”ನಾವು ಎಷ್ಟೆಲ್ಲ ತಿರುಗಾಡಿದರೂ, ಯಾವೆಲ್ಲ ಸಮುದ್ರಗಳನ್ನು ದಾಟಿ ಯಾವ್ಯಾವುದೋ ದೇಶಗಳನ್ನು ಸುತ್ತಿದರೂ ವಾಪಾಸ್ಸು ಬರುವುದು ಮನೆಯೆಂಬ ತಾಣಕ್ಕೆ. ಮನೆ ಬಿಟ್ಟು ಹೊರಗೆ ಸ್ವರ್ಗದಲ್ಲಿದ್ದರೂ ನಿದ್ರೆ ಹತ್ತುವುದೇ ಇಲ್ಲ. ಮನೆ ಅಂದ್ರೆ ಮನದ ತಂಗುದಾಣ. ಒಂದೊಂದು ಮನೆಯಲ್ಲಿ ಒಂದೊಂದಷ್ಟು ನೆನಪುಗಳನ್ನು ಬಿಟ್ಟುಬರುವ ಸ್ಥಿತಿ. ಮಗು ದೊಡ್ಡದಾಗುತ್ತಿದೆಯೆಂದು ಪುಟ್ಟ ಮನೆಯನ್ನು ಬಿಟ್ಟು ದೊಡ್ಡ ಮನೆಯನ್ನು ಸೇರುವ ಬಗ್ಗೆ ಯೋಚಿಸುವಾಗ, ಆ ಮಗು ಸಣ್ಣದಿದ್ದಾಗ ಗೀಚಿದ ಗೋಡೆಯ ಮೇಲಿನ ಅಸಂಖ್ಯಾತ ಗೀಟುಗಳು ‘ನಮ್ಮನ್ನು ಇಲ್ಲೇ ಬಿಟ್ಟು ಹೋಗ್ತೀರಾ’ ಅಂತ ಕೇಳದೇ ಇರೋಲ್ಲ”
ರೂಪಶ್ರೀ ಕಲ್ಲಿಗನೂರು ಅಂಕಣ.

ಆವತ್ತು ಅಮ್ಮನ ಮನೆಯಿಂದ ನಮ್ಮನೆಗೆ ಹೊರಟಾಗ ರಾತ್ರಿ ಸ್ವಲ್ಪ ತಡವಾಗಿತ್ತು. ಸಾಮಾನ್ಯವಾಗಿ ಓಡಾಡುವ ಮಾರ್ಗದ ನಡುವಲ್ಲೊಂದು ದೇವಸ್ಥಾನ ಸಿಗುತ್ತದೆ. ಅದಕ್ಕೆ ಹೋಗಲು ಮೂರು ಹಾದಿಗಳಿದ್ದು, ನಮ್ಮನೆಗೆ ಹೋಗಬೇಕಾದರೆ ಆ ಮೂರರಲ್ಲಿ ಎರಡು ದಾರಿಗಳನ್ನ ಬಳಸಿಕೊಂಡೇ ಹೋಗಬೇಕು. ಆ ಎರಡು ದಾರಿಗಳ ನಡುವೊಂದು ಪುಟ್ಟದಾದ ತಿರುವಿದೆ. ಅಲ್ಲಿ ನಮ್ಮನಮ್ಮ ವಾಹನದ ವೇಗವನ್ನ ಕೊಂಚ ನಿಧಾನಿಸಿ ಸ್ವಲ್ಪ ಹುಷಾರಾಗಿಯೇ ತಿರುವು ತೆಗೆದುಕೊಳ್ಳಬೇಕು. ಇಲ್ಲವಾದರೆ ಆಕಡೆಯಿಂದ ಯಾರು, ಯಾವ್ಯಾವ ಅವತಾರದಲ್ಲಿ, ಎಷ್ಟೆಲ್ಲ ವೇಗವಾಗಿ ಬರುತ್ತಿದ್ದಾರೆಂದು ತಿಳಿಯದೇ ಜುಂಯೆಂದು ಗಾಡಿ ಓಡಿಸಿಬಿಟ್ಟರೆ ಅಪಘಾತ ಕಟ್ಟಿಟ್ಟಬುತ್ತಿ. ಹಾಗಂತ ಅಲ್ಲಿ ಓಡಾಡುವ ವಾಹನ ಸವಾರರೆಲ್ಲ ಬಹಳ ಜಾಗರೂಕತೆಯಿಂದ ವಾಹನ ಚಲಿಸುತ್ತಾರೆಂದುಕೊಳ್ಳಬೇಡಿ. ಗೊತ್ತಲ್ಲ ನಿಮಗೆ, ಬೆಂಗಳೂರಿಗರು ವಾಹನ ಚಲಿಸುವ ರೀತಿನೀತಿಯೆಲ್ಲ. ಅಬ್ಬಬ್ಬ… ಇವರು ವಾಹನ ಓಡಿಸುವ ಯರ್ರಾಬಿರ್ರಿ ಶೈಲಿ ಹೊಸದಾಗಿ ಗಾಡಿ ಕಲಿಯುವವರನ್ನು, ಬಹಳ ನಾಜೂಕಾಗಿ ಆಕ್ಸಿಲೇಟರ್ ಹಿಡಿದ ಕೈಯಲ್ಲೇ ಪ್ರಾಣ ಹಿಡಿದುಕೊಂಡಂಥ ನಾಜೂಕು ಸವಾರರನ್ನು ಮತ್ತೂ ಮಡಿಕೇರಿಯಂಥ ಊರಿಂದ ಬರುವ ಸವಾರರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತದೆ. ಹಾಗಾಗಿ ಟಿಪಿಕಲ್ ಬೆಂಗಳೂರಿನವಳಲ್ಲದ ಹಾಗಿರುವ ನನಗೂ ಕೂಡ ಇವರು ಗಾಡಿ ಓಡಿಸುವ ರೀತಿ ಭಯ ಹುಟ್ಟಿಸುತ್ತೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ನಾನೇ ನಿಧಾನವಾಗಿ ತಿರುವು ತೆಗೆದುಕೊಂಡು ಬರುವುದು ರೂಢಿಯಾಗಿಬಿಟ್ಟಿದೆ.

ಹಾಗೆ ಓಡಾಡುವಾಗ ಒಂದೆರೆಡು ಬಾರಿ ಅದೇ ಸ್ಥಳದಲ್ಲಿ ಹುಡುಗರ ಗುಂಪೊಂದು ಜೋರುಜೋರಾಗಿ ಜಗಳವಾಡುತ್ತ ನಿಂತಿದ್ದನ್ನು ನೋಡಿದ್ದೆ. ಅದರಲ್ಲೂ ಎರಡೆರಡು ಸಾರಿ ಅವರ ಆಟಾಟೋಪವನ್ನು ಸ್ವತಃ ಕಂಡಿದ್ದೆ. ಹಾಗಾಗಿ ಮೊದಲೇ ಹೊತ್ತಾಗಿದೆಯೆಂಬ ಕೊಂಚ ಮಟ್ಟಿನ ಅಳುಕಿನ ನಡುವೆಯೂ, ಹೆಚ್ಚು ಜನ ಇಲ್ಲದೇ, ವಾತಾವರಣ ಪ್ರಶಾಂತವಿದ್ದ ಕಾರಣ, ಯಾವುದೋ ಹಾಡೊಂದನ್ನು ಗುನುಗುನಿಸುತ್ತಾ ತಿರುವು ತೆಗೆದುಕೊಂಡಿದ್ದೆ. ಹಾಗೆ ಗಾಡಿ ತಿರುವಿನಲ್ಲಿ ಚಲಿಸಿದ್ದೇ, ಹಠಾತ್ತನೇ ಎದುರುಗೊಂಡ ಕ್ಷಣದಲ್ಲಿ ವಿಚಿತ್ರ ಮಹಿಳೆಯೊಬ್ಬಳನ್ನು ಕಂಡು ಹೌಹಾರಿಬಿಟ್ಟಿದ್ದೆ. ಆಕ್ಷಣಕ್ಕೆ ಅಲ್ಲಿ ಗಾಡಿಯನ್ನು ನಿಲ್ಲಿಸಲಾಗದೇ ಸುಮಾರು ನೂರು ಮೀಟರ್ ದೂರಕ್ಕೆ ಬಂದು ಗಾಡಿ ನಿಲ್ಲಿಸಿದ್ದೆ. ತೆರೆದ ಗೌನೊಂದನ್ನು ತೊಟ್ಟಿದ್ದ ಆಕೆಯ ಮೈಮೇಲೆ ಮತ್ತಿನ್ಯಾವ ಬಟ್ಟೆಯ ಚುಂಗೂ ಇರಲಿಲ್ಲ. ಮಾನಸಿಕ ಅಸ್ವಸ್ಥೆಯಂತೆ ಕಾಣುತ್ತಿದ್ದ ಅವಳ ಕೂದಲಂತೂ ಎಣ್ಣೆ-ಬಾಚಣಿಗೆ ಕಂಡು ಅದೆಷ್ಟು ಸಮಯವಾಗಿತ್ತೋ. ಮೊದಲಬಾರಿಗೆ ಅಂಥದ್ದೊಂದು ಸನ್ನಿವೇಶವನ್ನು ಎದುರಿಸಿದ್ದರಿಂದ ಸಣ್ಣಗೆ ಬೆವರಿದ್ದೆ. ಗಾಡಿ ನಿಲ್ಲಿಸಿ ಹಿಂದೆ ನೋಡಿದಾಗ ಆಕೆ ಪಟಪಟನೇ ನಡೆದುಕೊಂಡು ಹೋಗುತ್ತ ಮಾಯವಾಗಿಬಿಟ್ಟಿದ್ದಳು. ನನಗೆ ಕಂಡಷ್ಟು ಹಾದಿಯಲ್ಲಿದ್ದದ್ದು ಕೇವಲ ಮೂರೇ ಜನರಿದ್ದರೂ ಆಕೆ ದೂರದೂರ ಹೋಗಿಬಿಟ್ಟಿದ್ದಳು. ನಾನು, ಆಕೆ ಮತ್ತು ಅವಳನ್ನು ಆ ಸ್ಥಿತಿಯಲ್ಲಿ ನೋಡಿಯೂ ಆ ದೃಶ್ಯ ಏನೂ ಅಲ್ಲವೆಂಬಂತೆ ಕತ್ತಲಲ್ಲಿ ದೇವರಿಗೆ ಪ್ರದಕ್ಷಿಣೆ ಹಾಕುವುದರಲ್ಲೇ ನಿರತನಾಗಿದ್ದ ಸುಮಾರು ಮೂವತ್ತು ವರ್ಷದ ಮೂರ್ಖ. ಯಾಕೋ ಅವನನ್ನು ಸಹಾಯ ಕೇಳುವುದು ನನ್ನ ಮೂರ್ಖತೆ ಅಂದುಕೊಂಡು ಮನೆಗೆ ಬಂದವಳೇ ಶ್ರೀದೇವಿ ಅಕ್ಕನಿಗೆ ಫೋನಾಯಿಸಿ ಆಕೆಗೆ ಸಹಾಯ ಮಾಡುವ ಬಗೆ ಹೇಗೆಂದು ವಿಚಾರಿಸಿದೆ. ಆಮೇಲೆ ಅವರು ಹೇಳಿದಂತೆ ಮಾಧ್ಯಮ ಮಿತ್ರರೊಬ್ಬರಿಗೆ ಫೋನಾಯಿಸಿ, ಹಾಗಾಗಿ ಇದ್ದ ವಿಷಯವನ್ನೆಲ್ಲ ವಿವರಿಸಿ ‘ದಯವಿಟ್ಟು ಆಕೆಯನ್ನು ಹುಡುಕಲು ಸಹಾಯಮಾಡಿ’ ಎಂದು ಕೇಳಿಕೊಂಡಿದ್ದೆ.  ಅವರು ಕ್ರೈಂ ರಿಪೋರ್ಟರ್ ಆಗಿದ್ದರಿಂದ ಪೋಲೀಸರನ್ನು ಸುಲಭವಾಗಿ ಸಂಪರ್ಕಿಸಿ ಆಕೆಯನ್ನು ಆದಷ್ಟು ಬೇಗ ಹುಡುಕಬಹುದಲ್ಲ ಎಂಬುದು ನನ್ನ ನಂಬುಗೆಯಾಗಿತ್ತು. ಹಾಡುಹಗಲೆ ಹೆಣ್ಣುಮಕ್ಕಳ ಮೇಲೆ ಹೇಗೆಲ್ಲ ದಾಳಿ ನಡೆಯುತ್ತಿರುವಾಗ, ರಾತ್ರಿ ಹಾಗೆ ದಿಕ್ಕಿಲ್ಲದ ಹೆಣ್ಣೊಬ್ಬಳು ಅರೆಬೆತ್ತಲೆಯಾಗಿ ಓಡಾಡುವಾಗ ಸಿಕ್ಕರೆ ಬಿಟ್ಟಾರೆಯೇ ಪಿಶಾಚಿಗಳು? ಅದನ್ನು ನೆನೆದೇ ಮನಸ್ಸು ಇನ್ನಿಲ್ಲದಂತೆ ಹೊಯ್ದಾಡುತ್ತಿತ್ತು. ಆ ಮಾಧ್ಯಮ ಮಿತ್ರರು ಇಲ್ಲಿನ ಪೋಲೀಸರಿಗೆ ವಿಷಯ ಮುಟ್ಟಿಸಿದ್ದರಾದರೂ  ಮನಸ್ಸು ತಡೆಯದೇ ಅಮ್ಮನಿಗೆ ಫೋನಾಯಿಸಿ, ವಿಷಯ ತಿಳಿಸಿ, ಹಾಗೆ ಆಕೆಯನ್ನು ಆ ಸ್ಥಿತಿಯಲ್ಲಿ ಕಂಡೂ ಧೈರ್ಯ ಸಾಲದೇ ಮನೆಗೆ ಬಂದು ಚಿಂತಿಸುತ್ತಿರುವುದಕ್ಕೆ ನನ್ನನ್ನು ನಾನು ಹಳಿದುಕೊಂಡೆ. ತಕ್ಷಣ ಅಮ್ಮ ಅಕ್ಕ ಮತ್ತು ತಮ್ಮನ ಕೈಯಲ್ಲಿ ಆಕೆಗೆ ಉಡಲೊಂದು ಬಟ್ಟೆ ಮತ್ತು ಬೆಡ್ ಶೀಟನ್ನು ಕೊಟ್ಟು, ಆಕೆಯನ್ನು ಹುಡುಕಲು ಕಳಿಸಿದ್ದರು. ಅವರಿಬ್ಬರಂತೂ ಸುಮಾರು ಹೊತ್ತು ಇಡೀ ನಮ್ಮ ಏರಿಯಾವನ್ನು ಜಾಲಾಡಿದರೂ ಆಕೆ ಸಿಗಲಿಲ್ಲವಾದ್ದರಿಂದ, ಬೇಸರಿಕೆಯಲ್ಲೇ ಮನೆಗೆ ವಾಪಾಸ್ಸಾಗಿದ್ದರು. ರಾತ್ರಿ 12: 30ತ್ತಾದರೂ ಅವಳ ಸುದ್ದಿ ಸಿಕ್ಕಿರಲಿಲ್ಲ. ಹಳಹಳಿಸುತ್ತ ಆ ರಾತ್ರಿ ಕಳೆದಿದ್ದೆ.

ಆದರೆ ಬೆಳ್ಳಂಬೆಳ್ಳಗ್ಗೆ ಅಮ್ಮನಿಂದ ಫೋನು ಬಂದಿತ್ತು. ‘ಸಿಕ್ಕಾಳ ಅಕಿ. ಯಾರೋ ನೈಟಿ, ದುಪ್ಪಟ್ಟಾ ಕೊಟ್ಟಾರ. ಬ್ರೆಡ್ಡು ಪೌಂಡು ಹಿಡದು ತಿನ್ನಾಕತ್ತಿದ್ಲು’ ಅಂದಾಗ ನಿಜಕ್ಕೂ ಸಮಾಧಾನವಾಗಿತ್ತು. ಮನೆಯನ್ನೋದು ಇಲ್ಲದಿದ್ದರೆ ಅದೆನೇನೆಲ್ಲ ಅನುಭವಿಸಬೇಕು ಈ ಜೀವ ಅನ್ನಿಸಿತ್ತು.

***********

“People usually are the happiest at home..” ಇದು ವಿಲಿಯಮ್ ಶೇಕ್ಸ್ ಪಿಯರ್ ನ ಮಾತು. ಮತ್ತು ಬಹುತೇಕ ಮನುಷ್ಯರ ಅಭಿಪ್ರಾಯವೂ ಕೂಡ ಹೌದು. ನಾವು ಎಷ್ಟೆಲ್ಲ ತಿರುಗಾಡಿದರೂ, ಯಾವೆಲ್ಲ ಸಮುದ್ರಗಳನ್ನು ದಾಟಿ ಯಾವ್ಯಾವುದೋ ದೇಶಗಳನ್ನು ಸುತ್ತಿದರೂ ವಾಪಾಸ್ಸು ಬರುವುದು ಮನೆಯೆಂಬ ತಾಣಕ್ಕೆಯೆ ಹೊರತು ಮತ್ತೆಲ್ಲೂ ಅಲ್ಲ. ಹೊರಗೆ ಹೋದಾಗಲೋ ಅಥವಾ ನೆಂಟರ ಮನೆಯಲ್ಲಿ ಅಗದೀ ಐಶಾರಾಮಿ ವ್ಯಸ್ಥೆಯಲ್ಲಿ ಮಿಂದೇಳುತ್ತೇವೆಂದಾದರೂ, ಅದು ಕೇವಲ ಕೆಲ ದಿನಗಳಿಗೆ ಮಾತ್ರ ಸುಖ ಅನ್ನಿಸುತ್ತೆ; ಆಮೇಲೆ ಮನಸ್ಸು ಮನೆಯೆಡೆಗೆ ನಮ್ಮನ್ನು ಜಗ್ಗುತ್ತಿರುತ್ತದೆ. ಒಂದು ದಿನ ಬಿಟ್ಟು ಎರಡನೇ ದಿನವೂ ಸತತವಾಗಿ ಹೋಟೇಲ್ ಊಟ ಮಾಡಿದರೆ ವಾಕರಿಕೆ ಬರುವುದಿಲ್ಲವೇ. ಹಾಗೇ. ಅದರಲ್ಲೂ ಕೆಲವರಿಗಂತೂ ತಮ್ಮ ಮನೆ ಎಂಥದ್ದೇ ಆಗಿರಲಿ, ತಮ್ಮ ಮನೆ ಬಿಟ್ಟು ಹೊರಗೆ ಸ್ವರ್ಗದಲ್ಲಿದ್ದರೂ ನಿದ್ರೆ ಹತ್ತುವುದೇ ಇಲ್ಲ. ಅದು ಸ್ವಂತ ಮನೆಯಾದರೂ ಸರಿ ಬಾಡಿಗೆಮನೆಯಾದರೂ ಸರಿ. ಮನೆ ಅಂದ್ರೆ ಮನದ ತಂಗುದಾಣ. ಬಾಡಿಗೆದಾರರು ಒಂದು ಮನೆಯನ್ನು ಬಿಟ್ಟು ಮತ್ತೊಂದಕ್ಕೆ ಹೋದಾಗಲೂ ಹಳೆಯ ಮನೆಯ ಮೇಲೆ ಪ್ರೀತಿ ಕುಂದುವುದಿಲ್ಲ. ಹಳೆಯ ಮನೆಯ ಹತ್ತಿರವೆಲ್ಲಾದರೂ ಹೋಗುವ ಪ್ರಸಂಗ ಬಂದರೆ, ತಪ್ಪದೆಯೇ ಆ ಮನೆಯ ಮುಂದೆ ಒಂದು ಬಾರಿ ಹಾದು ಬರಬೇಕೆಂದು ಮನಸ್ಸು ಒತ್ತಾಯಿಸುತ್ತಲೇ ಇರುತ್ತೆ. ಬಾಡಿಗೆದಾರರಿಗಂತಲೂ ಒಂದೊಂದು ಮನೆಯಲ್ಲಿ ಒಂದೊಂದಷ್ಟು ನೆನಪುಗಳನ್ನು ಬಿಟ್ಟುಬರುವ ಸ್ಥಿತಿ. ಮಗು ದೊಡ್ಡದಾಗುತ್ತಿದೆಯೆಂದು ಪುಟ್ಟ ಮನೆಯನ್ನು ಬಿಟ್ಟು ದೊಡ್ಡ ಮನೆಯನ್ನು ಸೇರುವ ಬಗ್ಗೆ ಯೋಚಿಸುವಾಗ, ಆ ಮಗು ಸಣ್ಣದಿದ್ದಾಗ ಗೀಚಿದ ಗೋಡೆಯ ಮೇಲಿನ ಅಸಂಖ್ಯಾತ ಗೀಟುಗಳು ‘ನಮ್ಮನ್ನು ಇಲ್ಲೇ ಬಿಟ್ಟು ಹೋಗ್ತೀರಾ’ ಅಂತ ಕೇಳದೇ ಇರೋಲ್ಲ. ಒಟ್ಟಿಗೆ ಒಯ್ಯಲಾರದಂಥ ಬಂಧಗಳು ಅವು.

ಈಗ ಎರಡು ವರ್ಷದ ಹಿಂದಿನ ಕಥೆ. ಆಗಿನ್ನೂ ನನ್ನ ಮದುವೆಯಾಗಿರಲಿಲ್ಲ. ಮೊದಲನೆಯ ಫ್ಲೋರ್ ನಲ್ಲಿದ್ದ ಅಮ್ಮನ ಮನೆಯ ಮುಂದೆ ಚಂದದ ಪ್ಯಾಸೇಜ್ ಇದೆ. ಅಮ್ಮನ ಹೂಕುಂಡಗಳು ಅಲ್ಲಿನ ವಾತಾವರಣವನ್ನು ಇನ್ನಷ್ಟು ಅಪ್ಯಾಯಮಾನವಾಗುವಂತೆ ಮಾಡಿವೆ. ಅಲ್ಲೆಲ್ಲ ಗಾಳಿ ಚೆನ್ನಾಗಿ ಬೀಸುವುದರಿಂದ ಖಾಯಂ ಆಗಿ ಅಲ್ಲಿ ಸ್ಥಾನ ಪಡೆದಿರುವ ಒಂದು ಖುರ್ಚಿಯ ಮೇಲೆ ಕುಳಿತು ಗಂಟಗಟ್ಟಲೆ ಓದುವುದು ಅಥವಾ ಹಾಡು ಕೇಳುವುದೆಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಮುಂಜಾನೆ ‘ಚಾ’ದ ಮಗ್ಗು ಹಿಡಿದು, ಇಷ್ಟದ ಹಾಡು ಕೇಳುತ್ತಾ ಅಲ್ಲಿ ಬೀಳುವ ಸೂರ್ಯನ ಎಳೆ ಬಿಸಿಲಿಗೆ ಮುಖವೊಡ್ಡಿ ಕೂರುವುದೆಂದರೆ ಇಂದಿಗೂ ನನಗೆ ಇಷ್ಟದ ಸಂಗತಿಯೇ. ಹಾಗೆಯೆ ಆ ಜಾಗವನ್ನು ಕೆಲಸವಿಲ್ಲದ ಬಹುತೇಕ ಹೊತ್ತು ನಾನೇ ಆ ಜಾಗವನ್ನು ಆಕ್ರಮಿಸುತ್ತಿದ್ದೆ. ಆದರೆ ಆ ಮನೆಗೆ ಹೋಗಿ, ಒಂದೂವರೆ ವರ್ಷದ ಬಳಿಕ ನಮ್ಮ ಮನೆಯ ಮುಂದಿದ್ದ ಖಾಲೀ ಜಾಗದಲ್ಲಿ ಮನೆಯೊಂದರ ಅಸ್ತಿತ್ವದ ಶುರುವಾತಾಗಿತ್ತು. ತೀರಾ ರಸ್ತೆಯ ಮೇಲೆಯೇ ಜಲ್ಲಿಕಲ್ಲಿ ಸುರಿಯುವುದು, ಗಾರೆ ಕಲಸುವುದು, ಅದೂ ಇದೂ ಅಂತ ಶಬ್ದವೋ ಶಬ್ದ. ಜೊತೆಗೆ ಅವರು ಸುರಿವ, ಮರಳು, ಜಲ್ಲಿಕಲ್ಲು, ಸಿಮೆಂಟೆಲ್ಲ ಮೊದಲೇ ಚಿಕ್ಕದಾಗಿದ್ದ ರಸ್ತೆಯ ಅರ್ಧ ಭಾಗಕ್ಕೂ ತನ್ನ ಇರುವನ್ನು ವಿಸ್ತರಿಸಿಕೊಂಡು ಓಡಾಡುವವರಿಗೆಲ್ಲ ಕಿರಿಕಿರಿಯೂ ಮಾಡಿತ್ತು. ತೀರಾ ಮನೆಯ ಮುಂದಿನ ಜಾಗದಲ್ಲೇ ಹೊಸ ಮನೆಯ ಕಟ್ಟುವಿಕೆಯಾಗುತ್ತಿದ್ದಾದ್ದರಿಂದ ಸದ್ದು-ಗದ್ದಲದ ಜೊತೆಗೆ ಧೂಳೂ ಸಹ ತನ್ನ ಪಾಡಿಗೆ ತಾನು ನಮ್ಮನೆಯನ್ನು ಹೊಕ್ಕಲಾರಂಭಿಸಿತ್ತು. ಪರಿಣಾಮ ಅಲ್ಲಿ ಹೊರಗೆ ಕೂರುವುದಿರಲಿ, ಮನೆಯ ಬಾಗಿಲು ತೆರೆಯುವಂತಿರಲಿಲ್ಲ. ಮತ್ತೂ ಕೆಲವೊಮ್ಮೆ ಅದರ ಸದ್ದಿಗೆ, ನಮ್ಮನಮ್ಮ ಮಾತು ನಮಗೇ ಕೇಳದಂತಾಗಿ ಮನೆಯಲ್ಲಿಯೇ ಜೋರುಜೋರಾಗಿ ಮಾತಾಡುವ ಪರಿಸ್ಥಿತಿ ಒದಗಿ ಬಂದಿತ್ತು.

ನಾವು ಎಷ್ಟೆಲ್ಲ ತಿರುಗಾಡಿದರೂ, ಯಾವೆಲ್ಲ ಸಮುದ್ರಗಳನ್ನು ದಾಟಿ ಯಾವ್ಯಾವುದೋ ದೇಶಗಳನ್ನು ಸುತ್ತಿದರೂ ವಾಪಾಸ್ಸು ಬರುವುದು ಮನೆಯೆಂಬ ತಾಣಕ್ಕೆಯೆ ಹೊರತು ಮತ್ತೆಲ್ಲೂ ಅಲ್ಲ. ಹೊರಗೆ ಹೋದಾಗಲೋ ಅಥವಾ ನೆಂಟರ ಮನೆಯಲ್ಲಿ ಅಗದೀ ಐಶಾರಾಮಿ ವ್ಯಸ್ಥೆಯಲ್ಲಿ ಮಿಂದೇಳುತ್ತೇವೆಂದಾದರೂ, ಅದು ಕೇವಲ ಕೆಲ ದಿನಗಳಿಗೆ ಮಾತ್ರ ಸುಖ ಅನ್ನಿಸುತ್ತೆ; ಆಮೇಲೆ ಮನಸ್ಸು ಮನೆಯೆಡೆಗೆ ನಮ್ಮನ್ನು ಜಗ್ಗುತ್ತಿರುತ್ತದೆ.

ಇಂತಿಪ್ಪ ಈ ಮನೆಯನ್ನು ಒಬ್ಬ ವ್ಯಕ್ತಿ ತನ್ನ ಮಕ್ಕಳಿಗಾಗಿ ಭರ್ಜರಿಯಾಗಿಯೇ ಕಟ್ಟಿಸುತ್ತಿದ್ದರು. ಸುತ್ತೆಲ್ಲ ಹಸಿರು ಗುಡ್ಡಗಳಿರುವವೇನೋ ಎಂಬಂತೆ, ದೊಡ್ಡ ದೊಡ್ಡ ಕಿಟಕಿಗಳನ್ನು ಇಡಿಸಿದ್ದನ್ನು ನೋಡಿ “ಅಬ್ಬಾ ಈ ರಸ್ತೆಯ ಧೂಳಂದ್ರೆ ಇವರಿಗೆ ಭಾರೀ ಇಷ್ಟವಿರಬೇಕು” ಅಂತ ಅನ್ನಿಸಿತ್ತು ನನಗೆ. ಮೂರು ಅಂತಸ್ತಿನ ಕೆಲಸ ಮುಗಿದು ನಾಲ್ಕನೇ ಅಂತಸ್ತನ್ನು ಕಟ್ಟುವ ತಯ್ಯಾರಿ ನಡೆದಿತ್ತಾದರೂ ಮೇಲುನೋಟಕ್ಕೆ  ಮನೆಯ ಬಹುತೇಕ ಎಲ್ಲ ಕೆಲಸಗಳೂ ಮುಕ್ತಾಯದ ಹಂತಕ್ಕೆ ಬಂದಂತೆ ಕಾಣುತ್ತಿತ್ತು.  ಕೇವಲ ಏಳೆಂಟು ತಿಂಗಳಲ್ಲಿ ಧಿಗ್ಗನೆ ಎದ್ದ ಆ ಭಾರೀ ಮನೆ ನೋಡಿದ ಆ ಬೀದಿಯ ಜನರೆಲ್ಲ ‘ಕಾಸಿದ್ರೆ ಕೈಲಾಸ’ ಅಂತ ಅಂದುಕೊಂಡಿರುತ್ತಾರೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ರೆ ಅದೊಂದು ಬೆಳ್ಳಂಬೆಳಗ್ಗೆ ಬಂದ ಜೆಸಿಬಿಯೊಂದು ಆ ಮನೆಯನ್ನು ಅಮಾನುಷವಾಗಿ ಕೆಡವಲಾರಂಭಿಸಿದ್ದನ್ನು ನೋಡಿ ನಾವೆಲ್ಲರೂ ಅಕ್ಷರಶಃ ಅವಾಕ್ಕಾಗಿದ್ದೆವು. ಹಾಗೆ ಜೆಸಿಬಿ ಆ ಮನೆಯನ್ನು ಬೀಳಿಸುತ್ತಿದ್ದರೆ, ನಮ್ಮ ರಸ್ತೆಯ ಜನರ ಜೊತೆ ಇಷ್ಟು ದಿನ ಅದಕ್ಕೆ ಸಿಮೆಂಟು ಇಟ್ಟಿಗೆ ಹೊತ್ತ ಕೂಲಿ ಕಾರ್ಮಿಕರೂ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು. ಏಳೆಂಟು ತಿಂಗಳಲ್ಲಿ ಕಟ್ಟಿದ ಮನೆಯನ್ನು ಎರಡು ಮೂರು ವಾರಗಳ ಅವಧಿಯಲ್ಲಿ ಕೆಡವಿ, ಪಾಯವನ್ನು ಕಿತ್ತೊಗೆಯುವುದರೊಂದಿಗೆ, ಅಲ್ಲೊಂದು ಮನೆ ಹುಟ್ಟುತಲಿತ್ತು ಅನ್ನುವ ಕುರುಹನ್ನೂ ಅಳಿಸಿಹಾಕಲಾಗಿತ್ತು.

ಮನೆ ಕಟ್ಟುವುದೆಂದರೆ ಸುಲಭದ ಮಾತಲ್ಲ. ಅದರಲ್ಲೂ ಬೆಂಗಳೂರಿನಲ್ಲಿ ಒಂದು ಸ್ವಂತ ಮನೆಯನ್ನು ಕಾಣಬೇಕೆಂದರೆ ಅದೆಷ್ಟು ಜನ ಹೇಗೆಲ್ಲ ಹೆಣಗಾಡುತ್ತಾರೆ. ಮನೆ ಕಟ್ಟಲು ಸಾಲ ಮಾಡಿ, ತಮ್ಮ ಮನೆಗೆ ತಾವೇ ಬಾಡಿಗೆ ಕಟ್ಟುವಂತೆ, ಈ ಎಂ ಐ ತುಂಬುವುದರಲ್ಲಿ ಹೈರಾಣಾಗಿಬಿಡುತ್ತಾರೆ. ಅಂಥಾದ್ದರಲ್ಲಿ ಕಟ್ಟಿದ ಮನೆಯೊಂದು ಹಾಗೆ ಕಣ್ಣಮುಂದೆ ತನ್ನ ಒಂದೊಂದೇ ಅಂಗಗಳನ್ನು ಧ್ವಂಸಗೊಳಿಸಿಕೊಂಡು ನಿರ್ನಾಮವಾದದ್ದು ನಮಗೂ ಬೇಸರದ ವಿಷಯವಾಗಿತ್ತು. ಆದರೆ ಹಾಗೆ ಇಷ್ಟುದ್ದ ಕಟ್ಟಿದ ಮನೆಯನ್ನು ಯಾವ ಕಾರಣಕ್ಕಾಗಿ ಬೀಳಿಸುತ್ತಿದ್ದಾರೆಂದು ಕಾರಣ ಗೊತ್ತಾಗದೇ ಬಹುಶಃ ಆಸ್ತಿ ವಿವಾದವೋ ಅಥವಾ ಜಾಗದ ಸಮಸ್ಯೆಯೋ ಇರಬೇಕು ಅಂತ ನಾವೆಲ್ಲ ಅಂದುಕೊಂಡಿದ್ದೆವು. ಆದರೆ ನಮ್ಮ ಊಹೆ ನಿಜಕ್ಕೂ ಸುಳ್ಳಾಗಿತ್ತು. ಕಾರಣವೇನೆಂದರೆ ಆ ಮನೆಯನ್ನು ಕಟ್ಟಿಸಿದ ವ್ಯಕ್ತಿಯ ಮಕ್ಕಳಿಗೆ ಆ ಮನೆ ಇಷ್ಟವಾಗಲಿಲ್ಲವಂತೆ. ಆ ಮನೆ ಅಂದರೆ ಆ ಮನೆಯ ಅಂದಚಂದವಾಗಿ, ಅದರ ಗಾತ್ರ-ಗೋತ್ರವಾಗಲೀ ಯಾವುದೂ ಅಲ್ಲ. ಬದಲಿಗೆ ಇಬ್ಬರೂ ಮಕ್ಕಳಿಗೆ ಸೇರಿ ಒಂದೇ ಮನೆ ಕಟ್ಟುತ್ತಿದ್ದುದ್ದು ಅವರಿಗೆ ಎಳ್ಳಷ್ಟೂ ಇಷ್ಟವಾಗ ವಿಷಯವಾಗಿತ್ತು. ಆದ ಕಾರಣ ಅಪ್ಪ ಕಟ್ಟಿಸಿದ್ದ ಮನೆಯನ್ನು ಸ್ವಲ್ಪವೂ ಕನಿಕರವಿಲ್ಲದೇ ಕೆಡವಿಸಿದ್ದರು!

ಮನೆ ಕಟ್ಟಲು ಶುರುವಾದಾಗಿನಿಂದ ಬಹುತೇಕ ಪ್ರತಿದಿನವೂ ಬಂದು ಅದರ ಪ್ರಗತಿಯನ್ನು ನೋಡುತ್ತಿದ್ದ ಮನೆ ಕಟ್ಟಿಸುತ್ತಿದ್ದ ಮನುಷ್ಯ ಆಮೇಲೆ ಆ ಜಾಗದಲ್ಲಿ ಕಾಣಿಸಲೇ ಇಲ್ಲ. ಈಗ ಅದೇ ಜಾಗದಲ್ಲಿ ಅವರ ಮಕ್ಕಳು ಎರಡು ಪ್ರತ್ಯೇಕ ಮನೆಗಳನ್ನು ಕಟ್ಟಿಸುತ್ತಿದ್ದಾರೆ. ಒಂದೊಂದೂ ನಾ ಮುಂದು ತಾ ಮುಂದು ಎನ್ನುವಂತೆ ವೈಯಾರದಲ್ಲಿ, ಸ್ಪರ್ಧೆಗೆ ಬಿದ್ದವರಂತೆ ಮೇಲಮೇಲಕ್ಕೇರುತ್ತಿವೆ. ಅದನ್ನು ನೋಡಿದಾಗಲೆಲ್ಲ ಅಪ್ಪನ ಆಸೆಯ ಸಮಾಧಿಯ ಮೇಲೆ ಕಟ್ಟುತ್ತಿರುವ ಮಹಲುಗಳೆಂದೇ ನನಗೆ ಅನ್ನಿಸುತ್ತೆ. ಮನೆಯಿಲ್ಲದೇ ಬೀದಿಬೀದಿ ಅಲೆದು, ರಾತ್ರಿ ಬಸ್ ಸ್ಟ್ಯಾಂಡಿನಲ್ಲೋ, ಮೆಟ್ರೋ ಕಂಬದ ನೆರಳಿನಲ್ಲೋ, ಫುಟ್ಪಾತಿನಲ್ಲೋ ಮಲಗೆದ್ದು ಜೀವನ ನಡೆಸುವವರು ಒಂದೆಡೆಯಾದರೆ, ವಾಸ್ತುವಿನ ಕಾರಣಕ್ಕೋ, ಅಯ್ಯೋ ಮನೆಯ ಶೈಲಿ ಹಳೆಯದಾಯ್ತು ಎಂದೋ ಇದ್ದದ್ದನ್ನು ಕೆಡವಿ, ಹೊಸ ಮನೆ ಕಟ್ಟುವವರು ಮತ್ತೊಂದೆಡೆ!

(ಮುಖಪುಟ ಚಿತ್ರ: ಅಬ್ದುಲ್ ರಶೀದ್)