ದೂರದಲ್ಲಿ ಏರುತ್ತಿದ್ದ ಕೆಂಪು ಧೂಳಿನ ಮೋಡದಿಂದ ಎದ್ದುಬಂದ ಜೀಪಿನಿಂದ ಹೊರಗಿಣುಕಿತ್ತೊಂದು ಹೊಂಗೂದಲಿನ ತೇರು. ಅಹ ದೇವತೆಯಂತೆ ಅವತರಿಸಿದ್ದಳು ಹದಿನಾರರ ಹುಡುಗಿ ಮಕಾಮಾಯಿ.   ನಮ್ಮ ಕತೆ ಕೇಳಿ, ನನ್ನ ಹಿಂದೆ ನಿಧಾನ ಬನ್ನಿ ಎನ್ನುತ್ತಾ ತಾನು ಮಾತ್ರ ಭರೆಂದು ಹಾರುತ್ತ, ಅಲ್ಲಲ್ಲಿ ಜೀಪು ನಿಲ್ಲಿಸಿಕೊಂಡು ನಮಗಾಗಿ ಕಾಯುತ್ತ, ಒಂದು ಸಮುದ್ರ ತೀರದ ಕಲ್ಲು ಹಾದಿಯ ಗುಡಿಸಿಲಿನಂತ ಜಾಗಕ್ಕೆ ಕರೆದೊಯ್ದಳು. ಅದು “ಪಾಪಕೋಲೇ” ಹಸಿರು ಮರಳ ದಂಡೆಯ ಹಾದಿಯ ಶುರುವಾತು. ʻಜಗದ ಜಗಲಿಯಲಿ ನಿಂತುʼ ಪ್ರವಾಸ ಬರಹಗಳ ಸಾಲಿನಲ್ಲಿ ವೈಶಾಲಿ ಹೆಗಡೆ ಹವಾಯಿ ದ್ವೀಪದ ಕುರಿತು ಬರೆದಿದ್ದಾರೆ .

 

ಹವಾಯಿ ಅಥವಾ ಹವಾಯಿಯನ್ ಭಾಷೆಯಲ್ಲಿ “ಹವ – ಈ ” ಎಂದು ಕರೆಯಲ್ಪಡುವ ಈ ರಾಜ್ಯ, ಚಿಕ್ಕ ಪುಟ್ಟ ದ್ವೀಪಗಳನ್ನೆಲ್ಲ ಸೇರಿಸಿ ಒಟ್ಟೂ ೧೩೭ ದ್ವೀಪಗಳ ಸಮೂಹ. ಇದು ಅಮೆರಿಕಾದ ಮುಖ್ಯ ಭೂಪ್ರದೇಶದಿಂದ ಹೊರಗಿರುವ ಏಕೈಕ ರಾಜ್ಯ. ಈ ದ್ವೀಪ ಸಮೂಹಗಳಲ್ಲಿ ಪ್ರಮುಖವಾದವು ಐದಾರು ದ್ವೀಪಗಳು, ಅದರಲ್ಲೂ ಅತೀ ದೊಡ್ಡ ದ್ವೀಪಕ್ಕೆ ಹವಈ ಎಂದೇ ಹೆಸರು. ಈ ದೊಡ್ಡ ದ್ವೀಪಕ್ಕೆ ವಾಡಿಕೆಯಲ್ಲಿ “ಬಿಗ್ ಐಲ್ಯಾನ್ಡ್” ಎಂದು ಕರೆಯುವುದು ರೂಢಿ.

ಬಿಗ್ ಐಲ್ಯಾನ್ಡ್ ದ್ವೀಪ ನಿಜಕ್ಕೂ ಒಂದು ಜ್ವಾಲಾಮುಖಿ ಪರ್ವತ. ಇಡೀ ದ್ವೀಪವೇ ಮಿಲಿಯಗಟ್ಟಲೆ ವರ್ಷಗಳ ಹಿಂದೆ ಒಂದು ಸಾಗರದೊಡಲಿಂದ ಜ್ವಾಲಾಮುಖಿಯೊಂದು ಎದ್ದು ಬಂದು ಬೆಂಕಿಯುಗುಳಿ ತಯಾರಾದ, ಇಂದೂ ಬೆಂಕಿಯುಗುಳುವ ಲಾವಾ ಹರಡುತ್ತಾ ತಣ್ಣಗಾಗುತ್ತಾ ಇರುವ ಜೀವಂತ ದ್ವೀಪ. ಹವಾಯಿಯನ್ ಜ್ವಾಲಾಮುಖಿ ದೇವಿ “ಪೇಲೆ” ಇಲ್ಲಿ ಸದಾ ತನ್ನ ತಲೆ ಬಾಚುತ್ತ ಉದ್ದುದ್ದ ಕೈಗಳಲ್ಲಿ ಉದ್ದುದ್ದ ಜಡೆ ಹೆಣೆಯುತ್ತಾ, ಜಡೆಯ ತುಂಬಾ ಹಸಿರು ಮುಡಿದು, ಹೂವ ಚೆಲ್ಲುತ್ತ ಸುತ್ತಲೂ ಇಂದಿಗೂ ಅವರಿಸುತ್ತಲೇ ಇದ್ದಾಳೆ. ಅಷ್ಟಷ್ಟು ದಿನಕ್ಕೆ ಭುಗಿಲೆದ್ದು ನಲಿಯುತ್ತಾಳೆ, ಮತ್ತೆ ತಣ್ಣಗೆ ಅಲೆಯುತ್ತಾಳೆ, ಬಳುಕುತ್ತಾಳೆ, ಮಾಗುತ್ತಾಳೆ. ಇಂದಿಗೂ ನಿರಂತರವಾಗಿ ರೂಪುಗೊಳ್ಳುತ್ತಲೇ ಇರುವ ಹವಾಯಿಯ ಬಗ್ಗೆ ಬರೆಯಹೊರಟರೆ ಅದರದ್ದೇ ಹೊಸ ಲೇಖನ ಮಾಲೆಯಾದೀತು.

ದೇವರ ಪ್ರಯೋಗಶಾಲೆಯಂಥ ಈ ಹವಾಯಿ ದ್ವೀಪದಲ್ಲಿ ಉರಿಬಿಸಿಲ ಸಮುದ್ರ ತೀರದ ಪಕ್ಕದಲ್ಲೇ ಶಿಖರದಲ್ಲಿ ಹಿಮಸುರಿಯುವ ಪರ್ವತವಿದೆ. ಕೊತ ಕೊತ ಕುದಿಯುವ ಜ್ವಾಲಾಮುಖಿಯ ತೆರೆದ ಬಾಯಿಯ ಅನತಿ ದೂರದಲ್ಲಿ ಮೆತ್ತನೆಯ ಬಂಡೆ. ಇದೀಗ ತಣಿದ ಲಾವಾ ನಾಳಿನ ಬಂಡೆಗಲ್ಲಾಗುವ ಪ್ರಕ್ರಿಯೆ ಅಲ್ಲಿ ಕಣ್ಮುಂದೆ! ಒಂದೆಡೆ ಸೀರೆ ನೆರಿಗೆಯಂಥ ಪರ್ವತಗಳ ಮಡಿಕೆಗಳ ನಡುವಿಂದ ನೇರ ಸಮುದ್ರಕ್ಕೆ ಬಂದು ಧುಮುಕುವ ಭೋರ್ಗರೆವ ಜಲಪಾತಗಳು, ಅಲ್ಲೇ ಪಕ್ಕದಲ್ಲಿ ಬಾಳೆ, ತೆಂಗು, ಪೇರಲ, ಅಡಿಕೆ ಮರಗಳ ಹಚ್ಚ ಹಸುರ ಕಾಡು. ನಿಜ, ಅವೆಲ್ಲ ಕಾಡು ಮರಗಳು ಇಲ್ಲಿ. ಯಾರೂ ನೆಟ್ಟು ಬೆಳೆಸಿದ್ದಲ್ಲ. ನೀಲ ಜಲರಾಶಿಯ ಅಂಚಲ್ಲೇ ಧುತ್ತೆಂದು ನಿಂತ ಪರ್ವತಸಾಲು. ಅನೂಹ್ಯ ಅಗಾಧ ಎಲ್ಲವೂ ಒಟ್ಟಾದ ಪುಟ್ಟ ದ್ವೀಪವಿದು.

 ಒಂದೆಡೆ ಸೀರೆ ನೆರಿಗೆಯಂಥ ಪರ್ವತಗಳ ಮಡಿಕೆಗಳ ನಡುವಿಂದ ನೇರ ಸಮುದ್ರಕ್ಕೆ ಬಂದು ಧುಮುಕುವ ಭೋರ್ಗರೆವ ಜಲಪಾತಗಳು, ಅಲ್ಲೇ ಪಕ್ಕದಲ್ಲಿ ಬಾಳೆ, ತೆಂಗು, ಪೇರಲ, ಅಡಿಕೆ ಮರಗಳ ಹಚ್ಚ ಹಸುರ ಕಾಡು. ನಿಜ, ಅವೆಲ್ಲ ಕಾಡು ಮರಗಳು ಇಲ್ಲಿ. ಯಾರೂ ನೆಟ್ಟು ಬೆಳೆಸಿದ್ದಲ್ಲ. ನೀಲ ಜಲರಾಶಿಯ ಅಂಚಲ್ಲೇ ಧುತ್ತೆಂದು ನಿಂತ ಪರ್ವತಸಾಲು.

ಇಂಥ ವಿಚಿತ್ರ ಸ್ವರ್ಗ ಸದೃಶ ದ್ವೀಪದ ದಕ್ಷಿಣ ಮೂಲೆಯಲ್ಲಿ ಒಂದು ಚಿಕ್ಕ ಕಡಲ ತೀರವಿದೆ. ನೀರಾನೆಗಳೆಲ್ಲ ಅಲ್ಲಿ ಬಿಸಿಲು ಕಾಸಲು ಬಂದು ಬಿದ್ದುಕೊಳ್ಳುತ್ತವೆ. ಕಡಲ ಹೊಡೆತಕ್ಕೆ ತಣ್ಣಗಾದ ಲಾವಾರಸದ ಕಪ್ಪುಕಲ್ಲಿನ ವಿಶಿಷ್ಟ ರಚನೆಗಳಿವೆ. ಇಲ್ಲಿಂದ ಈಜು ಬಿದ್ದು ನೇರ ದಕ್ಷಿಣ ದಿಕ್ಕಿಗೆ ಹೊರಟರೆ ಅಂಟಾರ್ಟಿಕಾ ತಲುಪುವವರೆಗೆ ನಿಮಗೆ ಯಾವ ಭೂ ಪ್ರದೇಶವೂ ಸಿಗದು. ಬಲಕ್ಕೆ ಈಜಿದರೆ, ಜಪಾನ್, ಎಡಕ್ಕೆ ಈಜಿದರೆ ದಕ್ಷಿಣ ಅಮೇರಿಕ. ಈ ಜಾಗ ರಾಜಕೀಯವಾಗಿ, ಜಾಗತಿಕವಾಗಿ, ಅಮೆರಿಕ ದೇಶದ ದಕ್ಷಿಣದ ತುತ್ತ ತುದಿ. ಹಾಗೆ ನೋಡಿದರೆ ಇದ್ಯಾವುದೂ ಈ ಕಡಲ ತೀರದ ವಿಷೇಶವಲ್ಲ. ಈ ತುದಿಯಿಂದ ಅನತಿ ದೂರದಲ್ಲಿ ಕೈಗೆಟುಕದಂತ ಜಾಗದಲ್ಲಿ ಕಾಲಿಗೆಟುಕದಂತ ಹಾದಿಯಲ್ಲಿ, ಸಂಧಿಮೂಲೆಯಲ್ಲೊಂದು ಚಿಕ್ಕ ಕಡಲ ತೀರವಿದೆ. ಅಲ್ಲಿನ ಮರಳು ಫಳಫಳ ಹೊಳೆಯುವ ಹಸಿ ಹಸಿರು ಮರಳು! ಪಚ್ಚೆಕಲ್ಲಿನ ಪುಡಿಯಂಥ ಮರಳು, ಆಲಿವ್ ಎಣ್ಣೆ ಪೂಸಿಕೊಂಡು ಬಿಸಿಲಿಕಾಸಲು ಬಿದ್ದುಕೊಂಡ ಬಂಡೆಗಳೆಲ್ಲ ರಪ್ಪನೆ ಮಣ್ಣಾದಂತೆ ಈ ಮರಳು.

ಜಗತ್ತಿನಲ್ಲಿ ಈ ಬಗೆಯ ಹಸಿರು ಮರಳ ತೀರಗಳು ಕೇವಲ ನಾಲ್ಕು ಕಡೆಗಳಲ್ಲಿವೆ. ಗ್ವಾಮ್, ಗ್ಯಾಲಪಗೋಸ್ ದ್ವೀಪ, ನೊರ್ವೆ ಮತ್ತು ಹವಾಈ.
ಹಾಗಿರುವಾಗ ಇಲ್ಲಿಯತನಕ ಬಂದು ಈ ಅಪರೂಪದ ಕಡಲ ತೀರವನ್ನು ನೋಡದೆ ಮನೆಗೆ ಹೋಗಬಾರದೆಂದು ನಾನು ನಿರ್ಧರಿಸಿಯಾಗಿತ್ತು.
ಆದರೆ ಆ ಜಾಗವನ್ನು ತಲುಪುವುದು ಸುಲಭವಿರಲಿಲ್ಲ. ಒಂದೋ ಉರಿಬಿಸಿಲಿನಲ್ಲಿ ನಾಲ್ಕೈದು ಗಂಟೆಗಳ ಕಾಲ ಕಡಿದಾದ ಹಾದಿಯಲ್ಲಿ ನಡೆಯಬೇಕು, ಇಲ್ಲವೇ ದಾರಿಯಲ್ಲದ ದಾರಿಯಲ್ಲಿ ಏನನ್ನೂ ಹಾರಿಸಿಕೊಂಡು ಹೋಗುವಂತ ಜೀಪೊಂದು ಇರಬೇಕು. ಎರಡನೆಯ ಆಯ್ಕೆಗೆ ನಮ್ಮ ಬಳಿ ಇದ್ದಿದ್ದು, ಚಂದದೊಂದು ಬಾಡಿಗೆ ಕಾರು. ಹಾಗಾಗಿ ಮೊದಲನೆಯ ಆಯ್ಕೆಯೊಂದೇ ದಾರಿ. ನಡೆಯಿರೋ, ನಡೆಯುವ ಎಂದೆಲ್ಲ ಎಷ್ಟು ಪೂಸಿ ಹೊಡೆದರೂ ಉರಿಬಿಸಿಲಲ್ಲಿ ನಡೆಯುವ ಯಾವ ಬಣ್ಣದ ಮಾತಿಗೂ ಒಪ್ಪದ ಮಕ್ಕಳು, ನನಗೋ ಇನ್ನೇನು ಬರಲಿರುವ ಅಳು. ಅಷ್ಟರಲ್ಲಿ ಕಂಡಿದ್ದು ದೂರದಲ್ಲಿ ಏರುತ್ತಿದ್ದ ಕೆಂಪು ಧೂಳು. ಆ ಧೂಳಿನ ಮೋಡದಿಂದ ಎದ್ದುಬಂದ ಜೀಪಿನಿಂದ ಹೊರಗಿಣುಕಿತ್ತೊಂದು ಹೊಂಗೂದಲಿನ ತೇರು. ಅಹ ದೇವತೆಯಂತೆ ಅವತರಿಸಿದ್ದಳು ಹದಿನಾರರ ಹುಡುಗಿ “ಮಕಾಮಾಯಿ”.

ಆ ನಿರ್ಜನ ಹಳ್ಳಿ ರಸ್ತೆಯಲ್ಲಿ ಭೂಮಿಯೆಲ್ಲೆಯ ಕೊನೆಯಲ್ಲಿ ಅವಳು ಕಾಣಿಸಿಕೊಂಡ ಪರಿಯನ್ನು ನಾನು ಇಂದಿಗೂ ಮರೆಯಲಾರೆ. ನಮ್ಮ ಕತೆ ಕೇಳಿ, ನನ್ನ ಹಿಂದೆ ನಿಧಾನ ಬನ್ನಿ ಎನ್ನುತ್ತಾ ತಾನು ಮಾತ್ರ ಭರೆಂದು ಹಾರುತ್ತ, ಅಲ್ಲಲ್ಲಿ ಜೀಪು ನಿಲ್ಲಿಸಿಕೊಂಡು ನಮಗಾಗಿ ಕಾಯುತ್ತ, ಒಂದು ಸಮುದ್ರ ತೀರದ ಕಲ್ಲು ಹಾದಿಯ ಗುಡಿಸಿಲಿನಂತ ಜಾಗಕ್ಕೆ ಕರೆದೊಯ್ದಳು. ಅದು “ಪಾಪಕೋಲೇ” ಹಸಿರು ಮರಳ ದಂಡೆಯ ಹಾದಿಯ ಶುರುವಾತು. ಅದು ಆಕೆಯ ಅಣ್ಣಂದಿರು ನಡೆಸುವ ಕಾಡು ಹಾದಿಯ ಟ್ರಾನ್ಸ್ಪೋರ್ಟೇಷನ್, ಟೂರಿಸ್ಟರಿಗೆ ಊಟ ಸರಬರಾಜು ಇತ್ಯಾದಿ ಒದಗಿಸುವ ಒಂದು ಚಿಕ್ಕ ಅಂಗಡಿ. ಇವಳು ಅಪ್ಪನ ಜೀಪನ್ನು ಅಪ್ಪನ ಅನುಮತಿಯಿಲ್ಲದೆ, ಲೈಸೆನ್ಸ್ ಇಲ್ಲದೆ ಬೈಸಿಕೊಂಡು ಓಡಿಸುವ ಸೊಬಗಿ. ಅವಳು ಅಲ್ಲಿ ಯಾರಪ್ಪನ ಅಪ್ಪಣೆಗೂ ಕಾಯದೆ, ನಾ ಕರೆದುಕೊಂಡು ಹೋಗುವೆ ಬನ್ನಿ, ಅಣ್ಣಂದಿರು ನಿಮ್ಮ ಬೋಳು ಕೆತ್ತಿ ನನಗೂ ಹಣ ಕೊಡದೆ ಸತಾಯಿಸುತ್ತಾರೆ, ನಾನೋ ಅರ್ಧ ದುಡ್ಡಲ್ಲಿ ಕರೆದೊಯ್ಯುವೆ ಎನ್ನುತ ಕೂದಲೆತ್ತಿ ತುರುಬು ಕಟ್ಟಿದಳು. ಕಂಡಲ್ಲಿ ನೀರಿಗೆ ಹಾರಿ ಈಜಲು ತಯಾರಿದ್ದಂತಿದ್ದ ಈ ಹುಡುಗಿ ಲೈಸೆನ್ಸ್ ಬೇರೆ ಇಲ್ಲ ಆ ಜೀಪಿಗೆ ಏನುಂಟು ಏನಿಲ್ಲ! ಆದರೂ ಆ ಹಸಿರು ಮರಳ ಬೀಚಿನ ಕರೆ ತಲೆಯಲ್ಲಿ ಹೊರಳುತ್ತಿತ್ತು. ನಡಿ ಹೋಗೋಣ ಎನ್ನುತ್ತಾ ನಾನು ಜೀಪೇರಿದೆ.

ಉಪಾಯವಿಲ್ಲದೆ ನನ್ನ ಸಂಸಾರವೂ ಹತ್ತಿತು. ಎಂಥ ಹಾದಿ ಅದು! ಭೋರ್ಗರೆದು ರಪ್ಪೆಂದು ಬಂಡೆಗಳಿಗೆ ಬಡಿದು ಚಿಮ್ಮುವ ನೀಲ ಪೆಸಿಫಿಕ್ ಮಹಾಸಾಗರದ ಅಲೆಗಳು. ನಾಕು ಆಳೆತ್ತರಕ್ಕೆ ಚಿಮ್ಮುವ ಅದರ ಹನಿಗಳು. ಅಲ್ಲಲ್ಲಿ ಅವಳು ನಿಲ್ಲಿಸಿ ಆ ಮಜವನ್ನು ಅನುಭವಿಸಲು ಕೊಡುತ್ತಿದ್ದ ಅನುವು, ಹಾದಿಯೇ ಒಂದು ಸಾಹಸದಂತೆ ಇತ್ತು. ಅಷ್ಟರಲ್ಲಿ ಒಂದು ಕಡೆ ಗಕ್ಕೆಂದು ನಿಲ್ಲಿಸಿ ಇವಳು ಸರ ಸರ ಇಳಿದು ಹೋಗಿ ಬಂಡೆಯೊಂದರ ಅಂಚಲ್ಲಿ ನಿಂತಳು. ನಾವೆಲ್ಲಾ ಏನಾಯಿತೆಂದು ಗ್ರಹಿಸುವಷ್ಟರಲ್ಲಿ, ಆಕೆ ಕೈಬೀಸಿ ನಮ್ಮನ್ನು ಕರೆಯುತ್ತಲಿದ್ದಳು.

ಅಲ್ಲಿ ಸದಾ ಸೀಲ್ ನೀರಾನೆಗಳು ಬಿಸಿಲು ಕಾಸಲು ಬರುತ್ತವಂತೆ, ಇಂದೂ ಇದೆಯೋ ಎಂದು ನೋಡಲು ಹೋಗಿದ್ದಳು ಇವಳು. ಸೀಲ್ ಎಂಬ ಸುದ್ದಿ ಕೇಳಿದ್ದೇ, ಮಕ್ಕಳ ಮೂಡೆಲ್ಲ ಬದಲಾಗಿ ಹೋಗಿತ್ತು, ಹೆಜ್ಜೆ ಚುರುಕಾಗಿತ್ತು.
ಅಲ್ಲಿ ಹೋಗಿ ನೋಡಿದರೆ ಮಿರಮಿರ ಹೊಳೆಯುವ ದೈತ್ಯಾಕಾರದ ನೀರಾನೆ, ಮಕಮಾಯಿ ಹೇಳಿದ ಪ್ರಕಾರ, ಅದು ಮರಿ! ಚಂದವಾಗಿ ಬಿಸಿಲಲ್ಲಿ ಮೈಕಾಸುತ್ತ ಹತ್ತಿರ ಬರಬೇಡಿ ಎಂದು ನಮ್ಮನ್ನು ಸ್ವಲ್ಪ ಹೆದರಿಸುತ್ತ ಬಿದ್ದುಕೊಂಡಿತ್ತು. ಹೊಡೆಯುವ ಅಲೆಗಳ ನಡುವೆ ಕಪ್ಪು ಬಂಡೆಯ ಅಡಿಗೆ ಆಗಲೇ ಕಂಡವು ಅಲ್ಲಲ್ಲಿ ಫಳ ಫಳ ಹೊಳೆಯುವ ಹಸಿರು ಮರಳು! ನಿಜಕ್ಕೂ ಇರಬಹುದೇ ಎಂದು ವಿಸ್ಮಯವೂ ಸಂದೇಹವೂ ಮೂಡಿತ್ತು. ನೀವೇ ನೋಡುವಿರಂತೆ ಬನ್ನಿ ಎಂದು ಮತ್ತೆ ಜೀಪೇರಿಸಿ ಹೊರಡಿಸಿದ್ದಳು ನೀರಾನೆಯ ಜೊತೆಗಿದ್ದ ಮತ್ಸ್ಯಕನ್ಯೆ. ಇನ್ನೇನು ಕೊಂಚ ದೂರ ಸಾಗುವಷ್ಟರಲ್ಲಿ ಹಾದಿಯ ಕೊನೆಯಲ್ಲಿ ತೆರೆದುಕೊಂಡಿದ್ದು ಕಡಿದಾದ ಕೊರಕಲಿನಂಥ ಗುಡ್ಡದ ಏರು, ಕೊರೆದಿಟ್ಟಂತ ಒಂದು ಕಡಲ ಅಂಚು, ನೀಲಿಯೆಂದರೆ ನೀಲಿ ಸಮುದ್ರ, ಅಂಚಲ್ಲಿ ಪಚ್ಚೆಹಸಿರು ಮರಳು! ನಂಬಲಸಾಧ್ಯ ಬಣ್ಣದ ಮರಳು! ದೊಡ್ಡ ಬಟ್ಟಲಲ್ಲಿ ಪಿಸ್ತಾ ಪುಡಿಯನ್ನು ಹರಡಿಟ್ಟಂಥ ಮರಳು! ಹವಾಯಿಯ ಕಾಡಿನ ಮರಗಳ ಎಳೆಚಿಗುರನ್ನೆಲ್ಲ ಸಣ್ಣಗೆ ಪಲ್ಯಕ್ಕೆ ಹೆಚ್ಚಿಟ್ಟಂತೆನಿಸುವ ಮರಳು. ಹಾವಸೆಯ ಹಾಸೊ, ಮರಳ ದಂಡೆಯೋ ಎಂದು ತಿಳಿಯದಂಥ ಮರಳು.

ನಮಗೆ ತಿಳಿದಿರುವಂತೆ ಕಡಲ ಮೊರೆತಕ್ಕೆ ಸಿಕ್ಕ ಬಂಡೆಗಳ ಕೊರೆತದಿಂದ ಹುಟ್ಟುವುದು ಮರಳು. ಹೊರಹರಿದ ಲಾವಾ ತಣ್ಣನೆಯ ನೀರಿಗೆ ಸಿಕ್ಕು ಸಣ್ಣ ಹರಳಾಗಿ ಮರಳಾಗಿ ಮಾರ್ಪಡುವುದಿಲ್ಲಿ. ಹೀಗೆ ಹಸಿರು ಮರಳು ಹುಟ್ಟಬೇಕೆಂದರೆ ಆ ದಂಡೆಯ ಬಂಡೆ ವಿಶಿಷ್ಟ ಆಲಿವೈನ್ ಕಲ್ಲುಗಳದ್ದಾಗಿರಬೇಕು. ಆಲಿವೈನ್ ಖನಿಜದಿಂದಾದ ಕಲ್ಲುಗಳು ಜ್ವಾಲಾಮುಖಿಯ ಉಗಮಸ್ಥಾನದಲ್ಲಿ ಕೆಲವು ವಿಶಿಷ್ಟ ಪರಿಸ್ಥಿತಿಗಳಲ್ಲಿ ಮಾತ್ರ ನಿರ್ಮಾಣವಾಗಿತ್ತವೆ. ಜ್ವಾಲಾಮುಖಿ  ಸ್ಫೋಟವಾದಾಗ, ಭೂಗರ್ಭದೊಳಗಿಂದ ಆಲಿವೈನ್ ಖನಿಜ ಲಾವಾರಸದಲ್ಲಿ ಹರಿದು ಬರುತ್ತದೆ. ಕೇವಲ ಅಲಿವೈನ್ ಖನಿಜವೊಂದೇ ಇರುವ ಈ ಬಿಸಿ ಲಾವಾ ಸಮುದ್ರ ಸೇರಿದಾಗ, ಅಲೆಯ ಹೊಡೆತಕ್ಕೆ ಸಿಕ್ಕು ಸಣ್ಣ ಹರಳುಗಟ್ಟಿ, ಇಲ್ಲವೇ ಬಂಡೆಯಾಗಿ, ತಣ್ಣಗಾಗೋ ಹಸಿರು ಕಲ್ಲಾಗಿ, ಮರಳಾಗಿ ಮಾರ್ಪಡುತ್ತದೆ. ಹೀಗೆ ಒಂದೇ ಖನಿಜ ಮಾತ್ರ ಇರುವ ಲಾವಾ ಬಂಡೆಗಳು ನಿರ್ಮಾಣವಾಗುವುದು ಪ್ರಕೃತಿಯಲ್ಲಿಯೇ ವಿರಳಾತಿವಿರಳ. ಅಂಥದ್ದರಲ್ಲಿ ಈ ಪಾಪಕೋಲೆ ಪ್ರದೇಶವೆಲ್ಲ ಬರೀ ಅಲಿವೈನ್ ಕಲ್ಲುಗಳಿಂದ ನಿರ್ಮಿತವಾಗಿದೆ. ಅದು ಶತಶತಮಾನಗಳಿಂದ ಒಡೆದೊಡೆದು ಹರಳಾಗಿ ಮರಳಾಗಿ ಮಾರ್ಪಟ್ಟಿದೆ. ಬೊಗಸೆಯಲ್ಲಿ ಹಿಡಿದರೆ ಒಂದು ಕಣವೂ ಬೇರೆ ಎನ್ನಿಸದಂತ ಹಸಿರು ಕಲ್ಲಿನ ಈ ಖನಿಜವನ್ನು ಮೆಟ್ಟುತ್ತ, ತಡವುತ್ತ, ಅಲೆಗಳೊಂದಿಗೆ ಓಡುತ್ತ, ನೀರಾನೆಗಳ ಹುಡುಕುತ್ತ ಕಾಲಾತೀತವಾದ ಲೋಕವೊಂದರಲ್ಲಿ ಕುಳಿತಂತೆ ಭಾಸವಾಗುತ್ತದೆ ಅಲ್ಲಿ. ಏನಿಲ್ಲ ಅಲ್ಲಿ, ಏನೇನೂ ಇಲ್ಲ ಅಲ್ಲಿ. ಬರೀ ನೀಲಿ ಕಡಲು, ಹಸಿರು ಮರಳು, ಹಸಿರು ಛಾಯೆಯ ಗುಡ್ಡ ಕೊರಕಲು. ನಿನ್ನೆಯೂ, ಮೊನ್ನೆಯೂ ಸಾವಿರಾರು ವರ್ಷಗಳ ಹಿಂದೆಯೂ ಹೀಗೆಯೇ ಇದ್ದ ಬಂಡೆ ತಾ ಕಲ್ಲಾಗುತ್ತ ಕಲ್ಲು ಕರಗುತ್ತ ಇರುವ ಸಮಯಕ್ಕೆ ನೀವೀಗ ಸಾಕ್ಷಿ.

ಆದರೆ ಆ ಸಾಕ್ಷಿಯ ನೆನಪನ್ನಷ್ಟೇ ನೀವು ತರಲು ಸಾಧ್ಯ. ಹವಾಇ ದ್ವೀಪದಿಂದ ಒಂದು ಮರಳಿನ ಕಣವನ್ನೂ ನೀವು ಹೊರತರುವಂತಿಲ್ಲ. ಹಾಗೆ ತಂದಲ್ಲಿ ಅದು ಶಿಕ್ಷಾರ್ಹ ಅಪರಾಧ. ಜೊತೆಗೆ ಅಲ್ಲಿನ ಜನರ ನಂಬಿಕೆಯೂ ಅಂತೆಯೇ ಇದೆ. ನೀವು ಹವಾಯಿ ದ್ವೀಪದಿಂದ ಏನಾದರೂ ಕದ್ದು ತಂದಲ್ಲಿ, ಹೊತ್ತು ತಂದಲ್ಲಿ, ಪೆಲೇ ದೇವತೆಯ ಕ್ರೋಧಕ್ಕೆ ತುತ್ತಾಗಿ ಶಾಪಗ್ರಸ್ತರಾಗುತ್ತೀರಿ. ಪೇಲೆ ದೇವಿಯ ಪ್ರಕಾರ ಗಿಡ ಮರ, ಕಲ್ಲು ಮರಳು ಎಲ್ಲ ಆಕೆಯ ಮಕ್ಕಳು. ನೀವು ಆಕೆಯ ಮಕ್ಕಳನ್ನು ಆಕೆಯಿಂದ ಬೇರ್ಪಡಿಸಿದಲ್ಲಿ ವರುಷಗಟ್ಟಲೆಯ ಕೋಟಲೆಗೆ ಒಳಗಾಗುವಿರಿ ಎಂಬ ಕತೆಯೊಂದಿದೆ. ಈ ಕತೆ ಒಂದು ದೃಷ್ಟಿಯಲ್ಲಿ ಹವಾಯಿಯ ಅದ್ಭುತ ನೈಸರ್ಗಿಕ ಸೌಂದರ್ಯವನ್ನು ರಕ್ಷಿಸಿಕೊಂಡು ಬರಲು ಸಹಾಯಕವಾಗಿದೆ. ಎಂಥ ಕಾನೂನು ಇದ್ದರೂ, ಜನ ಶಾಪಕ್ಕೆ ಹೆದರುವಷ್ಟು ಶಿಕ್ಷೆಗೆ ಹೆದರುವುದಿಲ್ಲ.

ಇಂಥದ್ದೊಂದು ಅಭೂತಪೂರ್ವ ಅನುಭವವನ್ನು ಸಾಧ್ಯವಾಗಿಸಿದ್ದು ತಾನೇ ಪೇಲೆ ಎಂಬಂತೆ ನಿಂತ ಯಾವ ಹಂಗಿಲ್ಲದ ಹೊಂಗೂದಲ ಹವಾಯಿಯನ್ ಮೂಲ ನಿವಾಸಿ ಹುಡುಗಿ “ಮಕಮಾಇ ” . ಮಕಮಾಇ ಎಂದರೆ ಹವಾಯಿಯನ್ ಭಾಷೆಯಲ್ಲಿ ಅತ್ಯಮೂಲ್ಯ ಎಂದು ಅರ್ಥ. ನನ್ನ ಪಾಲಿಗಂತೂ ಈಕೆ ಅತ್ಯಮೂಲ್ಯಳೆ ಆಗಿದ್ದಳು. ನಮ್ಮೂರಿನ ಕತೆಯೆಲ್ಲ ಕೇಳಿ ಜೀವನದಲ್ಲಿ ಹಿಮವನ್ನೇ ನೋಡಿಲ್ಲ, ಬರೀ ಕಡಲ ಜೈಲು ಇದು, ಎಷ್ಟು ಲಕ್ಕಿ ನೀವು ಎಂದವಳ ವಿಷಾದ ವಿಚಿತ್ರವೆನಿಸಿತ್ತು ನನಗೆ. ಅಯ್ಯೋ ಹುಡುಗಿ ಜಾಗ ಅದಲು ಬದಲು ಮಾಡಿಕೊಳ್ಳೋಣ ಬಾ ಎಂದಿದ್ದೆ. ಇವಳೊಂತರ ನನ್ನ ಅಂತರ್ಗತ ಸ್ಮೃತಿಯಲ್ಲಿ ಸೇರಿ ಆಗಾಗ ಹೊರಬರುವ ಹುಡುಗಿ. ಜೀನ್ಸ್ ಶಾರ್ಟ್ಸ್, ಬಿಕಿನಿ ಟಾಪ್ ಒಂದರಲ್ಲಿ ಮರಳು ಮೆತ್ತಿಕೊಂಡ ಮೈಯಲ್ಲಿ ಮಿಂಚಿನಂತೆ ಕೋರೈಸುತ್ತಿದ್ದ ಆಕೆಯ ಕಣ್ಣಲ್ಲಿ ಮೊದಲ ಬಾರಿ ಶೂನ್ಯವೊಂದು ಕಂಡಿತ್ತು ನನಗೆ. ಆ ನೋಟ ನನ್ನನು ಆವರಿಸಿಕೊಂಡ ಭಾವ ಇಂದಿಗೂ ಮರೆಯಾಗಲು ಸಾಧ್ಯವೇ ಇಲ್ಲ. ಎಲ್ಲ ಇದ್ದ ಸ್ವರ್ಗವನ್ನು ಜೈಲು ಎಂದುಬಿಟ್ಟಿದ್ದಳು.

ಸ್ವರ್ಗವೇ ಹಾಗೆ , ಹೋಗಿ ಬಂದು ಬಿಡಬೇಕು ಅಲ್ಲೇ ಇದ್ದರೆ ಅದೆಂಥ ಸ್ವರ್ಗ ?! ಆಗಿನಿಂದ ನನಗೆ ಯಾರಾದರೂ ಸತ್ತ ಮೇಲೆ ಸ್ವರ್ಗಕ್ಕೆ ಹೋಗಬೇಕು ಎಂದರೆ, ಸ್ವರ್ಗ ಸಂಪಾದನೆಗಾಗಿ ಎಷ್ಟೆಲ್ಲಾ ಕಷ್ಟಪಡುವವರ ಕಂಡರೆ, ಸಜ್ಜನರೊಬ್ಬರು ಸ್ವರ್ಗಸ್ಥರಾದರು ಎಂದು ಓದಿದಾಗ, ನಗು ಬರುತ್ತದೆ, ಅಯ್ಯೋ ಪಾಪ ಎಂಥ ಶಿಕ್ಷೆ ಈ ಸ್ವರ್ಗ ಎನಿಸಿಬಿಡುತ್ತದೆ. ಈ ಸ್ವರ್ಗದ ಕಲ್ಪನೆ ಬಹುಷಃ ಸ್ವರ್ಗದಂಥದ್ದನ್ನು ನೋಡೇ ಇರದ , ಅಂಥಲ್ಲೆಲ್ಲೂ ಉಳಿದುಕೊಳ್ಳದ ಯಾವನೋ ಮಾಡಿರಬೇಕು. ಆಗಾಗ ನರಕವೋ, ಭೂಮಿಯೊ ಲಭ್ಯವಾದಲ್ಲಿ ಮಾತ್ರ ಸ್ವರ್ಗ ಸ್ವರ್ಗ ಎನಿಸೀತು, ಇಲ್ಲದಿರೆ ಸ್ವರ್ಗವೂ ನರಕವೇ ಸೈ.

ಅಂದು ಸ್ವರ್ಗದಂಥ ದ್ವೀಪದಿಂದ ಸ್ವರ್ಗದಂಥ ಅನುಭವ ಪಡೆದು ಹೊರಡುತ್ತ ನನ್ನ ಮನ ಹಾರೈಸಿದ್ದಿಷ್ಟೇ, ದೇವಿ ಪೇಲೆ ಸದಾ ಸುಖದಿಂದಿರಲಿ, ಆಗಾಗ ಸಿಡಿಮಿಡಿಗೊಳ್ಳುತ್ತ ಹುಸಿಮುನಿಸಲಿ ಭುಸುಗುಡಲಿ. ಹೊಸದೊಂದು ಬಣ್ಣದ ಮರಳ ದಂಡೆ ಆಕೆಯೊಡಲಿನಿಂದ ಎದ್ದು ಬರಲಿ. ಮಕಮಾಇಗೆ ರೆಕ್ಕೆ ಮೂಡಲಿ. ಈ ಭೂಮಿಯಲ್ಲಿ ನಾ ಮತ್ತೆ ಮತ್ತೆಹುಟ್ಟಿ ಬರಲಿ, ಆಗಾಗ ಸ್ವರ್ಗಕ್ಕೆ ದಾರಿ ಈ ಭೂಮಿಯಲ್ಲೇ ಸಿಗಲಿ.