ಮುದುಕರ ಅನುಭಾವದ ಕನವರಿಕೆಯಂತೆ ಮಾತುಗಳು ಅನುಭವದ ಸತ್ಯವನ್ನು ತೋರುತ್ತವೆ. ತಾಯಿ ಹುಲಿಯ ಬೇಟೆಯನ್ನಾಡಿದ ಮಗ ದೊಡ್ಡಣ್ಣ ಹೆಗ್ಗಡೆಯ ಹೆಗ್ಗಳಿಕೆಯನ್ನು ನೆನೆಯುತ್ತಲೇ ಹುಲಿಯಾದರೇನು ತಾಯಲ್ಲವೇ? ಎಂದು ಹುಲಿ ಮರಿಗಳ ಅಗಲಿಕೆಯನ್ನು ತನ್ನ ಮಗನ ಅಗಲಿಕೆಯಲ್ಲಿ ನೆನೆದು ಪರಿತಪಿಸುವ ಸುಬ್ಬಣ್ಣ ಹೆಗ್ಗಡೆ ತನ್ನ ಮಗನಂತೆ ಇವನು ಎಂದು ದೇವಯ್ಯನ ಸಣ್ಣ ಮಗುವನ್ನು ಮುದ್ದಿಸುವ ಪಾತ್ರದಲ್ಲಿ ರಂಗಾಯಣದ ಪ್ರಶಾಂತ್ ಹಿರೇಮಠ್ ಹಾಗೂ ರಾಜೇಶ್ ಕುಂದರ್ ಪರಕಾಯ ಪ್ರವೇಶ ಮಾಡಿದ್ದಾರೇನೋ ಎಂದನ್ನಿಸಿದ್ದು ಸುಳ್ಳಲ್ಲ.
ಸುಜಾತಾ ಹೆಚ್. ಆರ್. ತಿರುಗಾಟ ಕಥನ.

 

ಮೈಸೂರಿನಲ್ಲಿ ದಿಬ್ಬಣ ಹೊರಟ ಮದುಮಗಳು ತನ್ನ ವೇದಿಕೆಯಲ್ಲಿ ಅಡ್ಡಾಡಿಕೊಂಡು ಮೈಸೂರು ರಂಗಾಯಣದ ಕಲಾವಿದರ ಪಾತ್ರವಾಗಿ ವನರಂಗದಲ್ಲಿ ಮೆರೆದು, ಬೆಂಗಳೂರಲ್ಲಿ ಎನ್. ಎಸ್. ಡಿ. ಕಲಾವಿದರ ಮೂಲಕ ತನ್ನ 86 ನೇ ತನ್ನ ಶೋ ಮುಗಿಸಿ ತೆರೆ ಎಳೆದಿದ್ದು ಈಗ ಇತಿಹಾಸ. ರಂಗಾಯಣದ ವನರಂಗ ಹಾಗೂ ಕಲಾಗ್ರಾಮದ ಆವರಣ ಮಲೆನಾಡಿನಂತೆ ಆಗಿ ದನಗೋಳು ಮಳೆಯಲ್ಲೂ ಗುತ್ತಿ, ಗುತ್ತಿನಾಯಿ, ಮದುಮಗಳನ್ನು ಇಂದಿನ ವರ್ತಮಾನಕ್ಕೆ ದಕ್ಕಿಸಿಕೊಟ್ಟದ್ದು ಒಂದು ಸುಂದರ ನೆನಪು.

ಮಲೆಗಳಲ್ಲಿ ಮದುಮಗಳು ಕಾದಂಬರಿಯಾಗಿ ಮಲೆನಾಡಿನ ಅಗಾಧತೆಯನ್ನು ಕಟ್ಟಿಕೊಡುತ್ತ ಸಮಸ್ತ ಕನ್ನಡಿಗರನ್ನು ತನ್ನೆಡೆಗೆ ನೋಡುವಂತೆ ಮಾಡಿದ್ದು ಓದಿಸಿಕೊಂಡಿದ್ದು, ನಾಕಾರು ವರುಷದಿಂದ ಸಿ. ಬಸವಲಿಂಗಯ್ಯನವರ ನಿರ್ದೇಶನದಲ್ಲಿ ನಾಟಕವಾಗಿ ಮಹಾಕವಿಯ ಹೊಸ ರೂಪದ ಮಹಾಯಾನ ಹೊರಟು ಹೊಸ ಪೀಳಿಗೆಗೆ ತನ್ನ ಮಲೆನಾಡಿನ ಬದುಕನ್ನು ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದ್ದು, ಅದರ ಪರಿಣಾಮ ಹೇಗಾಯಿತು. ಒಂದು ಬೃಹತ್ ಕಟ್ಟುವಿಕೆಯ ಹಿಂದಿನ ಪರಿಶ್ರಮ ಹಾಗೂ ಅದರ ಪರಿಣಾಮದ ಅಚ್ಚರಿಯನ್ನೊಮ್ಮೆ ಇಲ್ಲಿ ಗಮನಿಸೋಣ.

ಅಹೋ ರಾತ್ರಿ ಪೌರಾಣಿಕ ನಾಟಕಗಳು ಮರೆಯಾಗುವ ದಿನಗಳಲ್ಲಿ ತಿರುಗಿ ರಾತ್ರಿ ಕಣ್ಣಿಗೆ ಹುಚ್ಚು ಹಿಡಿಸಿದ ನಾಟಕ ‘ಮಲೆಗಳಲ್ಲಿ ಮದುಮಗಳು’. ವಾರಾಂತ್ಯದಲ್ಲಿ ಕೊರೆವ ಚಳಿ ದಿನದಲ್ಲಿ 9 ಗಂಟೆಯ ಈ ಬೃಹತ್ ನಾಟಕ ಪ್ರತಿ ವಾರವಾರವೂ 1500ಕ್ಕೂ ಮಿಕ್ಕಿ ಜನರನ್ನು ಕಲಾಗ್ರಾಮಕ್ಕೆ ಎಳೆದು ತರುತಿತ್ತು ಎಂಬುದು ಇದರ ವಿಶೇಷ. ಅದರಲ್ಲೂ ಆರಾಮದಾಯಕವಾದ ಯಾವುದೇ ಸೌಲಭ್ಯವಿಲ್ಲದೆ ಮಣ್ಣು ಕಲ್ಲಿನ ನೆಲದ ಮೇಲೆ ಕೂತು ಜನ ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಅಲ್ಲಿ ಬರುವ ಹಾಡು, ಮಾತುಗಳಿಗೆ ಧ್ವನಿ ಸೇರಿಸುತ್ತಿದ್ದುದು ಈ ನಾಟಕದ ಕಿರೀಟವೆಂದೇ ಭಾವಿಸಬೇಕು.

ಮದುಮಗಳು ಪ್ರೇಕ್ಷಕರ ಕಣ್ಣಿಗಿಳಿದಿದ್ದೂ ಅಲ್ಲದೆ ಎದೆಗೂ ಇಳಿದು ಅವರು ಮೆಲ್ಲುವ ಚುರುಮುರಿಗಿಂತ ನಾಟಕದ ರುಚಿಯನ್ನು ಮೆಲ್ಲುತ್ತಾ ಮೆಚ್ಛುತ್ತಾ “ವಾವ್, ಹೋ” ಅನ್ನುವ ಉದ್ಗಾರದ ಯುವ ಸಮೂಹವನ್ನೇ ಕೈಬೀಸಿ ಕರೆತಂದು ಅವರ ಮನಸ್ಸಿನಲ್ಲಿ ಬೆರಗು ಹುಟ್ಟಿಸಿದ್ದಾಳೆ.

ನಾಕಾರು ಬಾರಿ ಬಂದು ನೋಡಿ, ಖುಷಿ ಪಡುವ ಯುವ ಪಡೆಯಿಂದ ಹಿಡಿದು ಕೋಲೂರಿ ಬರುವ ಮುದುಕರವರೆಗೂ…. ಬೆಚ್ಚಗಿನ ರಗ್ಗುಗಳನ್ನು ಹಳ್ಳಿ ಮಂದಿಯಂತೆ ಹೊದ್ದು ಕೂತ ಪ್ಯಾಟೆ ಮಕ್ಕಳಿಂದ ಹಿಡಿದು ದಿಂಬು ವರಗಿ ಕೂತ ಬೆನ್ನು ಸೊಂಟ ನೀವಿಕೊಳ್ಳುವ ಜನರವರೆಗೂ….. ತಮ್ಮ ಮನೆಯವರನ್ನು ಹುಡುಕುತ್ತ ಗುಂಪಲ್ಲಿ ಕೈ ಹಿಡಿದು ನಡೆಸಿಕೊಂಡು ಹೋಗುವ ಹಿರಿಕಿರಿಯ ಸಂಸಾರಸ್ಥರವರೆಗೂ ಎಲ್ಲರೂ…. ನಡುರಾತ್ರಿಯಲ್ಲಿ ವೆಂಕಪ್ಪ ನಾಯಕನ ಕತ್ತಲು ಕೋಣೆಯ ಪಜೀತಿಗೆ ಬಿದ್ದು ಬಿದ್ದು ನಕ್ಕರೆ, ಬೆಳಗಿನ ಜಾವದಲ್ಲಿ ಗುತ್ತಿಯ ನಾಯಿ ಹೊಳೆಯಲ್ಲಿ ಕೊಚ್ಚಿಹೋಗಿ ಮುಳುಗಿದಾಗ ಕಣ್ಣೀರಿಟ್ಟು, ಕಣ್ಣೊರೆಸಿ ನಟರನ್ನು ಪ್ರೀತಿಯಿಂದ ಮಾತನಾಡಿಸಿ ಎದ್ದು ಮನೆಗೆ ಹೊರಡುವ ವೀಕ್ಷಕರ ಆ ಚಂದವನ್ನು ನೋಡಬೇಕಿತ್ತು.

ಹೀಗೆ ಭೇದಭಾವವಿಲ್ಲದೆ ಜನ ನಾಟಕಕ್ಕೆ ಮುತ್ತುವುದನ್ನು ನೋಡಿದಾಗ ಕುವೆಂಪು ಕೃತಿಯ ಹಿರಿಮೆಗೆ ಇನ್ನೊಂದು ಹೊಸ ಬೆರಗು ಬಂದಿತ್ತು. ಕಾಡಿನ ನಿಗೂಢತೆಯಂತೆಯೇ ಅರ್ಥಗರ್ಭಿತವಾದ, ಕಬ್ಬಿಣದ ಕಡಲೆಯಂತಿದ್ದ ಈ ಮೇರು ಕೃತಿಯ ನಾಟಕ ರೂಪ ಸಾಮಾನ್ಯ ಓದುಗನಿಗೂ ಸರಳವಾಗಿ ಅರ್ಥವಾಗುವಂತಿರುವುದರಿಂದ ಈ ನಾಟಕವನ್ನು ಒಮ್ಮೆ ನೋಡಿ ಹೋದ ಜನ ಮತ್ತೊಮ್ಮೆ, ಮಗದೊಮ್ಮೆ ತನ್ನ ಬಳಗವನ್ನು ಕರೆತಂದು ನೋಡಿದ್ದು, ನಾಟಕ ನೋಡಿದ ಮೇಲೆ ಕುವೆಂಪುರವರ ಮಹದಾಶಯ ನಮಗೆ ತಿಳಿಯಿತು ಅನ್ನುತ್ತಾರೆ.

ಅಂತೆಯೇ 10,000 ಪುಸ್ತಕಗಳು ಮರುಮುದ್ರಣಗೊಂಡು ಮಾರಾಟವಾಗಿದ್ದು ಯುವಪೀಳಿಗೆಯ ಒಂದಷ್ಟು ಹೊಸ ಓದುಗರನ್ನು ಸೃಷ್ಟಿಸಿತು ಎನ್ನುವ ದಾಖಲೆಯನ್ನು ಹೇಳುತ್ತದೆ. ಪುಸ್ತಕ ಮಾರಾಟ ಎರಡು ಪಟ್ಟು ಹೆಚ್ಚಾಗಿದೆ ಎಂದು ಪ್ರತಿಷ್ಠಾನದ ಪ್ರಕಾಶ್ ಕಡಿದಾಳ್ ಹೇಳಿದರೆ, ಪ್ರಕಾಶನದ ಶ್ರೀರಾಮ್ ರವರು ಈ ಕೃತಿ ಈಗ ೨೭ ನೇ ಮುದ್ರಣವಾಗಿದೆ ಎಂದು ಹೇಳಿದರು.

ಯಾವುದೇ ಕೃತಿಗೆ, ಯಾವುದೇ ಸೃಜನಶೀಲ ಕಲೆಗೆ ಇಂಥ ಪ್ರತಿಕ್ರಿಯೆ ಸಿಕ್ಕರೂ ಅದು ಹೆಮ್ಮೆಯ ವಿಚಾರ! ಬದುಕೇ ದೊಡ್ಡದು ಎಂಬಂತೆ ಜನಸಾಮಾನ್ಯರ ದಟ್ಟ ಬದುಕು ಕಟ್ಟಿಕೊಟ್ಟ ಮೇರು ಕವಿಯ ಹಿರಿಯಾಸೆಯಂತೆ ಇಲ್ಲಿ ನಾಯಿಗುತ್ತಿ ಮಲೆನಾಡಿನ ಊರುಗಳನ್ನು ಜೀವಿಗಳನ್ನು, ಬೆಟ್ಟಗುಡ್ಡಗಳನ್ನು ದಾಟುತ್ತ ಮಹಾಯಾನ ಹೊರಟು ಪ್ರಕೃತಿಯಲ್ಲಿ ಹರಿದಾಡುವ ದಾರದಂತೆ ಈ ಕಥೆಯ ದಟ್ಟ ಕೌದಿಯನ್ನು ಹೊಲೆಯುತ್ತಾನೆ.

ಚರಾಚರದ ತುಣುಕುಗಳನ್ನು ಹೊಲೆಯುವಾಗ ಕವಿ ಅವನ ಕಣ್ಣಲ್ಲಿ ಕಾಡಿನ ಜೀವಜಾಲದ ಘನಘೋರ ಹೋರಾಟವನ್ನು, ಅಲ್ಲಿನ ಮೌಢ್ಯವನ್ನೂ, ಹೊರಗಿನಿಂದ ಬರುವ ನಾಗರೀಕ ಬೀಸೆಕಲ್ಲು ಅನ್ನುವ ಸೈಕಲ್ಲನ್ನು ನೋಡುವವರೊಂದಿಗೆ ತಾವೂ ಕುಂತು ಜನರಿಗೆ ಆ ಸರ್ಕಸ್ಸನ್ನು ತೋರಿಸುತ್ತಾರೆ. ಕಣ್ಣಿಗೆ ಕಾಣದ ಸಣ್ಣ ಸೆಗಣಿಹುಳುವಿನ ಕಾರ್ಯ ಪರಿಪಕ್ವತೆ ಗುತ್ತಿಯ ಕಣ್ಣಲ್ಲಿ ದೊಡ್ಡ ಆಸೆಯನ್ನು ಹುಟ್ಟಿಸಿ ತಿಮ್ಮಿಯನ್ನು ಹಾರಿಸಿಕೊಂಡು ಹೋಗುವ ಆಸೆಗೆ ಪಣ ಹೂಡುತ್ತದೆ. ಮಲೆನಾಡೆಂದರೆ ಇಂಬಳಗಳ ನಾಡು ಎಂದು ಪರಿಚಯಿಸುತ್ತದೆ.

ತಿಮ್ಮಿಗೆ ಹುಲಿಕಲ್ ಘಾಟಿಯ ಎತ್ತರದಲ್ಲಿ ನಿಂತು ಬೆಳಗನ್ನು ತೋರುತ್ತದೆ. ಮಂಜು ಮುಸುಕಿನ ಸೂರ್ಯೋದಯದ ಸೊಬಗನ್ನು ನಮ್ಮ ಮನಸ್ಸಿಗೆ ಮುದದಿಂದ ತಂದು ನಿಲ್ಲಿಸುತ್ತದೆ. ಅಗಾಧ ಪ್ರಕೃತಿಯ ಎತ್ತರದಲ್ಲಿ ನಿಂತಾಗ ತಲೆ ಮೇಲಿನ ಮೋಡವೇ ಕೆಳಗಿಳಿದು ಅನುಭೂತಿಯನ್ನು ಕಣ್ಣಿಗೆ ತುಂಬುವ ಸಖನಂತೆ, ಭೂಮಿಯೊಳಗೆ ಹುದುಗಿಹೋದ ಜೀವಜಂತುಗಳ ಮೇಲೆದ್ದು ಬದುಕುವ ಛಲವನ್ನೂ ಪರಿಚಯಿಸುತ್ತವೆ. ಗುತ್ತಿಯ ಕಣ್ಣು. ಇದನ್ನೆಲ್ಲ ಸವಿದ ಕವಿಯ ಸೂಕ್ಷ್ಮ ದರ್ಶಕದ ಕಣ್ಣುಗಳು ನಮಗೂ ಆ ದಿಗ್ದರ್ಶನವನ್ನು ತೋರುತ್ತವೆ.

“ಇಲ್ಲಿ ಎಲ್ಲಕ್ಕೂ ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ” -ಕುವೆಂಪು

ಅಂತೆಯೇ ತನ್ನಾಸೆಗಾಗಿ ಮೂಢತೆಯ ಪ್ರತಿನಿಧಿಯಾಗಿ ಕಣ್ಣಾಪಂಡಿತರ ಮಂತ್ರದ ತಾಯಿತವನ್ನು ಕಟ್ಟಿಕೊಂಡು ಘನಗೋಳು ಮಲೆಯಲ್ಲಿ ಮಳೆಯಲ್ಲಿ ಹುಳುವಿನಂತೆ ಚಲಿಸುತ್ತಾ ಮೌಢ್ಯವೋ… ಮುಗ್ಧತೆಯೋ…. ತಾನೂ ಕಾಡಿನ ಒಂದು ಅಂಗವಾಗಿ ಬದುಕನ್ನು ಗುತ್ತಿ ಪ್ರತಿನಿಧಿಸುತ್ತಾನೆ. ಸಹಚರನಂತೆ ಕಣ್ಣಾಗಿ ಕಾಯುವ ಅವನ ಹುಲಿಯ ಬದುಕಿಗಾಗಿ ಹುಲಿಯೊಂದಿಗೆ ಹೊಡೆದಾಡುವಂತೆ ಪೋಲೀಸರನ್ನು ಗುತ್ತಿ ಕಂಪದಲ್ಲಿ ಕೆಡುವಿ ಪರಾರಿಯಾಗುತ್ತಾನೆ.

ಕೊಟ್ಟ ಊಟವನ್ನು ಮಾಡುತ್ತಲೇ ಊಟ ಇಕ್ಕುವ ಬಾಂಧವರಿಗೆ ಸುಳ್ಳು ಹಾಗೂ ಪ್ರೀತಿಯ ಭರವಸೆಯನ್ನು ಕೊಡುತ್ತ ಕಾಡಿನ ನಿಗೂಢ ಗ್ಯಾನದಲ್ಲಿ ಮುಂಗಾಳಿ ಹಿಡಿದು ಹರಯದ ಮನಸ್ಸನ್ನು ತೂಗುತ್ತಾ ಓಡಾಡುವ ಪ್ರಾಣಿ ಸಹಜ ಗುಣದವನು ಗುತ್ತಿ. ತನ್ನ ಪ್ರಾಣದಂತಿದ್ದ ನಾಯಿಯನ್ನು ನದಿಯಲ್ಲಿ ಹರಿಬಿಡುವಾಗಿನ ಮನುಷ್ಯನ ಅಸಹಾಯಕತೆ ಜೀವಿಗಳ ಅಲ್ಪತೆಯನ್ನು…. ಪ್ರಕೃತಿಯ ಅಗಾಧತೆಯನ್ನು …. ತೋರುವ ಕುವೆಂಪು ಕಣ್ಣಿನ ಅಗಾಧ ನೋಟ ನಮಗೆ ಜೀವನದ ಸತ್ಯವನ್ನು ತೋರಿಕೊಡುತ್ತದೆ.

ನಡುರಾತ್ರಿಯಲ್ಲಿ ವೆಂಕಪ್ಪ ನಾಯಕನ ಕತ್ತಲು ಕೋಣೆಯ ಪಜೀತಿಗೆ ಬಿದ್ದು ಬಿದ್ದು ನಕ್ಕರೆ, ಬೆಳಗಿನ ಜಾವದಲ್ಲಿ ಗುತ್ತಿಯ ನಾಯಿ ಹೊಳೆಯಲ್ಲಿ ಕೊಚ್ಚಿಹೋಗಿ ಮುಳುಗಿದಾಗ ಕಣ್ಣೀರಿಟ್ಟು, ಕಣ್ಣೊರೆಸಿ ನಟರನ್ನು ಪ್ರೀತಿಯಿಂದ ಮಾತನಾಡಿಸಿ ಎದ್ದು ಮನೆಗೆ ಹೊರಡುವ ವೀಕ್ಷಕರ ಆ ಚಂದವನ್ನು ನೋಡಬೇಕಿತ್ತು.

ಕಾವೇರಿ ಶಾಲೆಯ ಕಟ್ಟಡದಲ್ಲಿ ಚೀಂಕ್ರ ಸೇರೆಗಾರನ ದುರುಳುತನಕ್ಕೆ ಈಡಾಗಿ ಅತ್ಯಾಚಾರಕ್ಕೆ ಒಳಗಾಗುವ ಪರಿಯಂತೂ ಮುಗ್ಧತೆಯ ಮೇಲೆ ನಡೆಯುವ ಆಸೆ ಆಮಿಷಗಳ ದಾಳಿ, ಇಂದಿಗೂ…. ಎಚ್ಚೆತ್ತುಕೊಳ್ಳುವ ಶಿಕ್ಷಣ ಪರಿಸರದಲ್ಲೇ ಆಗುತ್ತಿವೆ ಅನ್ನುವುದನ್ನ ಗಮನಿಸಬೇಕು.

ಅಂದಿನ ಸಮಸ್ಯೆ ವರ್ತಮಾನದ ಸಮಸ್ಯೆಯೂ ಆಗುಳಿದಿರುವುದು ಯೋಚಿಸುವಂತಾಗುತ್ತದೆ. ಕಿರಿಸ್ತಾನರ ಜೀವರತ್ನಯ್ಯ ಜೀವ ತುಂಬಿದ ಪಾತ್ರದಲ್ಲಿ ಈಗಿನ ಐ.ಟಿ ಕಂಪೆನಿಯ ವಾರಸುದಾರರಂತೆ ನಿಮಗೆ ಕಂಡರೆ ಇದು ಜಗತ್ತಿನ ಜಾಗತೀಕರಣದ ಪ್ರಭಾವವೂ ಹೌದು.

ದೊಡ್ಡ ಕವಿಯೊಬ್ಬರು ಮುಂದಿನ ಆತಂಕವನ್ನು ಅಂದಾಜಿಸುತ್ತ ಜಗತ್ತಿನ ಒಳಿತು ಇರುವುದು ಪ್ರಕೃತಿಯ ಒಡನಾಟದಲ್ಲಿಯೇ ಹೊರತು ಅವನ ಆಸೆಯಲ್ಲಲ್ಲ, ಸಹಜತೆಯಲ್ಲಿ ಎಂದು ನೋಡುಗರ ಮನಕ್ಕಿಳಿಸುವುದು ಮೂರನೆಯ ಹಾಗೂ ನಾಕನೆಯ ಜಾವದ ದ್ರುಷ್ಯಗಳು. ಸುಬ್ಬಣ್ಣ ಹೆಗ್ಗಡೆಯ ಮಸೆಕಲ್ಲು ಪ್ರಕೃತಿಯ ಅಮರತ್ವದ ಸಾರವನ್ನು ಹೇಳುತ್ತಾ ಜೀವಿಗಳ ಅಲ್ಪತ್ವನ್ನು ಸಾಬೀತುಪಡಿಸುವುದು ಮೂರನೆಯ ಜಾವದ ಕನಸಂತೆ ಹೊಳವಿನಂತೆ ಕಾಣುತ್ತದೆ.

ಮುದುಕರ ಅನುಭಾವದ ಕನವರಿಕೆಯಂತೆ ಮಾತುಗಳು ಅನುಭವದ ಸತ್ಯವನ್ನು ತೋರುತ್ತವೆ. ತಾಯಿ ಹುಲಿಯ ಬೇಟೆಯನ್ನಾಡಿದ ಮಗ ದೊಡ್ಡಣ್ಣ ಹೆಗ್ಗಡೆಯ ಹೆಗ್ಗಳಿಕೆಯನ್ನು ನೆನೆಯುತ್ತಲೇ ಹುಲಿಯಾದರೇನು ತಾಯಲ್ಲವೇ? ಎಂದು ಹುಲಿ ಮರಿಗಳ ಅಗಲಿಕೆಯನ್ನು ತನ್ನ ಮಗನ ಅಗಲಿಕೆಯಲ್ಲಿ ನೆನೆದು ಪರಿತಪಿಸುವ ಸುಬ್ಬಣ್ಣ ಹೆಗ್ಗಡೆ ತನ್ನ ಮಗನಂತೆ ಇವನು ಎಂದು ದೇವಯ್ಯನ ಸಣ್ಣ ಮಗುವನ್ನು ಮುದ್ದಿಸುವ ಪಾತ್ರದಲ್ಲಿ ರಂಗಾಯಣದ ಪ್ರಶಾಂತ್ ಹಿರೇಮಠ್ ಹಾಗೂ ರಾಜೇಶ್ ಕುಂದರ್ ಪರಕಾಯ ಪ್ರವೇಶ ಮಾಡಿದ್ದಾರೇನೋ ಎಂದನ್ನಿಸಿದ್ದು ಸುಳ್ಳಲ್ಲ.

ಕುವೆಂಪುರವರ ಶಿವಶಿವೆಯರ ಕಲ್ಪನೆಯಂತೂ ಅದ್ಭುತ. ಹರಿಣದ ಜೋಡಿಗಳಂತೆ ನಲಿಯುವ ಹರಯದ ಐತ-ಪೀಂಚಲುವಿನ ಜೋಡಿಯಲ್ಲಿ ಮುಕುಂದಯ್ಯನ ಕಣ್ಣಲ್ಲಿ ಅದು ಸಾಕಾರಗೊಳ್ಳುವುದು…..ನಾಟಕದ ಎತ್ತರದ ಭಾಗ.

ತುರುಗಜ್ಜಿಯನ್ನು ಕೆರಕೊಂಡು ಪರಿತಪಿಸುತ್ತಿದ್ದರೂ ಭರಮಣ್ಣ ಹೆಗ್ಗಡೆಗೆ ಮತ್ತೊಮ್ಮೆ ಮದುವೆ ಆಗುವ ತೀರದ ಹೆಣ್ಣಿನಾಸೆ, ವೆಂಕಟಪ್ಪ ನಾಯ್ಕರ ಆಕ್ರಮಣದ ಕೂಡಿಕೆ ಪ್ರಸಂಗ, ನಾಗಕ್ಕನ ಕನಸಿನ ಪ್ರಕರಣ ಒಂದನ್ನೊದು ಆಕ್ರಮಿಸುತ್ತಲೇ… ಆಶ್ರಯಿಸುತ್ತಲೇ ಇರುವ ಬದುಕನ್ನೂ ಕಟ್ಟಿಕೊಡುತ್ತವೆ. ಅಂತೆಯೇ ಅಂತಕ್ಕ, ಚಿನ್ನಕ್ಕ, ಚಿನ್ನಕ್ಕನ ಅಜ್ಜಿ, ತಿಮ್ಮಿಯ ತಾಯಿ, ಹುಚ್ಚು ಹೆಗ್ಗಡಿತಿ, ಬುಚ್ಚಿ, ಮಂಜಮ್ಮ, ದೇವಮ್ಮ ಎಲ್ಲರೂ ಗಂಡಸರೊಂದಿಗೆ ಬಡಿದಾಡುತ್ತಲೇ ತಮ್ಮ ಮನೆಗಳನ್ನು ನಿಲ್ಲಿಸಲು ಪರಗಯ್ಯುವವರೇ.

ಸಿಂಬಾವಿಯಿಂದ ನಾಯಿಗುತ್ತಿಯೊಂದಿಗೆ ಹೊರಡುವ ನಾಟಕದ ಪ್ರಯಾಣ ಊರಿಂದೂರಿಗೆ ಚಲಿಸುತ್ತಾ ಮಲೆನಾಡ ಹಸಿರು ಮಡಿಲಲ್ಲಿ ದೂರದೂರಕ್ಕೆ ಹೊಗೆಯಾಡುತ್ತ ತಮ್ಮಿರುವನ್ನು ತೋರುವ ಮನೆಗಳಂತೆ ಕಾಣುವ ವೇದಿಕೆಗಳಿಗೆ ಕತ್ತಲಲ್ಲಿ ನಡೆಯುತ್ತ ಸಾಗುವ ಪ್ರೇಕ್ಷಕನೂ ಪ್ರಯಾಣಿಸುತ್ತ ನಾಟಕವನ್ನು ಕಟ್ಟಿಕೊಡುತ್ತಿದ್ದ ಪರಿಯೂ ವಿಶೇಷ.

ನಾಯಿ ಗುತ್ತಿಯರ ಅಸ್ತಿತ್ವ ನಾಯಿಗುತ್ತಿಯ ಅಗಲಿಕೆಯಲ್ಲಿ ಕೊನೆಯಾಗಿ, ದನಗೋಳಿನ ಮಳೆ ಹುಯ್ಯದೆಯೂ ಕಲಾಗ್ರಾಮದ ಪರಿಸರ ಹಾಗೂ ನಂದಕಿಶೋರರ ಬೆಳಕಿನ ವಿನ್ಯಾಸದಲ್ಲಿ ಮಿಂದ ಮಲೆನಾಡಂತೆ ಪರಿಸರ ಕಾಣಿಸುತ್ತಿದ್ದುದು, ಬಸವಲಿಂಗಯ್ಯನವರ ನಿರ್ದೇಶನದ, ಶಶಿಧರ್ ಅಡಪರವರ ಸೆಟ್ ನಿರೂಪಣೆಯ ಶ್ರಮದ ಜೊತೆಗಿನ ಮೆಚ್ಚು. ಕವಿಯ ಪರಿಸರವನ್ನು ಕಟ್ಟಿಕೊಡುವ ಇವರೆಲ್ಲರ ಅನುಭವ ಪರಿಪಕ್ವತೆಯನ್ನು ಎತ್ತಿ ತೋರಿಸುತಿತ್ತು.

ಕಥೆಗೆ ಸಹಜತೆಯನ್ನು ತರುವಲ್ಲಿ ಕಲಾವಿದರ ತನ್ಮಯತೆಯನ್ನು ಪ್ರಶ್ನಿಸುವಂತೆಯೇ ಇರಲಿಲ್ಲ. ಸಣ್ಣ ಪಾತ್ರದಿಂದ ಹಿರಿ ಪಾತ್ರದ ಪ್ರತಿಯೊಬ್ಬರೂ ಇಲ್ಲಿ ಉತ್ಸಾಹಿ ನಟರು. ಗಜಾನನ ನಾಯಕರ ಮೇಳ ನಿರ್ವಹಣೆಯೂ ಇಂಪಾಗಿತ್ತು . ಪ್ರಮೋದ್ ಶಿಗ್ಗಾಂವ್ ಮಲೆನಾಡನ್ನು ಸುತ್ತಿ, ಅಂದಿನ ಮಲೆನಾಡಿನ ಉಡುಗೆತೊಡುಗೆ, ಆಭರಣ, ಕೇಶ ವಿನ್ಯಾಸಗಳನ್ನು ಹೊಂದಿಸಿ ಅಂದಿನ ಮಲೆನಾಡಿನ ಜನರನ್ನು ನಮ್ಮ ಮುಂದೆ ಇಂದು ನಿಲ್ಲಿಸಿರುವುದನ್ನು ನೋಡಿ ಮಲೆನಾಡಿನ ಬಂದ ಜನಕ್ಕೇ ಬೆರಗು ಬಂದಿತ್ತು.

ಉಂಗುರುದ ಪ್ರತಿಮೆಯನ್ನು ಆಧಾರವಾಗಿಟ್ಟುಕೊಂಡು ತಿಂಗಳುಗಟ್ಟಳೆ ನಿರ್ದೇಶಕರ ಕನಸಿಗೆ ಸ್ಪಂದಿಸುತ್ತ ಹಗಲು ರಾತ್ರಿಯೆನ್ನದೆ ಕುಳಿತು ಧ್ಯಾನಿಸಿ ಕುವೆಂಪು ಮಣ್ಣಿನ ವಾಸನೆಯನ್ನು ಹಿಡಿದು ನಾಟಕ ರೂಪವನ್ನು ಕಣ್ಣ ಕನಸಿಗೆ ತಂದಿಟ್ಟವರು ಕವಿ ಹಾಗೂ ನಾಟಕಕಾರ ಕೆ. ವೈ. ನಾರಾಯಣಸ್ವಾಮಿ. ಮೂವತ್ತಾರು ಹಾಡನ್ನು ದೃಷ್ಯಕ್ಕೆ ಜೊತೆಯಾಗಿಸಿ ಪ್ರೇಕ್ಷಕನನ್ನು ನಿದ್ದೆಯಿಂದ ಎಚ್ಛರಿಸುತ್ತಾ ಕುವೆಂಪು ಧ್ಯಾನವನ್ನು ಎಲ್ಲೂ ಮುಕ್ಕಾಗಿಸದೆ ಅವರ ಜಗತ್ತಿಗೆ ನೋಡುಗನನ್ನು ಹೆಣೆದು ಅದರಲ್ಲಿ ಮುಳುಗಿಸುವ ಎಚ್ಚರ ತಪ್ಪದ ಕಲೆ ಕೆ.ವೈ.ಎನ್ ಅವರದ್ದು.

ಜಾನಪದ ಕಿನ್ನುರಿಯನ್ನು, ಕಿಂದರಿ ಜೋಗಿಗಳನ್ನು, ಹೆಳವರನ್ನು ಭಜನಾ ಮಂಡಳಿಯನ್ನು ಕರೆದು ಅವರಿಗೆ ಉಂಗುರ ಹಾಗೂ ಪುಸ್ತಕ ಕೊಟ್ಟು ಕಥೆ ಹೇಳಿಸುತ್ತ ಒಂದು ಸೂತ್ರಬಂಧವನ್ನು ಕಟ್ಟುವ ಚಮತ್ಕಾರ ಅಲ್ಲಿ ಎದ್ದು ಕಾಣುತಿತ್ತು. ನಿರ್ದೇಶಕ ಸಿ. ಬಸವಲಿಂಗಯ್ಯ ಅಂದಿನ ಕವಿಯ ಆಶಯವನ್ನು ವೀಕ್ಷಕನಿಗೆ ತಲುಪಿಸುತ್ತಲೇ ಇಂದಿನ ಸಮಾಜದ ನ್ಯೂನತೆಯನ್ನು ಎತ್ತಿ ತೋರಿಸುತ್ತ, ಅಂದಿನ ನ್ಯೂನತೆಗೆ ಸಮೀಕರಿಸುವುದೇ ನಾಟಕದ ಹೆಗ್ಗಳಿಕೆಯಾಗಿತ್ತು.

ಹಂಸಲೇಖರವರ ಸಂಗೀತ ಸಂಯೋಜನೆಗಳು ಪ್ರಸಂಗಗಳಿಗೆ ಪೂರಕವಾಗಿ ಗುನುಗಾಗಿ ಕಿವಿಯಲ್ಲಿ ಉಳಿಯುತಿತ್ತು. ಅವರ ನಾಟಕದ ಅನುಭವವೂ ಇದಕ್ಕೆ ಜೊತೆಯಾಗಿರುವುದು ಇಲ್ಲಿ ಎದ್ದು ಕಾಣುತ್ತಿತ್ತು. ಒಬ್ಬರಿಗೊಬ್ಬರು ಪೂರಕವಾಗಿ ಕೆಲಸ ಮಾಡಿರುವ ಇಂಥ ದೈತ್ಯ ಪ್ರತಿಭೆಗಳ ಸಮಾಗಮವೊಂದು ಒಂದು ದೊಡ್ಡ ಕೊಡುಗೆಯನ್ನು ಕೊಟ್ಟಿದ್ದು ಒಂದು ಸುಂದರ ನೆನಪು.

ಯಾವ ಕರುಳಿನ ಬಳ್ಳಿಯೋ ಏನೋ ಎನೋ…..
ಯಾವ ಮಾತನು ಆಡ ಬಯಸಿತೋ
ಏನು ಸಡಗರ ನೋಡ ಬಯಸಿತೋ
ಜೀವಕ್ಕೆ ಜೀವವು ಒಲಿಯುವ ಈ ಕ್ಷಣಾ
ಇಹಪರ ಗುರುತನು ಮರೆಯುವ ಆ ಕ್ಷಣಾ

– ಕೆ. ವೈ. ನಾರಾಯಣಸ್ವಾಮಿ

ಇದಕ್ಕೆ ಪ್ರತಿಯಾಗಿ ವಾದ ವಿವಾದಗಳು ಹುಟ್ಟಿರುವುದೂ ಸುಳ್ಳಲ್ಲ. ಇಂಥವರು ಗಮನಿಸಬೇಕಾದ ವಿಚಾರ, ನಾಟಕ ಹೊಸ ಓದುಗರನ್ನು ಹುಟ್ಟು ಹಾಕಿರುವುದು. ಕಣ್ಮರೆಯಾಗುತ್ತಿದ್ದ ಅಹೋರಾತ್ರಿ ನಾಟಕಗಳು ಮತ್ತೆ ಗರಿಗೆದುರಿದ್ದು, ಮುಂದಿನ ನಾಟಕರಂಗದ ಬೆಳವಣಿಗೆಗೆ ಸಹಾಯವಾಗಿದ್ದು ಸುಳ್ಳಲ್ಲ. ಇದಕ್ಕೆ ಹಣ ಸಹಾಯ ಒದಗಿಸಿದ್ದು ಕನ್ನಡ ಸಂಸ್ಕೃತಿ ಇಲಾಖೆ.