ಯಾವತ್ತಿನ ಹಾಗೆ ಆ ದಿನ ಕೂಡ, ವಾಕಿಂಗ್ ರಿಂಕ್‍ನಲ್ಲಿ ನನ್ನ ಜೊತೆ ಹೆಜ್ಜೆ ಹಾಕುತ್ತಾ ಆಶಾಬೆನ್ ತಮ್ಮ ಮಗಳ ಗುಣಗಾನ ಮಾಡಲು ಶುರುವಿಟ್ಟರು.

‘ನಿಜ್ವಾಗ್ಲೂ ಹೇಳ್ತಿದೀನಿ, ನನ್ನ ಮಗಳು ಅಂತಲ್ಲ. ಎಷ್ಟು ಒಳ್ಳೇ ಹುಡುಗಿ ಗೊತ್ತಾ? ಐಯಾಮ್ ರಿಯಲಿ ಸೋ ಪ್ರೌಡ್ ಆಫ್ ಹರ್’.

ಒಮ್ಮೊಮ್ಮೆ ಅವರ ಮಾತು ಸ್ವಲ್ಪ ಅತಿ ಎನ್ನಿಸಿದರೂ ಅವರ ಮಗಳ ಕಥೆ ಕೇಳುವಲ್ಲಿ ನನಗೂ ಸಾಕಷ್ಟು ಆಸಕ್ತಿ ಇತ್ತು. ಇಂಡಿಯಾದಿಂದ ಬಂದು ಇಲ್ಲಿ ಮಕ್ಕಳನ್ನ ಹುಟ್ಟಿಸಿ, ಬೆಳೆಸಿ ದೊಡ್ಡವರನ್ನಾಗಿ ಮಾಡ್ತಿರೋ ಉಳಿದ ಬಹುತೇಕ ಅಮ್ಮ, ಅಪ್ಪಂದಿರೆಲ್ಲ ಈ ದೇಶದಲ್ಲಿ ಮಕ್ಕಳನ್ನು ಬೆಳೆಸೋದು(ಅದರಲ್ಲೂ ಹೆಣ್ಣು ಮಕ್ಕಳನ್ನು ಬೆಳೆಸೋದು), ಅವರಿಗೆ ನಮ್ಮ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಕಲಿಸೋದು….. ಒಟ್ಟಿನಲ್ಲಿ ಅವರನ್ನು ತಮ್ಮ ಹದ್ದುಬಸ್ತಿನಲ್ಲಿಟ್ಟುಕೊಳ್ಳೋದು ಎಷ್ಟು ಕಷ್ಟ ಅಂತ ರಾಗಮಾಲಿಕೆಯಲ್ಲಿ ಗೋಳು ಹೇಳಿಕೊಳ್ಳುವಾಗ ಈ ಆಶಾಬೆನ್ ಮಾತ್ರ ತಮ್ಮ ಲಾಡ್ಲಿ ಬೇಟಿ ಸೋನುವಿನ ಗುಣಗಾನ ಮಾಡುವುದು, ಕೇಳಲಿಕ್ಕೆ ಚೆಂದ ಅನ್ನಿಸುತ್ತಿತ್ತು.

‘ಈಗ ವಾರದ ಹಿಂದೆ ಏನಾಯ್ತು ಗೊತ್ತಾ ವಿಜಿ?’
‘ಹೇಳಿ, ಹೇಳಿ..’ ನಾನಂದೆ.
‘ವೀಕೆಂಡಿನಲ್ಲಿ ಸೋನು ಮನೆಗೆ ಬಂದಿದ್ದಾಗ, ಸಮಯ ನೋಡಿ ನಾನೇ ಅವಳನ್ನ ಕೇಳ್ದೆ, ಇನ್ನೇನು ಒಂದು ವರ್ಷಕ್ಕೆ ನಿನ್ನ ಪಿ.ಜಿ ಮುಗಿದುಹೋಗತ್ತೆ. ಆಮೇಲಿಂದು ಅಂದರೆ ನಿನ್ನ ಮದುವೇದು ಏನು ಯೋಚನೆ ಮಾಡಿದೀಯ? ಅಂತ’
‘ಹೌದಾ? ಅದಕ್ಕೆ ಏನು ಹೇಳಿದಳು ಮಗಳು?’
‘ನಾನು ನಮ್ಮಮ್ಮನಿಗೆ ಹೇಳಿದ ಹಾಗೇ ಹೇಳಿದಳು. ನಂದು ಓದು ಮುಗಿದು, ಒಂದೆರಡು ವರ್ಷವಾದರೂ ನಾನು ಕೆಲ್ಸ ಮಾಡ್ಬೇಕು ಮಮ್ಮಿ. ಆಮೇಲೆ ಯೋಚನೆ ಮಾಡಿದ್ರಾಯ್ತು, ಮದ್ವೆ ವಿಷ್ಯ.. ಅಂತ.’
‘ಅದೂ ಸರಿ ಬಿಡಿ…’ ನಾನು ಮಾತು ಮುಗಿಸುವಷ್ಟರಲ್ಲಿ ಆಶಾ ಹೇಳಿದರು,
‘ಅಯ್ಯೋ ನಿನ್ಗೆ ಗೊತ್ತಾಗಲ್ಲಮ್ಮ. ನಿನ್ನ ಮಕ್ಕಳಿನ್ನೂ ಚಿಕ್ಕವರು. ಇಲ್ಲಿ ಇಂಡಿಯನ್ ಹುಡ್ಗೀರಿಗೆ ಮದುವೆಯಾಗೋದು ಎಷ್ಟು ಕಷ್ಟ ಗೊತ್ತಾ?’
‘ಹೌದಾ?’
‘ಹೌದು ಮತ್ತೆ, ಹುಡುಗರಿಗಾದರೆ ಅಂಥಾ ಕಷ್ಟ ಆಗೋದಿಲ್ಲ ನೋಡು. ಇಂಡಿಯಾಗೆ ಹೋಗ್ತಾರೆ, ಒಂದಷ್ಟು ಜನ ಹುಡುಗೀರನ್ನ ನೋಡ್ತಾರೆ, ಜಾತಕ-ಗೀತಕ ಸರಿ ಹೋಗಿ, ಹುಡುಗಿ ಜೊತೆಗೂ ಮಾತಾಡಿ… ಅಂತೂ ಮೂರೋ, ನಾಲ್ಕೋ ವಾರದೊಳಗೇ ಮದುವೇನೂ ಮುಗಿಸಿಕೊಂಡು ಬಂದೇ ಬಿಡ್ತಾರೆ. ಆ ಹುಡುಗೀರೂ ಅಷ್ಟೆ, ಚೆನ್ನಾಗಿ ಓದಿರ್ತಾರೆ, ಕೆಲ್ಸದಲ್ಲೂ ಇರ್ತಾರೆ, ಇಲ್ಲಿ ಬಂದ್ಮೇಲೂ ಅವರಿಗೆ ಇಷ್ಟ ಬಂದ ಹಾಗೆ ಇರ್ಬೋದು. ಏನೂ ತೊಂದರೆ ಆಗೋದಿಲ್ಲ. ಇಂಡಿಯಾದಲ್ಲೇ ಬೆಳೆದಿರೋದರಿಂದ ಗಂಡ, ಮನೆ ಅಂತ ಹೊಂದಿಕೊಳ್ಳೋದನ್ನೂ ಕಲಿತಿರ್ತಾರೆ. ಏನೂ ತೊಂದರೇನೇ ಬರೋದಿಲ್ಲ.’
‘ಅರೆ, ಅಲ್ಲಿಂದ ಎಲ್ರನ್ನೂ ಬಿಟ್ಟು ಇಷ್ಟು ದೂರ ಬಂದು ಇರೋದೇ ಕಷ್ಟ ಆಗ್ಬೋದಲ್ವ? ಹೊಸದಾಗಿ ಆಗಿರೋ ಮದುವೆ, ಹುಡುಗ, ಹೊಸಾ ದೇಶ, ಪರಿಸರ…. ಎಷ್ಟಕ್ಕೆಲ್ಲ ಅಡ್ಜಸ್ಟ್ ಆಗ್ಬೇಕು…’

ನನ್ನ ಮಾತಿನ್ನೂ ಮುಗಿದಿರಲೇ ಇಲ್ಲ, ಆಶಾಬೆನ್ ನನ್ನ ಸಂದೇಹಗಳನ್ನೆಲ್ಲ ಅವು ಸಂದೇಹಗಳೇ ಅಲ್ಲ ಎಂಬಂತೆ ಒಮ್ಮೆ ಭುಜ ಕೊಡವಿ ಹೇಳಿದರು,
‘ಅಯ್ಯೋ ಅವೆಲ್ಲ ಏನ್ಮಹಾ ಸುಮ್ನಿರು. ನಾವೆಲ್ಲ ಅದಕ್ಕೆ ಅಡ್ಜಸ್ಟ್ ಆಗ್ಲಿಲ್ವ? ಮುಖ್ಯ ಹುಡ್ಗ ಹುಡ್ಗಿ ಒಬ್ಬರಿಗೊಬ್ಬರು ಸರಿಹೋದ್ರೆ ಆಯ್ತು. ಇಲ್ಲೇ ಬೆಳೆದ ಹುಡುಗರಿಗೂ ಇಂಡಿಯಾದಲ್ಲಿ ಬೆಳೆದ ಹುಡ್ಗೀರಿಗೂ ಹೊಂದಿಕೊಳ್ಳೋ ವಿಷಯದಲ್ಲಿ ಅಂಥಾ ಕಷ್ಟವೇನೂ ಆಗೋದಿಲ್ಲ. ನಿಜವಾದ ಕಷ್ಟ ಇರೋದು ಇಲ್ಲೇ ಹುಟ್ಟಿ ಬೆಳೆಯೋ ಇಂಡಿಯನ್ ಹುಡ್ಗೀರಿಗೆ.’
‘ಅದು ಹ್ಯಾಗೆ?’
‘ನೋಡೂ, ಇಲ್ಲಿರುವ ಇಂಡಿಯನ್ ಹುಡುಗರಿಗೂ, ಅವರ ಅಪ್ಪ-ಅಮ್ಮಂದಿರಿಗೂ ಇಂಡಿಯಾದಲ್ಲೇ ಬೆಳೆದ ಹುಡುಗೀರೇ ಬೇಕು ಮದುವೆ ಆಗೋಕೆ. ಇಲ್ಲಿ ಬೆಳೆದ ಹುಡುಗೀರನ್ನ ಯಾರೂ ಪ್ರಿಫರ್ ಮಾಡಲ್ಲ’.
‘ಅದ್ಯಾಕೆ ಆ ಥರಾ?’
‘ಇಲ್ಲಿ ಬೆಳೆದ ಹುಡುಗೀರು ತುಂಬಾ ಇಂಡಿಪೆಂಡೆಂಟ್ ಆಗಿರ್ತಾರಲ್ಲ, ಅದು ಅವ್ರಿಗೆ ಸರಿಹೋಗಲ್ಲ. ನಾಳೆ ಗಂಡ ಹೆಂಡ್ತಿ ಮಧ್ಯ ನಾಲ್ಕು ಮಾತು ಬಂತು ಅಂದ ತಕ್ಷಣ ಈ ಹುಡ್ಗೀರು ಡೈವೋರ್ಸಿಗೆ ಹಾಕಿಬಿಟ್ರೆ ಏನು ಗತಿ? ಇಂಡಿಯಾದ ಹುಡ್ಗೀರಾದ್ರೆ ಪಾಪ, ಆದಷ್ಟೂ ಅನುಸರಿಸಿಕೊಂಡು ಹೋಗ್ತಾರೆ ನೋಡು…. ನಮ್ ಹಾಗೆ.’

ನನಗೆ ಉಕ್ಕಿ ಬರ್ತಿರೋ ಕೋಪ, ಆಗುತ್ತಿದ್ದ ಕಿರಿಕಿರಿ ಎಲ್ಲವನ್ನೂ ತಡೆದುಕೊಳ್ಳುತ್ತಾ ಇವರ ಮುಂದಿನ ಮಾತಿಗೆ ಕಾದೆ.

‘ಹೋಗಲಿ ಇಂಡಿಯಾದಿಂದಾನೇ ಗಂಡು ತರೋಣ ಅಂದ್ರೆ ಅದೂ ಸರಿ ಹೋಗಲ್ಲ. ಮತ್ತೆ ಅದೇ ಪ್ರಾಬ್ಲಂ. ಅಲ್ಲಿನ ಹುಡುಗರು ಇಲ್ಲಿನ ಹುಡ್ಗೀರ್ನ ಪ್ರಿಫರ್ ಮಾಡಲ್ಲ. ಈ ಹುಡ್ಗೀರ್ಗೂ ಅವ್ರು ಸರಿ ಹೋಗೋದಿಲ್ಲ… ಮತ್ತದೇ ಪ್ರಾಬ್ಲಂ ಗೊತ್ತಲ್ಲ?’

ನಾನೀಗ ಏನೂ ಮಾತಾಡಲಿಲ್ಲ. ಆಶಾ ಬೆನ್ ಮುಂದುವರೆಸಿದರು. ‘ಅದಕ್ಕೇ ನನ್ಗೀಗ ಯೋಚ್ನೆ ಆಗಿರೋದು. ಮೊನ್ನೆ ಮದುವೆ ವಿಷಯ ಮಾತಾಡುವಾಗ, ನಾನೇ ಸೋನೂಗೆ ಇದನ್ನೆಲ್ಲ ವಿವರಿಸಿ ಹೇಳಿದೆ. ಇಷ್ಟೆಲ್ಲ ಕಷ್ಟ ಇರುವುದರಿಂದ, ನಿನ್ನ ಓದಿನ ಜೊತೆ ಜೊತೆಗೇ ನಿನಗ್ಯಾರಾದರೂ ಇಷ್ಟ ಆಗ್ತಾರಾ ಅಂತಾನೂ ನೋಡ್ತಾ ಇರು. ಎಲ್ಲ ಸರಿ ಹೋದ್ರೆ, ನಿನಗಿಷ್ಟ ಬಂದವರನ್ನ ನೀನು ಮದುವೆ ಆಗಬಹುದು ಅಂತಾನೂ ಹೇಳ್ದೆ.’

ಈಗ ನನಗೆ ಒಂದಿಷ್ಟು ಸಮಾಧಾನ ಅನ್ನಿಸಿತು. ‘ಪರ್ವಾಗಿಲ್ಲ ನೀವು, ಒಳ್ಳೇ ಸಲಹೇನೇ ಕೊಟ್ಟಿದೀರ ಮಗಳಿಗೆ. ಅವಳ ಜೀವನ, ಅವಳ ಸಂಗಾತಿ, ಅವಳೇ ನಿರ್ಧರಿಸೋದೇ ಒಳ್ಳೇದು ಬಿಡಿ’
‘ಹೌದಪ್ಪಾ, ನಾವ್ಯಾಕೆ ಎಲ್ಲದರಲ್ಲೂ ಮೂಗು ತ್ತೊರಿಸ್ಬೇಕು ಹೇಳು? ಮಕ್ಕಳು ಅಂತ ಇಂಥಾ ವಿಷಯದಲ್ಲೆಲ್ಲ ಅಧಿಕಾರ ಚಲಾಯಿಸೋದಕ್ಕಾಗತ್ತ?’

ಇವರು ಇಂಡಿಯಾದಲ್ಲೇ ಇದ್ದಿದ್ದರೆ ಅಥವಾ ಮಗಳ ಬದಲು ಮಗನಿಗೆ ಮದುವೆ ಮಾಡಬೇಕಿದ್ದರೆ, ಇಷ್ಟೇ ಧಾರಾಳವಾಗಿರುತ್ತಿದ್ದರಾ ಅಂತ ನಾನು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಹೇಳಿದರು,
‘ನಮ್ಮ ಸೋನು ಅವಳಿಗೆ ಇಷ್ಟ ಬಂದ ಯಾರನ್ನು ಬೇಕಾದರೂ ಮದುವೆಯಾಗಬಹುದು. ಅವರು ಬಿ.ಎಂ.ಡಬ್ಲ್ಯೂ. ಆಗಿರಬಾರದು ಅಷ್ಟೆ. ನಾವು ಅದೊಂದೇ ಕಂಡಿಷನ್ ಹಾಕಿರೋದು ಅವಳಿಗೆ.’

ಇದ್ದಕ್ಕಿದ್ದಂತೆ ಈ ವಾಕಿಂಗ್ ರಿಂಕಿನಲ್ಲಿ ಬಿ.ಎಂ.ಡಬ್ಲ್ಯೂ ಎಲ್ಲಿಂದ ಪ್ರತ್ಯಕ್ಷವಾಯಿತು ತಿಳಿಯದೆ ಅವರನ್ನೇ ಕೇಳಿದರೆ, ಅವರಿಗೆ ಆಶ್ಚರ್ಯ. ‘ಯು.ಎಸ್.ನಲ್ಲಿ ೧೦ ವರ್ಷದಿಂದ ಇದ್ದೂ ಹಾಗಂದ್ರೇನು ಗೊತ್ತಿಲ್ವಾ?’ ನನ್ನ ಅಜ್ಞಾನಕ್ಕೆ ಮರುಗುತ್ತಾ ಪಕ್ಕದಲ್ಲಿ ನಡೆಯುತ್ತಿದ್ದ ನನಗೆ ಇನ್ನೂ ಹತ್ತಿರ ಬಂದು ಪಿಸುಗುಟ್ಟಿದರು,
‘ಅದೇ ಬಿ.ಎಮ್.ಡಬ್ಲ್ಯೂ. ಅಂದ್ರೆ ಬ್ಲ್ಯಾಕ್, ಮುಸ್ಲಿಂ, ವೈಟ್… ಈ ಮೂರು ಬಿಟ್ಟು ಇನ್ನೆಂತವರಾದ್ರೂ ಆಗ್ಬೋದು ಅಂತ.’ ಇವರ ಮಾತು ಕೇಳಿ ಸಾವರಿಸಿಕೊಳ್ಳುವಾಗ ಯಾಕೋ ಕಾಲು ತೊಡರುವಂತಾಯಿತು.

‘ಹಾಗೇ ನಮ್ ಹಾಗೇ ವೆಜಿಟೇರಿಯನ್ ಆಗಿರ್ಬೇಕು ಅಂತಾನೂ ಹೇಳಿದೀವಿ, ಇಲ್ಲದೆ ಹೋದ್ರೆ ನಾಳೆ ಇವಳಿಗೇ ಕಷ್ಟ ಆಗುತ್ತಲ್ವ? ಜೊತೆಗೆ ಇಷ್ಟೆಲ್ಲ ಕಂಡಿಷನ್‍ಗಳ ಒಳಗೆ ಸಿಕ್ಕುವ ಹುಡುಗ ಇಂಡಿಯನ್ನೇ ಆಗಿರ್ತಾನಲ್ವ? ಹಾಗಂತ ಹಿಂದೂನೇ ಆಗಿರ್ಬೇಕು ಅಂತೇನಿಲ್ಲ. ಜೈನ್ ಆದ್ರೂ ನಡೆಯತ್ತೆ. ನಮ್ಮದೂ ಅವ್ರದ್ದೂ ದೇವ್ರು ಬೇರೆಯಾದ್ರೂ, ಬಾಕಿ ಎಲ್ಲ ಅಂಥಾ ಏನೂ ವ್ಯತ್ಯಾಸವಿರಲ್ಲ ನೋಡು. ಇಂಡಿಯಾದಲ್ಲಿ ಯಾವ ಸ್ಟೇಟ್‍ನಿಂದ ಬಂದವರಾದ್ರೂ ಪರ್ವಾಗಿಲ್ಲ ಅಂತಾನೂ ಹೇಳ್ಬಿಟ್ಟಿದೀನಿ. ಈವನ್, ಸೌತ್ ಇಂಡಿಯನ್ ಆದ್ರೂ ಪರ್ವಾಗಿಲ್ಲ. ನಮ್ಮ ಮಕ್ಕಳಿಗೆ ಗುಜರಾತೀನೇ ಬೇಕಂತ ಕೂತ್ರೆ ಆಗತ್ತ? ಒಟ್ಟಲ್ಲಿ ಅವಳಿಷ್ಟ ಅಷ್ಟೆ’. ಇಷ್ಟೆಲ್ಲ ಹೇಳಿದ ಮೇಲೂ ‘ಅವಳಿಷ್ಟ’ ಅನ್ನುತ್ತಿರುವ ಇವರ ಜೊತೆ ಮತ್ತೆ ಮಾತಾಡುವಂಥದ್ದೇನೂ ಇಲ್ಲ ಎನಿಸಿ ಸುಮ್ಮನಾದೆ.

ಈ ಮಾತು ಕಥೆ ಎಲ್ಲ ನಡೆದು ಆರು ತಿಂಗಳಾಗಿವೆ. ಜಿಮ್‍ನಲ್ಲಿ ಯಾಕೋ ಒಂದು ವಾರದಿಂದ ಆಶಾಬೆನ್ ಕಾಣಿಸದೆ, ನಾನು ಮಾಡಿದ ಫೋನ್‍ಕಾಲಿಗೂ ಸಿಕ್ಕದೆ, ಅವರ ಆರೋಗ್ಯಕ್ಕೆ ಏನಾದರೂ ತೊಂದರೆಯಾಗಿರಬಹುದಾ ಎಂದುಕೊಳ್ಳುತ್ತಿರುವಾಗ ಅವರ ನೆರೆಯವರಾದ ಸುಗುಣಾ ಜೋಷಿಯಿಂದ ಮೊನ್ನೆ ವಿಷಯ ತಿಳಿಯಿತು. ಸೋನು ತನ್ನ ಅಮ್ಮ, ಅಪ್ಪನಿಗೆ ತಿಳಿಸದೆ ಎಂಗೇಜ್‍ಮೆಂಟ್ ಮಾಡಿಕೊಂಡವಳು, ಈಗ ಮದುವೆಗೂ ಅಣಿಯಾಗುತ್ತಿದ್ದಾಳಂತೆ. ಇದರಿಂದಾಗಿ ಆಶಾ ಮತ್ತವರ ಗಂಡ ಇಬ್ಬರೂ ಎಲ್ಲರಿಂದಲೂ ತಲೆ ಮರೆಸಿಕೊಂಡು ಓಡಾಡುತ್ತಿದ್ದಾರಂತೆ.

‘ಯಾಕೆ ಏನಾಯ್ತು? ಸೋನು ಏನಾದ್ರೂ ಬಿ.ಎಂ.ಡಬ್ಲ್ಯೂ….’ ನನ್ನ ಪ್ರಶ್ನೆ ಮುಗಿಯುವಷ್ಟರಲ್ಲೇ ಸುಗುಣ ಹೇಳತೊಡಗಿದರು, ‘ಅಯ್ಯೋ ಅದಾಗಿದ್ದಿದ್ರೆ ಎಷ್ಟೋ ಒಳ್ಳೇದಿತ್ತು. ಈಗಾಗಿರೋ ಕಥೇನೇ ಬೇರೆ… ಸೋನು ಮದುವೆಯಾಗ್ತಿರೋದು ಇಂಡಿಯನ್, ಹಿಂದು, ವೆಜೆಟೇರಿಯನ್ ಕೂಡ…’ ಮಿಸೆಸ್ ಜೋಷಿ ನನ್ನ ಬಳಿ ಸರಿದು ಪಿಸುಗುಟ್ಟಿದರು, ‘ಆದ್ರೆ ಅದೂ ಒಂದು ಹುಡುಗಿ. ಅವಳ ಹೆಸರು ಮಾಯಾ ದವೆ ಅಂತೆ, ಇವಳ ಹಾಗೇ ಗುಜರಾಥೀ ಹುಡ್ಗಿ. ಸೋನು ಹೀಗೆ ಅಂತ ನಮ್ಗೆ ಯಾರ್ಗೂ ಗೊತ್ತೇ ಇರ್ಲಿಲ್ಲ ನೋಡು. ಬಾಯ್ ಫ್ರೆಂಡ್ಸು, ಡೇಟಿಂಗು ಅಂತೆಲ್ಲ ಬೇರೆ ಹುಡ್ಗೀರ ಥರಾ ಇಲ್ಲಪ್ಪ ನಮ್ ಸೋನು ಅಂತ ಆಶಾ ಬೆನ್ ಎಷ್ಟು ಜಂಭ ಕೊಚ್ಚಿಕೊಳ್ತಿದ್ರು! ಇದು ಹೀಗಿರಬಹುದು ಅಂತ ಪಾಪ ಅವ್ರಿಗಾದ್ರೂ ಹೇಗೆ ತಾನೆ ಅನ್ನಿಸಿರತ್ತೆ. ಇಂಡಿಯನ್ ಮಕ್ಕಳೂ ಹೀಗೆಲ್ಲ ಗೇ, ಲೆಸ್ಬಿಯನ್‍ಗಳಾಗೋದ?’… ಅವರ ಮಾತು ತಡೆಯುತ್ತಾ ನಾನು ಹೇಳಹೊರಟೆ, ‘ಹೋಗ್ಲಿ ಬಿಡಿ, ಏನೋ ಅದೆಲ್ಲ ಅವರವರ ಇಷ್ಟ…’

ಜೋರಾಗಿ ಅಡ್ಡಡ್ಡ ತಲೆಯಾಡಿಸುತ್ತಾ ಅವರು ಇನ್ನಷ್ಟು ಅವೇಶದಿಂದ ಹೇಳತೊಡಗಿದರು,
‘ಸುಮ್ನಿರಮ್ಮ ನೀನು. ನಿನ್ನ ಮಕ್ಕಳಿನ್ನೂ ಚಿಕ್ಕವರು, ಇದೆಲ್ಲ ಏನೂ ಗೊತ್ತಾಗಲ್ಲ ನಿನಗೆ… ನನಗಂತೂ ಸುದ್ದಿ ಕೇಳಿದಾಗಿಂದಾ ಎಷ್ಟು ಹೆದ್ರಿಕೆ ಆಗ್ಬಿಟ್ಟಿದೆ ಗೊತ್ತಾ? ನಮ್ಮ ಮಕ್ಕಳಿಗೆ ಇನ್ಮೇಲೆ ಬಿ.ಎಂ.ಡಬ್ಲ್ಯೂ ಅಷ್ಟೇ ಅಲ್ಲ, ಎಲ್.ಜಿ. ಕೂಡಾ ಬೇಡ ಅಂತ ಮೊದ್ಲೇ ಹೇಳಿಬಿಡ್ಬೇಕು…’ ಮಿಸೆಸ್ ಜೋಷಿ ಇನ್ನೂ ಮುಂದುವರಿಸುತ್ತಿದ್ದರು. ನನಗೆ ಮಾತ್ರ ಅವರು ಮುಂದೆ ಹೇಳಿದ್ದೇನೂ ಕೇಳಿಸಲಿಲ್ಲ.