ಅರ್ಧ ನೆರಳು

ಖಾಲಿ ಹಾಳೆಯ ಮೇಲೆ ನಿಶಾಂತ ಬೆಳಕು
ಘೋರ ಆಗಸಕ್ಕೆ ಧುಮುಕಿದ ಎಳೆಗೂಸು ನಕ್ಷತ್ರ
ಈಜು ಹೊಡೆಯುವ ಧಾವಂತದಲ್ಲಿ ಕೈಕಾಲು ಬಡಿಯುತ್ತಾ
ಬಿದ್ದೆನೋ ಎದ್ದೆನೋ ತಿಳಿಯದೆ
ಭ್ರಮೆಯೊಳಗೆ ತೇಲುತಿರಲು

ಬಿಕನಾಸಿ ಜ್ಯೋತಿರ್ವರ್ಷಗಳಷ್ಟು ದೂರ ಸಾಗುತ್ತಾ ಸಾಗುತ್ತಾ
ಎಲ್ಲಿ ಕಣ್ಣು ನೆಟ್ಟರೂ
ಅರ್ಧ ತಾಯಿ
ಅರ್ಧ ತಂದೆ
ಅರ್ಧ ನೆರಳು
ಉಳಿದರ್ಧವೆಲ್ಲ ಕುಲಿಗೇಡಿ ಕ್ಯಾಲೆಂಡರುಗಳು

ತಿರುವಿದಷ್ಟೂ ಅನಾಥ ತಾರೀಖುಗಳ ಹಾವಳಿ,
ಮುಂದಿನ ವರ್ಷದ ದಿನಗಳ ಹಡೆದವರು
ನಡುವಿಶ್ವದಲಿ ಅನೀತಿ ಕೈಬಿಟ್ಟು ಹೋಗಿ
ಹಿಂತಿರುಗದೆ ನಡೆವಾಗಿನ ಕಳವಳವನೆಲ್ಲ ಈ ಕೂಸಿನ ಉಡಿಯೊಳಗೇ ಬಿಟ್ಟು ಹೋದರಂತೆ
ಅವತ್ತೇ ಅವರಿಗೂ ಅವರ ಅಜ್ಜ ಮುತ್ತಜ್ಜರಿಗೂ ಸ್ವರ್ಗ ಪ್ರಾಪ್ತಿ

ಯಾವುದೋ ರೈಲು ನಿಲ್ದಾಣದ ವೇಟಿಂಗ್ ರೂಮಲ್ಲಿ
ಅಡ್ಡಾದಿಡ್ಡಿ ನಿದ್ದೆಹೋದ ಯಾತ್ರಿಕರ ಹಿಂಡಿನಲ್ಲಿ
ಎದ್ದು ನಡೆವ ಕನಸುಗಳ ತಡವಿದಾಗ

ಬೆಳಕು, ಈಜು, ಆಗಸ
ಕ್ಯಾಲೆಂಡರು ತಂತಾನೇ ತಿರುವಿಕೊಂಡು ಹರವಿಕೊಂಡು
ಅಪ್ಪಿಕೊಂಡು ಕೈಹಿಡಿಯುವ ಅಪರಂಜಿ ದಿನ ಜಲ್ಮ
ನಡೆಯುವುದೇ ನಡೆಯುವುದು ನಡೆಯುವುದು
ಮತ್ತೆ
……..
ನಡೆಯುವುದು

 

ಭುವನಾ ಹಿರೇಮಠ ಯುವ ಕವಯತ್ರಿ
ಬೆಳಗಾವಿ ಜಿಲ್ಲೆಯವರು
ಸರಕಾರಿ ಪ್ರೌಢಶಾಲೆ ಹಿರೇನಂದಿಹಳ್ಳಿಯಲ್ಲಿ ಗಣಿತ ಶಿಕ್ಷಕಿ