಯ ಮೂಲಕ ಆ ಘಟನೆಯೂ, ಒಂದು ಅಸಾಂಸ್ಕೃತಿಕ ವರ್ತನೆಗೆ ಒಂದು ಸಾಂಸ್ಕೃತಿಕ ಪ್ರತಿಕ್ರಿಯೆಯೂ ಜೀವಂತವಾಗಿ ಉಳಿದುಬಿಟ್ಟಿತು.

ಕವಿ ಗೋಪಾಲಕೃಷ್ಣ ಅಡಿಗರು, ತುರ್ತು ಪರಿಸ್ಥಿತಿ ಘೋಷಣೆಯಾದ ದಿನ ತಮ್ಮ ಆತ್ಮೀಯರ ಬಳಿ ನಾವೊಂದು ಬಾಂಬ್ ತಯಾರಿಸಬೇಕು ಎಂದರಂತೆ. ಮರುದಿನ ಅವರು ತಂದು ಓದಿದ್ದು ಒಂದು ಕವಿತೆಯನ್ನು – ಎನ್ನುವುದು ಕೂಡ ಇದೇ ರೀತಿಯ ಒಂದು ವಿದ್ಯಮಾನ.
ಪಾವಂಜೆ ಹರಿದಾಸರು ತಮ್ಮ ಕಾಲದಲ್ಲಿ ಮಂಗಳೂರು, ಬಂಟವಾಳ, ಮುಲ್ಕಿ, ಕಾರ್ಕಳ ಮತ್ತು ಉಡುಪಿ ತಾಲೂಕುಗಳಲ್ಲಿ ಸಂಚರಿಸುತ್ತಾ ಹರಿಕಥೆಯ ಮೂಲಕ ಒಂದು ಸಾಂಸ್ಕೃತಿಕ ಎಚ್ಚರವನ್ನು ಮೂಡಿಸಿದವರು. ಇದನ್ನು ಪ್ರೊ. ಹೆರಂಜೆ ಕೃಷ್ಣ ಭಟ್ಟರು ಮತ್ತು ಡಾ. ಪಾದೆಕಲ್ಲು ವಿಷ್ಣು ಭಟ್ಟರು ಗ್ರಹಿಸಿರುವುದು ಹೀಗೆ: “ಕ್ರಿಸ್ತಶಕ ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಮತ್ತು ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಹರಿದಾಸರುಕಾರ್ಯತತ್ಪರರಾಗಿದ್ದರು. ಆ ಕಾಲದಲ್ಲಿ ಅಲ್ಲಲ್ಲಿ ಹರಿಕಥೆಗಳನ್ನು ಮಾಡಿ ಜನರಂಜನೆಯನ್ನೂ, ಜನಶಿಕ್ಷಣವನ್ನೂ, ಸಂಸ್ಕೃತಿ ಮತ್ತು ಧರ್ಮಪ್ರಸಾರವನ್ನೂ ಒಟ್ಟಿಗೇ ಮಾಡುತ್ತಿದ್ದರು. ಹತ್ತೊಂಬತ್ತನೆಯ ಶತಮಾನದ ಉತ್ತರಭಾಗದಲ್ಲಿ ಕರಾವಳಿಯುದ್ದಕ್ಕೂ ಕ್ರೈಸ್ತ ಮಿಶನರಿಗಳ ಧಾರ್ಮಿಕ ಪ್ರಸಾರ ಕಾರ್ಯ ನಡೆಯುತ್ತಿದ್ದು ಅದರಿಂದಾಗಿ ಆ ಧರ್ಮಕ್ಕೆ ಮತಾಂತರವೂ ನಡೆಯುತ್ತಿತ್ತು.

ಮಿಶನರಿಗಳು ಅಲ್ಲಲ್ಲಿ ಜನಸೇರುವ ಸ್ಥಳಗಳಲ್ಲಿ, ಸಂತೆಗಳಲ್ಲಿ, ಜಾತ್ರೆಗಳಲ್ಲಿ ಜನಸಮೂಹವನ್ನು ಕುರಿತು ಕೂಗಿ ಹೇಳಿ ತಮ್ಮ ಧರ್ಮಕ್ಕೆ ಆಹ್ವಾನಿಸುವ ಕಾರ್ಯವನ್ನು ಮಾಡುತ್ತಿದ್ದರು. ಇದನ್ನು ‘ಪತಿತರಿಗೆ ಧರ್ಮಬೋಧೆ’ (Sermon to the Heathen) ಎನ್ನುತ್ತಿದ್ದರು. ಆ ಕಾಲದ ಕೆಲವು ಹರಿದಾಸರು ಅವರ ಈ ರೀತಿಯ ಕಾರ್ಯಕ್ಕೆ ಪ್ರತಿಯಾಗಿ ಧಾರ್ಮಿಕ ಕಥೆಗಳನ್ನು ರಂಜಕವಾಗಿ ತಿಳಿಸಿ ಹೇಳುವ ಮೂಲಕ ಧರ್ಮಪ್ರಜ್ಞೆಯನ್ನು ಬೆಳೆಸುವ ಕೆಲಸವನ್ನು ನಿರ್ವಹಿಸಿರುವುದು ತಿಳಿದು ಬರುತ್ತದೆ. ಹರಿದಾಸ ಲಕ್ಷ್ಮೀನಾರಾಯಣಪ್ಪಯ್ಯನವರೂ ಇದೇ ಕಾಲದಲ್ಲಿ ತಮ್ಮ ಹರಿಕಥಾ ಪ್ರವಚನ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು – ಎಂಬುದು ಸಾಂಸ್ಕೃತಿಕ ದೃಷ್ಟಿಯಿಂದಲೂ ಐತಿಹಾಸಿಕ ದೃಷ್ಟಿಯಿಂದಲೂ ಮುಖ್ಯವಾದ ವಿಚಾರವಾಗಿದೆ.” (ಹರಿದಾಸ ಕೀರ್ತನ. ಸಂಪಾದಕರು – ಡಾ. ಪಾದೇಕಲ್ಲು ವಿಷ್ಣು ಭಟ್ಟ ಮತ್ತು ಪ್ರೊ. ಹೆರಂಜೆ ಕೃಷ್ಣ ಭಟ್ಟ). ಹೀಗೆ, ಹರಿದಾಸರಾಗಿ ಅವರು ನಿರ್ವಹಿಸಿದ ಸಾಮಾಜಿಕ ಜವಾಬ್ದಾರಿ ಮತ್ತು ಸಾಂಸ್ಕೃತಿಕ ಅರಿವಿನ ಕೆಲಸಗಳು ಮಾಪನಕ್ಕೆ ಸಿಗದಂತಹ ಕೆಲಸಗಳಾದರೂ, ಆ ಕಾಲದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸನ್ನಿವೇಶಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ಗ್ರಹಿಸಬಹುದಾದ ಸಂಗತಿ.

ಪಾವಂಜೆಯವರ ಬದುಕು

ಹರಿದಾಸ ಪಾವಂಜೆ ಶ್ರೀ ಲಕ್ಷ್ಮೀನಾರ್ಣಪ್ಪಯ್ಯನವರು ಕ್ರಿ. ಶ. 1854ನೇ ಇಸವಿಯಲ್ಲಿ ದಕ್ಷಿಣ ಕನ್ನಡದ ಮೂಲ್ಕಿಯ ಸಮೀಪ ಅತ್ತೂರು ಎಂಬಲ್ಲಿ ಸ್ಥಾನಿಕ ಬ್ರಾಹ್ಮಣ ಸಮಾಜದ ಶ್ರೀ ವೆಂಕಟಕೃಷ್ಣಯ್ಯ ಎಂಬವರ ಎರಡನೇ ಮಗನಾಗಿ ಜನಿಸಿದರು. ತಮ್ಮ ಇಳಿವಯಸ್ಸಿನಲ್ಲಿ ಪಾವಂಜೆ ದೇವಸ್ಥಾನವನ್ನೇ ತಮ್ಮ ನೆಲೆಯನ್ನಾಗಿ ಮಾಡಿಕೊಂಡದ್ದರಿಂದ ಅವರು ‘ಹರಿದಾಸ ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ’ ಎಂದು ಪ್ರಸಿದ್ಧರಾಗಿದ್ದಾರೆ. ಈ ದೇವಸ್ಥಾನವನ್ನು ನಿರ್ಮಿಸಿದಾಗ (ಅದನ್ನು ನಿರ್ಮಿಸಿದವರು ಹರಿದಾಸರು ತಮ್ಮ ಮಗಳನ್ನು ಮದುವೆ ಮಾಡಿಕೊಟ್ಟ ಕುಟುಂಬದವರು), ಅವರ ಸಮಾಜ ಬಾಂಧವರು ಒತ್ತಾಯಿಸಿದ ಕಾರಣ ಹರಿದಾಸರು ಇಲ್ಲಿಗೆ ಬಂದು ನೆಲೆಸಿದರು. ಕೊನೆಗೆ ತಮ್ಮ ಆಸ್ತಿಯನ್ನೆಲ್ಲ ದೇವಸ್ಥಾನಕ್ಕೆ ಬರೆದುಕೊಟ್ಟರು. ಅವರ ಕುಟುಂಬಸ್ಥರು ಸ್ಥಾಪಿಸಿರುವ ‘ಸತ್ಸಂಗ ಸೇವಾ ಸಮಿತಿ’ಯು ಈಗಲೂ ಈ ದೇವಸ್ಥಾನವನ್ನು ಕೇಂದ್ರವಾಗಿಟ್ಟುಕೊಂಡು ಅವರ ಸ್ಮರಣೆಯ ಮತ್ತು ಸಾಂಸ್ಕೃತಿಕ ಮಹತ್ವದ ಕೆಲಸಗಳನ್ನು ಮಾಡುತ್ತಿದೆ.

ಪಾವಂಜೆ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯನವರ ಬದುಕಿನ ಕಥೆ ಹೀಗೆ: ಎಂಟು ವರ್ಷ ತುಂಬಿದ ಬಾಲಕ ಲಕ್ಷ್ಮೀನಾರಾಯಣನನ್ನು ದೊಡ್ಡಪ್ಪ ಸೀತಾರಾಮಯ್ಯನಿಗೆ ದತ್ತಕ್ಕೆ ಕೊಡಲಾಗಿತ್ತು. ಅವರೇ ಅವನಿಗೆ ಬ್ರಹ್ಮೋಪದೇಶವನ್ನು ನೀಡಿದರು. ಅವನಿಗೆ ಹತ್ತು ವಯಸ್ಸು ತುಂಬಿದಾಗ ಹೆತ್ತ ತಂದೆ ವೆಂಕಟಕೃಷ್ಣಯ್ಯನವರು ತೀರಿಕೊಂಡಮೇಲೆ ಬಾಲಕನಿಗೆ ಮಾನಸಿಕ ಆಘಾತವಾಗಿ, ಏನನ್ನೂ ಮಾಡದೆ ಜಡಭರತನಂತಾಗಿ ಬಿಟ್ಟ. ದೊಡ್ಡಪ್ಪ ದೊಡ್ಡಮ್ಮ ಅವನನ್ನು ನಿರ್ಲಕ್ಷಿಸಿದರು. ಬಾಲಕ ಒಂದು ದಿನ ಯಾರಿಗೂ ತಿಳಿಸದೇ ಯಾತ್ರಾರ್ಥಿಗಳ ಜೊತೆ ಮನೆ ಬಿಟ್ಟು ಹೋಗಿಬಿಟ್ಟ. ಮನೆಯವರು ಅವನ ಹುಡುಕಾಟಕ್ಕೆ ಮನ ಮಾಡಲಿಲ್ಲ. ಬೈರಾಗಿಗಳೊಂದಿಗೆ ಅಲೆಯುತ್ತ ಕಾಶಿಗೆ ಹೋದ ಲಕ್ಷ್ಮೀನಾರಾಯಣನಿಗೆ ಅಲ್ಲಿ ಕಾಶಿ ಮಠದ ಆಶ್ರಯ ಸಿಕ್ಕಿದ್ದು, ಅಲ್ಲಿ ಅವನ ಆಧ್ಯಾತ್ಮಿಕ ಪುನರ್ಜನ್ಮ ಇತ್ಯಾದಿ ಯಾವ ಸುದ್ದಿಯೂ ಊರಿಗೆ ತಲುಪಲಿಲ್ಲ.

ಹರಿದಾಸರ ಗುರುಗಳು – ಭುವನೇಂದ್ರ ತೀರ್ಥ ಸ್ವಾಮಿಗಳು

ಹರಿದಾಸ ಪಾವಂಜೆ ಲಕ್ಷ್ಮೀನಾರಾಯಣಯ್ಯನವರು ಶ್ರೀ ಕಾಶೀ ಮಠದ ಶ್ರೀ ಭುವನೇಂದ್ರ ತೀರ್ಥರ ಶಿಷ್ಯರು. ಶ್ರೀ ಭುವನೇಂದ್ರ ತೀರ್ಥರು ಮಾಧ್ವ ಅಂದರೆ ದ್ವೈತ ಸಂಪ್ರದಾಯದ ಒಬ್ಬರು ಪೀಠಾಧಿಪತಿಗಳು. ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ಕಾಶೀ ಮಠ ಭವ್ಯ ಪರಂಪರೆ ಉಳ್ಳ ಗುರುಪೀಠ. ಆ ಗುರುಪೀಠದ ಪರಂಪರೆಯಲ್ಲಿ ಇತಿಹಾಸಪ್ರಸಿದ್ಧರೂ, ಬಹುಮುಖ ಪ್ರತಿಭೆಯ ವಿದ್ವಾಂಸರೂ ಆಗಿದ್ದ ಗುರುಗಳು ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮೀಜಿಯವರು (1837 – 1886). ಸುಮಾರು 1864 ರಿಂದ 1882 ರವರೆಗೆ, ಸುಮಾರು ಹದಿನೆಂಟು ವರ್ಷಗಳ ಕಾಲ ಪಾವಂಜೆ ಲಕ್ಷ್ಮೀನಾರಾಯಣಯ್ಯನವರಿಗೆ ಆಶ್ರಯ ಕೊಟ್ಟು ವಿದ್ಯಾದಾನ ಮಾಡಿ, ಹರಿದಾಸ ದೀಕ್ಷೆ ನೀಡಿದವರು ಸ್ವಾಮೀಜಿಯವರು. ಹರಿದಾಸರು ತಮ್ಮ ಕೆಲವು ಕೀರ್ತನೆಗಳಲ್ಲಿ ಗುರುಗಳಾದ ಶ್ರೀ ಭುವನೇಂದ್ರ ತೀರ್ಥರನ್ನು ಸ್ತುತಿಸಿದ್ದಾರೆ. ತಮ್ಮ ಗುರುಗಳ ದ್ವೈತ ಸಿದ್ಧಾಂತವನ್ನು, ಹರಿಸರ್ವೋತ್ತಮತ್ವವನ್ನು ಹರಿದಾಸರು ತಮ್ಮ ಕೀರ್ತನೆಗಳಲ್ಲಿ ಪ್ರತಿಪಾದಿಸಿದ್ದಾರೆ. ಅವರು ಹುಟ್ಟಿದ ಸ್ಥಾನಿಕ ಬ್ರಾಹ್ಮಣ ಅಥವಾ ಶಿವ ಬ್ರಾಹ್ಮಣ ಸಮುದಾಯ ಅದ್ವೈತ ಸಂಪ್ರದಾಯವನ್ನು ಪಾಲಿಸುತ್ತದೆ. ಸ್ವಾಮೀಜಿಯವರು ಶಿಲ್ಪಕಲಾ ವಿದ್ಯೆಯಲ್ಲಿ ಪಾರಂಗತರಾಗಿದ್ದರು ಮತ್ತು ಕಾರ್ಕಳದ ರೆಂಜಾಳ ಶೆಣೈ ಕುಟುಂಬದವರಿಗೆ ಶಿಲ್ಪಕಲಾ ವಿದ್ಯೆಯನ್ನು ತಿಳಿಸಿಕೊಟ್ಟರು. ಈ ಕುಟುಂಬದ ವಿಶ್ವವಿಖ್ಯಾತ ಶಿಲ್ಪಿ ರೆಂಜಾಳ ಗೋಪಾಲಕೃಷ್ಣ ಶೆಣೈಯವರು ಧರ್ಮಸ್ಥಳದ ಗೊಮ್ಮಟ ವಿಗ್ರಹವನ್ನು ಮತ್ತಿತರ ವಿಗ್ರಹಗಳನ್ನು ಕೆತ್ತಿದ್ದನ್ನು ನೆನಪಿಸಿಕೊಳ್ಳಬಹುದು. ಕುಲಕಸುಬು ಅಲ್ಲದ ವಿದ್ಯೆಗಳನ್ನು ಕಲಿಯಲು ಪ್ರೇರಣೆ ನೀಡಿದ, ಮತ್ತು ಅಂತಹ ವಿದ್ಯೆಗಳನ್ನು ತಾವೇ ಕಲಿಸಿದ ಶ್ರೀ ಭುವನೇಂದ್ರ ತೀರ್ಥರು ಎಷ್ಟು ದೊಡ್ಡ ಜ್ಞಾನಿ ಮತ್ತು ಸಮಾಜ ಸುಧಾರಕ ಎನ್ನುವುದು ಅರ್ಥವಾಗುತ್ತದೆ. ರೆಂಜಾಳ ಕುಟುಂಬದವರ ಕಾರ್ಕಳದ ಶ್ರೀ ಭುವನೇಂದ್ರ ಶಿಲ್ಪ ಶಾಲೆ ಇಂದಿಗೂ ಪ್ರಸಿದ್ಧವಾಗಿದೆ. ಸ್ವಾಮೀಜಿಯವರು ಆಯುರ್ವೇದ ಶಾಸ್ತ್ರದಲ್ಲಿಯೂ ಪಾರಂಗತರಾಗಿದ್ದು ಕಟಪಾಡಿಯ ನಾಯಕ್ ಕುಟುಂಬದವರಿಗೆ ಆಯುರ್ವೇದ ವಿದ್ಯೆಯನ್ನು ಅನುಸರಿಸಲು ಪ್ರೋತ್ಸಾಹಿಸಿದರು. ಈಗ ಆ ಕುಟುಂಬದ ಕಟಪಾಡಿಯ ಶ್ರೀ ಭುವನೇಂದ್ರ ಆಯುರ್ವೇದಿಕ್ ಪ್ರಾಡಕ್ಟ್ಸ್ ಪ್ರಸಿದ್ಧವಾಗಿದೆ. ಸ್ವಾಮೀಜಿಯವರು ಆಧುನಿಕ ಶಿಕ್ಷಣ ನೀಡುವ ಶಾಲೆಗಳನ್ನು ತೆರೆಯಲು ಮತ್ತು ಬ್ಯಾಂಕುಗಳನ್ನು ತೆರೆಯಲು ಮಂಗಳೂರಿನ ಕೆನರಾ ವಿದ್ಯಾ ಸಂಸ್ಥೆಗಳ ಮತ್ತು ಕೆನರಾ ಬ್ಯಾಂಕಿನ ಸ್ಥಾಪಕರಾದ ಅಮ್ಮೆಂಬಳ ಸುಬ್ಬರಾಯ ಪೈಗಳಿಗೆ ಪ್ರೇರಣೆ ನೀಡಿದುದು ಕೂಡ ಉಲ್ಲೇಖಾರ್ಹವಾಗಿದೆ.

(ಭುವನೇಂದ್ರ ತೀರ್ಥ ಸ್ವಾಮಿಗಳು)

ಬಾಲಕ ಲಕ್ಷ್ಮೀನಾರಾಯಣ ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಧರ್ಮಗುರುಗಳಾದ ಕಾಶೀ ಮಠಾಧೀಶ ಶ್ರೀ ಭುವನೇಂದ್ರ ತೀರ್ಥ ಸ್ವಾಮಿಜಿಯವರ ಆಶ್ರಯವನ್ನು ಸಂಪಾದಿಸಿದ. ಗುರುಗಳು ಅವನಿಗೆ ಸಂಸ್ಕೃತ ಭಾಷೆ, ಕಾವ್ಯಾದಿಗಳ ಅಭ್ಯಾಸವನ್ನು ಮಾಡಿಸಿದರು. ನಂತರ, ಬಹುಶಃ ಕಾಶಿ ಮಠಾಧೀಶರ ಆಜ್ಞೆಯಂತೆ, ಹರಿಕೀರ್ತನೆಗಾರ ಸಿದ್ಧಾಪುರ ವೆಂಕಟರಮಣ ಪ್ರಭುಗಳಿಂದ ಹರಿಕಥೆಯ ಉಪದೇಶವನ್ನೂ ಲಕ್ಷ್ಮೀನಾರ್ಣಪ್ಪಯ್ಯ ಪಡೆದರು. ಕಾಶೀ ಮಠಾಧೀಶರ ಅನುಗ್ರಹವನ್ನು ಹರಿದಾಸರು ಭಕ್ತಿಯಿಂದ ಹೀಗೆ ಸ್ಮರಿಸಿದ್ದಾರೆ:

ಕಂಡು ಕೃತಾರ್ಥನಾದೆ ಭುವನೇಂದ್ರರಂಘ್ರಿಯ |
ಕಂಡು ಕೃತಾರ್ಥನಾದೆ || ಪಲ್ಲ ||
ಕಂಡು ಕೃತಾರ್ಥನಾದೆ ಭೂ | ಮಂಡಲದಿ ಪೆಸರ್ಗೊಂಡು ಮೆರೆದಿಹ |
ಪುಂಡರೀಕ ದಳಾಕ್ಷ ಸತತಾ | ಖಂಡಸುಖ ಮಾರ್ತಾಂಡ ತೇಜರ || ಕಂಡು ||
ವಾರಿರುಹಭವಾಂಡದ ಭೂಮಧ್ಯ ವಿ |
ಸ್ತಾರ ಜಂಬೂದ್ವೀಪದ ನವಖಂಡದೊಳ್ |
ಸಾರ ಭರತ ಖಂಡದ ಹಿಮಗಿರಿಯ ಪಾಶ್ರ್ವದ |
ತೋರ್ಪ ವಿಂದ್ಯಾಚಲದ ಮಧ್ಯ ಭಾ
ಗೀರಥಿಯ ಪಶ್ಚಿಮ ಭೂಭಾಗದ |
ತೀರ ಕಾಶೀಮಠ ಸಂಸ್ಥಾನ ವಿ | ಚಾರ ಶಾಸ್ತ್ರ ವಿಶಾರದರ ಪದ || ಕಂಡು ||

ಗುರುಗಳನುಗ್ರಹದಿಂದ ಆಶುಕವಿತ್ವವನ್ನು ಸಂಪಾದಿಸಿಕೊಂಡ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ, ಹದಿನೆಂಟು ವರ್ಷಗಳ ನಂತರವೇ – 1882 ರಲ್ಲಿ – ಮತ್ತೆ ಊರಿನಲ್ಲಿ, ಕಾರ್ಕಳ ವೆಂಕಟರಮಣ ದೇವಸ್ಥಾನದ ಪರಿಸರದಲ್ಲಿ ಹರಿಕೀರ್ತನೆ ಮಾಡುತ್ತಾ, ಭಿಕ್ಷುಕನಂತೆ, ಅವಧೂತನಂತೆ ಕಾಣಿಸಿಕೊಂಡರು. ಸ್ಫೂರ್ತಿ ಬಂದಾಗ ಶ್ರೀನಿವಾಸ, ಲಕ್ಷ್ಮೀನಾರಾಯಣ ಮೊದಲಾದ ದೇವರ ಪರವಾಗಿ ಕೀರ್ತನೆಗಳನ್ನು ಕಟ್ಟಿ ಹಾಡುತ್ತಿದ್ದ ಹರಿದಾಸರು, ಅವಧೂತನಂತೆ ಕಾಣುತ್ತಿದ್ದರು. ಒಮ್ಮೊಮ್ಮೆ ಕುಳಿತಲ್ಲೇ ಭಾವಸಮಾಧಿಗೆ ಹೋಗುತ್ತಿದ್ದರು; ತಿನ್ನಬೇಕೆನಿಸಿದಾಗ ಹಾಕಿದಷ್ಟನ್ನೂ ತಿಂದು ಬಿಡುತ್ತಿದ್ದರು; ಕೆಲವೊಮ್ಮೆ ದಿನಗಟ್ಟಲೆ ಉಪವಾಸವಿರುತ್ತಿದ್ದರು. ಈತನನ್ನು ಅವಧೂತನೆಂದು ಅಥವಾ ಹುಚ್ಚನೆಂದು ಕಾರ್ಕಳದ ಜನತೆ ತಿಳಿದುಕೊಂಡಿತ್ತು. ಇವರು ಹಾಡುವ ಹಾಡುಗಳು ಇವರದೇ ಸ್ವಂತ ರಚನೆಯೆಂದು ಅಲ್ಲಿನವರಿಗೆ ಮೊದಲು ಗೊತ್ತಿರಲಿಲ್ಲ. ಎರಡು ತಿಂಗಳು ಕಳೆದ ನಂತರ, ವೆಂಕಟರಮಣ ದೇವಸ್ಥಾನದ ‘ಕಾಲಭೈರವ’ನ ಸೂಚನೆಯಂತೆ (ಹೀಗೆಂದು ಬೆಳ್ಳೆ ಭುಜಂಗರಾಯರು ಮತ್ತು ದಿವಾಕರ ಭಟ್ ದಾಖಲಿಸಿದ್ದಾರೆ) ಅಲ್ಲಿನ ಮೊಕ್ತೇಸರರು ಹರಿದಾಸರನ್ನು ದೇವರ ಸನ್ನಿಧಿಗೆ ಕರೆದೊಯ್ದರು. ಅಲ್ಲಿ ಅವರು ಆಗಿಂದಾಗಲೇ ಒಂದು ಹಾಡು ಕಟ್ಟಿ ಹಾಡಿದರು. “ನೋಡಿದೆ ಮನದಣಿಯೆ | ಶ್ರೀನಿವಾಸನ” ಎನ್ನುವ ಕೀರ್ತನೆ ಅದು. (ಹರಿದಾಸರ ಎಲ್ಲ ಕೀರ್ತನೆಗಳೂ ಹೀಗೆ ಸಾಂದರ್ಭಿಕವಾಗಿ ಸೃಷ್ಟಿಯಾದವುಗಳು).

ರಾಗ : ಶಂಕರಣಾಭರಣ ಮಿಶ್ರಛಾಪುತಾಳ

ನೋಡಿದೆ ಮನದಣಿಯೆ | ಶ್ರೀನಿವಾಸನ |
ನೋಡಿದೆ ಮನದಣಿಯೆ || || ಪಲ್ಲ ||

ನೋಡಿದೆನು ಶೇಷಾದ್ರಿಯಿಂದೊಡ-|
ಗೂಡಿ ಭಕ್ತರ ಬೀಡಿನೊಳು ನಲಿ-|
ದಾಡಿ ಮೆರೆವ ಸಗಾಢದೈತ್ಯವಿ-|
ಭಾಡ ಶ್ರೀಹರಿ ರೂಢಿಗೊಡೆಯನ || || ಅನು ||

ಶರಣರಪೇಕ್ಷೆಯನು | ಕೊಟ್ಟುಳುಹಲು |
ಕರುಣಾಳು ನಿಜದಿ ತಾನು ||
ಸ್ಥಿರತೆಯೊಳು ಸ್ವಪ್ನದಲಿ ತಾ ಗೋ-|
ಚರಿಸಿ ಭರವಸೆಯಿತ್ತು ವೆಂಕಟ-|
ಗಿರಿಯವೋಲ್ ಸಾನ್ನಿಧ್ಯ ವದನಾಂ-|
ಬುರುಹದಲಿ ಮೆರೆದಿಹನ ಚರಣವ || || 1 ||

ಲಲನೆ ಲಕ್ಷ್ಮಿಯು ಬಲದಿ | ಶೋಭಿಪ ವಾಮ-|
ದೊಳಗೆ ಗಣಪ ಮುದದಿ ||
ಒಲವಿನಿಂ ಗರುಡಾಂಕ ಮೃದುಪದ-|
ನಳಿನದಾಶ್ರಯದಿಂದ ವಾಯುಜ-|
ಬಳಗ ಚಾತುರ್ದೇವತೆಯಿರಿಂ_|
ದೊಳಗು ಪೂಜೆಯಗೊಂಬ ದೇವನ || || 2 ||

ಕುಂಡಿಲಕೊಳದೊಳಿಹ | ಪ್ರಾಣೇಶ ಮುಂ-|
ಕೊಂಡು ಪಟ್ಟಣಕೆ ಬಹ ||
ಕೆಂಡದಂದದೊಳುರಿವ ಶತಮಾ-|
ರ್ತಾಂಡದೀಪ್ತಾಖಂಡ ಭೃತ್ಯನ |
ಕೊಂಡುಯಿದಿರಲಿ ಮಂಡಿಸಿದನಖಿ-|
ಳಾಂಡಕೋಟಿ ಬ್ರಹ್ಮಾಂಡನಾಥನ || || 3 ||

ನೀಲಮೇಘಶ್ಯಾಮನ | ಕೌಸ್ತುಭವನ-|
ಮಾಲಕಂಧರ ಶೋಭನ ||
ನೀಲ ಮಾಣಿಕ ವಜ್ರ ಮುತ್ತಿನ |
ಸಾಲ ಸರ ಪೂಮಾಲೆಗಳ ಸುಖ |
ಲೀಲೆಯಿಂದೊಪ್ಪಿರುವ ಭಕ್ತರ |
ಕೇಳಿಯಲಿ ನಲಿದಾಡುತಿಹನನು || || 4 ||

ಕಾಣೆನು ಪ್ರತಿನಿಧಿಯ | ನಮ್ಮೊಡೆಯ ಲ-|
ಕ್ಷ್ಮೀನಾರಾಯಣ ಹರಿಯ ||
ಕಾಣಿಕೆಯ ಕಪ್ಪಗಳ ತರಿಸುತ |
ಮಾನಿಸುತ ಭಕ್ತಾಭಿಮತವನು |
ತಾನೆ ಪಾಲಿಸಿ ಮೆರೆವ ಕಾರ್ಕಳ |
ಶ್ರೀನಿವಾಸ ಮಹಾನುಭಾವನ || || 6 ||

ಕಾಣೆನು ಪ್ರತಿನಿಧಿಯ | ನಮ್ಮೊಡೆಯ ಲ – |
ಕ್ಷ್ಮೀನಾರಾಯಣ ಹರಿಯ ||
ಕಾಣಿಕೆಯೆ ಕಪ್ಪಗಳ ತರಿಸುತ
ಮಾನಿಸುತ ಭಕ್ತಾಭಿಮತವನು |
ತಾನೆ ಪಾಲಿಸಿ ಮೆರೆವ ಕಾರ್ಕಳ |
ಶ್ರೀನಿವಾಸ ಮಹಾನುಭಾವನ || ನೋಡಿದೆ ಮನದಣಿಯೇ ||

ಅಂದಿನಿಂದ ಹರಿದಾಸರಿಗೆ ಕಾರ್ಕಳದ ವೆಂಕಟರಮಣ ದೇವಸ್ಥಾನದ ಮೊಕ್ತೇಸರರ ಮತ್ತು ಗೌಡ ಸಾರಸ್ವತ ಬ್ರಾಹ್ಮಣರ ನೆರವು ದೊರಕಿತು. ಕಾರ್ಕಳ ವೆಂಕಟರಮಣನ ಸನ್ನಿಧಿಯಲ್ಲಿ ಪ್ರಾರಂಭವಾದ ಇವರ ಹರಿಕಥಾ ಸತ್ಸಂಗ ಕಾರ್ಕಳದ ಜನತೆಯ ಮನವನ್ನು ಸೂರೆಗೊಂಡಿತಲ್ಲದೆ ಅವರ ಕೀರ್ತಿ ಕಾರ್ಕಳದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರ ಮೂಲಕ ಉತ್ತರಕನ್ನಡ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಎಲ್ಲೆಡೆ ಪ್ರಚಾರವಾಯಿತು. ಮುಖ್ಯವಾಗಿ ಗೌಡಸಾರಸ್ವತ ಸಮಾಜದವರ ಕೇಂದ್ರಸ್ಥಾನಗಳಾದ ಕಾರ್ಕಳ, ಬಂಟ್ವಾಳ, ಮೂಲ್ಕಿ, ಕುಮಟ, ಭಟ್ಕಳ, ಮಂಗಳೂರು, ಹೀಗೆ ಎಲ್ಲಾ ಕಡೆ ಅವರನ್ನು ಆಹ್ವಾನಿಸಿ ಅವರಿಂದ ಹರಿಕಥಾ ಸಪ್ತಾಹಗಳನ್ನೇ ನಡೆಯಿಸಿದರು. ಸಂಸಾರದಲ್ಲಿ ನೊಂದು ಬೆಂದ ಜೀವಗಳಿಗೆ ಇವರ ಹರಿಕಥೆ ಸಂಜೀವಿನಿ ಪ್ರಾಯವಾಯಿತು.

ಅವರು ಕಾರ್ಕಳದಲ್ಲಿಯೇ ಹಲವು ವರ್ಷಗಳ ಕಾಲ ಇದ್ದು, ಹರಿಕಥೆಗಳನ್ನು ಮಾಡುತ್ತಾ ಕಾರ್ಕಳ, ಮುಲ್ಕಿ, ಮಂಗಳೂರು ಮತ್ತು ಉಡುಪಿ ತಾಲೂಕುಗಳ ಗ್ರಾಮಗಳಲ್ಲಿ ತಮ್ಮ ಸ್ವ ಇಚ್ಛೆಯಿಂದ ಭಕ್ತಿ-ಸಂಸ್ಕೃತಿಯ ಪ್ರಸಾರಕ್ಕಾಗಿ ಸಂಚರಿಸುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ, ದೂರದ ಮುಂಬಯಿಯಲ್ಲಿ ಸಹ ಅವರ ಹರಿಕಥಾ ಕಾಲಕ್ಷೇಪಗಳು ನಡೆಯುತ್ತಿದ್ದವು. ಆಹ್ವಾನದ ಮೇರೆಗೆ ಹರಿದಾಸರು ಅಲ್ಲಿಗೆಲ್ಲ ಹೋಗಿ ಬರುತ್ತಿದ್ದರು.

ಹೀಗೆ ಹರಿದಾಸರಾಗಿ ಊರೂರು ತಿರುಗುವ ಪ್ರಸಂಗ ಒದಗಿದಾಗ, ಈ ಅವಕಾಶಗಳ ಸದ್ಬಳಕೆ ಮಾಡಿಕೊಂಡ ಹರಿದಾಸರು ಅಲ್ಲಲ್ಲಿನ ಗ್ರಾಮದ ದೇವಸ್ಥಾನಗಳನ್ನು ಸಂದರ್ಶಿಸಿ, ಆ ದೇವರ ಕೀರ್ತನೆಯನ್ನು ರಚಿಸಿ ಹಾಡಿ ಆ ಗ್ರಾಮಕ್ಕೆ ದೇವತಾನುಗ್ರಹಕ್ಕಾಗಿ ಪ್ರಾರ್ಥಿಸಿಸುತ್ತಿದ್ದರು. ಇದರಿಂದ ಪ್ರಭಾವಿತರಾದ ಜನ ತಮ್ಮ ತಮ್ಮ ಊರಿಗೆ ಅವರನ್ನು ಕರೆಸಿಕೊಂಡು, ಅವರಿಂದ ಹರಿಕಥೆಯನ್ನು ಮಾಡಿಸಿ, ಆ ದಿನದ ಕಥೆಗೆ ಪೂರಕವಾಗಿ ಅವರು ರಚಿಸಿ ಹಾಡಿದ ಎಲ್ಲಾ ದೇವರ ನಾಮಗಳನ್ನು ಕೈಬರಹದಲ್ಲಿ ಬರೆದಿಟ್ಟು ಮನೆಮನೆಗಳಲ್ಲಿ ಹಾಡುವ ಅಭ್ಯಾಸ ಬೆಳೆಯಿತು. ಆದರೆ ಹರಿದಾಸರು ತಾನಾಗಿ ಯಾವುದೇ ಕೀರ್ತನೆಯನ್ನು ಬರೆದು ರಚಿಸಿ ಸಂಗ್ರಹಿಸಿದ್ದು ದಾಖಲೆಯಿಲ್ಲ.

ಅವರ ಅಪಾರ ಸಂಸ್ಕೃತ ಜ್ಞಾನ, ಆಶುಕವಿತಾ ಶಕ್ತಿ, ಸಂಗೀತ ಜ್ಞಾನ (ಹರಿಕಥೆಯನ್ನು ಮಾಡುವವರು ನಡುನಡುವೆ ಹಾಡುಗಳನ್ನು ಹಾಡುತ್ತಾರೆ, ಹಾಗಾಗಿ ಸಂಗೀತದ ಪಾಠವು ಅವರಿಗೆ ಕಾಶಿ ಮಠದ ಆಶ್ರಯದಲ್ಲಿಯೇ ಆಗಿದ್ದಿರಬೇಕು), ರಾಗ-ತಾಳ-ಲಯದ ಹಿಡಿತ, ವೇದ ಪುರಾಣಗಳ ಅರಿವು, ಇವೆಲ್ಲಕ್ಕಿಂತಲೂ ಭಗವಂತನ ಮೇಲಿನ ಉತ್ಕಟವಾದ ಭಕ್ತಿ, ಪ್ರೇಮ ಇವು ಅವರನ್ನು ತ್ಯಾಗ-ವೈರಾಗ್ಯಮಯ ಜೀವನದತ್ತ ನಡೆಸಿ ನಿಜದ ‘ಹರಿದಾಸ’ರ ಪಟ್ಟಕ್ಕೇರುವಂತೆ ಆಯಿತು.

ಪಾವಂಜೆ ಹರಿದಾಸರ ಲಭ್ಯವಾಗಿರುವ 236 ಕೃತಿಗಳನ್ನು ಈ ಕೆಳಗಿನಂತೆ ವಿಭಾಗೀಕರಿಸಬಹುದು.

ಕ್ರ   ಯಾರ ಕುರಿತು           ಒಟ್ಟು ಕೀರ್ತನೆಗಳು
1     ಶ್ರೀಗಣಪತಿಪರ          16
2     ಶ್ರೀಸರಸ್ವತಿಪರ         14
3     ಶ್ರೀವಿಷ್ಣುಪರ              96
4     ಶ್ರೀ ದುರ್ಗಾದೇವಿ ಪರ  27
5      ಶ್ರೀ ಮುಖ್ಯಪ್ರಾಣ ಪರ 13
6      ಶ್ರೀ ರುದ್ರ ಪರ           17
7      ಶ್ರೀ ಸುಬ್ರಹ್ಮಣ್ಯ ಪರ   19
8     ಶ್ರೀ ನಾಗರಾಜ ಪರ     2
9     ಶ್ರೀ ಗರುಡ ಪರ           1
10   ಶ್ರೀ ಕಾಲಭೈರವ ಪರ   3
11   ಶ್ರೀ ಬ್ರಹ್ಮಪರ               1
12   ಶ್ರೀ ಷಣ್ಮಹಿಷಿ ಪರ        1
13   ಶ್ರೀ ಗುರುಗಳ ಪರ        3
14   ಶ್ರೀ ಜಗದ್ಗುರುಗಳ ಪರ   1
15   ಕಾರ್ಕಳ ಲಕ್ಷದೀಪೋತ್ಸವ ಹಾಡುಗಳು 100
16   ಹರಿಕಥಾ ಪ್ರಸಂಗಗಳ ಹಾಡುಗಳು
• ದ್ರೌಪದಿ ವಸ್ತ್ರಾಪಹಾರ
• ಧ್ರುವ ಚರಿತ್ರೆ
• ಪ್ರಹ್ಲಾದ ಚರಿತ್ರೆ
• ವಿರಾಟ ಪರ್ವ
• ಬಲೀಂದ್ರ ಚರಿತ್ರೆ

17   ಪತ್ರಲೇಖನಗಳು         5
18   ಜೋಗುಳ ಹಾಡುಗಳು  1
19   ಶೋಭಾನೆ ಹಾಡುಗಳು 1
20   ದೂರುವ ಹಾಡುಗಳು   4
21   ತುಳು ಹಾಡುಗಳು        4

ಶ್ರೀ ಸಂಸಾರಿ ಹರಿದಾಸರು

ಸಾಂಸಾರಿಕ ಜೀವನದಲ್ಲಿ ಹರಿದಾಸರಿಗೆ ಆಸಕ್ತಿ ಇರಲಿಲ್ಲ. ಆದರೆ ಸಂಬಂಧಿಕರ ಒತ್ತಾಯಕ್ಕೆ ಕಟ್ಟುಬಿದ್ದು ತಮ್ಮ 36ನೇ ಹರೆಯದಲ್ಲಿ (1890) ಗೃಹಸ್ಥರಾದರು. ಮದುವೆಯಾದ ನಾಲ್ಕನೆಯ ವರ್ಷದಲ್ಲಿ ಮೊದಲ ಪತ್ನಿ ನಿಧನಳಾದಳು. ಸಂಬಂಧಿಕರು ಅವರನ್ನು ಅಲ್ಲಿಗೇ ಬಿಡದೆ ಎರಡನೇ ಮದುವೆಗೆ ಒಡಂಬಡಿಸಿದರು. ಎರಡನೆಯ ಪತ್ನಿಯಲ್ಲಿ ಎರಡು ಹೆಣ್ಣು ಮಕ್ಕಳು (ಸೀತಾ ಮತ್ತು ಕೃಷ್ಣವೇಣಿ) ಮತ್ತು ಒಂದು ಗಂಡು ಮಗು ಹುಟ್ಟಿದರು. ಗಂಡು ಮಗು ಅಲ್ಪಕಾಲದಲ್ಲಿಯೇ ತೀರಿಕೊಂಡಿತು. ಹರಿದಾಸರು ಸಂಸಾರದಲ್ಲಿ ಸಂಪೂರ್ಣ ವಿರಕ್ತರಾಗಿ ಯಾರಿಗೂ ತಿಳಿಸದೆ ಏಳೆಂಟು ವರ್ಷಗಳ ಪರ್ಯಂತ ದೇಶ ಪರ್ಯಟನೆ ಮಾಡಿದರು. ಬೈರಾಗಿಗಳ ತಂಡದೊಡನೆ ಅಲೆಯುವುದು, ಕಾಶೀ ಮಠಾಧೀಶರ ಪರಿವಾರದೊಂದಿಗೆ ಸಂಚರಿಸುವುದು, ನಡುನಡುವೆ ಮನೆಗೆ ಬಂದು ಮುಖತೋರಿಸಿ ಹೋಗುವುದು ಮಾಡುತ್ತ ಮನೆಯವರ, ಸಂಬಂಧಿಕರ, ಸ್ವಜನರ ಆದರಾನುರಾಗಗಳನ್ನು ಸಂಪೂರ್ಣವಾಗಿ ಕಳೆದುಕೊಂಡರು. ನಡುನಡುವೆ ಮುಂಬಯಿಯಂತಹ ದೂರದ ಪಟ್ಟಣಗಳಲ್ಲಿ ಹರಿಕಥೆ ಮಾಡಿದ ದಾಖಲೆಗಳಿವೆ. ಹೀಗೆ ಕಾಲಕಳೆಯುತ್ತಾ ಹಣವನ್ನೆಲ್ಲಾ ಕಳೆದುಕೊಂಡು ಕೆಲವು ಸಮಯ ಭಿಕ್ಷುಕನಂತೆ ಕೈಯೊಡ್ಡಿ ಬೇಡುವ ಸ್ಥಿತಿಗೂ ಬಂದಿದ್ದರು.

ಜನರ ಸಂಶಯ ದೃಷ್ಟಿ, ಅನಾದರ, ಅಪವಾದದ ಹೊರೆ, ನಿಂದನೆ, ಭತ್ರ್ಸನೆ, ಹಿಂದೆ ಮುಂದೆ ಯಾರೂ ಇಲ್ಲ ಎನ್ನುವ ಅನಾಥ ಭಾವ ಹೀಗೆ ಅವರ ಜೀವನ ಜರ್ಝರಿತವಾಯಿತು. ಇಂಥ ಸಂದರ್ಭದಲ್ಲಿ ಅವರು ದೇವರಿಗೆ ಮೊರೆಯಿಟ್ಟ ಕೀರ್ತನೆಗಳು ಅಪಾರ. ಒಂದು ಸಾರಿ ಹರಿದಾಸರು ಹಸಿದಿದ್ದಾಗ ರಸ್ತೆಬದಿಯ ಅಂಗಡಿಯಲ್ಲಿ ತೂಗುಹಾಕಿದ ಬಾಳೆಹಣ್ಣಿನ ಗೊನೆ ಅವರ ಗಮನ ಸೆಳೆಯಿತು. ಹೊಟ್ಟೆಯೂ ಚುರುಗುಟ್ಟುತ್ತಿತ್ತು. ಅಂಗಡಿಗೆ ಹೋದವರೇ ಹೊಟ್ಟೆ ತುಂಬುವಷ್ಟು ಹಣ್ಣನ್ನು ಸುಲಿದು ತಿಂದರು. ಹಣಕ್ಕಾಗಿ ಜೇಬನ್ನು ತಡಕಾಡಿದಾಗ ಅದು ಬರಿದಾಗಿತ್ತು. ಅಂಗಡಿ ಮಾಲಕ ಹಣಕ್ಕಾಗಿ ಒತ್ತಾಯಿಸಿದಾಗ, ಅವನ ಹೆಸರನ್ನು ಕೇಳಿ, ‘ಶ್ರೀನಿವಾಸ’ ಎಂದು ತಿಳಿದಾಗ ತನ್ನ ಆರಾಧ್ಯ ದೈವವೇ ನನ್ನ ಹೊಟ್ಟೆ ತಣ್ಣಗಾಗಿಸಿದನು ಎಂದು ಭಾವಿಸಿ ಅಲ್ಲೇ ಆತನನ್ನು ದೈನ್ಯದಿಂದ ಭಿನ್ನಪಿಸಿದರು.

ಏನು ದುಷ್ಕೃತ ಫಲವೋ | ಸ್ವಾಮಿ |
ಶ್ರೀನಿವಾಸನೆ ಪೇಳೋ || || ಪಲ್ಲ ||

ಏನು ಕಾರಣ ಭವ | ಕಾನನದೊಳು ಬಲು |
ಹಾನಿಯಾಗಿ ಅವ | ಮಾನ ತೋರುವದಿದು || || ಅನು ||

ಹಂಬಲವೂ ಹಿರಿದಾಯ್ತು | ಎನ್ನ |
ನಂಬಿಕೆಯೂ ಕಿರಿದಾಯ್ತು ||
ಸಂಭ್ರಮವಲ್ಲ ಕು | ಟುಂಬಿಗರೆನ್ನಯ |
ಹಂಬಲಿಸರು ನಾ | ನೆಂಬುವದೇನಿದು || || 1 ||

ಹಣವಿಲ್ಲಾ ಕೈಯೊಳಗೆ | ಸ-|
ದ್ಗುಣವಿಲ್ಲಾ ಮನದೊಳಗೆ ||
ಜನಿತಾರಭ್ಯದಿ | ತನುಸುಖವಿಲ್ಲೈ |
ಘನದಾಯಸವ | ಅನುಭವಿಸುವದಾಯ್ತು || || 2 ||

ಪೋದರೆಲ್ಲ್ಯಾದರು | ಅಪ – |
ವಾದವ ಪೇಳ್ವರು ಜನರು ||
ಆದರವಿಲ್ಲೈ | ಶ್ರೀಧರ ತವ ಚರ-|
ಣಾಧಾರವೆ ಇ | ನ್ನಾದರು ಕೃಪೆಯಿಡು || || 3 ||

ಗೋಚರವಿಲ್ಲೆಲೊ ರಂಗ | ಎನ್ನ |
ಪ್ರಾಚೀನದ ಪರಿಭಂಗ ||
ನಾಚಿಕೆ ತೋರದ | ಯಾಚಕತನವ-|
ನ್ನಾಚರಿಸುವ ಕಾ | ಲೋಚಿತ ಬಂದುದು || || 4 ||

ಸೇರಿದೆನೆಲೊ ರಂಗ | ಕೃಪೆ – |
ದೋರೆನ್ನೊಳ್ ನರಸಿಂಗ ||
ಭಾರವೆ ನಿನ್ನ ಮೈ | ದೋರಿ ರಕ್ಷಿಸುವುದು |
ನಾರದನುತ ಲಕ್ಷ್ಮೀ | ನಾರಾಯಣ ಗುರು || || 5 ||

ಈ ಹಾಡನ್ನು ಪೂರ್ತಿ ಕೇಳಿದ ಅಂಗಡಿಯವನು ಸಂತೋಷದಿಂದ, ಮತ್ತೆರಡು ಬಾಳೆಹಣ್ಣನ್ನು ಕೊಟ್ಟು ನಮಸ್ಕರಿಸಿ ಬೀಳ್ಕೊಟ್ಟನಂತೆ.

ಹರಿದಾಸರು ಹೀಗೆ ಅಲೆದದ್ದು ಸುಮಾರು ಎಂಟು ವರ್ಷಗಳ ಕಾಲ. ಆ ದುರ್ದಿನಗಳು ಕಳೆದ ಮೇಲೆ ಹರಿದಾಸರು ಸುಮಾರು 1905 ರಲ್ಲಿ ಊರಿಗೆ ಮರಳಿದರು. ಬಂದವರು ಮತ್ತೆ ಕಾರ್ಕಳ ವೆಂಕಟರಮಣನ ಸನ್ನಿಧಿಯಲ್ಲಿ ಎಂಟು ತಿಂಗಳುಗಳ ಕಾಲ ಇದ್ದರು. ಹಿಂದೆ ಅವರು ತಾನೇ ಶನಿವಾರ ಶನಿವಾರ ತಿರುಪತಿಗೆಂದು ಕಾಣಿಕೆ ಹಾಕುತ್ತ ಕಟ್ಟಿಟ್ಟ ಮುಡಿಪನ್ನೇ ಬಡತನದ ಕಾರಣ ತೆಗೆದು ಖರ್ಚು ಮಾಡುವ ಪ್ರಸಂಗವೂ ಅವರಿಗೆ ಎದುರಾಗಿತ್ತು, ಶನಿವಾರ ಒಂದುಹೊತ್ತು ಊಟದ ವ್ರತವೂ ಕೆಟ್ಟಿತು, ವೆಂಕಟರಮಣನಿಗೆ ಮುಡಿಪು ಕಟ್ಟಿ ಇಟ್ಟಿದ್ದ ಹಣವನ್ನು ತಮ್ಮ ಹೊಟ್ಟೆಪಾಡಿಗಾಗಿ ತೆಗೆದುಕೊಂಡಿದ್ದರು, ಅದರಿಂದಾಗಿ ಕಷ್ಟ ಪರಂಪರೆಗಳು ಪ್ರಾಪ್ತವಾದವು ಎನ್ನುವುದು ಬಹುಶಃ ಅವರ ಮನಸ್ಸನ್ನು ಕೊರೆಯತೊಡಗಿತ್ತು. ಅವರು ಕಾರ್ಕಳದ ವೆಂಕಟರಮಣನ ಸನ್ನಿಧಿಯಲ್ಲಿ, ತಮ್ಮ ತಪ್ಪುಗಳನ್ನೆಲ್ಲ ನೆನೆದು, ಕ್ಷಮೆ ಬೇಡುತ್ತಾ ಹಾಡಿದ ಪಶ್ಚಾತ್ತಾಪದ ಹಾಡು ಹೀಗಿದೆ: (ರಾಗ: ಕಾಮವರ್ಧಿನಿ – ಆದಿ ತಾಳ).

ತಪ್ಪುಗಳೆಲ್ಲವ ಒಪ್ಪುಗೊಳ್ಳಯ್ಯ ಶ್ರೀ |
ಚಪ್ಪರ ಶ್ರೀನಿವಾಸ || || ಪಲ್ಲ ||

ಸರ್ಪರಾಜಗಿರಿಯಪ್ಪ ತಿಮ್ಮಪ್ಪನೆ |
ದರ್ಪಕತಾತನೆ ತಾ | ಸಜ್ಜನಪ್ರೀತ || || ಅನು ||

ಮಾಧವ ನಿನ್ನಯ ಮಹಿಮೆ ತಿಳಿಯರಪ-|
ರಾಧವ ಮಾಡಿದೆ ದಾರಿದ್ರ್ಯದ ||
ಬಾಧೆಯಿಂದ ತವ ಪಾದ ದರುಶನದ |
ಹಾದಿಯ ಕಾಣದಾದೆ | ನಾ ದ್ರೋಹಿಯಾದೆ || || 1 ||

ತ್ರಾಣವಿರುವಾದ ಕಾಣಿಕೆ ಹಾಕಿದೆ |
ದೀನದಾರಿದ್ರ್ಯದ ಹೊತ್ತಿನಲಿ ||
ಮೇಣದರಿಂದಲಿ ತೆಗೆದು ತೆಗೆದು ಪಂಚ – |
ಪ್ರಾಣಕ್ಕಾಹುತಿಯ ಕೊಟ್ಟೆ | ಅಪರಾಧಪಟ್ಟೆ || || 2 ||

ಮಂದವಾರ ದಿನಕ್ಕೊಂದೂಟವ ಸತ್ತ್ವ – |
ದಿಂದಿರುವಾಗ ನಾ ನೇಮಗೈದೆ ||
ಮಂದಭಾಗ್ಯ ಜ್ವರದಿಂದ ಪೀಡಿತನಾದ – |
ರಿಂದೆರಡೂಟವನೂ | ಮಾಡಿದೆ ನಾನು || || 3 ||

ಶನಿವಾರಕ್ಕೊಂದಾಣೆ ಕಾಣಿಕೆ ಹಾಕುತ್ತ |
ಮಿನುಗುವ ಡಬ್ಬಿಯ ನಾ ಮಾಡಿದೆ ||
ಎನಗೆ ದಾರಿದ್ರ್ಯವ ಕೊಟ್ಟ ಕಾರಣದಿಂದ |
ಹಣವೆಲ್ಲ ಗುಣನುಂಗಿತು | ಪಾದಕೆ ಗೊತ್ತು || || 4 ||

ದೊಡ್ಡ ದಾರಿದ್ರ್ಯದ ಗುಡ್ಡೆ ಬಿದ್ದುದರಿಂದ |
ದುಡ್ಡೆಲ್ಲ ತೆಗೆದೆ ನಾ ದಡ್ಡನಾಗಿ ||
ಅಡ್ಡಬಿದ್ದು ಕೈಯೊಡ್ಡಿ ಬೇಡುವೆ ಸ್ವರ್ಣ – |
ಗುಡ್ಡೆಯ ಮೇಲಿರುವ | ಮಹಾನುಭಾವ || || 5 ||

ಭಂಡಾರದ್ರೋಹ ಬ್ರಹ್ಮಾಂಡ ಪಾಪಾಗ್ನಿಯು |
ಮಂಡೆಯೊಳುರಿವುದು ಖಂಡಿತದಿ ||
ಪುಂಡರೀಕಾಕ್ಷನೇ ಕರುಣಾಮೃತ ರಸ-|
ಕುಂಡದೊಳ್ ಮೀಯಿಸಯ್ಯ | ವೆಂಕಟರಾಯ || || 6 ||

ದೃಢಭಕ್ತಿಯನು ಕೊಟ್ಟು ಸಲಹಬೇಕಲ್ಲದೆ |
ಕೆಡುಕು ಮಾಡುವುದೇನು ಜಡಜನಾಭ ||
ಕಡಲಶಯನ ಲಕ್ಷ್ಮೀನಾರಾಯಣ ನ – |
ಮ್ಮೊಡೆಯ ಪಡುತಿರುಪತೀಶ | ರವಿಕೋಟಿಭಾಸ || || 7 ||

‘ಪಶ್ಚಾತ್ತಾಪವೇ ಪ್ರಾಯಶ್ಚಿತ್ತ’ ಎನ್ನುವಂತೆ ತನ್ನ ತಪ್ಪನ್ನೆ ಮುಚ್ಚುಮರೆಯಿಲ್ಲದೆ ಹಾಡಿದರು. ದೇವಸ್ಥಾನದ ಕಾಳಭೈರವನು ಕನಸಿನಲ್ಲಿ ಬಂದು, ಕಾರ್ಕಳ ದೀಪೋತ್ಸವದ ವರ್ಣನೆಯ ಪದ್ಯಗಳ ರಚನೆ ಮಾಡಿದರೆ ನಿನ್ನ ಮನಸ್ಸಿನ ಪಾಪ ಭೀತಿ ಸಂಪೂರ್ಣವಾಗಿ ತೊಳೆದು ಹೋಗುತ್ತದೆ ಎಂದು ಸೂಚನೆ ನೀಡಿದನಂತೆ. ಕಾಳಭೈರವನಿಂದ ಪ್ರೇರಿತರಾದ ಹರಿದಾಸರು ಪ್ರತಿಪದದಿಂದ ತೊಡಗಿ ಹುಣ್ಣಿಮೆಯವರೆಗೆ ನಡೆಯುವ ದೀಪೋತ್ಸವವನ್ನು ಕಣ್ಣಿಗೆ ಕಟ್ಟುವಂತೆ ಸುಮಾರು ನೂರು ಪದ್ಯಗಳಲ್ಲಿ ಹಾಡಿದ್ದಾರೆ.

ಆಮೇಲೆ ಹರಿದಾಸರ ಮನಸ್ಸು ಶಾಂತ ಸ್ಥಿತಿಗೆ ಬಂತು. ಅವರು ತಮ್ಮ ಮನೆಗೆ ಮರಳಲು ನಿರ್ಧರಿಸಿ, ದೇವರಲ್ಲಿ ಅಪ್ಪಣೆ ಕೇಳಲೆಂಬಂತೆ ಹಾಡಿದ ಹಾಡು ಹೀಗಿದೆ: (ರಾಗ : ಶಂಕರರಾಭರಣ, ಮಿಶ್ರಝಂಪೆತಾಳ)

ಪೋಗಿ ಬರುವೆನು ಎನ್ನ ಮನೆಗೆ ಜಗದೀಶ |
ಭಾಗವತಪ್ರಿಯ ಭಾಗೀರಥೀಜನಕ || || ಪಲ್ಲ ||

ವರುಷವರುಷಕೆ ನಿನ್ನ ದರುಶನವನಿತ್ತೆನ್ನ |
ಕರುಣಿಸೈ ಶೇಷಾದ್ರಿವರ ಶ್ರೀನಿವಾಸ ||
ದುರಿತಕೋಟಿಗಳ ಸಂಹರಿಸಿ ನಿನ್ನಯ ಕರುಣಾ-|
ವರ ಪ್ರಸಾದವನೀಯೊ ಜನಮೆಚ್ಚುವಂತೆ || || 1 ||

ಜಯಹೊಂದಿಸುತ ಮನದ ಭಯವೆಲ್ಲ ಪರಿಹರಿಸಿ |
ನಿಯತಮತಿಯೀಯೊ ನೀರಜನಾಭನೆ ||
ದಯಮಾಡೊ ತವ ಪಾದಸೇವೆಯನ್ನಿತ್ತೆನಗೆ |
ಪ್ರಿಯನಾಗು ಶ್ರೀಹರಿಯೆ ಭಯನಿವಾರಣನೆ || || 2 ||

ನೀನೆ ಗತಿಯೆನಗೆ ಶ್ರೀನಿವಾಸನೆ ಭಕ್ತಾ-|
ಧೀನ ನೀನೆಂಬ ಬಿರುದುಂಟಾದಡೆ ||
ಮಾನಿಸೈ ಶ್ರೀಲಕ್ಷ್ಮೀನಾರಾಯಣನೆ ನಿನ್ನ |
ಧ್ಯಾನಸೌಭಾಗ್ಯಗಳನ್ನಿತ್ತೆನ್ನ ಸಲಹೊ || || 3 ||

ಎರಡನೆಯ ಬಾರಿಗೆ ತಮ್ಮ ಮನೆಗೆ ಹಿಂದಿರುಗಿದ ಮೇಲೆ, ಅವರು ತಮ್ಮ ಹೆಣ್ಣುಮಕ್ಕಳಿಗೆ ಮದುವೆ ಮಾಡಿದರು. ಸುಮಾರು ಕ್ರಿ.ಶ.1905-6 ರಿಂದ ಸುಮಾರು ಹದಿನೆಂಟು ವರ್ಷಗಳ ಪರ್ಯಂತ ಆಗಿನ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅವರು ಹರಿಕಥಾ ಕಾಲಕ್ಷೇಪಗಳನ್ನು, ಪ್ರವಚನಗಳನ್ನು ಮಾಡುತ್ತಾ ಜನಸಮಾನ್ಯರ ಸಾಂಸಾರಿಕ ರೋಗಗಳಿಗೆ ಚಿಕಿತ್ಸೆ ನೀಡುತ್ತಾ, ಇಹ-ಪರದ ಬಗ್ಗೆ ಶಿಕ್ಷಣ ನೀಡುತ್ತಾ ಜನರನ್ನು ಸತ್ಪಥದಲ್ಲಿ ನಡೆಸುವ ಕೈಂಕರ್ಯದಲ್ಲಿ ತಮ್ಮನ್ನು ಅಭೂತಪೂರ್ವವಾಗಿ ತೊಡಗಿಸಿಕೊಂಡರು. ಇದರಿಂದ ನಿರಕ್ಷರಕುಕ್ಷಿಗಳಿಂದ ಹಿಡಿದು ವಿದ್ವಾಂಸರವರೆಗಿನ ಎಲ್ಲರ ಗೌರವ ಆದರಗಳಿಗೆ ಅವರು ಪಾತ್ರರಾದರು.

ಅಂಕಿತ

“ಲಕ್ಷ್ಮೀನಾರಾಯಣ”ಎಂದು ತನ್ನ ಹೆಸರನ್ನೇ ಅಂಕಿತವನ್ನಾಗಿ ಬಳಸುತ್ತಿದ್ದ ಪಾವಂಜೆಯವರು ಯಾವ ದೇವರ ಕೀರ್ತನೆಯೇ ಇರಲಿ ಕೊನೆಯಲ್ಲಿ ‘ಹರಿಸರ್ವೋತ್ತಮ’ ಎಂಬ ದ್ವೈತ ಸಿದ್ಧಾಂತದ ತತ್ತ್ವಕ್ಕೆ ಸರಿಯಾಗಿ ಆಯಾ ದೇವರುಗಳನ್ನು ಶ್ರೀಹರಿಯ ಸಖನೋ, ಮಡದಿಯೋ, ದಾಸನೋ, ತಂಗಿಯೋ, ತಮ್ಮನೋ, ಮೊಮ್ಮಗನೋ ಎಂಬಂತೆ ಸಂಬೋಧಿಸಿ, ‘ಲಕ್ಷ್ಮೀನಾರಾಯಣ’ ಎಂಬ ಅಂಕಿತದೊಂದಿಗೆ ಕೀರ್ತನೆಯನ್ನು ಮುಗಿಸುತ್ತಿದ್ದರು. ಅವರು ರಚಿಸಿದ ಎಲ್ಲಾ ಭಾಷೆಯ ಪದ್ಯಗಳನ್ನು ಅದು ಭಜನೆಯೆ ಇರಲಿ, ಹರಿಕಥೆಯ ಹಾಡು ಇರಲಿ, ಪತ್ರಲೇಖನವೇ ಇರಲಿ, ಜೋಗುಳವೇ ಇರಲಿ, ಮದುವೆಯಲ್ಲಿ ಹಾಸ್ಯಕ್ಕೆ ದೂರುವ ಹಾಡೇ ಇರಲಿ, ಕೊನೆಯಲ್ಲಿ ಲಕ್ಷ್ಮೀನಾರಾಯಣ ಎಂಬ ಅಂಕಿತ ನಾಮವನ್ನು ಹಾಕಿಯೇ ಪದ್ಯಗಳನ್ನು ರಚಿಸಿದ್ದರು.

ಇವರು ತಮ್ಮ ಮನೆಯ ನಿತ್ಯದ ಪೂಜೆಯಲ್ಲೂ ವೇದ ಮಂತ್ರಗಳನ್ನು ಬಳಸದೆ ಕೀರ್ತನೆಯಿಂದಲೇ ದೇವರ ಪೂಜೆ ಮುಗಿಸುತ್ತಿದ್ದರು. ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯನವರ ರಚನೆಗಳಲ್ಲಿ ಕಾಶಿಯ ಸಂಸ್ಕೃತ ಪಾಂಡಿತ್ಯ ಎದ್ದು ಕಾಣುತ್ತದೆ. ಮೇಲ್ನೋಟಕ್ಕೆ ಸರಳ ಕನ್ನಡ ಭಜನೆ ಎಂದು ಭಾಸವಾದರೂ ಅಲ್ಲಿ ಅವರು ಬಳಸಿದ ಶಬ್ಧದ ಅರ್ಥವನ್ನು ತಿಳಿಯಬೇಕಾದರೆ ತುಂಬಾ ಯೋಚನೆ ಮಾಡಬೇಕು ಅಥವಾ ತಿಳಿದವರನ್ನು ಕೇಳಬೇಕಾಗುತ್ತದೆ. ಇಷ್ಟಾದರೂ ವಿನಮ್ರವಾಗಿ, “ಕನಕ ಪುರಂದರ ಮುಖ್ಯ ದಾಸರಂತೆ | ಗುಣವೆನಗಿನಿತಿಲ್ಲ,” ಎಂದು ಅವರು ಹೇಳಿಕೊಂಡಿದ್ದಾರೆ.

(ಪಾವಂಜೆ ದೇವಸ್ಥಾನ)

1914 ರ ವೇಳೆಗೆ ಪಾವಂಜೆಯಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯ ಕಟ್ಟಲಾರಂಭಿಸಿದ ಮೇಲೆ ಹಿತೈಷಿಗಳ ಒತ್ತಾಯಕ್ಕೆ ಮಣಿದು ಅದನ್ನೇ ಕೇಂದ್ರವಾಗಿರಿಸಿಕೊಂಡು, ಮೊದಲಿನಂತೆ ಹರಿಕಥಾ ಕಾಲಕ್ಷೇಪಕ್ಕಾಗಿ ಊರೂರು ಸುತ್ತುತ್ತಿದ್ದರು.

ಆಸ್ತಿ ಪಾಸ್ತಿ, ಸಾಲ, ಗೇಣಿ ಎಂದು ಲೌಕಿಕ ವ್ಯವಹಾರಗಳಲ್ಲೂ ತೊಡಗಿ ಜಿಪುಣ ಎಂದೂ ಅವರು ಕರೆಯಿಸಿಕೊಂಡದ್ದಿದೆ. ಅವರು ಪತ್ರಗಳನ್ನು ಕೂಡ ಕವನರೂಪದಲ್ಲಿಯೇ ಬರೆದು ಕಳಿಸುತ್ತಿದ್ದರು. ಗಣ್ಯರಾದ ರಾಮಣ್ಣ ಶೆಟ್ಟರೆಂಬವರಿಗೆ ತನ್ನ ಒಕ್ಕಲುಗಳು ಗೇಣಿ ಕೊಡಲಿಲ್ಲವೆಂದು ದೂರಿ ಬರೆದ ಪತ್ರ ಇಂತಿದೆ :

ಶ್ರೀ ಮಹಾದೇವಿಯಾ ಪಾದಾರವಿಂದ
ಭ್ರಮರ ರಾಮಣ್ಣ ಶೆಟ್ರ ಸನ್ನಿಧಿಗೆ
ಪ್ರೇಮಿ ಹರಿದಾಸ ಬರಕೊಂಡರ್ಜಿಯನು ಪ್ರೀತಿ
ಕಾಮ ರಾಘವ ಚಿತ್ತವಿಪುದು || 1 ||
ರಕ್ಕಸರಿಗೆಣೆಯಾದ ವಕ್ಕಲುಗಳಿಂದ ನಾ
ಸಿಕ್ಕಿಬಿದ್ದೆನು ಮಹಾರಾಯ
ಠಕ್ಕಿಸುತ ಪರದ್ರವ್ಯ ಮುಕ್ಕುವರೆನ್ನ ನುಡಿ
ಲೆಕ್ಕಿಸುವರೇ ಮಮ ಪ್ರಿಯ || 2 ||
ಆರು ಮುಡಿಯಕ್ಕಿ ಮೂರಾರು ರೂಪಾಯಿ ಕುಂ
ಬಾರ ಕೊರಗಮಗನು ಬಸವ
ಮೀರಿ ನಿಮ್ಮಯ ಮಾತ ತಾರವಾದರು ಕೊಡದೆ
ಭೂರಿ ವಿಭವದಿ ನಿತ್ಯ ಮೆರೆವ || 3 ||
ಲಕ್ಕಣ್ಣ ಮೂಲ್ಯನಿವ ಪಕ್ಕ ಕಣ್ಣೋಜಿ ಕರಿ
ಬೆಕ್ಕಿನಂತಿಹುದು ಇವನ ಕಣ್ಣು
ಮಿಕ್ಕಿ ನಿಮ್ಮಯ ಮಾತ ಕೊಡದಿರುವನೊಂದು ಮುಡಿ
ಅಕ್ಕಿಯಂ ವಕ್ಕಣಿಪುದೇನು || 4 ||
ಸುಬ್ಬಪ್ಪ ಶೆಟ್ಟಿ ಸುಳ್ಳಾಡುವುದರಲಿ ಜಗದೊ
ಳೊಬ್ಬನೇ ಸಾಕು ಮತ್ತ್ಯಾಕೆ
ಹೆಬ್ಬಾವಿನಂತೆ ನುಂಗುವನು ಪರದ್ರವ್ಯ
ದುರ್ಭಾಗ್ಯ ಕಷ್ಟ ನಷ್ಟ ದುಷ್ಟ || 5 ||

ಒಂದು ದಿನ ರಾತ್ರಿ ಮಲಗಿದ್ದಾಗ, ಹರಿದಾಸರ ಮನೆಯ ಮೇಲೆ ದೊಡ್ಡ ಮರವೊಂದು ಉರುಳಿಬಿದ್ದು ಅವರು ಮತ್ತು ಪತ್ನಿ ಬದುಕಿದ್ದೇ ಹೆಚ್ಚು ಎಂಬಂತಹ ಒಂದು ಘಟನೆ ನಡೆಯಿತು. ಆ ಸಂದರ್ಭದ ಒಂದು ಕೀರ್ತನೆಯೂ ಇದೆ.

ಮರಬಿದ್ದು ಮನೆ ಕಳಕೊಂಡ ಹರಿದಾಸರಿಗೆ ಪಾವಂಜೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ರಯ ನೀಡಲಾಯಿತು. ದೇವಸ್ಥಾನ ಸ್ಥಾಪಕರಾದ ವಾಸು ಭಟ್ಟರು ಮನೆಯಿಲ್ಲದ ಹರಿದಾಸರಿಗೆ ದೇವಸ್ಥಾನದ ಮುಂಭಾಗದ ಪೌಳಿಯ ಈಶಾನ್ಯ ಮೂಲೆಯ ಕೋಣೆಯಲ್ಲಿ ವಾಸಿಸಲು ವ್ಯವಸ್ಥೆ ಮಾಡಿಕೊಟ್ಟರು. (2005ರಲ್ಲಿ ದೇವಸ್ಥಾನ ಪುನರುಜ್ಜೀವನಗೊಳ್ಳುವರೆಗೂ ಅದು ‘ಹರಿದಾಸರಕೋಣೆ’ ಎಂದೇ ಕರೆಯಲ್ಪಡುತ್ತಿತ್ತಂತೆ). ಅಲ್ಲಿದ್ದ ದೊಡ್ಡ ಗಾತ್ರದ ಮರದ ಕಲೆಂಬಿಯೊಳಗೆ (ಮಂಚದ ಗಾತ್ರದ ಪೆಟ್ಟಿಗೆ – ಅದರ ಮೇಲೆ ಮಲಗಲೂ ಆಗುತ್ತದೆ) ಒಂದು ಕಬ್ಬಿಣದ ಪೆಟ್ಟಿಗೆಯಲ್ಲಿ ಹರಿದಾಸರು ತಮ್ಮ ತಿರುಗಾಟದಲ್ಲಿ ಸಂಗ್ರಹಿಸಿದ ಹಣವನ್ನು ಭದ್ರವಾಗಿ ಇಡುತ್ತಿದ್ದರು. ಒಂದು ದಿನ ಹೀಗೆ ಸಂಗ್ರಹಿಸಿದ ಹಣ ಕಾಣೆಯಾದಾಗ ಅದನ್ನು ಕಬಳಿಸಿದ ಕಳ್ಳರು ತನ್ನ ಆತ್ಮೀಯರೆಂದೇ ನಟಿಸಿಕೊಂಡಿದ್ದ ಆರುಮಂದಿ ಬಂಧುಗಳೇ ಎಂದು ತಿಳಿದಾಗ ಹರಿದಾಸರು ಅವರ ಮೇಲೆ ಕೋಪಿಸಿಕೊಳ್ಳದೆ, ಆ ಆರು ಜನರನ್ನು ಅರಿಷಡ್ವರ್ಗಗಳೆಂದು ಭಾವಿಸಿ ತನ್ನ ಹಿಡಿತವಿಲ್ಲದ ಪಂಚೇಂದ್ರಿಯಗಳು ತನ್ನನ್ನು ವಂಚಿಸಿ ಶಿಕ್ಷಿಸಿದವೋ ಎಂದು ಭಾವಿಸಿ ಒಂದು ಕೀರ್ತನೆಯನ್ನು ರಚಿಸಿ ಹಾಡಿದರು!

ಎಷ್ಟೋ ಅಪರಾದಿ | ಯಾವುದು |
ಬಟ್ಟೆಯೋ ಕರುಣಾಬ್ಧಿ || || ಪಲ್ಲ ||

ದುಷ್ಟರಾರುಜನ | ಒಟ್ಟುಗೂಡಿ ಎನ್ನ |
ಮೆಟ್ಟಿ ಕುಟ್ಟಿ ಪುಡಿ | ಗಟ್ಟುವರೈ ಹರಿ || || ಅನು ||

ಲೇಶ ಪುಣ್ಯವಿಲ್ಲ | ಪಾಪದ |
ರಾಶಿ ಬೆಳೆಯಿತಲ್ಲ ||
ಆಶಾವಶ ಹರಿ | ದಾಸನೆಂದೆನಿಸಿದೆ |
ದೂಷಣ ಜನರ ಶ | ಬಾಸಿಗೆ ಮೆಚ್ಚಿದೆ || || 1 ||

ಕಲಿಕಲ್ಮಷ ಬಹಳ | ದೇಹದಿ |
ನೆಲೆಸಿತು ಶ್ರೀಲೋಲ ||
ಜಲಜನಾಭ ನಿ | ನ್ನೊಲುಮೆಯೆ ಮುಖ್ಯವು |
ಕುಲಕೆಟ್ಟ ಅಜ | ಮಿಳ ಪಾವನನಾದ || || 2 ||

ಹೀನರೈವರ ಸಂಗ | ದಿಂದಲೆ |
ಹಾನಿಯಾದೆನೊ ರಂಗ ||
ಪ್ರಾಣವು ನಿನ್ನಾ | ಧೀನವಾದ ಮೇಲೆ |
ನೀನೆ ಗತಿ ಲ | ಕ್ಷ್ಮೀನಾರಾಯಣ || || 3 ||

1922 ರಲ್ಲಿ ತಮ್ಮ ಸಕಲ ಸ್ಥಿರ ಚರ ಆಸ್ತಿಗಳನ್ನು ದೇವಾಲಯಕ್ಕೆ ಬರೆದುಕೊಟ್ಟ ಹರಿದಾಸರು 1924 ರಲ್ಲಿ ವೈಕುಂಠವಾಸಿಗಳಾದರು.

ಹರಿಕಥಾ ಕಥನಕುತೂಹಲ

ಪಾವಂಜೆ ಹರಿದಾಸರ ಹರಿಕಥೆಯ ಶೈಲಿ, ಅದರ ಸ್ವಾರಸ್ಯಗಳ ಬಗ್ಗೆ ಡಾ. ಎಚ್. ದಿವಾಕರ ಭಟ್ ಯಾಜಿ ಅವರು ದಾಖಲಿಸಿರುವುದು ಹೀಗೆ:

“ಪಾವಂಜೆ ಹರಿದಾಸ ¯ಕ್ಷ್ಮೀನಾರ್ಣಪ್ಪಯ್ಯನವರು ಆಜಾನುಬಾಹು ಏನೂ ಅಲ್ಲ. ಮಧ್ಯಮ ಗಾತ್ರದ ಎಣ್ಣೆ ಕಪ್ಪು, ಬಣ್ಣದ ದುಂಡು ಮುಖದ, ದಪ್ಪ ಮೀಸೆ, ಗಂಭೀರ ಮುಖಭಾವದವರಾಗಿದ್ದರು. ಅವರು ಹರಿಕಥೆಗೆ ನಿಂತಾಗ ಮೈಸೂರು ರಾಜರ ಪೇಟದಂತಹ ಜರಿ ಪಟ್ಟೆಯ ಮುಂಡಾಸು ಧರಿಸುತ್ತಿದ್ದರು. ಆ ರೀತಿ ಅದನ್ನು ಸುತ್ತಿ ಕಟ್ಟಲು ಅವರಿಗೆ ಮಾತ್ರ ಗೊತ್ತಿತ್ತು. ಕೆಲವು ಸಂದರ್ಭಗಳಲ್ಲಿ ಕಪ್ಪನೆಯ ಕೋಟನ್ನು ತೊಡುತ್ತಿದ್ದುದುಂಟು. ಶುಭ್ರ ಬಿಳಿ ಪಂಚೆಯ ಕಚ್ಚೆಯನ್ನು ಬಿಗಿದು ಅವರು ಹರಿಕಥೆಗೆ ನಿಂತರೆಂದರೆ ಸಭೆ ಸ್ತಭ್ಧವಾಗುತ್ತಿತ್ತು. ಅವರ ಹರಿಕಥೆಗಳು ಭಕ್ತಿ ಪ್ರಧಾನವಾದುವುಗಳು. ಯಾವುದೇ ಕಥೆಯಿರಲಿ, ಪೀಠಿಕೆಯ ಅಡಿಗಲ್ಲು ಅದಕ್ಕನುಣವಾಗುತ್ತಿತ್ತು.

ತಾಳಗಳ ಮೇಲಿನ ಹಿಡಿದವಂತೂ ಹರಿದಾಸರಿಗೆ ನೀರು ಕುಡಿದಂತೆ ಇತ್ತು. ಒಂದು ತಾಳದಿಂದ ಇನ್ನೊಂದು ತಾಳಕ್ಕೆ, ನಿಧಾನದಿಂದ ತ್ವರಿತಕ್ಕೆ ಮತ್ತೆ ನಿಧಾನಕ್ಕೆ ಹೀಗೆ ಪ್ರಾಸಬದ್ಧವಾದ ತಮ್ಮ ಹಾಡಿಗೆ ತಾಳದ ಲಯವನ್ನು ಬಿಗಿದು, ಭಾವಾರ್ಥಕ್ಕೆ ತಮ್ಮ ಧ್ವನಿಯನ್ನು ಏರಿಸಿ, ಕುಗ್ಗಿಸಿ, ನಾಟಕದ ಪಾತ್ರಧಾರಿಯಂತೆ, ಕೆಲವೊಮ್ಮೆ ಯಕ್ಷಗಾನದ ಪಾತ್ರಧಾರಿಯಂತೆ ಮತ್ತೆ ತಮ್ಮ ಕಾಲ್ಗೆಜ್ಜೆಗಳ ಘಲ್ ಘಲ್ ಧ್ವನಿಯ ಮೇಳಕ್ಕೆ, ಕೈಗಳಲ್ಲಿ ಹಿಡಿದಿರುವ ಮಂಜಿರದ ಕಿಣಿ ಕಿಣಿ ರವವನ್ನು ಹೊಂದಿಸುತ್ತಾ ಅವರು ಹಾಡಲು ಶುರುಮಾಡಿದರೆ ಅಲ್ಲಿಯ ವಾತಾವರಣ ಗಂಧರ್ವಲೋಕವೆಂಬಂತೆ ಭಾಸವಾಗುತ್ತಿತ್ತು. ಇಡೀ ಸಭೆಯೇ ತಾಳ ಹಾಕುತ್ತಿತ್ತು, ತಲೆತೂಗುತ್ತಿತ್ತು. ಕೆಲವೊಮ್ಮೆ ತನ್ಮಯತೆಯ ಸಮಾಧಿಯಲ್ಲಿ ಮೈ ಮೆರೆಯುತ್ತಿತ್ತು. ಶ್ರೋತೃಗಳು ಕಥೆಯನ್ನು ಭಾವಪರವಶರಾಗಿ ಕೇಳುತ್ತಿದ್ದರು. ಇಂತಹ ಶ್ರೋತೃವೃಂದದಲ್ಲಿ ಕೆಲವು ಕಡೆ ಸಮಯ ಕಳೆಯಲು ಬರುವ ಜನರೂ ಇದ್ದ ಹಾಗೇ ಇನ್ನು ಕೆಲವು ಕಡೆ ತಮ್ಮ ಶ್ರೀಮಂತಿಕೆಯನ್ನು ಮೆರೆಸುವ ಸಲುವಾಗಿ ಬರುತ್ತಿದ್ದ ಬೂಟಾಟಿಕೆಯ ಭಕ್ತರೂ ಇದ್ದರು. ಆ ಕಡೆ ಹರಿದಾಸರು ಗಂಭೀರವಾಗಿ ಕಥೆ ಹೇಳುತ್ತಿದ್ದರೆ ಈ ಕಡೆ ಇವರು ಹರಟುತ್ತಾ ತಮ್ಮದೇ ಲೋಕದಲ್ಲಿ ಮೈಮೆರೆಯುತ್ತಿದ್ದರು. ಇಂತಹವರನ್ನು ಕೂಡಲೇ ಉಪಕಥೆ ಪದ್ಯಗಳ ಮೂಲಕ ಹರಿದಾಸರು ಎಚ್ಚರಿಸುತ್ತಿದ್ದರು. ಅದಕ್ಕೂ ಅವರು ಜಗ್ಗದಿದ್ದರೆ ಹರಿಕಥೆಯನ್ನು ಅಲ್ಲಿಯೇ ನಿಲ್ಲಿಸಿ ಬಿಡುತ್ತಿದ್ದರು. ಇಂತಹ ಹಲವಾರು ಘಟನೆಗಳಲ್ಲಿ ಒಂದೆರಡು ಹೀಗಿವೆ.

ಪಾಂಡವರ ವನವಾಸ ಸಂದರ್ಭ: ಕಥೆ ಬಹಳ ರಸವತ್ತಾಗಿ ನಡೆಯುತ್ತಿತ್ತು. ಇತ್ತ ಕಡೆ ಸಭೆಯಲ್ಲಿ ಆಸೀನರಾಗಿದ್ದ ಶ್ರೀಮಂತರಿಬ್ಬರು ತಾವು ಎಲ್ಲಿ ಕೂತಿದ್ದೇವೆ ಎಂಬುದನ್ನು ಮರೆತು ಲೋಕಾಭಿರಾಮವಾಗಿ ಗಟ್ಟಿಯಾಗಿ ಹರಟುತ್ತಿದ್ದರು. ಇದರಿಂದ ಪಕ್ಕದವರಿಗೆ ಹಿಂಸೆಯಾಗುತ್ತಿದ್ದರೂ ತಮ್ಮದೇ ಲೋಕದಲ್ಲಿ ಮುಳುಗಿದ್ದ ಆ ಧನಾಢ್ಯರನ್ನು ಯಾರೊಬ್ಬರೂ ಎಚ್ಚರಿಸುವ ಧೈರ್ಯತಾಳಲಿಲ್ಲ. ಇದನ್ನು ಗಮನಿಸುತ್ತಿದ್ದ ದಾಸರು ಉಪಕಥೆಯ ಸಂದರ್ಭವನ್ನು ಉಪಯೋಗಿಸಿ ಅವರ ಗಮನ ಸೆಳೆಯಲು ಪ್ರಯತ್ನಿಸಿದರು. ಹರಿದಾಸರ ಈ ಯುಕ್ತಿಯೂ ಫಲಕೊಡದಿದ್ದಾಗ ದಾಸರು ಸ್ವಲ್ಪ ಎತ್ತರ ಸ್ವರದಲ್ಲಿ “ನಿಮ್ಮ ಊಟೋಪಚಾರದ ವ್ಯವಸ್ಥೆ ಬೇಗನೆ ಆಗುತ್ತದೆ, ಅಷ್ಟರವರೆಗೆ ನಾರಾಯಣ ನಾರಾಯಣ ಎಂದು ಸುಮ್ಮನಿರಿ” ಎಂದು ಎಚ್ಚರಿಸಿದರೂ ಸುಮ್ಮನಾಗದ ಧನಾಢ್ಯರನ್ನು ಕುರಿತು ದಾಸರು ಒಂದು ಹಾಡನ್ನು ರಚಿಸಿ ಹಾಡಿಯೇ ಬಿಟ್ಟರು.

ಇಂಥ ಜನಗಳಿಗೆ ಎಂಥಾದ್ದು ಹರಿಕಥೆ |
ಕುಂತಿಮಕ್ಕಳಿಗಾಯ್ತು ಕಾಂತಾರವಾಸ || || ಪಲ್ಲ||

ಸ್ವಂತ ಧರ್ಮವ ಬಿಟ್ಟು ಆಂತನ್ಯ ಧರ್ಮವ |
ಸಂತಾಪಕ್ಕೊಳಗಾಗಿ ಭ್ರಾಂತಿಪಟ್ಟಿಹರು || || 1 ||

ಜೀವಿಸಿ ಮೃಗದಂತೆ ಸಾವನು ಬಗೆಯದೆ |
ಕೇವಲ ತಾಮಸ ಯಾವಜ್ಜೀವನವು || || 2 ||
ಸರಕಾರದ ಭಯ ಸರ್ವರಿಗಿದ್ದರು |
ಸರಿಯಾಗಿ ನಡೆಯದೆ ಬರಿದೆ ಬಳಲುವರು || || 3 ||

ಬಡವರ ಬಾಯನು ಹೊಡೆದು ತಂದು ತನ್ನ |
ಮಡದಿಮಕ್ಕಳಿಗುಣಬಡಿಸಿ ಮೆರೆವರೈ || || 4 ||

ಲಕ್ಷ್ಮೀನಾರಾಯಣನ ಲಕ್ಷಣಾಂಕಿತರನ್ನು |
ಲಕ್ಷ್ಯಕ್ಕೆ ತಾರದ ಕುಕ್ಷಿಂಭರರು || || 5 ||

ಈ ಹಾಡು ವನವಾಸದ ಕಥೆಗೆ ಇನ್ನಷ್ಟು ಮೆರುಗನ್ನು ಕೊಟ್ಟಿತ್ತು. ಈ ಹಾಡು ಎಷ್ಟು ಸಾಂದರ್ಭಿಕವಾಗಿತ್ತೆಂದರೆ ಹರಿಕಥೆಯನ್ನು ಆ ದಿನಕ್ಕೆ ಆ ಹಂತಕ್ಕೆ ನಿಲ್ಲಿಸಿದ್ದೇ ಸಭಿಕರಿಗೆ ತಿಳಿಯಲಿಲ್ಲ. ಅಷ್ಟು ಮಾರ್ಮಿಕವಾಗಿ, ಜಾಣ್ಮೆಯಿಂದ ಆ ಶ್ರೀಮಂತರಿಗೆ ಛಡಿಯೇಟನ್ನು ಕೊಟ್ಟಿದ್ದರು ಹರಿದಾಸರು.

ಹರಿದಾಸರಿಗೆ ತಾಂಬೂಲ ಚರ್ವಣದ ಅಭ್ಯಾಸವಿತ್ತು. ಇದರಿಂದ ಅವರ ತುಟಿಗಳು ಯಾವಾಗಲೂ ಕೆಂಪಾಗಿದ್ದವು. ಇದನ್ನು ಗಮನಿಸುತ್ತಿದ್ದ ಹಾಸ್ಯ ಪ್ರವೃತ್ತಿಯ ಒಬ್ಬ ಆಪ್ತರು ವೀಳ್ಯದೆಲೆಯ ಕುರಿತು ಹರಿಕಥೆ ಮಾಡಬೇಕೆಂದು ಕೇಳಿಕೊಂಡರು. ಹರಿದಾಸರಿಗೆ ಇದು ದೊಡ್ಡ ಸವಾಲಾಗಲಿಲ್ಲ. ಹರಿಕಥೆಗೆ ಆರಂಭಿಸಿಯೇ ಬಿಟ್ಟರು. ವೀಳ್ಯದೆಲೆಯ ಏಳು ನಾರುಗಳಿಗೆ ಪ್ರತಿಯೊಂದಕ್ಕೂ ಪ್ರತ್ಯೇಕವಾದ ಕಥೆಯನ್ನು ಸೃಷ್ಟಿಸಿ ಅದಕ್ಕೆ ಹೊಂದಿಕೆಯಾಗುವ ಉಪಕಥೆಗಳನ್ನು ಪೋಣಿಸಿ, ಇಂಪಾದ ರೋಚಕ ಪದ್ಯಗಳಿಂದ ರಮಿಸುತ್ತಾ ಹರಿಕಥೆ ಮುಂದುವರಿಯಿತು. ಮೂರು ಘಂಟೆಯಾದರೂ ಮೂರು ನಾರಿನ ಕಥೆ ಮುಗಿಯಲಿಲ್ಲ. ಇನ್ನು ಏಳು ನಾರಿನ ಕಥೆ ಯಾವಾಗ ಮುಗಿಯಿತ್ತೊ ಎಂದು ಶ್ರೋತೃಗಳ ಕೋರಿಕೆಯಂತೆ ಅಲ್ಲಿಗೆ ಮಂಗಳ ಹಾಡಿದರು.

ಇನ್ನೊಂದು ಸಂದರ್ಭ ಹೀಗಾಗಿತ್ತು. ಅಂಗದ ಸಂಧಾನ ಆ ದಿನದ ಕಥೆಯಾಗಿತ್ತು ಮತ್ತು ಅದು ಫಲಿಮಾರು ಗುತ್ತಿನ ಮನೆಯಲ್ಲಿ ವ್ಯವಸ್ಥೆಯಾಗಿತ್ತು. ಫಲಿಮಾರು ಸಮೀಪದ ಅವರಾಲು ಕಂಕಣ ಗುತ್ತು ಬಾಯಾರು ವೆಂಕಪ್ಪ ಹೆಗ್ಡೆ ಎಂಬವರು ಹರಿಕಥೆಗೆ ವಿಶೇಷವಾಗಿ ಆಮಂತ್ರಿಸಲ್ಪಟ್ಟ ಪ್ರಧಾನ ಅತಿಥಿಗಳು. ಫಲಿಮಾರು ಗುತ್ತಿನವರ ಮನೆಯಲ್ಲಿ ಹರಿಕಥೆ ವ್ಯವಸ್ಥೆಯಾಗಿತ್ತು. ವೆಂಕಪ್ಪ ಹೆಗ್ಡೆಯವರು ಹರಿದಾಸರ ಆಪ್ತರೇ ಆಗಿದ್ದರು. ಸಮಯ ಪಾಲನೆಯ ಶಿಸ್ತುನ್ನು ಇಟ್ಟುಕೊಂಡಿದ್ದ ಹರಿದಾಸರು ಯಾರಿಗೂ ಕಾಯದೆ ಕಥೆಗೆ ತೊಡಗಿ ಆ ಕಥೆ ಈ ದಿಸೆಯಲ್ಲೇ ಸಾಗಿತ್ತು. – ಕಪಿಸೇನೆಯೊಂದಿಗೆ ಸೀತಾನ್ವೇಷಣೆಗೆ ಹೊರಟ ಶ್ರೀರಾಮನಿಗೆ ಲಂಕೆಯ ಅಶೋಕವನದಲ್ಲಿ ರಾವಣ ಸೀತೆಯನ್ನು ಬಂಧಿಸಿಟ್ಟ ವಾರ್ತೆ ಹನುಮಂತನಿಂದ ತಿಳಿದು ವಾನರ ಮುಖ್ಯನಲ್ಲೊಬ್ಬನಾದ ಅಂಗದನನ್ನು ಸಂಧಾನಕ್ಕಾಗಿ ರಾವಣನ ಆಸ್ಥಾನಕ್ಕೆ ಕಳುಹಿಸಿಕೊಟ್ಟ. ಅಂಗದನ ಆಗಮನವನ್ನು ಅವಲಕ್ಷಿಸಿದ ರಾವಣನು ಆತನಿಗೆ ಕುಳಿತುಕೊಳ್ಳಲು ಆಸನವನ್ನು ನೀಡದೆ ಅವಮಾನಿಸಿದ. ರಾವಣನ ಈ ದರ್ಪಕ್ಕೆ ತಕ್ಕ ಉತ್ತರವನ್ನು ಕೊಡಲು ಸಂಕಲ್ಪಸಿದ ಅಂಗದ ತನ್ನ ಬಾಲವನ್ನೇ ಬೆಳೆಯಿಸಿ ರಾವಣನ ಸಿಂಹಾಸನದ ಎತ್ತರವನ್ನು ಮೀರುವಂತೆ ಸುತ್ತುಕಟ್ಟಿ ಅದರಲ್ಲಿ ಆಸೀನನಾದ. ಇದನ್ನು ನೋಡಿದ ರಾವಣನ ಸಭೆ ಗರಬಡಿದಂತಾಗಿ ಮೂಕವಿಸ್ಮಿತವಾಯಿತು ಮತ್ತು ಅಂಗದನನ್ನೇ ನೋಡುತ್ತಾ ನಿಂತು ಮುಂದೆ ಏನು ಅವಾಂತರ ಕಾದಿದೆಯೋ ಎಂಬ ಭಯದಿಂದ ಉಸಿರುಕಟ್ಟಿ ಮೌನವಾಗಿತ್ತು.

ಹರಿದಾಸರು ಈ ರೀತಿ ಕಥೆ ಹೇಳುವ ಹೊತ್ತಿಗೆ ಪ್ರಧಾನ ಅತಿಥಿ ಹೆಗ್ಡೆಯವರ ಆಗಮನವಾಯಿತು. ಹರಿಕಥೆ ಕೇಳುತ್ತಿದ್ದ ಮಹನೀಯರೆಲ್ಲ ಭಯ ಭಕ್ತಿಯಿಂದ ಹೆಗ್ಡೆಯವರನ್ನು ಎದುರುಗೊಂಡು ಅವರ ಸತ್ಕಾರಕ್ಕಾಗಿ ಮೊದಲೇ ಏರ್ಪಾಟಾಗಿದ್ದ ಮಾಳಿಗೆಯ ಕೊಠಡಿಗೆ ಅವರನ್ನು ಕರೆದೊಯ್ಯಲು ಅನುವಾದರು. ಇದು ಹರಿದಾಸರಿಗೆ ಸರಿ ಬರಲಿಲ್ಲ. ಕಥೆಗೆ ರಸಭಂಗವಾಗಿ ಎಲ್ಲರ ಗಮನ ಅತ್ತ ಕಡೆ ಹೋಯಿತು. ಹರಿದಾಸರು ಯಾರಿಗೂ ಎಂದೂ ಹೆದರುವವರಲ್ಲ. ಅವರು ಯಾವ ಮುಲಾಜು ಇಲ್ಲದೆ ಆ ಸಂದರ್ಭಕ್ಕೆ ಸರಿಯಾದ ಹಾಡನ್ನು ಕಟ್ಟಿ ಈ ರೀತಿ ಹಾಡಿದರು.

ಅಟ್ಟಕ್ಕೇರಿದನಹೋ ಮಂಗ | ರಾಮ -|
ನಿಷ್ಠೆಯ ಮರೆತನೇ ತಪ್ಪನೀ ಮಂಗ ||
ಎಷ್ಟೆಂದರು ಇವ ಮಂಗ | ರಾಮ-|
ನಿಷ್ಠೆಯ ಮರೆತನೇ ತಪ್ಪ ನೀ ಮಂಗ || ಪಲ್ಲ ||

ಹುಟ್ಟುಗುಣದವರೊಟ್ಟುಗೂಡುತ ಕೈ – |
ತಟ್ಟಿ ಶಭಾಸೆನೆ ಅಟ್ಟಕ್ಕೇರಿದ ಮಂಗ ||
ಲಕ್ಷ್ಮಣಾಗ್ರಜ ಲಕ್ಷ್ಮೀನಾರಾಯಣನ |
ಸೂಕ್ಷ್ಮವನರಿಯದೆ ರಕ್ಕಸ ಸಭೆಯೊಳು || ಅಟ್ಟಕ್ಕೇರಿದ ||

ಸೂಕ್ಷ್ಮಗ್ರಾಹಿಗಳಾದ ಹರಿದಾಸರ ಆಂತರ್ಯವನ್ನು ಬಲ್ಲವರಾದ ಹೆಗ್ಡೆಯವರು ಈ ಪದ್ಯವನ್ನು ಕೇಳಿ ಇದು ತನ್ನನ್ನೇ ಕುರಿತು ದಾಸರು ತನ್ನ ಕಿವಿ ಹಿಂಡಿದ ಹಾಡು ಎಂದರಿತು ಕೂಡಲೇ ಉಪ್ಪರಿಗೆಯಿಂದ ದಡ ದಡನೇ ಕೆಳಗಿಳಿದು ಹರಿದಾಸರ ಮುಂದೆ ತನಗಾಗಿ ಕಾದಿರಿಸಿದ್ದ ಆಸನದಲ್ಲಿ ಆಸೀನರಾದರು. ತಡವಾಗಿ ಬಂದು ಸಭಾ ಸಂಪ್ರದಾಯವನ್ನು ಮುರಿದು ತಾನು ಮಾಡಿದ ಅಪಚಾರವನ್ನು ಮನ್ನಿಸಬೇಕೆಂಬ ಭಾವದಿಂದ ಮುದುಡಿ ಕೂತ ಹೆಗ್ಡೆಯವರ ಪ್ರಸಂಗಾವಧಾನವನ್ನು ಮೆಚ್ಚಿದ ಹರಿದಾಸರು ಹಾಡನ್ನು ಹೀಗೆ ಮುಂದುವರಿಸುತ್ತಾರೆ –

ಸಾಮಾನ್ಯನಲ್ಲ ನೀ ಮಂಗ ರಘು-|
ರಾಮಪಾದಾರವಿಂದ ಸದ್ಭಂಗ ||
ತಾಮಸವಡರಿತು ಕ್ಷಣಕ್ಕೆ ತಾ-|
ರಾಮದೂತನೆಂದು ಹೊಳೆಯಿತು ಮನಕೆ || ಅಟ್ಟ ||

ರಾಮ ರಾಮ ಎಂದು ನೆನೆಯುತ ಮನದೊಳು |
ರಾಮ ಕಾರ್ಯೋನ್ಮುಖನಾದನೆ ಮುದದೊಳ್ |
ಭೀಮ ಪರಾಕ್ರಮಿ ಲಕ್ಷ್ಮೀನಾರಾಯಣ ಪ್ರೇಮಿ |
ನಾಮಾಂಕಿತನಂಗದ ತಾ ಸದ್ಧರ್ಮಿ || ಅಟ್ಟ ||

– ಎಂದು ಹಾಡಿ ಕಥೆ ಮುಂದುವರಿಸಿದರು.

ಒಮ್ಮೆ ಹರಿದಾಸರು ಮೂಲ್ಕಿಯಿಂದ ಇನ್ನ ಎಂಬ ಹಳ್ಳಿಗೆ ನಡೆದು ಹೋಗುತ್ತಿರುವಾಗ ಪಲಿಮಾರಿನ ಬಳಿ ಕೆಲವು ಮುಸ್ಲಿಮರು ಸೇರಿ ತಮ್ಮವರ ಮೇಲೆ ಒಂದು ಹಾಡು ರಚಿಸಿ ಹೇಳಬೇಕೆಂದು ಬಲವಂತಮಾಡಿದರು. ದಾಸರ ಬಾಯಲ್ಲಿ ಹಾಡೊಂದು ಚಿಮ್ಮಿತು.

ತುರುಕರಿದ್ದರೆ ಊರು ಸ್ವರ್ಗ | ಆಹಾ |
ತುರುಕರಿಲ್ಲದ ಊರು ನರಕ ||
ತುರುಕರುಗಳ ಕಂಡು ಹರಿಹಾಯ ಬೇಡಿ |
ಕರೆದು ಗ್ರಾಸವನ್ನಿತ್ತು ಉಪಚಾರ ಮಾಡಿ |
ತುರುಕರ ಹಿಂಸೆ ಮಾಡಿ -|
ದರೆ ಹರಿಮುನಿಯುವ ನಿಮ್ಮ ನೋಡಿ |
ತುರುಕರುಗಳ ಸೇವಾಸಕ್ತ |
ಪರತರಕೆ ಮಾಡುವ ಪುರುಷಾರ್ಥ ||

ತುರು ತುರು ಎಂದು ಕೊಳಲುನೂದುತ್ತಾ ಬಂದ |
ತುರಕರೊಡೆಯ ಲಕ್ಷ್ಮೀನಾರಾಯಣ ಗೋವಿಂದ ||

ಎಂಬ ದ್ವಂದ್ವಾರ್ಥದ (ತುರುಕರೆಂದರೆ ಮುಸ್ಲಿಮರೂ ಹೌದು ದನಗಳೂ ಹೌದು) ಹಾಡನ್ನು ಹಾಡಿ ಅವರನ್ನು ಸಂತೋಷಪಡಿಸಿ ಬೀಳ್ಕೊಟ್ಟರು.

(‘ಖ್ಯಾತ ಹರಿದಾಸ- ಆಶುಕವಿ, ಪಾವಂಜೆ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ’. ಕಾಂತಾವರ ಕನ್ನಡ ಸಂಘ. 2018 – ಪುಸ್ತಕದಿಂದ)
ದೂರುವ ಹಾಡುಗಳು!

ಸಮಾಜ ಬಾಂಧವರೊಂದಿಗೆ ಸಂಸಾರಿಯಾಗಿರುವಾಗ ಹರಿದಾಸರು ಕಟ್ಟಿದ ನೂರಾರು ಭಜನೆಗಳು, ತುಳು ಹಾಡುಗಳು, ಶೋಭಾನೆ ಹಾಡು, ಜೋಗುಳ ಹಾಡು, ಮದುವೆ ಮನೆಯಲ್ಲಿ ದೂರುವ ಹಾಡುಗಳು ಜನಜನಿತವಾಗಿವೆ. ಒಂದು ದೂರುವ ಹಾಡು –

ಅತ್ತಿಗೆ ಈ ಹೊತ್ತಿನವತಣ | ಉಂಡುಂಡು ಬೇ
ಸತ್ತುದೆಲ್ಲ ಕೂಡಿದ ಜನ
ಎತ್ತು ತಿನ್ನುವನ್ನ ಹುಳಿ
ಸತ್ತ್ವವಿಲ್ಲದಂಥ ಪಲ್ಯ
ಪಥ್ಯದೊಂದು ಸಾರು ಸಾಲದೆ ಸಾಕು ನಾ ದಣಿದೆ || 1 ||
ಇನ್ನು ಅನೇಕ ತುಳು ಹಾಡುಗಳ ಪೈಕಿ ಈ ಕೆಳಗಿನ ಹಾಡು ತುಂಬ ಪ್ರಚಲಿತ –

ನೀರಜಾಮುಖಿ | ನೀರೋಂಡು ಕೊಳುಜೆ || || ಪಲ್ಲ ||
ನೀರಜಾಮುಖಿ ನೀರೋಂಡು | ಇನ್ನೊ |
ಭಾರಿ ಸಂಭ್ರಮ ಬಜಿ ಬಂಡ್ | ಆಹಾ |
ಸೀರೆದ ಸೆರಗ್‍ನ್ ವಾರೆ ಅಂತ್‍ತ್ ಕಿಂಞ |
ಮೋರೆಡ್ ಎದುರುಡ್ ಪಾರ್ ಪೋಪುಣೊ ಪಾಪು || ಅನು ||

ಕಜಿಪು ಗಿಜಿಪು ಜಾನೆ ಪಣ್ಕೆ | ಅರೆ-|
ಪಜಿಯಂತ್‍ದಳಾತ್ ಸರಿಕೆ | ಬಾಯಿಡ್ |
ಬಜಿ ಡಬ್ಬು ಪಾತೆರ ನಿಲ್ಕೆ | ಆಹಾ |
ಯಜಮಾನ್ತಿ ಮೋರೇನ್ ಸಜಪೋಡು ಪೋಣ್ಜೋವೆ
ನಜರಿದ್ದಿ ಈ ಇನ್ನೊ ಮೆಜಿಕ್‍ನ್ ಸೋಜೋತ || || 1 ||

ಸಾರ್ ಅಂತ್‍ದಿ ಸೌಭಾಗ್ಯ | ನನ |
ಏರೆಡ ಪಣ್ಕೆ ವೈರಾಗ್ಯ | ತೇಕೆ |
ಬಾರ್ ಉಡಿಗಿರೆಗುಂದು ಯೋಗ್ಯ | ಆಹಾ |
ಬಾರಿ ಭೋಜನ ಪುಳಿ ಸಾರ್‍ಡ್ ತೀರ್‍ನ್ |
ಕೇರಿಗ್ ಈ ಒರ್ತಿ ಬಜಾರಿ ಇತ್ತ್‍ಂಡ ಪಾಪು || || 2 ||

ಪಾಪು ಪರಮಾನ್ನಂತೊ ಸುದ್ದಿ | ಬೆಲ್ಲ |
ಸೂಪೋತ್ನ ಮಾತ್ರ ಬೆತ್ತಿದ್ದಿ | ಜಾಲ |
ತೀಪೆದೊ ಬಾಬೇ ಇದ್ದಿ | ಆಹಾ |
ಸೂಪೋಲ ಮೋರೆನ್ ಏ ಪಾಪಿ ಅತ್ತಿಗೆ |
ಕೋಪ ಅಂಪಡ ಇನ್ನೊ ಸುರ್ಪನ್ ಮಾರಿಯ || || 3 ||

ಗುಣು ಗುಣು ಒಳೆಯಿ ಪಾತೆರುವ | ಇರೆನ್ |
ಗೆಣಿತ್ ಗೆಣಿತ್‍ತ್ ಬಳಸುವ | ಮಾಂತ |
ಜನನ್ ಸೂಸೂತು ತೆಳಿಪುವ | ಆಹಾ |
ಗುಣವಂತೆ ತಾನ್‍ಂತ್ ಹಾಂಕಾರ ಸೋಜೋಪ |
ಉಣುಗುಂಡಲ ಕೈ ಮಿಣಿಮಿಣಿ ಸೂಪ || || 4 ||

ಕೆಲೆಂಜಿ ರಾಪುಣು ಇರೆತೊ ಮಿತ್ತ್ | ನನ |
ಬಳೆಸುಣೊ ಬುಡ್ ಆನ್ ಮಸ್ತ್ | ಬಂಜಿದ |
ಒಳೆಯಿ ಮಗ್‍ತಾರುಣು ಪಿತ್ತ್ | ಆಹಾ |
ಜಲಜನಾಭೆ ಲಕ್ಷ್ಮೀನಾರಾಯಣೆ ನಂಕ್ |
ಒಲಿಪಿ ಉಪಾಯನ್ ನೆಲೆಮಂತ್ ಸೂವೊಡು || || 5 ||

ತುಳು ಬಲ್ಲವರು ಈ ಹಾಡನ್ನು ಕೇಳಿದರೆ ಈ ‘ಸದಭಿರುಚಿಯ’ (ಅಂದರೆ ತಮ್ಮ ಹೊಸ ನೆಂಟರನ್ನೇ ಹಾಸ್ಯಕ್ಕಾಗಿ ನಿಂದಿಸುವ) ಹೀಯಾಳಿಕೆಯ ಸೊಗಸನ್ನು ಅರಿತು ಖುಷಿ ಪಡುವರು. ಆ ಕಾಲದಲ್ಲಿ ಹೀಗೆ ಗಂಡಿನ ಕಡೆಯವರನ್ನು ಹೆಣ್ಣಿನ ಕಡೆಯವರೂ, ಹೆಣ್ಣಿನ ಕಡೆಯವರನ್ನು ಗಂಡಿನ ಕಡೆಯವರೂ ನಿಂದಿಸುತ್ತಾ ಆಶುಕವಿತೆಗಳನ್ನು ರಚಿಸಿ ಹಾಡುತ್ತಿದ್ದರು. ಇದರಿಂದಾಗಿ ಎರಡೂ ಕಡೆಯವರು ಆಶುಕವಿತ್ವ ಉಳ್ಳವರನ್ನು ಹುಡುಕಿ ತಮ್ಮ ಕಡೆಯಲ್ಲಿ ನಿಂದಾಸ್ಪರ್ಧೆಯಲ್ಲಿ ಭಾಗವಹಿಸಲು ಕರೆದುಕೊಂಡು ಹೋಗುತ್ತಿದ್ದರು. ತಮ್ಮ ಸಂಬಂಧಿಕರ ಒತ್ತಾಯಕ್ಕಾಗಿ ಪಾವಂಜೆ ಹರಿದಾಸರೂ ಸಾಕಷ್ಟು ದೂರುವ ಹಾಡುಗಳನ್ನು ರಚಿಸಿಕೊಟ್ಟಿದ್ದಾರೆ.

ಹರಿದಾಸರ ಹಾಸ್ಯ ಪ್ರವೃತ್ತಿಯಂತೆಯೇ ರಸಿಕತನವನ್ನು ಸೂಚಿಸುವ ಪದ್ಯಗಳೂ ಸಾಕಷ್ಟಿವೆ. “ಪ್ರೀತಿ ಉಕ್ಕುವುದು ನಿನ್ನ ನೋಡುವಾಗ | ಪ್ರತಿಕ್ಷಣವು ನಿನ್ನ | ನೂತನದ ಮಾತು ಕೇಳುವಾಗ || ಯಾವ ಹುಡುಗಿಗೂ ನಿನ್ನ | ರೀತಿ ಬಾರದು ನೋಡ || ಜಾತಿ ನಾಯಕಿ ನಿನಗೆ | ಸೋತು ಹೋಗಿದೆ ಮನವು || 1 || ಗಾಜಿನ ಬುರುಡೆಯಂತಿಹ ಮೊಲೆ | ಕಾಜಿ – ಎಡೆ ಬಳೆಯಿಟ್ಟ ಕೈಯ ಬೆಡಗನೋಡಿ || ” – ಹೀಗೆ ಪ್ರಾರಂಭವಾಗುವ ತುಳು ಪದ್ಯವೊಂದರಲ್ಲಿ ಅವರು ನಲ್ಲೆಯನ್ನುದ್ದೇಶಿಸಿ ಪ್ರೇಮಗೀತೆ ಹಾಡಿದ್ದಾರೆ. ಅದರ ಕೆಲವು ಸಾಲುಗಳು –

ಪ್ರೀತಿಯಾಪುಣು ಇನನ್ ಸೂನಗ | ಏಪೊಲ ಇನ್ನೊ |
ನೂತನಂತೊ ಪಾತೆರ ಕೇಣ್ಣಗ ||
ಏತ್ ಜೇವುಳೆಗ್‍ಲಾ ಇನ್ನೊ|
ರೀತಿ ಬರನ್ ಸೂವರೆ ಪೋಂಡ||
ಜಾತಿ ನಾಯಕಿ ಇನನ್|
ಸೂತು ಮನಸ್ ಸೋತು ಪೋನು|| ||1||
ಗಾಜಿದೊ ಬುರುಡೆದೊ ರೀತಿ | ಸೋಜುಣು ಮಿರೆ ಕೈತೊ |
ಕಾಜಿ ಎಡಕಾಜಿ ಜೀತ್ನೊ ಸಾಜ ಸೂವರೆ ||
ಮಾಜಿ ಪೋವನ್ ಇನ್ನೊ ಮೋಣೆದೊ |
ತೇಜ ಚಂದ್ರನ್ ಮಿಕ್ಕುತುಂಡು ||
ತಾಜ ಪುತ್ತೊಳಿ ಬೊಂಬೆ ಇನಟ |
ಮೋಜು ಮಂಪೊಡಿನ್ನಾಜೆ ಎಂಕ್ ||

ಹೀಗೆ ಒಂದು ಜನಾಂಗಕ್ಕೆ ಭಕ್ತಿ ಮಾರ್ಗವನ್ನು ತೋರಿಸಿ, ಸುಸಂಸ್ಕೃತ ಬದುಕಿನ ದೀಕ್ಷೆಯನ್ನು ನೀಡಿದ ಪಾವಂಜೆ ಹರಿದಾಸ ನಾರ್ಣಪ್ಪಯ್ಯನವರು ನಮ್ಮ ಮರೆಯಬಾರದ ಕವಿಗಳಲ್ಲೊಬ್ಬರು. ಆಧುನಿಕ ಕವಿತೆಗಳ ಮಾದರಿಯನ್ನೂ ಅವರಲ್ಲಿ ಕಾಣಬಹುದು. ನಾನು ‘ದಕ್ಷಿಣ ಕನ್ನಡದ ಶತಮಾನದ ಕಾವ್ಯ’ (1900-2000) ಸಂಪುಟದಲ್ಲಿ ಸೇರಿಸಿಕೊಂಡಿರುವ ಅವರ ಕವಿತೆ ಹೀಗಿದೆ:

ಓಡದಿರು ಓಡದಿರು ಖೋಡಿ ಮನವೆ |
ಮೂಢತನದಲಿ ಬರುವ ಕೇಡುಗಳನರಿದರಿದು || ಪಲ್ಲ ||
ಬೀಸುವದು ಬಿರುಗಾಳಿ | ಸೂಸುವದು ಉರಿಮಳೆಯು |
ನೇಸರಿಲ್ಲದೆ ಕತ್ತಲೆಯು ಮುಸುಕುತಿಹುದು ||
ಈಸು ನೆಲಸಿಹ ಘೋರ | ಭೀಷಣಾಟವಿಯೊಳಗೆ |
ಬೀಸುವನು ಬೇಡನೊಬ್ಬನು ಬಲೆಯನಿದಕೊ ||
ಅತ್ತೆಯೆಂಬವಳು ನಿನ್ನ | ನೆತ್ತಿಯಲಿ ತೈಲವನು |
ಒತ್ತಿ ಮೋಹದಿ ವಹಿಸಿಕೊಂಡಿರುವಳು ||
ಅತ್ತಕಡೆ ಬೇಡ ಹಿಂ | ದೊತ್ತಿ ಬರುವರೆ ಬೇಗ |
ತುತ್ತಾಗು ಎನುತ ಬಾಯ್ ತೆರೆದಿರುವಳು ||
ಮುಂಗಡೆಯೊಳ್ ಸಾಲಾಗಿ | ಅಂಗಡಿಗಳಿರುತಿಹವು |
ಹಂಗಿಗನು ನೀನಾಗಬೇಡ ಅವರ |
ಸಂಗ ಗೈಯುತ ವ್ಯಾಪಾ | ರಂಗಳನು ಮಾಡಿದರೆ |
ಭಂಗಿಯನು ಕೊಟ್ಟು ಬಲು ಭಂಗಪಡಿಸುವರಯ್ಯ ||
ಈ ರೀತಿಯಲಿ ನಿನಗೆ ಸಾರಿಪೇಳಿದೆ ನೋಡು |
ಭೂರಿ ಮಾಯಾ ಭ್ರಾಂತಿಗೊಳಗಾಗದೆ ||
ಕಾರಣಿಕ ಲಕ್ಷ್ಮೀನಾರಾಯಣನ ಪಾದ – |
ವಾರಿಜದಿ ನಲಿದು ಸುಖಿಯಾಗು ನೀ ಮನವೆ ||

ಹಾಡುಗಳ ಸಂಗ್ರಹದ ಚರಿತ್ರೆ

ಪಾವಂಜೆ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಅವರು ಸಂಸ್ಕೃತ, ಕನ್ನಡ, ಕೊಂಕಣಿ ಮತ್ತು ತುಳು – ಈ ನಾಲ್ಕೂ ಭಾಷೆಗಳಲ್ಲಿ ಕವಿತ್ವ ಸಾಮರ್ಥ್ಯ ಇದ್ದ ಅತ್ಯಪೂರ್ವ ಬಹುಭಾಷಾ ಕವಿ. ಅವರು ಸ್ವತಃ ತಮ್ಮ ಕೀರ್ತನೆಗಳನ್ನು ಬರೆದಿಡಲಿಲ್ಲ. ಅವರು ಆಶುಕವಿ, ಮನಸ್ಸಿನಲ್ಲಿ ವಿಶೇಷವಾದ ಭಾವಾವೇಶ ಉಂಟಾದಾಗ ಅವರ ಬಾಯಿಯಿಂದ ಹಾಡುಗಳು ರಾಗಬದ್ಧವಾಗಿ, ಛಂದೋಬದ್ಧವಾಗಿ ಹರಿದು ಬರುತ್ತಿದ್ದವು. ಅಲ್ಲಿದ್ದ ಯಾರಾದರೂ ಆಗಲೇ ಅಥವಾ ಆಮೇಲೆ ಉಳಿದವರ ಸಹಾಯದಿಂದ ಅವುಗಳನ್ನು ದಾಖಲು ಮಾಡುತ್ತಿದ್ದರು. ಬಹುಶಃ ಮನಸ್ಸಾದರೆ ಹರಿದಾಸರೂ ಅವುಗಳ ಪಠ್ಯೀಕರಣಕ್ಕೆ ಸಹಕರಿಸುತ್ತಿದ್ದಿರಬಹುದು. ಅವರ ಜೀವಿತ ಕಾಲದಲ್ಲಿ ಜನರಿಗೆ ಕೀರ್ತನೆಗಳನ್ನು ಕೇಳಿ ಬರೆದಿಟ್ಟುಕೊಳ್ಳುವ ಹವ್ಯಾಸವಿತ್ತು. ಮನೆಮನೆಗಳಲ್ಲಿ ಭಜನೆ ನಡೆಯುತ್ತಿದ್ದ ಕಾಲ ಅದು. ಮುದ್ರಿತ ಭಜನಾ ಪುಸ್ತಕಗಳಿಗೂ ಬೇಡಿಕೆಯಿತ್ತು. ಇಂತಹ ಕಾಲದಲ್ಲಿ ಜನರ ಆಸಕ್ತಿಯಿಂದಾಗಿ ಬಹುಪಾಲು ಹಾಡುಗಳು ಉಳಿದಿವೆ ಎಂದು ನಂಬಬಹುದು. ಹರಿದಾಸರು ಜನಪ್ರಿಯರಾದ ಮೇಲೆ, ಅಂದರೆ 1910 ರ ದಶಕದಿಂದ 1920 ರ ದಶಕದವರೆಗೆ ಅವರಿಂದಲೇ ಕೆಲವು ಸಮಾಜ ಬಾಂಧವರು ಅವರ ಹಾಡುಗಳನ್ನು ಬರೆದಿಟ್ಟುಕೊಂಡಿದ್ದರು. ಅವರಿಗೆ ಇಷ್ಟವಾದ ಪತ್ರೊಡೆ ಇತ್ಯಾದಿ ವಿಶೇಷದ ಖಾದ್ಯಗಳನ್ನು ತಯಾರಿಸಿ, ಅವರನ್ನು ಊಟಕ್ಕೆ ಕರೆದು ಉಪಚರಿಸಿ, ಅವರನ್ನು ಸಂತೋಷ ಪಡಿಸಿ ಅವರಿಂದ ಪದ್ಯಗಳನ್ನು ಕೇಳಿ ಬರೆದಿಟ್ಟುಕೊಳ್ಳುತ್ತಿದ್ದರಂತೆ. ಅವರ ಹಾಡುಗಳು ಸಂಗ್ರಹಗೊಂಡು ಮುದ್ರಿತವಾಗಿ ನಮ್ಮ ಕಾಲದವರೆಗೆ ಉಳಿದು ಬಂದ ಕಥೆಯನ್ನು ಸಂಕ್ಷಿಪ್ತವಾಗಿ ಕೆಳಗಿನ ಪ್ರಕಟಣ ವಿವರಗಳಲ್ಲಿ ತಿಳಿಯಬಹುದು:

1. “ಪಾವಂಜೆ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯನವರಿಂದ ವಿರಚಿತ ಕಾರ್ಕಳ ದೀಪೋತ್ಸವ ಪದಗಳು.” ಸಂಗ್ರಾಹಕರು: ಕೆ.ಪಿ. ಕಾಮತ್. ಮಾರುತಿ ಮುದ್ರಾಣಾಲಯ, ಕಾರ್ಕಳ . 1922. ಬೆಲೆ ರೂ. 0-6-0

2. “ಶ್ರೀ ಹರಿಕೀರ್ತನಾವಳಿ”. ಸಂಗ್ರಾಹಕರು: ಬಿ. ಕೃಷ್ಣ ಪ್ರಭು. ವಿಕ್ಟೋರಿಯಾ ಮುದ್ರಾಶಾಲೆ ಬಂಟ್ವಾಳ, ದಕ್ಷಿಣ ಕನ್ನಡ. 64 ಪುಟಗಳು. 5-1-1926

3. ಹರಿದಾಸರ ಕೀರ್ತನೆಗಳು. ಸಂಗ್ರಾಹಕರು: ಕೆ. ವೆಂಕಟಾಚಾರ್ಯ. ಒಂದಾಣೆ ಮಾಲೆ (175), ಪ್ರಭಾತ ಆಫೀಸು ರಥಬೀದಿ, ಮಂಗಳೂರು–1. 1958

4. “ಹರಿದಾಸ ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯನವರ ಜೀವನ ಚರಿತ್ರೆ ಮತ್ತು ಕೆಲವು ಭಜನಾ ಗೀತೆಗಳು”. ಬೆಳ್ಳೆ ಭುಜಂಗ ರಾವ್, ಬಿ.ಎ. ಒಂದಾಣೆ ಮಾಲೆ(206), ಪ್ರಭಾತ ಆಫೀಸು ರಥಬೀದಿ, ಮಂಗಳೂರು–1. 1958

5. ಹರಿದಾಸರ ಕೀರ್ತನೆಗಳು. ಭಾಗ-1. ಸಂಗ್ರಾಹಕರು: ಕೆ. ವೆಂಕಟಾಚಾರ್ಯ. ಒಂದಾಣೆ ಮಾಲೆ (270), ಪ್ರಭಾತ ಆಫೀಸು ರಥಬೀದಿ, ಮಂಗಳೂರು–1. 1960

6. ಹರಿದಾಸರ ಕೀರ್ತನೆಗಳು. ಭಾಗ- 2. ಸಂಗ್ರಾಹಕರು: ಕೆ. ವೆಂಕಟಾಚಾರ್ಯ. ಒಂದಾಣೆ ಮಾಲೆ (271), ಪ್ರಭಾತ ಆಫೀಸು ರಥಬೀದಿ, ಮಂಗಳೂರು–1. 1960

7. “ಹರಿದಾಸ ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯನವರ ಭಜನಾ ಗೀತೆಗಳು – ಭಾಗ 4”. ಬೆಳ್ಳೆ ಭುಜಂಗ ರಾವ್, ಬಿ.ಎ. ಒಂದಾಣೆ ಮಾಲೆ(328), ಪ್ರಭಾತ ಆಫೀಸು ರಥಬೀದಿ, ಮಂಗಳೂರು–1. 1961. (ಟಿಪ್ಪಣಿ: ಕೆ, ವೆಂಕಟಾಚಾರ್ಯರಿಂದ ಸಂಗ್ರಹಿಸಲ್ಪಟ್ಟ ಮೂರು ಕೃತಿಗಳನ್ನು ಪರಿಗಣಿಸಿ ‘ಭಾಗ- 4’ ಎಂಬ ನಿರ್ದೇಶನ ನೀಡಿರಬಹುದು. ಬೆಳ್ಳೆ ಭುಜಂಗ ರಾಯರು ಮೊದಲು ಬರೆದಿದ್ದ ಸಂಕ್ಷಿಪ್ತ ಜೀವನ ಚರಿತ್ರೆಯ ಪ್ರಾರಂಭಿಕ ಪುಟಗಳ ನಂತರ ಅದರಲ್ಲಿಯೂ ಕೆಲವು ಕೀರ್ತನೆಗಳಿದ್ದವು. ಅದನ್ನೂ ಪರಿಗಣಿಸಿದರೆ ಇದು ಹರಿದಾಸರ ಕೀರ್ತನೆಗಳ ಐದನೆಯ ಪುಸ್ತಕ – ಒಂದಾಣೆ ಮಾಲೆಯಲ್ಲಿ ಬಂದದ್ದು).

8. ‘ಪಾವಂಜೆ ಹರಿದಾಸವಾಣಿ’. ಸಂಗ್ರಹ ಮತ್ತು ಪ್ರಕಾಶನ: ‘ಸತ್ಸಂಗ ಸೇವಾ ಸಮಿತಿ’, ಹಳೆಯಂಗಡಿ. 1978.

9. ಹರಿದಾಸ ಕೀರ್ತನ – ಪಾವಂಜೆ ಹರಿದಾಸರ ಕೃತಿ ಸಂಪುಟ. ಸಂಪಾದಕರು: ಪ್ರೊ. ಹೆರಂಜೆ ಕೃಷ್ಣ ಭಟ್ಟ ಮತ್ತು ಡಾ. ಪಾದೇಕಲ್ಲು ವಿಷ್ಣು ಭಟ್ಟ. ಎಚ್. ಕೆ. ಬಿ. ಅಭಿನಂದನಾ ಸಮಿತಿ, ಉಡುಪಿ. 2005.

10. ಖ್ಯಾತ ಹರಿದಾಸ, ಆಶುಕವಿ ಪಾವಂಜೆ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ. ಡಾ. ಎಚ್. ದಿವಾಕರ ಭಟ್. ಕನ್ನಡ ಸಂಘ, ಕಾಂತಾವರ. 2018

ಟಿಪ್ಪಣಿ: ಪಾವಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯು ಸ್ಥಾಪಿಸಿರುವ, ‘ಪಾವಂಜೆ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸಾಂಸ್ಕೃತಿಕ ವೇದಿಕೆ’ಯು ಹರಿದಾಸರ ಹೆಸರಿನಲ್ಲಿ ಉತ್ತಮ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ವೃದ್ಧಾಪ್ಯದಲ್ಲಿರುವ ಕಲಾವಿದರನ್ನು ಗುರುತಿಸಿ ಅಂತಹವರಿಗೆ ತನ್ನಿಂದಾದ ಸಹಾಯ ಮಾಡುತ್ತಿದೆ.

ವರ್ಷಕ್ಕೆ ಒಬ್ಬರನ್ನು ವಿಶೇಷಾ ಗೌರವಧನ ಇತ್ತು ಸನ್ಮಾನಿಸುತ್ತಿದೆ. ಪಾವಂಜೆ ಹರಿದಾಸರ ಹಾಡುಗಳನ್ನು ಸಂಗ್ರಹಿಸಲು ಮೊದಲು ಮಾಡಿದವರು ಕಾರ್ಕಳದ ಕೆ.ಪಿ. ಶೆಣೈಯವರು, ಬಂಟವಾಳದ ಕೃಷ್ಣ ಪ್ರಭುಗಳು, ಸುರತ್ಕಲ್ಲಿನ ಸಂಶೋಧಕ ಕೆ. ವೆಂಕಟಾಚಾರ್ಯರು, ಮತ್ತು ಬೆಳ್ಳೆ ಭುಜಂಗರಾಯರು. ಅವರ ಕೊಂಕಣಿ ಭಜನೆಗಳು ಕಾರ್ಕಳದ ಗೌಡ ಸಾರಸ್ವತ ಸಮಾಜದ ಹಿರಿಯರ ಬಳಿ ಇದ್ದಿರುವ ಸಾಧ್ಯತೆ ಇದೆ. ಯಾರಾದರೂ ಈ ಬಗ್ಗೆ ಸಂಶೋಧನೆ ಮಾಡಿದರೆ ಅವು ಲಭ್ಯವಾದಾವು. ಹರಿದಾಸರು ಕಾರ್ಕಳವನ್ನು ಬಿಟ್ಟಮೇಲೆ ತುಳು ಭಾಷೆಯಲ್ಲಿ ಸಮಾಜಬಂಧುಗಳ ಸಂತೋಷಾರ್ಥವಾಗಿ – ಮುಖ್ಯವಾಗಿ ಹೆಂಗಸರಿಗೆ ಮದುವೆಯಲ್ಲಿ ದೂರುವ ಹಾಡುಗಳಾಗಿ ಬಳಸಲು – ಹಲವು ಸರಸ ಗೀತೆಗಳನ್ನು ರಚಿಸಿದರು. ಪ್ರಾರಂಭಿಕ ಸಂಗ್ರಹ ಕಾರ್ಯ ಮತ್ತು ದಾಖಲೀಕರಣ ಮಾಡಿ ಇಂತಹ ಗೀತೆಗಳನ್ನು ಸಂರಕ್ಷಿಸಿದ ಮೇಲೆ ಉಲ್ಲೇಖಿಸಿದ ನಾಲ್ವರು ಮಹನೀಯರು, ಒಂದಾಣೆ ಮಾಲೆಯ ಕುಡ್ಪಿ ವಾಸುದೇವ ಶೆಣೈಯವರು ಮತ್ತು ಹಳೆಯಂಗಡಿಯ ಸತ್ಸಂಗ ಸಮಿತಿಯವರ ಪ್ರಯತ್ನದಿಂದ ಒಬ್ಬರು ದಾಸಪಂಥದ ಒಬ್ಬರು ಮಹತ್ವದ ಕವಿಯ ರಚನೆಗಳು ನಮಗೆ ಇಂದು ಲಭಿಸುತ್ತಿವೆ. ಈ ಶತಮಾನದಲ್ಲಿ ಅವರ ಇನ್ನಷ್ಟು ಕೃತಿಗಳನ್ನು ಸಂಗ್ರಹಿಸಲಾಗಿದೆ. ಪ್ರೊ. ಹೆರಂಜೆ ಕೃಷ್ಣ ಭಟ್ಟ, ಡಾ. ಪಾದೆಕಲ್ಲು ವಿಷ್ಣು ಭಟ್ಟ ಮತ್ತು ಡಾ. ಯಾಜಿ ದಿವಾಕರ ಭಟ್ಟರ ಕೊಡುಗೆಯನ್ನೂ ಸ್ಮರಿಸಬೇಕಾಗುತ್ತದೆ.

****

ಅನುಬಂಧ -1

ಹರಿದಾಸರ ಒಂದು ಪದ್ಯರೂಪದ ಪತ್ರ

ಶ್ರೀಮತ್ಸಮಸ್ತ ಸಜ್ಜನ ಕಲ್ಪವೃಕ್ಷ ಸು-|
ತ್ರಾಮನುತ ಚರಣಾರವಿಂದ ವೃಂದಾರಕಲ-|
ಲಾಮವಲ್ಲೀರಮಣ ಕರುಣಾವಾರಿಧಿ ಲಕ್ಷ್ಮೀನಾರಾಯಣನ ಕಿಂಕರ ||
ಸೋಮಧರಸುತ ಸುಮನ ಸುಜ್ಞಾನ ಶಕ್ತಿ ಭೃ-|
ತ್ಕಾಮಶತಲಾವಣ್ಯಗಾತ್ರ ಸುಚರಿತ್ರ ರಿಪು-|
ಭೀಮ ಪಾರ್ವತಿಯ ಸುಕುಮಾರ ವರಕುಮಾರಸ್ವಾಮಿ ನಮ್ಮಂ ಸಲಹಲಿ || ||1||

ತತ್ಸಮೀಪದ ಭಜಕ ಸ್ಥಾನಿಕ ವಿಪ್ರವರ-|
ಪ್ರೋತ್ಸಾಹ ಸುಗುಣಗಣಭರಿತ ಸಚ್ಚರಿತ ವಿ-|
ದ್ವತ್ಸಭಾಜನಸುಭಾಜನ ಸುವಿವೇಕಜ್ಞ ಸುಜ್ಞಾನಯುತ ಮಾನಸ ||
ವತ್ಸ ವೆಂಕಟರಮಣ ನಿನಗಾಶೀರ್ವಾದಮಂ |
ಸಸ್ನೇಹದಿಂ ಗೈಯುವನು ಸರ್ವಾದರ್ಶ ಸಂ-|
ಪತ್ಸಮಾಜವಿರಾಜನಾಗೆಂದು ಶ್ರೀಹರಿಯ ಪ್ರಾರ್ಥಿಸುತ ಹರಿದಾಸನು || 2 ||

ಕಾಲರೂಪಕನು ರುಧಿರೋದ್ಗಾರಿ ವತ್ಸರದ |
ಮೇಲಾಶ್ವಯುಜ ಶುದ್ಧ ದ್ವಾದಶಿಯ ತಿಥಿವರೆಗೆ |
ಶ್ರೀಲಲಾಮನ ಚಿತ್ತವಿದ್ದಂತೆ ದುಃಖ ಸುಖದೇಳಿಗೆಯನನುಭವಿಸುತ ||
ಶೀಲತನದಿಂದ ನಡೆವ ವೇದಶಾಸ್ತ್ರದ ಪಾಠ |
ಶಾಲೆಯೊಳಗಿಹ ಹುಡುಗರೊಡನೆ ಸದ್ವಚನಮಂ |
ಕೇಳುತ್ತ ಪೇಳುತ್ತ ಕಾಲಮಂ ಕಳೆಯುತ್ತ ಬಾಳಿಕೊಂಡಿರುವೆನಯ್ಯಾ || 3 ||

ನೀತಿ ಶಾಸ್ತ್ರ ಪುರಾಣ ವೇದ ಜಪ ತಪ ಸ-|
ನಾತನದ ಧರ್ಮಮಂ ಬಿಟ್ಟು ಡಾಂಭಿಕತನದ |
ಮಾತುಗಳನಾಡಿ ನಲಿದಾಡಿ ಸಂಕರನಂತೆಯುದರಂಭರಿಗಳಾಗುತ ||
ಪಾತಕಕೆ ಬೆದರದೆ ಕಿರಾತರಂತಿದ್ದು ಬಹು |
ಘಾತಕತನಂಗೈದು ಬೈದು ಸಜ್ಜನರ ವಿಪ-|
ರೀತಮಾರ್ಗದಿ ನಡೆವ ಭೂತರಕ್ಕಸಜನರ ವ್ರಾತಮಯವಾಯ್ತು ಜಗದಿ || || 4 ||

ಭೇದಬುದ್ಧಿಯೆ ಮುಖ್ಯ ಬ್ರಹ್ಮಾದಿ ಜೀವರೊಳು |
ಭೇದವಿಲ್ಲೆಂಬುದೆ ಮುಖ್ಯ ಹರಿರೂಪದೊಳು |
ಮೋದತೀರ್ಥರ ಸುಹಿತ ಬೋಧೆಯನು ಕೇಳ್ವರಿಗೆ ಹಾದಿಯಿದು ಮುಕ್ತಿಪಥಕೆ ||
ವೇದೋಕ್ತ ಸೂಕ್ತ ಸೂತ್ರಾರ್ಥ ಸಮ್ಮತಸುಜನ – |
ವಾದ ದುರ್ವಾದವಿಚ್ಛೇದ ಪರಮಾರ್ಥಸಂ-|
ಪಾದಕರಿಗಿದು ಮುಖ್ಯಮಾಣಿಕ್ಯ ಕರ್ಮಗಳ ಬಾಧೆತಟ್ಟದು ನಿಶ್ಚಯ || || 5 ||

ಮಂದಮತಿಗಳ ಕೂಡೆ ಮಾತಾಡದಿರು ಹರಿಯ |
ನಿಂದಕರ ಕಣ್ಣೆತ್ತಿ ನೋಡದಿರು ಸಂಸಾರ – |
ಸಿಂಧುವಿನ ಮಧ್ಯದೊಳು ಮುಳುಗದಿರು ಧೈರ್ಯದಿಂ ಕುಂದದಿರು ಕುಟಿಲಜನರ ||
ಸಂದಣಿಯ ಸೇರದಿರು ಮೀರದಿರು ಗುರುಹಿರಿಯ-|
ರೆಂದ ವಚನವ ಸತ್ಯಮಾರ್ಗದಲಿ ನಡೆ ಕರ್ಮ-|
ಬಂಧನದಿ ಸಿಲುಕದಿರು ಶ್ರೀಹರಿಯ ಪಾದಾರವಿಂದಮಂ ಧ್ಯಾನಿಸುತಿರು || || 6 ||

ಸಾಲಮಂ ಮಾಡದಿರು ಸಾಲದೆಂದೆನ್ನದಿರು |
ಶೀಲವಂತರ ಕೂಡೆ ಹಗೆಗಾರನಾಗದಿರು |
ಕಾಲವನು ನಿಷ್ಫಲದಿ ಕಳೆಯದಿರು ಒಲಿಯದಿರು ಖೂಳಜನಸಮ್ಮೇಳಕೆ ||
ಲೋಲಾಕ್ಷಿಯರ ಮುಂದೆ ಸುಳಿಯದಿರು ಕವಿಜನರ -|
ನೋಲೈಸುತಿರು ಭಾಗ್ಯ ಬಡತನಕ್ಕಂಜದಿರು |
ನೀಲವರ್ಣನ ಚರಣಶರಣನಾಗಿರುವದೇ ಮೇಲಾದ ಪದವಿ ಕಂಡ್ಯ || || 7 ||

ಭಂಡರೊಡನಾಡದಿರು ಬಹುಮಾತನಾಡದಿರು |
ಚಂಡಕೋಪಾವೇಶನಾಗದಿರು ಗೋವಿಪ್ರ_|
ತಂಡಕುಪಕಾರಮಂ ಮಾಡು ಕೊಂಡಾಡು ಹರಿಗುಣಂಗಳಂ ಪ್ರತಿದಿನದೊಳು ||
ಕಂಡವರ ನುಡಿಕೇಳಿ ಕಲಹಮಾಡಲು ಬ್ಯಾಡ |
ಪಂಡಿತನು ನೀನಾಗು ಪರದಾರ ವಿತ್ತಮಂ |
ಖಂಡಿತದಿ ಬಿಡು ಭೀಷ್ಮನಂತೆ ಮಹಾಸರಕಾರ ದಂಡನೆಗೆ ಸಿಲುಕಬ್ಯಾಡ || 8 ||

ಆದುದೆಲ್ಲವು ಸುಖಕ್ಕಾದವೆಂದೆನುತ ಹರಿ_|
ಪಾದಾರವಿಂದಮಂ ಮರೆಯದಿರು ಕುಜನರೊಳು |
ವಾದಮಂ ಮಾಡದಿರು ಮನದೊಳು ವಿಮರ್ಶೆಯಂ ಮಾಡು ಧರ್ಮಾಧರ್ಮವ ||
ಕ್ರೋಧವೇ ಪಾಪ ನಿಷ್ಕ್ರೋಧವೇ ಪುಣ್ಯ ಪರ-|
ಸಾಧನೆಗಳೆಲ್ಲವನ್ನಾದಷ್ಟು ಸಾಧಿಸುತ |
ಬಾಧಿಸದೆ ಅನ್ಯರಂ ಬೋಧಿಸುತ ಸಜ್ಜನಕೆ ಮಾಧವನ ಪೂಜಿಸುತಿರು || || 9 ||

ಲೇಖನವ ಬರೆಯಲಿಲ್ಲೆಂಬುದಕೆ ಬರೆದನು ವಿ-|
ವೇಕದಿಂದೋದಿಕೊಳ್ಳುವದು ಪರಮಾರ್ಥವೇ |
ಬೇಕಾದ್ದು ಬೇಡಾದ್ದು ಲೌಕಿಕಭ್ರಮೆ ನಿತ್ಯಲೋಕಾಪವಾದಕಂಜು ||
ಲೋಕನಾಥನು ಕೊಟ್ಟ ಸುಖದುಃಖವನುಭವಿಸಿ |
ಶೋಕಮಂ ಬಿಟ್ಟು ಬಯಲಾಶೆಯಂ ಗೆಯ್ಯದೆ ರ-|
ಮಾಕಳತ್ರನ ನಾಮ ಕೀರ್ತನೆಯೊಳಿದ್ದು ನಿವ್ರ್ಯಾಕುಲನು ನೀನಾಗಿರು || || 10 ||

ಇಂತಾಶೀರ್ವಾದ ಶ್ರೀಹರಿ ಪ್ರೇರಣೆಯಿಂದ |
ಚಿಂತನೆಗೆ ಬಂದಷ್ಟು ಬರೆದೆ ನಾನಿದರೊಳಗ -|
ನಂತ ತಪ್ಪಿರಬಹುದು ಕರ್ತ ಶ್ರೀಲಕ್ಷ್ಮೀನಾರಾಯಣನೆ ಮುಖ್ಯನೆಂದು ||
ಸಂತೋಷದಿಂದೋದುತಿರು ದ್ಯೂತಪಗಡೆಗಳ |
ತಿಂಥಿಣಿಯ ಬಿಡು ನಮ್ಮ ಜಾತಿ ಜನರೆಲ್ಲ ವೃ_ |
ತ್ತಾಂತಮಂ ಬಣ್ಣಿಸಲು ಶೇಷನಿಂಗಸದಳವು ಹಲವು ಮಾತುಗಳೇತಕೆ || || 11 ||

ಟಿಪ್ಪಣಿ: ಹರಿದಾಸರು ತಮ್ಮ ಕಿರಿಯ ಸಂಬಂಧಿಕ, ವಿದ್ಯಾರ್ಥಿಯಾಗಿದ್ದ ವೆಂಕಟರಮಣ ಎಂಬವರಿಗೆ ಬರೆದ ಪತ್ರ. ಶೇಕ್ಸ್‌ಪಿಯರ್‌ನ ‘ಹ್ಯಾಮ್ಲೆಟ್’ ನಾಟಕದಲ್ಲಿ ಪೊಲೋನಿಯಸ್ ಎಂಬ ಜ್ಞಾನಿ, ತನ್ನ ಮಗ ಲಾಇರ್ಟಿಸ್ ಫ್ರಾನ್ಸ್ ದೇಶದ ವಿಶ್ವವಿದ್ಯಾಲಯದಲ್ಲಿ ಕಲಿಯಲು ಹೋಗುವಾಗ ನೀಡಿದ ಉಪದೇಶವನ್ನು (Polonius’ Advice to his son Laertes, who leaves for France to join a University. -William Shakespeare’s Hamlet) ಭಾರತದ ವಿದ್ಯಾರ್ಥಿಗಳು ಕೂಡ ಕಲಿಯುತ್ತಾರೆ. ನಮ್ಮ ರಾಜ್ಯದ ಕವಿಯೊಬ್ಬರು ನಿಜವಾದ ವಿದ್ಯಾರ್ಥಿಯೊಬ್ಬನಿಗೆ ಬರೆದ ಪತ್ರರೂಪದ ಉಪದೇಶವನ್ನು ನಮ್ಮ ವಿದ್ಯಾರ್ಥಿಗಳಿಗೆ ಪಾಠಕ್ಕೆ ಇಡುವುದು ಸೂಕ್ತವಾಗುತ್ತದೆ.

ಅನುಬಂದ: 2

ಹರಿದಾಸರ ಒಂದು ಮದುವೆಯ ಹಾಡು

ಹ್ಯಾಗೆ ಮನವು ಬಂತು | ದೂರುವ |
ಬೀಗತಿಗೆ ಇಂತು || || ಪಲ್ಲ ||

ಗೂಗೆಯಂತೆ ಶಿರ ತೂಗಿ ತೂಗಿ ತಿಂದು |
ತೇಗುತ ಹೊಟ್ಟೆಯು ಬೀಗಿದಂತಿರುವುದು || || ಅನು ||

ಕುಂಟಿ ಹೆಂಗಸಿವಳು | ಉಂಡರೆ |
ಬಂಟನ ಸರಿಮಿಗಿಲು ||
ಗಂಟಲು ಪರಿಯಂತ ಪೆಂಟಿಯ ತಗೆದಳು |
ಸೊಂಟನೋವಿನಿಂದ ದಂಟೆಯ ಹಿಡಿದಳು || || 1 ||

ಊರಿನೊಳಗೆ ಈಕೆ | ನಿಂತರೆ |
ಮಾರಿಯು ಮತ್ತ್ಯಾಕೆ |
ಸೇರು ತುಪ್ಪ ಹುಳಿ ಸಾರನ್ನಗಳೆಲ್ಲ |
ಪಾರಣೆಗೈದು ಫಲಾಹಾರವ ಕೇಳ್ವಳು || || 2 ||

ತಿಂದರೆ ಸಂತೋಷ | ಸಂಕಟ |
ಬಂದರೆ ಪರಿಹಾಸ್ಯ ||
ಒಂದು ಗಳಿಗೆ ಹನ್ನೊಂದು ಹೋಳಿಗೆ |
ತಿಂದು ತಿಂದು ಮತ್ತೊಂದು ಕೇಳ್ವಳು || || 3 ||

ಕುಡಿವಳು ಬಿಸಿನೀರ | ಹೊಟ್ಟೆಯು |
ಸಡಿಲಾಗುವತಾರ ||
ಕಡುಲಾಡುಗಳ ತಿಂದಳು ಜಾಣೆ |
ಒಡಲಲ್ಲ ಇದು ಕಡಲಪ್ಪನಾಣೆ || || 4 ||

ಕಟ್ಟಬಿಗಿದ ತೆರದಿ | ಉಂಡಲು |
ಬೆಟ್ಟದ ಗಣಪತಿ ||
ಹೊಟ್ಟೆ ನೋವಾದರೆ ಮದ್ದು ನಾನರಿಯೆನು |
ದಿಟ್ಟ ಲಕ್ಷ್ಮೀನಾರಾಯಣ ಬಲ್ಲನು || || 5 ||