ಈಗ ಅವನಿಲ್ಲ. ಜೀವಂತವಿದ್ದಾನಾ ಇಲ್ಲವಾ ಯಾವುದೂ ನನಗೆ ತಿಳಿದಿಲ್ಲ. ಎಲ್ಲಿದ್ದಾನೆ? ಹೇಗಿದ್ದಾನೆ? ಯಾರನ್ನೂ ಏನೂ ವಿಚಾರಿಸದೆ ಉಳಿದಿದ್ದೇನೆ, ವರ್ಷಗಳಿಂದ. ಹೃದಯದ ತುಂಬಾ ಮುಚ್ಚಿದ, ತೆಗೆದಿಟ್ಟ ನೂರು ಬಾಗಿಲುಗಳು. ಇದೊಂದು ಕೋಣೆಗೆ ಮಾತ್ರ ಬಾಗಿಲೇ ಇಲ್ಲ. ನಾನು ಮಾತ್ರ ಹೀಗೆ ಆ ಹೊಸಿಲ ಬಳಿಗೂ ಸುಳಿಯದೆ ಉಳಿದಿದ್ದೇನೆ. ಒಳಗೆ ಉಸಿರಾಟದ ಸದ್ದಾದರೂ ಇದೆಯಾ, ಕೇಳುವ ಗೋಜಿಗೇ ಹೋಗಿಲ್ಲ.

ಜಿಂಕೆ ಮರಿಯ ಹಾಗೆ ಕುಣಿಯುತ್ತಾ, ಮುಖದ ತುಂಬಾ ಮೆತ್ತಿಕೊಂಡ ಹಿಗ್ಗು ಒರೆಸಲಾರದೆ ಸದಾ ನಗುವ, ನನ್ನ ಎದೆಯುದ್ದ ಬೆಳೆದ ಮಗಳನ್ನ ಕಂಡು ಖುಷಿಯ ಜೊತೆಗೇ ಯಾಕೋ ಆತಂಕ. ಪ್ರೀತಿಯಲ್ಲಿ ಅರಳಿ, ವಿರಹದಲ್ಲಿ ಸುಟ್ಟುಕೊಂಡು ನರಳಿ….. ಈಗ ಹೀಗಾಗಿ ಮೂರು ದಿನದಿಂದ ಹಾಸಿಗೆ ಹಿಡಿದಿದ್ದಾಳೆ. ದೇವರೆ ಇದು ಹೀಗಾಗಲೇ ಬೇಕಾ?

‘ಅಮ್ಮಾ, ಇಲ್ಲಿ ನೋವಾಗ್ತಿದೆ…’ ಎರಡೂ ಕೈಯಿಂದ ಎದೆ ಒತ್ತಿ ಹಿಡಿದು ಚೀರಾಡುತ್ತಿದ್ದಾಳೆ. ನೆನ್ನೆಯವರೆಗೂ ಮಾತೇ ಆಡದೆ ಉಳಿದಿದ್ದ ಮಗು ಹೀಗೆ ಅಳಲು ಶುರು ಮಾಡಿದ್ದಕ್ಕೇ ನನಗೊಂದಿಷ್ಟು ನಿರಾಳವೆನಿಸಿದೆ. ಗಂಡನಿಗೆ ಸಿಟ್ಟು. ‘ಇಲ್ಲದ್ದನ್ನೆಲ್ಲ ನೀನ್ಯಾಕೆ ಇವಳ ತಲೆಯಲ್ಲಿ ತುಂಬಬೇಕಿತ್ತು? ಪ್ರೀತಿಯಲ್ಲಿರುವಷ್ಟು ಹೊತ್ತು ಮಾತ್ರಾ ನಾವು ಉಸಿರಾಡುವುದಾ? ಈಗ ನೋಡು, ಮಗುವಿನ ಸ್ಥಿತಿ ಏನಾಗಿದೆ’. ಸಂಕಟ ತಾಳಲಾರದೆ ಚಪ್ಪಲಿ ಮೆಟ್ಟಿ ಹೊರಗೆ ಹೋಗಿದ್ದಾನೆ.

‘ನೀನ್ಯಾಕೆ ಇದಕ್ಕೆ ಅಮೃತಾಂಜನ ಹಚ್ಚೋದು. ಅದಕ್ಕೆಲ್ಲ ಸರಿ ಹೋಗತ್ತೆ ಅಂದ್ಕೊಂಡು ಬಿಟ್ಯಾ ಈ ನೋವು?’ ಮಗಳು ಸಿಟ್ಟಿನಲ್ಲಿ ನನ್ನ ಕೈ ನೂಕುತ್ತಾ ಕಿರಿಚಿಕೊಂಡಷ್ಟೂ ಅವಳನ್ನ ತಬ್ಬಿ ನನಗೊರಗಿಸಿಕೊಂಡು ಎದೆ ನೀವುತ್ತಿದ್ದೇನೆ.

ಇವತ್ತು ರೂಮಿನಿಂದ ಎದ್ದು ಈಚೆ ಬಂದಿದ್ದಾಳೆ. ನೆನ್ನೆ ರಾತ್ರಿ ಸ್ವಲ್ಪ ಊಟ ಸೇರಿಸಿಕೊಂಡು, ಸೆಡಟೀವ್ ಇಲ್ಲದೆ ನಿದ್ದೆ ಮಾಡಿದ್ದಳು. ಈಗ ಬಚ್ಚಲಿಗೆ ಹೋಗಿ ಹಲ್ಲುಜ್ಜಿ ಬಂದು ‘ಕಾಫಿ ಕೊಡ್ಲಾ?’ ಅಂದಿದ್ದಕ್ಕೆ ಅಡ್ಡಡ್ಡ ತಲೆಯಾಡಿಸುತ್ತಿದ್ದಾಳೆ. ಕಿತ್ತಲೆ ಎಂದರೆ ಮಗುವಿಗೆ ಇಷ್ಟ. ಬಿಡಿಸಿಕೊಟ್ಟರೆ ತಿನ್ನಬಹುದು. ಇನ್ನೂ ಎಷ್ಟು ದಿನ, ಯಾವ್ಯಾವ ಅವಸ್ಥೆಗಳಲ್ಲಿ ಹಾದು ಸರಿಹೋಗಬೇಕೋ ಈ ಸ್ಥಿತಿ. ನನಗಂತೂ ಎಲ್ಲ ಮರೆತೇ ಹೋಗಿದೆ! ಬರೆದಾದರೂ ಇಟ್ಟಿದ್ದರೆ ಒಳ್ಳೆಯದಿತ್ತೇನೋ.

ಸಿಪ್ಪೆ ಸುಲಿದು ತೊಳೆ ಬಿಡಿಸಿ ಕೊಟ್ಟರೆ, ಬಾಯಿಗೆ ಇಡುವುದನ್ನೇ ಮರೆತ ಹಾಗೆ ಮಗಳು ತೊಳೆಯನ್ನ ದಿಟ್ಟಿಸಿ ನೋಡುತ್ತಿದ್ದಾಳೆ. ಬಾಯಿಗಿಡಬಹುದು, ನಾನು ಏನೂ ಹೇಳದೆ ಸುಮ್ಮನೆ ಉಳಿಯಬೇಕು.

‘ಅಮ್ಮಾ, ಪ್ರೀತಿಯಲ್ಲ್ಯಾಕೆ ಇಷ್ಟೊಂದು ನೋವು?… ಇದು ಇರುವುದೇ ಹೀಗ?…. ಮುಂದೆ ಎಂದಾದರೂ ನನಗೆ ಇದನ್ನೆಲ್ಲ ಮರೆತು ಬಿಡಲು ಸಾಧ್ಯವಾಗಬಹುದಾ?’ ಮಗಳು ಕೇಳಿದಾಗ, ಕದವಿರದ ಕೋಣೆಯ ಹೊಸ್ತಿಲ ಬಳಿ ಯಾರದೋ ನೆರಳು ಕಾಣಿಸಿದಂತಾಗಿ ಥಟ್ಟಂತ ನಾನು ನಡುಗಿದ್ದು ಯಾಕೆ? ಕಿಟಕಿಯ ಪಕ್ಕ ಕುಳಿತಿದ್ದಕ್ಕೇ ಇರಬೇಕು. ಹೊರಗೆ ತಣ್ಣಗೆ ಗಾಳಿ ಬೀಸುತ್ತಿದೆ. ಸ್ವಲ್ಪ ಹೊತ್ತು ಕಿಟಕಿ ಮುಚ್ಚಬೇಕು. ಬೇಗ ಏಳುವುದೇ ಕಷ್ಟವಾಗುತ್ತಿದೆ ಇತ್ತೀಚೆಗೆ, ಮಂಡಿ ನೋವು.

ಕಿತ್ತಳೆ ತೊಳೆ ಈಗ ಬಾಯಿ ಸೇರಿದೆ. ಒಳ್ಳೆಯ ಬಣ್ಣ, ಗಾತ್ರದ್ದು. ಮಗಳು ಇದನ್ನಾದರೂ ತಿನ್ನಲಿ ಎಂದು ಅಪ್ಪ ಆರಿಸಿ ತಂದಿದ್ದು. ಹುಳಿ ಇರಲಾರದು.

‘ಹಣ್ಣು ಸಿಹಿಯಾಗಿದೆಯಾ ಚಿನ್ನ?’ ಕೇಳುತ್ತಿದ್ದೇನೆ.