ಕವಿತೆ -೧

ಕದವ ನೀ ತೆರೆ
ಮಡಿಲಾಗು ಕನಸಿಗೆ
ಮುದವಾಗಿ ಕರೆ
ಮಗುವಂತೆ ಮನಸಿಗೆ
ನಾ ನಿರೂಪವಾದೆ
ಕೈಯ್ಯಾರೆ ನನ್ನ, ನೀ ಬಾಚಿಕೊಂಡು
ಆಕಾರವನ್ನು ನೀಡಬೇಕಿದೆ
ಆಧಾರವನ್ನೂ ನೀಡಬೇಕಿದೆ..

ಉಸಿರಾಗಿ ಬೆರೆ
ಹೆಸರಾಗಿ ಬದುಕಿಗೆ
ಬೆಳಕಾಗಿ ಇರೆ
ಹೊಸ ದಾರಿ ದೊರತಿದೆ
ನಾ ನಿರೂಪವಾದೆ
ಕಣ್ಣಲ್ಲೇ ನನ್ನ, ಚಿತ್ತಾರವನ್ನು
ನೀ ಗೀಚುವಾಗ ಸೋಲಬೇಕಿದೆ
ನಾ ನನ್ನಲೇ ಸೋಲಬೇಕಿದೆ…

ಸುಳಿವಿರದ ಮಳೆ
ಈ ಹಾಳೆ ನೆನೆದಿದೆ
ಮೊದಮೊದಲ ಪದ
ತುಟಿಯಲ್ಲೇ ಕುಳಿತಿದೆ
ನಾ ನಿರೂಪವಾದೆ
ನೀ ದೂರ ಎಲ್ಲೋ, ಅಡಗಿದ್ದು ಸಾಕು
ಅಳಿಯೋಕೂ ಮುನ್ನ ಓದಬೇಕಿದೆ
ನೀ ಮೌನವನ್ನೂ ಓದಬೇಕಿದೆ

ಗರಿಗೆದರಿ ಮನ
ನಶೆಯೇರಿ ಕುಳಿತಿದೆ
ಎಲೆಯುದುರಿ ಮರ
ನನ್ನಂತೆ ಅನಿಸಿದೆ
ನಾ ನಿರೂಪವಾದೆ
ನೀ ಬಿಟ್ಟು ಹೋದ, ನೆನಪೊಂದೇ ನನ್ನ
ಆಲಸ್ಯವನ್ನು ದೂರ ಮಾಡಿದೆ
ಆ ದೃಶ್ಯವಿನ್ನೂ ಕಾಡುವಂತಿದೆ

ಕತೆ ಮುಗಿವಾಗಲೇ
ಪುಟವಿನ್ನೂ ಉಳಿದಿದೆ
ಜೊತೆ ಕೊಡಲಾದರೆ
ಧರೆಯು ಕಿರಿದಾಗಿದೆ
ನಾ ನಿರೂಪವಾದೆ
ನೀ ಮೀಟುವಾಗ, ಸಾರಂಗಿಯಾದೆ
ಒಂದೊಂದೇ ರಾಗ ಹೊಮ್ಮುವಂತಿದೆ
ನಾ ಜೀವಂತವಾದಹಾಗಿದೆ..

ಕವಿತೆ -೨

ಸಿಂಗಲ್ ಬ್ಯಾಟರಿ ಹಾಕಲು ತಾನು
ತಿಂಗಳುಗಟ್ಟಲೇ ಓಡುವುದು
ಕಷ್ಟ ಪಟ್ಟು ಎಷ್ಟೇ ಓಡಲು
ಗೋಡೆಗೇ ಅಂಟಿ ಕೂರುವುದು

ಮೂರೇ ಮುಳ್ಳಿನ ಅಂತರದಲ್ಲಿ
ದಿನದ ಲೆಕ್ಕವ ತಿಳಿಸುವುದು
ಹನ್ನೆರಡನ್ನೆರಡರ ಪಾಳಿಯಲಿ
ಹಗಲು ರಾತ್ರಿ ದುಡಿಯುವುದು

ಕೆಟ್ಟರೂ ಅದು ಎರಡೊತ್ತಿನ ವೇಳೆಯ
ಕರಾರುವಾಕ್ಕು ತಿಳಿಸುವುದು
ತಾಸಿಗೆ ಮೂವತ್ತಾರು ನೂರು
ಕ್ಷಣಗಳೂ ರೋಚಕ ಅನಿಸುವುದು

ಎಲ್ಲಕೂ ಸಾಕ್ಷಿಯಾದರೂ ಅಲ್ಲಿ
ಯಾರ ಪರವೂ ನಿಲ್ಲದದು
ಲೋಕವೇ ಹತ್ತಿ ಉರಿಯುತಲಿದ್ದರೂ
ಕಾಯಕ ಮುಂದುವರಿಸುವುದು

ತಾತನ ಕಾಲದ ಗಡಿಯಾರವದು
ಒಮ್ಮೆಗೆ ನಿದ್ದೆಗೆ ಜಾರುವುದು
ಕೀಲಿ ಕೊಟ್ಟರೆ ಮತ್ತೆ ಚಿಗರೆಯ
ಧಾಟಿಯಲಿ ಚೇತರಿಸುವುದು

ರಿಮೋಟ್ ಚಾಲಿತ ಗೊಂಬೆಗಳೀಚೆಗೆ
ಕಂತು ಬ್ಯಾಟರಿ ನುಂಗುವುದು
ಈಗಲೂ ಸಿಂಗಲ್ ಬ್ಯಾಟರಿಯಲ್ಲೇ
ತೂಗು ಗಡಿಯಾರ ಓಡುವುದು..

ಭರತ್ ಎಂ ವೆಂಕಟಸ್ವಾಮಿ ಮೂಲತಃ ಬೆಂಗಳೂರಿನ ಮಂಚಪ್ಪನಹಳ್ಳಿಯವರು
ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಕವಿತೆ ಓದು ಮತ್ತು ಬರಹ ಇವರ ಹವ್ಯಾಸಗಳು
‘ಮಿಣುಕುʼ ಇವರ ಪ್ರಕಟಿತ ಕವನ ಸಂಕಲನ