ಅನಂತಮೂರ್ತಿ ಬರೆಯುತ್ತಿದ್ದ ಪತ್ರಗಳನ್ನು ನಾನು ಜೋಪಾನವಾಗಿಡಬೇಕಿತ್ತು. ಎಂಥ ಪತ್ರಗಳವು! ಅವರು ಚೆನ್ನೈ ಹೋಗಿದ್ದಾಗ ಅಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆಯನ್ನು ನೆನೆದು ಪುಳಕಿತರಾಗಿ ನನಗೆ ಬರೆದ ಪತ್ರದಲ್ಲಿ ಒಂದು ಕವನವನ್ನೇ ಬರೆದು ಕಳುಹಿಸಿದ್ದರು: `ಮತ್ತೆ ಮಳೆ ಹೊಯ್ಯುತ್ತಿದೆ!’ ಒಮ್ಮೆ `ಓದು’ ಅಂತ ಗೋಪಾಲಕೃಷ್ಣ ಅಡಿಗರ `ಭೂಮಿಗೀತ’ ಕವನವನ್ನು ಕಳುಹಿಸಿಕೊಟ್ಟಿದ್ದರು. ಕೆ.ಎಸ್. ನರಸಿಂಹಸ್ವಾಮಿಯವರ `ಮೈಸೂರು ಮಲ್ಲಿಗೆ’ ಪ್ರೇಮದ ಉಡುಗೊರೆಯಾಗಿ ನನ್ನ ಕೈಸೇರಿತ್ತು. ಅದರಲ್ಲಿರುವ `ರಾಯರು ಬಂದರು ಮಾವನ ಮನೆಗೆ’ ಪದ್ಯವನ್ನು ಖುಷಿಯಲ್ಲಿ ಓದಿದ್ದೆ. ಡಾ. ಪೃಥ್ವೀರಾಜ ಕವತ್ತಾರು ನಿರೂಪಣೆಯ ಎಸ್ತರ್ ಅನಂತಮೂರ್ತಿಯವರ ಆತ್ಮಕತೆ ‘ನೆನಪು ಅನಂತ’ ಕೃತಿಯ ಅಧ್ಯಾಯವೊಂದು ನಿಮ್ಮ ಓದಿಗೆ

ಹಾಸನದಲ್ಲಿ ಪಿಯುಸಿ ಓದುತ್ತಿದ್ದ ಕೊನೆಯ ದಿನಗಳಲ್ಲಿ ನಡೆದ ಘಟನೆ ಇವತ್ತಿಗೂ ನೆನಪಿದೆ. ತೀರ್ಥಹಳ್ಳಿ ಸಮೀಪದ ಗೋಣಿಬೀಡುವಿನಲ್ಲಿ ಅನಂತಮೂರ್ತಿಯವರ ಮಾವನ ಮದುವೆ ನಿಗದಿಯಾಗಿತ್ತು. ಅದೇ ದಿನ ಅವರ ತಮ್ಮ ವೆಂಕಟೇಶಮೂರ್ತಿ ಕೊಚ್ಚಿನ್‌ನಲ್ಲಿ ತೀರಿಕೊಂಡ ಸುದ್ದಿ ತಲುಪಿತ್ತು. ಅನಂತಮೂರ್ತಿ ಈ ಸಂದರ್ಭದಲ್ಲಿ ಹಾಸನದ ಮನೆಯಲ್ಲಿದ್ದರು. ಈ ಸುದ್ದಿ ನನಗೂ ಹೇಗೋ ತಲುಪಿತು. ನಾನು ಕೂಡ ವೆಂಕಟೇಶಮೂರ್ತಿಯನ್ನು ಹತ್ತಿರದಿಂದ ಕಂಡು ಬಲ್ಲವಳಾಗಿದ್ದೆ. ತುಂಬ ದುಃಖವೆನಿಸಿತು. ಇಂಥ ಸಂದರ್ಭದಲ್ಲಿ ಅನಂತಮೂರ್ತಿಯನ್ನು ಕಂಡು ಮಾತನಾಡಬೇಕೆನಿಸಿತು. ಒಬ್ಬಳೇ ಹೋಗುವುದು ಹೇಗೆ? ತಂಗಿ ಐರಿನ್‌ಳನ್ನು ಜೊತೆಗೆ ಕರೆದುಕೊಂಡೆ. ಅನಂತಮೂರ್ತಿ ದುಃಖದ ಮುಖದಲ್ಲಿ ನಮ್ಮನ್ನು ಎದುರುಗೊಂಡರು. ನಾನು ಅವರ ಬೆನ್ನಮೇಲೆ ಕೈದಡವಿ ಮಾತನಾಡಿಸಲು ಪ್ರಯತ್ನಿಸಿದೆ. ಕೆಲವು ಕ್ಷಣ ಕಳೆಯಿತು. ಅಂಥ ಸಂದರ್ಭದಲ್ಲಿ ಮೌನವೇ ಮುಖ್ಯವೆನಿಸಿ ತಂಗಿಯೊಡನೆ ಮರಳಿ ಬಂದೆ. ನಾನು ಅನಂತಮೂರ್ತಿಯನ್ನು ಮುಟ್ಟಿ ಮಾತನಾಡಿಸಿದೆನೆಂದು ತಂಗಿ ಮನೆಯಲ್ಲಿ ದೂರು ನೀಡಿದರು. ಮನೆಯಲ್ಲಿ ಕೊಂಚ ರಂಪವಾಯಿತು.

ಪಿಯುಸಿಯಲ್ಲಿ ಒಳ್ಳೆಯ ಅಂಕಗಳು ದೊರೆಯದ ಕಾರಣ ನನಗೆ ವೈದ್ಯಕೀಯ ಕಲಿಯಲು ಸೀಟು ಸಿಗಲಿಲ್ಲ. ಬಿ.ಎಸ್ಸಿ. ಓದಿದ ಬಳಿಕವಾದರೂ ಮೆಡಿಕಲ್ ಸೀಟಿಗೆ ಪ್ರಯತ್ನಿಸೋಣವೆಂದು ನನ್ನ ಹೆತ್ತವರು ಕಾಲೇಜು ಓದಲು ಬೆಂಗಳೂರಿಗೆ ಕಳುಹಿಸಿದರು. ಮಹಾರಾಣೀಸ್ ಕಾಲೇಜ್‍ಗೆ ಸೇರಿದೆ. 1958ರ ಸಮಯವಿರಬೇಕು, ಕಾರ್ಪೋರೇಶನ್ ಆಫೀಸ್ ಬಳಿ ಮಿಶನ್ ರೋಡ್ ಅಂತ ಇದೆಯಲ್ಲ, ಅದರ ಹತ್ತಿರ ಇದ್ದ ಸಿಎಸ್‌ಐ ಹಾಸ್ಟೆಲ್‌ನಲ್ಲಿ ಇದ್ದು ನಾನು ಕಾಲೇಜಿಗೆ ಹೋಗಿಬರುತ್ತಿದ್ದೆ. ಅದೇ ಹೊತ್ತಿಗೆ ಅನಂತಮೂರ್ತಿ ಹಾಸನ ತೊರೆದು ಮೈಸೂರಿನ ಮಹಾರಾಜಾಸ್ ಕಾಲೇಜ್‌ಗೆ ಸೇರಿದ್ದರು. ಪ್ರತಿದಿನ ಅವರನ್ನು ನೋಡುವ, ಅವರ ಪಾಠ ಕೇಳುವ ಅವಕಾಶ ನನಗೆ ತಪ್ಪಿಹೋಯಿತು. ಆದರೂ ನಮ್ಮ ಪ್ರೇಮಸಂಬಂಧ ಮುಂದುವರಿದಿತ್ತು. ಈಗಿನಂತೆ ಆಗ ಫೋನ್, ಮೊಬೈಲ್, ಇಮೇಲ್ ಎಲ್ಲ ಇರಲಿಲ್ಲ. ಪ್ರೇಮಪತ್ರಗಳನ್ನು ಬರೆಯುತ್ತಿದ್ದೆವು.

ಕೆಲವು ವರ್ಷಗಳ ಹಿಂದೆ ಭೇಟಿಯಾದ ಒಂದಿಬ್ಬರು ಸ್ನೇಹಿತೆಯರು ನನ್ನಲ್ಲಿ ವಿನೋದವಾಗಿ, `ನಿನ್ನ, ಅನಂತಮೂರ್ತಿಯವರ ಲವ್ ಎಫೇರ್ ಎಲ್ಲ ನಮಗೆ ಆಗಲೇ ಗೊತ್ತಿತ್ತು ಕಣೆ! ನಾವು ನಿನಗೆ ಬರುತ್ತಿದ್ದ ಪ್ರೇಮಪತ್ರಗಳನ್ನು ಕದ್ದುಮುಚ್ಚಿ ಓದುತ್ತಿದ್ದೆವು’ ಎಂದು ಹೇಳಿ ನಕ್ಕಿದ್ದರು. ನನಗೆ ಮಾತ್ರ ಆಗ ಒಂಥರಾ ಎನ್ನಿಸಿತ್ತು. ಎಂಥ ಮುಗ್ಧೆ ನಾನು. ಅನಂತಮೂರ್ತಿಯವರಿಂದ ಬರುತ್ತಿದ್ದ ಪತ್ರಗಳನ್ನು ನಾಲ್ಕೈದು ಸಲ ಓದಿ ಒಂದು ಟ್ರಂಕ್‌ನಲ್ಲಿರಿಸುತ್ತಿದ್ದೆ. ಅದನ್ನು ಗೌಪ್ಯವಾಗಿರಿಸಬೇಕೆಂದೂ ನನಗೆ ಅರಿವಿರಲಿಲ್ಲ. ನಾನು ಪ್ರೇಮದಲೆಯಲ್ಲಿ ಯಾವ ಪರಿಯಲ್ಲಿ ತೇಲುತ್ತಿದ್ದೆನೆಂದರೆ ನನ್ನ ಸುತ್ತಲಿನ ಜಗತ್ತನ್ನೇ ಮರೆತುಬಿಟ್ಟಿದ್ದೆ. ಈಗ ಅನ್ನಿಸುತ್ತಿದೆ- ಅನಂತಮೂರ್ತಿ ಬರೆಯುತ್ತಿದ್ದ ಪತ್ರಗಳನ್ನು ನಾನು ಜೋಪಾನವಾಗಿಡಬೇಕಿತ್ತು. ಎಂಥ ಪತ್ರಗಳವು! ಅವರು ಚೆನ್ನೈ ಹೋಗಿದ್ದಾಗ ಅಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆಯನ್ನು ನೆನೆದು ಪುಳಕಿತರಾಗಿ ನನಗೆ ಬರೆದ ಪತ್ರದಲ್ಲಿ ಒಂದು ಕವನವನ್ನೇ ಬರೆದು ಕಳುಹಿಸಿದ್ದರು: `ಮತ್ತೆ ಮಳೆ ಹೊಯ್ಯುತ್ತಿದೆ!’ ಒಮ್ಮೆ `ಓದು’ ಅಂತ ಗೋಪಾಲಕೃಷ್ಣ ಅಡಿಗರ `ಭೂಮಿಗೀತ’ ಕವನವನ್ನು ಕಳುಹಿಸಿಕೊಟ್ಟಿದ್ದರು. ಮತ್ತೊಮ್ಮೆ ಕೆ.ಎಸ್. ನರಸಿಂಹಸ್ವಾಮಿಯವರ `ಮೈಸೂರು ಮಲ್ಲಿಗೆ’ ಪ್ರೇಮದ ಉಡುಗೊರೆಯಾಗಿ ನನ್ನ ಕೈಸೇರಿತ್ತು.

ಅದರಲ್ಲಿರುವ `ರಾಯರು ಬಂದರು ಮಾವನ ಮನೆಗೆ’ ಪದ್ಯವನ್ನು ಖುಷಿಯಲ್ಲಿ ಓದಿದ್ದೆ. ನಾನು ಅನಂತಮೂರ್ತಿಗೆ ಬರೆಯುತ್ತಿದ್ದ ಪತ್ರಗಳಲ್ಲಿ ಕುಶಲೋಪರಿ, ಭಾವನಾತ್ಮಕ ಸಂಗತಿಗಳು ಬಿಟ್ಟರೆ ಬೇರೇನೂ ಇರಲಿಲ್ಲ. ಬೇರೆ ಬರೆಯುವಷ್ಟು ಬುದ್ಧಿಮತ್ತೆಯೂ ನನಗಿರಲಿಲ್ಲವೆನ್ನಿ. ಆದರೆ, ಅನಂತಮೂರ್ತಿಯವರ ಪತ್ರಗಳಲ್ಲಿ ಸಾಹಿತ್ಯಿಕ ಸಂಗತಿಗಳಿರುತ್ತಿದ್ದವು. ಅವರು ನನಗೆ ಬರೆಯುತ್ತಿದ್ದ ಪತ್ರಗಳನ್ನು ಇವತ್ತು ಮತ್ತೆ ಓದುವುದಕ್ಕೆ ಸಿಕ್ಕಿದ್ದರೆ ಅದರ ಅನುಭವ ಬೇರೆಯದೇ ಆಗಿರುತ್ತಿತ್ತು. ಆ ದಿನಗಳಲ್ಲಿ ನಿಜಕ್ಕೂ ನಾನು ಎಂಥ `ಗ್ರೇಟ್’ ಮನುಷ್ಯನನ್ನು ಪ್ರೀತಿಸುತ್ತಿದ್ದೇನೆಂದು ನನಗೇ ಗೊತ್ತಿರಲಿಲ್ಲ. ಗೊತ್ತಿರುತ್ತಿದ್ದರೆ, ಅಂದಿನ ಅವರ ಪತ್ರಗಳನ್ನು ಕಾಳಜಿಯಿಂದ ತೆಗೆದಿರಿಸುತ್ತಿದ್ದೆನಲ್ಲವೆ! ಅವುಗಳನ್ನು ಬಹುಶಃ ಹಾಸ್ಟೆಲ್‌ನಲ್ಲಿಯೇ ಬಿಟ್ಟೆನೋ ಅಥವಾ ಮೈಸೂರಿನಿಂದ ಇಂಗ್ಲೆಂಡ್‌ಗೆ ಹೋಗುವಾಗ ಅವು ಕಣ್ತಪ್ಪಿ ಕಳೆದುಹೋದವೊ ನೆನಪಿಗೆ ಬರುತ್ತಿಲ್ಲ.

ಅನಂತಮೂರ್ತಿ ಬೆಂಗಳೂರಿಗೆ ಆಗಾಗ ಬಂದು ನನ್ನನ್ನು ಭೇಟಿಯಾಗುತ್ತಿದ್ದರು. ನನ್ನನ್ನು ಸುತ್ತಾಡಿಸಿ ಮತ್ತೆ ಹಾಸ್ಟೆಲ್‌ಗೆ ತಂದು ಬಿಡುತ್ತಿದ್ದರು. ಅದಾಗಲೇ ನಾನು ಬ್ರಾಹ್ಮಣ ಹುಡುಗನನ್ನು ಪ್ರೀತಿಸುತ್ತಿದ್ದ ವಿಷಯ ಹಾಸ್ಟೆಲ್‌ನಲ್ಲಿ ಸುದ್ದಿಯಾಗಿತ್ತು. ನಾನು ಮಾತ್ರ ಯಾರಲ್ಲೂ ಈ ಬಗ್ಗೆ ಹೇಳಿರಲಿಲ್ಲ. ಎಲ್ಲರೂ ತಿಳಿದೂ ತಿಳಿಯದವರಂತೆ ಇದ್ದರು.

ಹಾಸ್ಟೆಲ್‌ನ ಹೊರಗಡೆ ದಟ್ಟವಾದ ಮರಗಳಿದ್ದವು. ಮರ ಏರಿ ಕೊಂಬೆಯಲ್ಲಿ ಕುಳಿತು ಓದುತ್ತ ಪರೀಕ್ಷೆಗೆ ತಯಾರಿ ನಡೆಸುವುದು ನನ್ನ ಅಭ್ಯಾಸ. ಒಮ್ಮೆ ಅಲ್ಲಿಯೇ ಸಮೀಪದಲ್ಲಿ ಹಾದುಹೋಗುತ್ತಿದ್ದ ಪಾದ್ರಿಯೊಬ್ಬರು ನನ್ನನ್ನು ಗಮನಿಸಿ ಹಾಗೆಯೇ ನಿಂತರು. ಕೈಸನ್ನೆಯಲ್ಲಿ ಕರೆದರು. ನಾನು ಮರ ಇಳಿದು ಅವರ ಬಳಿಗೆ ಹೋದೆ. `ನೋಡಮ್ಮ, ನೀನು ಬ್ರಾಹ್ಮಣ ಹುಡುಗನನ್ನು ಪ್ರೀತಿಸುತ್ತಿದ್ದಿ, ಮದುವೆಯಾಗುತ್ತಿ ಅಂತ ಯಾರೋ ಹೇಳುವುದನ್ನು ಕೇಳಿದೆ. ಇದು ಸರಿಯಲ್ಲ ನೋಡು. ನಿನ್ನನ್ನು ಈಗ ಮದುವೆಯಾಗುತ್ತಾನೆ, ಆಮೇಲೆ ಕೈಬಿಡುತ್ತಾನೆ. ಆಮೇಲೆ ಏನು ಮಾಡ್ತೀಯಾ?’ ಎಂದು ನೀತಿ ಬೋಧಿಸಲು ಪ್ರಯತ್ನಿಸಿದರು. ನಾನು ಸುಮ್ಮನೆ ತಲೆಯಾಡಿಸಿದೆ. ಅವರು ತೆರಳಿದ ಬಳಿಕ ಮರಳಿ ಮರ ಏರಿ ನನ್ನ ಪಾಡಿಗೆ ಓದಲಾರಂಭಿಸಿದೆ.

ಅಷ್ಟರಲ್ಲಿ ನಮ್ಮ ಮನೆಯಲ್ಲಿ ಮದುವೆಯ ಬಗ್ಗೆ ಅನಿವಾರ್ಯವಾಗಿ ಅನುಮತಿ ನೀಡಲು ಸಿದ್ಧರಾಗಿದ್ದರು. ಹಾಗೊಮ್ಮೆ ಅನಂತಮೂರ್ತಿ ಹಾಸನಕ್ಕೆ ಬಂದು ನಮ್ಮ ಮನೆಯಲ್ಲಿದ್ದು, ನನ್ನ ತಂದೆತಾಯಿಗಳನ್ನು ಮಾತನಾಡಿಸಿ ಹೋಗವಷ್ಟು ಸಲುಗೆಯನ್ನು ಸಂಪಾದಿಸಿಕೊಂಡಿದ್ದರು.

ನನ್ನ ತಂದೆ ಕೆಲಸ ಮಾಡುವ ಕಚೇರಿಯಲ್ಲಿ ಅವರ ಮೇಲಧಿಕಾರಿ ಮೇಲ್ಜಾತಿಗೆ ಸೇರಿದವನಾಗಿದ್ದ. ಅವನು ನನ್ನ ತಂದೆಯವರನ್ನು ಪರಕೀಯರೆಂದೂ ಹಳಿಯುತ್ತ ಕೀಳುಜಾತಿಯವರಾಗಿ ಕಾಣುತ್ತಿದ್ದ. ಅಂಥ ಸಂದರ್ಭದಲ್ಲೊಮ್ಮೆ ನನ್ನ ತಂದೆ, `ಈಗ ಬ್ರಾಹ್ಮಣೇ ನನ್ನ ಅಳಿಯನಾಗುತ್ತಿದ್ದಾನೆ ನೋಡೊ ಅಂತ ಅವನ ಮುಂದೆ ಹೇಳಬೇಕೆನಿಸುತ್ತದೆ’ ಎನ್ನುತ್ತಿದ್ದುದು ನನಗೀಗ ನೆನಪಿಗೆ ಬರುತ್ತಿದೆ.

ಕೊನೆಯ ವರ್ಷದ ಬಿ.ಎಸ್ಸಿ. ಓದುತ್ತಿರುವಾಗಲೇ ನಾನು ಮೈಸೂರಿಗೆ ತೆರಳಿ ಅನಂತಮೂರ್ತಿಯವರೊಂದಿಗೆ ರಿಜಿಸ್ಟರ್ಡ್ ಮದುವೆಯಾದೆ. ನಾನು ಬೆಂಗಳೂರಿಗೆ ಮರಳಿ ಹಾಸ್ಟೆಲ್‌ಗೆ ಬಂದರೆ ಅಲ್ಲಿ ನನಗೆ ಪ್ರವೇಶವೇ ಇಲ್ಲ! `ನೀನು ಬೇರೆ ಜಾತಿಯ ಹುಡುಗನನ್ನು ಮದುವೆಯಾಗಿದ್ದಿ’ ಎಂದು ನನ್ನನ್ನು ಹೊರಗಿಟ್ಟರು. ಆಗ ನಾನಿನ್ನೂ ಫೈನಲ್ ಇಯರ್ ಸ್ಟೂಡೆಂಟ್. ಕೊಂಚ ದೂರದಲ್ಲಿದ್ದ ಅಜ್ಜನ ಮನೆಯಲ್ಲಿದ್ದು ಕಾಲೇಜಿಗೆ ಹೋಗಿಬರಬೇಕಾಯಿತು. ಮಾನಸಿಕವಾಗಿ ಗೊಂದಲದ ಸ್ಥಿತಿಯ ದಿನಗಳವು. ನನಗೆ ಪರೀಕ್ಷೆಯನ್ನು ಪಾಸ್ ಮಾಡಲಾಗಲಿಲ್ಲ. ಮನೆಯವರ ಅಂಬೋಣದ ಮೇರೆಗೆ ಒಂದು ತಿಂಗಳ ಪೂರ್ವಭಾವಿ ನೊಟೀಸ್ ಕೊಟ್ಟು ಎರಡನೇ ಬಾರಿ ನನ್ನ ಮತ್ತು ಅನಂತಮೂರ್ತಿಯವರ ಮದುವೆ ಏರ್ಪಟ್ಟಿತು. ಆ ಬಳಿಕ ನಾನು ಮೈಸೂರಿಗೆ ತೆರಳಿ ಅನಂತಮೂರ್ತಿಯವರೊಂದಿಗೆ ಸಂಸಾರ ಹೂಡಿದೆ. ಅಲ್ಲಿಯವರೆಗೂ ಅನಂತಮೂರ್ತಿಯವರ ಅಮ್ಮ, ಇನ್ಯಾರೋ ಸಂಬಂಧಿಕರು ಸರಸ್ವತೀಪುರಂನಲ್ಲಿರುವ ಬಾಡಿಗೆ ಮನೆಯಲ್ಲಿ ಅವರ ಜೊತೆಯಾಗಿದ್ದರು. ನಾನು ಕೂಡ ಆ ಮನೆಗೆ ಬರುವ ಸೂಚನೆ ಗೊತ್ತಾಗಿ ಎಲ್ಲ ಸರಂಜಾಮುಸರ್ವಸ್ವಗಳೊಂದಿಗೆ ಅನಂತಮೂರ್ತಿ ಒಬ್ಬರನ್ನೇ ಬಿಟ್ಟು ಊರಿಗೆ ಮರಳಿದರು. ಆಗ ಒಂಟಿಕೊಪ್ಪಲಿನಲ್ಲಿ ಕೆ.ವಿ. ಪುಟ್ಟಪ್ಪನವರ ಸಂಬಂಧಿಕರೊಬ್ಬರ ಮನೆಯ ಔಟ್‌ಹೌಸ್‌ನಲ್ಲಿ ನಾವು ಸಂಸಾರಹೂಡಿದೆವು. ಈ ಮನೆಯನ್ನು ಕೊಡಿಸಿದವರು ಪೂರ್ಣಚಂದ್ರ ತೇಜಸ್ವಿ.

ಅನಂತಮೂರ್ತಿಯವರಿಂದ ಬರುತ್ತಿದ್ದ ಪತ್ರಗಳನ್ನು ನಾಲ್ಕೈದು ಸಲ ಓದಿ ಒಂದು ಟ್ರಂಕ್‌ನಲ್ಲಿರಿಸುತ್ತಿದ್ದೆ. ಅದನ್ನು ಗೌಪ್ಯವಾಗಿರಿಸಬೇಕೆಂದೂ ನನಗೆ ಅರಿವಿರಲಿಲ್ಲ. ನಾನು ಪ್ರೇಮದಲೆಯಲ್ಲಿ ಯಾವ ಪರಿಯಲ್ಲಿ ತೇಲುತ್ತಿದ್ದೆನೆಂದರೆ ನನ್ನ ಸುತ್ತಲಿನ ಜಗತ್ತನ್ನೇ ಮರೆತುಬಿಟ್ಟಿದ್ದೆ. ಈಗ ಅನ್ನಿಸುತ್ತಿದೆ- ಅನಂತಮೂರ್ತಿ ಬರೆಯುತ್ತಿದ್ದ ಪತ್ರಗಳನ್ನು ನಾನು ಜೋಪಾನವಾಗಿಡಬೇಕಿತ್ತು.

ಮನೆಯ ಹೊಣೆಯನ್ನು ಸ್ವತಂತ್ರವಾಗಿ ನಿರ್ವಹಿಸಬೇಕಾದ ಸ್ಥಿತಿ ನನ್ನ ಪಾಲಿಗೆ ಬಂತು. ಚಮಚಾದಿಂದ ತೊಡಗಿ ಎಲ್ಲ ವಸ್ತುಗಳನ್ನು ಹೊಸದಾಗಿ ಖರೀದಿಸಿ ಬಾಡಿಗೆ ಮನೆಯಲ್ಲಿ ಬದುಕು ಕಟ್ಟಲಾರಂಭಿಸಿದೆವು.

ಅನಂತಮೂರ್ತಿಯವರ ಮನೆ ಎಂದರೆ ಅಲ್ಲಿಗೆ ಬರುತ್ತಿದ್ದ ಬರಹಗಾರ ಸ್ನೇಹಿತರ ಬಳಗವೂ ದೊಡ್ಡದು. ಕಥೆಗಾರರಾಗಿದ್ದ ಇಬ್ಬರು ಸದಾಶಿವರೂ ಅನಂತಮೂರ್ತಿಯವರಿಗೆ ಆತ್ಮೀಯರು. ಒಬ್ಬರನ್ನು ಬಿಳಿಸದಾಶಿವ, ಇನ್ನೊಬ್ಬರನ್ನು ಕರಿಸದಾಶಿವ ಎಂದು ಕರೆಯುವುದು ರೂಢಿಯಾಗಿತ್ತು. `ನಲ್ಲಿಯಲ್ಲಿ ನೀರು ಬಂತು’ ಖ್ಯಾತಿಯ ಕರಿಸದಾಶಿವ ಮನೆಗೆ ಬಂದವರೇ, `ಏನು ಅಡುಗೆ ಮಾಡಿದ್ದಿ ಎಸ್ತರ್?’ ಎಂದು ಕೇಳುವಷ್ಟು ಸಲುಗೆಯಿಂದ ಇದ್ದರು. ರಾಮಮೂರ್ತಿ, ವಿ.ಕೆ. ನಟರಾಜ್, ಡಿ.ವಿ. ಅರಸ್‌ರಂಥ ಸ್ನೇಹಿತರು ಬಂದು ಗಂಟೆಗಟ್ಟಲೆ ಕೂತು ಮಾತನಾಡುತ್ತಿದ್ದರು. ನಮ್ಮಿಬ್ಬರಿಗಂತ ನಾನು ಅಡುಗೆ ಮಾಡಿದ್ದರೆ ಅದೆಲ್ಲ ಆಗಂತುಕರಿಗೆ ಬಡಿಸಿ ಮುಗಿದುಹೋಗುತ್ತಿತ್ತು. ಅನಂತಮೂರ್ತಿಯವರೊಂದಿಗೆ ಸಂಜೆ ಕಾಫಿಹೌಸ್‌ಗೆ ತೆರಳಿ ಅಲ್ಲಿ ಹಸಿವು ತೀರಿಸಿ, ಮನೆಗೆ ಮರಳಿದ ಬಳಿಕ ಮತ್ತೆ ರಾತ್ರಿ ಅಡುಗೆಗಾಗಿ ಒಲೆ ಉರಿಸುತ್ತಿದ್ದೆ. ಮನೆಗೆ ಬಂದ ಗೆಳೆಯರಿಗೆ ಊಟ, ತಿಂಡಿ ಕೊಡುವುದರಲ್ಲಿ ನನಗೂ ಸಂತೋಷವಿತ್ತು.

ತುಮರಿ ಪ್ರಭಾಕರ, ಪ್ರಕಾಶ್‌ರಂಥ ವಿದ್ಯಾರ್ಥಿಗಳು ಅನಂತಮೂರ್ತಿಯವರ ವಿದ್ಯಾರ್ಥಿಗಳೆನ್ನುವುದಕ್ಕಿಂತ ಗೆಳೆಯರ ಥರ ಇದ್ದರು. ನಮ್ಮ ಮನೆಗೆ ಖಾಯಂ ಅತಿಥಿಗಳು. ಅನಂತಮೂರ್ತಿ ಮೇಷ್ಟ್ರಿಗೆ ಏಪ್ರಿಲ್‌ಫೂಲ್ ಮಾಡಿದ್ದ ಸಂಗತಿಯನ್ನು ನೆನಪಿಸಿಕೊಂಡು ಅವರು ಆಗಾಗ ನಗುತ್ತಿದ್ದರು. ಮದುವೆಯಾಗುವ ಮೊದಲೊಮ್ಮೆ ಅನಂತಮೂರ್ತಿ ತರಗತಿಯಲ್ಲಿ ಪಾಠ ಮಾಡುತ್ತಿದ್ದರು. ಅವರಿಗೊಂದು ಟೆಲಿಗ್ರಾಮ್ ಬಂತು. ಅದನ್ನು ಓದಿ ಅವರ ಮುಖದಲ್ಲಿ ಆತಂಕದ ಛಾಯೆ ಕಾಣಿಸಿಕೊಂಡಿತ್ತಂತೆ. ಅನಂತಮೂರ್ತಿ ತರಗತಿಯನ್ನು ಮೊಟಕುಗೊಳಿಸಿ ಹೊರಟುನಿಂತರು. ಆಗ ಪ್ರಭಾಕರ, ಪ್ರಕಾಶ ಎಲ್ಲ ಜೋರಾಗಿ ನಕ್ಕು `ಏಪ್ರಿಲ್ ಪೂಲ್’ ಎಂದರಂತೆ. ಆಮೇಲೆ ಅನಂತಮೂರ್ತಿಯವರಿಗೂ ಫೂಲ್ ಆದದ್ದು ಗೊತ್ತಾಗಿ ಜೋರಾಗಿ ನಕ್ಕುಬಿಟ್ಟರಂತೆ. ತುಮರಿ ಪ್ರಭಾಕರ, ಪ್ರಕಾಶ ತೀರಿಕೊಳ್ಳುವವರೆಗೂ ಮನೆಗೆ ಬಂದು ಮೇಷ್ಟ್ರನ್ನೂ ನನ್ನನ್ನೂ ಆದರದಿಂದ ಮಾತನಾಡಿಸಿಹೋಗುತ್ತಿದ್ದರು.

ಆಗಾಗ ಬರುತ್ತಿದ್ದ ಬೋರೇಗೌಡ ಎಂಬ ವಿದ್ಯಾರ್ಥಿಯೊಬ್ಬ ನಮ್ಮ ಮನೆಯವನ ಹಾಗೆಯೇ ಆಗಿಬಿಟ್ಟಿದ್ದರು. ಔಟ್‌ಹೌಸ್‌ನಲ್ಲಿ ಮಲಗಿ ಕಾಲೇಜಿಗೆ ಹೋಗಿಬರುತ್ತಿದ್ದ. ಆಗ ನನ್ನನ್ನು `ಸಿಸ್ಟರ್’ ಎಂದು ಕರೆಯುತ್ತಿದ್ದರು. ಇತ್ತೀಚೆಗೆ ಅನಂತಮೂರ್ತಿಯವರು ಇರುವವರೆಗೂ ಮನೆಗೆ ಬಂದು ಮಾತನಾಡಿಸುತ್ತಿದ್ದ ಬೋರೇಗೌಡರು, ನನ್ನನ್ನು `ಸಿಸ್ಟರ್ ಹೇಗಿದ್ದೀರಿ?’ ಎಂದು ವಿಚಾರಿಸಿ ಹೋಗುತ್ತಿದ್ದರು.

ಪ್ರತಿ ಸಂಜೆ ಅನಂತಮೂರ್ತಿ ನನ್ನನ್ನು ಸೈಕಲ್‌ನಲ್ಲಿ ಕಾಫಿಹೌಸ್‌ಗೆ ಕರೆದುಕೊಂಡು ಹೋಗುತ್ತಿದ್ದರು. 1961ರಲ್ಲಿ ನಾನು ಗರ್ಭಿಣಿಯಾದೆ. ಆಗಲೂ ಅನಂತಮೂರ್ತಿ ಮತ್ತು ನನ್ನ ಸೈಕಲ್ ಯಾನ ಮುಂದುವರಿದಿತ್ತು. ನಮ್ಮನ್ನು ಪ್ರತಿದಿನ ನೋಡುತ್ತಿದ್ದ ಪೂರ್ಣಚಂದ್ರ ತೇಜಸ್ವಿ, `ಮೊದಲು ಡಬಲ್ ರೈಡ್. ಈಗ ತ್ರಿಬಲ್ ರೈಡ್’ ಎಂದು ವಿನೋದವಾಡುತ್ತಿದ್ದರು.

ಗರ್ಭಿಣಿಯಾದ ನನ್ನನ್ನು ದೂರದ ಕಾಫಿಹೌಸ್‌ಗೆ ಕರೆದೊಯ್ದು ವ್ಯರ್ಥ ದಣಿಸುವುದು ಬೇಡವೆಂದು ನನ್ನನ್ನು ರಾಜೀವ್ ತಾರಾನಾಥ್ ಮನೆಯಲ್ಲಿ ಬಿಟ್ಟುಹೋಗುತ್ತಿದ್ದರು. ರಾಜೀವ್, ಅನಂತಮೂರ್ತಿಯವರ ಆತ್ಮೀಯರಾಗಿದ್ದರು. ಆಗಷ್ಟೇ ಮಾಧವಿಯವರನ್ನು ಮದುವೆಯಾಗಿದ್ದರು. ಅವರ ಅತ್ತೆ ಚಿತ್ರಕಲಾವಿದೆಯಾಗಿದ್ದರು. ರಾಜೀವ್‌ರ ಸಂಸಾರ ನನಗೆ ತುಂಬಾ ಹತ್ತಿರವಾಗಿಬಿಟ್ಟಿತ್ತು. ಅನಂತಮೂರ್ತಿ ಬರುವುದು ತಡವಾದರೆ ಅವರೇ ನನಗೆ ಊಟ ಕೊಡುತ್ತಿದ್ದರು.

1962ರ ನವೆಂಬರ್‌ನಲ್ಲಿ ನಮ್ಮ ಮಗ ಶರತ್ ಹುಟ್ಟಿದ. ಅದಾಗಿ ಹತ್ತು ತಿಂಗಳ ಬಳಿಕ ಅನಂತಮೂರ್ತಿಯವರಿಗೆ ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡುವ ಉದ್ದೇಶಕ್ಕಾಗಿ ಕಾಮನ್‍ವೆಲ್ತ್ ಸ್ಕಾಲರ್ ಶಿಪ್ ಸಿಕ್ಕಿತು. ಸಂಸಾರವನ್ನು ಜೊತೆಗೆ ಕರೆದೊಯ್ಯುವ ವಿನಂತಿಯ ಮೇರೆಗೆ ನನಗೂ ಪುಟಾಣಿ ಶರತ್‌ಗೂ ವಿದೇಶಯಾತ್ರೆ ಮಾಡುವ ಅವಕಾಶ ಸಿಕ್ಕಿತ್ತು.

ನಾನು ವಿದೇಶಕ್ಕೆ ಹೋಗಬೇಕಾದ ಪಾಸ್‌ಪೋರ್ಟ್ ಇತ್ಯಾದಿ ವಿಧಿಗಳನ್ನು ನಡೆಸಲು ಚೆನ್ನೈಗೆಲ್ಲ ಓಡಾಡಿ ಸಹಕರಿಸಿದವರು ಗೆಳೆಯರಾದ ಡಿ.ವಿ. ಅರಸ್. ಅನಂತಮೂರ್ತಿಯವರ ವಿಮಾನದ ಟಿಕೆಟ್ ಮೊತ್ತವನ್ನು ಬ್ರಿಟಿಷ್ ಕೌನ್ಸಿಲ್‌ನವರು ಭರಿಸಿದರು. ಆದರೆ, ನನ್ನನ್ನು ಮತ್ತು ಶರತ್‌ನನ್ನು ವಿಮಾನದಲ್ಲಿ ಕರೆದೊಯ್ಯಲು ಯಾವುದೇ ಆರ್ಥಿಕ ಸೌಲಭ್ಯವಿರಲಿಲ್ಲ. ಅಷ್ಟು ಹಣವನ್ನು ಹೊಂದಿಸುವುದು ಆ ಕಾಲದಲ್ಲಿ ಸಾಧ್ಯವೂ ಇರಲಿಲ್ಲ. ಅನಂತಮೂರ್ತಿಯವರು ವಿಮಾನದಲ್ಲಿ ತೆರಳುವುದು, ನಾನು ಮತ್ತು ಶರತ್ ಹಡಗಿನಲ್ಲಿ ಪಯಣಿಸಿ ಬಳಿಕ ಅವರನ್ನು ಸೇರಿಕೊಳ್ಳುವುದೆಂದು ನಿರ್ಧರಿಸಿದೆವು. ಹಡಗಿನ ಟಿಕೆಟ್‌ಗಾದರೂ ಹಣಬೇಕಲ್ಲ ! ಆಗ ನೆರವು ನೀಡಿದವರು ಅನಂತಮೂರ್ತಿಯವರ ಮಿತ್ರರಾದ ವಿ.ಕೆ. ನಟರಾಜ್‌ರ ತಂದೆ.

ಬ್ರಿಟನ್‌ಗೆ ಹಾರುವ ಮುನ್ನ ಒಮ್ಮೆ ಅನಂತಮೂರ್ತಿಯವರ ತೀರ್ಥಹಳ್ಳಿಯ ಮನೆಗೆ ಹೋಗಿಬಂದೆವು. ನಮ್ಮ ವಿವಾಹದಿಂದಾದ ಅಸಮಾಧಾನ ಶರತ್ ಹುಟ್ಟಿದ ಬಳಿಕ ತಿಳಿಯಾಗಿತ್ತು. ನಾನು ಮೊದಲ ಬಾರಿಗೆ ಸಂಪ್ರದಾಯಸ್ಥ ಬ್ರಾಹ್ಮಣರ ಮನೆಯ ಹೊಸ್ತಿಲು ತುಳಿದಿದ್ದೆ. ಅಲ್ಲಿ ನನಗೆ ಅಡುಗೆಮನೆಗೆ ಪ್ರವೇಶವಿರಲಿಲ್ಲ. ಮಗುವಿಗೆ ಬಿಸಿನೀರು, ಹಾಲು ಕಾಯಿಸಲೆಂದು ನನಗೊಂದು ಸ್ಟವ್ ಕೊಟ್ಟಿದ್ದರು. ಅನಂತಮೂರ್ತಿಯವರು ಜೊತೆಗಿದ್ದುದರಿಂದ ನನಗೆ ಪರಕೀಯ ಪ್ರಜ್ಞೆ ಕಾಡಲಿಲ್ಲ.

ಅನಂತಮೂರ್ತಿ ಬೆಂಗಳೂರಿನಿಂದಲೇ ವಿಮಾನ ಹತ್ತಿದರೆ ನಾನು ಮಾತ್ರ ಮುಂಬಯಿಯಲ್ಲಿ ಹಡಗು ಏರಿದೆ. ನನ್ನ ತಂದೆತಾಯಿ ಕೂಡಾ ನನ್ನನ್ನು ಬೀಳ್ಕೊಡಲು ಮುಂಬೈವರೆಗೂ ಬಂದಿದ್ದರು. ಇಪ್ಪತ್ತು ದಿನ ನೆಲವನ್ನು ತೊರೆದು ನೀರಿನ ಮೇಲೆ ಪ್ರಯಾಣ! ನಾನು ಮತ್ತು ಪುಟಾಣಿ ಶರತ್- ಇಬ್ಬರೇ. ನನಗಾಗಲಿ ಶರತ್‍ಗಾಗಲಿ `ಸೀಸಿಕ್‍ನೆಸ್’ನಂಥ ಸಮಸ್ಯೆಗಳೇನೂ ಇಲ್ಲದ ಕಾರಣ ಪ್ರಯಾಣವನ್ನು ಖುಷಿಪಟ್ಟೆವು. ಯಾರೊ ಒಬ್ಬ ವಿಜ್ಞಾನಿಯಿರಬೇಕು, ಇಂಗ್ಲೆಂಡ್‍ಗೆಂದು ನಮ್ಮ ಹಡಗಿನಲ್ಲಿಯೇ ಹೊರಟಿದ್ದರು. ಪುಟಾಣಿ ಶರತ್‍ಗೆ ಹತ್ತಿರವಾದರು. ಕಾಡಬಹುದಾಗಿದ್ದ ಕೊಂಚ ಮಟ್ಟಿನ ಅನಾಥಪ್ರಜ್ಞೆಯನ್ನು ಕಳೆಯಲು ಅವರು ಸಹಕಾರಿಯಾದರು. ಇಂದೇಕೋ ಅವರ ಹೆಸರು ನೆನಪಾಗುತ್ತಿಲ್ಲ.

ನಮ್ಮ ಹಡಗು ಲಿವಲ್‌ಪೂಲ್‌ನ ದಡ ಸೇರಿದಾಗ ಅನಂತಮೂರ್ತಿ ಅಲ್ಲಿ ನಮಗಾಗಿ ಕಾಯುತ್ತಿದ್ದರು. ಇಂಗ್ಲೆಂಡಿನಲ್ಲಿ ನಮ್ಮ ಸಂಸಾರದ ಎರಡನೇ ಅಧ್ಯಾಯ ಆರಂಭಗೊಂಡಿತು.

(ಪುಸ್ತಕ: ನೆನಪು ಅನಂತ, ಲೇಖಕಿ: ಎಸ್ತರ್‌ ಅನಂತಮೂರ್ತಿ, ನಿರೂಪಣೆ: ಪೃಥ್ವೀರಾಜ ಕವತ್ತಾರು, ಪ್ರಕಾಶಕರು: ಅಕ್ಷರ ಪ್ರಕಾಶನ, ಬೆಲೆ : 150/-)

ಹಿಂದೆ ಪ್ರಕಟವಾದ  ಎರಡು ಅಧ್ಯಾಯಗಳು:

‘ಇಂಗ್ಲಿಷ್ ಸರ್ ಎಷ್ಟು ಹ್ಯಾಂಡ್‌ಸಮ್ ಆಗಿದಾರೆ ನೋಡೆ!’

ನೆಲವ ಬಿಟ್ಟು ನೀರ ಮೇಲೆ ಇಪ್ಪತ್ತು ದಿನಗಳು