ವಿಸ್ಲಾವಾ ಸಿಂಬೋರಸ್ಕಾ ಸಾಹಿತ್ಯದ ಓದುಗರು ಬಹುಶಃ ತುಂಬ ಕೇಳಿ ಬಲ್ಲ ಹೆಸರು. ನೊಬೆಲ್ ಪುರಸ್ಕೃತರ ಪಟ್ಟಿಯಲ್ಲಿ 1996ರಲ್ಲಿ ಸೇರ್ಪಡೆಯಾದ ಗೌರವಾನ್ವಿತ ಹೆಸರು. ಪೊಲೀಷ್ ಭಾಷೆಯಲ್ಲಿ ಬರೆದ ಅವಳ ಕವಿತೆಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ, ಪ್ರತಿ ಓದಿಗೂ ಹೊಸ ಅರ್ಥ, ಹೊಸ ಅರಿವು, ಹೊಸ ಬೆರಗು, ಹೊಸ ಸೊಬಗು. ಓಎಲ್ ನಾಗಭೂಷಣಸ್ವಾಮಿ ಸರ್ ಇರಬೇಕು, ಸುಮಾರು ನಾಲ್ಕೈದು ವರ್ಷಗಳ ಹಿಂದೆ ಅವಳ ಹಿಂಸೆ (ಟಾರ್ಚರ್) ಕವಿತೆಯನ್ನು ಯಾವುದೋ ಸಾಹಿತ್ಯ ವೆಬ್ ಪುಟಕ್ಕೆ ಅನುವಾದಿಸಿಕೊಟ್ಟಾಗ ವಿಸ್ಲಾವಾ ತುಂಬ ಇಷ್ಟವಾಗಿಬಿಟ್ಟಳು. ಮೊದಲ ಓದಿನಲ್ಲೇ ಪ್ರೀತಿಯಾಯಿತು. ಆಮೇಲೆ ಪಿಚ್ಚರ್ ಎಂಬ ಬ್ಲಾಗ್ ಗಾಗಿ ಸಿಂಬೋರಸ್ಕಾಳ ‘ಅಂತ್ಯಸಂಸ್ಕಾರ’ವನ್ನು ನನ್ನ ತಿಳುವಳಿಕೆ ಮಟ್ಟಿಗೆ ಅನುವಾದಿಸಿದೆ, ತುಂಬ ಮಂದಿ ಮೂಲ ಕವಿತೆಯ ಆಶಯವನ್ನು ಇಷ್ಟಪಟ್ಟರು, ಬೇರೆ ಥರ ಕವಿತೆ ಅಂತ ಮೆಚ್ಚಿದರು.

ಅಲ್ಲಿಂದ ವಿಸ್ಲಾವಾ ಎಂಬ ತೆಳುನಗೆಯ, ಸಿಗರೇಟು ಹೊಗೆಯ, ಮುದ್ದು ಮುಪ್ಪಿನ ಕವಿತಾ ಸುಂದರಿ ಭಾಷೆ ಭಾಷೆಗಳನು ದಾಟಿ ಇಷ್ಟವಾಗುತ್ತಾ ಹೋಗಿದ್ದಾಳೆ, ಆಗಾಗ ತನ್ನ ಕವಿತೆಗಳ ಓದಿಗೆ ಕರೆಯುತ್ತಾಳೆ. ಕವಿತೆಗಳನ್ನು ಮಧ್ಯರಾತ್ರಿ ಎಲ್ಲಾ ನೆನಪಿಸಿಕೊಟ್ಟು, ಒಂದು ಅಪೂರ್ವ ಸಂಭ್ರಮವನ್ನು ತಂದುಕೊಡುತ್ತಾಳೆ. ಅವಳ ಈ ಕವಿತೆಗಳ ಹಿತವಾದ ಕಾಟಕ್ಕೆ ಜಯವಾಗಲಿ.

ಈ ಕವಿತಾ ಸುಂದರಿಗೆ ಈಗ ವಯಸ್ಸು ಎಂಬತ್ತೇಳಂತೆ. ಜುಲೈಗೆ ಇನ್ನೊಂದು ವರ್ಷ ಜಾಸ್ತಿ ವಯಸ್ಸಾಗುತ್ತದಾದ್ದರೂ ‘ಸಕಾಲಿಕ’ ಲೇಖನ ಬರೆಯುವುದಕ್ಕೆ ಅಲ್ಲಿಯವರೆಗೆ ಕಾಯುವ ತಾಳ್ಮೆ ಇಲ್ಲ. ಹಾಗಾಗಿ ಥಟ್ಟನೆ ಕವಿತೆಗಳ ಜೊತೆ ಆಕೆಯ ಜೀವನದ ಘಟನೆಗಳಲ್ಲಿ ಒಂದಿಷ್ಟನ್ನು ಹಂಚಿಕೊಳ್ಳಲೇಬೇಕೆಂಬ ಆಸೆ. ಅದಕ್ಕಾಗಿ ಈ ಪಯಣ.

ಹ್ಮ್, ನಿಜವಾದ ಪ್ರೀತಿ!
ಒಳ್ಳೆ ಮಕ್ಕಳು ಈ ಪ್ರೀತಿಯ ಸಹಾಯದಿಂದ ಹುಟ್ಟಲಿಲ್ಲ,
ಮಿಲಿಯಾಂತರ ವರ್ಷಗಳಿಂದ ಜನಸಂಖ್ಯೆ ಏರುತ್ತಾ ಬಂದಿದ್ದು,
ನಿಜವಾದ ಪ್ರೀತಿಯಿಂದೇನಲ್ಲ…
ನಿಜವಾದ ಪ್ರೀತಿ ಸಿಗದೇ ಹೋದವರು
ಅಂಥ ಒಂದು ಪ್ರೀತಿಯೇ ಇಲ್ಲ ಅಂತ ಹೇಳುತಿರಲಿ.
ಅವರ ಆ ನಂಬಿಕೆ ಅವರನ್ನು
ಇನ್ನಷ್ಟು ದಿನ ಬದುಕಿಸಲಿ,
ಹಾಗೇ ತಣ್ಣಗವರು ಕಣ್ಮುಚ್ಚಲಿ!

ನಿಜದೊಲುಮೆ (ಟ್ರೂ ಲವ್) ಕವಿತೆ ಹೀಗೆ ಕೊನೆಯಾದಾಗ ನಮ್ಮ ಗಂಟಲಲ್ಲಿ ಹೊರಡಲು ಪದವೇ ಇರುವುದಿಲ್ಲ. ಎಲ್ಲರೂ ಸಿಕ್ಕ ಪ್ರೀತಿಯ ಶುದ್ಧತೆಯ ಪರೀಕ್ಷೆ ಮಾಡುತ್ತಿರುವಾಗ ಪ್ರೀತಿ ಯಾಕೆ ಶುದ್ಧವಾಗಿರಬೇಕು ಅಂತ ಪ್ರಶ್ನೆ ಇಟ್ಟುಕೊಂಡು ಹುಡುಕುತ್ತಾ ಹೊರಡುತ್ತಾಳೆ ಈಕೆ.

‘ನಿಜ ಪ್ರೀತಿ, ಹಾಗೆಂದರೇನು ಅದು ನಾರ್ಮಲ್ಲೇ?/ ಅದು ಗಂಭೀರ ವಿಷಯವೇ/ ಅದು ಪ್ರಾಕ್ಟಿಕಲ್ಲೇ’ ಅಂತಲೇ ಆ ಕವಿತೆ ಪ್ರಾರಂಭವಾಗುತ್ತದೆ. ನಾವು ನೋಡಿದ ಆದರ್ಶ, ಸಂತೃಪ್ತ, ಸುಖೀ ಕುಟುಂಬದ ಗ್ರೂಪ್ ಫೋಟೋದ ಹಿಂದಿನ ನಿಜವಾದ ಜೇಡರ ಬಲೆ, ಕಸ ಕಡ್ಡಿಗಳನ್ನು ಅವಳ ಕವಿತೆಯ ಕಣ್ಣುಗಳು ಹುಡುಕಾಡುತ್ತವೆ, ನೀವೂ ಹುಡುಕಿ ಅನ್ನುತ್ತವೆ. ಪ್ರೀತಿಯಲ್ಲಿ ಆದರ್ಶದ ಉದಾಹರಣೆಯನ್ನು ಅರಸುತ್ತಾ, ಅದರ ಹಿಂದೆ ಬೀಳುತ್ತಾ ಹೋದರೆ ಇದು ಎಲ್ಲಿಗೆ ಹೋಗಿ ಮುಟ್ಟುತ್ತೋ ಅಂತ ಆತಂಕಿತಳಾಗುತ್ತಾಳೆ.

‘ನಿಜವಾದ ಪ್ರೀತಿ’ಯೆಂಬ ವ್ಯಾಖ್ಯಾನಗಳನ್ನು ಅವಳು ಕವಿತೆಯ ಕಸಬರಿಕೆ ಹಿಡಿದುಕೊಂಡು ಗುಡಿಸಿ ಎಸೆಯುತ್ತಾಳೆ.

ಕೊನೆಯಲ್ಲಿ ಆ ಕಸವೆಲ್ಲಾ ಹೋಗಿ ನಮ್ಮೊಬ್ಬೊಬ್ಬರ ಅಂಗಳದ ಒಳಗೂ ಒಂದು ವಿವೇಚನೆಯ ಬೀಜ ಮೊಳಕೆಯೊಡೆಯತೊಡಗುತ್ತದೆ.

***

ಫೋರ್ ಎ ಎಂ (4 a.m.) ಕವಿತೆಯಲ್ಲಿ ಬೆಳಗ್ಗಿನ ನಾಲ್ಕನೇ ತಾಸನ್ನು ‘ರಾತ್ರಿ ಮತ್ತು ಹಗಲಿನ ಮಧ್ಯೆ’ ಅಂತ ಕರೆಯುತ್ತಾ ಕವಿತೆ ಶುರು ಮಾಡುತ್ತಾಳೆ. ‘…ಆ ಹೊತ್ತಿಗೆ ಯಾರಿಗೂ ಆ ತಾಸು ಮೆಚ್ಚುವುದಿಲ್ಲ/ ಓಡಾಡುತಿರುವ ಇರುವೆಗೆ ಅದು ಮೆಚ್ಚಿದರೆ ಇರುವೆಯೇ ನಿನ್ನ ಭಾಗ್ಯ/  ಬೇಗ ಬೆಳಿಗ್ಗೆ ಐದು ಬರಲಿ, ನಾವೆಲ್ಲಾ ಮತ್ತೆ ಬದುಕಲಿ’ ಅಂತ ಬರೆಯುತ್ತಾಳೆ. ನಾವೆಲ್ಲಾ ಪ್ರತಿ ಬೆಳಿಗ್ಗೆ ಬದುಕುವ ಆ ವಿಸ್ಮಯಕ್ಕೆ (ನಿದ್ದೆಗೊಂದು ನಿತ್ಯ ಮರಣ, ಎದ್ದ ಗಳಿಗೆ ನವೀನ ಜನನ-ಬೇಂದ್ರೆ) ನಸುಕಿನ ನಾಲ್ಕನೇ ತಾಸು ಗರ್ಭಿಣಿಯರ ಒಂದು ಆಪರೇಷನ್ ಥಿಯೇಟರ್ ಆಗಿ ನಿಲ್ಲುತ್ತದೆ.

ಅವಳ ಕವಿತೆಗಳ ಗಮನ ನೂರು ಕಡೆ, ವ್ಯಾಪ್ತಿ ಸಾವಿರ ಹೆಡೆ. ಅವಳ ಕವಿತೆ ಹೇಳಿಕೊಳ್ಳುವ ಹಾಗೆ ‘ಆಸ್ಪತ್ರೆ ವಾಸನೆಗೇ ನನಗೆ ಖಾಯಿಲೆ ಬರುತ್ತೆ’. ‘ಆಸ್ಪತ್ರೆಯಿಂದ ಒಂದು ವರದಿ’ ಕವಿತೆಯಲ್ಲಿ ವಾರ್ಡ್ ಬಾಯ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳ ದೇಹಗಳು, ನಾನಾ ಖಾಯಿಲೆಗಳ ದೇಹದ ಮಧ್ಯೆ ಓಡಾಡುವುದನ್ನು ಕಂಡು ಉದ್ಗರಿಸುತ್ತಾಳೆ: ‘ನನ್ನ ಹೃದಯ ಮರುಗುತ್ತೆ, ಯಾರು ಇಲ್ಲಿ ಯಾರಿಗಾಗಿ ಸಾಯುತ್ತಿದ್ದಾರೆ?/ ನಾನಿರಲಿ ಬಿಡಲಿ ಅವನಿಗೆ ಇದು ಸಂಬಂಧವೇ ಇಲ್ಲ/ ನನ್ನ ಕಡೆಯ ಯಾರನ್ನೂ ಅವನು ವಿಚಾರಿಸಲಿಲ್ಲ, ಯಾರು ಟಾಮ್, ಯಾವ ಡಿಕ್, ಮತ್ಯಾರು ಹ್ಯಾರಿ?/’

ಅವರ ಕೆಲವು ಅತ್ಯುತ್ತಮ ಕವಿತೆಗಳನ್ನು ಹೇಳುವುದಾದರೆ ಒಂದು: ಸಮ್ ಲೈಕ್ ಪೋಯಟ್ರಿ (ಕೆಲವರಿಗೆ ಪದ್ಯ ಇಷ್ಟ). ಇನ್ನೊಂದು: ದಿ ಎಂಡ್ ಆಫ್ ದಿ ಬಿಗಿನಿಂಗ್ (ಆರಂಭದ ಕೊನೆ). ಮತ್ತೊಂದು: ಚಿಲ್ಡ್ರನ್ ಆಫ್ ಅವರ್ ಏಜ್ (ನಮ್ಮ ಕಾಲದ ಮಕ್ಕಳು). ದಿನಗಟ್ಟಲೆ ಮಾತಾಡಬಲ್ಲಷ್ಟು ಕವಿತೆಗಳು ಇದ್ದರೂ ದಿ ಎಂಡ್ ಆಫ್ ದಿ ಬಿಗಿನಿಂಗ್ ಬಗ್ಗೆ ಹೇಳಲೇಬೇಕು. ನಮಗೆ ಯುದ್ಧ ಎಷ್ಟೊಂದು ತಟ್ಟುವ ವಿಷಯವೋ, ನಮ್ಮ ಸಂವೇದನೆಯನ್ನು ಕೆದಕುವ, ಕರಗಿಸುವ ವಿಷಯವೋ ಗೊತ್ತಿಲ್ಲ. ಯಾಕೆಂದರೆ ನಮ್ಮ ಮಟ್ಟಿಗೆ ಯುದ್ಧ ನಮ್ಮ ಹತ್ತಿರದ ಅನುಭವವೇ ಅಲ್ಲ.

ಆದರೆ ವಿಸ್ಲಾವಾ ಹುಟ್ಟಿ ಬೆಳೆದ ಪೋಲ್ಯಾಂಡ್ ನಲ್ಲಿ ಯುದ್ಧಕ್ಕೇನೂ ಕೊರತೆ ಇರಲಿಲ್ಲ. ಹಾಗಾಗಿ ಅವಳ ಸಂವೇದನೆಯಲ್ಲಿ ಯುದ್ಧಕ್ಕೊಂದು ವಿರುದ್ಧ ಪದ ಹುಟ್ಟುತ್ತದೆ, ಕವಿತೆ ಖಾರವಾಗಿ ಪ್ರತಿಕ್ರಿಯಿಸುತ್ತದೆ. ಆ ಕವಿತೆಯ ವಿಶೇಷತೆ ಏನೆಂದರೆ ಪ್ರತಿ ಸಾಲಿನಲ್ಲೂ ದುಃಖ, ರೌದ್ರ, ಕರುಣಗಳೆಲ್ಲಾ ಸೇರಿಕೊಂಡಿವೆ. ಅದನ್ನು ನಿಮ್ಮ ಗಮನಕ್ಕೆ ತರುವ ದೃಷ್ಟಿಯಿಂದಷ್ಟೇ ಇಲ್ಲಿ ಕೆಲವು ಭಾಗಗಳನ್ನು ಭಾವಾನುವಾದಿಸಿ ನೀಡಲಾಗುತ್ತಿದೆ.

ದಿ ಎಂಡ್ ಆಫ್ ದಿ ಬಿಗಿನಿಂಗ್ (ಆರಂಭದ ಕೊನೆ)

ಪ್ರತಿ ಯುದ್ಧದ ನಂತರವೂ
ಯಾರಾದರೊಬ್ಬರು
ಮತ್ತೆಲ್ಲಾ ಸರಿ ಮಾಡಬೇಕು,
ಅಣಿಗೊಳಿಸಬೇಕು.
ಎಲ್ಲಾ ತನ್ನಷ್ಟಕ್ಕೇ
ಯಾವುದೂ ಸರಿ ಆಗುವುದಿಲ್ಲವಲ್ಲಾ ಅಷ್ಟಕ್ಕೂ.

ರಸ್ತೆಯಲ್ಲಿ ಬಿದ್ದ
ಮುರಿದ ಕಲ್ಲುಗಳನ್ನೆಲ್ಲಾ ಎತ್ತಿ
ಪಕ್ಕಕ್ಕಿಡಬೇಕು,
ಇಲ್ಲದಿರೆ
ಶವದ ಪೆಟ್ಟಿಗೆ ಹೊತ್ತ
ಗಾಡಿಯ ಗಾಲಿಗಳನ್ನು ಆ ಕಲ್ಲು
ನಸುವೇ ಅಲುಗಿಸಬಹುದು.

ಯಾರಾದರೂ
ಗೋಡೆಯ ಬಿರುಕುಗಳು ಮುಚ್ಚುವಂತೆ
ಪೋಸ್ಟರ್ ಅಂಟಿಸಬೇಕು,
ಕಿಟಕಿ ಗಾಜುಗಳ
ಕೂಡಿಸಬೇಕು,
ಕದಗಳನ್ನು ಮತ್ತದೇ
ಬಾಗಿಲ ಚೌಕಟ್ಟಿಗೆ ಹೊಂದಿಸಬೇಕು.

ಸದ್ದುಗಳಿಗೆ ಸ್ಥಳವಿಲ್ಲ, ಫೋಟೋ ಕ್ಲಿಕ್ಕಿಸಲು
ಬೆಳಕಿಲ್ಲ,
ಅದಕ್ಕೆಲ್ಲಾ ಇನ್ನೂ ವರ್ಷಗಳಾಗುತ್ತವೆ,
ಎಲ್ಲಾ ಕ್ಯಾಮರಾಗಳು
ಮತ್ತೊಂದು ಯುದ್ಧ ಹುಡುಕಿಕೊಂಡು
ಹೋಗಿವೆ.

ಸೇತುವೆಯನ್ನು ಪುನಃ ಕಟ್ಟಬೇಕು,
ರೈಲುಹಳಿ, ರಸ್ತೆಗಳನ್ನೂ
ಮರಳಿ ಪಡೆಯಬೇಕು,
ಎಲ್ಲರ ಅಂಗಿ ತೋಳ್ಗಳೂ ಮೇಲೇರಬೇಕು,
ಬಿದ್ದ ಮರವನ್ನು ಕಡಿದೊಗೆಯಬೇಕು.

…….

ಸಮಯಕ್ಕೆ ಸರಿಯಾಗಿ ಯಾರಾದರೊಬ್ಬರು
ತುಕ್ಕು ಹಿಡಿದ ಚರ್ಚೆಯನ್ನು
ನೆಲದಿಂದ ಅಗೆದೆಗೆದು ತೆಗೆಯುತಿರಬೇಕು,
ಹಳೆ ಹಳಕಿನ
ವಾದಗಳ ರಾಶಿಗೆ ಇದನ್ನೆಲ್ಲಾ
ತುಂಬಬೇಕು….

…….

***

ನಮ್ಮೂರ ಹುಡುಗಿಯೊಬ್ಬಳು ಬಡತನದಲ್ಲಿ ಬೆಳೆದು, ಸಿನಿಮಾ ಕಂಡರೆ ಬೆರಗಾಗುತ್ತಾ, ಬರಹ ಕಲಿಯಬೇಕೆಂದು ಹಂಬಲಿಸುತ್ತಾ ಅಕ್ಷರ ಕಲಿತು, ಕೆಲಸ ಹಿಡಿದು, ಕವಿತೆ ಬರೆದು ದೊಡ್ಡ ಸಾಧನೆಯ ಜೊತೆ ಪ್ರತ್ಯಕ್ಷಳಾದಂತೇ ವಿಸ್ಲಾವಾ ಕತೆಯೂ ಇದೆ. ಅನೇಕ ಸಾಹಿತ್ಯ ನಿಯತಕಾಲಿಕೆಗಳ ಸಂಪಾದಕತ್ವ ನಿರ್ವಹಿಸಿದ ಈಕೆ ಲೆನಿನಿಸಂ ಇದ್ದ ಕಾಲದ ಪೋಲ್ಯಾಂಡ್ ನ ಹಳ್ಳಿಯೊಂದರಲ್ಲಿ ಇದ್ದ ಹುಡುಗಿ. ಅವಳ ಬಡತನದ ಮಧ್ಯೆ ಅವಳಿಗೆ ದೊರೆತ ಅಮೂಲ್ಯ ಅನುಭವವೆಂದರೆ ರಂಜಕ ರಂಜಕವಾದ ಜನಪದ, ಪೌರಾಣಿಕ ಕತೆಗಳ ಕೇಳ್ಕೆ, ಹಳ್ಳಿಯ ಜೀವನಾನುಭವದ ಕಾಣ್ಕೆ. ಓದಲು ಹೋಗುತ್ತಿದ್ದ ಕಾಲಕ್ಕೆ ಪೇಪರ್ ನಲ್ಲಿ ಬಂದ ಚಿತ್ರಗಳನ್ನೆಲ್ಲಾ ಕತ್ತರಿಸಿ, ಅಂಟಿಸಿ, ಅದನ್ನೇ ಗೆಳೆಯ, ಗೆಳತಿಯರಿಗೆ ಉಡುಗೊರೆಯಾಗಿ ಪೋಸ್ಟ್ ಮಾಡುತ್ತಿದ್ದಳಂತೆ ಹುಡುಗಿ. ಹೀಗೆ ಕತ್ತರಿಸಿ ಅಂಟಿಸುವ, ಬಿಡಿಬಿಡಿ ಚಿತ್ರಣದಲ್ಲಿ ಇಡಿಯಾಗಿ ಏನನ್ನೋ ಹೇಳಲು ತುಡಿಯುವ ಆಸೆ ಅವಳ ಕವಿತೆಗಳಿಗೆ ಬಂದಿದ್ದೂ ಇದರಿಂದಲೇ ಇರಬೇಕು.

(ಇತ್ತೀಚೆಗೆ ಜೋಗಿಯವರಿಂದ ತಿಳಿದುಕೊಂಡಿದ್ದು stream of conscious ಎಂಬ ಒಂದು ಬರವಣಿಗೆ ಮಾದರಿ. ಅಂದರೆ ಅದನ್ನು ಕನ್ನಡದಲ್ಲಿ ಪ್ರಜ್ಞಾ ಪ್ರವಾಹ ಅಂತ ಕರೆಯಬಹುದು ಅಂತ ಅವರೇ ಹೇಳಿದ್ದರು. ಅಂದರೆ ಅನಿಸಿದ್ದನ್ನು ಹಾಗೆ ಹಾಗೇ ಯಾವುದೇ ಸಂಕಲನ, ಹೊಸ ರೂಪ ಕೊಡುವ ಪ್ರಯತ್ನಗಳಿಲ್ಲದೇ ಬರೆಯುತ್ತಾ ಹೋಗುವುದು. ಒಂದು ಸಾಲಿನಿಂದ ಇನ್ನೊಂದು ಸಾಲು ಸಂಬಂಧಪಟ್ಟಂತಿರುವುದಿಲ್ಲ ಅಥವಾ ಸಂಬಂಧ ತಾನೇ ತಾನಾಗಿ ಬಂದಿರಬಹುದಷ್ಟೇ. ಇದರಲ್ಲೇ ಒಂದು ಕಾವ್ಯಾತ್ಮಕತೆ ಇದೆ.)

ಈ ಬಗ್ಗೆ ಮೊನ್ನೆ ಗೊತ್ತಾಯಿತಾದರೂ ವಿಸ್ಲಾವಾ ಕವಿತೆಗಳನ್ನು ಹಿಂದೆಯೇ ಓದಿದ್ದು ನೆನಪಾಗಿ, ‘ಅರೆ, ಹೌದಲ್ಲಾ, ಈಕೆಯ ಕವಿತೆಗಳಿಗೆ ಈ ಪ್ರಜ್ಞಾ ಪ್ರವಾಹದ ಗುಣ ಇತ್ತಲ್ಲಾ, ಅದೇನು ಅಂತ ಗೊತ್ತಿರಲಿಲ್ಲವಾದರೂ ಇಂಥ ಒಂದು ಕ್ರಮ ಸುಂದರವಾಗಿದೆ’ ಅಂತ ಅನ್ನಿಸಿತ್ತು.

‘ಅಂತ್ಯ ಸಂಸ್ಕಾರ’ ಕವಿತೆ ಅಂಥದ್ದೇ. ಅಲ್ಲಿ ಅಂತ್ಯಸಂಸ್ಕಾರಕ್ಕೆ ಬಂದವರ ಮಾತುಗಳನ್ನು ಒಂದರ ಕೆಳಗೆ ಒಂದರಂತೆ ಇಡುತ್ತಾ ಹೋಗುತ್ತಾಳೆ ವಿಸ್ಲಾವಾ. ಒಂದಕ್ಕೊಂದು ಸಂಬಂಧ ಇಲ್ಲವಾದರೂ ಅದು ಒಟ್ಟು ಒಂದು ಅಂತ್ಯಸಂಸ್ಕಾರ ಅಥವಾ ಸಾವಿನ ಚಿತ್ರಣವನ್ನು ಕೊಡುತ್ತಾ, ಆ ಸಾವು ಜೀವಿಸಿರುವವರ ಪ್ರಪಂಚಕ್ಕೆ ಎಷ್ಟೊಂದು ನಿರ್ಭಾವುಕ ಸಂಗತಿ ಎನ್ನುವುದನ್ನು ಹೇಳುತ್ತದೆ. ಅದೇ ರೀತಿ ‘ಪಿಐ’ ಸೇರಿದಂತೆ ಹಲವು ಕವಿತೆಗಳು ಇದೇ ಗುಣದಿಂದ ಕಾಣಿಸಿಕೊಳ್ಳುತ್ತವೆ. ಬಹುಶಃ ಪೋಸ್ಟರ್ ಗಳನ್ನು ತೋಚಿದಂತೆ ಅಂಟಿಸಿ, ಗೆಳೆಯರ ವರ್ಗಕ್ಕೆ ಕಳಿಸುತ್ತಿದ್ದ ಆ ಹುಡುಗಿಯ ಪೋಸ್ಟ್ ಕಾರ್ಡ್ ಗಳಲ್ಲಿ ಅವಳ ಇಂಥ ಅದೆಷ್ಟೋ ಕವಿತೆಗಳು ಆಗಲೇ ಅಡಗಿಕೊಳ್ಳುತ್ತಾ ಹುಟ್ಟಿಕೊಳ್ಳುತ್ತಿದ್ದವೇನೋ?

***

ಎಲ್ಲಾ ಹುಡುಗಿಯರಿಗೆ ಬಾಲ್ಯ ಕಾಲಕ್ಕೆ ಹ್ಯಾಗೆ ಕೆಲವು ಸಿನಿಮಾಗಳ ವೀಕ್ಷಣೆ ನಿಷಿದ್ಧವೋ ಹಾಗೇ ಅಲ್ಲೂ ಹುಡುಗಿಯರಿಗೆ ಸಿನಿಮಾ ನಿಷಿದ್ಧವಾಗಿದ್ದ ಕಾಲಕ್ಕೆ ಸಿನಿಮಾದ ಸ್ವಚ್ಛ ಹುಚ್ಚಿನಿಂದ ಬಳಲುತ್ತಿದ್ದ ವಿಸ್ಲಾವಾ, ತಲೆಮರೆಸಿಕೊಂಡೆಲ್ಲಾ ಸಿನಿಮಾ ನೋಡಲು ಹೋಗುತ್ತಿದ್ದಳು. ಆ ಕಾಲಕ್ಕೆ ತಾನೇ ತನ್ನ ಗೆಳತಿಯರನ್ನೆಲ್ಲಾ ಸೇರಿಸಿಕೊಂಡು ಸಿನಿಮಾ ಸ್ಕ್ರಿಪ್ಟ್ ಬರೆಯುತ್ತಿದ್ದಳು. ಆ ಸಿನಿಮಾ ಹುಚ್ಚು ಅವಳನ್ನು ಉದ್ದಕ್ಕೂ ಕಾಡುತ್ತದೆ. ಹಾಗಾಗಿ ಈಗಲೂ ಪೊಲೀಷ್ ಭಾಷೆಯ ಕೆಲವು ಸಿನಿಮಾ ನಟಿಯರು ವಿಸ್ಲಾವಾಳ ಫೇವರಿಟ್ ಅಂತೆ. ಅವರ ‘ಫಿಲ್ಮ್ಸ್ ಫ್ರಮ್ ದಿ ಸಿಕ್ಸ್ ಟೀಸ್’ ಕವಿತೆ ಓದಿದರೆ ಅಲ್ಲಿ ನಿಮಗೆ ಆಕೆಯ ಸಿನಿಮಾ ಪ್ರೀತಿ ಗೊತ್ತಾಗುತ್ತದೆ.

ಇಂಥ ವಿಸ್ಲಾವಾ, ವರ್ಷಕ್ಕೆ ಬರೆದದ್ದು, ಬರೆಯುವುದು ಕೇವಲ ಮೂರ್ನಾಲ್ಕು ಕವಿತೆಗಳನ್ನಷ್ಟೇ ಅಂತೆ. ಈವರೆಗೆ ವಿಸ್ಲಾವಾ ಬರೆದ ಪದ್ಯಗಳ ಸಂಖ್ಯೆ ಕೇವಲ 252. ಅಂದರೆ ಅತಿ ಹೆಚ್ಚು ವಿಷಯಗಳನ್ನು ಅತಿ ಕಡಿಮೆ ಕವಿತೆಗಳಲ್ಲಿ ತಿಳಿಹೇಳುವುದಕ್ಕೆ ವಿಸ್ಲಾವಾ ಹೆಸರು ಅಂತ ವಿಮರ್ಶಕರು ಹೇಳುತ್ತಾರೆ.

1952ರಲ್ಲಿ ಮೊತ್ತಮೊದಲ ಸಂಕಲನ  ‘ದ್ಯಾಟ್ಸ್ ವಾಟ್ ವೀ ಲಿವ್ ಫಾರ್’ ಬಂತು. ಆಮೇಲೆ ‘ಕ್ವೆಶ್ಚನ್ ಪುಟ್ ಟು ಮೈಸೆಲ್ಫ್’ ಬಂತು. ಆ ಮೊದಲೆರಡು ಸಂಕಲನಗಳಲ್ಲಿ ಸೋಷಿಯಲ್ ರಿಯಲಿಸಂನ ಪ್ರಭಾವ ಇತ್ತು. ಹಾಗಾಗಿ 56ರಲ್ಲಿ ಬಂದ ‘ಕಾಲಿಂಗ್ ಔಟ್ ಟು ಯೆತಿ’ ಸಂಕಲನವೇ ಆಕೆಯ ನಿಜವಾದ ಶಕ್ತಿಯ ರೂಪವಾಗಿತ್ತು ಎಂದು ವಿಮರ್ಶೆಗಳು ಬಂದಿವೆ.

ವಿಶಿಷ್ಟ ರೂಪಕ ಶಕ್ತಿ, ತನ್ನದೇ ಕಾವ್ಯ ಮಾರ್ಗ, ಬೆಚ್ಚಿಬೀಳಿಸುವ ಸಾಲುಗಳು, ಹಳೆ ಪ್ರತಿಮೆಗಳನ್ನು ಹೊಸ ಹೊಳಹುಗಳ ಬಡಿಗೆಯಲ್ಲಿ ಪಳಗಿಸುವುದು ಮೊದಲಾದ ಶಕ್ತಿ, ಸಾಮರ್ಥ್ಯ, ಪ್ರತಿಭೆಯಿಂದಾಗಿ ವಿಸ್ಲಾವಾ ಅತ್ಯುನ್ನತ ನೊಬೆಲ್ ಸಾಹಿತ್ಯ ಪುರಸ್ಕಾರ ಗೌರವಕ್ಕೆ ಪಾತ್ರಳಾದಳು. ಎಲ್ಲಾ ಪ್ರಶಸ್ತಿಗಳಾಚೆ ವಿಸ್ಲಾವಾ, ಜಗತ್ತಿನ ಎಲ್ಲಾ ಕಾಲ, ಜಾಗದ ಅನುಭವಗಳನ್ನು ತನ್ನ ಕಾವ್ಯದ ಕರಡಿಗೆಯಲ್ಲಿಟ್ಟು ಕೊಡುತ್ತಾಳೆ.

ಎಂಬತ್ತಾರರ ಮುದ್ದು ವೃದ್ಧಾಪ್ಯದ ತಾಯಿಯ ಹತ್ತಿರ ಇನ್ನಷ್ಟು ಕಾವ್ಯಗಳನ್ನು ಪ್ರೀತಿಯಿಂದ ಯಾಚಿಸುವುದನ್ನ ಬಿಟ್ಟು ಇನ್ನೇನು ತಾನೇ ಕೇಳಿಯೇವು, ನಾವು ಕಾವ್ಯಪ್ರೇಮಿಗಳು?

ಜುಲೈ ತಿಂಗಳ ಎರಡರಂದು ಆಚರಿಸುವ ಹುಟ್ಟುಹಬ್ಬಕ್ಕೆ ತಿಂಗಳುಗಟ್ಟಲೆ ಮೊದಲೇ ನಮ್ಮ ಕಾವ್ಯಾಭಿಮಾನದ ಶುಭಾಶಯ.