ಕನಸಿನಿಂದ ಎಬ್ಬಿಸಿ ಕೇಳಿದರೂ ತಾನೊಬ್ಬ ರೈತ ಎಂದೇ ಹೇಳುವ ಪೆಜತ್ತಾಯರು ಒಂದು ದುರ್ಬಲ ಗಳಿಗೆಯಲ್ಲೂ ತಾನೊಬ್ಬ ಬರಹಗಾರ ಎಂದು ಅಂದುಕೊಂಡವರಲ್ಲ. ನೀವು ಭೂತಗನ್ನಡಿ ಹಿಡಿದು ಹುಡುಕಿ ನೋಡಿದರೂ ಅವರ ಬರಹದಲ್ಲಿ ಪ್ರತಿಮೆಗಳಾಗಲೀ, ರೂಪಕಗಳಾಗಲೀ ತೋರುವುದಿಲ್ಲ. ಇದು ಅವರ ಬರಹಗಳ ಶಕ್ತಿ. ಆದರೆ ಇವರನ್ನು ಓದುವಾಗ ಜಗತ್ತಿನ ದೊಡ್ಡದೊಡ್ಡ ಬರಹಗಾರರೂ, ಕಾರಂತ ಕುವೆಂಪು ತೇಜಸ್ವಿ ಮೊದಲಾದವರೂ ಕಣ್ಣೆದುರು ಬರುತ್ತಾರೆ. ನಾಯಿಗುತ್ತಿ, ಐತ, ಪೀಂಚ್ಲು, ಗಾರೆಸಿದ್ಮಾವ, ಮಂದಣ್ಣ, ಬೆಟ್ಟದಜೀವದ ಗೋಪಾಲಭಟ್ಟರು, ನಾರಣಪ್ಪ, ಸಾವಂತ್ರಿ ಮಂಜ ಇತ್ಯಾದಿ ಕನ್ನಡ ಸಾಹಿತ್ಯ ಲೋಕದ ನಾಯಕ ನಾಯಕಿಯರ ಸಾಲಿಗೆ ಸೇರಬಲ್ಲ ಕಥಾಪಾತ್ರಗಳು ಈ ಪುಸ್ತಕದ ಅಲ್ಲಲ್ಲಿ ಮಿಂಚಿ ಮಾಯವಾಗುತ್ತಾರೆ.
ಎಸ್.ಎಂ. ಪೆಜತ್ತಾಯರ ಹುಟ್ಟು ಹಬ್ಬದ ದಿನ ಅವರದೊಂದು ಪುಸ್ತಕದ ಕುರಿತು ಅಬ್ದುಲ್ ರಶೀದ್
ಹಿರಿಯರಾದ ಮಧುಸೂದನ ಪೆಜತ್ತಾಯರ ಈ ಪುಸ್ತಕದ ಮೊದಲಲ್ಲಿ ತುಂಬ ಪ್ರೀತಿ, ಅಪಾರ ಗೌರವ ಮತ್ತು ಸ್ವಲ್ಪ ಸಂಕಟದಿಂದ ಕೆಲವು ಸಾಲುಗಳನ್ನು ಬರೆಯುತ್ತಿರುವೆ. ತುಂಬ ಪ್ರೀತಿ ಅವರ ಬರಹದಲ್ಲಿರುವ ಜೀವ ಪ್ರೀತಿಗಾಗಿ. ಅಪಾರ ಗೌರವ ಅವರ ಜೀವನದ ಸಾಹಸಗಳಿಗಾಗಿ. ಸ್ವಲ್ಪ ಸಂಕಟ ಅವರ ಯೌವನದ ದಿನಗಳಲ್ಲಿ ಅವರ ಸಾಹಸಗಳ ಜೊತೆ ಇರಲಾಗದ ತಲೆಮಾರಿನವನಾಗಿ ಹುಟ್ಟಿದ್ದಕ್ಕಾಗಿ. ಇಷ್ಟು ಒಳ್ಳೆಯ ಮನಸ್ಸಿನ,ಇಷ್ಟು ತುಂಟ ಹಠಮಾರಿತನದ, ಇಷ್ಟು ಗಟ್ಟಿ ನಿರ್ಧಾರಗಳ, ಇಷ್ಟೊಂದು ಓದಿಕೊಂಡ, ಎಲ್ಲವನ್ನೂ ಮಾಡಿ ಮುಗಿಸಿ ಆಮೇಲೆ ಬರೆಯಲು ಕೂತ ನಿರ್ಮೋಹಿ ಬರಹಗಾರನೊಬ್ಬನ ಸಂಗದಲ್ಲಿ ಆತನ ಕರ್ಮಭೂಮಿಯ ದಿನಗಳಲ್ಲಿ ನಾನೂ ಇದ್ದಿದ್ದರೆ ಎಂದು ಯೋಚಿಸಿ ಕಣ್ಣು ತುಂಬಿಕೊಳ್ಳುತ್ತದೆ. ಈ ಪುಸ್ತಕದ ಕೊನೆಯಲ್ಲಿ ಮಲಯಾಳಿ ಕಣ್ಣನ್ ಮೇಸ್ತ್ರಿ ಎಂಬ ಮನುಷ್ಯನೊಬ್ಬ ಬರುತ್ತಾನೆ. ಮರದ ಕೂಪಿನ ಮೇಸ್ತ್ರಿ ಆತ. ಒಂಥರಾ ದೈವಾಂಶ ಸಂಭೂತನಂತೆ ಆತ ಕಾಣಿಸುತ್ತಾನೆ. ಆತನಿಂದ ಬೀಳ್ಕೊಳ್ಳುವಾಗ ಪೆಜತ್ತಾಯರ ಕಣ್ಣುಗಳು ತೇವವಾಗುತ್ತದೆ.
ಆ ಬೀಳ್ಕೊಂಡ ಘಟನೆಯ ನಲವತ್ತಾರು ವರ್ಷಗಳ ನಂತರ ಪೆಜತ್ತಾಯರು ಆ ಕುರಿತು ಬರೆದದ್ದನ್ನು ಓದುವಾಗ ಓದುಗರಾದ ನಮ್ಮ ಕಣ್ಣೂ ತುಂಬಿಕೊಳ್ಳುತ್ತದೆ. ನನಗೆ ಪೆಜತ್ತಾಯರ ಬಗ್ಗೆ ಯೋಚಿಸುವಾಗ ಹೀಗೇ ಆಗುತ್ತದೆ. ಒಂಚೂರೂ ಭಾವುಕತೆ ತೋರಿಸದ, ಎಲ್ಲವನ್ನೂ ತಣ್ಣಗೆ ಇರಿಯುವ ತಮಾಷೆಯಲ್ಲಿ ಹೇಳುವ ಪೆಜತ್ತಾಯರು ಓದುಗನ ಎದೆಯನ್ನು ಒದ್ದೆ ಮಾಡುವ ರೀತಿಗೆ ನಾನಂತೂ ಮಾರು ಹೋಗಿದ್ದೇನೆ. ಮುನ್ನುಡಿ ಬರೆಯಲೆಂದು ಈ ಪುಸ್ತಕ ಓದಲು ಕುಳಿತಿದ್ದ ಸೋಮಾರಿ ಮನಸ್ಸು ಮುನ್ನುಡಿಯ ಹಂಗ್ಯಾಕೆ ಎಂದು ಅಂದುಕೊಂಡ ಕ್ಷಣದಿಂದ ಒಂದೇ ಓಟಕ್ಕೆ ಈ ಪುಸ್ತಕವನ್ನು ಓದಿ ಮುಗಿಸಿ ಕೃತಾರ್ಥವಾಗಿದೆ!
ಕನಸಿನಿಂದ ಎಬ್ಬಿಸಿ ಕೇಳಿದರೂ ತಾನೊಬ್ಬ ರೈತ ಎಂದೇ ಹೇಳುವ ಪೆಜತ್ತಾಯರು ಒಂದು ದುರ್ಬಲ ಗಳಿಗೆಯಲ್ಲೂ ತಾನೊಬ್ಬ ಬರಹಗಾರ ಎಂದು ಅಂದುಕೊಂಡವರಲ್ಲ. ನೀವು ಭೂತಗನ್ನಡಿ ಹಿಡಿದು ಹುಡುಕಿ ನೋಡಿದರೂ ಅವರ ಬರಹದಲ್ಲಿ ಪ್ರತಿಮೆಗಳಾಗಲೀ, ರೂಪಕಗಳಾಗಲೀ, ಸಾಹಿತ್ಯದ ಗುದ್ದಲಿ ಪಿಕಾಸಿ ಸಲಾಕೆಗಳಾಗಲೀ ತೋರುವುದಿಲ್ಲ. ಇದು ಅವರ ಬರಹಗಳ ಶಕ್ತಿ. ಆದರೆ ಇವರನ್ನು ಓದುವಾಗ ಜಗತ್ತಿನ ದೊಡ್ಡದೊಡ್ಡ ಬರಹಗಾರರೂ, ಕಾರಂತ ಕುವೆಂಪು ತೇಜಸ್ವಿ ಮೊದಲಾದವರೂ ಕಣ್ಣೆದುರು ಬರುತ್ತಾರೆ. ನಾಯಿಗುತ್ತಿ, ಐತ, ಪೀಂಚ್ಲು, ಗಾರೆಸಿದ್ಮಾವ, ಮಂದಣ್ಣ, ಬೆಟ್ಟದಜೀವದ ಗೋಪಾಲಭಟ್ಟರು, ನಾರಣಪ್ಪ, ಸಾವಂತ್ರಿ ಮಂಜ ಇತ್ಯಾದಿ ಕನ್ನಡ ಸಾಹಿತ್ಯ ಲೋಕದ ನಾಯಕ ನಾಯಕಿಯರ ಸಾಲಿಗೆ ಸೇರಬಲ್ಲ ಕಥಾಪಾತ್ರಗಳು ಈ ಪುಸ್ತಕದ ಅಲ್ಲಲ್ಲಿ ಮಿಂಚಿ ಮಾಯವಾಗುತ್ತಾರೆ.
ಹುಲಿಯನ್ನು ಓಡಿಸಲು ಕೋವಿ ಇಟ್ಟುಕೊಂಡಿರುವ ಆದರೆ ಓಡಲಾಗದ ಹಾಗೆ ಆನೆಕಾಲನ್ನೂ ಹೊಂದಿರುವ ಅಜ್ಜನಿಂದ ಆರಂಭಗೊಳ್ಳುವ ಈ ಪಾತ್ರ ಪರಿಚಯ, ಪಂಚನಬೆಟ್ಟಿನ ಮೇಷ್ಟರು, ವಿಶ್ವಕರ್ಮ ಕಿಟ್ಟಾಚಾರಿ, ಲೇಖಕರ ಮುಖಕ್ಕೇ ಮುಲಾಜಿಲ್ಲದೆ ಒದ್ದ ಕೆಂಪಿ ಎಂಬ ಹಸು, ಚೀಂಪ ಎಂಬ ದೇವತಾ ಸಂಭೂತ, ಋಷಿಗಳಂತಿರುವ ಮುಸಿಯಗಳು, ರೌಡಿಗಳ ಹಾಗಿರುವ ಕಾಡುಹಂದಿಗಳು, ಅಸುರರ ಹಾಗೆ ಬಂದು ಹೋಗುವ ಕಾಡುಕೋಣಗಳು, ಯಜಮಾನರ ಹಾಗೆ ಇರುವ ಗರಡಿಯ ಭೂತಗಳು, ಕೊನೆಯಲ್ಲಿ ಬರುವ ಕಣ್ಣನ್ ಮೇಸ್ತ್ರಿ ಹೀಗೆ ಮುಂದುವರಿಯುತ್ತದೆ. ಜೀವನದಲ್ಲಿ ಪಾತ್ರವೊಂದು ಎಷ್ಟುಬೇಕೋ ಅಷ್ಟು ಮಾತ್ರ ಕಾಣಿಸಿಕೊಂಡು ಮರೆಯಾಗುವಂತೆ ಇವರೆಲ್ಲ ಇಲ್ಲಿದ್ದಾರೆ. ಇವರಲ್ಲಿ ಯಾರಿಗೂ ಕಾದಂಬರಿಯೊಂದರ ಅಮರ ಪಾತ್ರವಾಗುವ ಆಸೆಯಿಲ್ಲ. ಪೆಜತ್ತಾಯರಿಗೂ ಕಾದಂಬರಿಗಾರನಾಗುವ ಉಮೇದಿಲ್ಲ. ಹಾಗಾಗಿ ಓದುಗರಾದ ನಾವೇ ಒಂದು ಕಥಾಪಾತ್ರವಾಗಿ ಈ ಜೀವಲೋಕದೊಳಕ್ಕೆ ಹೊಕ್ಕು ಹಿಂದಿರುಗಿ ಬರಬೇಕಾಗುತ್ತದೆ. ನಾವು ಹೋಗಿ ಬಂದದ್ದು ಅಲ್ಲಿ ಯಾರಿಗೂ ಅರಿವಾಗುವುದೂ ಇಲ್ಲ. ಅವರೆಲ್ಲ ಹಾಗೆ ಅಲ್ಲಿದ್ದಾರೆ!
ಕಾರಂತರ ಬೆಟ್ಟದ ಜೀವ ಓದಿದ ಪೆಜತ್ತಾಯ ಎಂಬ ಯುವಕ ತನ್ನ ತೀರಿಹೋದ ತಂದೆಯ ಶಾಲು ಹೊದ್ದು ಬೆಟ್ಟಗುಡ್ಡಝರಿಗಳಲ್ಲಿ ಒಂಟಿಯಾಗಿ ಅಲೆದಾಡುತ್ತಾರೆ. ರಾಬಿನ್ಸನ್ ಕ್ರೂಸೋ ಸಾಹಸಗಳಿಗೆ ಮಾರುಹೋಗಿ ಉಡುಪಿ ತಾಲೂಕಿನ ಶಿರೂರು ಗ್ರಾಮದ ಸುವರ್ಣಾ ನದಿಯ ತಟದಲ್ಲಿ ಕೃಷಿಕರಾಗಿ ಬದುಕುತ್ತಾರೆ. ಈ ಪುಸ್ತಕದಲ್ಲಿ ಬರುವ ಅವರ ಏಕಾಂಗಿ ಬದುಕಿನ ವಿವರಗಳು ನಮಗೆ ಹೆನ್ರಿ ಡೇವಿಡ್ ಥೋರೋನ ವಾಲ್ಡನ್ ಪುಸ್ತಕದ ಸಾಲುಗಳಂತೆ, ನಾರ್ವೇಜಿಯನ್ ಲೇಖಕ ನಟ್ ಹಾಂಸನ್ನನ ವಾಂಡರರ್ ಕಾದಂಬರಿಯ ಏಕಾಂಗಿತನಗಳಂತೆ ಅಲ್ಲಲ್ಲಿ ಕಾಣಿಸುತ್ತವೆ.
ಈ ಪುಸ್ತಕವನ್ನು ಓದಿದ ಮೇಲೆ ನಾನು ಪೆಜತ್ತಾಯರಲ್ಲಿ ಕೇಸರಿಯವರೇ ಒಂದು ಕಾದಂಬರಿ ಬರೆಯಿರಿ ಎಂದು ಕೇಳಿಕೊಂಡೆ. ಏಕೆಂದರೆ ಇಲ್ಲಿ ಬರುವ ಜೀವಗಳ ತಲೆಯ ಮೇಲೆ ಮೊಟಕುವಂತಹ ಜೀವಗಳು ಪೆಜತ್ತಾಯರ ‘ಕಾಗದದ ದೋಣಿ’ ಬರಹದಲ್ಲಿದೆ. ಈ ಎರಡೂ ಕಡೆ ಇರುವ ಜೀವಗಳಿಗಿಂತಲೂ ಮಿಗಿಲಾದ ಜೀವಗಳು ಪೆಜತ್ತಾಯರ ಜೀವನಯಾನದ ಸ್ಮೃತಿಗಳಲ್ಲಿದೆ. ಅವುಗಳೆಲ್ಲಾದರೂ ಕಾದಂಬರಿಯೊಂದರೊಳಗೆ ಒಟ್ಟಾಗಿ ಬಂದು ಬಿಟ್ಟರೆ ಅದಕ್ಕಿಂತ ದೊಡ್ಡ ಆನಂದ ಎಲ್ಲಿದೆ. ಆದರೆ ಅದು ಯಾಕೋ ಪೆಜತ್ತಾಯರು ಇಷ್ಟು ಮಾತ್ರ ಬರೆದು ಹೊರಟು ಹೋಗಿದ್ದಾರೆ.