‘ದೈವಾರಾಧನೆ ಅಥವಾ ಭೂತಾರಾಧನೆಯು ಕರಾವಳಿ ಜಿಲ್ಲೆಗಳ ಪ್ರಮುಖ ಆರಾಧನಾ ವಿಧಾನ. ಕುಟುಂಬದ ದೈವಗಳಿಗೆ ಸಲ್ಲಿಸುವ ಸೇವೆಗಳಿಗೆ ಇಲ್ಲಿ ಮಹತ್ವದ ಸ್ಥಾನವಿದೆ. ವಿಷ್ಣುಮೂರ್ತಿ ದೈವಕ್ಕೆ ಸಲ್ಲಿಸುವ ಒತ್ತೆಕೋಲ ಸೇವೆ ನನ್ನ ಬಾಲ್ಯದ ಗಾಢ ನೆನಪುಗಳಲ್ಲೊಂದು. ಆದರೆ ಇಂದು ಅದೇ ಕೋಲವನ್ನು ನೋಡುವಾಗ ನನ್ನ ದೃಷ್ಟಿಕೋನವು ಎಷ್ಟೊಂದು ಬದಲಾಗಿದೆಯಲ್ಲ ಎಂದೆನಿಸುತ್ತದೆ’ ಮಂಜುಳಾ ಸುಬ್ರಹ್ಮಣ್ಯ ಅವರು ದೈವಾರಾಧನೆ ಕುರಿತು ತಮ್ಮ ಅನಿಸಿಕೆಯನ್ನು ಇಲ್ಲಿ ದಾಖಲಿಸಿದ್ದಾರೆ.

ಬಾಲ್ಯದಿಂದಲೇ ಏನೋ ಗುರಿ ಇಟ್ಟುಕೊಂಡು ಬೆಳೆಯುವುದು ಒಂದೆಡೆಯಾದರೆ, ಬೆಳೆದು ದೊಡ್ಡವರಾದಂತೆ ಬಾಲ್ಯದ ಆಗುಹೋಗುಗಳನ್ನುನೆನಪಿಸಿಕೊಂಡು ಬದುಕನ್ನು ಸುಂದರವಾಗಿರಿಸಲು ಪ್ರಯತ್ನ ಮಾಡುವುದು ಇನ್ನೊಂದೆಡೆ. ಕರಾವಳಿ ಎಂದರೆ ಸಾಂಸ್ಕೃತಿಕ ಲೋಕದ ರಾಜಧಾನಿ ಎನ್ನುವುದಕ್ಕೆ ಯಾವುದೇ ತೊಡಕಿಲ್ಲ. ಆರಾಧನಾ ಪದ್ಧತಿಗಳು, ಯಕ್ಷಗಾನ, ನೃತ್ಯ ಲೋಕ, ಹಾಡು, ಪಾಡ್ದನ ..ನೇಮ, ಉರುಸ್.. ಹೀಗೆ ಇಲ್ಲಿ ಸದಾ ಸಂಗೀತ, ನೃತ್ಯ ಮತ್ತು ಬಣ್ಣದ ಲೋಕವೊಂದು ಜೀವಂತ ಇರುತ್ತದೆ.

ಅಂತಹ ಲೋಕದಲ್ಲಿಯೇ ಬಾಲ್ಯವನ್ನು ಕಟ್ಟಿಕೊಂಡ ನಾನು ಈಗ, ನೆನಪಿನ ಬುತ್ತಿಯೊಂದ್ನು ಬಿಚ್ಚಹೊರಟಿದ್ದೇನೆ. ಅದೇ ಬಾಲ್ಯದಲ್ಲಿ ಕುಕ್ಕೇ ಸುಬ್ರಹ್ಮಣ್ಯ ದಲ್ಲಿ ನಾನು ನೋಡುತ್ತಿದ್ದ ವಿಷ್ಣು ಮೂರ್ತಿ ದೈವದ ಒತ್ತೆಕೋಲ ಎಂಬ ನರ್ತನ ಜಗತ್ತು. ನಂಬಿಕೆಯನ್ನು ಹೊರತುಪಡಿಸಿದರೆ, ಅದೊಂದು ಸುಂದರವಾದ ಬಣ್ಣಮಯವಾದ ನಾಟ್ಯಪ್ರಪಂಚವೂ ಕೂಡಾ. ಜೊತೆಗೆ ಭಾವನಾತ್ಮಕ ಎಳೆಯೊಂದು ಹಾಗೇ ಸುಳಿಯುತ್ತದೆ‌ ನನ್ನೊಳಗೆ. ಕಾರಣ ಅಪ್ಪ.

ಕರಾವಳಿಯ ಜಿಲ್ಲೆಗಳಲ್ಲಿ ದೈವಾರಾಧನೆಯ ಪದ್ಧತಿಯಲ್ಲಿ ಅನೇಕ ಬಗೆಗಳಿವೆ. ಒಂದೊಂದು ದೈವ(ಭೂತ)ಕ್ಕೆ ಒಂದೊಂದು ರೀತಿಯ ಆರಾಧನಾ ವಿಧಾನ. ಕೋಲ, ನೇಮ, ದೊಂಪದ ಬಲಿ, ಮೆಚ್ಚಿ…ಹೀಗೆ ಅನೇಕ ವಿಧಗಳು. ಒತ್ತೆಕೋಲ ಎಂಬ ಆರಾಧನೆಯು ವಿಷ್ಣುಮೂರ್ತಿ ದೇವರಿಗೆ ಸಲ್ಲುವ ಸೇವೆ. ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಮತ್ತು ಕಾಸರಗೋಡಿನ ಪ್ರದೇಶಗಳಲ್ಲಿ ಈ ಒತ್ತೆಕೋಲಗಳು ಹೆಚ್ಚಾಗಿ ನಡೆಯುತ್ತವೆ. ಒಂದೇ ಅಥವಾ ಒಬ್ಬರೇ ಎಂಬುದಕ್ಕೆ ತುಳು ಭಾಷೆಯಲ್ಲಿ ‘ಒತ್ತೆ’ ಎನ್ನುವುದು. ದೈವಾರಾಧನೆಯ ಪ್ರಕ್ರಿಯೆ ಮೂರ್ನಾಲ್ಕು ದೈವಗಳಿಗೆ ಒಟ್ಟಾಗಿ ನಡೆಯುವುದುಂಟು. ಆದರೆ ಈ ಕೋಲವು ಒಂದೇ ದೈವಕ್ಕೆ ಮೀಸಲಾದ್ದರಿಂದ ಒತ್ತೆಕೋಲ ಎಂಬ ಹೆಸರು.

ಇದರ ಹಿನ್ನೆಲೆಯ ಬಗ್ಗೆ ಮಾತನಾಡುವಾಗ, ನರಸಿಂಹಾವತಾರದ ರೌದ್ರರೂಪವನ್ನೇ ವಿಷ್ಣಮೂರ್ತಿ ಎಂಬ ದೈವ ಸ್ವರೂಪದಲ್ಲಿ ಆರಾಧಿಸಲಾಗುತ್ತದೆ ಎನ್ನುವುದುಂಟು. ಮತ್ತೊಂದೆಡೆ ತುಳುನಾಡಿನ ಆರಾಧನೆಯ ಪದ್ಧತಿ ವೈದಿಕ ಕ್ರಮಕ್ಕಿಂತ ಪೂರಾ ಭಿನ್ನವಾದುದು ಎಂಬ ಮತ್ತೊಂದು ಮಾತೂ ಉಂಟು. ಅದಿರಲಿ, ಒತ್ತೆಕೋಲದಲ್ಲಿ ಕೆಂಡದ ಮೇಲೆ ದೈವವು ಹಾಯುವುದೇ ಈ ಆರಾಧನೆಯ ಪ್ರಮುಖ ಘಟ್ಟ ಎನಿಸುವುದರಿಂದ ಕೆಂಡದ ರಾಶಿಯನ್ನು ಮಾಡುವ ಪ್ರಕ್ರಿಯೆಯನ್ನು ಬಹಳ ಶ್ರದ್ಧೆಯಿಂದ ಮಾಡುತ್ತಾರೆ.

ಹಾಗೆ ನೋಡಿದರೆ ಈ ಒತ್ತೆಕೋಲದ ಪ್ರಕ್ರಿಯೆ ಶುರುಆಗುವುದೇ ಆ ಕೆಂಡಕ್ಕೇ ಬೇಕಾಗುವ ಮರವನ್ನು ಕಡಿಯುವ ಮೂಲಕ. ಕೋಲಕ್ಕೆ ದಿನ ನಿಗದಿಯಾದರೆ, ಅದಕ್ಕಿಂತ ಒಂದು ತಿಂಗಳು ಮುಂಚೆಯೇ ಮರಕ್ಕೆ ಪೂಜೆ ಸಲ್ಲಿಸಿ ಸೌದೆ ಸಂಗ್ರಹದ ಕೆಲಸ ಆರಂಭವಾಗುತ್ತದೆ.
ಕುಕ್ಕೆ ಸುಬ್ರಹ್ಮಣ್ಯದ ಬಳಿಯ ಕುಲ್ಕುಂದ ಎಂಬಲ್ಲಿ ನಡೆಯುವ ವಿಷ್ಣುಮೂರ್ತಿ ಒತ್ತೆಕೋಲದ ಕೊಳ್ಳಿಮುಹೂರ್ತಕ್ಕೇ ಮರಕಡಿಯುವ ಕೆಲಸವನ್ನು ಅಪ್ಪನೇ ಮಾಡುತ್ತಿದ್ದರು. ಅವರು ಅನಾರೋಗ್ಯಕ್ಕೀಡಾಗುವವರೆಗೂ ಈ ಆಚರಣೆಯಲ್ಲಿ ತಪ್ಪದೇ ಭಾಗವಹಿಸುತ್ತಿದ್ದರು. ಅಲ್ಲಿ ಒತ್ತೆಕೋಲ ಪ್ರಾರಂಭವಾಗಿ ಐವತ್ತು‌ ವರ್ಷಗಳೇ ಕಳೆದುವು. ಪ್ರಾರಂಭದಿಂದ ಸುಮಾರು ಅಂದಾಜು 25 ವರ್ಷಗಳ ಕಾಲ ನಿರಂತರವಾಗಿ ಪ್ರತೀ ವರ್ಷ ಅಪ್ಪ ಅದೊಂದು‌ ತನ್ನ ಬದುಕಿನ ಭಾಗ ಎನ್ನುವಂತೆ ಮಾಡಿಕೊಂಡು ಬಂದಿದ್ದರು. ಅವರ ಶ್ರದ್ಧೆಯಲ್ಲಿ ಊನವೇ ಇರಲಿಲ್ಲ. ಕೊಳ್ಳಿಮುಹೂರ್ತಕ್ಕಾಗಿ ಅಪ್ಪನಿಗೆ ಮುಂಚಿತವಾಗಿ ಸಾಂಪ್ರದಾಯಿಕ ಆಹ್ವಾನವಿರುತ್ತಿತ್ತು.

ಕೊಳ್ಳಿ ಮುಹೂರ್ತ ಆದ ನಂತರ, ಕೋಲದ ದಿನದ ರಾತ್ರಿ ಬ್ಯಾಂಡ್, ವಾಲಗ ಸದ್ದು ಕೇಳಿದಾಕ್ಷಣ ‘ಹೋ… ಒತ್ತೆಕೋಲಕ್ಕೆ ಕಟ್ಟಿಗೆ ತೆಗೆದುಕೊಂಡುಹೋಗ್ತಿದ್ದಾರೆ’ ಅಂತ ಮನೆ ಬಾಗಿಲಿಗೆ ಬಂದು ಗಾಡಿ ಮರೆಯಾಗುವವರೆಗೂ ನೋಡುತ್ತ ನಿಲ್ಲುತ್ತಿದ್ದೆವು.
ಒತ್ತೆಕೋಲದ ದಿನ ರಾತ್ರಿ ಬಿಳಿ ಪಂಚೆ ತೊಟ್ಟು ಅದರ ಮೇಲೊಂದು ಕೆಂಪು ವಸ್ತ್ರ ಧರಿಸಿದ ದರ್ಶನ ಪಾತ್ರಿಗಳು ಮನೆ ಮನೆಗೆ ಬರುತ್ತಿದ್ದರು.‌ ‌ಅವರ ದರ್ಶನವನ್ನು ನೋಡುವುದಕ್ಕೇನೋ ಭಯ, ಬಾಗಿಲ ‌ಸಂದಿಯಿಂದ ಅವರನ್ನು ಇಣುಕುತ್ತಿದ್ದೆವು. ಅವೆಲ್ಲ ಮುಗ್ಧತೆಯ ಸುಂದರ ನೆನಪುಗಳು.

ಇತ್ತೀಚೆಗೆ ಮತ್ತೊಮ್ಮೆ ಅತ್ಯಂತ ಸನಿಹದಿಂದ ವಿಷ್ಣುಮೂರ್ತಿ ದೈವವನ್ನು ನೋಡಿ ನಿಜಕ್ಕೂ ರೋಮಾಂಚನಗೊಂಡೆ. ಅಪ್ಪ ಅವರ ಜೀವಿತಾವಧಿಯ ಅಷ್ಟೂ ವರ್ಷಗಳು ದೈವವನ್ನು ಅತ್ಯಂತ ಹತ್ತಿರದಿಂದ ನೋಡುತ್ತಾ , ಅದರ ಕಾರ್ಯಗಳಲ್ಲಿ ತಾವೂ ಭಾಗಿಯಾಗುತ್ತಾ ಇದ್ದರು ಎನ್ನುವುದು, ಅವರ ಅರ್ಪಣಾ ಮನೋಭಾವ ಈಗ ನೆನಪಾದರೆ ವಿಸ್ಮಯವೆನಿಸುತ್ತದೆ.

ಕೆಂಡದ ಮೇಲೆ ದೈವವು ಹಾಯುವುದೇ ಈ ಆರಾಧನೆಯ ಪ್ರಮುಖ ಘಟ್ಟ ಎನಿಸುವುದರಿಂದ ಕೆಂಡದ ರಾಶಿಯನ್ನು ಮಾಡುವ ಪ್ರಕ್ರಿಯೆಯನ್ನು ಬಹಳ ಶ್ರದ್ಧೆಯಿಂದ ನೆರವೇರಿಸುತ್ತಾರೆ.

ಅಂದು ನಮಗರಿವಾಗದ ಸಂಗತಿಯದು. ನಮ್ಮ ಆಚರಣೆಗಳೆಲ್ಲಾ ಎಷ್ಟು ವಿಭಿನ್ನವಾಗಿ, ನಮಗೆ ಹೀಗೆ ಆಪ್ತವಾಗುತ್ತವೆ ಎನ್ನುವುದು ಆಗ ಗೊತ್ತಿರಲೇಇಲ್ಲ. ಅಥವ ಅದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ನಾನು ಸೋತಿದ್ದೇನೋ, ಅರ್ಥ ಮಾಡಿಸುವುದರಲ್ಲಿ ಅಪ್ಪ ಸೋತಿದ್ದರೋ ಇನ್ನೂ ಗೊತ್ತಿಲ್ಲ. ಆದರೆ ಅದನ್ನೆಲ್ಲಾ ‌ಬಾಲ್ಯದಲ್ಲಿ ಕಂಡು ಸಂಭ್ರಮಿಸುತ್ತಾ ಇದ್ದೆವು ಅನ್ನುವುದು ಸತ್ಯ. ಅಥವಾ ಅದಕ್ಕೂ ಅಪ್ಪನ ‌ಭಾಗವಹಿಸುವಿಕೆಯೇ ಕಾರಣವೇನೋ ಅದೂ ಅಸ್ಪಷ್ಟ.

ವಿಷ್ಣು ಮೂರ್ತಿ ಒತ್ತೆಕೋಲ ‌‌ಎಂದರೆ ಬಾಲ್ಯಕಾಲದಲ್ಲಿ ನಾವು ಸಂಭ್ರಮಿಸುತ್ತಿದ್ದ ಒಂದು ಜಾತ್ರೆ ಕೂಡಾ ಹೌದು. ಬೀದಿ ತುಂಬಾ ಬರುವ ಮಣಿಸರಕುಗಳ ಅಂಗಡಿ, ತೊಟ್ಟಿಲು, ಸರ್ಕಸ್ , ಮರಣಬಾವಿ -ಇಂತಹುಗಳೆಲ್ಲಾ ವರ್ಷಕ್ಕೊಮ್ಮೆ ಮಾತ್ರ ಬರುವ ಜಾತ್ರೆಯಲ್ಲಿ ನಮಗೆ ಕಾಣಸಿಗುವುದು. ಇಂತಹುದನ್ನೇಲ್ಲಾ ಮತ್ತೆ ನೋಡುವುದಕ್ಕೇ ಒಂದು ವರ್ಷ ಕಾಯಲೇ ಬೇಕು.

ವಿಷ್ಣುಮೂರ್ತಿ ಜೊತೆಗೆ ವಿಷ್ಣುಮೂರ್ತಿ ಗಿಂತ ಮೊದಲು ಕುಳ್ಚಟ್ಟು, ನಂತರ ಮುಳ್ಳು ಗುಳಿಗ ಹೀಗೆ ಬೇರೆ‌ಭೂತಗಳ ಸಾಂಗತ್ಯವೂ ಇರುತ್ತದೆಯಾದರೂ, ಕೋಲಕ್ಕೆ ಸಂಬಂಧಿಸಿದಂತೆ, ಮುಖ್ಯವಾಗಿ ಕರೆಯಲ್ಪಡುವುದು ವಿಷ್ಣುಮೂರ್ತಿ ಒತ್ತೆಕೋಲವೆಂದೇ.

ಈ ಆರಾಧನೆಗಾಗಿ ದೈವ ಕಟ್ಟುವವರು ಬರುವುದು ಕೇರಳದಿಂದ. ಹಾಗಾಗಿ ಇದು ಕನ್ನಡದ ನೆಲದಲ್ಲಿ ಮಲೆಯಾಳಿಗಳ ಭೂತ ವೇಷದ ನಂಟು. ದೈವಪಾತ್ರಿಗಳು ಕುಟುಂಬ ಸಮೇತರಾಗಿ ಬಂದು, ಈ ಸೇವೆಯನ್ನು ಇಲ್ಲಿ ಗೈದು ಹೋಗುವ ಪರಿಪಾಟಲು ಅವರದ್ದು. ಶುದ್ಧ ಜನಪದೀಯ ಬಣ್ಣಗಳಾದ ಕೆಂಪು, ಹಳದಿ , ಕಪ್ಪುಗಳನ್ನೇ ಬಳಸಿದ ಮುಖವರ್ಣಿಕೆ. ದಟ್ಟವಾದ ಕೆಂಪು ಬಣ್ಣವನ್ನು ಢಾಳಾಗಿ ಬಳಸುವುದು ಎಲ್ಲಾ ಭೂತಕೋಲಗಳಲ್ಲಿ ಕಾಣುವಂತೆ ಇಲ್ಲೂ ಕಾಣುತ್ತೇವೆ. ಕೆಂಪು ರೌದ್ರರಸದ ಬಣ್ಣವಾಗಿರುವುದಕ್ಕೋ ಏನೋ ಈ ದೈವಗಳು ನಮಗೆ ಗಂಭೀರವಾಗಿ ಕಂಡುಬರುತ್ತದೆ, ಕಪ್ಪು ಬಣ್ಣವೂ ಇರುವುದಕ್ಕೆ ನಮಲ್ಲಿ ಭಯವನ್ನು ಉಂಟು ಮಾಡುವುದಿರಬಹುದು. ಅಲ್ಲದೆ ಅದ್ಭುತ ರಸದ ಬಣ್ಣವಾದ ಹಳದಿಯ ಬಳಕೆಯು, ಅವುಗಳ ಸಾಮರ್ಥ್ಯದ ಬಗ್ಗೆ ನಮ್ಮಲ್ಲಿ ಅಚ್ಚರಿ ಯನ್ನು ಮೂಡಿಸಲು ಶಕ್ತವಾಗಿರಬೇಕು.

ಕೇರಳ‌ಶೈಲಿಯ ಚೆಂಡೆ ವಾದನ ಜೊತೆಗೆ ತಾಳದ ಸಾಥ್.‌ ನುಡಿತಕ್ಕೆ ತಕ್ಕಂತಹ ಹೆಜ್ಜೆಗಳು, ನಿರಂತರವಾಗಿ ಹೆಜ್ಜೆಯೊಡನೆ ಧ್ವನಿಸುತ್ತಲೇ ಇರುತ್ತದೆ. ನಿಂತಾಗ ಮಾತು ಪ್ರಾರಂಭ. ಈ ದೈವಗಳೆಲ್ಲಾ ಮಾತನಾಡುವುದು ಮಲೆಯಾಳದಲ್ಲೇ. ವಿಷ್ಣುಮೂರ್ತಿ ಎಲ್ಲರನ್ನು ಉದ್ದೇಶಿಸಿ ಹೇಳುತ್ತಿದ್ದ “ಗುಣಂಬೆರೊಣೋ..‌ಗುಣಂಬೆರೊಣೋ” ಪದಗಳನ್ನು ನಾವೂ ಹಿಂದಿನಿಂದಲೂ ಗುಣುಗುಣಿಸುತ್ತಾನೇ ಇರ್ತಿದ್ದೆವು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದೈವಾರಾಧನೆ ಸಂದರ್ಭ ಬಳಸುವ ವೇಷಭೂಷಣವನ್ನು ಒತ್ತೆಕೋಲದ ಸಂದರ್ಭದಲ್ಲಿ ಬಳಸುವುದಿಲ್ಲ.ಬಹುವಾಗಿ ಕೇರಳದ ಪ್ರಭಾವ ಇರುವುದರಿಂದ ಇಲ್ಲಿ ಬಳಸುವ ವೇಷಭೂಷಣಗಳು ಕಡುಗೆಂಪಾಗಿ ರಂಗಾಗಿರುತ್ತದೆ. ಕೇರಳದ ಕಡೆ ಈ ಆಚರಣೆಗೆ ವಿಷ್ಣುಮೂರ್ತಿ ತೆಯ್ಯಂ ಎಂದೇ ಹೇಳುತ್ತಾರೆ.

ಇಡೀ ಆಚರಣೆಯ ಪ್ರಕ್ರಿಯೆಯಲ್ಲಿ ಕುತೂಹಲ ಮೂಡಿಸುವ ಸಂಗತಿ ಎಂದರೆ ಕೆಂಡಸೇವೆ. ರಾತ್ರಿ ಒತ್ತೆಕೋಲ ಆರಂಭವಾದರೂ, ಮುಂಜಾನೆ ವೇಳೆಗೆ ಕೆಂಡಸೇವೆಗೆ ಸಿದ್ಧತೆ ನಡೆಯುತ್ತದೆ. ಆಳೆತ್ತರದ ಕೆಂಡದ ರಾಶಿಯಲ್ಲಿ ಪದೇ ಪದೇ ಹಾರಿ ಹಾರಿ ಬೀಳುವ ದೈವವು ನೋಡುಗರಲ್ಲಿ ಭಯವನ್ನೂ, ಭಕ್ತಿಯನ್ನೂ ಮೂಡಿಸುತ್ತದೆ. ತೆಂಗಿನ ಗರಿ ಕೊಂಚ ಮಟ್ಟಿಗೆ ಬಿಸಿಯನ್ನು ತಡೆದರೂ ಪದೇ ಪದೇ ಕೆಂಡದ ಮೇಲೆ ಹಾರಿ, ಹೇಗೆ ಬಿಸಿಯಿಂದ ಸಂರಕ್ಷಿಸಿಕೊಳ್ಳುತ್ತಾರೋ ಗೊತ್ತಾಗುತ್ತಿರಲಿಲ್ಲ. ಈಗಲೂ ಅದು ಗೊತ್ತಾಗುವ ವಿಚಾರವೇ ಅಲ್ಲ.

ಆಗ ಮತ್ತೆ ನನಗೆ ಅಪ್ಪನ ಶ್ರದ್ಧೆಯೇ ನೆನಪಾಗುತ್ತದೆ. ವಿಷ್ಣುಮೂರ್ತಿ ಮೇಲೇರಿಗೆ ಬೀಳುವುದು… ದರ್ಶನಪಾತ್ರಿಗಳು ‌ಕೆಂಡದ ರಾಶಿಯ ಮೇಲೆ ಓಡುವುದು, ಇವೆಲ್ಲವೂ ಇಂದೂ ನಡೆಯುತ್ತದೆ. ಆದರೆ ನನ್ನ ದೃಷ್ಟಿಕೋನವು ಬಾಲ್ಯಕ್ಕಿಂತ ವಿಸ್ತಾರವಾಗಿದೆ. ಅಂದಿನ ಮುಗ್ಧವಾದ ಭಯ ಖುಷಿ ಅಂದಿಗಾದರೆ, ಇಂದು ನಾಟ್ಯ ಮತ್ತು ರಂಗಭೂಮಿ ಕ್ಷೇತ್ರದ ಹಿನ್ನೆಲೆಯನ್ನು ಇಟ್ಟುಕೊಂಡು ಒತ್ತೆಕೋಲವನ್ನು ನೋಡುವಾಗ ಹೊಸದೊಂದು ದೃಷ್ಟಿಕೋನವು ಗೋಚರಿಸುತ್ತದೆ. ಯಾವುದೂ ಹೆಚ್ಚಲ್ಲ, ಯಾವುದೂ ಕಡಿಮೆಯಲ್ಲ.