ಕ್ಲಬ್ ಹೌಸ್ ಎಂಬ ವೇದಿಕೆಯೊಂದು ಸಾಹಿತ್ಯ ಚಟುವಟಿಕೆಗಳನ್ನೆಲ್ಲ ಆಕರ್ಷಿಸುತ್ತಿರುವ ಈ ಹೊತ್ತಿಗೆ ಮಾತಿನ ಕುರಿತು ಒಂಚೂರು ಚಿಂತೆಯಾಗಿದೆ. ಸಂವಾದಕ್ಕಾಗಿ ಇಂದು ಅವಕಾಶಗಳೇ ಇಲ್ಲ ಎಂದು ದೂರುತ್ತಿರುವ ಕಾಲದಲ್ಲಿ ಸಂವಾದಕ್ಕೆ ಲಭ್ಯ ಮಾಧ್ಯಮ ಸರಳಾತಿ ಸರಳವಾಗಿದೆಯಲ್ಲ ಎಂದು ಅಚ್ಚರಿಯಾಗುತ್ತಿದೆ. ವೇದಿಕೆ ವಿಶಾಲವಾಗಿದ್ದರೂ, ಬದುಕು ಎಂಬುದು ಮಾತನಾಡುವವರ ಮನಸ್ಥಿತಿಯನ್ನೇ ಅವಲಂಬಿಸಿದೆಯೇನೋ.
ಕ್ಲಬ್ ಹೌಸ್ ಮಾತುಗಳ ಕುರಿತು ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

 

ಹೂರಣವೇನೇ ಇರಲಿ, ವಿನ್ಯಾಸವು ಹೇಗಿರುತ್ತದೆ ಎಂಬುದಕ್ಕೆ ಹೆಚ್ಚು ಮಹತ್ವ ಇರುವ ಈ ಕಾಲದಲ್ಲಿ ಕ್ಲಬ್ ಹೌಸ್ ಎಂಬ ಹೊಸ ವೇದಿಕೆಯೊಂದು ಕ್ಷಣಮಾತ್ರದಲ್ಲಿ ನಮ್ಮ ಜೀವನವನ್ನು ಪ್ರವೇಶಿಸಿಬಿಟ್ಟಂತಿದೆ. ಮಾತಿನ ಮಹಲುಗಳನ್ನು ಕಟ್ಟಲು ಬೇಕಾದ ಹತ್ಯಾರುಗಳನ್ನು ಸರಳವಾಗಿ ಒದಗಿಸುವ ವೇದಿಕೆಯಿದಾದ್ದರಿಂದ, ಈ ವೇದಿಕೆಯನ್ನೇರುವುದು ಕೂಡ ಬಹಳ ಸುಲಭವಾಗಿದೆ.

ಜಾಗತೀಕರಣವು ಹೆಜ್ಜೆಯೂರುತ್ತಿದ್ದಂತೆಯೇ ‘ಪ್ರೆಸಂಟೇಷನ್’ ಎಂಬ ಪ್ರಕ್ರಿಯೆ ಹೆಚ್ಚು ಆದ್ಯತೆ ಪಡೆಯುತ್ತಿರುವಾಗ ಮಾತಿಗೆ ದೊರೆಯುವ ಮನ್ನಣೆಯೂ ಹೆಚ್ಚಾಯಿತು. ಮಾತಿಗೆ ವಿಪರೀತ ಮಹತ್ವ ಇರುವ  ಸಂದರ್ಭದಲ್ಲಿಗೆಲುವು ಕೂಡ ಮಾತಿನ ಬೆನ್ನ ಹಿಂದೆಯೇ ಹೊರಟು ಹೋಗುತ್ತಿರುವುದನ್ನು ನೋಡುತ್ತಿದ್ದೇವೆ. ಮಾತಿನ ಆಯುಧದಿಂದಲೇ ಗೆಲುವುಗಳನ್ನು ಮೊಗೆದುಕೊಳ್ಳುವುದು ಸಾಧ್ಯ ಎಂಬ ನಂಬಿಕೆಯು ಸಾಮಾಜಿಕವಾಗಿಯೂ ರಾಜಕೀಯವಾಗಿಯೂ ಬಲವಾಗುತ್ತಿರುವ ಇದೊಂದು ಸನ್ನಿವೇಶ ಗೋಚರಿಸುತ್ತಿರುವಾಗಲೇ, ಕ್ಲಬ್ ಹೌಸ್ ಎಂಬ ಮಾಧ್ಯಮವೊಂದು ಪ್ರವೇಶಿಸಿದೆ. ಮಾತ್ರವಲ್ಲ ಈ ಆಲೋಚನೆಗೆ ನಿಚ್ಛಳವಾದ ಮುದ್ರೆಯೊಂದನ್ನು ಒತ್ತಿದೆಯೆನಿಸುತ್ತದೆ.

ಸಮಸ್ಯೆಗಳ ಬಗ್ಗೆಯಾಗಲೀ, ತಮ್ಮ ಸುಖಗಳ ಬಗ್ಗೆಯಾಗಲೀ ಒಂದೆಡೆ ಕುಳಿತು ಮಾತನಾಡುವುದು ಆರೋಗ್ಯವಂತ ಸಮಾಜದ ಲಕ್ಷಣ. ಅಂತಹ ನಿರಾಳತೆಯನ್ನು ಸಾಧಿಸುವುದಕ್ಕೂ ಪೂರ್ವತಯಾರಿಗಳು ಬೇಕೆನ್ನಿ. ಪ್ರಜಾಪ್ರಭುತ್ವದಲ್ಲಂತೂ ವ್ಯವಸ್ಥೆಯು ಎಷ್ಟು ಸದೃಢವಾಗಿದೆ ಎಂಬುದನ್ನುತಿಳಿಯಬೇಕಾದರೆ ಸಾಮಾಜಿಕವಾಗಿ ನಡೆಯುವ ‘ಸಂವಾದ’ಗಳೇ ಉತ್ತಮ ಉದಾಹರಣೆಗಳು. ಅರಳಿಕಟ್ಟೆಯಲ್ಲಿ ಆರಾಮದಾಯಕವಾದ ಬಿಡುಬೀಸಿನ ಮಾತು, ಪಂಚಾಯಿತಿ ಕಟ್ಟೆಯಲ್ಲಿ ನಿರ್ಣಯಾತ್ಮಕವಾದ ಮಾತು, ಬಾವಿಕಟ್ಟೆಯಲ್ಲಿ ಸಂಸಾರದ ಗುಟ್ಟಿನ ಮಾತು.. ಹೀಗೆ ಹಿಂದೆಯೂ ಮಾತಿನ ಮಹಲುಗಳ ಆಶ್ರಯದಲ್ಲಿಯೇ ಮನುಷ್ಯ ಸಾಗಿಬಂದಿದ್ದಾನೆ. ಈ ಹಂಚಿಕೊಳ್ಳುವಿಕೆಯು, ವ್ಯಕ್ತಿಯಲ್ಲಿ ಅಡಗಿದ ಮಾನವೀಯ ಗುಣಗಳನ್ನು ಬಲಪಡಿಸುವ ನಿಟ್ಟಿನಲ್ಲಿಯೂ ಮುಖ್ಯವಾಗಿದೆ. ಇತ್ತೀಚೆಗೆ ಇಂತಹ ಮಾತಿನ ಕಟ್ಟೆಗಳೆಲ್ಲವೂ ಮೊಬೈಲ್ ಅನ್ನು ಪ್ರವೇಶಿಸಿ, ಅವಕಾಶಗಳ ಮಹಾಪೂರವನ್ನೇ ಸೃಷ್ಟಿಸಿದಂತಾಗಿದೆ.

ಫೇಸ್ಬುಕ್ ಎಂಬ ಸಾಮಾಜಿಕ ಜಾಲತಾಣವೊಂದು ಲಭ್ಯವಾದಾಗ ಸಾಹಿತ್ಯ ಲೋಕದಲ್ಲಿ ತುಸು ಗೊಂದಲ ಮೂಡಿದ್ದುಂಟು. ಹೊಸ ಮಾಧ್ಯಮವನ್ನು ಅನುಮಾನದಿಂದ ನೋಡುವವರೂ ಇದ್ದರು. ಅವರ ನಡುವೆಯೇ, ಫೇಸ್ ಬುಕ್ ನಲ್ಲಿ ಕವಿತೆಗಳನ್ನು ಹಾಕಿಕೊಳ್ಳುವವರು, ಪುಟ್ಟ ಅನಿಸಿಕೆ ಬರೆಯುವವರು, ಮಿನಿಕಥೆಗಳನ್ನು ಅಪ್ ಲೋಡ್ ಮಾಡುತ್ತಿದ್ದವರು ಟೀಕೆಗಳನ್ನು ಎದುರಿಸುತ್ತ ಬಂದರೂ, ಕೊನೆಗೆ ಸಾಹಿತ್ಯ ಲೋಕದ ಭಾಗವೆಂಬಂತೆ ಫೇಸ್ ಬುಕ್ ಬೇರುಬಿಟ್ಟಿತು. ‘ಫೇಸ್ ಬುಕ್ ನಲ್ಲಿ ಅವಸರದ ಸಾಹಿತ್ಯ ಸೃಷ್ಟಿಯಾಗುತ್ತಿದೆ, ಹುರುಳಿರುವ ಗಟ್ಟಿ ಸಾಹಿತ್ಯ ಸೃಷ್ಟಿಗೆ ಹೊಸತಲೆಮಾರು ಮನ ಮಾಡದೇ ಇರಲು ಈ ಫೇಸ್ ಬುಕ್ಕೇ ಕಾರಣ’ ಎಂಬೆಲ್ಲ ಬೈಗುಳದ ನಡುವೆಯೂ ಅದು ಮಾತ್ರ ಎಲ್ಲ ರೀತಿಯ ಬರಹಗಳಿಗೆ, ಬರಹಗಳ ಪ್ರಚಾರಗಳಿಗೆ ಗೋಡೆಯಾಗಿದ್ದುಕೊಂಡು ತಣ್ಣಗೆ ನಮ್ಮ ನಡುವೆಯೇ ಬಿದ್ದುಕೊಂಡಿದೆ.

ಕಳೆದ ವರ್ಷ ಕೊರೊನಾ ಸಂಕಟ ಎದುರಾದಾಗಲಂತೂ ಸಾಹಿತ್ಯ ಲೋಕವು ಫೇಸ್ ಬುಕ್ ನ ಆಸರೆ ಬಳಸಿ ಹಗುರಾಯಿತು. ಇದೀಗ ಕ್ಲಬ್ ಹೌಸ್ ಎಂಬ ಸರಳ ವೇದಿಕೆಯನ್ನು ಕಂಡಿದ್ದೇ ಮಾತಿನಲೋಕವೇ ಇಡಿಯಾಗಿ ಈ ವೇದಿಕೆಯನ್ನೇರಿಬಿಟ್ಟಿತು. ಸಾಹಿತ್ಯವೇನು, ಉದ್ಯಮ ವಹಿವಾಟು, ಹಳೇ ಸ್ನೇಹ, ನೆನಪುಗಳ ಪ್ರವಾಹ, ಪ್ರೇಮಕಾಮ, ಅಧ್ಯಾತ್ಮ ಎಲ್ಲವೂ ಕ್ಲಬ್ ಹೌಸ್ ಎಂಬ ಪೆಟ್ಟಿಗೆ ಸೇರಿಕೊಂಡವು.

ಅದರಲ್ಲಿಯೂ ಬರಹ ಮತ್ತು ಮಾತುಗಳ ಸಖ್ಯ ಹೆಚ್ಚಿರುವ ಸಾಹಿತ್ಯ ವಲಯಕ್ಕೆ ಕ್ಲಬ್ ಹೌಸ್ ಇಷ್ಟವಾದಂತಿದೆ. ಸದ್ಯಕ್ಕಂತೂ ಸಾಹಿತ್ಯ ಲೋಕದಲ್ಲಿ ಪುಳಕ ಮೂಡಿಸಿರುವ ಕ್ಲಬ್ ಹೌಸ್ ನಲ್ಲಿ ಮಾಹಿತಿಯ ಮಹಾಪೂರವೇ ಇದೆ ಎಂದು ಹೇಳುತ್ತಾರೆ ಹಿರಿಯ ಸಾಹಿತಿ, ಸಾಮಾಜಿಕ ಜಾಲತಾಣಗಳ ಸಕಾರಾತ್ಮಕ ಪ್ರವೃತ್ತಿಯ ಬಗ್ಗೆ ಉತ್ತಮ ಗ್ರಹಿಕೆ ಹೊಂದಿರುವ ಬೊಳುವಾರು ಮಹಮ್ಮದ್ ಕುಂಞಿ.

‘ಸಂವಾದಗಳಲ್ಲಿ ಎರಡು ವಿಧಗಳಿವೆ. ದೊಡ್ಡ ವೇದಿಕೆಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ವಿಷಯ ಮಂಡನೆ ಮಾಡಿ ಸುಮ್ಮನಾಗುವುದು ಒಂದಾದರೆ, ಸಾಮಾಜಿಕ ಆಗು ಹೋಗುಗಳಿಗೆ ಪ್ರತಿಕ್ರಿಯಿಸುತ್ತ ವಾದ –ಸಂವಾದಗಳಲ್ಲಿಸಕ್ರಿಯವಾಗಿ ತೊಡಗಿಸಿಕೊಳ್ಳುವ ಸಾಮಾನ್ಯ ಗುಂಪು ಮತ್ತೊಂದು. ಸಾಮಾನ್ಯ ಗುಂಪುಗಳಲ್ಲಿ ಇಂತಹ ವಾದ, ಪ್ರತಿವಾದ, ತಗಾದೆ, ಜಟಾಪಟಿಗಳು ನಡೆಯುತ್ತಿರುತ್ತವೆ. ನಿರಂತರವಾಗಿ ಓದುವುದು ಕಷ್ಟವಾದ ನನ್ನ ಈ ವಯಸ್ಸಿನಲ್ಲಿ ಈ ಕ್ಲಬ್ ಹೌಸ್ ಎಷ್ಟೊಂದು ವಿಷಯಗಳನ್ನು ಒದಗಿಸುವ ಮಾಹಿತಿಯ ಕಣಜವಾಗಿದೆ ಎಂದು ನನಗೆ ಅನಿಸುತ್ತದೆ. ಅದರಲ್ಲಿಯೂ ಹೊಸತಲೆಮಾರಿನ ಈ ಹುಡುಗ ಹುಡುಗಿಯರು ಚಿಕ್ಕವಯಸ್ಸಿಗೇ ಎಷ್ಟೊಂದು ಓದಿಕೊಂಡಿದ್ದಾರೆ ಎಂದು ಅಚ್ಚರಿಪಡುತ್ತೇನೆ. ದಿನಕ್ಕೆ ಸುಮಾರು 10 ಗಂಟೆಗಳ ಕಾಲ ನಾನು ಕ್ಲಬ್ ಹೌಸ್ ನಲ್ಲಿರುವಾಗ, ನನಗೆ ದೊರೆಯುವ ವಿಚಾರ, ವಿಷಯಗಳು ಬಹಳಷ್ಟು. ಓದುವ ಮೂಲಕ ಅವುಗಳನ್ನು ದಕ್ಕಿಸಿಕೊಳ್ಳಲು ನನಗೆ ಒಂದು ತಿಂಗಳೇ ಬೇಕಾಗಬಹುದೇನೋ ..’ ಎನ್ನುವ ಅವರು, ಮಾಧ್ಯಮವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು ಎಂಬ ನಿರ್ಣಯ ನಮ್ಮ ಕೈಯ್ಯಲ್ಲಿದೆ ಎನ್ನುತ್ತಾರೆ.

ಅರಳಿಕಟ್ಟೆಯಲ್ಲಿ ಆರಾಮದಾಯಕವಾದ ಬಿಡುಬೀಸಿನ ಮಾತು, ಪಂಚಾಯಿತಿ ಕಟ್ಟೆಯಲ್ಲಿ ನಿರ್ಣಯಾತ್ಮಕವಾದ ಮಾತು, ಬಾವಿಕಟ್ಟೆಯಲ್ಲಿ ಸಂಸಾರದ ಗುಟ್ಟಿನ ಮಾತು.. ಹೀಗೆ ಹಿಂದೆಯೂ ಮಾತಿನ ಮಹಲುಗಳ ಆಶ್ರಯದಲ್ಲಿಯೇ ಮನುಷ್ಯ ಸಾಗಿಬಂದಿದ್ದಾನೆ.

“ಜನರಲ್ಲಿ ಒಳ್ಳೆಯ ಸಂಸ್ಕಾರ, ವಿದ್ವತ್ ಎಲ್ಲ ಸತ್ತು ಹೋಯಿತು ಎಂದು ಹಿರಿಯರು ಹಲುಬುವುದು ಸರಿಯಲ್ಲ. ನಿಜಕ್ಕೂ ಹೊಸತಲೆಮಾರಿನವರು ಗಡಿಗಳ ಹಂಗು ಮೀರಿ ಹೊಸ ವಿಚಾರಗಳನ್ನು ಅರಿಯುವ ಉತ್ಸಾಹವನ್ನು ತೋರುತ್ತಿದ್ದಾರೆ. ಆ ನಿಟ್ಟಿನಲ್ಲಿ ಲಭ್ಯವಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕ್ಲಬ್ ಹೌಸ್ ಗೆ ಸಂಬಂಧಿಸಿ ಹೇಳುವುದಾದರೆ, ಹೀಗೆ ಉತ್ಸಾಹಿ ಯುವಜನರು ಅಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಕಾಣಬಹುದು. ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಯ ಗುಂಪುಗಳನ್ನೂ ನಾನು ಗಮನಿಸಿದ್ದೇನೆ. ಅಲ್ಲಿ ಇಸ್ಲಾಂ, ಬೌದ್ಧ ಸೇರಿದಂತೆ ಜಗತ್ತಿನ ಮತ ಧರ್ಮಗಳಿಗೆ ಸಂಬಂಧಿಸಿದ ಮುಕ್ತವಾದ ಚರ್ಚೆಗಳು ನಡೆಯುತ್ತವೆ. ಹೊಸ ಸಿದ್ಧಾಂತಗಳ ಪರಿಚಯವಾಗುತ್ತದೆ. ಒಂದು ಸಿದ್ಧಾಂತದ ಪರ ವಿರೋಧ ಮಾತನಾಡುವವರು ಕಣ್ಣಿಗೆ ಕಾಣಿಸುವುದಿಲ್ಲವಾದರೂ, ಅವರು ವಿಚಾರಗಳನ್ನು ಹೇಳಲು ಇಲ್ಲಿ ಮುಜುಗರ ಪಡಬೇಕಾಗಿಲ್ಲ, ಭಯಪಡಬೇಕಾಗಿಲ್ಲ. ಇದೊಂಥರ ಅರಿವಿನ ವಿಸ್ತರಣೆಯ ಮಾರ್ಗವೇ ಆಗಿದೆ.’ ಎನ್ನುತ್ತಾರೆ ಬೊಳುವಾರು.

ಕಥೆಕೂಟ ಎಂಬ ವಾಟ್ಸ್ ಆಪ್ ಗ್ರೂಪ್ ಮೂಲಕ ಸಾಹಿತ್ಯದ ಚರ್ಚೆಗಳನ್ನು ನಡೆಸುತ್ತಿದ್ದ ಗುಂಪು ಈಗ ಕ್ಲಬ್ ಹೌಸ್ ನಲ್ಲಿ ಸಭೆ ಸೇರಿ ಕಥೆಗಳ ಕುರಿತು ಚರ್ಚೆ ನಡೆಸುತ್ತಿದೆ. ಅಂದರೆ ವಾಟ್ಸ್ ಆಪ್ ಎಂಬ ಮಾಧ್ಯಮದ ಮೂಲಕ ಆರಂಭವಾದ ಸಾಹಿತ್ಯದ ಚರ್ಚೆಯು ಇನ್ನಷ್ಟು ಸುಲಲಿತವಾಗಿ ಮುಂದುವರೆಯಲು ಅವರಿಗೀಗ ಕ್ಲಬ್ ಹೌಸ್ ನೆರವಾಗಿದೆ. ಹೊಸತಲೆಮಾರಿನ ಕಥೆಗಾರರ ಕಥೆಗಳನ್ನು ಪರಸ್ಪರ ಓದಿಕೊಂಡು ಪ್ರತಿಕ್ರಿಯಿಸುವ ಈ ಚರ್ಚೆಯು ಹೆಚ್ಚಿನ ಓದಿಗೆ ಪ್ರೋತ್ಸಾಹ ನೀಡುತ್ತಿದೆ ಎನ್ನುತ್ತಾರೆ ಈ ಗುಂಪಿನ ಸದಸ್ಯೆ ಪೂರ್ಣಿಮಾ ಮಾಳಿಗಿಮನೆ. ‘ಇದೊಂಥರಾ ಆನ್ ಲೈನ್ ವರ್ಕ್ ಶಾಪ್ ಇದ್ದ ಹಾಗೆ. ಕಲಿಕೆಗೆ ಮಾಧ್ಯಮವಾಗಿ ಇದು ಬಳಕೆಯಾದರೆ ಅದು ಒಳ್ಳೆಯದೇ ಅಲ್ಲವೇ. ಫೇಸ್ ಬುಕ್ ಲೈವ್ ಅಥವಾ ಗೂಗಲ್ ಮೀಟ್ ನಂತಹ ವೇದಿಕೆಗಳಿಗೆ ಬೇಕಾಗುವಷ್ಟು ಡೇಟಾದ ಅವಶ್ಯಕತೆಯೂ ಇಲ್ಲದೇ ಇರುವುದರಿಂದ ಇಲ್ಲಿ ಭಾಗವಹಿಸುವುದು ಸುಲಭ. ಜೊತೆಗೆ ಇಲ್ಲಿ ಬಹುದೊಡ್ಡ ಗುಂಪನ್ನು ಉದ್ದೇಶಿಸಿ ಮಾತನಾಡುವುದು ಸಾಧ್ಯ. ಇತ್ತೀಚೆಗೆ ವಿಶ್ವವಾಣಿ ಪತ್ರಿಕೆಯ ವತಿಯಿಂದ ನಡೆದ ಚರ್ಚೆಯಲ್ಲಿ ಸಾಹಿತಿ ಎಸ್. ಎಲ್. ಭೈರಪ್ಪ ಭಾಗವಹಿಸಿದ್ದರು. ಅವರ ಮಾತುಗಳನ್ನು ಕೇಳಲು ಬರೋಬ್ಬರಿ 8 ಸಾವಿರಕ್ಕೂ ಹೆಚ್ಚು ಜನರು ಈ ಕೊಠಡಿಯಲ್ಲಿ ಇದ್ದರು. ಸಾಮಾಜಿಕ ಜಾಲತಾಣವೊಂದರಲ್ಲಿ ಇಷ್ಟು ದೊಡ್ಡ ಸಮೂಹವು ಒಂದೆಡೆ ಸೇರುವ ಅವಕಾಶ ವಿಶೇಷವಾದ್ದು ಅಲ್ಲವೇ. ಅಲ್ಲದೆ ಗಣ್ಯ ವ್ಯಕ್ತಿಗಳ ಮಾತುಗಳನ್ನು ಸಾಮಾನ್ಯ ವ್ಯಕ್ತಿಗಳು ಆಲಿಸುವ, ಅವರಿಗೆ ಪ್ರಶ್ನೆಗಳನ್ನು ಕೇಳುವ ಅವಕಾಶಗಳೂ ಇರುವುದರಿಂದ ಇದೊಂಥರಾ ಆಪ್ತವೂ ಅನಿಸುತ್ತದೆ’ಎಂಬುದು ಪೂರ್ಣಿಮಾ ಅವರ ಅಭಿಪ್ರಾಯ.

ವೇದಿಕೆಯನ್ನು ನಿಭಾಯಿಸುವ ಕಲೆಯನ್ನುಕಲಿಯುವುದಕ್ಕೆ ಇದೊಂದು ಉತ್ತಮ ವಿಧಾನ ಎನ್ನುವುದನ್ನು ಬೊಳುವಾರು ಅವರೂ ಒಪ್ಪಿಕೊಳ್ಳುತ್ತಾರೆ. ಮಾತನಾಡುವುದನ್ನು ಕಲಿಯಲು, ಹೊಸ ವಿಚಾರ ತಿಳಿಯಲು, ವಿಶ್ಲೇಷಣೆಗಳನ್ನು ನಡೆಸುವುದು ಹೇಗೆಂದು ಕಲಿಯಲು ಕ್ಲಬ್ ಹೌಸ್ ಅನ್ನು ಬಳಸಿಕೊಳ್ಳಬಹುದು ಎನ್ನುತ್ತಾರೆ ಅವರು.

ಹೊಸ ವಿಚಾರಗಳನ್ನು ಕಲಿಯಲು ಮತ್ತು ಉತ್ತಮ ಚರ್ಚೆಗಳಿಗೆ ಕ್ಲಬ್ ಹೌಸ್ ಉತ್ತಮ ವೇದಿಕೆ ಎಂಬುದನ್ನು ನ್ಯಾಯಪಥ ಪತ್ರಿಕೆಯ ಸಂಪಾದಕರಾದ ಗುರುಪ್ರಸಾದ್ ಡಿ.ಎನ್. ಕೂಡ ಹೇಳುತ್ತಾರೆ. ಹೊಸ ಪುಸ್ತಕಗಳು,ಹೊಸ ವಿಚಾರಗಳು ಜಗತ್ತಿನ ಎಲ್ಲೆಡೆಯಿಂದ ಬರುವುದಕ್ಕೆ ಇದೊಂದು ಉತ್ತಮ ಕಿಂಡಿ. ಹೊಸ ತಂತ್ರಜ್ಞಾನ ಚೆನ್ನಾಗಿದೆ ಎಂದೆನಿಸುತ್ತದೆ ಎಂಬುದು ಅವರ ಅಭಿಪ್ರಾಯ.

‘ಸುಮ್ಮನೇ ಕ್ಲಬ್ ಹೌಸ್ ಲಾಗಿನ್ ಆಗಿ ಅಡುಗೆ ಕೆಲಸಗಳನ್ನೆಲ್ಲ ಮಾಡಿಕೊಳ್ಳುತ್ತ ಇರಬಹುದು. ಕಿವಿಮೇಲೆ ಉತ್ತಮ ವಿಚಾರಗಳು ಬೀಳುತ್ತಲೇ ಇರುತ್ತವೆ. ಉದಾಹರಣೆಗೆ ಒಂದು ಕೋಣೆಯಲ್ಲಿ ನೆಹರು ಅವರ ‘ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕದ ಓದುವಿಕೆ ಸಾಗುತ್ತದೆ. ಹೀಗೆ ದಿನಾ ಒಂದಿಷ್ಟು ಪುಟಗಳನ್ನು ಓದುತ್ತಿದ್ದರೆ, ನಾವು ಕೇಳಿಸಿಕೊಳ್ಳುತ್ತ ಇರಬಹುದು. ನಾವಾಗಿಯೇ ಅಷ್ಟೊಂದು ದೊಡ್ಡ ಪುಸ್ತಕವನ್ನು ಓದುವುದು ಸಾಧ್ಯವೇ… ಇನ್ನು ಚರ್ಚೆಗಳೂ ಅಷ್ಟೇ ಚೆನ್ನಾಗಿರುತ್ತವೆ. ಒಂದೆಡೆ ಇಂಗ್ಲಿಷ್ ಪುಸ್ತಕವೊಂದರ ಚರ್ಚೆ, ಮಗದೊಂದು ಕಡೆ ಸಾಧಕಿಯೊಬ್ಬರ ಪರಿಚಯ… ಹೀಗೆ ಸಮಯವನ್ನು ಉತ್ತಮವಾಗಿ ಕಳೆಯಲು ಇಷ್ಟು ಚಂದದ ಅವಕಾಶ ಸಿಕ್ಕಿದೆಯಲ್ಲಾ ಎಂದುಕೊಳ್ಳುವೆ. ಆದರೆ ಕನ್ನಡ ಸಾಹಿತ್ಯ ಕ್ಷೇತ್ರದ ಕಾರ್ಯಕ್ರಮಗಳು ಏಕ ಕಾಲಕ್ಕೆ ಬೇರೆ ಬೇರೆ ಕೋಣೆಗಳಲ್ಲಿ ನಡೆದರೆ ‘ಅಯ್ಯೋ ಮಿಸ್ ಆಗ್ತಿದೆಯಲ್ಲಾ’ ಎಂದು ಬೇಸರವಾಗುವುದುಂಟು’ ಎಂದು ಹೇಳುತ್ತಾರೆ ಲೇಖಕಿ ರೇಣುಕಾ ಮಂಜುನಾಥ್.

‘ವಿಶ್ವವಾಣಿ ಕ್ಲಬ್ ಹೌಸ್ ಕೊಠಡಿಗೆ ಆಗಮಿಸಿ ಸದ್ಗುರು ಮಾತನಾಡಿದ ಕಾರ್ಯಕ್ರಮ, ಜನರ ಉಪಸ್ಥಿತಿಯ ದೃಷ್ಟಿಯಿಂದ ವಿಶ್ವದಲ್ಲಿಯೇ ಅತೀ ಹೆಚ್ಚು ಕೇಳುಗರು ಭಾಗವಹಿಸಿದ ಕಾರ್ಯಕ್ರಮ ಎನಿಸಿಕೊಂಡಿದೆ. 11,783 ಮಂದಿ ಕೇಳುಗರು ಇದರಲ್ಲಿ ಭಾಗವಹಿಸಿದ್ದರು. ಚಿನ್ಮಯ ಮಿಷನ್ ನ ಸ್ವಾಮಿ ಆದಿತ್ಯಾನಂದ ‘ಮೊದಲು ಮಾನವನಾಗು’ ಎಂಬ ವಿಷಯದ ಬಗ್ಗೆ ಮಾತನಾಡಿದ್ದಾಗ ನಾಲ್ಕನೇ ಸ್ಥಾನ ಹಾಗೂ ಕ್ಯಾಪ್ಟನ್ ಗೋಪಿನಾಥ್ ಅವರು ಭಾಗವಹಿಸಿದ್ದಾಗ ವಿಶ್ವವಾಣಿ  ಕ್ಲಬ್ ಹೌಸ್ ಕೊಠಡಿ ಜಗತ್ತಿನಲ್ಲಿಯೇ ಎರಡನೇ ಸ್ಥಾನದಲ್ಲಿತ್ತು ಎನ್ನುವುದು ಗಮನಾರ್ಹ. ಹೀಗೆ ಹೆಚ್ಚು ಕೇಳುಗರು ಭಾಗವಹಿಸಿದ  ಅನೇಕ ಕಾರ್ಯಕ್ರಮಗಳು ನಡೆದವು.  ಈ ಅಂಕಿಗಳನ್ನು ನೋಡಿದರೆ ಕನ್ನಡಿಗರು  ‘ನಿಜದಿಂ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್’ ಎಂಬ ಸಾಲುಗಳು ನೆನಪಾಗುತ್ತವೆ’ ಎನ್ನುತ್ತಾರೆ ರೇಣುಕಾ ಮಂಜುನಾಥ್.

ಸದ್ಯಕ್ಕೆ ಮಾತಿನ ಹರಿವಿಗೆ ಅಡೆತಡೆಗಳಂತೂ ಇಲ್ಲ. ಇದು ಮಾಹಿತಿಯನ್ನು ಒದಗಿಸುವ, ಲೋಕವನ್ನು ಅರಿಯುವುದಕ್ಕೆ ಇರುವ ಮಾಧ್ಯಮವೆಂಬುದನ್ನು ಒಪ್ಪಿಕೊಂಡರೆ ಲಾಭಗಳೇ ಹೆಚ್ಚೆಂದು ಕಾಣಿಸುತ್ತದೆ. ಹಾಗೆ ಇನ್ನೊಬ್ಬರ ಮಾತುಗಳನ್ನು ಕೇಳಿಸಿಕೊಂಡು, ಅರಿವನ್ನು ವಿಸ್ತರಿಸಿಕೊಂಡಾಗ, ಅದು ಸಾಮಾಜಿಕ ಏಳಿಗೆಗೆ, ವ್ಯವಸ್ಥೆಯು ಆರೋಗ್ಯಕ್ಕೆ ಕಾರಣವಾದೀತೇ..ಎಂಬುದು ನಮ್ಮ ಮುಂದಿರುವ ಪ್ರಶ್ನೆ.

‘ಮಾತು ಸೋತ ಭಾರತ’ ಕೃತಿಯಲ್ಲಿ ಯು.ಆರ್. ಅನಂತ ಮೂರ್ತಿ ಹೀಗೆ ಬರೆಯುತ್ತಾರೆ: ‘ಮಾತಿನ ಸಂವಾದ ಶಕ್ತಿಯಲ್ಲಿ ಒಬ್ಬರನ್ನೊಬ್ಬರು ಒಲಿದು ಒಲಿಸಿಕೊಳ್ಳುವುದು ಸಾಧ್ಯ ಎಂಬುದು ಪ್ರಜಾತಂತ್ರ ನಾಗರಿಕತೆಯ ಬಹುಮುಖ್ಯ ಲಕ್ಷಣ. ಒಬ್ಬನ ದುಃಖ ಇನ್ನೊಬ್ಬನಿಗೆ ಗೊತ್ತಾಗುವುದು ಹೀಗೆ. ನಾವು ಬದಲಾಗುವುದಕ್ಕೂ ನಮ್ಮ ಅರಿವು ಹಿಗ್ಗುವುದಕ್ಕೂ ಪ್ರೇರಕವಾಗುವುದು ಮಾತಿನ ಶಕ್ತಿ. ಸಮೂಹ ಸಮುದಾಯವಾಗುವುದು ಮಾತಿನ ಮೂಲಕ. ಈ ಮಾತು ಹೇಗಿರಬೇಕೆಂದರೆ, ಎಲ್ಲ ಮಾತಿನ ಗರ್ಭದಲ್ಲೇ ಮಾತಿಗೆ ದಕ್ಕದ ಮೌನವಿದೆಯೆಂದೂ ಕೇಳುವವನಿಗೆ ಅನ್ನಿಸಬೇಕು. ಆಗ ಮಾತು ನಾವು ಬದಲಾಗಬೇಕಾಗುವಂತೆ ಮಾಡುತ್ತದೆ.’

ಹೌದು. ‘ಒಬ್ಬರ ದುಃಖ ಇನ್ನೊಬ್ಬರಿಗೆ ಗೊತ್ತಾಗುವುದು ಹೀಗೆ’ ಎಂಬ ಸಾಲುಗಳು ಈಗ ಕಾಡುತ್ತವೆ. ಇಂದು ಹೊರಹೊಮ್ಮುತ್ತಿರುವ ಈ ಮಾತಿನ ಪ್ರವಾಹದಲ್ಲಿ ಆ ಕಡೆಯಲ್ಲಿ ಕುಳಿತು ಮಾತನಾಡುತ್ತಿರುವವರು ಯಾರೆಂದು ಕಾಣದು. ಅವರ ನೋವುಗಳೇನೆಂಬುದೇ ಇತ್ತ ಕುಳಿತವರಿಗೆ ತೋಚದು. ಈ ಜಾಗತಿಕ ಸೋಂಕು ಎಂಬ ಪೆಡಂಬೂತವೂ ಸೇರಿಕೊಂಡು ಈ ಅಂತರವನ್ನು ಮತ್ತಷ್ಟು ಹೆಚ್ಚು ಮಾಡಿದೆ. ಇತ್ತ ಕೇಳಿಸಿಕೊಳ್ಳುವವರ ಮನದಲ್ಲಿ ಅವಿತಿರುವ ನೋವುಗಳೇನೋ, ಒಂದೂ ಅರಿವಾಗದಂತಾಗಿದೆ. ಎಲ್ಲಿಯವರೆಗೆ ನಂಬಿಕೆಯೆಂಬ ಬಳ್ಳಿಯ ನಾರುಗಳು ಗಟ್ಟಿಯಾಗಿ ಹೊಸೆದುಕೊಂಡಿರುತ್ತವೋ, ಅಲ್ಲಿಯವರೆಗೆ ಮಾತೆಂಬುದು ಕಶೇರುಕವಾಗಿರುತ್ತದೆ.

ಪ್ರಜಾಪ್ರಭುತ್ವದಲ್ಲಿ ಸಂವಾದವೇ ಸಾಧ್ಯವಾಗದಂತಹ ಸ್ಥಿತಿ ಇಂದು ನಿರ್ಮಾಣವಾಗಿದೆ ಎಂಬ ದೂರುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಸಂವಾದಕ್ಕಾಗಿ ಹತ್ತು ಹಲವು ಸುಂದರವಾದ-ಸುಲಭವಾದ ವೇದಿಕೆಗಳು ಸೃಷ್ಟಿಯಾಗುತ್ತಿವೆ. ಹಾಗಿದ್ದರೆ ಈ ವೇದಿಕೆಗಳಲ್ಲಿ ಹೊಮ್ಮುವ ಮಾತುಗಳು ನಮ್ಮ ನಾಳೆಗಳನ್ನು ಸುಂದರಗೊಳಿಸಿಕೊಳ್ಳಲು ನೆರವಾಗಬಲ್ಲವೇ. ಅಥವಾ ಮಾತಿನ ಮಾಯೆಯು ವಾಸ್ತವವನ್ನು ಮತ್ತಷ್ಟು ಮಸುಕು ಮಾಡುತ್ತಿವೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕೆನಿಸುತ್ತದೆ.

ಮಾತುಗಳ ಮಹಾಪೂರದ ನಡುವೆ ಹಳೆಯ ಹೇಳಿಕೆಯೊಂದು ನೆನಪಾಗುತ್ತಿದೆ- ಒಂದು ಮಾತಿನಲ್ಲಿ ಬಹಳ ಮುಖ್ಯವಾಗಿರುವ ವಿಷಯವೆಂದರೆ ಪದಗಳ ನಡುವೆ ನಾವು ಬಳಸುವ ಮೌನ’.