ಎದೆ ಬಿರಿವ ಸದ್ದಿಗಾವ
ಮದ್ದು
ಹೊತ್ತಲ್ಲದೊತ್ತಲಿ
ಕಾಡುವ ನೆನಪಿಗಾವ ಮದ್ದು॥

ದೂರದೊಂದು ಒಂಟಿ ಹಕ್ಕಿ
ಉಲಿದ ಸದ್ದು
ಅದಾವ ನೋವೋ
ಈಗಷ್ಟೇ ತಂತಾನೆ ಕೇಳಿತೋ॥

ಬೀಸೋ ಗಾಳಿಯ
ಬಿಸಿಯುಸಿರು ಕಾರಣವಿರದೆ
ನನ್ನೆದೆಗು ಬೆರೆತು
ನಿಡಿದಾದ ನಿಟ್ಟುಸುರು ಆಲಿಸೋ॥

ತೊನೆ ತೊನೆದು ತೂಗುವ
ಕನಸಲ್ಲೇ ಬಿರಿದು ಬರೀ
ಮೊಗ್ಗಷ್ಟೇ ಕೇಳುವ
ಮೊರೆವ ದುಂಬಿಯ ಸದ್ದು॥

ಕಳೆದುದ ಮರೆತು
ತಿರುಗಿ ನೋಡದೆ ಮತ್ತೆ
ಮುನ್ನಡೆವ ತಂತಾನೆ ಹರಿವ
ನದಿಗೂ ಬೇಕಿದೆ
ಕಡಲ ಮುತ್ತು॥

ಬೇಯುವ ವಿರಹವು
ತಾಳದೆ ಹೂವ
ಸುಡುವ ಪರಿಗೆ
ಎದೆ ಬಿರಿವ
ಸದ್ದಿಗಾವ ಮದ್ದು॥

ಮಂಜುಳ ಸಿ.ಎಸ್. ಹಾಸನದ ಮಹಿಳಾ ಸಕಾ೯ರಿ ಪ್ರಥಮ ದಜೆ೯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು 
ಹವ್ಯಾಸಿ ಪತ್ರಕರ್ತರೂ ಕೂಡ
ಕವಿತೆ, ಅಂಕಣ ಬರಹ, ಲಘು ಬರಹ, ಸಮಕಾಲೀನ ವಸ್ತು -ವಿಶ್ಲೇಷಣೆ, ಪುಸ್ತಕ ವಿಮರ್ಶೆ ಇವರ ಆಸಕ್ತಿಗಳು