ಸಿರಿಮನೆಯ ಎದುರಿನ ಸಣ್ಣ ಸಣ್ಣ ಕುರುಚಲು ಮರಗಳ ಹಾಡಿಯಂತಹ ಇಳಿಜಾರಿನ ಜಾಗದಲ್ಲಿ ಮಳೆ ನೀರು ಹರಿದು ಅತ್ಯಂತ ಕಿರಿದಾದ ಓಣಿ ಸೃಷ್ಟಿಯಾಗಿದೆ. ಆ ಓಣಿಯಲ್ಲಿ ಓಲಾಡುತ್ತ ತೇಲಾಡುತ್ತ, ಇನ್ನಿಲ್ಲದ ರೀತಿಯಲ್ಲಿ ಕಷ್ಟಪಟ್ಟು ಹೋಗಿ ನಿಂತರೆ ಇನ್ನೊಂದು ಸ್ವರ್ಗ ಕಣ್ಣ ಮುಂದೆ ಅನಾವರಣಗೊಳ್ಳುತ್ತದೆ. ಮೂಡಿಗೆರೆಯ ಗಂಡನ ಮನೆಯಿಂದ ಊರಿಗೆ ಬಂದಿದ್ದ ಶಿವರಾಮ ಪಂಡಿತರ ಕಿರಿಯ ಮಗಳು ಶಾರದಾ ಒಂದಿನ ಸಂಜೆ ಕದ್ದು ಮುಚ್ಚಿ ಗಿರಿಜಾ ಹೆಗಡೆಯನ್ನು ಕೈ ಹಿಡಿದು ಎಳೆದುಕೊಂಡೇ ಹೋಗಿ ಅಲ್ಲಿ ನಿಲ್ಲಿಸಿದ್ದಳು.
ಮಂಜುನಾಥ್ ಚಾಂದ್ ಬರೆದ ಹೊಸ ಕಾದಂಬರಿ “ಕಾಡ ಸೆರಗಿನ ಸೂಡಿ’ಯಿಂದ ಕೆಲವು ಪುಟಗಳು ನಿಮ್ಮ ಓದಿಗೆ

 

ಒಂದು ಬಿಳಿ ಸೀರೆ ಸೆರಗಿನ ಗಾತ್ರದ ಜಲಪಾತವು ಇಣಚಿಹಳ್ಳದ ಇರುಕಿನಲ್ಲಿ ಸದಾ ಯೌವನಿಯಾಗಿಯೇ ಇರುವುದು ಬಿದಿರೆತೊಪ್ಪಲಿನ ಜನರಿಗೆ ಯಾವತ್ತೂ ನಿಚ್ಚಳವಾಗಿ ಕಾಣುತ್ತಿರುತ್ತದೆ. ಮಳೆಗಾಲದ ಆರಂಭದ ದಿನಗಳಲ್ಲಿ ಕಿತ್ತಳೆ ಬಣ್ಣ ತಳೆಯುವ ಅದು ಒಂಥರಾ ತೇದ ಗಂಧದ ಧಾರೆಯಾಗಿ ಕಾಣಿಸುತ್ತ ಕ್ರಮೇಣ ಬೆಳ್ನೊರೆಯ ರೂಪ ತಾಳುತ್ತಿತ್ತು. ಹಾಗಿರುವ ಆ ಸೀರೆಯ ಸೆರಗು ರಾಡಿಯಾಯಿತೆಂದರೆ ಇನ್ನು ಕೆಲವೇ ದಿನಗಳಲ್ಲಿ ಸೌಪರ್ಣಿಕಾ ನದಿಯೂ ಕಂದುಬಣ್ಣಕ್ಕೆ ತಿರುಗುತ್ತದೆ ಎಂಬುದರ ಸೂಚನೆಯೆಂದೇ ಭಾವಿಸಬೇಕು. ಮಳೆ ಬರಲಿ, ಬಾರದಿರಲಿ ಇಣಚಿಹಳ್ಳದ ಜಲಪಾತ ಮಾತ್ರ ಸದಾ ಕಾಲವೂ ಜೀವಂತ. ಸೌಪರ್ಣಿಕೆಯ ಇನ್ನೊಂದು ಮಗ್ಗುಲಲ್ಲಿರುವ ಹಸಿರೊಕ್ಕಲಿನ ಹೆಗಡೆಯವರ ಉಪ್ಪರಿಗೆ ಮನೆಗೆ ಈ ಜಲಪಾತ ಎದುರುಬದುರಿನಲ್ಲಿದೆ. ಮಕರಸಂಕ್ರಾಂತಿಯ ಆಚೀಚಿನ ದಿನಗಳಲ್ಲಿ ಮೋಡಗಳೇ ಇಲ್ಲದ ಆಗಸದಲ್ಲಿ ಪೂರ್ಣ ತಿಂಗಳ ಬೆಳಕು ಹೊಳೆದಾಗ ಈ ಜಲಪಾತ ರಾತ್ರಿ ಹೊತ್ತು ಕಾಣಿಸೀತೇನೋ ಎಂಬ ಕುತೂಹಲದಿಂದ ಶ್ರೀಪತಿ ಹೆಗಡೇರ ಹೆಂಡತಿ ಗಿರಿಜಾ ಕಣ್ಣು ಕಿರಿದು ಮಾಡಿ ನೋಡೇ ನೋಡುತ್ತಿದ್ದುದು ಹೊಸತೇನೂ ಅಲ್ಲ. ಘಟ್ಟದ ಮೇಲಿನ ಮೊಗೆ ಎಂಬ ಊರಿನವಳಾದ ಗಿರಿಜಾ ಮದುವೆಯಾಗಿ ಈ ಊರಿಗೆ ಬಂದಾಗಿನಿಂದ ಇಲ್ಲಿನ ಸಿರಿಸಂಪತ್ತು ಅವಳೊಳಗೊಂದು ಅನಾಹತವನ್ನೇ ಸೃಷ್ಟಿಸಿದೆ. ಕಂದೀಲುಗುಡ್ಡದ ಬಲ ತುದಿಯಲ್ಲಿರುವ ಜಲಪಾತದ ಆ ಪ್ರದೇಶವು ದುರ್ಗಮ ಕಾಡೆಂದು, ಅತ್ಯಂತ ಇರುಕಿನಲ್ಲಿರುವ ಕಾರಣಕ್ಕೆ ಅದನ್ನು ಇಣಚಿಹಳ್ಳವೆಂಬ ಹೆಸರು ಖಾಯಂ ಆಯಿತೆಂದು ಮಾವ ರಾಮಚಂದ್ರ ಹೆಗಡೆ ಆಗಾಗ ಸೊಸೆಗೆ ಹೇಳುತ್ತಿದ್ದರು. ಅಲ್ಲಿ ಅಷ್ಟೊಂದು ನಿಬಿಡವಾದ ಕಾಡು ಬೆಳೆಯುವುದಕ್ಕೆ ಒಂದು ಕಥೆಯನ್ನೂ ಅವರು ಹೇಳುತ್ತಿದ್ದರು;

“ಇಣ್ಚಿಗಳು ಎಲ್ಲೆಲ್ಲ ರಾಶಿ ಇರ್ತ್ವೋ ಅಲ್ಲಿ ಮರ, ಕಾಡು ಚಲೋ ಬೆಳಿತು. ಎಂತಕ್ ಗೊತ್ತಿದ್ದ ನಿಂಗೆ?”

“ಯಂತಕ್ ಮಾವಯ್ಯಾ?” ಗಿರಿಜಾ ಕಣ್ಣಗಲಿಸಿ ಕೇಳಿದ್ದಳು.

“ಈ ಇಣ್ಚಿಗಳು ಎಲ್ಲ ನಮೂನಿ ಹಣ್ ತಿಂತ್ವಲ್ಲ. ತಿಂದ ಮೇಲೆ ಅದರ ಬೀಜ ತಕಂಡೋಯಿ ಎಲ್ಲೆಲ್ಲೋ ಬಚ್ಚಿಡ್ತೊ. ಕಂಡ ಕಂಡಲ್ಲೆಲ್ಲ ಆ ಬೀಜ ಇಡ್ತೊ. ಒಂದ್ ಮಳೆ ಬಿದ್ದಿದ್ದೇ ಅವೆಲ್ಲ ಮೊಳಕೆ ಒಡದ್ ಗಿಡ ಹುಟ್ಟುತು. ಕಾಡು ಚಲೋ ಬೆಳಿಯುದು ಹಿಂಗೆಯ. ನಿಸ್ವಾರ್ಥಿ ಇಣ್ಚಿಗಳ್. ಮನುಷ್ಯ ಜನ್ಮ ಹಂಗಲ್ಲ ನೋಡು..” ಎಂದು ದೊಡ್ಡ ಹೆಗಡೇರು ಬಾಯಗಲಿಸಿ ನಕ್ಕಿದ್ದರು.

ಇಣಚಿಯ ಕಥೆ ಏನಾದರಾಗಲಿ ದಿನವೂ ಗೋಚರಿಸುವ ಜಲಪಾತ ತನ್ನ ಪಾಲಿನ ಅದೃಷ್ಟವೆಂದೇ ಅವಳು ಭಾವಿಸಿದ್ದಳು. ಆ ಶಿಖರದ ಶಿರದಿಂದ ಸೌಪರ್ಣಿಕೆಯನ್ನು ಸೇರಿಕೊಳ್ಳುವ ದಾವಂತದಲ್ಲಿ ಓಡುವ ತೊರೆಯ ಸಲ್ಲಲಿತವು ಹಾಗೊಂದು ವೇಳೆ ತನ್ನ ಕಣ್ಣಿಗೆ ಕಾಣದೇ ಹೋದರೆ ಅವಳಿಗೆ ಇನ್ನಿಲ್ಲದ ಚಡಪಡಿಕೆ. ಆಗ ಗಿರಿಜಾ ತಮ್ಮ ತೋಟದ ನಾನಾ ದಿಕ್ಕಿಗೆ ಹೋಗಿ ಅದನ್ನು ಕಿರುಗಣ್ಣಿನಿಂದ ದಿಟ್ಟಿಸುವ ಪ್ರಯತ್ನವನ್ನು ಮಾಡುತ್ತಿದ್ದಳು. ಹುಡುಗಿಯ ಈ ಪರಿಯ ಅಧ್ವಾನವನ್ನು ಬಹಳಷ್ಟು ಬಾರಿ ಕಂಡ ದೊಡ್ಡ ಹೆಗಡೇರು ಕೊನೆಗೊಂದು ದಿನ, ‘ಇಲ್ ಬಾ ಮಗಳೇ, ಜಲಪಾತ ಎಲ್ಲಿಂದ ಚಲೋ ಕಾಣ್ತು ಅಂತ ನಿಂಗೆ ಹೇಳ್ಕೊಡ್ತೆ ತಡಿ..’ ಎಂದು ಮನೆಯ ಉಪ್ಪರಿಗೆಗೆ ಕರೆದೊಯ್ದು ಅದರ ಪುಟ್ಟ ಕಿಟಕಿಯಲ್ಲಿ ಜಲಪಾತ ಹರಿಯುವ ದೃಶ್ಯವನ್ನು ತೋರಿಸಿದ್ದರು. ಆ ದೃಶ್ಯವನ್ನು ಕಂಡು ಸೊಸೆ ಎರಡೂ ಕೈಗಳನ್ನು ಗಲ್ಲಕ್ಕೆ ಒತ್ತಿಕೊಂಡು ಬಿಟ್ಟ ಬಾಯಿ ಬಿಟ್ಟ ಹಾಗೆ, ಕಣ್ಣೆವೆ ಮುಚ್ಚದೆ ಕ್ಷಣಕಾಲ ಮುಗುಳ್ ಅರಳಿಸಿ ಬೆರಗುಗೊಂಡಿದ್ದಳು. ಅಲ್ಲಿಂದಾಚೆಗೆ ದುಡುದುಡು ಎಂದು ಮನೆಯ ಮಾಳಿಗೆಯನ್ನೇರಿ ಅಲ್ಲಿನ ಕಿಟಕಿಯ ಮುಂದೆ ಕುಂತುಬಿಟ್ಟರೆ ಸಾಕು, ಆಕೆಯ ಕಣ್ಣ ಮುಂದೆ ಸಂಭ್ರಮದ ಜಲಧಾರೆ. ಕೆಲವೊಮ್ಮೆ ಗಂಡ ಶ್ರೀಪತಿಯನ್ನೂ ಎಳಕೊಂಡು ಬಂದು ಬಹಳ ಹೊತ್ತು ಅವರ ಕಾಲ ಮೇಲೆ ಮಲಗಿ “ಇಲ್ಲೇ ಇಪ್ಪನಾ ಹೆಂಗೆ ?” ಎಂದು ಬೆಳದಿಂಗಳ ನೋಡುತ್ತಾ ಪ್ರಶ್ನೆ ಮಾಡುತ್ತಿದ್ದಳು. ಶ್ರೀಪತಿ ಅದಕ್ಕೇನೂ ವಿರೋಧ ಮಾಡುತ್ತಿರಲಿಲ್ಲ ಕೂಡ. ಹೀಗೆ ಅವಳ ಆಸೆಯ ತೇರು ದಿನವೂ ಸಿಂಗರಿಸಿಕೊಂಡೇ ಇದ್ದುದನ್ನು ಕಂಡ ಶ್ರೀಪತಿ ತಮ್ಮ ಕೊಠಡಿಯನ್ನು ಅಲ್ಲಿಯೇ ಕಾಯಂ ಮಾಡಿದ್ದರು. ಜಲಪಾತವು ಬೆಳದಿಂಗಳಿನಲ್ಲಿ ಮೀಯುತ್ತಿದ್ದರೆ ಸೌಪರ್ಣಿಕೆ ಅದೇ ಬೆಳಕಿನಲ್ಲಿ ತೊಯ್ದು ತೊಪ್ಪೆಯಾಗುತ್ತಿದ್ದುದನ್ನು ಎಷ್ಟು ಕಣ್ಣು ತುಂಬಿಕೊಂಡರೂ ಆಕೆಗೆ ಸಾಲುತ್ತಿರಲಿಲ್ಲ.

ಆಕೆಯ ಈ ಆಸೆ ಮಳೆಗಾಲದಲ್ಲಿಯೂ ಮುಂದುವರಿಯುತ್ತಿತ್ತು. ಒಂದು ಮಳೆಗಾಲ ಇದ್ದ ಹಾಗೆ ಇನ್ನೊಂದು ಮಳೆಗಾಲ ಯಾಕಿಲ್ಲ ಎಂಬ ತಕರಾರನ್ನೂ ಆಕೆ ಗಂಡನ ಬಳಿ ತೆಗೆಯುತ್ತಿದ್ದಳು. ತಂದೆ ರಾಮಚಂದ್ರ ಹೆಗಡೆ ಅವರಂತೆ ಶ್ರೀಪತಿ ಕೂಡ ಪುಸ್ತಕಪ್ರಿಯರು. ಮರದ ಕಪಾಟಿನಲ್ಲಿದ್ದ ನೂರಾರು ಪುಸ್ತಕಗಳಲ್ಲಿ ಒಂದನ್ನು ತೆಗೆದು ಲಾಟೀನು ಬೆಳಕಿನ ಅಡಿಯಲ್ಲಿ ಓದುವಲ್ಲಿ ಅವರು ಮಗ್ನರಾಗಿ ಬಿಡುತ್ತಿದ್ದರು. ಆಗಸದಿಂದ ಇಳಿಬಿಟ್ಟ ಬೆಳದಿಂಗಳ ಬಿಳಲುಗಳು ಇಬ್ಬನಿಯನ್ನೂ ತಬ್ಬಿಕೊಂಡು ಕಂದೀಲುಗುಡ್ಡದ ಮೇಲೆ ಬಿಳಿಯ ಚಾಪೆ ಹಾಸುವುದನ್ನು ನೋಡಲು ಗಿರಿಜಾ ಬ್ರಾಹ್ಮೀ ಕಾಲದಲ್ಲೂ ಕಣ್ಣುಜ್ಜಿಕೊಂಡು ಕುಳಿತು ಬಿಡುತ್ತಿದ್ದಳು. ಆ ದೃಶ್ಯಗಳು ಕಣ್ಣೊಳಗೆ ಸ್ಥಿರವಾಗುತ್ತಿದ್ದಂತೆ ಮತ್ತಷ್ಟು ಹೊತ್ತು ಅದೇ ಗುಂಗಿನಲ್ಲಿ ಕಣ್ಮುಚ್ಚಿ ಮಲಗಿ ಬಿಡುವುದೆಂದರೆ ಆಕೆಗೆ ಇಷ್ಟದಲ್ಲಿ ಇಷ್ಟ. ಹೀಗೆ ಈ ಹಸಿರೊಕ್ಕಲಿನಲ್ಲಿ ಸಿರಿಮನೆ ಹೆಗಡೆ ಎಂದೇ ಖ್ಯಾತಿಯನ್ನು ಹೊತ್ತ ರಾಮಚಂದ್ರ ಹೆಗಡೇರ ಮನೆಯಲ್ಲಿ ಸೊಸೆ ಗಿರಿಜಾ ಕಣ್ಣ ಮುಂದೆ ಸಿರಿವೈಭವವೇ ಮೆರೆದಿತ್ತು. ಸಿರಿಮನೆಯ ಮುಂಭಾಗದಲ್ಲಿ ಉದ್ದಕ್ಕೆ ಹಾಕಿರುವ ಅಡಿಕೆ ಸೋಗೆಯ ಚಪ್ಪರದ ಕೆಳಗಿನ ಅಗಲವಾದ ಚಿಟ್ಟಿಯ ಮೇಲೆ ಜಾಜಿ-ಮಲ್ಲಿಗೆ-ಅಬ್ಬಲಿಗೆ ರಾಶಿಯನ್ನೇ ಹಾಕಿ, ತಾನು ಚಕ್ಕಳಮಕ್ಕಳ ಕುಂತು ಗಿರಿಜಾ ದಂಡೆ ದಂಡೆ ಹೂವುಗಳನ್ನು ನೇಯುತ್ತಿದ್ದಳು. ಆಗಲೂ ಆಕೆ ನದಿಯ ಅಲೆಗಳು ದಂಡೆಗೆ ಬಡಿದ ಸದ್ದೇನಾದರೂ ಕೇಳಿಸೀತೇನೋ ಎಂದು ಕಿವಿಯಾನಿಸಿ ಕೇಳುತ್ತಿದ್ದಳು.

(ಮಂಜುನಾಥ್ ಚಾಂದ್)

ಸಿರಿಮನೆಯ ಎದುರಿನ ಸಣ್ಣ ಸಣ್ಣ ಕುರುಚಲು ಮರಗಳ ಹಾಡಿಯಂತಹ ಇಳಿಜಾರಿನ ಜಾಗದಲ್ಲಿ ಮಳೆ ನೀರು ಹರಿದು ಅತ್ಯಂತ ಕಿರಿದಾದ ಓಣಿ ಸೃಷ್ಟಿಯಾಗಿದೆ. ಆ ಓಣಿಯಲ್ಲಿ ಓಲಾಡುತ್ತ ತೇಲಾಡುತ್ತ, ಇನ್ನಿಲ್ಲದ ರೀತಿಯಲ್ಲಿ ಕಷ್ಟಪಟ್ಟು ಹೋಗಿ ನಿಂತರೆ ಇನ್ನೊಂದು ಸ್ವರ್ಗ ಕಣ್ಣ ಮುಂದೆ ಅನಾವರಣಗೊಳ್ಳುತ್ತದೆ. ಮೂಡಿಗೆರೆಯ ಗಂಡನ ಮನೆಯಿಂದ ಊರಿಗೆ ಬಂದಿದ್ದ ಶಿವರಾಮ ಪಂಡಿತರ ಕಿರಿಯ ಮಗಳು ಶಾರದಾ ಒಂದಿನ ಸಂಜೆ ಕದ್ದು ಮುಚ್ಚಿ ಗಿರಿಜಾ ಹೆಗಡೆಯನ್ನು ಕೈ ಹಿಡಿದು ಎಳೆದುಕೊಂಡೇ ಹೋಗಿ ಅಲ್ಲಿ ನಿಲ್ಲಿಸಿದ್ದಳು. ಹಾಡಿಯ ಇಳಿಜಾರು ಮುಗಿದು ಇನ್ನೇನು ನದಿ ದಂಡೆ ಹತ್ತಿರವಿರುವಂತೆಯೇ ನ್ಯಗ್ರೋಧದ ಮರವೊಂದು ಅಗಾಧ ಗಾತ್ರದಲ್ಲಿ ಬೆಳೆದು ನಿಂತಿದೆ. ಅದರ ಬಿಳಲುಗಳು ಅಷ್ಟೊಂದು ಅಗಲಕ್ಕೆ ವಿಶಾಲವಾಗಿ ಹರಡಿಕೊಂಡು ಒಂದು ಕೋಟೆಯನ್ನೇ ನಿರ್ಮಿಸಿದೆ. ಆ ಅಷ್ಟೂ ಪ್ರದೇಶವು ಯಾರೋ ಕಡೆದಿಟ್ಟ ಅಂಗಳದಂತೆ ಕಾಣಿಸುತ್ತದೆ. ಕೆಲವು ಬಿಳಲುಗಳು ಭೂಮಿಯ ಮೇಲೆಲ್ಲ ಹರಡಿ ದೊಡ್ಡ ಕಾಂಡಗಳಾಗಿ ಅಲ್ಲಲ್ಲಿ ಬೆಂಚುಗಳನ್ನು ಸೃಷ್ಟಿಸಿವೆ. ಇನ್ನು ಕೆಲವು ಸಪೂರ ಬಿಳಲುಗಳನ್ನು ಎಳೆದು ಕಟ್ಟಿದರೆ ಉಯ್ಯಾಲೆಯೂ ಆಗುತ್ತದೆ.

“ಇದೆಂತ ಶಾರೀ, ಇಲ್ಲೊಂದ್ ದೇವಲೋಕವೇ ಇದ್ಯಲ್ಲೇ, ನಾ ಕಾಣ್ಲೇ ಇಲ್ಯಲ್ಲೇ,” ಎಂದು ಉದ್ಗಾರ ತೆಗೆದಿದ್ದಳು ಗಿರಿಜಾ. ಅಲ್ಲಿನ ಸೌಂದರ್ಯಕ್ಕೆ ಬೆರಗಾಗಿ ಕಣ್ಣು-ಬಾಯಿ ಮುಚ್ಚಿಕೊಂಡು, ಕುಮ್ಚಟ್ ಕುಮ್ಚಟ್ ಹಾರುತ್ತ ಕೇಕೆ ಹಾಕಿದ್ದಳು. ಇಡೀ ಜಾಗವನ್ನು ಖುಷಿಯಿಂದ ಸುತ್ತಿ ಕುಣಿದಾಡಿದ್ದಳು. ಬಿಳಲುಗಳು ನಿರ್ಮಿಸಿದ್ದ ಉಯ್ಯಾಲೆಯಲ್ಲಿ ಇಬ್ಬರೂ ಕುಳಿತು ಬಹಳ ಹೊತ್ತು ಹರಟಿದ್ದರು. ಹಾಗೆ ಉಯ್ಯಾಲೆಯಲ್ಲಿ ಮಟ್ಟಸ ಕುಂತುಬಿಟ್ಟರೆ ಹಕ್ಕಿಗಳು ಹಿಂಡುಹಿಂಡಾಗಿ ಗೂಡು ಸೇರುವ ದೃಶ್ಯವಂತೂ ಅನಿರ್ವಚನೀಯ. ಅವು ಹೊರಡಿಸುವ ಭಿನ್ನ ವಿಭಿನ್ನ ದನಿಗಳು ಸಂಗೀತ ನುಡಿಸಿದಂತೆ. ಗಿಳಿವಿಂಡುಗಳು, ಗೊರವಂಕಗಳ ಹಿಂಡು, ಮೈನಾ ಹಕ್ಕಿಗಳ ಕಲರವ, ಗುಬ್ಬಚ್ಚಿಗಳ ಸಾಲು ಸಾಲು. ಅಷ್ಟು ದೂರಕ್ಕೂ ನೀಲಿ ಹೊದಿಕೆಯಂತೆ ಕಾಣುವ ನದಿಯ ಸನಿಹದಲ್ಲೇ ಹಾರುವ ಸಾಲು ಸಾಲು ಕೊಕ್ಕರೆಗಳು ಸೌಪರ್ಣಿಕೆಗೆ ಮಾಲೆ ತೊಡಿಸಿದ್ದವು. ನದಿಯ ಉದ್ದಕ್ಕೂ ಆ ಬೆಳ್ಳನೆಯ ಸಾಲುಗಳ ಪ್ರತಿಬಿಂಬ ನಿಚ್ಚಳವಾಗಿ ಗೋಚರಿಸುತ್ತಿತ್ತು. ಸಂಜೆಯಾಯಿತೆಂದರೆ ಕಾನನದ ಸೆರಗಿನಲ್ಲಿರುವ ಸೌಪರ್ಣಿಕಾ ನದಿಗೆ ಹಬ್ಬವೋ ಹಬ್ಬ. ಹಕ್ಕಿಗಳ ಸಾಲುಗಳೆಲ್ಲ ಮರೆಯಾಗುತ್ತಿದ್ದಂತೆ, ಮೈಲುಗಟ್ಟಲೆ ದೂರದ ಪಶ್ಚಿಮ ದಿಗಂತದಲ್ಲಿ ಸೂರ್ಯ ಬಣ್ಣ ಬದಲಿಸುತ್ತಿದ್ದಂತೆ ನದಿಯ ಒಡಲಿನಲ್ಲಿ ಓಕುಳಿಯ ಚಿತ್ತಾರ.

ಇಷ್ಟೂ ದೃಶ್ಯಾವಳಿಗಳು ಆ ಇಬ್ಬರು ಹೆಂಗಳೆಯರ ಕಣ್ಣ ಮುಂದೆ ಕ್ಷಣಾರ್ಧದಲ್ಲಿ ಮುಗಿದು ಹೋದಂತೆ ಅನಿಸಿತ್ತು. ಅಲ್ಲಿ ಕಳೆದ ಒಂದು ತಾಸಿಗೂ ಅಧಿಕ ಸಮಯ ಅವರ ಪಾಲಿಗೆ ನಿಜಕ್ಕೂ ಕ್ಷಣಾರ್ಧವೆನಿಸಿದ್ದರೆ ಅಚ್ಚರಿಯೇನೂ ಇರಲಿಲ್ಲ. ಅಂತಹ ಸ್ವರ್ಗಲೋಕದಲ್ಲಿ ಅವರು ಮಿಂದೆದ್ದಿದ್ದರು. ಸೂರ್ಯ ಮುಳುಗಿದ ತಕ್ಷಣವೇ ಅವರಿಬ್ಬರೂ ಅಲ್ಲಿಂದ ಹೊರಡಲೇಬೇಕಿತ್ತು. ಇಲ್ಲವಾದರೆ ನೋಡನೋಡುತ್ತಲೇ ಆ ಹಾಡಿಯಲ್ಲಿ ಕತ್ತಲು ಕವಿದುಬಿಡುತ್ತದೆ. ಆ ಕಾರಣಕ್ಕೇ ಯಾವ ರೀತಿ ಗಿರಿಜಾಳನ್ನು ಕೈ ಹಿಡಿದು ಎಳೆದು ತಂದಿದ್ದಳೋ ಅದೇ ರೀತಿ ಎಳೆದುಕೊಂಡೇ ಸಿರಿಮನೆ ಅಂಗಳಕ್ಕೆ ಮರಳಿದ್ದಳು ಶಾರದಾ. ಆ ಹೊತ್ತಿಗೇ ಇನ್ನೊಂದು ಹಕ್ಕಿಯ ಕೂಗು ಅವರನ್ನು ಹಿಂಬಾಲಿಸಿಕೊಂಡು ಬಂದಿತ್ತು;

“ಟೀಂವ್ ಟೀಂವ್ ಟೀಂವ್… ಟಿಮ್ ಟಿಮ್ ಟೀಂವ್”

“ಮಳೆ ಹಕ್ಕಿ ಕಾಣ್ ನಮ್ಮನ್ನ ಬೆರ್ಸಕಂಡ್ ಬತ್ತಾ ಇತ್ತ್” ಅಂದಿದ್ದಳು ಶಾರದಾ.

“ಹಂಗಾರೆ ಇವತ್ ಮಳೆ ಬಪ್ಪುದೇ”

ಗಿರಿಜಾ ಹಾಗೆ ಹೇಳುತ್ತಿದ್ದಾಗಲೇ ಸಿರಿಮನೆ ಅಂಗಳದಲ್ಲಿ ಹನಿಗಳು ಉದುರಲು ಶುರು ಮಾಡಿದ್ದವು. ಆವತ್ತು ಇಬ್ಬರೂ ಉಸಿರು ಬಿಗಿಹಿಡಿದುಕೊಂಡು ಮನಸಾರೆ ನಕ್ಕಿದ್ದರು. ಖುಷಿಯಲ್ಲಿ ತೇಲಾಡಿದ್ದರು. ಗೆಳತಿಗೆ ಗಿರಿಜಾ ಕೃತಜ್ಞತೆ ಸಲ್ಲಿಸಿದ್ದಳು. ಅಂತಹ ಸ್ವರ್ಗ ದರ್ಶನವನ್ನು ಇಬ್ಬರೂ ಸದಾ ಚಾಲ್ತಿಯಲ್ಲಿ ಇಟ್ಟಿದ್ದರು ಎಂಬುದು ಬೇರೆ ಮಾತು.

ಕೊಡಚಾದ್ರಿ ಬೆಟ್ಟದ ತಪ್ಪಲಿನಿಂದ ಹರಿದು ಬರುವ ಅಗ್ನಿತೀರ್ಥ ಮತ್ತು ಕಾಶಿತೀರ್ಥ ಎಂಬ ಎರಡು ಉಪನದಿಗಳು ಕೊಲ್ಲೂರಿನಲ್ಲಿ ಸಂಗಮಗೊಂಡು ಅಲ್ಲಿಂದ ಮುಂದಕ್ಕೆ ಸೌಪರ್ಣಿಕಾ ಎಂಬೋ ಹೆಸರಿನಿಂದ ಹರಿಯುವ ನದಿಯು ಕಂದೀಲುಗುಡ್ಡವನ್ನು ಸವರಿಕೊಂಡು ಮುಂದಕ್ಕೆ ಹೋಗುವ ಮುನ್ನ ಕವಲೊಡೆಯುತ್ತದೆ. ಹಾಗೆ ಮುಂದಕ್ಕೆ ಸಾಗುವ ನದಿ ಪೂರ್ವಾಭಿಮುಖವಾಗಿ ಚಲಿಸಿ ಕಂದೀಲುಗುಡ್ಡ ಕೊನೆಗೊಳ್ಳುವಲ್ಲಿ ಇನ್ನೊಂದು ಸಣ್ಣ ಟಿಸಿಲೊಡೆದು ಉತ್ತರಕ್ಕೆ ಬಾಗುತ್ತದೆ. ಹಾಗೆ ಬಾಗುವ ಮಧ್ಯದಲ್ಲಿ ಒಂದು ಕುದುರು ನಿರ್ಮಾಣವಾಗಿದೆ. ಜನ ಅದನ್ನು ಹೊನ್ನೆ ಕುದುರು ಎಂದು ಕರೆಯುತ್ತಿದ್ದರು. ಆ ಕುದುರಿನಲ್ಲಿ ಮೂರ್ನಾಲ್ಕು ಹಳೆಪೈಕ ಮತ್ತು ಇನ್ನೆರಡು ಬುಡಕಟ್ಟು ಕುಟುಂಬಗಳು ವಾಸಿಸುತ್ತಿದ್ದವು. ಹೀಗೆ ಈ ಪರಿಯ ನಿಸರ್ಗದ ಸೊಬಗನ್ನು ತನ್ನೊಡಲಿನಲ್ಲಿ ತುಂಬಿಕೊಂಡಿರುವ ಸೌಪರ್ಣಿಕೆ ಘಟ್ಟದ ಕೆಳಗೆ ಪಂಚಮುಖೀ ಕಣಿವೆಯನ್ನು ಸೃಷ್ಟಿಸಿ ಅರಬ್ಬಿ ಸಮುದ್ರವನ್ನು ಸೇರಿಕೊಳ್ಳುತ್ತದೆ.

ಬೆಳಗಾವಿಯಿಂದ ವರ್ಗವಾಗಿ ಈ ಕಣಿವೆಗೆ ಬಂದ ಮೊದಲ ದಿನವೇ ಇಂತಹುದೊಂದು ರಮ್ಯ ತಾಣ ಬ್ರಿಟಿಷ್ ಅಧಿಕಾರಿ ರಾಬರ್ಟ್ಗೆ ಅಪಾರ ಇಷ್ಟವಾಗಿಬಿಟ್ಟಿತ್ತು. ಈ ಸಂಕದ ಮೇಲೆ ನಿಂತರೆ ಪ್ರಕೃತಿಯೇ ಸುತ್ತಲೊಂದು ಕೋಟೆ ಕಟ್ಟಿದಂತೆ ಕಾಣುವ ಈ ಸೊಬಗು ಸ್ವರ್ಗವೇ ಧರೆಗೆ ಇಳಿದಿದೆ ಎಂಬ ಭ್ರಾಂತಿಯನ್ನು ಅವನಲ್ಲಿ ಮೂಡಿಸಿತು. ಆದರೆ ಅದು ಆತನೊಳಗೊಂದು ಆತಂಕವನ್ನೂ ಸೃಷ್ಟಿಸಿದ್ದು ಕೂಡ ನಿಜವೆ. ಯಾಕೆಂದರೆ ಈ ಊರಿಗೆ ಯಾವ ದಿಕ್ಕಿನಿಂದಾದರೂ ಬರಬಹುದು. ಬೆಟ್ಟ-ಗುಡ್ಡ-ನದಿ-ಸಮುದ್ರ ಎಲ್ಲಿಂದಾದರೂ ಬರಬಹುದು. ಹಾಗೆ ಬಂದು ಎಲ್ಲಾದರೂ ಅಡಗಿ ಕುಳಿತುಬಿಡಬಹುದು. ಬೆಟ್ಟ-ಹಳ್ಳ-ಕೊಳ್ಳಗಳಿರುವ ಈ ಊರಿನ ಜನರಿಗೆ ಪ್ರಕೃತಿಯೇ ರಕ್ಷಣೆ ಒದಗಿಸುವ ಕೆಲಸ ಮಾಡಿದೆಯಲ್ಲ ಅನಿಸಿ ಅಚ್ಚರಿಯೂ ಆಗಿತ್ತು. ಇಂತಹ ಆಯಕಟ್ಟಿನ ಕಣಿವೆಯನ್ನು ಕಂಡವನೇ ಆತ ಮೇಲಧಿಕಾರಿಗೆ ಪತ್ರವನ್ನೂ ಬರೆದಿದ್ದ;‘More men required to acquire this beautiful valley’- ಎಂಬುದು ಅದರ ಒಕ್ಕಣಿಕೆಯಾಗಿತ್ತು. ತಿಂಗಳುಗಳು ಕಳೆದರೂ ಅವನ ಬೇಡಿಕೆ ಕಾರ್ಯರೂಪಕ್ಕೆ ಬಂದಿರಲಿಲ್ಲ ಎಂಬುದು ಬೇರೆ ಮಾತು.

ಇಂತಹ ಪಂಚಮುಖೀ ಕಣಿವೆಯ ಒಂದು ಭಾಗವಾಗಿರುವ ಇಣಚಿಹಳ್ಳವು ಕಗ್ಗಾಡ ಕಾನನವೆಂತಲೂ ಅಲ್ಲಿ ಕೇವಲ ಇಣಚಿಗಳು ಮಾತ್ರ ಓಡಾಡಲು ಜಾಗವಿರುವುದೆಂತಲೂ ಜನ ಆಡಿಕೊಳ್ಳುತ್ತಿದ್ದುದರಲ್ಲಿ ಸತ್ಯವಿತ್ತು. ಅಲ್ಲಿಗೆ ಯಾರ್ಯಾರೂ ಹೋಗುವ ಪ್ರಯತ್ನವನ್ನು ಯಾವತ್ತೂ ಮಾಡುತ್ತಿರಲಿಲ್ಲ. ಆ ಕಾರಣಕ್ಕೆ ಅದನ್ನು ದೇವರಿಗೇ ಅರ್ಪಿತವಾದ ಕಾಡು ಎಂದು ಜನ ಕರೆಯುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಆ ಹಳ್ಳದ ತಪ್ಪಲಿನಲ್ಲಿ ಸಣ್ಣದೊಂದು ಕೊಳ್ಳಿ ದೀಪ ಕಾಣಿಸುತ್ತಿತ್ತು ಮತ್ತು ಅದು ಮುಂದುವರಿದು ನದಿಯ ತೀರದ ಕಡೆಗೆ ಇಳಿದು ಬರುತ್ತಾ ಮತ್ತೆ ಮಾಯವಾಗುತ್ತಿತ್ತು. ಹಾಗೆ ಬರುವ ದಾರಿಗೆ ಬಹುದೂರದಲ್ಲಿ ಮಾದಯ್ಯ ಪೂಜಾರಿಯ ಮನೆ ಇದ್ದುದು ಬಿಟ್ಟರೆ ಅಲ್ಲೊಂದು ಊರಾಗಲಿ, ಮನೆಗಳಾಗಲಿ ಇರಲಿಲ್ಲ. ಒಮ್ಮೊಮ್ಮೆ ಬೆಳದಿಂಗಳಿನಲ್ಲಿ, ಇನ್ನು ಕೆಲವೊಮ್ಮೆ ಅಮವಾಸ್ಯೆಯಲ್ಲಿಯೂ ಆ ಸೂಡಿ ಬೆಳಕು ಕಾಣಿಸಿದ್ದಿದೆ. ಬಹಳಷ್ಟು ಜನರಿಗೆ ಇದು ಗೊತ್ತೂ ಆಗುತ್ತಿರಲಿಲ್ಲ. ಯಾಕೆಂದರೆ ಅದು ಚಲಿಸುತ್ತಿದ್ದುದು ಸರಿರಾತ್ರಿಯ ಬಳಿಕವೇ. ಆ ಕೊಳ್ಳಿ ದೀಪ ಕೆಳಗಿಳಿದು ಬರುವಲ್ಲಿಯೇ ಸೌಪರ್ಣಿಕಾ ನದಿ ಸುಮಾರು ತೊಂಭತ್ತು ಡಿಗ್ರಿಯಷ್ಟು ಪಶ್ಚಿಮಾಭಿಮುಖವಾಗಿ ತಿರುಗಿಕೊಂಡಿದೆ. ಹಾಗಾಗಿ ಅಲ್ಲಿಂದ ಮುಂದೆ ನದಿ ಹರಿಯುವುದನ್ನು ಕಾಣಬೇಕಾದರೆ ಕಂದೀಲುಗುಡ್ಡದ ತುದಿಗೇ ಹೋಗಬೇಕು. ಹಾಗೇನಾದರೂ ಬೆಟ್ಟವೇರಿ ನೋಡಿದರೆ ಕೊಳ್ಳಿಯ ಕಿಚ್ಚು ಸಣ್ಣದಾಗಿ ಗೋಚರಿಸಿ, ಅದು ಒಂದು ದೋಣಿಯನ್ನು ಹಿಡಕೊಂಡು ಬಿದಿರೆತೊಪ್ಪಲ ಕಡೆಗೆ ಪಯಣ ಬೆಳೆಸಿರುವುದು ಕಂಡೀತು. ರಾತ್ರಿಯಲ್ಲಿ ಒಬ್ಬರೇ ಆ ದೃಶ್ಯವನ್ನು ಕಂಡರೆ ಎದೆ ಝಲ್ಲೆನ್ನುವುದು ಖಚಿತವೇ ಆಗಿದೆ. ಆದರೆ ಅದು ಯಾವ ಮನುಷ್ಯ ಜೀವಿಗೂ ಕಾಣಿಸದು. ಹಾಗೆ ಆ ಜ್ಯೋತಿ ಹೊಳೆಬಾಗಿಲಿನಿಂದ ಸಲ್ಪ ಆಚೆಗೆ ದೋಣಿಯನ್ನು ನಿಲ್ಲಿಸಿ ಸೂಡಿ ಬೆಳಕನ್ನು ಇನ್ನಷ್ಟು ಸಣ್ಣಗೆ ಮಾಡಿಕೊಂಡು ಹಸಿರೊಕ್ಕಲನ್ನು ಹೊಕ್ಕು ಲಗುಬಗೆಯಲ್ಲಿ ಮುಂದುವರಿಯುತ್ತದೆ. ಬಂದ ವೇಗದಲ್ಲಿಯೇ ಅದು ತನ್ನ ಕೆಲಸ ಮುಗಿಸಿಕೊಂಡು ಮರಳಿ ಸೌಪರ್ಣಿಕೆಯನ್ನು ದಾಟಿ ವಾಪಾಸು ಹೋಗಿಬಿಡುತ್ತಿತ್ತು. ಇಂಥ ಸೂಡಿಯ ಬೆಳಕು ನದಿಯ ಮೂಲಕ ಬಂದು ತಮ್ಮ ತೋಟದ ತೊಡಮೆ ವರೆಗೆ ಬಂದಿದ್ದ ದೃಶ್ಯವನ್ನು ಮೊದಲು ಕಂಡಿದ್ದೇ ಗಿರಿಜಾ. ಅದನ್ನು ಕಂಡವಳಿಗೆ ಒಮ್ಮೆಗೇ ದಿಗಿಲಾಗಿತ್ತು. ಬೆಳಕು ಹರಿಯುವ ಮುನ್ನವೇ ಹೀಗೆ ಬಂದ ಬೆಳಕಿನ ಜಂಬರವನ್ನು ಗಂಡನಿಗೆ ಒಪ್ಪಿಸಿದ್ದಳು.

“ಇವತ್ ಬೆಳಗಾಪ್ಪುದಕ್ಕೆ ಮುಂಚೆ ಅಂದ್ರೆ, ಇನ್ನೂ ಕಪ್ಪಿದ್ದಾಗಲೇ ಒಂದ್ ಸೂಡಿ ನಮ್ಮನಿ ತೊಡ್ಮಿವರಿಗೂ ಬಂದ್ ಹೋಯ್ತ್?”

 

ಅವಳ ಆಸೆಯ ತೇರು ದಿನವೂ ಸಿಂಗರಿಸಿಕೊಂಡೇ ಇದ್ದುದನ್ನು ಕಂಡ ಶ್ರೀಪತಿ ತಮ್ಮ ಕೊಠಡಿಯನ್ನು ಅಲ್ಲಿಯೇ ಕಾಯಂ ಮಾಡಿದ್ದರು. ಜಲಪಾತವು ಬೆಳದಿಂಗಳಿನಲ್ಲಿ ಮೀಯುತ್ತಿದ್ದರೆ ಸೌಪರ್ಣಿಕೆ ಅದೇ ಬೆಳಕಿನಲ್ಲಿ ತೊಯ್ದು ತೊಪ್ಪೆಯಾಗುತ್ತಿದ್ದುದನ್ನು ಎಷ್ಟು ಕಣ್ಣು ತುಂಬಿಕೊಂಡರೂ ಆಕೆಗೆ ಸಾಲುತ್ತಿರಲಿಲ್ಲ.

“ಸೂಡಿ ಅದ್!”

“ಹಾಂ! ಹೌದ್”

“ಘಟ್ಟದ್ ಮ್ಯಾಲಿಂದ್ ಬೈಂದು. ಸ್ವಾತಂತ್ರ್ಯ ನುಡಿ”

ಹಾಗೆ ಹೇಳಿದ ಸಿರಿಮನೆ ಶ್ರೀಪತಿ ಹೆಗಡೆ ಅವರು ತಕ್ಷಣ ಎದ್ದು ಹಿತ್ತಿಲ ಬೇಲಿಯ ಮೂಲೆಗೆ ಹೋಗಿ ಬಾಳೆಎಲೆಯಲ್ಲಿ ಸುತ್ತಿದ ಪುಟ್ಟ ಕಟ್ಟನ್ನು ಒಳಗೆ ತಂದರು. ಸಿಹಿ ಕಜ್ಜಾಯವನ್ನು ಸುತ್ತಿದ ಕಟ್ಟಿನಂತೆ ಕಾಣಿಸುತಿದ್ದ ಅದನ್ನು ಗಿರಿಜಾ ಮುಂದೆಯೇ ಬಿಚ್ಚಿದರು. ‘ಸೂಡಿ’ – ಇದು ಸ್ವಾತಂತ್ರ್ಯದ ಕಿಡಿ ಎಂಬ ಶೀರ್ಷಿಕೆ ಇರುವ ಹತ್ತಾರು ಪತ್ರಿಕೆಗಳು ಅದರಲ್ಲಿದ್ದವು. ಅದನ್ನು ಕಂಡ ಗಿರಿಜಾ ಕಣ್ಣಿನಲ್ಲಿದ್ದ ಅಚ್ಚರಿಯ ಚುಕ್ಕಿಯೊಂದು ಶ್ರೀಪತಿ ಅವರ ಕಣ್ಣಿನಲ್ಲಿ ನೆಲೆಯಾಯಿತು. ಶ್ರೀಪತಿ ಕೈಗೆ ಸಿಕ್ಕ ತಕ್ಷಣ ಅದನ್ನು ಕುತೂಹಲದಿಂದ ಓದತೊಡಗಿದರು.

“ಇದ್ ಘಟ್ಟದ ಮೇಲಿನಿಂದ ಬಪ್ಪೋ ಪತ್ರಿಕೆ. ಸ್ವಾತಂತ್ರ್ಯ ಹೋರಾಟದ ಸುದ್ದಿ, ಗಾಂಧಿ ಸಿದ್ಧಾಂತದ ವಿಚಾರ ಎಲ್ಲ ಇದ್ರಲ್ಲಿ ಬರದಿರ್ತೊ ”

“ಓ…! ಚಲೋ ಆತಲ್ಲ. ನಾನೂ ಓದ್ಲಕ್ಕು ಹಂಗಾರೆ”

“ನೀ ಓದೂದಷ್ಟೆ ಅಲ್ಲ, ಊರಿನ ನಾಕ್ ಜನಕ್ ನೀನೇ ಓದಿ ಹೇಳಲಕ್ಕು.”

“ಸುದ್ದಿ ಮಾತ್ರ ಇರ್ತುವಾ?”

“ಇಲ್ಲ. ಬೇರೆ ಬೇರೆ ವಿಚಾರಕ್ಕೆ ಸಂಬಂಧಿಸಿದ ಲೇಖನಗಳೂ ಇದ್ದು. ಇಲ್ಲಿ ನೋಡ್, ‘ಸತ್ಯದ ಸಾಕ್ಷಾತ್ಕಾರಕ್ಕೆ ದಾರಿ’ ಅಂತ ಒಂದು ಲೇಖನ ಇದ್ದು. ಅದನ್ನು ಎಷ್ಟು ಚೆಂದ ಬರೆದಿದ್ದೊ ನೋಡಲೇ. ಸತ್ಯ ಹೇಳವಾರೆ ಯಾವ ಸಂಘ-ಸಂಘಟನೆ ಬೇಡ. ನಾವು ಸೀದಲೆ, ಸತ್ಯ ಧರ್ಮದಿಂದ ನಡಕಂಡ್ ಹೋದ್ರೆ ಅದುವೆ ಸತ್ಯ. ಅದಕ್ಕೇಂದೇಳಿ ಯಾವುದೇ ಕಟ್ಟುನಿಟ್ಟಿನ ಆಚರಣೆ ಬೇಕಾವುತ್ಲೆ. ಯಾವ ಗೀಲಿಟು ಇಲ್ಲದೆಯಾ ಬದುಕ್ ಮಾಡುದೇ ಆ ದಾರಿ. ಗಾಂಧಿಯವ್ರು ಅದೇ ದಾರಿಲಿ ನಡೀತಿದ್ರು. ‘ಸತ್ಯ ಹೇಳವಾಗ, ಮೊದಲು ನಿನ್ನ ಜನ ನಿರ್ಲಕ್ಷ್ಯ ಮಾಡ್ತೊ. ಕಡಿಗೆ ನಿನ್ನನ್ನು ನೋಡಿ ಅಪಹಾಸ್ಯ ಮಾಡ್ತೊ, ಮತ್ತೂ ಕಡಿಗೆ ನಿನ್ ಸಂಗ್ತಿಗೆ ಜಗಳಕ್ಕೇ ಬರ್ತೊ. ಆದರೆ ಎಲ್ಲ ಆದ ಮೇಲೆ ಜಯ ನಿಂದೇ ಖರೇ.’ ಅಂತ ಗಾಂಧಿ ಹೇಳಿದ್ರು. ಆದರೆ ಹಂಗೆ ಸತ್ಯಾನ್ವೇಷಣೆ ದಾರಿಲಿ ಹೋಪುದು ಬಾರಿ ಕಷ್ಟ. ಹಂಗೆ ನಿರ್ಧಾರ ಮಾಡಿರೆ, ನಮ್ಮ ಪ್ರತಿ ನಡೆ ಸತ್ವ ಪರೀಕ್ಷೆನ ದಾಟಿ ಬರಕ್ಕಾಗ್ತು. ಅದ್ನೇ ಬದುಕಿನ ಖರೇ ಜಾಗೃತ ಸ್ಥಿತಿ ಅಂತ ಹೇಳುದು. ಸಲ್ಪ ಎಚ್ಚರ ತಪ್ಪಿರೂ ಕಷ್ಟ ತಪ್ಪಿದ್ದಲ್ಲ. ಹಿಂಗೆ ಸತ್ಯದ ಶೋಧನೆಯಲ್ಲಿಯೇ ಹೊರಟರೆ ನಮ್ಮ ಜೀವನದ ದಾರಿ ಸಮ ರೀತಿಲಿ ಕಾಣ್ತಾ ಹೋಗ್ತು. ಗಾಂಧಿ ಇಂತಹ ದಾರಿಲಿ ನಡೀತಿಪ್ಪುದಕ್ಕೆ ಅವರಿಗೆ ಸತ್ಯ ದರ್ಶನ ಆಯಿದು. ಹಂಗಾಯಿ ಅವರ ಯೋಚನೆಗಳಿಗೆ ಬೇರೆ ದೇಶದವ್ರೂ ಮನ್ನಣೆ ಕೊಡ್ತ್ರು. ಈ ಬ್ರಿಟಿಷರು ಹೊರಟದ್ದು ನಮ್ಮನ್ನ ದಮನ ಮಾಡುಕೆ. ನಾವೂ ಅದೇ ದಾರಿಯಲ್ಲಿ ಹೋಪಲು ಆಗ್ತಿಲ್ಲೆ. ಅದಕ್ಕೆ ವಿರುದ್ಧವಾದ ದಾರಿಲಿ ಹೋಗೊವ…”

“ಅಂದರೆ ಹಿಂಸೆ ಬೇಡ ಹೇಳಿ ಅಲ್ದ. ಸಮ. ಅದು ಸರಿಯೇ ಹೇಳುವ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸವಂತ ಹೇಳಿದ್ರಲ್ಲ..”

“ಹಾಂ. ನಿಂಗೆ ಇದು ಬೇಗ ಗೊತ್ತಾಗ್ತು. ಗಾಂಧಿ ಹೇಳಿದ್ದೂ ಇದನ್ನೇ. ಇದನ್ನು ಊರಿನವರಿಗೆ ತಲುಪುವ ಹಾಗೆ ಮಾಡೊವಾ. ಅಕ್ಷರ ಗೊತ್ತಿಲ್ಲದವರಿಗೆ ನೀನೇ ಓದಿ ಹೇಳೊ. ಸತ್ಯ ಹೇಳುದು ಸುಲಭ. ತನ್ನ ಜೀವನವೇ ತನಗೆ ಸತ್ಯದ ಮುಖವ ತೋರ್ಸೊ ಅಂದೇಳಿ ಗಾಂಧಿ ಹೇಳಿರ್. ಆದರೆ ಹಾಗೆ ನುಡಿದಂಗೆ ಬದುಕುವವರು ಕಡ್ಮೆ. ಈ ಪತ್ರಿಕೆಯಲ್ಲೇ ಒಂದು ಚಲೊ ಉದಾಹರಣೆ ಇದ್ದು ನೋಡು. ಗಾಂಧಿ ಮೈತುಂಬಾ ಬಟ್ಟೆ ಹೈಕಂಬುದನ್ನು ಬಿಟ್ಟು ಯಾಕೆ ಎರಡೇ ಎರಡು ಬಿಳಿ ಬಟ್ಟೆ ಹೈಕತ್ರು ಅಂತ. ಒಮ್ಮೆ ಹೀಗೆ ಭಾಷಣ ಮಾಡ್ತಿದ್ದಾಗ, ಸತ್ಯದ ದಾರಿಯಲ್ಲಿ ನಡೆಯಬೇಕು, ದೇಶದಲ್ಲಿ ಹಸಿವಿನಿಂದ, ಬಡತನದಿಂದ ನೊಂದವರನ್ನು ಮೊದಲು ನೋಡಬೇಕು ಮತ್ತು ಅವರ ಹಾಗೆ ಬದುಕಬೇಕು ಎಂದೆಲ್ಲಾ ಹೇಳಿದ್ರಡ. ಆಗ ಅವರಿಗೆ ಕಾಣಿಸಿದ್ದು ಚಿಂದಿ ಬಟ್ಟೆ ಹಾಕ್ಯಂಡ, ಮಾನ ಮುಚ್ಚಿಕ್ಯಂ¨ಲೆ ಕಷ್ಟಪಡ್ತಿರುವ ಹೆಂಗಸಿನ ದಯನೀಯ ಸ್ಥಿತಿ. “ಛೇ! ಈ ದೇಶದಲ್ಲಿ ಎಷ್ಟೊಂದು ಕಷ್ಟವಿದೆ. ಒಂದು ಹೊತ್ತು ಊಟಕ್ಕೂ ಗತಿಯಿಲ್ಲದ, ತೊಡಲು ತುಂಡು ಬಟ್ಟೆಯೂ ಇಲ್ಲದ ಕೋಟ್ಯಂತರ ಜನರಿದ್ದಾರೆ. ಅಂಥಾದ್ದರಲ್ಲಿ ನಾನು ಇಷ್ಟೊಂದು ಬಟ್ಟೆ ತೊಟ್ಟು ಬೆಚ್ಚಗಿದ್ದು ಭಾಷಣ ಮಾಡಿಕೊಂಡು ಓಡಾಡುತ್ತಿರುವೆನಲ್ಲ. ಮೊದಲು ನಾನೂ ಅವರಂತೆ ಬದುಕುವುದನ್ನು ಕಲಿಯಬೇಕು. ಹಾಗಿದ್ದರೆ ಮಾತ್ರ ಅವರ ಬದುಕಿನ ಕಷ್ಟ, ಜೀವನದ ಸತ್ಯ ಅರ್ಥ ಆಗಲು ಸಾಧ್ಯ. ಇಲ್ಲದೇ ಹೋದರೆ ಎಲ್ಲವೂ ಭೂಟಾಟಿಕೆ” ಎಂದು ಯೋಚಿಸಿದ್ರಡ. ಅಂದಿನಿಂದ ಮೈತುಂಬಾ ಬೆಚ್ಚನೆಯ ಬಟ್ಟೆ ತೊಡುವುದನ್ನು ಬಿಟ್ಟ್ಬಿಟ್ರು. ಇಂತಹ ರಾಶಿ ವಿಚಾರಗಳನ್ನು ಈ ಪತ್ರಿಕೆಯಲ್ಲಿ ಸರಳವಾಗಿ ಹೇಳಿದ್ರ್. ಗಾಂಧಿ ನಮ್ಮಂತೇ ಜೀವನ ಮಾಡ್ತಿದ್ರ್ ಅನ್ನುವ ವಿಷ್ಯ ಜನರಿಗೆ ಗೊತ್ತಾಗೊ. ಎಂಥ ಉದಾತ್ತ ಜೀವನ ಅವರದ್. ಹಳ್ಳಿಗಳಲ್ಲಿರುವ ಜನರಿಗೆ ಇದೆಲ್ಲ ಇನ್ನೂ ಗೊತ್ತಾಯಿಲ್ಲೆ,” ಎನ್ನುತ್ತಾ ಹೆಗಡೇರು ಮಾತು ಮುಂದುವರಿಸಿದರು.

“ನಿಜ, ಅವರು ಮೊದಲ ಬಾರಿಗೆ ತಮ್ಮ ಪತ್ನಿ ಕಸ್ತೂರ್ ಬಾ ಜೊತೆ ಬೆಂಗಳೂರಿಗೆ ಬಂದಿಪ್ಪಾಗ ಅರೆ ತೋಳಿನ ಷರಟು, ಧೋತಿ ಮತ್ತು ಗುಜರಾತಿ ಟರ್ಬನ್ ಹಾಕಿದ್ದರಂತೆ. ಮುಂದೆ ಟರ್ಬನ್, ಷರಟು ಎಲ್ಲವನ್ನು ಬಿಟ್ಬಿಟ್ ಜನರೆಡೆಗೆ ನಡೆದು ಬಿಟ್ರಲೆ. ಅವರ ಕಣ್ಣಿಗೆ ಕಾಣುತ್ತಿದ್ದುದು ಜನರಷ್ಟೇ. ಅವರನ್ನು ಪರಂಗಿಗಳ ದಾಸ್ಯದಿಂದ ಬಿಡುಗಡೆ ಮಾಡೊ ಹೇಳುದೇ ಅವರ ಧ್ಯೇಯ..”

“ಹೌದು ಇಂತಹ ಸತ್ಯವನ್ನು ತಿಳಿಸುವ ಈ ಪತ್ರಿಕೆ ಎಲ್ಲರ ಕೈಗೆ ಸಿಕ್ಕೊ ಹಂಗೆ ಮಾಡೊ. ನಾನೂ ಓದ್ತೆ. ಎಲ್ಲರಿಗೂ ಸಿಕ್ಕು ಹಾಂಗೆ ಮಾಡ್ತೆ,”

“ಅದ್ ಹಾಂಗಲ್ಲ ಗಿರಿಜಾ. ಊರಂಗೆ ಪೊಲೀಸ್ರ್ ಎಲ್ಲರ್ ಮೇಲೂ ಕಣ್ಣಿಟ್ಟೀರ್. ಅವ್ರು ಎಲ್ಲರನ್ನೂ ಅನುಮಾನದಿಂದಲೇ ಕಾಂತ್ರು. ಜನರಿಗೆ ಇದ್ನ ಹೆಂಗೆ ತಲುಪ್ಸದು ಅಂದೇಳಿ ನಾನೂ, ಪಟೇಲ ಸುಂದರ ಶೆಟ್ಟಿ, ಶಂಕರ ಗಾಣಿಗ, ಶಿವರಾಮ ಪಂಡಿತರು ಸೇರಿ ಮಾತುಕತೆ ಎಲ್ಲ ಮಾಡ್ಕಂಡಿದ್ದೊ..”
“ಈ ಪತ್ರಿಕೆ ಹೆಸರೂ ಚೆಂದ ಇದ್ದು ಮಾರ್ರೆ. ಜನರಿಗೆ ಬೇಗ ಅರ್ಥ ಆಗ್ತು”

“ಹೌದು ಗಿರಿಜಾ. ಸೂಡಿ ಶಬ್ಧ ಎಷ್ಟು ಚಲೊ ಇದ್ದು ನೋಡು. ಅದು ನಾನಾ ಆಯಾಮದಲ್ಲಿ ನಾನಾ ಅರ್ಥ ಹೊಂದಿದ್. ಸೂಡಿ ಅಂದರೆ ಬೆಳಕು. ಅದ್ರ ಸಂಗ್ತಿಗೆ ಈಗ ಒಬ್ಬರಿಂದ ಇನ್ನೊಬ್ಬರಿಗೆ ದಾಟುತ್ತ ಹೀಗೆ ಸಾವಿರಾರು ಜನರ ಕೈಗೆ ಸಿಗುವ ಜ್ಯೋತಿಯೂ ಹೌದು. ಪರಂಗಿಯರನ್ನು ಈ ದೇಶದಿಂದ ಓಡಿಸಲು ಇದೇ ಕೊಳ್ಳಿ ಅಂದ್ಕೊ.”

ಕಂದೀಲುಗುಡ್ಡದಿಂದ ಕೆಳಗಿಳಿದು ಸೌಪರ್ಣಿಕಾ ನದಿಯನ್ನು ದಾಟಿ ಹಸಿರೊಕ್ಕಲನ್ನು ಹೊಕ್ಕಿದ್ದ ‘ಸೂಡಿ’ಯ ಬೆಳಕು ಬಿದಿರೆತೊಪ್ಪಲಿನಲ್ಲಿ ಚೆಲ್ಲಾಡಿ, ಮುಂದೆ ಸಂಕಪ್ಪಾಡಿ ಸಂಕವನ್ನೂ ದಾಟಿ ಮತ್ತೆ ಕಂದೀಲುಗುಡ್ಡವನ್ನೇರಿ ಹತ್ತಾರು ಹಳ್ಳಿಗಳಲ್ಲಿ ಪಸರಿಸತೊಡಗಿತು. ಘಟ್ಟದ ಮೇಲೆ ಹುಟ್ಟಿಕೊಂಡ ಕಿಡಿಗಳು ಕರಾವಳಿ ತೀರದ ಊರುಗಳಲ್ಲೂ ಕಾಣಿಸಲು ಶುರುವಾಯಿತು. ಸಿದ್ದಾಪುರ, ಹೆಬ್ರಿ, ಉಡುಪಿ, ಕುಂದಾಪುರದಂತಹ ಊರುಗಳಿಗೆ ಹೋಗಲು ಬಿದಿರೆತೊಪ್ಪಲಿನಿಂದಲೇ ರಹದಾರಿ ಪಡೆದುಕೊಂಡಿತು. ಊರಿಂದ ಊರಿಗೆ, ಮನೆಯಿಂದ ಮನೆಗೆ ಪತ್ರಿಕೆಯನ್ನು ತಲುಪಿಸಲು ಜನ ನಾನಾ ಮಾರ್ಗಗಳನ್ನು ಕಂಡುಕೊಂಡರು. ಎಲ್ಲವನ್ನೂ ಕದ್ದು ಮುಚ್ಚಿಯೇ ಮಾಡುವುದು ಅನಿವಾರ್ಯವಾಗಿತ್ತು. ವಾರಕ್ಕೊಮ್ಮೆ ಬರುತ್ತಿದ್ದ ಪತ್ರಿಕೆಯನ್ನು ಯಾವ ರೀತಿ ಜನರಿಗೆ ತಲುಪಿಸಬೇಕು ಎಂಬ ನಿರ್ಧಾರವನ್ನು ಪಟೇಲರು, ಹೆಗಡೇರು ಮತ್ತು ಪಂಡಿತರು ಕೈಗೊಳ್ಳುತ್ತಿದ್ದರು. ರಾಬರ್ಟ್ ಕೇವಿನ್ ಎಂಬ ಬ್ರಿಟಿಷ್ ಪೊಲೀಸ್ ಅಧಿಕಾರಿಯ ಕಣ್ಣು ತಪ್ಪಿಸಿ ಎಲ್ಲವನ್ನೂ ಮುಗುಮ್ಮಾಗಿ ನಡೆಸುವುದು ನಿಜಕ್ಕೂ ಆ ಊರಿನ ಜನರಿಗೆ ದುಸ್ಸಾಹಸದ ಕೆಲಸವಾಗಿತ್ತು.

“ಆ ರಾಬರ್ಟನ ಕಣ್ಣುಗಳನ್ನು ನೋಡ್ಬೇಕು ನೀವ್. ಅವು ಶಿಕಾರಿಗಾಗಿ ಕುಳಿತ ಹದ್ದಿನಂತೆ ಕಾಣ್ತು. ಅಂವ ಗುರಿ ಇಟ್ರ್ ತಪ್ಪು ಮನಸಾ ಅಲ್ಲ. ನಾವ್ ಮಾತ್ರ ಯಾವಾಗ್ಲೂ ಎಚ್ಚರಿಕೆ ತಪ್ಪಬಾರದು. ತಪ್ಪಿದರೆ ಬಲಿ ತೆಗೆಯದೇ ಬಿಡುವುದಿಲ್ಲ ಅಂವ,” ಎಂದು ಶ್ರೀಪತಿ ಹೆಗಡೆ ಹೇಳಿದ ಮಾತು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ ಪಟೇಲ್ಸುಂದರ ಶೆಟ್ಟರು.

“ಅವನು ಪಕ್ಕಾ ಬ್ರಿಟಿಷ್. ಹೊಂಚು ಹಾಕುವ ಗುಣ ಅವನ ರಕ್ತದಲ್ಲೇ ಇದೆ” ಎನ್ನುತ್ತಿದ್ದರು ಪಂಡಿತರು.

ನೇರ, ನಿಖರ, ನಿಷ್ಠುರ ಅಧಿಕಾರಿಯ ಕಣ್ಣಿನ ಕೆಳಗೇ ಪತ್ರಿಕೆ ತಣ್ಣಗೆ ಹಾವಿನಂತೆ ಈ ಪಂಚಮುಖೀ ಕಣಿವೆಯಲ್ಲಿ ಹರಿದಾಡಿಕೊಂಡು ಸಾಮಾಜಿಕ ಸುಧಾರಣೆಯನ್ನೂ, ಜನರ ಮನಸ್ಸನ್ನು ಉದ್ದೀಪನಗೊಳಿಸುವ ಕೆಲಸವನ್ನೂ ಮಾಡುತ್ತಿತ್ತು. ಒಮ್ಮೆ ಇಣಚಿಹಳ್ಳದ ಕಡೆಯಿಂದ ಘಟ್ಟ ಇಳಿದು ದೋಣಿ ಹತ್ತಿ ಬರುವ ಸೂಡಿ ಇನ್ನೊಂದು ವಾರ ಹೊನ್ನೆಕುದುರು ಕಡೆಯಿಂದ ಕಣಿವೆಯನ್ನು ಪ್ರವೇಶ ಮಾಡುತ್ತಿತ್ತು. ಆದರೆ ಮಧ್ಯರಾತ್ರಿಯೋ, ಬೆಳಗಿನ ಜಾವವೋ ಹಾಗೆ ಸೂಡಿ ಹಿಡಿದು ಬರುವವರಾದರೂ ಯಾರು ಎಂಬುದು ಮಾತ್ರ ಅಷ್ಟೂ ಊರುಗಳ ಜನರಿಗೆ ತಿಳಿಯದ ಸಂಗತಿಯಾಗಿತ್ತು. ಅದು ಒಗಟೇ ಒಗಟಾಗಿತ್ತು.

 

(ಪುಸ್ತಕ:  ಕಾಡ ಸೆರಗಿನ ಸೂಡಿ (ಕಾದಂಬರಿ), ಲೇಖಕರು: ಮಂಜುನಾಥ್ ಚಾಂದ್, ಪ್ರಕಾಶಕರು: ಅಕ್ಷರ ಮಂಡಲ, ಬೆಲೆ: 180/-)