ಡರ್ಬನ್ ನಿಂದ ಹೊರಟ ಆ ಹಡಗು, ನೋಡ ನೋಡುತ್ತಿದ್ದಂತೆ ಲಟ್ಟಣಿಗೆ ಮುರಿದು ಹಾಕುವಂತೆ ಅಷ್ಟು ದೊಡ್ಡ ಹಡಗು ಇಬ್ಭಾಗವಾಯಿತು. ಬೃಹತ್ ಗಾತ್ರದ ಅಲೆಯೊಂದು ಎದ್ದು ನೀರಿಗೆ ಧುಮುಕಿದ ಹಲವರನ್ನೂ ಎತ್ತಿ ದೂರ ದೂರಕ್ಕೆ ಎಸೆಯಿತು. ಬಹುಶಃ ದೂರವೆಂದರೆ ಮುಳುಗುತ್ತಿರುವ ಹಡಗಿನ ದೀಪ ಮಂಜಾಗಿ ಕಾಣಿಸುವಷ್ಟು. ದೂರದಲ್ಲಿ ಹಡಗಿನ ದೀಪ ಗಿರ ಗಿರನೆ ಸುತ್ತುವುದು ನೋಡಿದಾಗ ಇದಿನಬ್ಬನಿಗೆ ಪರಿಸ್ಥಿತಿಯ ಅರಿವಾಯಿತು. ಹಿಂದಿರುಗಿ ನೋಡಿದರೆ ಅಷ್ಟು ದೊಡ್ಡ ಹಡಗನ್ನು ಹೊಟ್ಟೆ ಬಾಕ ಸಮುದ್ರ ತಿಂದು ಮುಗಿಸಿದೆ. ಕನಸುಗಳು ನುಚ್ಚು ನೂರಾಗಿವೆ. -ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರುಕಾದಂಬರಿಯ ಹನ್ನೊಂದನೇ ಕಂತು

” ಯಾರೂ ಹತ್ತಿರ ಹೋಗ ಬೇಡಿ, ಅದು ಜೋಡಿ ಹುಡುಕಲು ಬಂದಿದೆ, ಹಿಂದೆ ಹೋಗುತ್ತದೆ ”
ಎಂದು ಇದಿನಬ್ಬ ಆಶ್ವಾಸನೆ ನೀಡಿದ. ಬಂದ ಹಾವು ಅಲ್ಪ ಹೊತ್ತು ಅಲ್ಲೇ ಅಲೆದಾಡಿ ಮತ್ತೆ ಕಾಡ ದಾರಿ ಹಿಡಿಯಿತು. ಅಲ್ಲಿಂದ ಹೋದ ಹಾವು ಮತ್ಯಾರ ಕಣ್ಣಿಗೂ ಬೀಳಲೇ ಇಲ್ಲ. ಈ ಘಟನೆ ನಡೆದ ಮೇಲೆ ಇದಿನಬ್ಬನಿಗೆ ರಾಜ ಗೌರವ! ಈ ನಡುವೆ ಕೆಲಸದ ಕರಾರು ಮುಗಿದ ಕೆಲವರು ಮನೆಗೆ ಹೋಗದೆ ಅಲ್ಲೇ ನಿಂತಿದ್ದರು. ಮನೆ ಎಲ್ಲಿ ಎಂದು ಅವರಿಗೂ ಗೊತ್ತಿರಲಿಲ್ಲ. ತಮ್ಮ ಊರು ಬಿಡಿ, ದೇಶ ಯಾವುದೆಂದೇ ಅವರಲ್ಲಿ ಹೆಚ್ಚಿನವರಿಗೆ ತಿಳಿದಿರಲಿಲ್ಲ.

ಅವರಿಂದ ಸಿಕ್ಕ ಅಲ್ಪ ಸ್ವಲ್ಪ ಮಾಹಿತಿಯ ಪ್ರಕಾರ ಒಂದು ಅಂದಾಜಿನ ವಿಳಾಸದ ಮೇಲೆ ಅಲ್ಲಿನ ಅಧಿಕಾರಿಗಳು ಪತ್ರ ಬರೆಯುತ್ತಿದ್ದರು. ಅಪರೂಪವಾಗಿ ಕೆಲವೊಂದು ಪತ್ರಗಳು ಸರಿಯಾದ ವಿಳಾಸಕ್ಕೆ ತಲುಪಿ ಉತ್ತರವೂ ಬರುತ್ತಿತ್ತು. ಉತ್ತರ ಬಂದ ವಿಳಾಸಕ್ಕೆ ಹೋಗುವ ಹಡಗಿನಲ್ಲಿ ಆ ಕೂಲಿಯಾಳುಗಳನ್ನು ಹತ್ತಿಸಿ ಬಿಡುತ್ತಿದ್ದರು. ಕೆಲವೊಂದು ಪತ್ರಗಳು ವಿಳಾಸವಿಲ್ಲದೆ ತಿರುಗಿ ಬರುತ್ತಿದ್ದವು. ಪತ್ರಕ್ಕೆ ಸರಿಯಾದ ವಿಳಾಸ ಬೇಕು. ತಲುಪಬೇಕಾದವರ ಹೆಸರು ಊರು ಬೇಕೇ ಬೇಕು. ಇದಿನಬ್ಬ ಯೋಚಿಸುತ್ತ ಕುಳಿತ. ಎಷ್ಟು ನೆನಪಿಸಿದರೂ ಇದಿನಬ್ಬನಿಗೆ ತನ್ನ ತಂದೆಯ ಹೆಸರು ಏನೆಂದು ನೆನಪಾಗುತ್ತಿರಲಿಲ್ಲ. ಮನೆಯಲ್ಲಿ ತಂದೆಯನ್ನು ಅಬ್ಬ ಎಂದೇ ಕರೆಯುತ್ತಿದ್ದದ್ದು ತಾನೆ. ಉಮ್ಮ ( ತಾಯಿ ), ಮೂತಮ್ಮ ( ದೊಡ್ಡಮ್ಮ ), ಮೂತಬ್ಬ ( ದೊಡ್ಡಪ್ಪ ), ಬೋಬ ( ಅಜ್ಜ ) ಇಂತಹುದೇ ಸಂಬಂಧ ವಾಚಿ ಶಬ್ದಗಳಲ್ಲದೆ ಅವರ ನಿಜವಾದ ಹೆಸರೇನೆಂದು ಸಣ್ಣವನಿದ್ದ ಇದಿನಬ್ಬನಿಗೆ ಹೇಗೆ ತಾನೆ ಗೊತ್ತಾಗುವುದು. ಸಾಲದ್ದಕ್ಕೆ ಮನೆಯಲ್ಲಿ ಮಾತಾಡುತ್ತಿದ್ದ ಭಾಷೆಯೂ ಊರಿನ ಭಾಷೆಯೂ ಮರೆತೇ ಹೋಗಿತ್ತು. ಊರು ಬಿಟ್ಟು ಹದಿನೈದು ವರ್ಷಗಳೇ ಕಳೆದಿದ್ದವು. ಸರಿಯಾಗಿ ಬುದ್ದಿ ಬಂದು ಪ್ರೌಢಾವಸ್ಥೆ ಗೆ ಬರುವಾಗ ತಮಿಳುನಾಡಿನ ಯಾವುದೊ ಹಳ್ಳಿಯಲ್ಲಿದ್ದ ಇದಿನಬ್ಬ ಸಿಂಹಳ ಭಾಷೆಯನ್ನೂ ಕಲಿತಿದ್ದ. ತಕ್ಕ ಮಟ್ಟಿಗೆ ಬ್ರಿಟಿಷ್ ಇಂಗ್ಲೀಷೂ ಬರುತ್ತಿತ್ತು. ಆಫ್ರಿಕಾದ ಬುಡಕಟ್ಟಿನ ಭಾಷೆಯಾದರೂ ಮಾತಾಡುತ್ತಿದ್ದ. ಹುಟ್ಟಿದ ಊರಿನ ಹೆತ್ತವರ ಭಾಷೆ ಮರೆತಿದ್ದ. ಯಾವ ಹೆಸರಿಗೆ ಪತ್ರ ಬರೆಯುವುದು. ಏನೆಂದು ಬರೆಯುವುದು. ಇಂಗ್ಲಿಷ್ ಓದುವವರು ಅಲ್ಲಿ ಯಾರಾದರೂ ಇದ್ದಾರೆಯೇ? ಇತ್ಯಾದಿ ಯೋಚನೆಗಳು ಇದಿನಬ್ಬನ ಮನಸ್ಸನ್ನು ಕೊರೆಯುತ್ತಿತ್ತು.

ಒಂದು ದಿನ ಹೀಗೆಯೇ ಯೋಚಿಸುತ್ತಿರಬೇಕಾದರೆ ಆಕಸ್ಮಿಕವಾಗಿ ತನ್ನ ಊರು ಅಜಿಲಮೊಗರಿನ ಮಸೀದಿಯ ನೆನಪಾಯಿತು. ಬಾಬಾ ಫಕ್ರುದ್ದೀನ್ ಎಂಬ ಸೂಫಿ ಸಂತರ ಹೆಸರಿನ ಮಸೀದಿ ಮತ್ತು ದರ್ಗಾ ಅಜಿಲಮೊಗರುವಿನ ಪ್ರಸಿದ್ಧ ಐತಿಹಾಸಿಕ ಕೇಂದ್ರ. ಏಳುನೂರು ವರ್ಷಗಳ ಇತಿಹಾಸ ಇದೆ ಆ ಮಸೀದಿಗೆ. ಇದಿನಬ್ಬ ಕೊನೆಯ ಪ್ರಯತ್ನ ಎಂಬಂತೆ ಆ ವಿಳಾಸಕ್ಕೆ ಒಂದು ಪತ್ರ ಬರೆದ. ಅಧಿಕಾರಿಗಳು ಅದನ್ನು ಅಚ್ಚುಕಟ್ಟಾಗಿ ಮಡಚಿ ವಿಳಾಸ ಬರೆದು ಅಂಚೆಗೆ ಹಾಕಿದರು. ಪತ್ರ ಬರೆದ ಮೇಲೆ ಇದಿನಬ್ಬನಿಗೆ ನಿದ್ರೆ ಹತ್ತಲಿಲ್ಲ. ತಿಂಗಳು ಕಳೆದರೂ ಉತ್ತರ ಬರಲಿಲ್ಲ. ಕಾದು ಕಾದು ಕೊನೆಗೆ ಇದಿನಬ್ಬ ಆಸೆ ಬಿಟ್ಟ. ನಾಲ್ಕೈದು ತಿಂಗಳಲ್ಲಿ ಈಗಿನ ಕೆಲಸದ ವಾಯಿದೆ ಮುಗಿಯುವುದರಲ್ಲಿತ್ತು. ಕೈಗೆ ಸಿಕ್ಕ ವೇತನದ ಸಹಾಯದಿಂದ ಹೇಗಾದರೂ ಊರು ಸೇರಬೇಕೆಂಬ ಬಲವಾದ ಇಚ್ಚೆ ಇದೆ. ದಾರಿ ಅಸ್ಪಷ್ಟವಾಗಿತ್ತು. ಭಾರತಕ್ಕೆ ಹೋಗುವ ಹಡಗಿನಲ್ಲಿ ಹತ್ತಿದರೆ ಮುಂದೆ ಯಾರಾದರೂ ಸಿಕ್ಕಿಯಾರು, ಭಾರತದ ಯಾವುದೊ ಒಂದು ಹಳ್ಳಿಯಲ್ಲಿ ತನ್ನ ಮನೆ ಕುಟುಂಬ ಇದೆ. ಹೇಗಾದರೂ ಮಾಡಿ ನಾನು ನನ್ನ ಮನೆಗೆ ತಲುಪುವೆ ಎಂಬ ಅಚಲವಾದ ಆತ್ಮವಿಶ್ವಾಸ ಇದಿನಬ್ಬದಾಗಿತ್ತು.

ಆಫ್ರಿಕಾಗೆ ಬಂದು ಹತ್ತು ವರ್ಷಗಳು ಕಳೆದಿತ್ತು. ಅದೊಂದು ಚಳಿಗಾಲದ ಮುಂಜಾನೆ,ಕೂಲಿಯ ಕಬಂಧ ಬಾಹುವಿನಿಂದ ಬಿಡುಗಡೆಗೆ ದಿನ ಬಂತು. ಇದಿನಬ್ಬನ ಜತೆಗಿದ್ದವರೆಲ್ಲ ಮನೆಗೆ ಹೋಗುವ ತಯಾರಿಯಲ್ಲಿ ತೊಡಗಿದ್ದರು. ಆಗ ಸುಮ್ಮನೆ ಏನೂ ಹೊಳೆಯದೆ ಒಂದೆಡೆ ಕುಳಿತು ಇದಿನಬ್ಬ ಯೋಚಿಸುತ್ತಿದ್ದ. ಇದಿನಬ್ಬನನ್ನು ಗಮನಿಸಿದ ಸಿಬ್ಬಂದಿಯೊಬ್ಬ ಕರೆದು “ಯಾಕೆ ಖಿನ್ನನಾಗಿದ್ದೀಯಾ? ಊರಿಗೆ ಹೋಗಬೇಡವೇ?” ಎಂದು ಕೇಳಿದ. ಗಳಗಳನೆ ಜೋರಾಗಿ ಅಳುತ್ತಾ ಇದಿನಬ್ಬ ಊರು ಬಿಟ್ಟು ಬಂದದ್ದು , ದಾರಿ ಗೊತ್ತಿರದಿದ್ದುದು ಎಲ್ಲಾ ಹೇಳಿ ಬಿಟ್ಟ. ” ಏನೂ ಹೆದರಬೇಕಾಗಿಲ್ಲ, ನಿನ್ನನ್ನು ಭಾರತಕ್ಕೆ ತಲುಪಿಸುವ ಜವಬ್ಧಾರಿ ನನ್ನದು” ಸಿಬ್ಬಂದಿ ಆಶ್ವಾಸನೆಯಿತ್ತ. ಇದಿನಬ್ಬನಿಗೆ ಮತ್ತೆ ಆತ್ಮವಿಶ್ವಾಸ ಚಿಗುರಿತು. ಈ ಹೊತ್ತಿಗೆ ಇದಿನಬ್ಬನಿಗೆ ಆತನ ಮತ್ತೊಬ್ಬ ಸಿಬ್ಬಂದಿ ಜೊತೆ ಸಖ್ಯವಿತ್ತು. ಅವನು ಓದಲು ಬರೆಯಲು ಬರುವವನು. ಒಮ್ಮೆ ಟೆಲಿಗ್ರಾಂ ಒಂದು ಇದಿನಬ್ಬನ ಹೆಸರಲ್ಲಿ ಕೆಲಸ ಮಾಡುವಲ್ಲಿಗೆ ಬಂತು. ಟೆಲಿಗ್ರಾಂ ತಲುಪಿಸುವವನು ಹುಡುಕುತ್ತಾ ಅಧಿಕಾರಿ ಬಳಿ ಬಂದ. “ಇದಿನಬ್ಬ” ಅಂಥ ಹೆಸರು ಓದಿದವನೇ ” ಹೇಯ್… ಇದಿನಬ್ಬ ನಿನ್ನೂರಿಂದ ಟೆಲಿಗ್ರಾಂ ಬಂದಿದೆ, ಕಣೋ” ಎಂದು ಜೋರಾಗಿ ಕರೆದ. ಇದಿನಬ್ಬ ಓಡೋಡಿ ಬಂದ. ಟೆಲಿಗ್ರಾಂನಲ್ಲಿ ಇಂಗ್ಲಿಷಿನಲ್ಲಿ ಬರೆದಿತ್ತು. ಆತ ಟೆಲಿಗ್ರಾಂ ಓದತೊಡಗಿದ. ” ಒ…ಬೊರ್ಡೆ, ….ಓಬೋರ್ಡೆ ಮೂತಾಪ…ಮೂತಾಪ ಮರ್ಚಿ ಪೇಯಿ..” ಬ್ಯಾರಿ ಬಾಷೆಯನ್ನು ಅಪಭ್ರಂಶವಾಗಿ ಓದಿ ಮುಗಿಸಿದ ಅಧಿಕಾರಿ ಮೊಗದಲ್ಲಿ ನಗುವಿತ್ತು.

ಒಂದು ದಿನ ಹೀಗೆಯೇ ಯೋಚಿಸುತ್ತಿರಬೇಕಾದರೆ ಆಕಸ್ಮಿಕವಾಗಿ ತನ್ನ ಊರು ಅಜಿಲಮೊಗರಿನ ಮಸೀದಿಯ ನೆನಪಾಯಿತು. ಬಾಬಾ ಫಕ್ರುದ್ದೀನ್ ಎಂಬ ಸೂಫಿ ಸಂತರ ಹೆಸರಿನ ಮಸೀದಿ ಮತ್ತು ದರ್ಗಾ ಅಜಿಲಮೊಗರುವಿನ ಪ್ರಸಿದ್ಧ ಐತಿಹಾಸಿಕ ಕೇಂದ್ರ. ಏಳುನೂರು ವರ್ಷಗಳ ಇತಿಹಾಸ ಇದೆ ಆ ಮಸೀದಿಗೆ. ಇದಿನಬ್ಬ ಕೊನೆಯ ಪ್ರಯತ್ನ ಎಂಬಂತೆ ಆ ವಿಳಾಸಕ್ಕೆ ಒಂದು ಪತ್ರ ಬರೆದ.

ಇದಿನಬ್ಬನಿಗೆ ಒಂದೂ ಅರ್ಥವಾಗಲಿಲ್ಲ. ಇದಿನಬ್ಬನಿಗೆ ಆ ರಾತ್ರಿ ನಿದ್ರೆ ಹತ್ತಲಿಲ್ಲ. ಪತ್ರದಲ್ಲಿ ಬರೆದಿದ್ದನ್ನು ಉರು ಹೊಡೆಯುತ್ತಲೇ ಇದ್ದ. ಮರುದಿನ ಬೆಳಗ್ಗೆ ಡರ್ಬನ್ ನ ಬಂದರಿಗೆ ಭಾರತದಿಂದ ಹಡಗೊಂದು ಬಂದಿತ್ತು. ಪುಣ್ಯಕ್ಕೆ ” ಯೂಸುಫ್ ” ಅನ್ನುವ ಮಂಗಳೂರಿಗ ಅದರಲ್ಲಿದ್ದರು. ಅವರು ಮೂಲತಃ ಮಂಗಳೂರಿನವರು, ಆಫ್ರಿಕಾದಲ್ಲಿ ಮೀನಿನ ವ್ಯಾಪಾರ ಮಾಡುತ್ತಿದ್ದರು. ಈ ವಿಚಾರ ಇದಿನಬ್ಬನ ಜೊತೆ ಗೆಳೆತನ ಬೆಳೆಸಿದ್ದ ಸಿಬ್ಬಂದಿಯೊಬ್ಬನಿಗೆ ತಿಳಿಯಿತು. ಕೂಡಲೇ ಆತನನ್ನು ತನ್ನ ಮನೆಗೆ ಕರೆಸಿಕೊಂಡು ಇದಿನಬ್ಬನಿಗೆ ಬುಲಾವ್ ಕೊಟ್ಟ. ಓಡೋಡಿ ಬಂದ ಇದಿನಬ್ಬ ಯೂಸುಫರನ್ನು ನೋಡುತ್ತಿದ್ದಂತೆ ಕಣ್ಣುಗಳು ಹನಿಗೂಡಿದವು. ಎಷ್ಟೋ ವರ್ಷಗಳ ನಂತರ ತನ್ನ ಊರಿನ ಒಬ್ಬರನ್ನು ನೋಡುತ್ತಿದ್ದಂತೆ ಇದಿನಬ್ಬನ ಹತೋಟಿ ತಪ್ಪಿತ್ತು. ಯೂಸುಫ್ ಸಮಾಧಾನ ಪಡಿಸಿ ಹೆಸರು ಊರು ಮನೆ ವಿಚಾರಿಸಿದರು. ಬ್ಯಾರಿ ಮಲಯಾಳಂ ಭಾಷೆ ಮರೆತೇ ಹೋಗಿದ್ದ ಇದಿನಬ್ಬ ಬಾಯಿ ಬಿಟ್ಟುಕೊಂಡು ನಿಂತಿದ್ದ.

ಯೂಸುಫ್ ರು ತಮಿಳಿನಲ್ಲಿ ಕೇಳಿದ ಮನೆ ಎಲ್ಲಿ ಎಂಬ ಪ್ರಶ್ನೆಗೆ ” ಕುಡ್ಲ, ಮೈಕಾಲ, ಅಜಿಲಮೊಗರು “ಇಷ್ಟೇ ಉತ್ತರಿಸಿದ. ಅ ಹೊತ್ತಿಗೆ ಸಿಬ್ಬಂದಿ ಇದಿನಬ್ಬನಿಗೆ ಬಂದಿದ್ದ ಟೆಲಿಗ್ರಾಂ ತೋರಿಸಿ ಈ ವಿಳಾಸ ಎಲ್ಲಿ ಬರುತ್ತದೆ ಎಂದು ಯೂಸುಫ್ ರಲ್ಲಿ ವಿಚಾರಿಸಿದ. ಅಂತೂ ಕೊನೆಗೆ ಯೂಸುಫ್ ರಿಗೆ, ಇದಿನಬ್ಬ ಒಬ್ಬ ಬ್ಯಾರಿಯೆಂದು ಗೊತ್ತಾಗಿರಬೇಕು. ಆ ಟೆಲಿಗ್ರಾಂ ನ ಒಕ್ಕಣೆಯನ್ನು ಇದಿನಬ್ಬನಿಗೆ ಹೇಳಿದರು. ” ಒಬೊರ್ಡೆ ಮೂತಾಪ ಮರ್ಚಿ ಪೋಯಿ ” (ಉಪ್ಪಿನಂಗಡಿಯ ದೊಡ್ಡಪ್ಪ ತೀರಿಕೊಂಡರು) ಎಂದು ಅದರಲ್ಲಿ ಬರೆದಿತ್ತು. ಉಪ್ಪಿನಂಗಡಿಗೆ ಸ್ಥಳೀಯವಾಗಿ  ‘ಉಬರ್’ ಎಂದು ಹೇಳುತ್ತಿದ್ದರು. ಹೀಗೆ  ಟೆಲಿಗ್ರಾಂ ನ ಒಕ್ಕಣೆ ಅರ್ಥವಾದ ಮರುಕ್ಷಣ ತನ್ನನ್ನು ಸ್ವಂತ ಮಗನಂತೆ ಸಾಕಿದ ದೊಡ್ಡಪ್ಪನ ಚಹರೆ ಮನಸ್ಸಲ್ಲಿ ಮೂಡುತ್ತಿದ್ದಂತೆ ಇದಿನಬ್ಬನ ಕಣ್ಣಂಚಿನಲ್ಲಿ ಎರಡು ಹನಿ ಜಿನುಗಿತು.

ಮುಂದೆ ಒಂದು ತಿಂಗಳ ಕಾಲ ಇದಿನಬ್ಬ ಯೂಸುಫ್ ಜೊತೆಯಲ್ಲೇ ಇದ್ದರು. ಇದಿನಬ್ಬನ ಕೆಲಸದ ಅವಧಿ ಮುಗಿಯುವ ದಿನ ಬಂದಿತು. ವೇತನವೆಂದು ಒಂದಷ್ಟು ಗ್ರಾಮ್ ಚಿನ್ನ ಇದಿನಬ್ಬನ ಕೈಸೇರಿತು. ಅದನ್ನು ಭದ್ರವಾಗಿ ಒಂದು ಸಣ್ಣ ಪೆಟ್ಟಿಗೆಯಲ್ಲಿಟ್ಟು ಇತರ ಬಟ್ಟೆ ಬರೆ ವಗೈರೆಗಳನ್ನು ತಗಡಿನ ಸಂದೂಕಿನಲ್ಲಿ ತುಂಬಿ ಇದಿನಬ್ಬ ಚಿನ್ನದ ಗಣಿಗೆ ಬಹಳ ದುಃಖದಿಂದ ವಿದಾಯ ಹೇಳಿದ. ಒಂದು ಕಡೆ ವಿರಹ ಇನ್ನೊಂದು ಕಡೆ ಸ್ವಾತಂತ್ರ್ಯದ ಸಂಭ್ರಮ. ಯೂಸುಫ್ ರಿಗೆ ಡರ್ಬನ್ ನಲ್ಲಿ ಮೀನು ವ್ಯಾಪಾರ ಇತ್ತು. ಡರ್ಬನ್ ನಿಂದ ಮಂಗಳೂರಿಗೆ ಹೋಗಲಿರುವ ಹಡಗು ಎರಡು ತಿಂಗಳ ನಂತರ ಬರುವುದಿತ್ತು. ಆ ಎರಡು ತಿಂಗಳು ಇದಿನಬ್ಬ ಯೂಸುಫ್ ರ ಜೊತೆಗೆ ಡರ್ಬನ್ ನಲ್ಲಿ ಕಳೆದ. ಇದಿನಬ್ಬನ ಬದುಕಿನಲ್ಲಿ ಅದು ಸುವರ್ಣ ಲಿಪಿಯಲ್ಲಿ ಬರೆಯಬೇಕಾದ  ಗಳಿಗೆಗಳು. ಸ್ವಾತಂತ್ರ್ಯ ಏನೆಂದು ಇದಿನಬ್ಬನಿಗೆ ಡರ್ಬನ್ ನಲ್ಲಿ ಅನುಭವವಾಯಿತು. ತನ್ನ ಜೀವನದಲ್ಲಿ ಎಂದಿಗೂ ಮರೆಯದ ಹಾಗೆ ಡರ್ಬನ್ ಅಪೂರ್ವ ಅನುಭವ ಕೊಟ್ಟಿತು ಇದಿನಬ್ಬನಿಗೆ.

*

ಡರ್ಬನ್ ನಗರವು ದಕ್ಷಿಣ ಆಫ್ರಿಕಾದ ಪ್ರಮುಖ ರೇವು ಪಟ್ಟಣ. ಬಂದರು ಕೇಂದ್ರದ ಜತೆಗೆ ವ್ಯಾಪಾರ ವಹಿವಾಟು ನಡೆಯುತ್ತಿದ್ದ ಹಳೆಯ ನಗರ. ಇದಿನಬ್ಬ ಡರ್ಬನ್ ನಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿದ್ದಾಗ ಅಲ್ಲಿ ರೈಲ್ವೆ ಹಳಿಯ ಕಾಮಗಾರಿ ನಡೆಯುತ್ತಿತ್ತು. ಬಂದರಿನಲ್ಲಿ ನಿತ್ಯವೂ ನಡೆಯುತ್ತಿದ್ದ ಚಟುವಟಿಕೆಗಳನ್ನು ಕುತೂಹಲದಿಂದ ಗಮನಿಸುತ್ತಿದ್ದ ಇದಿನಬ್ಬ ಯಾವ ಯಾವುದೋ ದೇಶಗಳಿಂದ ಒತ್ತೆಯಾಳುಗಳಾಗಿ ಬರುತ್ತಿದ್ದ ಗುಲಾಮ ಜನರನ್ನು ನೋಡಿ ಮರುಕಪಡುತ್ತಿದ್ದ. ಒಂದು ಕಾಲದಲ್ಲಿ ತಾನೂ ಹೀಗೆಯೇ ಒಬ್ಬ ಗುಲಾಮನಾಗಿದ್ದ ಕತೆ ಇದಿನಬ್ಬನ ಮೈಮನಗಳಲ್ಲಿ ಸಂಚಲನ ಉಂಟು ಮಾಡಿತು. ಇಪ್ಪತ್ತೈದು ವರ್ಷಗಳ ಹಿಂದೆ ಊರು ಬಿಟ್ಟ ನೆನಪು ಅಸ್ಪಷ್ಟವಾಗಿ ಉಳಿದಿದೆ. ಮಂಗಳೂರು ಬಂದರಿನಲ್ಲಿ ಹರಾಜಿಗೆ ನಿಂತಲ್ಲಿಂದ ಸರಿಯಾಗಿ ನೆನಪಾಗುತ್ತಿದೆ. ಮುಂದೆ ಏನೆಲ್ಲಾ ಆಗಿ ಹೋದವು. ಅಬ್ಬಬ್ಬಾ, ನೆನಪಿಸಿಕೊಂಡು ಇದಿನಬ್ಬನಿಗೆ ಮೈಜುಮ್ಮೆಂದಿತು.

ಹರಾಜಿನಲ್ಲಿ ತನ್ನನ್ನು ಕೊಂಡುಕೊಂಡ ಕರೀಂ ಸಾಹೇಬರು ಒಳ್ಳೆಯ ವ್ಯಕ್ತಿ. ತನ್ನ ಬದುಕಿನ ದಿಕ್ಕು ಬದಲಿಸಿದ ಖ್ಯಾತಿ ಅವರದ್ದು. ತಮಿಳುನಾಡಿನ ಆ ಹಳ್ಳಿಯಲ್ಲಿ ಕಳೆದ ದಿನಗಳನ್ನು ಮರೆಯುವುದು ಹೇಗೆ? ಈಗ ಕರೀಂ ಸಾಹೇಬರು ಮತ್ತವರ ಕುಟುಂಬ ಏನಾಗಿದ್ದಿರಬಹು? ಅಂತಹ ಬರಗಾಲದ ಸಮಯದಲ್ಲಿ ಅವರನ್ನು ಬಿಟ್ಟು ಓಡಿ ಬರಬಾರದಿತ್ತು ಪಾಪ. ಅಲ್ಲಿಂದ ಓಡಿ ಹೋಗುವಾಗ ನಡೆದ ರೋಚಕ ವೃತ್ತಾಂತಗಳು ಒಂದೊಂದಾಗಿ ಸ್ಮೃತಿಪಟಲದಲ್ಲಿ ಮೂಡುತ್ತಿವೆ. ಪಾಂಡಿಚೇರಿಯಿಂದ ಹಡಗು ಹತ್ತಿ ಸಿಲೋನಿಗೆ ಹೋಗಿದ್ದು, ಮಾರಿ ಮುತ್ತು ಶಿವಂ ರಂತಹ ಮುಗ್ಧರ ಗೆಳೆತನ, ಸುರಂಗ ಮಾರ್ಗದ ಕೆಲಸ, ಮಣ್ಣು ಕುಸಿದು ಶಿವಂ ತೀರಿಕೊಂಡದ್ದು, ಬೆಟ್ಟ ಜರಿದು ಮಣ್ಣಿನಲ್ಲಿ ಸಿಲುಕಿ ಪವಾಡ ಸದೃಶವಾಗಿ ಬದುಕುಳಿದದ್ದು! ಸಿಲೋನಿನ ಬದುಕು ಒಂದು ದುಃಸ್ವಪ್ನದಂತೆ ಕಾಡುತ್ತದೆ. ಭೂಕುಸಿತದಲ್ಲಿ ಬದುಕುಳಿದು ಬಂದ ಮೇಲೆ ಜೊತೆಗಿದ್ದವರ ಬಗ್ಗೆ ಎಷ್ಟು ದಿನ ಅತ್ತಿರಬಹುದು. ಅನ್ಯಾಯವಾಗಿ ಅವರೆಲ್ಲ ಮಣ್ಣೊಳಗೆ ಸಿಲುಕಿ ಮಣ್ಣಾಗಿ ಹೋಗಿದ್ದರು.

ಮುಂದೆ ಆಫ್ರಿಕಾದ ಹಡಗು ಹತ್ತಿದ್ದು ಗಣಿಯ ಕೆಲಸಕ್ಕೆ ಸೇರಿದ್ದು, ಗುಲಾಮರಂತೆ ದುಡಿದಿದ್ದು ಒಂದೊಂದೇ ನೆನಪುಗಳು ಸುರುಳಿ ಬಿಚ್ಚತೊಡಗಿದವು. ಒಂದನೇ ಅವಧಿ ಮುಗಿದ ನಂತರ ಎರಡನೇ ಅವಧಿಗೆ ಮಹಾ ಬದಲಾವಣೆ ಆಗಿತ್ತು. ಎರಡನೇ ಅವಧಿಯಲ್ಲಿ ಇದಿನಬ್ಬ ಮನೆಯವರ ಸಂಪರ್ಕ ಸಾಧಿಸುವಲ್ಲಿ ಸಫಲನಾಗಿದ್ದ. ಆದರೆ ಸಾವಿರಾರು ಮೈಲಿಗಳ ದೂರದಲ್ಲಿರುವ ತನ್ನ ಮನೆಗೆ ಅಷ್ಟು ಸುಲಭವಾಗಿ ತಲುಪುವುದು ಅಸಾಧ್ಯ ಎಂಬ ಸತ್ಯ ಇದಿನಬ್ಬನಿಗೆ ಚೆನ್ನಾಗಿ ಗೊತ್ತಿತ್ತು.

ತಿಂಗಳುಗಟ್ಟಲೆ ಸಮುದ್ರದಲ್ಲಿ ಪ್ರಯಾಣ ಮಾಡಿ ಬದುಕಿ ಉಳಿದರೆ ಮನೆಯವರನ್ನು ಕಾಣಬಹುದು. ಚಿನ್ನದ ಗಣಿಯ ಕೆಲಸ ಮುಗಿದ ಮೇಲೆ ಭಾರತಕ್ಕೆ ವಾಪಸಾಗುವ ಪರವಾನಗಿ ದೊರೆತ ಇದಿನಬ್ಬ ದಾಖಲೆಗಳಲ್ಲಿ ಶ್ರೀಲಂಕಾದ ಪ್ರಜೆಯೆಂದೇ ಗುರುತಿಸಿಕೊಂಡಿದ್ದ. ಮುಂದೆ ಅವನ ಗೆಳೆತನದಲ್ಲಿದ್ದ ಅಧಿಕಾರಿಗಳು ಭಾರತದ ಮುದ್ರೆಯೊತ್ತಿ ಆತನನ್ನು ಬಿಡುಗಡೆ ಮಾಡಿದ್ದರು. ಡರ್ಬನ್ ನಲ್ಲಿ ದಿನ ದೂಡುತ್ತಿದ್ದ ಇದಿನಬ್ಬ ಹೊಟ್ಟೆ ತುಂಬಿಸುತ್ತ ಕಡಲ ತೀರದಲ್ಲಿ ಮಾರುಕಟ್ಟೆಯಲ್ಲಿ ಸುತ್ತಾಡುವಷ್ಟು ಮಾತ್ರ ಸ್ವಾತಂತ್ರ್ಯ ಪಡೆದಿದ್ದ. ಉಳಿದಂತೆ ಆತ ಆಫ್ರಿಕಾದ ಇತರ ಸ್ಥಳೀಯ  ಜನರಂತೆಯೇ ಕಾಣಲ್ಪಡುತ್ತಿದ್ದ. ಇದಿನಬ್ಬ ಮಾತ್ರವಲ್ಲ, ಯಾರ ಮೈಬಣ್ಣ ಕಪ್ಪಾಗಿದೆಯೋ ಅವರು ಬಿಳಿಯರಿಂದ ನಿರ್ದಾಕ್ಷಿಣ್ಯವಾಗಿ ಅನ್ಯಾಯವಾಗಿ ದಬಾಯಿಸಲ್ಪಡುತ್ತಿದ್ದ ಕಾಲ ಅದು.

ಮೀನು ವ್ಯಾಪಾರ ಮುಗಿಸಿ ಗಂಟು ಮೂಟೆ ಕಟ್ಟುತ್ತಿದ್ದ ಯೂಸುಫ್ ಕಡಲ ಕಿನಾರೆಯಲ್ಲಿ ಸುಮ್ಮನೆ ಕುಳಿತಿದ್ದ ಇದಿನಬ್ಬನ ಹತ್ತಿರ ಹೋಗಿ ಹೊರಡುವ ಸೂಚನೆ ನೀಡಿದರು. ಭಾರತದಿಂದ ಬಂದ ಒಂದು ಹಡಗು ಡರ್ಬನ್ ಬಂದರಿನಲ್ಲಿ ಲಂಗರು ಹಾಕಿದ್ದು ಇನ್ನೆರಡು ದಿನಗಳಲ್ಲಿ ಅದು ಭಾರತಕ್ಕೆ ಹಿಂತಿರುಗುವುದರಲ್ಲಿತ್ತು. ಇದಿನಬ್ಬ ಲಗುಬಗೆಯಿಂದ ತಯಾರಿಯಲ್ಲಿ ನಿರತನಾದ. ಮನೆ ಬಿಡುವಷ್ಟೇ ನೋವು ಇದಿನಬ್ಬನಿಗೆ ಅನುಭವವಾಗುತ್ತಿತ್ತು. ಡರ್ಬನ್ ಸುತ್ತಲಿನ ಚಿನ್ನದ ಗಣಿಯಲ್ಲಿ, ರೈಲ್ವೆ ಹಳಿ ಕಾಮಗಾರಿಯ ಕಾರ್ಮಿಕರಲ್ಲಿ ಭಾರತ ದೇಶಕ್ಕೆ ಸೇರಬೇಕಾದವರೆಲ್ಲ ಬಂದರಿಗೆ ಬಂದು ಜಮಾಯಿಸತೊಡಗಿದರು. ಪರಸ್ಪರ ಪರಿಚಯದ ಮಾತುಕತೆಗಳಾದವು. ಚಿನ್ನದ ಗಣಿಯ ಕೆಲಸದಲ್ಲಿ ಇದಿನಬ್ಬನ ಜತೆಗಿದ್ದ ಒಂದಷ್ಟು ಮಂದಿ ಮತ್ತೆ ಕೂಡಿಕೊಂಡರು. ಹೊರಡುವ ದಿನ ಬಂತು. ಎಲ್ಲರೂ ಪರಸ್ಪರ ಆಲಿಂಗನ ಮಾಡಿಕೊಂಡರು. ಹಡಗು ತಯ್ಯಾರಾಗಿ ನಿಂತಿತ್ತು. ಎಲ್ಲರೂ ಹಡಗಿಗೆ ಹತ್ತಿದರು.

ಆ ದಿನ ಮಂಗಳವಾರ, ಅಲ್ಲಿನವರಿಗೆ ಮಂಗಳವಾರ ಹಡಗು ಬಿಡುವುದೆಂದರೆ ಅಪಶಕುನ. ಆದರೆ ಬುಧವಾರ ದಿನ ಭೀಕರ ಚಂಡಮಾರುತದ ಭೀತಿ ಇದ್ದದ್ದರಿಂದ ಮಂಗಳವಾರವೇ ಹೊರಡಬೇಕಾಗಿತ್ತು. ಬಂದರಿನಲ್ಲಿ ನಿಂತು ಇತರ ಕೂಲಿಗಳು, ಅಧಿಕಾರಿಗಳು, ಸಿಬ್ಬಂದಿಗಳು ಬೀಳ್ಕೊಟ್ಟರು. ಹಡಗು ನಿಧಾನವಾಗಿ ಚಲಿಸಲಾರಂಭಿಸಿತು. ಒಂದು ಹೊಸ ಬದುಕಿನ ಮುನ್ನುಡಿಗೆ ನಾಂದಿ ಹಾಡುತ್ತ ಇದಿನಬ್ಬನೂ ಮತ್ತಿತರರೂ ಹಾಡುತ್ತ ಕುಣಿದರು. ಇದಿನಬ್ಬನಿಗೆ ಇನ್ನು ಭಾರತದ ದಾರಿ, ಮರೆತು ಹೋದ ದಾರಿಯಲ್ಲಿ ಮತ್ತೆ ಮರಳುವ ಖುಷಿ. ಮತ್ತೆ ಮನೆಯ ಕನಸುಗಳು ಮನಸ್ಸಿನಲ್ಲಿ ಗರಿ ಬಿಚ್ಚಿ ಹಾರಾಡತೊಡಗಿದವು. ಮಂಗಳೂರು ತಲುಪಿದ ಕೂಡಲೇ ಏನೇನು ಮಾಡಬೇಕೆಂಬ ಯೋಜನೆಗಳನ್ನು ರೂಪಿಸತೊಡಗಿದ. ಹಡಗು ಮುಂದೆ ಮುಂದೆ ಸಾಗುತ್ತಿತ್ತು. ವಿರಾಮ ವೇಳೆಯಲ್ಲಿ ಹಡಗಿನ ಕಥೆಗಳು ಪ್ರಾರಂಭಗೊಂಡವು. ಇದಿನಬ್ಬ ತನ್ನ ಬದುಕಿನ ಚರಿತ್ರೆಗಳನ್ನು ಹೇಳ ತೊಡಗಿದ. ಹಡಗಿನಲ್ಲಿರುವ ಹೆಚ್ಚಿನವರಿಗೂ ಅರ್ಥವಾಗುವ ಭಾಷೆಯಲ್ಲಿ ವಿವರಿಸುವ ಭಾಷಾ ಅರಿವು ಕರಗತಗೊಂಡಿದ್ದವು. ಒಂದೊಂದು ಭಾಷೆಯಲ್ಲಿ ತಿರುಗಿ ಮತ್ತೆ ಇದಿನಬ್ಬನ ಕಥೆ ಕೇಳಿಸಿಕೊಳ್ಳುವುದೆಂದರೆ ಸಹಪ್ರಯಾಣಕರಿಗೆ ಎಲ್ಲಿಲ್ಲದ ಮಜಾ. ಕೆಲವರು ಹಾಡುತ್ತಿದ್ದರು. ಕೆಲವರು ಆಡುತ್ತಿದ್ದರು. ಇನ್ನು ಕೆಲವರು ಜೂಜಿನಲ್ಲಿ ತೊಡಗಿಕೊಂಡರು. ಇದಿನಬ್ಬ ಮತ್ತು ಕೆಲವರು ಕಾಲ ಹರಣಕ್ಕೆ ಮೀನು ಹಿಡಿಯುವುದನ್ನೇ ಮಾಡುತ್ತಿದ್ದರು. ಪ್ರತಿ ಸಲ ಮೀನು ಹಿಡಿಯುವಾಗಲೂ ಹೊಸ ಹೊಸ ಕಥೆಗಳು, ಅದ್ಭುತ ವಿಚಾರಗಳು ಮಂಡನೆಯಾಗುತ್ತಲೇ ಇದ್ದವು. ಹಡಗು ನಿಧಾನವಾಗಿ ಸಾಗುತ್ತಿತ್ತು. ಕಡಲು ಶಾಂತವಾಗಿತ್ತು. ಪ್ರಯಾಣಿಕರು ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದರು.

ಅದೊಂದು ಹುಣ್ಣಿಮೆ ದಿನ. ಎಲ್ಲರೂ ಬಂಕರಿನ ಮೇಲೆ ಎಗ್ಗಿಲ್ಲದೆ ತಿರುಗಾಡತೊಡಗಿದ್ದರು. ಕೆಲವರಂತೂ ಹುಣ್ಣಿಮೆ ಚಂದಿರನನ್ನು ಛೇಡಿಸತೊಡಗಿದರು. ಶಾಂತ ಸುಂದರ ಕಡಲನ್ನು ಹುಣ್ಣಿಮೆ ಬೆಳಕಿನಲ್ಲಿ ಕಂಡ ಕವಿಗಳು ಉನ್ಮತ್ತರಾಗಿ ಕಾವ್ಯ ಲಹರಿಯಲ್ಲಿ ನಿಮಗ್ನರಾಗಿದ್ದರು. ಬ್ರಿಟಿಷ್ ಅಧಿಕಾರಿಗಳಿಂದ ತುಂಬಿ ಹೋಗಿದ್ದ ಹಡಗಿನಲ್ಲಿ ಮದ್ಯಪಾನ ಹಾಡು ಕುಣಿತ ಅವ್ಯಾಹತವಾಗಿ ನಡೆಯುತ್ತಿತ್ತು.

ಅಂದಿಗೆ ಹಡಗು ಡರ್ಬನ್ ನಿಂದ ಹೊರಟು ೧೭ ದಿನಗಳಾಗಿದ್ದವು. ಮೋಜು ಮಸ್ತಿಯಲ್ಲಿ ಕಳೆದ ಯಾತ್ರಿಕರಿಗೆ ದಿನಗಳು ಕಳೆದದ್ದೆ ಗೊತ್ತಾಗುತ್ತಿರಲಿಲ್ಲ. ಆದರೆ ಯಾರೂ ಊಹಿಸದಂತೆ ಅಲ್ಲೊಂದು ವಿಚಿತ್ರ ನಡೆಯಿತು. ಇದ್ದಕ್ಕಿದ್ದಂತೆ ವಾತಾವರಣದಲ್ಲಿ ಏರುಪೇರಾಗತೊಡಗಿತು. ವಿಪರೀತ ಚಳಿಯ ಅನುಭವವಾಗತೊಡಗಿತು. ಅಪಾಯದ ಸುಳಿವು ಸಿಕ್ಕ ಹಡಗಿನ ಸಿಬ್ಬಂದಿಗಳು ಪ್ರಯಾಣಿಕರಿಗೆ ಮುನ್ನೆಚ್ಚರಿಕೆಯ ಸೂಚನೆ ನೀಡಿದರು. ಎಲ್ಲರೂ ಅತ್ತಿಂದಿತ್ತ ಓಡಾಡುತ್ತಿರುವಾಗಲೇ ಕ್ಷಣ ಮಾತ್ರದಲ್ಲಿ ಭೀಕರ ಬಿರುಗಾಳಿ ಆರಂಭವಾಯಿತು. ಬೆಳದಿಂಗಳು ಚೆಲ್ಲುತ್ತಿದ್ದ ಆಗಸ ಕಪ್ಪಗಿನ ಕಂಬಳಿ ಹೊದ್ದಿತ್ತು. ನಾಲ್ದೆಸೆಗಳಿಂದಲೂ ಚಂಡ ಮಾರುತದ ಭಯಂಕರವಾದ ಗಾಳಿಯು ಸುಯ್ಗುಡುತ್ತಿತ್ತು. ಬೀಸುವ ಗಾಳಿ ಹಡಗನ್ನು ಎತ್ತಿ ಎಸೆದು ಹಾಕುತ್ತಿತ್ತು. ಕತ್ತಲಲ್ಲಿ ನಡೆಯುತ್ತಿದ್ದ ಈ ವಿದ್ಯಮಾನದಲ್ಲಿ ಒಬ್ಬರನ್ನೊಬ್ಬರು ಗುರುತಿಸುವುದು ಕಷ್ಟವಾಗಿತ್ತು. ಅವರವರ ರಕ್ಷಣೆ ಅವರೇ ಮಾಡಬೇಕಿತ್ತು. ಭಾರೀ ಸದ್ದಿನೊಂದಿಗೆ ಏಳುತ್ತಿದ್ದ ಭೀಕರ ಅಲೆಗಳು ಹಡಗನ್ನು ಬುಡಮೇಲು ಮಾಡುವುದು ಖಾತ್ರಿಯಾಯ್ತು. ಎಲ್ಲರೂ ತಮ್ಮ ತಮ್ಮಲ್ಲಿದ್ದ ಸಾಮಾನು ಸರಂಜಾಮುಗಳನ್ನು ಭಧ್ರವಾಗಿಟ್ಟುಕೊಂಡರು. ಚೀರಾಟ ಕೂಗಾಟ ನಿರಂತರವಾಗಿದ್ದರೂ ಕಡಲ ಆರ್ಭಟಕ್ಕೆ ಅವು ಹೊರಗೆ ಕೇಳಿಸುತ್ತಿರಲಿಲ್ಲ. ಹಡಗು ತುಯ್ದಾಡುತ್ತ ಮುಗ್ಗರಿಸುತ್ತ ಚಲಿಸುತ್ತಿತ್ತು.

ಎಲ್ಲರೂ ಹಾಡು ಕುಣಿತ ಮೋಜು ನಿಲ್ಲಿಸಿ ಪ್ರಾರ್ಥಿಸತೊಡಗಿದರು. ಯಾರ ಪ್ರಾರ್ಥನೆಯೂ ಫಲಗೊಳ್ಳದೆ ಕಡಲು ಇನ್ನಷ್ಟು ಕ್ಷೋಭೆಯಿಂದ ಬುಸುಗುಡಲಾರಂಭಿಸಿತು. ತಣ್ಣಗಾಗುವ ಲಕ್ಷಣವೇ ತೋರಲಿಲ್ಲ. ಸುಮಾರು ರಾತ್ರಿ ಹತ್ತು ಗಂಟೆಯಾಗಿರಬಹುದು. ಭಾರಿ ಗಾತ್ರದ ಅಲೆಯೊಂದು ಹಡಗಿನ ಒಂದು ಭಾಗಕ್ಕೆ ಬಲವಾಗಿ ಬಡಿಯಿತು. ” ಛಟಾರ್ ” ಎಂಬ ಸದ್ದು. ಸದ್ದು ಬಂದ ಕಡೆ ದೊಡ್ಡದಾಗಿ ಬಿರುಕು ಬಿಟ್ಟಿತು. ಬಿರುಕು ಬಿಟ್ಟ ಜಾಗದಿಂದ ಹಡಗಿನೊಳಗೆ ನೀರು ರಭಸವಾಗಿ ನುಗ್ಗತೊಡಗಿತು. ಅಷ್ಟರಲ್ಲೇ ಜೋರಾಗಿ ಮಳೆ ಮಿಂಚು ಸಿಡಿಲು ಎಲ್ಲ ಒಂದೇ ಸಮನೆ ಘಟಿಸಲಾರಂಭಿಸಿತು. ಹಡಗಿನ ಅಧಿಕಾರಿಗಳು ಸಿಬ್ಬಂದಿಗಳು ಕಾರ್ಯೋನ್ಮುಖರಾಗಿ ಸಿಕ್ಕ ಸಿಕ್ಕ ರಕ್ಷಣಾ ವಿಧಾನಗಳನ್ನು ಬಳಸಿಕೊಂಡು ಬಹಳಷ್ಟು ಜನರನ್ನು ಸಣ್ಣ ಪ್ರಮಾಣದ ದೋಣಿಗಳಲ್ಲಿ ಇಳಿ ಬಿಟ್ಟರು. ಉಳಿದ ಕೆಲವೇ ಕೆಲವು ಜನರಲ್ಲಿ ಇದಿನಬ್ಬನೂ ಇದ್ದ.

ಒಂದಷ್ಟು ಸಿಬ್ಬಂದಿಗಳು, ಇದಿನಬ್ಬ ಯೂಸೂಫ್ ಮತ್ತು ಹತ್ತಾರು ಜನ ತಮ್ಮ ಸಾಮಾನುಗಳನ್ನೆಲ್ಲಾ ಕೈಯಲ್ಲಿ ಹಿಡಿದು ಹಾಗೆಯೇ ನೀರಿಗೆ ಹಾರಿದರು. ನೋಡ ನೋಡುತ್ತಿದ್ದಂತೆ ಲಟ್ಟಣಿಗೆ ಮುರಿದು ಹಾಕುವಂತೆ ಅಷ್ಟು ದೊಡ್ಡ ಹಡಗು ಇಬ್ಭಾಗವಾಯಿತು. ಬೃಹತ್ ಗಾತ್ರದ ಅಲೆಯೊಂದು ಎದ್ದು ನೀರಿಗೆ ಧುಮುಕಿದ ಹಲವರನ್ನೂ ಎತ್ತಿ ದೂರ ದೂರಕ್ಕೆ ಎಸೆಯಿತು. ಬಹುಶಃ ದೂರವೆಂದರೆ ಮುಳುಗುತ್ತಿರುವ ಹಡಗಿನ ದೀಪ ಮಂಜಾಗಿ ಕಾಣಿಸುವಷ್ಟು. ದೂರದಲ್ಲಿ ಹಡಗಿನ ದೀಪ ಗಿರ ಗಿರನೆ ಸುತ್ತುವುದು ನೋಡಿದಾಗ ಇದಿನಬ್ಬನಿಗೆ ಪರಿಸ್ಥಿತಿಯ ಅರಿವಾಯಿತು. ಹಿಂದಿರುಗಿ ನೋಡಿದರೆ ಅಷ್ಟು ದೊಡ್ಡ ಹಡಗನ್ನು ಹೊಟ್ಟೆ ಬಾಕ ಸಮುದ್ರ ತಿಂದು ಮುಗಿಸಿದೆ. ಕನಸುಗಳು ನುಚ್ಚು ನೂರಾಗಿವೆ. ಹಡಗಿನಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಹರಡಿವೆ. ಪೀಪಾಯಿಗಳಲ್ಲಿ ತುಂಬಿಸಿಟ್ಟಿದ್ದ ಮದಿರೆ ಸಮುದ್ರ ಪಾಲಾಗಿದೆ. ಆಹಾರ ಪದಾರ್ಥಗಳು ನೀರಿನಲ್ಲಿ ಮುಳುಗಿವೆ.

ಕೆಳಸ್ತರದಲ್ಲಿ ಕಟ್ಟಿ ಹಾಕಲಾಗಿದ್ದ ಜಾನುವಾರು, ಸಾಕುಪ್ರಾಣಿಗಳು ಉಸಿರು ಕಟ್ಟಿ ಸತ್ತು ಹೋಗಿವೆ. ಜೀವ ಕೈಯಲ್ಲಿ ಹಿಡಿದು ಸಮುದ್ರಕ್ಕೆ ಧುಮುಕಿದ ಜನರು ನಾಲ್ಕು ದಿಕ್ಕುಗಳಲ್ಲಿ ಹರಡಿ ಹಂಚಿದ್ದಾರೆ. ಒಬ್ಬರ ಕೂಗು ಇನ್ನೊಬ್ಬರಿಗೆ ಕೇಳಿಸದ ಹಾಗೆ ಅವರು ದೂರ ದೂರವಾಗಿದ್ದಾರೆ. ಸುರಕ್ಷತಾ ಸಾಧನವೊಂದನ್ನು ಮೈಮೇಲೆ ಹಾಕಿಕೊಂಡು ನೀರಿನಲ್ಲಿ ತೇಲುತ್ತಿದ್ದ ಇದಿನಬ್ಬ ಹತ್ತಿರ ಯಾರಾದರೂ ಇದ್ದಾರೆಯೇ ಎಂದು ನೋಡಿದ. ಜೋರಾಗಿ ಕೂಗಿದ. ಯಾವ ಪ್ರತ್ಯುತ್ತರವೂ ಸಿಗದಿದ್ದಾಗ ಇದಿನಬ್ಬ ಕಡಲಿನ ಅಬ್ಬರಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡ. ರೌದ್ರಾವತಾರ ತಾಳಿ ಭಾರೀ ಸದ್ದು ಮಾಡುತ್ತಿದ್ದ ಬೃಹತ್ ಅಲೆಗಳು ಇದಿನಬ್ಬನನ್ನು ಎತ್ತೆತ್ತಲೋ ಕೊಂಡು ಹೋದವು.

ಕ್ರಮೇಣ ಕಡಲು ಶಾಂತವಾಯಿತು. ಕಡಲು ತನ್ನ ಆಟಾಟೋಪ ನಿಲ್ಲಿಸಿದ ನಂತರ ಶತಃಪ್ರಯತ್ನಪಟ್ಟು ಇದಿನಬ್ಬ ಈಜುತ್ತಿದ್ದಾನೆ. ಜೊತೆಗೆ ತನ್ನದೆನ್ನುವುದಕ್ಕೆ ಸಣ್ಣ ಕಬ್ಬಿಣದ ಪೆಟ್ಟಿಗೆ. ಇದಿನಬ್ಬ ಶಕ್ತಿ ಮೀರಿ ಈಜುತ್ತಿದ್ದಾನೆ. ದಡ ಕಾಣುವುದೇ ಇಲ್ಲದ ಕಡಲಲ್ಲಿ ತನ್ನನ್ನೇ ತಾನು ಕಾಣದ ಕತ್ತಲಲ್ಲಿ ಎಲ್ಲಿಗೆಂದು ಈಜುವುದು, ಯಾವ ದಿಕ್ಕಿಗೆಂದು ಈಜುವುದು. ಮನೆ ಮಂಗಳೂರು ದೇಶ ಎಲ್ಲಾ ಆಸೆಗಳು ನೀರಿನಲ್ಲೇ ಮುಳುಗುತ್ತಿವೆ. ಎಷ್ಟೋ ಹೊತ್ತು ತುಂಬಾ ದೂರ ಈಜಿ ಈಜಿ ಇದಿನಬ್ಬನ ಕಾಲುಗಳು ಸೋಲುತ್ತಿವೆ. ಕೈಗಳು ಚಳಿಗೆ ಮರಗಟ್ಟುತ್ತಿವೆ. ಒಮ್ಮೆಲೆ ಜೋಮು ಹಿಡಿದಂತಾಗಿ ಕಬ್ಬಿದ ಪೆಟ್ಟಿಗೆಯ ಮೇಲೆ ಬಲವಾಗಿ ತಬ್ಬಿದಂತೆ ಕಣ್ಣುಗಳು ಸೋಲುತ್ತವೆ. ಸಾವು ಕಣ್ಣ ಮುಂದೆ ಆಡುತ್ತಾ ದೇಹ ನಿಶ್ಚಲವಾಗಿದೆ. ಯಾವ ಮೀನಿಗೋ ಪ್ರಾಣಿಗೋ ಆಹಾರವಾಗುತ್ತಿರುವೆ ಎಂಬುವುದನ್ನು ನಿಶ್ಚಯಿಸಿಕೊಂಡಂತೆ ಇದಿನಬ್ಬನ ಪ್ರಜ್ಞೆ ತಪ್ಪಿತು.

(ಈ ಕಿರುಕಾದಂಬರಿಯ ಮುಂದಿನ ಕಂತು ಮುಂದಿನ ಭಾನುವಾರ ಪ್ರಕಟವಾಗಲಿದೆ)