ಸ್ವಗತದ ಕನವರಿಕೆ

ಕವಿತೆಯ ಸಾಲಾಗದ ಸ್ವಗತವೊಂದು
ಮಂಪರಿನ ಕನವರಿಕೆಯ ಕೊಕ್ಕಿನಿಂದ
ಹಾಡಾಗಿ ಉಲಿಯುವುದು,
ಬಿಳಿಹಾಳೆಯೊಂದರ ದಯೆಯಿಂದ
ಅಚ್ಚಾಗುವುದು
ಪವಾಡವೇನೂ ಅಲ್ಲ.
ರಾತ್ರಿಯ ನರನಾಡಿಗಳುದ್ದಕ್ಕೂ
ಗೋಳಿಡುವ ಆ ಕೊನೆಯ
ಮಾತೊಂದನ್ನು ಸೂರ್ಯಾಸ್ತ
ತನ್ನ ಉಡಿಯೊಳಗೇ
ಕಾಪಿಟ್ಟುಕೊಂಡಿರಬೇಕು
ಕವಿತೆಯ ವನಪಿಗೆ
ಹೆಜ್ಜೆಯಿಡದೆ ಘಲ್ಲೆನ್ನುವ
ರೂಪಕ ಕೈಗೆ ಸಿಗದೆ
ನುಣುಚಿಕೊಂಡು ಸತಾಯಿಸುತ್ತದೆ
ಸ್ವಗತದಂತೆ ನೀನೂ ಕೂಡ
ಮುಗಿಯದ ಸಾಲಾಗಿ
ಕನವರಿಕೆಯ ಪದವಾಗಿ
ಉಳಿದುಬಿಡುತ್ತೀ

 

 

 

 

 

 

ಬಟ್ಟೆ ಬಿಚ್ಚದ ಆವರಣ…

ಅವನೊಮ್ಮೆ ಮುರಿದು ಬಿದ್ದ
ಮೇಣದ ಬತ್ತಿಯಂತೆ ತಲೆಯಾಡಿಸುತ್ತಾ

“ದೀಪ ಆರಿಸು” ಎನ್ನುತ್ತಾನೆ.
ಮುಗಿಬೀಳುವ ನೆನಪುಗಳೆಲ್ಲ ಸುಳ್ಳು ಬಿತ್ತರಿಸುತ್ತ
ಕತ್ತಲೆಯ ಹೊಟ್ಟೆ ಒಡೆಯುವುದರಲ್ಲಿ ಸಂಶಯವಿಲ್ಲ.
ಧ್ವನಿಯ ಸುಳಿವಿಲ್ಲದೆ
ಅರಳುವ ಮೊಗ್ಗಿನ ರೋಚಕತೆ
ಗಿಡದ ನರಗಳ ಹಿಂಡಿ ಹಿಪ್ಪೆ ಮಾಡಿದಂತೆ
ಅವನೂ ಅರಳಲಿ
“ನಾನೆಂದೋ ನಂದಿದ್ದೇನೆ, ಕತ್ತಲೆಯ
ಮೊಗೆಮೊಗೆದು ಉಣಿಸು
ಕೊನೆಯ ತುತ್ತಿಗಾಗಿ ಹಪಹಪಿಸುವ ಜೀವ
ಈಗ ಸಂಚಾರಿ ಆತ್ಮದಲ್ಲಿ ಮಾತ್ರ ಬದುಕುಳಿದಿದೆ” ಎಂದೆ.
ಇಬ್ಬರ ಮಧ್ಯೆ ಮಂಜಿನ ಪರದೆಯ ಅಂತರವಿದೆ
ಉಲ್ಕೆಯೊಂದರ ಅಂತ್ಯ
ಒತ್ತರಿಸಿಕೊಂಡು ಬಿಕ್ಕುತ್ತಿದೆ
ನಾನು ನಾನಾದೆ,
ಅವನು ಅವನಾಗಿಯೇ ಉಳಿದ
ಕೋಣೆಯ ವಿಶಾಲತೆ ಎಷ್ಟೇ ಹಿಗ್ಗಿದರೂ

ಆವರಣ ಬಟ್ಟೆ ಬಿಚ್ಚಲೇಯಿಲ್ಲ.

ಭುವನಾ ಹಿರೇಮಠ ಬೆಳಗಾವಿ ಜಿಲ್ಲೆಯ ಹಿರೇನಂದಿಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.