ಹಿಂದಿನ ವಾರವಷ್ಟೆ ತಮ್ಮ ಅನುಭವಗಳನ್ನು ಬರೆದು ದಾಖಲಿಸಿದ “ಅಂತರಂಗದ ಅಲೆ” ಪುಸ್ತಕವನ್ನು ನನಗೆ ಕಳಿಸಿದ್ದರು. ಬಹುಶಃ ಅದು ದೊಡ್ಡಪ್ಪನ ಕೊನೆಯ ಪುಸ್ತಕ. ಸಂಕಲನ ತಲುಪಿದ ಒಂದೆರಡು ದಿನಗಳಲ್ಲಿ ಓದಿ ಅವರಜೊತೆ ಚರ್ಚಿಸಿದ್ದೆ. ಕೆಲ ವರ್ಷಗಳ ಕೆಳಗೆ ದೊಡ್ಡಪ್ಪನಿಗೆ ಹೃದಯಾಘಾತವಾದಾಗ ಚೇಂಜ್ ಗಾಗಿ ಕೆಲದಿನ ನಮ್ಮ ಮನೆಯಲ್ಲಿ ಉಳಿದುಕೊಂಡಿದ್ದರು. ಹುಟ್ಟೂರಿನಲ್ಲಿ ಸ್ವಲ್ಪ ಸಮಯ ಕಳೆಯಲು ಸಿಕ್ಕ ಖುಷಿ ಅವರದಾದರೆ, ನಮಗೆಲ್ಲ ಅವರ ಮಾತು, ಕತೆ, ಕವಿತೆ, ಅನುಭವಗಳನ್ನು ಕೇಳುವ ಸುಖ. ದೊಡ್ಡಪ್ಪ ಮಾತಾಡಲು ಶುರು ಮಾಡಿದರೆ.. ವಾಹ್.!! ಅದೊಂದು ಮ್ಯಾಜಿಕ್.
ಕಳೆದ ಮಾರ್ಚ್ ನಲ್ಲಿ ದಿವಂಗತರಾದ ಕವಿ ಬಿ.ಎ.ಸನದಿಯವರ ಹುಟ್ಟುಹಬ್ಬಕ್ಕೆ ಅವರ ತಮ್ಮನ ಮಗ ನದೀಂ ಸನದಿ ಬರೆದ ಆಪ್ತ ಬರಹ

 

ಅಂದು ರವಿವಾರ. ಬೆಳಿಗ್ಗೆ ಸುಮಾರು ಆರೂವರೆಗೆ ನನ್ನ ಮೊಬೈಲ್ ರಿಂಗಾಯಿತು. ಆಕಡೆಯಿಂದ ಅತ್ತೆ ಮಗಳು ನಾಜನೀನ್ ಅಕ್ಕ. ನಿದ್ದೆಯಲ್ಲಿದ್ದ ನನಗೆ ಅಷ್ಟು ಲಕ್ಷ್ಯವಿರಲಿಲ್ಲ. ಫೋನೆತ್ತಿ ಹಲೋ ಎಂದೆ. ಆಕಡೆಯಿಂದ ಆಕೆ ನದೀಮ್.. ಕುಮಟಾಗೆ ಹೊರಡುವುದೋ?? ಹೇಗೆ? ಎಂದು ಕೇಳಿದಳು. ಒಂದು ಕ್ಷಣಕ್ಕೆ ನನಗೆ ಏನೂ ತಿಳಿಯಲಿಲ್ಲ. ಬೆಳಿಗ್ಗೆ ಸುಮಾರು 9ರ ಹೊತ್ತಿಗೆ ನೆಂಟರ ಮದುವೆಗೆ ಹಿರೇಬಾಗೇವಾಡಿಗೆ ಹೊರಡೋಣ ಎಂದು ಅಪ್ಪ-ಅಮ್ಮನ ಜೊತೆ ಹಿಂದಿನ ದಿನ ರಾತ್ರಿ ಮಾತುಕತೆಯಾಗಿತ್ತು. ಆ ಗುಂಗಿನಲ್ಲಿಯೇ ನಿದ್ದೆ ಹೋಗಿದ್ದ ನನಗೆ ನಾಜನೀನ್ ಳ ಪ್ರಶ್ನೆ ಗೊಂದಲಕ್ಕೀಡು ಮಾಡಿತು.

‘ಕುಮಟಾಗೆ ಏಕೆ?’ ಎಂದೆ.

ಆಕೆ ‘ಓಹ್ ನಿನಗಿನ್ನೂ ಗೊತ್ತಾಗಿಲ್ಲವೆ?’ ಎಂದಷ್ಟೇ ಹೇಳಿ ಫೋನ್ ಇಟ್ಟಳು.

ಮಲಗಿದ್ದ ನನಗೆ ಪೂರ್ಣ ಎಚ್ಚರಗೊಳ್ಳಲು ಎರಡು ಸೆಕೆಂಡ್ ಕೂಡ ಹಿಡಿಯಲಿಲ್ಲ. ಥಟ್ಟೆಂದು ಎದ್ದವನೇ ಡ್ರಾಯಿಂಗ್ ರೂಮಿಗೆ ಹೋದೆ. ಬಾಗಿಲಿನ ಪಕ್ಕದ ಸೋಫಾದ ಕುರ್ಚಿಯ ಮೇಲೆ ಅಪ್ಪ ಕೂತಿದ್ದರು. ಅಮ್ಮ ಎದುರಿಗಿನ ದೀವಾನಿನ ಮೇಲೆ. ನಾನಲ್ಲಿಗೆ ಹೋಗುವಷ್ಟರಲ್ಲಿ ಅಮ್ಮನ ಫೋನಿಗೆ ಯಾರದೋ ಕರೆ. ಅವರು ಫೋನಿನೊಂದಿಗೆ ಎದ್ದು ಹಿತ್ತಲಿನತ್ತ ಹೋದರು. ನಾನು ಅಪ್ಪನಿಗೆ ಕೇಳಿದೆ,

‘ಏನಾಯಿತು?’

‘ಬೇಟಾ.. ಬಡೇಅಬ್ಬಾ ಗಯೆ. (ಮಗನೆ, ದೊಡ್ಡಪ್ಪ ಹೋದರು)’ ಎಂದಷ್ಟೇ ಹೇಳಿ ಗದ್ಗದಿತರಾದರು.

ಒಂದುಕ್ಷಣಕ್ಕೆ ನಂಬಲೇ ಆಗಲಿಲ್ಲ. ‘ಎಲ್ಲಿಗೆ?’ ಎಂದೆ.

ಅಪ್ಪ ಮುಂದುವರೆದು ‘ಬೆಳಿಗ್ಗೆ ಹೃದಯಾಘಾತವಾಯಿತಂತೆ, ಬಾತ್ ರೂಮಿನಲ್ಲೇ ಕುಸಿದರಂತೆ. ಆಮೇಲೆ ಏಳಲೇ ಇಲ್ಲ’ ಎಂದು ಹೇಳಿ ಸುಮ್ಮನಾದರು.

ಕೇಳಿ ನನಗೆ ಕೈಕಾಲೇ ಆಡಲಿಲ್ಲ. ಕಳೆದ ವಾರದವರೆಗೆ ನಮ್ಮ ಮನೆಯಲ್ಲೇ ಉಳಿದುಕೊಂಡಿದ್ದರು. ಎಷ್ಟು ಖುಷಿಯಾಗಿದ್ದರು. ಕೊನೆಯ ದಿನಗಳಲ್ಲಿ ಹುಟ್ಟೂರಿನಲ್ಲೇ ಬಂದು ನೆಲೆಸಬೇಕೆಂದು ನಿರ್ಧರಿಸಿ ಸೈಟನ್ನೂ ಖರೀದಿಸಿ, ನನಗೆ ಮನೆ ಕಟ್ಟುವ ಜವಾಬ್ದಾರಿಯನ್ನು ಹೊರಿಸಿ, ಗುದ್ದಲಿ ಪೂಜೆಯನ್ನೂ ನೆರವೇರಿಸಿದ್ದರು. ಕುಮಟಾಗೆ ಹೊರಡುವಾಗ ‘ಮಳೆಗಾಲ ಮುಗಿಯುತ್ತಲೇ ಬಂದು ಬಿಡ್ತೇನೆ’ ಎಂದು ಹೇಳಿ ಕಾರು ಹತ್ತಿದ್ದರು. ಹಿಂದಿನ ರಾತ್ರಿಯಷ್ಟೆ ಫೋನಿನಲ್ಲಿ ದೊಡ್ಡಮ್ಮ ಮದುವೆಯಲ್ಲಿ ಅವರ ಪರವಾಗಿ ಆಹೇರು ಹಾಕುವಂತೆ ಹೇಳಿ, ದೊಡ್ಡಪ್ಪನಿಗೆ ಕಫಗಟ್ಟಿಯಾಗಿದೆ ಮಾತನಾಡಲಾಗುತ್ತಿಲ್ಲ ಎಂದು ಹೇಳಿದ್ದರು.

ನೆಂಟರೊಬ್ಬರ ಮದುವೆಗೆ ಅಹಮದಾಬಾದಿಗೆ ಹೋಗಬೇಕೆಂದು ದೊಡ್ಡಮ್ಮ ನಿರ್ಧರಿಸಿದಾಗ ದೊಡ್ಡಪ್ಪ, ದೊಡ್ಡಮ್ಮ ಬರುವವರೆಗೆ ಶಿಂದೊಳ್ಳಿಯ ನಮ್ಮ ಮನೆಯಲ್ಲಿ ಇರುವುದೆಂದು ನಿಶ್ಚಯಿಸಿದ್ದರು. ನಾನು ಹೋಗಿ ದೊಡ್ಡಪ್ಪನನ್ನು ಕರೆದುಕೊಂಡು ಬಂದೆ. ದೊಡ್ಡಪ್ಪ ಬರುವರೆಂದರೆ ಸಾಕು ನಮಗೆಲ್ಲರಿಗೂ ಖುಷಿ. ಆದರೆ ಈ ಬಾರಿಯ ಭೇಟಿಯೇ ಕೊನೆಯದಾಗಬಹುದೆಂದು ನಾವ್ಯಾರೂ ಊಹಿಸಿರಲಿಲ್ಲ.

ನನ್ನ ಮದುವೆಯ ದಿನ ಸೂಟು ಧರಿಸಿ ನನಗಿಂತ ಹೆಚ್ಚು ಸಂಭ್ರಮಿಸಿದ್ದ ದೊಡ್ಡಪ್ಪ, ಮದುವೆಯಾದ ದಿನದಿಂದ ‘ಕುಮಟಾಗೆ ಯಾವಾಗ ಬರುವಿರಿ’ ಎಂದು ಹಮೇಶಾ ಕೇಳುತ್ತಿದ್ದರು. ರಜಿಯಾ ಗರ್ಭಿಣಿ ಎಂಬ ತಿಳಿದಾಗ ಬಹಳ ಖುಷಿಪಟ್ಟು ‘ಇಬ್ಬರಂತೂ ಬರಲಿಲ್ಲ ಇನ್ನು ಮೂವರಾದ ಮೇಲಾದರೂ ಬರ್ರಿ’ಎಂದು ಹೇಳಿ ಮನಸಾರೆ ನಕ್ಕಿದ್ದರು. ಭರ್ತಿ 85 ತುಂಬಿದ್ದರೂ ಯಾವತ್ತೂ ಲವಲವಿಕೆಯಿಂದ ಇರುತ್ತಿದ್ದ ಜೀವ ಇನ್ನಿಲ್ಲ ಎಂದು ತಿಳಿದರೂ ನಂಬಲೇ ಆಗಲಿಲ್ಲ.

ಹಿಂದಿನ ವಾರವಷ್ಟೆ ತಮ್ಮ ಅನುಭವಗಳನ್ನು ಬರೆದು ದಾಖಲಿಸಿದ “ಅಂತರಂಗದ ಅಲೆ” ಪುಸ್ತಕವನ್ನು ನನಗೆ ಕಳಿಸಿದ್ದರು. ಬಹುಶಃ ಅದು ದೊಡ್ಡಪ್ಪನ ಕೊನೆಯ ಪುಸ್ತಕ. ಸಂಕಲನ ತಲುಪಿದ ಒಂದೆರಡು ದಿನಗಳಲ್ಲಿ ಓದಿ ಅವರಜೊತೆ ಚರ್ಚಿಸಿದ್ದೆ. ಕೆಲ ವರ್ಷಗಳ ಕೆಳಗೆ ದೊಡ್ಡಪ್ಪನಿಗೆ ಹೃದಯಾಘಾತವಾದಾಗ ಚೇಂಜ್ ಗಾಗಿ ಕೆಲದಿನ ನಮ್ಮ ಮನೆಯಲ್ಲಿ ಉಳಿದುಕೊಂಡಿದ್ದರು. ಹುಟ್ಟೂರಿನಲ್ಲಿ ಸ್ವಲ್ಪ ಸಮಯ ಕಳೆಯಲು ಸಿಕ್ಕ ಖುಷಿ ಅವರದಾದರೆ, ನಮಗೆಲ್ಲ ಅವರ ಮಾತು, ಕತೆ, ಕವಿತೆ, ಅನುಭವಗಳನ್ನು ಕೇಳುವ ಸುಖ. ದೊಡ್ಡಪ್ಪ ಮಾತಾಡಲು ಶುರು ಮಾಡಿದರೆ.. ವಾಹ್.!! ಅದೊಂದು ಮ್ಯಾಜಿಕ್. ಅವರ ಮಾತಿಗಿದ್ದ ಶಕ್ತಿ ನಮ್ಮನ್ನೆಲ್ಲ ಮಂತ್ರಮುಗ್ದರನ್ನಾಗಿಸಿ ಬೇರೊಂದು ಲೋಕಕ್ಕೇ ಕರೆದೊಯ್ಯುತ್ತಿತ್ತು. ಅವರ ಅನುಭವಗಳ ರಾಶಿಗೆ ಅಂತ್ಯವೇ ಇದ್ದಂತಿರಲಿಲ್ಲ. ಅನುಭವಗಳು ಒಂದೋ.. ಎರಡೋ.. ಅವುಗಳ ಪಾಲುದಾರರೂ.. ಪಾತ್ರಧಾರಿಗಳು.. ಒಬ್ಬರೋ ಇಬ್ಬರೋ.. ಬೇಂದ್ರೆಯಿಂದ ಭೈರಪ್ಪನವರವರೆಗೆ.. ಕುಸುಮಾಗ್ರಜರಿಂದ ಮಲ್ಲಿಕಾರ್ಜುನ ಮನಸೂರರವರೆಗೆ.. ಕೇಳುಗರ ಕಿವಿಗಳಿಗೆ ಭೂರಿ ಭೊಜನ.

ಅನುಭವಕಥನದಲ್ಲಿ ನಮ್ಮೂರಿನಲ್ಲಿ ಕಳೆದ ದಿನಗಳ ಕುರಿತಾದ ಒಂದು ಅಧ್ಯಾಯವಿತ್ತು. ದೊಡ್ಡಪ್ಪ ಅದರಲ್ಲಿ ನಮ್ಮೂರನ್ನು, ನಮ್ಮ ಮನೆಯನ್ನು, ನಮ್ಮೂರಿನ ಶಾಲೆಯನ್ನು, ವಾತಾವರಣವನ್ನು ಉಲ್ಲೇಖಿಸಿದ್ದಷ್ಟೇ ಅಲ್ಲದೆ ತಮ್ಮ ಜಮಾನಾದಲ್ಲಿದ್ದ ಸ್ಥಿತಿಗತಿಗಳನ್ನೂ ವಿಸ್ತಾರವಾಗಿ ವರ್ಣಿಸಿದ್ದರು. ದೊಡ್ಡಪ್ಪನ ನೆನಪಿನ ಶಕ್ತಿ ಅಷ್ಟು ಚುರುಕಾಗಿತ್ತು.

ಇದೇ ಹೊತ್ತಿಗೆ ದೊಡ್ಡಪ್ಪನ ಕೈಯಲ್ಲಿ ಸ್ಮಾರ್ಟ್ ಫೋನ್ ಬಂದಿತ್ತು. ಶಿಂದೊಳ್ಳಿಗೆ ಬಂದಾಗ ಸಮೀರನಿಂದ ಅದರಲ್ಲಿ ವಾಟ್ಸ್ಯಾಪ್ ಸೇರಿ, ಟ್ರೇನಿಂಗ್ ಶುರು. ಕೆಲವೇ ದಿನಗಳಲ್ಲಿ ವಾಟ್ಸ್ಯಾಪ್ ಉಪಯೋಗಿಸುವುದನ್ನು ಕಲಿತು ನಮಗೆಲ್ಲ ಮೆಸೇಜ್ ಕೂಡ ಮಾಡುತ್ತಿದ್ದರು. ಸ್ವತಃ ಕನ್ನಡ ಟೈಪಿಸುವ ಆ್ಯಪ್ ಹಾಕಿಕೊಂಡು ನನ್ನ ಜೊತೆ ಕನ್ನಡದಲ್ಲೇ ಚಾಟ್ ಮಾಡುತ್ತಿದ್ದರು. ಹಲವಾರು ವಿಷಯಗಳ ಚರ್ಚೆ ವಾಟ್ಸ್ಯಾಪಿನಲ್ಲೇ. ನನ್ನ ಕವಿತೆಗಳನ್ನು ಓದಿ ತಿದ್ದುತ್ತಿದ್ದರು. ತಾವು ಬರೆದ ಕವಿತೆಗಳನ್ನು ಕಳಿಸುತ್ತಿದ್ದರು, ಬರೆಯುತ್ತಿರುವ ಅಥವಾ ಓದುತ್ತಿರುವ ಬರಹಗಳ ಬಗ್ಗೆ ಹೇಳುತ್ತಿದ್ದರು. ಎಲ್ಲ ವಾಟ್ಸ್ಯಾಪಿನಲ್ಲೆ. ಹೊಸ ಟೆಕ್ನಾಲಜಿಗಳನ್ನು ಗ್ರಹಿಸಿ ಉಪಯೋಗಿಸುವುದು ಅವರಿಗೆ ಯಾವತ್ತೂ ಕಷ್ಟವಾಗುತ್ತಿರಲಿಲ್ಲ.

ದೇಹದ ಬಲಭಾಗ ಪಾರ್ಶ್ವವಾಯುವಿಗೆ ಒಳಗಾದಾಗ ಕುಗ್ಗದೇ ಅದನ್ನು ದೈರ್ಯದಿಂದ ಎದುರಿಸಿದ್ದ ದೊಡ್ಡಪ್ಪ “ಭಯದ ಬಲಗುಂದಿರಲು” ಎಂಬ ಕವಿತೆಯೊಂದನ್ನು ಬರೆದು ತಮಗಾದ ಅನುಭವವನ್ನು, ತೊಂದರೆಯನ್ನು ವಿವರಿಸಿ ಕೊನೆಗೆ ‘ನಾನೊಂದು ದಿನ ಮತ್ತೆ ಎದ್ದು ನಿಲ್ಲುತ್ತೇನೆ, ಈಗಿರುವ ಲಾಠಿಯ ಆಧಾರವಿಲ್ಲದೆ’ ಎಂದು ಬರೆದರಷ್ಟೆ ಅಲ್ಲದೇ ಅದನ್ನು ಸಾಧಿಸಿಯೂ ತೋರಿಸಿದ್ದರು. ಅವರ ಜೀವನ ಪ್ರೀತಿಯ ಮುಂದೆ ಸಣ್ಣ ಸಂಗತಿಗೂ ಮರುಗುವ ನಾವೆಲ್ಲ ಕ್ಷುಲ್ಲಕರು.

ಕಳೆದ ಮಾರ್ಚಿನಲ್ಲಿ (2019) ನಮ್ಮ ಮನೆಯಲ್ಲಿದ್ದಾಗ ಧಾರವಾಡದ ರಂಗಾಯಣದಿಂದ ಆಮಂತ್ರಣವೊಂದು ಬಂದಿತ್ತು. ದೊಡ್ಡಪ್ಪ ‘ತನಗೆ ಬರಲಾಗುವುದಿಲ್ಲ ಕ್ಷಮಿಸಿ’ ಎಂದು ಮಾತನಾಡುವುದನ್ನು ಕೇಳಿದ ನನ್ನ ತಮ್ಮ ಸಮೀರ ಅವರಿಗೆ `ನಿಮಗೆ ಹೋಗುವ ಆಸೆಯಿದ್ದರೆ ಕಾರಿನಲ್ಲಿ ನಾನು ಕರೆದುಕೊಂಡು ಹೋಗುತ್ತೇನೆ’ ಎಂದಾಗ ಉತ್ಸಾಹದಿಂದ ಒಪ್ಪಿದ್ದರು. ಬೆಳಿಗ್ಗೆ ಸುಮಾರು ಒಂಭ್ತಕ್ಕೆ ಅಪ್ಪ, ಸಮೀರ ಮತ್ತು ದೊಡ್ಡಪ್ಪ ಧಾರವಾಡಕ್ಕೆ ಹೊರಟು ಕಾರ್ಯಕ್ರಮವನ್ನು ಮುಗಿಸಿಕೊಂಡು, ಧಾರವಾಡದಲ್ಲಿರುವ ಅತ್ತೆಯನ್ನು ಭೇಟಿಯಾಗಿ ಮಧ್ಯಾಹ್ನದ ಹೊತ್ತಿಗೆ ಮರಳಿ ಮನೆ ಸೇರಿದ್ದರು. ಅವತ್ತು ದೊಡ್ಡಪ್ಪ ತಮ್ಮ ಕವಿತೆಗಳನ್ನು ಓದಿ ಅದ್ಭುತವಾಗಿ ಮಾತನಾಡಿದರಂತೆ. ಮನೆಗೆ ಬಂದ ಬಳಿಕ ಸಮೀರನನ್ನು ಕರೆದು ‘ನಿನ್ನಿಂದ ಇವತ್ತು ನಾನು ರಂಗಾಯಣಕ್ಕೆ ಹೋಗುವಂತಾಯಿತು. ಸೋ, ಗೌರವಧನದ ಅರ್ಧ ಪಾಲು ನಿನ್ನದು’ ಎಂದು ಹೇಳಿ, ಕುಮಟಾಗೆ ಹೋದ ಬಳಿಕ ದೊಡ್ಡಮ್ಮನಿಗೆ ಹೇಳಿ ಸಮೀರನ ಅಕೌಂಟಿನ ಹಣ ಹಾಕಿಸಿದ್ದರು. ರಂಗಾಯಣದ ಕಾರ್ಯಕ್ರಮ ದೊಡ್ಡಪ್ಪ ಪಾಲ್ಗೊಂಡ ಕೊನೆಯ ಕಾರ್ಯಕ್ರಮ.

ಹುಟ್ಟೂರಿನಲ್ಲೆ ಮನೆ ಮಾಡಿಕೊಂಡಿರುವ ನಿರ್ಧಾರವನ್ನು ಮಾಡಿದಂದಿನಿಂದ ತುಂಬಾ ಖುಷಿಯಾಗಿದ್ದ ದೊಡ್ಡಪ್ಪ, ನಮ್ಮಲ್ಲಿ ಕಳೆದ 19 ದಿನಗಳನ್ನು “2019ರ 19 ದಿನಗಳು” ಎಂದು ಅಧ್ಯಾಯವನ್ನೊಂದು ಬರೆದು ಅನುಭವ ಕಥನದ ಎರಡನೆಯ ಭಾಗದಲ್ಲಿ ಸೇರಿಸಬಹುದು ನೋಡು ಎಂದು ನನಗೆ ಹೇಳಿದ್ದರು.

This was so unfair ದೊಡ್ಡಪ್ಪ. ಬರೆಯುವ ಮೊದಲೇ ನಮ್ಮನ್ನಗಲಿ ಹೋಗಿಬಿಟ್ಟರು.

ದೊಡ್ಡಪ್ಪ ಮಾತಾಡಲು ಶುರು ಮಾಡಿದರೆ.. ವಾಹ್.!! ಅದೊಂದು ಮ್ಯಾಜಿಕ್. ಅವರ ಮಾತಿಗಿದ್ದ ಶಕ್ತಿ ನಮ್ಮನ್ನೆಲ್ಲ ಮಂತ್ರಮುಗ್ದರನ್ನಾಗಿಸಿ ಬೇರೊಂದು ಲೋಕಕ್ಕೇ ಕರೆದೊಯ್ಯುತ್ತಿತ್ತು. ಅವರ ಅನುಭವಗಳ ರಾಶಿಗೆ ಅಂತ್ಯವೇ ಇದ್ದಂತಿರಲಿಲ್ಲ.

ದೊಡ್ಡಪ್ಪ ನನಗೆ ಯಾವತ್ತು ಅಡಿಗರ “ಏನಾದರೂ ಮಾಡುತಿರು ತಮ್ಮ, ನೀ ಸುಮ್ಮನಿರಬೇಡ” ಎಂದು ಹೇಳುತ್ತಿದ್ದರು. ಹೇಳುವುದಷ್ಟೇ ಅಲ್ಲದೇ ಸ್ವತಃ ಪಾಲಿಸುತ್ತಿದ್ದರೂ ಸಹ. ಕುಮಟಾಗೆ ಹೋದರೆ ಅಲ್ಲಿ ನನಗೆ ಹಿರಿಯ ಕವಿ-ಲೇಖಕರ ಸಂಕಲನಗಳನ್ನು ನೋಡಲು ಓದಲು ಸಿಗುತ್ತಿತ್ತು. ಅದರಂತೆಯೇ ದೊಡ್ಡಪ್ಪ ನಮ್ಮ ಮನೆಗೆ ಬಂದರೆ ಅವರಿಗೆ ಹೊಸ ತಲೆಮಾರಿನ ಪರಿಚಯವಾಗುತ್ತಿತ್ತು. ನಾನು ಅವರ ಕೈಗೆ ಕೊಡುವ ಸಂಕಲನಗಳನ್ನು ಬಹಳ ಪ್ರೀತಿಯಿಂದ ಕೆಲವನ್ನು ಇಡಿಯಾಗಿ, ಕೆಲವು ಸಂಕಲನಗಳ ಆಯ್ದ ಕೆಲವು ಕವಿತೆ-ಕತೆಗಳನ್ನು ತಪ್ಪದೇ ಓದುತ್ತಿದ್ದರು. ರಾಜೇಂದ್ರ ಪ್ರಸಾದರ `ಬ್ರೆಕ್ಟ ಪರಿಣಾಮ’ವನ್ನು ಓದಿ ತಾವೂ ಒಂದು ಕವಿತೆಯನ್ನು ಬರೆದು ಓದಿ ತೋರಿಸಿದ್ದರು.

ಅಂದೊಂದು ದಿನ ಕಾಲೇಜು ಮುಗಿಸಿ ನಾನು ಮನೆ ತಲುಪಿದಾಗ ದೊಡ್ಡಪ್ಪ ಒಬ್ಬರೇಇದ್ದರು. ಅಮ್ಮ-ದೊಡ್ಡಮ್ಮ ವಾಕಿಂಗ್ ಹೋಗಿದ್ದರು, ಅಪ್ಪ ಮತ್ತು ಸಮೀರ ಇನ್ನು ಬಂದಿರಲಿಲ್ಲ. ಅವರನ್ನು ಮಾತಾಡಿಸಿ, ‘ದೊಡ್ಡಪ್ಪ ಹೊಸ ಕವಿತೆಯೊಂದನ್ನು ಬರೆದಿದ್ದೇನೆ’ ಎಂದೆ.

ಹೌದಾ..!! ಓದು, ಕೇಳುತ್ತೇನೆ ಎಂದರು.

“ಸಾಯುವವನ ಅಫಿಡೆವಿಟ್ಟು”

ನಾನು ಮತ್ತೆ ಹುಟ್ಟಿ ಬರುತ್ತೇನೆ

ಮನೆ-ಮನಗಳ ನಡುವಿನ
ದ್ವೇಷ-ರೋಷಗಳ ಜ್ವಾಲೆ
ಕರಗಿ ಕೊನೆಯಾದಾಗ
ನಾನು ಮತ್ತೆ ಹುಟ್ಟಿ ಬರುತ್ತೇನೆ

ಮೇಲು-ಕೀಳು
ಭೇಧ-ಭಾವ
ಜಾತಿ-ಧರ್ಮ
ಮತ-ಪಂಥ
ಮಂದಿರ-ಮಸೀದಿ
ವೇದ-ಕುರಆನ್-ಬೈಬಲ್
ಎಲ್ಲವೂ ಮಾಯವಾದಾಗ
ನಾನು ಇನ್ನೊಮ್ಮೆ ಬರುತ್ತೇನೆ

ಸ್ವಾತಂತ್ರ್ಯದ ನೀಲ ನಭದಲಿ
ಬಿಳಿ ಪಾರಿವಾಳಗಳು ಮತ್ತೆ
ಹಾರಲು ಶುರುವಿಟ್ಟುಕೊಂಡಾಗ
ನಾನು ಮತ್ತೊಮ್ಮೆ ಹುಟ್ಟಿ ಬರುತ್ತೇನೆ

ಭೂಮಿಯ ಮೇಲೆ ಮನುಷ್ಯ
ಮನುಷ್ಯರೊಡನೆ ಮನುಷ್ಯನಂತೆ
ವರ್ತಿಸಲು ಪ್ರಾರಂಭಿಸಿದಾಗ
ನಾನು ಮಗದೊಮ್ಮೆ ಹುಟ್ಟಿ ಬರುತ್ತೇನೆ

ಅಲ್ಲಿವರೆಗೆ
ಒಂದಿಷ್ಟು ವಿರಮಿಸುತ್ತೇನೆ
ನಾನೀಗ ಹೋಗಿ ಬರುತ್ತೇನೆ

– ಎಂದು ಓದಿದೆ. ಕೇಳಿದ ಅವರು ಬಾಯ್ತುಂಬಾ ನಕ್ಕು… ‘ಚೆನ್ನಾಗಿದೆ.. ಚೆನ್ನಾಗಿದೆ’ ಎಂದರು. ಸಾವಿನ ಬಗ್ಗೆ ಇದ್ದ ನನ್ನ ಈ ಕವಿತೆಯೇ ಅವರು ಕೇಳುವ ನನ್ನ ಕೊನೆಯ ಕವಿತೆಯಾಗಬಹುದೆಂದು ಕನಸು ಮನಸಿನಲ್ಲಿಯೂ ಊಹಿಸಿರಲಿಲ್ಲ. ಇದಾದ ಎರಡೇ ದಿನಕ್ಕೆ ಕಾರಿನಲ್ಲಿ ಕುಮಟಾಗೆ ಹೋದ ದೊಡ್ಡಪ್ಪ ಮರಳಿ ನಮ್ಮ ಮನೆಗೆ ಬಂದದ್ದು ಆಂಬುಲೆನ್ಸಿನಲ್ಲಿ ಕಫನ್ ಹೊದ್ದು.

ನನ್ನ ಸಂಕಲನದ ಕೊನೆಯ ಕವಿತೆ ಎಂದು ನಾನು ಕಳಿಸಿದ ಕವಿತೆಯನ್ನು ಅವರು ಓದಲೇ ಇಲ್ಲ. ಅವರು ಕಳಿಸಿದ ಕೊನೆಯ ಮೆಸೇಜಿಗೆ ನಾನು ಮಾಡಿದ ರಿಪ್ಲೈ ಅವರನ್ನು ತಲುಪಲೇ ಇಲ್ಲ, ವಾಟ್ಸ್ಯಾಪಿನ ಕಪ್ಪು ಟಿಕ್ಕುಗಳು ನೀಲಿಯಾಗಲೇ ಇಲ್ಲ.

ನೀವು ‘ರಜಿಯಾ ಹೇಗಿದ್ದಾಳೆ? ನಮಗೆ ಅವಳದ್ದೇ ಚಿಂತೆಯಾಗಿದೆ’ ಎಂದು ಕೇಳಿದ್ದಕ್ಕೆ ಉತ್ತರಿಸುವುದರೊಳಗೆ ನಿಮ್ಮನ್ನು ಕಳೆದುಕೊಳ್ಳುತ್ತೇವೆ ಎಂದು ಅಂದುಕೊಂಡಿರಲಿಲ್ಲ.

ಏನು ಹೇಳಲಿ ಬಡೇಅಬ್ಬಾ…..

ರಜಿಯಾ ಚೆನ್ನಾಗಿದ್ದಾಳೆ. ನಾವಿಬ್ಬರೂ ಈಗ ಗಂಡು ಮಗುವಿಗೆ ತಂದೆ-ತಾಯಿಯಾಗಿದ್ದೇವೆ. ಅವನಿಗೆ ಇಜಾನ್ ಎಂದು ಹೆಸರಿಟ್ಟಿದ್ದೇವೆ. ಅವನ ರೂಪದಲ್ಲಿ ನಿಮ್ಮನ್ನು ಮರಳಿ ಪಡೆದಿದ್ದೇವೆ ಎಂಬ ಸಮಾಧಾನದಲ್ಲಿದ್ದೇವೆ.

ಆದರೆ ನಿಮ್ಮನ್ನು ಮರೆಯುವುದು ಹೇಗೆ?

ಇಂದು ನೀವು ಇದ್ದಿದ್ದರೆ ಇಜಾನನ ಜೊತೆ 86 ನೆಯ ಜನ್ಮದಿನವನ್ನು ಸೆಲಬ್ರೇಟ್ ಮಾಡುತ್ತಿದ್ದೆವು. ಈಗ ನೀವಿಲ್ಲ, ಆದರೆ ನಿಮಗೆ ಹ್ಯಾಪಿ ಬರ್ಥಡೇ ಹೇಳಬೇಕೆಂಬ ಆಸೆ ಅಚಲ. ಹೇಳುತ್ತೇನೆ, ನಾನಿರುವವರೆಗೆ ನಿಮಗೆ ಪ್ರತಿವರ್ಷ ಹ್ಯಾಪಿ ಬರ್ಥಡೇ ಹೇಳುತ್ತೇನೆ. ಹೇಳಿಯೇ ತೀರುತ್ತೇನೆ.