ಮಠದೊಳಗಿನ ಲೋಕವೊಂದು ಆಗೆಲ್ಲಾ ನನ್ನ ಮುಂದೆ ಸುರುಳಿ ಸುರುಳಿಯಾಗಿ ಬಿಚ್ಚಿಟ್ಟಂತಾಗಿ ಮಠವೆಂದರೆ ಕೇವಲ ಹೊರಗಿದ್ದ ಹನುಮನ ಮೂರ್ತಿ, ರಾಘವೇಂದ್ರರ ವಿಗ್ರಹ, ದೇಗುಲದ ಮುಂದಿನ ಹಳೇ ಪಾಚಿಗಟ್ಟಿದ ಪುಷ್ಕರಣಿ, ಅಗ್ರಹಾರದುದ್ದಕ್ಕೂ ಹಾಸಿದ ಜಾರುವ ಕಲ್ಲು ಹಾಸು, ಮಡಿಯುಟ್ಟ ಒಂದಷ್ಟು ಕರ್ಮಠರ ಆವಾಸವಷ್ಟೇ ಅಲ್ಲ… ಅಲ್ಲಿಯೂ ಜೀವನಾಡಿ ಮಿಡಿಯುವ ಮನುಜರಿದ್ದಾರೆ, ಅದೂ ನಮ್ಮ ಮನೆಯೊಳಗಿನಂತಹುದೇ ಲೋಕ, ಅಂತನ್ನಿಸೋಕೆ ಶುರುವಾಗುವುದು. ಮಠದ ಕೇರಿಯೊಳಗೆ ಹೊಕ್ಕು ಅಡ್ಡಾಡುವ ಬಯಕೆ ಇನ್ನೂ ಮಾಗುವುದು.
ಮಧುರಾಣಿ ಹೆಚ್.ಎಸ್.‌ ಬರೆಯುವ ಮಠದ ಕೇರಿ ಕಥಾನಕ ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

 

ಅಮ್ಮನೋರ ಕಾಡಿಗೆ ಕಣ್ಣುಗಳು ಹಾಗೂ ಮನೆಯ ಹದ್ದುಬಸ್ತಿನ ಗಂಡೈಕಳು…

ಉತ್ತರಾದಿ ಮಠದ ಅಗ್ರಹಾರದಲ್ಲಿ ಕಳೆದ ಯೌವನದ ದಿನಗಳು ಅವು. ಮಾಧ್ವರ ಮನೆಗಳಲ್ಲಿ ಅದರಲ್ಲೂ ಆಚಾರ್ಯರ ಮನೆಯ ಹೆಣ್ಣುಮಕ್ಕಳಿಗೆ ಬಹುಬೇಗ ಮದುವೆ ಮಾಡಿಬಿಡುವ ಪದ್ಧತಿಯಿದೆ. ಉತ್ತರಾದಿ ಮಠದ ಅಮ್ಮನೋರಿಗೂ ಹಾಗೇ, ಬಹಳ ಚಿಕ್ಕಂದಲ್ಲಿ ಮದುವೆಯಾಯಿತಂತೆ. ನಾವು ನೋಡುವಾಗ ಒಂದು ಮೊಮ್ಮಗು ಇತ್ತು. ಪುಟ್ಟ ವಯಸಿಗೆ ಮದುವೆಯಾಗಿ ಮಗಳು ಜಯಂತಿಗೂ ಬಹಳ ಸಣ್ಣವಳಿರುವಾಗಲೇ ಮದುವೆ ಮಾಡಿ ಒಂದು ಮಗು, ಇವರ ಮೊಮ್ಮಗು ಸಹಾ ಇತ್ತು. ಹಾಗಾಗಿ ಅಮ್ಮನೋರಿಗೆ ಬಹಳ ವಯಸ್ಸಾಗಿರಲಿಕ್ಕಿಲ್ಲ. ಆದರೂ ಅಜ್ಜಿಯ ಪಟ್ಟ ಬಂದಿತ್ತಷ್ಟೇ. ತಲೆ ಮೇಲೆ ಬಿಳಿಗೂದಲಿಲ್ಲದೆಯೇ ಅವರು ಅಜ್ಜಿಯಾಗಿದ್ದು ನಮಗೆಲ್ಲಾ ದೊಡ್ಡ ಸೋಜಿಗ.

ಅವರು ಹಿಮ್ಮಡಿಯ ಮೇಲಕ್ಕೆ ಹೊರಗಚ್ಚೆ ಸೀರೆಯುಟ್ಟು ಮನೆಯಲ್ಲೂ ಮಠದಲ್ಲೂ ಎಲ್ಲರಿಗೂ ಏನಾದರೊಂದು ತಾಕೀತು ಮಾಡುತ್ತಾ ಓಡಾಡುವರು. ಬಹಳ ಧಡೂತಿ ಹೆಣ್ಣಾದ್ದರಿಂದ ಅಡುಗೆಮನೆಯಲ್ಲೂ ಕೂತ ಕಡೆಗೇ ಎಲ್ಲ ಅಗತ್ಯ ವಸ್ತುಗಳನ್ನೂ ತರಿಸಿಟ್ಟುಕೊಂಡು ಅಡುಗೆ ಮಾಡುವರು. ಮನೆಯಲ್ಲಿ ಯಾವಾಗಲೂ ಜನ ಕಿಕ್ಕಿರಿದು ಇರುತ್ತಿದ್ದುದು ಇವರಿಗೆ ಅನುಕೂಲವೇ ಆಗಿತ್ತು, ಹಾಗೆ ಕೂತ ಕಡೆಗೆ ಯಾರಾದರೊಬ್ಬರು ಎಲ್ಲ ಸೌಕರ್ಯಗಳನ್ನೂ ಒದಗಿಸಿಯೇ ತೀರುವರು. ಹಾಗೆ ಒದಗಿಸುವವರು ಗಂಡುಮಕ್ಕಳೂ ಆಗಿರಬಹುದು. ಅವರ ಮನೆಯಲ್ಲಿ ಅಡುಗೆ ಕೆಲಸದ ಮಟ್ಟಿಗೂ ಹೆಣ್ಣು ಗಂಡೆಂಬ ಭೇದವಿಲ್ಲದ್ದು ಪರಮಾಶ್ಚರ್ಯ.

ಅಮ್ಮನವರ ಅಡುಗೆ ತರಹೇವಾರಿ! ಹಳೇ ಬೇರಿಗೆ ಹೊಸ ಚಿಗುರು ಬರಿಸಿದವರಂತೆ, ಮನೆಯಲ್ಲಿ ಮಕ್ಕಳಿಗಾಗಿ ಕುಕ್ಕರಿನ ತಳಕ್ಕೆ ಮರಳು ಸುರಿದಿಟ್ಟು ಕೇಕು ಮಾಡುವರು. ಅದನ್ನು ನನಗೂ ಕೊಡುವರು. ಮೊಟ್ಟೆ ಹಾಗೂ ಮಾಂಸವನ್ನು ನೆನಪೂ ಮಾಡಿಕೊಳ್ಳದೇ ಒಳ್ಳೊಳ್ಳೇ ಅಡುಗೆಗಳನ್ನು ಮಾಡುವುದು ಹೇಗೆಂದು ನನಗೆ ಚಾಚೂ ಲೋಪವಿಲ್ಲದೇ ವಿವರಿಸುವರು. ಪಪ್ಸ್ ಎಂಬ ಮಾಯಾವಿಗೆ ಎಲ್ಲರೂ ಮರುಳಾದರೂ ಅದು ಕೇವಲ ಮೈದಾಹಿಟ್ಟು ಹಾಗೂ ತುಪ್ಪದಲ್ಲಿ ಅರಳಬಹುದಾದ ಹೂವಿನಂಥಾ ಚಚ್ಚೌಕವೆಂದು ವಿವರಿಸುವರು. ದ್ರಾಕ್ಷಿ ಹಾಗೂ ಇತರ ಹಣ್ಣುಗಳನ್ನು ಸಂಸ್ಕರಿಸಿ ಅದೆಂಥದೋ ವಾಸನೆಯ ಪೇಯ ಮಾಡಬಹುದೆಂದೂ ಹೇಳುವರು. ಆಲೂಗಡ್ಡೆಯಿಂದ ತೆಳುವಾದ ಪದರು ಹೊರಡಿಸಿ ಎಣ್ಣೆಯೊಳಗೆ ಬಿಟ್ಟರೆ ಉಂಟಾಗುವ ಪರಿಣಾಮ, ತಿಥಿಯೂಟವನ್ನೂ ಮೀರಿಸಬಲ್ಲುದು, ಅದು ಮಕ್ಕಳಿಗೂ ಪ್ರಿಯವೆಂದು ವರ್ಣಿಸುವರು.

‘ಮನೆಯ ಗಂಡಸರೂ ಮಕ್ಕಳೂ ಯಾವ ಕಾರಣಕ್ಕೂ ಹೊರಪ್ರಪಂಚವನ್ನು ಹೆಚ್ಚೆಂದೂ, ಮನೆಯ ಹೆಣ್ಣುಗಳ ಕೌಶಲ್ಯೋಪಾಯಗಳನ್ನು ಕೀಳೆಂದೂ ಎಣಿಸಬಾರದಲ್ಲಾ… ಹಾಗೆ ಅವರನ್ನು ಹಿಡಿದಿಡುವುದೇ ದೊಡ್ಡ ಕಲೆ, ಅದು ಹೆಣ್ಣಿಗೆ ಸಿದ್ಧಿಸಬೇಕು’ ಅಂತಂದು ನನ್ನ ನೋಡಿ ಒಂದು ತುಂಟ ನಗೆ ಚೆಲ್ಲುವರು. ಅವರ ಮುಂದೆ ಏನೇನೂ ಅಲ್ಲದ ಪುಟ್ಟ ಪೀಚಿನಂತಹ ಹೆಣ್ಣಾಗಿದ್ದ ನನ್ನ ಮುಂದೆ, ಇದೆಲ್ಲವನ್ನೂ ಯಾಕಾದರೂ ಹಾಗೆ ಹೇಳುತ್ತಿದ್ದರೋ ನಾನರಿಯೆ. ಆದರೂ ಅದೆಲ್ಲಾ ಕೇಳುವಾಗ ಏನೋ ಒಂದು ಅವರ್ಣನೀಯ ಪುಳಕದ ಅಲೆ ನನ್ನೊಳಗೂ ಏಳುತ್ತಿತ್ತು.

ಈ ಗಂಡಸರನ್ನು ಕೈಯೊಳಗೆ ಹಿಡಿದಿಡುವ ಸೂತ್ರಗಳ ಗುಚ್ಛವು ಒಂದು ಹೊಸ ಜಗತ್ತಿಗೆ ನನ್ನ ಕೈ ಹಿಡಿದು ಕೊಂಡೊಯ್ಯುತ್ತಿತ್ತು. ಮಠದೊಳಗಿನ ಲೋಕವೊಂದು ಆಗೆಲ್ಲಾ ನನ್ನ ಮುಂದೆ ಸುರುಳಿ ಸುರುಳಿಯಾಗಿ ಬಿಚ್ಚಿಟ್ಟಂತಾಗಿ ಮಠವೆಂದರೆ ಕೇವಲ ಹೊರಗಿದ್ದ ಹನುಮನ ಮೂರ್ತಿ, ರಾಘವೇಂದ್ರರ ವಿಗ್ರಹ, ದೇಗುಲದ ಮುಂದಿನ ಹಳೇ ಪಾಚಿಗಟ್ಟಿದ ಪುಷ್ಕರಣಿ, ಅಗ್ರಹಾರದುದ್ದಕ್ಕೂ ಹಾಸಿದ ಜಾರುವ ಕಲ್ಲು ಹಾಸು, ಮಡಿಯುಟ್ಟ ಒಂದಷ್ಟು ಕರ್ಮಠರ ಆವಾಸವಷ್ಟೇ ಅಲ್ಲ… ಅಲ್ಲಿಯೂ ಜೀವನಾಡಿ ಮಿಡಿಯುವ ಮನುಜರಿದ್ದಾರೆ, ಅದೂ ನಮ್ಮ ಮನೆಯೊಳಗಿನಂತಹುದೇ ಲೋಕ, ಅಂತನ್ನಿಸೋಕೆ ಶುರುವಾಗುವುದು. ಮಠದ ಕೇರಿಯೊಳಗೆ ಹೊಕ್ಕು ಅಡ್ಡಾಡುವ ಬಯಕೆ ಇನ್ನೂ ಮಾಗುವುದು.

ಅದೇನೋ ಅಷ್ಟು ಚಿಕ್ಕವಳಿದ್ದರೂ ನಾನೆಂದರೆ ಅಮ್ಮನವರಿಗೂ ವಿಶೇಷ ಪ್ರೀತಿ ಅಕ್ಕರೆ. ಹಾಗೇ ಮಾತು ಮುಂದುವರೆದಾಗ ವಿಚಾರ ಎಲ್ಲೆಲ್ಲೋ ಹರಿದು ಅವರ ಯೌವನದ ದಿನಗಳ ನೋವು-ನಲಿವುಗಳನ್ನೆಲ್ಲಾ ಒಮ್ಮೊಮ್ಮೆ ಅಪ್ರಯತ್ನವಾಗಿ ಹೇಳಿಬಿಡುತ್ತಿದ್ದರು. ಆ ಕತೆಗಳಲ್ಲಿ ಒಂದೇ ಇಂದು ನಾನು ಹೇಳಹೊರಟಿರುವ ಕಾಡಿಗೆ ಕಥೆ‌.

ಕಣ್ಣಿಗೆ ಕಪ್ಪುಕಾಡಿಗೆ, ಹಣೆಗೆ ಕದ್ರಿ ಪುಡಿಗುಂಕುಮದ ಉದ್ದ ತಿಲಕ, ಕಾಲಿಗೆ ದಪ್ಪ ಕಡಗ, ಮೂಗಿನ ಎರಡೂ ಬದಿಗೆ ಬೇಸರಿಯಂಥಾ ಮೂಗುತಿ, ಎರಡೂ ಕೈಗೆ ಹಸಿರೋ ಕೆಂಪೋ ಡಜನ್ ಡಜನ್‌ ಗಟ್ಟಲೇ ಬಳೆಗಳು, ಎಂಟು ಗಜದ ಕಾಟನ್ ಸೀರೆಯೇ ಅವರ ಅಲಂಕಾರ. ಮದುವೆಯಾದ ಹೊಸತರಲ್ಲಿ ಬೇರೇನೂ ಅಲಂಕಾರಿಕ ಸಾಮಗ್ರಿಗಳ ಹಂಗಿಲ್ಲದ ಈ ಹೆಣ್ಣಿಗೆ ಕಣ್ಣಿಗೆ ಕಾಡಿಗೆಯಿಡುವುದೇ ದೊಡ್ಡ ಸಂಭ್ರಮವಂತೆ. ಮುಡಿಯ ಮಲ್ಲಿಗೆಯೇ ಅಲಂಕಾರಕ್ಕೆ ಕಲಶ. ಹೀಗಿರುವಾಗ ತುಂಬಿದ ಮನೆಯಲ್ಲಿನ ಈ ಹೊಸ ಸೊಸೆಗೂ ಗಂಡನೆಂಬ ಪುಟ್ಟ ಹುಡುಗನಿಗೂ ಯಾವುದೋ ವಿಷಯವಲ್ಲದ ವಿಷಯಕ್ಕೆ ಮನಸ್ತಾಪ ಹುಟ್ಟಿತು. ಆ ವಿರಸವು ದಿನಗಟ್ಟಲೇ ಮುಂದುವರೆಯಿತು‌.

ಆಟಪಾಟಗಳ ವಯಸಿನಲ್ಲೇ ದಂಪತಿಗಳಾದ ಇವರಿಗೆ ಖಾಲೀ ಬೆನ್ನಿನ ಮೇಲೆ ಹೊದ್ದ ಜೋಡು-ಜನಿವಾರದ ಬಿಸಿ ಮುಟ್ಟುವ ಕಾಲವದು. ಆಚಾರ್ಯರು ಹೆಂಡತಿಯೊಂದಿಗೆ ಮಾತು ಬಿಟ್ಟರು. ಈಕೆಯೋ…ಇನ್ನೂ ಎರಡು ಹೆಜ್ಜೆ ಮುಂದೆ ಹೋಗಿ ಮಾತಿನ ಜೊತೆಗೆ ಕಣ್ಣಿಗೆ ಕಾಡಿಗೆ ಹಚ್ಚುವುದನ್ನೂ ಬಿಟ್ಟರು. ದಿನಗಳು ಹೀಗೇ ಸಾಗುತ್ತಿತ್ತು. ಪೂಜಾಕೈಂಕರ್ಯ ಮುಗಿಸಿ ಮನೆಗೆ ಬಂದರೆ ಹೆಂಡಿರ ಅಳುಮುಂಜಿ ಕಾಡಿಗೆ ರಹಿತ ಕಣ್ಣುಗಳು ದಿನವೂ ಆಚಾರ್ಯರನ್ನು ಚುಚ್ಚಿ ಕೊಲ್ಲುತ್ತಿದ್ದವು. ಎಲ್ಲವೂ ಯಥಾವತ್ತು ನಡೆದಿದ್ದರೂ ಮಂಕಾಗಿರುತ್ತಿದ್ದ ಮಡದಿಯ ಬೆತ್ತಲೆ ಕಣ್ಣುಗಳು ಹೇಳಲಾಗದ ಹಲವು ನೋವುಗಳನ್ನೂ ವಿರಹವನ್ನೂ ಹೇಳುತ್ತಿದ್ದವು. ಮಾತಾಡಿ ಬಗೆಹರಿಸಿಕೊಳ್ಳಲು ದಿಗಿಲು ಹುಟ್ಟಿದ್ದ ಆಚಾರ್ಯರಿಗೆ ಬದುಕೇ ಬೇಡವಾಗಿತ್ತಂತೆ ಆಗ! ದಿನವೂ ಇಂತಹ ಖಾಲಿ ಕಂಗಳ ನೋಡೀ ನೋಡೀ ಬೇಸತ್ತು ಕಡೆಗೊಮ್ಮೆ ಇದು ಬಾಯಿಗೆ ಬಗ್ಗದ ದೆವ್ವವೆಂದು ಅರಿತ ಆಚಾರ್ಯರು ಒಂದು ನೂರು-ಬರೋಬ್ಬರೀ ನೂರು-ಕಾಡಿಗೆ ಡಬ್ಬಿಗಳ ತಂದು ಮಡದಿಯ ಉಡಿಯನ್ನು ಜಬರ್ದಸ್ತೀ ಬಿಡಿಸಿ ಸುರಿದಿದ್ದರಂತೆ! “ಅಮ್ಮೂ.. ನಾನು ಸಾಯೋವರೆಗೂ ಇನ್ನೆಂದು ಇಂಥಾ ಖಾಲಿ ಕಣ್ಣುಗಳ ತೋರಿಸಬೇಡ. ಬೇಸರವಾದರೆ ನಾಲ್ಕು ಮಾತು ಅಂದು ಮುಗಿಸಿಬಿಡು. ಆದರೆ ಹೀಗೆ ದುಃಖತಪ್ತೆಯಾಗಿರಬೇಡ. ಅದೇನಿದ್ದರೂ ಗೆದ್ದೇನು. ಆದರೆ ನಿನ್ನ ಕಣ್ಣುಗಳಲ್ಲಿ ದುಃಖ ನೋಡಲಾರೆ. ಮೊದಲು ಎದ್ದು ಮುಖ ತೊಳೆದು ಕಾಡಿಗೆಯಿಟ್ಟು ದೇವರಿಗೆ ದೀಪ ಹಚ್ಚು.” ಎಂದು ಗದರಿದ್ದರಂತೆ. ಅಲ್ಲಿಗೆ ಕೊನೆಯಾದ ಆಚಾರ್ಯರ ಅಮ್ಮನೋರ ವಿರಸ ಮತ್ತೆಂದೂ ಮೂಡದೇ ಇಷ್ಟೂ ವರುಷಗಳೂ ಜಗಳವೇ ಇಲ್ಲದ ಅನ್ಯೋನ್ಯ ಸಂಸಾರ ಮಾಡಿದ್ದರಂತೆ.

ಅವರ ಮುಂದೆ ಏನೇನೂ ಅಲ್ಲದ ಪುಟ್ಟ ಪೀಚಿನಂತಹ ಹೆಣ್ಣಾಗಿದ್ದ ನನ್ನ ಮುಂದೆ, ಇದೆಲ್ಲವನ್ನೂ ಯಾಕಾದರೂ ಹಾಗೆ ಹೇಳುತ್ತಿದ್ದರೋ ನಾನರಿಯೆ. ಆದರೂ ಅದೆಲ್ಲಾ ಕೇಳುವಾಗ ಏನೋ ಒಂದು ಅವರ್ಣನೀಯ ಪುಳಕದ ಅಲೆ ನನ್ನೊಳಗೂ ಏಳುತ್ತಿತ್ತು.

ಈಗ ಕುಕ್ಕರಿನ ತಳಕ್ಕೆ ಮರಳು ಹರಡಿ ಆಚಾರ್ಯರ ಹುಟ್ಟಿದ ಹಬ್ಬಕ್ಕೆ ಮೈದಾ ಕೇಕು ಹಾಗೂ ಬಾದಾಮಿ ಹಲ್ವಾ ಒಟ್ಟೊಟ್ಟಿಗೇ ಮಾಡುವಾಗ ಆಕೆ ಇದನ್ನೆಲ್ಲಾ ನಾಚಿಕೆ ಬೆರೆತ ಸಂತಸದೊಟ್ಟಿಗೆ ನನಗೆ ಹೇಳುವರು. ಇನ್ನೂ ಮುಂದುವರೆದು ಅಂದಿನ ರಾತ್ರಿಯನ್ನು ನೆನೆದು ಇಂದೂ ನಾಚುವರು! ಈಗವರಿಗೆ ಮೊಮ್ಮಗನ ಸಂಭ್ರಮ. ಮಗಳು ಜಯಂತಿಗೆ ಎರಡನೇ ಬಸಿರು. ಆದರೂ ಕಾಡಿಗೆ-ಕುಂಕುಮವಿಲ್ಲದ ಅವರ ಮುಖವನ್ನು ಎಂದೂ ಯಾರೂ ನೋಡಿರಲಿಲ್ಲ.

ಆ ವಯಸಿನಲ್ಲೂ ಆಚಾರ್ಯರು ಮನೆಯ ಹೊಸ್ತಿಲು ದಾಟುವಾಗ ಧೊಪಧೊಪನೆ ಕಾಲಿಡುತ್ತಾ, ‘ಲೇ.. ಇವಳೇ..’ ಎಂದು ಕೂಗು ಹಾಕಿಯೇ ಹೋಗುವರು‌. ಅಮ್ಮನು ಒಳಗಿನಿಂದ ‘ಏನೂಂದ್ರೇ..’ ಎಂದು ಮಾರುತ್ತರ ನೀಡಿ ಒಳಬರಲು ಹಸಿರು ನಿಶಾನೆ ಕೊಡುವರು. ಸಂಜೆ ಕಳೆದ ಮೇಲಂತೂ ಹಲವೊಮ್ಮೆ ಅವರ ಮನೆಯ ಒಳಕೋಣೆಯಿಂದ ಕಿಲಕಿಲ ನಗುವೇ ಕೇಳಿಬರುವುದು. ಹೊಸಿಲೊಳಗೆ ಕಾಲಿಡಲು ಹೋದ ನಾನು, ಆ ನಗು ಕೇಳಿ ನಾಚಿ ವಾಪಸು ಬಂದದ್ದೂ ಉಂಟು.

ಅವರಂತೆಯೇ ಅವರ ಮಗಳೂ ದಪ್ಪ ಕಾಡಿಗೆಯ ಪಟ್ಟೊಂದನ್ನು ಬಟ್ಟಲುಗಂಗಳಿಗೆ ಬಳಿದು ಕಿಲಕಿಲ ನಗುವ ಹೊತ್ತು ತಿದ್ದಿದ ರೂಪಿನ ಪುಟ್ಟ ಗಂಡನ ಜೊತೆಗೆ ಮನೆಯೊಳಗೆ ಓಡಾಡುವಾಗ ನಾನು ದಿನವೂ ಅಚ್ಚರಿಯಿಂದ ‘ಈ ಅಮ್ನೋರು ಇನ್ನೇನೇನು ಹದ್ದುಬಸ್ತಿನ ಕಿತಾವಣೆಗಳನ್ನು ಜಯಂತಿಗೆ ಹೇಳಿಕೊಟ್ಟಿರಬಹುದು..?! ಇಪ್ಪತ್ತೆರಡು ವಯಸಿನ ಜಯಂತಿಯ ಗಂಡನು ಏನೇನು ಕಂಡು ಹೆದರಿ ಕೊಸರಿರುವನೋ‌, ಇವಳು ಹೇಗೆಲ್ಲಾ ಅವನನ್ನು ಅಡಿಯಾಳು ಮಾಡಿರಬಹುದೋ…’ ಎಂದು ಯೋಚಿಸುತ್ತಾ ನಮ್ಮ ಮನೆಯ ಗಂಡಸರೆಲ್ಲಾ ಈಗ ಸಾಕಷ್ಟು ಹದ್ದುಬಸ್ತಿನಲ್ಲಿಲ್ಲವೋ, ಎಂದೆಣಿಸುತ್ತಾ ಕಾಲೇಜಿಗೆ ನಡೆದು ಹೋಗುತ್ತಿದ್ದೆ.

ನಮ್ಮ ಮನೆಯ ಗಂಡಸರೋ, ಅಮ್ಮನವರಿಗೆ ಮಂಗಮ್ಮನೆಂದು ಅಡ್ಡನಾಮಧೇಯವಿಟ್ಟು ಕೂಗುವರು. ಆಗೆಲ್ಲಾ ನಮ್ಮಮ್ಮ ರೇಗಿ, ಹಾಗೆನ್ನಬಾರದೆಂದು ಗದರಿದರೆ, ‘ಅದೊಂದು ಕೆಟ್ಟ ಹೆಸರೇನು? ಏನೋ, ಶ್ರೀನಿವಾಸನ ಪಕ್ಕ ನೆಲೆಸಿರುವ ಅಲಮೇಲು ಮಂಗಮ್ಮನ ಹಾಗಿರುವರು ಎನ್ನುವುದೇ ತಪ್ಪೇ..’ ಎಂದು ಅವರವರೇ ಕಣ್ಣು ಮಿಟುಕಿಸಿ ಮುಸಿಮುಸಿ ನಗುವರು. ಅಮ್ಮನವರ ಬಗ್ಗೆ ಈ ಗಂಡಸರಿಗೆಲ್ಲಾ ಯಾಕಾದರೂ ಇಂತಹ ಔದಾಸೀನ್ಯವೋ… ಅಥವಾ ಅವರ ಮನೆಯ ಗಂಡಸರು ಇವರೊಟ್ಟಿಗೆ ಸೇರಿ ಬೇಕರಿಯ ತಿನಿಸು ತಿನ್ನಲು ಬರುವುದಿಲ್ಲವಲ್ಲಾ ಎನ್ನುವ ತಾತ್ಸಾರವೋ… ಅಥವಾ ನಾವೆಲ್ಲಾ ಇವರನ್ನು ಸರಿಯಾಗಿ ಬುದ್ಧಿ ಕಲಿಸಿ ಹದ್ದುಬಸ್ತಿನಲ್ಲಿಡಲು ವಿಫಲರಾಗಿದ್ದೇವೋ..! ಇದು ಯೋಚಿಸಿದಷ್ಟೂ ಕಂಗೆಡಿಸುವ ಕಗ್ಗಂಟಾಗಿತ್ತು ನನಗೆ.

ಇಂಥಾ ಹಸಿಹಸಿ ಮುದ್ದಾದ ಪ್ರೇಮ ಕಥಾನಕಗಳನ್ನು ಕೇಳುವಾಗ ನನ್ನ ಹರಯದ ಮನಸು ಏನೇನೋ ಯೋಚಿಸುತ್ತಿತ್ತು. ಆದರೂ ಎಲ್ಲೋ ಒಂದು ಮೂಲೆಯಲ್ಲಿ ಮದುವೆಯನ್ನು ಧಿಕ್ಕರಿಸುವ ಮಾಮೂಲಿ ಭೂತವೊಂದು ಇಳಿದಿತ್ತಲ್ಲಾ… ಓದು ಮುಗಿಯುವವರೆಗೂ ಮದುವೆ ಒಲ್ಲೆನೆಂದು ಕಣ್ಣಿ ಹಾಕಿ ಕೂತರೂ, ಹಾಗೆ ವಿಧಿ ಬರಹ ಕೈಕೊಟ್ಟು ಮುಂದೆ ಬೇಗನೇ ಮದುವೆಯಾಗಲೇ ಬೇಕಾಯ್ತು. ಬಹಳ ಸಿಟ್ಟಿನವಳೂ ಜಗಳಗಂಟಿಯೂ ಆದ ನಾನು ನನ್ನ ಪಾಪದ ಕೂಸಿನಂಥಾ ಸಂಗಾತಿಯ ಬಳಿ ಕಾಲು ಕೆರೆದು ಜಗಳಾಡುತ್ತೇನೆ. ಆದರೂ ಒಮ್ಮೊಮ್ಮೆ ಜಗಳಗಳು ಮಾಮೂಲಿನಂತಾಗದೇ ಮೌನಕ್ಕೆ ಶರಣಾಗುವಂತೆ ಕಾಡುತ್ತವಲ್ಲಾ.. ಆಗೆಲ್ಲಾ ಹೇಗಾದರೂ ನನ್ನ ಮನವೊಲಿಸಲು ಹೊರಟ ಈ ಹುಡುಗನು ಮೇಕಪ್ ಚಾಳಿಯಿಲ್ಲದ, ಬಟ್ಟೆ ಅಥವಾ ಇತರೇ ವಸ್ತುಗಳನ್ನು ಕೊಳ್ಳುವ ಹಂಗಿಲ್ಲದ, ಅಲ್ಪತೃಪ್ತಳಾದ ನನ್ನನ್ನು ಪ್ರೀತಿಪಡಿಸುವ ಹಾಗೂ ಮಣಿಸುವ ಮಾರ್ಗ ಯಾವುದೆಂದು ಯೋಚಿಸಿ ಯೋಚಿಸಿ ಸುಸ್ತಾಗುತ್ತಿದ್ದ. ಕಡೆಗೆ ನನ್ನ ಒಂದೇ ಒಂದು ದೌರ್ಬಲ್ಯವನ್ನು ಇವನು ಕಂಡು ಹಿಡಿದನು!

ನನಗೆ ಬಣ್ಣಬಣ್ಣದ ಉಗುರುಬಣ್ಣವೆಂದರೆ ಪಂಚಪ್ರಾಣ. ಮುನಿದಾಗಲೆಲ್ಲಾ ಒಂದಲ್ಲ ಎರಡಲ್ಲ.. ಡಜ಼ನ್‌ಗಟ್ಟಲೇ ನೈಲ್‌ಕಲರ್‌ಗಳು ಇವನಿಂದ ಉಡುಗೊರೆ ಸಿಗುತ್ತಿದ್ದವು. ಅಷ್ಟೊಂದು ಬಣ್ಣಗಳನ್ನು ಒಟ್ಟಿಗೇ ನೋಡಿ ನನಗೆ ಇನ್ನಿಲ್ಲದಷ್ಟು ಸಂತಸವಾಗುವುದು. ನಾನು ಇಷ್ಟಿಷ್ಟೇ ಸಿಟ್ಟನ್ನು ತ್ಯಾಗ ಮಾಡುತ್ತಾ ಮತ್ತೆ ಮತ್ತೆ ಇವನ ಪ್ರೀತಿಯ ಬಲೆಗೆ ಸಿಕ್ಕಿಹಾಕಿಕೊಳ್ಳುತ್ತಿದ್ದೆ. ಒಂದೆರಡೇ ಬಣ್ಣಗಳಿಗೆ ನಾನು ಮನಸೋಲುತ್ತಿದ್ದರೂ ಇವನು ಮಾತ್ರ ತಪ್ಪದೇ ಡಜನುಗಟ್ಟಲೇ ಕೊಂಡು ತರುತ್ತಿದ್ದ. ಗಂಡನ್ನು ಹದ್ದುಬಸ್ತಿನಲ್ಲಿಡುವ ಗತ್ತು ನಾನು ಕಲಿತೆನೋ ಇಲ್ಲವೋ, ಹೆಣ್ಣನ್ನು ಮರುಳು ಮಾಡಬಲ್ಲ ವಿದ್ಯೆಯನ್ನು ನನ್ನವನು ಸರಿಯಾಗೇ ಕಲಿತು ಬಂದಂತಿತ್ತು. ಇವನೂ ಮಠದ ಮನೆಯ ಆಚಾರ್ಯರಂತೆ ಮಾತಿಗೆ ಮಾತು ಬೆಳೆಸದೇ ಮೆಲ್ಲನೆ ಮರುಳು ಮಾಡಿ ಒಂದಾಗುವ ವಿದ್ಯೆಯನ್ನು ಅದು ಹೇಗೋ ಕಲಿತೇ ಬಂದಿದ್ದನು.

ಯಾಕೋ ಹೀಗೇ ಮೊನ್ನೆ‌ ಮಾತಾಡುತ್ತಾ ನೆನಪಾದ ಅಗ್ರಹಾರದ ಅಮ್ಮನವರ ಕಾಡಿಗೆ ಡಬ್ಬಿಯ ಕತೆ, ದಾಂಪತ್ಯವೆಂಬ ದುಸ್ತರದ ಹಾದಿಯ ನಡುವೆ ನವಿರಾದ ನವಿಲುಗರಿಯಂತಹ ಸಿಂಗಾರದ ವಸ್ತುವೆಂಬಂತೆ ತೋರಿತು. ಅರಿತೋ ಅರಿಯದೆಯೋ ಮರುಳಾಗಿಯೋ ಅಥವಾ ಆದಂತೆ ನಟಿಸುತ್ತಲೋ, ಒಂದು ಜೀವಮಾನವಿಡೀ ಒಬ್ಬ ಪರಕೀಯ ಸಂಗಾತೊಯೊಡನೆ ಒಪ್ಪಂದಕ್ಕೆ ಬಿದ್ದು ಬದುಕುವುದು ಒಂದು ಅಸಾಧಾರಣ ಕಲೆಯೇ ಸರಿ. ಅಲ್ಲೊಂದು ಇಲ್ಲೊಂದು ದೃಷ್ಟಿಬೊಟ್ಟಿನಂತಹ ದಾಂಪತ್ಯಗಳೂ ಕೇರಿಯಲ್ಲಿ ಇರಲಿಲ್ಲವೆಂದಲ್ಲ. ದಿನವೂ ಹೆಂಡಿರನ್ನು ಧಾರಾಳವಾಗಿ ಅವಾಚ್ಯಗಳನ್ನು ಬಳಸಿ ಬೈಯುತ್ತಲೇ ಮಡಿ ಶಲ್ಯ ಲಂಗೋಟಿಗಳನ್ನು ಬಿಸಿಲಿಗೆ ಆರಿಸುವ ನರಸಿಂಹಯ್ಯನೂ, ಅಪ್ಪ ಅಮ್ಮನೆದುರು ಸರಸವಾಡಬಾರದೆಂದು ಹೆಂಡಿರ ಮುಖವನ್ನೇ ಸರಿಯಾಗಿ ನೋಡದೇ ಬದುಕುತ್ತಿದ್ದ ಮುಕುಂದನೂ, ಗ್ಯಾರೇಜೊಂದರ ಮಾಲಕನಾಗಿದ್ದು ದಿನ ರಾತ್ರಿ ಮನೆಗೆ ಕುಡಿದು ಬಂದು ಹೆಂಡಿರನ್ನು ಹುಚ್ಚಾಬಟ್ಟೆ ಬೈದು ಚಚ್ಚುತ್ತಿದ್ದ ಸಂತಿಯೂ… ಹೀಗೆ ಅನೇಕರ ಬದುಕು ನಗೆಪಾಟಲೂ ಆಗದಿರಲಿಲ್ಲ. ಆದರೆ ದಾಂಪತ್ಯದಲ್ಲೊಂದು ಸಣ್ಣ ಅಪಸ್ವರವೆದ್ದಾಗ ಈ ಜೋಡಣೆಯ ಕಲೆಯೊಂದು ಅಗ್ರಹಾರದ ಅಮ್ಮನವರ ನೆನಪಿನಿಂದಲೇ ಇಂದಿಗೂ ಸಂಪೂರ್ಣವಾಗುತ್ತದೆ. ನನ್ನ ಬಳಿ ರಾಶಿಯಾಗಿರುವ ಬಣ್ಣಬಣ್ಣದ ಉಗುರುಬಣ್ಣದ ಸೀಸೆಗಳು ದಿನವೂ ನನ್ನ ನೋಡಿ ನಗುತ್ತಾ ಸಿಹಿ-ಕಹಿ ದಾಂಪತ್ಯದ ಹಿತವನ್ನೇ ಅರುಹುತ್ತಾ ಗೆಳತಿಯರಂತೆ ಲಾಲಿಸುತ್ತವೆ.