ಈ ಯೋಚನೆಗಳಲ್ಲಿ ಮುಳುಗಿದ್ದಾಗ ಮರುದಿನ ಶುಕ್ರವಾರ ತಾಯಿಯೊಬ್ಬಳು ತನ್ನ ಒಂಭತ್ತು ವರ್ಷ ವಯಸ್ಸಿನ ಮಗನನ್ನು ರಕ್ಷಿಸಲು ಕೈಗೊಂಡ ಕ್ರಮದ ಸುದ್ದಿ ಬಂತು. ಅವಳು ನನ್ನ ಸ್ನೇಹಿತೆಯೊಬ್ಬಳ ಸ್ನೇಹಿತೆ, ನನಗೂ ಪರಿಚಿತೆ. ಅವಳ ಮಗನನ್ನೂ ನಾವು ನೋಡಿದ್ದಿತ್ತು. ಅವನು ಕುಬ್ಜತೆ ಎಂಬ ದೈಹಿಕ ಸ್ಥಿತಿಗೆ ಗುರಿಯಾಗಿ ಅವನ ವಯಸ್ಸಿನ ಬೇರೆ ಮಕ್ಕಳಂತೆ ಶಾರೀರಿಕ ಬೆಳವಣಿಗೆಯನ್ನು ಪಡೆದಿಲ್ಲ. ತಲೆ ದೊಡ್ಡದು, ದೇಹ ಕುಬ್ಜ ಎಂಬಂಥ ರೂಪವಿದೆ. ಜನರ ದೃಷ್ಟಿ ಅವನೆಡೆ ಹೊರಳಿದಾಗ ಅವನನ್ನು ಎರಡೆರಡು ಬಾರಿ ದಿಟ್ಟಿಸಿ ನೋಡುತ್ತಾರೆ. ಕೆಲವರಿಗೆ ಅದರ ಬಗ್ಗೆ ಅರಿವಿದ್ದು ಅನುಕಂಪ ತೋರಿಸಿದರೆ ಇನ್ನೂ ಕೆಲವರು ಹಾಗೆ ಮಾಡದಿರಬಹುದು.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಎರಡು ವಾರಗಳ ಹಿಂದೆ ಬ್ರಿಸ್ಬನ್ ನಗರದಲ್ಲಿ ಜರುಗಿದ ಎರಡು ಘಟನೆಗಳಿಂದ ಆಸ್ಟ್ರೇಲಿಯಾ ತನ್ನದೇ ದೇಶೀಯ ವಲಯದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಅದಕ್ಕೂ ಮುಂಚೆ ಆಸ್ಟ್ರೇಲಿಯಾ ಸುದ್ದಿ ಎಂದರೆ ಪ್ರಕೃತಿಯಲ್ಲಾಗುತ್ತಿದ್ದ ವೈಪರೀತ್ಯಗಳು – ಗಗನಕ್ಕೇರಿದ ತಾಪಮಾನ, ವಿಪರೀತ ಶಾಖ, ಪೊದೆಬೆಂಕಿ ಅನಾಹುತಗಳು, ಮತ್ತು ಫೆಬ್ರವರಿ ಆರಂಭದಲ್ಲಿ ಧೋ ಎಂದು ಸುರಿದು ಸುರಿದು ಬಿದ್ದ ಭಾರಿ ಮಳೆಯಿಂದಾದ ಹಾನಿ, ಪ್ರವಾಹಗಳು, ಜನರು ತಪ್ಪಿಸಿಕೊಂಡು ಕಾಣೆಯಾಗಿದ್ದು ಇತ್ಯಾದಿ….

ಆಸ್ಟ್ರೇಲಿಯಾ ಎಂದರೆ ಕಣ್ಣುಕಿವಿಯಾಗುವ ಬ್ರಿಟನ್, ಅಮೆರಿಕ ದೇಶಗಳ ಜನರು ಇದೇನಿದು, ಈ ಡೌನ್ ಅಂಡರ್ ನಲ್ಲಿ ನಡೆಯಬಾರದ್ದೆಲ್ಲಾ ನಡೆಯುತ್ತಿದೆಯಲ್ಲಾ ಎಂದು ಕಣ್ಣಗಲಿಸಿದ್ದರು. ಸುಮಾರು ಜನ ಬೇಡಪ್ಪಾ, ಅಲ್ಲಿಗೆ ಹೋಗದಿದ್ದರೂ ನಡೆಯುತ್ತದೆ ಎಂದು ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಯ್ತು. ಅದಾಗಲೇ ದೇಶದೊಳಗಿನ ಜನರಿಂದ ಸಾಕಷ್ಟು ಟೀಕೆಗೊಳಗಾಗಿದ್ದ ಕೇಂದ್ರ ಸರ್ಕಾರ ಕಂಗಾಲಾಗಿ, ಇಲ್ಲ ಇಲ್ಲ, ಹಾಗನ್ನಬೇಡಿ, ನಮ್ಮಲ್ಲೀಗ ಚೆನ್ನಾಗಿ ಮಳೆಬಿದ್ದು ಪೊದೆಬೆಂಕಿ ನಿರ್ನಾಮವಾಗಿದೆ, ಹಸಿರು ಕಂಗೊಳಿಸುತ್ತಿದೆ, ನಮ್ಮ ಮುದ್ದು koalaಗಳನ್ನ ಎತ್ತಾಡಿ ನಲಿದಾಡಬಹುದು. ನೀವೆಲ್ಲಾ ಬನ್ನಿ, ನಿಮ್ಮನ್ನ ಚೆನ್ನಾಗಿ ನೋಡಿಕೊಳ್ತೀವಿ, ಎಂದು ಪ್ರವಾಸೋದ್ಯಮವನ್ನು ಬಲಪಡಿಸುವತ್ತ ಕಣ್ಣೋಡಿಸುತ್ತಿದೆ. ಇತ್ತ ಕಡೆ ವರ್ಷ ಪೂರ್ತಿ ಕಾಡಿದ್ದ ಬರ, ಬೆಂಕಿ ಎಲ್ಲದರಿಂದ ಸುಸ್ತಾಗಿದ್ದ ಜನ ಕ್ರಿಸ್ಮಸ್, ಬೇಸಗೆ ರಜೆ ಕಳೆದು, ಹೊಸವರ್ಷ ೨೦೨೦ರಲ್ಲಿ ಮತ್ತೆ ಶಾಲೆ ನೌಕರಿಗಳಿಗೆ ಮರಳಿ ಸುಧಾರಿಸಿಕೊಳ್ಳುತ್ತಿದ್ದಾಗ ಫೆಬ್ರವರಿಯಲ್ಲಿ ಆ ಎರಡು ಘಟನೆಗಳು ಜರುಗಿ ಮತ್ತೆ ಜನರನ್ನು ಅಲ್ಲಾಡಿಸಿಬಿಟ್ಟಿವೆ. ಕೆಲವರಂತೂ ಇದೇನು, ನಮ್ಮ ಆಸ್ಟ್ರೇಲಿಯಾಗೆ ರಾವು ಬಡಿದಂತಾಗಿದೆಯಲ್ಲಾ, ಅಂತ ಅನ್ನುತ್ತಿದ್ದಾರೆ.

ದೇಶೀಯ ಮಟ್ಟದಲ್ಲಿ ಜನರು ಬಲು ಮಾತನಾಡಿ, ಈಗಲೂ ಚರ್ಚೆಯಾಗುತ್ತಿರುವ ಮೊದಲ ಘಟನೆ ಒಬ್ಬ ಗಂಡನಾಗಿದ್ದವನು, ಮೂರು ಮಕ್ಕಳ ತಂದೆಯಾಗಿದ್ದವನು ಪತ್ನಿಯನ್ನು ಮತ್ತು ಮಕ್ಕಳನ್ನು ಸಜೀವವಾಗಿ ಸುಟ್ಟಿದ್ದು. ನಂತರ ತಿಳಿದಿದ್ದು ಏನೆಂದರೆ ಪತ್ನಿ ಅವನ ಕಿರುಕುಳ, ಮಾನಸಿಕ ಹಿಂಸೆ ತಾಳಲಾರದೆ ಅವನಿಂದ ಬೇರ್ಪಟ್ಟಿದ್ದಳಂತೆ. ಅವನು ಅವಳು ತನ್ನಲ್ಲಿಗೆ ಮರಳಬೇಕು ಎಂದು ಆಗ್ರಹಿಸಿದ್ದನಂತೆ. ಮಕ್ಕಳ ಕಸ್ಟಡಿ ಬಗ್ಗೆ ಇಬ್ಬರಲ್ಲೂ ಸಾಕಷ್ಟು ತಕರಾರಿತ್ತು. ವಿಷಯ ಕೋರ್ಟಿನಲ್ಲಿತ್ತು. ಮೂರು ಮಕ್ಕಳ ವಯಸ್ಸು ಇನ್ನೂ ಹತ್ತು ವರ್ಷದೊಳಗಿತ್ತು. ಆ ದಿನ ಅವರಿಬ್ಬರ ನಡುವೆ ಅದೇನೋ ಮಾತಾಗಿ, ಅವಳು ಮಕ್ಕಳನ್ನು ಕಾರಲ್ಲಿ ಕೂರಿಸಿಕೊಂಡು ಹೊರಡುವ ಕ್ಷಣದಲ್ಲಿದ್ದಳು. ಅವನು ಕಾರನ್ನು ಲಾಕ್ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಬಿಟ್ಟ.

ಆರು, ನಾಲ್ಕು ಮತ್ತು ಮೂರು ವರ್ಷ ವಯಸ್ಸಿನ ಆ ಪುಟ್ಟ ಕಂದಮ್ಮಗಳು ಕಾರಿನಲ್ಲೇ ಸುಟ್ಟು ಭಸ್ಮವಾದರು. ಅವಳು ಅದು ಹೇಗೋ ಮಾಡಿ ಹೊರಬಂದರೂ ವಿಪರೀತ ಸುಟ್ಟಗಾಯಗಳಿಂದ ನಂತರ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟಳು. ಬೆಂಕಿಹಚ್ಚಿದ ಅವನು ಅದೇ ಕ್ಷಣದಲ್ಲೇ ಅಲ್ಲಿಯೇ ತನ್ನನ್ನು ತಾನೇ ಇರಿದುಕೊಂಡು ಸತ್ತ. ಅವನ ಮಾನಸಿಕ ಸ್ಥಿಮಿತದ ಬಗ್ಗೆ, ವರ್ತನೆಯ ಬಗ್ಗೆ, ಹೆಂಡತಿ ತನ್ನನ್ನು ಬಿಟ್ಟು ಹೋಗಿದ್ದನ್ನು ಸಹಿಸಲಾರದಾಗಿದ್ದು, ಸಮಸಮ ಮಕ್ಕಳ ಕಸ್ಟಡಿ ಬೇಕು ಎಂದ ಅವನ ಕೋರಿಕೆಯನ್ನ ಕೋರ್ಟು ಮನ್ನಿಸದಿದ್ದದ್ದು, ಇದ್ದದ್ದು, ಇಲ್ಲದಿದ್ದದ್ದು ಎಲ್ಲದರ ಬಗ್ಗೆ ಸಾಕಷ್ಟು ಮಾತಾಗಿದೆ. ಸತ್ತವಳ ಮತ್ತು ಮಕ್ಕಳ ಅಂತ್ಯಕ್ರಿಯೆಗಾಗಿ ಆಕೆಯ ಕುಟುಂಬ ಮತ್ತು ಸ್ನೇಹಿತರು ನಿಧಿಸಂಗ್ರಹಣೆ ಅಭಿಯಾನ ಆರಂಭಿಸಿ, ಜನರು ಮುಂದೆ ಬಂದು ಕಾಣಿಕೆ ನೀಡಿದ್ದಾರೆ. ಅವಳ ಹೆತ್ತವರು ಇನ್ಯಾವ ಹೆಣ್ಣುಮಗಳೂ ಈ ಕರಾಳ ರೀತಿಯಲ್ಲಿ ಸಾಯಬಾರದು ಎಂದು ಹೇಳುತ್ತಾ ಕೌಟುಂಬಿಕ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ.

ಅವಳು ಅವನನ್ನು ಆ ಮಟ್ಟಕ್ಕೆ ಕೆರಳಿಸಿದ್ದೇ ಈ ದುರ್ಘಟನೆಗೆ ಕಾರಣವಾಯಿತೇನೋ ಎಂಬ ಒಂದು ಊಹೆಯಿದೆ, ಎಂದಷ್ಟೇ ಹೇಳಿದ ಒಬ್ಬ ಪೊಲೀಸ್ ಅಧಿಕಾರಿಯನ್ನು ತಕ್ಷಣವೇ ರಜೆ ಮೇಲೆ ಮನೆಗೆ ಕಳಿಸಲಾಯಿತು. ಸಾರ್ವಜನಿಕರು ತಮ್ಮ ಸರ್ಕಾರ ‘ಕೌಟುಂಬಿಕ ದೌರ್ಜನ್ಯ’ ಗಳ ಬಗ್ಗೆ ಮತ್ತಷ್ಟು ನಿಗಾವಹಿಸಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ದೇಶದ ಪ್ರಧಾನ ಮಂತ್ರಿ ಮತ್ತು ರಾಜ್ಯ ಸರ್ಕಾರಗಳು ಕೌಟುಂಬಿಕ ದೌರ್ಜನ್ಯ ಎಂಬ ವಿಷಯದ ಬಗ್ಗೆ ಸದ್ಯಕ್ಕಿರುವ ಕಾನೂನು ನೀತಿಗಳನ್ನು ಮರುಪರಿಶೀಲಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ದೇಶದಾದ್ಯಂತ ಕೌಟುಂಬಿಕ ದೌರ್ಜನ್ಯವೆಂದರೇನು, ಅದನ್ನು ಅರಿಯುವುದರ ಅಗತ್ಯ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮತ್ತೊಮ್ಮೆ ವ್ಯಾಪಕ ಪ್ರಚಾರ ನಡೆಯುತ್ತಿದೆ. ಸಾರ್ವಜನಿಕ ಮಟ್ಟದಲ್ಲಿ ಪರಸ್ಪರ ವಿಚಾರ ವಿನಿಮಯವಾಗುತ್ತಿದೆ.

ಮಕ್ಕಳ ಕಸ್ಟಡಿ ಬಗ್ಗೆ ಇಬ್ಬರಲ್ಲೂ ಸಾಕಷ್ಟು ತಕರಾರಿತ್ತು. ವಿಷಯ ಕೋರ್ಟಿನಲ್ಲಿತ್ತು. ಮೂರು ಮಕ್ಕಳ ವಯಸ್ಸು ಇನ್ನೂ ಹತ್ತು ವರ್ಷದೊಳಗಿತ್ತು. ಆ ದಿನ ಅವರಿಬ್ಬರ ನಡುವೆ ಅದೇನೋ ಮಾತಾಗಿ, ಅವಳು ಮಕ್ಕಳನ್ನು ಕಾರಲ್ಲಿ ಕೂರಿಸಿಕೊಂಡು ಹೊರಡುವ ಕ್ಷಣದಲ್ಲಿದ್ದಳು.

ಈ ದುರ್ಘಟನೆಯನ್ನು ನನಗೆ ತಿಳಿಸಿದ್ದು ಒಬ್ಬ ಟ್ಯಾಕ್ಸಿ ಚಾಲಕ. ಸಂಜೆ ಕಾರಣಾಂತರದಿಂದ ಕಾರನ್ನು ನಗರದಾಚೆ ಒಂದೆಡೆ ಪಾರ್ಕ್ ಮಾಡಿ ಆದಷ್ಟೂ ಬೇಗ ನಗರ ಮಧ್ಯಭಾಗವನ್ನು ತಲುಪಲು ಟ್ಯಾಕ್ಸಿ ಹಿಡಿದಿದ್ದೆ. ದುರಾದೃಷ್ಟವಶಾತ್ ಸಂಜೆ ಪೀಕ್ ಟ್ರಾಫಿಕ್ ಸಮಯದಲ್ಲಿ ಸಿಕ್ಕಿಕೊಂಡು ಆಮೆ ವೇಗದಲ್ಲಿದ್ದಾಗ ಹೊತ್ತು ಕಳೆಯಲು ಚಾಲಕ ಮಾತಿಗಿಳಿದಿದ್ದ. ತನ್ನ ಮುದ್ದು ಮಗಳ ಬಗ್ಗೆ ಮಾತನಾಡುತ್ತಿದ್ದ. ಆ ಸಂದರ್ಭದಲ್ಲಿ ತನ್ನ ಮಗಳಿಗೆ ಯಾರಾದರೂ ತೊಂದರೆ ಕೊಟ್ಟರೆ ತಾನು ರಾಕ್ಷಸನಾಗಿಬಿಡುತ್ತೀನಿ ಎಂದಾಗ ಹೌದಾ ಎಂದ ನನ್ನ ಉದಾಸೀನ ಮುಖಭಾವವನ್ನು ಗಮನಿಸಿ ಅವನು ಇವತ್ತಿನ ಪತ್ರಿಕೆ ಓದಲಿಲ್ಲವೇ, ನಿನ್ನೆ ನಡೆದ ಘಟನೆ ಬಗ್ಗೆ ಕೇಳಿದೆಯಾ, ಓಹೋ ನಿನಗೆ ಗೊತ್ತಿಲ್ಲವೇನು, ಎಂದು ನನ್ನನ್ನು ಪ್ರಶ್ನಿಸಿದಾಗ ತಡಬಡಿಸಿ ಯಾವ ಘಟನೆ ಎಂದೆ! ಹುಸಿಕೋಪದಿಂದ ಅವನು ಪತ್ರಿಕೆಯನ್ನು ನನ್ನ ಕೈಲಿಟ್ಟು ಓದು ಅಂತ ಹೇಳುತ್ತಲೇ ಘಟನೆಯ ವರದಿಯನ್ನು ತಾನೇ ಒಪ್ಪಿಸಿದ. ನಾನು ಓದುತ್ತಾ, ಕೇಳುತ್ತಾ ಶಾಕ್ ಹೊಡೆದವಳಂತೆ ಕೂತಿದ್ದೆ.

ಅವನು ಹಿಂದೊಮ್ಮೆ ಪುಟಾಣಿ ವಯಸ್ಸಿನ ತನ್ನ ಮಗಳನ್ನು ಅಣಕಿಸಿದವರನ್ನು ತಾನು ಹೇಗೆ ಓಡಿಹೋಗಿ ಹಿಡಿದು ತದಕಿದ್ದೆ ಅನ್ನೋದನ್ನ ವರ್ಣಿಸುತ್ತಿದ್ದ. ಹೆಂಡತಿ, ಮಕ್ಕಳನ್ನ ಕಾಪಾಡುವುದೇ ಗಂಡಸಿನ ಧರ್ಮ ಎಂದು ಮಾತನಾಡಿದ. ಕೇಳುತ್ತಾ ನನ್ನಲ್ಲಿ ಪ್ರಶ್ನೆಗಳೆದ್ದವು. ಮನುಷ್ಯನ ಮನಸ್ಸಿನಲ್ಲಿ ಮತ್ತು ವರ್ತನೆಯಲ್ಲಿ ಈ ‘ಕಾಪಾಡುವುದು’ ಎನ್ನುವ ವಿಷಯ ಅದೆಷ್ಟು ರೂಪಗಳನ್ನು ಹೊಂದಿದೆ, ಗಂಡು ಮತ್ತು ಹೆಣ್ಣು ಅದರ ಬಗ್ಗೆ ಯೋಚಿಸುವ ಪರಿಯೇ ಬೇರೆಯಲ್ಲವೇ ಎಂದೆನಿಸಿತು. ‘ಕಾಪಾಡುವಿಕೆ’ ಅನ್ನುವ ಒಂದು ಪರಿಕಲ್ಪನೆಯ ಹೊರ ಮತ್ತು ಒಳ ಪದರಗಳನ್ನು ಬಿಡಿಸಿ ನೋಡಿದರೆ ನಮ್ಮನಮ್ಮ ಮನಸ್ಸುಗಳಲ್ಲಿರುವ, ಭಾವನೆಗಳಲ್ಲಿರುವ, ಮೌಲ್ಯ- ನಂಬಿಕೆಗಳಲ್ಲಿರುವ ಅನೇಕ ವ್ಯತ್ಯಾಸಗಳು ಹೊಳೆದು ಅವುಗಳಲ್ಲೇ ಕಳೆದುಹೋದೆ. ತನ್ನದೇ ಮಕ್ಕಳನ್ನು ಬೆಂಕಿಹಚ್ಚಿ ಸುಟ್ಟ ಆ ಗಂಡಸಿನ ಮನಃಸ್ಥಿತಿ ಹೇಗಿತ್ತು? ತನ್ನನ್ನು ಬಿಟ್ಟುಹೋದ ಹೆಂಡತಿಯನ್ನು ಹೆದರಿಸಲು ಕಾರಿಗೆ ಪೆಟ್ರೋಲ್ ಸುರಿದನೇ? ತನ್ನ ಮಕ್ಕಳನ್ನು ಅತ್ಯಂತ ಪ್ರೀತಿಸುವ ತಂದೆಯೆಂದು, ಅದರಿಂದ ಅವರ ಕಸ್ಟಡಿಯಲ್ಲಿ ಸಮಪಾಲು ತನಗೆ ಸಿಗಬೇಕೆಂದು ಕೋರ್ಟಿನಲ್ಲಿ ವಾದಿಸಿದ್ದನಂತೆ. ಹೆಂಡತಿ ಮಕ್ಕಳು ವಾಪಸ್ ತನಗೆ ಸಿಕ್ಕಿದರೆ ಅದರಿಂದ ಅವನು ತನ್ನನ್ನು ತಾನೇ ಕಾಪಾಡಿಕೊಂಡಂತಾಗುತ್ತಿತ್ತಾ? ಅವಳ ಮೇಲಿನ ಹಿಡಿತವೇ ಅವನ ಸ್ವ-ಕಾಪಾಡುವಿಕೆಯ ಸಾಧನವಾಗಿತ್ತೇ?

ಈ ಯೋಚನೆಗಳಲ್ಲಿ ಮುಳುಗಿದ್ದಾಗ ಮರುದಿನ ಶುಕ್ರವಾರ ತಾಯಿಯೊಬ್ಬಳು ತನ್ನ ಒಂಭತ್ತು ವರ್ಷ ವಯಸ್ಸಿನ ಮಗನನ್ನು ರಕ್ಷಿಸಲು ಕೈಗೊಂಡ ಕ್ರಮದ ಸುದ್ದಿ ಬಂತು. ಅವಳು ನನ್ನ ಸ್ನೇಹಿತೆಯೊಬ್ಬಳ ಸ್ನೇಹಿತೆ, ನನಗೂ ಪರಿಚಿತೆ. ಅವಳ ಮಗನನ್ನೂ ನಾವು ನೋಡಿದ್ದಿತ್ತು. ಅವನು ಕುಬ್ಜತೆ ಎಂಬ ದೈಹಿಕ ಸ್ಥಿತಿಗೆ ಗುರಿಯಾಗಿ ಅವನ ವಯಸ್ಸಿನ ಬೇರೆ ಮಕ್ಕಳಂತೆ ಶಾರೀರಿಕ ಬೆಳವಣಿಗೆಯನ್ನು ಪಡೆದಿಲ್ಲ. ತಲೆ ದೊಡ್ಡದು, ದೇಹ ಕುಬ್ಜ ಎಂಬಂಥ ರೂಪವಿದೆ. ಜನರ ದೃಷ್ಟಿ ಅವನೆಡೆ ಹೊರಳಿದಾಗ ಅವನನ್ನು ಎರಡೆರಡು ಬಾರಿ ದಿಟ್ಟಿಸಿ ನೋಡುತ್ತಾರೆ. ಕೆಲವರಿಗೆ ಅದರ ಬಗ್ಗೆ ಅರಿವಿದ್ದು ಅನುಕಂಪ ತೋರಿಸಿದರೆ ಇನ್ನೂ ಕೆಲವರು ಹಾಗೆ ಮಾಡದಿರಬಹುದು. ಅವನ ಕುಬ್ಜತೆಯಿಂದ ಪ್ರತಿದಿನವೂ ಶಾಲೆಯಲ್ಲಿ ಕಿರುಕುಳ ಅನುಭವಿಸುತ್ತಿದ್ದ ಎಂದು ತಾಯಿ ಹೇಳಿದ್ದಾಳೆ.

ಆ ದಿನ ಶಾಲೆ ಮುಗಿದ ನಂತರ ಅವಳು ಮಗನನ್ನು ಪಿಕ್ ಅಪ್ ಮಾಡಿದರೆ ಅವನು ಕಾರಿನಲ್ಲಿ ಕೂತು ಶಾಲೆಯಲ್ಲಿ ತಾನು ಅನುಭವಿಸಿದ bullying ಅನುಭವವನ್ನು ಹೇಳಿಕೊಂಡು ಗೊಳೋ ಎಂದು ಅಳುತ್ತಾ ಈ ಕಿರುಕುಳ ಸಹಿಸಲಾರೆನಮ್ಮಾ, ನನ್ನ ಜೀವ ತೆಗೆದುಕೊಳ್ಳುತ್ತೀನಿ ಅನ್ನುತಿದ್ದ. ಅದನ್ನು ಅವಳು ತನ್ನ ಫೋನಿನಲ್ಲಿ ಸೆರೆ ಹಿಡಿದು ಆ ವಿಡಿಯೋ ತುಣುಕನ್ನ ಫೇಸ್ ಬುಕ್ಕಿನಲ್ಲಿ ಹಾಕಿದ್ದಳು. ಪ್ರತಿದಿನವೂ ತನ್ನ ಕೂಸು ಅನುಭವಿಸುವ ಈ ರೀತಿಯ ಹಿಂಸೆಯನ್ನ ಯಾವ ಮಗುವೂ, ಯಾರೂ ಕೂಡ ಅನುಭವಿಸಬಾರದು; ಪೋಷಕರೇ, ನಿಮ್ಮ ಮಕ್ಕಳಿಗೆ ತಿಳುವಳಿಕೆ ನೀಡಿ, ಎಂದಿದ್ದಳು. ಕೂಡಲೇ ಆ ವಿಡಿಯೋ ತುಣುಕನ್ನು ನೂರಾರು, ಸಾವಿರಾರು ಜನ ಶೇರ್ ಮಾಡಿ ಅದು ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಯ್ತು. ಆಸ್ಟ್ರೇಲಿಯನ್ ನಟ ಹ್ಯೂ ಜಾಕ್ಮನ್ ಅದನ್ನು ನೋಡಿ ಇದು ತಪ್ಪು, ಇಂಥದ್ದು ನಡೆಯಬಾರದು, ಹುಡುಗ ನಿನ್ನೊಡನೆ ನಾನಿದ್ದೀನಿ, ಅಂದರು. ಅಮೆರಿಕೆಯ ಅಧ್ಯಕ್ಷ ಟ್ರಂಪ್ ಮಗ ಕೂಡ ಅದನ್ನು ನೋಡಿ ಅಯ್ಯೋ, ಇದು ತಪ್ಪು ಅಂದನಂತೆ. ತಾಯಿ ಪತ್ರಿಕಾ ಗೋಷ್ಠಿಯನ್ನೂ ನಡೆಸಿ bullying ನಿಲ್ಲಬೇಕು, ಕುಬ್ಜತೆ ಬಗ್ಗೆ ಜನರಲ್ಲಿ, ಸಮಾಜದಲ್ಲಿ ಅರಿವು ಹೆಚ್ಚಬೇಕು, ಮುಖ್ಯವಾಗಿ ತನ್ನಂತೆ ಕಾಣದಿದ್ದ ಇತರರನ್ನು ನಾವು ಹಂಗಿಸುವ ಮನೋಭಾವ ಬದಲಾಯಿಸಬೇಕು ಎಂದು ಒತ್ತಾಯಿಸಿದಳು. ಸುದ್ದಿ ಹಾಲಿವುಡ್ ನಟರನ್ನೂ ತಲುಪಿ ಅವರಲ್ಲಿ ಒಬ್ಬ ಕುಬ್ಜತೆ ಸ್ಥಿತಿ (ಕಂಡೀಶನ್) ಇರುವ ನಟ ಈ ಆಸ್ಟ್ರೇಲಿಯನ್ ಕುಬ್ಜ ಹುಡುಗ ಅಮೆರಿಕೆಯ ಡಿಸ್ನಿ ಲ್ಯಾಂಡಿಗೆ ಹೋಗಲು ನಿಧಿ ಸಂಗ್ರಹಣೆಗೂ ಇಳಿದ.

ಎರಡು ದಿನಗಳಲ್ಲೇ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹಣೆಯಾಯ್ತು. ನಂತರ ಆಹ್ವಾನವನ್ನು ಹುಡುಗನ ಕುಟುಂಬದವರು ನಿರಾಕರಿಸಿದರು. ಅದೇ ವಾರಾಂತ್ಯದಲ್ಲಿ ಹುಡುಗನ ಕುಟುಂಬಕ್ಕೆ ಪರಿಚಿತರಾದ ಆಸ್ಟ್ರೇಲಿಯನ್ ರಗ್ಬಿ ಆಟದ ಒಂದು ಪ್ರಮುಖ ತಂಡದ ನಾಯಕ ನಾವೆಲ್ಲಾ ನಿನ್ನ ಬೆಂಬಲಕ್ಕಿದ್ದೀವಿ, ಯೋಚಿಸಬೇಡ, ಎಂದು ಹುಡುಗನಿಗೆ ಸಮಾಧಾನ ಹೇಳಿ, ಶನಿವಾರವಿದ್ದ ನ್ಯೂ ಝಿಲ್ಯಾಂಡ್ ವಿರುದ್ಧದ ತಮ್ಮ ಪಂದ್ಯದ ಆರಂಭವನ್ನು ಹುಡುಗ ನಡೆಸಿಕೊಡುವ ಗೌರವ ಆಹ್ವಾನವನ್ನು ನೀಡಿದ. ಹುಡುಗ ಬಲು ಸಂತಸದಿಂದ ಪಂದ್ಯವನ್ನು inaugurate ಮಾಡಿ ಇನ್ನಷ್ಟು ಸುದ್ದಿಯಾದ. ಪ್ರತಿದಿನದ ಗೋಳಿನಿಂದ ನೊಂದು ಒಬ್ಬ ತಾಯಿ ತನ್ನ ಮಗುವಿನ ಹಿತಾಸಕ್ತಿಯನ್ನು ಕಾಪಾಡಲು ಮಾಡಿದ ಅವಳ ನಡೆ ಶಾಭಾಸ್ ಪಡೆದಿದೆ. ಇದರಿಂದಾಗಿಯಾದರೂ ಶಾಲೆಯಲ್ಲಿ ನಿರಂತರ ನಡೆಯುವ bullying ಪ್ರಸಂಗಗಳು ಸ್ವಲ್ಪ ಕಡಿಮೆಯಾಗುತ್ತದೇನೋ. ಅಥವಾ, ಈ ಉದಾಹರಣೆಯನ್ನೇ ಎತ್ತಿಕೊಂಡು ಮಕ್ಕಳು ಧೈರ್ಯ ಪಡೆಯಬಹುದೇನೋ.

ಕಾಪಾಡುವುದು ಎನ್ನುವುದರ ಮಾನಸಿಕ ರೂಪ ಯಾವ್ಯಾವ ವೇಷ ತಾಳುತ್ತದೆ ಎನ್ನುವುದು ಒಂದು ಸಮಾಜದ ಸ್ಥಿತಿಗತಿಗಳ, ಮೌಲ್ಯ-ನಂಬಿಕೆಗಳ ಮೇಲೆ ಎಷ್ಟು ಅವಲಂಬಿಸಿದೆಯೋ ಅಷ್ಟೇ ಮುಖ್ಯವಾಗಿ ನಮ್ಮನಮ್ಮ ಮನೋಭಾವಗಳ ಮೇಲೆ, ಮನುಷ್ಯರ ಮನಃಸ್ಥಿತಿಗಳ ಮೇಲೆ, ಕ್ಷಣಮಾತ್ರದಲ್ಲಿ ತೆಗೆದುಕೊಳ್ಳುವ ಕೆಲವು ಅನಿರೀಕ್ಷಿತ ನಿರ್ಧಾರ, ನಡೆಗಳ ಮೇಲೆ ನಿಂತಿದೆ ಅನ್ನಿಸುತ್ತಿದೆ.