ನಿಧಾನವಾಗಿ ನಡೆದು ಬಂದು ಬೋಲಿಂಗ್ ಮಾಡುತ್ತಿದ್ದ ಬೇಡಿ ಅವರ ಬೋಲಿಂಗ್‌ನಲ್ಲಿ ಬಹಳ ಚಾಣಾಕ್ಷರಾಗಿದ್ದರು ಮತ್ತು ನಿಸ್ಸೀಮರು. ಒಂದು ಬಾಲು ನಿಧಾನವಾಗಿ ಬಂದರೆ ಮತ್ತೊಂದು ರಭಸದಿಂದ ಬಂದು ವಿಕೆಟ್ ಉರುಳಿಸಿ ಹೋಗುವುದು! ಇಷ್ಟಾಗಿ ಅವರ ಬೋಲಿಂಗ್ ಶೈಲಿಯಲ್ಲಿ ಕಿಂಚಿತ್ತೂ ವ್ಯತ್ಯಾಸವಿರುತ್ತಿರಲಿಲ್ಲ! ಒಂದು ಓವರ್‌ನಲ್ಲಿ 6 ವಿಧವಾಗಿ ಬಾಲು ಮಾಡುವ ಪ್ರತಿಭೆ ಹೊಂದಿದ್ದ ಬೇಡಿಯವರ ಬೋಲಿಂಗ್‌ಅನ್ನು ಹೇಗೆ ಆಡುವುದಪ್ಪ ಎಂದು ಬ್ಯಾಟ್ಮನ್‌ರನ್ನು ಕಾಡುತ್ತಿತ್ತು, ಯಾಕೆಂದರೆ ಏನು ಮಾಡಿದರೂ ಅವರು ನಡೆಯುವ ಶೈಲಿ, ರೀತಿ, ಹಾವಭಾವ ಯಾವುದರಲ್ಲೂ ಬದಲಾವಣೆ ಇರುತ್ತಿರಲಿಲ್ಲ.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ಬರಹ ನಿಮ್ಮ ಓದಿಗೆ

ಭಾರತ ಮುಂಚಿನಿಂದಲೂ ಸ್ಪಿನ್ ಬೋಲಿಂಗಿಗೆ ಪ್ರಸಿದ್ಧಿಯಾಗಿದೆ. ಆಫ್ ಸ್ಪಿನ್ನರ್ ಆಗಿರಬಹುದು, ಅಥವಾ ಲೆಗ್ ಸ್ಪಿನರ್; ಎಡಗೈ ಅಥವ ಬಲಗೈ. ಈಗೀಗ ಎರಡೂ ಕೈಯಲ್ಲಿ ಬೋಲ್ ಮಾಡುವವರು ಬರುತ್ತಿದ್ದಾರೆ! ಇನ್ನು ಕೆಲವು ವರ್ಷಗಳಲ್ಲಿ ಇವರೂ ಫೀಲ್ಡಿಗೆ ಇಳಿದರೆ ಆಶ್ಚರ್ಯವೇನಿಲ್ಲ. ಈಗ ಬ್ಯಾಟಿಂಗ್‌ನಲ್ಲಿ ‘ಸ್ವಿಚ್ ಹಿಟ್’ ಅಂತ ಶುರುವಾಗಿದೆ. ಬಾಲು ಹತ್ತಿರ ಬರುತ್ತಲೇ ಬಲಗೈಲಿ ಆಡುವ ಬ್ಯಾಟ್ಸ್ಮನ್ ಇದ್ದಕ್ಕಿದ್ದಂತೆ ಬ್ಯಾಟನ್ನು ತಿರುಗಿಸಿ ಎಡಗೈ ಬ್ಯಾಟ್ಸ್ಮನ್ನಾಗಿ ಬಾಲನ್ನು ಬೌಂಡರಿಗೆ ಕಳಿಸುತ್ತಾರೆ! ಎಡಗೈ ಬ್ಯಾಟ್ಸ್ಮನ್ ಬ್ಯಾಟ್ ತಿರುಗಿಸಿ, ಬಲಗೈಲಿ ಹೊಡೆಯುತ್ತಾರೆ!

ಹೋದ ಪಕ್ಷದಲ್ಲಿ ಸ್ಪಿನ್ನರ್‌ಗಳ ಮೊದಲ ಶೀರ್ಷಿಕೆಯಲ್ಲಿ ಕೆಲವು ಸ್ಪಿನ್ನರ್ಸ್ ಬಗ್ಗೆ ಮತ್ತು ಇ.ಎ.ಎಸ್. ಪ್ರಸನ್ನ, ಬಿ.ಎಸ್. ಚಂದ್ರಶೇಖರ್ ಅವರ ಬಗ್ಗೆ ದೀರ್ಘವಾಗಿ ವಿಮರ್ಶಣೆ ಮಾಡಿದೆವು. ‘ಸ್ಪಿನ್ ಕ್ವಾರ್ಟೆಟ್’ ನಲ್ಲಿ ಪ್ರಸಿದ್ಧಿಯಾದ ಬಿಷನ್ ಸಿಂಘ್ ಬೇಡಿ ಮತ್ತು ವೆಂಕಟರಾಘವನ್ ಬಗ್ಗೆ ಈಗ ನೋಡೋಣ. ಭಾರತದ ಇತಿಹಾಸದಲ್ಲೇ ಸ್ಪಿನ್ ಬೋಲಿಂಗ್ ಪ್ರಪಂಚದಲ್ಲಿ ಇಷ್ಟು ಉನ್ನತಮಟ್ಟದಲ್ಲಿ ಇರುವುದಕ್ಕೆ ಕಾರಣ ಬೇಡಿ ಮತ್ತು ವೆಂಕಟ್ ಅವರೂ ಕಾರಣರಾಗಿದ್ದರು.

ಅನೇಕ ಸ್ಪಿನ್ನರ್‌ಗಳು ರಣಜಿ ಟ್ರೋಫಿ ಮತ್ತು ಮಿಕ್ಕ ಪಂದ್ಯಗಳಲ್ಲಿ ಎಷ್ಟೋ ದಾಖಲೆಗಳನ್ನು ಮಾಡಿಯೂ ಅವರು ಟೆಸ್ಟ್ ಮ್ಯಾಚು ಆಡಲು ಸಾಧ್ಯವಾಗಲಿಲ್ಲ, ಹಾಗೆ ಆಡಿದವರಲ್ಲಿಯೂ ಟೆಸ್ಟ್ ಮ್ಯಾಚು ಆಡಿದವರು ಬಹಳ ಕಡಿಮೆ. ಸಾಧಾರಣವಾಗಿ ಟೀಮಿನ ನಾಯಕನು ಬೋಲಿಂಗ್‌ನಲ್ಲಿ ಸ್ಪಿನ್‌ಗೆ ಒಬ್ಬರೋ, ಇಬ್ಬರನ್ನೋ ಆಯ್ಕೆ ಮಾಡಿದರೆ ಅದೇ ಹೆಚ್ಚು. ಇನ್ನು ವೇಗವಾಗಿ ಮಾಡುವ ಕನಿಷ್ಟ ಮೂರು ಫಾಸ್ಟ್ ಬೋಲರ್‌ಗಳು ತಂಡದಲ್ಲಿರುತ್ತಾರೆ. ಸ್ಪಿನ್ನರ್‌ನ ಜಾಗಕ್ಕೆ ಎಷ್ಟು ಪೈಪೋಟಿ ಇರುತ್ತೆಂದರೆ ಅದು ಹೇಳಲಸಾಧ್ಯ. ಎಷ್ಟೋ ಸರ್ತಿ ಪಿಚ್ಚನ್ನು ಕೂಲಂಕುಶವಾಗಿ ಪರೀಕ್ಷಿಸಿ, ಹವಾಮಾನ ವಿದ್ಯಾಮಾನಗಳನ್ನು ಅರಿತು ಸ್ಪಿನ್ನರ್ ಬೇಕೋ ಬೇಡವೋ ಎಂದು ಕೂಡ ಅಲ್ಲೇ ಚರ್ಚೆಯಾಗುತ್ತೆ. ಇಷ್ಟಾಗಿಯೂ ಅವಕಾಶ ಸಿಕ್ಕಾಗ ನಮ್ಮ ಸ್ಪಿನ್ನರ್‌ಗಳು ಬಹಳ ಚೆನ್ನಾಗಿ ಆಡಿದ್ದಾರೆ, ಅವರ ಪ್ರತಿಭೆಯನ್ನು ತೋರಿಸಿ ತಂಡವನ್ನು ಗೆಲ್ಲಿಸಿದ್ದಾರೆ.

ಪದ್ಮಾಕರ್ ಶಿವಾಲ್ಕರ್, ರಾಜೇಂದ್ರ ಗೋಯಲ್ ದೇಶದ ಅತ್ಯುತ್ತಮ ಸ್ಪಿನ್ ಬೋಲರ್‌ಗಳಲ್ಲಿ ಇಬ್ಬರು. ಇವರಿಬ್ಬರ ರಣಜಿ ಟ್ರೋಫಿಯ ದಾಖಲೆಯನ್ನು ನೋಡಿದರೆ ಇವರು ಯಾಕೆ ಆಡಲಿಲ್ಲ ಅನ್ನುವ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಏಳುತ್ತೆ. ಇಬ್ಬರೂ ಎಡಗೈ ಬೋಲರ್‌ಗಳಾಗಿದ್ದರು. ಮುಂಬೈನ ಶಿವಾಲ್ಕರ್ 124 ಫಸ್ಟ್ ಕ್ಲಾಸ್ ಮ್ಯಾಚುಗಳನ್ನಾಡಿ ಬೋಲಿಂಗ್‌ನ ಸರಾಸರಿ 19.69 ನಲ್ಲಿ 589 ವಿಕೆಟ್ ತೆಗೆದುಕೊಂಡಿದ್ದಾರೆ. ಬೇರೆ ಯಾವ ದೇಶದಲ್ಲಿದ್ದರೂ ಇಷ್ಟು ಒಳ್ಳೆ ದಾಖಲೆಗಳಿದ್ದರೆ ಅವರು ಟೆಸ್ಟ್ ಮ್ಯಾಚ್ ಆಡುವುದು ಖಚಿತ. ದುರದೃಷ್ಟವಶಾತ್ ಅವರು ಬಿಷನ್ ಬೇಡಿಯ ಸಮಕಾಲೀನರು. ಇಬ್ಬರೂ ಎಡಗೈ ಬೋಲರ್‌ಗಳು. ಈ ಒಂದು ಕಾರಣದಿಂದ ಶಿವಾಲ್ಕರ್ ಟೆಸ್ಟ್‌ಗೆ ಆಡುವುದು ತಪ್ಪಿಹೋಯಿತು.

ರಾಜಿಂದರ್ ಗೋಯಲ್ 157 ಫಸ್ಟ್ ಕ್ಲಾಸ್ ಮ್ಯಾಚ್‌ಗಳನ್ನಾಡಿ, ಕೇವಲ 18.58 ಸರಾಸರಿಯಲ್ಲಿ 750 ವಿಕೆಟ್ ಪಡೆದರು.

ಬೇರೆ ಯಾವ ದೇಶದಲ್ಲಿ ಹುಟ್ಟಿದ್ದರೂ ಇವರಿಬ್ಬರೂ ಅವರ ದೇಶಕ್ಕೆ ಟೆಸ್ಟ್ ಮ್ಯಾಚುಗಳನ್ನು ಕನಿಷ್ಟ ಪಕ್ಷ 10 ವರ್ಷವಾದರೂ ಖಂಡಿತ ಆಡುತ್ತಿದ್ದರು. ಆದರೆ ಭಾರತದಲ್ಲಿ ಹಾಗಾಗಲಿಲ್ಲ. ಇದು ಬಹಳ ದುರದೃಷ್ಟಕರ. ಇದನ್ನು ಅವರಿಬ್ಬರಿಗೂ ಅರಗಿಸಿಕೊಳ್ಳುವುದು ಬಹಳ ಕಷ್ಟವಾಗಿರುತ್ತೆ.

ಟೆಸ್ಟ್ ಆಡಿದವರ ಪೈಕಿ, ಸಲೀಂ ದುರಾನಿ, ಅನಿಲ್ ಕುಂಬ್ಳೆ, ಹರ್ ಭಜನ್ ಸಿಂಘ್, ರವಿ ಶಾಸ್ತ್ರಿ, ವೆಂಕಟಪತಿ ರಾಜು, ವಿ.ವಿ. ಕುಮಾರ್ ಬಾಲೂ ಗುಪ್ತೆ, ರಘುರಾಂ ಭಟ್, ಪ್ರಗ್ಯಾನ್ ಓಝ, ಶಿವಲಾಲ್ ಯಾಧವ್, ನರಸಿಂಹ ರಾವ್ ಇತ್ಯಾದಿ ಸ್ಪಿನ್ನರ್‌ಗಳಾಗಿ ಆಡಿದರು. ಕೆಲವರ ಹೆಸರನ್ನು ನಾನು ಮರೆತಿರಬಹುದು. ಅದು ಜ್ಞಾಪಕ ಶಕ್ತಿಯ ಕೊರತೆ, ಬೇರೆ ಏನೂ ಉದ್ದೇಶವಿಲ್ಲ.

ಸಲೀಂ ದುರಾನಿ ಕೇವಲ 29 ಟೆಸ್ಟ್ ಆಡಿದರೂ ಅವರ ಕೊಡುಗೆ ಬಹಳ ಮಹತ್ವಪೂರ್ಣವಾಗಿತ್ತು. ಅವರು ಒಟ್ಟು 74 ವಿಕೆಟ್‌ಗಳನ್ನು ಪಡೆದಿದ್ದರು. 1961-62 ಇಂಗ್ಲೆಂಡಿನ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅವರ ಬೋಲಿಂಗ್ ಭಾರತಕ್ಕೆ ಕೊಲ್ಕೊತ ಮತ್ತು ಚೆನ್ನೈನಲ್ಲಿ ಭಾರಿ ವಿಜಯವನ್ನು ಕೊಡಿಸಿತು. ಕೊಲ್ಕೊತದಲ್ಲಿ 8 ಮತ್ತು ಚೆನ್ನೈನಲ್ಲಿ 10 ವಿಕೆಟ್ ಪಡೆದು ಸರಣಿ ಗೆಲ್ಲಲು ದುರಾನಿ ಮುಖ್ಯ ಕಾರಣರಾದರು. 1971-72ರಲ್ಲಿ ಭಾರತ ವೆಸ್ಟ್ ಇಂಡೀಸನ್ನು ಪೋರ್ಟ್ ಆಫ್ ಸ್ಪೇನ್ ಪಂದ್ಯದಲ್ಲಿ ದುರಾನಿ ಅತಿ ಮುಖ್ಯ ವಿಕೆಟ್‌ಗಳಾದ ಸೋಬರ್ಸ್‌ ಮತ್ತು ಲಾಯ್ಡ್ ವಿಕೆಟ್‌ಗಳನ್ನು ತೆಗೆದುಕೊಂಡು ವೆಸ್ಟ್ ಇಂಡೀಸ್‌ನಲ್ಲಿ ಭಾರತ ಮೊದಲ ಬಾರಿ ಗೆಲ್ಲಲು ಸಹಾಯ ಮಾಡಿದರು. ಅದೇ ಪಂದ್ಯದಲ್ಲಿ ವೆಂಕಟರಾಘವನ್ 5 ವಿಕೆಟ್‌ಗಳನ್ನು ಬೀಳಿಸಿದರು. ಆಲ್‌ರೌಂಡರ್ ಎಂದು ಪ್ರಸಿದ್ಧಿಯಾದ ದುರಾನಿ, ಪ್ರೇಕ್ಷಕರು ಕೂಗಿದ್ದ ಜಾಗಕ್ಕೆ ಸಿಕ್ಸರ್ ಹೊಡೆಯುತ್ತಿದ್ದರು! ಆ ಕ್ಷಮತೆ ಅವರಲ್ಲಿತ್ತು.

ಮುಂದೆ ಅನಿಲ್ ಕುಂಬ್ಳೆ, ಹರ್ಭಜನ್, ರವಿ ಶಾಸ್ತ್ರಿ ಅವರ ಕೊಡುಗೆಯನ್ನು ವಿಸ್ತಾರವಾಗಿ ವಿಮರ್ಶೆ ಮಾಡೋಣ. ಸದ್ಯಕ್ಕೆ ಬೇಡಿ ಮತ್ತು ವೆಂಕಟರಾಘವನ್ ಅವರ ಆಟದ ಸಾಮರ್ಥ್ಯ ಮತ್ತು ಅವರ ಕೊಡುಗೆಯನ್ನು ನೋಡೋಣ.

*****

ಎಡಗೈ ಬೋಲರ್ ಆದ ಬಿಷನ್ ಸಿಂಘ್ ಬೇಡಿ 1966ರಿಂದ 1979ವರೆಗೆ ಭಾರತ ಟೆಸ್ಟ್ ಟೀಮಿಗೆ ಸ್ಪಿನ್ನರ್ ಆಗಿ ಪ್ರತಿನಿಧಿಸಿದರು. 67 ಟೆಸ್ಟ್ ಆಡಿದ ಬೇಡಿ 28.71 ಸರಾಸರಿಯಲ್ಲಿ 266 ವಿಕೆಟ್ ಗಳಿಸಿದರು. ಅವರು 14 ಬಾರಿ ಕನಿಷ್ಟ 5 ವಿಕೆಟ್ ಪಡೆದು, ಒಂದು ಮ್ಯಾಚಿನಲ್ಲಿ 10 ವಿಕೆಟ್ ಪಡೆದರು. 7/98 ಅವರ ಅತ್ತ್ಯುತ್ತಮ ಬೋಲಿಂಗ್ ಪ್ರದರ್ಶನವಾಗಿತ್ತು. ಅವರು ಭಾರತದ ತಂಡದ ನಾಯಕತ್ವವನ್ನೂ ವಹಿಸಿದ್ದರು. 370 ಫಸ್ಟ್ ಕ್ಲಾಸ್ ಮ್ಯಾಚ್ ಆಡಿದ ಬೇಡಿ 1560 ವಿಕೆಟ್‌ಗಳನ್ನು ಕೇವಲ 21.69ರಲ್ಲಿ ಪಡೆದರು. ಇಂದಿಗೂ ಈ ದಾಖಲೆಯನ್ನು ಯಾರೂ ಮುರಿದಿಲ್ಲ.

ನಿಧಾನವಾಗಿ ನಡೆದು ಬಂದು ಬೋಲಿಂಗ್ ಮಾಡುತ್ತಿದ್ದ ಬೇಡಿ ಅವರ ಬೋಲಿಂಗ್‌ನಲ್ಲಿ ಬಹಳ ಚಾಣಾಕ್ಷರಾಗಿದ್ದರು ಮತ್ತು ನಿಸ್ಸೀಮರು. ಒಂದು ಬಾಲು ನಿಧಾನವಾಗಿ ಬಂದರೆ ಮತ್ತೊಂದು ರಭಸದಿಂದ ಬಂದು ವಿಕೆಟ್ ಉರುಳಿಸಿ ಹೋಗುವುದು! ಇಷ್ಟಾಗಿ ಅವರ ಬೋಲಿಂಗ್ ಶೈಲಿಯಲ್ಲಿ ಕಿಂಚಿತ್ತೂ ವ್ಯತ್ಯಾಸವಿರುತ್ತಿರಲಿಲ್ಲ! ಒಂದು ಓವರ್‌ನಲ್ಲಿ 6 ವಿಧವಾಗಿ ಬಾಲು ಮಾಡುವ ಪ್ರತಿಭೆ ಹೊಂದಿದ್ದ ಬೇಡಿಯವರ ಬೋಲಿಂಗ್‌ಅನ್ನು ಹೇಗೆ ಆಡುವುದಪ್ಪ ಎಂದು ಬ್ಯಾಟ್ಮನ್‌ರನ್ನು ಕಾಡುತ್ತಿತ್ತು, ಯಾಕೆಂದರೆ ಏನು ಮಾಡಿದರೂ ಅವರು ನಡೆಯುವ ಶೈಲಿ, ರೀತಿ, ಹಾವಭಾವ ಯಾವುದರಲ್ಲೂ ಬದಲಾವಣೆ ಇರುತ್ತಿರಲಿಲ್ಲ. ಇದರ ಜೊತೆಗೆ ಅವರ ಬೋಲಿಂಗ್‌ಗೆ ಹೊಡೆಯುವುದು ಬಹಳ ಕಷ್ಟಕರವಾಗಿತ್ತು. ಬೇಡಿ ‘ಸ್ಪಿನ್ ಕ್ವಾರ್ಟೆಟ್’ ಸೇರಿದಾಗಿಂದ ಇವರ ಜೊತೆಗಾರನಾಗಿ ಪ್ರಸನ್ನ, ಚಂದ್ರಶೇಖರ್ ಮಾಡುವಾಗ, ರನ್ ಕೊಡುತ್ತಲೇ ಇರಲಿಲ್ಲ; ಕೊಟ್ಟರೂ ಅದು ಬಹಳ ಕಡಿಮೆ.

‘ಸ್ಪಿನ್ ಕ್ವಾರ್ಟೆಟ್’ನ ಯಾರು ಬೋಲಿಂಗ್ ಮಾಡುವಾಗಲೂ ತಂಡದ ನಾಯಕರಾದ ನವಾಬ್ ಅಫ್ ಪಟೌಡಿ ಅಥವ ಅಜಿತ್ ವಾಡೇಕರ್ ಬ್ಯಾಟ್ಸ್ಮನ್ ಸುತ್ತಲೂ ಕ್ಯಾಚ್ ಹಿಡಿಯುವುದಕ್ಕೆ ದಕ್ಷ ಫೀಲ್ಡರ್ಸ್‌ಗಳನ್ನು ನಿಲ್ಲಿಸುತ್ತಿದ್ದರು. ಇವರಲ್ಲಿ ನಿಸ್ಸೀಮರಾಗಿದ್ದವರು ಏಕನಾಥ್ ಸೋಲ್ಕರ್. ಅವರು ಸಿಲ್ಲಿ ಮಿಡ್-ಆನ್, ಅಥವ ಸಿಲ್ಲಿ ಮಿಡ್-ಆಫ್‌ನಲ್ಲಿ ನಿಂತರೆ ಬಾಲು ಬ್ಯಾಟನ್ನು ಮುಟ್ಟಿದ ತಕ್ಷಣವೇ ಅಲ್ಲೇ ಕ್ಯಾಚನ್ನು ಹಿಡಿದ ಸನ್ನಿವೇಶಗಳಿವೆ! ಹೆಲ್ಮೆಟ್ ಇಲ್ಲದ ಕಾಲದಲ್ಲಿ, ಕಾಲಿಗೆ ಕಣಕಾಲು ( ಶಿನ್) ಗಾರ್ಡ್‌ಗಳಿಲ್ಲದ ಕಾಲದಲ್ಲಿ ಸೋಲ್ಕರ್ ಎಷ್ಟೋ ಸರ್ತಿ ಏಟುಗಳನ್ನು ತಿಂದು, ಆದರೂ ಆ ಜಾಗ ಬಿಡದೆ ಅಸಂಭವ ಅನ್ನಿಸಿಕೊಳ್ಳುವ ಕ್ಯಾಚುಗಳನ್ನು ಕಬಳಿಸಿದ್ದಾರೆ! ನಮ್ಮ ಸ್ಪಿನ್ನರ್‌ಗಳ ಯಶಸ್ಸಿಗೆ ಬಹಳ ಮಟ್ಟಿಗೆ ಕಾರಣ ಸೋಲ್ಕರ್! ಅವರಿಗೆ 50% ಕೀರ್ತಿ ಸಲ್ಲಬೇಕು. ಮಿಕ್ಕ ಫೀಲ್ಡರ್ರಾದ ವೆಂಕಟ್, ವಾಡೇಕರ್ ಅವರೂ ವಿಕೆಟ್ ಹತ್ತಿರ ಫೀಲ್ಡ್ ಮಾಡುವುದರಲ್ಲಿ ದಿಗ್ಗಜರಾಗಿದ್ದರು.

1976ರಲ್ಲಿ ಬೇಡಿ ಭಾರತ ತಂಡದ ನಾಯಕರಾಗಿದ್ದರು. ಅವರ ನೇತೃತ್ವದಲ್ಲೇ ಭಾರತ ವೆಸ್ಟ್ ಇಂಡೀಸನ್ನು ನಾಲಕ್ಕನೇ ಇನಿಂಗ್ಸಿನಲ್ಲಿ 406 ರನ್ ಹೊಡೆದು ಒಂದು ಅಪೂರ್ವ, ಅದ್ಭುತ ಮ್ಯಾಚನ್ನು ಗೆದ್ದಿತು. ಆ ಮ್ಯಾಚಿನಲ್ಲೇ ವಿಶ್ವನಾಥ್ ಮತ್ತು ಗವಾಸ್ಕರ್ ಇಬ್ಬರೂ ಶತಕಗಳನ್ನು ಬಾರಿಸಿ, ಮೊಹಿಂದರ್ ಅಮರ್‌ನಾಥ್ 85 ರನ್ ಹೊಡೆದು ಭಾರತ 406 ರನ್ನ್‌ ಅನ್ನು ಬೆನ್ನಟ್ಟಿ ವೆಸ್ಟ್ ಇಂಡೀಸನ್ನು ಹಿಂದಿಕ್ಕಿತು.

ಬೇಡಿ ಇಂಗ್ಲೆಂಡಿನ ನಾರ್ತ್ ಹೇಂಪ್ಟನ್‌ ಶೈರ್‌ಗೆ ನಾಯಕರಾಗಿದ್ದರು. ಆ ಟೀಮಿನ ಆಟಗಾರ ಜಾನ್ ಲೇವರ್ ಒಮ್ಮೆ ಭಾರತಕ್ಕೆ ಬಂದಿದ್ದಾಗ ಅವನು ಕೈಗೆ ವ್ಯಾಸಲೀನ್ ಹಚ್ಚಿಕೊಂಡು ಬೋಲಿಂಗ್ ಮಾಡಿದರೆಂದು ದೂರಿತ್ತು. ಅದರಿಂದ ಭಾರತ ಒಂದು ಟೆಸ್ಟ್ ಮ್ಯಾಚು ಸೋಲನ್ನು ಅನುಭವಿಸಬೇಕಾಯಿತು. ಆಗ ಬೇಡಿ ನಾಯಕರಾಗಿದ್ದರು. ಲೇವರ್ ಮೇಲಿದ್ದ ದೂರನ್ನು ವಿಚಾರಣೆ ನಡೆಸಿದ ಕಮಿಟಿ ನಿಜವಲ್ಲವೆಂದು ತೀರ್ಪು ಕೊಟ್ಟರು. ಇದರಿಂದ ಬೇಡಿ ಮತ್ತು ಅವರ ಕೌಂಟಿಯಲ್ಲಿ ಒಡಕು ಉಂಟಾಯಿತು.

ಒಂದು ಸರ್ತಿ ಬೇಡಿಯ ನಾಯತತ್ವದಲ್ಲಿ ವೆಸ್ಟ್ ಇಂಡೀಸಿನಲ್ಲಿ ಭಾರತದ ಬ್ಯಾಟ್ಸ್‌ಮನ್‌ರ ಮೇಲೆ ವಿಪರೀತ ಬೌನ್ಸರ್‌ಗಳನ್ನು ಹಾಕಿ ಆಡುವುದಕ್ಕೇ ಆಗುವುದಿಲ್ಲ ಮತ್ತು ಜೀವಕ್ಕೆ ಅಪಾಯ ಎಂದು ಪರಿಗಣಿಸಿದ ಬೇಡಿ ತಮ್ಮ ತಂಡದ ಇನ್ನಿಂಗ್ಸನ್ನು ಡಿಕ್ಲೇರ್ ಮಾಡಿಬಿಟ್ಟರು. ಇದೇ ವೆಸ್ಟ್ ಇಂಡೀಸಿನಲ್ಲೇ 1962ರಲ್ಲಿ ಭಾರತದ ನಾಯಕ ನಾರಿ ಕನ್ಟ್ರಾಕ್ಟರ್ ಅವರ ತಲೆಗೆ ಬೌನ್ಸರ್‌ನಿಂ ಏಟು ಬಿದ್ದು ಅವರ ಜೀವ ಉಳಿದಿದ್ದೇ ಹೆಚ್ಚಾಗಿತ್ತು. ಆ ಸಮಯದಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಫ್ರಾನ್ಕ್ ವೊರೆಲ್ ಕನ್ಟ್ರಾಕ್ಟರ್‌ಗೆ ರಕ್ತ ದಾನ ಮಾಡಿ ಅವರ ಜೀವ ಉಳಿಸಿದರೆಂದು ನಾವು ಸ್ಮರಿಸಬಹುದು. ದುರದೃಷ್ಟವಷಾತ್, ಅದೇ ಫ್ರಾನ್ಕ್ ವೊರೆಲ್‌ಗೆ ಸ್ವಲ್ಪ ವರ್ಷಗಳಾದ ಮೇಲೆ ರಕ್ತದ ಕ್ಯಾನ್ಸರ್ (ಲ್ಯುಕೆಮಿಯ) ಬಂದು ತೀರಿಕೊಂಡರು.

ಕನ್ಟ್ರಾಕ್ಟರ್‌ ಘಟನೆ ಆದ ಮೇಲೆ, ಮತ್ತೆ ಇದೇ ತರಹ ಘಟನೆಗಳು ನಡೆದ ಮೇಲೆ, ಒಂದು ಓವರ್‌ಗೆ ಒಂದೇ ಬೌನ್ಸರ್ ಮಾಡಬಹುದೆಂದು ಐಸಿಸಿ ತೀರ್ಮಾನ ಮಾಡಿತು.

ಹೆಲ್ಮೆಟ್ ಇಲ್ಲದ ಕಾಲದಲ್ಲಿ, ಕಾಲಿಗೆ ಕಣಕಾಲು ( ಶಿನ್) ಗಾರ್ಡ್‌ಗಳಿಲ್ಲದ ಕಾಲದಲ್ಲಿ ಸೋಲ್ಕರ್ ಎಷ್ಟೋ ಸರ್ತಿ ಏಟುಗಳನ್ನು ತಿಂದು, ಆದರೂ ಆ ಜಾಗ ಬಿಡದೆ ಅಸಂಭವ ಅನ್ನಿಸಿಕೊಳ್ಳುವ ಕ್ಯಾಚುಗಳನ್ನು ಕಬಳಿಸಿದ್ದಾರೆ! ನಮ್ಮ ಸ್ಪಿನ್ನರ್‌ಗಳ ಯಶಸ್ಸಿಗೆ ಬಹಳ ಮಟ್ಟಿಗೆ ಕಾರಣ ಸೋಲ್ಕರ್! ಅವರಿಗೆ 50% ಕೀರ್ತಿ ಸಲ್ಲಬೇಕು. ಮಿಕ್ಕ ಫೀಲ್ಡರ್ರಾದ ವೆಂಕಟ್, ವಾಡೇಕರ್ ಅವರೂ ವಿಕೆಟ್ ಹತ್ತಿರ ಫೀಲ್ಡ್ ಮಾಡುವುದರಲ್ಲಿ ದಿಗ್ಗಜರಾಗಿದ್ದರು.

1978ರಲ್ಲಿ ಪಾಕಿಸ್ಥಾನಕ್ಕೆ ಹೋದಾಗ ಅಲ್ಲೂ ವಿಪರೀತ ಬೌನ್ಸರ್‌ ಹಾಕಿದರೂಂತ, ಅದು ಶಾಂತಿಯುತ ಆಟಕ್ಕೆ ಧಕ್ಕೆ ತಂದಿದೆ ಎಂದು ಬೇಡಿ ಆಟವನ್ನು ಅರ್ಧದಲ್ಲೇ ನಿಲ್ಲಿಸಿದರು. ಅವರ ಆ ನೈತಿಕ ನಿರ್ಧಾರದಿಂದ ಐಸಿಸಿಗೆ ದೃಢ ತೀರ್ಮಾನ ತೆಗೆದುಕೊಳ್ಳಲು ಉಪಯೋಗವಾಯಿತು.

1990ರಲ್ಲಿ ಭಾರತ ಆಝರುದ್ದೀನ್ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯದಲ್ಲಿ ಸರಣಿಯನ್ನು 4-0 ಯಲ್ಲಿ ಸೋತಾಗ ಟೀಮಿನ ಮ್ಯಾನೇಜರ್ ಆಗಿದ್ದ ಬೇಡಿ ಹತಾಶರಾಗಿ ಮತ್ತು ಕುಪಿತಗೊಂಡು ಟೀಮಿನ ಆಟಗಾರರೂ ಎಲ್ಲರೂ ಸೇರಿ ಶಾಂತಿ ಮಹಾಸಾಗರದಲ್ಲಿ ಬಿದ್ದು ಮುಳುಗಲಿ ಎಂದು ಹೇಳಿಕೆಯನ್ನು ಕೊಟ್ಟರು!

1975ರ ವಿಶ್ವ ಕಪ್ಪನಲ್ಲಿ ಬೇಡಿಯ ಬೋಲಿಂಗ್ ರೆಕಾರ್ಡು ಹೀಗಿತ್ತು 12 – 8- 6- 1 ಈಗಲೂ ಈ ದಾಖಲೆಯನ್ನು ಯಾರೂ ಮುರಿದಿಲ್ಲ. ಅವರು ದೆಹಲಿ ರಣಜಿ ತಂಡಕ್ಕೆ ತಮ್ಮ ಸಲಹೆಗಳನ್ನು ಆಗಾಗ್ಗೆ ಕೊಡುತ್ತಾರೆ. ಮನಸ್ಸಿನಲ್ಲಿದ್ದನ್ನು ನೇರವಾಗಿ, ಬಾಣ ಬಿಟ್ಟಹಾಗೆ ಮಾತನಾಡುವ ಅವರ ಶೈಲಿ ಸ್ವಲ್ಪ ಜನಕ್ಕೆ ಇಷ್ಟವಾದರೆ ಬಹಳ ಜನಕ್ಕೆ ಅದು ನುಂಗಲಸಾಧ್ಯ.

ಫೆಬ್ರವರಿ 2021ರಲ್ಲಿ ಬೇಡಿಯವರಿಗೆ ಹಾರ್ಟ್‌ ಅಟ್ಯಾಕ್ ಆಗಿ 24 ದಿವಸ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಂಡು ಬಂದರು. ಈಗ ಆರೋಗ್ಯವಾಗಿದ್ದಾರೆ. ಭಾರತ ಸರ್ಕಾರ ಅವರಿಗೆ ಪದ್ಮ ಶ್ರೀ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ.

ಎಸ್. ವೆಂಕಟರಾಘವನ್ ‘ಸ್ಪಿನ್ ಕ್ವಾರ್ಟೆಟ್’ ಗೆ ನಾಲ್ಕನೆಯ ಸದಸ್ಯ. ಹೆಸರು ಮೊಟಕಿಸಿ ಅವರನ್ನು ವೆಂಕಟ್ ಎಂದು ಕರೆಯುವುದು ವಾಡಿಕೆ. ಅವರು ಒಳ್ಳೆ ಆಫ್ ಸ್ಪಿನ್ನರ್ ಅಷ್ಟೇ ಅಲ್ಲ, ಫೀಲ್ಡಿನ ‘ಗಲ್ಲಿ’ ಎಂಬ ಜಾಗದಲ್ಲಿ ಬಹಳ ಪ್ರಖ್ಯಾತ ಫೀಲ್ಡರ್. ಅವರು ಬ್ಯಾಟಿಂಗ್‌ನಲ್ಲೂ ಚೆನ್ನಾಗಿ ಆಡಿ ಒಂದು ಟೆಸ್ಟ್‌ನಲ್ಲಿ 64 ರನ್ನ್ ಹೊಡೆದಿದ್ದಾರೆ. ಅವರ ಮುಂದೆ ಭಾರತದ ನಾಯಕತ್ವವನ್ನೂ ವಹಿಸಿದರು. ಟೆಸ್ಟ್ ಆಟವಾಡಿ ರಿಟೈರ್ ಆದ ತರುವಾಯ ಅವರು ಅಂಪೈರ್ ಆಗಿ ಕ್ರಿಕೆಟ್‌ಗೆ ಸೇವೆ ಸಲ್ಲಿಸಿದರು. ಯಾವಾಗ ಐಸಿಸಿ ತಟಸ್ಥ (ನ್ಯೂಟ್ರಲ್) ಅಂಪೈರ್‌ಗಳ ಪದ್ಧತಿಯನ್ನು ಜಾರಿಗೆ ತಂದಿತೋ ಆವಾಗ ವೆಂಕಟ್‌ಗೆ ಇರುವ ನುರಿತ ಅನುಭವ ಕಂಡು ಅವರು ತಮ್ಮ ಪಂದ್ಯಕ್ಕೆ ಅಂಪೈರಾಗಿ ಬರಬೇಕೆಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ಆಡುವ ‘ಆಷಸ್’ ಸರಣಿಗೆ ಬೇಡಿಕೆ ಬಂತು. ಅಂಪೈರ್ ಆಗಿ ಅವರ ದಕ್ಷತೆಗೆ ಮತ್ತು ಕೌಶಲ್ಯಕ್ಕೆ ಪ್ರಸಿದ್ಧಿಯಾದರು. ಒಟ್ಟು 74 ಪಂದ್ಯಗಳಿಗೆ ವೆಂಕಟ್ ಅಂಪೈರಿಂಗ್ ಮಾಡಿದ್ದಾರೆ.

ವೆಂಕಟ್ 1965 ರಿಂದ 1983ರ ತನಕ, ಬಹಳ ದೀರ್ಘಕಾಲ ಭಾರತದ ಟೀಮನ್ನು ಪ್ರತಿನಿಧಿಸಿದರು. ಒಟ್ಟು 57 ಟೆಸ್ಟ್ ಆಡಿದ ವೆಂಕಟ್ 36.11 ಸರಾಸರಿಯಲ್ಲಿ 156 ವಿಕೆಟ್ ಪಡೆದರು. ಫಸ್ಟ್ ಕ್ಲಾಸ್ ಪಂದ್ಯದಲ್ಲಿ ಅವರು 341 ಮ್ಯಾಚ್ ಆಡಿ 24.14ರ ಸರಾಸರಿಯಲ್ಲಿ 1390 ವಿಕೆಟ್‌ ಗಳಿಸಿ ದೇಶದ ಅತ್ಯುತ್ತಮ ಬೋಲರ್‌ಗಳಲ್ಲಿ ಒಬ್ಬರೆಂಬ ಕೀರ್ತಿ ಅವರದಾಯಿತು. ನಾಲ್ಕೂ ಜನರಿರುವ ‘ಸ್ಪಿನ್ ಕ್ವಾರ್ಟೆಟ್’ ಎಂದು ಪ್ರಸಿದ್ಧಿಯಾದಾಗಲೂ ಅವರವರಲ್ಲಿ ಪೈಪೋಟಿ ಹೆಚ್ಚಾಗಿತ್ತು. ಸ್ಪಿನ್ನರ್‌ಗಳು ಜೊತೆಗೆ ಬೋಲ್ ಮಾಡುವುದು ಸಾಮಾನ್ಯ; ಜೊತೆಗೆ ಬೇಟೆಯಾಡುವ ಹುಲಿಗಳು. ಆದರೂ ಅವರು ತಮ್ಮ ತಮ್ಮ ವೈವಿಧ್ಯತೆ, ತಮ್ಮದೇ ಆದ ಚಾಣಾಕ್ಷಯತೆಯನ್ನು ತೋರುವ ದಕ್ಷತೆ ಎಲ್ಲರಲ್ಲೂ ಇತ್ತು.

ವೆಂಕಟ್ 3 ಟೆಸ್ಟ್‌ನಲ್ಲಿ ಕನಿಷ್ಟಪಕ್ಷ 5 ವಿಕೆಟ್ ತೆಗೆದು, ಒಂದು ಮ್ಯಾಚಿನಲ್ಲಿ 10 ವಿಕೆಟ್ ತೆಗೆದಿದ್ದರು. ಅವರು ಅತ್ಯುತ್ತಮ ದಾಖಲೆ 8/ 72. 44 ಕ್ಯಾಚುಗಳನ್ನು ಹಿಡಿದ ವೆಂಕಟ್ ಒಳ್ಳೆ ಫೀಲ್ಡರ್. ಏಪ್ರಿಲ್ 25 1945ರಲ್ಲಿ ಹುಟ್ಟಿದ ಶ್ರೀನಿವಾಸ್‌ರಾಘವನ್ ವೆಂಕಟರಾಘವನ್ 20 ನೇ ವಯಸ್ಸಿನಲ್ಲಿ ನ್ಯೂಝಿಲೆಂಡ್ ಟೀಮಿನ ವಿರುದ್ಧ ತಮ್ಮ ಟೆಸ್ಟ್ ವೃತ್ತಿ ಶುರುಮಾಡಿದ ದೆಹಲಿ ಟೆಸ್ಟಿನಲ್ಲಿ 12 ವಿಕೆಟ್ ಗಳಿಸಿ ಭಾರತದ ಭಾರಿ ವಿಜಯಕ್ಕೆ ಕಾರಣರಾದರು. ಇವರು ಮುಂದೆ ಉಪ ನಾಯಕನಾಗಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ದೇಶಗಳಲ್ಲಿ ಆಡಿದ ಸರಣಿಯಲ್ಲಿ ಭಾರತ ತನ್ನ ವಿಜಯ ಪತಾಕೆಯನ್ನು ಹಾರಿಸಿತು. ವೆಂಕಟ್ ತಮ್ಮ ಉತ್ತಮ ಬೋಲಿಂಗ್ ಪ್ರದರ್ಶನ ನೀಡುತ್ತಾ ಟ್ರಿನಿಡಾಡ್ ಟೆಸ್ಟಿನಲ್ಲಿ 5 ವಿಕೆಟ್ ಮತ್ತು ಇಂಗ್ಲೆಂಡಿನ 3 ಟೆಸ್ಟಿನಲ್ಲಿ 13 ವಿಕೆಟ್ ಪಡೆದರು. 1975 ಮತ್ತು 1979ರಲ್ಲಿ ಒಡಿಐ ವಿಶ್ವ ಕಪ್ ಗೆ ಭಾರತದ ತಂಡದ ನಾಯಕರಾಗಿದ್ದರು.

ತಟಸ್ಥ (ನ್ಯೂಟ್ರಲ್) ಅಂಪೈರಿಂಗ್ ಯುಗ ವೆಂಕಟ್ ಇರುವಾಗಲೇ ಶುರುವಾಯಿತು. ಒಳ್ಳೆ ಟೆಸ್ಟ್ ಆಟಗಾರ, ತಂಡದ ನಾಯಕನಾಗಿದ್ದ ವೆಂಕಟ್ ಐಸಿಸಿ ಅಂಪೈರಿಂಗಿನ ವ್ಯವಸ್ಥೆಗೆ ಅವರ ಕೊಡುಗೆ ಅಪಾರ. ಅಲ್ಲಿಯ ತನಕ ಸ್ವದೇಶದ ಅಂಪೈರಿಂಗ್ ಮೇಲೆ ಬಹಳ ದೂರುಗಳಿದ್ದವು, ಜೊತೆಗೆ ಅಂಪೈರಿಂಗ್ ಕಳಪೆ ಮಟ್ಟದಲ್ಲಿದ್ದವು. ಅದು ತಟಸ್ಥ ಅಂಪೈರಿಂಗ್ ಬಂದಾಗಿನಿಂದ ಆ ದೂರುಗಳು ನಿಂತು ಹೋದವು. ವೆಂಕಟ್ ಬಹಳ ಮುಖ್ಯವಾದ ವಿಶ್ವ ಕಪ್, ‘ಆಶಸ್’ ಸರಣಿಯಲ್ಲಿ ಅಂಪೈರ್ ಆಗಿ ನಿಂತು ಎಲ್ಲಾ ದೇಶದ ಮೆಚ್ಚುಗೆಯನ್ನು ಗಳಿಸಿದರು. ರಿಟೈರ್ ಆದ ಮೇಲೆ 5 ದಿವಸ ಒಂದು ಟೆಸ್ಟಿಗೆ, ಮತ್ತು 5 ಟೆಸ್ಟಿನಲ್ಲಿ ನಿಲ್ಲಬೇಕೆಂದರೆ ಹುಡುಗಾಟವಲ್ಲ, ದಿನ ಪೂರ್ತಿ ಏಕಾಗ್ರತೆ ಇರಬೇಕು, ದಿನವಿಡೀ ನಿಲ್ಲುವ ಚೈತನ್ಯ ಮತ್ತು ಆರೋಗ್ಯ, ಅಲ್ಲಿನ ಆಗು ಹೋಗುವದನ್ನು ನಿಭಾಯಿಸುವ ದಕ್ಷತೆ ಮತ್ತು ಮಾನಸಿಕ ಒತ್ತಡ. ಇವೆಲ್ಲವನ್ನೂ ವೆಂಕಟ್ ಚೆನ್ನಾಗಿ ನಿರ್ವಹಿಸಿ, ಎಲ್ಲರ ಶಭಾಷ್ಗಿರಿಯನ್ನು ಪಡೆದರು.

(ಏಕ್ನಾಥ್ ಸೋಲ್ಕರ್)

ವೆಂಕಟ್ ಇಂಗ್ಲೆಂಡಿನ ಡರ್ಬಿಶೈರ್ ಕೌಂಟಿಗೆ ಆಡುತ್ತಿದ್ದರು. ಅವರಿಗೆ 2003 ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತು. ಈಗ ಅವರು ಪತ್ನಿ ರಂಜಿನಿಯವರ ಜೊತೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರ ಮಕ್ಕೆಳು ವಿನಯ್ ಮತ್ತು ವಿಕ್ರಮ್ ಕೂಡ ಅಮೆರಿಕಾದಲ್ಲಿ ನೆಲೆಸಿದ್ದಾರೆ.

ಕೇವಲ 27 ಟೆಸ್ಟ್ ಆಡಿದರೂ ದಿವಂಗತ ಏಕ್ನಾಥ್ ಸೋಲ್ಕರ್ 53 ಕ್ಯಾಚುಗಳನ್ನು ಹಿಡಿದು, ‘ಸ್ಪಿನ್ ಕ್ವಾರ್ಟೆಟ್’ ಗೆ ವಿಕೆಟ್ ಬರಲು ಭಾರತ ಗೆಲ್ಲಲು ಅನೇಕ ಬಾರಿ ಕಾರಣರಾದರು. ಅವರ ಹೆಸರಿನಲ್ಲಿ ಬಿಸಿಸಿಐ ಪ್ರತಿವರ್ಷ ಅತ್ಯುತ್ತಮ ಫೀಲ್ಡರ್ (ಬೆಸ್ಟ್ ಫೀಲ್ಡರ್ ) ಗೆ ಪ್ರಶಸ್ತಿಯನ್ನು ಕೊಟ್ಟರೆ, ಫೀಲ್ಡಿಂಗಿಗೆ ಪ್ರಾಮುಖ್ಯತೆ ಬರುತ್ತೆ, ಒಳ್ಳೆ ಫೀಲ್ಡರ್‌ಗಳಿಗೆ ಉತ್ತೇಜನ ಸಿಗುತ್ತೆ. ಚಿಕ್ಕ ವಯಸ್ಸಿನ ಆಟಗಾರರು ಹುರುಪಿನಿಂದ ಫೀಲ್ಡಿನಲ್ಲಿ ಓಡುತ್ತಾರೆ, ಕ್ಯಾಚುಗಳನ್ನು ಹಿಡಿಯುತ್ತಾರೆ.