ಸಾಮಾನ್ಯವಾಗಿ ಎಲ್ಲಾ ಅರಣ್ಯವಾಸಿ ಬುಡಕಟ್ಟುಗಳಲ್ಲಿ ಭಟ್ಟಿ ಇಳಿಸುವ ಕ್ರಿಯೆ ಸಾಮಾನ್ಯವಾಗಿರುವಂಥದ್ದು. ಅದರಲ್ಲೂ ಕ್ರಿಮಿನಲ್ ಟ್ರೈಬ್ಸ್ ಎಂದು ಹಣೆಪಟ್ಟಿಕಟ್ಟಿಕೊಂಡ ಸಮುದಾಯಗಳಲ್ಲಂತೂ ಈ ಪ್ರಕ್ರಿಯೆ ಸಹಜವಾಗಿತ್ತು. ಭಟ್ಟಿಸೆರೆ ಅಥವಾ ಕಳ್ಳು ಆಯಾ ಸಮುದಾಯದ ಆಚರಣೆ ಮತ್ತು ನಂಬಿಕೆಗಳ ಭಾಗವಾಗಿ ಬೆರೆತುಹೋಗಿತ್ತು. ಇದಕ್ಕೆ ಆಚರಣಾತ್ಮಕ ಮೌಲ್ಯವೂ ಬಂದಿತ್ತು. ಈ ಎಲ್ಲಾ ಕಾರಣದಿಂದಾಗಿ ಭಟ್ಟಿ ಸೆರೆ ತೆಗೆಯುವುದು ಗಂಟಿಚೋರ ಸಮುದಾಯಕ್ಕೆ ಸಹಜವಾದ ಕಸುಬಾಗಿತ್ತು. ಬುಡಕಟ್ಟುಗಳು ತಮಗೆ ಅಗತ್ಯವಿದ್ದ ಎಲ್ಲವನ್ನೂ ತಾವೇ ತಯಾರಿಸಿಕೊಂಡು ಅಷ್ಟರಮಟ್ಟಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದರು.
ಡಾ.ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಹನ್ನೊಂದನೆಯ ಕಂತು.

 

ಕಳ್ಳತನದ ನಂತರ ಭಟ್ಟಿ ಸಾರಾಯಿ ಇಳಿಸುವಿಕೆ ಈ ಸಮುದಾಯ ಒಂದು ಮುಖ್ಯ ಕಸುಬಾಗಿತ್ತು. ಕ್ಷೇತ್ರಕಾರ್ಯದಲ್ಲಿ ಗಮನಿಸಿದಂತೆ ಈಚಿನ ಐದಾರು ವರ್ಷದಿಂದ ಪೂರ್ಣಪ್ರಮಾಣದಲ್ಲಿ ಈ ಕಸುಬು ನಿಂತಿದೆ. ಗಂಟಿಚೋರರ ಕಸುಬಿಗೂ ಭಟ್ಟಿ ಸಾರಾಯಿಗೂ ಒಂದು ಅಂತರ್ ಸಂಬಂಧವಿದೆ. ಕಾರಣ ಈ ಸಮುದಾಯದ ದೊಡ್ಡ ಶಾಪವೆಂದರೆ ಸಾರಾಯಿ ಅಥವಾ ಕುಡಿತದ ಚಟವೆಂದು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಹಲವು ಮಹಿಳೆಯರು ಹೇಳಿದ್ದರು. ಅಂತೆಯೇ ಇವರ ಆಚರಣೆ ಹಬ್ಬ ಮುಂತಾದವುಗಳಲ್ಲಿ ಮಾಂಸದ ಆಹಾರ ಮತ್ತು ಮದ್ಯ ಇರಲೇಬೇಕು. ಹುಟ್ಟಿನಿಂದ ಸಾವಿನ ತನಕವೂ ಸೆರೆ ಕುಡಿಯುವುದು ಸಾಮಾನ್ಯವಾದ ಸಂಗತಿಯಾಗಿದೆ. ಹಾಗಾಗಿ ಸೆರೆ ಎನ್ನುವುದು ಆಚರಣೆಯ ಭಾಗವೂ ಆಗಿತ್ತು. ಇಂತಹ ಕಾರಣಕ್ಕಾಗಿ ಈ ಸಮುದಾಯ ಸಾರಾಯಿಯನ್ನು ತಮ್ಮ ಬಳಕೆಗಾಗಿ ಭಟ್ಟಿ ಇಳಿಸುತ್ತಿದ್ದಂತೆ ಕಾಣುತ್ತದೆ. ಇದು ಕ್ರಮೇಣ ಮಾರಾಟದ ಸಂಗತಿಯಾದಂತಿದೆ.

ಕೆ.ಎಸ್. ಸಿಂಗ್ ಅವರ ಸಂಪಾದನೆಯ `ಪೀಪಲ್ ಆಫ್ ಇಂಡಿಯಾ’ ಸರಣಿಯ ಕರ್ನಾಟಕ ಸಂಪುಟದಲ್ಲಿ ಗಂಟಿಚೋರ್ ಎನ್ನುವ ಹೆಸರಲ್ಲೇ ಈ ಸಮುದಾಯವನ್ನು ಗುರುತಿಸುತ್ತಾರೆ. ಗಂಟಿಚೋರರು ಗಂಡು ಹೆಣ್ಣು ತುಂಬಾ ಕುಡಿಯುತ್ತಾರೆ, ಕೆಲವು ಗಂಟಿಚೋರರು ಮನೆಯಲ್ಲಿಯೇ ಸೆರೆಯನ್ನು ತಯಾರಿಸುತ್ತಾರೆ, ಕೆಲವರು ಮನೆಯವರ ಅಥವಾ ಬಂದುಬಾಂಧವರ ಅಗತ್ಯಕ್ಕೆ ಮಾತ್ರ ಬಳಸಿದರೆ ಇನ್ನು ಕೆಲವರು ಮಾರಾಟ ಮಾಡುತ್ತಾರೆ ಎಂದು ಉಲ್ಲೇಖಿಸುತ್ತಾರೆ. (ಆರ್.ಗುಪ್ತ: 2003:492)

ರಾಯಭಾಗ ಸಮೀಪದಲ್ಲಿರುವ ಶಾಹು ಪಾರ್ಕಿನಲ್ಲಿ ತೀರಾ ಈಚಿನವರೆಗೂ ಭಟ್ಟಿ ಇಳಿಸುವಿಕೆ ಇತ್ತು. ಈಗ ಅಬಕಾರಿ ಪೋಲಿಸರ ಭಯದಿಂದ ನಿಂತಿದೆ ಎಂದು ಹೇಳುತ್ತಾರೆ. ಕ್ಷೇತ್ರಕಾರ್ಯಕ್ಕೆ ಹೋದಾಗ ನನ್ನನ್ನು ಸಹ ಅಬಕಾರಿ ಇಲಾಖೆಯ ಅಧಿಕಾರಿ ಇರಬೇಕೆಂದು ಕೆಲವರು ಅನುಮಾನದಿಂದ ಮಾತನಾಡಿದರು. ಆರಂಭದಲ್ಲಿ ಭಟ್ಟಿ ಇಳಿಸುವಿಕೆ ವೃತ್ತಿಯಾಗಿದ್ದುದು ಗ್ರಾಮೀಣ ಪ್ರದೇಶದ ಗಂಟಿಚೋರರಲ್ಲಿ. ಆದರೆ ನಗರ ಮತ್ತು ಸೆಟ್ಲಮೆಂಟ್ ವಾಸಿಗಳಲ್ಲಿ ಭಟ್ಟಿಇಳಿಸುವಿಕೆ ಆರಂಭದಿಂದಲೂ ಇಲ್ಲ ಎನ್ನುತ್ತಾರೆ. ಇಂದು ಗ್ರಾಮಗಳಲ್ಲಿಯೂ ಇಲ್ಲವಾಗುತ್ತಿದೆ. ಬಾಲೆಹೊಸೂರಿನ ಹಿರಿಯರು ಕಳೆದ ಐದು ವರ್ಷದ ಹಿಂದೆ ಭಟ್ಟಿ ಇಳಿಸುತ್ತಿದುದಾಗಿ ಹೇಳುತ್ತಾರೆ. ಪದೇ ಪದೇ ಅಬಕಾರಿ ಇಲಾಖೆಯ ಉಪಟಳದಿಂದಾಗಿಯೂ, ಸಮುದಾಯದ ಹೊಸ ತಲೆಮಾರು ಇದನ್ನು ನಿಲ್ಲಿಸುವ ಸಲುವಾಗಿ ಹಿರಿಯರ ಜತೆ ಸಂಘರ್ಷ ಏರ್ಪಟ್ಟ ಕಾರಣವಾಗಿಯೂ, ಈ ಕಾರಣದಿಂದ ಮರ್ಯಾದೆಗೆ ಅಂಜಿ ಸಂಪೂರ್ಣ ನಿಲ್ಲಿಸಿದ್ದೇವೆ ಎನ್ನುವುದು ಬಾಲೆಹೊಸೂರು ಗಂಟಿಚೋರ ಸಮುದಾಯದ ಹಿರಿಯರ ಅಭಿಪ್ರಾಯವಾಗಿದೆ.

ಭಟ್ಟಿ ಇಳಿಸುವಿಕೆಯ ಸಾಂಪ್ರದಾಯಿಕ ಜ್ಞಾನ:

ಕೊಳೆತ ಬಾಳೆಹಣ್ಣನ್ನು ಒಳಗೊಂಡಂತೆ ಅನೇಕ ವಿಧದ ಹಣ್ಣು ಮತ್ತು ಬೆಲ್ಲವನ್ನು ಒಂದು ಗಡಿಗೆಗೆ (ಮಣ್ಣಿನ ಸೋರೆ) ಹಾಕಿರುತ್ತಾರೆ. ಈ ಗಡಿಗೆಯನ್ನು ಮೂರುವರೆ ಅಡಿಯಷ್ಟು ಗುಂಡಿ ತೋಡಿ ಊಳುತ್ತಾರೆ. ಹೀಗೆ ಊಳುವಾಗ ಗಡಗಿ ಸುತ್ತಲೂ ಮಣ್ಣನ್ನು ಹಾಕುವುದಿಲ್ಲ ಕಾರಣ ಭೂಮಿ ತಂಪಾಗಿದ್ದರೆ ಸೆರೆ ಬರುವುದಿಲ್ಲ, ಈ ಉಷ್ಣಾಂಶವನ್ನು ಹೆಚ್ಚಿಸುವ ಕಾರಣಕ್ಕೆ ಗಡಗಿಯ ಸುತ್ತಲೂ ಕುರಿ ಇಕ್ಕೆಗಳನ್ನು ತುಂಬುತ್ತಾರೆ. ಈ ಗಡಿಗೆಯ ಮೇಲೆ ಮೇಲ್ಮುಚ್ಚಳವಾಗಿ ದಬಾಸಿ ಕಲ್ಲು ಹಾಕುತ್ತಾರೆ. ಹೀಗೆ ಗಡಿಗೆಯನ್ನು ಎಂಟು ದಿನ ಬಿಡುತ್ತಾರೆ. ಎಂಟು ದಿನದ ನಂತರ ಕಾವು ಬಂದಾಗ ಬೆಲ್ಲ, ನೀರು, ಚೆಕ್ಕಿ ಹಾಕಲಾಗುತ್ತದೆ. ಇದನ್ನು ಗಡಿಗೆಯಲ್ಲಿ ಹಾಕಿ ತಿರುವುತ್ತಾ ಇರುತ್ತಾರೆ. ಹೀಗೆ ಮಾಡುವಾಗ ಸೆರೆಯ ವಾಸನೆ ಬರುತ್ತದೆ. ಇದು ಕೈಗೆ ಅಂಟಿನ ಹಾಗೆ ಅಂಟಬಾರದು. ಹೀಗೆ ಅಂಟು ಬಂದರೆ ಸೆರೆ ಆಗಿಲ್ಲವೆಂದು ಅರ್ಥ. ಹೀಗೆ ಅಂಟು ಬರದಿದ್ದರೆ ಸೆರೆ ಹದಕ್ಕೆ ಬಂದಿದೆ ಎಂದು ತಿಳಿದು ಗಡಗಿಯನ್ನು ಮೇಲೆತ್ತುತ್ತಾರೆ.

ಹೀಗೆ ಮೇಲೆ ಎತ್ತಿದ ಗಡಗಿಯನ್ನು ಒಲೆಯ ಮೇಲಿಟ್ಟು ಬೆಂಕಿ ಹಾಕುತ್ತಾರೆ. ಗಡಗಿಯ ಆವಿಯು ಹೊರ ಹೋಗದಂತೆ ಬಾಯಿದೆ ಸೆಗಣಿಯಿಂದ ದಬಾಸು ಹಾಕಿ ಮುಚ್ಚಿರುತ್ತಾರೆ. ಗಡಗಿಯು ತುಂಬಾ ಕಾಯದಂತೆ ಹೊರಗಿನಿಂದ ಗಡಗಿಗೆ ನೀರು ಹಾಕುತ್ತಿರುತ್ತಾರೆ. ಇಲ್ಲವೆಂದರೆ ಸೋರೆ ಹೊಡೆಯುವ ಸಂಭವವಿರುತ್ತದೆ. ಈ ದಬಾಸಿನಲ್ಲಿ ಕೊಳವೆಯೊಂದರ ವ್ಯವಸ್ಥೆ ಮಾಡಿರುತ್ತಾರೆ. ಈ ಕೊಳವೆಯ ಆವಿಯ ರೂಪದಲ್ಲಿ ಸೆರೆಯು ಇಳಿಯುತ್ತದೆ. ತುಂಬಾ ಒಳ್ಳೆಯ ಸೆರೆಗೆ ಬೆಂಕಿಕಡ್ಡಿ ಗೀರಿದರೆ ಬೆಂಕಿ ಹತ್ತುತ್ತದೆ, ಆರಂಭಕ್ಕೆ ಬಂದ ಸೆರೆಯನ್ನು ಗಾಡಿಗಳಿಗೆ ಹಾಕಿದರೆ ಪೆಟ್ರೋಲ್ ತರ ಕೆಲಸ ಮಾಡುತ್ತೆ ಎಂದು ಗಂಟಿಚೋರ ಸಮುದಾಯದ ಹಿರಿಯರು ವಿವರಿಸುತ್ತಾರೆ. ಇದರಲ್ಲಿ ಮನೆಯವರು ಮಾತ್ರ ಕುಡಿಯಲು ಮಾಡಿಕೊಂಡರೆ ಬಾಳೆಹಣ್ಣು ಏಲಕ್ಕಿ ಮುಂತಾದವುಗಳನ್ನು ಹಾಕಿ ಘಂ ಎನ್ನುವ ಹಾಗೆ ಮಾಡುತ್ತಾರಂತೆ.

ಬಾಲೆಹೊಸೂರಲ್ಲಿ ಹಿಂದೆ ಮಲ್ಲನಗೌಡ ಎಂಬುವವರು ಇದ್ದರು. ಇವರು ಗಂಟಿಚೋರರನ್ನು ಕರೆಯಿಸಿ `ಇನ್ನು ನೀವು ತುಡುಗು ಮಾಡುವುದನ್ನು ಬಿಡಿ, ಪೋಲೀಸರು ನಿಮಗೆ ಬಾಳ ಕಿರಿಕಿರಿ ಕೊಡ್ತಾರ, ಇನ್ಮಾಲೆ ನೀವು ಭಟ್ಟಿಸರಾಯಿ ಇಳಿಸಿ ಮಾರಾಟ ಮಾಡಿ ಜೀವನ ಮಾಡರಿ’ ಅಂದರಂತೆ. ಆಗ ಮಲ್ಲನಗೌಡ ಬೆಲ್ಲದ ವ್ಯಾಪಾರ ಮಾಡುತ್ತಿದ್ದ, ಹೀಗಾಗಿ ತನ್ನ ಬೆಲ್ಲಕ್ಕೆ ಬೇಡಿಕೆ ಬರುವ ಸ್ವಾರ್ಥದಿಂದಲೂ ಈ ಮಾತನ್ನು ಹೇಳಿದ್ದನು, ಹೀಗಾಗಿ ಬಾಲೆಹೊಸೂರಲ್ಲಿ ತುಡುಗುತನವನ್ನು ಬಿಟ್ಟು ಭಟ್ಟಿಸರಾಯಿ ಇಳಿಸಲು ಪ್ರಾರಂಭಿಸಿದೆವು ಎಂದು ಸಮುದಾಯದ ಹಿರಿಯರು ಹೇಳುತ್ತಾರೆ. ಈ ವ್ಯಾಪಾರ ಕೆಲವು ವರ್ಷಗಳ ಕಾಲ ತುಂಬಾ ಚೆನ್ನಾಗಿಯೇ ನಡೆದಿದೆ. ಇದೇ ಹಣವನ್ನು ಕೂಡಿಟ್ಟು ಕೆಲವರು ಚಿಕ್ಕಪುಟ್ಟ ಹೊಲ ಮನೆಗಳನ್ನು ಮಾಡಿಕೊಂಡಿದ್ದಾರೆ. ಈ ದುಡಿಮೆ ಮಕ್ಕಳ ಶಿಕ್ಷಣಕ್ಕೂ ನೆರವಾಗಿದೆ.

ನಗರ ಮತ್ತು ಸೆಟ್ಲಮೆಂಟ್ ವಾಸಿಗಳಲ್ಲಿ ಭಟ್ಟಿಇಳಿಸುವಿಕೆ ಆರಂಭದಿಂದಲೂ ಇಲ್ಲ ಎನ್ನುತ್ತಾರೆ. ಇಂದು ಗ್ರಾಮಗಳಲ್ಲಿಯೂ ಇಲ್ಲವಾಗುತ್ತಿದೆ. ಬಾಲೆಹೊಸೂರಿನ ಹಿರಿಯರು ಕಳೆದ ಐದು ವರ್ಷದ ಹಿಂದೆ ಭಟ್ಟಿ ಇಳಿಸುತ್ತಿದುದಾಗಿ ಹೇಳುತ್ತಾರೆ.

ನಂತರದಲ್ಲಿ ಅಬಕಾರಿ ಪೋಲೀಸರು ಈ ಭಟ್ಟಿಸೆರೆ ತೆಗೆಯುವುದು ಅಪರಾಧ ಎಂದು ಈ ಕೆಲಸದಲ್ಲಿ ತೊಡಗಿದವರಿಗೆ ಹಿಂಸೆ ಕೊಡಲು ಶುರು ಮಾಡಿದರು. ಈ ಕಾರಣದಿಂದಾಗಿ ನಂತರದ ದಿನಗಳಲ್ಲಿ ಗಂಟಿಚೋರ್ಸ್ ಸಮುದಾಯ ಸೆರೆ ತೆಗೆಯುವ ಕೆಲಸವನ್ನು ಬಹಳಕಾಲದವರೆಗೆ ಕದ್ದುಮುಚ್ಚಿ ಹೊಲಗಳಲ್ಲಿ ಮಾಡುತ್ತಿದ್ದರು. ತಮಗೆ ಪರಿಚಯವಿರುವ ಆಪ್ತರಿಗಷ್ಟೇ ಮಾರಾಟ ಮಾಡುತ್ತಿದ್ದರು. ಆದರೆ ಅಬಕಾರಿ ಇಲಾಖೆಯ ಭಯ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು. ಅಂತೆಯೇ ಈ ಸಮುದಾಯದ ಯುವ ಜನರು ಹಿರಿಯರು ಸೆರೆ ತೆಗೆಯುತ್ತಿದ್ದ ಗಡಿಗೆಗಳನ್ನು ಒಡೆಯುವ ಮೂಲಕ ವಿರೋಧವನ್ನು ದಾಖಲಿಸಿದರು. ಹೀಗಾಗಿ ನಿಧಾನಕ್ಕೆ ಭಟ್ಟಿಸೆರೆ ತೆಗೆಯುವ ಕಾಯಕವನ್ನು ಬಿಟ್ಟಿದ್ದಾರೆ.

ಸಾಮಾನ್ಯವಾಗಿ ಎಲ್ಲಾ ಅರಣ್ಯವಾಸಿ ಬುಡಕಟ್ಟುಗಳಲ್ಲಿ ಭಟ್ಟಿ ಇಳಿಸುವ ಕ್ರಿಯೆ ಸಾಮಾನ್ಯವಾಗಿರುವಂಥದ್ದು. ಅದರಲ್ಲೂ ಕ್ರಿಮಿನಲ್ ಟ್ರೈಬ್ಸ್ ಎಂದು ಹಣೆಪಟ್ಟಿಕಟ್ಟಿಕೊಂಡ ಸಮುದಾಯಗಳಲ್ಲಂತೂ ಈ ಪ್ರಕ್ರಿಯೆ ಸಹಜವಾಗಿತ್ತು. ಭಟ್ಟಿಸೆರೆ ಅಥವಾ ಕಳ್ಳು ಆಯಾ ಸಮುದಾಯದ ಆಚರಣೆ ಮತ್ತು ನಂಬಿಕೆಗಳ ಭಾಗವಾಗಿ ಬರೆತುಹೋಗಿತ್ತು. ಇದಕ್ಕೆ ಆಚರಣಾತ್ಮಕ ಮೌಲ್ಯವೂ ಬಂದಿತ್ತು. ಈ ಎಲ್ಲಾ ಕಾರಣದಿಂದಾಗಿ ಭಟ್ಟಿ ಸೆರೆ ತೆಗೆಯುವುದು ಗಂಟಿಚೋರ ಸಮುದಾಯಕ್ಕೆ ಸಹಜವಾದ ಕಸುಬಾಗಿತ್ತು. ಬುಡಕಟ್ಟುಗಳು ತಮಗೆ ಅಗತ್ಯವಿದ್ದ ಎಲ್ಲವನ್ನೂ ತಾವೇ ತಯಾರಿಸಿಕೊಂಡು ಅಷ್ಟರಮಟ್ಟಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದರು. ಇದರ ಭಾಗವಾಗಿಯೂ ಭಟ್ಟಿ ಸೆರೆ ಗಂಟಿಚೋರ್ಸ್ ಸಮುದಾಯದ ಸಹಜ ಪ್ರವೃತ್ತಿಯಾಗಿದ್ದು ಕಾಲಾನಂತರದಲ್ಲಿ ಸಮುದಾಯಗಳ ಸ್ವಾವಲಂಬನೆಯನ್ನು ಮೊಟುಕುಗೊಳಿಸುವ ಭಾಗವಾಗಿಯೂ ಭಟ್ಟಿ ಸೆರೆ ತೆಗೆಯುವುದನ್ನು ಅಪರಾಧಿ ಚಟುವಟಿಕೆಯನ್ನಾಗಿಸಿ ನಿಯಂತ್ರಿಸಲಾಯಿತು.

ಕಾರ್ಪೆಂಟರಿ:

ಕಾರ್ಪೆಂಟರಿ ಕೆಲಸದಲ್ಲಿ ತೊಡಗಿದವರು ಸಾಮಾನ್ಯವಾಗಿ ಸೆಟ್ಲಮೆಂಟಲ್ಲಿ ನೆಲೆಸಿದ ಗಂಟಿಚೋರರು. ಗದಗ ಸೆಟ್ಲಮೆಂಟಲ್ಲಿ ಕಾರ್ಪೆಂಟರಿ ಮನೆತನಗಳೇ ಇವೆ. ಇದಕ್ಕೆ ಮುಖ್ಯ ಕಾರಣವೆಂದರೆ ಸೆಟ್ಲಮೆಂಟಲ್ಲಿ ಇದ್ದ ಬಡಗಿತನದ ಸ್ಕೂಲು ಅಥವಾ ತರಬೇತಿ ಕೇಂದ್ರ. ಈ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದವರು ತಮ್ಮ ಸ್ವಂತ ಉದ್ಯೋಗವನ್ನು ಮಾಡುತ್ತಿದ್ದರು. ಹೀಗಾಗಿ ಗದಗ ಸೆಟ್ಲಮೆಂಟಲ್ಲಿ 5-6 ಮನೆತನಗಳಿವೆ. ಈ ಮನೆತನಗಳು ಈಗ ಕಾರ್ಪೆಂಟರಿಯನ್ನೆ ವೃತ್ತಿಯನ್ನಾಗಿ ಮಾಡಿಕೊಂಡಿವೆ. ಅಂತೆಯೇ ಹುಬ್ಬಳ್ಳಿ, ಬಿಜಾಪುರ, ಬಾಗಲಕೋಟೆ ಸೆಟ್ಲಮೆಂಟಿನಲ್ಲಿಯೂ ಕಾರ್ಪೆಂಟರಿ ಕೆಲಸ ಮಾಡುವ ಕೆಲವು ಮನೆಗಳಿವೆ. ಇದಕ್ಕೆ ಪೂರಕವಾಗಿ ಕೆಲವರು ಕಾರ್ಪೆಂಟರಿಗೆ ಸಂಬಂಧಪಟ್ಟಂತೆ ಯಂತ್ರೋಪಕರಣಗಳ ಕೆಲಸಗಳನ್ನೂ ಮಾಡುತ್ತಿದ್ದಾರೆ. ಇದು ಸಾಮಾನ್ಯವಾಗಿ ಸೆಟ್ಲಮೆಂಟು ಮತ್ತು ನಗರದಲ್ಲಿರುವ ಗಂಟಿಚೋರ ಸಮುದಾಯದಲ್ಲಿ ಕಾಣುತ್ತದೆ. ಗ್ರಾಮೀಣ ಪ್ರದೇಶದಲ್ಲಿ ನೆಲೆಗೊಂಡವರಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ.

ಸೆಟ್ಲಮೆಂಟುಗಳಲ್ಲಿ ಈ ಸಮುದಾಯವನ್ನು ತುಡುಗುತನದಿಂದ ಬಿಡಿಸುವ ಕಾರಣಕ್ಕೆ ಬ್ರಿಟೀಷ್ ಸರಕಾರ ಇವರಿಗೆ ಕಲ್ಪಿಸಿದ ಪರ್ಯಾಯಗಳಲ್ಲಿ ಕಾರ್ಪೆಂಟರಿ ತರಬೇತಿಯೂ ಒಂದಾಗಿತ್ತು. ಈ ಪರ್ಯಾಯ ಉದ್ಯೋಗದಲ್ಲಿ ತೊಡಗಿಕೊಳ್ಳಲು ಅನುವಾಗುವಂತೆ ಬಡಗಿ ಶಾಲೆಗಳನ್ನು ತೆರೆದಿದ್ದರು. ಇದು ಮುಖ್ಯವಾಗಿ ಸೆಟ್ಲಮೆಂಟಿನಲ್ಲಿ ಕಾಣುತ್ತದೆ. ಈಗ ಈ ಸೆಟ್ಲಮೆಂಟುಗಳಲ್ಲಿ ಹಾಳುಬಿದ್ದ ಬಡಗಿ ಶಾಲೆಗಳನ್ನು ಕಾಣಬಹುದು. ಬಿಜಾಪುರ ನಗರದಲ್ಲಿ ಕಮ್ಮಾರಿಕೆ ಅಥವಾ ಲೋಹರ್ ಕೆಲಸ ಮಾಡುವುದು ಗಂಟಿಚೋರ ಸಮುದಾಯದಲ್ಲಿ ಕಂಡುಬರುತ್ತದೆ. ತುಂಬಾ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಿಯೂ ಈ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಈ ವೃತ್ತಿ ಹುಬ್ಬಳ್ಳಿ ಗದಗ ಭಾಗದಲ್ಲಿ ಆಂಶಿಕವಾಗಿ ಕಂಡುಬರುತ್ತದೆ. ಈ ವೃತ್ತಿಯನ್ನು ಕೈಗೊಂಡವರ ಪ್ರಮಾಣ ತುಂಬಾ ಕಡಿಮೆ ಇದೆ.

ಕಟ್ಟಿಗೆ ಮಾರುವುದು:

ಈ ವೃತ್ತಿಯು ಹಿಂದೆ ಈ ಸಮುದಾಯದ ಉಪಕಸುಬಾಗಿತ್ತು. ಆದರೆ ಇಂದು ಈ ಪ್ರಮಾಣ ತುಂಬಾ ಕಡಿಮೆಯಾಗಿದೆ. ಕ್ಷೇತ್ರಕಾರ್ಯದಲ್ಲಿ ಸಿಕ್ಕ ಮಾಹಿತಿಯ ಪ್ರಕಾರ ಶಾಹುಪಾರ್ಕಲ್ಲಿ ಈ ಉದ್ಯೋಗ ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತಿತ್ತು. ಅದರಲ್ಲಿಯೂ ಸೆಟ್ಲಮೆಂಟ್ ವಾಸಿ ಗಂಟಿಚೋರರಿಗಿಂತಲೂ ಗ್ರಾಮವಾಸಿ ಗಂಟಿಚೋರ ಸಮುದಾಯದಲ್ಲಿ ಕಟ್ಟಿಗೆ ಮಾರುವುದನ್ನು ಉದ್ಯೋಗವನ್ನಾಗಿಸಿಕೊಂಡ ಸಮುದಾಯಗಳು ಕಡಿಮೆ ಪ್ರಮಾಣದಲ್ಲಾದರೂ ಇದ್ದಾರೆ. ಈ ಪ್ರಮಾಣ ಈಗ ಕಡಿಮೆಯಾಗಿದೆಯಾದರೂ ಮೂಲತಃ ಶಾಹುಪಾರ್ಕಲ್ಲಿ ಕಟ್ಟಿಗೆ ಕಡಿದು ರಾಯಭಾಗದಲ್ಲಿ ಮಾರಾಟ ಮಾಡಿಜೀವನ ನಿರ್ವಹಣೆ ಮಾಡುವ ಕುಟುಂಬಗಳೂ ಇವೆ. ಇದು ಶಾಹು ಪಾರ್ಕನ್ನು ಹೊರತು ಪಡಿಸಿ ಹೆಚ್ಚಾಗಿ ಬೇರೆ ರಾಯಭಾಗ ತಾಲೂಕಿನ ಹಳ್ಳಿಗಳಲ್ಲಿ ಕಂಡುಬರುವುದಿಲ್ಲ.