ಮೊಬೈಲು ಕಿಣಿಕಿಣಿಗುಟ್ಟಿತ್ತು.

ಭುಜದಲ್ಲಿ ಲ್ಯಾಪ್ ಟಾಪು, ಸೂಟಿನ ಲೆದರ್ ಚೀಲ ನೇತುಹಾಕಿ, ಕೈಯಿಂದ ಸ್ಯಾಮ್ಸೊನೈಟು ತಳ್ಳುತ್ತಾ, ಕಿವಿ ಮತ್ತು ಭುಜದ ಮಧ್ಯೆ ಮೊಬೈಲನ್ನು ಹಿಡಿದು, ಬಲಪೃಷ್ಠವನ್ನು ಒತ್ತುತ್ತಿದ್ದ ವಾಲೆಟ್ಟಿನಿಂದ ಕೈಗೆ ಸಿಕ್ಕಿದ್ದಷ್ಟನ್ನು ಟ್ಯಾಕ್ಸಿಯ ಡ್ರೈವರಿಗೆ ಕೊಟ್ಟು ಮೊಬೈಲಿಗೆ ‘ಹಲೋ’ ಎಂದೆ.

ಸುಜನಾ ಹಿಸ್ಟಿರಿಕಲ್ ಆಗಿದ್ದಳು.

‘ಗರಾಜ್ ನ ಬಾಗಿಲನ್ನು ತೆಗೆಯಬೇಡ ಎಂದು ಸಾವಿರ ಸಲ ಹೇಳಿದರೂ ನಿನಗೆ ಅರ್ಥ ಆಗೊಲ್ಲ. ಒಳಗೆ ಎಂತದೋ ಪಕ್ಷಿ ಬಂದು ಕೂತಿದೆ. ಗುಬ್ಬಿಯ ಹಾಗೆ ಕಾಣುತ್ತೆ. ಮೈನಾ ಹಕ್ಕಿ ಇದ್ದರೂ ಇರಬಹುದು. ತಕ್ಷಣ ವಾಪಸ್ಸು ಬಾ’ ..ಬಡಬಡಿಸುತ್ತಿದ್ದಳು.

ಇನ್ನರ್ಧ ಗಂಟೆಯಲ್ಲಿ ವಿಮಾನ ಹತ್ತಬೇಕಾದ ನಾನು, ಯಾವುದೇ ಲಗೇಜನ್ನು ಚೆಕ್-ಇನ್ ಮಾಡದಿದ್ದರೂ, ಸೆಕ್ಯುರಿಟಿಯವರ ಕಡೆಯಿಂದ ಮೈಕೈ ತಡವಿಸಿಕೊಳ್ಳುವುದಕ್ಕೇ ಅರ್ಧ ಗಂಟೆ ಹೇಗೆ ಬೇಕಾಗುತ್ತದೆಂದೂ, ನಾನು ಈಗ ಮನೆಗೆ ವಾಪಸ್ಸು ಬಂದು ಆ ಮೈನಾ ಹಕ್ಕಿಯನ್ನೋ, ಗುಬ್ಬಿಯನ್ನೋ ಮನೆಯ ಗರಾಜಿನಿಂದ ಓಡಿಸುವುದು ಹೇಗೆ ಅಸಾಧ್ಯವೆಂದು ಇಪ್ಪತ್ತೈದು ಸೆಕೆಂಡುಗಳಲ್ಲಿ ವಿವರಿಸಿ ಹೇಳಿದೆ. ಆಗ ಗುಬ್ಬಿ ಅನ್ನೋ ಜೀವಿ ಮನೆಯೊಳಗೆ ಎಲ್ಲಿಂದ ಬಂದಿರಬಹುದು ಅನ್ನುವ ಅನುಮಾನ ನನಗೆ ಲವಲೇಶವೂ ಸುಳಿಯಲಿಲ್ಲ.

‘ಗುಬ್ಬಿ ಗರಾಜಿನಲ್ಲಿಲ್ಲ. ಮನೆಯ ಶ್ಯಾಂಡಲಿಯರ‍್ನ ಮೇಲೆ ಕೂತಿದೆ. ಈ ಎತ್ತರದ ಸೀಲಿಂಗು ಬೇಡ ಅಂತ ಬಡಕೊಂಡೆ, ಮನೆ ಕಟ್ಟಿಸುವಾಗ, ನನ್ನ ಮಾತು ಕೇಳಲಿಲ್ಲ.’ ಮನೆಯೊಳಗೆ ಬಂದ ಗುಬ್ಬಿ/ಮೈನಾ ನನ್ನ ವಾಸ್ತುಶಾಸ್ತ್ರದ ಲೂಪ್ ಹೋಲನ್ನು ಕಂಡುಹಿಡಿದುಕೊಂಡಿತ್ತು.

‘ನೀನು ಕೆಲಸಕ್ಕೆ ಹೋಗು. ನಾನು ಈಗ ಮನೆಗೆ ಬರುವ ಹಾಗಿಲ್ಲ. ಇನ್ನು ಹತ್ತು ನಿಮಿಷದಲ್ಲಿ ವಿಮಾನ ಹತ್ತಬೇಕು.’ ಸೆಕ್ಯುರಿಟಿಯವನು ಎರಡನೆಯ ಬಾರಿ ಶೂ ಬಿಚ್ಚಿಸುತ್ತಿದ್ದ. ‘ನಂತರ ಏನು ಮಾಡಬೇಕೆಂದು ಯೋಚಿಸೋಣ’ ಎಂದು ಫ಼ೋನು ಆರಿಸಿದೆ.

***

ನನಗಿಂತ ಹತ್ತು ವರ್ಷ ಚಿಕ್ಕವಳ್ಯಾರೋ ಪವರ‍್ಪಾಯಿಂಟಿನಲ್ಲಿ ತೀರ ಸತ್ತವನನ್ನೂ ಬಡಿದೆಬ್ಬಿಸುವ ಹೊಸಾ ಮಶೀನಿನ ಬಗ್ಗೆ ಲೆಕ್ಚರ್ ಕೊಡುತ್ತಿದ್ದಳು. ಆಸ್ಪತ್ರೆಗೆ ಈ ಮೃತ ಸಂಜೀವಿನಿಯನ್ನು ಕೊಂಡುಕೊಳ್ಳಬಹುದೇ ಇಲ್ಲವೇ ಅನ್ನುವುದನ್ನು ನಿರ್ಧರಿಸುವುದಕ್ಕೆ ಈ ಸೆಮಿನಾರು. ನಾನು ಬಂದಿದ್ದೆ. ಇದೊಂತರಾ ಪ್ರಾಯೋಜಿತ ಪ್ರವಾಸ. ಬೆಳಗ್ಗಿಂದ ಸಂಜೆಯ ತನಕ ಈ ಹುಡುಗಿ, ತನ್ನ ಕಂಪನಿಯವರು ಹೇಳಿಕೊಟ್ಟಿರುವುದನ್ನು ನನ್ನಂತಹ ಡಾಕ್ಟರುಗಳಿಗೆ ಹೇಳೋದನ್ನು ಕೇಳುತ್ತಾ ಸಂಜೆ ಕಂಪನಿಯವರು ಕೊಡೋ ಪುಕ್ಕಟೆ ಬಿಯರನ್ನೂ, ಆಲೂಗೆಡ್ಡೆಯ ತುಂಡುಗಳನ್ನೂ ತಿಂದು ಏನೋ ಕಲಿತೆವು ಅಂದುಕೊಂಡು ವಾಪಸ್ಸು ಹೋಗುವುದು. ‘ಥತ್ತೇರಿ ಸ್ವಲ್ಪವಾದರೂ ಅಕೆಡಿಮಿಕ್ ಆಗಿರಬೇಕಿತ್ತು, ಇವಳಿಗೆ ಈ ವಿಷಯದ ಬಗ್ಗೆ ಗೊತ್ತಿರುವುದಕ್ಕಿಂತಾ ಗೊತ್ತಿಲ್ಲದಿರುವುದೇ ಜಾಸ್ತಿ, ಆದರೆ ಹೇಳೋದನ್ನು ಬೇಕಾದಕ್ಕಿಂತಾ ಜಾಸ್ತಿ ಹೇಳ್ತಾಳೆ, ಶುದ್ಧ ವ್ಯಾಪಾರ.’ ಪಕ್ಕದಲ್ಲಿದ್ದವನು ಗೊಣಗುತ್ತಿದ್ದ. ನಾನು ಗೋಣಾಡಿಸಿದೆ.

ಮತ್ತೆ ಮೊಬೈಲು ಕಿಣಿಕಿಣಿ.

ಸುಜನಾ ‘ಮನೆಯೆಲ್ಲಾ ಗುಬ್ಬಿ ಕಕ್ಕ ಮಾಡಿದೆ. ನನ್ನ ಇಬ್ಬರು ಪೇಷೆಂಟುಗಳು ಹೆರುವುದಕ್ಕೆ ಸಿದ್ಧವಾಗಿದ್ದಾರೆ. ಮನೆಯಿಂದ ಬೆಳಿಗ್ಗೇನೆ ಆಸ್ಪತ್ರೆಗೆ ಬಂದೆ. ಇಲ್ಲಿ ಕಾಯುತ್ತಿದ್ದೇನೆ. ಮಧ್ಯಾಹ್ನ ಲಂಚಿನ ಬ್ರೇಕಿನಲ್ಲಿ ಮನೆಗೆ ಹೋಗಿದ್ದೆ. ಮನೆಯ ಒಳಗೂ ಹೋಗಲಿಕ್ಕಾಗಲಿಲ್ಲ. ನೀನು ತಕ್ಷಣಾ ಏನಾದರೂ ಮಾಡಲೇಬೇಕು. ನನಗಿನ್ನು ತಡಕೊಳ್ಳೋಕೆ ಆಗೋದಿಲ್ಲ’ ಅಂದಳು.

ಮೊಬೈಲನ್ನು ಕಾನ್ಫರೆನ್ಸಿನ ಹಾಲಿನಿಂದ ಹೊರಗೆ ತೆಗೆದುಕೊಂಡು ಹೋಗಿ ‘ಸುಜನಾ, ನಾನು ಮನೆಯಿಂದ ಒಂದು ಸಾವಿರ ಮೈಲಿ ದೂರ ಕೂತುಕೊಂಡು ಇಲ್ಲಿ ಯಾವಳದೋ ಪಾಠ ಕೇಳ್ತಾ ಇದೀನಿ. ನನಗೆ ಅಲ್ಲಿಗೆ ಬರೋಕ್ಕಾಗಲ್ಲ, ನೀನೇನು ಸಣ್ಣ ಹುಡುಗೀನಾ? ಒಂದು ಹಕ್ಕೀನ ಓಡಿಸೋಕಾಗಲ್ವ’ ಸ್ವಲ್ಪ ಖಾರವಾಗಿಯೇ ಹೇಳಿ ಫ಼ೋನಿಟ್ಟೆ.

ಮತ್ತೆ ಮೊಬೈಲು ಕೂಗಿತು.

‘ನಾವು ಹಿಂದಿನ ಮನೆಯವರ ಹಕ್ಕಿಮನೆಯನ್ನು ಬೀಳಿಸಬಾರದಾಗಿತ್ತು. ನಾನು ಹೇಳಿದೆ. ನೀನು ಕೇಳಲಿಲ್ಲ. ಈಗ ನೋಡು. ಎಲ್ಲಿಂದ ಬಂತೋ ಈ ಗುಬ್ಬಿ. ಇರೋದಕ್ಕೆ ಗೂಡಿದೆಯೋ ಇಲ್ಲವೋ ಗೊತ್ತಿಲ್ಲ. ಮನೆಯೊಳಗೆ ಗಲೀಜು. ನೀನು ಒಂದಿನ ಕಾನ್ಫರೆನ್ಸನ್ನು ತುಂಡರಿಸಿ ಬರೋಕ್ಕಾಗಲ್ವಾ, ಪ್ಲೀಸ್?’ ಗೋಗರೆಯುವ ದನಿಯಲ್ಲಿ ಕೇಳಿದಳು.

ನನಗೆ ಏನು ಮಾತಾಡಬೇಕೆಂದು ತೋಚದೇ ‘ಸುಜನಾ, ಸುಜ್ಜಿ. ಬರ್ತೀನಿ. ನಾಡಿದ್ದು ಬೆಳಿಗ್ಗೆ. ಒಂದು ಕೆಲಸ ಮಾಡು. ನೀನು ನಮ್ಮ ಬೀದಿಯ ತುದಿಯಲ್ಲಿ ಒಂದು ಸಣ್ಣ ಫ಼್ಲಯರ್ ಹಾಕು, ನೋಟೀಸಿನ ತರ. ಸಾಧ್ಯವಾದರೆ, ಆ ಹಕ್ಕೀದು ಒಂದು ಫ಼ೋಟೋ ತೆಗೆದು, ಅದನ್ನೂ ಹಾಕು. ಅಕ್ಕ ಪಕ್ಕದವರಲ್ಲಿ ಯಾರಾದರೂ ಕಳಕೊಂಡಿದ್ದರೆ ಬಂದು ಕೇಳಿದರೂ ಕೇಳಬಹುದು. ಏನೂ ಆಗದಿದ್ದರೆ, ನಾನು ಬಂದ ಮೇಲೆ ನೋಡ್ಕೋತೀನಿ.’ ಎಂದು ಹೇಳಿ ಮತ್ತೆ ಫ಼ೋನಿಟ್ಟೆ.

***

‘ವಿಲ್ಲಾ ವೈದ್ಯಾ’ ನನ್ನ, ಸುಜನಾಳ ಕನಸಿನ ಕೂಸು. ಎರಡೆಕೆರೆ ಜಾಗದಲ್ಲಿ, ಆರು ಬೈ ಆರು ಮರದ ಪಟ್ಟಿಗಳ ಅಸ್ಥಿಗೆ ಮಿಸಿಸಿಪಿ ಮ್ಯಾನುಫ಼್ಯಾಕ್ಚರ್ಡ್ ಕಲ್ಲುಗಳ ಕವಚವನ್ನೂ ಕರಿಯ ಪಿರಮಿಡ್ಡಿನಂತಹ ಛಾವಣಿಯನ್ನೂ ಹೊಂದಿ, ಸಿಟಡೆಲ್ ಮಾದರಿಯಲ್ಲಿ ಚೂಪಾಗಿ ಕಾಣುವ ವೆರಾಂಡವೆನ್ನೋ ಫ಼ೋಯರ‍್ನ ಹತ್ತುಸಾವಿರ ಡಾಲರ‍್ಗಳ ಶ್ಯಾಂಡಲಿಯರ‍್ನ ಮೇಲೆ ಈಗ ಒಂದು ಮೈನಾ ಹಕ್ಕಿಯೋ, ಗುಬ್ಬಿಯೋ ಕೂತಿದೆ ಅಂದರೆ.

ಆದದ್ದು ಸಣ್ಣ ತಪ್ಪು. ಸೈಟಿನ ಹಿಂಭಾಗದಲ್ಲಿ ‘ವಿಲ್ಲಾ ವೈದ್ಯ’ದ ಸೈಟಿನ ಆವರಣದೊಳಗೇ ಒಂದು ಹಕ್ಕಿಮನೆಯಿತ್ತು. ಇಪ್ಪತ್ತೈದಡಿ ಮರದ ಕಂಬದ ಮೇಲೆ ಒಂದು ಸಣ್ಣ ಮನೆಯಾಕಾರದ ಗೂಡು. ‘ವಿಲ್ಲಾ ವೈದ್ಯ’ದ ವೈಭವ ಹಿಂದಿನ ಬೀದಿಗೆ ಕಾಣದಂತೆ ಅಡ್ಡ ಬರುತ್ತಿತ್ತು. ಮನೆಯ ಬಿಲ್ಡರ‍್ಗೆ ಫ಼ೋನು ಮಾಡಿ ‘ಈ ಹಕ್ಕಿಮನೆ ಪ್ರಾಯಶಃ ಹಿಂದಿನ ಮನೆಯವರದ್ದಿರಬಹುದು,  ಯಾರದೆಂದು ತಿಳಕೊಂಡು ಅವರಿಗೆ ಅದನ್ನು ಅವರ ಸೈಟಿನೊಳಗೆ ಹಾಕಿಕೊಳ್ಳುವುದಕ್ಕೆ ಹೇಳು’ ಎಂದು ಎರಡು ಬಾರಿ ಫ಼ೋನು ಮಾಡಿ ಹೇಳಿದ್ದೆ. ಆತ, ಯಾವ ಉತ್ತರವೂ ಕೊಡಲಿಲ್ಲ. ನಾನು, ಸುಜನಾ, ‘ವಿಲ್ಲಾ ವೈದ್ಯ’ಕ್ಕೆ ಬಂದು ಮೂರು ತಿಂಗಳಾದರೂ ಮನೆ ಕಟ್ಟಿದಾತನ ತಣ್ಣಗಿನ ಉತ್ತರ ಕಂಡು, ನಾನೇ ಹಿಂದಿನ ಮನೆಯ ಬಳಿ ಎರಡು ಬಾರಿ ಹೋಗಿ ಬಂದಿದ್ದೆ. ಆದರೆ, ಆ ಮನೆಯಲ್ಲಿ ಯಾರೂ ಇರುವ ಸೂಚನೆಯೇ ಕಾಣಿಸಿರಲಿಲ್ಲ. ಮನೆಯ ಮುಂದೆ ಎರಡು ಸಣ್ಣ ಚೀಟಿಯನ್ನೂ ಬರೆದಿಟ್ಟಿದ್ದೆ. ಆದರೂ, ಉತ್ತರವಿಲ್ಲ. ಕೊನೆಗೆ, ಮನೆಯ ಬಿಲ್ಡರ್ ಗೆ ‘ನೀನೇ ಏನಾದರೂ ಮಾಡಬೇಕು’ ಎಂದು ಹೇಳಿದ್ದೆ.

ಅಷ್ಟೇ, ಒಂದು ದಿನ ನಾನೂ, ಸುಜನಾಳೂ ಒಂದಿಷ್ಟು ಜೀವಗಳನ್ನು ಉಳಿಸಿ, ತೆಗೆದು ಮನೆಗೆ ಬಂದಾಗ ಆ ಹಕ್ಕಿಮನೆ ಬುಡಸಮೇತ ಮಾಯವಾಗಿತ್ತು! ಯಾವ ಕುರುಹೂ ಇಲ್ಲದೇ.

***

ಅಂದು ರಾತ್ರಿ ಹೊಸಮನೆಯ ಸ್ಲೀಪ್ ನಂಬರ್ ಪಾಸ್ತುರೋಪೆಡಿಕ್ ಹಾಸಿಗೆಯ ಮೆತ್ತೆಗಳೂ, ತಂಪಾದ ಎಲ್ಟನ್ ಜಾನು, ಇನ್ನೂರಿಪ್ಪತ್ತು ಡಾಲರ‍್ನ ಶಾಂಪೇನು, ಚಿಲಿಪಿಲಿಯಿಲ್ಲದ ನಿಶ್ಯಬ್ದ ರಾತ್ರಿ, ನೂರಾರವತ್ತು ಡಾಲರನ ಲಾಂಜರೇ, ಆಫ಼್ಟರ್ ಶೇವ್, ಅಪರೂಪಕ್ಕೆ ಹುಟ್ಟು ಸಾವಿಲ್ಲದ ನಮ್ಮಿಬ್ಬರ ಡೇ ಶಿಫ಼್ಟು, ಓವುಲೇಶನ್ ಗೆ ದೂರವಿರುವ ಸುಜನಾಳ ಚಕ್ರ ಮತ್ತು ಸುರಕ್ಷೆಗೆಂದು ದಿಂಬಿನ ಕೆಳಗಿರುವ ಟ್ರೋಜಾನು, ಯಾವುದೂ ಉಪಯೋಗಕ್ಕೆ ಬರಲಿಲ್ಲ.

ನನ್ನ ಎದೆಯಲ್ಲಿ ಕೈಯಾಡಿಸುತ್ತಾ ಎದೆಯ ಮೇಲೆಯೇ ನಿದ್ದೆ ಹೋಗಿದ್ದಳು, ಸುಜನಾ. ಹಕ್ಕಿಮನೆ ಅಲ್ಲಿಂದ ಹೋಗಬೇಕು ಅನ್ನುವುದು ಬಹುಶಃ ನನ್ನ ಒಬ್ಬನ ಇರಾದೆ ಮಾತ್ರ ಆಗಿತ್ತೋ ಎಂದು ಮೊದಲ ಬಾರಿ ಕೊಂಚ ಅನುಮಾನವಾಗಿತ್ತು.

***

‘ನೀವು ಒಂದೇ ಒಂದು ಮಾತು ಹೇಳಿದ್ದರೆ, ನಾನು ಬಂದು ಹಕ್ಕಿಮನೆಯನ್ನು ನಮ್ಮ ಸೈಟಿನೊಳಗೆ ಎಳಕೊಳ್ಳುತ್ತಿದ್ದೆ. ಕೆಲಸದ ಮೇಲೆ ಯುರೋಪಿಗೆ ಮೂರು ತಿಂಗಳು ಹೋಗಿದ್ದೆ. ನಿಮ್ಮ ಎರಡೂ ‘ನೋಟೀಸು’ ಸಿಕ್ಕವು. ನಮ್ಮ ತಾತ ಕಟ್ಟಿದ ಹಕ್ಕಿಮನೆ ಅದು. ನಮ್ಮಪ್ಪ ಸಾಯುವ ತನಕ ದಿನಾ ಹಕ್ಕಿಗಳಿಗೆ ಉಣಿಸುತ್ತಿದ್ದ. ಅಂತದ್ದನ್ನು ನೀವು ಮುರಿಸಿದ್ದೀರ. ಪಾಪ ಎಷ್ಟು ಹಕ್ಕಿಗಳಿದ್ದವೋ ಆ ಪುಟ್ಟಗೂಡಿನಲ್ಲಿ. ಈಗ ಆದದ್ದು ಆಗಿಹೋಯಿತು. ಆ ಹಕ್ಕಿ ಮನೆ ಎಲ್ಲಿದೆ ಅಂತ ಹೇಳಿ. ಬೇಕಾದರೆ, ನಿಮಗೆ ದುಡ್ಡುಕೊಟ್ಟು ಅದನ್ನು ಬಿಡಿಸಿಕೊಳ್ಳುತ್ತೇನೆ. ನನಗೆ ಆ ಹಕ್ಕಿಮನೆ ಬೇಕು’ ಒಂದು ಸಣ್ಣ ಚೀಟಿಯಲ್ಲಿನ ನೋಟೀಸು, ಮನೆಯ ಮುಂದೆ.

ಮತ್ತೆ ಮನೆಗೆ ಹೋಗಿದ್ದೆ. ಮನೆಯಲ್ಲಿ ಯಾರೂ ಇರಲಿಲ.

ನಗು ಬಂತು. ನಾನೂ ಸುಜ್ಜಿ, ಇಬ್ಬರೂ ಒಂದೇ ಮನೆಯಲ್ಲಿದ್ದುಗೊಂಡೇ ಪರಸ್ಪರ ಇ-ಮೈಲ್ ಕಳಿಸಿಕೊಳ್ಳುವಾಗ ನನ್ನ ಈ ನೆರೆಯಾತ ಕಡೆಯ ಪಕ್ಷ ಮನೆಯತನಕ ಬಂದು ಚೀಟಿಯನ್ನಾದರೂ ಇಡುತ್ತಿದ್ದಾನಲ್ಲ ಅನ್ನಿಸಿತ್ತು.

ಬಿಲ್ಡರ‍್ಗೆ ಮತ್ತೆ ಫ಼ೋನು ಮಾಡಿದ್ದೆ. ಹಕ್ಕಿಮನೆಯನ್ನು ಅವರು ಜಂಕ್ ಯಾರ್ಡಿನಲ್ಲಿ ತುಂಡುತುಂಡು ಮಾಡಿದ್ದಾರೆಂದು ಹೇಳಿದ್ದ. ಅವನ ಧ್ವನಿಯಲ್ಲಿ ಸ್ವಲ್ಪ ಆಶ್ಚರ್ಯವಿತ್ತು. ನಾನೇ ಆ ಹಕ್ಕಿಮನೆಗೆ ಒಂದು ಗತಿ ಕಾಣಿಸಬೇಕೆಂದು ಬಹಳ ಬಾರಿ ಅವರನ್ನು ಬಲವಂತ ಮಾಡಿದ್ದು ನನ್ನ ನೆನಪಲ್ಲಿ ಇಲ್ಲವಾ ಎಂದು ಕೇಳಿದ್ದ. ನಂತರ, ಅವನು ಸೈಟಿನ ಬ್ಲೂಪ್ರಿಂಟನ್ನು ಬಹಳ ಬಾರಿ ಪರೀಕ್ಷಿಸಿದ್ದಾನೆಂದೂ, ಆ ಹಕ್ಕಿಮನೆ ಅನಧಿಕೃತವಾಗಿ ನಮ್ಮ ಸೈಟಿನಲ್ಲಿಯೇ ಇದ್ದುದ್ದರಿಂದ ಕಾನೂನುಬದ್ಧವಾಗಿ ಯಾರೂ ಏನೂ ಮಾಡಲಾಗದೆಂದೂ ಹೇಳಿದ್ದ. ನಾನೀಗ ಯಾವ ನೋಟಿಸಿಗೂ ಉತ್ತರ ಕೊಡಬಾರದೆಂದೂ ಹೇಳಿದ್ದ.

ಅಲ್ಲಿಗೆ ವಿಷಯ ಮುಗಿದಿತ್ತು.

***

ರಾತ್ರಿ ಕಾನ್ಫರೆನ್ಸ್ ಮುಗಿಸಿದ ಮೇಲೆ, ಮತ್ತೆ ಸುಜ್ಜೀಗೆ ಫ಼ೋನು ಮಾಡಿದೆ. ಮನೆಯಲ್ಲಿರಲಿಲ್ಲ. ಅವಳ ಮೊಬೈಲು ಆರಿಸಿತ್ತು. ಪೇಜ್ ಮಾಡಿದಾಗ ಅವಳ ಜತೆಗಿನ ಕೆಲಸಗಾರ್ತಿಗೆ ಒಂದು ರಾತ್ರಿ ರಜಾ ಬೇಕಿತ್ತೆಂದು ಅದಕ್ಕಾಗಿ ಸುಜ್ಜಿ ಇವತ್ತು ರಾತ್ರಿ ಕೆಲಸ ಮಾಡುತ್ತಿದ್ದಾಳೆಂದೂ, ಹೇಳಿದಳು. ಮನೆಯ ಗುಬ್ಬಿಯ ಕಥೆ ಕೇಳುವುದು ಬೇಡ ಎನ್ನಿಸಿತು. ಮಲಗಿದೆ.

***

‘ವಿಲ್ಲಾ ವೈದ್ಯ’ ನಮ್ಮ ಮೂರನೆಯ ಮನೆ. ನಮ್ಮ ಮದುವೆಯ ಇಪ್ಪತ್ತನೇ ವಾರ್ಷಿಕೋತ್ಸವಕ್ಕೆ ನಾವಿಬ್ಬರೂ ನಮಗಿಬ್ಬರಿಗೂ ಕೊಟ್ಟುಕೊಂಡ ಊಡುಗೊರೆ.

ಮೊದಲ ಮನೆ ‘ವಿಲ್ಲಾ ಪೀಡಿಯಾಟ್ರಿಕಾ’. ಮದುವೆಯಾದ ಹೊಸದರಲ್ಲಿ ನಮ್ಮ ತುರ್ತಿನ ಆಶಯದ ಪ್ರತೀಕವೋ ಎನ್ನುವಂತಿತ್ತು, ಹೆಸರು.  ಎರಡೇ ಅಂತಸ್ತಿನ, ಮೂರು ಬೆಡ್ ರೂಮಿನ ಒಂದು ಗರಾಜಿನ ಮನೆ. ಇಬ್ಬರೂ ರೆಸಿಡೆನ್ಸಿ ಮಾಡುತಿದ್ದೆವು. ಸಿಗುವ ವಾರಕ್ಕೆ ಅರ್ಧ ದಿನ ರಜೆಯಲ್ಲಿ ಸುಜನಾ ಎಲ್ಲ ಅಂಗಡಿಗಳಲ್ಲೂ ಹುಡುಕಿನೋಡಿ ಸಾಮಾನುಗಳನ್ನು ಒಪ್ಪವಾಗಿ ಓರಣವಾಗಿ ಹುಡುಕಿ ತಂದಿದ್ದಳು. ನಡುವೆ ಫ಼್ಯಾಮಿಲಿ ರೂಮಿನಲ್ಲಿದ್ದ ಓಕ್ ಮರದ ಅಗ್ಗಿಷ್ಟಿಕೆಯೆ ಮೇಲೆ ಪುಟಾಣಿ ಪ್ಲಾಸ್ಟರ್ ಆಫ಼್ ಪ್ಯಾರಿಸ್ ನ ‘ಸಿಕ್ಸ್ ಲಿಟಲ್ ಪಿಗ್ಗೀಸ್’ ನಮ್ಮ ಅತಿ ದುಬಾರಿ ಅಲಂಕಾರಿಕ ಐಟಮಾಗಿತ್ತು. ‘ವಿಲ್ಲಾ ಪೀಡಿಯಾಟ್ರಿಕಾ’ದಲ್ಲಿ ನಾವಿದ್ದ ಒಟ್ಟು ಮೂರು ವರ್ಷದಲ್ಲಿ ನಾವಿಬ್ಬರೂ ಒಟ್ಟಿಗೆ ಇದ್ದದ್ದು ಕೆಲವೇ ಕೆಲವು ದಿವಸಗಳು ಮಾತ್ರ. ನಾನು ಜಗತ್ತಿನ ಅತಿ ಕ್ರೂರ ಖಾಯಿಲೆಗಳಿಂದ ಮಾನವ ಜನಾಂಗವನ್ನು ಉಳಿಸುವ, ದೇವರಿಗೆ ಸ್ವಲ್ಪ ಮಾತ್ರ ಸಡ್ಡುಹೊಡೆಯಬೇಕೆನ್ನುವ ಆಸೆಯಿಂದ ‘ಇಂಟೆನ್ಸಿವಿಸ್ಟ್’ ಆಗಲು ಹೊರಟಿದ್ದೆ. ಸುಜ್ಜಿ ಈ ಜಗತ್ತಿಗೆ ಜೀವಗಳನ್ನು ಬರಮಾಡಿಕೊಳ್ಳೋ ‘ಗೈನಕಾಲಜಿಸ್ಟ್’ ಆಗಲು.  ಆಗ ನಾವಿಬ್ಬರೂ ಮಾತಾಡುತ್ತಿದ್ದುದು ಪೇಜರ‍್ಗಳ ಮೂಲಕ. ಮನೆಯ, ಕಾರಿನ ಮಾರ್ಟ್ ಗೇಜು, ಎಲಕ್ಟ್ರಿಕ್ ಬಿಲ್ಲು, ನಲ್ಲಿ, ಕೇಬಲ್ಲು, ದಿನಸಿ, ಎಲ್ಲ ಲೆಕ್ಕವೂ ಒಂದು ಹಳೆಯ ಕಂಪ್ಯೂಟರಿನಲ್ಲಿದ್ದ ಯಾವುದೋ ಈಗ ನೆನಪಿಗೆ ಬಾರದ ಸಿಸ್ಟಮಿನಲ್ಲಿದ್ದು, ತಿಂಗಳುತಿಂಗಳೂ ತೆರಕೊಂಡು, ತೋರಿಸಿಕೊಂಡು ನಂತರ ತಂತಾನೇ ಕಳಕೊಳ್ಳುತ್ತಿದ್ದವು. ಒಟ್ಟು ಎಲ್ಲ ಲೆಕ್ಕವೂ ಸಮಯಕ್ಕೆ ಸರಿಯಾಗಿ ಚುಕ್ತವಾಗುತ್ತಿದ್ದವು.

***

‘ವಿಲ್ಲಾ ಮೆಡಿಕಾ’ಕ್ಕೆ ಮನೆ ಬದಲಾಯಿಸುವ ಹೊತ್ತಿಗೆ ನಾನು, ಸುಜ್ಜಿ ನಿಜವಾದ ಡಾಕ್ಟರುಗಳಾಗಿದ್ದರೂ ಐಸಿಯುನಲ್ಲಿ ಸಾಯುವ ರೋಗಿಗಳ ಮತ್ತೆ ಹುಟ್ಟುವ ಮಕ್ಕಳ ಅಂಕಿಅಂಶಗಳನ್ನು ಮಾತ್ರ ಬದಲಿಸಲಾಗಿರಲಿಲ್ಲ. ವಿಲ್ಲಾ ಮೆಡಿಕಾ ಎರಡು ಗರಾಜಿನ, ಬೇಸ್ ಮೆಂಟಿನಲ್ಲಿ ಟೇಬಲ್ ಟೆನಿಸ್ ಟೇಬಲ್ಲಿದ್ದ, ನನಗೂ ಸುಜ್ಜಿಗೂ ಇಬ್ಬರಿಗೂ ಪ್ರತ್ಯೇಕವಾದ ಜಿಮ್ ಇದ್ದ ಮನೆ. ಅದಲ್ಲದೆ ಈಗ ಕಂಪ್ಯೂಟರುಗಳಿಗೆ ಹೆಚ್ಚು ಬುದ್ಧಿ ಬಂದಿತ್ತು. ನಮ್ಮ ತಿಂಗಳ ಖರ್ಚು ವೆಚ್ಚವೆಲ್ಲಾ ಈಗ ಒಂದು ಸ್ಪ್ರೆಡ್ ಶೀಟಿನಲ್ಲಿದ್ದು ನಮ್ಮಿಬ್ಬರ ನಡುವೆ ಇ-ಮೈಲುಗಳಲ್ಲಿ ವಿವಿಧ ಐಟಮ್ಮುಗಳಿಗೆ ಚೆಕ್ ಮಾರ್ಕನ್ನು ಹಾಕಿಸಿಕೊಂಡು ಓಡಾಡುತ್ತಿತ್ತು.

ನನಗಿನ್ನೂ ನೆನೆಪಿದೆ. ಒಂದುದಿನ ‘ಐಸಿಯುನಲ್ಲಿ ನಾನೆಷ್ಟೇ ಹೊಡೆದಾಡಿದರೂ ಮೂವತ್ತು ಪ್ರತಿಶತ ಮರಣ ಖಚಿತ. So lets just suck the stats and have fun. ಮನೆಯಲ್ಲಿ ಇಂದು ರೆಮಿ ಮಾರ್ಟಿನ್ ಹೊಸ ಬಾಟಲಿದೆ’ ಟೆಕ್ಸ್ಟ್ ಮೆಸೇಜ್ ಕಳಿಸಿದ್ದೆ.

‘ಹಾಗಲ್ಲ, ನನ್ನ ಸ್ಪೆಶಾಲಿಟಿ ಯಾವತ್ತೂ ಹ್ಯಾಪಿ ಎಂಡಿಂಗ್. ಒಂಭತ್ತು ತಿಂಗಳು ಕಾದದ್ದು, ಹೆರಿಗೆಯ ನೋವು, ಆತಂಕ, ಭಯ, ಸಿಟ್ಟು ಎಲ್ಲವೂ ಪುಟ್ಟ ಮಗುವನ್ನು ನೋಡಿದ ತಕ್ಷಣ ಮಾಯವಾಗುತ್ತದೆ. ಮಗುವನ್ನು ಎದೆಗವಚಿಕೊಂಡು ಹಾಲುಕುಡಿಸುವ ಪುಟ್ಟ ದೊಡ್ಡ ಅಮ್ಮಂದಿರುಗಳು, ಪಿಳಿಪಿಳಿ ಕಣ್ಣುಬಿಡುವ ಮಗು, ಜಂಭದ ಅಪ್ಪ- ಆಸ್ಪತ್ರೆಯಿಂದ ಹೋಗುವ ಮೊದಲು ನಮ್ಮಗಳ ಜತೆ ಒಂದು ಗ್ರೂಪ್ ಫ಼ೋಟೋ, ಯಾವ ಬಾರ್ಜಾತ್ಯನ ಸಿನೆಮಾದಲ್ಲಿರುತ್ತದೆ ಇಂತಹ ಮಧುರವಾದ ಕೊನೆ. ಆದ್ದರಿಂದ ನಾನು ನನ್ನ ಕೆಲಸಾನ ಖುಷಿಯಿಂದ ಮಾಡ್ತೀನಿ. ನೋ ಆಲ್ಕೋಹಾಲ್ ಟುಡೇ’ ವಾಪಸ್ಸು ಉತ್ತರ ಬಂದಿತ್ತು.

`Wait till you get sued once’ ಒಂದೆರಡು ಅಳುವ ಮುಖದ ಎಮೋಟಿಕಾನ್ಸ್ ಹಾಕಿ ಕಳಿಸಿದ್ದೆ.

‘ನಿನ್ನಂತ ಸಿನಿಕನಿಗೆ ನಾನು ಏನು ಹೇಳುವುದೂ ಸಾಧ್ಯವಿಲ್ಲ.’
‘ಸಾರಿ’
ಸುಮ್ಮನಾಗಿದ್ದೆ.

ಇವೆಲ್ಲದರ ನಡುವೆಯೂ ಸುಜ್ಜಿ ಎರಡು ಬಾರಿ ಬಸಿರಾಗಿದ್ದಳು. ಗರ್ಭಪಾತವೂ ಎರಡು ಬಾರಿಯೇ.

ಇದ್ದ ಐದು ರೂಮಿನಲ್ಲಿ ಒಂದನ್ನು ನರ್ಸರಿಗೆಂದು ಎರಡೂ ಬಾರಿ ಸುಜ್ಜಿಯೇ ತನ್ನ ಕೈಯಾರೆ ಬಣ್ಣ ಹೊಡೆದಿದ್ದಳು. ಯಾವಾಗೆಂದು ಮರೆತುಹೋಗಿದೆ. ಆಕಾಶನೀಲಿ ಬಣ್ಣ. ಮೊದಲನೇ ಬಸುರಿನಲ್ಲಿ ‘ಇನ್ನೂ ಎರಡೇ ತಿಂಗಳಿನ ಬಸುರಿಗೇ ಮಗುವಿನ ರೂಮನ್ನು ಅಣಿಮಾಡುವುದು ಕೊಂಚ ಅವಸರದ ಸುಬ್ಬಿಯ ಕೆಲಸವಲ್ಲವೇ’ ಅಂದಿದ್ದೆ. ಅಷ್ಟೇ, ಮಾರನೆಯ ದಿನವೇ ಸುಜ್ಜಿ ಖಾಲಿಯಾಗಿದ್ದಳು. ಸಣ್ಣಗಿನ ಸ್ರಾವ, ಮೂರು ದಿನಕೊಂದು ಅಲ್ಟ್ರಾ ಸೌಂಡ್, ಎರಡೆರಡು ದಿನಕ್ಕೂ ರಕ್ತ ಪರೀಕ್ಷೆ, ಕೊನೆಗೆ ಡಿ ಅಂಡ್ ಸಿ.

ನಲುಗಿದ ಹೂವಾಂತಾಗಿದ್ದಳು, ಸುಜ್ಜಿ.
ಸುಮ್ಮನೇ ತಬ್ಬಿಕೊಂಡು ಅಳುವುದನ್ನು ಬಿಟ್ಟು ನನಗೇನೂ ಮಾಡಲಾಗಿರಲಿಲ್ಲ.

ನರ್ಸರಿ ಬಾಗಿಲು ಹಾಕಿತ್ತು. ಅದನ್ನು ಸುಜ್ಜಿಯ ಪೇಯಿಂಟಿಂಗ್ ಗಳನ್ನು ಹಾಕಿ ‘ಆರ್ಟ್ ರೂಮ್’ ಮಾಡುವಾ ಅಥವಾ ನನ್ನ ಪುಸ್ತಕಗಳನ್ನಿಡಲು ಒಂದು ಸಣ್ಣ ಲೈಬ್ರರಿ ಮಾಡುವಾ ಅಂದೆ.

‘ನಾನಿನ್ನೂ ಬರಿದಾಗಿಲ್ಲ’ ಅಂದಿದ್ದಳು, ಸುಜ್ಜಿ. ಎಲ್ಲಿ ತಪ್ಪಿದ್ದೆ ಗೊತ್ತಾಗಿರಲಿಲ್ಲ. ಸುಜ್ಜಿ ಬರಿದಾಗಿಲ್ಲ ಎಂದು ತೋರಿಸಲು ನಾನು ಸುಜ್ಜಿ ಇಬ್ಬರೂ ಪಣತೊಟ್ಟಂತೆ, ಪೈಪೋಟಿಗೆ ಬಿದ್ದಂತೆ ಒಬ್ಬರ ಹಿಂದೆ, ಮುಂದೆ, ಮೇಲೆ ಕೆಳಗೆ ಕೆನೆದಾಡಿದೆವು. ಸುಜ್ಜಿಯ ಕ್ರಾಂಪ್ಸ್, ಚಕ್ರ, ಓವುಲೇಷನ್, ಮೈಯ ಹದಿನಾಲ್ಕನೆಯ ದಿನದ ಬದಲಾಗುವ ಬಿಸಿ, ಸ್ಯಾನಿಟರಿ ಪ್ಯಾಡಿನ ಬ್ರಾಂಡು ನನಗೆ ಬಾಯಿಪಾಠವಾಯಿತು. ಟ್ರೋಜಾನು, ಜೆಲ್ಲಿ ಮತ್ತು ಸ್ಪಾಂಜುಗಳು ಅಟ್ಟ ಸೇರಿದವು. ಸುಜ್ಜಿ ಸೇಫ಼್ಟಿ ಪಿರಿಯಡ್ಡಿನಲ್ಲಿ ಮಾತ್ರ ವೈನು ಕುಡಿಯುತ್ತಿದ್ದಳು.

‘ವಿಲ್ಲಾ ಮೆಡಿಕಾ’ದಲ್ಲಿ ಮತ್ತೆ ಮುಟ್ಟು ನಿಂತಿತ್ತು. ತಾನೇ ಗೈನಕಾಲಜಿಸ್ಟ್. ಸುಜ್ಜಿ ಆಸ್ಪತ್ರೆಯಲ್ಲಿ ಹರಾಜಿಗೆ ಎಂದು ಹಾಕಿದ್ದ ಒಂದು ಅಲ್ಟ್ರಾಸೌಂಡ್ ಮಶೀನನ್ನೇ ಖರೀದಿಸಿದ್ದಳು. ಕೆಲಸಕ್ಕೆ ರಜಾ ಹಾಕಿ, ದಿನಾ ತನಗೆ ತಾನೇ ಹೊಟ್ಟೆಯ ಮೇಲೆ ಒಂದಿಷ್ಟು ಜೆಲ್ಲಿ ಹಾಕಿ ನೋಡಿಕೊಳ್ಳುತ್ತಿದ್ದಳು. ನನಗೂ ಕರೆದು ತೋರಿಸುತ್ತಿದ್ದಳು.

ನನಗೆ ಅಲ್ಟ್ರಾಸೌಂಡಿನಲ್ಲಿ ಮಕ್ಕಳ ಹೃದಯದ ಬಡಿತ, ಕೈಕಾಲುಬಡಿತವನ್ನು ನೋಡಲು ಬರುತ್ತಿರಲಿಲ್ಲ. ಕೀವುತುಂಬಿದ ಗಾಲ್ ಬ್ಲಾಡರ್, ಒಡೆದ ಸ್ಪ್ಲೀನು, ಪೆರಿಟೋನಿಯಲ್ ಕ್ಯಾವಿಟಿಯಲ್ಲಿನ ರಕ್ತ ಇವನ್ನಾದರೆ ಸುಲಭವಾಗಿ ಗುರುತಿಸುತ್ತೇನೆ.

ನನ್ನಂತ ನನಗೂ ಸುಜ್ಜಿಯ ಹೊಟ್ಟೆಯಲ್ಲಿ ಹೃದಯದ ಬಡಿತ ಕಾಣಿಸಿತು. ಸುಜ್ಜಿ ಯಾವುದೋ ಒಂದು ಕೋನದಲ್ಲಿ ಅಲ್ಟ್ರಾಸೌಂಡಿನ ಮಶೀನಿನ ಪ್ರೋಬ್ ಹಿಡಿದಾಗ ಮಾತ್ರ. ಈ ಬಾರಿ ಸುಜ್ಜಿಯನ್ನು ಅಲುಗಾಡದಿರೆಂದು ಹೇಳಿ, ನಾನೇ ನರ್ಸರಿಯ ಬಾಗಿಲು ತೆಗೆದು ಬಣ್ಣ ಹೊಡೆದಿದ್ದೆ. ಸುಜ್ಜಿಯ ಪ್ರಕಾರ ಅವಳಿಗಿನ್ನೂ ಏಳುವಾರ.

ನಮ್ಮ ಐಸಿಯುನ ಪಕ್ಕದಲ್ಲಿರುವ ಕೌಂಸೆಲಿಂಗ್, ಅಥವಾ ಕುಟುಂಬದವರೊಡನೆ ಮಾತಾಡಲಿಕ್ಕೆಂದು ಇರುವ ರೂಮಿನ ಬಾಗಿಲಲ್ಲೇ ಒಂದು ಚಿನ್ನದಂತಾ ಫಳಫಳ ಅಕ್ಷರಗಳಲ್ಲಿ ಬರೆದಿರುವ ಒಂದು ವಾಕ್ಯವನ್ನು ಹಾಕಿದ್ದೇವೆ. ನಾನೇ ಹಾಕಿಸಿದ್ದು. ಎಲ್ಲಿ ಕೇಳಿದ್ದೆ ಎಂದು ಗೊತ್ತಿಲ್ಲ. `When God puts his hands on, you take yours out’ ಅದೇ ವಾಕ್ಯವನ್ನು ಸ್ವಲ್ಪ ತಿರುಗಿಸಿ ಬದಲಿಸಿ ಐಸಿಯುನ ಬಾಗಿಲಲ್ಲಿ `When God tries to put his hands down, we do not’ ಅಂತ, ಬರೆಸಿದ್ದೆವು. ಪ್ರಾಸಂಗಿಕವಾಗಿ ಸುಜ್ಜೀಗೆ ಒಂದಿನ ನಾನೇ ಹೀಗೆ ಬರೆಸಿದ್ದು ಎಂದು ಹೇಳಿದ್ದೆ.

ಒಂದೇ ವಾರದಲ್ಲಿ ಮೂರನೆಯ ತಿಂಗಳ ಬಸುರಿ ಸುಜ್ಜೀಗೆ ಇದ್ದಕ್ಕಿದ್ದಂತೆ ನ್ಯಾಪ್ ಕಿನ್ ಗಳು ಬೇಕಾಗತೊಡಗಿದವು. ಈ ಬಾರಿ ಸುಜ್ಜಿ ಯಾವ ತಂಟೆಗೂ ಹೋಗಲಿಲ್ಲ. ಮನೆಯಲ್ಲಿದ್ದ ಅಲ್ತ್ರ್ಟಾಸೌಂಡಿನ ಮಶೀನನ್ನೂ ಕೆಳಗೆ ಬೇಸ್ ಮೆಂಟಿಗೆ ಇಟ್ಟುಬಿಟ್ಟಳು. ಯಾವ ತಂಟೆಯೂ ಇಲ್ಲದೆ. ಏನೂ ಆಗಿಯೇ ಇಲ್ಲವಂತೆ. ಯಾವ ರಕ್ತ ಪರೀಕ್ಷೆಯೂ ಬೇಕಾಗಲಿಲ್ಲ. ನಾನು ಡಿ ಅಂಡ್ ಸಿ ಬೇಕಾ ಅಂದು ಕೇಳಿದಾಗ, ನಕ್ಕುಬಿಟ್ಟಿದ್ದಳು.

ಮತ್ತೆ ಆರುತಿಂಗಳು ತನ್ನ ಪಾಡಿಗೆ ತಾನಿರುತ್ತಿದ್ದಳು. ಸಿಕ್ಕಾಪಟ್ಟೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಒಂದು ದಿನ ಅಂದೆ.

‘ನಿನಗೂ ನನಗೂ ಇಬ್ಬರಿಗೂ ಗೊತ್ತು. ಬೇಕಾದರೆ ನಾವು ಮತ್ತೆ ಪ್ರಯತ್ನ ಮಾಡಬಹುದು.’
ಒಂದು ಕ್ಷಣ ನನ್ನ ನೋಡಿದಳು. ‘ನಾನು ನಿರ್ಧರಿಸಿಯಾಗಿದೆ. ನನಗೆ ಮಗು ಬೇಡ. I do not want to bring work home. ದಿನ ಬೆಳಗಾದರೆ ಮಕ್ಕಳನ್ನು ಟೂಡಿಯಲ್ಲಿ, ಥ್ರೀಡಿಯಲ್ಲಿ ಮತ್ತು ನಿಜವಾಗಿ ನೋಡಿ ಸಾಕಾಗಿದೆ. ನನಗೆ ನನ್ನ ಮುಂದಿರೋ ಆಯ್ಕೆಗಳು ಗೊತ್ತು.  ಇಂಡಕ್ಷನ್, ಇನ್ ವಿಟ್ರೊ, ಎಂಬ್ರಿಯೊ ಟ್ರಾನ್ಸ್ ಫ಼ರ್, ಕೊನೆಗೆ ದತ್ತಕ. ಈ ಮಗು ಅನ್ನೋ ಒಂದು ಅಂಶವನ್ನು ನಮ್ಮ ಸಮೀಕರಣದಿಂದ ತೆಗೆದುಹಾಕೋಣವೇ. ಸುಖವಾಗಿರೋಕೆ ನಾವಿಬ್ಬರೂ ಒಬ್ಬರಿಗೊಬ್ಬರು ಸಾಲದಾ?’

ಅಷ್ಟೇ ಮಾತುಕತೆ ನಡೆದದ್ದು. ಮಗು ಬೇಕು ಅಂತ ನನಗನಿಸಿತ್ತೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ದಿನ ಬೆಳಗಾದರೆ ಮಕ್ಕಳೊಂದಿಗೆ ಕೆಲಸ ಮಾಡುವ ಸುಜ್ಜಿಗೆ ಮಕ್ಕಳು ಬೇಕು ಅಂತಲೇ ಅನ್ನಿಸ್ಸಿರಲಿಲ್ಲ.

ನಾಲ್ಕು ಬಾರಿ ಬೇರೆ ಬೇರೆ ನಾಯಿಮರಿಗಳನ್ನೂ, ಬಣ್ಣದ ಮೀನುಗಳನ್ನೂ, ಒಂದೆರಡು ಮೊಲಗಳನ್ನೂ, ಒಮ್ಮೆ ಒಂದು ಸಣ್ಣ ಉಡದಂತ ಹೆಸರು ಗೊತ್ತಿಲ್ಲದ ಪ್ರಾಣಿಯನ್ನೂ ಮನೆಗೆ ತಂದು ಸಾಕಲು ಪ್ರಯತ್ನಿಸಿದ್ದೆ.

ಮನೆಯ ಮುಂದೆ ಗುಲಾಬಿ, ಸ್ಫಟಿಕ, ಕಣಗಲೆ, ಕುಂಡದೊಳಗೆ ಬಾಳೆ, ಹಿಂದೆ ಕರಿಬೇವು, ತುಳಸಿ, ಸಣ್ಣ ಇಪ್ಪತ್ತು ಚದರದ ತೋಟದಲ್ಲಿ ಬದನೆ, ಸೌತೆ, ಕೋಸನ್ನೂ ಬೆಳೆದಿದ್ದೆ. ಬರೇ ಗಡಸು ಕೈಗಳ ಆರೈಕೆಯಲ್ಲಿ ಅವು ಸೊರಗಿದ್ದವು.

***

ನಾನು ಐಸಿಯುನ ಡೈರೆಕ್ಟರಾಗಿದ್ದೇನೆ. ಜೀವ ಉಳಿಸುವ ಜತೆಗೆ ಆಸ್ಪತ್ರೆಯ ಇನ್ನಿತರ ಪೇಪರುಗಳನ್ನೂ ಸಹಿ ಮಾಡುವ ಜವಾಬ್ದಾರಿ ನನ್ನದಾಗಿದೆ. ಸುಜ್ಜಿ ಮೊನ್ನೆ ತಾನೆ ಆರುಸಾವಿರ ಹೆರಿಗೆ ಮಾಡಿ ಮುಗಿಸಿದ್ದಾಳೆ. ಅಂಟಾರ್ಟಿಕವೊಂದು ಬಿಟ್ಟು ಇಡೀ ಭೂಮಿಯನ್ನು ನೋಡಿದ್ದೇವೆ. ರಾತ್ರಿ ಒಂದು ಹೊತ್ತು ಇಬ್ಬರೂ ಒಟ್ಟಿಗೆ ಕೂತು ಊಟ ಮಾಡುತ್ತೇವೆ. ಈ ಇಪ್ಪತ್ತು ವರ್ಷ ಕೆಲಸ ಮಾಡಿದ್ದರ ಅನುಕೂಲವೆಂದರೆ ಇಬ್ಬರೂ ರಾತ್ರಿ ಪಾಳಿಯಲ್ಲಿ ಕೆಲಸವನ್ನು ಮಾಡುವುದಿಲ್ಲ. ಆದಷ್ಟು ರಾತ್ರಿ ಒಟ್ಟಿಗೇ ಇರುತ್ತೇವೆ. ವೈನಿರದ ರಾತ್ರಿಗಳಲ್ಲಿ ಸೆಕ್ಸು, ಸೆಕ್ಸಿರದ ರಾತ್ರಿಗಳಲ್ಲಿ ವೈನು, ಎರಡೂ ಇಲ್ಲದಲ್ಲಿ ನಾನು ನಿದ್ದೆಯಲ್ಲಿ ಮತ್ತು ಸುಜ್ಜಿ ತನ್ನ ಪುಸ್ತಕಗಳಲ್ಲಿ ನಮ್ಮನಮ್ಮ ಖಾಸಗೀತನವನ್ನು ಕಂಡುಕೊಳ್ಳುತ್ತೇವೆ.

ಇಬ್ಬರೂ ಕೆಲಸವನ್ನು ಮನೆಗೆ ತಂದಿರಲಿಲ್ಲ.

***

ಸುಜ್ಜಿ ಮಾರನೆಯೆ ದಿನ ಏರ್ ಪೋರ್ಟಿಗೆ ಬಂದಿದ್ದಳು. ಒಂದು ತೋಳಿಲ್ಲದ ತಿಳಿಹಳದಿ ಬ್ಲೌಸು ಮತ್ತು ಜೀನ್ಸ್. ಮುಖಕ್ಕೆ ಯಾವ ಮೇಕಪ್ಪಿಲ್ಲ. ಕೂದಲಿಗೆ  ಮಾತ್ರ ಮೂರ್ನಾಲ್ಕು ಬಣ್ಣಗಳು.

ನನ್ನನ್ನು ನೋಡಿದ ತಕ್ಷಣ ‘ಮೊನ್ನೆ ರಾತ್ರಿ ಮನೆಯಲ್ಲಿ ಮಲಗಲಿಲ್ಲ. ನಿನ್ನೆ ರಾತ್ರಿ ಮಲಗಿದ್ದೆ. ರಾತಿಯೆಲ್ಲಾ ಒಂದೇ ಸಮನೆ ಕೂಗುತ್ತಾ ಇತ್ತು ಆ ಗುಬ್ಬಿ. ಪಾಪ ಹಸಿವೆಯೋ ಏನೋ ಅಂತ ಒಂದಿಷ್ಟು ಜೋಳದ ಕಾಳನ್ನು ಮುಂದೆ ಬಾಗಿಲ ಬಳಿ ಇಟ್ಟಿದ್ದೆ. ಒಂದು ಕಾಳನ್ನೂ ಮುಟ್ಟಿಲ್ಲ. ಎದುರಿನ ಮನೆಯವನು ಬಂದಿದ್ದ. ಇಷ್ಟು ಸಣ್ಣ ಪಕ್ಷೀಗೆ ಹೆದರುತ್ತೀರ ನೀವು ಅಂತ ತನ್ನ ಬೀಬೀ ಗನ್ನಲ್ಲಿ ಹೊಡೆದು ಉರುಳಿಸುತ್ತೀನಿ ಅಂದ. ನಾನು ಬಯ್ದು ಓಡಿಸಿದೆ. ನೀನು ಹೇಳಿದ ಹಾಗೆ ಇಡೀ ಬೀದಿಯಲ್ಲಿ ಎಲ್ಲರನ್ನೂ ಕೇಳಿಕೊಂಡು ಬಂದಿದ್ದೇನೆ. ಯಾರದೂ ಅಲ್ಲವಂತೆ. ಫ಼ೋಟೋ ತೆಗೆಯಲಾಗಲಿಲ್ಲ. ಫ಼ೋಟೋ ತೆಗೆದು ಹಾಕಿದ್ರೆ ಯಾರಾದ್ರೂ ಗುರುತು ಹಿಡೀತಿದ್ದರೋ ಏನೋ. ಇವತ್ತು ಕೌಂಟಿಯ ಆಫ಼ೀಸಿಗೆ ಫ಼ೋನು ಮಾಡಿದ್ದೆ. ಅವರು, ಅವರ ಅನಿಮಲ್ ಕನ್ಸರ್ವೇಟರ್ ನನ್ನು ಕಳಿಸುತ್ತಾರಂತೆ. ಆತ ಫ಼ೋನು ಮಾಡಿದ್ದ, ಕೈಗೆ ಸಿಗಲಿಲ್ಲ ಅಂದರೆ ಅವರೂ ಬೀಬೀ ಗನ್ನಲ್ಲಿ ನಿಧಾನಕ್ಕೆ ಹೊಡೀತಾರಂತೆ.’ ಒಮ್ಮೆಲೇ ಬಡಬಡಿಸಹತ್ತಿದಳು.
ನಾನೇನೂ ಮಾತಾಡಲಿಲ್ಲ.

`Please, for heaven’s sake, talk something. Do not pretend that I am the only one bothered by it’ ಎಂದಳು.

ನಾನು ‘ಸುಜ್ಜಿ ಅದೊಂದು ಯಾವುದೇ ತೊಂದರೆ ಕೊಡದ ಸಣ್ಣ ಹಕ್ಕಿ.’ ಅಂದೆ.

‘ನಾನು ಇನ್ನೊಂದು ಕ್ಷಣವೂ ಆ ಮನೆಯಲ್ಲಿರೋಕ್ಕಾಗೊಲ್ಲ. ನೀನೇನಾದರೂ ಮಾಡಲೇಬೇಕು’
ಏರ‍್ಪೋರ್ಟ್ನಿಂದ ‘ವಿಲ್ಲಾ ವೈದ್ಯ’ಕ್ಕೆ ಮುಕ್ಕಾಲುವಾಸಿಯೆಲ್ಲಾ ಹೈವೇಯೇ ಆದರೂ ಕೊನೆಯ ಐದು ಮೈಲಿ ಸಣ್ಣ ಸಣ್ಣ ರಸ್ತೆಯಲ್ಲಿ ಬರಬೇಕಿತ್ತು. ಒಂದಿಷ್ಟು ಜನ ಕರಿಯ ಹುಡುಗರು ಬ್ಯಾಸ್ಕೆಟ್ ಬಾಲ್ ಅಡುತ್ತಿದ್ದರು. ದೂರದಿಂದಲೇ ಇದನ್ನು ಗಮನಿಸಿದ ಸುಜನಾ ಕಾರನ್ನು ಮತ್ತೆ ಹೈವೇಗೆ ತೆಗೆದುಕೊಂಡು ಹೋಗಿ ಬಳಸುದಾರಿಯಲ್ಲಿ ಮನೆ ತಲುಪಿದಳು.

‘ಒಂದು ವಿಷಯ ಗಮನಿಸಿದ್ದೀಯಾ? ಮದುವೆಯಾಗಿರುವ ಇಷ್ಟು ವರ್ಷದಲ್ಲಿ ನಾನು ಮನೆಯಲ್ಲಿ ನಿನ್ನನ್ನು ಬಿಟ್ಟರೆ, ಅತಿ ಹೆಚ್ಚು ಸಮಯ ಕಳೆದಿರುವ ಜೀವವಿರುವ ವಸ್ತುವೆಂದರೆ ಈ ಗುಬ್ಬಿ’ ಅಂದಳು, ಕಣ್ಣು ತುಂಬಿ ಬಂದಂತಿತ್ತು.

ಸುಮ್ಮನೇ ತೋಳನ್ನು ಅದುಮಿದೆ.

ಮನೆಯ ಸುತ್ತಲಿದ್ದ ಒಂದು ಮೈಲಿಯಲ್ಲಿದ್ದ ಮರಗಳ ಮೇಲೆಲ್ಲ ‘ವಿಲ್ಲಾ ವೈದ್ಯ’ದ ಪಕ್ಷಿಯ ಜಾಹೀರಾತಿತ್ತು. ಪ್ರತಿಯೊಬ್ಬರ ಮನೆಯ ಅಂಚೆ ಡಬ್ಬಗಳ ಮೇಲೆ, ರಸ್ತೆಯ ತಿರುವಿನಲ್ಲಿ ಎಲ್ಲೆಡೆ `Bird Missing???’ ಅನ್ನುವ ದೊಡ್ದ ದೊಡ್ಡ ಅಕ್ಷರಗಳೇ ಕಾಣಿಸುತ್ತಿದ್ದವು.

ಮನೆಗೆ ಬರುವಷ್ಟರಲ್ಲಿ ಮನೆಯ ಮುಂದೆ ಕೌಂಟಿಯ ಒಂದು ಟ್ರಕ್ಕು ನಿಂತಿತ್ತು.
‘ಹಲೋ’ ಎಂದು ಸ್ವಾಗತಿಸಿದ, ಅನಿಮಲ್ ಕನ್ಸರ್ವೇಟರ್.

ಸುಜ್ಜಿ ಈಗಾಗಲೇ ಪಕ್ಷಿಯ ಬಗ್ಗೆ ವಿವರಗಳನ್ನು ಕೊಟ್ಟಿದ್ದಳು. ಮನೆಯಲ್ಲಿ ಇರುವ ಪಕ್ಷಿ ಬದುಕಿಯೇ ಇದೆಯೆಂದು ಇನ್ನೊಮ್ಮೆ ಖಚಿತ ಪಡಿಸಿಕೊಂಡ. ಸುಜ್ಜೀಗೆ ಯಾವ ರೀತಿಯೂ ಕೆಮ್ಮು, ಜ್ವರ ಇಲ್ಲವೇ ಎದೂ ಗ್ಯಾರಂಟಿ ಮಾಡಿಕೊಂಡು ಒಂದೆರಡು ಕಾಗದದ ಮೇಲೆ ಸಹಿ ಮಾಡಿಸಿಕೊಂಡು ನನ್ನತ್ತ ನೋಡಿ ‘ಬರ್ಡ್ ಫ಼್ಲು’ ಅಂದು ನಕ್ಕ. ಸುಜ್ಜಿಯ ಕಡೆ ನೋಡುತ್ತಾ ‘ಆದಷ್ಟು  ಆ ಪಕ್ಷಿಯನ್ನು ಕಾಪಾಡಲಿಕ್ಕೇ ಪ್ರಯತ್ನ ಮಾಡುತ್ತಾರೆಂದೂ, ಅಕಸ್ಮಾತ್ ಅದು ‘ಮಿಸ್‌ಬಿಹೇವ್’ ಮಾಡಿದರೆ, ತಾವು ಅದನ್ನು ಶೂಟ್ ಮಾಡಬೇಕಾಗುವುದೆಂದೂ’ ಹೇಳಿದರು. ಅವರ ಶಾರ್ಪ್ ಶೂಟರ‍್ಗಳು ತಮ್ಮ ಕಣ್ಣಿಗೊಂದು ದೊಡ್ಡ ರಕ್ಷಣಾಕವಚವಂತಿದ್ದ ದೊಡ್ಡ ಕನ್ನಡಕವನ್ನೂ ಮತ್ತು ಬಾಹ್ಯಾಕಾಶಯಾತ್ರಿಗಳಂತೆ ಕಾಣುತ್ತಿದ್ದ ಹೊರವಸ್ತ್ರಗಳನ್ನು ಹಾಕಿಕೊಂಡಿದ್ದರು. ಮನೆಯ ಬೀಗ ತೆಗೆಯಲು ಹೇಳಿ ನನ್ನನ್ನು ಹೊರಗೇ ನಿಲ್ಲಲು ಹೇಳಿ, ಒಳಗೆ ಹೋದರು.

ನಾನು ಸುಜ್ಜಿ ಕಾರಲ್ಲೇ ಕೂತಿದ್ದೆವು.
ಅದರ ಹಿಂದೆಯೇ `Paws and Claws Humane society’ಯವರ ಒಂದು ವ್ಯಾನು ಬಂದು ನಿಂತಿತು. ನಾನು ಸುಜ್ಜಿಯ ಮುಖ ನೋಡಿದೆ. ‘ನನ್ನ ಕೊಲೀಗ್ ಹೇಳಿದ್ದಳು. ಇಂತಹದೊಂದು ಖಾಸಗೀ ಕಂಪೆನಿಯಿದೆ, ಊರಿನಲ್ಲಿ. ಅವರು ಗುಬ್ಬಿಗೆ ಯಾವುದೇ ಹಾನಿಯಿಲ್ಲದಂತೆ ಕಾಪಾಡುತ್ತಾರೆ, ಅಂತ’ ಅಂದಳು.

ಯಾವುದೋ ಫ಼ಾರ್ಚ್ಯೂನ್ ಕಂಪೆನಿಯವರ ಸೆಕ್ರೆಟರಿಯ ಹಾಗೆ ಡ್ರೆಸ್ ಸೂಟು ಮತ್ತು ತಂಪು ಕನ್ನಡಕ ಧರಿಸಿದ್ದ, ಬೆಳ್ಳಗೆ ಮತ್ತು ಕೆಂಪಗಿದ್ದ ಒಬ್ಬಳು ನಗುತ್ತಾ ಕೆಳಗಿಳಿದು ಬಂದು ಕೈಕುಲುಕಿದಳು. ಊರಿನ ಸರಕಾರಿ ವ್ಯಾನು ಕೂಡ ಮನೆಯ ಮುಂದೆ ಇದ್ದದ್ದು ನೋಡಿ ಅವಳಿಗೆ ಕೊಂಚ ಗೊಂದಲವಾದಂತನಿಸಿತು. ನನ್ನ ಮುಖ ನೋಡಿದಳು. ನಾನು ಸುಜ್ಜಿಯ ಮುಖ ನೋಡಿದೆ.

‘ಅವರು ಬರುತ್ತಾರೆ ಅಂತ ನನಗ್ಗೊತ್ತಿರಲಿಲ್ಲ’ ಅಂದಳು, ಸುಜ್ಜಿ, ಆ ಸೂಟಿನವಳನ್ನು ನೋಡಿ. ‘ನಿಮಗೆ ನಮ್ಮ ಸೇವೆ ಬೇಕಿಲ್ಲದಿದ್ದರೆ, ನಮಗೆ ಬೇಜಾರೇನಿಲ್ಲ. ಇಲ್ಲಿ ಒಂದು ಸಹಿ ಮಾಡಿ. ಕೌಂಟಿಯವರಿಗೆ ಇದು ಕೆಲಸ. ನಮಗೆ ಇದು ಪ್ರೀತಿ. ಅವರು ಹಕ್ಕಿಯನ್ನು ಕೊಲ್ಲೋದಿಲ್ಲ ಅಂತ ಹೇಳಿದಾರಲ್ಲ. ನನಗೂ ಗೊತ್ತು. ಆದರೆ ಬೀಬೀ ಗನ್ನಿನಲ್ಲಿ ಯಾವಾಗಲಾದರೂ ಹೊಡೆತ ತಿಂದಿದ್ದೀರಾ’ ಅಂದು ಕೇಳಿದಳು.

ಸುಜ್ಜಿ ಸುಮ್ಮನೇ ತಲೆಯಾಡಿಸುತ್ತಾ ಸಹಿ ಹಾಕುತ್ತಿದ್ದಳು. ‘ಎರಡು ವಾರದಲ್ಲಿ ಬಿಲ್ ಕಳಿಸುತ್ತೇವೆ’ ಎಂದು ಆ ಸೂಟಿನವಳು ತಮ್ಮ ಪಾಸ್ ಮತ್ತು ಕ್ಲಾಸ್ ನ ವ್ಯಾನು ಹತ್ತಿದಳು.

ಒಳಗೆ ಹೋಗಿದ್ದ ಸರಕಾರೀ ಕನ್ಸರ್ವೇಟರಿನ ಶಾರ್ಪ್ ಶೂಟರುಗಳು ಹೊರಗೆ ಬಂದು ‘ನೆಗಟೀವ್’ ಇಡೀ ಮನೆಯನ್ನೆಲ್ಲಾ ಹುಡುಕಿದ್ದೀವಿ. ಎಲ್ಲೂ ಯಾವ ಪಕ್ಷಿಯೂ ಇಲ್ಲ. ಫ಼ಾಲ್ಸ್ ಅಲಾರ್ಮ್. ಮತ್ತೆ ಹುಡುಕುವ ಅವಶ್ಯಕತೆಯಿಲ್ಲ. ಹೊರಗೆ ಬರಬಹುದು’ ಎಂದು ತನ್ನ ವಾಕಿಟಾಕಿಯಲ್ಲಿ ಹೇಳಿದ.

ಆಕಡೆಯಿಂದ ‘ರಾಜರ್ ದಟ್’ ಅನ್ನುವ ಧ್ವನಿ ಕೇಳಿಸಿತು.

ಅನಿಮಲ್ ಕನ್ಸರ್ವೇಟರ್ ‘ಇಡೀ ಮನೆಯನ್ನೆಲ್ಲಾ ಹುಡುಕಿದ್ದೀವಿ. ಬೇಸ್‌ಮೆಂಟು, ಕ್ಲಾಸೆಟ್ಟು, ನಿಮ್ಮ ಅಡಿಗೆಮನೆಯ ಕ್ಯಾಬಿನೆಟ್ಟು, ಎಲ್ಲ ಬೆಡ್ ರೂಮುಗಳು, ಟಾಯ್ ಲೆಟ್ಟು ಎಲ್ಲೂ ಯಾವ ಹಕ್ಕಿಯಿದ್ದ ಗುರುತು ಕೂಡ ಇಲ್ಲ. ಹಕ್ಕಿ ನಿಮ್ಮ ಟಾಯ್ ಲೆಟ್ಟಿನ ಬೌಲಿನೊಳಗೆ ಕೂತಿದ್ದಾಗ ಏನಾದರೂ ಫ಼್ಲಶ್ ಮಾಡಿಬಿಟ್ಟರೋ ಏನು’ ಅಂದ, ತನ್ನ ಹಾಸ್ಯಪ್ರಜ್ಞೆಯನ್ನು ತೋರಿಸುತ್ತಾ.
‘ಮನೆಯೊಳಗೇ ಇತ್ತು. ನಮ್ಮ ಹಾಸಿಗೆಯ ಮಧ್ಯೆ ನೋಡಿದ್ದೀರಾ. ನಮ್ಮ ಗಡಿಯಾರ ತುಂಬಾ ದೊಡ್ಡದ್ದು. ಅದರಲ್ಲೇನಾದರೂ ಸಿಕ್ಕಿಹಾಕಿಕೊಂಡರೆ? ನಲ್ಲಿಯ ಗಾರ್ಬೇಜ್ ಡಿಸ್ ಪೋಸರ‍್ನಲ್ಲಿ ಸಿಕ್ಕಿಹಾಕಿಕೊಂಡರೆ, ನಿಜವಾಗಿಯೂ ಎಲ್ಲ ಕಡೆ ನೋಡಿದಿರಾ. ಬೇಕಾದರೆ, ಇನ್ನೊಮ್ಮೆ ನೋಡಿ. ಪ್ಲೀಸ್?’

‘ಮೇಡಮ್.. ಯಾವುದೋ ಪುಸ್ತಕದಲ್ಲಿ ಓದಿದ್ದೆ. ನಮ್ಮ ನಗರಾನ ತಲೆಕೆಳಗು ಮಾಡಿ ಅಲ್ಲಾಡಿಸಿದರೆ, ಪ್ರತಿಯೊಬ್ಬರ ಮನೆಯಿಂದ ಎಂತೆಂತ ಪ್ರಾಣಿಗಳು ಹೊರಬೀಳಬಹುದಂತೆ ಗೊತ್ತಾ, ಹಾವುಗಳು, ಮಂಗೂಸ್, ಕಪಿ, ಉಡ, ಒರಂಗೆಟಾನ್, ಸಣ್ಣ ಹುಲಿ- ನಮ್ಮ ಜನಗಳ ಮಾನಸಿಕ ಆರೋಗ್ಯ ಸ್ತಿಮಿತದಲ್ಲಿ..’ ಮಾತು ಪೂರಾ ಮುಗಿಸಲಿಲ್ಲ.
ಬಾಯಿ ಬಿಟ್ಟುಕೊಂಡು ನೋಡುತ್ತಲೇ ಇದ್ದ.

ಒಂದು ಸಣ್ಣ ಕಂದು ಗುಬ್ಬಿ, ಹೌದು ಗುಬ್ಬಿ, ‘ಚಿಂವ್ ಚಿಂವ್’ ಎನ್ನುತ್ತಾ ವಿಲ್ಲಾ ವೈದ್ಯದ ತೆಗೆದಿದ್ದ ಬಾಗಿಲಿನಿಂದ ಕುಪ್ಪಳಿಸುತ್ತಾ ಹಾರಿ ಹೊರಬಂತು. ನಾನು ನೋಡುತ್ತಲೇ ಇದ್ದೆ. ಶಾರ್ಪ್ ಶೂಟರ‍್ಗಳು ತಮ್ಮ ಬೀಬೀ ಗನ್ನುಗಳನ್ನು ತೆಗೆದಿಟ್ಟು ಸಣ್ಣ ಬಲೆಯಂತದ್ದನ್ನು ತೆಗೆದರು. ಅತ್ತಲಿಂದ ಇತ್ತಲಿಗೆ, ಇತ್ತಲಿಂದ ಅತ್ತಲಿಗೆ ಹಾರುತ್ತಾ, ಒಂದು ದೊಡ್ಡ ಕುಪ್ಪಳಿಕೆಯಿಂದ ಹಾರಿದ್ದೇ ಸುಜ್ಜಿಯ ತಲೆಯನ್ನು ಸವರಿಕೊಂಡಂತೆಯೇ ಎಲ್ಲರಿಗೂ ಮೋಸ ಮಾಡಿದಂತೆ ಯಾರಿಗೂ ಸಿಗದೇ ಹಾರಿಹೋಯಿತು.

ಜೋರಾಗಿ ಕಿರುಚಿದ ಸುಜ್ಜಿ ನನ್ನನ್ನು ತಬ್ಬಿಕೊಂಡು ಇಡೀ ಬೀದಿಯೇ ಹಾರಿಹೋಗುವ ಹಾಗೆ ಅಳತೊಡಗಿದಳು. ನಾನು ಅವಳನ್ನು ಒಳಕರೆದುಕೊಂಡುಬಂದೆ. ಸರಕಾರದವರು ಏನೂ ಮಾತಿಲ್ಲದೇ ವಾಪಸ್ಸು ಹೋಗಿದ್ದರು.

*** 

ಮನೆಯ ಒಳಗೆ ಎರಡು ಮೆಕ್ಕೆಯ ಜೋಳಗಳು ನನ್ನನ್ನೂ ಸುಜನಳನ್ನೂ ಸ್ವಾಗತಿಸುತ್ತಿದ್ದವು. ಒಂದು ಗಾಜಿನ ಲೋಟದಲ್ಲಿ ನೀರನ್ನೂ, ಒಂದು ದಿಂಬನ್ನೂ ಮನೆಯ ಬಾಗಿಲ ಹಿಂದಿದ್ದ ಶ್ಯಾಂಡಲಿಯರ‍್ನ ಕೆಳಗಿಟ್ಟಿದ್ದಳು, ಸುಜ್ಜಿ. ಒಳಗೆ ಅಳುತ್ತಲೇ  ಬಂದಿದ್ದರಿಂದ ನಾನು ಏನೂ ಮಾತಾಡಲಿಲ್ಲ.

ಅಳು ಮುಗಿದಿತ್ತು. ಸುಜ್ಜಿ ನನ್ನ ಬಿಡದಹಾಗೆ ತಬ್ಬಿಕೊಂಡು ಮಲಗಿದ್ದಳು. ಮನೆಯನ್ನು ಇಬ್ಬರೂ ಸೇರಿ ಪೂರಾ ಸ್ವಚ್ಛ ಮಾಡಿದ್ದೆವು.
ಅಂದು ರಾತ್ರಿ ವೈನು ಬೇಡವೆಂದಿದ್ದಳು.
ಮಲಗಿದ್ದ ಹಾಸಿಗೆ ಕಿರ್ರೆಂದಿತು.
`Arent you ovulating.. like,, right now?’ ಅಂದೆ, ಸುಜ್ಜಿಯ ಈ ವಿಷಯಗಳ ಬಗೆಗಿನ ನನ್ನ ಅರಿವು ನನಗೇ ಕೆಲವೊಮ್ಮೆ ಆಶ್ಚರ್ಯವನ್ನುಂಟುಮಾಡುತ್ತಿತ್ತು.
`Shut up’ ಅಂದಳು.
ನಲವತ್ತನಾಕಕ್ಕೆ ಫಸಲಾದರೆ, ಕುಡಿಯ ಕಾಳು ಗಟ್ಟಿಯೋ ಜೊಳ್ಳೋ ಅನ್ನುವ ವಿಷಯ ನನಗಿಂತ ಸುಜ್ಜಿಗೇ ಚೆನ್ನ್ನಾಗಿ ಗೊತ್ತಿದೆ ಅನ್ನಿಸಿತು.