ರತ್ನಾಕರನ ಗೆಳೆಯನೂ ಸರಳ ಸಜ್ಜನನೂ ಆಗಿರುವ ರಂಗಣ್ಣನ ತಮ್ಮ ವೆಂಕಣ್ಣನಲ್ಲಿ ಸ್ವಲ್ಪ ಒಳ್ಳೆಯ ಗುಣಗಳು ಇದ್ದರೂ ಚಳುವಳಿಗಾರರಾಗಿರುವ ಅವನ ಸಂಗಡಿಗರು ಪೋಲೀಸರೊಂದಿಗೆ ಕೈಜೋಡಿಸಿ ರತ್ನಾಕರನನ್ನು ಸೆರೆಮನೆಗೆ ತಳ್ಳುವಂತೆ ಮಾಡಲು ಹೇಸದಷ್ಟು ಧೂರ್ತರಾಗಿದ್ದಾರೆ. ಕುಮುದಳನ್ನು ಮದುವೆಯಾಗಲು ಯೋಗ್ಯನಾಗಿದ್ದ ರತ್ನಾಕರನು ತನ್ನ ಗೆಳೆಯರ ಕುಮ್ಮಕ್ಕಿನಿಂದಾಗಿ ಸೆರೆಮನೆಗೆ ತೆರಳಬೇಕಾಗುವ ಸಂದರ್ಭವು ಇದಕ್ಕೊಂದು ನಿದರ್ಶನ. ಇದರ ಹಿಂದಿನ ಅನ್ಯಾಯಗಳನ್ನು ತರ್ಕಬದ್ಧವಾಗಿ ವಿವೇಚಿಸುವ ಕಾದಂಬರಿಯು ಆಧುನಿಕ ಸಮಾಜದಲ್ಲೂ ಇದೇ ರೀತಿಯ ಮೋಸ, ವಂಚನೆ, ಅಧಿಕಾರ ಲಾಲಸೆ, ಹಿಂಬಾಗಿಲ ಪ್ರವೇಶ, ಅರ್ಹ ವ್ಯಕ್ತಿಯನ್ನು ಪದಚ್ಯುತಗೊಳಿಸುವ ತಂತ್ರಗಳು ಮೇಲುಗೈ ಪಡೆಯುತ್ತಿರುವ ವಿದ್ಯಮಾನಗಳನ್ನು ನೆನಪಿಸುತ್ತವೆ.
ಆನಂದಕಂದರ ‘ಮಗಳ ಮದುವೆ’ ಕಾದಂಬರಿಯ ಕುರಿತು ಡಾ. ಸುಭಾಷ್‌ ಪಟ್ಟಾಜೆ ಬರಹ

ಭಾರತದ ಸ್ವಾತಂತ್ರ್ಯ ಹೋರಾಟವನ್ನು ಆಧರಿಸಿದ ಕನ್ನಡ ಕಾದಂಬರಿಗಳ ಪೈಕಿ ಶಿವರಾಮ ಕಾರಂತರ ‘ಔದಾರ್ಯದ ಉರುಳಲ್ಲಿ’ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ನಡೆದ ಹಲವು ರಾಜಕೀಯ ಪ್ರಯೋಗಗಳನ್ನು ವಿವರಿಸುವುದರೊಂದಿಗೆ ಸ್ವಾತಂತ್ರ್ಯ ಚಿಂತನೆಗಳನ್ನು ಸಮರ್ಥವಾಗಿ ಪ್ರತಿಪಾದಿಸುತ್ತದೆ. ಅ. ನ. ಕೃಷ್ಣರಾಯರ ‘ಅಮರ ಅಗಸ್ಟ್’ ದೇಶದ ಬಿಡುಗಡೆಯ ಹೋರಾಟವನ್ನು ಬಿಡಿಸಿಟ್ಟರೆ ಶ್ರೀರಂಗರು ‘ಪುರುಷಾರ್ಥ’ ಮತ್ತು ‘ಕುಮಾರಸಂಭವ’ ಕೃತಿಗಳಲ್ಲಿ ಚಳುವಳಿಯ ವಿವಿಧ ಘಟನೆಗಳನ್ನು ವಿವರಿಸುತ್ತಾ ಅದರ ಸಾಧಕ ಬಾಧಕಗಳನ್ನು ಚರ್ಚಿಸಿದ್ದಾರೆ. ಮಿರ್ಜಿ ಅಣ್ಣಾರಾಯರು ‘ರಾಷ್ಟ್ರ ಪುರುಷ’, ‘ಪ್ರತಿ ಸರ್ಕಾರ’, ‘ಭಸ್ಮಾಸುರ’ ಕಾದಂಬರಿಗಳಲ್ಲಿ ಸ್ವಾತಂತ್ರ್ಯ ಹೋರಾಟದ ವಿವಿಧ ಘಟ್ಟಗಳನ್ನು ಗುರುತಿಸುತ್ತಾ ಹೋರಾಟದ ಹೆಜ್ಜೆಗಳನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಬಸವರಾಜ ಕಟ್ಟೀಮನಿ ಅವರು ‘ಮಾಡಿ ಮಡಿದವರು’, ‘ಸ್ವಾತಂತ್ರ್ಯದೆಡೆಗೆ’ ಕಾದಂಬರಿಗಳಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜರಗಿದ ಚದುರಂಗದಾಟವನ್ನು ಪ್ರಸ್ತಾಪಿಸುತ್ತಾ ನೈಜ ಘಟನಾವಳಿಗಳನ್ನು ಅಳವಡಿಸಿಕೊಂಡಿದ್ದಾರೆ. ಗೊರೂರು ರಾಮಸ್ವಾಮಿ ಅಯ್ಯಂಗಾರರ ‘ಮೆರವಣಿಗೆ’, ಪ. ಸು. ಭಟ್ಟರ ‘ಆತ್ಮಾರ್ಪಣೆ’, ಬ. ನ. ಸುಂದರರಾವ್ ಅವರ ‘ಚಲೋ ಮೈಸೂರ್’, ಕೋ. ಚೆನ್ನಬಸಪ್ಪ ಅವರ ‘ರಕ್ತತರ್ಪಣ’, ‘ಬೇಡಿ ಕಳಚಿತು ದೇಶ ಒಡೆಯಿತು’, ವ್ಯಾಸರಾಯ ಬಲ್ಲಾಳರ ‘ಹೆಜ್ಜೆ’, ‘ಹೇಮಂತಗಾನ’, ಕಾದಂಬರಿಗಳಲ್ಲಿ ಸ್ವಾತಂತ್ರ್ಯ ಹೋರಾಟದ ವಸ್ತುವನ್ನು ಉಪಯೋಗಿಸಿಕೊಂಡು ಅನೇಕ ವ್ಯಕ್ತಿ ಚಿತ್ರಣ ಮತ್ತು ಘಟನಾವಳಿಗಳನ್ನು ಕಟ್ಟಲಾಗಿದೆ. ಒಂದಕ್ಕಿಂತ ಒಂದು ಭಿನ್ನವಾದರೂ ಸ್ವಾತಂತ್ರ್ಯ ಹೋರಾಟವೇ ಅವುಗಳ ತಳಹದಿಯಾಗಿದೆ.

ಆನಂದ ಕಂದರ ‘ಮಗಳ ಮದುವೆ’ ಎಂಬ ಕಾದಂಬರಿಯು ೧೯೩೦ನೇ ಇಸವಿಯ ರಾಜಕೀಯ ಚಳುವಳಿಯ ವಾತಾವರಣವನ್ನು ಹಿನ್ನೆಲೆಯಾಗಿಟ್ಟುಕೊಂಡು ರಚನೆಗೊಂಡಿದ್ದರೂ ಸ್ವಾತಂತ್ರ್ಯ ಹೋರಾಟದ ವಿವರಗಳಿಗಿಂತ ಉತ್ತರ ಕರ್ನಾಟಕದ ಜನಜೀವನದ ಚಿತ್ರಣದ ಮಾದರಿಗಳನ್ನು ಒದಗಿಸುವ ಕಾದಂಬರಿಯಾಗಿದೆ. ಸ್ವಾತಂತ್ರ್ಯ ಹೋರಾಟದ ಪ್ರಕ್ಷುಬ್ಧ ಕಾಲದ ಲಯವನ್ನು ಹಿಡಿದಿಡುವ ಬದಲು ಪಾತ್ರಗಳ ಅಂತಃಸ್ವರೂಪದ ವಾಸ್ತವ ಚಿತ್ರಣವನ್ನೇ ಗುರಿಯಾಗಿಟ್ಟುಕೊಂಡಿದೆ.

ಗೋಪಾಲರಾಯ ಮತ್ತು ವೇಣಕ್ಕನ ಮಗಳು ಕಾವೇರಿಯು ಗುಣವಂತಳಾಗಿದ್ದರೂ ಆಧುನಿಕ ವಿದ್ಯಾಭ್ಯಾಸವನ್ನು ಪಡೆಯದಿರುವುದರಿಂದ ಉದ್ಯೋಗಸ್ಥ ಯುವಕರು ಆಕೆಯನ್ನು ಮದುವೆಯಾಗಲು ಒಪ್ಪುವುದಿಲ್ಲ. ಹೇಗಾದರೂ ಮಾಡಿ ತನ್ನ ಮಗಳ ಮದುವೆಯನ್ನು ಮಾಡಬೇಕೆಂಬ ಆತುರದಿಂದ ಗೋಪಾಲರಾಯರು ಎಂಥ ವರನು ಸಿಕ್ಕರೂ ಚಿನ್ನದ ಗೊಂಬೆಯಂಥ ಕಾವೇರಿಯನ್ನು ಕೊಡುವುದಕ್ಕೆ ತಯಾರಾಗಿರುತ್ತಾರೆ. ಒಂದು ದಿನ ಕಾವೇರಿಯನ್ನು ನೋಡುವುದಕ್ಕೆಂದು ತನ್ನ ಗೆಳೆಯರೊಂದಿಗೆ ಬಂದ ವೆಂಕಣ್ಣನು ಆಕೆಗೆ ಇಂಗ್ಲಿಷ್ ಬರುವುದಿಲ್ಲ, ಸಂಗೀತ ಗೊತ್ತಿಲ್ಲ ಎಂಬ ನೆಪವನ್ನು ಹೇಳಿ ತಿರಸ್ಕರಿಸಿ ಹೊರಟು ಹೋಗುತ್ತಾನೆ. ಆದರೆ ನಿಜ ಸಂಗತಿ ಬೇರೆಯೇ ಇರುತ್ತದೆ. ಆತನು ಕಾವೇರಿಯ ಜೀವದ ಗೆಳತಿಯೂ, ಆಧುನಿಕ ವಿದ್ಯಾಭ್ಯಾಸವನ್ನು ಪಡೆದವಳೂ ದಿಟ್ಟ ಮನೋಭಾವದವಳೂ ಆದ ಕುಮುದಳನ್ನು ಕಂಡು ಇಷ್ಟಪಟ್ಟಿರುತ್ತಾನೆ. ಆದರೆ ಆಕೆಯು ವೆಂಕಣ್ಣನ ಜೊತೆಗೆ ಬಂದ ರತ್ನಾಕರನನ್ನು ಮೆಚ್ಚಿಕೊಳ್ಳುತ್ತಾಳೆ. ಕಾದಂಬರಿಯ ಕೇಂದ್ರ ಪಾತ್ರವಾದ ರತ್ನಾಕರನು ಸ್ನಾತಕೋತ್ತರ ಪದವೀಧರ. ಆತನು ಮನಸ್ಸು ಮಾಡಿದ್ದರೆ ಉದ್ಯೋಗಸ್ಥನಾಗಿ ಕೈತುಂಬಾ ಸಂಬಳವನ್ನು ಪಡೆಯಬಹುದಿತ್ತು. ಆದರೆ ಅವನಿಗೆ ಸಾಮಾಜಿಕ ಕಳಕಳಿ ಹೆಚ್ಚು. ಎಲ್ಲ ಜನರು ಸುಖದಿಂದ ಇರಬೇಕು ಎಂಬುದು ಅವನ ಹಂಬಲ. ಗುರುತು ಪರಿಚಯವಿಲ್ಲದಿದ್ದ ಗೋಪಾಲರಾಯರು ತಮ್ಮ ಮಗಳ ಮದುವೆಗೆ ಸಂಬಂಧಿಸಿ ಕಷ್ಟದಲ್ಲಿದ್ದಾರೆಂದು ತಿಳಿದು ತಾನಾಗಿಯೇ ಅವರ ಕಷ್ಟವನ್ನು ಬಿಡಿಸಲು ಹೊರಡುತ್ತಾನೆ. ಕಾವೇರಿಯ ಸಲುವಾಗಿ ತನ್ನ ಗೆಳೆಯ ರಂಗಣ್ಣನ ಹೆಸರನ್ನು ಶಿಫಾರಸು ಮಾಡುತ್ತಾನೆ. ಇತ್ತ ವೆಂಕಣ್ಣನು ಕುಮುದಳನ್ನು ತನಗೆ ಕೊಡಬೇಕೆಂದು ಸ್ನೇಹಿತರ ಕಡೆಯಿಂದ ಆಕೆಯ ತಂದೆ ಅನಂತರಾಯರಿಗೆ ಪತ್ರವನ್ನು ಬರೆಸುತ್ತಾನೆ. ಅವರು ಅದನ್ನು ಉಪೇಕ್ಷೆ ಮಾಡಿದ್ದರಿಂದ ಕುಮುದಳು ದೊರೆಯಲಾರಳೆಂದು ತಿಳಿದ ವೆಂಕಣ್ಣನು ಕಾವೇರಿಯನ್ನು ತನಗೆ ಕೊಡಬೇಕೆಂದು ಕೇಳುವ ಸಲುವಾಗಿ ತನ್ನ ಗೆಳೆಯರನ್ನು ಗೋಪಾಲರಾಯರಲ್ಲಿಗೆ ಕಳುಹಿಸುತ್ತಾನೆ. ಅಷ್ಟರಲ್ಲಿ ರತ್ನಾಕರನು ಕಾವೇರಿಯ ಗುಣಸ್ವಭಾವಗಳಿಗೆ ಹೊಂದಿಕೊಳ್ಳುವ ವರನನ್ನು ಕಂಡುಹಿಡಿಯಬೇಕೆಂದು ನಿರ್ಧರಿಸಿ, ತನ್ನ ಮೇಲೆ ವಾರಂಟು ಹೊರಡಿಸಿದ್ದರೂ ಲೆಕ್ಕಿಸದೆ ಮಾರುವೇಷಗಳಲ್ಲಿ ಸಂಚರಿಸಿ ರಂಗಣ್ಣನನ್ನು ಕಂಡು ಒಪ್ಪಿಸುತ್ತಾನೆ. ಇದನ್ನು ಅರಿತ ವೆಂಕಣ್ಣನ ಕಡೆಯವರು ‘ನೀವು ನಮ್ಮ ಗೆಳೆಯನಿಗೆ ಕಾವೇರಿಯನ್ನು ಕೊಡದಿದ್ದರೆ ಆಕೆಯ ಮದುವೆಯೇ ಆಗದಂತೆ ನೋಡಿಕೊಳ್ಳುತ್ತೇವೆ.’ ಎಂದು ಪತ್ರವನ್ನು ಬರೆಯುತ್ತಾರೆ. ಆ ಪತ್ರವು ಬಂದ ತಕ್ಷಣ ಮನೆಯೊಳಗೆ ಅಲ್ಲೋಲ ಕಲ್ಲೋಲವಾಗುತ್ತದೆ. ಅಳು, ಗೋಳಾಟ ಮುಗಿಲು ಮುಟ್ಟುತ್ತದೆ. ಕಾವೇರಿಯು ತಂದೆಯ ದುಃಖವನ್ನು ನೋಡಲಾರದೆ ವೆಂಕಣ್ಣನನ್ನು ಮದುವೆಯಾಗಲು ಒಪ್ಪಿ ಬರೆದು ತಿಳಿಸುವಂತೆ ಕೇಳಿಕೊಳ್ಳುತ್ತಾಳೆ. ಅಷ್ಟು ಹೊತ್ತಿಗೆ ಕುಮುದಾ ರತ್ನಾಕರನ ಪತ್ರವನ್ನು ಕೊಟ್ಟು ರಂಗಣ್ಣನ ಒಪ್ಪಿಗೆಯನ್ನು ತಿಳಿಸುವುದರೊಂದಿಗೆ ವಾತಾವರಣವು ತಿಳಿಯಾಗುತ್ತದೆ. ಆದರೆ ಅವನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತಿರುವುದರಿಂದ ಆತನ ಜೀವನ ವ್ಯರ್ಥ ಎಂದು ಅವಳ ಹೆತ್ತವರ ಭಾವನೆ. ಕಾವೇರಿಯನ್ನು ರಂಗಣ್ಣನೊಡನೆ ಮದುವೆ ಮಾಡಿಸಲು ಕಾರಣನಾದ ರತ್ನಾಕರನ ಮೇಲೆ ಸಿಟ್ಟುಗೊಂಡ ವೆಂಕಣ್ಣನ ಕಡೆಯವರು ರತ್ನಾಕರನ ಬಗ್ಗೆ ಪೋಲೀಸರಿಗೆ ತಿಳಿಸುತ್ತಾರೆ. ಅವರು ರಂಗಣ್ಣನ ಮದುವೆಯ ದಿನವೇ ಮನೆಗೆ ಮುತ್ತಿಗೆಯನ್ನು ಹಾಕುವ ಯೋಜನೆಯನ್ನು ರೂಪಿಸುತ್ತಾರೆ. ಇದನ್ನು ತಿಳಿದ ರತ್ನಾಕರನು ಮದುವೆಗೆ ಭಂಗ ಬಾರದಿರಲು ತಾನಾಗಿಯೇ ಪೋಲೀಸರ ಮುಂದೆ ಶರಣಾಗುತ್ತಾನೆ. ಕಾವೇರಿಗೆ ಯೋಗ್ಯ ವರನು ದೊರಕಿದ ಸಂತಸದೊಂದಿಗೆ ಮತ್ತು ರತ್ನಾಕರನನ್ನು ಕಳೆದುಕೊಂಡ ಕುಮುದಳ ನೋವಿನ ಚಿತ್ರಣವೂ ಸೇರಿಕೊಂಡು ಸುಖದುಃಖಗಳ ಮಿಶ್ರ ಭಾವಗಳೊಡನೆ ಕಾದಂಬರಿಯು ಮುಗಿಯುತ್ತದೆ.

ವೈದಿಕ ಕುಟುಂಬಕ್ಕೆ ಸೇರಿದ ಹೆಣ್ಣುಮಗಳ ಮದುವೆಯು ಆ ಕಾಲದಲ್ಲಿ ಅದೆಂಥ ಸವಾಲಿನ ಕೆಲಸವಾಗಿತ್ತು ಎಂಬುದನ್ನು ತರ್ಕಬದ್ಧ ಕಾರಣಗಳೊಂದಿಗೆ ವಿವೇಚಿಸುವ ಕಾದಂಬರಿಯು ಆಂಗ್ಲಭಾಷೆ ತಿಳಿದಿಲ್ಲವೆಂಬ ಕಾರಣಕ್ಕಾಗಿ ಹೆಣ್ಣುಗಳನ್ನು ತಿರಸ್ಕರಿಸುವವರ ಟೊಳ್ಳು ಪ್ರತಿಷ್ಠೆಗೆ ಕನ್ನಡಿಯನ್ನು ಹಿಡಿಯುತ್ತದೆ. ಇಂಥ ಅನೇಕ ಸಾಮಾಜಿಕ ಗೊಂದಲಗಳು, ವ್ಯಕ್ತಿಯ ಆಷಾಢಭೂತಿತನದ ವರ್ತನೆಗಳು, ಮಾನವೀಯತೆಯ ಕರೆಗೆ ಎಚ್ಚೆತ್ತುಕೊಂಡು ಸ್ವಾತಂತ್ರ್ಯ ಹೋರಾಟಕ್ಕೆ ಅಣಿಯಾಗುವ ತ್ಯಾಗ ಜೀವಿಗಳ ಪಾತ್ರಗಳನ್ನು ಕಾಣುತ್ತೇವೆ.

ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತು ಕಾದಂಬರಿಯನ್ನು ಬರೆಯುವುದೆಂದರೆ ಹಿಮಾಲಯ ಪರ್ವತವನ್ನು ಚಿತ್ರಿಸಿದಂತೆ. ಇಡೀ ಪರ್ವತವನ್ನು ಚಿತ್ರಿಸಲು ಸಾಧ್ಯವಿಲ್ಲ. ಆದರೆ ಚಿತ್ರ ಕಲಾವಿದರು ಅದನ್ನು ಚಿತ್ರಿಸದೆ ಬಿಡುವುದೂ ಇಲ್ಲ. ಪ್ರತಿಯೊಬ್ಬ ಚಿತ್ರಕಾರನೂ ತನ್ನ ಹೊರಗಣ್ಣು ಒಳಗಣ್ಣುಗಳಿಗೆ ಅನುಗುಣವಾಗಿ ಚಿತ್ರಿಸುತ್ತಾನೆ. ಆದರೆ ಇದು ಸ್ವಾತಂತ್ರ್ಯ ಹೋರಾಟದ ಚಿತ್ರಣವನ್ನೇ ಮುಖ್ಯವಾಗಿಟ್ಟುಕೊಂಡ ಕಾದಂಬರಿಯಲ್ಲ. ಮಗಳ ಮದುವೆಗಾಗಿ ತಂದೆತಾಯಿಯರು ಪಡುವ ಕಷ್ಟವೇ ಇದರ ವಸ್ತು. ಜೊತೆಯಲ್ಲಿ ಸ್ವಾತಂತ್ರ್ಯ ಹೋರಾಟದ ಚಿತ್ರಣವೂ ಇರುವುದರಿಂದ ಬರೇ ಕೌಟುಂಬಿಕ ಕತೆಯಾಗಿ ಉಳಿಯುವ ಸಾಧ್ಯತೆಯಿದ್ದ ಕಾದಂಬರಿಗೆ ಅಪೂರ್ವ ಸಾಮಾಜಿಕತೆಯು ಪ್ರಾಪ್ತವಾಗಿದೆ.

ಕುಮುದಳು ದೊರೆಯಲಾರಳೆಂದು ತಿಳಿದ ವೆಂಕಣ್ಣನು ಕಾವೇರಿಯನ್ನು ತನಗೆ ಕೊಡಬೇಕೆಂದು ಕೇಳುವ ಸಲುವಾಗಿ ತನ್ನ ಗೆಳೆಯರನ್ನು ಗೋಪಾಲರಾಯರಲ್ಲಿಗೆ ಕಳುಹಿಸುತ್ತಾನೆ. ಅಷ್ಟರಲ್ಲಿ ರತ್ನಾಕರನು ಕಾವೇರಿಯ ಗುಣಸ್ವಭಾವಗಳಿಗೆ ಹೊಂದಿಕೊಳ್ಳುವ ವರನನ್ನು ಕಂಡುಹಿಡಿಯಬೇಕೆಂದು ನಿರ್ಧರಿಸಿ, ತನ್ನ ಮೇಲೆ ವಾರಂಟು ಹೊರಡಿಸಿದ್ದರೂ ಲೆಕ್ಕಿಸದೆ ಮಾರುವೇಷಗಳಲ್ಲಿ ಸಂಚರಿಸಿ ರಂಗಣ್ಣನನ್ನು ಕಂಡು ಒಪ್ಪಿಸುತ್ತಾನೆ.

ಸಾಂಪ್ರದಾಯಿಕ ಗ್ರಾಮೀಣ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬದುಕುತ್ತಿರುವವರ ಸ್ಥಿತಿಗತಿಗಳನ್ನು ಚಿತ್ರಿಸುವ ಕಾದಂಬರಿಯ ವಸ್ತುವಿನ ನಿರ್ವಹಣೆಯು ನವೋದಯ ಸಾಹಿತಿಗಳಿಗಿಂತ ಭಿನ್ನವಾಗಿದೆ. ಇಲ್ಲಿ ಸುಧಾರಣೆಯ ಆವೇಶವಾಗಲೀ ಸಮಾಜದ ಅಂಧಶ್ರದ್ಧೆಗಳ ಬಗ್ಗೆ ಆಕ್ರೋಶವಾಗಲೀ ಇಲ್ಲ. ಬರವಣಿಗೆಯು ಕಾದಂಬರಿಯ ದನಿಯನ್ನು ನಿಯಂತ್ರಿಸಿಕೊಂಡಿದ್ದು ಮಾನವೀಯ ಸಂಬಂಧಗಳ ಸೂಕ್ಷ್ಮ ರೂಪವನ್ನು ವಿಶ್ಲೇಷಿಸುತ್ತದೆ. ಗಂಡು ಹೆಣ್ಣೆಂಬ ಭೇದವಿಲ್ಲದೆ ಕಷ್ಟಗಳು ಬರುವಾಗ, ಆ ಪರಿಸ್ಥಿತಿಯ ನಡುವೆ ಸಿಕ್ಕು ಅಸಹಾಯಕರಾದಾಗ ಸ್ವೀಕರಿಸುವ ದಿಟ್ಟ ನಿಲುವು ಮತ್ತು ಸಮಸ್ಯೆಯನ್ನು ಎದುರಿಸುವ ರೀತಿಯು ಮುಖ್ಯವಾಗುತ್ತದೆ. ನವೋದಯ ಕಾಲದ ಸುಧಾರಣಾವಾದದ ಪ್ರಭಾವ, ಸ್ತ್ರೀ ಶಿಕ್ಷಣ, ಸ್ತ್ರೀ-ಪುರುಷ ಸಮಾನತೆ, ಪ್ರೇಮ ವಿವಾಹ ಮೊದಲಾದ ವಿಷಯಗಳಲ್ಲಿ ಲೇಖಕರು ಆಧುನಿಕತೆಯ ಪರವಾಗಿದ್ದಾರೆ. ಆದರೆ ಎಲ್ಲೂ ‘ಅತಿ’ಯನ್ನು ಒಪ್ಪುವುದಿಲ್ಲ. ಕಾವೇರಿಯನ್ನು ನೋಡಲು ಬಂದ ವೆಂಕಣ್ಣನು ಕುಮುದೆಯನ್ನು ಮೆಚ್ಚಿದ ಬಗ್ಗೆ ತನಗೆ ಪತ್ರವನ್ನು ಬರೆದುದು ಉದ್ಧಟತನದ ಪರಮಾವಧಿ ಎಂದು ಆಕೆಯ ತಂದೆಯಾದ ಅನಂತರಾಯರು ಸಿಡಿಮಿಡಿಗೊಂಡಾಗ ರತ್ನಾಕರನು ಅಡುವ ಮಾತುಗಳು ಗಂಡು ಹೆಣ್ಣುಗಳ ಪರಸ್ಪರ ಮೆಚ್ಚುಗೆಯ ವಿಷಯದಲ್ಲಿ ಲೇಖಕರು ತಳೆದಿರುವ ಪ್ರಬುದ್ಧ ನಿಲುವನ್ನು ಸೂಚಿಸುತ್ತದೆ. ಸುಧಾರಣೆ ಎಂದರೆ ಬ್ರಾಹ್ಮಣರಲ್ಲಿರುವ ಮಡಿ ಮೈಲಿಗೆ, ಸ್ನಾನಸಂಧ್ಯೆ, ಭಸ್ಮ ಮುದ್ರಾಕ್ಷತೆಗಳನ್ನು ನಿಂದಿಸಿ ಸ್ವೇಚ್ಛೆಯಿಂದ ನಡೆಯುವುದು ಮತ್ತು ಪರಕೀಯರ ವೇಷಭೂಷಣಗಳನ್ನು ಅನುಕರಿಸುವುದಕ್ಕೆ ಮಾತ್ರ ಮೀಸಲಾಗಿದೆಯೇ ಹೊರತು ಅನ್ವರ್ಥಕ ಸುಧಾರಣೆಯ ವಿಚಾರಗಳು ಜನರ ಮನಸ್ಸಿನಲ್ಲಿ ಸೇರಿಕೊಂಡಿರದ ಸಂದರ್ಭದಲ್ಲಿ ಲೇಖಕರು ಪ್ರಗತಿಪರ ವಿಚಾರಗಳನ್ನು ಯಾವ ರೀತಿಯಲ್ಲಿ ಸ್ವೀಕರಿಸಿದರು ಎಂಬುದನ್ನು ಪ್ರಣಯ ಮತ್ತು ವಿವಾಹಗಳ ಬಗೆಗೆ ರತ್ನಾಕರನು ತಳೆದ ಧೋರಣೆಯ ಮೂಲಕ ಮನಗಾಣಬಹುದು.

ಈ ವಸ್ತುವನ್ನು ಆ ಕಾಲದ ಸಾಮಾಜಿಕ ಸಂದರ್ಭದಲ್ಲಿಟ್ಟು ನೋಡಿರುವುದರಲ್ಲಿ ಕಾದಂಬರಿಯ ಸ್ವಂತಿಕೆಯಿದೆ. ಪಶ್ಚಿಮದ ಪ್ರಭಾವದಿಂದ ಬಂದ ಸ್ತ್ರೀ ಶಿಕ್ಷಣ ಮತ್ತು ಲಿಂಗ ಸಮಾನತೆಯ ವಿಚಾರಗಳನ್ನು ಲೇಖಕರು ತಮ್ಮದೇ ಅದ ಮಿತಿಗಳಲ್ಲಿ ಸಮರ್ಥಿಸಿದ್ದಾರೆ. ಮಗಳ ಮದುವೆಯ ಒದ್ದಾಟಕ್ಕೆ ಸಂಬಂಧಿಸಿದಂತೆ ಕಾದಂಬರಿಯ ಶರೀರದಲ್ಲೇ ಅನೇಕ ನೆಲೆಗಳನ್ನು ಸೃಷ್ಟಿಸುವ ಮೂಲಕ ಲೇಖಕರು ಅದರ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಸ್ವರೂಪಗಳನ್ನು ಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿವಾಹದ ಚೌಕಟ್ಟಿನಲ್ಲಿ ಗಂಡು ಹೆಣ್ಣಿನ ಸಂಬಂಧದ ವಾಸ್ತವ ಸತ್ಯಗಳು ಅನಾವರಣಗೊಳ್ಳುತ್ತವೆ. ಕತೆಯ ಕೇಂದ್ರವಾದ ರತ್ನಾಕರನ ಧೀರೋದಾತ್ತ ಸ್ವಭಾವ, ಅಸಾಧಾರಣ ಮಾನವೀಯ ಗುಣಗಳು ಬೆಳಕಿಗೆ ಬರುತ್ತವೆ. ‘ಸುದರ್ಶನ’ದಲ್ಲಿ ಸೂಚ್ಯವಾಗಿ ವಿವರಿಸಿದ ಆಧುನಿಕತೆಯ ಆಯಾಮಗಳು ಇಲ್ಲಿ ವಿಸ್ತಾರವನ್ನು ಪಡೆದಿವೆ.

ಬಾಂಧವ್ಯದ ಸುಖವು ಇಲ್ಲದಾಗುತ್ತಿರುವುದರ ಕುರಿತು ಗಾಢ ವಿಷಾದವನ್ನು ಕಟ್ಟಿಕೊಡುವ ಕಾದಂಬರಿಯು ಅಲ್ಲಿನ ಮುಖ್ಯ ಪಾತ್ರಗಳ ಸಹನೆ, ಸೈರಣೆ, ತಾಳ್ಮೆಗಳನ್ನು ಇತ್ಯಾತ್ಮಕ-ಕ್ರಿಯಾತ್ಮಕ ರೂಪದಲ್ಲಿ ದಾಖಲಿಸುತ್ತವೆ. ಹೆಣ್ಣಿನ ಅಸಹಾಯಕತೆ, ಬವಣೆ, ದುಃಖ ದುಮ್ಮಾನಗಳಿಗೆ ಲೇಖಕರ ಹೃದಯವು ಸ್ಪಂದಿಸಿದೆ. ವಿವಿಧ ಮನೋಧರ್ಮದ ವ್ಯಕ್ತಿಗಳನ್ನು ಜೀವಂತ ಪಾತ್ರಗಳನ್ನಾಗಿ ಚಿತ್ರಿಸಿರುವುದರಿಂದ ಅವರ ಕತೆಗಳಲ್ಲಿ ಕಂಡುಬರುವ ಪಾತ್ರ ಚಿತ್ರಣಗಳು ಏಕಮುಖವಾಗಿಲ್ಲ. ಗಂಡೇ ಇರಲಿ ಹೆಣ್ಣೇ ಇರಲಿ ಸ್ವೇಚ್ಛಾಚಾರವಂತೂ ಸಂಪೂರ್ಣ ನಿಷೇಧಕ್ಕೊಳಗಾಗಿದೆ. ಕೆಲವೊಂದು ಸಮಸ್ಯೆಗಳ ಪರಿಹಾರವು ಸರಳವೆನಿಸುತ್ತಿದ್ದರೂ ಅವರ ಅನುಭವ ಲೋಕವು ಈಗಿನ ಸಮಾಜವು ಎದುರಿಸುತ್ತಿರುವ ಭಾವನಾತ್ಮಕ ತಳಮಳಗಳನ್ನು ಸ್ಪರ್ಶಿಸುತ್ತದೆ. ನೈತಿಕ ಅಧಃಪತನದ ಕಡೆ ಬೊಟ್ಟು ಮಾಡುತ್ತದೆ. ಸ್ವಾತಂತ್ರ್ಯ ಹೋರಾಟ ಮತ್ತು ಹಳ್ಳಿಯ ಬದುಕನ್ನು ವೈಭವೀಕರಿಸುವ ರಚನೆಗಳೇ ತುಂಬಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಕಾದಂಬರಿಯು ಸ್ವಾತಂತ್ರ್ಯ ಹೋರಾಟಗಾರರ ಪುಂಡು ಪೋಕರಿತನ, ಲಂಪಟತನ, ಗುಂಪುಗಾರಿಕೆ, ಒಳ ರಾಜಕೀಯ, ಅಷಾಢಭೂತಿತನ, ಮಧ್ಯಮ ವರ್ಗದವರ ತಲ್ಲಣ ಮತ್ತು ಬಡವರ ಸಂಕಷ್ಟಗಳನ್ನು ಚಿತ್ರಿಸುತ್ತಾ ಬದುಕಿನ ವಿವಿಧ ಮುಖಗಳನ್ನು ಪರಿಚಯಿಸುತ್ತವೆ. ವಿವಿಧ ಸಂದರ್ಭಗಳಲ್ಲಿ ಅಂತರಂಗದ ಭಾವನೆಗಳು ಹಲವು ರೀತಿಯಲ್ಲಿ ಚೆಲ್ಲಿಕೊಳ್ಳುತ್ತವೆ. ಹಿತಮಿತವಾದ ಬರವಣಿಗೆ ಮತ್ತು ಆಡಂಬರವಿಲ್ಲದ ನಿರೂಪಣೆಯು ಗಮನವನ್ನು ಸೆಳೆಯುತ್ತದೆ. ಗಟ್ಟಿ ಪಾತ್ರಗಳು, ಸಾಂದ್ರ ಅನುಭವ, ಹೆಣ್ಣಿನ ಸಮಸ್ಯೆಗಳು, ಹುರುಳಿಲ್ಲದ ವಿಚಾರಗಳ ವಿರುದ್ಧ ಎತ್ತುವ ಪ್ರಶ್ನೆಗಳು, ಬದುಕಿನ ತತ್ವಗಳು ಮುಖ್ಯವಾಗುತ್ತವೆ. ಪಳಗಿದ ಬರವಣಿಗೆಯಲ್ಲಿ ಪ್ರಬುದ್ಧ ಮನಸ್ಸನ್ನು ಕಾಣುತ್ತೇವೆ. ಚಮತ್ಕಾರಿಕ ತಿರುವಿಲ್ಲದ ನೇರ ಕಥನ, ಆರೋಗ್ಯಪೂರ್ಣ ಜೀವನ ದೃಷ್ಟಿ ಎಲ್ಲ ವರ್ಗದ ಓದುಗರಿಗೂ ಆಪ್ತವೆನಿಸುವಂತೆ ಮಾಡುತ್ತವೆ. ಸಾಮಾಜಿಕ ವ್ಯವಸ್ಥೆಯ ಅನ್ಯಾಯಗಳನ್ನು ಧ್ವನಿಸುವ ಕಾದಂಬರಿಯು ಈ ಹೊತ್ತಿನಲ್ಲೂ ಅರ್ಥಪೂರ್ಣವೆನಿಸುತ್ತವೆ.

ಗಂಡಸೇ ಆಗಲಿ, ಹೆಂಗಸೇ ಆಗಲಿ, ಒಂಟಿಗನಾಗಿ ಬಾಳುವುದೆಂದರೆ ಅದು ಅಪೂರ್ಣ ಜೀವನ. ಒಂದೇ ಗಾಲಿಯ ರಥವಿದ್ದಂತೆ. ಗಂಡು ಹೆಣ್ಣಿನ ಜೊತೆಯ ಬಾಳೇ ಪೂರ್ಣ ಜೀವನ. ಗಂಡು ಹೆಣ್ಣಿನ ಸುಖಕ್ಕಾಗಿ, ಹೆಣ್ಣು ಗಂಡಿನ ಸುಖಕ್ಕಾಗಿ ತನ್ನ ಜೀವನದ ಆಹುತಿಯನ್ನು ಬೇಡುತ್ತಿರಬೇಕು. ದಾಂಪತ್ಯ ಜೀವನವೆಂದರೆ ಇದೊಂದು ಆನಂದಯಜ್ಞ. ಆಹುತಿ ಹೆಚ್ಚು ಹೆಚ್ಚಾದಂತೆ ಆನಂದದ ಅಭಿವೃದ್ಧಿಯಾಗುವುದು. ಪರಸ್ಪರ ಜೀವನ ಹೋಮವಿಲ್ಲದೆ ಹೋದರೆ, ಆ ದಾಂಪತ್ಯ ಬರೇ ಕಾಳ್ಗಿಚ್ಚಾಗಿ ಪರಿಣಮಿಸುವುದು. ಧರ್ಮದಲ್ಲಿಯೂ ಅರ್ಥದಲ್ಲಿಯೂ ಕಾಮದಲ್ಲಿಯೂ ಗಂಡು ಹೆಣ್ಣು ಒಬ್ಬರನ್ನೊಬ್ಬರು ಅನುಸರಿಸಿಯೇ ನಡೆಯಬೇಕು. ಧರ್ಮ ಅರ್ಥಗಳನ್ನು ಬಿಟ್ಟು ದಂಪತಿಗಳು ಬರೇ ಕಾಮದ ಕೈಗೊಂಬೆಗಳಾದರೂ ತಮ್ಮ ಜೀವನವನ್ನು ತಾವೇ ಹೋಳಿಯಾಡಿದಂತೆ ಆದೀತು. ಗಂಡು ಹೆಣ್ಣಿನ ಮದುವೆಯೆಂದರೆ, ಅದೊಂದು ಕಾಮ ವ್ಯವಹಾರದ ಕರಾರುನಾಮೆಯಲ್ಲ. ಅಪೂರ್ಣ ಜೀವನದ ಅತೃಪ್ತಿಯನ್ನು ಕಳೆದು ಬಿಡುವ ಯೋಗ ಸಾಧನ. ಈ ರಹಸ್ಯವನ್ನು ತಿಳಿದುಕೊಳ್ಳದೆ ಹೋದರೆ ಅದು ಮದುವೆ ಎನಿಸಿಕೊಳ್ಳಲಾರದು. ಜೀವನದಲ್ಲಿ ಸುಖ ಸಮಾಧಾನಗಳು ಸಿಕ್ಕಲಾರವು ಎಂಬ ರತ್ನಾಕರನ ಮಾತುಗಳು ಈ ಕಾದಂಬರಿಯು ನೀಡುವ ಸಂದೇಶವಾಗಿದೆ. ಆದರೆ ರತ್ನಾಕರ ಮತ್ತು ಕುಮುದಳ ಬದುಕು ಅಪೂರ್ಣವಾಗಿದೆ. ಮದುವೆಯ ಮೂಲಕ ಪೂರ್ಣತೆಯ ಕಡೆಗೆ ಚಲಿಸುವ ಕಾವೇರಿ ಮತ್ತು ರಂಗಣ್ಣನ ಪಾತ್ರಗಳು ಆನುಷಂಗಿಕವಾಗಿ ರೂಪುಗೊಂಡಿದೆ.

ಕಾದಂಬರಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮವಲ್ಲದೆ ನಾಡಿನ ಒಳ ಬದುಕು ಮಾರ್ಪಾಡಾಗುತ್ತಿದ್ದ ಪ್ರಕ್ರಿಯೆಯು ರೂಪ ತಾಳುತ್ತದೆ. ಸ್ವಾತಂತ್ರ್ಯ ಹೋರಾಟದ ಘಟ್ಟಗಳಾದ ಅಸಹಕಾರ ಚಳುವಳಿ, ಉಪ್ಪು ಸತ್ಯಾಗ್ರಹ, ತೆರಿಗೆ ನಿರಾಕರಣೆ, ಕಾಯಿದೆ ಭಂಗ ಚಟುವಟಿಕೆಗಳು ಕಣ್ಣ ಮುಂದೆ ಸಾಗುತ್ತವೆ. ವ್ಯಕ್ತಿಗಳ ನೈಜ ನುಡಿಗಳನ್ನು, ನಡತೆಯನ್ನು ಕಾಲ್ಪನಿಕ ಪಾತ್ರಗಳು ಮತ್ತು ಘಟನೆಗಳೊಡನೆ ಹೊಂದಾಣಿಕೆ ಮಾಡಿಕೊಳ್ಳುವ ಔಚಿತ್ಯ, ಅದಕ್ಕಾಗಿ ಪಟ್ಟ ಶ್ರಮ, ಆಯ್ದುಕೊಂಡ ವಸ್ತುವೇ ಕಥಾರೀತಿ ಮತ್ತು ತಂತ್ರವನ್ನು ರೂಪಿಸಿದೆ. ಸರ್ವಸಾಕ್ಷಿ ವೃತ್ತಾಂತದ ತಂತ್ರವನ್ನೇ ಬಳಸಲಾಗಿದೆ. ಇದರಿಂದಾಗಿ ನಿರೂಪಕನಿಗೆ ಪಾತ್ರದ ಒಳಹೊಕ್ಕು ನೋಡಲು, ಅವುಗಳಿಗೆ ಅರಿವಿಲ್ಲದಿರುವ ಆಳ ಸಂಕೀರ್ಣತೆಗಳನ್ನು ಗ್ರಹಿಸಬಲ್ಲ ಶಕ್ತಿಯು ಸಿದ್ಧಿಸಿದೆ. ಭೌಗೋಳಿಕ ಹಿನ್ನೆಲೆಯಾಗಿ ಉತ್ತರ ಕನ್ನಡ ಜಿಲ್ಲೆಯನ್ನು ಆಯ್ದುಕೊಂಡು ಅಲ್ಲಿನ ಆಡುಮಾತನ್ನೇ ಸಂಭಾಷಣೆಯಲ್ಲಿ ಬಳಸಿದ್ದರಿಂದ ಸಹಜ ಸೌಂದರ್ಯದ ಸಿದ್ಧಿಯುಂಟಾಗಿ ಪಾತ್ರಗಳು ಜೀವಂತಿಕೆಯಿಂದ ಕಂಗೊಳಿಸುತ್ತವೆ.

ರತ್ನಾಕರನು ಈ ಕಾದಂಬರಿಯ ಕೇಂದ್ರಪಾತ್ರವಾಗಿದ್ದರೂ ಇದು ಪಾತ್ರ ಪ್ರಧಾನ ಮತ್ತು ನಾಯಕ ಪ್ರಧಾನ ಕೃತಿಯಲ್ಲ. ಅದು ರತ್ನಾಕರನ ಅದರ್ಶ, ಕನಸು, ಶೋಧ, ಯಾತ್ರೆ ಮತ್ತು ಅವನ ವೈವಿಧ್ಯಮಯ ಚಟುವಟಿಕೆಗಳ ವಿವರಗಳೊಂದಿಗೆ ಅವನ ವ್ಯಕ್ತಿತ್ವದೊಳಗಿನ ವೈರುಧ್ಯಗಳು ಮತ್ತು ಅವನ ನೈತಿಕ ಸಂಘರ್ಷಗಳನ್ನು ಚಿತ್ರಿಸುತ್ತದೆ. ಚಳುವಳಿಯ ಹಾದಿಯನ್ನು ಬಿಟ್ಟು ತಾಯಿಯ ಇಚ್ಛೆಯಂತೆ ಮಾವನ ಮಗಳಾದ ಸುಭದ್ರೆಯನ್ನು ಮದುವೆಯಾಗಿ ಗೃಹಸ್ಥನಾಗಿದ್ದುಕೊಂಡು ಗ್ರಾಮೋದ್ಧಾರದ ಚಟುವಟಿಕೆಗಳನ್ನು ಮಾಡಬಾರದೇಕೆ ಎಂಬ ಯೋಚನೆಯು ರತ್ನಾಕರನನ್ನು ಕಾಡಿದರೂ ತನ್ನ ಪ್ರೇಯಸಿಯಾದ ಕುಮುದಳ ರೂಪವನ್ನು ಮನಸ್ಸಿಗೆ ತಂದುಕೊಂಡಾಗ ಸುಭದ್ರೆಯ ಕೈ ಹಿಡಿಯುವ ಯೋಚನೆಯು ಕರಗಿಹೋಗುತ್ತದೆ. ಅವನೊಳಗಿನ ಗಾಂಧೀವಾದ ಮತ್ತು ಗ್ರಾಮ ಸ್ವರಾಜ್ಯದ ಪರಿಕಲ್ಪನೆಗಳ ನಡುವೆ ಸಮನ್ವಯವು ಸಾಧಿಸುವುದಿಲ್ಲ. ತನ್ನ ಚಟುವಟಿಕೆ, ಸಭೆಗಳು, ಸಂಚಾರಗಳ ಮೂಲಕ ಜನಸಮುದಾಯಗಳು ಬದುಕುತ್ತಿರುವ ಕ್ರಮಗಳನ್ನು ಗಮನಿಸುತ್ತಾ ಹೋಗುವ ರತ್ನಾಕರನು “ನಿಜವಾಗಿಯೂ ನೀನು ಕೈಗೊಂಡಿರುವ ಕಾರ್ಯ ಧನ್ಯವಾದದ್ದು. ಬ್ರಿಟಿಷರ ವಿಷಯವಾದ ನನ್ನ ತ್ವೇಷ, ನನ್ನಲ್ಲಿ-ಬರೀ ಅವರೊಂದಿಗೆ- ಕಾದಾಡಬೇಕೆಂಬ ರಜೋವೃತ್ತಿಯನ್ನು ಹುಟ್ಟಿಸಿತು. ನಮ್ಮ ಜನರಲ್ಲಿ ಮನುಷ್ಯತ್ವವನ್ನು ಜಾಗೃತಿಗೊಳಿಸಿದರೆ ಎಲ್ಲ ಅಸಾಧ್ಯಗಳೂ ಸಾಧ್ಯವಾಗುವುದೆಂಬ ಹೊಸ ಪಾಠವನ್ನು ನಿನ್ನಿಂದ ನಾನು ಇವೊತ್ತು ಕಲಿತುಕೊಂಡೆ. ಕೇವಲ ಭಾವನಾವಶರಾಗಿ, ರಾಜಕೀಯ ಆಂದೋಲನದಲ್ಲಿ ಧುಮುಕಿ, ಸರಕಾರದ ಸೆರೆಮನೆ ಸೇರುವುದೊಂದೇ ದೇಶಭಕ್ತಿಯಲ್ಲ. ದೇಶದ ಜನಮನವನ್ನು ತಿದ್ದಿ ಸಂಸ್ಕಾರಗೊಳಿಸುವ ವಿಧಾಯಕ ಕಾರ್ಯವೇ ನಿಜವಾದ ದೇಶಭಕ್ತಿ” ಎಂದು ಗ್ರಾಮೋದ್ಧಾರದ ಹೊಣೆಯನ್ನು ಹೊತ್ತ ರಂಗಣ್ಣನ ಬಳಿಯಲ್ಲಿ ಹೇಳುವ ಮಾತುಗಳು ಅವನಿಗೆ ದೊರೆತ ಹೊಸ ಅರಿವಿನ ಸಂಕೇತವಾಗಿದೆ. ಆತನು ಸುಧಾರಣವಾದಿಯಾಗಿದ್ದರೂ ಕಾವೇರಿಯನ್ನು ತಿರಸ್ಕರಿಸಿದ ವೆಂಕಣ್ಣನನ್ನು ಆಕ್ಷೇಪಿಸುತ್ತಾ “ಮಧ್ಯಮ ತರಗತಿಯ ಕುಟುಂಬಗಳಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಂಗೀತ ನರ್ತನಗಳು ಹೆಚ್ಚಿನ ಉಪಯೋಗಕ್ಕೆ ಬರುವುದಿಲ್ಲ. ಇಂಥ ಕುಟುಂಬಗಳಲ್ಲಿ ಹೆಣ್ಣು, ಕೈ ಹಿಡಿದ ಗಂಡನಿಗೆ ಒಳ್ಳೆಯ ಹೆಂಡತಿಯಾಗಬೇಕು. ಹೆತ್ತ ಮಗುವಿಗೆ ಒಳ್ಳೆಯ ತಾಯಿಯಾಗಬೇಕು. ಬಂದ ಸೊಸೆಯರಿಗೆ ದಾರಿದೀಪವಾಗಬೇಕು. ನಮ್ಮ ಮನೆಯ ಹೆಂಗಸರನ್ನೇನು ನಾವು ಸರಕಾರಿ ನೌಕರಿಗೆ ಕಳುಹುವುದಿಲ್ಲ. ಸಂಗೀತ ನರ್ತನಗಳ ಕಚೇರಿ ಮಾಡುವುದಕ್ಕೆ ಕಳುಹುವುದಿಲ್ಲ. ಮಧ್ಯಮ ತರಗತಿಯ ಕುಟುಂಬದ ಪ್ರತ್ಯಕ್ಷ ಜೀವನಕ್ಕ ಇವುಗಳ ಉಪಯೋಗ ಏನು ಆಗೂ ಹಂಗದ?” ಎಂಬ ಮಾತುಗಳು ಚರ್ಚೆಗೆ ಗ್ರಾಸವಾಗಬಲ್ಲವು. ವೆಂಕಣ್ಣನನ್ನು ಮದುವೆಗೆ ಒಪ್ಪಿಸುವ ಸಲುವಾಗಿ ಉದ್ದೇಶಪೂರ್ವಕ ಆಡಿದ ಮಾತುಗಳು ಎಂಬಂತೆ ಅರ್ಥೈಸಿಕೊಂಡರೆ ಮಾತ್ರ ಇವುಗಳು ಓದುಗನ ಮನಸ್ಸಿಗೆ ಸಮಾಧಾನವನ್ನು ತಂದು ಕೊಡಬಲ್ಲವು.

ಕಾದಂಬರಿಯು ರತ್ನಾಕರನಿಗಿಂತ ಭಿನ್ನ ನೆಲೆಗಳಲ್ಲಿರುವ ಪಾತ್ರಗಳನ್ನು ಅಷ್ಟೇ ಸಂಕೀರ್ಣವಾಗಿ ಬಿಡಿಸುತ್ತದೆ. ಕಾವೇರಿಯ ತಂದೆ ಗೋಪಾಲರಾಯರ ಕುಟುಂಬವು ಸಂಪ್ರದಾಯ ನಿಷ್ಠವಾಗಿದ್ದರೆ ಕುಮುದಳ ತಂದೆ ಅನಂತರಾಯರದ್ದು ಅಧುನಿಕತೆಯನ್ನು ಮೈಗೂಡಿಸಿಕೊಂಡ ಕುಟುಂಬ. ಆದರೆ ಇವರ ನಡುವಿನ ಸ್ನೇಹದಲ್ಲಿ ಯಾವುದೇ ಕುಂದು ಇಲ್ಲ. ಈ ಎರಡೂ ಕುಟುಂಬಗಳಿಗೆ ಆಪ್ತನಾಗಿರುವ ರತ್ನಾಕರನು ಸುಧಾರಣಾವಾದಿಯೂ ಸ್ವಾತಂತ್ರ್ಯ ಹೋರಾಟಗಾರನೂ ಹೌದು. ಕುಮುದ ಮತ್ತು ಅವನ ನಡುವಿನ ಪ್ರೇಮಕ್ಕೆ ಎಲ್ಲೆಗಳಿಲ್ಲ. ರತ್ನಾಕರನನ್ನು ಬಂಧಿಸಲು ಸಹಾಯ ಮಾಡಿದರೆ ಕೈತುಂಬಾ ಇನಾಮು ಸಿಗಬಹುದೆಂದು ತಿಳಿದಿದ್ದರೂ ಅವನಿಗೆ ಪೋಲೀಸರ ಚಲನವಲನಗಳ ಸುಳಿವನ್ನು ಕೊಟ್ಟು ಕಾಪಾಡುವ ಕಾನ್ಸ್ಟೇಬಲ್ ಹನುಮಂತಪ್ಪ, ಮೋಟಾರು ಚಾಲಕ ದತ್ತೋಬಾ ಇವರದ್ದು ಚಿಕ್ಕ ಪಾತ್ರವಾಗಿದ್ದರೂ ಅತ್ಯಂತ ಹೃದಯಸ್ಪರ್ಶಿಯಾಗಿದೆ. ರತ್ನಾಕರನ ಗೆಳೆಯನೂ ಸರಳ ಸಜ್ಜನನೂ ಆಗಿರುವ ರಂಗಣ್ಣನ ತಮ್ಮ ವೆಂಕಣ್ಣನಲ್ಲಿ ಸ್ವಲ್ಪ ಒಳ್ಳೆಯ ಗುಣಗಳು ಇದ್ದರೂ ಚಳುವಳಿಗಾರರಾಗಿರುವ ಅವನ ಸಂಗಡಿಗರು ಪೋಲೀಸರೊಂದಿಗೆ ಕೈಜೋಡಿಸಿ ರತ್ನಾಕರನನ್ನು ಸೆರೆಮನೆಗೆ ತಳ್ಳುವಂತೆ ಮಾಡಲು ಹೇಸದಷ್ಟು ಧೂರ್ತರಾಗಿದ್ದಾರೆ. ಕುಮುದಳನ್ನು ಮದುವೆಯಾಗಲು ಯೋಗ್ಯನಾಗಿದ್ದ ರತ್ನಾಕರನು ತನ್ನ ಗೆಳೆಯರ ಕುಮ್ಮಕ್ಕಿನಿಂದಾಗಿ ಸೆರೆಮನೆಗೆ ತೆರಳಬೇಕಾಗುವ ಸಂದರ್ಭವು ಇದಕ್ಕೊಂದು ನಿದರ್ಶನ. ಇದರ ಹಿಂದಿನ ಅನ್ಯಾಯಗಳನ್ನು ತರ್ಕಬದ್ಧವಾಗಿ ವಿವೇಚಿಸುವ ಕಾದಂಬರಿಯು ಆಧುನಿಕ ಸಮಾಜದಲ್ಲೂ ಇದೇ ರೀತಿಯ ಮೋಸ, ವಂಚನೆ, ಅಧಿಕಾರ ಲಾಲಸೆ, ಹಿಂಬಾಗಿಲ ಪ್ರವೇಶ, ಅರ್ಹ ವ್ಯಕ್ತಿಯನ್ನು ಪದಚ್ಯುತಗೊಳಿಸುವ ತಂತ್ರಗಳು ಮೇಲುಗೈ ಪಡೆಯುತ್ತಿರುವ ವಿದ್ಯಮಾನಗಳನ್ನು ನೆನಪಿಸುತ್ತವೆ. ತಮ್ಮ ಪ್ರತಿಷ್ಠೆಯೇ ಮುಖ್ಯವಾದಾಗ ಸಹಜೀವಿಗಳ ಬದುಕನ್ನು ಹೋಮ ಮಾಡಲು ಯಾರೂ ಹಿಂದೆಮುಂದೆ ನೋಡುವುದಿಲ್ಲ ಎಂಬುದಕ್ಕೆ ವೆಂಕಣ್ಣ ಮತ್ತು ಅವನ ಸಂಗಡಿಗರು ಉದಾಹರಣೆಯಾಗುತ್ತಾರೆ. ಇವರೆಲ್ಲರನ್ನೂ ಲೇಖಕರು ಅವರ ದೋಷ ದೌರ್ಬಲ್ಯಗಳೊಂದಿಗೆ ಚಿತ್ರಿಸಿದ್ದಾರೆ.

ಆನಂದಕಂದರು ಸಾಹಿತ್ಯ ರಚನೆಯನ್ನು ಮಾಡತೊಡಗಿದ್ದು ಕನ್ನಡ ನಾಡಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದುಕು ಸಂಕ್ರಮಣಾವಸ್ಥೆಯಲ್ಲಿದ್ದಾಗ. ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಸಮಯ. ಇಂಗ್ಲಿಷ್ ಶಿಕ್ಷಣವು ಭಾರತವನ್ನು ಪ್ರವೇಶಿಸಿದ್ದರೂ ಹಳೆಯ ಸಂಪ್ರದಾಯಗಳು, ಮೌಲ್ಯಗಳು ನಾಶವಾಗಿರಲಿಲ್ಲ. ಆದರೆ ಹೊಸ ಜೀವನ ಕ್ರಮ, ಮೌಲ್ಯ ವ್ಯವಸ್ಥೆಗಳು ಬೇರು ಬಿಟ್ಟಿದ್ದವು. ಸ್ವಾತಂತ್ರತ್ರ್ಯ ಹೋರಾಟ ಮತ್ತು ಸುಧಾರಣವಾದಿ ಚಳುವಳಿಗಳು ನಡೆಯುತ್ತಿದ್ದವು. ಈ ಎಲ್ಲ ಬೆಳವಣಿಗೆಗಳು ಸಮಾಜದ ಮೇಲೆ ಮಾತ್ರವಲ್ಲ ಕುಟುಂಬಗಳ ಮೇಲೆಯೂ ತಮ್ಮ ಪರಿಣಾಮಗಳನ್ನು ಬೀರಿದ್ದವು. ಕನ್ನಡಿಗರ ವೈಯಕ್ತಿಕ ಪ್ರಜ್ಞೆಯನ್ನೂ ಪ್ರವೇಶಿಸಿದ್ದವು. ಇವುಗಳ ಪರಿಣಾಮವೆಂಬಂತೆ ಗಂಡು ಹೆಣ್ಣೆಂಬ ಭೇದವಿಲ್ಲದೆ ವ್ಯಕ್ತಿಗಳ, ವೈಯಕ್ತಿಕ, ಸಾಮಾಜಿಕ, ರಾಜಕೀಯ ಅಸ್ಮಿತೆಯ ಪ್ರಶ್ನೆಗಳು ತೀವ್ರ ಒತ್ತಡಕ್ಕೆ ಸಿಲುಕಿಕೊಂಡಿದ್ದವು. ಹೊಸ ಮೌಲ್ಯ ಮತ್ತು ವ್ಯವಸ್ಥೆಗಳ ಪ್ರವೇಶದಿಂದ ಸಮಾಜವು ಎದುರಿಸಿದ ಪಲ್ಲಟಗಳ ಸೂಕ್ಷ್ಮ ಕಥನವು ಇಲ್ಲಿದೆ. ಹೊಸತರ ಬಗ್ಗೆ ಆಕರ್ಷಣೆ ಮತ್ತು ವಿಮರ್ಶೆ ಕಂಡು ಬರುತ್ತದೆ. ಕೆಲವರು ಬಿಡುಗಡೆಯ ಹಾದಿಯನ್ನು ಕಂಡುಕೊಳ್ಳಲು ಯತ್ನಿಸುತ್ತಿದ್ದರೆ ಮತ್ತೆ ಕೆಲವರು ಬದುಕಿನ ಹೊಸ ಸಾಧ್ಯತೆಗಳನ್ನು ಕಾಣುತ್ತಾರೆ. ಆದರೆ ಸ್ಥಳೀಯ ಜಗತ್ತಿನ ಪ್ರತಿಕ್ರಿಯೆ ಪ್ರತಿಸ್ಪಂದನೆಗಳು ಒಂದೇ ರೀತಿಯಾಗಿಲ್ಲ. ವರ್ತಮಾನದಲ್ಲಿ ನಿಂತು ಭೂತವನ್ನು ಹೇಗೆ ಅನುಸಂಧಾನಗೊಳಿಸಬೇಕು? ಒಂದು ಚಾರಿತ್ರಿಕ ಸಂದರ್ಭ-ಕಾಲದೇಶಗಳಲ್ಲಿ ವಾಸಿಸುತ್ತಾ ಮತ್ತೊಂದು ಚಾರಿತ್ರಿಕ ಸಂದರ್ಭವನ್ನು ಹೇಗೆ ಗ್ರಹಿಸಬೇಕು? ವೈಯಕ್ತಿಕವಾಗಿ, ವೈಚಾರಿಕವಾಗಿ ಒಪ್ಪಿಗೆಯಾಗದ ಸಾಮಾಜಿಕ, ರಾಜಕೀಯ ಘಟನೆಗಳಿಗೆ ಹೇಗೆ ಸ್ಪಂದಿಸಬೇಕು? ಭಿನ್ನಾಭಿಪ್ರಾಯಗಳೊಂದಿಗೆ ಬದುಕುವುದು ಹೇಗೆ? ಒಂದು ವಿಚಾರಕ್ಕೆ ಬದ್ಧವಾಗಿದ್ದೂ ಆ ವಿಚಾರವನ್ನು ಒಪ್ಪದವರೊಂದಿಗೆ ಹೇಗೆ ಸಹಬಾಳ್ವೆ ಮಾಡಬೇಕು? ಮನುಷ್ಯನನ್ನು ಅನುದಿನ ಕಾಡುವ ಕಂಗೆಡಿಸುವ ಪ್ರಶ್ನೆಗಳಿಗೆ ಲೇಖಕರು ಸಮಚಿತ್ತದಿಂದ ಉತ್ತರಿಸಿದ್ದಾರೆ. ಗಾಢವಾದ ವಾಸ್ತವ ಪ್ರಜ್ಞೆ, ಮಾನವೀಯ ಅನುಕಂಪಗಳನ್ನು ಇಟ್ಟುಕೊಂಡು ಬರೆಯುವ ಲೇಖಕರು ನೆಲದ ಮಣ್ಣಿನಲ್ಲಿ ಗಟ್ಟಿಯಾಗಿ ಬೇರು ಬಿಟ್ಟ ಗ್ರಾಮೀಣ ಬದುಕಿನ ಸರಳತೆ, ಮುಗ್ಧತೆಗಳಿಗೆ ಮನಸೋತರೂ ಬದಲಾವಣೆಗಳನ್ನು ದಾಖಲಿಸುತ್ತಾರೆ. ಸಾಮಾನ್ಯ ಮನುಷ್ಯರ ದೈನಂದಿನ ಸುಖದುಃಖಗಳ ಪರಿಶೀಲನೆಯಲ್ಲೇ ಜೀವನ ವಿನ್ಯಾಸವನ್ನು ಕಟ್ಟಿ ಕೊಡುವ, ಗ್ರಾಮ್ಯಮಾತಿನಲ್ಲೇ ವಿಚಾರಗಳನ್ನು ಚಿಮ್ಮಿಸುವ, ಕತೆಯನ್ನು ಹೇಳುವ ಕ್ರಮದಲ್ಲೇ ಸಾಮಾಜಿಕ ಬದಲಾವಣೆಗಳನ್ನು ಧ್ವನಿಸುವ ಲೇಖಕರು ಮನುಷ್ಯನ ಜೀವನೋತ್ಸಾಹದಲ್ಲಿ ನಂಬಿಕೆಯನ್ನು ಇರಿಸಿಕೊಂಡಿರುವ ಬಗೆಯು ವ್ಯಕ್ತವಾಗುತ್ತದೆ. ಇವರಲ್ಲಿ ತೋರಿಕೆಯ ಬೌದ್ಧಿಕತೆಯಾಗಲೀ, ಹುಸಿ ಬಂಡಾಯವಾಗಲೀ ಇಲ್ಲ. ಕಥನವನ್ನು ನಿರ್ದೇಶಿಸುವಲ್ಲೇ ತೋರುವ ಜಾಣ್ಮೆ, ಕಲಾತ್ಮಕ ಪ್ರಜ್ಞೆಗಳು ಮುಖ್ಯವಾಗಿವೆ. ನಿರೂಪಣೆಯ ಧಾಟಿ, ಮುಖ್ಯ ಪಾತ್ರಗಳ ಮೂಲಕ ಹೊರಡುವ ಸಂಭಾಷಣೆಗಳು ಲೇಖಕರ ಧೋರಣೆಗಳಿಗೆ ಸೂಕ್ಷ್ಮ ನಿದರ್ಶನಗಳಾಗಿವೆ.

ಮನುಷ್ಯನು ತನ್ನ ಬದುಕನ್ನು ಸುಖಮಯವಾಗಿ ಮಾಡುವುದಕ್ಕೆ ಕೆಲವು ನೈತಿಕ ಮೌಲ್ಯಗಳ ಸ್ವೀಕಾರ ಮತ್ತು ಆಚರಣೆಗಳು ಅಗತ್ಯ ಎಂದು ತಮ್ಮ ಯೌವನದ ದಿನಗಳಲ್ಲೇ ತಿಳಿದುಕೊಂಡಿದ್ದ ಲೇಖಕರು ಶಾಶ್ವತವಾದ ಜೀವನ ಸೂತ್ರಗಳನ್ನು ಕಂಡುಕೊಂಡಿದ್ದರು. ಅವರು ಬಾಳಿ ಬದುಕಿದ ಕಾಲಾವಧಿಯಲ್ಲಿ ಭಾರತವು ಬಹಳ ಪ್ರಮಾಣದಲ್ಲಿ ಬದಲಾವಣೆಯನ್ನು ಕಂಡಿತು. ಸಂವೇದನಶೀಲ ಬರಹಗಾರರಾಗಿ ಆನಂದಕಂದರು ಇದಕ್ಕೆ ಪ್ರತಿಕ್ರಿಯಿಸಿದರು. ತಾವು ನಂಬಿಕೊಮಡ ಸತ್ಯ, ಪ್ರಾಮಾಣಿಕತೆ, ಋಜುತ್ವ, ಮುಂತಾದ ಆದರ್ಶಗಳನ್ನು ಅವರು ಎಂದಿಗೂ ಬಿಟ್ಟು ಕೊಡಲಿಲ್ಲ. ಕಾದಂಬರಿಯ ವಸ್ತುವನ್ನು ಗ್ರಾಮಜೀವನದಿಂದಲೇ ಆಯ್ದುಕೊಂಡ ಲೇಖಕರು ಈ ಜೀವನವನ್ನು ಸಮೀಪದಿಂದ ನೋಡಿದ್ದರಲ್ಲದೆ ಆಳವಾಗಿ ಅಭ್ಯಸಿಸಿದ್ದರು. ಇಲ್ಲಿ ಚಿತ್ರಿತವಾದ ಗ್ರಾಮಜೀವನವನ್ನು ಒಳಗಿನಿಂದಲೇ ಅನುಭವಿಸಿದ್ದು. ನಗರ ಜೀವನದ ಅಂಶಿಕ ಚಿತ್ರಗಳಿವೆಯಾದರೂ ಅವರ ಬರಹದ ಸತ್ವವು ಮನದಟ್ಟಾಗುವುದು ಗ್ರಾಮಜೀವನದ ಚಿತ್ರಣದಲ್ಲಿಯೇ. ದೇಸೀಯತೆಯು ಸಶಕ್ತ ಪರ್ಯಾಯ ತಾತ್ವಿಕತೆಯಾಗಿ ಬೆಳೆದು ಬರುತ್ತಿರುವ ವರ್ತಮಾನದ ಸಂದರ್ಭದಲ್ಲಿ ಆನಂದಕಂದರು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳಲಾರರು.

(ಕೃತಿ: ಮಗಳ ಮದುವೆ (ಕಾದಂಬರಿ), ಲೇಖಕರು: ಆನಂದಕಂದ, ಪ್ರಕಾಶಕರು: ಶರತ್ ಪ್ರಕಾಶನ, ಧಾರವಾಡ, ಪುಟಗಳು: 341)