ನಾನು, ಪ್ರಕಾಶ್ ಹಾಗೂ ಮಕ್ಕಳು ಸೇರಿ, ಪ್ರತಿಯೊಂದು ಹಬ್ಬಗಳಿಗೆಂದು ನಮ್ಮೂರು ಕಡಮೆಗೆ ಹೋದಾಗಲೆಲ್ಲ ಸಂಜೆಯ ವೇಳೆ ತಪ್ಪದೇ ಗೋಕರ್ಣಕ್ಕೆ ಹೋಗುವ ರೂಢಿಯಿರಿಸಿಕೊಂಡಿದ್ದೆವು. ಆಗ ನಮ್ಮ ಅತ್ತೆಯವರು ‘ಹಾಗೇ ದೇವಸ್ಥಾನಕ್ಕೂ ಸ್ವಲ್ಪ ಹೋಗಿಬನ್ರೋ’ ಎಂದು ಕೊಂಚ ಗದರುವ ಸ್ವರದಲ್ಲೇ ಹೇಳುವರು. ಆಗೆಲ್ಲ ಪ್ರಕಾಶ್‌ನ ತಮ್ಮಂದಿರು ಮುಸಿ ಮುಸಿ ನಗುತ್ತಿದ್ದರು. ಅವರಲ್ಲಿ ಒಬ್ಬ ತಮ್ಮನಂತೂ ದೊಡ್ಡ ಜೋಕು ಮಾಡುವವನಂತೆ, ಅವಸರವಸರವಾಗಿ ತೆಂಗಿನಕಾಯಿ ಹಣ್ಣು ಹೂ ಕಡ್ಡಿ ಕರ್ಪೂರ ಹುಡುಕಿ ತಂದು ಒಂದು ಚೀಲದಲ್ಲಿ ಹಾಕಿ ನಮ್ಮ ಕೈಯಲ್ಲಿ ಹಿಡಿಸಲು ಮುಂದಾಗುತ್ತಿದ್ದ. ನಾವು ಗೋಕರ್ಣಕ್ಕೆ ಹೋಗುತ್ತಿದ್ದುದೇ ಗೌರೀಶರ ಸನ್ನಿಧಿಗೆ ಮತ್ತು ಕಡಲ ದಂಡೆಯಲ್ಲಿ ಸೂರ್ಯಾಸ್ತ ನೋಡಲು ಎಂಬ ಸಂಗತಿ ಮನೆಯವರಿಗೆಲ್ಲ ಮೊದಲೇ ಗೊತ್ತಿರುತ್ತಿತ್ತು. ತನ್ನ ಪ್ರಚಂಡ ಬಂಡಾಯವು ತಮ್ಮಂದಿರ ಕಣ್ಣಿನಲ್ಲಿ ಹೀಗೆ ನಗೆಪಾಟಲಾದ ಆ ಸ್ಥಿತಿಯಲ್ಲಿ ಪ್ರಕಾಶ್‌ನ ಕಣ್ಣು ಇದ್ದಲ್ಲೇ ಕೆಂಪಗಾಗುವದು. ಈ ದುರ್ವಾಸ ಮುನಿಯ ಅವಸ್ಥೆಯನ್ನು ಕಂಡು ನಾನು ಮನಸ್ಸಲ್ಲೇ ನಗುತ್ತಿದ್ದೆ. ಪ್ರತಿಸಲ ಗೋಕರ್ಣಕ್ಕೆ ಹೊರಟಾಗಲೂ ಇಂಥದೊಂದು ತಮಾಷೆ ಮನೆಯಲ್ಲಿ ನಡೆಯುತ್ತಿತ್ತು. ನಮ್ಮ ಪ್ರಕಾಶ್, ಗೋಕರ್ಣದ ಭದ್ರಕಾಳಿ ಜ್ಯೂನಿಯರ್ ಕಾಲೇಜಿನಲ್ಲಿ ಗೌರೀಶರ ಶಿಷ್ಯರು. ಪ್ರಕಾಶನ ಇಂಥ ದುರ್ಗತಿಯನ್ನು ನಾನೊಂದು ದಿನ ಗೌರೀಶರ ಬಳಿಯೂ ಹೇಳಿದೆ. ಅದಕ್ಕೆ ಪೂರಕವಾಗಿ ಅವರು ತಮ್ಮದೇ ಸ್ವಂತ ಅನುಭವವೊಂದನ್ನು ನೆನಪಿಸಿದ್ದರು. ಬಹಳ ಹಿಂದೆ ಗೌರೀಶರೊಮ್ಮೆ ಯಾರದೋ ವ್ಯಾಜ್ಯದ ವಹಿವಾಟಿನಲ್ಲಿ ಸಾಕ್ಷಿ ಪುರುಷನಾಗಿ ಕೋರ್ಟಿನ ಕಟಕಟೆಯಲ್ಲಿ ನಿಲ್ಲಬೇಕಾಯಿತಂತೆ. ಅಲ್ಲಿಯ ಕರಣಿಕರು ‘ದೇವರಾಣೆ ಮಾಡಿ ಸತ್ಯ ಹೇಳುತ್ತೇನೆಂದು ಪ್ರಮಾಣ ತೆಗೆದುಕೊಳ್ಳಿ’ ಅಂದರಂತೆ. ಸಂದಿಗ್ಧದಲ್ಲಿ ಸಿಲುಕಿದ ಗೌರೀಶರು ‘ಸತ್ಯದ ಆಣೆಯಾಗಿ ಸತ್ಯವನ್ನೇ ಹೇಳುತ್ತೇನೆ, ದೇವರ ಆಣೆ ಮಾಡಲು ನಾನು ದೇವರನ್ನು ನಂಬುವುದಿಲ್ಲ, ಆದರೆ ಸತ್ಯವನ್ನು ನಂಬುತ್ತೇನೆ ಒಪ್ಪಿಸಿಕೊಳ್ಳಿ’ ಅಂದರಂತೆ. ಹೀಗೆ ತಾನು ನಂಬಿದ್ದನ್ನು ತನ್ನ ಮಟ್ಟಿಗಾದರೂ ಪ್ರತಿಪಾದಿಸುವ ಗಂಡೆದೆ ಸಹಜವಾಗಿ ಬರಬೇಕು ಎಂದು ಗೌರೀಶರು ಪ್ರಕಾಶ್‌ನ ಮುಖವನ್ನು ಓರೆಗಣ್ಣಿನಿಂದ ನೋಡುತ್ತ ಹೇಳಿದ್ದರು.

ನಾವು ದೇವರಿಂದ ಗಳಿಸಿಕೊಳ್ಳಲಾರದ್ದನ್ನು, ಹಿರಿಯರೂ ತಂದೆ ಸಮಾನರೂ ಆದ ಗೌರೀಶರಿಂದ ಪಡೆದಿದ್ದೇವೆ ಎಂಬುದಕ್ಕೆ ಈ ಮೇಲಿನ ಪ್ರಸಂಗ ಹೇಳಿದೆ. ಗೌರೀಶರ ಮನೆ ಇಂದಿಗೂ ನಮ್ಮ ಪಾಲಿಗೆ ಒಂದು ಮಧುರ ಅನುಭೂತಿಯ ಮಂದಿರವೇ ಸರಿ. ‘ಮಂದಿ ನಮ್ಮೊಡನೆ ಹೇಗೆ ನಡೆದುಕೊಳ್ಳಬೇಕೆಂದು ನಮ್ಮ ಅಪೇಕ್ಷೆಯೋ ಅದರಂತೆ ನಾವು ಮಂದಿಯೊಂದಿಗೆ ನಡೆದುಕೊಳ್ಳಬೇಕು’ ಎನ್ನುತ್ತಿದ್ದ ಗೌರೀಶರ ಆಳವಾದ ಅನುಭವಶೀಲತೆ ಯಾವ ಸೂಫಿ ಸಂತನಿಗೂ ಕಡಿಮೆಯಿರಲಿಲ್ಲ. ಅವರ ಸ್ವಭಾವದಲ್ಲಿ ಎಂದಿಗೂ ಮೂರ್ತಿಭಂಜಕ ಪ್ರವೃತ್ತಿಯಿರಲಿಲ್ಲ. ‘ನಮ್ಮ ಮಟ್ಟಿಗೆ ನಾವು ಸರಿಯಿದ್ದರಾಯ್ತು. ಸರಿ ಕಂಡವರು ಬೇಕಿದ್ದರೆ ಅದನ್ನು ಅನುಕರಿಸಬಹುದು’ ಎನ್ನುತ್ತಿದ್ದ ಗೌರೀಶರು ಎಂದೂ ತಮ್ಮ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರಿದವರಲ್ಲ. ಸಾಹಿತ್ಯದಿಂದ ಸಮಾಜ ಸುಧಾರಣೆಯಾಗುತ್ತದೆಯೇ? ಎಂಬ ನಮ್ಮದೊಂದು ಸಣ್ಣ ಅನುಮಾನಕ್ಕೆ ಗೌರೀಶರು ಮೆಲುದನಿಯಲ್ಲಿ ‘ಕಿಟಕಿಯಿಂದ ಗಾಳಿ ಬೀಸಿದಾಗ ಗೋಡೆಗೆ ಹಚ್ಚಿದ ಭೂಪಟ ಹಾರಾಡ್ತದೆ, ಹಾಗಂತ ಭೂಕಂಪ ಆಗುತ್ತದೆಯೇ?’ ಹೀಗೆನ್ನುತ್ತ ನಕ್ಕು ಬಿಟ್ಟಿದ್ದರು.

ಅರವಿಂದ ನಾಡಕರ್ಣಿ ಮತ್ತು ಚಿತ್ತಾಲರ ಜೊತೆ ಗೌರೀಶರು೧೯೯೦ ರ ಸುಮಾರಿಗೆ ಇರಬಹುದು, ಗೌರೀಶರ ಸಮಗ್ರ ಸಾಹಿತ್ಯದ ಮೊದಲ ಸಂಪುಟದ ಬಿಡುಗಡೆ ಕಾರ್ಯಕ್ರಮದಲ್ಲಿ ಅನಿಸುತ್ತದೆ. ಗೌರೀಶರ ಪರಿಚಯವಾಗಿ ನನಗಿನ್ನೂ ಹೊಸದು. ಗೌರೀಶರ ಅಮೋಘ ಭಾಷಣದ ಕೌಶಲ್ಯ ನಾನು ಪ್ರಥಮವಾಗಿ ಆಲಿಸಿದ್ದು ಆಗಲೇ. ಅಂದು ಅವರು ವೇದಿಕೆಯಲ್ಲಿ ಮಾತಾಡುತ್ತ ‘ನಮ್ಮ ಸಂಸ್ಕೃತಿ ಏಕರೂಪವಾಗಿಲ್ಲ, ಅದೊಂದು ನೂರಾರು ಚಿಂದಿಗಳಿಂದ ಮಕ್ಕಳು ಕಟ್ಟಿದ ಚೆಂಡಿನಂತೆ, ಆ ಚೆಂಡಿನಿಂದ ಚಿಂದಿಗಳನ್ನು ಬೇರೆ ಮಾಡಿದರೆ ಚೆಂಡು ಉಳಿಯಲಿಕ್ಕಿಲ್ಲ, ಆದರೆ ಒಳ್ಳೆಯದೆಲ್ಲವೂ ಮಾನವ ಸಂಸ್ಕೃತಿಯದು’ ಅಂದಾಗ ಒಮ್ಮೆಲೇ ಸಭಾ ಕಂಪನ ಉಂಟಾದದ್ದು ಇಂದಿಗೂ ನನಗೆ ನೆನಪಿದೆ. ಗೌರೀಶರ ಭಾಷಣಗಳೆಂದರೇ ಹಾಗೆ. ನಾವು ಕೇಳರಿಯದ ಹೊಸ ಶಬ್ದ ಸಂಪತ್ತಾಗಲೀ ಭೌದ್ಧಿಕ ಘರ್ಷಣೆಯ ಹೊಸ ಹೊಂಬೆಳಕಾಗಲೀ ಶೋತೃಗಳಿಗೆ ದೊರೆತಿರಲೇ ಬೇಕು. ಅವರ ಮಾತಲ್ಲಿ ಅವರ ಬರಹಗಳಿಗಿಂತಲೂ ಭಿನ್ನವಾದ ಚಲನೆಯಿರುವುದು ಅಚ್ಚರಿಮೂಡಿಸುವಂಥದು. ಒಂದು ವಿಷಯವನ್ನು ಬಿಡಿಸುವ ಮಾತಿನ ಸುಲಲಿತ ವೈಖರಿ, ಪದಗಳನ್ನು ಒಂದರ ಹಿಂದೊಂದರಂತೆ ಹೂಮಾಲೆ ಪೋಣಿಸುವಂತೆ ಜೋಡಿಸುವ ಕಲೆ, ಗೌರೀಶರಿಗೆ ಅವರ ಅಗಾಧ ಅಧ್ಯಯನಶೀಲತೆಯಿಂದಲೇ ಒದಗಿ, ಒಲಿದು ಬರುತ್ತಿತ್ತು ಅನಿಸುತ್ತದೆ. ಈಗಾಗಲೇ ರೂಢಿಗತವಾಗಿದ್ದ ಚರ್ವಿತ ಚರ್ವಣ ಮಾತನ್ನು ಅವರು ಎಂದೂ ಬಳಸುತ್ತಲೇ ಇರಲಿಲ್ಲ. ಶಬ್ದವನ್ನು ಒಡೆದು ಮಾತಾಡುವ, ವಾಕ್ಯವನ್ನು ತಿರುವು ಮುರುವಾಗಿ ಹೆಣೆದು ಚಿಕಿತ್ಸೆಗೊಳಪಡಿಸಿ, ಅದರ ಅರ್ಥ ಮತ್ತು ಭಾವಗಳ ಜೊತೆ ಸರಸವಾಡುವ ಈ ಅಪೂರ್ವ ಕಲೆ, ನನಗೆ ತಿಳಿದಂತೆ ನಮ್ಮ ಜಿಲ್ಲೆಯಲ್ಲಿ ಗೌರೀಶರೊಬ್ಬರಿಗೇ ಸಿದ್ಧಿಸಿತ್ತು. ಒಂದೇ ಸಂಗತಿಯನ್ನು ಇನ್ನೊಮ್ಮೆ ಕೇಳಿದ್ದೇ ಆದರೆ ಬೇರೆಯದೇ ಶಬ್ದಗಾರುಡಿ ನಿರ್ಮಿಸಿರುತ್ತಿದ್ದರು. ಪ್ರತಿ ಸರ್ತಿ ಅವರನ್ನು ಭೇಟಿಯಾದಾಗಲೂ ನಮ್ಮ ವಿವೇಚನೆಗೆ ಮೀರಿದ ಹಲವು ಸಂಗತಿಗಳು ಸತ್ಯಗಳು ನಮಗೆ ನಿಲುಕಿರುತ್ತಿತ್ತು. ಇದೀಗ ಆನುದಾದಾ(ಜಯಂತ)ನ ಬಳಿ ಮಾತಾಡಿದಾಗಲೂ ಹಾಗೆಯೇ ಅನಿಸುವುದುಂಟು.

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಗೌರೀಶರ ಬರಹದ ವೈಶಾಲ್ಯ ವೈವಿಧ್ಯತೆ ಮತ್ತು ವಿಶಿಷ್ಟತೆ. ಈ ದಟ್ಟ ಕಾಡಿನಲ್ಲಿ ಒಂದಿಡೀ ಜಗತ್ತು ಓದುಗರಿಗೆ ದೊರೆಯುತ್ತದೆ. ರಾಘವೇಂದ್ರ ಪ್ರಕಾಶನದಿಂದ ಹೊರಬಂದ ಗೌರೀಶರ ಸಮಗ್ರ ಹತ್ತು ಸಂಪುಟಗಳನ್ನು ಹೊರಳಿಸಿ ಹಾಕಿದರೆ ಮತ್ತು ಇನ್ನೂ ಹತ್ತು ಸಂಪುಟಕ್ಕಾಗುವಷ್ಟಿದ್ದ ಅವರ ಬಿಡಿ ಬರಹಗಳನ್ನು ನೆನೆದರೆ ಅಂಥ ಅಚ್ಚರಿಯೊಂದು ನಮ್ಮನ್ನು ಎಚ್ಚರಿಸುತ್ತದೆ. ಇಂಥ ವಿಫುಲ ಬರವಣಿಗೆಯ ಹಿಂದಿರುವ ಗೌರೀಶರ ಮನಸ್ಸು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿವ ಸೂಕ್ಷ್ಮಗ್ರಾಹೀ ಸಂವೇದನೆಯಿಂದ ಸಂಪನ್ನವಾಗಿತ್ತು ಅನಿಸುತ್ತದೆ. ಹೊಸ ಯೋಚನೆ ಹೊಸ ಚಿಂತನೆ ಹೊಸ ಅರಿವು ಹೊಸ ತಿಳಿವು ಇದು ಗೌರೀಶರ ಬರಹ ಹಾಗೂ ಮಾತಿನ ಅಪ್ಪಟ ಶೈಲಿ. ಅವರಿಗೆ ಈ ಜಾತಿ ವ್ಯವಸ್ಥೆಯ ಕುರಿತು ತೀವ್ರ ಆಕ್ರೋಶವಿತ್ತು. ಗೋಕರ್ಣದಂಥ ಸಂಪೂರ್ಣ ವೈದಿಕ ಪ್ರಪಂಚದಲ್ಲಿದ್ದೂ ಅವರು ತಮ್ಮ ನಿರ್ಭಿಡೆಯ ವಿಚಾರವಾದವನ್ನು ಪ್ರತಿಪಾದಿಸುತ್ತಲೇ ಬಂದವರು. ‘ಇಲ್ಲಿಯ ಭಕ್ತಿ ನಿಜವಾದದ್ದಲ್ಲ, ಮಾರ್ಕೆಟಿಂಗ್ ಭಕ್ತಿಯಿದು’ ಎಂದು ಯಾವಾಗಲೂ ಅನ್ನುತ್ತಿದ್ದರು.

ನಾನು ಈ ಹಿಂದೆ ಶಾಂತಾಮಮ್ಮಿಯಿಂದ ಕೇಳಿ ತಿಳಿದಂತೆ ಬಾಲ್ಯದಲ್ಲಿ ಗೌರೀಶರು ಬೆಳೆದು ಬಂದ ಮನೆಯಲ್ಲಿ ಪುರಾಣ ಪುಣ್ಯ ಕಥೆಗಳ ಶ್ರವಣ ಒದಗಿ ಬರುತ್ತಿತ್ತಂತೆ. ಆಗಲೇ ಗೌರೀಶರಿಗೆ ಸಂಗೀತದ ಅಭಿರುಚಿ ಬೆಳೆದದ್ದು. ಗೌರೀಶರ ಅಮ್ಮ ಹಾಗೂ ದೊಡ್ಡಮ್ಮನವರ ಭಕ್ತಿ ಶ್ರದ್ಧಾಮಯ ಸಂಸ್ಕಾರ ಇವರ ಮೇಲೆಯೂ ಮೊದ ಮೊದಲು ಬಹಳವಾಗಿಯೇ ಆಯಿತು. ಆಗಲೇ ಗೌರೀಶರು ಮರಾಠಿಯಲ್ಲಿ ಪದ್ಯ ರಚನೆ ಆರಂಭಿಸಿದ್ದರಂತೆ. ಹೀಗೆ ಕ್ರಮೇಣ ಅವರಿಗರಿವಿಲ್ಲದಂತೆ ಗೀತರಚನೆ, ಕನ್ನಡ ಗದ್ಯರಚನೆ ಶುರುವಾದದ್ದು. ಕನ್ನಡ, ಮರಾಠಿ, ಹಿಂದಿ, ಇಂಗ್ಲೀಷ್ ಹಾಗೂ ಕೊಂಕಣಿ ಭಾಷೆಗಳ ಕತೆ ಕಾದಂಬರಿ ವಿಚಾರ ಸಾಹಿತ್ಯದ ಪುಸ್ತಕಗಳ ವ್ಯಾಸಂಗ ಅವರಲ್ಲಿ ಒಂದು ತಪಸ್ಸಿನಂತೆ ಬಲಿಯುತ್ತ ಹೋಯಿತು. ನಂತರ ಈ ಐದೂ ಭಾಷೆಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ಕೃತಿಗಳು ಹೊರಬಂದವು. ಅದಲ್ಲದೇ ಚಾಟು ಚತುರೋಕ್ತಿಗಳ ಸಂವಾದಗಳಿಂದ ಯುಕ್ತವಾದ ನಾಟಕಗಳನ್ನು ಅವರು ಬರೆದರು, ಅವು ರೇಡಿಯೋ ನಾಟಕಗಳಾದವು. ಅವರ ಮೊದಲಿನ ಪ್ರಧಾನ ಬರಹಗಾರಿಕೆ ತಾತ್ವಿಕ ಗ್ರಂಥಗಳು, ಮನೋವಿಜ್ಞಾನ, ಮಾರ್ಕ್ಸ್ ವಾದ, ನವಮಾನವತಾವಾದ ಮುಂತಾದವು. ಕನ್ನಡ ಮತ್ತು ಇಂಗ್ಲೀಷಿನ ಕಾವ್ಯ ಹಾಗೂ ಮರಾಠಿ ಗಾಯನ ಅವರಿಗೆ ಬಹು ಪ್ರಿಯವಾಗಿದ್ದವು. ಮುದ್ದಿನ ಮೊಮ್ಮಗಳು ಗೊಂಟಿ(ಸೃಜನಾ) ತಂದು ಕೊಟ್ಟ ಮರಾಠಿ ಗಾಯನದ ದ್ವನಿ ಸುರುಳಿಯನ್ನು ಅವರು ಪುನಃ ಪುನಃ ಆಲಿಸುತ್ತಿದ್ದರು.

 ಗೌರೀಶರ ಕುಟುಂಬರೆಸೆಲ್, ಎರಿಕ್ ಫ್ರಾಂ, ವೈಲ್ಡ್, ಬರ್ನಾಡ್ ಶಾ ಇಂಥ ಪಾಶ್ಚಿಮಾತ್ಯ ಲೇಖಕರ ಪ್ರಭಾವ ಗೌರೀಶರ ಪ್ರಜ್ಞೆಯ ಮೇಲೆ ಆತ್ಯಂತಿಕವಾಗಿ ಆದದ್ದನ್ನು ಹಾಗೂ ಬೇಂದ್ರೆ, ಮಾಸ್ತಿ, ಶಂಬಾ, ಕಾರಂತ ಮತ್ತು ಶ್ರೀರಂಗರಂಥ ವಿಭೂತಿಗಳ ಪ್ರಭಾವ ಅವರ ಕನ್ನಡ ಶೈಲಿಯ ಮೇಲೆ ಅಗಾಧವಾಗಿರುವುದನ್ನು ಅಲ್ಲಲ್ಲಿ ಕೆಲ ವಿಮರ್ಶಕರು ಗುರುತಿಸಿದ್ದಾರೆ. ಹೀಗೆ ತಮ್ಮ ಮಾತು ಹಾಗೂ ಬರವಣಿಗೆಗಳಿಂದ ಹಲವು ಕಟು ಸತ್ಯಗಳನ್ನು ಕಾಣಿಸಿ, ನಮ್ಮ ಮನಸ್ಸಿಗೆ ಹಾಗೂ ಬುದ್ಧಿಗೆ ಮುಸುಕಿದ ಮಂಜನ್ನೂ ಧೂಳನ್ನೂ ಒರೆಸಿ ತಮ್ಮದೇ ಆದ ವೈಚಾರಿಕ ಬೀಜಗಳನ್ನು ಬಿತ್ತಿದ, ಸಹಸ್ರಾರು ಪುಟಗಳಲ್ಲಿ ಒಡಮೂಡಿದ ಅಪಾರ ಅಕ್ಷರ ಸಂಪತ್ತುಗಳೇ ಗೌರೀಶರು ನಮಗೆ ನೀಡಿದ ಬಾಗಿನ. ಹೀಗೆ ಓದುಗರ ಮನಸ್ಸಿನಲ್ಲಿ ಆಳವಾಗಿ ನಿಲ್ಲುವುದೂ ಮತ್ತು ಎಲ್ಲರನ್ನೂ ಎಲ್ಲವನ್ನೂ ಒಳಗೊಳ್ಳುತ್ತ ಕೇವಲ ಅಕ್ಷರ ಮಾತ್ರದಿಂದ ಶಾಶ್ವತವಾಗಿ ಬದುಕಿರುವುದೂ ನಿಜಕ್ಕೂ ಸಾಹಿತ್ಯವೆಂಬ ಅರ್ಥದ ಗಹನತೆಗೆ ಸಾಕ್ಷಿ. ಪ್ರೊ. ಕಾಲ್ಡವೆಲ್ ಅವರ ಮಾತು ಈ ಸಂದರ್ಭದಲ್ಲಿ ಯಾಕೋ ನೆನಪಿಗೆ ಬರುತ್ತಿದೆ ‘ಸರಳ ಜೀವನದ ಕುರಿತು ಮಾತಾಡಲು, ಬರೆಯಲು ನಾವು ಹಿಂಜರಿಯುವುದಿಲ್ಲ, ಆದರೆ ಹಾಗೆ ಬದುಕಲು ನಾವು ಹಿಂಜರಿಯುತ್ತೇವೆ.’ ಹಾಗೊಂದು ಸರಳವಾದ ಬದುಕನ್ನೂ ಸಹ ಅಳವಡಿಸಿಕೊಂಡು ಪರಿಶುದ್ಧ ಮನಸ್ಸಿನಿಂದ ಬದುಕಿ ತೋರಿದವರು ನಮ್ಮ ಗೌರೀಶರು.

ಈ ದಿನ ಗೌರೀಶರಿಗೆ ತೊಂಬತ್ತೇಳು ತುಂಬಿತು. ನನ್ನ ಹಾಗೂ ಆನುದಾದಾನ ಈ ನಲ್ಮೆಯ ಮುದ್ದು ಪಪ್ಪನಿಗೆ, ಅವರ ಬುದ್ಧಿ ಹಾಗೂ ಭಾವಗಳ ಜಗತ್ತಿಗೆ ಇದೊಂದು ಅಕ್ಕರೆಯ ಅಕ್ಷರಪುಷ್ಪ ನಮನ.